ಹೆಜ್ಜೆ ಶಬ್ದ ದೂರದಿಂದ, ನೆಲ ಅಂತಸ್ತಿನ ಮೆಟ್ಟಿಲಿಂದ ಬರುತಿತ್ತು. ಅದು ಕಿವಿಗೆ ಬಿದ್ದ ತಕ್ಷಣವೇ ಯಾರೋ ಇಲ್ಲಿಗೇ, ನಾಲ್ಕನೆಯ ಮಹಡಿಗೇ, ಮುದುಕಿಯ ಮನೆಗೇ ಬರುತಿದ್ದಾರೆ ಅನ್ನುವ ಅನುಮಾನ ಹುಟ್ಟಿತು ಅನ್ನುವುದು ಆಮೇಲೂ ಕೂಡ ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಹೆಜ್ಜೆ ಸದ್ದು ಯಾಕೆ ಅಪಶಕುನದ ಹಾಗಿತ್ತೋ? ಭಾರವಾದ, ಆತುರವಿಲ್ಲದ ಹೆಜ್ಜೆಗಳು. ಮೊದಲ ಮಹಡಿ ದಾಟಿದ್ದವು. ಮೇಲೇರುತಿದ್ದವು. ಬರುತಿದ್ದವನ ಹೆಜ್ಜೆ ಶಬ್ದ ಜೋರಾಗುತಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಏಳನೆಯ ಅಧ್ಯಾಯ

 

ಈಗಲೂ ಬಾಗಿಲು ಸಣ್ಣ ಗೆರೆಯಷ್ಟೇ ತೆರೆದುಕೊಂಡಿತು, ಮೊದಲಿನ ಹಾಗೇ. ಸಂಶಯ ತೋರುತ್ತಿದ್ದ ಚುರುಕು ಕಣ್ಣು ಮೊದಲಿನ ಹಾಗೇ ಕತ್ತಲಿನಲ್ಲಿದ್ದುಕೊಂಡು ಅವನನ್ನು ದಿಟ್ಟಿಸಿದವು. ಇತ್ತ ರಾಸ್ಕೋಲ್ನಿಕೋವ್ ತಡಬಡಿಸಿ ದೊಡ್ಡ ತಪ್ಪು ಮಾಡಿದ.

‘ಜನ ಯಾರೂ ಇಲ್ಲವೆಂದು ಮುದುಕಿ ಹೆದರಿದರೆ? ನನ್ನ ಅವತಾರವೂ ನಂಬಿಕೆ ಹುಟ್ಟಿಸುವ ಹಾಗಿಲ್ಲ, ಬಾಗಿಲು ಹಾಕಿಕೊಳ್ಳಲು ಬಿಡಬಾರದು,’ ಅಂದುಕೊಳ್ಳುತ್ತ ಬಾಗಿಲನ್ನು ತನ್ನತ್ತ ಎಳೆದ. ಅವಳು ಬಾಗಿಲು ಎಳಕೊಳ್ಳಲೂ ಇಲ್ಲ, ಬಾಗಿಲ ಹಿಡಿಯನ್ನು ಬಿಡಲೂ ಇಲ್ಲ. ಹಾಗಾಗಿ ಅವನು ಬಾಗಿಲ ಜೊತೆಗೆ ಅವಳನ್ನೂ ಮನೆಯಿಂದಾಚೆಗೆ, ಮೆಟ್ಟಿಲತ್ತ ಹೋಗುವ ದಾರಿಗೆ ಎಳೆದುಕೊಂಡಿದ್ದ. ಅವಳು ಬಾಗಿಲಿಗೆ ಅಡ್ಡವಾಗಿದಾಳೆ, ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ ಅನ್ನಿಸಿ ನೇರವಾಗಿ ಅವಳತ್ತ ಹೆಜ್ಜೆ ಹಾಕಿದ. ಹೆಂಗಸು ಹೆದರಿ ಪಕ್ಕಕ್ಕೆ ಹಾರಿದಳು. ಏನೋ ಹೇಳುವುದಕ್ಕೆ ಹೋದಳು. ಮಾತಾಡಲು ಆಗದು ಅನ್ನುವ ಹಾಗೆ ಸುಮ್ಮನೆ ಅವನನ್ನೇ ದಿಟ್ಟಿಸಿದಳು.

‘ಗುಡ್ ಈವನಿಂಗ್, ಅಲ್ಯೋನಾ ಇವಾನೋವ್ನಾ,’ ಮಾಮೂಲಾಗಿ ಮಾತಾಡಬೇಕು ಅಂದುಕೊಂಡ. ಅವನ ದನಿ ಅವನ ಇಚ್ಛೆಗೆ ವಿಧೇಯವಾಗಿರಲಿಲ್ಲ. ದನಿ ನಡುಗುತ್ತಿತ್ತು, ತೊದಲುತ್ತಿತ್ತು. ‘ಗಿರವಿ ಇಡೋದಕ್ಕೆ… ತಂದಿದೇನೆ… ಅಲ್ಲಿ ಬೆಳಕಿಗೆ ಹೋಗುವುದು ವಾಸಿ…’ ಅನ್ನುತ್ತ ಅವಳನ್ನು ಬಿಟ್ಟು ನೇರವಾಗಿ ರೂಮಿನೊಳಕ್ಕೆ ಹೆಜ್ಜೆ ಹಾಕಿದ. ಮುದುಕಿ ಅವನ ಹಿಂದೆಯೇ ಓಡಿ ಬಂದಳು. ಅವಳ ನಾಲಗೆಗೆ ಜೀವ ಬಂದಿತ್ತು.

‘ದೇವರೇ! ಏನಿದು? ಯಾರು ನೀನು? ಯಾಕೆ ಬಂದಿದೀಯ?’

‘ಅಯ್ಯೋ, ಅಲ್ಯೋನಾ ಇವಾನೋವ್ನಾ! ನಾನು, ನಿಮಗೆ ಗೊತ್ತಿರುವವನು, ರಾಸ್ಕೋಲ್ನಿಕೋವ್… ಇಗೋ, ಅವತ್ತು ನಿಮಗೆ ಹೇಳಿದ್ದೆನಲ್ಲ ಅದನ್ನ ಗಿರವಿ ಇಡುವುದಕ್ಕೆ ಬಂದಿದೇನೆ…’ ಪ್ಯಾಕೆಟ್ಟು ಅವಳತ್ತ ಚಾಚಿದ.

ಮುದುಕಿ ಪ್ಯಾಕೆಟ್ಟು ನೋಡಿದಳು. ಕರೆಯದೆ ಬಂದವನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದಳು. ಸಿಟ್ಟಿನಲ್ಲಿ, ಅಪನಂಬಿಕೆಯಲ್ಲಿ ಅವನನ್ನು ಸೀಳಿ ನೋಡುತ್ತಿರುವ ಹಾಗಿತ್ತು. ಒಂದು ನಿಮಿಷ ಕಳೆಯಿತು. ಅವಳ ಕಣ್ಣಲ್ಲಿ ಲೇವಡಿ ಇದೆ ಅನ್ನಿಸಿತು. ಎಲ್ಲ ಬಲ್ಲವಳ ಕಣ್ಣಲ್ಲಿ ಇರುವಂಥ ಲೇವಡಿ. ತಡಬಡಾಯಿಸಿದೆ, ಭಯಪಟ್ಟೆ ಅನ್ನುವುದು ಅವನಿಗೇ ಅರಿವಾಗುತಿತ್ತು. ಅವಳು ಒಂದೂ ಮಾತಾಡದೆ ಹಾಗೇ ಇನ್ನರ್ಧ ನಿಮಿಷ ದಿಟ್ಟಿಸಿದ್ದರೆ ಅಲ್ಲಿಂದ ಓಡಿಹೋಗಿರುತಿದ್ದ.

‘ಯಾಕೆ ಹಾಗೆ ನೋಡುತ್ತಿದ್ದೀರಿ? ನನ್ನ ಗುರುತು ಸಿಗಲಿಲ್ಲವಾ?’ ಅಂತ ಕೇಳಿದ. ‘ನಿಮಗೆ ಬೇಕಾದರೆ ತಗೊಳ್ಳಿ, ಬೇಡ ಅಂದರೆ ಬೇರೆ ಕಡೆ ಹೋಗತೇನೆ, ನನಗೆ ಟೈಮಿಲ್ಲ,’ ತಟ್ಟನೆ ಅಂದ.

ಹಾಗನ್ನಬೇಕು ಅಂದುಕೊಂಡಿರಲಿಲ್ಲ ಅವನು. ಆ ಮಾತು ತನ್ನಷ್ಟಕ್ಕೆ ತಾನೇ ಆಡಿಸಿಕೊಂಡಿತ್ತು.
ಮುದುಕಿ ಎಚ್ಚರವಾದಳು. ಬಂದಿದ್ದವನ ದೃಢ ಅವಳಲ್ಲೂ ಧೈರ್ಯ ತುಂಬಿತ್ತು.

‘ಯಾಕಪ್ಪಾ, ಇದ್ದಕಿದ್ದ ಹಾಗೆ… ಏನದು?’ ಪ್ಯಾಕೆಟ್ಟು ನೋಡುತ್ತ ಕೇಳಿದಳು.

‘ಬೆಳ್ಳಿಯ ಸಿಗರೇಟು ಡಬ್ಬಿ. ಹೋದ ಸಾರಿ ಹೇಳಿದ್ದೆನಲ್ಲ.’
ಕೈ ಚಾಚಿದಳು.

‘ಯಾಕಪ್ಪಾ ಹೀಗೆ ಬಿಳಿಚಿದ್ದೀಯ? ನೋಡು, ನಿನ್ನ ಕೈ ನಡಗತಾ ಇವೆ! ಈಜಕ್ಕೆ ಹೋಗಿದ್ದೆಯೇನಪ್ಪಾ?’

‘ಜ್ವರ,’ ತಟ್ಟನೆ ಅಂದ. ‘ಹೊಟ್ಟೆಗೆ ಏನೂ ಇಲ್ಲದಿದ್ದರೆ… ಬಿಳಿಚಿಕೊಳ್ಳದೆ ಇನ್ನೇನು..’ ಅನ್ನುವ ಮಾತು ಸೇರಿಸಿದ. ಮಾತಾಡುವುದು ಕಷ್ಟವಾಗುತ್ತಿತ್ತು. ಶಕ್ತಿ ಸೋರಿ ಹೋಗುತ್ತಿತ್ತು. ಕೊಟ್ಟ ಉತ್ತರ ಮಾತ್ರ ಒಪ್ಪುವ ಹಾಗಿತ್ತು. ಮುದುಕಿ ಪ್ಯಾಕೆಟ್ಟು ತೆಗೆದುಕೊಂಡಳು.

‘ಏನಿದು?’ ಕೈಯಲ್ಲೆ ಪ್ಯಾಕೆಟ್ಟಿನ ತೂಕ ಅಂದಾಜು ಮಾಡುತ್ತ, ರಾಸ್ಕೋಲ್ನಿಕೋವನನ್ನು ದಿಟ್ಟಿಸುತ್ತ ಮತ್ತೆ ಕೇಳಿದಳು.

‘ಗಿರವಿ ಇಡೋದಕ್ಕೆ… ಸಿಗರೇಟು ಕೇಸು… ಬೆಳ್ಳಿಯದು… ನೋಡಿ.’

‘ಬೆಳ್ಳಿಯದು ಅನ್ನಿಸಲ್ಲವೇ… ಓ, ಎಲ್ಲ ಸುತ್ತಿ ಕಟ್ಟಿದಾರೆ.’

