‘ತಲೆಮಾರು’ ಕವಿತೆಯಲ್ಲಿನ ‘ಮೂಕಹಕ್ಕಿ’ ಪೂರ್ವಜರನ್ನು ಕುರಿತ ಕವಿತೆಯೆನ್ನಲು ಅನೇಕ ಪುರಾವೆಗಳು ಸಿಗುತ್ತವೆ. ಆಧುನಿಕತೆ ಮತ್ತು ಗತಕಾಲದ ಪಳೆಯುಳಿಕೆಗಳ ನಡುವೆ ತಣ್ಣನೆಯ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದಾಗಿದೆ. ಅವ್ವನ ತಾಯ್ತನದ ಕುರಿತು ‘ಮೀಯುವುದೆಂದರೆ ಚೈತನ್ಯಗಳ ಹುಟ್ಟು’ ಕವಿತೆಯಲ್ಲಿ ಆಪ್ತ ದಾಟಿಯಲ್ಲಿ ಬರೆಯುವ ಕವಯತ್ರಿಗೆ ಇಲ್ಲಿ ಬಾಲ್ಯದ ನೆನಪು ಮರುಕಳಿಸಿದೆ. ‘ಮಿಂದಾಗಲೆಲ್ಲ ಅವ್ವನದು ಶೀತದ ಚಡಪಡಿಕೆ’ ಎನ್ನುವಲ್ಲಿ ಅವ್ವನ ಕಾಳಜಿಯೊಂದಿಗೆ ಆಕೆಯ ಜವಾಬ್ದಾರಿಯನ್ನು ಕಂಡು ಮರುಗಲೇಬೇಕಾಗುತ್ತದೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಸೌಮ್ಯ ಹೆಗ್ಗಡಹಳ್ಳಿ‌ ಕವನ ಸಂಕಲನ ‘ನಶೆಯ ಲೇಖನಿ’ ಕುರಿತು ಬರೆದಿದ್ದಾರೆ

ಜೀವಿತಾವಧಿಯಲ್ಲಿ ಒಂದೇ ಒಂದು ಒಳ್ಳೆಯ ಕವಿತೆ ಬರೆದರೂ ಆತನು ಕವಿಯೇ ಎಂದು ಕನ್ನಡದ ಹಿರಿಯ ವಿಮರ್ಶಕರೊಬ್ಬರು ಹೇಳಿದ್ದರು. ಆ ಮಾತನ್ನು ಒಪ್ಪಬಹುದು. ಸೌಮ್ಯ ಹೆಗ್ಗಡಹಳ್ಳಿಯವರು ಮೂಲತಃ ಗುಂಡ್ಲುಪೇಟೆಯ ಬಳಿಯ ಹೆಗ್ಗಡಳ್ಳಿಯವರು. ಮುಖತಃ ಪರಿಚಯವಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳ ಮೂಲಕ ಗುರುತಿಸಿಕೊಂಡವರು. ಬರಹದ ಮೂಲಕವೇ ನನಗೂ ಪರಿಚಯವಾಗಿದ್ದರು. ಜಾಲತಾಣಗಳಲ್ಲಿ ಸಣ್ಣಸಣ್ಣ ಕವಿತೆಗಳನ್ನು ಪೋಸ್ಟ್ ಮಾಡುತ್ತಿದ್ದ ಇವರು ‘ನಶೆಯ ಲೇಖನಿ’ ಎಂಬ ತಮ್ಮ ಚೊಚ್ಚಲ ಕವನಸಂಕನವನ್ನು ಬಿಡುಗಡೆಗೊಳಿಸಿದ್ದಾರೆ. ಅದೂ ಯಾವುದೇ ಸದ್ದು ಗದ್ದಲವಿಲ್ಲದ ತೀರಾ ಅನೌಪಚಾರಿಕ ಕಾರ್ಯಕ್ರಮದಲ್ಲಿ. ನಟ ‘ಡಾಲಿ ಧನಂಜಯ’ ಅವರು ಬಿಡುಗಡೆಗೊಳಿದ್ದರು. ಚಿತ್ರನಟರೊಬ್ಬರು ಕವನಸಂಕಲನಕ್ಕೆ ಬೆನ್ನುಡಿಯನ್ನು ಬರೆದಿರುವುದು ವಿಶೇಷವೆನಿಸುತ್ತದೆ. ನಟನೆಯ ಜೊತೆಗೆ ಕಾವ್ಯವನ್ನೂ ಓದಿ ಬರೆಯುವವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವುದೂ ಅವರ ಬದ್ಧತೆಗೆ ನಿದರ್ಶನವಾಗಿದೆ. ನಟನೆ, ಸಾಹಿತ್ಯ ಎರಡೂ ಕಲೆಯಾದ್ದರಿಂದ ಇದು ಜವಾಬ್ದಾರಿಯೂ ಆಗುತ್ತದೆ. ಕಾವ್ಯದ ಬಗ್ಗೆ ನಿರಾಸಕ್ತಿಯನ್ನೂ, ಅಸಡ್ಡೆ ತನವನ್ನೂ ತೋರುತ್ತಿರುವ ಇಂಥಹ ಕಾಲದಲ್ಲಿಯೂ ಕಾವ್ಯವು ಪರಿಶುದ್ಧವಾಗಿ ಹರಿಯುತ್ತಿದೆ ಎನ್ನುವುದೂ ಸಮಾಧಾನದ ವಿಷಯ.

