ಓದುಗ/ಓದುಗಳು ಕವನ ಓದುವಾಗ ಒಂದು ಚಲನಚಿತ್ರ ನೋಡಿದಂತೆ ಅನಿಸಿದರೆ ಆ ಕವನ ಯಶಸ್ವಿಯಾದಂತೆ ಅಂತ ನಾನು ಯಾವಾಗಲೂ ಹೇಳುವೆ. ಇದಲ್ಲದೆ, ಚಲನಚಿತ್ರಗಳು ಮತ್ತು ಕವನಗಳು ಇನ್ನೊಂದು ರೀತಿಯಲ್ಲಿ ಕೂಡ ಸಮಾನತೆ ಹೊಂದಿವೆ ಎಂದು ನಾನು ನಂಬುತ್ತೇನೆ, ಹೇಗೆಂದರೆ, ಯಾವುದೇ ಒಂದು ಚಲನಚಿತ್ರವು ಒಂದಕ್ಕಿಂತ ಹೆಚ್ಚು ಪೀಳಿಗೆಯ ಜನರ ಜೀವನವನ್ನು ಒಳಗೊಂಡಿರುತ್ತದೆ, ಮತ್ತು ಇಡೀ ಯುಗಗಳನ್ನು ಎರಡು ಗಂಟೆಗಳ ಕಾಲದ ಒಳಗೆ ಸಂಕುಚಿತಗೊಳಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಇಂಡ್ರೆ ವಲಾಂಟಿನಾಯ್ಟೆ-ಯವರ (Indrė Valantinaitė) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಲಿಥುವೇನಿಯಾ ದೇಶದ ಕೌನಾಸ್ ನಗರದಲ್ಲಿ 1984-ರಲ್ಲಿ ಜನಿಸಿದ ಇಂಡ್ರೆ ವಲಾಂಟಿನಾಯ್ಟೆ, ಜೆಸುವಿಟ್ ಜಿಮ್ನೇಶಿಯಮ್ ಪದವಿ ಪಡೆದ ನಂತರ, ವಿಲ್ನಿಯಸ್ ವಿಶ್ವವಿದ್ಯಾಲಯದಲ್ಲಿ ಮತ್ತು ವಿಲ್ನಿಯಸ್ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ‘ಆರ್ಟ್ಸ್ ಮ್ಯಾನೇಜ್‌ಮೆಂಟ್’ ವಿಷಯದ ಬಗ್ಗೆ ಅಧ್ಯಯನ ಮಾಡಿದರು. ಆರಂಭದಲ್ಲಿ ಅವರು ತಮ್ಮ ಕವನಗಳನ್ನು ಅನೇಕ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ, 2006-ರಲ್ಲಿ ತಮ್ಮ ಮೊದಲ ಸಂಕಲನವನ್ನು ಹೊರತಂದರು. ಈ ಸಂಕಲನ, “Žuvimi ir lelijomis” (Of Fish and Lilies) ಲಿಥುವೇನಿಯನ್ ಯೂನಿಯನ್ ಆಫ್ ರೈಟರ್ಸ್‌-ನ 2006-ನೇ ಸಾಲಿನ ‘ಮೊದಲ ಪುಸ್ತಕ ಸ್ಪರ್ಧೆ’ಯ ಕವನ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆಯಿತು. 2011-ರಲ್ಲಿ ಪ್ರಕಟವಾದ ಅವರ ಎರಡನೇ ಸಂಕಲನ “Pasaka apie meilę ir kitus žvėris” (Tales about Love and Other Animals), 2012-ರ ‘ಯಂಗ್ ಯೋಟ್ವಿಂಗಿಯನ್’ (Young Yotvingian) ಪ್ರಶಸ್ತಿಯನ್ನು ಗೆದ್ದಿತು. ಕವಿತೆಗಳನ್ನು ಬರೆಯುವುದರ ಜೊತೆಗೆ, ವಲಾಂಟಿನಾಯ್ಟೆಯವರು ಗಾಯಕಿಯೂ ಹೌದು; ಹಲವಾರು ಸಂಗೀತ ಉತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಹಾಗೂ ಅವರು ಟಿವಿ ಪತ್ರಕರ್ತೆ ಮತ್ತು ನಿರ್ಮಾಪಕಿಯೂ ಆಗಿದ್ದಾರೆ.

ಕವಿಯ ಸ್ವ-ಚಿಂತನೆ, ದೈಹಿಕ ಮತ್ತು ಶೃಂಗಾರದ ಲಕ್ಷಣಗಳನ್ನು ಅವರ ಮೊದಲ ಸಂಕಲನ “Žuvimi ir lelijomis”-ದಲ್ಲಿ (Of Fish and Lilies) ಅತ್ಯಂತ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಸಾಹಿತ್ಯ ವಿಮರ್ಶಕಿ ಯುಜೆನಿಯಾ ವೈಟ್ಕೆವಿಚಿಯುಟೆ ಈ ಸಂಕಲನವನ್ನು ಮುಕ್ತವಾಗಿ ಹೀಗೆ ವಿವರಿಸಿದ್ದಾರೆ: “ಮಹಿಳೆಯ ಸ್ವಭಾವದ ಹರವುಗಳು, ಆಧುನಿಕ ಸಾಮಾಜದ ಆತಂಕಗಳು, ಆಕರ್ಷಕವಾದ ಹಾಗೂ ಸ್ವಲ್ಪ ನಿಧಾನವಾದ ಸ್ತ್ರೀಯರ ಪ್ರಣಯ, ಶಾರೀರಿಕ ವಿಶಿಷ್ಟತೆಗಳಿಗೆ ತ್ವರಿತವಾದ ಜಿಗಿತಗಳು – ಹೀಗೆ, ಕವಿಯು ಪ್ರಯೋಗಗಳನ್ನು ಮಾಡುವಲ್ಲಿ ಹಿಂಜರಿಯುವುದಿಲ್ಲ ಹಾಗೂ ಸೂಕ್ಷ್ಮತೆ ಮತ್ತು ಹೆಚ್ಚು ಸ್ಫುಟವಾದ ನಾಟಕೀಯ ಭಾಷೆಯ ನಡುವಿನ ಸಂಪರ್ಕಗಳನ್ನು ತೋರಿಸಲು ಸಹ ಹಿಂಜರಿಯುವುದಿಲ್ಲ.”

