ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳಗೊಂಡಿದ್ದವು.
ಬರಗೂರು ರಾಮಚಂದ್ರಪ್ಪ ಅವರ “ಕಾಗೆ ಕಾರುಣ್ಯದ ಕಣ್ಣು” ಆಯ್ದ ಅನುಭವಗಳ ಕಥನದ ಒಂದು ಬರಹ ನಿಮ್ಮ ಓದಿಗೆ
ಸಾಹಿತ್ಯ ಮತ್ತು ಸಿನಿಮಾ : ಜೋಡಿ ಪಯಣ
ನಾನು ಮೊದಲೇ ತಿಳಿಸಿದಂತೆ ನನ್ನ ಮೊದಲ ಕೃತಿ ‘‘ಮುಳ್ಳುಹಾದಿ’’ (ನಾಟಕ). ನನ್ನ ಪದವಿ ವ್ಯಾಸಂಗ ಮುಗಿಸಿದ ನಂತರ ಒಂದು ಚಿಕ್ಕ ಕವನ ಸಂಕಲನವನ್ನು ಪ್ರಕಟಿಸಿದೆ. ಅದರ ಹೆಸರು ‘ಕನಸಿನ ಕನ್ನಿಕೆ’. ಕವಿತೆಯೇ ನನ್ನ ಕನಸಿನ ಕನ್ನಿಕೆಯಾಗಿದ್ದರೂ ನಿಜ ಕನ್ನಿಕೆಯನ್ನು ಕುರಿತದ್ದೆಂದು ಓದುಗರು ಭಾವಿಸಿರುವ ಸಾಧ್ಯತೆಯಿದೆ. ಅದು ತಪ್ಪೇನೂ ಅಲ್ಲ. ಅವಿವಾಹಿತ ಯುವ ಮನಸ್ಸಿನಲ್ಲಿ ಕನ್ನಿಕೆಯು ನಿಜವೂ ಆಗಿರಬಹುದು; ಕವಿತೆಯ ಸಂಕೇತವೂ ಆಗಿರಬಹುದು. ಆಗಿನ್ನೂ ನಾನು ನವ್ಯಕಾವ್ಯವನ್ನು ಅಷ್ಟಾಗಿ ಅಭ್ಯಾಸ ಮಾಡಿರಲಿಲ್ಲ. ನವೋದಯ ಕಾವ್ಯವನ್ನು ಅಷ್ಟಿಷ್ಟು ಓದಿಕೊಂಡಿದ್ದೆ. ಕುವೆಂಪು ಅವರ ಕವಿತೆಗಳನ್ನೂ, ವೈಚಾರಿಕ ಬರಹಗಳನ್ನೂ ಹೆಚ್ಚು ಓದಿದ್ದೆ. ಕುವೆಂಪು ಅವರ ಕನ್ನಡ ಪ್ರೇಮ ಮತ್ತು ವೈಚಾರಿಕ ಚಿಂತನೆಗಳಿಂದ ಪ್ರಭಾವಿತನಾಗಿದ್ದೆ. ಕುವೆಂಪು ಅವರ ತಲ್ಲೀನತೆಯ ಬಗ್ಗೆ ಅಧ್ಯಾಪಕರಿಂದ ತಿಳಿದಿದ್ದ ನಾನು ತಲ್ಲೀನ ಭಾವಕ್ಕೆ ಪ್ರಜ್ಞಾಪೂರ್ವಕವಾಗಿ ತೆರಳಿ, ತಂಗಿ, ‘ಓ ನಾನೂ ಕವಿ’ ಎಂದುಕೊಂಡು ಸಂಭ್ರಮಿಸಿದ್ದುಂಟು. ಕುವೆಂಪು ಅವರ ‘ಗೊಬ್ಬರ’ ಕವನವನ್ನು ಓದಿದಾಗ ನಾನೂ ಹೀಗೆ ‘ನಿರ್ಲಕ್ಷಿತ’ ವಸ್ತುಗಳ ಮೇಲೆ ಬರೆಯಬೇಕು ಎನ್ನಿಸಿತು. ಆಗ ಮನೆ ಗುಡಿಸುವ ಪೊರಕೆಯ ಮೇಲೆ ಒಂದು ಪದ್ಯವನ್ನು ಬರೆದು ‘ಪೊರಕೆ ವೀರ’ ಎಂದು ಹೆಸರು ಕೊಟ್ಟಿದ್ದೆ. ಈ ಪದ್ಯವೂ ‘ಕನಸಿನ ಕನ್ನಿಕೆ’ಯಲ್ಲಿ ಇತ್ತು. ಇದು ನನ್ನ ಮೊದಲ ಕವನ ಸಂಕಲನ. ಮುನ್ನುಡಿ ಬರೆಸಬೇಕೆಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯನವರ ಬಳಿಗೆ ಹೋಗಿ ವಿನಂತಿ ಮಾಡಿದೆ. ಸಣ್ಣಗುಡ್ಡಯ್ಯನವರು ಮುಖಸ್ತುತಿಗಾಗಿ ಮಾತನಾಡುವವರಲ್ಲ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ವಿಮರ್ಶಕರು. ಆದರೆ ವಿಮರ್ಶೆಯ ಲೇಖನಗಳನ್ನು ಬರೆದದ್ದು ಕಡಿಮೆ. ಲಲಿತ ಪ್ರಬಂಧ ಮತ್ತು ಕಾವ್ಯ ಅವರ ಪ್ರಮುಖ ಪ್ರಕಾರವಾಗಿದ್ದವು. ಅವರಲ್ಲಿ ಮುನ್ನುಡಿಗಾಗಿ ಅಳುಕಿನಿಂದಲೇ ಕೇಳಿಕೊಂಡಾಗ ‘ಆಗಲಿ’ ಎಂದರು. ಕೂಡಲೇ ಒಪ್ಪಿದ್ದು ಅನೇಕರಿಗೆ ಅಚ್ಚರಿಯ ವಿಷಯವಾಗಿತ್ತು. ‘ಇಬ್ಬರೂ ಒಂದೇ ತಾಲ್ಲೂಕಿನವರು. ಅದಕ್ಕೇ ಪ್ರೀತಿಯಿಂದ ಒಪ್ಪಿದ್ದಾರೆ’ ಎಂದು ಸ್ನೇಹಿತರು ನಸುನಕ್ಕಿದ್ದರು. ಅದೇನೇ ಇರಲಿ, ಅವರು ಮುನ್ನುಡಿ ಬರೆಯುವುದು ನನಗೆ ಮುಖ್ಯವಾಗಿತ್ತು.
ಪ್ರೊ. ಸಣ್ಣಗುಡ್ಡಯ್ಯನವರು ‘ಮುನ್ನುಡಿ’ ಬರೆದುಕೊಟ್ಟರು. ಅದರಲ್ಲಿ ಸ್ಪಷ್ಟವಾಗಿ ಒಂದು ಮಾತು ಹೇಳಿದ್ದರು : ‘ಪಳಗದ ಹಸುವನ್ನು ಬೀದಿಗೆ ಬಿಡಬಾರದು’ – ಈ ಸಾಲು ನನ್ನ ಪದ್ಯಗಳ ವಿಮರ್ಶೆಯಾಗಿತ್ತು. ನನ್ನ ಸಂಕಲನದ ಎರಡು ಪದ್ಯಗಳನ್ನು ಮಾತ್ರ ಅವರು ಮೆಚ್ಚಿ, ಉಲ್ಲೇಖಿಸಿ ‘ಹೃದ್ಯವಾಗಿವೆ’ ಎಂದಿದ್ದರು. ಆ ಎರಡು ಪದ್ಯಗಳಲ್ಲಿ ನನ್ನ ಮೆಚ್ಚಿನ ‘ಪೊರಕೆ ವೀರ’ನೂ ಸೇರಿದ್ದ. ಅದೊಂದು ಸಂತೋಷ! ಉಳಿದಂತೆ ಅಷ್ಟೇನೂ ಸಂತೋಷದಾಯಕವಾಗಿರಲಿಲ್ಲ. ಹಾಗಾದರೆ ಸಂತೋಷ ಎಂದರೇನು? ನನಗೆ ಇಷ್ಟವಾಗುವಂತೆ ಬರೆದರೆ ಮಾತ್ರ ಸಂತೋಷವೆ? ಕೊರತೆಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಿದ್ದೂ ಸಂತೋಷದ ವಿಷಯವಲ್ಲವೆ? ಈ ಪ್ರಶ್ನೆಗಳ ಮೂಲಕ ನಾನಾಗ ‘ಸಾಹಿತ್ಯ ಸಂತೋಷ’ದ ವ್ಯಾಖ್ಯಾನ ಬದಲಿಸಿಕೊಂಡೆ. ನಾನೇ ಬದಲಾಗ ಬೇಕೆಂದುಕೊಂಡೆ. ಸಣ್ಣಗುಡ್ಡಯ್ಯನವರ ಮುನ್ನುಡಿಯನ್ನು ಯಥಾವತ್ತಾಗಿ ಅಚ್ಚು ಮಾಡಿಸಿದೆ.
‘ಕನಸಿನ ಕನ್ನಿಕೆ’ ಕೃತಿಯನ್ನು ಅಚ್ಚು ಮಾಡಿಸಲು ನನ್ನ ಹಿರಿಯಣ್ಣ, ಶ್ರೀ ಬಿ.ಆರ್. ಚಿಕ್ಕರಂಗಪ್ಪನವರು ಆಸಕ್ತಿ ವಹಿಸಿದರು. ತುಮಕೂರಲ್ಲಿದ್ದ ಜನತಾ ಮುದ್ರಣಾಲಯಕ್ಕೆ ಕರೆದುಕೊಂಡು ಹೋದರು. ಈ ಮುದ್ರಣಾಲಯವು ತುಮಕೂರು ಕೆರೆ ಬಳಿಯ ಪ್ರಧಾನ ಅಂಚೆ ಕಚೇರಿಗೆ ಸಮೀಪದ ಒಂದು ಅಡ್ಡರಸ್ತೆಯಲ್ಲಿತ್ತು. ಅದರ ಮಾಲೀಕರು ಪ್ರಗತಿಪರ ವಿಚಾರಧಾರೆಯವರೆಂದು ಅವರೊಂದಿಗಿನ ಮಾತುಕತೆಯಲ್ಲಿ ಅರಿವಾಯಿತು. ಅಣ್ಣ, ಹಣ ಹಾಕಿ ‘ಕನಸಿನ ಕನ್ನಿಕೆ’ಯನ್ನು ಮುದ್ರಣ ಮಾಡಿಸಿಕೊಟ್ಟರು. ಬಹುಪಾಲು ಪ್ರತಿಗಳನ್ನು ಸಾಹಿತ್ಯಾಸಕ್ತರಿಗೆ ಹಂಚಿಬಿಟ್ಟೆ. ಸ್ವಲ್ಪ ಕಾಲ ಮುನ್ನುಡಿಯನ್ನು ಮರೆತು ‘ಕವಿ’ ಎಂದುಕೊಂಡು ಸಂಭ್ರಮಿಸಿದೆ!
ನಾನು ಪಾವಗಡ ತಾಲ್ಲೂಕಿನ ಕೊಂಡೆತಿಮ್ಮನಹಳ್ಳಿಯಲ್ಲಿ ಪ್ರೌಢಶಾಲೆ ಅಧ್ಯಾಪಕ ನಾಗಿದ್ದಾಗ ಹೊರತಂದ ‘ಕನಸಿನ ಕನ್ನಿಕೆ’ಯ ಕೆಲವು ಪದ್ಯಗಳನ್ನು ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಓದಿ ಹೇಳುತ್ತಿದ್ದೆ. ‘ನೀವೂ ಬರೆಯಬೇಕು; ಬರೆಯಲು ಸಾಧ್ಯ’ ಎಂದು ಪ್ರೋತ್ಸಾಹಿಸಿದೆ. ಅನೇಕರು ಬರೆದರು. ಅವುಗಳನ್ನು ಓದಿ, ಕೆಲವೊಮ್ಮೆ ತಿದ್ದಿ ವಿದ್ಯಾರ್ಥಿಗಳ ಒಂದು ಕೃತಿಯನ್ನು ಹೊರತಂದೆ. ಅದರ ಹೆಸರು ‘ಸುಧಾಸಿಂಧು’. ಶಾಲೆಯ ಸ್ಮರಣ ಸಂಚಿಕೆಯಾಗಿ ‘ಸುಧಾಸಿಂಧು’ ಎರಡು ಪ್ರತ್ಯೇಕ ಕೃತಿಗಳಾಗಿ ಪ್ರಕಟ ವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಮುಂದೆ ಹೆಸರು ಮಾಡಿದ ರಂಗಾರೆಡ್ಡಿ ಕೋಡಿರಾಂಪುರ ಮತ್ತು ಜಿ.ಆರ್. ತಿಪ್ಪೇಸ್ವಾಮಿಯವರ ಮೊದಲ ರಚನೆ ಗಳನ್ನು ಪ್ರಕಟಿಸಿದ ಹೆಮ್ಮೆ ಈ ‘ಸುಧಾಸಿಂಧು’ವಿಗಿದೆ. ಅಲ್ಲಿಂದ ಆರಂಭವಾದ ಅವರ ಸಾಹಿತ್ಯ ಪಯಣ ಮುಂದೆ ದೊಡ್ಡ ದಾರಿ ಹಿಡಿಯಿತು. ಅವರಿಬ್ಬರೂ ನನ್ನ ಹೆಮ್ಮೆಯ ವಿದ್ಯಾರ್ಥಿಗಳೆಂದು ಹೇಳಲು ನನಗೂ ಹೆಮ್ಮೆ.
ಕೊಂಡೆತಿಮ್ಮನಹಳ್ಳಿಯಲ್ಲಿ ನಾನೊಂದು ಚಿಕ್ಕ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಬೇರೆ ಊರಿನಿಂದ ಶಾಲೆಗೆ ಬರುತ್ತಿದ್ದ ರಂಗಾರೆಡ್ಡಿಯಾದಿಯಾಗಿ ಕೆಲ ವಿದ್ಯಾರ್ಥಿಗಳು ಒಮ್ಮೊಮ್ಮೆ ನನ್ನ ಮನೆಯಲ್ಲೇ ಮಲಗುತ್ತಿದ್ದರು. ಬೆಳಗ್ಗೆ ಎದ್ದಕೂಡಲೇ ಕಾಣುವ ಜಾಗದಲ್ಲಿರುವಂತೆ ನಾನು ಪೊರಕೆಯನ್ನು ಇಟ್ಟಿರುತ್ತಿದ್ದೆ. ಆರಂಭದ ದಿನಗಳಲ್ಲಿ ರಾತ್ರಿ ಮಲಗುವ ಮುಂಚೆ ಪೊರಕೆಯ ಮಹತ್ವ ಹೇಳುತ್ತಿದ್ದೆ. ಪೊರಕೆಯನ್ನು ಸಾಮಾನ್ಯವಾಗಿ ಅಪಶಕುನವೆಂದು ಭಾವಿಸಿ, ಬೆಳಗ್ಗೆ ಎದ್ದಕೂಡಲೇ ನೋಡಬಾರದೆಂಬ ನಂಬಿಕೆ ಪ್ರಚಲಿತ ವಾಗಿತ್ತು. ನಾನು ‘‘ಈ ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ. ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಗ್ಗೆ ಎದ್ದಕೂಡಲೇ ಮನೆ, ಮನೆ ಹೊರಗೆಲ್ಲವನ್ನೂ ಸ್ವಚ್ಛ ಮಾಡುವ ಪೊರಕೆಯ ‘ದರ್ಶನ’ ಮಾಡಿ ಕೈಮುಗಿಯಬೇಕು. ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ’’ ಎಂದು ವಿವರಿಸಿ ಮನವರಿಕೆ ಮಾಡಿಕೊಟ್ಟಿದ್ದೆ. ನಾನೇ ಮೊದಲು ಪೊರಕೆಗೆ ಕೈಮುಗಿಯುತ್ತಿದ್ದೆ. ಮೇಷ್ಟುç ಕೈಮುಗಿದಾಗ ವಿದ್ಯಾರ್ಥಿಗಳು ಕೂಡ ಮುಗಿಯಲೇಬೇಕಲ್ಲ! ಮುಗಿದರು! ಬರಬರುತ್ತ ಮೂಢನಂಬಿಕೆ ಹೋಗಿ, ನನ್ನ ಮೇಲಿನ ನಂಬಿಕೆ ಬಲವಾಗಿ ಪೊರಕೆಗೆ ಕೈಮುಗಿಯುವುದನ್ನು ಸಹಜ ವೆಂಬಂತೆ ಪಾಲಿಸತೊಡಗಿದರು.
ಹೀಗೆ ಆರಂಭವಾದ ನನ್ನ ಪರ್ಯಾಯ ಚಿಂತನೆ ಮುಂದೆ ಬೆಳೆಯುತ್ತ ಹೋದಂತೆ ಅದಕ್ಕೊಂದು ತಾತ್ವಿಕ ರೂಪ ಲಭ್ಯವಾಗತೊಡಗಿತು. ಒಬ್ಬೊಬ್ಬ ಸಾಹಿತಿಯೂ ತನ್ನ ಪರಿಸರದಿಂದ ಪ್ರೇರಣೆ ಪಡೆಯುವುದು ಸಹಜ. ಹಸಿರು ನಿಸರ್ಗ, ಹರಿವ ನದಿ, ತುಂಬಿದ ಕಡಲು, ಶ್ರೀಗಂಧ, ಪಕ್ಷಿಗಳ ಕಲರವ – ಮುಂತಾದ ಪರಿಸರದ ಮಧ್ಯೆ ಬೆಳೆದವರು ಅವುಗಳನ್ನು ಒಳಗೊಳ್ಳುತ್ತ, ಹೊಗಳುತ್ತ, ರೂಪಕವಾಗಿಸುತ್ತ ಬರೆಯುವುದು ಸ್ವಾಭಾವಿಕ ಕ್ರಿಯೆ. ಅಂಥ ಅಭಿವ್ಯಕ್ತಿ ರೂಪಗಳನ್ನು ಓದಿದ ನನಗೆ ನಮ್ಮೂರಲ್ಲಿ ಅಂಥ ಪರಿಸರ ಇಲ್ಲವಲ್ಲವೆಂಬ ಕೊರಗು ಇತ್ತು. ನಮ್ಮೂರಲ್ಲಿ ಶ್ರೀಗಂಧದ ಮರಗಳಿಲ್ಲ. ಅವುಗಳ ಗಂಧಗಾಳಿಯೂ ಗೊತ್ತಿಲ್ಲ. ಹೆಚ್ಚು ಇರುವುದು ಜಾಲಿಯ ಮರ. ಜೊತೆಗೆ ಒಂದಿಷ್ಟು ಹೊಂಗೆಮರ. ಕೋಗಿಲೆಯನ್ನಂತೂ ನೋಡಿಲ್ಲ; ಅದರ ಕಂಠ ಕೇಳಿಲ್ಲ. ಇಲ್ಲಿರುವುದು ಕಾಗೆಗಳ ಗುಂಪು. ಒಂದಷ್ಟು ಗುಬ್ಬಚ್ಚಿ. ನದಿಯಂತೂ ಇಲ್ಲವೇ ಇಲ್ಲ; ಇರುವ ಹಳ್ಳದಲ್ಲಿ ನೀರು ಹರಿದು ಎಷ್ಟೋ ಕಾಲವಾಗಿದೆ. ಕಡಲಂತೂ ದೂರ; ಇರುವ ಕೆರೆ ತುಂಬುವುದೇ ಕಡಿಮೆ. ಬಿರುಕು ಬಿಟ್ಟ ಕೆರೆ ನೆಲವೇ ಹೆಚ್ಚು. ‘ಇಲ್ಲ’ ಎಂದು ಕೊರಗುವ ಬದಲು ‘ಇದೆ’ ಎನ್ನುವುದೇ ಸಾಹಿತ್ಯದ ವಸ್ತು ಯಾಕಾಗಬಾರದು? ನಿಸರ್ಗ ರಮ್ಯ ಕವಿತೆಗಳ ಜೊತೆಗೇ ಕುವೆಂಪು ಅವರು ‘ಗೊಬ್ಬರ’ ಕುರಿತು ಬರೆಯಲಿಲ್ಲವೆ? ‘ಸೃಷ್ಟಿಯಲ್ಲಿ ಯಾವುದೂ ವಿಫಲವಲ್ಲ’ ಎಂದು ಬೇಂದ್ರೆಯವರು ಹೇಳಿಲ್ಲವೆ? ಹೌದು. ನನಗೆ ನಮ್ಮಲ್ಲಿ ‘ಇಲ್ಲದ್ದು’ ಮುಖ್ಯವಾಗದೆ ‘ಇದ್ದದ್ದು’ ಮುಖ್ಯವಾಗಬೇಕು. ‘ನಮ್ಮಲ್ಲಿ ಇರುವ ಜಾಲಿಯಮರ, ಕಾಗೆ, ಕೆರೆ, ಹಳ್ಳಗಳೂ ಮಹತ್ವಪೂರ್ಣವೆಂದು ನಾನು ಭಾವಿಸಬೇಕು. ಈ ಭಾವನೆಯನ್ನು ಬಿತ್ತಿ ಬೆಳೆಯಬೇಕು’ – ಎಂದು ನಿರ್ಧರಿಸಿದೆ.
ನನ್ನ ದೃಢ ನಿರ್ಧಾರಕ್ಕೆ ತಾತ್ವಿಕ ನೆಲೆಯ ನುಡಿಗಟ್ಟು ಕೊಡತೊಡಗಿದೆ. ಇದು ಮೇಲರಿಮೆ – ಕೀಳರಿಮೆಗಳನ್ನು ಮೀರಿದ ಸೃಷ್ಟಿ ಸಮತೆಯ ಸಿದ್ಧಾಂತವೂ ಹೌದು. ಸಮ ಸಮಾಜದ ರೂಪಕ ಧ್ವನಿಯೂ ಹೌದು. ಸಂದರ್ಭಾನುಸಾರ ಉಚಿತ ಸಮಯ ಸಿಕ್ಕಾಗಲೆಲ್ಲ ದೃಢವಾಗಿ ಹೀಗೆ ಹೇಳತೊಡಗಿದೆ : ‘‘ನಮ್ಮದು ಶ್ರೀಗಂಧದ ಕರ್ನಾಟಕ ಮಾತ್ರವಲ್ಲ; ಜಾಲೀಮರಗಳ ಕರ್ನಾಟಕವೂ ಹೌದು, ಕೋಗಿಲೆಗಳ ಕರ್ನಾಟಕ ಮಾತ್ರವಲ್ಲ, ಕಾಗೆಗಳ ಕರ್ನಾಟಕವೂ ಹೌದು; ಕಾವೇರಿ ಕೃಷ್ಣೆಯರ ಕರ್ನಾಟಕ ಮಾತ್ರವಲ್ಲ, ನೀರು ಹರಿಯದ ಹಳ್ಳ ಕೊಳ್ಳಗಳ ಕರ್ನಾಟಕವೂ ಹೌದು; ಕಡಲಿನ ಕರ್ನಾಟಕ ಮಾತ್ರವಲ್ಲ; ಬಿರುಕು ಬಿಟ್ಟ ಬತ್ತಿದ ಕೆರೆಗಳ ಕರ್ನಾಟಕವೂ ಹೌದು’’.
ನನ್ನ ಈ ಮಾತುಗಳು ಕರ್ನಾಟಕವಷ್ಟೇ ಅಲ್ಲ ಒಟ್ಟು ಸಮಾಜದ ಸಾಮಾಜಿಕ- ಆರ್ಥಿಕ ಸನ್ನಿವೇಶದ ರೂಪಕವಾಗುತ್ತ, ನಿರ್ಲಕ್ಷಿತ ವಲಯಕ್ಕೆ ಸಮತೆ, ಘನತೆಗಳನ್ನು ಒದಗಿಸುವ ತಾತ್ವಿಕರೂಪವಾಗಿದ್ದವು. ವಾಚ್ಯಾರ್ಥವನ್ನು ಮೀರಿ ಬೆಳೆಯತೊಡಗಿದವು. ಮುಂದೆ ಕನ್ನಡದಲ್ಲಿ ಕಾಗೆಗಳನ್ನು ಕುರಿತ ಅನೇಕ ಕವಿತೆಗಳು ರಚನೆಯಾದವು.
ಶ್ರೀಗಂಧ, ಕೋಗಿಲೆ, ಕಾವೇರಿ, ಕೃಷ್ಣೆ, ಕಡಲುಗಳನ್ನು ನಾನು ಗೌಣಗೊಳಿಸುತ್ತಿಲ್ಲ. ಇವೆಲ್ಲವೂ ನಮ್ಮ ನಾಡಿನ ಹೆಮ್ಮೆಯ ರೂಪಗಳು. ಇವುಗಳ ಜೊತೆಗೆ ಬೇರೆ ರೂಪಿಕೆ ಗಳೂ ಇವೆಯೆಂಬುದನ್ನು ಮರೆಯಬಾರದು; ಅವುಗಳನ್ನು ನಿರ್ಲಕ್ಷಿಸಬಾರದು.
ಮುಂದುವರೆದು ನಾನು ‘ಕಾಗೆಯ ಕಾರುಣ್ಯ’ದ ಬಗ್ಗೆ ಮಾತಾಡತೊಡಗಿದೆ. ನಮ್ಮ ಸಾಮಾಜಿಕ ಸೌಹಾರ್ದಕ್ಕೆ ‘ಕಾಗೆಯ ಕಾರುಣ್ಯ’ ಎಷ್ಟು ಮುಖ್ಯ ಎಂದು ಪ್ರತಿಪಾದಿಸ ತೊಡಗಿದೆ. ಯಾವುದೀ ಕಾಗೆಯ ಕಾರುಣ್ಯ? ನೋಡಿ; ಕೋಗಿಲೆಯು ಮೊಟ್ಟೆ ಇಡುತ್ತದೆಯೇ ಹೊರತು, ತಾನೇ ಕಾವಿಗೆ ಕೂತು ಮರಿ ಮಾಡುವುದಿಲ್ಲ. ಕೋಗಿಲೆ ಇಟ್ಟ ಮೊಟ್ಟೆಯ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆ. ಕಾಗೆಯು ಮೊಟ್ಟೆ ಮೇಲೆ ಕಾವಿಗೆ ಕೂರದಿದ್ದರೆ ಮರಿ ಹೊರಬರುವುದಿಲ್ಲ. ಆದ್ದರಿಂದ ಕಾಗೆಯೇ ಕೋಗಿಲೆಯ ಸಂತತಿಯನ್ನು ಬೆಳೆಸುವ ಚಾಲಕ ಶಕ್ತಿ. ಅಲ್ಲದೆ ಹಂಚಿಕೊಂಡು ತಿನ್ನುವ ಕಾಗೆಯದು ಬಳಗ ಬಂಧುತ್ವ. ಇದು ಕಾಗೆಯ ಕಾರುಣ್ಯ. ನಮ್ಮ ಸಮಾಜಕ್ಕೆ ಕಾಗೆಯ ಕಾರುಣ್ಯವು ಒಂದು ಆದರ್ಶ ಮಾದರಿಯಾದರೆ, ಅದು ಸಮತೆ ಮಮತೆಗಳ ಮನಸ್ಸನ್ನು ರೂಪಿಸುತ್ತದೆ. ಜಾತಿ ಭೇದ ಮತ್ತು ಧರ್ಮದ್ವೇಷದ ವಾತಾವರಣವನ್ನು ತಿಳಿಗೊಳಿಸಲು ಮನುಷ್ಯರ ಮನಸ್ಸಿನಲ್ಲಿ ಕಾಗೆಯ ಕಾರುಣ್ಯ ಬೆಳಗಬೇಕು. ಆಗ ಮೇಲು-ಕೀಳುಗಳನ್ನು ಮೀರಿದ ಸೌಹಾರ್ದ ಸಮಾಜ ರೂಪುಗೊಳ್ಳುತ್ತದೆ.
ಮುಂದೆ, ನಾನು ಬೆಂಗಳೂರಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದಾಗ ನನ್ನ ಎರಡನೇ ಕವನ ಸಂಕಲನ ‘ಮರಕುಟಿಗ’ ಪ್ರಕಟವಾಯಿತು. ‘ಕನಸಿನ ಕನ್ನಿಕೆ’ಯ ಒಂದು ಪ್ರತಿಯೂ ನನ್ನಲ್ಲಿ ಇಲ್ಲವಾದ್ದರಿಂದ ‘ಮರಕುಟಿಗ’ ಸಂಕಲನವೇ ಮೊದಲನೆಯ ದೆಂಬಂತೆ ಪ್ರಚಾರಗೊಂಡಿದೆ. ‘ಕನಸಿನ ಕನ್ನಿಕೆ’ಗೂ ‘ಮರಕುಟಿಗ’ಕ್ಕೂ ಸಾಕಷ್ಟು ವ್ಯತ್ಯಾಸ ವಿದೆ. ನವ್ಯಕಾವ್ಯ ಪ್ರಖರವಾಗಿದ್ದು ಅದರ ಪ್ರಭಾವಕ್ಕೊಳಗಾಗಿದ್ದಾಗ ಬರೆದ ಕವಿತೆಗಳು ‘ಮರಕುಟಿಗ’ದಲ್ಲಿವೆ. ನವ್ಯಕಾವ್ಯದ ಪ್ರಭಾವವು ಕಾವ್ಯಶಿಲ್ಪಕ್ಕೆ ಸೀಮಿತವಾಗಿತ್ತೇ ಹೊರತು ವಸ್ತುವಿಗಲ್ಲ. ನಾನು ನನ್ನದೇ ಗ್ರಹಿಕೆಯ ಬಹುಪಾಲು ಸಾಮಾಜಿಕ ಕಾಳಜಿಯ ವಸ್ತುಗಳಿಗೆ ನವ್ಯಕಾವ್ಯದ ಶಿಲ್ಪ ರೂಪವನ್ನು ನೀಡಿದ್ದೆ. ‘ವೈಯಕ್ತಿಕ’ ಮಾತ್ರವಾಗದೆ ‘ಸಾಮಾಜಿಕ’ವಾದ ರಚನೆಗಳೇ ಈ ಸಂಕಲನದಲ್ಲಿ ಹೆಚ್ಚು ಇದ್ದವು. ಈ ಸಂಕಲನವನ್ನು ಪ್ರಕಟಿಸಿದವರು – ನನ್ನ ಎಂ.ಎ. ಸಹಪಾಠಿ ಗಳೆಯ ಶ್ರೀ ಕೈ.ರಾ. ಗಣೇಶ್. ನಾನು ಮತ್ತು ಅವರು ಎಂ.ಎ. ಓದುವಾಗ ಶಾಸನ ಶಾಸ್ತçವನ್ನು ವಿಶೇಷ ವಿಷಯವಾಗಿ ತೆಗೆದುಕೊಂಡಿದ್ದೆವು. ಪರೀಕ್ಷೆ ಸಂದರ್ಭದಲ್ಲಿ ಒಟ್ಟಿಗೇ ಶಾಸನ ಶಾಸ್ತçದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತ ಹತ್ತಿರವಾಗಿದ್ದೆವು. ನಾನು ಸ್ವಲ್ಪ ಕಾಲ ಬೆಂಗಳೂರಿನ ಆಚಾರ್ಯ ಪಾಠಶಾಲಾ
ಕಾಲೇಜಿನಲ್ಲಿ ಅವರ ಸಹೋದ್ಯೋಗಿ ಕೂಡ ಆಗಿದ್ದೆ. ಅವರು ಸ್ನೇಹದಿಂದ ‘ಮರಕುಟಿಗ’ ಸಂಕಲನಕ್ಕೆ ಹಣ ತೊಡಗಿಸಿದರು. ಗಣೇಶ್ ಅವರ ಇನಿಷಿಯಲ್ಗಳನ್ನು (ಕೈ.ರಾ.) ಸೇರಿಸಿ ‘ಕೈರಾಗ’ ಪ್ರಕಾಶನ ಎಂದು ಹೆಸರಿಟ್ಟೆವು. ಆ ವೇಳೆಗೆ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಕತೆಗಾರ ಈಶ್ವರ ಚಂದ್ರ ಅವರು ನನ್ನ ಸ್ನೇಹಿತರಾಗಿದ್ದರು. (ಈಗಲೂ ಸ್ನೇಹಿತರೇ). ವೆಂಕಟೇಶಮೂರ್ತಿಯವರು ತಾವೇ ‘ಮರಕುಟಿಗ’ಕ್ಕೆ ಮುಖಚಿತ್ರ ಬರೆದುಕೊಟ್ಟರು.
‘ಮರಕುಟಿಗ’ ಸಂಕಲನವು ಒಂದಿಷ್ಟು ಮೆಚ್ಚುಗೆಗೂ ಪಾತ್ರವಾಯಿತು. ಬೆಳೆಯುವ ಭರವಸೆಯ ಮಾತುಗಳು ಬಂದವು. ತುಮಕೂರಿನ ‘ವೀಚಿ’ಯವರು ನಾನು ಸಿಕ್ಕಿದಾಗ ಒಂದೆರಡು ಕವಿತೆಗಳ ಸಾಲುಗಳನ್ನು ಹೇಳಿ ನಾನು ಸಂಭ್ರಮಿಸುವಂತೆ ಮಾಡಿದ್ದರು. ಅವರ ಸಹೃದಯತೆ ನನ್ನಲ್ಲಿ ಉತ್ಸಾಹ ತುಂಬಿತ್ತು. ಇದೇ ಉತ್ಸಾಹದಿಂದ ನಾನು ‘ಮರಕುಟಿಗ’ ಸಂಕಲನವನ್ನು ಸಿಮ್ಲಾದ ಆಂಗ್ಲಭಾಷಾ ಅಧ್ಯಯನ ಸಂಸ್ಥೆಯಲ್ಲಿದ್ದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರಿಗೆ ಕಳಿಸಿದೆ. ಅಡಿಗರು ಕರ್ನಾಟಕದಲ್ಲಿದ್ದ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ‘ಜನಸಂಘ’ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶ್ರೀ ಕೆಂಗಲ್ ಹನುಮಂತಯ್ಯನವರ ಎದುರಾಳಿಯಾಗಿ ನಿಂತು, ಸೋತು, ಆನಂತರ ಸಿಮ್ಲಾಕ್ಕೆ ಉದ್ಯೋಗಾರ್ಥ ಹೋಗಿ ನೆಲೆಸಿದ್ದರು. ಅಡಿಗರು ನನ್ನ ಸಂಕಲನವನ್ನು ಓದಿ ಒಂದು ಪತ್ರ ಬರೆದರು. ಆ ಪತ್ರದಲ್ಲಿ (ಕಾರ್ಡಿನಲ್ಲಿ) ‘‘ನಾನು ಇಷ್ಟು ಕಾಲ ಬೆಂಗಳೂರಿ ನಲ್ಲಿದ್ದೂ ನಿಮ್ಮಂಥ ಒಳ್ಳೆಯ ಕವಿಯನ್ನು ಪರಿಚಯ ಮಾಡಿಕೊಳ್ಳಲಿಲ್ಲವಲ್ಲ ಎಂದು ಬೇಸರವಾಗುತ್ತಿದೆ’’ ಎಂಬ ಒಂದು ಸಾಲು ಇತ್ತು. ನಿಜಕ್ಕೂ ಸಂಭ್ರಮಕ್ಕೆ ಕಾರಣವಾಗುವ ಸಾಲು! ಆತ್ಮೀಯರಿಗೆ ತೋರಿಸಿದೆ. ಅದೇ ಉತ್ಸಾಹದಲ್ಲಿ ಪ್ರೊ. ಸಣ್ಣಗುಡ್ಡಯ್ಯನವರಿಗೂ ತೋರಿಸಿದೆ. ಅವರು ಓದಿ ‘‘ಪ್ರೋತ್ಸಾಹ ಕೊಡೋಕೆ ಅಂತ ಹೀಗೆಲ್ಲ ಬರೆಯೋದುಂಟು’’ ಎಂದು ಕಾರ್ಡನ್ನು ವಾಪಸ್ ನನ್ನ ಕೈಗಿತ್ತರು. ನನ್ನ ಉತ್ಸಾಹ ಸ್ವಲ್ಪ ಕುಗ್ಗಿತು! ಕೆಲವು ಸ್ನೇಹಿತರು ಅಡಿಗರ ಅಭಿಪ್ರಾಯವನ್ನು ಮುಂದಿನ ಪುಸ್ತಕದಲ್ಲಿ ಮುದ್ರಿಸಿ ಎಂದು ಸಲಹೆ ನೀಡಿದ್ದರೂ ನಾನು ಹಾಗೆ ಮಾಡಲಿಲ್ಲ, ವೈಯಕ್ತಿಕವಾಗಿ ಬರೆದ ಪತ್ರದಲ್ಲಿನ ಅಭಿಪ್ರಾಯಗಳನ್ನು ಅಚ್ಚು ಮಾಡಿ ಪ್ರಕಟಿಸುವುದು ಸರಿಯಲ್ಲ ಎನ್ನುವುದು ನನ್ನ ನಿಲುವಾಗಿತ್ತು. ಹೀಗಾಗಿ ನನ್ನ ಕೆಲವು ಕೃತಿಗಳನ್ನು ಪ್ರಶಂಸಿಸಿ ಶ್ರೀ ಚನ್ನವೀರ ಕಣವಿ, ಶ್ರೀ ನಿರಂಜನ, ಶ್ರೀ ಬಸವರಾಜ ಕಟ್ಟೀಮನಿ ಮುಂತಾದವರು ಬರೆದ ಪತ್ರಗಳಲ್ಲಿನ ಅಭಿಪ್ರಾಯಗಳನ್ನು ನಾನು ಯಾವ ಪುಸ್ತಕದಲ್ಲೂ ಪ್ರಕಟಿಸಲಿಲ್ಲ.
ಅಡಿಗರು ನನ್ನ ಬಗ್ಗೆ ಬರೆದದ್ದು ಪ್ರೋತ್ಸಾಹಕ್ಕಾಗಿ ಎಂದುಕೊಂಡರೂ ಅವರು ತೋರಿಕೆಗಾಗಿ ಹಾಗೆ ಹೇಳಿಲ್ಲ ಎನ್ನುವುದು ನಿಜ. ಕೆಲ ವರ್ಷಗಳ ಹಿಂದೆ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಪತ್ರಿಕಾ ಸಂದರ್ಶನದಲ್ಲಿ ‘ಅಡಿಗರು ಆ ಬರಗೂರು ರಾಮಚಂದ್ರಪ್ಪ ಬರೆಯೋದನ್ನು ಗಂಭೀರವಾಗಿ ಗಮನಿಸಬೇಕು. ಒಳ್ಳೆ ಲೇಖಕ’’ ಎಂಬರ್ಥದ ಮಾತುಗಳನ್ನು ಹೇಳಿದ್ದಾಗಿಯೂ ತಾವು ಬರಗೂರರನ್ನು ಆಗ ಸರಿಯಾಗಿ ಓದಲಿಲ್ಲವೆಂದೂ ಹೇಳಿದ್ದರು. ಅಂದರೆ ಅಡಿಗರು ನನ್ನ ಬರವಣಿಗೆಯನ್ನು ಗಂಭೀರವಾಗಿ ಗಮನಿಸಿದ್ದರು. ಅನಂತಮೂರ್ತಿಯವರು ನನ್ನದೇ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತಾಡುತ್ತ ‘‘ನಾವು ಬರಗೂರ್ಗೆ ಅನ್ಯಾಯ ಮಾಡಿದ್ವಿ. ನಾವೇ ಬಂಡಾಯ ಇವರದೇನು ಅಂದ್ಕೊಂಡ್ವಿ’’ ಎಂದು ಕಳಕಳಿಯಿಂದ ಮಾತಾಡಿದ್ದರು. ನಾನು ಮಾತಾಡುತ್ತ ತಮಾಷೆ ಧಾಟಿಯಲ್ಲಿ ‘‘ನನಗೆ ಅನ್ಯಾಯವಾಯ್ತು ಅಂತ
ಗೊತ್ತಾಗೋಕೆ ಅನಂತಮೂರ್ತಿಯವರಿಗೆ 80 ವರ್ಷ ಮೀರಬೇಕಾಯ್ತು. ನನಗೆ ಅರತ್ತೈ ಮೀರಬೇಕಾಯ್ತು’’ ಎಂದೆ. ಅನಂತಮೂರ್ತಿಯವರು ನಸುನಕ್ಕರು. ನನ್ನ ಮಾತಿಗೆ ಬೇಸರ ಮಾಡಿಕೊಳ್ಳಲಿಲ್ಲ. ‘‘ನಿಜ ಕಣಯ್ಯ’’ ಎಂದರು.
ಇಲ್ಲಿಯೇ ಇನ್ನೊಂದು ಪ್ರಸಂಗ ನೆನಪಾಗುತ್ತದೆ. ರಾಷ್ಟçಕವಿ ಕುವೆಂಪು ಅವರಿಗೆ ಬೆಂಗಳೂರಿನ ಟೌನ್ಹಾಲ್ನಲ್ಲಿ ಅಭಿನಂದನಾ ಸಮಾರಂಭವೊಂದು ಏರ್ಪಾಟಾಗಿತ್ತು. ಆ ಸಂದರ್ಭಕ್ಕೆ ‘ಸುಧಾ’ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಲು ಇಚ್ಚಿಸಿದ ಸಂಪಾದಕ ಶ್ರೀ ಎಂ.ಬಿ. ಸಿಂಗ್ ಅವರು ನನ್ನನ್ನು ಕೇಳಿದರು. ನಾನು ಬರೆದುಕೊಟ್ಟೆ. ಆ ಲೇಖನದಲ್ಲಿ ನನ್ನಲ್ಲಿ ಕುವೆಂಪು ಅವರ ಬಗ್ಗೆ ಕೆಲವರು ಮೂಡಿಸಿದ್ದ ಪೂರ್ವಗ್ರಹದ ಸಂಗತಿಗಳನ್ನು ಹೇಳಿ, ಅದರಿಂದ ಹೊರಬಂದ ನಾನು ಕುವೆಂಪು ಅವರನ್ನು ಅರ್ಥೈಸಿಕೊಂಡ ರೀತಿ ಯನ್ನು ವಿವರಿಸಿದ್ದೆ. ಅದನ್ನು ಓದಿದ ಕುವೆಂಪು ಅವರು, ಅಭಿನಂದನಾ ಸಮಾರಂಭದ ಸಂಘಟಕರಲ್ಲಿ ಒಬ್ಬರಾಗಿದ್ದ, ನನಗೂ ಆತ್ಮೀಯರಾಗಿದ್ದ ಶ್ರೀ ಎಚ್.ಆರ್. ದಾಸೇಗೌಡರನ್ನು ಕರೆದು ‘‘ಈ ಸುಧಾ ಪತ್ರಿಕೆಯ ಮೂರ್ನಾಲ್ಕು ಪ್ರತಿ ತರಿಸಿಕೊಡಿ’’ ಎಂದರಂತೆ. ದಾಸೇಗೌಡರು ಈ ವಿಷಯವನ್ನು ಹೇಳಿದ್ದಲ್ಲದೆ ಕುವೆಂಪು ಅವರು ‘ಈ ರಾಮಚಂದ್ರಪ್ಪ ಪ್ರಾಮಾಣಿಕವಾಗಿ ಬರೆದಿರೋದು ಇಷ್ಟ ಆಯ್ತು’’ ಎಂದದ್ದನ್ನು ತಿಳಿಸಿದರು. ನಿಜಕ್ಕೂ ನನಗೆ ಸಂತೋಷವಾಯಿತು. ಅತ್ತ ನವ್ಯಕಾವ್ಯದ ನಾಯಕ ಅಡಿಗರು, ಇತ್ತ ನವೋದಯ ಕಾವ್ಯದ ಮಹಾಕವಿ ಕುವೆಂಪು ಇಬ್ಬರಿಂದಲೂ ಬಂದ ಮೆಚ್ಚುಗೆಯ ನುಡಿಗಳು ಸಂತೋಷ ವುಂಟುಮಾಡಿದ್ದನ್ನು ನಾನು ಇಲ್ಲೀವರೆಗೆ ಎಲ್ಲೂ ದಾಖಲಿಸಿಲ್ಲ. ಈಗ ಅಂದಿನ ಸಂತೋಷವನ್ನು ಹೊರಹಾಕುತ್ತಿದ್ದೇನೆ.
ಇನ್ನು, ನನ್ನ ಮೊದಲನೇ ಕಥಾಸಂಕಲನವಾದ ‘ಸುಂಟರಗಾಳಿ’ಯ ವಿಷಯಕ್ಕೆ ಬರುತ್ತೇನೆ. ‘ಸುಂಟರಗಾಳಿ’ ಎಂಬ ಒಂದು ಕತೆಯು ಈ ಸಂಕಲನದಲ್ಲಿದ್ದು ಅದೇ ಹೆಸರನ್ನು ಸಂಕಲನಕ್ಕೆ ಇಟ್ಟಿದ್ದೆ. ಈ ಕತೆಯ ಮೂಲ ಹೆಸರು ‘ಜಾಲಿಯ ಮರ’ ಅಂತ. ಇದು ‘ಪ್ರಜಾವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಮೊದಲ ಕತೆ. ಈ ಕತೆಯಲ್ಲಿರುವ ತವಕ ತಲ್ಲಣಗಳಿಗೆ ‘ಸುಂಟರಗಾಳಿ’ ಎಂಬ ಹೆಸರು ಸೂಕ್ತವೆಂದು ಒಂದಿಬ್ಬರು ಸ್ನೇಹಿತರು ಹೇಳಿದ್ದರಿಂದ ಸಂಕಲನ ತರುವಾಗ ‘ಜಾಲಿಯ ಮರ’ದ ಬದಲು ‘ಸುಂಟರಗಾಳಿ’ ಎಂದು ಕರೆದೆ. ಆದರೆ ಕತೆಯ ಒಳಗೆ ಜಾಲಿಯ ಮರ ಆವರಿಸಿಕೊಂಡಿದ್ದು, ಏನೂ ಬದಲಾಯಿಸಲಿಲ್ಲ. ಒಮ್ಮೊಮ್ಮೆ ಹೆಸರು ಬದಲಾಯಿಸ ಬಾರದಿತ್ತು ಎನ್ನಿಸಿದ್ದು ಉಂಟು. ಹೀಗೆ ಅನ್ನಿಸುವ ವೇಳೆಗೆ ಸಂಕಲನ ಹೊರಬಂದು ಉತ್ತಮ ವಿಮರ್ಶೆಯೂ ಪ್ರಕಟವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ಬಂದಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ತಲಾ ಒಂದೊಂದರಂತೆ ‘ಬಹುಮಾನ’ ನೀಡುತ್ತದೆ. ಇಲ್ಲಿ ಎಲ್ಲಾ ಪ್ರಕಾರಗಳೂ ಇರುವುದರಿಂದ ‘ಪ್ರಶಸ್ತಿ’ ಎಂದು ಕರೆಯುವುದಿಲ್ಲ. ಜೀವಮಾನ ಸಾಧಕರಿಗೆ ಮಾತ್ರ ಗೌರವ ಪ್ರಶಸ್ತಿ ನೀಡುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಇಡೀ ಕನ್ನಡ ಸಾಹಿತ್ಯದ ಒಂದೇ ಪುಸ್ತಕವನ್ನು ಆಯ್ಕೆ ಮಾಡುವುದರಿಂದ ‘ಪ್ರಶಸ್ತಿ’ ಎಂದು ಕರೆಯುತ್ತದೆ. ಈ ವ್ಯತ್ಯಾಸವನ್ನು ಗಮನಿಸಬೇಕು. ನನಗೆ ಬಂದದ್ದು ಪುಸ್ತಕ ಪ್ರಶಸ್ತಿ ಅಲ್ಲ. ಪುಸ್ತಕ ಬಹುಮಾನ… ಈ ಪುಸ್ತಕಕ್ಕೆ ಹಣತೊಡಗಿಸಿ ಪ್ರಕಟಿಸಿದ್ದು ನನ್ನ ಪದವಿ ತರಗತಿಯ ಗುರುಗಳಾದ ಪ್ರೊ. ಎಂ.ಎಸ್. ರಾಮಲಿಂಗಪ್ಪನವರು. ಇವರೇ ನನ್ನ ನಾಟಕ ‘ಮುಳ್ಳಹಾದಿ’ಯ ಮುದ್ರಣ ಕಾರ್ಯದ ಉಸ್ತುವಾರಿ ವಹಿಸಿಕೊಂಡು ಪ್ರೋತ್ಸಾಹಿಸಿದ್ದರು.
ನನ್ನ ಪ್ರಕಟಿತ ಮೊದಲ ಕಾದಂಬರಿ – ‘ಸೂತ್ರ’. ಇದನ್ನು ಪ್ರಕಟಿಸಿದ್ದು ಕತೆಗಾರ ಶ್ರೀ ಬಿ.ಜಿ. ಸತ್ಯಮೂರ್ತಿ ಮತ್ತು ಲೇಖಕ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ. ಅಂದು ಉತ್ತೇಜನ ನೀಡಿದ ಇಬ್ಬರನ್ನೂ ವಿಶ್ವಾಸದಿಂದ ನೆನೆಯುತ್ತೇನೆ. ಈ ಕಾದಂಬರಿಯು ಅವರಿಂದಲೇ ಮರುಮುದ್ರಣವನ್ನೂ ಕಂಡಿತು. ಆನಂತರ ‘ಒಂದು ಊರಿನ ಕತೆ’ ಕಿರು ಕಾದಂಬರಿಯನ್ನು ಪ್ರಕಟಿಸಿದರು. ಆಗ ನನ್ನ ವಿದ್ಯಾರ್ಥಿಯಾಗಿದ್ದ ಬೈರಮಂಗಲ ರಾಮೇಗೌಡರು ಈ ಕಿರು ಕಾದಂಬರಿಯ ಅಚ್ಚುಕಟ್ಟಾದ ಪ್ರತಿಯನ್ನು ಬರೆದುಕೊಟ್ಟಿದ್ದರು. (ಕೆಲ ವರ್ಷಗಳ ಹಿಂದೆ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರು ನನ್ನ ಕತೆಗಳು, ನೀಳ್ಗತೆಗಳು ಮತ್ತು ಕಾದಂಬರಿಗಳನ್ನು ಸೇರಿಸಿದ ಎರಡು ಸಂಪುಟಗಳನ್ನು ಪ್ರಕಟಿಸಿದ್ದನ್ನೂ ಇಲ್ಲಿ ನೆನೆಯುತ್ತೇನೆ).
‘ಸೂತ್ರ’ ಕಾದಂಬರಿಯ ಮುದ್ರಣದ ಸಂದರ್ಭದಲ್ಲಾದ ಒಂದು ಪ್ರಸಂಗವನ್ನು ಇಲ್ಲಿ ಹೇಳಬೇಕು. ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ‘ದವಲತ್ ಪ್ರಿಂಟರ್ಸ್’ನಲ್ಲಿ ಕಾದಂಬರಿಯ ಕೆಲಸ ನಡೆಯುತ್ತಿತ್ತು. ನಾನು ಕರಡು ತಿದ್ದಲು ಅಲ್ಲಿಗೇ ಹೋಗುತ್ತಿದ್ದೆ. ಒಂದು ದಿನ ಒಬ್ಬ ಕಂಪೋಸಿಟರ್ (ಅಚ್ಚಿನ ಮೊಳೆ ಜೋಡಿಸುವವರು) ನನ್ನ ಬಳಿಗೆ ಬಂದರು. ‘‘ಸಾರ್, ನಿಮ್ಮ ಕಾದಂಬರಿ ನಾನೇ ಕಂಪೋಸ್ ಮಾಡಿದ್ದು. ತುಂಬಾ ಚನ್ನಾಗಿದೆ ಸಾರ್’’ ಎಂದರು. ನಾನು ಸಂತೋಷದಿಂದ ಕೈಕುಲುಕಿ ವಂದನೆಗಳನ್ನು ಹೇಳಿದೆ. ಆ ವ್ಯಕ್ತಿ ಬೇರಾರೂ ಅಲ್ಲ, ವಾರ ಪತ್ರಿಕೆಯೊಂದರ ಸಂಪಾದಕರಾಗಿ, ಕನ್ನಡ ಹೋರಾಟಗಾರರಾಗಿ, ಕಾದಂಬರಿಕಾರರಾಗಿ ಬೆಳೆದ ಶ್ರೀ ಜಾಣಗೆರೆ ವೆಂಕಟ ರಾಮಯ್ಯನವರು.
ಹೀಗೆ ಸಂಕಷ್ಟದಿಂದ ಸಾಧಕರಾಗಿ ಬೆಳೆದ ಇನ್ನೊಬ್ಬ ಪ್ರತಿಭಾವಂತರು – ಹಂಸಲೇಖ ಅವರು. ಅವರು ಕೂಡ ಪ್ರೆಸ್ಸಿನಲ್ಲಿ ಮೊಳೆ ಜೋಡಿಸುವ ಕೆಲಸ ಮಾಡುತ್ತಿದ್ದರು. ಮೊಳೆ ಜೋಡಿಸುತ್ತಿದ್ದವರು ಸಾಹಿತ್ಯ-ಸಂಗೀತಗಳನ್ನು ಜೋಡಿಸುವ ದೊಡ್ಡ ಸಾಧಕರಾಗಿ ಬೆಳೆದಿದ್ದಾರೆ. ಸಿನಿಮಾ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.
ನನ್ನ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದವರು ‘ಅಂಕಿತ ಪುಸ್ತಕ’ ಪ್ರಕಾಶನ ಸಂಸ್ಥೆಯ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾ ಅವರು. ಇಬ್ಬರೂ ನನ್ನ ವಿದ್ಯಾರ್ಥಿ ಗಳಾಗಿದ್ದರು. ಪ್ರಕಾಶ್ ಕಂಬತ್ತಳ್ಳಿ ಎನ್.ಜಿ.ಇ.ಎಫ್.ನಲ್ಲಿ ಕೆಲಸ ಮಾಡುತ್ತಿದ್ದರು. ಈ ಹುದ್ದೆಗೆ ರಾಜೀನಾಮೆ ಕೊಡಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪನಿರ್ದೇಶಕ ಹುದ್ದೆಗಾಗಿ ಕರೆಸಿಕೊಂಡು ‘ತಾತ್ಕಾಲಿಕ’ವಾಗಿ ನೇಮಿಸಿದವರೇ ಮುಂದೊಂದು ದಿನ ಕೈಬಿಟ್ಟರು (ಆಗ ಚಂದ್ರಶೇಖರ ಕಂಬಾರ ಅವರು ಕುಲಪತಿಯಾಗಿದ್ದರು). ಆದರೆ ಪ್ರಕಾಶ್ ಕಂಬತ್ತಳ್ಳಿ ಎದೆಗುಂದಲಿಲ್ಲ. ‘ಅಂಕಿತ ಪುಸ್ತಕ’ ಎಂಬ ಹೆಸರಲ್ಲಿ ಪುಸ್ತಕದಂಗಡಿ ತೆರೆದರು. ಪತಿ-ಪತ್ನಿ ಇಬ್ಬರೂ ಸೇರಿ ಪ್ರಕಾಶನವನ್ನೂ ಆರಂಭಿಸಿದರು. ಸಂಕಷ್ಟದಿಂದ ಮೇಲೆದ್ದು ಪುಸ್ತಕ ಸಾಧಕರಾದರು. ಈಗ ‘ಅಂಕಿತ ಪುಸ್ತಕ’ವೆಂದರೆ ಬಹುಪಾಲು ಉತ್ತಮ ಕೃತಿಗಳ ಪ್ರಕಟಣಾ ಸಂಸ್ಥೆ ಎಂಬ ಹೆಸರು ಪ್ರಚಲಿತವಾಗಿದೆ. ಕನ್ನಡದ ಅನೇಕ ಪ್ರಸಿದ್ಧ ಬರಹಗಾರರ ಜೊತೆಗೆ ಹೊಸಬರ ಪುಸ್ತಕಗಳನ್ನು ಪ್ರಕಟಿಸುವ ಉಮೇದು ಪ್ರಕಾಶ್ ಮತ್ತು ಪ್ರಭಾ ಅವರದು. ನಾನು ಆಗಾಗ್ಗೆ ಇವರ ‘ಅಂಕಿತ ಪುಸ್ತಕ’ಕ್ಕೆ ಹೋಗಿ, ಕೂತು, ಕಾಫಿ ಕುಡಿದು ಹೊಸ ಪುಸ್ತಕಗಳನ್ನು ಕೊಂಡು ತರುತ್ತೇನೆ. ಹೀಗೆ ನಾನು ಹೋಗಿ ಬರುವ ಇನ್ನೊಂದು ಸ್ಥಳವೆಂದರೆ ಚಾಮರಾಜಪೇಟೆಯಲ್ಲಿರುವ ‘ಸ್ವ್ಯಾನ್ ಪ್ರಿಂಟರ್ಸ್’. ಇದರ ಮಾಲೀಕರಾದ ಶ್ರೀ ಕೃಷ್ಣಮೂರ್ತಿ ಸದಭಿರುಚಿಯ ಮುದ್ರಕರು. ಇಂದಿಗೆ ಅಪರೂಪವಾಗಿರುವ ಅನೇಕ ಹಳೆಯ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರು. ಇವರ ಮುದ್ರಣಾಲಯದಲ್ಲಿ ಇಂಥ ಅಪರೂಪದ ಹಳೆಯ ವಾಚು, ರೇಡಿಯೊ, ಗ್ರಾಮಫೋನ್ ಮುಂತಾದವನ್ನು ಕಾಣಬಹುದು.
ನನ್ನ ಸಾಹಿತ್ಯ ಯಾನದಲ್ಲಿ ಮೈಸೂರಿನ ‘ಅಭಿರುಚಿ ಪ್ರಕಾಶನ’ದ ಗಣೇಶ್ ಅವರನ್ನು ನೆನೆಯಲೇಬೇಕು. ಅವರು ‘ಅಭಿರುಚಿ ಗಣೇಶ್’ ಎಂದೇ ಪರಿಚಿತರು. ಅಭಿರುಚಿ ಮತ್ತು ಪ್ರಗತಿಪರ ವಿಚಾರಗಳೊಂದಾದ ಪುಸ್ತಕಗಳನ್ನು ಪ್ರಕಟಿಸುವ ಸಾಹಸಿಗರು. ಇವರು ನನ್ನ ಸಾಹಿತ್ಯ ಸಿನಿಮಾಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟಿತ ಲೇಖನಗಳ ಸಂಪಾದಿತ ಗ್ರಂಥ ‘ಬಂಡಾಯದ ಬರಗೂರು’ ಪ್ರಕಟಿಸಿದರು. (ಸಂಪಾದಕರು: ಡಾ. ಜಿ.ಆರ್. ತಿಪ್ಪೇಸ್ವಾಮಿ) ಆನಂತರ ‘ಕಸ್ತೂರ್ ಬಾ vs ಗಾಂಧಿ’ ಎಂಬ ನನ್ನ ಕಾದಂಬರಿ ಯನ್ನು ಪ್ರಕಟಿಸಿದರು. ಆನಂತರ ನನ್ನ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಸಾಹಸ ಮಾಡಿದರು. ನನ್ನ ಇಲ್ಲೀವರೆಗಿನ ಸಮಗ್ರ ಸಾಹಿತ್ಯದ ಹದಿನಾಲ್ಕು ಸಂಪುಟಗಳನ್ನು ಹೊರತಂದಿದ್ದಾರೆ. ಈ ಸಂಪುಟಗಳ ಒಟ್ಟು ಪುಟಗಳು – 5300.
ಒಂದು ಸಿನಿಮಾ ಹಾಡಿನ ಲಯಕ್ಕೆ ಪದ್ಯವೆಂಬ ರಚನೆ ಮಾಡಿ ಸಾಹಿತ್ಯ ಕ್ರಿಯೆ ಆರಂಭಿಸಿದ ನಾನು ಬೆಳೆಯುತ್ತ ಬಂದು ಅನೇಕ ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನನಾಗಿದ್ದೇನೆ. 2016ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆ ಯಾಗಿದ್ದೇನೆ. ಆಯ್ಕೆ ಮಾಡಿದ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಮನುಬಳಿಗಾರ್ ಮತ್ತು ಕಾರ್ಯಕಾರಿ ಸಮಿತಿಯವರನ್ನು ನೆನೆಯುತ್ತೇನೆ.
ಅಂತೂ ಹೀಗೆ ಅನೇಕ ಪ್ರಕಾಶಕರು, ಪತ್ರಿಕೆಯವರು ನನ್ನ ಸಾಹಿತ್ಯ ಯಾನಕ್ಕೆ ಸಹಕಾರಿಯಾಗಿದ್ದಾರೆ. ಜನಪ್ರಗತಿ, ಪ್ರಜಾವಾಣಿ, ವಿಜಯ ಕರ್ನಾಟಕ, ಈ ವಾರ- ಪತ್ರಿಕೆಯವರು ನನ್ನಿಂದ ಅಂಕಣಗಳನ್ನು ಬರೆಸಿದ್ದಾರೆ. ಸುಧಾ ಮತ್ತು ತರಂಗ ಪತ್ರಿಕೆಯವರು ನನ್ನ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ. ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯವಾಣಿ ಮುಂತಾದ ಪತ್ರಿಕೆಯವರು ಮೊದಲಿಂದ ನನ್ನ ಬರಹಗಳನ್ನು ಪ್ರಕಟಿಸಿದ್ದಾರೆ. ಹೆಚ್ಚೂಕಡಿಮೆ ಮಯೂರ, ತುಷಾರ, ಉದಯವಾಣಿ ಒಳಗೊಂಡಂತೆ ಎಲ್ಲಾ ಕನ್ನಡ ಪತ್ರಿಕೆಯವರೂ ಒಂದಲ್ಲ ಒಂದು ಬರಹವನ್ನು ಪ್ರಕಟಿಸಿ ಜನರಿಗೆ ತಲುಪಿಸಿದ್ದಾರೆ. ಸಂಕ್ರಮಣ, ಶೂದ್ರ, ಸಂವಾದ, ಅನ್ವೇಷಣೆ, ಹೊಸತು – ಮುಂತಾದ ನಿಯತಕಾಲಿಕಗಳೂ ನನ್ನ ಬರಹಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿವೆ. ನನ್ನ ಸಾಹಿತ್ಯ ಪಯಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಯಾಕೆಂದರೆ ನನ್ನ ವೈಚಾರಿಕತೆ ಮತ್ತು ಸೃಜನಶೀಲತೆಗಳು ಜನರೊಂದಿಗೆ ಸಂಬಂಧ ಸ್ಥಾಪಿಸಬೇಕೆಂಬ ಹಂಬಲ ಮೊದಲಿಂದಲೂ ನನಗಿತ್ತು. ಈ ಹಂಬಲದ ಮುಂದಿನ ಹೆಜ್ಜೆಯೇ ಸಿನಿಮಾ.
ಹಳ್ಳಿ ಮನಸ್ಸುಗಳಿಗೆ ಸಿನಿಮಾ ಎಂಬುದೊಂದು ವಿಸ್ಮಯ. ಪರದೆಯ ಮೇಲೆ ಮನುಷ್ಯಾಕೃತಿಗಳು ಬಂದು ಮಾತಾಡುವುದಾದರೂ ಹೇಗೆಂದು ಅಚ್ಚರಿಪಡುತ್ತ ಅದೊಂದು ‘ಪವಾಡ ಸದೃಶ ಪರದೆ’ಯೆಂಬಂತೆ ನೋಡುವ ಮನಸ್ಸು. ಈ ಮನಸ್ಸಿಗೆ ಬಾಲ್ಯದ ವಯಸ್ಸು ಸೇರಿ ಮತ್ತಷ್ಟು ರೋಮಾಂಚನ. ನಾನು ಟೂರಿಂಗ್ ಟಾಕೀಸುಗಳಲ್ಲಿ ಸಿನಿಮಾ ನೋಡಿ, ಮಾರನೇ ದಿನ ಟಾಕೀಸ್ ಬಳಿ ಹೋಗಿ ಯಾರಾದರೂ ಪರದೆ ಹಿಂದೆ ನಿಂತು ಮಾತಾಡುತ್ತಿದ್ದರೆ ಎಂದು ಮುಗ್ಧವಾಗಿ ನೋಡಿದ್ದುಂಟು. ಇಂಥ ಮನಸ್ಥಿತಿಯಿಂದ ಮೇಲೆದ್ದು ಸಿನಿಮಾ ನಿರ್ದೇಶಕನಾದದ್ದು ನನ್ನ ಸೃಜನಶೀಲತೆಯ ಪಯಣವಷ್ಟೇ ಅಲ್ಲ, ಅದೊಂದು ಸಾಹಸದ ಪಯಣ.
ನಮ್ಮೂರು-ಬರಗೂರು-ದೊಡ್ಡ ಊರು. ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರ ಸ್ಥಾನ. ಆದರೆ ಟೂರಿಂಗ್ ಟಾಕೀಸಿಗೆ ನಮ್ಮ ಊರಿನ ಪಟೇಲರು ಅನುಮತಿ ನೀಡಲಿಲ್ಲ. ನಮ್ಮೂರಿನ ಪಟೇಲರ ಮನೆತನದಲ್ಲಿ ಶ್ರೀ ಬಿ.ಎನ್. ರಾಮೇಗೌಡರು ನೇತಾರರಾಗಿ ಬೆಳೆದಿದ್ದರು. ಒಂದು ಸಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಪ್ರಯತ್ನದ ಫಲವಾಗಿ ನಮ್ಮೂರಿಗೆ ಅನೇಕ ಸೌಲಭ್ಯಗಳು ಬಂದವು. ಇವರನ್ನು ಕಂಡರೆ ಸಾಮಾನ್ಯವಾಗಿ ಭಯಮಿಶ್ರಿತ ಗೌರವ ತೋರುತ್ತಿದ್ದವರೇ ಹೆಚ್ಚು. ತುಂಬಾ ಕಟ್ಟುನಿಟ್ಟಿನ ಮನುಷ್ಯರೆಂದೇ ಪ್ರಸಿದ್ಧಿ. ಟೂರಿಂಗ್ ಟಾಕೀಸ್ ಆರಂಭಿಸಲು ಗ್ರಾಮಪಂಚಾಯಿತಿಯ ನಿರಾಕ್ಷೇಪಣ ಪತ್ರ (ಓ.ಔ.ಅ.) ಬೇಕಾಗಿತ್ತು. ಸಿನಿಮಾ ನೋಡಿ ಹುಡುಗರು ಅಡ್ಡ ಹಾದಿ ಹಿಡಿಯುತ್ತಾ ರೆಂಬ ಭಾವನೆಯಿಂದಲೊ ಏನೊ ಓ.ಔ.ಅ. ಕೊಡಲಿಲ್ಲ. ಇಂಥ ಕಟ್ಟುನಿಟ್ಟಿನ ಬಗ್ಗೆ ನಾವು – ಒಂದಷ್ಟು ಹೊಸ ಹುಡುಗರು – ಬೇಸರ ಮಾಡಿಕೊಂಡದ್ದು ಉಂಟು. ಆದರೆ ಬೇಸರಕ್ಕೆ ಬಾಯಿರಲಿಲ್ಲ!