ದಾರ ಬಿಚ್ಚಲು ಪ್ರಯತ್ನಪಡುತ್ತ ಬೆಳಕಿಗಾಗಿ ಕಿಟಕಿಯ ಹತ್ತಿರ ಹೋದಳು. ಎಷ್ಟು ಧಗೆ ಇದ್ದರೂ ಅವಳು ಯಾವಾಗಲೂ ಕಿಟಕಿ ಮುಚ್ಚಿಯೇ ಇರುತಿದ್ದಳು. ಅವನತ್ತ ಬೆನ್ನು ಮಾಡಿದ್ದಳು. ಕೆಲವು ಕ್ಷಣ ಅವನಪಾಡಿಗೆ ಅವನ ಬಿಟ್ಟಿದ್ದಳು. ಕೋಟಿನ ಗುಂಡಿ ಬಿಚ್ಚಿ ಕೊಡಲಿಯನ್ನು ಕುಣಿಕೆಯಿಂದ ಬಿಡಿಸಿದ. ಹೊರಕ್ಕೆ ತೆಗೆಯಲಿಲ್ಲ. ಕೋಟಿನೊಳಗೇ ಕೊಡಲಿಯನ್ನು ಹಿಡಿದಿದ್ದ. ಬಲದ ಕೈಗೆ ಶಕ್ತಿಯೇ ಇರಲಿಲ್ಲ. ಕೈ ಮರಗಟ್ಟುತ್ತಿದೆ ಎಂದು ಕ್ಷಣ ಕ್ಷಣಕ್ಕೂ ಅನ್ನಿಸುತಿತ್ತು. ಹಿಡಿತ ತಪ್ಪಿ ಕೊಡಲಿ ಬಿದ್ದೀತು ಅನ್ನುವ ಭಯ ಹುಟ್ಟಿತ್ತು. ಇದ್ದಕಿದ್ದ ಹಾಗೆ ತಲೆ ತಿರುಗಿತು…

‘ಹೇಗೆ ಸುತ್ತಿದಾನೆ!’ ಅನ್ನುತ್ತ ಮುದುಕಿ ಅವನತ್ತ ಬಂದಳು. ಒಂದು ಕ್ಷಣವೂ ವ್ಯರ್ಥಮಾಡುವ ಹಾಗಿಲ್ಲ. ಕೊಡಲಿ ತೆಗೆದ. ಎರಡೂ ಕೈಯಲ್ಲಿ ಹಿಡಿದು ಬೀಸಿದ. ನಿರಾಯಾಸವಾಗಿ, ಯಾಂತ್ರಿಕವಾಗಿ, ಕೊಡಲಿಯ ದುಂಡನೆ ಭಾಗ ಅವಳ ತಲೆಯ ಮೇಲೆ ಬೀಳುವ ಹಾಗೆ. ಅವನ ಶಕ್ತಿ ಬಳಕೆಯಾಗಲೇ ಇಲ್ಲ ಅನ್ನುವ ಹಾಗಿತ್ತು. ಕೊಡಲಿ ಕೆಳಗಿಳಿಯುತಿದ್ದ ಹಾಗೆ ಅವನೊಳಗೆ ಶಕ್ತಿ ಮರಳಿ ಬಂದಿತ್ತು.

ಎಂದಿನ ಹಾಗೆ ಮುದುಕಿ ಬರಿತಲೆಯಲ್ಲಿದ್ದಳು. ನೆರೆತ ತೆಳ್ಳನೆ ಕೂದಲಿಗೆ ಚೆನ್ನಾಗಿ ಎಣ್ಣೆ ಮೆತ್ತಿ, ಇಲಿಬಾಲದಂಥ ಜಡೆ ಹೆಣೆದು, ಆ ಜಡೆಗೆ ಕತ್ತಿನ ಹತ್ತಿರ ಮುರುಕಲು ಬಾಚಣಿಕೆ ಸಿಕ್ಕಿಸಿಕೊಂಡಿದ್ದಳು. ಗಿಡ್ಡ ಹೆಂಗಸಾದ್ದರಿಂದ ಏಟು ನೆತ್ತಿಯ ಮೇಲೇ ಬಿದ್ದಿತ್ತು. ದುರ್ಬಲವಾಗಿ ಚೀರಿದಳು. ಇಡೀ ದೇಹ ದೊಪ್ಪನೆ ನೆಲಕ್ಕೆ ಕುಸಿಯಿತು. ಆದರೂ ಎರಡೂ ಕೈ ಎತ್ತಿ ತಲೆಗೆ ಅಡ್ಡ ಇಟ್ಟುಕೊಂಡಳು. ಒಂದು ಕೈಯಲ್ಲಿ ಗಿರವಿಯ ವಸ್ತು ಇತ್ತು. ಆಗ ಅವನು ಶಕ್ತಿಯೆಲ್ಲಾ ಬಿಟ್ಟು ಮತ್ತೆ ಮತ್ತೆ ನೆತ್ತಿಯ ಮೇಲೆ ಹೊಡೆದ. ಬಾರಲು ಬಿದ್ದ ಲೋಟದಿಂದ ಹರಿಯುವ ಹಾಗೆ ರಕ್ತ ಹರಿಯುತಿತ್ತು. ದೇಹ ಹಿಂದಕ್ಕೆ ಬಿತ್ತು. ಪಕ್ಕಕ್ಕೆ ಸರಿದ. ತಟ್ಟನೆ ಅವಳ ಮುಖದತ್ತ ಬಾಗಿದ. ಆಗಲೇ ಜೀವ ಹೋಗಿತ್ತು. ಕಣ್ಣಗುಡ್ಡೆ ಹೊರಕ್ಕೆ ಬರುವ ಹಾಗಿದ್ದವು. ಅವಳ ಹಣೆ, ಇಡೀ ಮುಖ ತಿರುಚಿ ವಿಕಾರವಾಗಿತ್ತು.

ಕೊಡಲಿಯನ್ನು ಸತ್ತ ಹೆಂಗಸಿನ ಪಕ್ಕದಲ್ಲಿ ಇಟ್ಟ. ಸುರಿಯುತ್ತಿರುವ ರಕ್ತ ಮೆತ್ತಿಸಿಕೊಳ್ಳದ ಹಾಗೆ ಹುಷಾರಾಗಿ ಅವಳ ಜೇಬಿನೊಳಕ್ಕೆ ಕೈ ಇಟ್ಟ-ಹೋದ ಸಾರಿ ಬಂದಾಗ ಯಾವ ಜೇಬಿನಿಂದ ಬೀಗದ ಕೈ ಗೊಂಚಲು ತೆಗೆದಿದ್ದಳೋ ಅದೇ ಜೇಬಿಗೆ. ಬುದ್ಧಿ ಎಚ್ಚರವಾಗಿತ್ತು. ತಲೆ ತಿರುಗುವುದು ನಿಂತಿತ್ತು. ಮಂಕುತನ ಹೋಗಿತ್ತು. ಆದರೂ ಕೈ ಇನ್ನೂ ನಡುಗುತ್ತಿದ್ದವು. ‘ರಕ್ತ ಮೆತ್ತದ ಹಾಗೆ ಗಮನಕೊಟ್ಟಿದ್ದೆ, ಹುಷಾರಾಗಿದ್ದೆ, ಎಚ್ಚರವಹಿಸಿದ್ದೆ,’ ಎಂದು ಆಮೇಲೆ ನೆನಪು ಮಾಡಿಕೊಳ್ಳುತ್ತಿದ್ದ. ಬೀಗದ ಕೈಗಳನ್ನು ತೆಗೆದ. ಮೊದಲಿನ ಹಾಗೇ ಎಲ್ಲ ಒಂದೇ ಗೊಂಚಲಲ್ಲಿದ್ದವು. ಸ್ಟೀಲಿನ ಉಂಗುರಕ್ಕೆ ಹಾಕಿಟ್ಟುಕೊಂಡಿದ್ದಳು. ತೆಗೆದುಕೊಂಡು ಬೆಡ್ ರೂಮಿಗೆ ಓಡಿದ. ಪುಟ್ಟ ರೂಮು. ದೊಡ್ಡ ಸ್ಟಾಂಡಿನ ಮೇಲೆ ವಿಗ್ರಹಗಳಿದ್ದವು. ಎದುರು ಗೋಡೆಗೆ ಒರಗಿದ ಹಾಗೆ ದೊಡ್ಡ ಮಂಚವಿತ್ತು. ಹಾಸಿಗೆ ಸ್ವಚ್ಛವಾಗಿತ್ತು. ರೇಶಿಮೆಯ ಕೌದಿ ಇತ್ತು. ಇನ್ನೊಂದು ಗೋಡೆಗೆ ಹೊಂದಿಕೊಂಡು ಡ್ರಾಗಳಿದ್ದವು. ವಿಚಿತ್ರವೆಂದರೆ ಡ್ರಾಗಳಿಗೆ ಬೀಗದ ಕೈ ಹಾಕುತಿದ್ದ ಹಾಗೆ, ಬೀಗದ ಕೈಗಳ ಕಿಣಿಕಿಣಿ ಸದ್ದು ಕೇಳುತಿದ್ದ ಹಾಗೆ ಮೈ ನಡುಗಿತು. ಎಲ್ಲ ಇದ್ದ ಹಾಗೇ ಬಿಟ್ಟು ಹೋಗಿಬಿಡಬೇಕು ಅನ್ನಿಸಿತು. ಒಂದೇ ಕ್ಷಣ. ಹೋಗಲಾರದಷ್ಟು ತಡವಾಗಿತ್ತು. ತನ್ನೊಳಗೇ ನಕ್ಕ. ಕಳವಳ ತಂದ ಇನ್ನೊಂದು ಯೋಚನೆ ತಟ್ಟನೆ ಮೂಡಿತು—ಮುದುಕಿ ಇನ್ನೂ ಬದುಕಿದ್ದಾಳೆ ಅನ್ನಿಸಿತು. ಬೀಗದ ಕೈಗಳನ್ನು ಅಲ್ಲೇ ಬಿಟ್ಟು ಹೆಣದ ಹತ್ತಿರ ಓಡಿ ಹೋದ. ಕೊಡಲಿ ಎತ್ತಿದ. ಹೊಡೆಯಲಿಲ್ಲ. ಸತ್ತು ಹೋಗಿದ್ದಾಳೆ, ಅನುಮಾನವೇ ಇಲ್ಲ. ಬಗ್ಗಿ ಹುಷಾರಾಗಿ ಪರೀಕ್ಷೆ ಮಾಡಿ ನೊಡಿದರೆ ತಲೆಬುರುಡೆ ಛಿದ್ರವಾಗಿತ್ತು, ಒಂದು ಪಾರ್ಶ್ವ ಕಿತ್ತು ಬಂದಿತ್ತು. ಇನ್ನೇನು ಮುಟ್ಟುವುದರಲ್ಲಿದ್ದ. ಕೈ ಹಿಂದೆ ಎಳೆದುಕೊಂಡ. ಮುಟ್ಟದೆಯೂ ಗೊತ್ತಾಗುತಿತ್ತು. ಸತ್ತಿದ್ದಳು. ರಕ್ತ ಕೊಳವಾಗಿತ್ತು. ಅವಳ ಕತ್ತಿನ ಸುತ್ತ ದಾರ ಕಾಣಿಸಿತು. ಎಳೆದ. ದಾರ ಗಟ್ಟಿಯಾಗಿತ್ತು. ಕೀಳಲಿಲ್ಲ. ರಕ್ತದಲ್ಲಿ ನೆನೆದಿತ್ತು. ಬಿಡಿಸಿಕೊಳ್ಳಲು ನೋಡಿದ. ಯಾವುದಕ್ಕೋ ಸಿಕ್ಕಿಕೊಂಡಿತ್ತು. ತಾಳ್ಮೆಕೆಟ್ಟಿತ್ತು. ದಾರ ಕತ್ತರಿಸಲು ಕೊಡಲಿ ಎತ್ತಿದ. ಧೈರ್ಯ ಬರಲಿಲ್ಲ. ಎರಡು ನಿಮಿಷ ಕಷ್ಟಪಟ್ಟು, ಕೈಗೆಲ್ಲ ರಕ್ತ ಮೆತ್ತಿಕೊಂಡು, ಕೊಡಲಿಗೂ ರಕ್ತಮೆತ್ತಿಸಿ, ದಾರವನ್ನು ಕತ್ತರಿಸಿದ. ಅಂದುಕೊಂಡದ್ದು ಸರಿಯಾಗಿತ್ತು. ದಾರಕ್ಕೆ ಪರ್ಸು ಕಟ್ಟಿಕೊಂಡಿದ್ದಳು. ದಾರಕ್ಕೆ ಎರಡು ಶಿಲುಬೆ ಕಟ್ಟಿದ್ದಳು. ಒಂದು ಸೈಪ್ರಸ್ ಶಿಲುಬೆ, ಇನ್ನೊಂದು ಕಂಚಿನದ್ದು. ಜೊತೆಗೆ ಒಂದು ಎನಾಮೆಲ್ ವಿಗ್ರಹ ಇತ್ತು. ಸ್ಟೀಲಿನ ಫ್ರೇಮು, ಮಧ್ಯದಲ್ಲಿ, ಉಂಗುರವಿದ್ದ ಜಿಡ್ಡು ಹತ್ತಿದ ಪುಟ್ಟ ಪರ್ಸು, ಚರ್ಮದ್ದು. ಅದರ ತುಂಬ ದುಡ್ಡಿತ್ತು. ರಾಸ್ಕೋಲ್ನಿಕೋವ್ ದುಡ್ಡು ಜೇಬಿಗೆ ತುರುಕಿಕೊಂಡ. ಶಿಲುಬೆಗಳನ್ನು ಮುದುಕಿಯ ಎದೆಯ ಮೇಲೆ ಎಸೆದ. ಕೊಡಲಿಯನ್ನು ಎತ್ತಿಕೊಂಡು ಮತ್ತೆ ರೂಮಿಗೆ ಓಡಿದ.

