ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು – ಊಟ ಮುಗಿದಿದೆ – ಪಕ್ಕಕ್ಕೆ ಹೊರಳಿದರೆ ಅಲ್ಲಿಯೂ ಅಂತೆಯೆ! ತಿಂಡಿ ತೀರಿದೆ! ಮತ್ತೊಂದರಲ್ಲಿ ಹಾಲು ಮುಗಿದಿದೆ. ಹಾಗಾದರೆ ಉಳಿದುದೇನು? ಎಂದು ಎಲ್ಲಾ ಹಸಿದ ಹೊಟ್ಟೆಗಳು ಬಾಯ್ಬಿಟ್ಟವು!
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕಥೆ “ಜಮಾಬಂದಿ”

 

ಉಡುಪಿ ತಾಲೂಕಿನ ನೂರಹದಿನೈದು ಗ್ರಾಮಗಳ ಅನಭಿಷಿಕ್ತ ರಾಜರಾದ ನೂರಹತ್ತು ಪಠೇಲರು ಆಗ ತಾನೇ ಅಲಂಕಾರ ಪ್ರಾಯವಾಗಿ ಕಚೇರಿಯ ಮುಂದೆ ನೆರೆದಿದ್ದರು. ಅವರ ಮುಂಗಡೆಯಲ್ಲಿ ಐವತ್ತೆಂಟು ಶ್ಯಾನುಭಾಗರು ಸುಸ್ಥಿತರಾಗಿದ್ದರು. ಮತ್ತೇನು? ಇನ್ನು ದಂಡಧಾರಿಗಳಾದ ತಳಿಯಾರಿಗಳ ಪರಿವಾರವಂತೂ ಬೇರೆಯೇ ಬೇರೆ! ಆಗ ತಾನೇ ಗಂಟೆ ಒಂಬತ್ತು ಬಾರಿಸಿ ಹಿಂಗಡೆಯ ಸಾಲಿನ ಕೈದಿಗಳನ್ನು ಒಂದು ಕ್ಷಣಕ್ಕೆ ಮೇಯ ಬಿಟ್ಟಿದ್ದರು. ಕೆಂಪು ಕಿರೀಟದ ಪೋಲಿಸರು ಇವರೆಲ್ಲರ ಕೋಲಾಹಲದಿಂದ ಸಹಜವಾಗಿಯೇ ಭ್ರಾಂತಿಗೊಂಡಿರಬೇಕು. ಮತ್ತೆ ಕೈದಿಗಳನ್ನು ಕೋಣೆ ಕೂಡಿಸುವಾಗ ಮತ್ತು ಮತ್ತೂ ಲೆಕ್ಕ ಹಾಕುತ್ತಿದ್ದರು!

ಈ ಎಲ್ಲಾ ಸಿಬ್ಬಂದಿಯ ಕೈಯಲ್ಲಿ ಒಂದೊಂದು ಚೂರು ಕಾಗದ. ಎಲ್ಲಾ ಮಹಾನುಭಾವರನ್ನು ಮೂಲೆಮೂಲೆಯಿಂದ ಕೊಂಪೆಕೊಂಪೆಯಿಂದ ಈ ಕಡೆಗೆ ಸೆಳೆದು ತಂದ ಆಜ್ಞಾಪತ್ರ! ಗಂಟೆ ಒಂಬತ್ತಕ್ಕೆ ತಪ್ಪದೆ ಹಾಜರಾಗಬೇಕೆಂಬ ನಿರಖುನೇಮ. ಈ ಕರಾವಳಿಯಿಂದ ಆ ಗಟ್ಟದ ಗಡಿಯ ತನಕದ ಜನಾಂಗದ ರೀತಿನೀತಿಯ ಸತ್ಯಪ್ರದರ್ಶನಕ್ಕಾಗಿ ಈ ವಿಧಾನದ ಏರ್ಪಾಟವಾಗಿರಬೇಕೆಂದೆಣಿಸಿಕೊಂಡೆ. ಆ ಕಡೆಯ ಗರ್ಭಸುತ್ತು ರುಮಾಲು – ಕಂಬತ್ತು ಕೋಟಿನ ಸೆಟ್ಟರು; ಈ ಕಡೆಯ ಮಲ್ ಮಲ್ ಜುಬ್ಬದ ಸಿಲ್ಕುಧಾರಿಗಳಾದ ಸುಂದರವದನರು – ಇವರೆಲ್ಲರ ಮಧ್ಯದಲ್ಲಿ ಕಿರುಕುಳದಂತೆ ಸೇರಿಸೇರಿ ಸುಳಿಯುತ್ತಿದ್ದ ಶ್ಯಾನುಭಾಗರು – ಹಳ್ಳಿಯ ದೈವಕ್ಕೂ ಮಿಕ್ಕಿದ ಪ್ರಭಾವದ ಉಗ್ರಾಣಿ ದೇವರು-ಇವರೆಲ್ಲ ಮಂದಿಯೂ ಗ್ರಾಮ ಉದ್ಯೋಗಸ್ಥರೇ! ತಲೆತಲೆಯಿಂದ ಈ ಜವಾಬ್ದಾರಿಯನ್ನು ಕಂಬದಂತೆ ಹೊತ್ತು ನಿಂತ, ಇಂದಿಗೂ ನಿರುದ್ಯೋಗಕ್ಕಿಂತಲೂ ಉದ್ಯೋಗವೇ ಮೇಲೆಂಬ ತತ್ವದ ಪ್ರತಿಪಾದನೆಗಾಗಿ, ಜೀವನದ ಹೋರಾಟ ನಡೆಸುವ ಗ್ರಾಮ ಉದ್ಯೋಗಸ್ಥರೆ!

ಈ ಉದ್ಯೋಗಸ್ಥರೆಲ್ಲ ಕಾನೂನು ಬದ್ಧರಾಗಿ ಸುತ್ತಲೂ ನೋಡಿದರು – ಕುಳಿತಿರಲು ಏನಾದರೂ ಸಾಧ್ಯ ಬರುವಂತಿದೆಯೆ – ಎಂಬುದರ ನಿರ್ಣಯಕ್ಕಾಗಿ! ಆದರೆ ಎಲ್ಲಿಯೂ ಪಟ್ಟ ಮಂಚವಿಲ್ಲ. ಇನ್ನು ಚಾರು ಚೂರು ಮರದ ತುಂಡಿನ ಮೇಲೆ ಅಂಡಿಟ್ಟರೆ ಒಡನೆ ದಫೇದಾರ ಅದರ ಕಾವಲಿನವನೋ ಎಂಬಂತೆ ಬೆಕ್ಕು ಓಡಿಸುವ ರೀತಿ ಹುಶ್ – ಹುಶ್ ಎಲ್ಲಾ ಕೆಳಗೆ – ಕೆಳಗೆ ಎಂದು ಗದರಿಸಿ ಮತ್ತೆ ಮುಖ ಬಾಡಿಸಿ ಹೊಟ್ಟೆ ತಿಕ್ಕಿಕೊಳ್ಳುತ್ತಿದ್ದ.

‘ನಮ್ಮೂರಲ್ಲಾದರೆ ಹತ್ತು ಅಡಿ ಮಂಚವನ್ನಾದರೂ ತಂದಿರಿಸ್ತಿದ್ದೆ -’ ಎಂದು ಗುರುಗುಟ್ಟಿದರು ಗಲ್ಲುಮೀಸೆಯ ಗುರಿಕಾರರೊಬ್ಬರು This is all nonsense ಎಂದು ಕರಾವಳಿ ಗಾಳಿ ತಾಗಿದ ಪಠೇಲರೊಬ್ಬರು ಸದಭಿಪ್ರಾಯವನ್ನು ಹೊರಹೊಮ್ಮಿಸಿದರು. ಮತ್ತಾರೂ ಮಾತಾಡಲಿಲ್ಲ. ಮಾತಾಡದೇನೆಯೆ ದಫೇದಾರ ಹುಶ್ ಹುಶ್ – ಸದ್ದು ಸದ್ದು – ಎನ್ನುವುದನ್ನು ಬಿಡಲಿಲ್ಲ. ಇನ್ನು ಈ ಉದ್ಯೋಗಸ್ಥರು ಮಾತಾಡುವದಿರಲಿ – ಉಸಿರನ್ನಾದರೂ ಗಟ್ಟಿಯಾಗಿ ಬಿಟ್ಟಿದ್ದರೆ ದಂಗೆಯೇ ನಡೆಯುತ್ತಿದ್ದಿತು! ಮತ್ತೆ ಮಾತಾಡುವುದೆಂದರೆ ಸಿಬ್ಬಂದಿ ಪೇದೆಗಳು ತಲೆತುರಿಸಿ ಸುಖ ದುಃಖದ ಸಲಾವಣೆ ಹೇಳುವುದೊಂದೆ. ಆದರೆ ಅದನ್ನು ಕೇಳಲು ಯಾವನೂ ಸಿದ್ಧನಿರಲಿಲ್ಲ. ಅದನ್ನು ಒಮ್ಮೆಗೆ ಕೇಳಿದನೆಂದರೆ ಮತ್ತೆ ಅದರ ಪ್ರಾಯಶ್ಚಿತ್ತವಾಗಿ ಏನಾದರೂ ದಂಡ ತೆರಲೇ ಬೇಕಾಗಿದ್ದಿತು! ಅದನ್ನು ಯಾರು ತೆರಬೇಕು – ಎಂಬುದೇ ಸಮಸ್ಯೆ. ತಳಿಯಾರಿ ಅಳಿಯ ಕಟ್ಟಿನ ಕಿರುಮೆಂಬರನಂತೆ; ಶ್ಯಾನುಭಾಗರ ವರ್ಗ ತೆಗೆದುಕೊಳ್ಳುವ ಅಭ್ಯಾಸದ ಹೊರತು ಕೊಡುವುದನ್ನು ಕಲಿಯಲೇ ಇಲ್ಲ. ಇನ್ನು ಠೀವಿಯ ಪಠೇಲರೊ – ಅದೆಲ್ಲ ಸೇಂಕ್ಷನ್ ಆಗಬೇಕು ಎಂದು ಶ್ಯಾನುಭಾಗರ ಮುಖ ನೋಡಿ ಬಿಡುತ್ತಿದ್ದರು. ಕಾರಣ ಹಣಕಾಸಿನ ಖಾತೆ ಶ್ಯಾನುಭಾಗರ ಕೈಯಲ್ಲಿ! ಕಟ್ಟಕಡೆಗೆ ಇದಿರಿನ ಜಗಲಿಯಲ್ಲಿ ಕುಳಿತಿರುವ ಹಕ್ಕಿನ ಸೌಲಭ್ಯಕ್ಕಾಗಿ ಎಲ್ಲರೂ ಒಂದುಗೂಡಿ ವಂತಿಗೆ ಪಟ್ಟಿ ಮಾಡಿದರು. ಈ ವಂತಿಗೆ ಪಟ್ಟಿ ಬೆಳೆದಂತೆ ಅವರೆಲ್ಲರಿಗೂ ಅಲ್ಲಿ ಕುಳಿತು ಉಸಿರಾಡುವ ಹಕ್ಕು, ಸಂದರ್ಭವಶಾತ್ ಹಾ – ಹೂ – ಎಂದು ಉದ್ಗಾರ ತೆಗೆಯುವ ಹಕ್ಕು, ಎಲ್ಲಕ್ಕೂ ಹೆಚ್ಚಿನದಾಗಿ ಆಕಳಿಸುವ ಹಕ್ಕು ಪ್ರಾಪ್ತವಾಯಿತು!

ಒಮ್ಮಿಂದೊಮ್ಮೆಗೆ ಎಲ್ಲವೂ ತಣ್ಣಗಾದಂತಾಯಿತು. ಎಲ್ಲರೂ – ದೊರೆಗಳು ದೊರೆಗಳು ಎಂದು ನಾಲ್ಕೂ ಕಡೆ ಕಣ್ಣ ತಿರುಗಿಸಿ ತುದಿಗಾಲದಲ್ಲಿ ನಿಂತರು. ಇದು ಯಾವ ದೊರೆ? ಎಲ್ಲರೂ ಕೇಳಿದರು. ಕೊನೆಗೆ ದೀರ್ಘ ವಿಮರ್ಶೆಯ ಮೇಲೆ ಅದು ದೊರೆಯಲ್ಲ ದೊರೆಯ ಮರಿ ಅಥವಾ ಮೊಟ್ಟೆ – ದೊಡ್ಡ ದೊರೆಗಳ ಖುದ್ದು ದಫೇದಾರ ಎಂಬುದು ಖಚಿತವಾಯಿತು.

ಪದೇಪದೇ ಇಂತಹ ಹಲವು ದೊರೆಗಳ ಅವತಾರ ನಡೆದೇ ಇದ್ದಿತು. ಈ ಮರಿಗಳಿಗೆಲ್ಲಾ ದೊಡ್ಡ ದೊರೆಗಳಿಂದಲೇ ನೇರವಾಗಿ ದೌಲತ್ತಿನ ಮೂಲಾಭ್ಯಾಸವಾದಂತೆ ಅರ್ಥವಾಗುತಿದ್ದಿತು. ಎತ್ತ ನೋಡಿದರೂ ಠೀವಿ – ದೌಲತ್ತು. ಇಷ್ಟೂ ದೊರೆ ಮಕ್ಕಳನ್ನು ಹೆತ್ತುದಕ್ಕಾಗಿ ನಮ್ಮ ದೇಶಕ್ಕೆ ನಾವು ಚಿರಋಣಿಗಳಾಗಿರಬೇಕು.

ಈ ಸಾಮ್ರಾಜ್ಯಶಾಹಿಯ ಮಾದರಿಯನ್ನು ಕಂಡು ಒಂದು ಮೂಲೆಯಲ್ಲಿ ಕುಳಿತು ತೂಕಡಿಸುತ್ತಿದ್ದ ಜರಿ ರುಮಾಲಿನ ರಾಜೇಶ್ರೀಗಳೊಡನೆ ಕೇಳಿದೆ – ಇದೆಲ್ಲ ಏನು ಸ್ವಾಮಿ – ದಾಂಧಲೆ?

ರಾಜೇಶ್ರೀಗಳವರು ಹೌಹಾರಿ – ಹಾ. ಜಮಾಬಂದಿ – ಜಮಾಬಂದಿ ಎಂದರು.

‘ಏನು ಏನು? ಯಾರದು?’

‘ಹಾಗಲ್ಲಯ್ಯಾ! ಜಮಾಬಂದಿ ಎಂದರೆ ನಮ್ಮ ನಮ್ಮ ಗ್ರಾಮದ ಲೆಕ್ಕ ಪತ್ರದ ತನ್ಕಿನಿಶಿ ಪ್ಯಾಸು! ನೋಡಿ ನಿಮ್ಮಿಂದೆಲ್ಲಾ ನಾವು ತೀರ್ವೆ ಹಾಕಿಸಬೇಕಲ್ಲ – ರಿಕ್ವಿಶನ್ ಮಾಡಿ ಅಕ್ಕಿ ಕೊಡಿಸಬೇಕಲ್ಲ – ಅದಕ್ಕಾಗಿ ದೊರೆಗಳು ನಮ್ಮ ಮುಖ ನೋಡುತ್ತಾರೆ.