ಐದು ವರ್ಷಗಳ ನಂತರ ವಲಾಂಟಿನಾಯ್ಟೆಯವರ ಎರಡನೇ ಕವನ ಸಂಕಲನ “Pasaka apie meilę ir kitus žvėris” (Tales about Love and Other Animals) ಪ್ರಕಟವಾಯಿತು. ಅದರ ಶೀರ್ಷಿಕೆಯ ಬಗ್ಗೆ ವಲಾಂಟಿನಾಯ್ಟೆ: “ವಯಸ್ಕರಿಗಾಗಿ ಬರೆಯಲಾದ ಪ್ರಾಸಬದ್ಧ ಕಥೆಗಳು ಎಂದು ನನ್ನ ಕೃತಿಗಳ ಬಗ್ಗೆ ನಾನು ಸುಮಾರು ಸಲ ಹೇಳಿದ್ದೇನೆ, ಅದಕ್ಕೆಂದೇ ಈ ಶೀರ್ಷಿಕೆ.” ನಿದ್ರಿಸುವ ಅಪ್ಸರೆಗಳು, ಸೇಬಿನ ತೋಟಗಳು, ಸಭಾಂಗಣಗಳು, ಕಿರೀಟಗಳು ಮತ್ತು ಪ್ರಾಣಿಗಳಾಗಿ ಮಾರ್ಪಟ್ಟ ಜನರು – ಇಂತಹ ಕಾಲ್ಪನಿಕ ಕಿನ್ನರಿಲೋಕದ ಸೌಂದರ್ಯಪ್ರಜ್ಞೆಯಿಂದ ಅವರ ಕಾವ್ಯ ಪ್ರಪಂಚ ತುಂಬಿದೆ. ದೈನಂದಿನ ಸನ್ನಿವೇಶಗಳು ಸಹ ಕಾಲ್ಪನಿಕ ಅನುಭವಗಳಾಗಿ ಬದಲಾಗುತ್ತವೆ:
ಒಬ್ಬ ಸಹೋದ್ಯೋಗಿ ಭಸ್ಮವನ್ನು ಅಲ್ಲಾಡಿಸುತ್ತಾಳೆ, ನಿಧಾನವಾಗಿ,
ಶ್ಯಾಮಲ ಕೇಶದವಳು ಇಂದು ಹೊಂಬಣ್ಣದ ಕೇಶದವಳಾಗಿ ಮಾರ್ಪಡುತ್ತಾಳೆ.
ಅವಳ ಪುಟ್ಟ ತಲೆಗೆ ಯಾವ ಬಣ್ಣ ಹೆಚ್ಚು ಸರಿಹೊಂದುತ್ತದೆ
ಎಂದು ನಾನು ಊಹಿಸಲು ಪ್ರಯತ್ನಿಸುತ್ತೇನೆ,
ಒಡ್ಡೊಡ್ಡಾದ ಕೈಗಳ ಮಗು ಆಟವಾಡುತ್ತಿದ್ದಾಗ,
ಆಕಸ್ಮಿಕವಾಗಿ ಅದರ ಕೈಯಿಂದ ಜಾರಿದ ಸೇಬಿನಂತೆ
ಅದು ರಾಜನ ಸಭಾಂಗಣದ ಮೊಸಾಯಿಕ್
ನೆಲದ ಮೇಲೆ ಉರುಳಾಡುತ್ತಿರುವಾಗ.

ಸಾಹಿತ್ಯ ವಿಮರ್ಶಕಿ ವರ್ಜಿನಿಯಾ ಸಿಬರಾಸ್ಕೆ ವಲಾಂಟಿನಾಯ್ಟೆಯವರ ಕವನಗಳನ್ನು ಸಂಜ್ಞಾಶಾಸ್ತ್ರದ ದೃಷ್ಟಿಕೋನದಿಂದ ನೋಡುತ್ತಾ, “ವಲಾಂಟಿನಾಯ್ಟೆಯವರ ಕಾವ್ಯವು ಜನಪ್ರಿಯ ಸಂಸ್ಕೃತಿಯ ಉತ್ತಮ-ಗುಣಮಟ್ಟದ ವಸ್ತುವಾಗಿದೆ, ಇದನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಬಹುದು: ಓದುಗ/ಓದುಗಳು ತನ್ನನ್ನು ತಾನು ಕಾವ್ಯದ ವಿಷಯದೊಂದಿಗೆ ಗುರುತಿಸಿಕೊಳ್ಳಬಹುದು ಅಥವಾ ಅವಳಿಗಾಗಿ ಆಸೆ ಪಡಬಹುದು, ಅವಳ ಅಸಹಾಯಕತೆ ಮತ್ತು ದುರ್ಬಲತೆಯನ್ನು ಮೆಚ್ಚಿಕೊಳ್ಳಬಹುದು.”