ಧಾವಂತ. ಒಂದಾದ ಮೇಲೆ ಇನ್ನೊಂದು ಬೀಗದ ಕೈ ಹಾಕಿ ನೋಡಿದ. ಯಾವ ಬೀಗದ ಕೈಯೂ ಹೊಂದುತ್ತಿರಲಿಲ್ಲ. ಕೈ ನಡುಗುತಿತ್ತು ಅಂತಷ್ಟೇ ಅಲ್ಲ ತಪ್ಪೂ ಮಾಡುತಿದ್ದ. ಬೀಗದ ಕೈ ಇದಲ್ಲ, ಹೊಂದುವುದಿಲ್ಲ ಅನ್ನುವುದು ಗೊತ್ತಿದ್ದರೂ ಮತ್ತೆ ಅದನ್ನೇ ಹಾಕಿ ತಿರುಗಿಸಲು ಪ್ರಯತ್ನಪಡುತಿದ್ದ. ತಕ್ಷಣ ಜ್ಞಾಪಕ ಬಂತು- ಒಂದು ಹಲ್ಲು ಸ್ವಲ್ಪ ಸವೆದಿದ್ದ ದೊಡ್ಡ ಬೀಗದಕೈ, ಗೊಂಚಲಲ್ಲಿ ಅಲ್ಲೇ ಜೋತಾಡುತ್ತ ಇದ್ದದ್ದು, ಡ್ರಾಗಳಿಗೆ ಹೊಂದದ್ದು, ಯಾವುದೋ ಪೆಟ್ಟಿಗೆಯದಿರಬೇಕು, ಪೆಟ್ಟಿಗೆಯನ್ನು ಎಲ್ಲೋ ಬಚ್ಚಿಟ್ಟಿರಬೇಕು. ಇದು ಹೋದ ಸಾರಿ ಬಂದಾಗಲೇ ಅವನಿಗೆ ಹೊಳೆದಿತ್ತು. ಡ್ರಾಗಳನ್ನು ತೆಗೆಯುವ ಪ್ರಯತ್ನ ಬಿಟ್ಟ. ಮಂಚದ ಕೆಳಗೆ ನೋಡಿದ. ಮುದುಕಿಯರು ಪೆಟ್ಟಿಗೆಯನ್ನು ಸಾಮಾನ್ಯವಾಗಿ ಮಂಚದ ಕೆಳಗೆ ಬಚ್ಚಿಡುತ್ತಾರೆ ಅನ್ನುವುದು ಗೊತ್ತಿತ್ತು. ದೊಡ್ಡ ಪೆಟ್ಟಿಗೆ ಇತ್ತು. ಸುಮಾರು ಎರಡೂವರೆ ಅಡಿ ಉದ್ದ, ಉಬ್ಬು ಮುಚ್ಚಳದ ಪೆಟ್ಟಿಗೆಗೆ ಕೆಂಪು ಮೊರಕ್ಕೊ ಹೊದಿಕೆ, ಮುಚ್ಚಳಕ್ಕೆ ಅಲ್ಲಲ್ಲಿ ಉಕ್ಕಿನ ಮೊಳೆ. ಹಲ್ಲು ಸವೆದಿದ್ದ ಬೀಗದಕೈ ಅದಕ್ಕೆ ಸರಿಯಾಗಿ ಹೊಂದಿತ್ತು. ಬಾಗಿಲು ತೆಗೆದ. ಮೇಲೆ ಬಿಳಿಯ ಮಗ್ಗುಲು ಹಾಸಿಗೆ, ಅದರ ಕೆಳಗೆ ರೇಶಿಮೆಯ ಕೋಟು, ಅದಕ್ಕೆ ಮೊಲದ ತುಪ್ಪಳದ ಕಾಲರ್, ಅದರ ಕೆಳಗೆ ರೇಶಿಮೆ ಉಡುಪು, ಆಮೇಲೆ ಶಾಲು, ಇನ್ನೂ ಕೆಳಗೆ, ಬರೀ ಹಳೆಯ ಬಟ್ಟೆಯಲ್ಲದೆ ಮತ್ತೇನೂ ಇದ್ದ ಹಾಗೆ ಕಾಣಲಿಲ್ಲ. ರಕ್ತ ಮೆತ್ತಿದ್ದ ಕೈಯನ್ನು ಕೆಂಪು ರೇಶಿಮೆ ಉಡುಪಿಗೆ ಒರೆಸಿದ. ‘ಕೆಂಪು ಬಟ್ಟೆ, ರಕ್ತ ಅದರ ಮೇಲೆ ಎದ್ದು ಕಾಣಲ್ಲ.’ ಅಂದುಕೊಂಡ. ತಕ್ಷಣ ಎಚ್ಚರಗೊಂಡ. ‘ದೇವರೇ, ತಲೆ ಕೆಡುತ್ತಿದೆಯೇ?’ ಹೆದರಿದ. ಈ ಹಳೆಯಬಟ್ಟೆಗಳನ್ನು ಕೆದರುತಿದ್ದ ಹಾಗೇ ಚಿನ್ನದ ಗಡಿಯಾರವೊಂದು ಫರ್‌ ಕೋಟಿನ ಒಳಗಿನಿಂದ ಜಾರಿ ಬಿತ್ತು. ಬಟ್ಟೆಗಳನ್ನೆಲ್ಲ ಕೊಡವಿದ. ಅಗೋ, ಬಟ್ಟೆಗಳ ನಡುವೆ ಬಂಗಾರದ ವಸ್ತುಗಳಿದ್ದವು. ಎಲ್ಲವೂ ಗಿರವಿ ಇಟ್ಟವೇ ಇರಬೇಕು. ಕಡಗ, ಸರ, ಲೋಲಾಕು, ಪಿನ್ನು, ಇಂಥವು. ಕೆಲವು ಪುಟ್ಟ ಪೆಟ್ಟಿಗೆಗಳಲ್ಲಿ, ಕೆಲವು ಸುಮ್ಮನೆ ಪೇಪರಿನಲ್ಲಿ ಹುಷಾರಾಗಿ, ಅಚ್ಚುಕಟ್ಟಾಗಿ ಸುತ್ತಿ, ದಾರ ಕಟ್ಟಿ ಇಟ್ಟಂಥವು. ಒಂದಿಷ್ಟೂ ತಡಮಾಡದೆ ಅವನ್ನೆಲ್ಲ ಕೋಟಿನ, ಪ್ಯಾಂಟಿನ ಜೇಬುಗಳಿಗೆ ತುಂಬಿಕೊಂಡ. ಪ್ಯಾಕುಗಳನ್ನು, ಪುಟ್ಟ ಪೆಟ್ಟಿಗೆಗಳನ್ನು ತೆರೆಯಲಿಲ್ಲ. ಬಹಳಷ್ಟು ತೆಗೆದುಕೊಳ್ಳಲು ಸಮಯವಿರಲಿಲ್ಲ…

ಮುದುಕಿಯ ಹೆಣ ಬಿದ್ದಿದ್ದ ರೂಮಿನಲ್ಲಿ ಇದ್ದಕಿದ್ದ ಹಾಗೆ ಹೆಜ್ಜೆ ಸದ್ದು. ಸತ್ತವನ ಹಾಗೆ ನಿಶ್ಚಲ ನಿಂತ. ಎಲ್ಲ ನಿಶ್ಶಬ್ದವಾಗಿತ್ತು. ಕಲ್ಪನೆ ಇರಬೇಕು. ಸಣ್ಣದಾಗಿ ಯಾರೋ ಚೀರಿದ್ದು ಕೇಳಿಸಿತು. ಸ್ಪಷ್ಟವಾಗಿ. ಯಾರೋ ಮೆಲ್ಲನೆ ಮುಲುಗಿ ತಟ್ಟನೆ ಸುಮ್ಮನಾದ ಹಾಗೆ. ಮತ್ತೆ ಸಾವಿನಂಥ ನಿಶ್ಶಬ್ದ. ಹಾಗೇ ಪೆಟ್ಟಿಗೆಯ ಪಕ್ಕದಲ್ಲೆ ಬೆನ್ನು ಬಗ್ಗಿಸಿ ಕೂತು ಒಂದೆರಡು ನಿಮಿಷ ಕಾದ—ಉಸಿರಾಡುತ್ತಲೇ ಇರಲಿಲ್ಲ ಅನ್ನುವ ಹಾಗೆ. ತಟ್ಟನೆ ಎದ್ದ. ಕೊಡಲಿ ತೆಗೆದುಕೊಂಡ. ಬೆಡ್ ರೂಮಿಗೆ ಓಡಿದ.

