ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಮೊದಲೇ ಹೇಳಿ ಕೇಳಿ ಮಲ್ಲಾಡಿಹಳ್ಳಿ ಮಠ. ಅಲ್ಲಿದ್ದ ಟಿ.ಸಿ.ಎಚ್ ಕಾಲೇಜಿನಲ್ಲಂತೂ ಸಿಕ್ಕಾಪಟ್ಟೆ ರೂಲ್ಸ್ ಇದ್ದವು. ನಮ್ಮ ಕಾಲೇಜಿನ ಪ್ರಿನ್ಸಿಪಾಲರು ‘ಮಿಲಿಟರಿ ಮ್ಯಾನ್’ನಂತೆ ಇದ್ದರು. ನಮ್ಮ ಯೂನಿಫಾರಂ ವಿಶೇಷವಾಗಿತ್ತು. ಹುಡುಗರಿಗೆ ಕಚ್ಚೆ ಪಂಚೆ, ಬಿಳಿ ಜುಬ್ಬಾ, ಗಾಂಧೀ ಟೋಪಿ, ಹುಡುಗಿಯರಿಗೆ ಬಿಳಿ ಸೀರೆ, ಬಿಳಿ ರವಿಕೆ. ಕಾಲೇಜಿನಲ್ಲಿ ಯಾವ ಹುಡುಗರೂ, ಹುಡುಗಿಯರನ್ನು ಮಾತನಾಡಿಸುವಂತೆ ಇರಲಿಲ್ಲ. ನೇರವಾಗಿ ಮಾತಾಡುತ್ತಿದ್ದ ನನ್ನನ್ನು ಯಾವ ಹುಡುಗೀರೂ ಮಾತನಾಡಿಸುತ್ತಿರಲಿಲ್ಲ ಎಂಬುದು ಬೇರೆ ಮಾತು ಬಿಡಿ! ಮೊಬೈಲ್ ಈಗಿನಷ್ಟು ಪ್ರಚಲಿತವಾಗಿಲ್ಲದ ಕಾಲವದು. ಸಂಪರ್ಕಕ್ಕಾಗಿ ಅಂಚೆಪತ್ರಗಳು ಅಂದು ಹೆಚ್ಚೇ ಚಾಲ್ತಿಯಲ್ಲಿದ್ದವು. ಆದರೆ ನಮ್ಮ ಕಾಲೇಜಿಗೆ ಯಾರ ಹೆಸರಿಗಾದರೂ ಪತ್ರಗಳು ಬಂದರೆ ಅವು ಪ್ರಾಂಶುಪಾಲರ ಕೈಲಿ ತಲುಪಿ, ಸೂಕ್ತ ವಿಚಾರಣೆಯ ನಂತರ ನಮ್ಮ ಕೈಸೇರುತ್ತಿದ್ದವು! ಇನ್ನು ನಾವು ಕಾಲೇಜಿನ ಸಮಯವನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿತ್ತು. ಒಮ್ಮೆ ಹೊಸ ವರ್ಷದ ದಿನ ಕೇವಲ 5 ನಿಮಿಷ ತಡವಾಗಿ ಬಂದರೆಂದು ಕಾಲೇಜಿನ 120 ಶಿಕ್ಷಣಾರ್ಥಿಗಳಲ್ಲಿ ಸಮಯಕ್ಕೆ ಸರಿಯಾಗಿ ಬಂದ ಸುಮಾರು 10 ಜನರನ್ನು ಹೊರತುಪಡಿಸಿ, ಉಳಿದವರ್ಯಾರನ್ನೂ ಒಳಗೆ ಸೇರಿಸದೇ ಒಳಗಿದ್ದ ಅಷ್ಟೇ ಮಂದಿಗೆ ಮಾತ್ರ ದಿನವಿಡೀ ಪಾಠ ಮಾಡಿ ಕಳಿಸಿದ್ದರು!
