ಇದ್ದಕ್ಕಿದ್ದಂತೆ ಎದುರಿದ್ದ ಅಗಾಧ ಜೀವಿ ಹತ್ತಿರಕ್ಕೆ ಬಂತು. ಎಷ್ಟು ಹತ್ತಿರಕ್ಕೆ ಎಂದರೆ ಅದು ಅವರಿಗೆ ಇಂದ್ರಿಯಗಳಿಗೆ ಗೋಚರವಾಗಿ, ಮನಸ್ಸಿನ ಅನುಭವವಾಗಿ ರೂಪಗೊಂಡಿತಂತೆ. ಅದನ್ನು ಮುಟ್ಟಬೇಕು ಎಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಅದರ ಮುಖ ಅವರ ದೇಹಕ್ಕೆ ಬಲು ಹತ್ತಿರದಲ್ಲಿತ್ತು. ತಿಮಿಂಗಿಲ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದು ಅವರಿಗೆ ಚೆನ್ನಾಗಿ ಅರಿವಾಯ್ತು. ಮೈ ಜುಮ್ಮ್ ಎಂದಿತ್ತು. ಬಲು ನಿಧಾನವಾಗಿ ಅದರೆಡೆಗೆ ತಮ್ಮ ಕೈ ಚಾಚಿದರಂತೆ. ಅಷ್ಟೇ ನಿಧಾನವಾಗಿ, ಬಲು ಸೂಕ್ಷ್ಮವಾಗಿ ತಿಮಿಂಗಿಲ ಇಷ್ಟೇ ಇಷ್ಟು ಹಿಂದಕ್ಕೆ ಸರಿಯಿತು. ನನ್ನನ್ನು ಮುಟ್ಟಬೇಡ ಎಂದವರಿಗೆ ಅದು ಹೇಳಿತ್ತು. ಅದರ ಒಂದು ಚಲನೆಯಲ್ಲಿ ಒಂದಿಷ್ಟೂ ಕೂಡ ಅಲುಗಾಟ, ಕುಲುಕಾಟವಿರಲಿಲ್ಲ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದೆಯೆಂದರೆ ಆಹಾ, ಬೆಳಗ್ಗೆ ಏಳುವಾಗ ಮೈಮುರಿದು ಆಕಳಿಸಿ ಜೀವನದೋಟದ ಗತಿಯನ್ನು ಮಂದ್ರಸ್ಥಾಯಿಯಲ್ಲಿ ಗುನುಗುವುದು. ಯಾಕೋ ಸುಶೀಲ ರಾಮನ್ ಅಯ್ಯಪ್ಪ ಸ್ವಾಮಿಯನ್ನ ನೆನೆಯುವ ತಮಿಳು ಭಾಷೆಯ ಹಾಡನ್ನು ಖವ್ವಾಲಿಯ ಸೂಫಿ ಭಕ್ತಿಯೊಂದಿಗೆ ಮೇಳೈಸಿ ಹಾಡುವುದ ಕೇಳಿ ಮಂದ್ರವೇ ಜೀವನದ ಮಂತ್ರ ಅನ್ನಿಸಿಬಿಟ್ಟಿತು.

ಆ ಮನಃಸ್ಥಿತಿಯಲ್ಲೇ ಇದ್ದು ಈಜಾಡುತ್ತಿರುವಾಗ ಇಹಲೋಕದ ವ್ಯಾಪಾರಗಳು ಕೈಜಗ್ಗಿ ಅಕ್ಕಪಕ್ಕದಲ್ಲಿ ಸಾಗುತ್ತಿರುವ ಎಲ್ಲರಂತೆ ಯಾವ ಸ್ಥಾಯಿಯೂ ಇಲ್ಲದ ನಿತ್ಯಜೀವನ ಲೋಕಕ್ಕೆ ಮರಳಿದ್ದಾಯ್ತು.

