ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಕನ್ನಡಿಗರು ಈಗಷ್ಟೇ ನವರಾತ್ರಿ ಹಬ್ಬವನ್ನು ಮುಗಿಸಿ ದೇವಿಯರಿಗೆ ಕೈಮುಗಿದು ಪಾವನರಾಗಿದ್ದಾರೆ. ದಸರೆಯ ದಿನಗಳ ಬಣ್ಣಗಳಿಗೆ ಬೆರಗು ತಂದು ಮನಗಳಲ್ಲಿ ಪುಳಕ ಹುಟ್ಟಿಸಿ ಇನ್ನೇನು ಬರಲಿರುವ ಬೆಳಕಿನ ಹಬ್ಬಕ್ಕೆ ನಾಂದಿ ಹಾಡಿದ್ದಾರೆ. ಪ್ರಪಂಚ ಪೂರ್ತಿ ವಾಸಿಸುತ್ತಿರುವ ಭಾರತೀಯರು ತಮ್ಮ ಹಬ್ಬಗಳು ಕೊಡುವ ‘ದುರುಳತನವನ್ನು ನಿವಾರಿಸಿ ಸೌಖ್ಯಕ್ಕಾಗಿ ಕತ್ತಲಿನಿಂದ ಬೆಳಕಿಗೆ ಸಾಗುವ’ ಸಂದೇಶವನ್ನು ನೆನಪಿಸಿಕೊಳ್ಳುತ್ತಾ ದೀಪಾವಳಿಗೆ ಸಜ್ಜಾಗುತ್ತಿದ್ದಾರೆ. ಕೊನೆಯಿಲ್ಲದ ರಸ್ತೆಯಂತೆ ಸಾಗುತ್ತಾ ಹಳತಾಗುತ್ತಾ ಬಿರುಕು ಬಿಟ್ಟುಕೊಂಡು ತುಕ್ಕಾಗಲು ಬಾಯ್ದೆರೆಯುವ ಅದೇ ನಿತ್ಯಜೀವನದ ಮಬ್ಬನ್ನು ಸರಿಸಲು ನಮಗೆ ಹಬ್ಬಗಳು ಬೇಕೇಬೇಕು.
ಈ ನವೆಂಬರ್ ತಿಂಗಳಿನಲ್ಲಂತೂ ಹಬ್ಬದ ಭರ್ಜರಿ ವಿಶೇಷ ವಾತಾವರಣ! ಎಲ್ಲೆಡೆ ನಡೆಯುವಂತೆ ಆಸ್ಟ್ರೇಲಿಯಾದಲ್ಲೂ ಕನ್ನಡ ರಾಜ್ಯೋತ್ಸವದ ಕಹಳೆ ಸದ್ದು ಜೋರಾಗುತ್ತದೆ. ದೀಪಾವಳಿ ಹಬ್ಬದ ಅಬ್ಬರವನ್ನು ಹೆಚ್ಚಿಸಲು ಪೈಪೋಟಿ ನಡೆಯುತ್ತದೆ. ಬರುಬರುತ್ತಾ ಹೊಸಹೊಸ ಕಾರ್ಯಕ್ರಮಗಳು ಸೇರಿಕೊಳ್ಳುತ್ತಿವೆ. ಜನಪ್ರಿಯ ಕನ್ನಡಿಗರ ಹೆಸರಿನಲ್ಲಿ ರಕ್ತದಾನ ಶಿಬಿರ, ಉಚಿತ ರಕ್ತದೊತ್ತಡ ಪರೀಕ್ಷೆ, ಆಟೋಟ ಪಂದ್ಯಗಳು ಇತ್ಯಾದಿ ನಡೆಯುತ್ತಿವೆ. ಕನ್ನಡೇತರ ಸಂಘಸಂಸ್ಥೆಗಳು ಪ್ರತ್ಯೇಕವಾಗಿ ದೀಪಾವಳಿಯನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿ ಆಯೋಜಿಸಿವೆ.
ಈ ಎರಡು ವಾರಾಂತ್ಯಗಳಲ್ಲಿ ಆಸ್ಟ್ರೇಲಿಯಾದ ವಿವಿಧ ರಾಜ್ಯಗಳಲ್ಲಿರುವ ಕನ್ನಡ ಸಂಘಗಳು ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬಗಳನ್ನು ತಮ್ಮದೇ ವಿಶೇಷ ಛಾಪಿನೊಂದಿಗೆ ಆಚರಿಸಲು ಸಜ್ಜಾಗಿವೆ. ಆಸ್ಟ್ರೇಲಿಯಾದ ಪೂರ್ವತೀರದ ಕ್ವೀನ್ಸ್‌ಲ್ಯಾಂಡ್, ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾ ರಾಜ್ಯಗಳ ರಾಜಧಾನಿಗಳಲ್ಲಿ ಈಗಾಗಲೇ ಸಂಭ್ರಮದ ವಾತಾವರಣವಿದೆ. ಇವತ್ತು ಸಿಡ್ನಿ ಕನ್ನಡ ಸಂಘವು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಜೊತೆಯಾಗಿ ಹಮ್ಮಿಕೊಂಡಿದೆ. ಸದಸ್ಯರು ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇರುತ್ತವೆ.
