ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ. ಈ ಕೆಂಪು ಬಣ್ಣದ ವಿಸ್ತಾರವನ್ನು ನಾವು ಅರಗಿಸಿಕೊಳ್ಳುತ್ತಿದ್ದಂತೆ ಅವಳ ಮನೆಯ ಗೋಡೆಗಳಲ್ಲಿ ನಾಲ್ಕಾರು ಬಣ್ಣಗಳಿಂದ ಮನಸ್ಸು ಬಂದಂತೆ ಮೆತ್ತಿರುವುದು ನಮಗೆದುರಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಇಂಗ್ಲೆಂಡ್‌ನ ʻವಿ ನೀಡ್ ಟು ಟಾಕ್ ಅಬೌಟ್ ಕೆವಿನ್ʼ ಸಿನಿಮಾದ ವಿಶ್ಲೇಷಣೆ
ಸಾಮಾನ್ಯವಾದ ದಂಪತಿಗಳಿಗೆ ಸಾಮಾನ್ಯ ಎನಿಸುವ ಮಗು ಹುಟ್ಟದಿದ್ದರೆ ಹೇಗೆ? ಮಗು ಬೆಳೆದಂತೆ ತಾನು ಕಂಡಿರದ ರೀತಿಯ ಬಾಲ್ಯಾವಸ್ಥೆಯಲ್ಲಿ ಮಗು ವರ್ತಿಸಲು ತೊಡಗಿದರೆ ಅದರ ತಾಯಿಗೆ ಉಂಟಾಗುವ ಪರಿತಾಪಗಳೇನು? ಹಗಲಿರುಳು ತನ್ನೊಂದಿಗಿರುವ ಮಗು ಕಲ್ಪಿಸಿಕೊಳ್ಳಲು ಸಾಧ್ಯವಾಗದ ಅಸಹಜ ರೀತಿಯ ಸಂಬಂಧದ ಎಳೆಗಳನ್ನು ಕೊಂಡಿ ಹಾಕಿದರೆ ಅವಳು ಸಹಿಸಿಕೊಳ್ಳುವುದು ಹೇಗೆ? ಸಾಮಾನ್ಯ ತಾಯಿ-ಮಗುವಿನ ಸಂಬಂಧವೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಒದ್ದಾಡುವ ತಾಯಿ ಹೇಗೆ ತಾನೆ ಸಮಾಧಾನದಿಂದಿರಲು ಸಾಧ್ಯ? ತನ್ನೊಳಗಿನ ಹೊಯ್ದಾಟವನ್ನು ಮರೆತು ಹೇಗಾದರೂ ಸರಿಯೇ ತನ್ನದೇ ಆದ ಮಗುವನ್ನು ಒಲಿಸಿಕೊಳ್ಳಲು ಪ್ರಯತ್ನಗಳೆಲ್ಲವೂ ಹುಸಿಯಾದರೆ ಹೇಗೆ? ವರ್ಷಗಳು ಕಳೆದಂತೆ ತನ್ನ ಪ್ರಯತ್ನದಲ್ಲಿ ಏನಾದರೂ ಬದಲಾವಣೆ ಆಗುವುದೇ ಎಂದು ಹಂಬಲಿಸುವ ತಾಯಿಯ ನಿರೀಕ್ಷೆ ಸಂಪೂರ್ಣ ಹುಸಿಯಾದರೆ ಅವಳು ಸಹಾಯಕ್ಕಾಗಿ ಯಾರನ್ನು ಕೇಳಬೇಕು? ಮಗುವಿನ ತಂದೆಯಿಂದಲೂ ಉತ್ತರ ಸಿಗುವುದು ದೂರವಾದರೆ ಅವಳು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವುದು ಹೇಗೆ? ಇವು ಮತ್ತು ಇವುಗಳಿಗೆ ಅಂಟಿದ ಇನ್ನೂ ಹಲವು ಪ್ರಶ್ನೆಗಳನ್ನು ಕುರಿತು ತನ್ನದೇ ಆದ ವಿಶಿಷ್ಟ ಬಗೆಯಲ್ಲಿ ನಿರೂಪಿಸುವ ಲಿನ್ ರಾಮ್ಸೆ ನಿರ್ದೇಶನದ 2011ರ ಚಿತ್ರ ʻವಿ ನೀಡ್ ಟು ಅಬೌಟ್ ಕೆವಿನ್ʼ.