‘ಏಕೆ – ನಿಮ್ಮ ಮುಖದಲ್ಲೇನಿದೆ?’

‘ಮೀಸೆಯಿದೆ! ನಾವು ಘನಗೊಂಡ ಇಂಡಿಯಾ ಸರಕಾರದ ಅತ್ಯಂತ ವಿಧೇಯ ಸೇವಕರು!’ ಎಂದವರೇ ಚಿಟ್ಟನೆ ಜಿಗಿದು ಬಿಟ್ಟರು!

ಒಂದು ಕ್ಷಣ ಜೇನಿನ ಗೂಡಿಗೆ ಕಲ್ಲುಬಿದ್ದು ಗಲಭೆಯಾಗಿ ಕೊನೆಗೆ ಎಲ್ಲವೂ ನಿಂತಂತೆ ಸದ್ದಡಗಿತು – ಎನುವಾಗ ಬಂದರು ದೊಡ್ಡ ದೊರೆಗಳ ಹೇಡು ಗುಮಾಸ್ತಿಯರು!

ಹೇಡುಗುಮಾಸ್ತಿಯರ ಹುದ್ದೆಯೇನೂ ಚಿಕ್ಕದಲ್ಲ. ಅಂತೆಯೇ ಅವರ ಹೊಟ್ಟೆಯ ಅಳತೆಯೂ ಚಿಕ್ಕದಲ್ಲ. ಆ ಹೊಟ್ಟೆ ತುಂಬಲು ಈ ಕಷ್ಟ ಕಾಲದಲ್ಲಿ ಎಷ್ಟು ಗ್ರಾಮಗಳ ಉತ್ತಾರವು ಬೇಕಾಗಿದ್ದಿತೊ ಏನೊ? ಹಲವರ ಮೇಲಣ ಅವರ ವಕ್ರದೃಷ್ಟಿ – ಇನ್ನು ಕೆಲವರ ಮೇಲಣ ಅವರ ಕೃಪಕಟಾಕ್ಷ – ಇದು ಅವರ ದೊಡ್ಡ ಕಿಸೆಯೊಳಗೆ ಎರಡು ಮನಸ್ಸು ತುಂಬಿಕೊಂಡಿದೆಯೋ ಎಂಬಂತೆ ಕಾಣುತಿದ್ದಿತು.

ಗಂಟೆ ಹನ್ನೊಂದು ಹೊಡೆದಾಗ ದೊರೆಗಳು – ಮಹಾಪ್ರಭುಗಳು – ಖಾವಂದರು ಇತ್ಯಾದಿ ಬಿರುದಾಂಕಿತರಾದವರು ಚಿತ್ತೈಸಿದರು. ಬಂದು ಕೊಂಚ ದಣಿವಾರಿಸಿ ಮತ್ತೆ ಸಿಂಹಾಸನಾರೂಢರಾದರು. ಆ ಒಡ್ಡೋಲಗದಲ್ಲಿ ಎಲ್ಲಕ್ಕೂ ಮುಂದೆ ಹೇಡು ಗುಮಾಸ್ತಿಯರ ಹೊಟ್ಟೆ – ತಹಸೀಲ್ದಾರರ ಭವ್ಯಮೂರ್ತಿ – ನಾಲ್ಕು ಆರ್.ಐ. ಗಳ ತೆಳ್ಳನೆ ರೂಪ ಓರಣವಾಗಿ ಅಲಂಕರಿಸಿದ್ದಿತು. ಮತ್ತೆ ಆ ಕಡೆ ಬಾಗಿಲಿನಿಂದ ಆ ಕ್ಲಾರ್ಕರು – ಈ ಕ್ಲಾರ್ಕರು, ದರ್ಖಾಸು ಕ್ಲಾರ್ಕರು – ಬರ್ಕಾಸು ಕ್ಲಾರ್ಕರು ಎಲ್ಲರೂ ಸದ್ದಿಲ್ಲದೆ ತುದಿಗಾಲಲ್ಲಿ ನಿಂತಿದ್ದರು.

ಆಗ ಒಬ್ಬ ದಫೆದಾರನ ಬಿಲ್ಲೆ ಪಟ್ಟೆ ಹಿಡಿದು ಕೇಳಿದೆ – ಏನಪ್ಪಾ – ತೊಡಗಿತೆ?
ಇಲ್ಲ – ತುಂಬಾ ಕೆಲಸವಿದೆ ಸ್ವಾಮಿ – ತುಂಬಾ ಕೆಲಸವಿದೆ – ಎಂದು ನಾಲ್ಕೂ ಕಡೆ ಕಿಸೆ ಹಣಕತೊಡಗಿದೆ. ಅದೇ ತಾನೆ ಅವನ ಕೆಲಸ!

ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು – ಊಟ ಮುಗಿದಿದೆ – ಪಕ್ಕಕ್ಕೆ ಹೊರಳಿದರೆ ಅಲ್ಲಿಯೂ ಅಂತೆಯೆ! ತಿಂಡಿ ತೀರಿದೆ! ಮತ್ತೊಂದರಲ್ಲಿ ಹಾಲು ಮುಗಿದಿದೆ. ಹಾಗಾದರೆ ಉಳಿದುದೇನು? ಎಂದು ಎಲ್ಲಾ ಹಸಿದ ಹೊಟ್ಟೆಗಳು ಬಾಯ್ಬಿಟ್ಟವು!

ಮತ್ತೆ ಮಾತಾಡುವುದೆಂದರೆ ಸಿಬ್ಬಂದಿ ಪೇದೆಗಳು ತಲೆತುರಿಸಿ ಸುಖ ದುಃಖದ ಸಲಾವಣೆ ಹೇಳುವುದೊಂದೆ. ಆದರೆ ಅದನ್ನು ಕೇಳಲು ಯಾವನೂ ಸಿದ್ಧನಿರಲಿಲ್ಲ. ಅದನ್ನು ಒಮ್ಮೆಗೆ ಕೇಳಿದನೆಂದರೆ ಮತ್ತೆ ಅದರ ಪ್ರಾಯಶ್ಚಿತ್ತವಾಗಿ ಏನಾದರೂ ದಂಡ ತೆರಲೇ ಬೇಕಾಗಿದ್ದಿತು!

ಗಂಟೆ ಸಾಗುತ್ತಲೇಯಿದ್ದಿತು. ಪಠೇಲರು ಎಲ್ಲ ಹೋಟೆಲುಗಳಿಂದ ತೀರ್ವೆ ವಸೂಲು ಮಾಡುತ್ತಿದ್ದರು – ಶ್ಯಾನುಭಾಗರು ಎಲ್ಲ ಕ್ಲಬ್ – ವಿಲಾಸಗಳನ್ನು ಸರ್ವೆ ಮಾಡುತ್ತಿದ್ದರು. ತಳಿಯಾರಿಗಳಂತೂ ಎಲ್ಲಾ ತಿಂಡಿ ತೀರ್ಥಗಳ ವರದಿ ಸಂಗ್ರಹಿಸುತ್ತಿದ್ದರೂ ಯಾರಿಗೂ ಹಸಿವು ಹಿಂಗಲಿಲ್ಲ. ಹೊಟ್ಟೆ ತಣಿಯಲಿಲ್ಲ. ರೇಡಿಯೋಗಳ ಚೀರಾಟದಿಂದಾಗಿ ಕಿವಿಯ ಹೊರತು ಮತ್ತೇನೂ ತುಂಬಲಿಲ್ಲ!

ಎಲ್ಲರೂ ಸಾಲು ಮರಗಳ ಬುಡದಲ್ಲಿ ಕೈಕಾಲು ಬಿಟ್ಟು ಕುಳಿತಿದ್ದಂತೆ ಸಂಜೆ ಕಳೆಯಿತು.

ಕೊನೆಗೆ ಬೇರೇನೂ ಉಪಾಯ ತೋಚದೆ ಎಲ್ಲರೂ ಏಕಾದಶೀ ಮಹಾತ್ಮ್ಯೆಯನ್ನು ಕುರಿತು ಚರ್ಚಿಸತೊಡಗಿದರು. ಹೆಚ್ಚು ಹೆಚ್ಚು ಹಸಿವಾಗಿದ್ದ ತಿಂಬಂಡಿಗಳೆಲ್ಲ ಆ ಕುರಿತಾಗಿ ಹೆಚ್ಚು ಹೆಚ್ಚಾಗಿ ವಾದ ಮಾಡಿದರು. ಅವರೆಲ್ಲರ ವಾದ ಮುಗಿದ ವೇಳೆಗೆ ಗಂಟೆ ಒಂಬತ್ತು ಹೊಡೆದಿದ್ದಿತು. ಆಗ ಅವರೆಲ್ಲರ ಪುಣ್ಯಫಲದಿಂದಾಗಿ ಅವರೆಲ್ಲರ ಗುರುಹಿರಿಯರ ಅನುಗ್ರಹದಿಂದ ದಫೇದಾರ ಅಧಿಕಾರ ವಾಣಿಯಿಂದ ಬೊಬ್ಬಿಟ್ಟ ಪಟೇಲರು – ಶ್ಯಾನುಭಾಗರು- ತಳಿಯಾರಿಗಳು – ಅರ್ಜಿದಾರರು! ಎಲ್ಲರೂ ದೊರೆಗಳ ದಿವ್ಯದರ್ಶನಕ್ಕಾಗಿ ಮುಂದೋಡಿದರು. ಮಹಾಸನ್ನಿಧಿಯಲ್ಲಿ ಕಾಣಿಸಿಕೊಂಡರು.

