Advertisement
ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌.  ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ  ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ  ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ  ಆಸೆ, ಕಾವನ್ನು  ಆ ಒಂದು  ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ. ಅದನ್ನು ಕೇವಲ ತೋರುಗಾಣಿಕೆಗೆ ಬಳಸಿಕೊಳ್ಳುವುದು ಆ ನಿರ್ದಿಷ್ಟ ಕಲೆಗೇ ಅಪಚಾರ ಮಾಡಿದಂತೆ.
ಚಿತ್ರಾ
ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

ಯಾವುದಾದರೂ ಕಲೆಯನ್ನು ಹವ್ಯಾಸವಾಗಿ ಕಲಿಯುವುದು ಬೇರೆ ಅದರ ಅಧ್ಯಯನ ಮಾಡುವುದು ಬೇರೆ. ಹೆಚ್ಚಿನ ಜನ ತಮ್ಮ‌ಜೀವನದ ಯಾವುದಾದರೊಂದು ಘಟ್ಟದಲ್ಲಿ  ನೃತ್ಯ, ನಾಟಕ, ಸಂಗೀತವನ್ನು ಸ್ವಲ್ಪ ಸಮಯಕ್ಕಾದರೂ ಕಲಿತಿರುತ್ತಾರೆ. ಕೆಲವರಿಗೆ ಅದನ್ನು ಬಿಡಲು ಆಗುವುದೇ ಇಲ್ಲ.  ಕಲೆಯ ಸೆಳೆತ ಎಂಥದ್ದೆಂದರೆ ಅದರ ರುಚಿ ಒಮ್ಮೆ ಹತ್ತಿದರೆ ಏನು ಮಾಡಿದರೂ ಅದನ್ನು ಬಿಡಲಾಗುವುದಿಲ್ಲ. ಆರ್ಥಿಕವಾಗಿ ಲಾಭ ಆಗದಿದ್ದರೂ, ಅನಾರೋಗ್ಯ ಇದ್ದಾಗಲಾದರೂ, ಸುತ್ತ ಇದ್ದವರಿಂದ ಮೂದಲಿಸಿಕೊಳ್ಳುತ್ತಿದ್ದಾಗಲೂ ಅದನ್ನು ಲೆಕ್ಕಿಸದೇ ಕಲೆಯಲ್ಲಿ ತೊಡಗಿಕೊಳ್ಳಲೇಬೇಕೆಂಬ  ಹಾತೊರಿಕೆಯನ್ನು ಅದು ಸೃಷ್ಟಿಸುತ್ತದೆ.

ಯಾಕೆ ಇದು ಅಷ್ಟು ಆಕರ್ಷಕ? ಎನ್ನುವ ಪ್ರಶ್ನೆಗೆ  ನೂರಾರು ಉತ್ತರಗಳಿವೆ. ಕಲಾವಿದರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದು ಕಾಣುತ್ತದೆ. ಒಂದು ಪ್ರದರ್ಶನದ ನಂತರ ಜನ ಅವರನ್ನು ಸುತ್ತುವರೆಯುತ್ತಾರೆ. ಪ್ರಶಂಸಿಸುತ್ತಾರೆ. ವೇದಿಕೆಗಳಿಗೆ ಕರೆಯುತ್ತಾರೆ, ಮಾಧ್ಯಮಗಳಲ್ಲಿ ಸುದ್ದಿ ಬರುತ್ತದೆ. ಇವೆಲ್ಲಾ ಮೇಲ್ನೋಟದ ಆಕರ್ಷಣೆಗಳು. ಇದರಲ್ಲಿ ಸಂತೋಷ ಸಿಗುವುದಿಲ್ಲ ಎಂದಲ್ಲ. ಆದರೆ ಇದೇ ಕಲೆಯ ಉದ್ದೇಶವಲ್ಲ. ನಮಗೆ ಹೊರಗಿನಿಂದ ಕಾಣುವ ಈ ಯಶಸ್ಸಿಗೆ ಒಬ್ಬ ಕಲಾವಿದ ಬಹಳ ಪರಿಶ್ರಮ ಪಟ್ಟಿರುತ್ತಾನೆ. ಹಲವಾರು ವರ್ಷಗಳು ಅಭ್ಯಾಸ ಮಾಡಿರುತ್ತಾನೆ. ಅವಕಾಶ ಇಲ್ಲದಿದ್ದಾಗಲೂ ತನ್ನ ಅಭ್ಯಾಸವನ್ನು ಬಿಡದೆ ವೇದಿಕೆಗಾಗಿ ಕಾಯುತ್ತಿರುತ್ತಾನೆ. ಇಂಥ ಅನುಭವಗಳೆಲ್ಲವೂ ಒಬ್ಬ ಕಲಾವಿದನನ್ನು ರೂಪಿಸಿರುತ್ತದೆ‌.