ವಲಾಂಟಿನಾಯ್ಟೆ ಅವರ ಕವನಗಳನ್ನು ಕಾವ್ಯಾತ್ಮಕ ಕನಿಷ್ಠೀಯತೆ (poetic minimalism) ಎಂದು ವರ್ಣಿಸಬಹುದು – ಸಣ್ಣ ನುಡಿಗಟ್ಟುಗಳು, ಸೂಕ್ಷ್ಮ ಧ್ವನಿ, ಮತ್ತು ಸೂಚ್ಯ ರೂಪಕಗಳು ಇವರ ಕವನಗಳಲ್ಲಿ ಕಾಣುತ್ತೇವೆ. ಅವರ ಮೊದಲ ಸಂಕಲನಗಳು ಇಬ್ಬಗೆಯ ಸ್ತ್ರೀತ್ವವನ್ನು ಕೇಂದ್ರೀಕರಿಸುತ್ತವೆ. ಅವರ ಮೊದಲ ಸಂಕಲನದ ಶೀರ್ಷಿಕೆ, ‘ಆಫ್ ಫಿಶ್ ಅಂಡ್ ಲಿಲೀಸ್,’ ಲಿಲಿ ಹೂವಿನ ರೂಪಕದೊಂದಿಗೆ ನೀರಿನ ಆಳದಲ್ಲಿ ವಾಸಿಸುವ ಪಾತಾಳದ ಮೀನುಗಳ ರೂಪಕವನ್ನು ಒಟ್ಟಿಗೆ ತರುತ್ತದೆ. ಲಿಲಿ ಹೂವು ಸಾಂಪ್ರದಾಯಿಕವಾಗಿ ಪವಿತ್ರ ಸಂಕೇತವೆಂದು ಪರಿಗಣಿಸಲಾಗಿದೆ, ಹಾಗೂ ಇದು ಯುವತಿಯ ಆಧ್ಯಾತ್ಮಿಕ ಉದ್ವೇಗಗಳನ್ನು ಪ್ರತಿನಿಧಿಸುತ್ತದೆ. ವಿಷಯಾಸಕ್ತಿ, ಇಂದ್ರಿಯ ಸುಖ ಆನಂದಿಸುವುದು, ಇವು ಹೆಚ್ಚಿನ ಮಟ್ಟಿಗೆ ವ್ಯಾಲಂಟಿನೈಟ್ ಅವರ ಕವನಗಳ ವಸ್ತುವಾಗಿದ್ದರೂ, ವಿಪರ್ಯಾಸವೆಂಬಂತೆ, ಅವರ ಕವನಗಳು ಪವಿತ್ರತೆಗಾಗಿ ಒಂದು ಅನಿರ್ವಚನೀಯ ಅಂತರ್ನಿಹಿತ ಹಂಬಲವನ್ನೂ ಪೋಷಿಸುತ್ತವೆ. 2020-ರಲ್ಲಿ ಪ್ರಕಟವಾದ ಅವರ ನಾಲ್ಕನೆಯ ಸಂಕಲನದಲ್ಲಿ (”Apsisiautusios saul” Wrapped in the Sun), ಅವರ ಹಿಂದಿನ ಕವನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವ್ಯಂಗ್ಯಾತ್ಮಕ ಭಾಷೆಯ ಬದಲಿಗೆ ಸೂಕ್ಷ್ಮವಾದ ಸಾಂಕೇತಿಕತೆ ಹಾಗೂ ಧಾರ್ಮಿಕ ಲಕ್ಷಣಗಳನ್ನು ಕಾಣಬಹುದು. ಈ ಸಂಕಲನದ ಮೊದಲ ಮತ್ತು ಕೊನೆಯ ಅಧ್ಯಾಯಗಳು ‘ಪವಿತ್ರ ಬೈಬಲ್’ನಲ್ಲಿರುವ ಶೃಂಗಾರಕಾವ್ಯ, ‘ದಿ ಸಾಂಗ್ ಆಫ್ ಸಾಂಗ್ಸ್‌’-ನ ಉಲ್ಲೇಖಗಳೊಂದಿಗೆ ತೆರೆದುಕೊಳ್ಳುತ್ತವೆ.