ನಾಳೆ ಭಾನುವಾರ ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡ್ ಮುಖೇನ ಬ್ರಿಸ್ಬೇನ್ ನಗರದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದಾಚರಣೆಯಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕರ್ನಾಟಕದಿಂದ ಆಹ್ವಾನಿತರಾಗಿ ಬರುವ ಹಾಡುಗಾರರಾದ ಶಶಿಕಲಾ ಸುನಿಲ್, ಚೇತನ್ ನಾಯಕ್ ನಮ್ಮನ್ನೆಲ್ಲಾ ರಂಜಿಸಲಿದ್ದಾರೆ. ಮುಂದಿನ ಶನಿವಾರ ಮೆಲ್ಬೋರ್ನ್ ಕನ್ನಡ ಸಂಘವು ತಮ್ಮ ವಿಶೇಷ ಕನ್ನಡ ಹಬ್ಬಕ್ಕೆ ಹೆಸರಾಂತ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರನ್ನು ಆಹ್ವಾನಿಸಿದೆ. ಅವರ ಜೊತೆಗೆ ಈ ವಾರ ತಮ್ಮ ಕ್ವೀನ್ಸ್‌ಲ್ಯಾಂಡ್ – ಬ್ರಿಸ್ಬೇನ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಮುಂದಿನ ವಾರ ಮೆಲ್ಬೋರ್ನ್‌ಗೆ ಬರುವ ಶಶಿಕಲಾ ಸುನಿಲ್, ಚೇತನ್ ನಾಯಕ್ ಇರುತ್ತಾರೆ.
ಹೊರನಾಡು ಕನ್ನಡ ಸಂಘಗಳಲ್ಲಿ ವರ್ಷಕ್ಕೆ ಎರಡು ಅಥವಾ ಮೂರು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸಿ ನಡೆಸುವುದು ಸಾಮಾನ್ಯವಾಗಿ ಬೆಳೆದುಬಂದಿರುವ ಪರಂಪರೆ. ಅವು ಯುಗಾದಿ ಹಬ್ಬ, ಗಣೇಶ ಹಬ್ಬ ಮತ್ತು ರಾಜ್ಯೋತ್ಸವ-ದೀಪಾವಳಿ ಹಬ್ಬಗಳು. ಇವನ್ನು ಆಯೋಜಿಸುವುದು ಸುಲಭದ ಮಾತಲ್ಲ. ಕನ್ನಡ ಸಂಘಗಳ ಚುನಾಯಿತ ಮಂಡಳಿ ಸದಸ್ಯರಲ್ಲಿ ಬಹುತೇಕರು ಪೂರ್ಣಾವಧಿ (ಫುಲ್ ಟೈಮ್) ನೌಕರರು. ಸಂಘವನ್ನು ನಡೆಸಲು, ಸುಸಜ್ಜಿತವಾಗಿ ಒಂದು ಕಾರ್ಯಕ್ರಮವನ್ನು ರೂಪಿಸಿ ಆಯೋಜಿಸಲು ಇವರು ತಮ್ಮ ಅಮೂಲ್ಯ ಸಮಯವನ್ನು ಸ್ವಇಚ್ಛೆಯಿಂದ ಕೊಟ್ಟು ಸ್ವಯಂಸೇವಕರಾಗಿ ಕೆಲಸ ಮಾಡಬೇಕು. ಒಂದು ವರ್ಷದ ಮೊದಲೇ ದಿನಾಂಕವನ್ನು ನಿಗದಿಪಡಿಸಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಗುರುತಿಸಿ ಅದನ್ನು ಮುಂಗಡವಾಗಿ ಕಾದಿರಿಸಬೇಕು. ಅತಿಥಿಗಳನ್ನು ಕರ್ನಾಟಕದಿಂದ ಆಹ್ವಾನಿಸಬೇಕೆಂದರೆ ಅವರನ್ನು ಒಪ್ಪಿಸಿ, ಆಸ್ಟ್ರೇಲಿಯಾಕ್ಕೆ ಬರಲು ಅವರ ವೀಸಾಗಳನ್ನು ಏರ್ಪಡಿಸಬೇಕು. ಜೊತೆಗೆ ಆ ಕುರಿತು ಸರಕಾರದ ಜೊತೆ ಮಾತುಕತೆ ನಡೆಸಬೇಕಾಗುತ್ತದೆ. ಅಂತಹ ವಿಶೇಷ ಆಹ್ವಾನಿತ ಅತಿಥಿಗಳ ವಿಮಾನ ಪ್ರಯಾಣದ ಶುಲ್ಕವನ್ನು ಭರಿಸಬೇಕು. ಆಸ್ಟ್ರೇಲಿಯಾದಲ್ಲಿ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಇದನ್ನೆಲ್ಲಾ ಭರಿಸಲು ಸಂಘದಲ್ಲಿ ಸಾಕಷ್ಟು ಹಣಕಾಸಿನ ಲಭ್ಯತೆಯಿರಬೇಕು. ಒಂದಿಷ್ಟು ರಾಜ್ಯಸರ್ಕಾರದ ಅನುದಾನವಿದ್ದರೂ ಅದು ಸಾಕಾಗುವುದಿಲ್ಲ. ಸಂಘದವರು ಒಂದು ವೇಳೆ ತಮ್ಮ ಬಜೆಟ್ಟಿನಲ್ಲಿ ಕಡಿಮೆ ಬಿತ್ತೆಂದರೆ ಜನರು ಕಾರ್ಯಕ್ರಮಕ್ಕೆ ಬರಲು ಒಂದು ಎಂಟ್ರಿ ಫೀಸ್ ಇಡಬೇಕಾಗುತ್ತದೆ. ಇದು ಜಾಸ್ತಿಯಾದರೆ ಜನರು ಬರುವುದಿಲ್ಲ. ಕಡಿಮೆಯಾದರೆ ಸಂಘಕ್ಕೆ ಲುಕ್ಸಾನು. ಹೇಳಿಕೇಳಿ ಬ್ರಿಸ್ಬೇನ್ ಸುತ್ತಮುತ್ತ ವಾಸಿಸುವ ಕನ್ನಡಿಗರ ಸಂಖ್ಯೆ ಸಾವಿರಕ್ಕೂ ಹೆಚ್ಚೇನಿಲ್ಲ. ಲಾಭ-ನಷ್ಟ ಎರಡನ್ನೂ ಗಮನವಿಟ್ಟು ತೂಗಿಸುತ್ತಾ ಕಾರ್ಯಕ್ರಮಕ್ಕೆ ಪ್ರಚಾರ ಕೊಟ್ಟು ಸದಸ್ಯರ ಮನವೊಲಿಸಬೇಕು. ಅವರು ಬರುವಂತೆ ಮಾಡಲು ರುಚಿಯಾದ ಊಟ, ಸದಸ್ಯರೇ ಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬೇಕು. ಆಸ್ಟ್ರೇಲಿಯಾದ ನವೆಂಬರ್ ತಿಂಗಳ ಸೆಕೆಯಲ್ಲಿ ಬೆವರಿಳಿಸುತ್ತಾ ಇಷ್ಟೆಲ್ಲಾ ಮಾಡಿಮುಗಿಸಿ ನಂತರ ಕಾರ್ಯಕ್ರಮ ಹೇಗಿತ್ತು ಎಂದು ಸದಸ್ಯರನ್ನು ಕೇಳಿ ಸರ್ವೇ ನಡೆಸಿ ಅದರಲ್ಲಿ ಅವರು ದಾಖಲಿಸುವ ಆಕ್ಷೇಪಣೆ, ಗೊಣಗಾಟವನ್ನೂ ಜೀರ್ಣಿಸಿಕೊಳ್ಳಬೇಕು. ಎಲ್ಲದರ ನಡುವೆ ‘ಇದು ನಮ್ಮ ಕನ್ನಡಕ್ಕಾಗಿ, ತಾಯ್ನಾಡಿಗೆ ಸಲ್ಲಿಸುವ ಅಳಿಲುಸೇವೆ’ ಎನ್ನುವುದನ್ನು ಜ್ಞಾಪಿಸಿಕೊಳ್ಳಲು ಮರೆಯಬಾರದು.