ಓ.ಔ.ಅ. ಸಿಗದ ಕಾರಣಕ್ಕೆ ನಮ್ಮೂರಿಗೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ಗಡಿಗ್ರಾಮವಾದ ಹಾರೋಗೆರೆಯಲ್ಲಿ ಟೂರಿಂಗ್ ಟಾಕೀಸ್ ಆರಂಭವಾಯಿತು. ನಾವು ಸ್ನೇಹಿತರು – ರಾತ್ರಿ ಹೊತ್ತು ನಡೆದುಕೊಂಡು ಹೋಗಿ ಸಿನಿಮಾ ನೋಡಿ ಬರುತ್ತಿದ್ದೆವು. ಅಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳ ಸಿನಿಮಾ ತೋರಿಸುತ್ತಿದ್ದರು. ಇಲ್ಲಿಯೇ ನಾನು ರಾಜಕುಮಾರ್ ಮತ್ತು ಎ. ನಾಗೇಶ್ವರರಾವ್ (ತೆಲುಗು) ಚಿತ್ರಗಳನ್ನು ನೋಡಿ ಇಷ್ಟಪಡಲು ಆರಂಭಿಸಿದ್ದು; ನಟನಾಗಬೇಕೆಂಬ ಆಸೆ ಚಿಗುರಿದ್ದು. ನಾನು ಮತ್ತು ನನ್ನ ಎರಡನೇ ಅಣ್ಣ ಜಯರಾಮಯ್ಯ ಮರದ ಟಿಸಿಲುಗಳಿಂದ ಕತ್ತಿ ಮಾಡಿಕೊಂಡು, ಸಿನಿಮಾದಲ್ಲಿರು ವಂತೆ ‘ಕತ್ತಿವರಸೆ’ ಮಾಡುತ್ತಿದ್ದೆವು. ಸಿನಿಮಾದ ಸಂಭಾಷಣೆಗಳನ್ನು ಹೇಳಿಕೊಂಡು ಖುಷಿಪಡುತ್ತಿದ್ದೆವು. ಮುಂದೆ ನನ್ನ ಈ ಅಣ್ಣ ನಮ್ಮೂರಿನ ಅನೇಕ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದರು.
ನನ್ನ ದೊಡ್ಡ ಅಣ್ಣ, ಚಿಕ್ಕರಂಗಪ್ಪನವರಿಗೂ ನಾಟಕದ ಆಸಕ್ತಿ ಇತ್ತು. ಮೂವರಿಗೂ ಸಮಾನವಾದ ಒಂದು ಕ್ರೀಡಾಸಕ್ತಿಯೂ ಇತ್ತು. ಮೂವರೂ ವಾಲಿಬಾಲ್ ಆಟಗಾರ ರಾಗಿದ್ದೆವು. ನಾನು ವಾಲಿಬಾಲ್ ಜೊತೆಗೆ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದೆ. ಸ್ವಲ್ಪ ಕಾಲ ಕ್ರಿಕೆಟ್ ಕೂಡ ಆಡಿದ್ದೆ.
ನನಗೆ ಕ್ರಿಕೆಟ್ ಆಟಗಾರರಲ್ಲಿ ಕಪಿಲ್ದೇವ್ ತುಂಬಾ ಇಷ್ಟ. ಈ ಇಷ್ಟಕ್ಕೆ ಅವರ ಆಟದ ಪರಿಣತಿಯ ಜೊತೆಗೆ ಸಾಮಾಜಿಕ ಆಯಾಮವೂ ಇತ್ತು. ಸೌದೆ ಅಂಗಡಿ ಇಟ್ಟಿದ್ದ ತಂದೆಯ ಮಗನಾಗಿ, ತರಬೇತಿಗೆ ಹೋಗಲೂ ಹಣವಿಲ್ಲದ ಸಂಕಟ ಅನುಭವಿಸಿ, ಜಗತ್ತಿನ ಒಬ್ಬ ಪ್ರಸಿದ್ಧ ಆಲ್ರೌಂಡರ್ ಆಗಿ ಬೆಳೆದ ಕಪಿಲ್ ಸಾಧನೆಯು ಒಂದು ಸಾಮಾಜಿಕ ಸಾಧನೆಯೂ ಆಗಿತ್ತು. ಕಪಿಲ್ಗೆ ಇಂಗ್ಲಿಷ್ ಸರಿಯಾಗಿ ಬಾರದ ಕಾರಣಕ್ಕೆ ಅವಮಾನಕ್ಕೆ ಒಳಗಾದದ್ದೂ ಉಂಟು. ಸಾಮಾಜಿಕ, ಆರ್ಥಿಕ, ಭಾಷಿಕ ನೆಲೆಯಲ್ಲಿ ‘ನಿರ್ಲಕ್ಷಿತ’ ವಲಯದಿಂದ ಬಂದು ದೊಡ್ಡ ಸಾಧನೆ ಮಾಡಿದ್ದು ಸಾಮಾನ್ಯವಲ್ಲ. ಇದೇ ಕಪಿಲ್ ನಾಯಕತ್ವದಲ್ಲಿ 1983ರಲ್ಲಿ ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದದ್ದು ಭಾರತದ ಕ್ರಿಕೆಟ್ ಕ್ಷೇತ್ರದ ಅದ್ಭುತ ಚಾರಿತ್ರಿಕ ಘಟನೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ಅಸಾಮಾನ್ಯ ಸಾಧನೆ ಮಾಡಿದವರ ಬಗ್ಗೆ ನನಗೆ ಯಾವಾಗಲೂ ವಿಶೇಷ ಮೆಚ್ಚುಗೆ. ಈ ಹಿನ್ನೆಲೆಯಲ್ಲೇ ಡಾ. ರಾಜಕುಮಾರ್ ಅವರ ಸಾಧನೆಯ ಬಗ್ಗೆ ನನಗೆ ಅಪಾರ ಗೌರವ. ಹೀಗಾಗಿ ನಾನು ಕಪಿಲ್ದೇವ್ ಅವರ ಬಗ್ಗೆ ಎರಡು ಲೇಖನಗಳನ್ನೂ ಡಾ. ರಾಜಕುಮಾರ್ ಅವರ ಬಗ್ಗೆ ‘ಜನಪದ ನಾಯಕ ಡಾ. ರಾಜಕುಮಾರ್’ ಎಂಬ ಪುಸ್ತಕವನ್ನೂ ಬರೆದಿದ್ದೇನೆ.
ನಾನು ಎಂ.ಎ. ಓದಲು ಬೆಂಗಳೂರಿಗೆ ಬಂದಾಗ ನಟನಾಗಬೇಕೆಂದಿದ್ದ ಆಸೆಯ ಬದಲು ನಿರ್ದೇಶಕನಾಗಬೇಕೆಂಬ ಹಂಬಲ ಹುಟ್ಟಿತು. ಆಗ ನಿರ್ದೇಶಕರಾದ ಶ್ರೀ ಎನ್. ಲಕ್ಷ್ಮೀನಾರಾಯಣ್, ಶ್ರೀ ಸಿದ್ಧಲಿಂಗಯ್ಯ, ಶ್ರೀ ಕೆ.ಎಂ. ಶಂಕರಪ್ಪನವರ ಪರಿಚಯವಾಗಿ ನಿರ್ದೇಶನ ಕುರಿತ ಕೆಲವು ವಿಷಯಗಳನ್ನು ತಿಳಿದುಕೊಂಡೆ. ಕೆ.ಎಂ. ಶಂಕರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನವರು. ಪೂನಾ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ನಿರ್ದೇಶನ ಡಿಪ್ಲೊಮಾ ಮಾಡಿದ ಮೊದಲ ಕನ್ನಡಿಗರು. ಅವರಿಂದ ಅನೇಕ ಅಕಡೆಮಿಕ್ ವಿಷಯಗಳನ್ನು ತಿಳಿದುಕೊಂಡೆ. ಸಿದ್ಧಲಿಂಗಯ್ಯನವರು ನನ್ನದೇ ಸಿರಾ ತಾಲ್ಲೂಕಿನವರು. ನಮ್ಮೂರಲ್ಲೂ ಅವರ ನೆಂಟರಿದ್ದರು. ನಾನು ಎಂ.ಎ. ಓದುವ ವೇಳೆಗೆ ಪ್ರಸಿದ್ಧ ನಿರ್ದೇಶಕರಾಗಿದ್ದರು. ಅವರೊಂದಿಗಿನ ಒಡನಾಟದಿಂದ ಜನಪ್ರಿಯ ಸಿನಿಮಾ ಶೈಲಿಯ ಕೆಲವು ವಿಷಯಗಳು ತಿಳಿದವು. ಎನ್. ಲಕ್ಷ್ಮೀನಾರಾಯಣ್ ಅವರು ‘ನಾಂದಿ’, ‘ಉಯ್ಯಾಲೆ’ ಚಿತ್ರಗಳ ನಿರ್ದೇಶನದಿಂದ ಹೆಸರಾಗಿದ್ದರು. ನಾನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಂಡೆ. ಅವರು ನಿರ್ದೇಶನದ ಬಗ್ಗೆ ತಿಳಿದುಕೊಳ್ಳಲು ಕೆಲವು ಪುಸ್ತಕಗಳ ಅಧ್ಯಯನಕ್ಕೆ ಸಲಹೆ ನೀಡಿದರು. ಅಲ್ಲಿಂದ ಪ್ರಾರಂಭ ವಾದ ನನ್ನ ಮತ್ತು ಎನ್. ಲಕ್ಷ್ಮೀನಾರಾಯಣ್ ಪರಿಚಯ, ಮುಂದೆ ಆತ್ಮೀಯ ಸಂಬಂಧವಾಗಿ ರೂಪುಗೊಂಡಿತು. ಅವರು ಬೆಂಗಳೂರು ದಕ್ಷಿಣ ಭಾಗಕ್ಕೆ ಬಂದಾಗಲೆಲ್ಲ ಸ್ವಲ್ಪ ಬಿಡುವಿದ್ದರೂ ನೆಟ್ಟಕಲ್ಲಪ್ಪ ವೃತ್ತದ ಬಳಿಯಲ್ಲಿದ್ದ ನನ್ನ (ಬಾಡಿಗೆ) ಮನೆಗೆ ಬರುತ್ತಿದ್ದರು. ನಾನು ರಾಜಮಹಲ್ ವಿಲಾಸ ಗುಟ್ಟಹಳ್ಳಿಯ ಕಡೆ ಹೋದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆ. ಮುಂದಿನ ಕೆಲ ವರ್ಷಗಳಲ್ಲಿ ನಾನು ಮೂರು ಸಿನಿಮಾ ನಿರ್ದೇಶನ ಮಾಡಿದ್ದಾದ ಮೇಲೆ ಅವರು ಡಾ. ರಾಜಕುಮಾರ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು. ಕತೆಯ ಎಳೆಯೊಂದನ್ನು ನನಗೆ ಹೇಳಿ ನಾನು ಚಿತ್ರಕತೆ, ಸಂಭಾಷಣೆ ಬರೆಯಬೇಕೆಂದು ಬಯಸಿದರು. ರಾಜಕುಮಾರ್ ಅವರು ಅಭಿನಯಿಸುವ ಚಿತ್ರ, ಎನ್. ಲಕ್ಷ್ಮೀನಾರಾಯಣ್ ನಿರ್ದೇಶನ! ನನ್ನ ಸಂತೋಷ ಅರಳಿಕೊಂಡಿತು.
ಲಕ್ಷ್ಮೀನಾರಾಯಣ್ ಅವರು ಹೇಳಿದ ಒಂದೆಳೆಯ ಕತೆಗೆ ಗಾಂಧೀಜಿಯವರ ‘Man and Machine should go together’ ಎಂಬ ಹೇಳಿಕೆ ಆಧಾರವಾಗಿತ್ತು. ಈ ಹೇಳಿಕೆಯಿದ್ದ ಗಾಂಧೀಜಿಯವರ ಲೇಖನವನ್ನು ಅವರು ನನಗೆ ಓದಲು ಕೊಟ್ಟಿದ್ದರು. ನಾನು ಚಿತ್ರಕತೆ, ಸಂಭಾಷಣೆ ಬರೆದು ಮುಗಿಸಿದೆ. ಆನಂದರಾವ್ ವೃತ್ತದ ಬಳಿಯಲ್ಲಿದ್ದ ಸಂಗೀತ್ ಹೋಟೆಲ್ನ ಒಂದು ರೂಮಿನಲ್ಲಿ ಲಕ್ಷ್ಮೀನಾರಾಯಣ್ ಮತ್ತು ಅವರ ಆತ್ಮೀಯರಿಗೆ ಓದಿ ಹೇಳಿದ್ದೂ ಆಯಿತು. ಆದರೆ ಈ ಸಿನಿಮಾ ಕಾರ್ಯಗತವಾಗುವ ಮುಂಚೆಯೇ ಶ್ರೀ ಎನ್. ಲಕ್ಷ್ಮೀನಾರಾಯಣ್ ಅವರು ದಿವಂಗತರಾದರು. ನಾನಾಗ ನಮ್ಮ ಊರಿಗೆ ಹೋಗಿದ್ದೆ. ವಿಷಯ ತಿಳಿದು ಕೂಡಲೇ ಬಸ್ ಹತ್ತಿ ಬೆಂಗಳೂರಿಗೆ ಬಂದೆ; ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ಒಬ್ಬ ಹಿರಿಯ ಹಿತೈಷಿಯನ್ನು ಕಳೆದುಕೊಂಡ ನೋವು ನೆನಪಿನ ಭಾಗವಾಗಿಬಿಟ್ಟಿದೆ.
ನಾನು ಸಿನಿಮಾ ನಿರ್ದೇಶಕನಾಗುವುದಕ್ಕೆ ಮುಂಚೆಯೇ ಸಿದ್ಧಲಿಂಗಯ್ಯನವರು ನನ್ನ ‘ಸೂತ್ರ’ ಕಾದಂಬರಿಯನ್ನು ತೆರೆಯ ಮೇಲೆ ತರಲು ಇಚ್ಚಿಸಿದ್ದರು. ಈ ಚಿತ್ರದಲ್ಲಿ ತಮ್ಮ ಪುತ್ರ ಮುರಳಿಯವರನ್ನು ಮೊದಲಿಗೆ ಪರಿಚಯಿಸುವ ಅಪೇಕ್ಷೆ ಅವರದಾಗಿತ್ತು. ಅಂದರೆ ಮುರಳಿ ಈ ಚಿತ್ರದ ನಾಯಕ ನಟ. ಸಿದ್ಧಲಿಂಗಯ್ಯನವರು ಕಾದಂಬರಿಯ ಬಗ್ಗೆ ನನ್ನೊಂದಿಗೆ ಚರ್ಚಿಸಿದರು; ತಮ್ಮ ದೃಷ್ಟಿಕೋನಕ್ಕೆ ಹೊಂದುವಂತೆ ಹೆಚ್ಚು ಬದಲಾವಣೆಗಳ ಅಗತ್ಯ ಅವರಿಗೆ ಕಂಡಿತೇನೊ, ಒಂದು ದಿನ ‘‘ಇದು ತುಂಬಾ ಬೋಲ್ಡ್ ಸಬ್ಜಕ್ಟ್ ರಾಮಚಂದ್ರಪ್ಪನೋರೆ. ಕತೆ ತುಂಬಾ ಸ್ಟ್ರಾಂಗ್ ಆಗಿದೆ. ಅನುಮಾನವೇ ಇಲ್ಲ. ಆದ್ರೆ ಇಂಥ ಸಬ್ಜೆಕ್ಟನ್ನು ಡೈರೆಕ್ಟ್ ಮಾಡೋಕೆ ತಮಿಳಿನ ಕೆ. ಬಾಲಚಂದರ್ ಅಂಥವರೇ ಸರಿ. ಅವರಿಗೆ ಈ ಕಾದಂಬರಿ ಸಾರವನ್ನು ಇಂಗ್ಲೀಷಲ್ಲಿ ಬರೆಸಿ ಕಳಿಸ್ತೇನೆ. ನೋಡೋಣ’’ ಎಂದರು. ನಾನು ‘‘ನನಗೇನೂ ಬೇಜಾರಿಲ್ಲ ಸಾರ್’’ ಎಂದೆ. ಆನಂತರ ತಮ್ಮ ಮಗನಿಗಾಗಿ ‘ಪ್ರೇಮಪರ್ವ’ ಅಂತ ಸಿನಿಮಾ ಮಾಡಿದರು. ಅವರಿರುವವರೆಗೂ ನನ್ನ – ಅವರ ಸ್ನೇಹ ಸಂಬಂಧ ಗಾಢವಾಗಿತ್ತು. ಆಗಾಗ್ಗೆ ನಾನೇ ಅವರ ಮನೆಗೆ ಹೋಗಿ ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗಲೂ ಒಂದೆರಡು ಸಾರಿ ಹೋಗಿ ಬಂದಿದ್ದೆ. ಒಂದು ದಿನ ಅವರು ನಮ್ಮನ್ನು ಅಗಲಿ ಹೋಗಿಯೇಬಿಟ್ಟರು. ನಾನು ಮತ್ತು ದೊಡ್ಡ ಹುಲ್ಲೂರು ರುಕ್ಕೋಜಿ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ದರ್ಶನ ಪಡೆದೆವು.
ಶ್ರೀ ಕೆ.ಎಂ. ಶಂಕರಪ್ಪನವರು ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತಂದರು. ಈ ಸಿನಿಮಾದ ಸುತ್ತ ಸಾಕಷ್ಟು ಗಂಭೀರ ಚರ್ಚೆಗಳು ನಡೆದವು. ಆನಂತರದ ದಿನಗಳಲ್ಲಿ ಇವರು ಕೆಲವು ಸಾಕ್ಷ್ಯಚಿತ್ರ ನಿರ್ದೇಶನ ಮತ್ತು ಬುದ್ಧಚಿಂತನದಲ್ಲಿ ತೊಡಗಿಕೊಂಡರು.
ಯಾವುದೀ ಕಾಗೆಯ ಕಾರುಣ್ಯ? ನೋಡಿ; ಕೋಗಿಲೆಯು ಮೊಟ್ಟೆ ಇಡುತ್ತದೆಯೇ ಹೊರತು, ತಾನೇ ಕಾವಿಗೆ ಕೂತು ಮರಿ ಮಾಡುವುದಿಲ್ಲ. ಕೋಗಿಲೆ ಇಟ್ಟ ಮೊಟ್ಟೆಯ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆ. ಕಾಗೆಯು ಮೊಟ್ಟೆ ಮೇಲೆ ಕಾವಿಗೆ ಕೂರದಿದ್ದರೆ ಮರಿ ಹೊರಬರುವುದಿಲ್ಲ. ಆದ್ದರಿಂದ ಕಾಗೆಯೇ ಕೋಗಿಲೆಯ ಸಂತತಿಯನ್ನು ಬೆಳೆಸುವ ಚಾಲಕ ಶಕ್ತಿ. ಅಲ್ಲದೆ ಹಂಚಿಕೊಂಡು ತಿನ್ನುವ ಕಾಗೆಯದು ಬಳಗ ಬಂಧುತ್ವ. ಇದು ಕಾಗೆಯ ಕಾರುಣ್ಯ.
ಈ ಮೂವರನ್ನು ನೆನೆಯುತ್ತಲೇ ನನ್ನ ಮೊದಲ ನಿರ್ದೇಶನದ ಸಿನಿಮಾ ವಿಷಯಕ್ಕೆ ಬರುತ್ತೇನೆ. ನನ್ನ ನಿರ್ದೇಶನದ ಮೊದಲ ಸಿನಿಮಾ, ನನ್ನದೇ ಕಿರು ಕಾದಂಬರಿ ಆಧಾರಿತ ‘ಒಂದು ಊರಿನ ಕತೆ’. ಈ ಸಿನಿಮಾ ನಿರ್ಮಾಣದ್ದೇ ದೊಡ್ಡ ಕತೆ.
ನನ್ನ ಸ್ನೇಹಿತರಾದ ಶ್ರೀ ಲಕ್ಷ್ಮೀನಾರಾಯಣ ಸೆಟ್ಟರಿಗೆ ನನ್ನನ್ನು ಕಂಡರೆ ಅತೀವ ಅಭಿಮಾನ. ನಾನು ಕೊಂಡೇತಿಮ್ಮನಹಳ್ಳಿಯಲ್ಲಿ ಪ್ರೌಢಶಾಲೆ ಅಧ್ಯಾಪಕನಾಗಿದ್ದಾಗ ಇವರು ಆ ಹಳ್ಳಿಗೆ ಹತ್ತಿರದ ಮಂಗಳವಾಡದಲ್ಲಿ ಅಧ್ಯಾಪಕರಾಗಿದ್ದರು. ಅಲ್ಲಿ ನನಗೂ ಅವರಿಗೂ ಪರಿಚಯ, ಅವರು ಅದೇ ಪಾವಗಡ ತಾಲ್ಲೂಕಿನವರು. ಇದೇ ಮಂಗಳವಾಡದಲ್ಲಿ ವೈದ್ಯರಾಗಿದ್ದ ಪಶುಪತಿ ಅವರು ಕೂಡ ಇವರಿಂದ ಪರಿಚಿತರಾದರು. ಇವರು ಕಲಾಸಕ್ತರು. ಮುಂದೊಮ್ಮೆ ಬೆಂಗಳೂರಿನ ಶ್ರೀರಾಮಪುರದ ಪ್ರೌಢಶಾಲೆಯೊಂದಕ್ಕೆ ಲಕ್ಷ್ಮೀನಾರಾಯಣ ಸೆಟ್ಟರು ಅಧ್ಯಾಪಕರಾಗಿ ಬಂದರು. ನಾನೂ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕನಾಗಿದ್ದೆ. ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ನಾನು ನಿರ್ದೇಶಕನಾಗಬೇಕೆಂದು ಬಯಸಿದ್ದ ವಿಷಯ ಅವರಿಗೆ ಗೊತ್ತಿತ್ತು. ಒಂದು ದಿನ ಅವರ ಸ್ನೇಹಿತರೊಬ್ಬರನ್ನು ನನ್ನ ಬಳಿ ಕರೆದುಕೊಂಡು ಬಂದು ಪರಿಚಯಿಸಿ, ‘ಇವರು, ನಿಮ್ಮ ಸಿನಿಮಾಕ್ಕೆ ನಿರ್ಮಾಪಕರಾಗಲು ಒಪ್ಪಿದ್ದಾರೆ’ ಎಂದು ಹೇಳಿದಾಗ ನನಗೆ ರೆಕ್ಕೆ ಬಿಚ್ಚಿದ ಹಕ್ಕಿಯ ಆನಂದ. ಅವರು ‘‘ಸಾರ್, ಚಾಮರಾಜ ಪೇಟೆಯ ರಾಯನ್ ಸರ್ಕಲ್ ಬಳಿ ಇರುವ ಶಂಕರ್ ಲಂಚ್ ಹೋಂನ ಮಾಲೀಕರು ನನ್ನ ಪರಿಚಯಸ್ಥರು. ಆ ಹೋಟೆಲ್ನಲ್ಲಿ ರೂಮುಗಳಿವೆ. ನೀವು ಹೇಳಿದಾಗ ರೂಮ್ ನಿಗದಿ ಮಾಡುವೆ. ಸ್ಕಿçಪ್ಟ್ ಇತ್ಯಾದಿ ಕೆಲಸ ಮಾಡಿ’’ ಎಂದರು. ಸಿನಿಮಾ ಕೆಲಸದಲ್ಲಿ ಹೀಗೆ ರೂಮ್ ಮಾಡುವುದು ಒಂದು ಪದ್ಧತಿ. ಹೀಗೆ ನಿರ್ಮಾಪಕರು ಮಾಡಿದ ರೂಮ್ನಲ್ಲೇ ಕತೆಯ ಚರ್ಚೆ, ಚಿತ್ರಕತೆ, ಸಂಭಾಷಣೆ ರಚನೆ, ಆನಂತರ ಚಿತ್ರೀಕರಣ ಆರಂಭವಾಗುವವರೆಗಿನ ಎಲ್ಲ ಕೆಲಸಗಳೂ ನಡೆಯುತ್ತವೆ. ನಾನು ‘‘ರೂಮ್ ಮಾಡಿ ಖರ್ಚು ಮಾಡೋದು ಬೇಡ. ನಾನು ನಮ್ಮ ಮನೆಯಲ್ಲೇ ಎಲ್ಲಾ ಕೆಲಸ ಮಾಡುವೆ’’ ಎಂದು ಹೇಳಿದೆ. ಅವರಿಗೆ ಆಶ್ಚರ್ಯ! ‘‘ಆಗಲಿ ನಿಮ್ಮಿಷ್ಟ’’ ಎಂದರು.
ಆ ವೇಳೆಗೆ ನನಗೆ ಪರಿಚಿತರಾಗಿದ್ದ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರೊಂದಿಗೆ ಚರ್ಚಿಸಿದೆ. ನನ್ನ ನಿರ್ದೇಶನದ ಮೊದಲ ಸಿನಿಮಾದ ಚಿತ್ರೀಕರಣವು ನಮ್ಮೂರಲ್ಲೇ ಆಗಬೇಕೆಂಬ ಹಂಬಲ ನನ್ನದು. ನನ್ನ ಈ ಹಂಬಲಕ್ಕೆ ಒತ್ತಾಸೆಯಾಗಿ ನಿಂತವರು ನನ್ನ ಹಿರಿಯಣ್ಣ ಬಿ.ಆರ್. ಚಿಕ್ಕರಂಗಪ್ಪನವರು. ನಾನು ನನ್ನದೇ ಕಾದಂಬರಿ ‘ಒಂದು ಊರಿನ ಕತೆ’ಯನ್ನು ಸಿನಿಮಾ ಮಾಡಲು ನಿರ್ಧರಿಸಿ ಚಿತ್ರಕತೆ ಸಿದ್ಧ ಮಾಡಿದೆ. ಸುಂದರನಾಥ ಸುವರ್ಣ ಜೊತೆ ನಮ್ಮೂರಿಗೆ ಹೋಗಿ ಚಿತ್ರೀಕರಣದ ಸ್ಥಳಗಳನ್ನು ನೋಡಿ ಸಾಕಷ್ಟು ಫೋಟೋ ತೆಗೆಸಿದೆ. ಆದರೆ ಇಷ್ಟೆಲ್ಲ ನಡೆಯುತ್ತಿರುವಾಗ ನಿರ್ಮಾಪಕರು ಹಿಂದೆ ಸರಿದರು! ಕಾರಣ ಹೇಳದೆ ದೂರ ಸರಿದರು! ಆದರೆ ನಾನು ದೂರ ಸರಿಯುವಂತೆ ಇರಲಿಲ್ಲ. ಯಾಕೆಂದರೆ ನಮ್ಮೂರಲ್ಲಿ ಸುದ್ದಿ ಹಬ್ಬಿ ಇಡೀ ತಾಲ್ಲೂಕಿಗೇ ವ್ಯಾಪಿಸಿತ್ತು. ಪತ್ರಿಕೆಯಲ್ಲಿ ಸುದ್ದಿಯೂ ಬಂದಿತ್ತು. ನಾನು ಚಿತ್ರೀಕರಣ ಮಾಡದಿದ್ದರೆ ಆಡಿಕೊಳ್ಳುವವರ ಬಾಯಿಗೆ ಸಿಕ್ಕ ಅಡಿಕೆಯಾಗುತ್ತಿದ್ದೆ; ಅವಮಾನದ ಆತಂಕ ಕಾಡಿಸತೊಡಗಿತು.
ಏನಾದರೂ ಮಾಡಲೇಬೇಕಿತ್ತು. ನಾನು ಸಾಲ ಮಾಡಿ ಸ್ವಂತ ನಿರ್ಮಾಣದಲ್ಲಾದರೂ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ. ಸುಂದರನಾಥ ಸುವರ್ಣ ಅವರ ಗೆಳೆಯ ಗುಣಪಾಲ್ ಎಂಬುವರು ಮುಂಬೈನಲ್ಲಿದ್ದರು. ಇವರ ಹುಟ್ಟೂರು ಉಡುಪಿ. ಇವರ ಅಣ್ಣ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಪ್ರಭಾವ ಬೀರುವಷ್ಟು ಪರಿಚಿತರು. ಸುಂದರನಾಥ ಸುವರ್ಣ, ಗುಣಪಾಲ್ ಜೊತೆ ಮಾತಾಡಿದರು. ಗುಣಪಾಲ್ ಉಡುಪಿಗೆ ಬಂದರು. ನಾನೂ ಉಡುಪಿಗೆ ಹೋದೆ. ಅವರ ಅಣ್ಣ ನನ್ನನ್ನು ಸಿಂಡಿಕೇಟ್ ಬ್ಯಾಂಕಿಗೆ ಕರೆದೊಯ್ದು ಸಾಲ ಕೊಡಲು ಒಪ್ಪಿಸಿದರು. ಆದರೆ ಬೆಂಗಳೂರಿನ ಬ್ರಾಂಚ್ ನಿಂದಲೇ ಅರ್ಜಿ ಹಾಕಬೇಕಿತ್ತು. ನನ್ನ ಈ ಮೊದಲ ಚಿತ್ರಕ್ಕೆ ಮೇನೇಜರ್ ಆಗಿದ್ದ (ಮುಂದೊಮ್ಮೆ ನಿರ್ದೇಶಕರಾದ) ರಾಮದಾಸ ನಾಯ್ಡು ಜೊತೆ ಬೆಂಗಳೂರಿನ ಹಲಸೂರು ಸಿಂಡಿಕೇಟ್ ಬ್ಯಾಂಕ್ ಬ್ರಾಂಚ್ಗೆ ಹೋದೆ. ಪ್ರಧಾನ ಕಚೇರಿಯಿಂದ ಈ ಬ್ರಾಂಚ್ ಮೇನೇಜರ್ ಶ್ರೀ ಮಯ್ಯ ಅವರಿಗೆ ಅದಾಗಲೇ ಸುದ್ದಿ ಬಂದಿತ್ತು. ಅರ್ಜಿ ಹಾಕಲು ಅಗತ್ಯವಾದ ವಿಧಿ ವಿಧಾನಗಳನ್ನು ಅವರು ವಿವರಿಸಿದರು. ನಾನು ವಿಶ್ವವಿದ್ಯಾಲಯದ ಉದ್ಯೋಗಿ. ಸಿನಿಮಾ ನಿರ್ಮಾಣ ಮಾಡುವಂತಿಲ್ಲ. ನಿಯಮದಲ್ಲಿ ನಿರ್ಮಾಪಕನಾಗಲು ಅವಕಾಶವಿಲ್ಲ. ಆದರೆ ಸೃಜನಶೀಲ ಕೆಲಸವಾದ್ದರಿಂದ ನಿರ್ದೇಶಕನಾಗಬಹುದು. ನಾನು ನನ್ನ ಪತ್ನಿಯನ್ನು ನಿರ್ಮಾಪಕಿಯಾಗಿಸಿ ‘ಮೈತ್ರಿ ಆರ್ಟ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದೆ. ಆಗ ನನ್ನ ಮೊದಲನೇ ಮಗ ಹುಟ್ಟಿ ಒಂದು ವರ್ಷವಷ್ಟೇ ತುಂಬಿತ್ತು. ಆತನ ಹೆಸರು ಮೈತ್ರಿ. ಮಗನ ಹೆಸರನ್ನೇ ನಿರ್ಮಾಣ ಸಂಸ್ಥೆಗೆ ಇಟ್ಟಿದ್ದೆವು. ಸಾಲದ ಗ್ಯಾರಂಟಿಗಾಗಿ ನನ್ನ ಸಂಬಳದ ಖಾತರಿ ಕೊಡಬೇಕಾಯಿತು. ಜೊತೆಗೆ ಸರ್ಕಾರವು ಸಿನಿಮಾಕ್ಕೆ ನೀಡುವ ಸಹಾಯಧನ ಖಾತರಿಯನ್ನು ನೀಡಲಾಯಿತು. ಅಂತೂ ಸಾಲ ಮಂಜೂರಾಯಿತು. 1978ರಲ್ಲಿ ‘ಒಂದು ಊರಿನ ಕತೆ’ ಸಿನಿಮಾ ನಿರ್ಮಾಣವಾಯಿತು.