ಲಿಥುವೇನಿಯಾದ ಸಾಹಿತ್ಯ ವಲಯಗಳ ಹೊರಗೂ ಕೂಡ ವಲಾಂಟಿನಾಯ್ಟೆಯವರು ಗುರುತಿಸಲ್ಪಡುತ್ತಾರೆ – ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಸ್ಟೈಲ್ ಮತ್ತು ಫ್ಯಾಶನ್ ಬಗ್ಗೆ ಅವರ ಸಂದರ್ಶನಗಳನ್ನು ಮಹಿಳಾ ಪತ್ರಿಕೆಗಳು ಪ್ರಕಟಿಸುತ್ತವೆ ಮತ್ತು ‘ಸೆಲೆಬ್ರಿಟಿ ಪಾರ್ಟಿ’ಗಳಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಾರೆ. ಈ ಎಲ್ಲಾ ಅನುಭವಗಳು ಆಗಾಗ್ಗೆ ಅವರ ಕವನಗಳಲ್ಲಿ ಸಹ ಕಂಡುಬರುತ್ತವೆ. ಇಂತಹ ಸಂದರ್ಭಗಳಲ್ಲಿ ಕವಿಯು ತನ್ನ ಭಾವನೆಗಳನ್ನು ಮತ್ತು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಹೊಂದಿಸಿಕೊಳ್ಳುತ್ತಾರೆ. ಉದಾಹರಣೆಗೆ, “ಫ್ರೇ಼ಡಮ್ ಬೂಲವಾರ್ಡ್” ಎಂಬ ಕವನದಲ್ಲಿ ಇಂತಹ ಒಂದು ಪಾರ್ಟಿಗೆ ಹೋದ ಅನುಭವವನ್ನು ಮಾರ್ಮಿಕವಾಗಿ ವರ್ಣಿಸಿದ್ದಾರೆ:

ನನ್ನ ಅಜ್ಜಿ ವಾಸಿಸುತ್ತಿದ್ದಳಲ್ಲಿ
ಆ ಹಳೆ ಬಸ್ತಿಯ ಮನೆಯಲ್ಲಿ,
ಎರಡು ಯುದ್ಧಗಳ ನಡುವಿನ ಸಮಯದಲ್ಲಿ,
ಹೊಟ್ಟೆಗಿಲ್ಲದೆ ನರಳುತ್ತಿದ್ದರಲ್ಲಿ,
ನನ್ನ ಅಪ್ಪ ಹುಟ್ಟಿದ್ದ ಅಲ್ಲಿ ಅಟ್ಟದಲ್ಲಿ,
ತೆರೆದಿದ್ದಾರೆ ಈಗ ಅದರಡಿಯಲ್ಲಿ
ಟ್ರೆಂಡಿ ರೆಸ್ಟಾರೆಂಟೊಂದನ್ನು.
ಅದರ ಉದ್ಘಾಟನೆಗೆ ಹೋದೆ ನಾನು,
ನಿಂತಿದ್ದೆ ನಾನು ಸೋಗಿನ
ತಿಂಡಿಗಳನ್ನಿಟ್ಟುಕೊಂಡು ಬಾಯಲ್ಲಿ,
ವಿಚಿತ್ರ ಅಪರಾಧಿ ಭಾವ ನನ್ನ ಹೊಟ್ಟೆಯಲ್ಲಿ,
ಏಕೆಂದರೆ ಬರೀ ಒಂದು ಸೂರು ಬೇರ್ಪಡಿಸುತ್ತೆ
ಈ ಜಾಗವನ್ನು ಮತ್ತು ಆ ಜಾಗವನ್ನು
ಎಲ್ಲಿ ಅವಳು ತನ್ನ ಪತ್ರವನ್ನು ಬಿಟ್ಟಿದ್ದಳು.
ನನ್ನ ಉಂಗುರಾಲಂಕೃತ ಕೈಯ್ಯಿಂದ
ಗ್ಲಾಸೊಂದನ್ನು ಏರಿಸುತ್ತಾ,
ನಾನು ಜೀವನವ ಕೊಂಡಾಡುವೆ
ನಮ್ಮಿಬ್ಬರಿಗಾಗಿ.

ವಲಾಂಟಿನಾಯ್ಟೆ ತಮ್ಮ ಅನುಭವಗಳು ಮತ್ತು ಹೆಣ್ಣಿನ ಸ್ವಭಾವದ ಬಗ್ಗೆ ಧೈರ್ಯದಿಂದ ಮತ್ತು ಕೆಲವೊಮ್ಮೆ ಮೋಹಕ ವೈಯಾರದಿಂದ ಮಾತನಾಡುತ್ತಾರೆ, ಮತ್ತು ಇದರಿಂದ ಸುಂದರವಾದ ಕವನಗಳು ಪ್ರತ್ಯೇಕವಾಗಿ ಚಲನಚಿತ್ರದ ಕಥಾನಿರೂಪಣೆಯಂತೆ ಹೊರಹೊಮ್ಮುತ್ತವೆ. ಕವಿ ಹೇಳಿದಂತೆ: “ಓದುಗ/ಓದುಗಳು ಕವನ ಓದುವಾಗ ಒಂದು ಚಲನಚಿತ್ರ ನೋಡಿದಂತೆ ಅನಿಸಿದರೆ ಆ ಕವನ ಯಶಸ್ವಿಯಾದಂತೆ ಅಂತ ನಾನು ಯಾವಾಗಲೂ ಹೇಳುವೆ. ಇದಲ್ಲದೆ, ಚಲನಚಿತ್ರಗಳು ಮತ್ತು ಕವನಗಳು ಇನ್ನೊಂದು ರೀತಿಯಲ್ಲಿ ಕೂಡ ಸಮಾನತೆ ಹೊಂದಿವೆ ಎಂದು ನಾನು ನಂಬುತ್ತೇನೆ, ಹೇಗೆಂದರೆ, ಯಾವುದೇ ಒಂದು ಚಲನಚಿತ್ರವು ಒಂದಕ್ಕಿಂತ ಹೆಚ್ಚು ಪೀಳಿಗೆಯ ಜನರ ಜೀವನವನ್ನು ಒಳಗೊಂಡಿರುತ್ತದೆ, ಮತ್ತು ಇಡೀ ಯುಗಗಳನ್ನು ಎರಡು ಗಂಟೆಗಳ ಕಾಲದ ಒಳಗೆ ಸಂಕುಚಿತಗೊಳಿಸುತ್ತದೆ, ಹಾಗೆಯೇ ಕವಿಗಳು ಕೂಡ ಕೆಲವೇ ಪದಗಳ ಒಳಗೆ ಇಡೀ ಜಗತ್ತನ್ನು ಕೂಡಿಡಲು ಜಾಗಕ್ಕಾಗಿ ಹುಡುಕುತ್ತಿರುತ್ತಾರೆ.”