1969ರಲ್ಲಿ ಸ್ಕಾಟ್‌ಲ್ಯಾಂಡ್‌ನಲ್ಲಿ ಜನಿಸಿದ ಲಿನ್ ರ‍್ಯಾಮ್ಸೆ ಯುಕೆಯಲ್ಲಿನ ನ್ಯಾಷನಲ್ ಫಿಲ್ಮ್ ಅಂಡ್ ಟೆಲಿವಿಷನ್ ವಿದ್ಯಾಲಯಲ್ಲಿ ಅಭ್ಯಾಸ ಮಾಡಿ ಪದವಿ ಗಳಿಸಿದಳು. ಆಕೆಯ ಇತರ ಪ್ರಖ್ಯಾನ ಚಿತ್ರಗಳೆಂದರೆ `ರ‍್ಯಾಟ್ ಕ್ಯಾಚರ್’(1999) ಮತ್ತು `ಯು ವರ್ ನೆವರ್ ರಿಯಲಿ ಹಿಯರ್’(2017). ಅವಳ ಚಿತ್ರಗಳಲ್ಲಿ ನೇರ ಕಾಲಾನುಕ್ರಮವಿರುವುದಿಲ್ಲ. ಪಾತ್ರದ ಮಾನಸಿಕ ತುಮುಲ, ತಲ್ಲಣಗಳನ್ನು ನಿರೂಪಿಸಲು ರೂಪಕಗಳನ್ನು ಬಳಸುತ್ತಾಳೆ. ಲೋಕ ಸಿನಿಮಾ ಮಹಿಳಾ ನಿರ್ದೇಶಕಿಯರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವಾಕೆ. ಕಾನ್ ಮತ್ತು ವೆನಿಸ್ ಚಿತ್ರೋತ್ಸವಗಳಲ್ಲಿ ಜ್ಯೂರಿ ಮಂಡಳಿಯ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾಳೆ.
ಚಿತ್ರ ಹಲವು ರೀತಿಯ ಹಿಂಸೆಯನ್ನು ಒಳಗೊಂಡದ್ದು. ಅಷ್ಟೇ ಅಲ್ಲ ನೋಡುವವರಿಗೂ ಕೂಡ ಹಿಂಸೆಯೇ. ಚಿತ್ರದ ನಿರೂಪಣೆಯ ವಿಧಾನದಲ್ಲಿ ಯಾವ ಬಗೆಯ ಕಾಲಾನುಕ್ರಮವನ್ನು ನಿರ್ದೇಶಕಿ ಅನುಸರಿಸುವುದಿಲ್ಲ. ಹೀಗಾಗಿ ಚಿತ್ರದ ಪ್ರಾರಂಭ ಅಂತ್ಯ ಎನ್ನುವುದು ಮುಖ್ಯವಾಗುವುದಿಲ್ಲ. ಇಡೀ ಚಿತ್ರದಲ್ಲಿ ತಾಯಿಯಾದ ಟಿಲ್ಡ ಸ್ವಿಂಟನ್ನಳದೇ ಮುಖ್ಯ ಪಾತ್ರ. ಅವಳು ಅನುಭವಿಸುವ ತೊಳಲಾಟ, ತಲ್ಲಣಗಳನ್ನು ರೂಪಕಗಳ ಸರಮಾಲೆಯನ್ನು ಚಿತ್ರದುದ್ದಕ್ಕೂ ಪ್ರಸ್ತುತಪಡಿಸಲಾಗಿದೆ. ಅವೇ ರೂಪಕಗಳೇ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಉಂಟು.