(ಸೌಮ್ಯ ಹೆಗ್ಗಡಹಳ್ಳಿ‌ )

ಸೌಮ್ಯ ಹೆಗ್ಗಡಹಳ್ಳಿಯವರ ನಶೆಯ ಲೇಖನಿ ಪುಸ್ತಕವನ್ನು ನೋಡಿದಾಗ ಅನ್ನಿಸಿದ್ದು ಇದು ಲಲಿತ ಪ್ರಬಂಧಗಳ ಗುಚ್ಛವೋ, ಅಥವಾ ಲೇಖನಗಳೋ ಎನಿಸಿತ್ತು. ಆದರೆ ಪುಸ್ತಕದ ಕೆಳಬಾಗದ ತುದಿಯಲ್ಲಿ ಕವಿತೆಗಳು ಎಂದು ನೋಡಿದಾಗಲೇ ಇದೊಂದು ಕವನಸಂಕಲನ ಎಂದು ಗೊತ್ತಾಯಿತು. ಕವನಸಂಕನದಲ್ಲಿ ಇನ್ನೂ ಅತ್ಯುತ್ತಮ ಶೀರ್ಷಿಕೆಗಳಿದ್ದವು. ಅವುಗಳಲ್ಲಿ ಯಾವುದಾದರೊಂದನ್ನು ಬಳಸಿಕೊಳ್ಳಬಹುದಿತ್ತು. ಇರಲಿ ಇದು ಲೇಖಕಿಯ ಸ್ವಾತಂತ್ರ್ಯ. ಈ ಸಂಕಲನದಲ್ಲಿ ಸುಮಾರು ಐವತ್ತೆರಡು ಕವಿತೆಗಳಿವೆ. ಎಲ್ಲವೂ ವಿಷಯ ವೈವಿಧ್ಯತೆಯಿಂದ ಕೂಡಿದವುಗಳಾಗಿವೆ. ಕವನಸಂಕಲನದ ಭಾಷೆ ಸರಳವಾಗಿದೆ. ‘ವಾಚ್ಯಾರ್ಥ’ದ ಕವಿತೆಗಳೇ ಹೆಚ್ಚಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ರೂಪಕಗಳೂ ವಿರಳವಾಗಿವೆ. ಹೇಳಬೇಕಾದದ್ದನ್ನು ನೇರವಾಗಿಯೇ ಹೇಳುವ ಕವಯತ್ರಿಯ ಭಾಷೆ ಕಟುವಾಗಿಲ್ಲ.

‘ಕಟ್ಟುತ್ತಿರುವೆ ಕವಿತೆ ನೋಡಾ’ ಕವಿತೆಯ ಮೂಲಕ ತಮ್ಮ ಕಾವ್ಯ ಯಾನವನ್ನು ಆರಂಭಿಸಿದ್ದಾರೆ. ಅವರ ಲೇಖನಿಯಲ್ಲಿ ಮೂಡುತ್ತಿರುವ ಅಕ್ಷರಗಳಿಗೆ ಹಿನ್ನೆಲೆಯೇನು? ಬರೆಯುವ ಅನಿವಾರ್ಯತೆ ಏನಿರಬಹುದು? ಬರೆಯುವುದಾದರೂ ಏಕೆ? ಬದುಕಿನ ವಾಸ್ತವದ ಚಿತ್ರ ಮತ್ತು ಭವಿಷ್ಯದ ಗುರಿ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೋ ಎಂಬಂತೆ ಈ ಕವಿತೆಯನ್ನು ಬರೆದಿದ್ದಾರೆ.

ನನ್ನೀ ಅದಮ್ಯ ಚೇತನವೆಂಬ
ಸರಳ ಬದುಕಿನೊಳು
ಹರಿದ ಕಾಗದದಿ ನಾ
ಓಲೈಸಿ ಸಂತೈಸಿರುವೆ
ನಿಮ್ಮದೆ ಮನದ
ನೋವು ನಲಿವುಗಳನ್ನ
(ಕಟ್ಟುತ್ತಿರುವೆ ಕವಿತೆ ನೋಡಾ)