ರೂಮಿನ ಮಧ್ಯದಲ್ಲಿ ಲಿಝಾವೆಟ ನಿಂತಿದ್ದಳು. ಅವಳ ಕೈಯಲ್ಲಿ ದೊಡ್ಡ ಗಂಟು ಇತ್ತು. ಕೊಲೆಯಾಗಿರುವ ಅಕ್ಕನನ್ನು ಕಲ್ಲಿನ ಹಾಗೆ ನಿಂತು ದಿಟ್ಟಿಸುತಿದ್ದಳು. ಮುಖ ಬಿಳಿಯ ಬಟ್ಟೆಯ ಹಾಗೆ ಕಾಣುತಿತ್ತು. ಅಳುವುದಕ್ಕೂ ಆಗುವುದಿಲ್ಲ ಅನ್ನುವ ಹಾಗೆ ನಿಂತಿದ್ದಳು. ಅವನು ಓಡಿ ಬರುವುದು ನೋಡಿ ಎಲೆಯ ಹಾಗೆ ತರಗುಟ್ಟಿದಳು. ಇಡೀ ಮೈ ಸಣ್ಣಗೆ ಕಂಪಿಸಿತು. ಕೈ ಮೇಲೆತ್ತಿದಳು. ಬಾಯಿ ತೆರೆದಳು. ಸದ್ದು ಬರಲಿಲ್ಲ. ನಿಧಾನವಾಗಿ ಹಿಂದೆ ಸರಿಯುತ್ತ ಮೂಲೆಗೆ ಸೇರಿಕೊಂಡಳು. ಅವನನ್ನೆ ದಿಟ್ಟಿಸುತಿದ್ದಳು. ಕಣ್ಣಲ್ಲಿ ಯಾವ ಭಾವವೂ ಇರಲಿಲ್ಲ. ಚೀರುವುದಕ್ಕೆ ಉಸಿರಿಲ್ಲ ಅನ್ನುವ ಹಾಗೆ ನಿಂತಿದ್ದಳು. ಕೊಡಲಿ ಹಿಡಿದು ಅವಳತ್ತ ನುಗ್ಗಿದ. ಹೆದರಿದ ಮಕ್ಕಳು ಮಾಡುವ ಹಾಗೆ, ಭಯ ಹುಟ್ಟಿಸಿದ ವಸ್ತುವನ್ನೇ ದಿಟ್ಟಿಸುತ್ತಿದ್ದಳು. ಇನ್ನೇನು ಅಳು ಬರುತ್ತದೆ ಅನ್ನುವ ಥರ ತುಟಿ ಸೊಟ್ಟಗಾದವು. ಅಯ್ಯೋ ಪಾಪ ಅನ್ನಿಸುವ ಹಾಗಿತ್ತು. ಪಾಪದ ಲಿಝವೆಟಾ ಎಂಥ ಪೆದ್ದಿ, ಎಷ್ಟು ದಬ್ಬಾಳಿಕೆ ಅನುಭವಿಸಿದ್ದಳು, ಎಷ್ಟು ಬೆದರಿದ್ದಳು ಅಂದರೆ ಕೈಯನ್ನು ಮುಖಕ್ಕೆ ಅಡ್ಡವಾಗಿ ತರಲೂ ಇಲ್ಲ. ಆ ಕ್ಷಣದಲ್ಲಿ ಅವನು ಅವಳ ಮುಖದೆದುರೇ ಕೊಡಲಿ ಎತ್ತಿದ್ದರಿಂದ ಕೈ ಅಡ್ಡ ಹಿಡಿಯುವುದು ತೀರ ಸಹಜವಾದ ಕ್ರಿಯೆಯಾಗಿತ್ತು. ಬಿಡುವಾಗಿದ್ದ ಎಡಗೈಯನ್ನು ನಿಧಾನ ನಿಧಾನವಾಗಿ ಎತ್ತಿ ಅವನನ್ನು ದೂರ ತಳ್ಳುವ ಹಾಗೆ ಮುಂದೆ ಚಾಚಿದಳು. ಕೊಡಲಿಯ ಚೂಪು ತುದಿ ನೇರವಾಗಿ ಬುರುಡೆ ಬಿದ್ದು ತಲೆಯ ಮೇಲು ಭಾಗ ಸೀಳಿಹೋಯಿತು. ಏನು ಮಾಡಬೇಕು ಹೊಳೆಯದೆ ರಾಸ್ಕೋಲ್ನಿಕೋವ್ ಗಂಟು ಎತ್ತಿಕೊಂಡ, ಕೆಳಕ್ಕೆ ಬಿಸಾಕಿದ, ಹೊರಕ್ಕೆ ಓಡಿದ.

ಅನಿರೀಕ್ಷಿತವಾಗಿ ನಡೆದ ಎರಡನೆಯ ಕೊಲೆಯ ನಂತರ ಭಯ ಅಮರಿಕೊಳ್ಳುತಿತ್ತು. ಸಾಧ್ಯವಾದಷ್ಟು ಬೇಗ ಅಲ್ಲಿಂದ ಓಡಿ ಹೋಗಬೇಕು ಅನ್ನಿಸುತಿತ್ತು. ಆ ಕ್ಷಣದಲ್ಲಿ ಸರಿಯಾಗಿ ನೋಡಿ ಸರಿಯಾಗಿ ವಿಚಾರ ಮಾಡುವ ಸಾಮರ್ಥ್ಯ ಅವನಿಗಿದ್ದಿದ್ದರೆ ತನ್ನ ಪರಿಸ್ಥಿತಿ ಎಷ್ಟು ಕಷ್ಟದ್ದು, ಎಷ್ಟು ಅಸಹಾಯಕವಾದದ್ದು, ಎಷ್ಟು ಅಸಹ್ಯವಾದದ್ದು, ಅಸಂಬದ್ಧವಾದದ್ದು ಅನ್ನುವುದು ಹೊಳೆಯುತಿತ್ತು; ಅಲ್ಲಿಂದ ಹೊರಟು ಮನೆಯನ್ನು ತಲುಪಬೇಕಾದರೆ ಇನ್ನೂ ಎಷ್ಟು ತಪ್ಪುಗಳನ್ನು ಮಾಡಬೇಕು, ಅಪರಾಧಗಳನ್ನು ಎಸಗಬೇಕು, ಕಷ್ಟಗಳನ್ನು ದಾಟಬೇಕು ಅನ್ನುವುದು ಅರ್ಥವಾಗುತ್ತಿತ್ತು. ಎಲ್ಲವನ್ನೂ ಹಾಗೇ ಬಿಟ್ಟು ಹೋಗಿ ಶರಣಾಗಿಬಿಡತಿದ್ದ—ಹಾಗೆ ಮಾಡುತ್ತಿದ್ದದ್ದು ತಾನು ಮಾಡಿದ ಕೆಲಸದ ಬೀಭತ್ಸತೆ, ಅಸಹ್ಯಗಳ ಕಾರಣಕ್ಕೇ ಹೊರತು ಭಯದಿಂದಲ್ಲ. ಆ ಕ್ಷಣದಲ್ಲಾಗಲೇ ಮನಸ್ಸಿನಲ್ಲಿ ಅಸಹ್ಯದ ಭಾವನೆ ತುಂಬಿಕೊಳ್ಳುತಿತ್ತು. ಬೆಳೆಯುತ್ತಿತ್ತು. ಇಡೀ ಜಗತ್ತನ್ನೆ ಕೊಡುತ್ತೇನೆ ಅಂದಿದ್ದರೂ ಮತ್ತೆ ಅವನು ಪೆಟ್ಟಿಗೆಯ ಹತ್ತಿರ, ಅಥವ ರೂಮಿನೊಳಕ್ಕೆ ಕೂಡ ಹೋಗುವ ಸ್ಥಿತಿಯಲ್ಲಿರಲಿಲ್ಲ.

ಒಂದು ಥರದ ಅನ್ಯಮನಸ್ಕ ಸ್ಥಿತಿ, ಹಗಲುಗನಸಿನಂಥದ್ದು ಅವನನ್ನು ಆವರಿಸಿಕೊಳ್ಳುತಿತ್ತು. ತನ್ನನ್ನೆ ಮರೆತವನ ಹಾಗೆ, ಅಥವಾ ಮುಖ್ಯವಾದದ್ದನ್ನು ಮರೆತು ಸಣ್ಣಪುಟ್ಟ ಸಂಗತಿಗಳಿಗೆ ಜೋತುಬಿದ್ದವನ ಹಾಗಿದ್ದ. ಹಾಗಿದ್ದರೂ ಅಡುಗೆ ಮನೆಯತ್ತ ನೋಡಿ, ಅಲ್ಲಿ ಬೆಂಚಿನ ಮೇಲಿದ್ದ ಅರ್ಧ ಬಕೆಟ್ಟು ನೀರು ನೋಡಿದಾಗ ಕೈ , ಕೊಡಲಿಗಳನ್ನು ತೊಳಕೊಳ್ಳಬೇಕು ಅನ್ನುವ ಸಂಗತಿ ಹೊಳೆಯಿತು. ರಕ್ತ ಮೆತ್ತಿಕೊಂಡು ಕೈ ಅಂಟಾಗಿತ್ತು. ಕೊಡಲಿಯನ್ನು ನೇರವಾಗಿ ನೀರಿಗೆ ಅದ್ದಿದ. ಮುರಿದ ಸಾಸರ್‌ ನಲ್ಲಿಟ್ಟಿದ್ದ ಸೋಪು ತೆಗೆದುಕೊಂಡು ಕೈ ತೊಳೆದುಕೊಂಡ. ಕೈ ಸ್ವಚ್ಛವಾದಮೇಲೆ ಕೊಡಲಿ ತೆಗೆದುಕೊಂಡು, ಅದನ್ನು ತೊಳೆಯುತ್ತ ಬಹಳ ಹೊತ್ತು, ಸುಮಾರು ಮೂರು ನಿಮಿಷ, ಕಳೆದ. ಕೊಡಲಿಯ ಕಾವಿಗೆ ಹತ್ತಿದ್ದ ರಕ್ತವನ್ನೂ ತೊಳೆದ. ರಕ್ತ ಹೋಗಲೆಂದು ಸೋಪನ್ನೂ ಹಚ್ಚಿದ. ಆಮೇಲೆ ಅಲ್ಲೆ ಅಡುಗೆ ಮನೆಯಲ್ಲಿ ಮೂಲೆಯಿಂದ ಮೂಲೆಗೆ ದಾರ ಕಟ್ಟಿ ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ಒರೆಸಿದ. ಕಿಟಕಿಯ ಹತ್ತಿರ ಹೋಗಿ ಕೊಡಲಿಯನ್ನು ಗಮನವಿಟ್ಟು ಪರೀಕ್ಷೆ ಮಾಡಿ ನೋಡಿದ. ಎಲ್ಲೂ ಕಲೆ ಇರಲಿಲ್ಲ. ಕೊಡಲಿಯ ಮರದ ಹಿಡಿಕೆ ಮಾತ್ರ ವದ್ದೆಯಾಗಿತ್ತು.

ಕೊಡಲಿಯನ್ನು ಮತ್ತೆ ಹುಷಾರಾಗಿ ಕೋಟಿನೊಳಗಿನ ಕುಣಿಕೆಗೆ ಸಿಕ್ಕಿಸಿಕೊಂಡ. ಆಮೇಲೆ ಅಡುಗೆಮನೆಯ ಮಂಕು ಬೆಳಕಿನಲ್ಲಿ ತನ್ನ ಕೋಟು, ಪ್ಯಾಂಟು, ಬೂಟುಗಳನ್ನು ಸಾಧ್ಯವಾದಷ್ಟು ನೋಡಿದ. ಸುಮ್ಮನೆ ನೋಡಿದರೆ ಬೂಟಿನ ಮೇಲೆ ಅಲ್ಲೊಂದು ಇಲ್ಲೊಂದು ರಕ್ತದ ಕಲೆ ಬಿಟ್ಟರೆ ಇನ್ನೇನೂ ಇಲ್ಲ ಅನ್ನಿಸುತಿತ್ತು. ವದ್ದೆ ಬಟ್ಟೆ ತೆಗೆದುಕೊಂಡು ಬೂಟು ಒರೆಸಿದ. ಸರಿಯಾಗಿ ನೋಡಿಕೊಂಡಿಲ್ಲ, ತನಗೆ ತಿಳಿಯದ್ದು, ಕಣ್ಣು ಸೆಳೆಯುವಂಥದ್ದು ಏನಾದರೂ ಇರಬಹುದು ಅನ್ನಿಸುತಿತ್ತು. ರೂಮಿನ ಮಧ್ಯೆ ಸುಮ್ಮನೆ ನಿಂತ. ಹಿಂಸೆಕೊಡುವ ಕರಾಳ ಯೋಚನೆಯೊಂದು ತಲೆ ಎತ್ತುತಿತ್ತು. ‘ಹುಚ್ಚು ಹಿಡಿದಿದೆ, ಯೋಚನೆ ಮಾಡಲಾರೆ, ನನ್ನ ನಾನು ಕಾಪಾಡಿಕೊಳ್ಳಲಾರೆ, ಈ ಕ್ಷಣದಲ್ಲಿ ಮಾಡಬೇಕಾದ್ದನ್ನು ಮಾಡುತ್ತಿಲ್ಲ,’ ಅನಿಸುತಿತ್ತು. ‘ದೇವರೇ! ಓಡಬೇಕು, ಓಡಿ ಹೋಗಬೇಕು,’ ಅಂದುಕೊಂಡ. ತಲೆಬಾಗಿಲಿಗೆ ಓಡಿಬಂದ. ಅವನಿಗೆ ಹಿಂದೆ ಎಂದೂ ಆಗದಿದ್ದಂಥ ಭಯ ಅಲ್ಲಿ ಕಾಯುತಿತ್ತು.