ಚಿತ್ರ ಪ್ರಾರಂಭವಾಗುವುದು ಕೆಲವು ಸೆಕೆಂಡುಗಳ ಅವಧಿಯ ರೂಪಕಗಳಿಂದ. ಸುಮ್ಮನೆ ಸುತ್ತುವ, ಅತ್ತಿತ್ತ ಚಲಿಸುವ ಚಿತ್ರಿಕೆಗಳು ನಮಗೆದುರಾಗುತ್ತವೆ. ಒತ್ತಡಕ್ಕೆ ಒಳಗಾಗಿರುವ ಮನಸ್ಸೊಂದರ ಅಸ್ಥಿರ ನೆಲೆಗಳನ್ನು ತೆರೆದಿಡುವ ರೀತಿಯೆಂದು ತೋರುತ್ತಿದ್ದಂತೆಯೇ ಚಿತ್ರದ ಅಡಿಪಾಯ ಎನ್ನಿಸುವ ಕೆಂಪು ಬಣ್ಣದ ಹರಹನ್ನು ರೂಪಕದಲ್ಲಿ ಮುಂದಿಡುತ್ತಾಳೆ ನಿರ್ದೇಶಕಿ. ವಿಚಿತ್ರವಾದ ಆಟ ಎನ್ನಬಹುದು ಸುಮಾರು ನೂರಕ್ಕೂ ಹೆಚ್ಚು ಅರೆಬೆತ್ತಲಾದ ಜನರು ಟೊಮ್ಯಾಟೋದ ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತ ಸುಖಿಸುವ ಚಿತ್ರಿಕೆ ಕಾಣಿಸುತ್ತದೆ. ಅಷ್ಟು ಜನರ ಪಾಲ್ಗೊಳ್ಳುವಿಕೆಯನ್ನು ಎತ್ತರದಿಂದ ಚಿತ್ರೀಕರಿಸಲಾಗಿದೆ. ಅದರಲ್ಲಿ ಕೇವಲ ಮನುಷ್ಯರ ತಲೆಗಳಷ್ಟನ್ನೇ ನೋಡುತ್ತೇವೆ. ಈ ಚಿತ್ರಿಕೆ ಮುಂದಿನ ವಿಶೇಷತೆಗೆ ನಮ್ಮನ್ನು ಅಣಿಗೊಳಿಸುತ್ತದೆ. ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ. ಈ ಕೆಂಪು ಬಣ್ಣದ ವಿಸ್ತಾರವನ್ನು ನಾವು ಅರಗಿಸಿಕೊಳ್ಳುತ್ತಿದ್ದಂತೆ ಅವಳ ಮನೆಯ ಗೋಡೆಗಳಲ್ಲಿ ನಾಲ್ಕಾರು ಬಣ್ಣಗಳಿಂದ ಮನಸ್ಸು ಬಂದಂತೆ ಮೆತ್ತಿರುವುದು ನಮಗೆದುರಾಗುತ್ತದೆ. ಅವಳು ಅದನ್ನು ಬ್ರಶ್‌ನಿಂದ ಉಜ್ಜಿ ಅಳಿಸುವುದಕ್ಕೆ ಪ್ರಯತ್ನಿಸುತ್ತಾಳೆ. ಇದು ಅವಳು ಹಿಂಸೆಯನ್ನು ಸಹಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನವನ್ನು ಬಿಂಬಿಸುವ ನಿರೂಪಣೆ. ಆದರೆ ಹೀಗೆ ಬಣ್ಣಗಳು ಎರಚಿದ ಮನೆಯೊಳಗಿನ ಗೋಡೆ, ಮನೆ ಮುಂದಿರುವ ಗೋಡೆಗಳು, ಅಷ್ಟೇಕೆ ಕಾರಿನ ಗ್ಲಾಸ್‌ಗಳಿಗೂ ಕೆಂಪು ರಸ ಮೆತ್ತಿಕೊಂಡಿರುತ್ತದೆ. ಅವಳದು ಮತ್ತೆ ಅದೇ ಪ್ರಯತ್ನ- ಹೇಗಾದರೂ ಆ ಕೆಂಪು ಬಣ್ಣವನ್ನು ಇಲ್ಲವಾಗಿಸುವ ಸಲುವಾಗಿ.