‘ತಲೆಮಾರು’ ಕವಿತೆಯಲ್ಲಿನ ‘ಮೂಕಹಕ್ಕಿ’ ಪೂರ್ವಜರನ್ನು ಕುರಿತ ಕವಿತೆಯೆನ್ನಲು ಅನೇಕ ಪುರಾವೆಗಳು ಸಿಗುತ್ತವೆ. ಆಧುನಿಕತೆ ಮತ್ತು ಗತಕಾಲದ ಪಳೆಯುಳಿಕೆಗಳ ನಡುವೆ ತಣ್ಣನೆಯ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದಾಗಿದೆ. ಅವ್ವನ ತಾಯ್ತನದ ಕುರಿತು ‘ಮೀಯುವುದೆಂದರೆ ಚೈತನ್ಯಗಳ ಹುಟ್ಟು’ ಕವಿತೆಯಲ್ಲಿ ಆಪ್ತ ದಾಟಿಯಲ್ಲಿ ಬರೆಯುವ ಕವಯತ್ರಿಗೆ ಇಲ್ಲಿ ಬಾಲ್ಯದ ನೆನಪು ಮರುಕಳಿಸಿದೆ. ‘ಮಿಂದಾಗಲೆಲ್ಲ ಅವ್ವನದು ಶೀತದ ಚಡಪಡಿಕೆ’ ಎನ್ನುವಲ್ಲಿ ಅವ್ವನ ಕಾಳಜಿಯೊಂದಿಗೆ ಆಕೆಯ ಜವಾಬ್ದಾರಿಯನ್ನು ಕಂಡು ಮರುಗಲೇಬೇಕಾಗುತ್ತದೆ. ತನ್ನ ಆತ್ಮಾವಲೋಕನ ಗೀತೆಯಂತಿರುವ ‘ಅಸ್ತಿತ್ವ’ ಕವಿತೆಯಲ್ಲಿ ಕವಯತ್ರಿ ಅನುಭವಿಸಿದ ಯಾತನೆ ಮತ್ತು ಆಕೆಯ ಏಕಾಂಗಿತನದ ಹಪಹಪಿಕೆಗಳು ವ್ಯಕ್ತವಾಗಿವೆ. ಭಯದೊಂದಿಗೆ ಬದುಕುವ ಅನಿವಾರ್ಯತೆ ಈಗಾಗಲೇ ಅಭ್ಯಾಸವಾಗಿದೆಯಾದರೂ ಬದುಕಿನ ಕುರಿತು ಕವಯತ್ರಿಗೆ ಅಪಾರ ಕಾಳಜಿಯಿದೆ.

ನಾನಿರುವ ಅಸ್ತಿತ್ವವೀಗ
ನಿತ್ರಾಣರೋಗದ ಕಾಯ
ಆಲರಾಶಿಯ ಮೀನುಗಳಿಗೆ
ಆಹಾರವಿಕ್ಕಲಿ ಬಿಡು

ಅಸ್ತಿತ್ವದ ಉಳಿವಿಗಾಗಿ
ಹಂಗು ನನಗಿಲ್ಲದಿರುವಾಗ
(ಅಸ್ತಿತ್ವ)

ಎನ್ನುವಲ್ಲಿ ಕವಯತ್ರಿಗೆ ಬದುಕಿನ ಕುರಿತು ಎದ್ದಿರುವ ‘ನಶ್ವರತೆಯ’ ಪ್ರಶ್ನೆಯೂ ಕಾಡಿದಂತೆ ತೋರುತ್ತದೆ. ಏನಾದರೂ ಸರಿಯೆ ಬಂದದ್ದನ್ನು ಅನುಭವಿಸಬೇಕು ಎನ್ನುವ ಆಕೆಯ ದಿಟ್ಟತನವೇ ಆಕೆಯನ್ನು ಬರೆಯಲು ಪ್ರೇರೇಪಿಸಿದೆ. ‘ಅನ್ನದ ಋಣ’ ಕವಿತೆಯೂ ಸ್ವ ಪ್ರಶಂಸೆಯ ಜೊತೆಗೆ ಸ್ವಮರುಕ ಗೀತೆಯಂತಿದೆ. ‘ಒಲವಿಗೊಂದಿಷ್ಟು ಬಲವಕೂಡಿಸಿ ತಿರುಗಾಣಿಸಲೇಬೇಕು’ ಎನ್ನುವ ಸಾಲುಗಳು ಕಾಡುತ್ತವೆ. ಪರಂಪರೆ ಮತ್ತು ಶಿಕ್ಷಣವನ್ನು ಕುರಿತು ಅನೇಕ ಕವಿತೆಗಳಿವೆ. ‘ಅರಿವಿನ ಹರಕೆಯೂ’ ಈ ಮಾದರಿಯದ್ದು.

ಹತ್ತಾರು ನೆಪವೊಡ್ಡಿ
ಏಳಿಗೆಯ ನಾಳೆಗಾಗಿ ಹೆಕ್ಕಬೇಕಿದೆ
ಜ್ಞಾನದ ಮುತ್ತುಗಳ
ಲೇಖನಿಯೊತ್ತ ಕೈಗಳಿಂದು
ನಾಳಿನ ಸುಜ್ಞಾನಕೆ
ಇಂದೇ ಫಲವಿಟ್ಟು
ಎಚ್ಚರಿಸಬೇಕಿದೆ ಮೈಯೊಳಗಿನ
ನೆತ್ತರನು
ಅದುವೆ ನಾಳೆಗೆ ಹರಿಯಲೇಬೇಕಿದೆ
ಅಭಿವೃದ್ಧಿಯ ಜೀವನದಿಯಾಗಿ
ಮಾಡಬೇಕಿದೆ ಇಂದು
ಅರಿವಿನ ಹರಕೆ.
(ಅರಿವಿನ ಹರಕೆ)

ಮಹಿಳೆಯರಿಗೆ ಶಿಕ್ಷಣದಿಂದ ದೂರವಿಟ್ಟ ವ್ಯವಸ್ಥೆಯ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸುವ ಇವರು ‘ಹೊತ್ತಗೆಯ ನನ್ನವ್ವ’ ಕವಿತೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆಯವರನ್ನು ಸ್ಮರಿಸಿದ್ದಾರೆ.

ಬಳೆಭಾರ ಹೊತ್ತ
ಕೈಗಳೀಗ ಹೊತ್ತಿಗೆಯ
ಅರಿವಿನ ಅಕ್ಷರವ ಕಲಿಸಿವೆ
ಜಗಕೆಲ್ಲ ಮೊದಲ
ಅಕ್ಷರದವ್ವ ನೀನಲ್ಲವೇ ತಾಯಿ

ನೀ ಅಡಿಯಿಟ್ಟ ನೆಲದಲ್ಲಿ
ಅಕ್ಷರದ ಫಲದ ಹೆಮ್ಮರವಾಗಿದೆ
ನೋಡಿಂದು ನನ್ನವ್ವ ಅಕ್ಷರದವ್ವ
(ಹೊತ್ತಗೆಯ ನನ್ನವ್ವ)

ಸಾಕ್ಷರತೆಯ ಹಾಡಿನಂತಿರುವ ಈ ಕವಿತೆಯ ಮಾದರಿಯಲ್ಲೇ ಶಿಕ್ಷಣದ ಕುರಿತು ಹಲವು ಗಮನಸೆಳೆಯುತ್ತವೆ. ತನಗೆ ತಾನೇ ಸಾಂತ್ವನ ಹೇಳಿಕೊಳ್ಳುವ ಮೂಲಕ ತನ್ನ ನೋವನ್ನು ತಾನೇ ನೀಗಿಸಿಕೊಂಡು ಮುಂದೆಸಾಗುವ ಕವಯತ್ರಿ ‘ನಿನ್ನೊಳಗಿನ ನೀನು’ ಕವಿತೆಯು ಬದುಕಿನಲ್ಲಿ ಏನಾಗಬೇಕು ? ಎಂಬುದಕ್ಕುತ್ತರದಂತಿದೆ. ಅದೇ ಏಕಾಂಗಿ ಬದುಕು, ಹತಾಶೆ, ನಿಟ್ಟುಸಿರು ಇಲ್ಲೂ ಕಾಣುತ್ತದೆ.

ಕಾವು ಸುಟ್ಟು
ತಟ್ಟಾಡಿಸಿದ ತಮಟೆಯೇ
ಬೀದಿ ಬೀದಿಯ ಸುತ್ತಿ
ಸತ್ಯವ ಸಾರುವಾಗ
ನಿನ್ನೆದೆಯೊಳಗೆ ಪ್ರಮಾಣಿಕರಿಸಿದ
ಹೃದಯಗೀತೆಯೆ
ನೊಂದವರಿಗೆ
ನಲಿಸುವ ಹಾಡಾಗಲಿ ಬಿಡು..
(ನಿನ್ನೊಳಗಿನ ನೀನು)

ಭರವಸೆಯನ್ನು ತುಂಬುತ್ತಲೇ ಸಹಜವಾಗಿ ಬದುಕಿಬಿಡಬೇಕೆಂಬ ಬಹುದೊಡ್ಡ ಸಂದೇಶವನ್ನು ನೀಡುತ್ತಾರೆ. ‘ತಮಟೆ’ ನೊಂದವರ ದನಿ. ನೋವಿನಲ್ಲೂ ನಲಿವಿನಲ್ಲೂ ಬೆರೆತುಹೋಗಿದೆ. ಸುಟ್ಟ ತಮಟೆಯ ನಾದದಂತೆ ಬದುಕೂ ಸುಟ್ಟಾಗಷ್ಟೆ ಮನುಷ್ಯ ಮನುಷ್ಯನಾಗುವನು. ‘ಮೀಸಲು’ ಕವಿತೆಯಲ್ಲೂ ಸ್ವಮರುಕ, ಸ್ವಸಾಂತ್ವನ ಹೇಳಿಕೊಳ್ಳುವ ಕವಯತ್ರಿ ನಾಳೆಗಳಿಗೆ ಧನಾತ್ಮಕ ಚಿಂತನೆಗಳನ್ನು ಮೀಸಲಿರಿಸಿದ್ದಾರೆ. ಕವಿತೆಯ ಕೊನೆಯಲ್ಲಿ
ಕಣ್ಣ ಹನಿಗೊಂದು ಬೆರಳಾಗಿ
ಸ್ಪಂದನೆಗೆ ಪ್ರತಿಸ್ಪಂದನೆ ಕೊಡು-ಕೊಳ್ಳುವ
ವ್ಯವಹಾರವಷ್ಟೆ ಸಾಕಲ್ಲವೇ
ಬದುಕಿಗೆ
(ಮೀಸಲು)