ದೊರೆಗಳು ದೊರೆಗಳಾಗಿಯೇ ಇದ್ದರು. ಆದರೆ ಹೇಡು ಗುಮಾಸ್ತಿಯರು ಅವರ ಬಹುಭಾಗವನ್ನು ಆಕ್ರಮಿಸಿ ಅವರ ಅಪ್ಪಣೆಗಳಲ್ಲಿ ಬೇಕಾದುದನ್ನು ಬಿಟ್ಟು ಬೇಡವಾದುದನ್ನು ಮಾತ್ರ ಉದ್ದರಿಸಿ ಎಲ್ಲಾ ಗ್ರಾಮ ಉದ್ಯೋಗಸ್ಥರನ್ನು ಕೂಡಹಾಕಿ ತಾರತಮ್ಯ ಜ್ಞಾನಾನುಸಾರವಾಗಿ ಹಂಸಕ್ಷೀರ ನ್ಯಾಯದಂತೆ ವಿಭಾಗಿಸುತ್ತಿದ್ದರು. ಇದನ್ನೆಲ್ಲಾ ನೋಡಿ ಹಿಂದೆ ಹಿಂದೆ ಹೂಟೆಯ ಎತ್ತಿನಂತೆ ಅಳುಕಿ ನಿಂತಿದ್ದವರೊಬ್ಬರೊಡನೆ ಕೇಳಿದೆ – ಸ್ವಾಮೀ – ತಮ್ಮ ಕಡೆ ವಕೀಲರು ಯಾರು?

‘ವಕೀಲರು ಏಕೆ?’

‘ವಕೀಲರು ಬೇಡವೆ ಮತ್ತೆ ನಿಮ್ಮ ಕಡೆ ವ್ಯವಹರಣೆಗೆ?’

‘ಹಾಗಲ್ಲ ಸ್ವಾಮೀ- ಇದು ವ್ಯವಹಾರವಲ್ಲ, ಜಮಾಬಂದಿ!’

‘ಜಮಾಬಂದಿ? ನಾನೇನೋ ಕ್ರಿಮಿನಲ್ ಆಪಾದನೆಯ ಮೊಕದ್ದಮೆ ಎಂತಲೇ ಭಾವಿಸಿದ್ದೆ ನೋಡಿ. ಕ್ಷಮಿಸಬೇಕು. ಈಗ ತಿಳಿಯಿತು ಜಮಾಬಂದಿ!’

ಜಮಾಬಂದಿಯಲ್ಲಿ ಅಧಿಕಾರ ಸ್ಥಾನದಿಂದ ಹೆಚ್ಚಿನದೇನೂ ವಿಚಾರ ಬರಲಿಲ್ಲ. ಆದರೆ ಬಂದುದರಲ್ಲಿ ಯುದ್ಧಸಹಾಯ ನಿಧಿಯ ವಿಚಾರವಾಗಿ ಚಾಚೂ ತಪ್ಪದೆ ಹೇಡು ಗುಮಾಸ್ತಿಯರ ಬಾಯಿಯಿಂದ ಒಂದೇ ಸಮನೆ ಅಮೃತವೃಷ್ಟಿಯಾಗುತ್ತಿದ್ದಿತು. ಹಲವರು ತಮ್ಮ ಸಾಹಸಗಳನ್ನು ರಿಕಾರ್ಡು ಮೂಲಕ ಪ್ರದರ್ಶಿಸಿ ಕೈಮುಗಿದು ಕೃತಾರ್ಥರಾದರು. ಇನ್ನು ಕೆಲವರು ದೈನ್ಯದಿಂದ ಮುಖತಗ್ಗಿಸಿ ಅತ್ತೇಬಿಟ್ಟರು!

ಕೊನೆಯದಾಗಿ ಖಾವಂದರ ದೃಷ್ಟಿ ಪ್ರಾಯ ಕಳೆದ ಗಾಂಧಿ ಟೋಪಿಧಾರಿಗಳೊಬ್ಬರ ಮೇಲೆ ಬಿದ್ದಿತು. ಆ ಮಹಾನುಭಾವ ಜಮಾಬಂದಿಯ ಗೊಡವೆಯಲ್ಲೇ ಇರದೆ ಸದ್ದಿಲ್ಲದೆ ತಕಲಿ ಹಿಡಿದು ನೂಲು ತೆಗೆಯುತ್ತಿದ್ದ. ಖಾವಂದರು ಬಗ್ಗಿ ನೋಡಿದರು. ಒಂದಿಗೆ ಹೇಡು ಗುಮಾಸ್ತಿಯರೂ ಹೊಟ್ಟೆ ಬಗ್ಗಿಸಿದರು. ಎಲ್ಲರೂ ಆ ತಕಲಿ ತಿರುಗುವ ವಿಧಾನವನ್ನೇ ನೋಡಿ ಅದು ಏಕೆ ಅಲ್ಲಿ ತಿರುಗಬೇಕು ಎಂದು ವಿಚಾರ ಮಾಡತೊಡಗಿದರು. ಕಟ್ಟಕಡೆಗೆ ಹುಂಕಾರದೊಡನೆ ಅಧಿಕಾರ ಸ್ಥಾನದ ಪರವಾಗಿ ಹೇಡು ಗುಮಾಸ್ತಿಯವರಿಂದ ಅಪ್ಪಣೆಯಾಯಿತು.

‘ನಿಮ್ಮ ಯುದ್ಧ ಸಹಾಯ ನಿಧಿ ಎಷ್ಟು?’

‘ಇಲ್ಲ’

ಹೇಡು ಗುಮಾಸ್ತಿಯರ ತಲೆತಿರುಗಿ ಅಟ್ಟಳಿಗೆಯ ಕಂಬ ಹಿಡಿದು ಗಟ್ಟಿಯಾಗಿ ನಿಂತರು. ಕೊನೆಗೆ ಖಾವಂದರೇ ಖುದ್ದು ಕೇಳಿದರು.