ಚಿತ್ರದಲ್ಲಿ ಟಿಲ್ಡಾಳಿಗೆ ಮಗುವಾಗುವುದಿರಲಿ ಗರ್ಭಿಣಿಯಾಗುವುದೂ ಇಷ್ಟವಾದಂತೆ ತೋರುವುದಿಲ್ಲ. ನಾಲ್ಕಾರು ಗರ್ಭಿಣಿಯರು ಇರುವ ಸ್ಥಳಕ್ಕೆ ಹೋದಾಗ ಅವರೆಲ್ಲರೂ ತಮ್ಮ ಸ್ಥಿತಿಗೆ ಹಸನ್ಮುಖರಾಗಿದ್ದರೆ ಟಿಲ್ಡಾ ತಾನದನ್ನು ಬಯಸಿರಲಿಲ್ಲ ಎನ್ನುವಂತೆ ಬಿಗಿದ ಮುಖದಿಂದ ಇರುತ್ತಾಳೆ. ಅನಂತರ ಮಗುವಿನೊಡನೆ ಮನೆಯಲ್ಲಿ ಇರುವಾಗ ಗಂಡ ಜಾನ್ ಸಿ ರಿಲಿ(ಫ್ರಾಂಕ್ಲನ್) ಜೊತೆ ಒಂದಷ್ಟು ಸಮಾಧಾನದಿಂದ ಇರುವಂತೆ ಕಂಡರೂ ನಗುಮುಖ ಅಪರೂಪ. ಮಗು ಬೆಳೆದಂತೆ ತಾಯಿಯ ಜೊತೆ ಸಹಕರಿಸುವುದಿಲ್ಲ.
ಮಗು ಬೆಳೆದು ಮೂರ್ನಾಲ್ಕು ವರ್ಷದವನಾಗುತ್ತಾನೆ. ಎಜ್ರಾ ಮಿಲ್ಲರ್ ಎನಿಸಿಕೊಳ್ಳುವ ಅವನು ತಾಯಿಯ ಕಡೆ ಯಾವಾಗಲೂ ಸಿಡುಕಿನ ನೋಟ. ಏನು ಹೇಳಿದರೂ ಕೇಳಿಸಿಕೊಳ್ಳದ ಸ್ವಭಾವ. ಅವಳು ತಿನ್ನುವುದಕ್ಕೆ ಬ್ರೆಡ್, ಜಾಮ್ ಕೊಟ್ಟರೆ ದೂರ ಎಸೆಯುತ್ತಾನೆ. ಅವಳ ಸಮಸ್ಯೆ ಈ ಬಗೆಯ ವೈಪರೀತ್ಯದಿಂದ ಕೂಡಿರುತ್ತದೆ. ತನ್ನದೇ ಏನಾದರೂ ತಪ್ಪಿದೆಯೇ? ಅಲ್ಲವಾದರೆ ಏನು ಎಂಬ ಗೊಂದಲ. ಇವೆಲ್ಲ ಒಗ್ಗೂಡಿ ಅವಳ ಅಂತರಂಗದಲ್ಲಿ ತಲ್ಲಣದ ಉಬ್ಬರಗಳು ಹರಿದಾಡುತ್ತವೆ. ಹೀಗಾದಾಗ ಅವಳಿಗೆ ಸಮಾಧಾನ ದೊರಕುವ, ತುಮುಲಗಳನ್ನು ಹತೋಟಿಗೆ ತರುವ ಯಾವ ಮಾರ್ಗವೂ ತೋಚುವುದಿಲ್ಲ. ನಿರ್ದೇಶಕಿ ಯಾವ ಸೂಚನೆಯನ್ನೂ ಕೊಡದೆ ಉಂಟುಮಾಡುವ ಬೆಳವಣಿಗೆಯೆಂದರೆ ಮಗು ಎಜ್ರಾ ತಂದೆಯ ಜೊತೆ ಎಲ್ಲ ಮಕ್ಕಳಂತೆ ವರ್ತಿಸುತ್ತದೆ. ಅದಕ್ಕೆ ತಕ್ಕಂತೆ ತಂದೆಯ ಪ್ರತಿಕ್ರಿಯೆ ಕೂಡ. ಇದು ಸಾಕಷ್ಟು ಗೊಂದಲ ತರುವಂತಹುದೇ. ಇದರಿಂದ ಉಂಟಾಗುವ ಪರಿಣಾಮವೆಂದರೆ ಟಿಲ್ಡಾ ತನ್ನ ಆಫೀಸಿನವರಲ್ಲಿಯೂ ಕೂಡ ತನ್ನ ಭಾವನೆಯ ಪ್ರತಿಫಲನಗಳನ್ನು ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತಾಳೆ. ಅವರುಗಳು ಕೂಡ ಸಾಧಾರಣ ಮನುಷ್ಯರ ಹಾಗೆ ತೋರುವುದಿಲ್ಲ. ಇವೆಲ್ಲವೂ ಅಸಂಗತದ ರೂಪವೆನಿಸುತ್ತದೆ.