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಇಂಡ್ರೆ ವಲಾಂಟಿನಾಯ್ಟೆಯವರ ಏಳು ಕವನಗಳಲ್ಲಿ ಮೊದಲ ಎರಡು ಕವನಗಳನ್ನು ಏಡಾ ವಲೈಟಿಸ್ (Ada Valaitis) ಹಾಗೂ ಉಳಿದ ಐದು ಕವನಗಳನ್ನು ರಿಮಾಸ್ ಉಜ಼್‌ಗಿರಿಸ್-ರವರು (Rimas Uzgiris) ಮೂಲ ಲಿಥುವೇನಿಯನ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

1
ನನ್ನ ಜೀವದ ಗಡಿಯಾರ
ಮೂಲ: Biological Clock

ತಲೆಮಾರಿನಿಂದ ತಲೆಮಾರಿಗೆ ಕೈದಾಟಿ ಬಂದಿರುವುದು.
ಒಂದು ಅಮೂಲ್ಯ ಪುರಾತನ ವಸ್ತು.
ಆದರೆ, ನಾನದನ್ನು ಅಡವಿನಂಗಡಿಯಲ್ಲಿ ಒತ್ತೆಯಿಡಕ್ಕಾಗಲ್ಲ –
ನನ್ನೊಳಗೆ ಆಳವಾಗಿ ಹುದುಗಿದೆ ಅದು.

ನನ್ನ ಜೀವದ ಗಡಿಯಾರ
ಆತಂಕವಾದಿಯೊಬ್ಬನ ಕೈಯಲ್ಲಿರುವ
ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್
ಎಂದು ಕ್ಷಣಗಳ ಎಣಿಸುತ್ತಿದೆ.

ಒಂದಾನೊಂದು ದಿನ ನಾನು ಜನ್ಮನೀಡುವೆ.
ಒಂದಾನೊಂದು ದಿನ ನಾನು ಪುಟ್ಟ ಮೀನೊಂದನ್ನು
ಶಾರ್ಕ್-ಮೀನಿನ ತೊಟ್ಟಿಯಲ್ಲಿ ಎಸೆಯುವೆ.

ನಾನು ನನ್ನ ಮಗನ ಮೊದಲ ಕಂಪಾರ್ಟ್‌ಮೆಂಟಾಗುವೆ,
ಕಪ್ಪಿಟ್ಟ ಕಿಟಕಿಗಳೊಂದಿಗೆ,
ನಾನು ಅವನನ್ನು ಬೆಳಕುಳ್ಳ ಸ್ಟೇಶನಿನಲ್ಲಿ ಇಳಿಸುವೆ,
ಆದರೆ ಪೇಪರ್‌ಗಳಲ್ಲಿ ವರದಿಗಳು ಬರುತ್ತಲೆ ಇರುತ್ತವೆ
ನೆರೆಗಳ, ಆತ್ಮಹತ್ಯೆಗಳ.
ಬಿರುಗಾಳಿಗಳ, ಅಪಘಾತಗಳ ಬಗ್ಗೆ, ಮತ್ತಿತರ ಶಿಕ್ಷೆಗಳ ಬಗ್ಗೆ.

ಮತ್ತೆ, ನನ್ನ ಜೀವದ ಗಡಿಯಾರ
ಆತಂಕವಾದಿಯೊಬ್ಬನ ಕೈಯಲ್ಲಿರುವ
ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್
ಎಂದು ಕ್ಷಣಗಳ ಎಣಿಸುತ್ತಿದೆ

2
ಈಜುಗಾರ್ತಿ
ಮೂಲ: Swimmer

ಹೆಂಗಸೊಬ್ಬಳು ಎದ್ದಳು ಹಸಿರು ಹಾಸಿನಿಂದ
ನಡೆದಳವಳು ಸಮುದ್ರದ ಒಳಗೆ!
(ಅವಳ ಕಣಕಾಲುಗಳವರೆಗೂ
ಅವಳ ಮೊಣಕಾಲುಗಳವರೆಗೂ
ಅವಳ ಸೊಂಟದವರೆಗೂ
ಅವಳ ಎದೆಯವರೆಗೂ
ಅವಳ ಭುಜದವರೆಗೂ
ಅವಳ ಕುತ್ತಿಗೆಯವರೆಗೂ)

ಅಲೆಗಳ ಆವರಣದ ಅಡಿಯಲ್ಲಿ
ಸರಿಗೆಯ ಸೀರ್ಪನಿಯಲ್ಲಿ
ಅವಳ ಪುಟ್ಟ ಮೂರ್ತಿ ಕರಗುವತನಕ.

ಗಾಳಿಯು ಮೆಲ್ಲನೆ ಪುಟಗಳನ್ನು ಮಗುಚುತ್ತಿತ್ತು
ತೀರದಲ್ಲಾಕೆ ಬಿಟ್ಟ ಪುಸ್ತಕವನ್ನು ಓದುತ್ತಾ.
ಮುಸ್ಸಂಜೆಯಾದಾಗ, ಅದು ಆ ಹರಿದ ಪುಸ್ತಕವನ್ನು
ಮರಳುದಿಣ್ಣೆಗಳ ಲೈಬ್ರರಿಗೆ ಕೊಟ್ಟಿತ್ತು,
ಪಾತ್ರಗಳ ಬಾಯಲ್ಲಿ ಹೊಯಿಗೆ ತುಂಬಿಸಿತು.

ಅನ್ಯಭಾಷೆಯಲ್ಲಿ ಬರೆದ ವಾಕ್ಯಗಳ
ಉಸಿರುಕಟ್ಟಿದೆ, ಹಾಗೂ ಬದುಕಿವೆ.
ಅನ್ಯಳವಳು, ಮುವ್ವತ್ತರ ಸನಿಹ
ಅನ್ಯರಿಗೆ ಅರಿವಿಲ್ಲದವಳು,
ಒಬ್ಬಂಟಿ ಪಯಣಿಗಳು.

3
ಫ಼್ರೀಡಮ್ ಬೂಲವಾರ್ಡ್*
ಮೂಲ: Freedom Boulevard

ನನ್ನ ಅಜ್ಜಿ ವಾಸಿಸುತ್ತಿದ್ದಳಲ್ಲಿ
ಆ ಹಳೆ ಬಸ್ತಿಯ ಮನೆಯಲ್ಲಿ,
ಎರಡು ಯುದ್ಧಗಳ ನಡುವಿನ ಸಮಯದಲ್ಲಿ,
ಹೊಟ್ಟೆಗಿಲ್ಲದೆ ನರಳುತ್ತಿದ್ದರಲ್ಲಿ,
ನನ್ನ ಅಪ್ಪ ಹುಟ್ಟಿದ್ದ ಅಲ್ಲಿ ಅಟ್ಟದಲ್ಲಿ,
ತೆರೆದಿದ್ದಾರೆ ಈಗ ಅದರಡಿಯಲ್ಲಿ
ಟ್ರೆಂಡಿ ರೆಸ್ಟಾರೆಂಟೊಂದನ್ನು.
ಅದರ ಉದ್ಘಾಟನೆಗೆ ಹೋಗಿದ್ದೆ ನಾನು,
ನಿಂತಿದ್ದೆ ನಾನು ಸೋಗಿನ
ತಿಂಡಿಗಳನ್ನಿಟ್ಟುಕೊಂಡು ಬಾಯಲ್ಲಿ,
ವಿಚಿತ್ರ ಅಪರಾಧಿ ಭಾವ ನನ್ನ ಹೊಟ್ಟೆಯಲ್ಲಿ,
ಏಕೆಂದರೆ ಬರೀ ಒಂದು ಸೂರು ಬೇರ್ಪಡಿಸುತ್ತೆ
ಈ ಜಾಗವನ್ನು ಮತ್ತು ಆ ಜಾಗವನ್ನು
ಎಲ್ಲಿ ಅವಳು ತನ್ನ ಪತ್ರವನ್ನು ಬಿಟ್ಟಿದ್ದಳು.
ನನ್ನ ಉಂಗುರಾಲಂಕೃತ ಕೈಯ್ಯಿಂದ
ಗ್ಲಾಸೊಂದನ್ನು ಏರಿಸುತ್ತಾ,
ನಾನು ಜೀವನವ ಕೊಂಡಾಡುವೆ
ನಮ್ಮಿಬ್ಬರಿಗಾಗಿ.

*ಲಿಥುವೇನಿಯನ್ ದೇಶದ ಕೌನಾಸ್ ನಗರದ ಮುಖ್ಯ ರಸ್ತೆ. ಸುಮಾರು ವರ್ಷಗಳ ಕಾಲ ಈ ರಸ್ತೆ ಊರಿನ ಪ್ರಧಾನ ಶಾಪಿಂಗ್ ಕೇಂದ್ರವಾಗಿತ್ತು. ಲಿಥುವೇನಿಯನ್ ಭಾಷೆಯಲ್ಲಿ ಈ ರಸ್ತೆಗೆ ‘Laisvės Alėja’ ಎಂದು ಹೆಸರು; ಇಂಗ್ಲಿಷಿಗೆ ಅನುವಾದದಲ್ಲಿ ‘Freedom Boulevard.’

4
ಹೊಟೆಲ್ ರೂಮು
ಮೂಲ: Hotel Room

ಅವನು ತುಂಬಾನೆ ಊರೂರು ತಿರುಗುತ್ತಿರುತ್ತಾನೆ.
ಪ್ರತಿ ರಾತ್ರಿ ಅನಿಸುತ್ತದೆ ಅವನಿಗೆ
ಆ ಬಾಡಿಗೆ ರೂಮು
ಅವನನ್ನು ಒತ್ತಾಯಿಸುತ್ತದೆ
ಎಲ್ಲಾ ಏಳು ದಾರಿಗಳನ್ನೂ ಹಿಡಿಯಲು.