ಎನ್ನುತ್ತಾ ವಿಷಾದ ವ್ಯಕ್ತಪಡಿಸುತ್ತಾರೆ. ‘ಸಾವಿಲ್ಲದ ಹುಟ್ಟು’ ಹಲವು ಆಯಾಮಗಳಿಂದ ಚರ್ಚಿಸಲು ಸಾಧ್ಯವಿರುವ ಕವಿತೆ. ಇಲ್ಲಿ ನಿರ್ಜೀವ ವಸ್ತುಗಳೂ ಜೀವ ಪಡೆದುಕೊಳ್ಳುತ್ತವೆ. ಇದ್ದಾಗ ಆಸರೆಯಾಗದ ಕೈಗಳು ಸತ್ತಾಗ ಹಾರಹೊತ್ತು ಶೋಕಿಸುವ ‘ಶೋ ಪೀಸ್’ ಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಉಂಬ ಜಂಗಮ ಬಂದರೆ ನಡೆಯೆಂಬರು ಉಣ್ಣದ ಲಿಂಗಕೆ ಬೋನವ ಹಿಡಿಯೆಂಬರಯ್ಯಾ’ ಎಂಬ ಬಸವಣ್ಣನವರ ಸಾಲುಗಳು ನೆನಪಿಗೆ ಬರುತ್ತವೆ.

ಕಪ್ಪು ಕೋಣೆಯೊಳಗೆ
ಹಿಡಿಯಷ್ಟು ಅನ್ನಕ್ಕೆ
ರೋಧಿಸಿದ ಹೊಟ್ಟೆಗೀಗ
ಮೃಷ್ಟಾನ್ನದ ಎಡೆಯಂತೆ
ತೆರೆಯದ ಬಾಯಿಗೀಗ
ಒಲವಿನ ಕೈತುತ್ತು..
(ಸಾವಿಲ್ಲದ ಹುಟ್ಟು)

ಬದುಕಿದ್ದಾಗ ಬವಣೆಗಳನ್ನು ಕೇಳದವರು ಸತ್ತಾಗ ಬಾಯಿಗನ್ನವ ತುರುಕುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಖಾರವಾಗಿಯೇ ನುಡಿದಿದ್ದಾರೆ. ಸಾವಿನ ಕುರಿತು ಎದ್ದ ಜಿಜ್ಞಾಸೆಗಳು ಇಲ್ಲಿ ಕವಯತ್ರಿಯನ್ನು ಬಹುವಾಗಿ ಕಾಡಿವೆ. ಸಾವಿನ ಬಗ್ಗೆ ಚಿಂತಿಸಿದಷ್ಟೂ ಬದುಕಿನ ದಾರಿಯ ಕುರಿತ ಚಿತ್ರಣ ಸ್ಪಷ್ಟವಾಗುತ್ತದೆ. ಕವಿತೆಯ ಸಾಲುಗಳು ಕಣ್ತಪ್ಪಿನಿಂದ ಎರಡೆರಡುಬಾರಿ ಮುದ್ರಣವಾಗಿವೆ. ಕವಿತೆ ಎಷ್ಟು ಚೆನ್ನಾಗಿದ್ದರೂ ಕಾವ್ಯ ಓದುವಾಗ ಇಂಥಹ ತಪ್ಪುಗಳು ರಸಭಂಗಕ್ಕೆ ಕಾರಣವಾಗುತ್ತವೆ. ಅವುಗಳನ್ನೆಲ್ಲ ಗಮನಿಸಿ ಎಚ್ಚರಿಕೆಯಿಂದ ಪ್ರಕಟಿಸಬೇಕಾಗುತ್ತದೆ.

ಆಪೋಶನ ಕವಿತೆಯಲ್ಲಿನ
“ತೊಟ್ಟು ಹನಿಗಳ ಗಿಲಾಸಿಗೂ
ನಾನೆ ಷರಾಬಿಯಾದೆ
ನನ್ನನ್ನೇ ಗುಟುಕ್ಕರಿಸುತ್ತಿವೆ
ತಾರೆಗಳ ಸಾಕ್ಷಿಯಿಟ್ಟು ಕರುಳು ಸುಟ್ಟಿವೆ

ಸುಟ್ಟನಾರು ನಾನೀಗ
ಷರಾಬಿನ ಘಾಟಿಗೆ ಶೀಪಿಟ್ಟ ಪ್ರತಿಗುಟುಕು
ಫಲಿತಾಂಶವೀಯುತ್ತಿವೆ
ನನ್ನದೆ ಸಾವನು
ಘಾಟ ಗಹಗಹಿಸಿದೆ”