ಈ ದಿನಗಳಲ್ಲಿ ಒಂದು ವ್ಯತ್ಯಾಸವಿದೆ. ರಜಾದಿನಗಳ ಮಾತೇ ಮಾತಿನ ಗಮ್ಮತ್ತು. ಮೇರಿ ಕ್ರಿಸ್ಮಸ್ ಎಂದು ಮಾತು ಆರಂಭಿಸಿ Have a wonderful new year ಅಂತ ಆತ್ಮೀಯರು, ತಿಳಿದವರು, ಸುಮ್ಮನೆ ಮಾತಿಗೆ ಸಿಕ್ಕವರು ಎಲ್ಲರೂ ಹೇಳುತ್ತಲೇ ‘ರಜೆ ಕಳೆಯಲು ನಿಮ್ಮ ಕುಟುಂಬವೆಲ್ಲಾ ಏನು ಮಾಡುತ್ತೀರಿ, ಎಲ್ಲಾದರೂ ಚೆಂದನೆ ಸ್ಥಳಕ್ಕೆ ಹೋಗುವಿರಾ,’ ಎಂದು ವಿಚಾರಿಸುತ್ತಾರೆ. ಮಾತು ಬೆಳೆಯುತ್ತದೆ. ಒಬ್ಬರು ನ್ಯೂ ಯಾರ್ಕ್ ನಗರಕ್ಕೆ ಹೊರಟು ಅಲ್ಲಿ ತಾವು ನೋಡಲಿರುವ ಬಿಳಿ ಕ್ರಿಸ್ಮಸ್ ಕಿನ್ನರಲೋಕದ ಬಗ್ಗೆ ಕನಸು ಕಾಣುತ್ತಾ ಮಾತನಾಡಿದರೆ ಮತ್ತೊಬ್ಬರು ‘ಓಹ್, ಹತ್ತಿರವಿರುವ ಜಪಾನಿಗೆ ಹೋಗಿ ನೋಡಿ, ಅದೊಂದು ಅದ್ಭುತ ಲೋಕ,’ ಅನ್ನುತ್ತಾರೆ. ಅದಾಗಲೇ ಅಮೆರಿಕದಿಂದ ಮತ್ತು ಬ್ರಿಟನ್ನಿನಿಂದ ವಾಟ್ಸಪ್ಪಿನಲ್ಲಿ ಹರಿದುಬರುತ್ತಿರುವ ಚಳಿ, ಮಂಜು, ಹಿಮದ ಚಿತ್ರಗಳ ನೆನಪಾಗುತ್ತದೆ.

ದೂರದೂರಿನ ಬಿಳಿ ಕ್ರಿಸ್ಮಸ್ ಬಗ್ಗೆ ಕೇಳಿ ಮನೆಗೆ ಮರಳಿದರೆ ನನ್ನ ವಾಸ್ತವದ ಚಿತ್ರವೇ ಬೇರೆಯಾಗುತ್ತದೆ. ಸದ್ಯದಲ್ಲೇ ಹೋಗಲಿರುವ ದೊಡ್ಡ ಕ್ಯಾಂಪಿಂಗ್ ಪ್ರಯಾಣ, ಪ್ರವಾಸದ ಬಗ್ಗೆ ಎಡಬಿಡದ ಮಾತು. ಈ ವರ್ಷ ನಮ್ಮ ಕ್ಯಾಂಪಿಂಗ್ ಯೋಜನೆಯಲ್ಲಿ ಕೆಲ ಬದಲಾವಣೆಗಳಾಗಿರುವುದರಿಂದ ಎಲ್ಲರ ಅಗತ್ಯಗಳನ್ನು ಗಮನಿಸಿ ಸಿದ್ಧತೆ ನಡೆಸಬೇಕು ಎಂದು ಜೀಬಿ ಎಚ್ಚರಿಸುತ್ತಲೇ ಇದ್ದಾರೆ. ನಮ್ಮ ಮನೆಯ ಒಬ್ಬರಿಗೆ ಕಯಾಕ್ ಮತ್ತು ನದಿ ಎರಡೇ ಸಾಕಂತೆ. ಇನ್ನೊಬ್ಬರ ಹತ್ತಿರ ತಾನು ಹತ್ತುವಂಥ ಮರಗಳಿರಬೇಕು, ಬಿಸಿಲಿರಬಾರದು, ಫುಟ್ಬಾಲ್ ಆಡಲು ಸಾಕಷ್ಟು ಜಾಗವಿರಬೇಕು, ಚೆಸ್ ಬೋರ್ಡ್ ಮರೆಯಬೇಡಿ, ಮೀನು ಗಾಳ, snorkeling ಸೆಟ್ಟುಗಳನ್ನು ಕೂಡ ಪ್ಯಾಕ್ ಮಾಡುತ್ತೀರಾ ತಾನೇ, ಎಂಬೆಲ್ಲಾ ಉದ್ದನೆ ಪಟ್ಟಿಯಿದೆ. ಕನಿಷ್ಠ ಎರಡು ಟೆಂಟ್, ಕ್ಯಾಂಪಿಂಗ್ ಅಡುಗೆ ಮೇಜು, ಒಲೆ, ಕೂರಲು ಖುರ್ಚಿಗಳು … ಪ್ರತಿವರ್ಷ ಎಲ್ಲವನ್ನೂ ಪಟ್ಟಿ ಮಾಡುವುದು ಅಭ್ಯಾಸವಾಗಿದ್ದರೂ ಇಷ್ಟೆಲ್ಲಾ ಹಿಡಿಸುವಂತೆ ಕಾರಿನಲ್ಲಿ ಪ್ಯಾಕ್ ಮಾಡಬೇಕಲ್ಲಾ ಎಂದು ಅದೇ ಚಿಂತೆ ಮರಳುತ್ತದೆ. ಪ್ರಶ್ನೆಗಳ ದೊಡ್ಡ ಪಟ್ಟಿಯಿಟ್ಟುಕೊಂಡಿರುವಾತ ‘ಅಂದಹಾಗೆ ನಾವು ಹೋಗುತ್ತಿರುವ ಕ್ಯಾಂಪಿಂಗ್ ಸ್ಥಳ ಎಲ್ಲಿದೆ? ಸಮುದ್ರವೋ ಅಥವಾ ನದಿಯೋ? ಈ ಬಾರಿ ಡಾಲ್ಫಿನ್ ನೋಡುತ್ತೀವೋ ಅಥವಾ ತಿಮಿಂಗಿಲವನ್ನೋ?’ ಎಂದಾಗ ಸಂಭಾಷಣೆಗಳು ನಮಗಿಷ್ಟವಾದ ನದಿ, ಸಮುದ್ರದ ಭಾಷೆಯಾಗುತ್ತವೆ.

ಎಲ್ಲವನ್ನೂ ಪಕ್ಕಕ್ಕಿಟ್ಟು ಸಮುದ್ರಕ್ಕೆ ಹೋಗಿ ತಣ್ಣನೆ ನೀರಿನಲ್ಲಿ ಮಿಂದು ಅಲೆಗಳನ್ನು ಆನಂದಿಸೋಣ ಅನ್ನೋ ಯೋಚನೆ ಬರುತ್ತದೆ. ಪ್ರತಿದಿನವೂ ಸಮುದ್ರಕ್ಕೆ ಹೋದರೆ ಈ ಬಿಸಿಲು ಮತ್ತು ಸಮುದ್ರದ ಉಪ್ಪು ನೀರು, ಚರ್ಮದ ಮೇಲೆಲ್ಲಾ ಬೊಬ್ಬೆಯೆದ್ದು ನರಳಬೇಕಾಗುತ್ತದೆ, ನದಿಗೆ ಹೋಗುವುದೇ ಲೇಸು, ಎಂದು ನಮ್ಮ ಕಯಾಕ್ ಪಟುವಿನ ಗೊಣಗಾಟ.