ನೃತ್ಯ, ನಾಟಕ, ಸಂಗೀತ ಯಾವುದೇ ಆಗಲಿ ಅದರ ಪ್ರದರ್ಶನವು ಬಹಳ ಮುಖ್ಯವಾದರೂ ಅದರ ಕಲಿಕೆಯ ಪ್ರಕ್ರಿಯೆಯೇ ಅದರ ಆತ್ಯಂತಿಕ ಗುರಿ. ಆ ಪ್ರಕ್ರಿಯೆ ಮುಗಿಯುವುದೇ ಇಲ್ಲವಾದ್ದರಿಂದ ಗುರಿ ಎನ್ನುವುದು ಇರುವುದೇ ಇಲ್ಲ. ಅಥವಾ ಕಲಿಕೆಯ ಸಣ್ಣ ಸಣ್ಣ ಹೆಜ್ಜೆಯೂ ಒಂದು ದೊಡ್ಡ ಗುರಿಯೇ! ಇಲ್ಲಿ ಯಾವ ಕಲಾವಿದನೂ ಒಂದು ಗುರಿಗಾಗಿ ಅಭ್ಯಾಸ ಮಾಡುವುದಿಲ್ಲ.

ಯಾವುದೇ ಕಲೆಯ ಅಭ್ಯಾಸ  ಮುಗಿಯುವುದೇ ಇಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಒಂದು ಜೀವಮಾನ ಸಾಲುವುದಿಲ್ಲ ಎನ್ನುತ್ತಾರೆ. ಪ್ರತಿ ಪ್ರದರ್ಶನವೂ, ಪ್ರತಿ ತಾಲೀಮು ಕೂಡಾ ಒಂದು ಪ್ರಯೋಗಶಾಲೆಯೇ. ಮೊದಮೊದಲು ‘ನಮಗೆ ನೀಡುವ ಪಾತ್ರದಲ್ಲಿ ಚನ್ನಾಗಿ ಕಾಣಬೇಕು, ಪ್ರೇಕ್ಷಕರು ನನ್ನ ಪ್ರಸ್ತುತಿಗೆ ಮೆಚ್ಚುಗೆ ಸೂಚಿಸಬೇಕು’ ಎಂದು ಆಸೆಗಳು ಪ್ರಾರಂಭವಾಗುವುದು ಸಹಜ. ‌ಆದರೆ ನಿರಂತರವಾಗಿ ಕಲೆಯ ಅಭ್ಯಾಸದಲ್ಲಿ ತೊಡಗಿಕೊಂಡರೆ ಪ್ರತಿ ಸಲವೂ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಹೊಸ ಪ್ರಶ್ನೆಗಳು ಎದುರಾಗುತ್ತದೆ. ಆ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ಹಾದಿ, ಈ ಹುಡುಕಾಟದಲ್ಲಿ  ಹೊಸದೇನೋ ತಿಳಿದಾಗ ಆಗುವ ತೃಪ್ತಿಯೇ ಮತ್ತಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ‌. ವರ್ಷಾನುಗಟ್ಟಲೆ ಪ್ರದರ್ಶನ ಗಳನ್ನು ನೀಡಿದಾಗ, ಪ್ರೇಕ್ಷಕರ ಮೆಚ್ಚುಗೆಗಳು ಅಭ್ಯಾಸವಾಗುತ್ತವೆ. ಒಮ್ಮೊಮ್ಮೆ ಪ್ರದರ್ಶನ ಅಷ್ಟು ಚನ್ನಾಗಿ ಇರದಿದ್ದಾಗಲೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ರಂಗದಲ್ಲಾದ ಅದ್ಭುತ ಕ್ಷಣಗಳು ಯಾರ ಗಮನಕ್ಕೂ ಬಂದಿರುವುದೇ ಇಲ್ಲ. ಹೀಗೆ ಹವ್ಯಾಸವಾಗಿ ಶುರುವಾದದ್ದು ಇನ್ನೂ ಆಳಕ್ಕಿಳಿದು  ಚಿಂತನೆಗೆ ಒಳಪಡುತ್ತದೆ. ಕಲೆ ಎನ್ನುವುದು ಜೀವನಕ್ಕೆ ಹಿಡಿದ ಕನ್ನಡಿ. ಆ ಕನ್ನಡಿಯಲ್ಲಿ ಕೇವಲ ನಮ್ಮ ಮುಖ ಮಾತ್ರ ಕಾಣುವುದಿಲ್ಲ ನಮ್ಮ ಕಣ್ಣುಗಳ ಮೂಲಕ ಬದುಕಿನ ಇತರ ಪ್ರತಿಫಲನಗಳನ್ನು ಕಾಣುವುದು ಅದನ್ನು ಕಾಣಿಸುವುದೇ  ಅದರ ಕೆಲಸ. ನಮ್ಮನ್ನು ಮರೆತು ಉಳಿದದ್ದನ್ನು ಕಾಣುವುದೇ ಅದರ ಉದ್ದೇಶ. ಕಲೆಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆದಷ್ಟು ಈ ಪ್ರತಿಫಲನಗಳು ಸ್ಪಷ್ಟವಾಗಿ ಕಾಣುತ್ತವೆ. ಆದರೆ ಕನ್ನಡಿಯನ್ನು ಕೇವಲ ನಮ್ಮ ಮುಖ ನೋಡಿಕೊಳ್ಳಲು ಮಾತ್ರ ಬಳಸಿದರೆ ಉಳಿದ ಪ್ರತಿಫಲನಗಳನ್ನು ನಾವು ಹೇಗೆ ಪ್ರೇಕ್ಷಕರಿಗೆ ದಾಟಿಸಲು ಸಾಧ್ಯ! ಕಲಾವಿದ ನೋಡಲು ಎಷ್ಟೇ ಸುಂದರವಾಗಿದ್ದರೂ, ಪ್ರೇಕ್ಷಕ ಅವನನ್ನು ಎಷ್ಟು ಹೊತ್ತು ನೋಡಲು ಸಾಧ್ಯ?! ಕಲೆ ಎನ್ನುವುದು ಮನುಷ್ಯ ಜೀವನದ ಅಭಿವ್ಯಕ್ತಿಯಾದ್ದರಿಂದ ಕಲಾವಿದನ ಅನುಭವ ಹೆಚ್ಚಾದಂತೆ ಈ ಕನ್ನಡಿಯಲ್ಲಿ ಕಾಣುವ ಬದುಕಿನ ಪ್ರತಿಫಲನಗಳು ಬೇರೆ ಬೇರೆ ಸ್ತರದಲ್ಲಿ ಗೋಚರವಾಗುತ್ತಾ ಹೋಗುತ್ತದೆ. ಕಲಾವಿದರೊಬ್ಬರ ಯೌವ್ವನ ಕಾಲದ ನೃತ್ಯವನ್ನೋ, ಅಭಿನಯನವನ್ನೋ ಮತ್ತು ಅವರದೇ ವಯಸ್ಸಾದ ನಂತರದ ಪ್ರಸ್ತುತಿಯನ್ನು ನೋಡಿದಾಗ ವ್ಯತ್ಯಾಸ ಅನುಭವಕ್ಕೆ ಬರುತ್ತದೆ. ಬಿರ್ಜು ಮಹಾರಾಜ್ ಅವರ ಸಣ್ಣ ವಯಸ್ಸಿನ ನೃತ್ಯಗಳಲ್ಲಿ ಹೆಚ್ಚು ಚಲನೆಗಳಿದ್ದರೆ ವಯಸ್ಸಾದ ನಂತರದ ಪ್ರಸ್ತುತಿಗಳು ಅತೀ ಕಡಿಮೆ ಚಲನೆಯಲ್ಲಿ ಅತೀ ಹೆಚ್ಚು ಪ್ರಭಾವವನ್ನು ಬೀರುವಂಥವು. ಕೆಲವಂತೂ ಅವರೂ ಏನೂ ಮಾಡುತ್ತಲೇ ಇಲ್ಲ ಅನಿಸುವಷ್ಟು ಮಟ್ಟಿಗೆ  subtle ಆಗಿವೆ.  ಅವರನ್ನು ಅನುಕರಿಸಲು ಈಗ ನೃತ್ಯ ಕಲಿಯುತ್ತಿರುವವರು ಪ್ರಯತ್ನಿಸಲೂ ಕಷ್ಟ‌. ವರ್ಷಾನುಗಟ್ಟಲೆ ಮಾಡಿದ ನಿರಂತರ ಅಭ್ಯಾಸದಲ್ಲಿ ಅವರ ಕಲೆ ಅಷ್ಟು ಸೂಕ್ಷ್ಮ ಮತ್ತು ತೀಕ್ಷ್ಣವಾಗಿರುತ್ತದೆ‌. ಅತೀ ಕಡಿಮೆ ಚಲನೆಯಲ್ಲಿ ನೃತ್ಯ ಮಾಡುವುದಕ್ಕೆ, ಅಭಿನಯ ಮಾಡುವುದಕ್ಕೆ ಅತೀ ಹೆಚ್ಚು ಶಕ್ತಿ, ಕೌಶಲ ಮತ್ತು ಅಭ್ಯಾಸ ಬೇಕು. ಇಂಥದ್ದನ್ನು ಗಮನಿಸಿ ಅರ್ಥ ಮಾಡಿಕೊಳ್ಳುವುದಕ್ಕೂ ಅನುಭವ ಬೇಕಾಗುತ್ತದೆ. ಅಂದರೆ, ಒಬ್ಬ ಕಲಾವಿದ ತಾನು ಕಲಾಭ್ಯಾಸದಲ್ಲಿ ಆಳಕ್ಕಿಳಿದು ಪಡೆದ ಅದರ ಅನುಭವವನ್ನು ಪ್ರೇಕ್ಷಕರಿಗೂ ನೀಡುತ್ತಾನೆ. ನಿರಂತರವಾಗಿ ಪ್ರದರ್ಶನಗಳನ್ನು ನೋಡುವುದರಿಂದ ಕಲೆಯ ಬಗ್ಗೆ ಪ್ರೇಕ್ಷಕನಿಗೆ ಇರುವ ಪರಿಕಲ್ಪನೆಯೂ ಆಳವಾಗುತ್ತಾ ಹೋಗುತ್ತದೆ. ಆದರೆ ಒಬ್ಬ ಕಲಾವಿದನೆ ತನ್ನ ಸಾಧ್ಯತೆಗಳನ್ನು ಮೀರದೇ ಇದ್ದರೆ ಪ್ರೇಕ್ಷಕರಿಗೆ ಅದರ ಅನುಭವ ಆಗಲು ಹೇಗೆ ಸಾಧ್ಯ? ಪ್ರೇಕ್ಷಕರು ಏನು ನೋಡುತ್ತಾರೋ ಅದರಿಂದ ತೃಪ್ತರಾಗುತ್ತಾರೆ. ತನ್ನ ಕಲೆಯ ಮೂಲಕ ನೋಡುಗರಿಗೆ ಕೇಳುಗರಿಗೆ ತಾನು ತನ್ನ ಅಭ್ಯಾಸದಲ್ಲಿ ಕಂಡುಕೊಂಡ ಅನುಭವಗಳನ್ನು ಪ್ರೇಕ್ಷಕರಿಗೆ ದಾಟಿಸುವ ಜವಾಬ್ದಾರಿ ಕಲಾವಿದನದ್ದೇ!

ಕಲೆಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆದಂತೆಲ್ಲಾ ಅಭ್ಯಾಸದಲ್ಲಿ ಮತ್ತು ಪ್ರದರ್ಶನಗಳಲ್ಲಿ ಬೇರೆ ಬೇರೆ ರೀತಿಯ ಅನುಭವಗಳು ಆಗುತ್ತಾ ಹೋಗುತ್ತದೆ‌. ತಂತ್ರಗಳನ್ನು ಕಲಿಯುವ ಮೂಲಕ ಪ್ರಾರಂಭವಾದ ಅಭ್ಯಾಸ ತಂತ್ರವನ್ನು ಮೀರಿ ಬೆಳೆಯುವುದಕ್ಕೆ ಅನೇಕ ವರ್ಷಗಳ ಅಭ್ಯಾಸ, ಅನುಭವ ಬೇಕಾಗುತ್ತದೆ. ಕಲಿಯುವಾಗ ಓದಿದ, ಕೇಳಿದ ಪಾಠಗಳು ಸ್ವತಃ ಕಲಾವಿದನ ಅಭ್ಯಾಸ, ಅನುಭವದಿಂದಲೇ ಗೋಚರವಾಗಬೇಕು. ಬಹಳ ಸರಳವಾದ ವಿಷಯ ಅನುಭವಕ್ಕೆ ಬರುವುದಕ್ಕೆ ವರ್ಷಗಳೇ ಬೇಕಾಗಬಹುದು. ನಿರಂತರ ಅಭ್ಯಾಸ  ಕಲಾವಿದನನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುತ್ತದೆ. ಕರತಾಡನಗಳ ಆಚೆಗೂ ಅವನನ್ನು ಕೈ ಹಿಡಿದು ನಡೆಸುತ್ತದೆ‌. ಹಾಗಾಗಿಯೇ ಚಿಂತನೆ ಇದ್ದಲ್ಲಿ ಮಾತ್ರ ವಿಮರ್ಶೆ ಎನ್ನುವುದು ಹುಟ್ಟುತ್ತದೆ‌. ಸ್ವ ವಿಮರ್ಶೆ ಇದ್ದಾಗ ಮಾತ್ರ ಒಬ್ಬ ಕಲಾವಿದ ಬೆಳೆಯುತ್ತಾ ಹೋಗುತ್ತಾನೆ. ತನ್ನ ಅಭ್ಯಾಸದಲ್ಲಿ ಹೊಸತನ್ನು ಕಾಣಲು ಸಾಧ್ಯವಾಗುತ್ತದೆ‌. ಆದರೆ ಇಂಥದಕ್ಕೆ ಸರಿಯಾದ ಮಾರ್ಗದರ್ಶನ ಬೇಕು. ಸರಿಯಾದ ಗುಂಪಿನಲ್ಲಿ ಕಲಾವಿದ ಇರಬೇಕು.

