ನನ್ನ ಜಗತ್ತಿನ ಸಕಲ ಮಕ್ಕಳು
ಒಂದು ದಿನ ಅವರೆಲ್ಲ ಕಲೆಯುತ್ತಾರೆ
ಮತ್ತು ಜತೆಗೂಡಿ ಆಟವಾಡುತ್ತಾರೆ
ಸ್ವಚ್ಛಸುಂದರ ಗೋಡೆಗಳ ಮೇಲೆ
ಪೆನ್ಸಿಲಿನಿಂದ ಗೀಚುತ್ತಾರೆ
ಅವರು ನಾಯಿಗಳ ಜೊತೆ ಮಾತಾಡುತ್ತಾರೆ
ಕುರಿಗಳ ಜತೆಯೂ
ಹಸಿರು ಹಾತೆಗಳ ಜತೆ
ಇರುವೆ ಜೊತೆ ಸಹ
ಅವರು ಓಡುತ್ತಾರೆ ಎಣೆಯಿಲ್ಲದೆ
ಗಾಳಿ ಬಿಸಿಲುಗಳ ನಿರಂತರ ನಿಗಾದಲ್ಲಿ
ಹಾಗೂ ಅವರ ಕಾಲಡಿ ನೆಲ
ತುಸು ತುಸುವೇ ವಿಸ್ತರಿಸುತ್ತಲಿರುತ್ತದೆ
ನೋಡುತ್ತಾ ಇರಿ !
ಒಂದು ದಿನ ಅವರು ನಿಮ್ಮ ಟ್ಯಾಂಕುಗಳಲ್ಲಿ ಮರಳು ತುಂಬುತ್ತಾರೆ, ಒಂದು ದಿನ
ನಿಮ್ಮ ಬಂದೂಕುಗಳನ್ನು ಆಳ ಗುಂಡಿ ತೋಡಿ ಹೂಳುತ್ತಾರೆ
ರಸ್ತೆಯಲ್ಲಿ ಹೊಂಡ ಮಾಡಿ ನೀರು ತುಂಬುತ್ತಾರೆ
ಅದರಲ್ಲಿ ಪುಟ-ಪುಟ ಜಿಗಿಯುತ್ತ ಸಾಗುತ್ತಾರೆ
ನೋಡುತ್ತಾ ಇರಿ ನೀವು !
ಯಾರು ಯಾರನ್ನ ದ್ವೇಷಿಸಲು ಕಲಿಸಿದ್ದೇವೋ
ಅವರೆಲ್ಲರನ್ನ ಪ್ರೀತಿಸುತ್ತಾರೆ
ನಿಮ್ಮ ಗೋಡೆಗಳಲ್ಲಿ
ತೂತು ಮಾಡಿ ಅಲ್ಲಿಲ್ಲಿ ಎಲ್ಲ
ನೋಡಲು ತೊಡಗುತ್ತಾರೆ
ಹೀಗೇ ಸಹಜ ಕೂಗುತ್ತಾರೆ
ಮತ್ತು ಹೇಳಲಿದ್ದಾರೆ
“ಅರೆ, ಅಲ್ಲಿಯೂ ಹವಾಮಾನ ಇಲ್ಲಿಯ ಹಾಗೆಯೇ ಇದೆಯಲ್ಲ”
ಅವರು ತಮ್ಮ ಕೆನ್ನೆಯ ಮೇಲೆ
ಗಾಳಿ ಬಿಸಿಲುಗಳ ಸ್ಪರ್ಶ ಬಯಸುತ್ತಾರೆ
ಮತ್ತು ನೀವು ಆ ದಿನ
ಅವರನ್ನು ತಡೆಯಲಾರಿರಿ
ಒಂದು ದಿನ ನಿಮ್ಮ ಸುರಕ್ಷಿತ ಮನೆಯಿಂದ
ಹೊರಟು ಬಿಡುತ್ತಾರೆ ಮಕ್ಕಳು
ಮರಗಳಲ್ಲಿ ಗೂಡು ಕಟ್ಟುತ್ತಾರೆ
ಅವರಿಗೆ ನಳನಳಿಸುವ ಹಸಿರು ತುಂಬಾ ಹಿಡಿಸುತ್ತದೆ
ಅದರ ನಡುವೆಯೇ ಬೆಳೆಯ ಬಯಸುತ್ತಾರೆ
ನೀವು ನೋಡುತ್ತಾ ಇರುವಿರಿ
ಅವರು ಎಲ್ಲವನ್ನೂ ಹಿಂದುಮುಂದು ಮಾಡಿ
ಮತ್ತಷ್ಟು ಸುಂದರವಾಗಿಸಲಿದ್ದಾರೆ
ಒಂದು ದಿನ
ನನ್ನ ಜಗದ ಎಲ್ಲ ಮಕ್ಕಳು
ಇರುವೆ, ಕ್ರಿಮಿ,
ನದಿ, ಗುಡ್ಡ, ಸಮುದ್ರ
ಮತ್ತು ಎಲ್ಲ ಜೀವರಾಶಿಯ ಜೊತೆಗೂಡಿ
ಮುಗಿಬೀಳಲಿದ್ದಾರೆ
ಮತ್ತು
ನೀವು ಮಾಡಿರುವ ಪ್ರತಿಯೊಂದನ್ನೂ
ಆಟಿಗೆಯ ಸಾಮಾನು ಮಾಡಲಿದ್ದಾರೆ
ಕವಿ ಪರಿಚಯ:
ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ
(ಚಿತ್ರ: ಪ್ಯಾಬ್ಲೋ ಪಿಕಾಸೋ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಮಿಥ್ಯಾವಾಸ್ತವವೆನಿಸುವಂತೆ ಆರಂಭವಾಗುತ್ತ ಪದ ಪದವೂ ಆಕರ್ಷಕ ಹೆಣಿಕೆಯಿಂದ ನೂಲುಟ್ಟುವ ಹೊದಿಕೆಯಂತೆ ಎದೆ ತುಂಬ ಹೊದ್ದು ಮಲಗುವ ಆಸೆ ಹುಟ್ಟಿಸುತ್ತದೆ,ಈ ಕವಿತೆ.