ಈ ಸಿನಿಮಾದಲ್ಲಿ ‘ಚೋಮನದುಡಿ’ಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶ್ರೀ ವಾಸುದೇವ ರಾವ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಒಂದು ವಿಶೇಷ. ಸುರೇಶ್ ಅರಸು ಮತ್ತು ಪರಮೇಶ್ ಕಾರ್ತಿಕ್ ನನಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಗೆಳೆಯ, ಪತ್ರಕರ್ತ ಜೆ.ಸು.ನಾ. ಅವರು ಬೆಂಬಲವಾಗಿದ್ದಲ್ಲದೆ ಒಂದು ಪಾತ್ರದಲ್ಲಿ ಅಭಿನಯಿಸಿದರು. ಸಾಲ ಸಿಗಲು ಕಾರಣವಾದ ಗುಣಪಾಲ್ ಒಂದು ಪಾತ್ರದಲ್ಲಿದ್ದರು. ಸುಂದರನಾಥ ಸುವರ್ಣರ ಕೆಲವು ಸ್ನೇಹಿತರೂ ಪಾತ್ರಧಾರಿಗಳಾದರು. ಮುಂದೆ ಖ್ಯಾತ ನಾಮರಾದ ಗೆಳೆಯ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ಅಭಿನಯದ ಮೊದಲ ಚಿತ್ರ ನನ್ನ ‘ಒಂದು ಊರಿನ ಕತೆ’. ನನ್ನ ಸಿನಿಮಾಕ್ಕೆ ಪ್ರಸಿದ್ಧ ರಂಗನಿರ್ದೇಶಕರಾದ ಶ್ರೀ ಬಿ.ವಿ. ಕಾರಂತರು ಸಂಗೀತ ನಿರ್ದೇಶನ ಮಾಡಿದರು. ಇವರನ್ನು ಒಪ್ಪಿಸಿದ್ದು ಆಗ ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯ ಮುಖ್ಯಸ್ಥರಾಗಿದ್ದ ನನ್ನ ಹಿತೈಷಿ ಶ್ರೀ ಬಿ.ವಿ. ವೈಕುಂಠ ರಾಜು ಅವರು. ಬಿ.ವಿ. ಕಾರಂತರು ಆಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿದ್ದರು. ಅಲ್ಲಿಂದ ಮದ್ರಾಸಿಗೆ ಬಂದು ಸಂಗೀತ ಸಂಯೋಜಿಸಿ ಕೆಲಸ ಮಾಡಿಕೊಟ್ಟರು. ಗೌರವಧನ ಕೊಡಲು ಹೋದಾಗ ‘ಇಂಥ ಸಿನಿಮಾಗಳನ್ನು ಮಾಡೋರೆ ಕಡಿಮೆ. ನನಗೆ ಸಂಭಾವನೆ ಬೇಡ. ಪ್ರಯಾಣ ವೆಚ್ಚ ಮಾತ್ರ ಕೊಡಿ ಸಾಕು’ ಎಂದರು. ಒತ್ತಾಯಿಸಿದರೂ ಗೌರವ ಸಂಭಾವನೆಯನ್ನು ಸ್ವೀಕರಿಸಲಿಲ್ಲ.
ಸಿನಿಮಾ 1978 ಆಗಸ್ಟ್ 18 ರಂದು ಬಿಡುಗಡೆಯಾಯಿತು. ಆರ್ಥಿಕ ಗಳಿಕೆಯಲ್ಲಿ ಮುಗ್ಗರಿಸಿತು. ಎರಡು ಪ್ರಶಸ್ತಿಗಳು ಬಂದವು. ಆಗ ‘ಸಮುದಾಯ’ ರಂಗ ತಂಡದ ರೂವಾರಿಯಾಗಿದ್ದ ಶ್ರೀ ಪ್ರಸನ್ನ ನನ್ನ ‘ಒಂದು ಊರಿನ ಕತೆ’ ಸಿನಿಮಾ ಬಗ್ಗೆ ಅರ್ಥ ಪೂರ್ಣ ವಿಚಾರಸಂಕಿರಣವನ್ನು ಏರ್ಪಡಿಸಿದರು. ಡಾ. ಯು.ಆರ್. ಅನಂತಮೂರ್ತಿ, ಕೆ.ಎನ್. ಹರಿಕುಮಾರ್, ಬಿ.ಕೆ. ಚಂದ್ರಶೇಖರ್ ಮುಂತಾದವರೆಲ್ಲ ನನ್ನ ಸಿನಿಮಾ ಬಗ್ಗೆ ಮಾತಾಡಿದರು. ಈ ವಿಚಾರಸಂಕಿರಣದ ವಿವರಗಳು ‘ಸ್ಕ್ರೀನ್’ ಎಂಬ ಆಂಗ್ಲ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಒಂದು ವಿಶೇಷ. ಇದೇ ಸಂದರ್ಭದಲ್ಲಿ ‘ಕನ್ನಡ ಪ್ರಭ’ದ ಸಿನಿಮಾ ಸುದ್ದಿ ಮುಖ್ಯಸ್ಥರಾಗಿದ್ದ ಶ್ರೀ ನಾರಾಯಣಸ್ವಾಮಿಯವರು (ಪ್ರಸಿದ್ಧ ನಿರೂಪಕಿ ಶ್ರೀಮತಿ ಅಪರ್ಣ ಅವರ ತಂದೆ) ತಮ್ಮ ನೇತೃತ್ವದ ಚಲನಚಿತ್ರ ಪತ್ರಕರ್ತರ ಪರಿಷತ್ತಿನ ವತಿಯಿಂದ ನನ್ನೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಇದಕ್ಕೂ ಮುಂಚೆ ಶ್ರೀಮತಿ ವಿಜಯಾ ಅವರು ‘ರೂಪತಾರ’ ಚಲನಚಿತ್ರ ಮಾಸಿಕದಲ್ಲಿ ನನ್ನ ಮತ್ತು ‘ಒಂದು ಊರಿನ ಕತೆ’ ಕುರಿತು ಬಿಡುಗಡೆಗೆ ಮುಂಚೆ ಲೇಖನವನ್ನು ಬರೆದು ಪ್ರಕಟಿಸಿದ್ದರು. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೆ ಶ್ರೀ ಲಕ್ಷ್ಮಣ ಕೊಡಸೆ ಅವರು ಸಂದರ್ಶನ ಮಾಡಿದ್ದರು. ಹೀಗೆ ನಾನು ‘ನಿರ್ದೇಶಕ’ ಎಂಬ ವಿಷಯಕ್ಕೆ ಪ್ರಚಾರ ಸಿಕ್ಕಿತ್ತು. ಆದರೆ, ಆಮೇಲೆ ನನ್ನ ಸಿನಿಮಾ, ಗಳಿಕೆಯಲ್ಲಿ ಸೋತು ಸಾಲದ ಹೊರೆ ಹೆಚ್ಚತೊಡಗಿತು. ಆರ್ಥಿಕವಾಗಿ ಸೋತರೂ ಮನ್ನಣೆಯ ದೃಷ್ಟಿಯಿಂದ ಒಂದಿಷ್ಟು ಹೆಸರು ಬಂದಿತ್ತು. ಹಾಗೆಂದು, ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೆ? ವಸೂಲಿ ಮಾಡಬೇಕಾದ್ದು ಅವರ ಜವಾಬ್ದಾರಿ. ಸಿನಿಮಾಕ್ಕೆ ಬರಬೇಕಾಗಿದ್ದ ಸಹಾಯಧನವೂ ಬಂದಿರಲಿಲ್ಲ. ಅದಕ್ಕೆ ಸರ್ಕಾರ ಕಾರಣವಲ್ಲ. ಮೇನೇಜರ್ ಬಳಿಯಿದ್ದ ಅನೇಕ ಅಗತ್ಯ ದಾಖಲೆಗಳು ಬೇಗ ಸಿಗಲಿಲ್ಲವಾದ್ದರಿಂದ ಸಹಾಯ ಧನಕ್ಕೆ ಅರ್ಜಿ ಹಾಕಲು ತಡವಾಗಿತ್ತು. ಅರ್ಜಿ ಹಾಕಿದಾಗ ನಮ್ಮ ಕಡೆಯ ಒಂದು ತಪ್ಪು ಬೆಳಕಿಗೆ ಬಂತು. ಸಿನಿಮಾ ಚಿತ್ರೀಕರಣಕ್ಕೆ ಮುಂಚೆ ಅಗತ್ಯ ಶುಲ್ಕ ಕಟ್ಟಿ ವಾರ್ತಾ ಇಲಾಖೆಯಿಂದ ಅನುಮತಿ ಪಡೆಯಬೇಕಿದ್ದು ನಮ್ಮ ಸಿನಿಮಾಕ್ಕೆ ಅನುಮತಿಯನ್ನೇ ಪಡೆದಿರಲಿಲ್ಲ. ಹೀಗಾಗಿ ಸರ್ಕಾರದ ಸಹಾಯ ಧನ ಸಿಗುವಂತಿರಲಿಲ್ಲ. ಮೊದಲೇ ಅರ್ಜಿ ಹಾಕಲು ವರ್ಷ ಉರುಳಿದೆ. ಈಗ ಈ ಸಂಕಷ್ಟ ಬೇರೆ ಹೆಡೆಯೆತ್ತಿ ನಿಂತಿದೆ. ಆಗ ಸಹಾಯಕ್ಕೆ ಬಂದವರು ವಾರ್ತಾ ಇಲಾಖೆಯ ನಿರ್ದೇಶಕರಾಗಿ ಪ್ರತಿ ನಿಯೋಜನೆಯ ಮೇಲೆ ಬಂದಿದ್ದ ಶ್ರೀ ವಿಜಯ ಸಾಸನೂರ ಅವರು. ವಿಜಯ ಸಾಸನೂರರು ಲೇಖಕರಾಗಿ ನನಗೆ ಪರಿಚತರು. ನನ್ನ ಸಾಮಾಜಿಕ ಕಾಳಜಿ ಬಗ್ಗೆ ವಿಶೇಷ ಅಭಿಮಾನವುಳ್ಳವರು. ಅವರಲ್ಲಿ ನಮ್ಮ ಕಡೆಯಿಂದ ಆಗಿರುವ ತಪ್ಪನ್ನು ತಿಳಿಸಿ ‘ಏನಾದರೂ ಮಾಡಿ’ ಎಂದು ಕೇಳಿಕೊಂಡೆ. ಅವರು ಅಧೀನ ಅಧಿಕಾರಿಗಳ ಜೊತೆ ಚರ್ಚಿಸಿದರು. ಅಧೀನ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ವೇಳೆಗೆ ಬ್ಯಾಂಕಿನಿಂದ ನೋಟಿಸ್ ಮೇಲೆ ನೋಟಿಸ್ ಬರತೊಡಗಿದ್ದವು. ನೋಟಿಸ್ ಕೊಟ್ಟು ಸಾಕಾಗಿ ಕೋರ್ಟ್ ಮೆಟ್ಟಿಲು ಹತ್ತಿದರು. ಆಗ ವಕೀಲರಾಗಿದ್ದ (ಈಗ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತರಾಗಿರುವ) ಶ್ರೀ ಎಚ್.ಎನ್. ನಾಗಮೋಹನ ದಾಸ್ ಅವರು ನನ್ನ ಪರವಾಗಿ ಕೋರ್ಟಿಗೆ ಹಾಜರಾದರು. ಎಂದಿದ್ದರೂ ಸಾಲ ಕಟ್ಟಲೇಬೇಕಿತ್ತಾದರೂ ಸ್ವಲ್ಪ ವಿಳಂಬ ಮಾಡಲು ಶ್ರೀ ನಾಗಮೋಹನದಾಸ್ ಸಾಕಷ್ಟು ಶ್ರಮಿಸಿದರು. ವಾದ ಮಂಡಿಸುತ್ತ, ಮುಂದೂಡಿಸುತ್ತ ಬಂದರು. ಸಂಭಾವನೆ ಸ್ವೀಕರಿಸದೆ ಸ್ನೇಹದಿಂದ ನಡೆದುಕೊಂಡರು.
ವಿಜಯ ಸಾಸನೂರ ಅವರು ಒಂದು ಮಾರ್ಗ ಹುಡುಕಿದರು ‘ನಿಮ್ಮ ಪತ್ನಿ ನಿರ್ಮಾಪಕರು. ಮೊದಲನೇ ಸಿನಿಮಾ ನಿರ್ಮಾಣವಾದ್ದರಿಂದ ನಿಯಮಗಳ ಅರಿವಿರಲಿಲ್ಲ ಅಂತ ತಿಳಿಸಿ, ತಪ್ಪನ್ನು ಮನ್ನಿಸಿ ಸಹಾಯ ಧನ ಮಂಜೂರು ಮಾಡಲು ಮನವಿ ಮಾಡಿದ ಒಂದು ಪತ್ರ ಕೊಡಿಸಿ. ನಾನು ಸಚಿವರು ಮತ್ತು ಕಾರ್ಯದರ್ಶಿಗಳಿಗೆ ತಲುಪಿಸಿ ಖುದ್ದು ಮವನರಿಕೆ ಮಾಡಿ, ವಿಶೇಷ ಅನುಮತಿಯ ಆದೇಶ ಕೊಡಿಸಲು ಪ್ರಯತ್ನಿಸುವೆ’ ಎಂದರು. ನಾನು ಪತ್ನಿ ರಾಜಕ್ಷ್ಮಿಯಿಂದ ಮನವಿ ಪತ್ರವನ್ನು ಕೊಡಿಸಿದೆ. ಈ ವೇಳೆಗೆ ಕೋರ್ಟಿನಲ್ಲಿ ತೀರ್ಪು ಹೊರಟಿದ್ದು ಸಾಲಕ್ಕೆ ಖಾತರಿ ನೀಡಿದ್ದ ನನ್ನ ಸಂಬಳವನ್ನು ಮುಟ್ಟುಗೋಲು ಹಾಕಿಸಿ, ಅದರಿಂದ ಸಾಲ ವಸೂಲಿಗೆ ಆದೇಶ ನೀಡಲಾಯಿತು. ಆಗ ಆಘಾತಗೊಂಡಿತು ಮನಸ್ಸು. ಆದರೆ ಎದುರಿಸಲೇಬೇಕಾಗಿತ್ತು. ರಾಜಲಕ್ಷ್ಮಿಗೆ ‘ತಿಳಿಸಿದರೆ ಆಕೆಗೆ ಈ ಆಘಾತವನ್ನು ತಡೆದುಕೊಳ್ಳುವುದು ತುಂಬಾ ಕಷ್ಟ ವೆಂದು ಭಾವಿಸಿ ತಿಳಿಸಲೇ ಇಲ್ಲ! ವಿಶ್ವವಿದ್ಯಾಲಯದ ಅಧಿಕಾರಿಗಳಲ್ಲಿ ಮಾರ್ಗೋಪಾಯದ ಬಗೆ ಮನವಿ ಮಾಡಿದೆ. ಅವರು ಪೂರ್ಣ ಸಂಬಳವನ್ನು ಬ್ಯಾಂಕಿಗೆ ಕಟ್ಟಲು ಆಗದೆಂದೂ ಇಂತಿಷ್ಟು ಸಂಬಳವನ್ನು ನೇರವಾಗಿ ಬ್ಯಾಂಕಿಗೆ ಕಳಿಸುವುದಾಗಿಯೂ ಬರೆದರು. ಸದ್ಯ, ಬ್ಯಾಂಕಿನ ಮೇನೇಜರ್ ಮಲ್ಯ ಅವರು ತಮ್ಮ ಅಭ್ಯಂತರವಿಲ್ಲವೆಂದು ತಿಳಿಸಿದರು. ಏನಿಲ್ಲವೆಂದರೂ ಒಂದು ದಶಕಕ್ಕೂ ಹೆಚ್ಚು ಕಾಲ ಈ ವ್ಯವಸ್ಥೆ (ಅವಸ್ಥೆ) ಮುಂದು ವರೆಯಿತು.
ಈ ನಡುವೆ, ಶ್ರೀ ವಿಜಯ ಸಾಸನೂರ ಅವರ ಪ್ರಯತ್ನ ಫಲ ನೀಡಿತು. ಸರ್ಕಾರದಿಂದ ನಮ್ಮ ಚಿತ್ರಕ್ಕೆ ಸಹಾಯಧನ ನೀಡಲು ಅನುಮತಿ ಸಿಕ್ಕಿತು. ತಪ್ಪಿಗಾಗಿ ಇಂತಿಷ್ಟು ಹಣ ಹಿಡಿದುಕೊಂಡು ಸಹಾಯಧನ ಕೊಡಬೇಕೆಂದು ಸೂಚಿಸಲಾಗಿತ್ತು. ಸಹಾಯಧನ ಸಿಗುವ ವೇಳೆಗೆ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಸಾಕಷ್ಟು ಬಾಕಿ ಉಳಿಯುವಂತಾಗಿತ್ತು. ಬಾಕಿ ತೀರಿಸಲು ಸಂಬಳ ಕಡಿತವಾಗುತ್ತಲೇ ಇತ್ತು.
ಇಷ್ಟೆಲ್ಲ ಆಗುತ್ತಿರುವಾಗಲೇ ಒಂದು ಅಹಿತಕರ ಘಟನೆಯು ನನ್ನ ಪತ್ನಿಯನ್ನು ಘಾಸಿಗೊಳಿಸಿತ್ತು. ಇದಕ್ಕೊಂದು ಹಿನ್ನೆಲೆಯೂ ಇತ್ತು. ನಾನು ಬ್ಯಾಂಕಿನಿಂದ ಸಾಲ ಪಡೆಯುವಾಗ ಮೊದಲಿಗೆ ಬ್ಯಾಂಕ್ ಖಾತೆಯಲ್ಲಿ ಒಂದಿಷ್ಟು ಹಣ ಇರಬೇಕೆಂದು ಮೇನೇಜರ್ ಹೇಳಿದ್ದರು. ಆಗ ಮಾತ್ರ ನಾನು ಕೇಂದ್ರ ಕಚೇರಿಗೆ ಸಾಲ ನೀಡಲು ಶಿಫಾರಸು ಮಾಡಲು ಸಾಧ್ಯ ಎಂದಿದ್ದರು. ಅದಕ್ಕಾಗಿ ಕೆಲವರನ್ನು ಕೇಳಿಯಾಯಿತು. ಆಗ ನೆರವಿನ ದಾರಿ ತೋರಿಸಿದವರು ನನ್ನ ಮಾಜಿ ವಿದ್ಯಾರ್ಥಿ ಗೋವಿಂದಯ್ಯ. ಇವರಿಗೆ ಸಮೀಪದವರಾದ ಶ್ರೀ ಶೇಷಾದ್ರಿ ಎನ್ನುವವರು 20 ಸಾವಿರ ರೂಪಾಯಿ ಹಣ ಕೊಡಲು ಸಿದ್ಧವಾಗಿರುವುದಾಗಿಯೂ ಅವರನ್ನು ಪಾಲುದಾರರಾಗಿ ಮಾಡಿಕೊಂಡರೆ ಮಾತ್ರ ಕೊಡುತ್ತಾರೆಂದೂ ಹೇಳಿದರು. ಶೇಷಾದ್ರಿಯವರು ಮೆಜೆಸ್ಟಿಕ್ ವೃತ್ತದಲ್ಲಿ ಒಂದು ಅಂಗಡಿ ನಡೆಸುತ್ತಿದ್ದರು. ಅವರನ್ನು ಭೇಟಿಯಾದೆ. ಮಾತುಕತೆ ನಡೆದು ಅವರನ್ನು ‘ಸಹ ನಿರ್ಮಾಪಕ’ರೆಂದು ಮಾಡುವ ಒಪ್ಪಂದವಾಯಿತು. ಅಸಲು ಹಣವನ್ನು ಸೂಕ್ತ ಬಡ್ಡಿ ಸಮೇತ ತೀರಿಸಬೇಕು. ಮೈತ್ರಿ ಆರ್ಟ್ಸ್ಗೆ ಅವರು ಪಾಲುದಾರರಲ್ಲ. ‘ಒಂದು ಊರಿನ ಕತೆ’ ಸಿನಿಮಾಕ್ಕೆ ಸಹ ನಿರ್ಮಾಪಕರು ಮಾತ್ರ. ಇದಿಷ್ಟು ಒಪ್ಪಂದದ ಸಾರ. ಸಿನಿಮಾ ಸೋತ ಮೇಲೆ ಸಹಜವಾಗಿ ಅವರು ಹಣವನ್ನು ವಾಪಸ್ ಮಾಡಲು ಒತ್ತಡ ಮಾಡತೊಡಗಿದರು. ಅವರು ಕೊಟ್ಟ ಹಣವನ್ನು ವಾಪಸ್ ಮಾಡಲು ನನ್ನಲ್ಲಿ ಹಣವಿಲ್ಲ. ಯಾರನ್ನಾದರೂ ಕೇಳಬೇಕು. ಸಂಸಾರ ನಡೆಸುವುದೇ ಕಷ್ಟವಾಗಿರುವಾಗ ಮತ್ತಷ್ಟು ಸಾಲ ಎಲ್ಲಿ ಮಾಡುವುದು? ಆಗ ಒಬ್ಬ ‘ಹಿತೈಷಿ’ 25 ಸಾವಿರ ರೂಪಾಯಿಗಳ ಸಾಲ ಕೊಟ್ಟರು. ಶೇಷಾದ್ರಿಯವರಿಗೆ ಈ ಹಣವನ್ನು ಕೊಟ್ಟೆ. ತುಂಬಾ ಸ್ನೇಹದಿಂದಲೇ ಹಣ ನೀಡಿದ ಆ ‘ಹಿತೈಷಿ’ ಕೆಲ ಕಾಲಾನಂತರ ಕಟು ಮಾತುಗಳಿಂದ ವಾಪಸ್ ಕೇಳ ತೊಡಗಿದರು. ಒಂದು ದಿನ ನಾನು, ನನ್ನ ಪತ್ನಿ ಮತ್ತು ಇಬ್ಬರು ಪುತ್ರರು (ಮೈತ್ರಿ ಬರಗೂರ್ ಮತ್ತು ಸ್ಫೂರ್ತಿ ಬರಗೂರ್) ಸ್ನೇಹಿತರೊಬ್ಬರ ಮನೆಗೆ ಹೋಗಲು, ನಮ್ಮ ಬಾಡಿಗೆ ಮನೆಯಿಂದ ಹೊರಬಂದು ರಸ್ತೆಯಲ್ಲಿ ಹತ್ತಾರು ಹೆಜ್ಜೆ ಹಾಕುವಾಗ ಎದುರಿಗೆ ಅದೇ ಆಸಾಮಿ ಬಂದು ಹಣ ಕೇಳಿದರು. ಕೆಟ್ಟದಾಗಿ ಮಾತಾಡಿದರು. ನಾನು ಬೀದಿಯಲ್ಲಿ ಹೀಗೆಲ್ಲ ಮಾತಾಡಬೇಡಿ ಎಂದರೂ ಸುಮ್ಮನಾಗದೆ ನನ್ನನ್ನು ಅವಮಾನಿಸ ತೊಡಗಿದಾಗ ನಾನು ರೇಗಿ ಎಚ್ಚರಿಕೆ ನೀಡಿದೆ. ಆಗ ಸ್ವಲ್ಪ ತಣ್ಣಗಾದ ವ್ಯಕ್ತಿ, ಒಂದು ವಾರ ಗಡುವು ನೀಡಿ ನಿರ್ಗಮಿಸಿದ. ಪತ್ನಿ ರಾಜಲಕ್ಷ್ಮಿಯ ಕಣ್ಣುಗಳು ಸಿಟ್ಟು ಮತ್ತು ಸಂಕಟದಲ್ಲಿ ಕುದಿಯುತ್ತಿದ್ದವು. ಮಕ್ಕಳು ದಿಗ್ಭ್ರಾಂತರಾಗಿದ್ದರು. ನನ್ನ ಮನಸ್ಸು ಕುಸಿದು ಹೋಗಿತ್ತು. ‘ಮನೆಗೆ ವಾಪಸ್ ಹೋಗೋಣ’ ಎಂಬ ಪತ್ನಿಯ ಒತ್ತಾಯವನ್ನು ನಯವಾಗಿ ನಿರಾಕರಿಸಿ ಸ್ನೇಹಿತರ ಮನೆಗೆ ಹೋಗಲು ಒಪ್ಪಿಸಿದೆ. ಸ್ನೇಹಿತ ಶಾಮಸುಂದರರಾವ್ ಅವರು ಸಾಯಂಕಾಲದ ತಿಂಡಿಗೆ ಕರೆದಿದ್ದರು. ಅವರು ಮದುವೆಯಾದಾಗ ಅವರ ಪತ್ನಿ ಕೆಲ ಕಾಲ ನಮ್ಮ ಮನೆಯಲ್ಲೇ ಇದ್ದರು. ನನ್ನ ಪತ್ನಿಯ ಆರೈಕೆ, ಸ್ನೇಹ ಅವರಿಗೆ ಲಭಿಸಿ ಎರಡೂ ಕುಟುಂಬದ ನಡುವೆ ಸ್ನೇಹ ವಿಸ್ತಾರವಾಗಿತ್ತು. ಅವರ ಮನೆಗೆ ಹೋಗಿ ಸ್ವಲ್ಪ ಕಾಲ ಇದ್ದರೆ ನನ್ನ ಪತ್ನಿ ಮತ್ತು ಮಕ್ಕಳ ಮನಸ್ಸಿಗೆ ಸ್ವಲ್ಪವಾದರೂ ತಾತ್ಕಾಲಿಕ ಸಾಂತ್ವನ ಆದೀತೆಂದು ಭಾವಿಸಿ ನಾನು ಕರೆದೊಯ್ದೆ.
ಮತ್ತೆ ಮನೆಗೆ ವಾಪಸ್ ಆದಾಗ ಸಹಿಸಲಾಗದ ಮೌನ. ಸಾಯಂಕಾಲ ತಿಂದ ತಿಂಡಿಯೇ ಸಾಕೆಂದು ರಾತ್ರಿ ಊಟ ಬೇಡವೆಂದುಕೊಂಡು ಸುಮ್ಮನಾದೆವು.
ಮುಂದೆ ಬರೆಯಲು ಕೈ ಓಡುತ್ತಿಲ್ಲ….. ನಿಲ್ಲಿಸಿದೆ. ನೆನಪಿನಲ್ಲಿ ತೋಯ್ದು ತಳಮಳಿಸಿದೆ. ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡೆ. ಮುಂದೇನಾಯಿತೆಂದು ನೋವಿನಲ್ಲೇ ಬರೆಯಬೇಕಾಗಿದೆ. ಮಡದಿ, ಮಕ್ಕಳ ಕ್ಷಮೆ ಕೋರಿ ಬರೆಯುತ್ತೇನೆ.
‘ನನಗೆ ಎಂಥಾದಾದ್ರು ಒಂದು ಕೆಲ್ಸ ಕೊಡ್ಸಿ’ ಎಂದು ರಾಜಲಕ್ಷಿ÷್ಮ ಕೇಳಿದಾಗ ಮುಖ ನೋಡಿದೆ. ಅಲ್ಲಿ ದುಗುಡವೂ ಇತ್ತು; ದೃಢ ನಿರ್ಧಾರವೂ ಇತ್ತು. ಹಿಂದೆ ಅಲ್ಪ ಸಂಬಳದ ಒಂದು ಖಾಸಗಿ ಉದ್ಯೋಗದಲ್ಲಿದ್ದು ಅದನ್ನು ಮಕ್ಕಳ ಆರೈಕೆಗಾಗಿ ಬಿಟ್ಟಿದ್ದ ರಾಜಲಲಕ್ಷ್ಮಿ ಈಗ ನನ್ನ ಕಷ್ಟಕ್ಕಾಗಲು ಮತ್ತೆ ಕೆಲಸಕ್ಕೆ ಸೇರಲು ಸಿದ್ಧವಾಗಿದ್ದನ್ನು ಕಂಡೆ. ‘ಅಗಲಿ ಹುಡುಕ್ತೇನೆ’ ಎಂದೆ. ಮಾರನೇ ದಿನದಿಂದಲೇ ಅವರಿವರನ್ನು ಕೇಳಿದೆ. ಕೆಲಸ ಸಿಗಲಿಲ್ಲ. ಆಗ ರಾಜಲಕ್ಷ್ಮಿ ‘ನಾನು ಸ್ವೆಟರ್ ಹಾಕೋದನ್ನು ಬಲ್ಲೆ. ಸ್ವೆಟರ್ ಹಾಕಿ ಯಾವುದಾದರೂ ಸ್ಕೂಲಿಗೆ ಕೊಡೋಣ. ಸ್ಕೂಲಿನವರ ಯೂನಿಫಾರಂಗೆ ಬೇಕಾಗುತ್ತಲ್ಲ’ ಎಂದು ಹೇಳಿದ್ದಲ್ಲದೆ ಸ್ವೆಟರ್ ನೇಯ್ಗೆಗೆ ಪೂರಕವಾದ ಒಂದು ಸಣ್ಣ ಯಂತ್ರ ಕೊಡಿಸಲು ಕೇಳಿದಳು. ಮತ್ತೆ ಸಾಲ ಮಾಡಿದೆ; ಕೊಡಿಸಿದೆ. ಮನೆಯಲ್ಲಿ ಸ್ವೆಟರ್ ಹೆಣಿಗೆ ಆರಂಭ ವಾಯಿತು. ರಾಜಲಲಕ್ಷ್ಮಿ ಶ್ರಮವನ್ನು ಧಾರೆಯೆರೆದು ಹೆಣೆಯುತ್ತಿದ್ದ ಸ್ವೆಟರ್ಗಳಲ್ಲಿ ನಮ್ಮ ಕುಟುಂಬದ ಕಷ್ಟದ ಎಳೆಗಳಿದ್ದವು. ಆರೋಗ್ಯಕ್ಕೆ ಸ್ವಲ್ಪ ಧಕ್ಕೆಯಾಗುತ್ತಿದೆಯೆಂದು ಗೊತ್ತಾದಾಗ ಈ ಕೆಲಸವನ್ನು ನಿಲ್ಲಿಸಲು ಹೇಳಿದೆ. ನನ್ನ ಮಕ್ಕಳಾದರೂ ಅಷ್ಟೆ; ಯಾವತ್ತೂ ಇಂಥದೇ ಬೇಕೆಂದು ಕೇಳಿದವರಲ್ಲ. ಹೊಂದಿಕೊಂಡು ಬೆಳೆದರು. ಅವರ ಬೆಳವಣಿಗೆ ನಮ್ಮ ಸುಖದ ನೆಲೆಯಾಗಿತ್ತು.
ಬೀದಿಯಲ್ಲಿ ಸಾಲ ವಸೂಲಾತಿಗೆ ನಿಂತ ‘ಹಿತೈಷಿ’ಯ ವಿಷಯಕ್ಕೆ ಮತ್ತೆ ಬರುತ್ತೇನೆ. ಮತ್ತೆ ಮನೆಗೆಲ್ಲಿ ಬರುತ್ತಾನೊ ಎಂಬ ಅಳುಕು. ಯಾಕೆಂದರೆ ಆತನಿಗೆ ಹಣ ಕೊಡಲು ಸಾಧ್ಯವಾಗಿರಲಿಲ್ಲ. ಆಗ ಇನ್ನಷ್ಟು ಕಾಲಾವಕಾಶ ಕೇಳಬೇಕಾಗಿತ್ತು. ಎದುರು ಹೋಗಿ ಕೇಳಿದರೆ ಮತ್ತೆ ಜಗಳವಾದೀತೆಂದು ಭಾವಿಸಿ ಒಂದು ಪತ್ರ ಬರೆದು ಅದನ್ನು ಆತನಿಗೆ ತಲುಪಿಸಲು ನಿರ್ಧರಿಸಿದೆ. ಪತ್ರವನ್ನು ತಲುಪಿಸಿ ತಿಳಿ ಹೇಳಲು ಹೋದವರು ಅಂದಿನ ನನ್ನ ವಿದ್ಯಾರ್ಥಿ ದೊಡ್ಡಹುಲ್ಲೂರು ರುಕ್ಕೋಜಿ ಮತ್ತು ಇನ್ನೊಬ್ಬ ವಿದ್ಯಾರ್ಥಿ ಪದ್ಮರಾಜ್. ಇವರು ಹೋಗಿ ಪತ್ರ ಕೊಟ್ಟು ಸಂಯಮದಿಂದಿರಲು ಹೇಳಿ ಬಂದದ್ದನ್ನು ನಾನು ಮರೆಯಲಾರೆ. ಪದ್ಮರಾಜ್ ನಮ್ಮನ್ನು ಬೇಗ ಅಗಲಿ ಹೋದರು. ರುಕ್ಕೋಜಿ ಗಣನೀಯ ಸಾಧನೆ ಮಾಡತೊಡಗಿದರು. ಚಲನಚಿತ್ರ ಪತ್ರಕರ್ತರಾಗಿ ಬೆಳೆದರು. ಡಾ. ರಾಜಕುಮಾರ್ ಅವರ ಬದುಕು ಮತ್ತು ಸಿನಿಮಾ ಸಾಧನೆ ಬಗ್ಗೆ ಒಂದು ದಶಕ ಮೀರಿ ಸಂಶೋಧನಾತ್ಮಕ ಕೆಲಸ ಮಾಡಿ, ಎರಡು ಬೃಹತ್ ಸಂಪುಟಗಳನ್ನು ಬರೆದು, ಪ್ರಕಟಿಸಿ ದಾಖಲೆ ಮಾಡಿದರು. ಇಂದಿಗೂ ನನ್ನ ಸ್ನೇಹಿತರು. ಇವರ ಪತ್ನಿ ಮಧುಮತಿಯವರು ಆಂಗ್ಲ ಸಾಹಿತ್ಯದ ಎಂ.ಎ. ಪದವೀಧರೆ, ಕನ್ನಡ ಕವಿಯತ್ರಿ.