ನಿಂತ. ನೋಡಿದ. ತನ್ನ ಕಣ್ಣನ್ನೆ ನಂಬಲಾಗಲಿಲ್ಲ. ಬಾಗಿಲು, ಹೊರ ಬಾಗಿಲು, ಮಹಡಿ ಮೆಟ್ಟಿಲಿನಿಂದ ಮನೆಯೊಳಕ್ಕೆ ಬರುವ ಬಾಗಿಲು, ತಾನೇ ಗಂಟೆಯೊತ್ತಿ ತೆರೆಸಿದ್ದ ಬಾಗಿಲು, ಸ್ವಲ್ಪ ಹೊತ್ತಿಗೆ ಮೊದಲು ತನ್ನನ್ನು ಒಳಗೆ ಬಿಟ್ಟುಕೊಂಡಿದ್ದ ಬಾಗಿಲು ಈಗ ಚಿಲುಕ ತೆಗೆದುಕೊಂಡು ಒಂದು ಮಾರಗಲ ತೆರೆದಿತ್ತು. ಬೀಗವಿಲ್ಲ, ಚಿಲಕವಿಲ್ಲ, ಕೊಕ್ಕೆ ಇಲ್ಲ, ಇಷ್ಟು ಹೊತ್ತೂ ಹಾಗೇ ತೆರೆದೇ ಇದೆ! ಅವನು ಒಳಕ್ಕೆ ಬಂದ ಮೇಲೆ ಮುದುಕಿ ಬಾಗಿಲು ಹಾಕಿರಲಿಲ್ಲ. ಜಾಣೆ. ಆದರೆ ಅಯ್ಯೋ ದೇವರೇ, ಮುದುಕಿಯನ್ನು ಕೊಂದ ಮೇಲೆ ಲಿಝಾವೆಟಾಳನ್ನು ನೋಡಿದ್ದನಲ್ಲ, ಅವಳು ಎಲ್ಲಿಂದಲಾದರೂ ಒಳಕ್ಕೆ ಬಂದಿರಬೇಕು, ಗೋಡೆಯನ್ನು ದಾಟಿಕೊಂಡಂತೂ ಅಲ್ಲ ಅನ್ನುವ ಯೋಚನೆ ಅವನಿಗೆ ಯಾಕೆ ಬರಲಿಲ್ಲ!

ತಟ್ಟನೆ ಬಾಗಿಲು ಮುಚ್ಚಿ ಚಿಲಕ ಹಾಕಿದ.

‘ಇದಲ್ಲ ನಾನು ಮಾಡಬೇಕಾದ ಕೆಲಸ! ಹೋಗಬೇಕು, ಹೋಗಬೇಕು…’

ಚಿಲಕ ಸರಿಸಿ ಬಾಗಿಲು ತೆರೆದ. ಕಿವಿಗೊಟ್ಟು ಕೇಳಿದ. ಬಹಳ ಹೊತ್ತು. ಎಲ್ಲೋ ದೂರ, ಕೆಳಗಿನ ಮಹಡಿಯಲ್ಲಿ, ಅಥವಾ ಗೇಟಿನ ಹತ್ತಿರ ಎರಡು ದನಿಗಳು ಜೋರಾಗಿ ಚೀರಾಡುತ್ತಿದ್ದವು, ಜಗಳಾಡುತಿದ್ದವು, ಬೈದಾಡುತಿದ್ದವು. ‘ಏನು ವಿಷಯವೋ?’ ತಾಳ್ಮೆಯಿಂದ ಕಾಯ್ದ. ಕೊನೆಗೊಮ್ಮೆ ತಟ್ಟನೆ ಕತ್ತರಿಸಿದ ಹಾಗೆ ಎಲ್ಲ ಶಾಂತವಾಯಿತು. ಹೊರಟು ಹೋದರು. ರಾಸ್ಕೋಲ್ನಿಕೋವ್ ಹೊರಟ. ಇದ್ದಕಿದ್ದ ಹಾಗೆ ಕೆಳಗಿನ ಅಂತಸ್ತಿನ ಮನೆಯ ಬಾಗಿಲು ಸದ್ದು ಮಾಡುತ್ತ ತೆರೆದುಕೊಂಡಿತು. ಯಾರೋ ಹಾಡು ಗುನುಗುತ್ತ ಇಳಿದು ಹೋಗುತಿದ್ದರು. ‘ಯಾಕೆ ಇಷ್ಟೊಂದು ಸದ್ದು ಮಾಡುತ್ತಾರೆ?’ ಅವನ ತಲೆಯಲ್ಲೊಂದು ವಿಚಾರ ಹೀಗೆ ಮೂಡಿತು. ಮತ್ತೆ ಬಾಗಿಲು ಮುಚ್ಚಿದ. ಕಾದ. ಕೊನೆಗೆ ಎಲ್ಲ ಶಾಂತ, ಮೌನ. ಮೆಟ್ಟಿಲ ಮೇಲೆ ಕಾಲಿಟ್ಟಿದ್ದ. ಮತ್ತೆ ಇದ್ದಕಿದ್ದ ಹಾಗೆ ಹೆಜ್ಜೆಗಳ ಹೊಸ ಸದ್ದು ಕೇಳಿಸಿತು.

ಹೆಜ್ಜೆ ಶಬ್ದ ದೂರದಿಂದ, ನೆಲ ಅಂತಸ್ತಿನ ಮೆಟ್ಟಿಲಿಂದ ಬರುತಿತ್ತು. ಅದು ಕಿವಿಗೆ ಬಿದ್ದ ತಕ್ಷಣವೇ ಯಾರೋ ಇಲ್ಲಿಗೇ, ನಾಲ್ಕನೆಯ ಮಹಡಿಗೇ, ಮುದುಕಿಯ ಮನೆಗೇ ಬರುತಿದ್ದಾರೆ ಅನ್ನುವ ಅನುಮಾನ ಹುಟ್ಟಿತು ಅನ್ನುವುದು ಆಮೇಲೂ ಕೂಡ ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಹೆಜ್ಜೆ ಸದ್ದು ಯಾಕೆ ಅಪಶಕುನದ ಹಾಗಿತ್ತೋ? ಭಾರವಾದ, ಆತುರವಿಲ್ಲದ ಹೆಜ್ಜೆಗಳು. ಮೊದಲ ಮಹಡಿ ದಾಟಿದ್ದವು. ಮೇಲೇರುತಿದ್ದವು. ಬರುತಿದ್ದವನ ಹೆಜ್ಜೆ ಶಬ್ದ ಜೋರಾಗುತಿತ್ತು. ಯಾರೋ? ಉಸಿರಾಡಲು ಕಷ್ಟಪಡುತಿದ್ದ. ಈಗ ಮೂರನೆಯ ಮಹಡಿಗೆ ಬರುತ್ತಿದ್ದ. ಇಲ್ಲಿಗೇ! ಕಲ್ಲಾಗಿಬಿಟ್ಟೆ ಅನ್ನಿಸಿತು ಅವನಿಗೆ. ಕನಸಿನಲ್ಲಿ ಯಾರೋ ಅಟ್ಟಿಸಿಕೊಂಡು ಬರುತ್ತಾರೆ, ಕೊಲ್ಲಲು ಬರುತ್ತಾರೆ, ಆಗ ಓಡಲು ಆಗುವುದೇ ಇಲ್ಲ, ಕೈ ಎತ್ತುವುದಕ್ಕೂ ಆಗುವುದಿಲ್ಲವಲ್ಲ ಹಾಗೆ.

ಅವನು ಯಾರೋ ನಾಲ್ಕನೆಯ ಮಹಡಿಗೇ ಬರುತಿದ್ದ. ರಾಸ್ಕೋಲ್ನಿಕೋವ್ ಎಚ್ಚರತಂದುಕೊಂಡ. ತಟ್ಟನೆ ಮತ್ತೆ ಮನೆಯೊಳಕ್ಕೆ ನುಸುಳಿ ಬಾಗಿಲು ಹಾಕಿದ. ಒಳಗಿನ ಚಿಲುಕದ ಕೊಕ್ಕೆಯನ್ನು ಕಂಡಿಗೆ ಸಿಕ್ಕಿಸಿದ. ಅವನ ಹುಟ್ಟುಜಾಣತನ ಸಹಾಯಮಾಡುತಿತ್ತು. ಚಿಲುಕ ಸಿಕ್ಕಿಸಿ ಬಾಗಿಲ ಹತ್ತಿರ ಬಗ್ಗಿ, ಉಸಿರು ಬಿಗಿಹಿಡಿದು ಕೂತ. ಕರೆಯದೆ ಬಂದವನು ಅಷ್ಟು ಹೊತ್ತಿಗೆ ಬಾಗಿಲಿಗೆ ಬಂದಿದ್ದ. ಬಾಗಿಲ ಆ ಕಡೆ ಅವನು, ಈ ಕಡೆ ಇವನು. ಸ್ವಲ್ಪ ಹೊತ್ತಿಗೆ ಮುಂಚೆ ಆ ಕಡೆ ಇವನು ಈ ಕಡೆ ಮುದುಕಿ ಇದ್ದು ಇಬ್ಬರ ನಡುವೆ ಬಾಗಿಲು ಇತ್ತಲ್ಲ, ಹಾಗೇ. ಈಗ ಇವನೇ ಕೇಳಿಸಿಕೊಳ್ಳುತಿದ್ದ.

ಮಹಡಿ ಹತ್ತಿ ಬಂದವನ ಏದುಸಿರು ಕೇಳುತಿತ್ತು. ‘ದೊಡ್ಡ ಗಾತ್ರ, ದಪ್ಪ ಮೈ,’ ಅಂದುಕೊಂಡ ರಾಸ್ಕೋಲ್ನಿಕೋವ್. ಕೊಡಲಿಯನ್ನು ಭದ್ರವಾಗಿ ಹಿಡಿದ. ಕನಸು ಕಾಣುತ್ತಿರುವ ಹಾಗಿತ್ತು. ಬಂದವನು ಗಂಟೆಯ ಹಗ್ಗ ಹಿಡಿದು ಎಳೆದ.

ಸಣ್ಣದಾಗಿ ಯಾರೋ ಚೀರಿದ್ದು ಕೇಳಿಸಿತು. ಸ್ಪಷ್ಟವಾಗಿ. ಯಾರೋ ಮೆಲ್ಲನೆ ಮುಲುಗಿ ತಟ್ಟನೆ ಸುಮ್ಮನಾದ ಹಾಗೆ. ಮತ್ತೆ ಸಾವಿನಂಥ ನಿಶ್ಶಬ್ದ. ಹಾಗೇ ಪೆಟ್ಟಿಗೆಯ ಪಕ್ಕದಲ್ಲೆ ಬೆನ್ನು ಬಗ್ಗಿಸಿ ಕೂತು ಒಂದೆರಡು ನಿಮಿಷ ಕಾದ.