ನೆರಳು-ತಂಪು, ಕಡಲು, ಡಾಲ್ಫಿನ್, ತಿಮಿಂಗಿಲ, ನದಿ ಎಲ್ಲವೂ ಬೇಕು. ದೂರದೂರಿನ ಬಿಳಿ ಕ್ರಿಸ್ಮಸ್ ರಜಾದಿನಗಳ ಪ್ರಸ್ತಾವನೆ ತನ್ನಂತೆ ತಾನೇ ಮಾಯವಾಗುತ್ತದೆ. ಈ ಡಿಸೆಂಬರಿನಲ್ಲಿ ಧಾರಾಳವಾಗಿರುವ ಮಾವಿನಹಣ್ಣಿನ ಮೇಲೆ ಉಪ್ಪು, ಸಿಹಿ, ಖಾರವೆಲ್ಲವನ್ನೂ ಸವರಿಕೊಂಡು ತಿನ್ನಲೆಂದು ಅಂಗಳಕ್ಕೆ ಬಂದು ಕೂತರೆ Humpbak Whales of the South West Pacific ಪುಸ್ತಕ ಕಾಣುತ್ತದೆ. ಇದೇನು ಕಾಕತಾಳಿಯವೋ ಎಂದೆನಿಸುತ್ತದೆ. ಅದರ ಲೇಖಕ ಗ್ಲೆನ್ ಎಡ್ನಿ (Glen Edney) ಎಂಬಾತ, ನ್ಯೂಝಿಲ್ಯಾಂಡ್ ದೇಶದವರು. ಎರಡು ತಿಂಗಳ ಹಿಂದೆ ಇಲ್ಲೇ ನಮ್ಮ ಬ್ರಿಸ್ಬನ್ ನಗರದಲ್ಲೇ ಅವರ ಕಿರು ಪರಿಚಯವಾಗಿ ಒಂದೆರೆಡು ಗಂಟೆಗಳ ಕಾಲ ಅವರೊಡನೆ ಮಾತಾನಾಡುವ ಸಂದರ್ಭ ಸಿಕ್ಕಿತ್ತು.

ಬೀಳ್ಕೊಡುವಾಗ ಆತ ತಮ್ಮೆರಡು ಪುಸ್ತಕಗಳನ್ನು ಕೊಟ್ಟಿದ್ದರು (ಇನ್ನೊಂದು ಪುಸ್ತಕ, The Ocean is Alive: Re-visioning our Relationship with the Living Ocean). ಗ್ಲೆನ್ ಒಬ್ಬ ನಿಷ್ಣಾತ ವೃತ್ತಿನಿರತ ಡೈವರ್, ಸೇಲರ್ ಮತ್ತು ಕಡಲಿನ ಪ್ರಕೃತಿತಜ್ಞ. ಹುಟ್ಟಿದ್ದು, ಬೆಳೆದಿದ್ದು, ಬದುಕುತ್ತಿರುವುದು ಎಲ್ಲವೂ ಕಡಲಿನ ತಟದಲ್ಲೇ. ಜೀವನೋಪಾಯಕ್ಕಾಗಿ ಡೈವಿಂಗ್ ಕೆಲಸ ಮತ್ತು ತಿಮಿಂಗಿಲಗಳನ್ನು ನೋಡಲು ಬರುವ ಪ್ರವಾಸಿಗಳ ಗೈಡ್, ಬೋಟ್ ಚಾಲಕ, ಕ್ಯಾಪ್ಟನ್ ಅನ್ನೋ ವಿವಿಧ ಅವತಾರಗಳನ್ನ ತಾಳುತ್ತಾರಂತೆ. ಆದರೆ ಅವರ ಧಮನಿಗಳಲ್ಲಿರುವ ಹಾಡು Humpbak ತಿಮಿಂಗಿಲಗಳದ್ದೇ. ಈ ಸುಂದರ ಜೀವಿಗಳ ಅಪರೂಪದ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಫೋಟೊಗ್ರಫಿ ಅವರ ಮೆಚ್ಚಿನ ಹವ್ಯಾಸ ಮತ್ತು ಕೆಲಸ. ಅವರ ತಾರುಣ್ಯದಲ್ಲಿ ಟೋಂಗಾ ದೇಶದ ಸಮುದ್ರದಲ್ಲಿ ಅವರಿಗೆ Humpback Whales ಗಳ ಪರಿಚಯವಾಯ್ತಂತೆ. ಅಲ್ಲಿಂದಾಚೆ ಅವರ ಉಸಿರು, ಧ್ಯಾನವೆಲ್ಲಾ ಅವೇ ತಿಮಿಂಗಿಲಗಳೇ ಆಗಿವೆಯಂತೆ.