ನನ್ನ ಕಷ್ಟಕ್ಕೆ ಆಗಿಬಂದ ಸ್ನೇಹಿತರು, ಮುಖಾಮುಖಿಯಲ್ಲೇ ಮೆಚ್ಚಿದವರು, ಕಷ್ಟ ಕೊಟ್ಟವರು, ಗೊತ್ತಾಗದೆಂದು ಭಾವಿಸಿ ಬೆನ್ನ ಹಿಂದಿನ ಬಾಯಾದವರು, ಮನಸಾರೆ ಹಿತೈಷಿಗಳಾಗಿ ಸಂತೈಸಿದವರು, ಮನಸ್ಸು ಮುದುಡಿಕೊಳ್ಳದೆ, ದುಡುಕದೆ, ದಾರಿಯುದ್ದಕ್ಕೂ ಧೈರ್ಯದ ಸಹಪಯಣ ಮಾಡಿದ ಮಡದಿ ಮಕ್ಕಳು ನನ್ನನ್ನು ಬೆಳೆಸಿದ್ದಾರೆ. ಅಂತೂ ಒಂದು ದಶಕಕ್ಕೂ ಹೆಚ್ಚು ಕಾಲ ಅನುಭವಿಸಿದ ಸಿನಿಮಾ ಸಾಲದ ಸಂಕಟವನ್ನು ಮುಂದೊಮ್ಮೆ ದಾಟಿದೆ. ಪೂರ್ಣ ಸಂಬಳವನ್ನು ಪಡೆಯುವಂತಾದೆ. ಅಬ್ಬಾ! ಹೀಗೆ ದಡ ಸೇರಲು ಸುಮಾರು ಹತ್ತು-ಹನ್ನೆರಡು ವರ್ಷಗಳಾದವು!
ಛೆ! ನಾನೆಂಥವನು? ನಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಆಕಾಂಕ್ಷೆಗೆ ಮಡದಿ ಮಕ್ಕಳ ಸುಖದ ಬಹುಪಾಲು ಕಸಿದುಕೊಳ್ಳಬೇಕಿತ್ತೆ? ಅವರನ್ನು ಉಪವಾಸಕ್ಕೀಡು ಮಾಡಲಿಲ್ಲವೆಂಬುದು ನಿಜ. ಆದರೆ ಅಪಮಾನದ ಅನುಭವ ಉಪವಾಸಕ್ಕಿಂತ ಕಡು ಕಷ್ಟ. ಇಷ್ಟಾಗಿಯೂ ಎಷ್ಟೋ ಕಷ್ಟದ (ಅಪಮಾನದ) ಸಂಗತಿಗಳನ್ನು ಮನೆಯಿಂದ ಮುಚ್ಚಿಟ್ಟು ನಾನೇ ಅನುಭವಿಸಿದ್ದುಂಟು. ಆದರೂ ಪಾಪಪ್ರಜ್ಞೆ ಕಾಡುತ್ತದೆ. ನಾನು ಮಾಡಿದ್ದು ಸರಿಯೆ ಎಂಬ ಪ್ರಶ್ನೆ ಮೂಡುತ್ತದೆ. ನಾನು ಕಷ್ಟದ ದಿನಗಳಲ್ಲಿ ಎಂಥ ಸ್ಥಿತಿ ತಲುಪಿದ್ದೆನೆಂದರೆ ವಿಶ್ವವಿದ್ಯಾಲಯದ ಅಧ್ಯಾಪಕನಾಗಿ ಕೆಲಸಕ್ಕೆ ಹೋಗುವಾಗ ತಳದಲ್ಲಿ ತೂತು ಬಿದ್ದಿದ್ದ ಶೂಗಳನ್ನು ಹಾಕಿಕೊಳ್ಳುವ ಅನಿವಾರ್ಯ ಎದುರಿಸಿದ್ದೆ. ತಳದಲ್ಲಿ ತೂತು ಇದ್ದದ್ದರಿಂದ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇದು ಅಂದಿನ ನನ್ನ ಬದುಕಿನ ಸಂಕೇತವೂ ಹೌದು. ಸಿನಿಮಾ ಮಾಡುವುದಕ್ಕೆ ಮುಂಚೆ ತುಮಕೂರು ಮತ್ತು ಬೆಂಗಳೂರಿನ ಸರ್ಕಾರಿ ಕಾಲೇಜಿನ ಅಧ್ಯಾಪಕನಾಗಿದ್ದಾಗ ಫುಲ್ ಸೂಟ್ ಮತ್ತು ಶೂಗಳನ್ನು ಧರಿಸಿ ಠಾಕುಠೀಕಾಗಿ ಹೋಗುತ್ತಿದ್ದವನು ಈಗ ಹೀಗಾದೆನಲ್ಲ ಎಂದು ಒಂದು ಕ್ಷಣ ಅನ್ನಿಸಿದರೂ ಅದು ಕ್ಷಣಿಕ. ನನ್ನ ಚಿಂತೆ ಏನಿದ್ದರೂ ಮಡದಿ ಮಕ್ಕಳ ಮನಸ್ಸಿನಲ್ಲಿ ಮೂಡಿದ ಸಂಕಟ ಗಳ ಬಗ್ಗೆ ಮಾತ್ರ.
ಇಷ್ಟು ವಿವರಗಳನ್ನು ಹೇಳಲು ಒಂದು ಕಾರಣವಿದೆ. ಸಿನಿಮಾ ಕ್ಷೇತ್ರಕ್ಕೆ ಸೇರಲು ಅಪೇಕ್ಷಿಸಿ ಅನೇಕರು ನನ್ನನ್ನು ಸಂಪರ್ಕಿಸುತ್ತಾರೆ. ಇಲ್ಲಿ ದಿಢೀರ್ ಪ್ರಸಿದ್ಧಿಯಾಗಬಹು ದೆಂದು ಭಾವಿಸಿದವರು (ಭ್ರಮಿಸಿದವರು) ಇವರಲ್ಲಿ ಹೆಚ್ಚು. ಆದರೆ ಒಂದು ನೀತಿ ನಮ್ಮದಾಗಬೇಕು: ಕಷ್ಟಪಡದೆ ಇಷ್ಟವಾದದ್ದು ದಕ್ಕುವುದಿಲ್ಲ. ಕಳೆದುಕೊಳ್ಳದೆ ಗಳಿಕೆಗೆ ಬೆಲೆಯಿಲ್ಲ. ಸಂಕಟವಿಲ್ಲದೆ ಸಾಧನೆ ಸಾಧ್ಯವಿಲ್ಲ. ಇದು ವಿಶೇಷವಾಗಿ ಸಿನಿಮಾಕರ್ಷಿತರಿಗೆ ಅರ್ಥವಾಗಬೇಕು. ಈ ಹಿನ್ನೆಲೆಯಲ್ಲೇ ನಾನೊಂದು ಮಾತು ಹೇಳುತ್ತಿರುತ್ತೇನೆ – ಮೂರನೇ ತರಗತಿ ಮಾತ್ರ ಓದಿದವರೆಲ್ಲರೂ ಡಾ. ರಾಜಕುಮಾರ್ ಆಗಲು ಸಾಧ್ಯವಿಲ್ಲ. ಬಸ್ ಕಂಡಕ್ಟರ್ ಆಗಿದ್ದವರೆಲ್ಲರೂ ರಜನೀಕಾಂತ್ ಆಗಲು ಸಾಧ್ಯವಿಲ್ಲ. ಹಾಗೆಂದು ಸುಮ್ಮನಿರಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ಕೊಳ್ಳುವ ಶ್ರಮ, ಸಂಕಲ್ಪ, ಬದ್ಧತೆಗಳು ಬೇಕು, ಛಲ ಬೇಕು.
ನಿಜ, ನಾನು ನಿರ್ದೇಶಕನಾಗಬೇಕೆಂದು ಪತ್ನಿಯ ಹೆಸರಲ್ಲಿ ಸಾಲ ಮಾಡಿ ಸಿನಿಮಾ ನಿರ್ಮಿಸಿದ್ದಾಯಿತು. ಕಷ್ಟ ನಷ್ಟ ಅನುಭವಿಸಿದ್ದಾಯಿತು. ಹಾಗೆಂದು ಅಲ್ಲಿಗೇ ಸುಮ್ಮನಿರಬೇಕೆ? ‘ಒಂದು ಊರಿನ ಕತೆ’ಗೇ ನನ್ನ ಸಿನಿಮಾ ಕತೆ ಮುಗಿಯಬೇಕೆ? ಇಲ್ಲ, ಸೋತಲ್ಲಿಯೇ ಗೆಲ್ಲಬೇಕು; ಗಟ್ಟಿಯಾಗಬೇಕು – ಇದು ನನ್ನ ನಿರ್ಧಾರವಾಗಿತ್ತು.
ಆಗ ನನ್ನ ನೆರವಿಗೆ ಬಂದವರು ಶ್ರೀ ವೈ.ಎಸ್.ವಿ. ದತ್ತ ಅವರು. ವೈ.ಎಸ್.ವಿ. ದತ್ತ ಅವರು ಬೆಂಗಳೂರಿನ ರಾಜಾಜಿನಗರ ವಾಸಿಯಾಗಿದ್ದು ಅದೇ ಬಡಾವಣೆಯಲ್ಲಿ ಟ್ಯುಟೋರಿಯಲ್ ನಡೆಸುತ್ತಿದ್ದರು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿದ್ದರು. ಇವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾಳಜಿಯಿಂದ ನಾನು ಹತ್ತಿರವಾಗಿದ್ದೆ. ನನ್ನ ಪರಿಚಯದ ನಂತರ ಅವರು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ನನ್ನೊಂದಿಗೆ ಸಮಾಲೋಚಿಸುತ್ತಿದ್ದರು. ಶ್ರೀ ಎಚ್.ಡಿ. ದೇವೇಗೌಡರ ಸಮೀಪವರ್ತಿಯಾಗಿದ್ದ ಇವರು ನನ್ನನ್ನೂ ಒಳಗೊಂಡಂತೆ ಆಯ್ದ ಸಾಹಿತಿ-ಚಿಂತಕರನ್ನು ಶ್ರೀ ದೇವೇಗೌಡರ ಬಳಿಗೆ ಕರೆದೊಯ್ದು ಚರ್ಚೆಗೆ ಅನುವು ಮಾಡಿಕೊಡುತ್ತಿದ್ದರು. ನನ್ನ ಮತ್ತು ಇವರ ಸ್ನೇಹದ ಫಲವೆಂಬಂತೆ ಒಂದು ಸಿನಿಮಾವನ್ನು ನಿರ್ಮಿಸಲು ಆಸಕ್ತಿ ತೋರಿಸಿದರು. ಆಗ ನನ್ನ ಪತ್ನಿ ರಾಜಲಕ್ಷ್ಮಿ ಮತ್ತು ದತ್ತ – ಇಬ್ಬರೂ ಪಾಲುದಾರರಾಗಿ ಸಿನಿಮಾ ನಿರ್ಮಾಣ ಮಾಡುವುದೆಂದು ನಿರ್ಧರಿಸಿದೆವು. ದತ್ತ ಮತ್ತು ನನ್ನ ಮೊದಲ ಮಗನ ಹೆಸರನ್ನು ಜೋಡಿಸಿ ‘ಮೈತ್ರಿದತ್ತ ಮೂವೀಸ್’ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಸಿದೆವು. ಈ ಸಂಸ್ಥೆಯಿಂದ ನಿರ್ಮಾಣವಾದ ಚಿತ್ರವೇ ನನ್ನ ಅದೇ ಹೆಸರಿನ ಕಾದಂಬರಿಯಾಧಾರಿತ ‘ಬೆಂಕಿ’. ಈ ಚಿತ್ರ ನಿರ್ಮಾಣಕ್ಕೆ ನಾನು ಕಲಾಜ್ಯೋತಿ ವೆಂಕಟೇಶ್ ಎಂಬುವರಿಂದ ಸಾಲ ಮಾಡಿ ಅರ್ಧ ಹಣ ಹಾಕಿದೆ. ಉಳಿದ ಹಣವನ್ನು ದತ್ತ ತೊಡಗಿಸಿದರು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಮೀಳಾ ಜೋಷಾಯ್, ಮಾನು, ಎಂ.ಎಸ್. ಉಮೇಶ್, ಮುಖ್ಯಮಂತ್ರಿ ಚಂದ್ರು, ಮೈಲಾರಿ ರಾವ್ ಮುಂತಾದವರು ಅಭಿನಯಿಸಿದರು.
ಎಸ್. ರಾಮಚಂದ್ರ ಅವರ ಛಾಯಾಗ್ರಹಣ ಮತ್ತು ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಿಂದ ಕೂಡಿದ ಈ ಸಿನಿಮಾವನ್ನು ನಮ್ಮ ತಾಲ್ಲೂಕಿನ ಮಾಗೋಡು ಎಂಬ ಗ್ರಾಮ ಮತ್ತು ಸಿರಾ ಹಾಗೂ ಮಧುಗಿರಿ ತಾಲ್ಲೂಕುಗಳ ಗಡಿಯಲ್ಲಿರುವ ಬಸ್ಮಂಗಿ ಬೆಟ್ಟದಲ್ಲಿ ಚಿತ್ರೀಕರಿಸಿದೆ. ಚಿತ್ರ ನಿರ್ಮಾಣದ ಉಸ್ತುವಾರಿಗಳಾಗಿ ನನ್ನ ಮಿತ್ರ ಶ್ರೀ ಜೆ.ಸು.ನಾ ಮತ್ತು ದತ್ತ ಅವರ ಬಳಗದ ಶ್ರೀ ಕೆ.ವಿ. ನಾಗರಾಜಮೂರ್ತಿ ವಹಿಸಿ ಕೊಂಡಿದ್ದರು. ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ‘ಒಂದು ಊರಿನ ಕತೆ’ ಚಿತ್ರಕ್ಕೆ ಸಹ ನಿರ್ದೇಶಕರೂ ಸಹ ಸಂಕಲನಕಾರರೂ ಆಗಿದ್ದ ಸುರೇಶ್ ಅರಸು ‘ಬೆಂಕಿ’ಗೆ ಮುಖ್ಯ ಸಂಕಲನಕಾರರಾದರು. ಅಲ್ಲಿಂದ ನನ್ನ ಎಲ್ಲ ಚಿತ್ರಗಳಿಗೂ ಅವರೇ ಸಂಕಲನಕಾರರು. ಮಣಿರತ್ನಂ ನಿರ್ದೇಶನದ ‘ಬಾಂಬೆ’ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕರು. ಸುರೇಶ್ ಅರಸು ಅವರು ಇಲ್ಲೀವರೆಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಒರಿಯಾ ಮುಂತಾದ ಸುಮಾರು 700 ಚಿತ್ರಗಳಿಗೆ ಸಂಕಲನ ಮಾಡಿದ ನಮ್ಮ ಹೆಮ್ಮೆಯ ಗೆಳೆಯ. ನನ್ನ ಕುಟುಂಬದ ಆತ್ಮೀಯ. ‘ಬೆಂಕಿ’ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಅವರು ಹಾಡಿದ್ದು ಒಂದು ವಿಶೇಷ. ಕಲಾತ್ಮಕ ಅಥವಾ ಹೊಸ ಅಲೆಯ ಚಿತ್ರವೆಂಬ ಹೆಸರಿನಿಂದ ಪ್ರಚುರಗೊಂಡ ಸಿನಿಮಾಗಳು, ಹಾಡುಗಳನ್ನು ಮತ್ತು ಮುಖ್ಯವಾಹಿನಿ ಚಿತ್ರಗಳ ಜನಪ್ರಿಯ ನಟ-ನಟಿಯರನ್ನು ಒಳಗೊಳ್ಳದೆ ಇದ್ದ ಕಾಲವದು. ನಾನು ನನ್ನ ನಿರ್ದೇಶನದ ಸಿನಿಮಾಗಳಲ್ಲಿ ಹಾಡುಗಳನ್ನು ಅಳವಡಿಸಿದೆ. ಜನಪ್ರಿಯ ಕಲಾವಿದರನ್ನೂ ಹಾಕಿಕೊಳ್ಳತೊಡಗಿದೆ. ಒಂದು ವಿಶೇಷವೆಂದರೆ ‘ಬೆಂಕಿ’ ಚಿತ್ರ ನಿರ್ದೇಶನದ ಜೊತೆಗೆ ನನ್ನನ್ನು ‘ಬೆಂಕಿ ಬರಗೂರ್’ ಎಂದು ಕರೆಯತೊಡಗಿದ್ದು ಉಂಟು. ಇದಕ್ಕೆ ನನ್ನ ನೇರ ನಡೆ-ನುಡಿ ಕಾರಣವೆಂದು ಕಾಣುತ್ತೆ.
ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳ ಗೊಂಡಿದ್ದವು. ‘ಶಾಂತಿ’ ಸಿನಿಮಾವನ್ನು ಮಾತ್ರ ಮಡಿಕೇರಿಯ ವಾತಾವರಣದಲ್ಲಿ ಚಿತ್ರಿಸಿದೆ.
ಇರಲಿ; ಈಗ ‘ಬೆಂಕಿ’ ಚಿತ್ರದ ವಿಷಯಕ್ಕೆ ಮತ್ತೆ ಬರುತ್ತೇನೆ. ಈ ಚಿತ್ರ ಎರಡನೇ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಕತೆಗಾಗಿ ರಾಜ್ಯ ಸರ್ಕಾರದ ಮೂರು ಪ್ರಶಸ್ತಿ ಗಳನ್ನು ಪಡೆಯಿತು. ವಿಶೇಷ ಏನು ಗೊತ್ತ? ಎರಡನೇ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ಯನ್ನು ನಮ್ಮ ‘ಬೆಂಕಿ’ ಚಿತ್ರಕ್ಕೆ ಕೊಡಲಾಗಿತ್ತಾದರೂ ಮೊದಲನೇ ಅತ್ಯುತ್ತಮ ಚಿತ್ರವೆಂದು ಯಾವುದೇ ಚಿತ್ರಕ್ಕೆ ಪ್ರಶಸ್ತಿ ನೀಡದಿರಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಇದು ಚರ್ಚೆಗೂ ಗ್ರಾಸವಾಗಿತ್ತು. ಅತ್ಯುತ್ತಮ ಚಿತ್ರವೆಂದು ಆಯ್ಕೆ ಮಾಡುವುದು ಆಯಾ ವರ್ಷದಲ್ಲಿ ನಿರ್ಮಾಣಗೊಂಡವುಗಳಲ್ಲಿ ಅತ್ಯುತ್ತಮ ಎಂದೇ ಹೊರತು ಸಾರ್ವಕಾಲಿಕ ಅತ್ಯುತ್ತಮ ಎಂದಲ್ಲ. ಆದ್ದರಿಂದ ಮೊದಲನೇ ಅತ್ಯುತ್ತಮ ಚಿತ್ರವೆಂದು ಯಾವುದೇ ಚಿತ್ರಕ್ಕೆ ಪ್ರಶಸ್ತಿ ಕೊಡದೆ ಇರುವ ಬದಲು ಎರಡನೇ ಅತ್ಯುತ್ತಮ ಚಿತ್ರವನ್ನೇ ಮೊದಲನೇ ಸ್ಥಾನಕ್ಕೆ ಆಯ್ಕೆ ಮಾಡಬಹುದಿತ್ತು. ಆದರೆ ಆಯ್ಕೆ ಸಮಿತಿಗೆ ಹಾಗೆ ಅನ್ನಿಸಿರಲಿಲ್ಲ. ಅವರ ಕಣ್ಣಲ್ಲಿ ನನ್ನ ಚಿತ್ರ ‘ಶ್ರೇಷ್ಠ’ವಲ್ಲ!
‘ಬೆಂಕಿ’ಗೆ ಆದಂತೆಯೇ ನನ್ನ ನಿರ್ದೇಶನದ ಮೂರನೇ ಚಿತ್ರ ‘ಸೂರ್ಯ’ಕ್ಕೆ ‘ಭಾರತೀಯ ಪನೋರಮ’ ಆಯ್ಕೆಯಲ್ಲಿ ಆಯಿತು. ಕ್ಷಮಿಸಿ; ಈ ಪನೋರಮ ಪ್ರಸಂಗವನ್ನು ನನ್ನ ‘ಸೂರ್ಯ’ ಚಿತ್ರಕ್ಕೆ ಮಾತ್ರ ಅನ್ಯಾಯವೆಂದು ಹೇಳಿದರೆ ತಪ್ಪಾದೀತು. ಇಡೀ ಕನ್ನಡ ಚಿತ್ರರಂಗಕ್ಕೇ ಆದ ಅನ್ಯಾಯ ಎನ್ನಬಹುದು. ಅನ್ಯಾಯ ಎಂಬ ಪದ ಅತಿ ಎನ್ನಿಸಿದರೆ ‘ನಿರ್ಲಕ್ಷ್ಯ’, ‘ಉಪೇಕ್ಷೆ’ ಎಂದೂ ಕರೆಯಬಹುದು. ಈ ‘ಪನೋರಮ’ ಪ್ರಸಂಗಕ್ಕೆ ಬರುವ ಮುಂಚೆ ‘ಸೂರ್ಯ’ ನಿರ್ಮಾಣದ ಕುರಿತು ಕೆಲವು ವಿವರಗಳನ್ನು ಹೇಳಬಯಸುತ್ತೇನೆ.
‘ಸೂರ್ಯ’ ನನ್ನದೇ ಕಿರು ಕಾದಂಬರಿಯಾಧಾರಿತ ಸಿನಿಮಾ. ಇದರ ನಿರ್ಮಾಣ ಮಾಡಿದವರು ಬಳ್ಳಾರಿಯಲ್ಲಿ ವಕೀಲರಾಗಿದ್ದ ಶ್ರೀ ನಟರಾಜ್ ಅವರು. ನಟರಾಜ್ ಅವರನ್ನು ಪರಿಚಯಿಸಿದವರು ಬಳ್ಳಾರಿಯ ಗೆಳೆಯ, ಶ್ರೀ ದಯಾನಂದ್ ಅವರು. ಇವರು ಕೂಡ ವಕೀಲರಾಗಿದ್ದರು. ಈ ವಕೀಲರಿಬ್ಬರೂ ಕಲಾಸಕ್ತರು. ನಟರಾಜ್ ಅವರು ಗಾಯಕರೂ ಹೌದು. ‘ಸೂರ್ಯ’ ಸಿನಿಮಾದಲ್ಲಿ ಶ್ರೀ ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಡಾ. ಜಿ.ಎಸ್. ಶಿವರುದ್ರಪ್ಪನವರ ಕವನವೊಂದನ್ನು ಹಾಡಿದ್ದರು. ಈ ಸಿನಿಮಾದ ಚಿತ್ರೀಕರಣವನ್ನು ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿಯಲ್ಲಿ ಮಾಡಿದೆ. ಇಟಕದಿಬ್ಬನಹಳ್ಳಿಯನ್ನು ಚುಟುಕಾಗಿ ಐ.ಡಿ.ಹಳ್ಳಿ ಎಂದು ಕರೆಯುತ್ತಾರೆ. ‘ಶ್ರೀ ರಘು ಐ.ಡಿ.ಹಳ್ಳಿ’ ಎಂಬ ಹೆಸರಿನ ನನ್ನ ಹಳೆಯ ವಿದ್ಯಾರ್ಥಿ, ದೂರದರ್ಶನದ ಉದ್ಯೋಗಿ; ನನ್ನ ಕುಟುಂಬದ ಸದಸ್ಯರೆಂಬಷ್ಟು ಆತ್ಮೀಯರು. ಇವರು ತಮ್ಮ ಊರಿನಲ್ಲಿದ್ದ ತಮ್ಮ ಪೂರ್ವಿಕರ ಮನೆಯೊಂದನ್ನು ತೋರಿಸಿದರು. ಆ ದೊಡ್ಡ ಮನೆಯು ನನ್ನ ಸಿನಿಮಾ ವಸ್ತುವಿಗೆ ಹೊಂದುತ್ತಿತ್ತು. ಹೀಗಾಗಿ ಐ.ಡಿ.ಹಳ್ಳಿಯಲ್ಲೇ ಚಿತ್ರೀಕರಿಸಲು ನಿರ್ಧರಿಸಿದೆ. ರಘು ಅವರ ಪೂರ್ಣ ಸಹಕಾರ ಮತ್ತೆ ಗೆಳೆಯ ಜೆ.ಸು.ನಾ. ಅವರ ಉಸ್ತುವಾರಿಯಲ್ಲಿ ‘ಸೂರ್ಯ’ ಚಿತ್ರ ನಿರ್ಮಾಣ ನಡೆಯಿತು.
‘ಸೂರ್ಯ’ ಸಿನಿಮಾದ ನಾಯಕಿ ಪಾತ್ರದಲ್ಲಿ ಹಿಂದಿ ಸಿನಿಮಾರಂಗದಲ್ಲಿ ಹೆಸರು ಮಾಡಿದ ರೋಹಿಣಿ ಹಟ್ಟಂಗಡಿಯವರು ಅಭಿನಯಿಸಿದ್ದು ಹೆಸರಿಸಬೇಕಾದ ವಿಶೇಷ ವಿಷಯ. ಅದೇ ತಾನೆ ಅವರು ಕಸ್ತೂರ್ಬಾ ಪಾತ್ರದಲ್ಲಿ ಅಭಿನಯಿಸಿದ ‘ಗಾಂಧಿ’ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಬಂದಿತ್ತು. ನಾನು ರೋಹಿಣಿ ಹಟ್ಟಂಗಡಿಯವರನ್ನು ಸಂಪರ್ಕಿಸಿದಾಗ, ನಾನು ಮೂಲತಃ ಸಾಹಿತಿ ಮತ್ತು ಕನ್ನಡ ಪ್ರಾಧ್ಯಾಪಕ ಎಂದು ತಿಳಿದು ಸಂತೋಷದಿಂದ ಒಪ್ಪಿಕೊಂಡರು. ಅವರ ಪತಿ ಕರ್ನಾಟಕದ ‘ಹಟ್ಟಂಗಡಿ’ಯವರು. ಆದರೆ ಕನ್ನಡದ ಸಂಪರ್ಕ ಕಡಿಮೆ. ಹೀಗಾಗಿ ಅವರಿಗೆ ಕನ್ನಡ ಸಂಭಾಷಣೆಗಳನ್ನು ಹಿಂದಿ ಲಿಪಿಯಲ್ಲಿ ಬರೆದು ಚಿತ್ರೀಕರಣಕ್ಕೆ ಮೊದಲೇ ಕಳಿಸಲು ನಿರ್ಧರಿಸಿದೆ. ಹಿಂದಿ ಲಿಪಿಯಲ್ಲಿ ಕನ್ನಡ ಸಂಭಾಷಣೆಯನ್ನು ಬರೆದುಕೊಟ್ಟಿದ್ದು ನನ್ನ ಪತ್ನಿ ರಾಜಲಕ್ಷ್ಮಿ. ರಾಜಲಕ್ಷ್ಮಿಗೆ ಹಿಂದಿ ಓದಲು, ಬರೆಯಲು ಚೆನ್ನಾಗಿ ಬರುತ್ತಿತ್ತು. ಇಡೀ ಚಿತ್ರದ ರೋಹಿಣಿಯವರ ಸಂಭಾಷಣೆ ಗಳನ್ನು ರಾಜಲಕ್ಷ್ಮಿ ಹಿಂದಿಯಲ್ಲಿ ಬರೆದುಕೊಟ್ಟ ಮೇಲೆ ಅವರಿಗೆ ಕಳಿಸಿದೆ. ರಾಜಲಕ್ಷ್ಮಿ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು. ನನ್ನ ನಿರ್ದೇಶನದ ಅನೇಕ ಚಿತ್ರಗಳಿಗೆ ವಸ್ತç ವಿನ್ಯಾಸ ಮಾಡಿದ್ದು ರಾಜಲಕ್ಷ್ಮಿ.
‘ಸೂರ್ಯ’ ಚಿತ್ರದಲ್ಲಿ ಪ್ರಸಿದ್ಧ ಕಲಾವಿದರಾದ ಲೋಕೇಶ್, ಮಾನು, ಪ್ರಮೀಳಾ ಜೋಷಾಯ್ ಮುಂತಾದವರು ಅಭಿನಯಿಸಿದ್ದರು. ಈ ವೇಳೆಗೆ ಆತ್ಮೀಯರಾಗಿದ್ದ ಮೈಲಾರಿರಾವ್ ಎಂಬ ರಂಗಾಸಕ್ತರು ‘ಒಂದು ಊರಿನ ಕತೆ’ಯಿಂದ ಆರಂಭಿಸಿ ಅವರು ಇರುವವರೆಗೂ ನನ್ನ ಚಿತ್ರಗಳಲ್ಲಿ ಒಂದಲ್ಲ ಒಂದು ಪಾತ್ರವನ್ನು ಮಾಡಿದ್ದರು. ಇವರ ಪರಿಚಯ ಪ್ರಸಂಗವೂ ಒಂದು ಆಸಕ್ತಿದಾಯಕ ಸಂಗತಿ. ಇವರು ಪಾತ್ರ ಮಾಡಿದ್ದ ಕೆಲವು ಸ್ಥಿರ ಚಿತ್ರಗಳನ್ನು ನಾನು ನೋಡಿದ್ದೆ. 1978ರಲ್ಲಿ ನಿರ್ದೇಶಿಸಿದ ‘ಒಂದು ಊರಿನ ಕತೆ’ಯ ಜೋಯಿಸರ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೆ. ಈ ಮುಂಚೆಯೇ ಸುಂದರನಾಥ ಸುವರ್ಣ ಅವರಿಗೆ ಇವರು ಪರಿಚಯವಿದ್ದರು. ಅವರ ಮೂಲಕ ನನ್ನನ್ನು ಭೇಟಿಯಾಗಲು ತಿಳಿಸಿದೆ. ಶ್ರೀ ಮೈಲಾರಿರಾವ್ ಮನೆಗೆ ಬಂದರು. ಬೆಲ್ ಮಾಡಿದರು. ನಾನು ಬಾಗಿಲು ತೆಗೆದೆ. ನೆಟ್ ಬನೀನು ಧರಿಸಿದ್ದ ನನ್ನನ್ನು ನೋಡಿ ‘ಬರಗೂರು ರಾಮಚಂದ್ರಪ್ಪ ಅವರನ್ನು ನೋಡಬೇಕಿತ್ತು’ ಎಂದರು. ‘ಬನ್ನಿ ಕೂತ್ಕೊಳ್ಳಿ’ ಎಂದು ಒಳಗೆ ಕರೆದು ಕೂಡಿಸಿ, ನಾನು ಒಳಗೆ ಹೋದೆ; ಷರಟು ಹಾಕಿ ಕೊಂಡು ಬಂದು ಕೂತು ‘ಹೇಳಿ’ ಎಂದೆ. ಅವರು ‘ಅದೇ ಬರಗೂರು ರಾಮಚಂದ್ರಪ್ಪ ನವರನ್ನು ಕಾಣಬೇಕಿತ್ತು. ಅವರಿಲ್ಲವಾ?’ ಎಂದು ಮತ್ತೆ ಕೇಳಿದರು. ನನ್ನನ್ನು ಅವರು ಮುಂಚೆ ನೋಡಿರಲಿಲ್ಲ. ಆಗ ಪತ್ರಿಕೆಗಳಲ್ಲಿ – ಈಗಿನಂತೆ – ನನ್ನ ಫೋಟೋ ಕೂಡ ಬಂದಿರಲಿಲ್ಲ. ನಾನು ನಸುನಗುತ್ತಾ ‘ಅವರನ್ನ ಕಾಣಬೇಕೆ? ಅದೇನು ಹೇಳಿ’ ಎಂದೆ. ‘ಅದೇ ಅವರು…’ ಎನ್ನುತ್ತಿದ್ದ ಅವರ ಮಾತನ್ನ ತಡೆದು ‘ಅವರು, ನಾನೇ. ನಾನೇ ಬರಗೂರು ರಾಮಚಂದ್ರಪ್ಪ’ ಎಂದೆ. ಅವರು ತಬ್ಬಿಬ್ಬು. ಆಮೇಲೆ ಮಾತು ಮುಂದು ವರೆಯಿತು. ನನ್ನ ಮೊದಲ ಸಿನಿಮಾದ ಜೋಯಿಸರಾದರು! ‘ಬೆಂಕಿ’ ಮತ್ತು ‘ಸೂರ್ಯ’ ದಲ್ಲೂ ಪಾತ್ರ ಮಾಡಿದರು.