ಇಡೀ ಚಿತ್ರದಲ್ಲಿ ತಾಯಿಯಾದ ಟಿಲ್ಡ ಸ್ವಿಂಟನ್ನಳದೇ ಮುಖ್ಯ ಪಾತ್ರ. ಅವಳು ಅನುಭವಿಸುವ ತೊಳಲಾಟ, ತಲ್ಲಣಗಳನ್ನು ರೂಪಕಗಳ ಸರಮಾಲೆಯನ್ನು ಚಿತ್ರದುದ್ದಕ್ಕೂ ಪ್ರಸ್ತುತಪಡಿಸಲಾಗಿದೆ. ಅವೇ ರೂಪಕಗಳೇ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಉಂಟು.
ಎಜ್ರಾ ಬೆಳೆದು ಆರೆಂಟು ವರ್ಷದವನಾಗಿ ಜಾಸ್ಪರ್ ಎಂದು ಕರೆಸಿಕೊಳ್ಳುವ ಅವನು ಆ ಹೆಸರಿನಿಂದ ಕೂಗುವ ತಾಯಿಯ ಮಾತನ್ನು ಉಪೇಕ್ಷಿಸುತ್ತಾನೆ. ಅವಳನ್ನು ಕಣ್ಣಿಂದಲೇ ಇರಿಯುವಂತೆ ನೋಡುತ್ತಿರುತ್ತಾನೆ ಹೀಗೆ ಪ್ರತ್ಯೇಕ ಸಂದರ್ಭಗಳಲ್ಲಿ ಪರಸ್ಪರರನ್ನು ಒಳಗೊಂಡ ಸಣ್ಣ ಸಣ್ಣ ಕ್ರಿಯೆಗಳಲ್ಲಿ ಅವಳಿಗೆ ಯಾವಾಗಲೂ ಆಘಾತವೇ. ಹೀಗಾದಾಗ ಅವಳು ಅನ್ಯಮಾರ್ಗವಿಲ್ಲದೆ ತನ್ನನ್ನು ತಾನು ಹಿಂಸಿಸಿಕೊಳ್ಳುತ್ತಾಳೆ. ಹಿಂಸೆಗೆ ಒಳಗಾದ ಅವಳ ಮಾನಸಿಕ ನೆಲೆಯನ್ನು ರೂಪಿಸಲು ನಿರ್ದೇಶಕಿ ಮತ್ತೆ ಬಣ್ಣಗಳ ರೂಪಕಗಳನ್ನು ಬಳಸುತ್ತಾರೆ. ಇಡೀ ಚಿತ್ರ ಕಾಲಾನುಕ್ರಮದಲ್ಲಿ ಹಿಂದು ಮುಂದಾಗುವುದು ಅವಳ ಹಿಂಸೆಯ ಸ್ವರೂಪವನ್ನು ವಿವಿಧ ಬಗೆಗಳಲ್ಲಿ ನಿರೂಪಿಸುವ ಸಲುವಾಗಿ.