ಗಂಟೆಯ ಕಿಣಿಕಿಣಿ ಸದ್ದು ಕೇಳುತಿದ್ದ ಹಾಗೇ ಒಳಗೆ ರೂಮಿನಲ್ಲಿ ಏನೋ ಓಡಾಡಿದ ಹಾಗೆ ಅನ್ನಿಸಿತು ಇವನಿಗೆ. ಒಂದೆರಡು ಕ್ಷಣ ಗಮನವಿಟ್ಟು ಕೇಳಿಸಿಕೊಂಡ. ಬಂದವನು ಇನ್ನೊಂದು ಸಾರಿ ಗಂಟೆ ಸದ್ದು ಮಾಡಿದ. ಸ್ವಲ್ಪ ಹೊತ್ತು ಕಾದ. ಆಮೇಲೆ ಸಹನೆ ಕಳಕೊಂಡವನ ಹಾಗೆ ಬಾಗಿಲ ಹಿಡಿಕೆಯನ್ನು ಹಿಡಿದು ಎಳೆಯುವುದಕ್ಕೆ ಶುರುಮಾಡಿದ. ಕಂಡಿಗೆ ಸಿಕ್ಕಿಸಿದ್ದ ಚಿಲುಕ ಅಲುಗಾಡುತ್ತಿರುವುದು ಬೆದರಿದ ರಾಸ್ಕೋಲ್ನಿಕೋವ್ ಕಣ್ಣಿಗೆ ಬಿತ್ತು. ಯಾವಾಗ ಬೇಕಾದರೂ ಕಳಚೀತು. ಬಂದವನು ಬಾಗಿಲನ್ನು ಅಷ್ಟು ಜೋರಾಗಿ ಎಳೆಯುತಿದ್ದ. ಬಾಗಿಲನ್ನು ಭದ್ರವಾಗಿ ಹಿಡಿದುಕೊಳ್ಳಬೇಕು ಅನ್ನಿಸಿತು. ಹಾಗೆ ಮಾಡಿದರೆ ಬಂದವನಿಗೆ ಅನುಮಾನ ಹುಟ್ಟಬಹುದು. ರಾಸ್ಕೋಲ್ನಿಕೋವ್‌ ನ ತಲೆ ಸುತ್ತುತಿತ್ತು. ಎಚ್ಚರ ತಪ್ಪುತ್ತದೆ ಅಂದುಕೊಂಡ. ಅಷ್ಟು ಹೊತ್ತಿಗೆ ಬಂದಿದ್ದವನು ಮಾತಾಡಿದ. ಮಾತು ಕಿವಿಗೆ ಬೀಳುತಿದ್ದ ಹಾಗೆ ರಾಸ್ಕೋಲ್ನಿಕೋವ್ ಚೇತರಿಸಿಕೊಂಡ.

‘ಏನಾಯಿತು ಇವರಿಗೆ? ಗೊರಕೆ ಹೊಡೆಯುತಿದ್ದಾರೋ ಯಾರಾದರೂ ಬಂದು ಕತ್ತು ಮುರಿದು ಸಾಯಿಸಿದರೋ? ಥೂ!’ ಕೂಗಾಡುತಿದ್ದ. ‘ಏಯ್, ಮುದುಕೀ, ಅಲ್ಯೋನಾ ಇವಾನೊವ್ನಾ! ಏಯ್ ದರಿದ್ರಾ ಲಿಝಾವೆಟಾ! ತೆಗೀರಿ ಬಾಗಿಲು! ನಿದ್ದೆಮಾಡತಿದೀರೋ ಏನು ಮಾಡತಾ ಇದೀರಿ?’

ಮತ್ತೆ ಕೋಪ ಮಾಡಿಕೊಂಡು ಗಂಟೆಯನ್ನು ಶಕ್ತಿ ಬಿಟ್ಟು ಒಂದೇ ಸಮ ಹತ್ತಾರು ಬಾರಿ ಬಾರಿಸಿದ. ಯಾರೋ ದೊಡ್ಡ ಮನುಷ್ಯ, ಮನೆಯವರಿಗೆ ಪರಿಚಯದವನು.

ಅಷ್ಟು ಹೊತ್ತಿಗೆ ಸಮೀಪದಲ್ಲೆ ದಡದಡ ಹೆಜ್ಜೆ ಸದ್ದು ಮಾಡಿಕೊಂಡು ಯಾರೋ ಮೆಟ್ಟಿಲು ಏರುತಿದ್ದರು. ಇನ್ನೊಬ್ಬ ಯಾರೋ ಬಂದಿದ್ದ.

‘ಏನು, ಮನೆಯಲ್ಲಿ ಯಾರೂ ಇಲ್ಲವಾ? ಹೇಗಿದ್ದೀಯಾ, ಕೋಚ್!’ ಹೊಸಬ ಗಟ್ಟಿಯಾದ ಲವಲವಿಕೆಯ ದನಿಯಲ್ಲಿ ಮೊದಲು ಬಂದು ಬಾಗಿಲ ಗಂಟೆ ಬಾರಿಸುತಿದ್ದವನನ್ನು ಕೇಳಿದ.
‘ಮಾತಿನ ದನಿ ಕೇಳಿದರೆ ಪ್ರಾಯದ ಹುಡುಗ ಇರಬಹುದು,’ ರಾಸ್ಕೋಲ್ನಿಕೋವ್‌ ಗೆ ತಟ್ಟನೆ ಅನ್ನಿಸಿತು.

‘ಸೈತಾನನಿಗೇ ಗೊತ್ತು. ಬೀಗ ಮುರಿಯಬೇಕು ಅಂದುಕೊಳ್ಳತಿದ್ದೆ. ಅಂದ ಹಾಗೆ ನನ್ನ ಪರಿಚಯ ನಿನಗೆ?’

‘ಚೆನ್ನಾಗಿದೆ! ನಿನ್ನೆಯಲ್ಲ ಮೊನ್ನೆ ಗಾಂಬ್ರಿನಸ್‌ ನಲ್ಲಿ ನಿಮ್ಮನ್ನ ಒಂದೇ ಸಮ ಮೂರು ಆಟ ಬಿಲಿಯರ್ಡ್ಸ್ ಸೋಲಿಸಲಿಲ್ಲವಾ ನಾನು?

‘ಆ.. ಆಹ್.. ಆ’

‘ಅವರು ಮನೆಯಲ್ಲಿಲ್ಲವಾ? ವಿಚಿತ್ರ. ಮುದುಕಿ ಎಲ್ಲಿ ಹೋಗಿರಬಹುದು? ನನಗೂ ಅವಳ ಹತ್ತಿರ ಕೆಲಸ ಇತ್ತು.’

‘ನನಗೂ ಕೆಲಸ ಇತ್ತು.’

‘ಏನು ಮಾಡುವುದಕ್ಕಾಗತ್ತೆ? ಮನೆಗೆ ಹೋಗಬೇಕು, ಅಷ್ಟೆ. ಥೂ, ಒಂದಿಷ್ಟಾದರೂ ದುಡ್ಡು ಸಿಗತ್ತೆ ಅಂದುಕೊಂಡಿದ್ದೆ!’ ಯುವಕ ಅಂದ.

‘ಮನೆಗೆ ಹೋಗುವುದು ಸರಿ–ಹಾಗಾದರೆ, ಇಷ್ಟು ಹೊತ್ತಿಗೆ ಬನ್ನಿ ಅಂತ ಹೇಳಬೇಕು ಯಾಕೆ? ಆ ಮುದುಕಿನೇ ಸ್ವತಃ ಹೇಳಿದ್ದಳು. ಬಹಳ ದೂರದಿಂದ ಬಂದಿದೇನೆ. ಈ ಮುದುಕಿ ಎಲ್ಲಿ ಹಾಳಾಗಿ ಹೋದಳೋ ಯಾವನಿಗೆ ಗೊತ್ತು. ಯಾವಾಗಲೂ ಇಲ್ಲೇ ಕೊಳೆಯುತ್ತಾ ಬಿದ್ದಿರುತಿದ್ದಳು, ಕಾಲು ಬೇರೆ ಸರಿಯಾಗಿಲ್ಲ, ಈಗ ಕದ ಮುಚ್ಚಿಕೊಂಡು ಹೋಗಿರಬೇಕು ಅಂದರೆ…’

‘ವಾಚ್‌ಮ್ಯಾನ್‌ ನ ಕೇಳೋಣವಾ?’

‘ಏನಂತ?’

‘ಎಲ್ಲಿ ಹೋಗಿದಾಳೆ, ಯಾವಾಗ ಬರತಾಳೆ, ಅಂತ.

‘ಸರಿ, ಕೇಳು… ಎಲ್ಲೂ ಹೋಗುವವಳಲ್ಲವಲ್ಲಾ…’ ಮತ್ತೆ ಬಾಗಿಲ ಹಿಡಿಕೆ ಎಳೆದ.

‘ಏನೂ ಮಾಡಕ್ಕಾಗಲ್ಲ, ಹೋಗಣ!’

‘ಸ್ವಲ್ಪ ತಾಳೀ! ನೋಡಿ, ಬಾಗಿಲು ನೀವು ಎಳೆದಾಗ ಹೇಗೆ ಅಲ್ಲಾಡುತಿದೆ!’

‘ಅದಕ್ಕೆ ಏನೀಗ?

‘ಅಂದರೆ ಬೀಗ ಹಾಕಿಲ್ಲ, ಒಳಗೆ ಚಿಲಕ ಹಾಕಿದಾರೆ. ನೋಡಿದಿರಾ, ಹೇಗೆ ಅಲ್ಲಾಡತಿದೆ!’

‘ಅದಕ್ಕೆ?’

‘ಅರ್ಥ ಆಗಲಿಲ್ಲವಾ? ಒಳಗೆ ಯಾರೋ ಇದ್ದಾರೆ. ಅವರೆಲ್ಲ ಹೊರಗೆ ಹೋಗಿದ್ದರೆ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿರಬೇಕಾಗಿತ್ತು, ಒಳಗೆ ಚಿಲಕ ಹಾಕಿಕೊಂಡು ಹೋಗುವುದು ಹೇಗೆ? ಚಿಲಕ ಹಾಕಬೇಕಾದರೆ ಮನೆಯೊಳಗೆ ಯಾರೋ ಇರಬೇಕಲ್ಲವಾ? ಅಂದರೆ, ಒಳಗೇ ಇದಾರೆ, ಬಾಗಿಲು ತೆಗೆಯುತ್ತಿಲ್ಲ!’ ಯುವಕ ಹೇಳಿದ.

‘ಹಾ, ಹೌದಲ್ಲಾ! ಒಳಗೆ ಏನು ಮಾಡತಾ ಇದಾರೆ!’ ಮತ್ತೆ ಜೋರಾಗಿ ಬಾಗಿಲು ಎಳೆದ ಕೋಚ್.

‘ತಾಳಿ, ಬಾಗಿಲು ಎಳೆಯಬೇಡಿ. ಏನೋ ಆಗಿದೆ… ಗಂಟೆ ಎಳೆದಿರಿ, ಬಾಗಿಲು ಎಳೆದಿರಿ, ಆದರೂ ತೆಗೆದಿಲ್ಲ, ಅಂದರೆ ಇಬ್ಬರೂ ಎಚ್ಚರ ತಪ್ಪಿದಾರೋ, ಅಥವಾ…’

‘ಅಥವಾ…ಏನು?’

‘ವಾಚ್‌ಮ್ಯಾನ್‌ ಗೆ ಹೇಳೋಣ. ಬಂದು ಎಬ್ಬಿಸಲಿ.’

‘ಒಳ್ಳೆಯ ಐಡಿಯ!’ ಇಬ್ಬರೂ ಹೊರಟರು.

‘ತಾಳಿ! ನೀವು ಇಲ್ಲೇ ಇರಿ. ನಾನು ಹೋಗಿ ವಾಚ್‌ಮ್ಯಾನ್‌ನ ಕರಕೊಂಡು ಬರತೇನೆ.’

‘ನಾನು ಇಲ್ಲೇ ಯಾಕಿರಬೇಕು…’

‘ಇದ್ದರೆ ವಾಸಿ ಅನ್ನಿಸತ್ತೆ…’

‘ಅಲ್ಲಾ, ನಾನೂ…’

‘ನಾನು ಲಾ ಕಾಲೇಜಿನಲ್ಲಿ ಓದತಾ ಇದೇನೆ. ಒಳಗೆ ಏನೋ ಆಗಿರುವುದು ಗ್ಯಾರಂಟಿ!’ ಯುವಕ ಮೆಟ್ಟಿಲಿಳಿದು ಓಡುತ್ತ ಸಿಟ್ಟಿನಲ್ಲಿ ಕೂಗಿ ಹೇಳಿದ.