ಎನ್ನುವ ಸಾಲುಗಳು ವಿಶೇಷವೆನಿಸುತ್ತವೆ. ಇಲ್ಲೂ ‘ಸಾವು’ ಪ್ರಸ್ತಾಪವಾಗಿದ್ದು ಅದರ ಕುರಿತೇ ಆಡುವ ಮಾತುಗಳು ಸಂತರ ನುಡಿಯಂತೆ ಕೇಳಿಸುತ್ತವೆ. ಯಾಂತ್ರಿಕ ಯುಗದಲ್ಲೂ ಬೀಸುಗಲ್ಲಿನ ನೆನಪುಮಾಡಿಕೊಳ್ಳುವ ಇವರು ‘ಬೀಸುಗಲ್ಲು’ ಎಂಬ ಕವಿತೆಯಲ್ಲಿ ಅದರ ಉಪಯೋಗದ ನಾನಾ ವಿಧಗಳ ಬಗ್ಗೆ ವಿವರಿಸಿದ್ದಾರೆ.

ತನ್ನ ಆತ್ಮಾವಲೋಕನ ಗೀತೆಯಂತಿರುವ ‘ಅಸ್ತಿತ್ವ’ ಕವಿತೆಯಲ್ಲಿ ಕವಯತ್ರಿ ಅನುಭವಿಸಿದ ಯಾತನೆ ಮತ್ತು ಆಕೆಯ ಏಕಾಂಗಿತನದ ಹಪಹಪಿಕೆಗಳು ವ್ಯಕ್ತವಾಗಿವೆ. ಭಯದೊಂದಿಗೆ ಬದುಕುವ ಅನಿವಾರ್ಯತೆ ಈಗಾಗಲೇ ಅಭ್ಯಾಸವಾಗಿದೆಯಾದರೂ ಬದುಕಿನ ಕುರಿತು ಕವಯತ್ರಿಗೆ ಅಪಾರ ಕಾಳಜಿಯಿದೆ.

“ಬೀಸುವ ಕೈಯಿಂದ
ಹರಿದಾಡಿದ ನೆತ್ತರಿಗೆ
ಸಂತೃಪ್ತಿಯ ಆರೈಕೆ ಬೆಳೆಗರೆವವರಗೆ
ಬೀಸುವುದೆಂದರೆ
ಆಯಾಮವಿಹುದು
ಮೈ ಮನಸ್ಸಿಗೆ.”

ಇವರ ಕವಿತೆಗಳು ಆರಂಭದಲ್ಲಿ ತೆಳು ಮಾದರಿಯಂತೆ ತೋರಿದರೂ ಕವಿತೆಯ ಕೊನೆಯ ಸಾಲುಗಳು ಹೊಸ ರೂಪಾತ್ಮಕತೆಯ ಚಿತ್ರವಾಗಿ ಬದಲಾಗುವುದು ವಿಶೇಷವೆನಿಸುತ್ತದೆ. ಅಲ್ಲಿದೇ “ಹಾಸುಗಲ್ಲಿನ” ಕುರಿತೂ ಕವಿತೆಯಿದ್ದು ವಿಶೇಷವಾಗಿದೆ.

ಹಾಸುಗಲ್ಲು ನಾನು
ನಿಗಿಬಿಸಿಯ ಮಳೆಗರೆದರು
ಹಸಿವ ನೀಗುವೆ ನಾನು
ಒಡಲಿಗೆಲ್ಲ ಹಿಟ್ಟು ತುಂಬಿದ
ಕಾಯಕವೇ ನನ್ನುಟ್ಟು
ಕೇಳಿರಯ್ಯ.

ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ಇವರಿಗೆ ದೇವಾಲಯ ಸ್ಮಶಾನದಂತೆ ಕಂಡಿದೆ. ಬಾಡಿಗೆ ಮನೆಯ ಕುರಿತು ಕವಿತೆಯಿದೆ. ನಮ್ಮ ನಮ್ಮ ಬಾಡಿಗೆ ಮನೆಯ ದಿವಸಗಳೂ ನೆನಪಿಗೆ ಬರುತ್ತವೆ. “ರಾತ್ರಿಗಳೊಟ್ಟಿಗೆ ಮಾತಾಗುವುದೆಂದರೆ” ಕವಿತೆಯೂ ಪ್ರೇಮ ಕಾಮಗಳ ನಡುವಿನ ರೇಖೆಯಂತಿದೆ.