ಪ್ರತಿ ಕಾಲಘಟ್ಟದಲ್ಲೂ ಕಲಾಭ್ಯಾಸಕ್ಕೆ, ಪ್ರದರ್ಶನಗಳಿಗೆ ಸವಾಲುಗಳು ಇದ್ದದ್ದೇ. ಇಂದು ನಮ್ಮ ಕಾಲದಲ್ಲಿ ನಾವು ಎದುರಿಸುತ್ತುರುವ ಅಂತಹ ಮುಖ್ಯವಾದ ಸವಾಲೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಪ್ರದರ್ಶಕ ಕಲೆಗಳು. ಇದು ಒಂದು ರೀತಿಯ ಭ್ರಾಮಕ ವಾಸ್ತವ. ನಾವು ಒಂದು ಹಾಡನ್ನೋ ನೃತ್ಯವನ್ನೋ ರೆಕಾರ್ಡ್ ಮಾಡಿ ಪ್ರಕಟ ಮಾಡುತ್ತೇವೆ. ಸ್ವಲ್ಪ ಸಮಯದಲ್ಲಿ ಯಾರು ಯಾರು ಅದನ್ನು ನೋಡುತ್ತಿದ್ದಾರೆ ಎನ್ನುವುದು ನಂತರ ಎಷ್ಟು ಜನ ಲೈಕ್, ಕಾಮೆಂಟ್ ಅಥವಾ ಲೈಕ್ ಮಾಡಿದ್ದಾರೆ ಎನ್ನುವುದರಿಂದ ನಮ್ಮನ್ನು ಒಂದು ಪ್ರೇಕ್ಷಕವರ್ಗ ಮೌಲ್ಯೀಕರಿಸುತ್ತಿದೆ‌ ಎನ್ನುವ ಭ್ರಮೆಯನ್ನು ಅದು ಸೃಷ್ಟಿಸುತ್ತದೆ‌.  ಒಂದು ನಾಟಕದ ಪ್ರದರ್ಶನವನ್ನೋ  ನೃತ್ಯ ಪ್ರದರ್ಶನವನ್ನೋ ಅಭ್ಯಾಸ ಮಾಡಿ ಅದು ಪ್ರದರ್ಶನದ ಹಂತಕ್ಕೆ ಬರಬೇಕಾದರೆ ಹಲವು ತಿಂಗಳುಗಳ ಸತತ ಶ್ರಮ ಬೇಕಾಗುತ್ತದೆ‌. ಆದರೆ ಅದು ಯಾವುದೂ ಇಲ್ಲದೇ ಯಾರೋ ಹಾಡಿರುವ ಹಾಡಿಗೆ ಲಿಪ್ ಸಿಂಕ್ ಮಾಡುವ ಮೂಲಕ, ನೃತ್ಯ ಮಾಡುವ ಮೂಲಕ  ಅದು ಒಬ್ಬರ ಮನಸಿನಲ್ಲಿ ತಾನು ಅದನ್ನು ಸಾಧಿಸಿದ್ದೇನೆ ಎನ್ನುವ ಭ್ರಮೆಯನ್ನು ಹುಟ್ಟುಹಾಕುತ್ತದೆ‌. ಮತ್ತು ಪ್ರತಿಕ್ರಿಯೆಗಳಿಂದ ತಾನು ಒಬ್ಬ ಕಲಾವಿದ ಎನ್ನುವ ಭ್ರಮೆ ಸೃಷ್ಟಿಸುತ್ತದೆ. ಏನೂ ಪರಿಶ್ರಮವಿಲ್ಲದೇ ಜನರ ಮನ್ನಣೆ ದೊರಕಿದಾಗ ‘ತಾನು ಮಾಡುತ್ತಿರುವುದು ಸರಿ. ತನ್ನಲ್ಲಿ ಅದ್ಭುತವಾದ ಪ್ರತಿಭೆ ಇದೆ’ ಎನಿಸುತ್ತದೆ. ಆದರೆ ಅದು ಜಾಲತಾಣ ಸೃಷ್ಟಿಸಿದ ಭ್ರಮೆ ಅಷ್ಟೆ‌. ಅದ್ಭುತವಾದ ಕ್ಯಾಮೆರಾ ವರ್ಕ್, ವರ್ಷರಂಜಿತ ಹಿನ್ನೆಲೆ, ಒಳ್ಳೆಯ ಬೆಳಕು ಚಂದದ ಬಟ್ಟೆಗಳನ್ನು ತೊಟ್ಟು ವೀಡಿಯೋ ಮಾಡಿದರೆ ನಿಜವಾಗಿ ಅಭ್ಯಾಸ ಮಾಡಿರುವವರಿಗಿಂತ ಹೆಚ್ಚಿನ ಪ್ರಭಾವವನ್ನು ಆ ವೀಡಿಯೋಗಳು ಬೀರುತ್ತವೆ. ಆದರೆ ಒಂದು ಕಲಾಭ್ಯಾಸದ ಸಂತೋಷ ಸಿಗುವುದು ಅದನ್ನು ಅಭ್ಯಾಸ ಮಾಡುವ, ತಿಳಿದುಕೊಳ್ಳುವಲ್ಲಿ ಮತ್ತು ಅನುಭವ ಪಡೆಯುವಲ್ಲಿ. ಅದರಿಂದ ಬರುವ ಪ್ರಸಿದ್ಧಿ, ಪ್ರಶಂಸೆ, ಸನ್ಮಾನಗಳು ಅದರ ಬೈಪ್ರಾಡಕ್ಟ್ ಆಗಿ ಇರುತ್ತದೆ. ಮತ್ತು ತಾತ್ಕಾಲಿಕ ಕೂಡಾ. ಆದರೆ ಇಂತಹ ವಿಡಿಯೋಗಳ ಉದ್ದೇಶ ಕಲೆಯ ಮೂಲಕ ತನ್ನನ್ನು ಕಂಡುಕೊಳ್ಳುವುದರ ಬದಲು ಕಲೆಯ ನೆಪದಲ್ಲಿ ‘ತನ್ನನ್ನು’ ಕಾಣಿಸಿಕೊಳ್ಳುವುದು. ಇನ್ನೊಂದು ಅಂಶವೆಂದರೆ ಇಂತಹ ವೀಡಿಯೋಗಳನ್ನು ಜನ ಕಾಲಹರಣಕ್ಕಾಗಿ ನೋಡುತ್ತಾರಾದ್ದರಿಂದ ಅಲ್ಲಿ ವಿಮರ್ಶೆಯ ಸುಳಿವೂ ಇರುವುದಿಲ್ಲ ಮತ್ತು ಮಾಡಿದ್ದೆಲ್ಲವೂ ಸರಿ. ಹಾಗಾಗಿ ಕಲಿತವರು ಯಾರು ಕಲಿಯದವರು ಯಾರು? ತಿಳಿದವರು ಯಾರು? ಯಾವುದು ಸರಿ ಯಾವುದು ತಪ್ಪು? ಎನ್ನುವುದು ತಿಳಿಯದಂಥ  ಸಂದರ್ಭದಲ್ಲಿ ನಾವಿದ್ದೇವೆ. ಪ್ರದರ್ಶಕ ಕಲೆಗಳ ಎಷ್ಟೊಂದು ಕಂಟೆಂಟ್ ಸಾಮಾಜಿಕ ಜಾಲತಾಣದಲ್ಲಿ ಬರುತ್ತವೆ! ಅದರಲ್ಲಿ ಕೆಲವು  ನಿಜವಾಗಿಯೂ ನಮಗೆ ಸ್ಫೂರ್ತಿ ಕೊಡುವಂಥದ್ದಿರುತ್ತದೆ. ಆದರೆ ಹೆಚ್ಚಿನ ವೀಡಿಯೋಗಳು ಕೇವಲ ತೋರುಗಾಣಿಕೆಯವು.   ಇತ್ತೀಚೆಗೆ ಪ್ರಸಿದ್ಧವಾದ ಸಿತಾರ್ ವಾದನದ ಹಿನ್ನೆಲೆಗೆ ತಂತಿಯೇ ಇಲ್ಲದ ತಂಬೂರಿಯನ್ನು ಹಿಡಿದು ನುಡಿಸುವಂತೆ ನಟನೆ ಮಾಡಿದ ಮಹಿಳೆಯೊಬ್ಬಳ  ವೀಡಿಯೋ ವೈರಲ್ ಆಯಿತು. ಆದರೆ ಸಿತಾರ್ ಯಾವುದು ತಂಬೂರಿ ಯಾವುದು ಎನ್ನುವ ವ್ಯತ್ಯಾಸವೇ ತಿಳಿಯದ ಎಷ್ಟೊದು ನೋಡುಗರು ಇರುವಾಗ ಅಂತಹ ವೀಡಿಯೋಗಳು ಜನಪ್ರಿಯವಾಗುವ ಭ್ರಮೆಯನ್ನು ಹುಟ್ಟಿಸುತ್ತದೆ. ಇದೆಲ್ಲದರ ಹಿಂದಿನ ಮನಃಸ್ಥಿತಿಯನ್ನು ನೋಡಿದಾಗ ಪ್ರಚಾರಪ್ರಿಯತೆ ಮತ್ತು ಪರಿಶ್ರಮ ಇಲ್ಲದೇ ಸಿಗುವ ಪ್ರಶಂಸೆಯ ಹಪಾಹಪಿ ಇಂದಿನ ತಲೆಮಾರಿಗೆ ಬಾಧಿಸುತ್ತಿರುವ ಒಂದು ರೋಗದಂತೆ ಕಾಣುತ್ತದೆ.