ಗ್ಲೆನ್ ಓಷಿಯನ್ ಸ್ಪಿರಿಟ್ (Ocean Spirit) ಎನ್ನುವ ಚಿಕ್ಕ ಲಾಭರಹಿತ ಸಂಸ್ಥೆಯನ್ನು ಹುಟ್ಟುಹಾಕಿ ತಮ್ಮ ಮತ್ತು ತಮ್ಮಂತೆಯೇ ಪ್ರಕೃತಿ-ಪೋಷಕ ಮೌಲ್ಯಗಳನ್ನು ಹೊಂದಿರುವ ಕೆಲವರೊಂದಿಗೆ ಹಲವಾರು ಸ್ವಯಂಸೇವೆಗಳನ್ನು ಮಾಡುತ್ತಿದ್ದಾರೆ. ಸಮುದ್ರವನ್ನು ನಮ್ಮ ಮನುಷ್ಯರ ತ್ಯಾಜ್ಯವಸ್ತುಗಳ ಕುಪ್ಪೆತೊಟ್ಟಿಯನ್ನಾಗಿ ಪರಿವರ್ತಿಸಬೇಡಿ ಅನ್ನುವುದರಿಂದ ಹಿಡಿದು ಶಾಲಾಮಕ್ಕಳಿಗೆ ಮತ್ತು ದೊಡ್ಡವರಿಗೆ ಸಮುದ್ರ-ಸಂಬಂಧದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇಂಗ್ಲಿಷ್ ಭಾಷೆ ಮಾತನಾಡುವ ಕುಟುಂಬದಲ್ಲಿ ಹುಟ್ಟಿದರೂ ಸ್ಥಳೀಯ ಮೂಲನಿವಾಸಿಗಳ ಮಾಓರಿ (Maori) ಭಾಷೆಯಲ್ಲೂ ಗ್ಲೆನ್ ಮಾತನಾಡುತ್ತಾರೆ. ಮಾನವವರು ಇತರ ಜೀವಿಗಳ ಜೀವನದಲ್ಲಿ ತಲೆಹಾಕಿ ಅದನ್ನು ಅಲ್ಲೋಲಕಲ್ಲೋಲ ಮಾಡಬಾರದು. ಆದರೆ ನಮ್ಮಿಬ್ಬರ ಹಾದಿ ಸಂಧಿಸಿದಾಗ ಆ ಜೀವಿಗಳಿಗೆ ನಾವು ಪ್ರಜ್ಞಾಪೂರ್ವಕವಾಗಿ ಯಾವುದೇ ತೊಂದರೆ ಅಥವಾ ಹಾನಿಯನ್ನುಂಟು ಮಾಡಬಾರದು ಎನ್ನುತ್ತಾರೆ. ಬಾಲ್ಯದಿಂದಲೂ ಅವರು ಸಸ್ಯಾಹಾರಿಯಂತೆ.

ಸಮುದ್ರವನ್ನು ನಮ್ಮ ಮನುಷ್ಯರ ತ್ಯಾಜ್ಯವಸ್ತುಗಳ ಕುಪ್ಪೆತೊಟ್ಟಿಯನ್ನಾಗಿ ಪರಿವರ್ತಿಸಬೇಡಿ ಅನ್ನುವುದರಿಂದ ಹಿಡಿದು ಶಾಲಾಮಕ್ಕಳಿಗೆ ಮತ್ತು ದೊಡ್ಡವರಿಗೆ ಸಮುದ್ರ-ಸಂಬಂಧದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇಂಗ್ಲಿಷ್ ಭಾಷೆ ಮಾತನಾಡುವ ಕುಟುಂಬದಲ್ಲಿ ಹುಟ್ಟಿದರೂ ಸ್ಥಳೀಯ ಮೂಲನಿವಾಸಿಗಳ ಮಾಓರಿ (Maori) ಭಾಷೆಯಲ್ಲೂ ಗ್ಲೆನ್ ಮಾತನಾಡುತ್ತಾರೆ.