‘ಸೂರ್ಯ’ ಚಿತ್ರೀಕರಣದಲ್ಲಿ ರೋಹಿಣಿ ಹಟ್ಟಂಗಡಿಯವರನ್ನು ಒಳಗೊಂಡಂತೆ ಪ್ರಸಿದ್ಧ ಕಲಾವಿದರಾದ ಲೋಕೇಶ್, ಮಾನು, ಪ್ರಮೀಳಾ ಜೋಷಾಯ್, ಛಾಯಾಗ್ರಾಹಕ ಎಸ್.ಆರ್. ಭಟ್, ಸಹ ನಿರ್ದೇಶಕರಾಗಿದ್ದ ಪರಮೇಶ ಕಾರ್ತಿಕ್ ಮತ್ತು ಲಿಂಗರಾಜ ಕಗ್ಗಲ್ ತಮ್ಮದೇ ಸ್ವಂತ ಸಿನಿಮಾ ಎಂಬಂತೆ ಸಹಕರಿಸಿದರು. ಈಗ ಪರಮೇಶ್ ಕಾರ್ತಿಕ್ ಮತ್ತು ಲಿಂಗರಾಜ ಕಗ್ಗಲ್ ಇಬ್ಬರೂ ಇಲ್ಲ. ಲೋಕೇಶ್, ಮಾನು ಕೂಡ ಅಗಲಿ ಹೋದರು. ಮಾನು ಮೂಲತಃ ಕನ್ನಡ ಅಧ್ಯಾಪಕರಾಗಿ ನನಗೆ ಪರಿಚಿತರು. ಆತ್ಮೀಯರು. ಲೋಕೇಶ್ ಅವರು ನಮ್ಮ ತಂಡಕ್ಕೆ ಹೊಸಬರು. ಆದರೆ ಒಮ್ಮೊಮ್ಮೆ ಅವರೇ ವಿಶೇಷ ಅಡುಗೆ ಮಾಡಿ ತಂಡಕ್ಕೆ ಬಡಿಸುವಷ್ಟು ಸಹಕಾರಿಯಾದರು. ಅವರೊಬ್ಬ ಅಪರೂಪದ ಕಲಾವಿದರು.
ಈಗ ‘ಭಾರತೀಯ ಪನೋರಮ’ ಪ್ರಸಂಗಕ್ಕೆ ಬರುತ್ತೇನೆ. ಭಾರತ ಸರ್ಕಾರವು ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವ್ಯವಸ್ಥೆ ಮಾಡುತ್ತದೆ. ಮೊದಲು ಪ್ರತಿ ವರ್ಷವೂ ಒಂದೊಂದು ರಾಜ್ಯದ ಆತಿಥ್ಯದಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು. ಕೆಲ ವರ್ಷಗಳಿಂದ ಗೋವಾ, ಭಾರತ ಸರ್ಕಾರ ನಡೆಸುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಖಾಯಂ ಸ್ಥಳವಾಗಿದೆ. ದೇಶ-ವಿದೇಶದ ಆಯ್ದ ಚಲನಚಿತ್ರಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ; ಅಂತೆಯೇ ಭಾರತೀಯ ಚಿತ್ರಗಳಿಗಾಗಿಯೇ ‘ಭಾರತೀಯ ಪನೋರಮ’ ಎಂಬ ಪ್ರತ್ಯೇಕ ವಿಭಾಗವೂ ಇರುತ್ತದೆ. ಈ ವಿಭಾಗಕ್ಕೆ ಭಾರತೀಯ ಭಾಷೆಗಳ ಚಿತ್ರಗಳು ಪ್ರದರ್ಶನಕ್ಕಾಗಿ ಸ್ಪರ್ಧಿಸಬಹುದು. ಆಯ್ಕೆ ಸಮಿತಿಯು ನಿರ್ದಿಷ್ಟ ಸಂಖ್ಯೆಯ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆ ಸಮಿತಿಯಲ್ಲಿ ಕನ್ನಡವನ್ನೂ ಒಳಗೊಂಡಂತೆ ವಿವಿಧ ಭಾಷೆಗಳ – ವಿಶೇಷವಾಗಿ ಹೆಚ್ಚು ಸಿನಿಮಾ ನಿರ್ಮಾಣದ ರಾಜ್ಯಗಳ – ಪ್ರತಿನಿಧಿಗಳು ಇರುತ್ತಾರೆ.
ನಮ್ಮ ‘ಸೂರ್ಯ’ ಸಿನಿಮಾ ‘ಭಾರತೀಯ ಪನೋರಮ’ಕ್ಕಾಗಿ ಸ್ಪರ್ಧಿಸಿತ್ತು. ಇದು ಪ್ರಶಸ್ತಿಯ ಸ್ಪರ್ಧೆ ಅಲ್ಲ; ಪ್ರದರ್ಶನಕ್ಕಾಗಿ ಸ್ಪರ್ಧೆ, ಅಷ್ಟೆ. ಒಂದು ದಿನ ನಾನು, ಸಂಕಲನಕಾರ ಸುರೇಶ್ ಅರಸು, ಛಾಯಾಗ್ರಾಹಕ ಎಸ್.ಆರ್. ಭಟ್ ಮಾತಾಡುತ್ತಾ ಕೂತಿದ್ದೆವು. ಸುರೇಶ್ ಅರಸು ಅವರು ಸಂಕಲನ ಕಚೇರಿಯಲ್ಲಿ ನಮ್ಮ ಮಾತುಕತೆ. ಸುರೇಶ್ ಅರಸು ಅವರಿಗೆ ಅವರ ಆತ್ಮೀಯರೊಬ್ಬರಿಂದ ಫೋನ್ ಬಂತು. ಫೋನ್ನಲ್ಲಿ ಮಾತಾಡಿದ ಸುರೇಶ್, ಖುಷಿಯಾಗಿ ನನ್ನ ಕೈಕುಲುಕಿದರು. ನಾನು ಕುತೂಹಲದಿಂದ ನೋಡಿದೆ. ‘ಬಾಂಬೆಯ ನನ್ನ ಆತ್ಮೀಯರೊಬ್ಬರ ಫೋನ್ ಸಾರ್ ಇದು. ಇನ್ನೇನು ಪನೋರಮ ಚಿತ್ರಗಳ ಪಟ್ಟಿ ಪ್ರಕಟಿಸ್ತಾರಂತೆ. ನಮ್ಮ ‘ಸೂರ್ಯ’ ಸೆಲೆಕ್ಟ್ ಆಗಿದೆಯಂತೆ’ ಎಂದರು. ನನಗೆ, ಎಸ್.ಆರ್. ಭಟ್ಟರಿಗೆ ಖುಷಿಯೋ ಖುಷಿ. ನಾನು ಸುರೇಶ್ ಮತ್ತು ಎಸ್.ಆರ್. ಭಟ್ ಅವರನ್ನು ಹತ್ತಿರದ ಹೋಟೆಲ್ಗೆ ಕರೆದುಕೊಂಡು ಹೋಗಿ ಸಿಹಿ ತಿಂಡಿ ಕೊಡಿಸಿದೆ. ಮಾರನೇ ದಿನ ಪತ್ರಿಕೆಗಳನ್ನು ನೋಡಿದಾಗ ‘ಸೂರ್ಯ’ ಸಿನಿಮಾದ ಹೆಸರೇ ಇರಲಿಲ್ಲ. ಯಾಕೆಂದರೆ ಆಯ್ಕೆಯಾಗಿರಲಿಲ್ಲ. ಸುರೇಶ್ ತನ್ನ ಆತ್ಮೀಯರಿಗೆ ಫೋನಾಯಿಸಿದಾಗ ‘ನನಗೂ ಗೊತ್ತಾಗ್ತಿಲ್ಲ. ಕೊನೇ ಗಳಿಗೆ ರಾಜಕೀಯ ಇರಬಹುದು. ಇಷ್ಟೇ ಸಿನಿಮಾ ಸೆಲೆಕ್ಟ್ ಮಾಡ್ಬೇಕು ಅಂತಿರೋದ್ರಿಂದ ಬೇರೆ ಯಾವುದನ್ನೋ ಸೇರಿಸಲು ನಿಮ್ಮ ಸಿನಿಮಾ ಬಿಟ್ಟಿರಬಹುದು’ ಎಂದರಂತೆ. ಯಾವುದು ನಿಜವೋ ಗೊತ್ತಿಲ್ಲ. ಸುರೇಶ್ ಅವರ ಆತ್ಮೀಯರ ಮಾಹಿತಿಯೇ ತಪ್ಪಾಗಿರಬಹುದು ಅಥವಾ ಕೊನೇ ಗಳಿಗೆಯ ಚಮತ್ಕಾರವೂ ಇರಬಹುದು. ಏಕಪಕ್ಷೀಯ ನಿರ್ಧಾರ ಮಾಡಲಾರೆ. ನಿರಾಸೆಯಾದದ್ದು ನಿಜವಾದರೂ ಸ್ಪರ್ಧೆಯ ಫಲಿತಾಂಶಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ತಪ್ಪು ಮಾಡಿದ್ದರೆ ಪ್ರಶ್ನಿಸಬೇಕು. ಇದು ನನ್ನ ನಿಲುವು. ಈ ಪ್ರಕರಣದಲ್ಲಿ ನಿಯಮಗಳ ಉಲ್ಲಂಘನೆ ಆಗಿರುವುದಕ್ಕೆ ಆಧಾರವಿರಲಿಲ್ಲ. ಆದರೆ ಆಯ್ಕೆಯ ಅಧಿಕಾರ ಬಳಸಿ ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡಲಾಗಿತ್ತು. ನಮ್ಮ ‘ಸೂರ್ಯ’ ಸಿನಿಮಾ ಆಯ್ಕೆ ಆಗದಿದ್ದರೆ ಹೋಗಲಿ ‘ಕನ್ನಡದ ಯಾವ ಸಿನಿಮಾನೂ ಪನೋರಮ ಆಯ್ಕೆಗೆ ಅರ್ಹವಲ್ಲ’ ಎಂದು ಷರಾ ಬರೆಯಲಾಗಿತ್ತು! ಅರ್ಥಾತ್ ಕನ್ನಡದ ಯಾವೊಂದು ಸಿನಿಮಾವನ್ನೂ ಆಯ್ಕೆ ಮಾಡಿರಲಿಲ್ಲ. ಹಾಗಾದರೆ ಕನ್ನಡ ಸಿನಿಮಾರಂಗದಲ್ಲಿ ಆ ವರ್ಷ ಪನೋರಮ ಪ್ರದರ್ಶನಕ್ಕೆ ಅರ್ಹವಾದ ಒಂದೇ ಒಂದು ಸಿನಿಮಾನೂ ಇರಲಿಲ್ಲವೆ? ಕನ್ನಡದ ಪ್ರಸಿದ್ಧ ನಿರ್ದೇಶಕರೊಬ್ಬರು ಆಯ್ಕೆ ಸಮಿತಿಯಲ್ಲಿ ಇದ್ದರು. ಒಟ್ಟಿನಲ್ಲಿ ಬೇರೆ ಭಾಷೆಗಳ ತಲಾ ಎರಡು, ಮೂರು, ನಾಲ್ಕು ಸಿನಿಮಾಗಳು ಆಯ್ಕೆಯಾದರೂ ಕನ್ನಡಕ್ಕೆ ಮಾತ್ರ ಜಾಗವಿಲ್ಲ! ಶ್ರೇಷ್ಠತೆಯ ಮಾನದಂಡವೆಂದರೆ ‘ಅನ್ಯಾಯ’ವೆ?
ನಮ್ಮ ‘ಸೂರ್ಯ’ ಸಿನಿಮಾ ‘ಭಾರತೀಯ ಪನೋರಮ’ಕ್ಕೆ ಆಯ್ಕೆ ಆಗಲಿಲ್ಲ ಎನ್ನುವುದು ಒಂದು ಸತ್ಯವಾದರೆ, ನಾನು ಅರ್ಜಿ ಹಾಕದೆಯೂ, ಸೋವಿಯತ್ ರಷ್ಯಾದ ಪ್ರತಿಷ್ಠಿತ ‘ಮಾಸ್ಕೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದದ್ದು ಇನ್ನೊಂದು ಸತ್ಯ! ಅದು ಆದದ್ದು ಹೀಗೆ : ಒಂದು ದಿನ ನನಗೆ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಟೆಲಿಗ್ರಾಂ ಬಂತು. (ಆಗ ಇ-ಮೇಲ್ ಇರಲಿಲ್ಲ). ಅದರಲ್ಲಿ ನಮ್ಮ ‘ಸೂರ್ಯ’ ಚಿತ್ರವನ್ನು ‘ಮಾಸ್ಕೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋವಿಯತ್ ರಷ್ಯಾ ನಿಯೋಗ ಆಯ್ಕೆ ಮಾಡಿಕೊಂಡಿದೆಯೆಂದು ತಿಳಿಸಿ ಶುಭ ಕೋರಲಾಗಿತ್ತು. ನನ್ನ ಆನಂದ ಉಕ್ಕಿತಾದರೂ ಇದರ ಸತ್ಯಾಸತ್ಯತೆ ತಿಳಿಯಲು ಭಾರತ ಸರ್ಕಾರದ ವಾರ್ತಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದೆ. ಒಂದು ವೇಳೆ ಇದೂ ಸುಳ್ಳಾಗಬಾರದಲ್ಲ? ಅವರು ಆಯ್ಕೆಯನ್ನು ಖಚಿತಪಡಿಸಿದರು. ಮಾಸ್ಕೊ ಚಿತ್ರೋತ್ಸವಕ್ಕೆ ಅರ್ಜಿಯನ್ನೇ ಹಾಕಿಲ್ಲ; ಆಯ್ಕೆ ಹೇಗೆ ಸಾಧ್ಯ ಎಂದು ಕೇಳಿದೆ. ಅವರು ವಿವರಿಸಿದ್ದು ಹೀಗೆ : ಸೋವಿಯತ್ ರಷ್ಯಾದಿಂದ ಒಂದು ಚಲನಚಿತ್ರ ನಿಯೋಗ ದೆಹಲಿಗೆ ಬಂದಿತ್ತು. ಭಾರತದ ಒಂದಷ್ಟು ಸಿನಿಮಾಗಳನ್ನು ತೋರಿಸಿ ಎಂದು ಕೇಳಿದರು. ಆಗ ದೆಹಲಿಯಲ್ಲಿ ಭಾರತೀಯ ಪನೋರಮ ಸ್ಪರ್ಧೆಗೆ ಹೋಗಿದ್ದ ಸಿನಿಮಾಗಳ ಪ್ರಿಂಟ್ಗಳಿದ್ದವು. ಅವುಗಳಲ್ಲಿ ಕೆಲವನ್ನು ನಿಯೋಗಕ್ಕೆ ತೋರಿಸಿದರು. ಆ ನಿಯೋಗದವರು ನಮ್ಮ ‘ಸೂರ್ಯ’ ಸಿನಿಮಾವನ್ನು ಆಯ್ಕೆ ಮಾಡಿಕೊಂಡರು. ‘ಸೂರ್ಯ’ ಸಿನಿಮಾ ನಮ್ಮ ದೇಶದಿಂದ ಮಾಸ್ಕೊ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಕೊಂಡ ಏಕೈಕ ಚಿತ್ರವಾಗಿತ್ತು! ಅರ್ಥಾತ್ ನಮ್ಮ ದೇಶವನ್ನು ಪ್ರತಿನಿಧಿಸಿತ್ತು – ಇದಿಷ್ಟು ಅಧಿಕಾರಿ ನೀಡಿದ ವಿವರ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ನಾವು ಮೊದಲು ಅರ್ಜಿ ಸಲ್ಲಿಸಬೇಕು. ಆನಂತರ ಆಯಾ ದೇಶದ ಆಯ್ಕೆ ಸಮಿತಿಯವರು ಸಿನಿಮಾಗಳನ್ನು ವೀಕ್ಷಿಸಿ ಅವರಿಗೆ ಅತ್ಯುತ್ತಮ ಅನ್ನಿಸಿದವುಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ‘ಸೂರ್ಯ’ ವಿಷಯದಲ್ಲಿ ಹೀಗಾಗಲಿಲ್ಲ. ‘ಸೂರ್ಯ’ ಚಿತ್ರ ಆಯ್ಕೆಯಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನು ನಿರ್ದೇಶಕ ಎನ್. ಲಕ್ಷ್ಮಿನಾರಾಯಣ ಅವರಿಗೆ ವಿವರಗಳನ್ನು ತಿಳಿಸಿದೆ. ಅವರು ‘ಬಹುಶಃ ನಿಯೋಗಕ್ಕೆ ಅಯ್ಕೆಯ ಅಧಿಕಾರ ನೀಡಿರಬಹುದು. ಇಲ್ಲದಿದ್ದರೆ ಅವರು ಹಾಗೆಲ್ಲ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ದೇಶದ ನಿಯಮದಲ್ಲೇ ಇಂಥದೊಂದು ಅವಕಾಶ ಕಲ್ಪಿಸಿರುತ್ತಾರೆ’ ಎಂದರು. ನನಗೆ ಆಗ ಸಮಾಧಾನವಾಯಿತು.
ಈಗ ಅರ್ಥ ಮಾಡಿಕೊಳ್ಳಬಹುದು; ಸೋವಿಯತ್ ರಷ್ಯಾ ನಿಯೋಗ ಆಯ್ಕೆ ಮಾಡುತ್ತೆ. ಪನೋರಮ ಆಯ್ಕೆ ಸಮಿತಿ ನಿರಾಕರಿಸುತ್ತೆ! ಇಂಥ ವಿಪರ್ಯಾಸಗಳ ನಡುವೆಯೇ ಸಾಧನೆಯ ಹಾದಿಯಲ್ಲಿ ಸಾಗಬೇಕಾಗುತ್ತೆ!
ಮುಂದೆ ಕರ್ನಾಟಕ ರಾಜ್ಯ ಸರ್ಕಾರದ ಆಯ್ಕೆ ಸಮಿತಿಯು ಎರಡನೇ ಅತ್ಯುತ್ತಮ ಚಿತ್ರವೆಂದು ‘ಸೂರ್ಯ’ ಚಿತ್ರವನ್ನು ಆಯ್ಕೆ ಮಾಡಿತು. ಜೊತೆಗೆ ಎರಡನೇ ಅತ್ಯುತ್ತಮ ನಿರ್ದೇಶನಕ್ಕಾಗಿ ನನಗೆ, ಅತ್ಯುತ್ತಮ ಛಾಯಾಗ್ರಾಹಕರಾಗಿ ಎಸ್.ಆರ್. ಭಟ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು.
‘ಸೂರ್ಯ’ದ ನಂತರ ಮಾಡಿದ ‘ಕೋಟೆ’ ಚಿತ್ರ ಪ್ರಶಸ್ತಿ ವಿಷಯದಲ್ಲೂ ಇಂಥ ದೊಂದು ಸುದ್ದಿ ಹಬ್ಬಿ ಮಾರನೇ ದಿನ ಸುಳ್ಳಾಗಿತ್ತು. ‘ಕೋಟೆ’ ಚಿತ್ರದ ನಿರ್ಮಾಪಕರು ಬೆಂಗಳೂರು ಸಮೀಪದ ಸಿಂಗನಾಯಕನಹಳ್ಳಿಯ ಶ್ರೀ ನಾಗರಾಜರೆಡ್ಡಿ. ಇವರನ್ನು ವಿಶೇಷವಾಗಿ ಹೆಸರಿಸಲು ಕಾರಣವಿದೆ. ‘ಕೋಟೆ’ ಸಂಭಾಷಣೆಯಿಲ್ಲದ, ಹಿನ್ನೆಲೆಯ ಹಾಡುಗಳ ಮೂಲಕವೇ ರೂಪಿತವಾದ ಸಿನಿಮಾ. ಪಾತ್ರಗಳು ಮಾತಾಡುವುದಿಲ್ಲ; ಹಾಡುಗಳನ್ನೂ ಹೇಳುವುದಿಲ್ಲ. ನಿರೂಪಣೆಯ ಮಾಧ್ಯಮವಾಗಿ ಹಿನ್ನೆಲೆಯಲ್ಲಿ ಹಾಡು ಗಳನ್ನು ಬಳಸಲಾಗಿದೆ. ಇಂಥದೊಂದು ಹೊಸ ಪ್ರಯೋಗಕ್ಕೆ ಹಣ ತೊಡಗಿಸಿದ್ದರಿಂದ ನಿರ್ಮಾಪಕರ ಅಭಿರುಚಿಯನ್ನು ಮೆಚ್ಚಬೇಕು. ಈ ಚಿತ್ರ ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಿದಾಗ, ಫಲಿತಾಂಶಕ್ಕೆ ಹಿಂದಿನ ದಿನ ಆಯ್ಕೆ ಸಮಿತಿ ಅಧ್ಯಕ್ಷರ ಆಪ್ತರೊಬ್ಬರು ನನ್ನ ಆಪ್ತರಿಗೆ ಸಿನಿಮಾಕ್ಕೊಂದು ಪ್ರಶಸ್ತಿ ಮತ್ತು ಚಿತ್ರದ ನಾಯಕಿ ತಾರಾ ಅವರಿಗೆ ಅತ್ಯುತ್ತಮ ಪ್ರಶಸ್ತಿ ಗ್ಯಾರಂಟಿಯಾಗಿದೆ ಎಂದು ಹೇಳಿದ್ದರು. ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ಎರಡೂ ಪ್ರಶಸ್ತಿ ಇರಲಿಲ್ಲ. ನನಗೆ ಅತ್ಯುತ್ತಮ ಗೀತರಚನಕಾರ ಪ್ರಶಸ್ತಿ ಬಂದಿತ್ತು. ಸಿನಿಮಾವೊಂದರ ಹೊಸ ನಿರೂಪಣಾ ಶೈಲಿಗೆ ಮನ್ನಣೆ ಸಿಕ್ಕಿರಲಿಲ್ಲ. ಅದು ಇರಲಿ; ವದಂತಿಗಳನ್ನು ನೈಜ ಸುದ್ದಿಗಳೆಂದು ನಂಬಬಾರದೆಂಬ ಪಾಠವನ್ನು ಮತ್ತೊಮ್ಮೆ ನಾನು ಕಲಿತೆ. ಆದರೂ ‘ಕೋಟೆ’ ಚಿತ್ರದಲ್ಲಿನ ಪಾತ್ರಕ್ಕಾಗಿ ತಾರಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಅರ್ಹರಾಗಿದ್ದ ರೆಂದೇ ನನ್ನ ಅಭಿಪ್ರಾಯ. ‘ಬೆಂಕಿ’ ಚಿತ್ರದ ನಾಯಕಿ ಪಾತ್ರಕ್ಕೂ ಅತ್ಯುತ್ತಮ ನಟಿ ಪ್ರಶಸ್ತಿ ಬರಬೇಕಿತ್ತೆಂಬುದು ಕೂಡ ನನ್ನ ಅಭಿಪ್ರಾಯ. ಆದರೆ ನನ್ನ ಅಭಿಪ್ರಾಯವೇ ಆಯ್ಕೆ ಸಮಿತಿಯವರ ಅಭಿಪ್ರಾಯ ಆಗಿರಬೇಕಿಲ್ಲವಲ್ಲ? ನಾನೂ ಅನೇಕ ಆಯ್ಕೆ ಸಮಿತಿಗಳಲ್ಲಿ ಇದ್ದದ್ದರಿಂದ ಈ ಅರಿವು ನನಗಿದೆ. ಇಷ್ಟಾಗಿಯೂ ‘ಕೋಟೆ’ ಚಿತ್ರವು ಒಂದು ‘ವಿಶೇಷ ಮೆಚ್ಚುಗೆ’ಗಾದರೂ ಅರ್ಹವಾಗಿತ್ತೆಂಬ ನಂಬಿಕೆಯೂ ನನಗಿದೆ. ಇರಲಿ ಬಿಡಿ, ಹೊಸ ಪ್ರಯೋಗ ಮಾಡಿದ್ದಷ್ಟೇ ಸಂತೋಷವೆಂದುಕೊಂಡು ಸುಮ್ಮನಾದೆ.
‘ಕೋಟೆ’ ಚಿತ್ರದ ಮೂಲಕ ಸುಂದರರಾಜ್ ಅವರು ನಮ್ಮ ತಂಡವನ್ನು ಪ್ರವೇಶಿಸಿದ್ದರು. ಎಂದಿನಂತೆ ಮಾನು, ಮೈಲಾರಿರಾವ್, ಪ್ರಮೀಳಾ ಜೋಷಾಯ್ ಮುಂತಾದವರು ಈ ಚಿತ್ರದಲ್ಲಿದ್ದರು. ಮಧುಗಿರಿಯ ಆಸುಪಾಸಿನ ಹಳ್ಳಿ, ಬೆಟ್ಟಗುಡ್ಡಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರೀಕರಣದ ಸ್ಥಳಗಳೆಲ್ಲ ನನ್ನ ಪತ್ನಿಯ ಊರು ಸಿದ್ದನಹಳ್ಳಿಗೆ ಸಮೀಪದಲ್ಲಿದ್ದವು. ಈ ಚಿತ್ರಕ್ಕೆ ರಘು ಐ.ಡಿ.ಹಳ್ಳಿ, ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ‘ಕೋಟೆ’ ಚಿತ್ರವು ತಾರಾ ಅವರು ಅಭಿನಯಿಸಿದ ಮೊದಲ ‘ಕಲಾತ್ಮಕ’ ಚಿತ್ರ. ಈ ವಿಷಯವನ್ನು ತಾರಾ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ಸಂಗೀತ ನಿರ್ದೇಶನ ನೀಡಿದ್ದು ಒಂದು ವಿಶೇಷವಾಗಿತ್ತು.
‘ಕೋಟೆ’ಯ ನಂತರ ನಾನು ನಿರ್ದೇಶಿಸಿದ ‘ಕರಡಿಪುರ’ದ ಕಷ್ಟ ಹೇಳಲೇಬೇಕು. ಈ ಚಿತ್ರಕ್ಕೆ ನನ್ನ ಪತ್ನಿಯು ಅನಿವಾರ್ಯವಾಗಿ ನಿರ್ಮಾಪಕಿಯಾಗಬೇಕಾಯಿತು. ಆರಂಭಿಕ ಹಣ ಕೊಟ್ಟವರು ಈಗ ರಾಜಕೀಯ ನಾಯಕರಾಗಿರುವ ಶ್ರೀ ಬಾಲಚಂದರ್ ಜಾರಕಿಹೊಳಿಯವರು. ಇವರ ಪರಿಚಯ ನನಗಿರಲಿಲ್ಲ. ಬೆಂಗಳೂರಿನ ಗಾಂಧಿನಗರದಲ್ಲಿ ಅವರು ಸಿನಿಮಾ ಫೈನಾನ್ಸ್ಗೆ ಸಂಬಂಧಿಸಿದ ಕಚೇರಿಯನ್ನು ಆರಂಭಿಸಿ ಅನೇಕ ಸಿನಿಮಾಗಳ ಹಿಂದಿನ ಆರ್ಥಿಕ ಶಕ್ತಿಯಾಗಿದ್ದರು. ಒಂದು ದಿನ ನನ್ನ ಸಾಹಿತಿ ಮಿತ್ರ ಸರಜುಕಾಟಕರ ಅವರು ಬೆಳಗಾವಿಯಿಂದ ಫೋನ್ ಮಾಡಿ ‘ಬಾಲಚಂದರ್ ಜಾರಕಿ ಹೊಳಿಯವರಿಗೆ ಒಂದು ಸಿನಿಮಾ ಮಾಡುವ ಅಪೇಕ್ಷೆಯಿದೆ. ನಿಮ್ಮಿಂದಲೇ ನಿರ್ದೇಶನ ಮಾಡಿಸುವ ಇಚ್ಚೆ ಅವರದು. ಭೇಟಿಯಾಗಬೇಕಂತೆ’ ಎಂದು ಹೇಳಿದರು. ಸರಜುಕಾಟಕರ ಅವರ ಒತ್ತಾಸೆಯಂತೆ ಬಾಲಚಂದರ್ ಜಾರಕಿಹೊಳಿ ಮತ್ತು ನನ್ನ ಭೇಟಿಯಾಯಿತು. ಅವರು ನನ್ನ ಬಗ್ಗೆ ಅಪಾರ ಗೌರವ ತೋರಿಸಿದರು. ಸರಿ, ‘ಕರಡಿಪುರ’ ಎಂಬ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಮಾತುಕತೆಯಾಯಿತು. ನನ್ನದೇ ಕತೆ, ಚಿತ್ರಕತೆ, ಸಂಭಾಷಣೆ ಇತ್ಯಾದಿ. ಸ್ವಲ್ಪ ದಿನಗಳ ನಂತರ ‘ನಾನು ಹಣ ಹಾಕುತ್ತೇನೆ. ನೀವೇ ನಿರ್ಮಾಪಕರಾಗಿ’ ಎಂದರು. ಅದು ಎಲ್ಲಾ ಸಿದ್ಧತೆಗಳು ಮುಗಿದ ಸಂದರ್ಭ. ಹೀಗಾಗಿ ಒಪ್ಪಿ ನನ್ನ ಪತ್ನಿ ರಾಜಕ್ಷ್ಮಿ ಹೆಸರಿನಲ್ಲಿ ‘ಜನ ಚಿತ್ರಾಲಯ’ ಎಂಬ ನಿರ್ಮಾಣ ಸಂಸ್ಥೆಯನ್ನು ನೋಂದಾಯಿಸಿದೆ.
ಚಿತ್ರೀಕರಣ ಆರಂಭವಾಯಿತು. ಮಿತ್ರ ರಂಗಾರೆಡ್ಡಿ ಕೋಡಿರಾಂಪುರ ಅವರ ಊರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ. ಮಧುಗಿರಿಯಲ್ಲಿ ಒಂದು ದಿನ ಶೂಟಿಂಗ್ ಮಾಡಿ, ಜನರ ನೂಕು ನುಗ್ಗಲು ನಿಯಂತ್ರಿಸಲು ಕಷ್ಟವಾಗಿ ಸ್ಥಳಾಂತರ ಮಾಡಿದ್ದೂ ಉಂಟು. ಬಸ್ಮಂಗಿ ಬೆಟ್ಟದಲ್ಲಿ ಬುಡಕಟ್ಟು ಜನಾಂಗದ ಗುಡಿಸಲುಗಳ ಸೆಟ್ ಹಾಕಿದ್ದೆವು. ರಾಜಪ್ಪ ದಳವಾಯಿ ಕಲಾನಿರ್ದೇಶನದ ಕೆಲಸ ಮಾಡಿದರು. ತಾರಾ ಮತ್ತು ಕುಮಾರ್ ಗೋವಿಂದ್ ಮುಖ್ಯ ಪಾತ್ರಧಾರಿಗಳು. ಗೆಳೆಯ ಸುಂದರರಾಜ ಅರಸು ಅವರು ಈ ಚಿತ್ರದ ಮೂಲಕ ಸಿನಿಮಾ ಪ್ರವೇಶ ಮಾಡಿದರು. ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರು ಅಭಿನಯಿಸಿದ್ದರು. ಮಿತ್ರ ಮಾನು ಅವರದೂ ಒಂದು ಮುಖ್ಯ ಪಾತ್ರ. ಬಾಲಚಂದರ್ ಅವರ ಕಚೇರಿಗೆ ಹೋಗಿ ಆಗಾಗ್ಗೆ ಹಣ ತರಬೇಕಾಗುತ್ತಿತ್ತು. ಅಲ್ಲಿ ದೇಸಾಯಿ ಅಂತ ಮೇನೇಜರ್ ಇದ್ದು, ಆತನಿಂದ ಹಣ ಪಡೆಯಲು ಕೆಲವು ಸಾರಿ ಪತ್ನಿ ರಾಜಲಕ್ಷಿ ್ಮ ಮತ್ತು ನನ್ನ ಎರಡನೇ ಮಗ ಸ್ಫೂರ್ತಿ ಬರಗೂರ್ ಹೋಗುತ್ತಿದ್ದರು. ಚಿತ್ರೀಕರಣ ಸ್ಥಳಕ್ಕೆ ಹಣ ತಂದುಕೊಡುತ್ತಿದ್ದರು. ಈ ಚಿತ್ರಕ್ಕೂ ರಾಜಲಕ್ಷ್ಮಿಯದೇ ವಸ್ತ್ರ ವಿನ್ಯಾಸ.
ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ಇನ್ನೂ ಚಿಕ್ಕ ಬಾಲಕಿಯಾಗಿದ್ದ ಕಾಲವದು. ಆಕೆಗೊಂದು ಪಾತ್ರವಿತ್ತು. ಆಕೆ ಹುಡುಗನ ವೇಷ ತೊಟ್ಟು ಮೊದಲು ಪಾತ್ರ ಮಾಡಿದ್ದು ನಮ್ಮ ‘ಕರಡಿಪುರ’ ಚಿತ್ರದಲ್ಲಿ.