ಹಳೆಯ ಕಾಲದಲ್ಲಿ ಏನನ್ನಾದರೂ ಕಲಿಯಲು ಹಲವಾರು ವರ್ಷಗಳು ಬೇಕಾಗುತ್ತಿತ್ತು. ಗುರುಗಳ ಅನುಮತಿ ಸಿಗದೆ ರಂಗದ ಮೇಲೆ ಪ್ರದರ್ಶನ ನೀಡುವುದು ಸಾಧ್ಯವಿರುತ್ತಿರಲಿಲ್ಲ. ಕಾಲ ವೇಗವಾಗತೊಡಗಿದಂತೆ ಬದಲಾಗುತ್ತಿದ್ದಂತೆ ಕಲಿಕೆಯ ಕ್ರಮಗಳೂ ಬದಲಾಯಿತು. ದಿನಗಟ್ಟಲೆ ಆಭ್ಯಾಸ ಮಾಡುವ ಬದಲು ದಿನದಲ್ಲಿ ಕೆಲವು ಗಂಟೆಗಳಾಯಿತು ಈಗ ಹೆಚ್ಚಿನ ತರಗತಿಗಳು ವಾರಕ್ಕೆ ಎರಡು ದಿನ.  ಹೀಗಾದಾಗ ನಿರಂತರವಾಗಿ ಕಲೆಯ ಜೊತೆ ಸಂಪರ್ಕದಲ್ಲಿರುವುದನ್ನು ಕಲಾವಿದನೇ ರೂಢಿ ಮಾಡಿಕೊಳ್ಳಬೇಕಾಗುತ್ತದೆ‌. ಅಭ್ಯಾಸ ಎಂದರೆ ಕೇವಲ ನಟನೆ, ನೃತ್ಯ ಅಥವಾ ಸಂಗೀತವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡುವುದು ಮಾತ್ರವಲ್ಲ ಬದಲಿಗೆ ಅದರ ಬಗ್ಗೆ ಓದು, ಚರ್ಚೆ, ಬರವಣಿಗೆ, ಮನನ ಇವೆಲ್ಲವೂ ಅಭ್ಯಾಸದ ಭಾಗವೇ!

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌.  ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ  ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ  ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ  ಆಸೆ, ಕಾವನ್ನು  ಆ ಒಂದು  ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ. ಅದನ್ನು ಕೇವಲ ತೋರುಗಾಣಿಕೆಗೆ ಬಳಸಿಕೊಳ್ಳುವುದು ಆ ನಿರ್ದಿಷ್ಟ ಕಲೆಗೇ ಅಪಚಾರ ಮಾಡಿದಂತೆ.