ನವೆಂಬರ್ ತಿಂಗಳಲ್ಲಿ ಡಾ. ಡಿ.ಎಸ್. ಕರ್ಕಿ ಅವರ ಕವಿನುಡಿ ‘ಹಚ್ಚೇವು ಕನ್ನಡದ ದೀಪ’ ಎನ್ನುವುದು, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಎನ್ನುವ ಕರೆ ಎಲ್ಲೆಲ್ಲೂ ಪ್ರತಿಧ್ವನಿಸುತ್ತದೆ. ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಕೇಳುವುದು ಹಿತವಾಗುತ್ತದೆ. ಆದರೆ ಕನ್ನಡದಲ್ಲಿ ಮಾತನಾಡುತ್ತಿರುವುದು ಕರ್ನಾಟಕದಿಂದ ವಲಸೆ ಬಂದ ಮೊದಲ ಜನರೇಶನ್ ಕನ್ನಡಿಗರು ಎನ್ನುವುದು ನಿಚ್ಚಳವಾಗಿ ಕಾಣುತ್ತದೆ.
ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಹೀಗಿರುವಾಗ, ಅಪ್ಪಟ ಕನ್ನಡಿಗರು ಆಗಾಗ ನನ್ನನ್ನು, ನನ್ನ ಬ್ರಿಟಿಷ್ ಗಂಡನನ್ನು ನೋಡಿ ‘ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿದ್ದೀರಾ’ ಎಂದು ಕೇಳುತ್ತಾರೆ. ನಮ್ಮನೆಯಲ್ಲಿ ಮಾತನಾಡುವುದು ಇಂಗ್ಲಿಷ್ ಭಾಷೆಯಾದರೂ ನನ್ನ ಮಕ್ಕಳಿಗೆ ಕನ್ನಡ ಅರ್ಥವಾಗುತ್ತದೆ, ಎಂದರೆ, ‘ಯಾಕೆ ಕಲಿಸಿಲ್ಲ, ಅಯ್ಯೋ ಕನ್ನಡಾನೇ ಬರಲ್ವಾ’ ಎಂದು ರಾಗ ಎಳೆಯುತ್ತಾರೆ. ‘ಅಲ್ರೀ, ನೀವಿಬ್ರು ಅಪ್ಪ-ಅಮ್ಮ ಕನ್ನಡಿಗರೇ ಆಗಿದ್ರೂವೆ ಅದ್ಯಾಕೆ ನಿಮ್ಮ ಮಕ್ಕಳು ಕನ್ನಡದಲ್ಲಿ ಮಾತಾಡಲ್ಲಾ’ ಎಂದು ನಾನು ಕೇಳಿದರೆ ‘ಅಯ್ಯೋ ಇಲ್ಲಿ ಎಲ್ರೂ ಇಂಗ್ಲೀಷೇ ಮಾತಾಡೋದು ಅಲ್ವಾ, ನಾವು ಅಡ್ಜಸ್ಟ್ ಮಾಡ್ಕೋಬೇಕು. ಬ್ಯಾಂಗಲೂರ್‌ನಲ್ಲೇ ಯಾರೂ ಕನ್ನಡ ಮಾತಾಡಲ್ಲ. ಆಸ್ಟ್ರೇಲಿಯಾದಲ್ಲಿ ಇದೀವಲ್ಲ, ಆಸ್ಟ್ರೇಲಿಯನ್ ಥರ ಇರ್ಬೇಕು. ಇಲ್ಲಾಂದ್ರೆ ಮಕ್ಕಳಿಗೆ ತೊಂದ್ರೆಯಾಗತ್ತೆ’ ಎಂದು ದುಃಖಿಸುತ್ತಾರೆ. ಕರುನಾಡು ಕನ್ನಡದ ಬೇರು ಇರುವ ಅವರ ಕಂದಮ್ಮಗಳೇ ಇಂಗ್ಲೀಷ್-ಮಯವಾದಾಗ ಮತ್ಯಾಕೆ ಇವ್ರು ಎದ್ದುಬಿದ್ದು ಬಂದು ನನ್ನನ್ನು ಪ್ರಶ್ನಿಸಬೇಕು ಎಂದೆನಿಸಿ ಅವರ ಕದನ-ಕುತೂಹಲದ ಬಗ್ಗೆ, ಕನ್ನಡಪರ ರಾಯಭಾರಿತನದ ಬಗ್ಗೆ ಮರುಕವಾಗುತ್ತದೆ.
ಆಗ ನವೆಂಬರ್ ತಿಂಗಳಲ್ಲಿ ಜ್ವಲಿಸುವ ಕನ್ನಡ ದೀಪ ನಗುತ್ತದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಡಾ. ವಿನತೆಯವರಿಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಅನುರಾಧ, ನಿಮಗೂ ಕೂಡ ಕನ್ನಡ/ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.