ಮಾನು ಅವರು ನಮ್ಮ ಚಿತ್ರೀಕರಣ ನಡೆಯುತ್ತಿರುವಾಗಲೇ ಬೆಂಗಳೂರಿಗೆ ಹೊರಟರು. ಶ್ರೀ ರಾಮಕೃಷ್ಣ ಹೆಗಡೆಯವರ ‘ನವನಿರ್ಮಾಣ ವೇದಿಕೆ’ಯ ಮೂಲಕ ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದರು. ನಾನು ‘ಆತುರ ಬೀಳಬೇಡಿ’ ಎಂದು ಮಾತು ಪ್ರಾರಂಭಿಸಿ ಸೈದ್ಧಾಂತಿಕ ರಾಜಕಾರಣದ ಬಗ್ಗೆ ವಿವರಿಸಿ ‘‘ಆನಂತರ ನಿರ್ಧಾರ ಮಾಡಿ, ಯಾರ ಜೊತೆ, ಯಾವ ಪಕ್ಷದ ಜೊತೆ ಹೋಗಬೇಕು ಅಂತ’’ ಎಂದು ಒತ್ತಾಯಿಸಿದೆ. ‘‘ಇದೊಂದು ಕಾರ್ಯಕ್ರಮ ಒಪ್ಪಿಕೊಂಡಿದ್ದೇನೆ ಮೇಷ್ಟೆç, ಮುಗಿಸಿ ರ್ತೇನೆ. ಆನಂತರ ನಿಮ್ಮ ಜೊತೆ ಚರ್ಚಿಸಿ ತೀರ್ಮಾನಿಸ್ತೇನೆ’ ಎಂದು ಹೇಳಿ ಹೊರಟರು. ಶಿವಮೊಗ್ಗದಲ್ಲಿ ನಡೆಯಬೇಕಿದ್ದ ನವ ನಿರ್ಮಾಣ ವೇದಿಕೆಯ ಕಾರ್ಯಕ್ರಮದ ವ್ಯವಸ್ಥೆಗಾಗಿ ರಾತ್ರಿ ಹೊತ್ತು ಕಾರಿನಲ್ಲಿ ಸಮಾಜವಾದಿ ಗೆಳೆಯ ರಮೇಶ್ ಬಂದಗದ್ದೆ ಜೊತೆ ಹೊರಟರು. ದುರಂತ! ಕಾರಿನ ಅಪಘಾತದಲ್ಲಿ ಮೃತಪಟ್ಟರು! ನಮ್ಮನ್ನು ಅಗಲಿದರು. ಸ್ವಲ್ಪ ಸಮಯ ಬದುಕಿದ್ದ ರಮೇಶ್ ಬಂದಗದ್ದೆಯವರೂ ಮಾನು ಅವರನ್ನು ಹಿಂಬಾಲಿಸಿದರು. ‘ಕರಡಿಪುರ’ದಲ್ಲಿ ಅವರು ಅಭಿನಯಿಸಿದ ಕೊನೆಯ ದೃಶ್ಯದಲ್ಲಿ (ಚಿತ್ರದ ಕೊನೆಯ ದೃಶ್ಯ ಅಲ್ಲ) ‘ಹೋಗ್ತೇನೆ ದೂರ ಹೋಗ್ತೇನೆ’ ಎಂಬ ಒಂದು ಸಂಭಾಷಣೆಯಿತ್ತು. ನಮ್ಮ ತಂಡದವರೆಲ್ಲ ಮಾನು ಸಾವಿನ ನಂತರ ಕಾಕತಾಳೀಯವಾಗಿ ಅದೇ ಸಂಭಾಷಣೆ ಯನ್ನು ನೆನಪಿಸಿಕೊಳ್ಳುತ್ತಿದ್ದರು. ಅಂತೂ ಮಾನು ಇಲ್ಲವಾದದ್ದು ಇಂದಿಗೂ ನನ್ನಲ್ಲಿ ನೋವು ಹುಟ್ಟಿಸುತ್ತದೆ.
‘ಕರಡಿಪುರ’ದ ಕಷ್ಟದ ಕತೆ ಮುಂದಿದೆ; ಓದಿ. ಸಿನಿಮಾ ಚಿತ್ರೀಕರಣ ಮುಗಿಯಿತು. ಸುರೇಶ್ ಅರಸ್ ಜೊತೆ ಕೂತು ಸಂಕಲನ ಮಾಡಿದ್ದೂ ಆಯಿತು. ಆ ವೇಳೆಗೆ ಬಾಲಚಂದರ್ ಅವರ ಮೇನೇಜರ್ ಹಣ ಕೊಡುವುದನ್ನು ನಿಲ್ಲಿಸಿದರು. ಅಲ್ಲೀವರೆಗೆ ಹತ್ತು ಲಕ್ಷ ಕೊಟ್ಟಿದ್ದರು. ಅದನ್ನು ಸಾಲ ಎಂದು ಪರಿಗಣಿಸಿದರು. ಸರಿ, ಮುಂದೆ ಸಾಗಲೇಬೇಕಿತ್ತು. ಕಂಠೀರವ ಸ್ಟುಡಿಯೊ ಆವರಣದಲ್ಲಿದ್ದ ಪ್ರಸಾದ್ ಸ್ಟುಡಿಯೋದಲ್ಲಿ ರೀ ರೆಕಾರ್ಡಿಂಗ್ಗೆ ದಿನಾಂಕ ನಿಗದಿ ಮಾಡಿದ್ದೆ. ಹಣ ಇಲ್ಲ. ಅಂಥ ಸಂದರ್ಭದಲ್ಲೇ ಶ್ರೀ ಹಂಸಲೇಖ ಅವರನ್ನು ಸಂಗೀತ ನಿರ್ದೇಶಕರಾಗಲು ಕೇಳಿಕೊಂಡಿದ್ದೆ. ಅವರ ಸಹಕಾರವನ್ನು ವಿಶೇಷವಾಗಿ ನಾನು ನೆನೆಯಲೇಬೇಕು. ‘ನಿಮ್ಮ ಸಂಭಾವನೆ ಎಷ್ಟು ಕೊಡಲಿ?’ ಎಂದು ಹಂಸಲೇಖ ಅವರನ್ನು ಕೇಳಿದೆ. ಅವರು ‘ಸಾರ್ ನಿಮ್ಮಿಂದ ನಾನು ಸಂಭಾವನೆ ಪಡೆಯೊಲ್ಲ. ಸಾಂಕೇತಿಕವಾಗಿ ಒಂದು ರೂಪಾಯಿ ಕೊಡಿ ಸಾಕು’ ಎಂದರು. ಕೊಟ್ಟ ಮಾತಿನಂತೆ ಸಂಭಾವನೆ ಪಡೆಯದೆ ಕೆಲಸ ಮುಗಿಸಿಕೊಟ್ಟರು. ಅವರಿಗೆ ಸಂಭಾವನೆ ಕೊಡದಿದ್ದರೂ ವಾದ್ಯದವರಿಗೆ ಕೊಡಲೇಬೇಕಲ್ಲ? ಸ್ಟುಡಿಯೋದಲ್ಲಿ ರಾಜಪ್ಪ ದಳವಾಯಿ ಯನ್ನು ಬಿಟ್ಟು ಹಣ ಹೊಂದಿಸಲು ಓಡಾಡಿದೆ. ರೀ ರೆಕಾರ್ಡಿಂಗ್ ಮುಗಿದ ಮೇಲೆ ಮಿಕ್ಸಿಂಗ್ ಮಾಡಬೇಕಲ್ಲ? ಸುರೇಶ್ ಅರಸು ಅವರು ಸ್ಟುಡಿಯೋದಲ್ಲಿ ರಾತ್ರಿಯೆಲ್ಲ ಇದ್ದು ಬೆಳಗಿನವರೆಗೆ ಉಸ್ತುವಾರಿ ನೋಡಿಕೊಂಡು ಕೆಲಸ ಮಾಡಿಕೊಟ್ಟರು.
‘ಕರಡಿಪುರ’ಕ್ಕೆ ಸಹಕರಿಸಿದ ಕಲಾವಿದರನ್ನೂ ಇಲ್ಲಿ ನೆನೆಯಬೇಕು. ಆಗ ಕುಮಾರ್ ಗೋವಿಂದ್ ತುಂಬಾ ಬಿಜಿಯಾಗಿದ್ದ ನಟರು. ಅವರು ಬೇರೊಂದು ಚಿತ್ರದ ಕೆಲಸಕ್ಕೆ ಹೋಗಬೇಕಿತ್ತು. ನಾವು ಚಿತ್ರೀಕರಣ ಮುಗಿಸಬೇಕಿತ್ತು. ಬೆಳಗ್ಗೆ 9 ಗಂಟೆಗೆ ಆರಂಭಿಸಿ ಮಾರನೇ ದಿನ ಮಧ್ಯಾಹ್ನದವರೆಗೆ ಬಸ್ಮಂಗಿ ಬೆಟ್ಟದಲ್ಲಿ ಚಿತ್ರೀಕರಣ ಮಾಡಿದೆವು. ನನಗೆ ಮತ್ತು ಛಾಯಾಗ್ರಾಹಕ ಮಂಜುನಾಥ್ ಅವರಿಗೆ ನಿದ್ದೆಯೇ ಇಲ್ಲ. ಕುಮಾರ್ ಗೋವಿಂದ್, ತಾರಾ ಅವರ ದೃಶ್ಯಗಳೇ ಮುಖ್ಯವಾಗಿದ್ದವು. ಅಂತೂ ಸತತ ಮೂವತ್ತು ಗಂಟೆಗಳ ಕಾಲ ಚಿತ್ರೀಕರಣ ಮಾಡಿದ್ದೆವು.
ಇಷ್ಟೆಲ್ಲ ಕಷ್ಟಪಟ್ಟು ಸಿದ್ಧ ಮಾಡಿದ ಸಿನಿಮಾಕ್ಕೆ ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ ಸಿಗಲಿಲ್ಲ. ಸಹಾಯಧನ ಆಯ್ಕೆ ಸಮಿತಿಯು ನಮ್ಮ ‘ಕರಡಿಪುರ’ಕ್ಕೆ ಕೈ ಕೊಟ್ಟಿತ್ತು. ಹೌದು; ನಿಜಕ್ಕೂ ಕೈ ಕೊಟ್ಟಿತ್ತು! ಸಹಾಯಧನಕ್ಕಾಗಿ (ಸಬ್ಸಿಡಿಗಾಗಿ) ಅರ್ಜಿ ಸಲ್ಲಿಸುವ ವೇಳೆಗೆ ಈ ಚಿತ್ರವು ಬ್ರಿಟನ್ ಸರ್ಕಾರ ನಡೆಸುವ ಪ್ರತಿಷ್ಠಿತ ‘ಲೀಡ್ಸ್ ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಆಯ್ಕೆಯಾಗಿತ್ತು. ನಿರ್ಮಾಪಕಿ ನನ್ನ ಪತ್ನಿ ರಾಜಲಕ್ಷ್ಮಿ ಮತ್ತು ನಿರ್ದೇಶಕನಾದ ನನ್ನನ್ನು ಬ್ರಿಟನ್ನಿಗೆ ಅತಿಥಿಗಳಾಗಿ ಆಹ್ವಾನಿಸಿದ್ದರು. ಹೋಗಿ ಬಂದಿದ್ದೆವು. ಅದೇ ವೇಳೆಗೆ ‘ಕರಡಿಪುರ’ಕ್ಕೆ ಕರ್ನಾಟಕ ಸರ್ಕಾರ ನೀಡುವ ‘ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರ’ವೆಂಬ ಪ್ರಶಸ್ತಿಯೂ ಬಂದಿತ್ತು. ಈ ಪ್ರಶಸ್ತಿ ಆಯ್ಕೆ ಸಮಿತಿಗೆ ಪ್ರಸಿದ್ಧ ನಿರ್ದೇಶಕರಾದ ಶ್ರೀ ಜಿ.ವಿ. ಅಯ್ಯರ್ ಅವರು ಅಧ್ಯಕ್ಷರಾಗಿದ್ದರು. ಇಷ್ಟೆಲ್ಲ ಮನ್ನಣೆಗಳು ಲಭ್ಯವಾಗಿದ್ದರೂ ಸಹಾಯಧನ ಸಮಿತಿಯು ಸಹಾಯಧನಕ್ಕೆ ಆಯ್ಕೆ ಮಾಡಲಿಲ್ಲ! ಈಗಾಗಲೇ ಸಾಲದ ಹೊರೆ ಭಾರವಾಗಿತ್ತು. ಸಬ್ಸಿಡಿ ಹಣ (10 ಲಕ್ಷ) ಬಂದಿದ್ದರೆ ಸಾಲದ ಹಣವನ್ನಾದರೂ ಹಿಂತಿರುಗಿಸಬಹುದಿತ್ತು. ದಿಕ್ಕೇ ತೋಚದ ಸ್ಥಿತಿ. ಸರ್ಕಾರದ ಒಂದು ಸಮಿತಿ, ಅತ್ಯುತ್ತಮ ಸಾಮಾಜಿಕ ಕಾಳಜಿಯ ಚಿತ್ರವೆಂದರೆ, ಇದೇ ಸರ್ಕಾರದ ಇನ್ನೊಂದು ಸಮಿತಿ ಸಹಾಯ ಧನವನ್ನು ನಿರಾಕರಿಸುತ್ತದೆ! ಒಂದೇ ಸರ್ಕಾರದ ಸಮಿತಿಗಳು ಬೇರೆ ಬೇರೆಯಾದ ಕೂಡಲೇ ಮಾನದಂಡವೂ ಬದಲಾಗ ಬೇಕೆ? ಇನ್ನೊಂದು ಪ್ರಶ್ನೆಯೂ ಇದೆ. ಪ್ರಶಸ್ತಿಯಾದರೆ ಅನೇಕ ಚಿತ್ರಗಳ ನಡುವೆ ಒಂದೇ ಚಿತ್ರವನ್ನು ಆಯ್ಕೆ ಮಾಡಬೇಕು. ಆದರೆ ಸಬ್ಸಿಡಿಗೆ ಹಾಗಲ್ಲ. ಆಗ ಬಹುಶಃ ಮೂವತ್ತೊ ನಲವತ್ತೊ ಚಿತ್ರಗಳನ್ನು ಆಯ್ಕೆ ಮಾಡಬಹುದಿತ್ತು. ಸಂಖ್ಯೆ ಸರಿಯಾಗಿ ನೆನಪಿಲ್ಲದಿದ್ದರೂ ಒಂದೇ ಚಿತ್ರವನ್ನಂತೂ ಆಯ್ಕೆ ಮಾಡಬೇಕಾಗಿರಲಿಲ್ಲ ಎಂಬುದು ಸತ್ಯ. ಹಾಗಾದರೆ ಹತ್ತಾರು ಚಿತ್ರಗಳ ಆಯ್ಕೆಯಲ್ಲಿ ಒಂದು ಸ್ಥಾನವನ್ನು ಪಡೆಯದಷ್ಟು ‘ಕರಡಿಪುರ’ ಕಳಪೆಯಾಗಿತ್ತೆ? ಇಲ್ಲೇನೊ ನಡೆದಿದೆ ಎಂಬ ಅನುಮಾನ ಕಾಡಿಸಿತು. ಈ ಸಬ್ಸಿಡಿ ಆಯ್ಕೆ ಸಮಿತಿಯಲ್ಲಿ ಕನ್ನಡ ಅಧ್ಯಯನ ಕೇಂದ್ರದ ಸಹೋದ್ಯೋಗಿ ಸಾಹಿತಿಯೊಬ್ಬ ರಲ್ಲದೆ, ಸನ್ಮಿತ್ರ ಸಾಹಿತಿ ರಂಜಾನ ದರ್ಗಾ ಕೂಡ ಇದ್ದರು.
ರಂಜಾಗ ದರ್ಗಾ ಅವರ ಪ್ರಾಮಾಣಿಕತೆಯ ಬಗ್ಗೆ ನನಗೆ ಪೂರ್ಣ ನಂಬಿಕೆಯಿದೆ ಯಾರು ಪಟ್ಟು ಹಿಡಿದವರೆಂದು ತಿಳಿಯಲು ತಡವಾಗಲಿಲ್ಲ. ಆಯ್ಕೆ ಸಮಿತಿಗಳ ಒಳ ಚರ್ಚೆಗಳು ಎಲ್ಲ ಕಾಲದಲ್ಲೂ ರಹಸ್ಯವಾಗಿಯೇ ಇರುವುದಿಲ್ಲ. ಆನಂತರ ನನಗೆ ಲಭ್ಯವಾದ ಅಧಿಕೃತ ಮೂಲದ ಮಾಹಿತಿಯೆಂದರೆ – ರಂಜಾನ ದರ್ಗಾ ಅವರು ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡಬೇಕೆಂದು ಪ್ರತಿಪಾದಿಸಿದ್ದರು. ಒಟ್ಟಾರೆ ಅಭಿಪ್ರಾಯ ಮೂಡುತ್ತಿರುವಾಗ ನನ್ನ ಸಹೋದ್ಯೋಗಿ ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡಕೂಡದೆಂದು ತಮ್ಮದೇ ರೀತಿ ವಾದಿಸಿದ್ದಲ್ಲದೆ ಪಟ್ಟು ಹಿಡಿದರು. ವಿವಾದವಾದೀತೆಂದೊ ಏನೋ ಇತರರೂ ಸುಮ್ಮನಾದರು. ಹಾಗೆಂದು ನಾನು ಯಾರ ಬಗ್ಗೆಯೂ ದ್ವೇಷ ಸಾಧಿಸಲಿಲ್ಲ. ಕಾಗೆ ಬಳಗದ ಭಾವ ಬಂಧುತ್ವ ನನ್ನದು!
ಆದರೂ ನಾನು ದಿಗ್ಭಾçಂತನಾಗಿದ್ದೆ. ಹಾಗೆಂದು ಸುಮ್ಮನಾಗಲಿಲ್ಲ. ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಡಾ. ಬಿ.ಕೆ. ಚಂದ್ರಶೇಖರ್ ಅವರು ವಾರ್ತಾ ಖಾತೆಯ ಸಚಿವರಾಗಿದ್ದರು. ಸಿನಿಮಾ ವಿಷಯವು ಅವರ ವ್ಯಾಪ್ತಿಗೆ ಬರುತ್ತಿತ್ತು. ಅವರ ಬಳಿಯೂ ಇದೇ ಮಾಹಿತಿಯಿತ್ತು. ನಾನು ಅವರ ಬಳಿ ಹೋದೆ. ‘‘ಒಂದೇ ಸರ್ಕಾರವು ಉತ್ತಮ ಚಿತ್ರ ಮತ್ತು ಕಳಪೆ ಚಿತ್ರ ಎಂದು ತೀರ್ಮಾನ ಮಾಡುವುದು ಸರಿಯೆ?’’ ಎಂದು ಪ್ರಶ್ನಿಸಿದೆ. ಸಾಲ ಸರ್ಪದ ಹೆಡೆಯ ಅಡಿಯಲ್ಲಿ ನಾನು ರೋಸಿಹೋಗಿದ್ದೆ. ಹೀಗಾಗಿ ‘‘ನೋಡಿ ಸಾರ್, ಇದು ಅನ್ಯಾಯ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ವಿಧಾನ ಸೌಧದ ಮೂರನೇ ಮಹಡಿಯ ಕುರ್ಚಿ ಬಿಟ್ಟು ಮುಂದುಗಡೆ ಚಾಪೆ ಹಾಕಿ ಕೂತ್ಕೊಳ್ತೇನೆ’’ ಎಂದೆ. ಡಾ. ಬಿ.ಕೆ. ಚಂದ್ರಶೇಖರ್ ಸಚಿವರಂತೆ ವರ್ತಿಸಲಿಲ್ಲ. ಸ್ನೇಹಿತನಾಗಿ ಸಾಂತ್ವನ ಹೇಳಿದರು. ಸಮಾಧಾನ ಚಿತ್ತದಿಂದ ಪರಿಹಾರ ಹುಡುಕುವ ಬಗ್ಗೆ ಮಾತಾಡಿದರು. ನಾನು ‘‘ಸರ್ಕಾರದ ಸಮಿತಿಯೊಂದು ಯಾವುದೇ ಸಿನಿಮಾಕ್ಕೆ ಉತ್ತಮ ಚಿತ್ತವೆಂಬ ಪ್ರಶಸ್ತಿ ನೀಡಿದ್ದರೆ, ಅದನ್ನೇ ಮಾನದಂಡವೆಂದು ಪರಿಗಣಿಸಿ ಸಬ್ಸಿಡಿ ಸಮಿತಿಯು ನೇರವಾಗಿ ಆಯ್ಕೆ ಪಟ್ಟಿಗೆ ಸೇರಿಸಬೇಕು’’ ಎಂದು ವಾದಿಸಿದೆ. ಅವರಿಗೂ ಈ ತರ್ಕ ಸರಿ ಎನ್ನಿಸಿತು. ‘‘ಈ ಸಾರಿ ನನ್ನ ಚಿತ್ರಕ್ಕಾದ ಗತಿ ಮುಂದಿನ ವರ್ಷದಿಂದ ಬೇರೆ ಚಿತ್ರಗಳಿಗೆ ಆಗಬಾರದು ಸಾರ್’’ ಎಂದು ಹೇಳಿದೆ. ಅವರು ‘‘ಒಂದ್ ಕೆಲ್ಸ ಮಾಡಿ, ಮುಖ್ಯಮಂತ್ರಿಯವರಿಗೆ ಈ ಎಲ್ಲಾ ವಿಷಯ ಮನವರಿಕೆ ಮಾಡಿ’’ ಎಂದು ಸಲಹೆ ನೀಡಿದರು.
ಆಗ ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ನಾನು ಒಂದು ಮನವಿ ಪತ್ರ ಸಿದ್ಧ ಮಾಡಿದೆ. ಸರ್ಕಾರದ ಒಂದು ಆಯ್ಕೆ ಸಮಿತಿಯು ಯಾವುದೇ ವಿಭಾಗದಲ್ಲಿ – ಅಂದರೆ ಒಟ್ಟಾರೆ ಉತ್ತಮವಾದ ಮೂರು ಚಿತ್ರಗಳು, ಸಾಮಾಜಿಕ ಕಾಳಜಿ ಚಿತ್ರ, ಮಕ್ಕಳ ಚಿತ್ರ – ಹೀಗೆ ಯಾವುದೇ ವಿಭಾಗದಿಂದ ಉತ್ತಮ ಚಿತ್ರವೆಂದು ಆಯ್ಕೆ ಮಾಡಿ ಪ್ರಶಸ್ತಿ ಕೊಟ್ಟಿದ್ದರೆ, ಅದೇ ಸರ್ಕಾರದ ಸಬ್ಸಿಡಿ ಸಮಿತಿಯು ಗುಣಾತ್ಮಕ ಚಿತ್ರವೆಂದು ಪರಿಗಣಿಸಿ ನೇರವಾಗಿ – ಅಂದರೆ – ವೀಕ್ಷಿಸದೆ, ಆಯ್ಕೆ ಪಟ್ಟಿಗೆ ಸೇರಿಸಬೇಕು. ಇದರಿಂದ ಒಂದೇ ಸರ್ಕಾರವು ಎರಡು ರೀತಿ ಆಯ್ಕೆ ಮಾಡುವ ದ್ವಂದ್ವ ತಪ್ಪುತ್ತದೆ. ಈ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು – ಈ ರೀತಿಯ ವಿವರಗಳನ್ನು ಮಂಡಿಸಿ ಮನವಿ ಮಾಡಿದ್ದೆ. ಲಿಖಿತ ಮನವಿ ಪತ್ರದ ಜೊತೆಗೆ ನನ್ನ ಮನವಿಪತ್ರಕ್ಕೆ ಸಮರ್ಥನೆಯಾಗಿ ‘ಕರಡಿಪುರ’ದ ಸಬ್ಸಿಡಿ ಪ್ರಸಂಗವನ್ನು ನೇರವಾಗಿ ವಿವರಿಸಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಅಭಿಪ್ರಾಯ ಸರಿ ಎನ್ನಿಸಿದಂತೆ ಕಂಡಿತು. ನೇರವಾಗಿ ಹೇಳದೆ ‘ಖಂಡಿತ ಗಂಭೀರ ವಾಗಿ ಪರಿಗಣಿಸ್ತೀನಿ’ ಎಂದರು. ಒಂದೇ ವಾರದಲ್ಲಿ ನನ್ನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಆದೇಶ ಹೊರಟಿತು. ವಿಶೇಷವೆಂದರೆ ಅದೇ ವರ್ಷಕ್ಕೆ ಆದೇಶವನ್ನು ಅನ್ವಯಿಸಿದರು. ಹೀಗಾಗಿ ನನ್ನ ‘ಕರಡಿಪುರ’ಕ್ಕೆ ಹತ್ತು ಲಕ್ಷ ರೂಪಾಯಿ ಸಬ್ಸಿಡಿ ಸಿಕ್ಕಿತು.
ಹೀಗೆ ‘ಕರಡಿಪುರ’ಕ್ಕೆ ಸಬ್ಸಿಡಿ ಮಂಜೂರಾದಾಗ ಇನ್ನೊಂದು ಆಕ್ಷೇಪ ಬಂತು. ಆಗ ಪ್ರತಿ ಇಲಾಖೆಗೂ ‘ಸದನ ಸಮಿತಿ’ ರಚಿಸುವ ಪರಿಪಾಠವಿತ್ತು. ಈ ಸಮಿತಿಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಇರುತ್ತಿದ್ದರು. ಆಯಾ ಇಲಾಖೆಗಳ ಕಾರ್ಯಗಳನ್ನು ಪರಿಶೀಲಿಸಿ ವರದಿ ಕೊಡುತ್ತಿದ್ದರು. ವಾರ್ತಾ ಇಲಾಖೆಯ ಸದನ ಸಮಿತಿಗೆ ‘ಮುಖ್ಯಮಂತ್ರಿ’ ಚಂದ್ರು ಅಧ್ಯಕ್ಷರಾಗಿದ್ದರು. ಅವರ ಸಮಿತಿಯ ವರದಿಯಲ್ಲಿ ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡುವುದಕ್ಕೆ ಆಕ್ಷೇಪ ಮಾಡಲಾಗಿತ್ತು. ಚಂದ್ರು ಅವರು ‘ನಿಮ್ಮ ಸಹೋದ್ಯೋಗಿಯ ಒತ್ತಾಯದಿಂದ ಆಕ್ಷೇಪ ಮಾಡಬೇಕಾಯ್ತು’ ಎಂದು ನನಗೆ ಸಮಾಧಾನ ಮಾಡಿದರು. ಆದೇಶ ಆಗಿದ್ದನ್ನು ಸರ್ಕಾರ ರದ್ದು ಮಾಡಲಿಲ್ಲ. ಆಕ್ಷೇಪವಷ್ಟೇ ದಾಖಲಾಯಿತು. ಮೊದಲು ಮೂಡಿದ್ದ ಅನುಮಾನ ನಿಜ ಎನ್ನಿಸಿತು. ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ನೇರವಾಗಿ ಸಬ್ಸಿಡಿ ಕೊಡುವ ಆದೇಶ ಮಾಡಿಸಿದ್ದರ ಜೊತೆಗೆ ವಿನಮ್ರ ಭಾವದಿಂದ ಇನ್ನೊಂದು ವಿಷಯವನ್ನು ತಿಳಿಸಿದರೆ ತಪ್ಪಾಗದೆಂದು ಭಾವಿಸುತ್ತೇನೆ. ಪ್ರತಿ ವರ್ಷ ಸಾಹಿತ್ಯ ಕೃತಿಯಾಧಾರಿತ ಸಿನಿಮಾಗಳಿಗೆ (ವರ್ಷಕ್ಕೆ ಐದು ಸಿನಿಮಾಗಳಿಗೆ) ತಲಾ ಐದು ಲಕ್ಷ ಹೆಚ್ಚು ಸಬ್ಸಿಡಿ ಅಂದರೆ ಒಟ್ಟು ಹದಿನೈದು ಲಕ್ಷ ಕೊಡಬೇಕೆಂದು ವಾದಿಸಿ ಆದೇಶ ಹೊರಡಲು ನಾನು ಕಾರಣವಾಗಿದ್ದೆ. ಜೊತೆಗೆ ಭಾರತೀಯ ಪನೋರಮ ಮತ್ತು ಅಧಿಕೃತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಅಯ್ಕೆಯಾದ ಚಿತ್ರಗಳಿಗೆ ಹೆಚ್ಚುವರಿ ಸಬ್ಸಿಡಿ ನೀಡಬೇಕೆಂಬ ಮೊದಲ ಒತ್ತಾಯ ನನ್ನದಾಗಿತ್ತು. ಅದೂ ಆದೇಶವಾಗಿ ಜಾರಿಯಲ್ಲಿದೆ.
‘ಕರಡಿಪುರ’ದ ಕಷ್ಟದ ಕತೆ ಹೇಳಲು ಕಾರಣವಿದೆ. ನನ್ನ ಸಿನಿಮಾ ಹಾದಿಯೇನೂ ಸುಗಮವಾಗಿರಲಿಲ್ಲ ಎಂಬುದು ಒಂದು ಕಾರಣ. ಎದೆಗುಂದದೆ ಮುಂದಡಿ ಇಟ್ಟರೆ ಕಷ್ಟದ ಹಾದಿಯ ಕಲ್ಲುಮುಳ್ಳುಗಳು ಕರಗಬಹುದು ಎಂಬ ಆತ್ಮವಿಶ್ವಾಸ ಎಲ್ಲರಲ್ಲೂ ಮೂಡಲಿ ಎಂಬ ಆಶಯ ಇನ್ನೊಂದು ಕಾರಣ. ಹಾಗೆಂದು ನಾನು ಮಾತ್ರ ಕಷ್ಟಪಟ್ಟೆ ಎಂದು ಭಾವಿಸಿಕೊಂಡರೆ ಅದು ನನ್ನ ಅಹಂಕಾರವಾದೀತು. ಅಸಂಖ್ಯಾತರಲ್ಲಿ ನಾನೂ ಒಬ್ಬ ಅಷ್ಟೆ. ಎಲ್ಲ ಕ್ಷೇತ್ರಗಳಲ್ಲೂ ಕಷ್ಟದ ಕತೆಯಾದವರು ಇದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಡಾ. ರಾಜಕುಮಾರ್ ಅವರ ಸಾಧನೆಯ ಹಾದಿಯೇನು ಸುಲಭವಾಗಿತ್ತೆ? ಇಲ್ಲ. ಶ್ರಮ, ಶ್ರದ್ಧೆ, ಸಂಕಲ್ಪದಿಂದ ಅವರು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ‘ಜನಪದ ನಾಯಕ’ರಾದರು.
ನಾನು ನನ್ನ ನಿರ್ದೇಶನದ ಎಲ್ಲಾ ಸಿನಿಮಾಗಳ ಬಗ್ಗೆಯೂ ಇಷ್ಟು ವಿವರ ಬರೆಯುವುದಿಲ್ಲ. ನಾನು ಎದುರಿಸಿದ ಸಂಕಟ-ಸಂಭ್ರಮಗಳಿಗೆ ಸಾಕ್ಷಿಯಾದ ಕೆಲವನ್ನು ಮಾತ್ರ ಅಗತ್ಯವಾದಷ್ಟು ಪ್ರಸ್ತಾಪಿಸುತ್ತೇನೆ.
ಈ ನಿಟ್ಟಿನಲ್ಲಿ ಡಾ. ಶಿವರಾಜಕುಮಾರ್ ಅಭಿನಯದ ‘ಹಗಲು ವೇಷ’ವನ್ನು ಉಲ್ಲೇಖಿಸಬಯಸುತ್ತೇನೆ. ಶಿವರಾಜಕುಮಾರ್ ಅವರು ಇಷ್ಟಪಟ್ಟು ಈ ಚಿತ್ರದಲ್ಲಿ ಅಭಿನಯಿಸಲು ಮುಂದಾದದ್ದೇ ಒಂದು ಸಂಭ್ರಮ. ಇದಕ್ಕೆ ಮುಂಚೆ ನಾನು ‘ಜನುಮದ ಜೋಡಿ’ ಚಿತ್ರಕ್ಕೆ ಕೆಲಸ ಮಾಡಿದ್ದೆ. ಮೂರು ಹಾಡು ಮತ್ತು ಸಂಭಾಷಣೆ ಬರೆದಿದ್ದೆ. ಡಾ. ರಾಜಕುಮಾರ್, ಅವರ ಸೋದರ ವರದರಾಜು, ನಿರ್ದೇಶಕ ನಾಗಾಭರಣ ಸೇರಿ ಚರ್ಚಿಸಿದ ಆಧಾರದಲ್ಲಿ ರೂಪುಗೊಂಡ ದೃಶ್ಯಗಳನ್ನು ವಿವರವಾಗಿ ಸಂಭಾಷಣೆ ಸಮೇತ ಬರೆದುಕೊಟ್ಟಿದ್ದೆ. ಇಲ್ಲಿಂದಲೇ ನನ್ನ ಮತ್ತು ಡಾ. ರಾಜಕುಮಾರ್ ಅವರ ಸಂಬಂಧ ಗಾಢವಾದದ್ದು. ಒಂದು ಸಂದರ್ಭದಲ್ಲಿ ಶಿವರಾಜಕುಮಾರ್ ಅವರಿಗೆ ‘ಹಗಲು ವೇಷ’ವೆಂಬ ಚಿತ್ರ ಮಾಡಬೇಕೆಂದಿದ್ದೇನೆಂದು ಪ್ರಸ್ತಾಪಿಸಿ, ‘ಅದು ಬುಡಕಟ್ಟು ಕಲಾವಿದನೊಬ್ಬ ಬ್ರಿಟಿಷರ ವಿರುದ್ಧ ತಿರುಗಿಬೀಳುವ ಕತೆಯನ್ನು ಒಳಗೊಂಡಿದೆ’ ಎಂದಿದ್ದೆ. ಅವರು ಕೂಡಲೇ ತಾವು ಆ ಪಾತ್ರ ಮಾಡುವುದಾಗಿ ಹೇಳಿದ್ದಲ್ಲದೆ ನಿರ್ಮಾಪಕರನ್ನೂ ಒದಗಿಸಿದರು. ಅವರ ಕಾಲ್ಶೀಟ್ ಕೇಳಿದವರಿಗೆ ‘ಬರಗೂರ್ ಸರ್ ಅವರದೊಂದು ಸಬ್ಜೆಕ್ಟ್ ಇದೆ. ಅದನ್ನು ಮಾಡಿ. ನನ್ನ ಡೇಟ್ಸ್ ಕೊಡ್ತೇನೆ’ ಎಂದು ಹೇಳುತ್ತಿದ್ದರು. ಇದೇ ಮಾತನ್ನು ನಿರ್ಮಾಪಕರಾದ ಶ್ರೀ ಜಗನ್ನಾಥ್ ಮತ್ತು ಶ್ರೀ ಮಂಜುನಾಥ್ ಅವರಿಗೆ ಹೇಳಿದರು. ಅಷ್ಟೇ ಅಲ್ಲ, ಚಿತ್ರೀಕರಣದ ಸಂದರ್ಭದಲ್ಲಿ ತುಂಬಾ ಸಹಕಾರ ನೀಡಿದರು; ಸರಳವಾಗಿ ನಡೆದುಕೊಂಡರು. ತುಮಕೂರು ಬಳಿಯ ದೇವರಾಯನ ದುರ್ಗದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಒಂದು ದಿನ ಮಧ್ಯಾಹ್ನ ಊಟದ ಬಿಡುವಿನಲ್ಲಿ ಅವರು ಕಾಣದಿದ್ದಾಗ ‘ಶಿವರಾಜಕುಮಾರ್ ಎಲ್ಲಿದ್ದಾರೆ?’ ಎಂದು ತಂಡದ ಒಬ್ಬರನ್ನು ಕೇಳಿದೆ. ಅವರು ‘ರೆಸ್ಟ್ ಮಾಡ್ತಿದಾರೆ’ ಎಂದರು. ಊಟ ಮುಗಿಸಿ ನಾನು ಎದ್ದು ಬಂದು ಶಿವರಾಜಕುಮಾರ್ ರೆಸ್ಟ್ ಮಾಡುತ್ತಿದ್ದದ್ದನ್ನು ನೋಡಿ ಚಕಿತಗೊಂಡೆ. ಅವರು ಹೊಲದ ಬದುವಿನ ಮೇಲೆ ಟವಲ್ ಹಾಸಿಕೊಂಡು ಮಲಗಿದ್ದರು! ಸರಳತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ?