ಬೃಹಾದಾಕಾರ ತಿಮಿಂಗಿಲಗಳನ್ನು ನೋಡಲು ಬರುವ ಜನರಿಗೆ ಗ್ಲೆನ್ ಅವುಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಕೊಡುತ್ತಾ ಅವುಗಳ ಜೊತೆಗಿನ ತನ್ನ ಒಡನಾಟದ ಕಥೆಯನ್ನು ಹೇಳುತ್ತಾರಂತೆ. ಹೇಳುವ ಉದ್ದೇಶ ಜನರಲ್ಲಿ ಅವುಗಳ ಬಗ್ಗೆ ಗೌರವವನ್ನು, ಒಲವನ್ನು ಮತ್ತು ಆಸಕ್ತಿಯನ್ನು ಹುಟ್ಟಿಸುವುದು. ಅಂತಹ ಜನ ಪ್ರಕೃತಿಯೊಡನೆ ಕಳಚಿಕೊಳ್ಳುತ್ತಿರುವ ನಮ್ಮ ಮಾನವ ಸಂಬಂಧವನ್ನು ನೆನಪಿಸಿಕೊಂಡು ವಾಪಸ್ ನಿಸರ್ಗದ ಮತ್ತು ಜೀವಜಾಲದ ವೈವಿಧ್ಯತೆಯೊಡನೆ ಒಡನಾಟವನ್ನು ಇಟ್ಟುಕೊಳ್ಳಬಹುದು ಎಂಬ ಆಶಯವಿದೆ. ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಮತ್ತು ಅವರ ಜೀವನಶೈಲಿಯಲ್ಲೂ ಅವರ ಆಶಯ ಮತ್ತು ಕಾಳಜಿ ಅಡಕವಾಗಿದೆ.

ಮಾತಿನ ಮಧ್ಯೆ ಅವರ ಅನುಭವಗಳನ್ನು ಹೇಳಿದರು. ಸಮುದ್ರ ತಿಮಿಂಗಿಲಗಳ ಜೊತೆ ಕೆಲಸ ಮಾಡುವ, ಅವುಗಳ ಕುರಿತೇ ಸದಾ ಧ್ಯಾನಿಸುವ, ಅವನ್ನು ಪ್ರೀತಿಸುವ ವ್ಯಕ್ತಿ ನನ್ನ ಮುಂದೆ ಕೂತು ಮಾತನಾಡುತ್ತಿದ್ದರು. ಅದು ಯಾವುದೋ ಸಭೆಗಾಗಿ ಅಲ್ಲ, ಕಾನ್ಫರೆನ್ಸ್ ಅಲ್ಲ, ಅಕಾಡೆಮಿಕ್ ಚರ್ಚೆಯಲ್ಲ, ಅಥವಾ ಒಂದು ಮಂಡನೆಯೂ ಅಲ್ಲ. ಬಹಳ ಸರಳವಾಗಿ ಆತ ಮಾತನಾಡಿದ್ದು. ಕೇಳಿಸಿಕೊಳ್ಳುತ್ತಿದ್ದವಳು ನಾನೊಬ್ಬಳೇ. Humpback ಗಳ ಬಗ್ಗೆ, ಸಮುದ್ರದೊಳಗಿನ ಅದ್ಭುತರಮ್ಯ ಲೋಕದ ಬಗ್ಗೆ ಕೇಳುತ್ತಾ, ಕೇಳಿಸಿಕೊಳ್ಳುತ್ತಾ ನನ್ನಲ್ಲಿ ಹುಟ್ಟಿದ್ದ ಅನುಭೂತಿಯೇ ಬೇರೆಯದಾಗಿತ್ತು. ಕಣ್ಣುಮುಚ್ಚಿಕೊಂಡು ನಮ್ಮ ದೇವರುಗಳನ್ನು ಸ್ತುತಿಸುವ ಅಚ್ಚ ಭಾರತೀಯ ಶಾಸ್ತ್ರೀಯ ಸಂಗೀತದೊಡನೆ ಖವ್ವಾಲಿ ಶೈಲಿಯಲ್ಲಿ ಸೂಫಿಭಕ್ತಿಯನ್ನು ಸೇರಿಸಿದರೆ ಉಂಟಾಗುವ ಅನುಭೂತಿಯಂತಾಗಿತ್ತು.