ಆ ದಂಪತಿಗಳಿರುವುದು ಸಾಮಾನ್ಯಕ್ಕಿಂತ ದೊಡ್ಡ ಮನೆ. ವರ್ಷಗಳು ಉರುಳಿದರೂ ಅದರಲ್ಲಿ ಯಾವ ಬದಲಾವಣೆಯೂ ಕಾಣಿಸುವುದಿಲ್ಲ. ಇದು ಟಿಲ್ಡಾಳ ಮಾನಸಿಕ ನೆಲೆ, ಮನೆಯಲ್ಲಿರುವವರ ಪರಸ್ಪರ ಸಂಬಂಧ ಬದಲಾವಣೆಗಳಿಲ್ಲದೆ ಅದೇ ರೀತಿಯಲ್ಲಿರುವುದನ್ನು ತೋರಿಸುತ್ತದೆ. ಟಿಲ್ಡಾಳಿಗೆ ಹಿಂಸೆಯಿಂದ ಬಿಡುಗಡೆ ಹೊಂದುವ ಸೂಚನೆಗಳಿಲ್ಲ ಮತ್ತು ಅವಳು ಎಲ್ಲಿ ಇದ್ದಳೋ ಹಾಗೆಯೇ ಮುಂದುವರಿದಿದ್ದಾಳೆ ಎನ್ನುವುದನ್ನು ಬಿಂಬಿಸುತ್ತದೆ. ಈ ಸನ್ನಿವೇಶದಲ್ಲಿ ನಮಗೆ ಕೆಲವು ಸಂದೇಹಗಳು ಉಂಟಾದರೆ ಆಶ್ಚರ್ಯವಿಲ್ಲ. ಆರೆಂಟು ವರ್ಷ ಜಾಸ್ಪರ್‌ಗೆ ಯಾರೂ ಸ್ನೇಹಿತರು ಯಾರೂ ಇರುವುದಿಲ್ಲವೇ? ಸಮಯ ಹೇಗೆ ಕಳೆಯುತ್ತಾನೆ? ಸ್ಕೂಲಿಗೆ ಹೋಗುತ್ತಾನೋ ಹೇಗೆ? ಅವನ ಹವ್ಯಾಸಗಳೇನು… ಇತ್ಯಾದಿಯ ಬಗ್ಗೆ ಯಾವ ಸೂಚನೆಯೂ ನಮಗೆ ಸಿಗುವುದಿಲ್ಲ. ಅಂದರೆ ಅವನು ತನ್ನ ಸಮಾನ ವಯಸ್ಕರೊಡನೆ ಸಂಪರ್ಕಿಸುವ ಅವಕಾಶದಿಂದ ವಂಚಿತರಾಗಿದ್ದಾನೋ ಹೇಗೆಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.
ಜಾಸ್ಪರ್ ಬೆಳೆದು ಹದಿನಾರು-ಹದಿನೆಂಟು ವರ್ಷದವಾಗಿ ರಾಕಿ ಡ್ವೆರ್ ಆಗುವುದು ಅವನ ಬೆಳವಣಿಗೆಯಲ್ಲಿ ಮೂರನೆಯ ಭಾಗ. ಈಗಿರುವ ಸಂಸಾರದಲ್ಲಿ ಧಿಡೀರನೆ ಹೆಣ್ಣುಮಗುವೊಂದು ಆಗಿರುವುದು ಗೊತ್ತಾಗುವುದು ಅವಳು ಎಳೆಯ ಮಗುವನ್ನು ಆಡಿಸುವಾಗ. ಮೊದಲನೆಯ ಮಗುವಿನಿಂದ ಈ ಮಟ್ಟಿನ ಬಾಧೆ ಪಡುತ್ತಿರುವ ಅವಳು ಇನ್ನೊಂದು ಮಗುವಿಗೆ ಅವಕಾಶ ಮಾಡಿಕೊಟ್ಟದ್ದು ಹೇಗೆ ತಿಳಿಯುವುದಿಲ್ಲ.
ಇದೇನಿದ್ದರೂ ರಾಕಿ ಮತ್ತು ತಂದೆ ರೀಲಿ ಅವರ ನಡುವಿನ ಸಂಬಂಧ ಕಳೆದ ವರ್ಷಗಳಂತೆಯೇ ಸಾಕಷ್ಟು ವಿಶ್ವಾಸ ಮತ್ತು ಪ್ರೀತಿಯಿಂದ ಸಹಜತೆಯಿಂದ ಕೂಡಿರುತ್ತದೆ. ಆದರೆ ತಾಯಿ ಟಿಲ್ಡಾಳ ವಿಷಯದಲ್ಲಿ ಮಾತ್ರ ಅವನು ಮೊದಲಿಗಿಂತ ಇನ್ನಷ್ಟು ಕ್ರೂರಿಯಾಗಿ ವ್ಯವಹರಿಸುತ್ತಾನೆ. ಇದೇನಿದ್ದರೂ ತಂಗಿಯ ಮೇಲೆ ಅವನು ಸಾಕಷ್ಟು ಪ್ರೀತಿ ತೋರಿಸುತ್ತಾನೆ. ತಾಯಿಯ ಜೊತೆ ಮಾತನಾಡುವುದಿರಲಿ ನೋಡುವುದೇ ಇರಿಯುವ ಹಾಗೆ: ಗಂಟಿಕ್ಕಿದ ಮುಖ ಭಾವದಿಂದ. ನೀಳಕಾಯದ ವಯಸ್ಸಿಗೆ ತಕ್ಕಹಾಗೆ ಆಕಾರವಿರುವ ರಾಕಿ ಮೊದಲಿನ ವರ್ಷಗಳಿಗಿಂತ ಚಟುವಟಿಕೆಯಿಂದ ಇರುತ್ತಾನೆ. ರೀಲಿ ಕೊಂಚ ವಯಸ್ಸಾದಂತೆ ಕಂಡರೂ ಟಿಲ್ಡಾಳಲ್ಲಿ ಮಾತ್ರ ಯಾವ ವ್ಯತ್ಯಾಸ ಕಾಣುವುದಿಲ್ಲ.