ನಾವು ಪ್ರಾಥಮಿಕ ಶಾಲೇಲಿ ಓದುತ್ತಿದ್ದಾಗ ಈಗಿನಂತೆ ಆಗ ಆಂತರಿಕ ಅಂಕಗಳು ಇರಲಿಲ್ಲ. ಎಲ್ಲಾ ಪರೀಕ್ಷೆಯನ್ನು 100 ಅಂಕಗಳಿಗೆ ಬರೆಯಬೇಕಾಗಿತ್ತು. ಕನ್ನಡ ಪರೀಕ್ಷೆಯಲ್ಲಿ ಮಾತ್ರ ಉತ್ತಮ ಬರೆವಣಿಗೆಗೆ 5 ಅಂಕಗಳನ್ನು ಮೀಸಲಾಗಿಡುತ್ತಿತ್ತು. ಮೌಲ್ಯಮಾಪನವು ತುಂಬಾ ಬಿಗಿಯಾಗಿರುತ್ತಿತ್ತು. ಈಗ ಚೂರು ಬರೆದರೆ ಅಂಕಗಳನ್ನು ಕೊಡುತ್ತೇವೆ. ಸಣ್ಣಪುಟ್ಟ ತಪ್ಪಿದ್ದರೆ ಅವನ್ನು ಪರಿಗಣನೆ ಮಾಡೋದಿಲ್ಲ. ಆದರೆ ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ. ಮಕ್ಕಳ ಸ್ನೇಹಿ ಕಲಿಕಾ, ಮಕ್ಕಳ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಇರುವ ಪದ್ಧತಿಯಿದೆ. ಮೌಲ್ಯಮಾಪನ ವಿಧಾನವೂ ಬದಲಾಗಿದೆ. ಹಿಂದೆ ತರಬೇತಿ ಕೋರ್ಸ್ ಹಾಗೂ ಪದವಿ ಕೋರ್ಸ್‌ಗಳಲ್ಲಿ ಇರುತ್ತಿದ್ದ ಅಸೈನ್ ಮೆಂಟ್, ಪ್ರಾಜೆಕ್ಟ್ ಗಳು ಪ್ರಾಥಮಿಕ ಶಾಲೆಗೂ ಬಂದಿವೆ. ಮಕ್ಕಳು ಬರೆಯುವ ಪರೀಕ್ಷಾ ಅಂಕಗಳನ್ನು 80 ಕ್ಕೆ ಇಳಿಸಲಾಗಿದೆ. ಇಡೀ ವರ್ಷ ನಡೆಯುವ ಕಲಿಕಾ ಚಟುವಟಿಕೆಗಳಿಗೆ 20 ಅಂಕ ಮೀಸಲಿರಿಸಲಾಗಿದೆ. ಇದು ಉತ್ತಮ ಪದ್ಧತಿಯೇ ಹೌದಾದರೂ ಹಲವು ಶಾಲೆಗಳಲ್ಲಿ ಕೊಡುವ ಪ್ರಾಜೆಕ್ಟ್ ವರ್ಕಗಳು ‘ಕಟ್ ಆಂಡ್ ಪೇಸ್ಟ್’ ಸಂಸ್ಕೃತಿಗೆ ಮೀಸಲಾಗಿವೆ! ಅಂಗಡಿಗಳಲ್ಲಿ ಸಿಗುವ ಚಿತ್ರಗಳನ್ನು ಅಂಟಿಸಿಕೊಂಡು ಬರೋದೇ ಮಕ್ಕಳಿಗೆ ಅಭ್ಯಾಸವಾಗಿ ಹೋಗಿದೆ. ಯಾವುದಾದರೂ ವಿಷಯದ ಬಗ್ಗೆ ಹುಡುಕಿ ಬರೆಯುವಂತಹ ವಿಷಯಗಳನ್ನು ಕೊಡುವ ಸೃಜನಶೀಲತೆಯೂ ಶಿಕ್ಷಕರಿಗೆ ಇಲ್ಲವಾಗಿದೆ. ಒಂದೊಮ್ಮೆ ಕೊಟ್ಟರೂ ಹುಡುಕಿ ಬರೆಯುವ ತಾಳ್ಮೆಯೂ ಮಕ್ಕಳಿಗೆ ಇಲ್ಲವಾಗಿ ಹೋಗಿದೆ. ಈಗೇನಿದ್ರೂ ರೆಡಿಮೇಡ್ ಪದ್ಧತಿ!! ಯಾವುದೇ ವಿಷಯದ ಬಗ್ಗೆ ಪೂರ್ಣವಾಗಿ ತಿಳಿಯುವ ಗೋಜಿಗೆ ಹೋಗದೇ ಅಂಕಗಳ ಆಧಾರದ ಮೇಲೆ ಕಲಿಕೆ ಸಾಗುತ್ತಿರುವುದು ಬೇಸರದ ಸಂಗತಿ. ಒಂದು ಪಠ್ಯಪುಸ್ತಕದ ಪಾಠ ಪರೀಕ್ಷೆಗೆ ಇಲ್ಲ ಎಂದಿಟ್ಟುಕೊಂಡರೆ ಅಪ್ಪಿತಪ್ಪಿಯೂ ಕೂಡ ಶಿಕ್ಷಕರಾದಿಯಾಗಿ ಮಕ್ಕಳೂ ಆ ಪಾಠವನ್ನು ಕಣ್ಣೆತ್ತಿಯೂ ನೋಡೋದಿಲ್ಲ!!??
ಇಷ್ಟೆಲ್ಲಾ ಹೇಳೋ ಉದ್ದೇಶ ಏನಪ್ಪಾ ಅಂದ್ರೆ ನಾವು ಶಿಕ್ಷಕರ ತರಬೇತಿ ಕೋರ್ಸ್ ಮಾಡುವಾಗ ನಮಗೆ ನಮ್ಮ ಶಿಕ್ಷಕರು ಕೊಡುತ್ತಿದ್ದ ಪ್ರಾಜೆಕ್ಟ್ ವರ್ಕ್‌ಗಳನ್ನು ನಾವು ತುಂಬಾ ಶ್ರಮವಹಿಸಿ ಮಾಡಬೇಕಾಗಿತ್ತು. ಬೇರೆ ಬೇರೆ ಪುಸ್ತಕಗಳನ್ನು ಗಾಢವಾಗಿ ಓದಿ ಅದರ ಸಾರಾಂಶವನ್ನು ಗ್ರಹಿಸಿ ಬರೆಯಬೇಕಾಗಿತ್ತು. ನಮಗೆ ನಮ್ಮ ಕನ್ನಡ ಮೇಷ್ಟ್ರಾಗಿದ್ದ ಬಿದರಹಳ್ಳಿ ಕೃಷ್ಣಮೂರ್ತಿ ಸರ್ ವಿವಿಧ ಕಾದಂಬರಿಗಳನ್ನು ಓದಿ ಅದರ ಬಗ್ಗೆ ಬರೆದುಕೊಂಡು ಬರಲು ತಿಳಿಸುತ್ತಿದ್ದರು. ನನಗೆ ಆಗ ಸಿಕ್ಕ ವಿಷಯ ಹೆಚ್.ನರಸಿಂಹಯ್ಯನವರ ‘ಹೋರಾಟದ ಹಾದಿ ಪುಸ್ತಕ’. ಇದೇ ರೀತಿ ಬೇರೆ ಬೇರೆ ಉಪನ್ಯಾಸಕರು ನಾವು ಆಕರ ಗ್ರಂಥ, ದಿನಪತ್ರಿಕೆಗಳನ್ನು ಹುಡುಕಿ ಬರೆಯುವಂತಹ ಪ್ರಾಜೆಕ್ಟ್ ಕೊಡುತ್ತಿದ್ದರು. ನಮಗೆ ನಮ್ಮ ವಿಜ್ಞಾನ ಮೇಷ್ಟ್ರು ಕೊಟ್ಟ ಜನಸಂಖ್ಯಾ ನಿಯಂತ್ರಣದ ಬಗ್ಗೆ ಇರುವ ಪ್ರಾಜೆಕ್ಟ್ ವರ್ಕ್ ಗಳಲ್ಲಿ ನಮ್ಮ ಸೀನಿಯರ್ ಫ್ರೆಂಡ್ಸ್ ಗರ್ಭ ನಿರೋಧಕ ವಸ್ತುವಾದ ‘ನಿರೋಧ್’ ಅನ್ನೂ ಅಸೈನ್ ಮೆಂಟ್ ಗೆ ಅಂಟಿಸಿಕೊಂಡು ಹೋಗಿದ್ದರು!! ಆಗ ಈಗಿನಂತೆ ತಂತ್ರಜ್ಞಾನದ ಲಭ್ಯತೆ ಇಲ್ಲವಾದ್ದರಿಂದ ನಮಗೆ ದಿನಪತ್ರಿಕೆಗಳಲ್ಲಿ ಬರುವ ಆ ವಿಷಯಕ್ಕೆ ಪೂರಕವಾದ ಮಾಹಿತಿಯನ್ನೇ ಅಂಟಿಸಿಕೊಂಡು ಹೋಗುತ್ತಿದ್ದೆವು. ಹೀಗೆ ಅಂಟಿಸಿ ಅದರ ಗಾತ್ರ ಹೆಚ್ಚುವಂತೆ ಮಾಡುತ್ತಿದ್ದೆವು. ನಮ್ಮದೊಂದು ಕಲ್ಪನೆ ಏನಿತ್ತೆಂದರೆ ಅಸೈನ್ ಮೆಂಟ್‌ನ ಗಾತ್ರ ಹೆಚ್ಚಿದ್ದರೆ ನಮ್ಮ ಮಾರ್ಕ್ಸ್‌ಗಳು ಕಟ್ ಆಗೋಲ್ಲ ಎಂಬ ನಂಬಿಕೆ ಢಾಳವಾಗಿತ್ತು!! ಆದರೆ ಅದು ಫಲಿತಾಂಶ ಬಂದಾಗ ಸುಳ್ಳಾಗಿತ್ತು. ಏಕೆಂದರೆ ನಾನು ನನ್ನ ಅಸೈನ್ ಮೆಂಟ್ ಗಳನ್ನು ಎಷ್ಟೇ ತಲೆ ಕೆಡಿಕೆಡಿಸಿಕೊಂಡು ಮಾಡಿದರೂ ಲೆಕ್ಚರ್ ಕೈಯಲ್ಲಿ ಅದರ ಅಂಕಗಳು ನಿರ್ಧಾರವಾಗುತ್ತಿದ್ದುದರಿಂದ ಅವು ವಸ್ತುನಿಷ್ಟವಾಗುವ ಬದಲು ವ್ಯಕ್ತಿನಿಷ್ಟವಾಗಿರುತ್ತಿದ್ದವು ಎಂದು ಹೇಳಲು ಬೇಸರವೆನಿಸುತ್ತದೆ.
ನಮ್ಮ ಕಾಲೇಜಿನಲ್ಲಿ ಕೊಡುವ ಅಸೈನ್ ಮೆಂಟ್ ವಿಚಾರಕ್ಕೆ ಬಂದರೆ, ನಾವು ಅವರು ಹೇಳಿದ ಸಮಯಕ್ಕೇ ಕೊಡಬೇಕಾಗಿತ್ತು. ‘ಪಾರ್ಟ್ ಎ’ ಗೆ ಸಂಬಂಧಪಟ್ಟ ವಿಷಯಗಳು ನಾವು ಈಗ ಓದುವ ವಿಷಯಗಳಾದರೆ ‘ಪಾರ್ಟ್ ಬಿ’ ಗೆ ಚಿತ್ರಕಲೆ, ಸಂಗೀತ, ಕ್ರೀಡಾ ವಿಷಯಗಳು ಇರುತ್ತಿದ್ದವು. ‘ಪಾರ್ಟ್ ಬಿ’ ವಿಷಯಗಳಿಗೂ ಪ್ರಾಜೆಕ್ಟ್ ಕೊಡಲಾಗುತ್ತಿತ್ತು. ಒಮ್ಮೆ ನಮ್ಮ ಕಾಲೇಜಿನಲ್ಲಿದ್ದ ಚಿತ್ರಕಲಾ ಶಿಕ್ಷಕರಾದ ನಾಗಭೂಷಣ್ ಸರ್ ನಮಗೆ ಪ್ರಾಜೆಕ್ಟ್ ನ ವಿಷಯವಾಗಿ ವಿವಿಧ ಕಲಾವಿದರು ಬಿಡಿಸಿರುವ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕದಲ್ಲಿ ಅಂಟಿಸಿಕೊಂಡು ಬರಲು ತಿಳಿಸಿದರು. ಇದಕ್ಕಾಗಿ ನಾನು ಎಲ್ಲಾ ಕಡೆ ಹುಡುಕಿದೆ. ಮೊದ ಮೊದಲು ಸಿಗಲಿಲ್ಲ. ಏನು ಮಾಡುವುದು? ಎಂಬ ಚಿಂತೆಯಲ್ಲಿದ್ದಾಗ ಪುಣ್ಯಕ್ಕೆ, ನಮ್ಮ ಊರಿನ ಗ್ರಾಮಪಂಚಾಯ್ತಿಯ ಗ್ರಂಥಾಲಯದಲ್ಲಿ ‘ಲಿಯೋ ನಾರ್ಡೊ ಡ ವಿಂಚಿʼ, ‘ರವಿವರ್ಮ’ ಹೀಗೆ ಜಗತ್ ಪ್ರಸಿದ್ಧ ಕಲಾವಿದರು ಚಿತ್ರ ಬಿಡಿಸಿರುವ ಪುಸ್ತಕ ಸಿಕ್ಕಿತು. ತಕ್ಷಣಕ್ಕೆ ಖುಷಿಯಾಯಿತಾದರೂ ಆ ಖುಷಿ ಬಹಳ ಹೊತ್ತು ಇರಲಿಲ್ಲ. ಏಕೆಂದರೆ ಅದರಲ್ಲಿ ಬರೀ ಅವರು ಬಿಡಿಸಿರುವ ಮಹಿಳೆಯರ ಬೆತ್ತಲೆ ಚಿತ್ರಗಳೂ ಇದ್ದವು. ನಂಗೆ ಈಗ ಪೀಕಲಾಟ ಶುರುವಾಯ್ತು. ಅವನ್ನು ಜೆರಾಕ್ಸ್ ಮಾಡಿ ಪುಸ್ತಕಕ್ಕೆ ಅಂಟಿಸಿಕೊಂಡು ಅಸೈನ್ ಮೆಂಟ್ ಕೊಟ್ಟು ಕೈತೊಳೆದುಕೊಳ್ಳೋಣ ಎಂದು ಒಮ್ಮೆ ಅನಿಸಿದರೂ ಮತ್ತೊಮ್ಮೆ ಇಂತಹಾ ಅಶ್ಲೀಲ ಚಿತ್ರಗಳನ್ನು ಅಂಟಿಸಿಕೊಂಡು ಹೋಗಿ ಶಿಕ್ಷಕರಿಗೆ ಕೊಟ್ಟರೆ, ಅವರಿಗೆ ಈ ವಿಷಯ ತಿಳಿದು ಮುಂದೆಲ್ಲಿ ರಾದ್ಧಾಂತವಾಗುವುದೋ ಎಂದು ನಾನು ಗೊಂದಲಕ್ಕೆ ಬಿದ್ದೆ. ಏಕೆಂದರೆ ಇಂತಹ ವಿಷಯ ಸಿಕ್ಕರೆ ಸಾಕು ಇದನ್ನು ‘ಚೂಯಿಂಗ್ ಗಮ್’ ನಂತೆ ಎಳೆದು, ಎಲ್ಲಿ ನಮಗೆ ತೊಂದರೆ ಕೊಡುತ್ತಾರೋ ಎಂಬ ಭಯವೂ ಮನದ ಮೂಲೆಯಲ್ಲಿತ್ತು.
ಹೀಗೆ ಮನಸ್ಸು ದ್ವಂದ್ವದಲ್ಲಿ ಮುಳುಗಿ ದಿನಗಳನ್ನು ದೂಡಿ, ದೂಡಿ ಅಸೈನ್ ಮೆಂಟ್ ನೀಡುವ ದಿನಾಂಕದ ಅಂತಿಮ ಗಡುವು ಹತ್ತಿರ ಬಂದೇ ಬಿಟ್ಟಿತು. ನಾನು ಚಿತ್ರಕಲಾ ಶಿಕ್ಷಕರ ಬಳಿ ಹೋಗಿ ಈ ವಿಷಯ ತಿಳಿಸೋಣ, ಅವರು ಒಪ್ಪಿದರೆ ಇವನ್ನೇ ಕೊಡೋಣ, ಆಗ ನನಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮನದಲ್ಲೇ ನಿಶ್ಚಯಿಸಿ ಧೈರ್ಯ ಮಾಡಿ ಈ ವಿಷಯವನ್ನು ಹೇಳಲು ತೀರ್ಮಾನ ಮಾಡಿಬಿಟ್ಟೆ. ಒಮ್ಮೆ ಅವರು ನಮ್ಮ ಕಾಲೇಜಿನ ಆವರಣದಲ್ಲಿದ್ದ ಹೂದೋಟದಲ್ಲಿ ಕೆಲಸ ಮಾಡಿಸುತ್ತಿದ್ದಾಗ ನಾನು ಅವರ ಬಳಿ ಹೋಗಲು ತುಸು ಹಿಂದೆ ಮುಂದೆ ನೋಡುತ್ತಿದ್ದೆ. ಒಮ್ಮೆ ಧೈರ್ಯ ಮಾಡಿ ಹೋಗುತ್ತಿದ್ದೆ. ಮತ್ತೆ ವಾಪಸ್ ಬರುತ್ತಿದ್ದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ಕರೆದು ‘ಗೌಡ ಯಾಕೋ ಏನಾದ್ರೂ ಹೇಳುವುದಿತ್ತಾ?’ ಎಂದು ಕೇಳಿದರು. ನಾನು ಮುಜುಗರದಿಂದಲೇ ನಾನು ಅಸೈನ್ ಮೆಂಟ್ ವಿಷಯದ ಬಗ್ಗೆ ತಿಳಿಸಿಬಿಟ್ಟೆ! ಅವರು ನನಗೆ ಬಯ್ಯುತ್ತಾರೇನೋ? ನನ್ನ ಮನವಿ ತಿರಸ್ಕರಿಸುತ್ತಾರೇನೋ ಅಂದುಕೊಂಡಿದ್ದೆ. ಆದರೆ ಅವರು ಅವರು ಯಾವುದೇ ಸಿಟ್ಟು ತೋರದೇ “ಗೌಡ್ರೇ, ಇಂತಹ ಚಿತ್ರಗಳು ಸಿಗುವುದೇ ಅಪರೂಪ. ಕಲೆಯಲ್ಲಿ ಅಶ್ಲೀಲ ಹುಡುಕಬಾರದು, ನೀವು ಅಗತ್ಯವಾಗಿ ಅವನ್ನು ಅಂಟಿಸಿಕೊಂಡು ಬನ್ನಿ” ಎಂದು ತಮ್ಮ ಸಮ್ಮತಿ ಸೂಚಿಸಿದರು. ಆಗ ನನಗೆ ಯುದ್ಧವನ್ನೇ ಗೆದ್ದಷ್ಟು ಖುಷಿಯಾಯ್ತು. ಲಗುಬಗೆಯಿಂದಲೇ ಗ್ರಂಥಾಲಯದ ಆ ಪುಸ್ತಕದ ಚಿತ್ರವಿರುವ ಪುಟಗಳ ಜೆರಾಕ್ಸ್ ತೆಗೆದು ಅಂಟಿಸಿ ಕೊಟ್ಟು ನಿರುಮ್ಮಳನಾದೆ. ಇದು ಇಲ್ಲಿಗೇ ಮುಗಿದಿದ್ದರೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಆ ಚಿತ್ರಕಲಾ ಶಿಕ್ಷಕರು ಬಂದು ತರಗತಿಯ ಕೋಣೆಯಲ್ಲಿ ಅಸೈನ್ಮೆಂಟಿನ ವಿಷಯವನ್ನು ಪ್ರಸ್ತಾಪಿಸುತ್ತಾ “ಎಲ್ಲರಿಗಿಂತಲೂ ಬಸವನಗೌಡ ತುಂಬಾ ಚೆನ್ನಾಗಿ ಚಿತ್ರವನ್ನು ಸಂಗ್ರಹಿಸಿದ್ದಾನೆ” ಎಂದು