ಇದಕ್ಕೆ ಕಾರಣಗಳೂ ಇವೆ. ಇದು ಉತ್ಸವಗಳ ಕಾಲ.  ಉತ್ಸವಗಳಲ್ಲಿ ಮನೆಯ ಸೈಟಿನ ಅಳತೆಯಲ್ಲಿ ೬೦*೪೦, ೩೦*೪೦ ಸ್ಟೇಜ್ ಹಾಕಿರುತ್ತಾರೆ. ಎಷ್ಟೆ ಪ್ರತಿಭಾವಂತ ಕಲಾವಿದನೂ ಅಲ್ಲಿ ಒಬ್ಬನೇ ಪ್ರಸ್ತುತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಕಲಿತವರೂ ಕಲಿಯದವರೂ ಎಲ್ಲರನ್ನೂ ಸೇರಿಸಿ ಸ್ಟೇಜ್ ತುಂಬಿಸುವುದು ಅನಿವಾರ್ಯವಾಗುತ್ತದೆ‌. ಹೆಚ್ಚು ಸಂಭಾವನೆ ಪಡೆಯಲು ಕಲಾವಿದರ ಸಂಖ್ಯೆ ಹೆಚ್ಚು ಇರಬೇಕಾಗುತ್ತದೆ. ಇದು ಒಮ್ಮೊಮ್ಮೆ ಕಲಾವಿದನಿಗೆ ಅನಿವಾರ್ಯ ಕೂಡಾ. ಒಬ್ಬ ಉತ್ಕೃಷ್ಟ ಮಟ್ಟದ ಕಲಾವಿದನೂ ‘ಮಂದೆಯಲಿ ಒಂದಾಗಿ’ ಇಂತಹ ಕಾರ್ಯಕ್ರಮಗಳನ್ನು ನೀಡಬೇಕಾಗುತ್ತದೆ‌. ಮತ್ತು ಇದನ್ನು ಒಂದು ಫ಼ಾರ್ಮುಲಾದಂತೆ ಬಳಸಿಕೊಳ್ಳುವ ತಂಡಗಳೂ ಪ್ರದರ್ಶನ ನೀಡುತ್ತವೆ.  ಇಲ್ಲಿ ಹಣ ಬರುತ್ತದೆ, ಪ್ರಸಿದ್ಧಿ ಬರುತ್ತದೆ, ಬ್ಯಾನರ್‌ಗಳಲ್ಲಿ ಫೋಟೋ ಬರುತ್ತದೆ‌.  ಆದರೆ  ಕಲಾವಿದನೊಬ್ಬನ ನಿಜವಾದ ಶಕ್ತಿ ಮುನ್ನೆಲೆಗೆ ಬರುವುದೇ ಇಲ್ಲ. ಅವನು ತನ್ನ ಕಲೆಯ ಮೂಲಕ ಏನು ಹೇಳಬಯಸುತ್ತಿದ್ದಾನೆ ಎನ್ನುವುದು ಯಾರಿಗೂ ತಿಳಿಯುವ ಅವಕಾಶವೇ ಇರುವುದಿಲ್ಲ. ಇಂದು ಕಲೆ ಕೂಡಾ ಇಲ್ಲಿ ಸಂತೆಯ ಸರಕಾಗಿದೆ. ಈ ಕಾಲದಲ್ಲಿ ಎಲ್ಲವೂ ದೊಡ್ಡ ಕಾರ್ಯಕ್ರಮವಾಗಬೇಕು ಸುದ್ಧಿಯಾಗಬೇಕು. ಹೆಚ್ಚು ಪ್ರಚಾರವಾಗಬೇಕು. ಮುಖ್ಯ ರೀಲ್ ಗಳಾಗಬೇಕು‌. ಕಡಿಮೆ ಸಮಯದಲ್ಲಿ ಹೆಚ್ವು ಜನರನ್ನು ಆಕರ್ಷಿಸಬೇಕು.

ಕಲೆ ಎನ್ನುವುದು ನಿರಂತರವಾಗಿ ಹರಿಯುತ್ತಿರುವ ಒಂದು ನದಿಯ ಹಾಗೆ. ಜೊಳ್ಳನ್ನು ತೇಲಿಸಿ ಗಟ್ಟಿಯನ್ನು ಉಳಿಸುವ ಶಕ್ತಿ ಅದಕ್ಕಿದೆ. ಇಂತಹ ಗೊಂದಲಗಳ ನಡುವೆ ನಾವು ಎಲ್ಲಿರಬೇಕು? ಕಲೆಯ ಅಭ್ಯಾಸದಲ್ಲಿ ನನ್ನ ದಾರಿ ಯಾವುದು ಎನ್ನುವುದನ್ನು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲಾ ಕಲದಲ್ಲೂ ಇರುವಂಥದ್ದೇ. ಒಂದು ಹಂತವಾದಮೇಲೆ ಕಲಾವಿದ ಮತ್ತು ಕಲೆ ಎರಡೂ ಒಂದೇ ಆಗುತ್ತದೆ‌. ಕಲಾವಿದ ಭ್ರಷ್ಟನಾಗುತ್ತಾ ಹೋದ ಹಾಗೆ ಅವನಿಗೆ ಗೊತ್ತೇ ಆಗದಂತೆ  ಅವನ ಕಲೆಯೂ ಹಾಗೆ ಆಗುತ್ತಾ ಹೋಗುತ್ತದೆ. ನಮ್ಮೊಳಗಿನ ಕಲೆಯನ್ನು ಕಾಪಾಡಬೇಕಾದರೆ ಕಲಾವಿದ  ಈ ಹೊರಗಿನ ಒತ್ತಡಗಳಿಂದ, ಆಮಿಷಗಳಿಂದ  ತನ್ನನ್ನು ತಾನು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗುತ್ತದೆ.

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