ಕೋಚ್ ಅಲ್ಲೆ ಉಳಿದ. ಇನ್ನೊಂದು ಸಾರಿ ಗಂಟೆಯ ದಾರ ಎಳೆದ. ಇನ್ನೊಂದು ಕಿಣಿ, ಕಿಣಿ. ಮತ್ತೆ, ನಿಶ್ಶಬ್ದ. ಪರೀಕ್ಷೆ ಮಾಡುವವನ ಹಾಗೆ, ಯೋಚನೆ ಮಾಡುತ್ತಿರುವವನ ಹಾಗೆ ಬಾಗಿಲ ಹಿಡಿಕೆ ಹಿಡಿದು ಎಳೆದ. ಒಳಗಿನಿಂದ ಚಿಲುಕ ಹಾಕಿದೆ ಅನ್ನುವುದನ್ನು ಖಾತ್ರಿಮಾಡಿಕೊಳ್ಳುವ ಹಾಗೆ. ಬುಸುಗುಡುತ್ತ ಬಗ್ಗಿ ಬೀಗದ ಕೈ ಹಾಕುವ ಕಿಂಡಿಯಲ್ಲಿ ಇಣಿಕಿ ನೋಡಿದ. ಕಿಂಡಿಯಲ್ಲಿ ಬೀಗದ ಕೈ ಇತ್ತು. ಏನೂ ಕಾಣಲಿಲ್ಲ.

ರಾಸ್ಕೋಲ್ನಿಕೋವ್ ಕೊಡಲಿ ಭದ್ರವಾಗಿ ಹಿಡಿದು ನಿಂತಿದ್ದ. ಸನ್ನಿ ಹಿಡಿದವರ ಹಾಗಿದ್ದ. ಅವರು ಒಳಕ್ಕೆ ಬಂದರೆ ಅವರ ಜೊತೆ ಕಾದಾಡುವುದಕ್ಕೆ ಸಿದ್ಧನಾಗುತಿದ್ದ. ಅವರು ಬಾಗಿಲು ತಟ್ಟುತ್ತ ಮಾತಾಡುತ್ತ ಇರುವಾಗ, ‘ನಾನು ಬಾಗಿಲ ಹಿಂದಿನಿಂದ ಚೀರಿದರೆ ಹೇಗೆ, ಇದೆಲ್ಲ ಮುಗಿದರೆ ಸಾಕು,’ ಎಂದು ಎಷ್ಟೋ ಸಾರಿ ಅನ್ನಿಸಿತ್ತು. ಬಾಗಿಲು ತೆಗೆಯಲು ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದು ಅವರನ್ನ ಬೈಯಬೇಕು, ರೇಗಿಸಬೇಕು, ‘ಒಟ್ಟು ಮುಗಿದರೆ ಸಾಕು,’ ಅನ್ನಿಸಿತ್ತು.

‘ದೆವ್ವ ಹಿಡಿಯಲಿ ಇವನನ್ನ…’|

ಕಾಲ ಕಳೆಯುತಿತ್ತು. ಒಂದು ನಿಮಿಷ, ಎರಡು ನಿಮಿಷ. ಯಾರೂ ಬರಲಿಲ್ಲ. ಕೋಚ್ ಸರಿದಾಡಿದ.

‘ದೆವ್ವ ಹಿಡಿಯಲಿ ಇವನ್ನ…’ ಅನ್ನುತ್ತ ಅಸಹನೆಯಿಂದ ಹೊರಟು ದಡದಡ ಸದ್ದು ಮಾಡಿಕೊಂಡು ಮೆಟ್ಟಲಿಳಿದು ಹೋದ. ಅವನ ಹೆಜ್ಜೆ ಸದ್ದೂ ಕರಗಿ ಹೋದವು.

‘ದೇವರೇ ಏನು ಮಾಡಲಿ!’

‘ರಾಸ್ಕೋಲ್ನಿಕೋವ್ ಚಿಲುಕ ತೆಗೆದ. ಒಂದಿಷ್ಟೆ ಬಾಗಿಲು ತೆರೆದ. ಇಷ್ಟೂ ಸದ್ದಿಲ್ಲ. ತಟ್ಟನೆ, ಹಿಂದೆ ಮುಂದೆ ಯೋಚನೆ ಮಾಡದೆ ಬಾಗಿಲನ್ನು ಸಾಧ್ಯವಾದಷ್ಟು ಭದ್ರವಾಗಿ ಹಾಕಿ ಮೆಟ್ಟಿಲಿಳಿದು ಹೊರಟ. ಮೂರು ಸುತ್ತು ಇಳಿದಿದ್ದ. ಕೆಳಗಿನ ಯಾವುದೋ ಮನೆಯಲ್ಲಿ ಜೋರು ಗದ್ದಲ ಕೇಳಿಸಿತು. ‘ಎಲ್ಲಿ ಹೋಗಲಿ? ಬಚ್ಚಿಟ್ಟುಕೊಳ್ಳಕ್ಕೆ ಎಲ್ಲೂ ಜಾಗವಿಲ್ಲ, ಮತ್ತೆ ಮುದುಕಿಯ ಮನೆಗೇ?’ ಅಂದುಕೊಂಡ.

‘ಹೇಯ್, ನಿಂತುಕೋ! ಹಿಡೀರೀ ಅವನನ್ನಾ!’

ಕೆಳಗಿನ ಮನೆಯೊಂದರಿಂದ ಗಟ್ಟಿಯಾಗಿ ಕಿರುಚುತ್ತಾ ಬಂದವನೊಬ್ಬ ಮೆಟ್ಟಿಲ ಮೇಲೆ ಉರುಳಿ ಉರುಳಿ ಹೋದ.

‘ಮಿಟ್ಕಾ! ಮಿಟ್ಕಾ! ಮಿಟ್ಕಾ! ನಿನ್ನ ಕಣ್ಣು ಕೀಳಾ!’

ಆ ಕೂಗು ಕೀರಲು ದನಿಯ ಚೀರಾಟವಾಗಿ ಮುಗಿದಿತ್ತು. ಕೊನೆಯ ಚೀರಾಟ ಆಗಲೇ ಕಟ್ಟಡದ ಹೊರಗೆ ಕೇಳಿಸುತಿತ್ತು. ಎಲ್ಲ ತಣ್ಣಗಾಯಿತು. ಅದೇ ಹೊತ್ತಿಗೆ ಕೆಲವು ಜನ ಜೋರಾಗಿ ಬಡಬಡಿಸುತ್ತ ಮೆಟ್ಟಿಲು ಹತ್ತುವುದಕ್ಕೆ ಶುರುಮಾಡಿದ್ದರು. ಮೂರು ನಾಲ್ಕು ಜನ ಇರಬಹುದು. ಯವಕನ ದನಿಯ ಗುರುತು ಸಿಕ್ಕಿತು. ಅವರೇ!

‘ನೇರ ಅವರೆದುರಿಗೇ ಹೋಗುವುದು, ಆದದ್ದಾಗಲಿ,’ ತೀರ ಹತಾಶನಾಗಿ ಅಂದುಕೊಂಡ. ‘ಅವರು ತಡೆದು ನಿಲ್ಲಿಸಿದರೆ? ಎಲ್ಲಾ ಮುಗಿಯಿತು; ಹೋಗಲು ಅವರು ಬಿಟ್ಟರೆ? ಆಗಲೂ ಎಲ್ಲ ಮುಗಿದ ಹಾಗೇ ಲೆಕ್ಕ. ಅವರು ಅವನ ಮುಖ ನೆನಪಿಟ್ಟುಕೊಳ್ಳತಾರೆ.’ ಮೆಟ್ಟಿಲಿಳಿಯುತ್ತ ‘ಇನ್ನೊಂದು ತಿರುವು, ಎದುರಾ ಬದರಾ ಆಗತಾರೆ. ಇದ್ದಕಿದ್ದ ಹಾಗೆ, ಆಹಾ! ಮೋಕ್ಷ!’ ಒಂದೆರಡೇ ಹೆಜ್ಜೆ, ಅವನ ಬಲಗಡೆ, ಖಾಲಿ ಅಪಾರ್ಟ್ಮೆಂಟು ಬಾಗಿಲು ತೆಗೆದುಕೊಂಡು ನಿಂತಿತ್ತು. ಅದೇ, ಕೆಲಸಗಾರರು ಬಣ್ಣ ಬಳಿಯುತಿದ್ದ ಅಪಾರ್ಟ್ಮೆಂಟು. ವಿಧಿ ನಿರ್ಣಯ ಅನ್ನುವ ಹಾಗೆ ಕೆಲಸ ಮುಗಿಸಿ ಬಾಗಿಲು ತೆರೆದೇ ಇಟ್ಟು ಹೋಗಿದ್ದರು. ಅಷ್ಟೊಂದು ಕೂಗಾಡಿಕೊಂಡು ಹೋದವರು ಅವರೇ ಇರಬೇಕು. ಈ ಅಂತಸ್ತಿನ ಆ ಮನೆಗೆ ಹೊಸ ಬಣ್ಣ, ಸುಣ್ಣ ಆಗಿತ್ತು. ರೂಮಿನ ನಡುವೆ ಒಂದು ಪುಟ್ಟ ಬಕೆಟ್ಟಿನಲ್ಲಿ ಬಣ್ಣ, ಅದರೊಳಗೆ ಅದ್ದಿಕೊಂಡ ಬ್ರಶ್ಶು ಇದ್ದವು. ಅವನು ಬಾಗಿಲೊಳಕ್ಕೆ ನುಸುಳಿ, ಬಗ್ಗಿ ಕೂತ. ಅವರಾಗಲೇ ಬಂದಿದ್ದರು. ಅರ್ಧ ಕ್ಷಣ ತಡವಾಗಿದ್ದರೂ ಕಂಡುಬಿಡುತಿದ್ದ. ಖಾಲಿ ಮನೆ ದಾಟಿ ನಾಲ್ಕನೆಯ ಮಹಡಿಗೆ ಹೋದರು, ಜೋರಾಗಿ ಮಾತಾಡುತಿದ್ದರು. ಕಾಯ್ದ. ತುದಿಗಾಲಲ್ಲಿ ಹೊರಕ್ಕೆ ಬಂದ. ಮೆಟ್ಟಿಲಿದು ಓಡಿದ.

ಮೆಟ್ಟಿಲ ಮೇಲೆ ಯಾರೂ ಇಲ್ಲ! ಗೇಟಿನಲ್ಲೂ. ದೊಡ್ಡ ಹೆಜ್ಜೆ ಹಾಕುತ್ತ ಗೇಟು ದಾಟಿ ಬೀದಿಗೆ ಬಂದ.

ಅವನಿಗೆ ಚೆನ್ನಾಗಿ ಗೊತ್ತಿತ್ತು. ಆ ಕ್ಷಣದಲ್ಲಿ ಅವರು ಮುದುಕಿಯ ಮನೆಗೆ ಹೋಗಿರತಾರೆ, ಬಾಗಿಲು ತೆರೆದಿರುವುದು ನೋಡಿ ಆಶ್ಚರ್ಯವಾಗತ್ತೆ, ‘ಆಗಲೇ ಮುಚ್ಚಿತ್ತಲ್ಲಾ!’ ಅಂದುಕೊಳ್ಳುತ್ತಾರೆ. ಹೆಣಗಳನ್ನ ನೋಡಿರತಾರೆ, ಅರ್ಧ ನಿಮಿಷದಲ್ಲಿ ಗೊತ್ತಾಗತ್ತೆ, ಕೊಲೆಗಾರ ಇಲ್ಲೇ ಇದ್ದ, ಹೇಗೋ ಅಡಗಿದ್ದು ತಪ್ಪಿಸಿಕೊಂಡು ಹೋಗಿದ್ದಾನೆ, ನಾವು ಇಲ್ಲಿರುವಾಗ ಅವನು ಖಾಲಿ ಅಪಾರ್ಟ್ಮೆಂಟಿನಲ್ಲಿ ಇದ್ದಿರಬಹುದು ಅಂತೆಲ್ಲ ಊಹೆ ಮಾಡಿರತಾರೆ. ಇದೆಲ್ಲ ಗೊತ್ತಿದ್ದರೂ ಅವನು ಜೋರಾಗಿ ನಡೆಯಲಿಲ್ಲ. ಬೀದಿಯ ಮೊದಲ ತಿರುವಿಗೆ ಇನ್ನೂ ನೂರು ಹೆಜ್ಜೆ ಇದ್ದಾವು. ‘ಯಾವುದಾದರೂ ಗೇಟಿನೊಳಗೆ ನುಸುಳಿ, ಗೊತ್ತಿಲ್ಲದ ಕಟ್ಟಡದ ಮೆಟ್ಟಿಲು ಹತ್ತಿ ಬಚ್ಚಿಟ್ಟುಕೊಳ್ಳಲೇ? ಉಹ್ಞುಂ. ಒಳ್ಳೆಯದಲ್ಲ. ಕೊಡಲಿ ಎಲ್ಲಾದರೂ ಬಿಸಾಕಲೇ? ಬಾಡಿಗೆಗೆ ಗಾಡಿ ಹಿಡಿಯಲೇ? ಉಹ್ಞುಂ. ಉಪಯೋಗವಿಲ್ಲ.‘