ಟಿಲ್ಡಾಳಿಗೆ ರಾಕಿಯಿಂದ ಇನ್ನಷ್ಟು ಮತ್ತಷ್ಟು ಹಿಂಸೆಗೆ ಒಳಗಾಗುವ ಸಣ್ಣಪುಟ್ಟ ಸಂದರ್ಭಗಳು ಮನೆಯಲ್ಲಿ ಉಂಟಾಗುತ್ತದೆ. ರಾಶಿಗೆ ತಾನು ನಡೆದುಕೊಳ್ಳುತ್ತಿರುವುದರ ಬಗ್ಗೆ ಕಿಂಚಿತ್ ಅರಿವಿರುವುದಿಲ್ಲ. ತಂದೆ ಮಗನ ನಡುವೆ ಸಂಬಂಧ ಏಕರೂಪದಲ್ಲಿರುತ್ತದೆ. ಅಷ್ಟೇಕೆ ಅದನ್ನು ಅದನ್ನು ಮೀರಿದ ಹಾಗೆ ಕಾಣುತ್ತದೆ ಇದಕ್ಕೆ ರೀಲೆ ಮಗನಿಗೆ ತಂದುಕೊಡುವ ಆರ್ಚರಿಗೆ ಸಂಬಂಧಪಟ್ಟ ಬಿಲ್ಲು ಮತ್ತು ಬಾಣಗಳು. ಆಗ ಸಾಮಾನ್ಯಕ್ಕಿಂತಲೂ ಮೀರಿ ಸಂತೋಷ ಪಡುವ ರಾಕಿಯನ್ನು ಕಾಣುತ್ತೇವೆ. ಅವನು ತನಗೆ ಉಂಟಾದ ಹರ್ಷವನ್ನು ತಂದೆಯ ಜೊತೆ ಹಂಚಿಕೊಂಡರೆ ತಾಯಿಯ ಜೊತೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಅಷ್ಟು ದೂರದಿಂದ ಅವಳಿಗೆ ಹೊಡೆದಂತೆ ಹೆದೆಯೇರಿಸಿ ಬಾಣ ಬಿಟ್ಟು ಗಾಬರಿಗೊಳಿಸುತ್ತಾನೆ. ಅಲ್ಲದೆ ಅವನು ಅದೆಷ್ಟೋ ದೂರ ಆರ್ಚರಿ ಆಟ ಆಡುವವರು ಮಾಡುವಂತೆ ದೂರಕ್ಕೆ ಗುರಿ ಇಡುವ ಅಭ್ಯಾಸ ಮಾಡುತ್ತಾನೆ. ಇವೆಲ್ಲಕ್ಕೂ ಅವನಿಗೆ ತಂದೆಯ ಬೆಂಬಲವಿರುತ್ತದೆ. ರೀಲೆ ಇದರಿಂದ ಖುಷಿ ಪಟ್ಟಿರುತ್ತಾನೆ. ಇದರ ಜೊತೆಗೆ ರಾಕಿ ಸ್ಕೂಲಿಗೆ ಹೋಗುತ್ತಿರುವುದೂ ಉಂಟು ಎಂದು ತಿಳಿಯುತ್ತದೆ.