“ಈ ರಾತ್ರಿಗಳೊಟ್ಟಿಗೆ ಮಾತಾಗುವುದೆಂದರೆ
ಕಂಪಿಸಿದ ದೇಹಗಳು ಸ್ಪರ್ಶಿಸಿ ಸುಖಿಸಿದಂತಲ್ಲ
ಮತ್ತಾಗಿ ಒರಗಿ ಓಷ್ಟ್ಯದ ನಡೆ ತಪ್ಪಿದಂತಲ್ಲ
ಈ ರಾತ್ರಿಗಳು”

“ರಾತ್ರಿಗಳೊಟ್ಟಿಗೆ ಮಾತಾಗುವುದೆಂದರೆ ಹೀಗೆಯೆ
ಹಗಲಿನಷ್ಟೇ ಮಾತಿನ ನೆಪ ಎಣೆದು
ಬದುಕಿನ ಹೋರಾಟಕ್ಕೆ ಮತ್ತದೇ ರಾತ್ರಿಗಳಿಗೆ ಮಾತಿನ
ಹಣತೆ ಹಚ್ಚಿದಂತೆ”

ಎಂದು ಬರೆಯುವ ಇವರ ಕವಿತೆಗಳಲ್ಲಿ ಕತ್ತಲು, ಸಾವು ರೂಪಕಗಳಾಗಿ ಮತ್ತೆ ಮತ್ತೆ ಕಾಣಸಿಗುತ್ತವೆ. ‘ಗೋವಿನ ಅಳಲು’ ಕವಿತೆ, ನೀನಾರಿಗಾದೆಯೋ ಎಲೆ ಮಾನವ ಕವಿತೆಯನ್ನು ನೆನಪಿಸುತ್ತದೆ. “ಇದ್ದಾಗ ಪೂಜಿಸಿದ ನಾನು ಸತ್ತಾಗ ಕಾಲಿಗಿಟ್ಟ ಚಪ್ಪಲಿಯಾದೆ” ಎಂಬ ಗೋವಿನ ಸ್ವಗತದಂತಿದೆ. ‘ನಶೆಯ ಲೇಖನಿ’ ಕವಿತೆಯಲ್ಲಿ ಗುಂಡಿಗೆ ಬಲಿಯಾದ ಗೌರಿ ಲಂಕೇಶರನ್ನು ಸ್ಮರಿಸಿದ್ದಾರೆ. ಬರವಣಿಗೆಯೂ ಒಂದು ನಶೆಯೇ ಎನ್ನುವ ಇವರು ಸತ್ಯದ ಹಾದಿಯನ್ನಷ್ಟೆ ನಂಬುತ್ತಾರೆ. ‘ಮಾದಪ್ಪನಿಗೆ ಮರಿಮಗನ ಮಾಡಿ’ ಕವಿತೆಯೂ ಸ್ಥಳೀಯ ಪರಂಪರೆಯ ಬಗ್ಗೆ, ಆಚರಣೆಯ ಕುರಿತು ಪ್ರಸ್ತಾಪಿಸಿದಂತಿದೆ. ನಂಬಿಕೆಗಳಷ್ಟೆ ಇಲ್ಲಿ ಮುಖ್ಯವಾಗಿರುವುದನ್ನು ಗಮನಿಸಬಹುದಾಗಿದೆ. ಅಪ್ಪನ ಕುರಿತು ಭಾವನಾತ್ಮಕ ಕವಿತೆ ‘ಅಪ್ಪನಂಬ ಅನಂತ’. ತಂದೆಯ ಸಾವಿನಿಂದ ಬದುಕಿಗೇ ವಿದಾಯಹೇಳಬೇಕು ಎನ್ನುವಷ್ಟರಲ್ಲಿ ಜವಾಬ್ದಾರಿಗಳ ನೆನೆದು ಬದುಕುವ ನಿರ್ಧಾರ ಮಾಡುವ ಕವಯತ್ರಿಯನ್ನು ಅಕ್ಷರಗಳು ಕೈ ಹಿಡಿದು ನಡೆಸಿವೆ. ಈ ಪುಸ್ತಕವನ್ನೂ ಅವರು ಅಪ್ಪನಿಗೇ ಅರ್ಪಿಸಿದ್ದಾರೆ. ಅಪ್ಪನೆಂಬ ಅನಂತದ ಬಗ್ಗೆ ಇವರ ಕವಿತೆ ತಂದೆಯೊಂದಿಗಿನ ಒಡನಾಟದ ಅನುಭವಗಳನ್ನು ಕಣ್ಣಿಗೆ ಕಟ್ಟಿಕೊಟ್ಟಿದೆ.

ಭವಿಷ್ಯ ಕುರಿತು ರಚಿಸುತ್ತಿದ್ದ ಚಿತ್ರಗಳಿಗೆಲ್ಲ
ವಿದಾಯ ಹಾಡಿದ್ದಾನೆ ಈಗ..!
ಮುಂದಡಿಯ ಕಾಲ ನಮ್ಮದಲ್ಲವೆಂಬುದ
ಕಲಿಸಿ ಹೀಗೆಯೇ ಮಾತಿಲ್ಲದೆ ಸಾಗಿಬಿಟ್ಟ ಅಪ್ಪಾ..