‘ಏನು ಯುದ್ಧ ಸಹಾಯ ನಿಧಿ ಇಲ್ಲ?’

‘ಇಲ್ಲ’

‘ಏಕೆ’

‘ಅದು ನಮ್ಮ ಯುದ್ಧವಲ್ಲ.’

‘ಮತ್ತೆ?’

‘ನಿಮ್ಮ ಯುದ್ಧ.’

‘ಯಾರ ಮೇಲೆ?’

‘ನಮ್ಮ ಮೇಲೆ.’

‘ನೀವು ನಮ್ಮ ಪಠೇಲರಲ್ಲವೊ?’

‘ಅಲ್ಲ – ಊರಿನ ಪಠೇಲರು.’

ಹೇಡು ಗುಮಾಸ್ತಿಯರು ದೌಡು ಕಚ್ಚಿದರು. ದೊರೆಗಳು ಕಣ್ಣು ಕೆರಳಿಸಿ ಗರ್ಜಿಸಿದರು – ಡಿಸ್-ಮಿಸ್!

ಎಲ್ಲರೂ ಗಾಬರಿಯಾದರು. ಪಠೇಲರೆಲ್ಲ ಇದರಿಂದಾಗಿ ತಮ್ಮ ಮರ್ಯಾದೆ ಹೋಯಿತೊ ಉಳಿಯಿತೊ – ಎಂಬುದನ್ನು ನಿರ್ಣಯಿಸುವುದಕ್ಕಾಗಿ ನಾಲ್ಕು ಸುತ್ತು ತಿರುಗಿ ಗೇಟಿನ ತನಕ ನೋಡಿಕೊಂಡರು. ನೋಡುತ್ತಿದ್ದಂತೆ ಆ ಗಾಂಧಿ ಟೋಪಿಧಾರಿ – ತಕಲೀವಾಲರು ನಗುತ್ತಾ ಅಲ್ಲಿಂದಲೇ ಹೊರಬಿದ್ದರು.

ಠಾಣೆಯ ಪಹರೇದಾರ ಗಂಟೆ ಹತ್ತು ಹೊಡೆದು ಹುಶ್ಶಾರ್- ಎಂದು ಕೈದಿಗಳಿಗೆ ಎಚ್ಚರಿಕೆ ಕೊಟ್ಟು ಸದ್ದು ಹೊಡೆದ. ಒಂದಿಗೆ ದೊರೆಗಳ ಸನ್ನಿಧಿಯ ಜಮಾಬಂದಿಗಳೆಲ್ಲ ಬೆವರು ಸುರಿಸಿಕೊಂಡು ಹೊರಗೆ ಬಂದರು. ಹೊರಗೆ ಬಂದು ಆ ಕತ್ತಲಲ್ಲಿ ಸುತ್ತಲೂ ಕಣ್ಬಿಟ್ಟು ಬಿಡುಗಡೆಯಾಯಿತಪ್ಪ ಇನ್ನು ಒಂದು ವರ್ಷಕ್ಕೆ ತೊಂದರೆಯಿಲ್ಲ – ಎಂದು ಸೈಗರೆದರು. ಎಲ್ಲರ ಮುಖವೂ ಬಾಡಿ ಜೋತುಬಿದ್ದಿತ್ತು. ಆದರೆಲ್ಲರೂ ಪಾಪ! – ನಮ್ಮ ಗ್ರಾಮ ಉದ್ಯೋಗಸ್ಥರು. ಅಥವಾ ಆಗ ತಾನೇ ಕೂಡಹಾಕಿ ಬಿಡುಗಡೆಯಾದ ಜಮಾ-ಬಂದಿಗಳು!