ಇನ್ನೇನಾದರೂ ಹೊಸ ಪ್ರಯೋಗ ಮಾಡಬೇಕೆಂಬ ಹಂಬಲದಿಂದ ಒಬ್ಬರೇ ಕಲಾವಿದರಿರುವ ‘ಶಾಂತಿ’ ಚಿತ್ರವನ್ನು ನಿರ್ದೇಶಿಸಿದೆ. ಪರಿಕಲ್ಪನೆ, ರಚನೆ, ನಿರ್ದೇಶನದ ಜವಾಬ್ದಾರಿ ಹೊತ್ತ ನನಗೆ ನಿರ್ಮಾಪಕರಾಗಿ ಶ್ರೀ ರಮೇಶ್ ಯಾದವ್ ಮುಂದೆ ಬಂದರು. ಇದಕ್ಕೆ ಮೊದಲು ಇವರು ನನ್ನ ನಿರ್ದೇಶನದಲ್ಲಿ ‘ಕ್ಷಾಮ’ ಚಿತ್ರವನ್ನು ನಿರ್ಮಿಸಿದ್ದರು. ಅದಕ್ಕೆ ರಾಜ್ಯ ಸರ್ಕಾರದ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿತ್ತು. ಭಾವನ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ನನಗೆ ನಿರ್ದೇಶನ ಪ್ರಶಸ್ತಿ, ನಾಗರಾಜ ಆದವಾನಿ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಸಂದಿತ್ತು. ಇದು ನಾಗರಾಜ ಆದವಾನಿಯವರ ಮೊದಲ ಸಿನಿಮಾವಾಗಿತ್ತು. ರಮೇಶ್ ಯಾದವ್ ಉತ್ಸಾಹದಿಂದ ‘ಶಾಂತಿ’ ಚಿತ್ರಕ್ಕೆ ಹಣ ತೊಡಗಿಸಿದರು. ನನಗೆ ಸಹ ನಿರ್ದೇಶಕರಾಗಿದ್ದ ರವಿ ಅವರ ಜೊತೆಗೆ ರಮೇಶ್ ಯಾದವ್ ಕಡೆಯಿಂದ ನಟ್ರಾಜ್ ಶಿವು ಸೇರಿದರು. ಈಗ ನನಗೆ ಸಹ ನಿರ್ದೇಶಕರಾಗಿ ನಟ್ರಾಜ್ ಜೊತೆ ಪ್ರವೀಣ್ ಮತ್ತು ಸಹಾಯಕ ನಿರ್ದೇಶಕರಾಗಿ ಎಚ್.ಎನ್. ಗೋಪಾಲಕೃಷ್ಣ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಅಂಶವೆಂದರೆ ಇವರು ಇಲ್ಲೀವರೆಗೆ ನನ್ನ ಸಿನಿಮಾಕ್ಕೆ ಮಾತ್ರ ಕೆಲಸ ಮಾಡುತ್ತಾರೆ. ಉಳಿದಂತೆ ತಮ್ಮದೇ ಬೇರೆ ಕೆಲಸ ಮಾಡಿಕೊಳ್ಳುತ್ತಾರೆ.
‘ಶಾಂತಿ’ ಸಿನಿಮಾವನ್ನು ಮಡಿಕೇರಿ ಪರಿಸರದಲ್ಲಿ ಚಿತ್ರೀಕರಿಸಿದೆವು. ಏಕಪಾತ್ರದ ಈ ಸಿನಿಮಾಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭ್ಯವಾಯಿತು. ಇಲ್ಲೀವರೆಗೆ ನನ್ನ ನಿರ್ದೇಶನದ ಯಾವ ಚಿತ್ರಕ್ಕೂ ರಾಜ್ಯದ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿಲ್ಲ. ಸಿಕ್ಕಿದ್ದೆಲ್ಲ ದ್ವಿತೀಯ ಅಥವಾ ಸಾಮಾಜಿಕ ಕಾಳಜಿ ಚಿತ್ರ ಪ್ರಶಸ್ತಿ. ನನ್ನ ಚಿತ್ರದ ಕೆಲವು ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ಬಂದಿವೆ. ಅದೇ ಸಂತೋಷ. ಇರಲಿ; ಈಗ ‘ಶಾಂತಿ’ ಸಿನಿಮಾ ವಿಷಯ. ಬಹು ಮುಖ್ಯವಾಗಿ ‘ಶಾಂತಿ’ ಸಿನಿಮಾವು ಗಿನ್ನಿಸ್ ದಾಖಲೆಗೆ ಪಾತ್ರವಾಯಿತು. ಜಗತ್ತಿನಲ್ಲಿ ಏಕಪಾತ್ರದ ಮೂರನೇ ಚಿತ್ರವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿ ನಿರ್ದೇಶಕನಾದ ನನ್ನ ಮತ್ತು ಕಲಾವಿದೆ ಭಾವನಾರ ಹೆಸರನ್ನು ನಮೂದಿಸ ಲಾಯಿತು. ಏಕಪಾತ್ರ ಚಿತ್ರ ನಿರ್ದೇಶನ ಮಾಡಿದ ಜಗತ್ತಿನ ಮೂರನೇ ನಿರ್ದೇಶಕನೆಂಬ ದಾಖಲೆ ನನ್ನ ಪಾಲಿನದಾಗಿತ್ತು. ಹೀಗೆ ದಾಖಲೆ ಮಾಡಿದ್ದಕ್ಕಾಗಿ ಅಂದಿನ ಮುಖ್ಯಮಂತ್ರಿ ಯವರಾಗಿದ್ದ ಶ್ರೀ ಧರ್ಮಸಿಂಗ್ ಅವರು ಸರ್ಕಾರದಿಂದ ಸಮಾರಂಭವೊಂದನ್ನು ಆಯೋಜಿಸಲು ತಿಳಿಸಿ, ಸ್ವತಃ ತಾವು ಭಾಗವಹಿಸಿ ನನ್ನನ್ನೂ, ಭಾವನ ಅವರನ್ನೂ, ನಿರ್ಮಾಪಕ ರಮೇಶ್ ಯಾದವ್ ಅವರನ್ನೂ ಸನ್ಮಾನಿಸಿದರು. ಇನ್ನೊಂದು ವಿಶಿಷ್ಟ ವಿಷಯವೆಂದರೆ ಸಂಗೀತ ನಿರ್ದೇಶಕರಾದ ಶ್ರೀ ಹಂಸಲೇಖ ಅವರು ಏಕಪಾತ್ರ ಚಿತ್ರಕ್ಕೆ ಏಕವಾದ್ಯದ ಸಂಗೀತ ನೀಡುತ್ತೇನೆಂದು ಇಡೀ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಫ್ಲೂಟ್ ಮಾತ್ರ ಬಳಸಿ ಹೊಸ ಪ್ರಯೋಗ ಮಾಡಿದರು. ಶಾಂತಿ ಚಿತ್ರ ನಿರ್ಮಾಣದ ನಂತರ ರಮೇಶ್ ಯಾದವ್ ನನ್ನ ನಿರ್ದೇಶನದಲ್ಲಿ ‘ಶಬರಿ’ ಚಿತ್ರವನ್ನು ನಿರ್ಮಿಸಿದರು. ಇದು ‘ಭಾರತೀಯ ಪನೋರಮ’ ವಿಭಾಗಕ್ಕೆ ಆಯ್ಕೆಯಾಗಿ ಗೋವಾದಲ್ಲಿ ನಡೆದ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
ಮುಂದೆ ಹೊಸ ರೀತಿಯ ವಸ್ತುಗಳ ಮೂಲಕ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದೆ. ಜನಪದ, ಉಗ್ರಗಾಮಿ, ಭೂಮಿತಾಯಿ, ಭಾಗೀರತಿ, ಅಂಗೂಲಿಮಾಲ, ತಾಯಿ, ಬೆಕ್ಕು, ಮೂಕನಾಯಕ, ಅಮೃತಮತಿ, ತಾಯಿ ಕಸ್ತೂರ್ಗಾಂಧಿ, ಮೊಮ್ಮಗ ಆಕಾಂಕ್ಷ್ ಬರಗೂರ್ ನಾಯಕನಾದ ಮಕ್ಕಳ ಚಿತ್ರ ‘ಚಿಣ್ಣರ ಚಂದ್ರ’ – ಹೀಗೆ ಅನೇಕ ಚಿತ್ರಗಳು. ‘ಭಾಗೀರತಿ’ಯ ಅಭಿನಯಕ್ಕಾಗಿ ಭಾವನ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. ಬೆಂ.ಕೊ. ಶ್ರೀನಿವಾಸ್ ಅವರು ನಿರ್ಮಿಸಿದ ಈ ಚಿತ್ರವು ಬೆಂಗಳೂರಿನ ಮಿನಿ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನ ಕಂಡಿತು. ಬೆಂ.ಕೊ. ಶ್ರೀನಿವಾಸ್ ಅವರೇ ಸಾಯಿಕುಮಾರ್ ನಾಯಕ ನಟರಾಗಿದ್ದ ‘ಅಂಗೂಲಿಮಾಲ’ ಚಿತ್ರವನ್ನು ನಿರ್ಮಿಸಿದರು. ಸುಧಾರಾಣಿ, ಕಿಶೋರ್ ಅಭಿನಯದ ‘ಭೂಮಿತಾಯಿ’ ಚಿತ್ರವನ್ನು ಶ್ರೀ ಶರಣಗೌಡ ಪಾಟೀಲ್, ಶ್ರೀ ಮಲ್ಲಿಕಾರ್ಜುನ್ ಸಹಕರಿಸಿ ನಿರ್ಮಿಸಿದರು. ‘ಜನಪದ’ ಚಿತ್ರವನ್ನು ಶ್ರೀ ಪಂಜು ಪೂಜಾರಿಯವರು ನಿರ್ಮಿಸಿದ್ದು ಅವರ ಪುತ್ರ ರಾಘವ್ ನಾಯಕ ನಟರಾಗಿ ಅಭಿನಯಿಸಿದರು. ಈ ಚಿತ್ರದ ನಾಯಕಿ ಪಾತ್ರದಲ್ಲಿ ಪ್ರಸಿದ್ಧ ಕಲಾವಿದೆ ರಾಧಿಕ ನಟಿಸಿದರು. ಹುಳಿಮಾವು ರಾಮಚಂದ್ರ ನಿರ್ಮಿಸಿದ ‘ಉಗ್ರಗಾಮಿ’ ಕಿಶೋರ್ ನಾಯಕರಾಗಿ ನಟಿಸಿದ ಮೊದಲ ಕನ್ನಡ ಚಿತ್ರ. ಶ್ರೀ ಬಾಲರಾಜ್ ನಿರ್ಮಾಣದ ‘ಮೂಕ ನಾಯಕ’ ಚಿತ್ರದ ಪೋಷಕ ಪಾತ್ರಕ್ಕೆ ರೇಖಾ ಅವರಿಗೆ ರಾಜ್ಯ ಪ್ರಶಸ್ತಿ ಬಂತು. ಕುಮಾರ್ ಗೋವಿಂದ್ ಅವರ ಅಭಿನಯಕ್ಕೆ ಅಮೆರಿಕದ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಹಿತೈಷಿಗಳೂ ಮಿತ್ರರೂ ಆದ ಮುರಳೀಧರ ಹಾಲಪ್ಪ ನಿರ್ಮಾಣದ ‘ಮರಣದಂಡನೆ’ ಚಿತ್ರವು ರಾಜಸ್ಥಾನದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಪ್ರಶಸ್ತಿ ತಂದುಕೊಟ್ಟಿತು.
ರಷ್ಯಾ ಲೇಖಕ ಮಾಕ್ಸಿಂಗಾರ್ಕಿಯವರ ತಾಯಿ ಕಾದಂಬರಿ ಆಧಾರಿತ ‘ತಾಯಿ’ ಚಿತ್ರವನ್ನು ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ನಿರ್ಮಿಸಿದರು. ಈ ಚಿತ್ರಕ್ಕೆ ರಾಷ್ಟç ಪ್ರಶಸ್ತಿ ಬಂತು. ರಾಜ್ಯ ಪ್ರಶಸ್ತಿಯೂ ಬಂತು. ಚಲನಚಿತ್ರಕ್ಕಾಗಿ ಬರೆದ ಗೀತೆಯೊಂದಕ್ಕೆ ರಾಷ್ಟç ಪ್ರಶಸ್ತಿ ಪಡೆದ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ ಕೂಡ ನನ್ನದಾಯಿತು. ಮಾಕ್ಸಿಂಗಾರ್ಕಿಯವರ ‘ತಾಯಿ’ ಕಾದಂಬರಿಯು ಪ್ರಕಟವಾಗಿ ನೂರು ವರ್ಷವಾದ ಸಂದರ್ಭದಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು ನನಗೆ ಸಂತೋಷದ ಸಂಗತಿ.
ಜನ್ನ ಕವಿ ರಚಿತ ‘ಯಶೋಧರ ಚರಿತೆ’ಯನ್ನು ಆಧರಿಸಿದ ಮಿತ್ರ ಶ್ರೀ ಪುಟ್ಟಣ್ಣ ಅವರು ನಿರ್ಮಿಸಿದ ‘ಅಮೃತಮತಿ’ ಸಿನಿಮಾವು ಹತ್ತಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಯಿತು. ನಾಯಕಿಯಾಗಿ ಅಭಿನಯಿಸಿದ ಹರಿಪ್ರಿಯ ಅವರಿಗೆ ಮೂರು ಅಂತರರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗಳು, ಎರಡು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, – ಹೀಗೆ ಅನೇಕ ಮನ್ನಣೆಗಳು ಲಭ್ಯವಾದದ್ದು ವಿಶೇಷವಾಗಿ ಉಲ್ಲೇಖನೀಯ.
ಇಲ್ಲಿಯೇ ಶಮಿತಾ ಮಲ್ನಾಡ್ ಅವರ ಬಗ್ಗೆ ಹೇಳಬೇಕು. ನನ್ನ ನಿರ್ದೇಶನದ, ಕುಮಾರ್ ಗೋವಿಂದ್ ನಿರ್ಮಾಣದ ‘ಬೆಕ್ಕು’ ಚಿತ್ರವೇ ಇವರ ಮೊದಲ ಸಂಗೀತ ನಿರ್ದೇಶನದ ಚಿತ್ರ. ಈ ಚಿತ್ರದ ಗಾಯನಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ‘ಬೆಕ್ಕು’ವಿನಿಂದ ಆರಂಭಿಸಿ ಇಲ್ಲೀವರೆಗೆ ನನ್ನ ಎಲ್ಲ ಚಿತ್ರಗಳಿಗೂ ಇವರು ಸಂಗೀತ ನಿರ್ದೇಶನ ನೀಡಿ ಸಹಕರಿಸಿದ್ದಾರೆ. ಶ್ರೀಮತಿ ಗೀತಾ ಅವರು ನಿರ್ಮಿಸಿದ ‘ತಾಯಿ ಕಸ್ತೂರ್ ಗಾಂಧಿ’ ಕೂಡ ಕೆಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಯಿತು. ಪ್ಯಾರಿಸ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಬಂದದ್ದಲ್ಲದೆ ಗಾಂಧೀಜಿ ಪಾತ್ರದ ಅಭಿನಯಕ್ಕಾಗಿ ಇದೇ ಚಿತ್ರೋತ್ಸವದಲ್ಲಿ ಕಿಶೋರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿತು. ನೋಯ್ಡಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಗಾಂಧಿ ಪಾತ್ರಕ್ಕಾಗಿ ಕಿಶೋರ್ ಅವರು ಪ್ರಶಸ್ತಿಗೆ ಭಾಜನರಾದರು. ಸುರೇಶ್ ಅರಸು ಅವರಿಗೆ ಅತ್ಯುತ್ತಮ ಸಂಕಲನಕಾರ ಎಂದು ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ಲಭಿಸಿತು. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ, ಗಾಂಧಿ ಪಾತ್ರದಲ್ಲಿ ಕಿಶೋರ್ ಅವರು ಯೌವ್ವನ, ಮಧ್ಯ ವಯಸ್ಸು ಮತ್ತು ವೃದ್ಧಾಪ್ಯ – ಮೂರೂ ಹಂತದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನನ್ನ ಮೊಮ್ಮಗ ಆಕಾಂಕ್ಷ್ ಬರಗೂರ್, ಬಾಲಕ ಗಾಂಧಿಯ ಪಾತ್ರ ಮಾಡಿದ್ದಾನೆ. ಈತನೇ ನಾಯಕನಾದ ಒಂದು ಮಕ್ಕಳ ಚಿತ್ರ ಮಾಡಬೇಕೆಂಬುದು ನನ್ನ ಪತ್ನಿ ರಾಜಲಕ್ಷ್ಮಿಯ ಬಯಕೆಯಾಗಿತ್ತು. ನನ್ನ ಬಯಕೆಯೂ ತೀವ್ರವಾಗಿತ್ತು. ನಮ್ಮಿಬ್ಬರ ಬಯಕೆಯನ್ನು ಈಡೇರಿಸಲೆಂಬಂತೆ ಶ್ರೀ ಗೋವಿಂದರಾಜ್ (ರಾಜಶೇಖರ್) ನಿರ್ಮಾಪಕರಾಗಿ ಬಂದರು. ‘ಚಿಣ್ಣರ ಚಂದ್ರ’ ಎಂಬ ಚಿತ್ರವನ್ನು ರೂಪಿಸಿದೆ. ಆದರೆ ಮೊಮ್ಮಗನು ಮುಖ್ಯ ಪಾತ್ರದಲ್ಲಿರುವ ಸಿನಿಮಾ ನೋಡಲು ರಾಜಲಕ್ಷ್ಮಿಯೇ ಇಲ್ಲ!
‘ಸಮುದಾಯದತ್ತ ಸಿನಿಮಾ’ ಎಂಬ ಶೀರ್ಷಿಕೆಯ ಮೂಲಕ ನಾನು ನನ್ನ ನಿರ್ದೇಶನದ ಕೆಲವು ಚಿತ್ರಗಳನ್ನು ನೇರವಾಗಿ ಜನರ ಬಳಿ ಕೊಂಡೊಯ್ದ ‘ಪರ್ಯಾಯ ಬಿಡುಗಡೆ ಪ್ರಯೋಗ’ ಕುರಿತು ಹೇಳಲೇಬೇಕು. ವಿವಿಧ ಕಾರಣಗಳಿಗಾಗಿ ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯ ‘ಸಂಪ್ರದಾಯ’ ಸಾಧ್ಯವಾಗದೆ ಇದ್ದಾಗ ವಿವಿಧ ಊರುಗಳ ನನ್ನ ಮಿತ್ರರನ್ನು ಕೇಳಿಕೊಂಡು ಆಯಾ ಊರುಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಆಸಕ್ತರಿಂದ ಮೊದಲೇ ಹಣ ಸಂಗ್ರಹಿಸುವುದು, ಥಿಯೇಟರ್ ಲಭ್ಯ ವಾದರೆ ಥಿಯೇಟರ್ನಲ್ಲಿ ಅಥವಾ ಯಾವುದಾದರೂ ಸುಸಜ್ಜಿತ ಸಭಾಂಗಣದಲ್ಲಿ ಚಿತ್ರವನ್ನು ಪ್ರದರ್ಶಿಸುವುದು. ಇದಕ್ಕಾಗಿ ಒಂದು ವೇಳಾಪಟ್ಟಿ ಸಿದ್ಧಮಾಡಿ ಅದರಂತೆ ಚಿತ್ರದ ಪಯಣ ಆರಂಭಿಸುವುದು. ಇದು ‘ಚಿತ್ರಯಾತ್ರೆ’. ಈ ಯಾತ್ರೆಯ ಮೂಲಕ ಜನರಿಗೆ ತಲಪುವುದು ಮತ್ತು ನಿರ್ಮಾಪಕರಿಗೆ ಒಂದಿಷ್ಟು ಹಣ ಬರುವುದು ಮುಖ್ಯ ಉದ್ದೇಶವಾಗಿತ್ತು. ಕೆಲವು ಕಡೆ ವಿಚಾರಗೋಷ್ಠಿಗಳನ್ನೂ ಏರ್ಪಡಿಸಲಾಗಿತ್ತು. ಹೀಗೆ ಕೆಲವು ಚಿತ್ರಗಳನ್ನು ನೂರಾರು ಊರುಗಳಲ್ಲಿ ಪ್ರದರ್ಶಿಸಲಾಗಿದೆ. ಇದೊಂದು ಹೊಸ ಪ್ರಯೋಗ. ಸಮುದಾಯದತ್ತ ಸಿನಿಮಾವನ್ನು ಕೊಂಡೊಯ್ದ ಪ್ರಯೋಗ. ಇದಕ್ಕೆ ಸಹಕರಿಸಿದ ಸ್ನೇಹ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ‘ಗೋಪಿ’ಯ ಸಹಕಾರವನ್ನೂ ನೆನೆಯುತ್ತೇನೆ. ಅಗತ್ಯವಾದಾಗ ಈ ಪ್ರಯೋಗವನ್ನು ಮುಂದುವರಿಸುತ್ತೇನೆ.
ಸರ್ಕಾರವು ಕಡೇ ಪಕ್ಷ ಜಿಲ್ಲಾ ಕೇಂದ್ರಗಳಲ್ಲಾದರೂ ಸರಳವಾದ ಮಿನಿ ಚಿತ್ರ ಮಂದಿರಗಳನ್ನು ನಿರ್ಮಿಸಬೇಕು. ಸದಭಿರುಚಿಯ ಹಾಗೂ ಹೊಸ ವಿನ್ಯಾಸದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಾಗಬೇಕು. ಹಾಗೆಂದು ಒಂದೇ ಮಾದರಿಯ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದೇನೂ ಇಲ್ಲ. ‘ಸಿನಿಮಾ ಸಂಸ್ಕೃತಿ’ಯನ್ನು ವಿಸ್ತರಿಸಲು ಪೂರಕವಾದ ಕೆಲಸವನ್ನು ಈ ಮಿನಿ ಚಿತ್ರಮಂದಿರಗಳ ಮೂಲಕ ಮಾಡಬೇಕು. ಸರ್ಕಾರವಲ್ಲದೆ ಸಿನಿಮಾ ಸಂಸ್ಕ Èತಿಯಲ್ಲಿ ಆಸಕ್ತರಾದವರಿಂದಲೂ ‘ಸಮುದಾಯದತ್ತ ಸಿನಿಮಾ’ ತಲುಪುವ ಕೆಲಸವಾಗುವುದು ಅಗತ್ಯ. ಈ ಕೆಲಸಕ್ಕೆ ಪೂರಕವಾಗಿ ಸಾಧ್ಯವಾದ ಕಡೆಯಲ್ಲೆಲ್ಲ ‘ಸಿನಿಮಾ ಸೊಸೈಟಿ’ಗಳನ್ನು ಸ್ಥಾಪಿಸಿಕೊಳ್ಳುವುದು ಅಪೇಕ್ಷಣೀಯ. ಈ ನಿಟ್ಟಿನಲ್ಲಿ ಚಲನಚಿತ್ರ ಅಕಾಡೆಮಿಯ ಪಾತ್ರ ಮುಖ್ಯವಾದುದು. ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸುವುದು ಮಾತ್ರವೇ ಮುಖ್ಯವಾಗಬಾರದು. ಅದರ ಜೊತೆಗೆ ಸಮುದಾಯದಲ್ಲಿ ಸಿನಿಮಾ ಸಂಸ್ಕೃ ಬೆಳೆಸುವುದು ಆದ್ಯತೆಯಾಗಬೇಕು.
ನನ್ನ ಸಿನಿಮಾಯಾನದ ಕೆಲವು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಎಲ್ಲವನ್ನೂ ಎಲ್ಲರನ್ನೂ ಇಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದಿರಬಹುದು. ಅದಕ್ಕಾಗಿ ಮನ್ನಿಸಿ ಎನ್ನುತ್ತೇನೆ. ಎಲ್ಲಾ ಸಿನಿಮಾಗಳ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಲೈಟ್ ಬಾಯ್ಗಳನ್ನು ಒಳಗೊಂಡಂತೆ ಸಮಸ್ತ ಸಿನಿಮಾ ಶ್ರಮಿಕರನ್ನೂ ನೆನೆಯುತ್ತೇನೆ. ಅಂತೆಯೇ ಚಿತ್ರೀಕರಣದ ಉಸ್ತುವಾರಿ ಮಾಡುತ್ತ ಬಂದ ವಿ. ಚಂದ್ರಶೇಖರ್ ಅವರನ್ನೂ ನೆನೆಯುತ್ತೇನೆ. ‘ಸೂರ್ಯ’ ಸಿನಿಮಾ ಬಿಡುಗಡೆಯಾದಾಗ ಡಾ. ಎಲ್. ಹನುಮಂತಯ್ಯನವರು ನನ್ನನ್ನು ವಿವಿಧ ಹಾಸ್ಟೆಲ್ಗಳಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿ ಸಿನಿಮಾ ನೋಡಲು ಪ್ರೇರಣೆ ನೀಡಿದ್ದನ್ನು ಮರೆಯಲಾರೆ, ನನ್ನ ಸಾಹಿತ್ಯ ಮತ್ತು ಸಿನಿಮಾಗಳ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಬರೆದ ಎಲ್ಲರನ್ನೂ ಮರೆಯುವಂತೆಯೇ ಇಲ್ಲ. ಅಂತೆಯೇ ನನ್ನ ಪುಸ್ತಕಗಳ ಪ್ರಕಾಶಕರು ಮತ್ತು ಪತ್ರಿಕೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಾಹಿತ್ಯ ಮತ್ತು ಸಿನಿಮಾ ಕುರಿತಂತೆ ಅಧ್ಯಯನ ಮಾಡಿ ಹತ್ತಕ್ಕೂ ಹೆಚ್ಚು ಮಂದಿ ಪಿಎಚ್.ಡಿ ಪಡೆದಿದ್ದಾರೆ. ಲೇಖಕ-ಪತ್ರಕರ್ತ, ಮಿತ್ರ ಶ್ರೀ ಗಂಗಾಧರ ಮೊದಲಿಯಾರ್ ಅವರು ಆರಂಭದಿಂದಲೂ ನನ್ನ ನಿರ್ದೇಶನದ ಎಲ್ಲಾ ಸಿನಿಮಾಗಳ ಬಗ್ಗೆ ಆಸಕ್ತಿ ವಹಿಸಿ ಅಧ್ಯಯನ ಮಾಡಿ ಬರೆದಿದ್ದಾರೆ. ಇವರನ್ನೂ ಒಳಗೊಂಡಂತೆ ನನ್ನ ಸಿನಿಮಾ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದ ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.
ಹೀಗೆ ನೆನೆಯಬೇಕಾದ ಅದೆಷ್ಟೋ ಆತ್ಮೀಯರಿದ್ದಾರೆ. ಎಲ್ಲರ ಹೆಸರು ಉಲ್ಲೇಖಿಸಲಾಗದಿದ್ದರೂ ಕೆಲವರ ಸಹಕಾರವನ್ನು ಸಾಂಕೇತಿಕವಾಗಿ ಸ್ಮರಿಸುತ್ತೇನೆ. ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ, ನನಗೆ ಆಗ ನೇರ ಪರಿಚಯವಿಲ್ಲದಿದ್ದರೂ ಅಕಾಡೆಮಿಗೆ ಬಂದು ಮೆಚ್ಚುಗೆಯ ಮಾತು ಹೇಳಿದ ಡಾ. ಸಿ.ಎನ್. ರಾಮಚಂದ್ರನ್, ಡಾ. ಗುರುಲಿಂಗಕಾಪ್ಸೆ ಮತ್ತು ನನ್ನ ಸಹೋದ್ಯೋಗಿಗಳೇ ಟೀಕಾತ್ಮಕ ಬರಹಗಳನ್ನು ಬರೆದಾಗ ಅಕಾಡೆಮಿಗೆ ಬಂದು ನನಗೆ ಬೆಂಬಲದ ನುಡಿಗಳಾಡಿದ ಡಾ. ಹಾ.ಮಾ. ನಾಯಕ ಅವರನ್ನು ಮರೆಯಲಾರೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿದ್ದ ಶ್ರೀ ಕೆ.ಸಿ. ರಾಮಮೂರ್ತಿಯವರ ಸಹಕಾರ ದೊಡ್ಡದು. ಸಿರಾದ ‘ಬರಗೂರು ಮೇಷ್ಟ್ರು ಬಳಗ’ದ ಗೆಳೆಯರು, ಸಿರಿ ಸ್ನೇಹದ ಬೂವನಹಳ್ಳಿ ನಾಗರಾಜ್ ಮತ್ತು ತುಮಕೂರಿನ ಜಿ.ಎಂ. ಶ್ರೀನಿವಾಸಯ್ಯ, ದೊರೆರಾಜ್, ಬಾ.ಹ. ರಮಾಕುಮಾರಿ, ರಮೇಶ್, ಶೈಲಾನಾಗಾರಾಜ್ ಮುಂತಾದವರ ವಿಶ್ವಾಸ ಹಿರಿದು. ಈಗ ಸಹಕಾರ ಸಚಿವರಾಗಿರುವ ನನ್ನ ಹಿತೈಷಿ ಕೆ.ಎನ್. ರಾಜಣ್ಣ ಅವರ ಸಹಕಾರ ಸದಾ ಹಚ್ಚಹಸಿರು. ನನ್ನ ಕೆಲವು ಕಾರ್ಯಕ್ರಮಗಳಿಗೆ ಸಹಯೋಗನೀಡುತ್ತ ಬಂದಿರುವ ಸಿ.ಕೆ. ರಾಮೇಗೌಡ ಮತ್ತು ಸಮೀವುಲ್ಲಾಖಾನ್ ಅವರ ಕ್ರಿಯಾಶೀಲತೆ ಉಲ್ಲೇಖನೀಯ; ‘ಭರತನಗರಿ’ ಕಾದಂಬರಿಯ ಬಗ್ಗೆ ಎದ್ದ ವಿವಾದದ ಸಂದರ್ಭದಲ್ಲಿ ನನ್ನ ಪರವಾಗಿನಿಂತ ಅನೇಕರ ಹಾದಿಯಲ್ಲಿ ಜೊತೆಗೂಡಿದ ನಿವೃತ್ತ ಅಧಿಕಾರಿ ಪ್ರಸನ್ನ, ಗಂಗಾವತಿಯ ಪತ್ರಕರ್ತ ತಿಪ್ಪೇಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಶಿವಪ್ಪ ಹಾದಿಮನಿ, ವೆಂಕಟಗಿರಿ ದಳವಾಯಿ, ಅಮರೇಶ್ ಯತಗಲ್, ಮುಂತಾದವರ ಸಹಕಾರ ಸ್ಮರಣೀಯ. ಹೊರನಾಡ ಕನ್ನಡಿಗರೆಂದ ಕೂಡಲೇ ತಕ್ಷಣ ನೆನೆಪಾಗುವುದು ಮುಂಬೈನ ಡಾ. ಉಪಾಧ್ಯ, ಭರತ್ ಮುಂತಾದವರು. ಹೀಗೆ ಈ ಮಿತ್ರರ ಸಾಂಕೇತಿಕ ನೆನಪಿನ ಮೂಲಕ ಸಮಸ್ತ ಸ್ನೇಹಿತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
(ಕೃತಿ: ಕಾಗೆ ಕಾರುಣ್ಯದ ಕಣ್ಣು (ಆಯ್ದ ಅನುಭವಗಳ ಕಥನ), ಲೇಖಕರು: ಬರಗೂರು ರಾಮಚಂದ್ರಪ್ಪ, ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು (90191 90502), ಬೆಲೆ : ರೂ. 395/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