ಕಾಲಾನುಕ್ರಮದಲ್ಲಿ ಹಿಂದೆ ಮುಂದೆ ಮಾಡುವ ನಿರೂಪಣೆಯಲ್ಲಿ ಟಿಲ್ಡಾಳೂ ಸೇರಿದಂತೆ ಹತ್ತಾರು ಜನ ಗಂಡಸರು-ಹೆಂಗಸರು ಅವಸರದಿಂದ ನುಗ್ಗಿ ಗಾಬರಿಯಿಂದ ನೋಡುತ್ತಿರುವ ಚಿತ್ರಿಕೆ ಒಂದೆರಡು ಬಾರಿ ನಮಗೆದುರಾಗುತ್ತದೆ. ಅದು ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ ಕೂಡ. ಇದಕ್ಕೆ ಪರಿಹಾರ ನಂತರದಲ್ಲಿ ಒದಗುತ್ತದೆ. ರಾಕಿ ತನ್ನ ಸ್ಕೂಲಿನಲ್ಲಿ ಆರ್ಚರಿಯಲ್ಲಿ ನೈಪುಣ್ಯ ತೋರಿಸುವಂತೆ ಆರೆಂಟು ಸಹಪಾಠಿಗಳನ್ನು ಕೊಂದಿರುತ್ತಾನೆ. ಅದರಿಂದ ಹರಿದು ಬಂದ ರಕ್ತ ಎಲ್ಲೆಲ್ಲೂ ಹರಡಿರುತ್ತದೆ. ವಿಷಯ ತಿಳಿದ ಪೋಲೀಸರು ಬಂದು ಸ್ಕೂಲಿನ ಮುಂಬಾಗಿಲು ಒಡೆದು ಕ್ರಮ ತೆಗೆದುಕೊಂಡ ಮೇಲೆ ಮಾಡಿದ ಕೊಲೆಗಳ ಬಗ್ಗೆ ಕಿಂಚಿತ್ ಪಶ್ಚಾತ್ತಾಪ ಇರದ ರಾಕಿಯನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ.
ಚಿತ್ರದ ಕಥನ ಒಂದು ಬಗೆಯ ಅಂತ್ಯ ಇರುವಂತೆ ತೋರಿದರೂ ನಿಜವಾಗಿ ಅಂತ್ಯ ಎನಿಸುವುದಿಲ್ಲ. ಟಿಲ್ಡಾಳ ಮಾನಸಿಕ ನೆಲೆ, ಅವಳಿಗೆ ಆವರಿಸಿದ ಹಿಂಸೆ ಮುಗಿಯದೆ, ಹಾಗೆಯೇ ಮುಂದುವರಿಯುವುದು ವ್ಯಕ್ತವಾಗುತ್ತದೆ. ಯಾವುದೇ ಬಗೆಯ ತೀವ್ರ ಸ್ವರೂಪದ ಹಿಂಸೆಗೆ ಪರಿಹಾರ ಲಭ್ಯವಾಗುವುದಿಲ್ಲ ಎನ್ನುವ ನಿರ್ದೇಶಕಿಯ ನಿಲುವನ್ನು ಚಿತ್ರ ತೆರೆದಿಡುತ್ತದೆ.
ಅವರ ಆಶಯಕ್ಕೆ ಅನುಗುಣವಾಗಿ ನಟರು ತಮ್ಮ ಪಾತ್ರಗಳನ್ನು ಯಶಸ್ವಿಯಾಗಿ ನಿರ್ಹಿವಹಿಸಿದ್ದರೂ ತಾಯಿಯ ಪಾತ್ರದಲ್ಲಿ ಟಿಲ್ಡಾ ಸ್ವಿಂಟನ್ ವಿಶೇಷವೆನಿಸುವುದು ನಿಜವೇ. ಅದರಂತೆಯೇ ಫೋಟೋಗ್ರಫಿಯ ಸೀಮಸ್ ಮಗ್ಗಾರ್ವೆ ಮತ್ತು ಸಂಕಲನಕಾರ ಜೋ ಬಿನಿ ಅವರ ಕೊಡುಗೆ ಕೂಡ ವಿಶೇಷ. ಚಿತ್ರಕ್ಕೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯೂ ಸೇರಿದಂತೆ ಮೂರು ಬಾಫ್ತಾ ಪ್ರಶಸ್ತಿಗಳು ಮತ್ತು ಇತರ ಇಪ್ಪತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.