(ನವಯುಗ, ಅಗೋಸ್ತು 15, 1947)
ಟಿಪ್ಪಣಿ:
‘ಕವಿರಾಜ ಹಂಸ’ ಎಂಬ ಬಿರುದು ಪಡೆದಿದ್ದ ಉಡುಪಿ ಜಿಲ್ಲೆಯ ಬಹುಮುಖ್ಯ ಸಾಹಿತಿಗಳಲ್ಲೊಬ್ಬರಾದ ಎಸ್. (ಸಾಂತ್ಯಾರು) ವೆಂಕಟರಾಜರು (1913-1988) ಮೂವತ್ತರ ದಶಕದಿಂದಲೇ ಕತೆಗಳನ್ನು ಬರೆಯಲು
ಪ್ರಾರಂಭಿಸಿದ್ದರು; ಅಂದಿನ ಅವಿಭಜಿತ ದಕ್ಷಿಣ ಕನ್ನಡದ ಶ್ರೇಷ್ಠ ಕತೆಗಾರರೆಂದು ಮಾನ್ಯರಾಗಿದ್ದರು. ‘ಆಕಾಶಗಂಗೆ’ (1945) ಮತ್ತು ‘ಸಪ್ತಸಾಗರ’ (1947) ಅವರ ಪ್ರಕಟಿತ ಕಥಾಸಂಕಲನಗಳು. ಅವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಂಕಲಿತವಾಗದೆ ಉಳಿದಿವೆ. ಪ್ರಸ್ತುತ ಕತೆ ಅವರದೇ ಆದ ‘ವೀರಭೂಮಿ’ ಮಾಸಿಕದಲ್ಲಿ ಪ್ರಕಟವಾಗಿತ್ತು. ವೆಂಕಟರಾಜರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು. ತಮ್ಮ ‘ಮಾನಸಗಂಗೆ’ ಕವನ ಸಂಕಲನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅವರು 7 ಕವನಸಂಕಲನಗಳು, 3 ಕಾದಂಬರಿಗಳು, 8 ನಾಟಕಗಳು, 54 ಕತೆಗಳು, ಸಂಪಾದಕೀಯ ಲೇಖನಗಳು, ಲಲಿತಪ್ರಬಂಧಗಳು, ಅಂಕಣ ಬರಹಗಳು ಮುಂತಾಗಿ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಈ ಕತೆಯ ಹಿನ್ನೆಲೆ: ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಕ್ಕಿ, ಸಕ್ಕರೆ, ಸೀಮೆ ಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳು ಸಿಗದೆ ಬದುಕು ಬಹಳ ದುಸ್ತರವಾಗಿತ್ತು. ಅದನ್ನು ಕೂಡಾ ಕತೆಗಾರರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಸಿಕಂದರ್ ಕಾಪು ಅವರ ‘ಬಾಟ್ಲಿವಾಲ!’ ಕತೆ ಸೀಮೆ ಎಣ್ಣೆ ಸಿಗದೆ ಬಡವರು ಪರದಾಡುತ್ತಿದ್ದುದನ್ನು ದಾಖಲಿಸಿದೆ.
ಈ ಕಥಾಸರಣಿಯ ಸಂಪಾದಕನ (ಬಿ. ಜನಾರ್ದನ ಭಟ್) ‘ಉತ್ತರಾಧಿಕಾರ’ ಕಾದಂಬರಿಯಲ್ಲಿ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಜನರಿಗೆದುರಾಗಿದ್ದ ಕಷ್ಟಗಳ ವರ್ಣನೆಯಿದೆ. ‘ಪುಂಡಗೋಳಿಯ ಕ್ರಾಂತಿ’ ಎಂದು ಕರೆಯಬಹುದಾದ ಕಥಾನಕವೊಂದು ಇದರಲ್ಲಿದ್ದು, ಜನಸಾಮಾನ್ಯರಲ್ಲಿ ಎದ್ದಿದ್ದ ಹಾಹಾಕಾರ, ಕಳ್ಳಸಂತೆಯ ವ್ಯಾಪಾರಿಯೊಬ್ಬ ಅಕ್ಕಿ ಮೂಟೆಗಳನ್ನು ಸಾಗಿಸುವಾಗ ಬಡವರ ಗುಂಪೆಂದು ಸರಕಾರದ ಭಯವನ್ನೂ ಮೆಟ್ಟಿನಿಂತು ಅಕ್ಕಿಯ ಮುಡಿಗಳನ್ನು ದರೋಡೆಮಾಡಿದ ಘಟನೆಯ ವರ್ಣನೆಯಿದೆ. ಇದು ನಿಜವಾಗಿಯೂ ನಡೆದ ಘಟನೆಯನ್ನು ಆಧರಿಸಿದೆ.
ಫ್ರಾನ್ಸಿಸ್ ದಾಂತಿಯವರ ‘ರಾಯರ ಬಾವಿ (?)’ ಇದೇ ಕಾಲಘಟ್ಟದಲ್ಲಿ ಉಳ್ಳವರು ಅಕ್ಕಿಮುಡಿಯನ್ನು ಅಡಗಿಸಿಡುವ ಸನ್ನಿವೇಶವನ್ನು ದಾಖಲಿಸಿರುವ ಕತೆಯಾಗಿದೆ. ಈ ಹಂತದಲ್ಲಿ ಸ್ವಾತಂತ್ರ್ಯ ಹೋರಾಟವೂ ತೀವ್ರಗೊಂಡಿತು. ತಾವು ತೊಡಗಿದ್ದ ವಿಶ್ವ ಯುದ್ಧಕ್ಕೆ ಸಹಕಾರ ನೀಡಲಿಲ್ಲ, ನೀಡಬಾರದು ಎಂದು ಜನರನ್ನು ಪ್ರೇರೇಪಿಸಿದರು ಎಂಬ ಕಾರಣ ನೀಡಿ ಬ್ರಿಟಿಷ್ ಸರಕಾರ ಸಾಹಿತಿ ಸಾಂತ್ಯಾರು ವೆಂಕಟರಾಜರ ತಂದೆ ಸಾಂತ್ಯಾರು ಅನಂತಪದ್ಮನಾಭ ಭಟ್ಟರನ್ನು ಪಟೇಲಿಕೆಯಿಂದ ಕಿತ್ತುಹಾಕಿದ್ದು ಇದೇ ಸಂದರ್ಭದಲ್ಲಿ. ಇದನ್ನು ವೆಂಕಟರಾಜರು ತಮ್ಮ ‘ಜಮಾಬಂದಿ’ ಎಂಬ ಕತೆಯಲ್ಲಿ ದಾಖಲಿಸಿದ್ದಾರೆ.