ರಸ್ತೆಯ ತಿರುವಿಗೆ ಬಂದಿದ್ದ, ತಿರುಗಿದ. ಅರ್ಧ ಸತ್ತ ಹಾಗಿದ್ದ. ಈಗ ಅರ್ಧ ಭದ್ರತೆ ಸಿಕ್ಕಿತ್ತು. ಅದು ಅವನಿಗೂ ತಿಳಿದಿತ್ತು. ಇಲ್ಲಿ ಅಂಥ ಅನುಮಾನ ಹುಟ್ಟುವುದಿಲ್ಲ ಯಾರಿಗೂ. ಯಾಕೆಂದರೆ ಇಷ್ಟೊಂದು ಜನ ಓಡಾಡುತ್ತಿರುವಲ್ಲಿ ಅವನು ಮರಳ ರಾಶಿಯಲ್ಲಿ ಕಳೆದು ಹೋದ ಧೂಳಿನ ಕಣದ ಹಾಗೆ ಮುಖ ಮರೆಸಿಕೊಂಡಿರುತ್ತಾನೆ. ಮನಸಿಗೆ ಆಗುತಿದ್ದ ಹಿಂಸೆಯಿಂದ ದಣಿದು ಹೋಗಿದ್ದ. ಮುಂದೆ ಸಾಗುವುದು ಕಷ್ಟ ಅನಿಸುತಿತ್ತು. ಬೆವರು ಹನಿ ಹನಿಯಾಗಿ ಅವನ ಕತ್ತಿನಿಂದ ತೊಟ್ಟಿಕ್ಕುತಿತ್ತು. ಕೆನಾಲ್ ಸೇತುವೆಗೆ ಬಂದಾಗ ‘ಅಗೋ ಡ್ರಗ್ಸ್ ತಗೊಂಡವನು ಅಲ್ಲೀ!’ ಯಾರೋ ಒಬ್ಬಾತ ಅವನನ್ನು ತೋರುತ್ತ ಕೂಗಿದ.

ಮೈ ಮೇಲೆ ಎಚ್ಚರ ತಪ್ಪುತಿತ್ತು. ಮುಂದೆ ಸಾಗಿದ ಹಾಗೆಲ್ಲ ಸ್ಥಿತಿ ಕೆಡುತಿತ್ತು. ಕೆನಾಲ್ ದಾಟಿದ ಮೇಲೆ ಜನ ಕಡಮೆ ಇರುವುದು ಕಂಡು ಹೆದರಿಕೆಯಾಯಿತು ಎಂದು ಅವನಿಗೆ ಆಮೇಲೂ ನೆನಪಿತ್ತು. ಅವನು ಆ ಜಾಗದಲ್ಲಿ ಎದ್ದು ಕಾಣುತಿದ್ದ. ವಾಪಸ್ಸು ಅದೇ ಬೀದಿಗೆ ಹೋಗೋಣವೇ ಅನ್ನಿಸಿತ್ತು. ಕುಸಿಯುವಂತಾಗಿದ್ದರೂ ಹಾಗೇ ದೂರದ ದಾರಿಯಲ್ಲೆ ಸಾಗಿ ಮನೆಗೆ ತಲುಪಿದ.

ಗೇಟು ಯಾವಾಗ ದಾಟಿದೆ ಅನ್ನುವ ಎಚ್ಚರ ಇರಲಿಲ್ಲ. ಮೆಟ್ಟಿಲು ಹತ್ತುತ್ತಿರುವಾಗಷ್ಟೇ ಕೊಡಲಿಯ ನೆನಪು ಬಂದಿತು. ಇನ್ನೊಂದು ಮುಖ್ಯವಾದ ಕೆಲಸ ಇದೆ. ಕೊಡಲಿಯನ್ನು ಯಾರಿಗೂ ಗೊತ್ತಾಗದ ಹಾಗೆ ಅದರ ಜಾಗದಲ್ಲಿಡಬೇಕು. ಕೊಡಲಿಯನ್ನು ಅದಿದ್ದ ಜಾಗದಲ್ಲೆ ಇಡುವುದಕ್ಕಿಂತ ಯಾವುದೋ ಗೊತ್ತಿಲ್ಲದ ಮನೆಯ ಅಂಗಳದಲ್ಲಿ ಎಸೆಯುವುದು ಒಳ್ಳೆಯದು ಅನ್ನುವ ಸಂಗತಿ ಅವನಿಗೆ ಹೊಳೆಯುವ ಹಾಗೆ ಇರಲಿಲ್ಲ ಅವನ ಸ್ಥಿತಿ.

ಅದೃಷ್ಟ. ವಾಚ್‌ಮ್ಯಾನ್ ಗೂಡಿನ ಬಾಗಿಲು ಮುಚ್ಚಿತ್ತು, ಬೀಗ ಹಾಕಿರಲಿಲ್ಲ. ಅಂದರೆ, ಅವನು ಅಲ್ಲೇ ಎಲ್ಲೋ ಇರಬೇಕು. ರಾಸ್ಕೋಲ್ನಿಕೋವ್ ಇದ್ದ ಸ್ಥಿತಿಯಲ್ಲಿ ಏನೂ ಅರ್ಥವಾಗುತ್ತಿರಲಿಲ್ಲ. ನೇರ ಹೋಗಿ ಬಾಗಿಲು ತೆಗೆದ. ಕಾವಲುಗಾರ ಅಲ್ಲಿದ್ದು ಏನು ಬೇಕೆಂದು ಕೇಳಿದ್ದರೆ ಅವನು ಕೊಡಲಿಯನ್ನು ಸುಮ್ಮನೆ ಹಾಗೇ ಅವನ ಕೈಗಿಡುತ್ತಿದ್ದ. ವಾಚ್‌ಮ್ಯಾನ್ ಇರಲಿಲ್ಲ. ಕೊಡಲಿಯನ್ನು ಬೆಂಚಿನ ಕೆಳಗೆ ಅದು ಮೊದಲಿದ್ದ ಜಾಗದಲಲ್ಲೆ ಸೌದೆ ತುಂಡುಗಳ ಹಿಂದೆ ಮೊದಲಿದ್ದ ಹಾಗೇ ಅರೆ ಮರೆಯಾಗಿಡುವುದಕ್ಕೆ ಅವಕಾಶ ಸಿಕ್ಕಿತ್ತು. ಅಲ್ಲಿಂದ ಅವನು ರೂಮಿಗೆ ಹೋಗುವವರೆಗೆ ಯಾರೊಬ್ಬರೂ ಎದುರಿಗೆ ಸಿಕ್ಕಲಿಲ್ಲ. ಓನರಮ್ಮನ ಮನೆ ಬಾಗಿಲು ಹಾಕಿತ್ತು. ರೂಮಿಗೆ ಹೋಗಿ ಹೇಗಿದ್ದನೋ ಹಾಗೆ ಸೋಫಾ ಮೇಲೆ ಮೈ ಚೆಲ್ಲಿದ. ನಿದ್ದೆ ಮಾಡಲಿಲ್ಲ. ಮನಸ್ಸು ಸೊನ್ನೆಯಾಗಿತ್ತು. ಆ ಕ್ಷಣದಲ್ಲಿ ಯಾರಾದರೂ ಅವನ ರೂಮಿಗೆ ಬಂದಿದ್ದರೆ ಅವನು ತಟ್ಟನೆದ್ದು ಗಟ್ಟಿಯಾಗಿ ಕಿರುಚುತಿದ್ದ. ಯಾವು ಯಾವುದೋ ತುಂಡು ಯೋಚನೆ, ತುಂಡು ಚಿಂದಿ ಮಾತು ತಲೆಯಲ್ಲಿ ಈಜಾಡುತಿದ್ದವು. ಎಷ್ಟು ಕಷ್ಟಪಟ್ಟರೂ ಯಾವುದೂ ಕೈಗೆ ಸಿಗುತ್ತಿರಲಿಲ್ಲ.

[ಅಪರಾಧ ಮತ್ತು ಶಿಕ್ಷೆ ಭಾಗ 1 ಮುಗಿಯಿತು]

(ಸಾರಾಂಶ: ಜೋಡಿ ಕೊಲೆ)
ಮುದುಕಿಯ ಮನೆಗೆ ಹೋಗುತ್ತ ಕೆಳಗಿನ ಮಹಡಿಯಲ್ಲಿ ಖಾಲಿಯಾಗಿದ್ದ ಮನೆಗೆ ಬಣ್ಣ ಬಳಿಯುತ್ತಿದ್ದ ಇಬ್ಬರು ಹುಡುಗರನ್ನು ನೋಡುತ್ತಾನೆ. ಮೊದಲೇ ಸಿದ್ಧಮಾಡಿಕೊಂಡಿದ್ದ, ಸುಲಭವಾಗಿ ಬಿಚ್ಚಲಾಗದಂತೆ ದಾರ ಸುತ್ತಿದ್ದ ಸಿಗರೇಟು ಡಬ್ಬಿಯಂತೆ ಕಾಣುವ ಪೊಟ್ಟಣವನ್ನು ಮುದುಕಿಯ ಕೈಗೆ ಕೊಟ್ಟು, ಅವಳ ಅದನ್ನ ಬಿಚ್ಚುತ್ತಿರುವಾಗ ಕೊಡಲಿಯಲ್ಲಿ ಹೊಡೆದು ಕೊಲ್ಲುತ್ತಾನೆ. ಅವಳ ಬೀಗದ ಕೈ ತೆಗೆದುಕೊಂಡು ದುಡ್ಡು, ವಡವೆಗಳನ್ನು ಎತ್ತಿಕೊಳ್ಳುವಾಗ, ಅವಳ ತಂಗಿ ಲಿಝವೆಟ ಒಳಗೆ ಬಂದು ಅಕ್ಕನ ಹೆಣ ನೋಡಿ ಅವಾಕ್ಕಾಗಿ ನಿಂತಾಗ ಅವಳನ್ನೂ ಕೊಲ್ಲುತ್ತಾನೆ. ಬಾಗಿಲು ಹಾಕಿಲ್ಲವೆಂದು ತಿಳಿದು ಬಾಗಿಲು ಹಾಕಿ ಕೊಡಲಿ ತೊಳೆಯುತ್ತಿರುವಾಗ ಬಾಗಿಲು ತಟ್ಟಿದ ಶಬ್ದ, ಹೊರಗೆ ಮಾತಾಡುವ ದನಿ ಕೇಳುತ್ತವೆ. ಬಂದವರು ಕಾವಲುಗಾರನನ್ನು ಕರೆಯಲು ಹೋದಾಗ ರಾಸ್ಕೋಲ್ನಿಕೋವ್ ಓಡಿ ಹೋಗಿ ಬಣ್ಣಗಾರರು ಬಾಗಿಲ ತೆರೆದು ಬಿಟ್ಟು ಹೋಗಿದ್ದ ಮನೆಯಲ್ಲಿ ಅಡಗುತ್ತಾನೆ. ಸಮಯ ನೋಡಿಕೊಂಡು ಮನೆಗೆ ಬಂದು ಕೊಡಲಿಯನ್ನು ಅದು ಮೊದಲಿದ್ದ ಜಾಗದಲ್ಲಿ ಇಟ್ಟು ಕೋಣೆಗೆ ಹಿಂದಿರುಗುತ್ತಾನೆ.