ಆದಾಗ್ಯೂ, ಇದೆಯಲ್ಲಿ ರೂಮಿನಲ್ಲಿ
ಒಂದು ಬೈಬಲ್ ಮತ್ತೆ ಒಂದು ಮಿನಿ ಬಾರ್:
ನಾಳೆಯನ್ನು ಹಿಡಿದಿಟ್ಟುಕೊಳ್ಳಲು
ಎರಡು ದಾರಿಗಳು.

5
ಬಚ್ಚಿಡುವ ಜಾಗ
ಮೂಲ: Hiding Place

ಈ ವರುಷ ನಾನು ಮನೆ ಬದಲಾಯಿಸಿದೆ,
ನನ್ನ ಜೀವನದಲ್ಲಿ ಐದನೆಯ ಸಲ.
ಒಂದು ಕಾಲದಲ್ಲಿ ಈ ಕಟ್ಟಡ
ಒಂದು ಕಾನ್ವೆಂಟ್‌ಗೆ ಸೇರಿದ್ದಾಗಿತ್ತು.
ಅದಕ್ಕೊಂದು ಫಲಕ ತಗುಲಿದೆ,
‘ರೈಟಿಯಸ್ ಅಮಂಗ್ ದಿ ನೇಷನ್ಸ್‌.*’
ಹಲವಾರು ಯಹೂದಿಗಳನ್ನು
ಇದರ ಗೋಡೆಗಳ ಮಧ್ಯೆ
ಬಚ್ಚಿಡಲಾಗಿತ್ತು, ಬಚಾಯಿಸಲಾಗಿತ್ತು.

ಸ್ನೇಹಿತರು ಹೇಳಿದರು,
“ಎಷ್ಟು ಶಾಂತವಾಗಿದೆ ಇಲ್ಲಿ, ಆದರೆ
ಈ ಗೋಡೆಗಳು ಎಷ್ಟೊಂದು
ಭಯ ಕಂಡಿರಬೇಕಲ್ವಾ!”

ಉತ್ತರದಲ್ಲಿ ನಾನಂದೆ,
“ಆದರೆ ಎಷ್ಟೊಂದು ದೃಢತೆ
ಕಲಿತುಹೋಗಿದೆ ಈ ಗೋಡೆಗಳಲ್ಲಿ,
ಜತೆಗೆ, ಬದುಕುಳಿದ ಜೀವಗಳ ಕೃತಜ್ಞತೆಗಳು ಕೂಡ!”

ನಿನ್ನೆ ನೆರೆಮನೆಯ ಹಿರಿಯರೊಬ್ಬರ
ಜತೆ ಚಾ ಕುಡಿದೆ.
ಅವರ ಬೆಡ್‌ರೂಮಿನಲ್ಲಿ ಒಂದು ಒಳ ಕೋಣೆ.
ಆ ಕೋಣೆಯೊಳಗೆ ಒಂದು ಕನ್ನಡಿ.
ಜನರ ನಿಟ್ಟುಸಿರುಗಳ ತೇವದಿಂದ
ಅದರ ಅಂಚುಗಳು ಕಪ್ಪಾಗಿವೆ.
ಉಸಿರಲ್ಲಿ ಭರವಸೆಯನ್ನು ಒಳಗೆಳೆಯುತ್ತಾ,
ಭಯವನ್ನು ಹೊರಬಿಡುತ್ತಾ.
ಒಂದರ ನಂತರ ಒಂದು,
ಸಮಲಯದಲ್ಲಿ.
ಯಾರಿಗೂ ಗೊತ್ತಿರಲಿಲ್ಲ ಆ ಕರಾಳ ಕಥನ
ಹೇಗೆ ಕೊನೆಗೊಳ್ಳುವುದೆಂದು.

ನನ್ನ ಜೀವಕ್ಕೆ ಯಾವ ಅಪಾಯವೂ ಇಲ್ಲ.
ಚೆನ್ನಾಗಿ ಉಣ್ಣುತ್ತೇನೆ, ಆರೊಗ್ಯವಾಗಿದ್ದೇನೆ.
ನನ್ನನ್ನು ಯಾರೂ ಪೀಡಿಸುತ್ತಿಲ್ಲ.
ರಸ್ತೆಗಳಲ್ಲಿ ಸಮವಸ್ತ್ರದವರು
ಕವಾಯಿತು ನಡೆಸುತ್ತಿಲ್ಲ.

ನನ್ನ ಚರ್ಮದಡಿಯಲ್ಲಿ ಚುರುಕಾಗಿ ಕಂಪಿಸಿದ್ದು,
ಪ್ರೆಮವದು.
ನಾನು
ಉಸಿರಲ್ಲಿ ಭರವಸೆಯನ್ನು ಒಳಗೆಳೆಯುವೆ,
ಭಯವನ್ನು ಹೊರಬಿಡುವೆ,
ಎರಡೂ ಸಮಲಯದಲ್ಲಿ.