ಒಮ್ಮೆ ಗ್ಲೆನ್ ಸಮುದ್ರದೊಳಗೆ ನೆಗೆದು ಛಾಯಾಚಿತ್ರಗಳನ್ನು ತೆಗೆಯುತ್ತಾ ಇದ್ದಾಗ ಆ ದಿನ ಅಲ್ಲಿ ಎರಡು Humpback ಗಳು ಇದ್ದವಂತೆ. ಕೆಲನಿಮಿಷಗಳ ನಂತರ ಅವರು ಫೋಟೋ ತೆಗೆಯುವುದನ್ನು ನಿಲ್ಲಿಸಿ ಸುಮ್ಮನೆ ತಮ್ಮೆದುರಿದ್ದ ತಿಮಿಂಗಲದ ಮುಖವನ್ನೇ ನೋಡುತ್ತಿದ್ದರಂತೆ. ಆ ಕ್ಷಣಗಳಲ್ಲಿ ತಮ್ಮ ಮಿದುಳಿನಲ್ಲಿ, ಮನಸ್ಸಿನಲ್ಲಿ ಯಾವುದೇ ಯೋಚನೆ, ಭಾವ, ರಸಾಗ್ರಹಣ ಏನೊಂದೂ ಇರಲಿಲ್ಲ. ಬರೀ ಖಾಲಿ ಎಂಬ ಅರಿವಿದ್ದರೂ ಅದು ಅರಿವಾಗುತ್ತಿದ್ದರಿಂದ ಅಲ್ಲಿ ಪೂರ್ತಿಯಾಗಿ ಖಾಲಿತನವಿರಲಿಲ್ಲ ಎಂಬುದು ಅವರಿಗೆ ಗೊತ್ತಾಯ್ತು. ಭಾವ-ನಿರ್ಭಾವ, ಈ ನಿಜದ ಕ್ಷಣ-ಇಲ್ಲದ ಕ್ಷಣ ಎಂಬ ಯಾವುದೊಂದು ಸ್ಥಾಯಿಯೂ ಇಲ್ಲದ ಸಮಯವಿಲ್ಲದ, ಗುರುತಿಲ್ಲದ ಆ ಒಂದು ಕೈಗೆಟುಕದ ಕ್ಷಣದಲ್ಲಿ ಅವರು ತೇಲಾಡುತ್ತಿದ್ದರಂತೆ.

ಇದ್ದಕ್ಕಿದ್ದಂತೆ ಎದುರಿದ್ದ ಆ ಅಗಾಧ ಜೀವಿ Humpback ತಿಮಿಂಗಲ ಹತ್ತಿರಕ್ಕೆ ಬಂತು. ಎಷ್ಟು ಹತ್ತಿರಕ್ಕೆ ಎಂದರೆ ಅದು ಅವರಿಗೆ ಇಂದ್ರಿಯಗಳಿಗೆ ಗೋಚರವಾಗಿ, ಮನಸ್ಸಿನ ಅನುಭವವಾಗಿ ರೂಪಗೊಂಡಿತಂತೆ. ಅದನ್ನು ಮುಟ್ಟಬೇಕು ಎಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಅದರ ಮುಖ ಅವರ ದೇಹಕ್ಕೆ ಬಲು ಹತ್ತಿರದಲ್ಲಿತ್ತು. ತಿಮಿಂಗಿಲ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದು ಅವರಿಗೆ ಚೆನ್ನಾಗಿ ಅರಿವಾಯ್ತು. ಮೈ ಜುಮ್ಮ್ ಎಂದಿತ್ತು. ಬಲು ನಿಧಾನವಾಗಿ ಅದರೆಡೆಗೆ ತಮ್ಮ ಕೈ ಚಾಚಿದರಂತೆ. ಅಷ್ಟೇ ನಿಧಾನವಾಗಿ, ಬಲು ಸೂಕ್ಷ್ಮವಾಗಿ ತಿಮಿಂಗಿಲ ಇಷ್ಟೇ ಇಷ್ಟು ಹಿಂದಕ್ಕೆ ಸರಿಯಿತು. ನನ್ನನ್ನು ಮುಟ್ಟಬೇಡ ಎಂದವರಿಗೆ ಅದು ಹೇಳಿತ್ತು. ಅದರ ಆ ಒಂದು ಚಲನೆಯಲ್ಲಿ ಒಂದಿಷ್ಟೂ ಕೂಡ ಅಲುಗಾಟ, ಕುಲುಕಾಟವಿರಲಿಲ್ಲ. ಚಲನೆಯೆಂದರೆ ಕಣ್ಣಿಗೆ ಕಾಣುವ ಚಲನೆಯದಲ್ಲ, ಅಷ್ಟು ಸೂಕ್ಷ್ಮವಾಗಿತ್ತಂತೆ. ಭಾರಿ ಗಾತ್ರದ ತಿಮಿಂಗಿಲದ ಚಲನೆ ಅಷ್ಟು ಸೂಕ್ಷ್ಮವಾದ ಕುಸುರಿಕೆಲಸದಂತಿತ್ತು. ಅದು ಇಡೀ ಪ್ರಕೃತಿ ಎಂಬ ಇರುವಿಕೆಗೆ ಸಾಕ್ಷಿಪ್ರಜ್ಞೆಯಾಗಿತ್ತಂತೆ. ಆಗ ಅವರಿಗೆ ಮನುಷ್ಯನ ಕುತೂಹಲದ ಬಗ್ಗೆ ಆಸಕ್ತಿ ಮೂಡಿ ತಾವು ಅಂದು ಕಲಿತ ಪಾಠವನ್ನು ಮುಂದೆ ತಮ್ಮ ಕೆಲಸದಲ್ಲಿ ಅಳವಡಿಸಿಕೊಂಡಿದ್ದಾರಂತೆ.