ದಿಢೀರಾಗಿ ಬಂದ ಅಪ್ಪನ ಸಾವಿನ ಸುದ್ದಿ ಕವಯತ್ರಿಯ ಜೀವನದುದ್ದಕ್ಕೂ ಶಾಶ್ವತ ಕೊರಗನ್ನು ಉಳಿಸಿಬಿಟ್ಟಿದೆ. ‘ಶೂನ್ಯ ಒಪ್ಪರಿಕೆ’ ಕವಿತೆಯಲ್ಲೂ ಅಪ್ಪ ಕಂಡಿದ್ದಾನೆ. ವೇಶ್ಯೆಯ ಕುರಿತೂ ಕವಿತೆಯಿದೆ. ‘ಬಡತನ ಮತ್ತು ಬಾಲ್ಯ’ ಈ ಸಂಕಲನದ ಅತ್ಯುತ್ತಮ ಕವಿತೆ. ಬಡತನದ ನೆನಪು ಮತ್ತು ಬದುಕಿನ ಗಡಿಯೊಳಗೆ ಪಡುವ ಖುಷಿ ಈ ಕವನದ ವಸ್ತುಗಳಾಗಿವೆ.

ಸಂಜೆಯಾಯಿತೆಂದರೆ
ನಮ್ಮಯ ಸೈನ್ಯ ಹಾಜರಿತ್ತು
ಗೌಡರ ಮನೆಯ ಹಿಂಬದಿ ಕಸದ ತೊಟ್ಟಿಗೆ
ಅಲ್ಲೆ ನೋಡಿ
ನಮ್ಮಯ ಸರದಿಯ ಹುಡುಕಾಟ
ಅವರ ಮಕ್ಕಳ ಹಳೆ ಆಟಿಕೆಗಳಿಗಾಗಿ

ಒಂದಕ್ಕೆ ಕೈಯಿಲ್ಲ,
ಒಂದಕ್ಕೆ ಕಾಲಿಲ್ಲ
ನಾವೇ ಮರುಶಿಲ್ಪಿ ಅವುಗಳಿಗೆ..
ಇನ್ನೂ ಉಳಿಸಿಕೊಂಡಿವೆ ನೋಡಿ
ನಮ್ಮಯ ಋಣಭಾರ

ಹೀಗೆ ಸಾಗುತ್ತಿತ್ತು
ನಮ್ಮಯ ಬಾಲ್ಯ
ಹರುಕು
ಜೇಬಿನ ಮುರುಕು ಗೊಂಬೆಯೊಂದಿಗೆ
(ಬಡತನ ಮತ್ತು ಬಾಲ್ಯ)

ಬಡತನದ ತೀವ್ರತೆ ಮಕ್ಕಳನ್ನು ಕಾಡುವ ಹಲವು ಸಂದರ್ಭಗಳು ಕರುಳಿರಿಯುತ್ತದೆ. ಆದರೂ ಅಂಥ ಮಕ್ಕಳೇ ಮರುಶಿಲ್ಪಿಗಳಾಗಿ ಬದುಕುವುದು ಲೋಕದ ಸೋಜಿಗಗಳಲ್ಲೊಂದು. ಒಟ್ಟಾರೆಯಾಗಿ ಸೌಮ್ಯ ಹೆಗ್ಗಡಹಳ್ಳಿಯವರ ಕವಿತೆಗಳು ಭರವಸೆಯನ್ನು ಹುಟ್ಟಿಸಿವೆ. ಪದೇ ಪದೇ ಆದ ಕಾಗುಣಿತ ದೋಷಗಳು, ಸಾಕುಗಳ ಪುನರಾವರ್ತನೆಗಳು ಕಾವ್ಯದ ಕುರಿತು ನಿರಾಸಕ್ತಿ ಹುಟ್ಟಿಸಬಹುದೇನೋ ಎನಿಸುತ್ತದೆ. ಬಹುತೇಕ ಕವಿತೆಗಳು ತೀರಾ ಸಾಮಾನ್ಯವಾಗಿವೆ. ಕಾವ್ಯದ ಗುಣಗಳು ಪ್ರಾಪ್ತವಾಗದೆ ಗದ್ಯದಂತೆ ಕಂಡಿವೆ. ರೂಪಕಗಳ ಬಳಕೆ ಸಶಕ್ತವಾಗಿಲ್ಲ. ಆದರೂ ಬೇಸರಿಸಿಕೊಳ್ಳಬೇಕಿಲ್ಲ; ಒಂದಿಷ್ಟು ಕವಿತೆಗಳಿಂದ ಇವರು ಈಗಾಗಲೇ ಒಳ್ಳೆಯ ಕವಯತ್ರಿಯೆಂದು ತಿಳಿಯುತ್ತದೆ. ಕಾವ್ಯದ ಮತ್ತು ಬದುಕಿನ ಕುರಿತು ಇವರಿಗಿರುವ ಪ್ರೀತಿಯೇ ಇವರನ್ನು ಸಶಕ್ತ ಲೇಖಕಿಯನ್ನಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.