ಅವನ್ನು ವೇದಿಕೆ ಮೇಲೆಯೇ ಪ್ರದರ್ಶಿಸಬೇಕಾ!! ನನಗೆ ಭಯ ಶುರುವಾಯ್ತು. ಮೊದಲೇ ಪ್ರತಿಯೊಂದನ್ನೂ ತಪ್ಪು ಎಂದು ಪೂರ್ವಗ್ರಹಪೀಡಿತರಾಗಿ ಬಿಂಬಿಸಿಕೊಂಡಂತಹ ಮನಸ್ಥಿತಿ ಇದ್ದ ಹುಡುಗಿಯರು ನನ್ನನ್ನು ಅಂದಿನಿಂದ ‘ವಿಲನ್’ ನಂತೆ ನೋಡತೊಡಗಿದರು. ಸದ್ಯ ಇದು ಅಷ್ಟಕ್ಕೇ ಮುಗೀತು. ಒಂದೊಮ್ಮೆ ಪ್ರಿನ್ಸಿಪಾಲರಿಗೆ ಗೊತ್ತಾಗಿದ್ದರೆ ದೊಡ್ಡ ರಾದ್ಧಾಂತವೇ ನಡೆಯುತ್ತಿತ್ತು. ಆದರೆ ಕೆಲವರು ನನ್ನ ಆಟೋಗ್ರಾಫ್‌ನಲ್ಲಿ ನನ್ನನ್ನು ಕೆಟ್ಟವನೆಂಬಂತೆ ಚಿತ್ರಿಸಿ ಬರೆದರು. ಇಂದಿಗೂ ನನ್ನ ಬಳಿ ಇರುವ ಆ ಆಟೋಗ್ರಾಫ್ ಓದುತ್ತಾ ಆ ಸನ್ನಿವೇಶವನ್ನು ನೆನೆಸಿಕೊಂಡರೆ ನನಗೆ ನಗು ಬರುತ್ತದೆ.
ಟಿಸಿಹೆಚ್ ಮುಗಿದು ಮುಂದೆ ಒಂದು ದಿನ ಕೆಲಸ ಇಲ್ಲದೇ ಇರುವ ದಿನದಲ್ಲಿ ಸಿಕ್ಕ ಈ ಚಿತ್ರಕಲಾ ಶಿಕ್ಷಕರು ನನ್ನನ್ನು ತುಂಬಾ ಗೌರವದಿಂದ ಮಾತನಾಡಿಸುತ್ತಿದ್ದರು. ಒಮ್ಮೆ ಕೆಲಸ ಕಳ್ಕೊಂಡಿದ್ದ ನನ್ನ ಬಗ್ಗೆ ತುಂಬಾ ಮರುಕ ವ್ಯಕ್ತಪಡಿಸಿದ್ದರು. ಮುಂದೆ ಮತ್ತೊಮ್ಮೆ ಕೆಲಸ ಸಿಕ್ಕಾಗಲೂ ಸಿಕ್ಕು ನನ್ನ ಸ್ಥಿತಿ ಕಂಡು ತುಂಬಾ ಖುಷಿಪಟ್ಟಿದ್ದರು. ಇಂತಹ ಒಳ್ಳೇ ಮನಸ್ಸಿರುವ ನಮ್ಮ ನಾಗಭೂಷಣ ಸರ್ ಆದರೆ ಅಂದೇಕೆ ಹಾಗೆ ನನ್ನ ಅಸೈನ್ ಮೆಂಟ್ ಚಿತ್ರಗಳನ್ನು ತೋರಿಸಿದರೋ? ಅವರ ಉದ್ದೇಶ ತುಂಬಾ ಗ್ರೇಟ್ ಕಲಾವಿದರ ಚಿತ್ರಗಳನ್ನು ಹುಡುಕಿ ಅಂಟಿಸಿಕೊಂಡು ಬಂದದ್ದನ್ನು ತಿಳಿಸೋಕೆ ಹಾಗೇ ಮಾಡಿರಬಹುದು ಎಂದು ನಾನಾದ್ರೂ ಭಾವಿಸ್ತೇನೆ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.