*ನಾಜಿಗಳು ನಡೆಸಿದ ಯಹೂದಿಗಳ “ಹತ್ಯಾಕಾಂಡದ” ಸಮಯದಲ್ಲಿ ಯಹೂದಿಗಳನ್ನು ನಾಜಿಗಳಿಂದ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಯಹೂದಿಗಳಲ್ಲದವರನ್ನು ಇಸ್ರೇಯಿಲ್ ದೇಶವು “ರೈಟಿಯಸ್ ಅಮಂಗ್ ದಿ ನೇಷನ್ಸ್‌” ಎಂಬ ಬಿರುದು ನೀಡಿ ಗೌರವಿಸುತ್ತದೆ.

6
ಸಂಸ್ಕಾರ
ಮೂಲ: Rituals

ಕೊನೆಯುಸಿರೆಳೆಯುತ್ತಿದ್ದ ದುಂಬಿಯೊಂದು
ಹಾರಿ ಬಂತು ಜನ್ನಲಿನಿಂದ.

ಉರುಳಾಡಿತು ತನ್ನ ಬೆನ್ನ ಮೇಲೆ
ಖುಷಿಯಿಂದಲೋ ಎಂಬಂತೆ.

ತುಡಿಯುವ ಕಾಲುಗಳು:
ಪುಟ್ಟ ಖಂಡಗಳು, ಪಂಜಗಳು,
ರೋಮಗಳು, ಎಲ್ಲಾ ಅದರುತ್ತಿವೆ.

ನನ್ನ ಹೃದಯಕ್ಕೆ ಎಲ್ಲಾ ತರದ
ಸಂಜ್ಞೆಗಳ ಕಳಿಸಿತದು –
ಈ ಯಾತನೆಯಿಂದ ಪಾರು ಮಾಡು
ಎಂದು ಬೇಡುವಂತೆ.

ನಾನು ನಿಂತೆ, ನೋಡಿದೆ.
ಅಶಕ್ತಳಾಗಿ.

ಅದರ ನೋವು ಅನುಭವಿಸಿದೆ ನಾನು –
ಹೆಚ್ಚಾಗಿ, ಹೆಚ್ಚಾಗಿ.
ಅಶಕ್ತಳಾಗಿ.

ಕೊನೆಗೆ, ಒಂದು ಭಾರವಾದ
ಪುಸ್ತಕವನ್ನು ಎತ್ತಿಕೊಂಡೆ
ಕೈಯಲ್ಲಿ.

ಸಮಯ ಮೀರಿತ್ತು.
ಅದರ ಹೆಣಗಾಟ ಕೊನೆಗೊಂಡಿತು.

ಮೃದುವಾದ ಪಾಪಪ್ರಜ್ಞೆ ನನ್ನ ಮೇಲೆ
ಹಗುರವಾಗಿ ತೇಲಿ ಹೋಯಿತು
ಅದರ ಆತ್ಮ ಹಾರಿಹೋಗುತ್ತಿದ್ದಂತೆ.

ಅದರ ತೊಗಟೆಯನ್ನು
ಪಿಯೋನಿ ಹೂವಿನ ಗದ್ದುಗೆಯಲ್ಲಿ ಮಲಗಿಸಿದೆ.
ಗಾಳಿ ವಿದಾಯ ಹೇಳಲು
ಬರುವವರೆಗೆ.

7
ಬೆಳಗ್ಗೆ ಐದರ ಹೊತ್ತು (ಬರೆದಿರದ ಕವನಗಳು)
ಮೂಲ: Five in the Morning (Unwritten Poems)

ಇನ್ನೂ ಬರೆದಿರದ ಕವನಗಳು ಮಲಗಿವೆ ನನ್ನ
ಹಣೆಯ ಚರ್ಮದ ಮೇಲೆ, ಕೆನ್ನೆಯ ಮೇಲೆ,
ಕಣ್‌ರೆಪ್ಪೆಗಳ ಮೇಲೆ, ತುಟಿಗಳ ಮೇಲೆ …

ಕನಸೊಂದರಲ್ಲಿ ನಾನು
ಮಳೆಯನ್ನ ಸುರಿಯಬೇಡವೆಂದು,
ಹಿಮವನ್ನ ಬರಬೇಡವೆಂದು,
ಗಾಳಿಯನ್ನ ಬೀಸಬೇಡವೆಂದು,
ಕೇಳಿಕೊಳ್ಳುವೆ.

ಅವುಗಳು ಜೀವಂತವಾಗುವ ಹೊತ್ತಿನವರೆಗೂ,
ಅವುಗಳನ್ನು ಕಾಪಾಡಲು,

ಆಮೇಲೆ ನಾನು ನನ್ನ
ಮುಜುಗರದ ಉಡುಪನ್ನ,
ತವಕದ ಉಡುಪನ್ನ,
ನಿರೀಕ್ಷೆಯ ಉಡುಪನ್ನ,
ಕಳಚುವೆ.

ನನ್ನ ಕಣ್ಣುಗಳ, ಹೊಕ್ಕಳ ಕುಳಿಗಳಲ್ಲಿ ಹುದುಗಿಸಿರುವ
ಕೃತಜ್ಞತೆಯ ಆಭರಣಗಳನ್ನ ಮಾತ್ರ ಧರಿಸಿಕೊಂಡು
ನನ್ನ ಕಿಟಕಿಯಾಚೆಯಿರುವ ಮಿರುಗುವ ಕೆರೆಯೆಡೆಗೆ ನಡೆಯುವೆ,
ಆಗಮಿಸುವ ಕವನಕ್ಕಾಗಿ ಬೆಲೆ ತೆರಲು.