ಹಾಗೆ ಮಾತನಾಡುತ್ತಾ ಸಮುದ್ರದೊಳಗಿನ ಅದ್ಭುತ ಪ್ರಪಂಚದ ಬಗ್ಗೆ ಇನ್ನಷ್ಟು ಹೇಳಿದರು. ‘ಸ್ವಲ್ಪ ಡೈವಿಂಗ್ ಕಲಿತು ಆಗಾಗ ಸಮುದ್ರದೊಳಗೆ ಇಣುಕಿ ನೋಡು,’ ಎಂದವರು ನಗುತ್ತ ಹೇಳಿದಾಗ ‘ನಿಮ್ಮಷ್ಟು ಅಲ್ಲದಿದ್ದರೂ ನಮ್ಮ ಮನೆಯವರೆಲ್ಲ ಡೈವಿಂಗ್ ಪಾಠವನ್ನಾಗಲೇ ಮಾಡಿದ್ದಾಗಿದೆ. ನನ್ನ ಕುಟುಂಬದ ಕೆಲವರಿಗೆ snorkeling ಪರಿಣತಿಯೂ, ಅನುಭವವೂ ಇದೆ. ಆಸಕ್ತಿಯಂತೂ ಬೆಟ್ಟದಷ್ಟಿದೆ. ಇನ್ನು ಬಾಕಿ ಇರುವುದು ಹಣವನ್ನು ಹೊಂದಿಸಿಕೊಂಡು, ಬೋಟೊಂದನ್ನು ಗೊತ್ತು ಮಾಡಿಕೊಂಡು ಹೋಗಿ ಮನೆಮಂದಿಯೆಲ್ಲ ಸಮುದ್ರಕ್ಕೆ ನೆಗೆಯಬೇಕಷ್ಟೆ, ಅಂದೆ.

ನದಿಗಿಂತಲೂ ಯಾಕೋ ಸಮುದ್ರವೇ ಕೈಬೀಸಿ ಕರೆಯುತ್ತಿದೆ. ಕಡಲಿನೊಳಗೆ ಹೊಕ್ಕು ಅಲ್ಲಿರುವ ಕಿನ್ನರ ಲೋಕದಲ್ಲಿ ಇಣುಕುವ ಆಸೆ ಚಿಗುರೊಡೆದಿದೆ. ಎರಡು snorkeling ಸೆಟ್ಟುಗಳ ಬದಲು ಈ ಬಾರಿ ನಾಲ್ಕನ್ನು ಪ್ಯಾಕ್ ಮಾಡಬೇಕು. ಕ್ಯಾಂಪ್ ಸೈಟ್ ವ್ಯವಸ್ಥಾಪಕರಿಂದ ‘ನಮ್ಮ ಸುತ್ತಮುತ್ತ ಪೊದೆಬೆಂಕಿ (bushfire) ಇರುವ ಕಾರಣದಿಂದ ನಾವು ಕ್ಯಾಂಪ್ ಸೈಟ್ ಮುಚ್ಚಿದ್ದೀವಿ, ನೀವು ಮುಂಗಡವಾಗಿ ಕಾಯ್ದಿರಿಸಿದ್ದನ್ನು ರದ್ದುಪಡಿಸಲಾಗಿದೆ, ದಯವಿಟ್ಟು ಕ್ಷಮಿಸಿ,’ ಎನ್ನುವ ಸಂದೇಶ ಈಗಷ್ಟೆ ಬಂದಿದೆ.