ಮಳೆ ನಿಂತ ಮಾರನೇ ದಿನದ ಸ್ವರ್ಗವೀಗ ಅಜ್ಜಿಯ ಕತೆಯಲ್ಲಿ ಬರುತ್ತಿದ್ದ ನರಕದಂತೆ ಭಾಸವಾಗುತ್ತಿದೆ. ಸೂರ್ಯ ಮುಳುಗಿದ ಮೇಲೆ ಹನಿ ಬೀಳುವ ಸದ್ದಿಗೆ ಪುಳಕಗೊಳ್ಳುತ್ತಿದ್ದ ಹೃದಯ ಅಕ್ಕ ಪಕ್ಕದವರಿಗೂ ಕೇಳಿಬಿಡುವಂತೆ ಒಡೆದುಕೊಳ್ಳಲು ಶುರು ಮಾಡಿದೆ. ನಿದ್ದೆಯೇ ಇಲ್ಲದ ಅವಳಿಗೀಗ ಅಲಾರಾಂ ಅವಶ್ಯಕತೆಯಿಲ್ಲ. ಹೊರಗೆ ಕಾಲಿಟ್ಟರೆ ಮುದ ಗೊಳಿಸುತ್ತಿದ್ದ ಚಳಿ ಈಗ ಬೆನ್ನ ಮೂಳೆಯನ್ನು ಕೊರೆಯುತ್ತದೆ. ಮರದಿಂದ ತೊಟ್ಟಿಕ್ಕುತ್ತಿದ್ದ ಹನಿಗಳೆಲ್ಲಾ ಮುಂಡದಿಂದ ಬೇರಾದ ರುಂಡವೊಂದು ಸುರಿಸುತ್ತಿದ್ದ ನೆತ್ತರ ಹನಿಯಂತೆ ಅನಿಸಿ ಒರೆಸಿಕೊಂಡಷ್ಟೂ ಎದೆಯೊಳಗೆಲ್ಲಾ ಅಂಟಂಟು ಅನುಭವ.
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”ಯಲ್ಲಿ ಹೊಸ ಬರಹ

ರಾತ್ರಿ ಮಳೆ ಶುರುವಾದರೆ ಅವಳಿಗದೇನೋ ಸಡಗರ. ಬೆಳಗಾಗುವುದನ್ನೇ ಕಾಯುವ ಆ ಉತ್ಸಾಹದಲ್ಲಿ ನಿದ್ದೆಯೂ ಹತ್ತುತ್ತಿರಲಿಲ್ಲ. ಎಂದೂ ವಾಕಿಂಗ್ ಹೋಗದ ಅವಳು ಮಳೆ ನಿಂತ ಮಾರನೇ ದಿನ ಮಾತ್ರ ವಾಕಿಂಗ್ ನೆಪದಲ್ಲಿ ರಾತ್ರಿಯೆಲ್ಲಾ ನೆನೆದು ಮುದ್ದೆಯಾದ ಪ್ರಕೃತಿಯ ಕಣ್ತುಂಬಿಕೊಳ್ಳಬೇಕು. ಬೆಳಿಗ್ಗೆ ಸೂರ್ಯ ಹುಟ್ಟೋ ಅರ್ಧ ತಾಸಿಗೂ ಮುಂಚೆ ಮನೆಯಿಂದ ಹೊರಟು ಹಸಿಯಾದ ನಗರವನ್ನೆಲ್ಲಾ ಸುತ್ತಿ ಬರುವುದೆಂದರೆ ಎಲ್ಲಿಲ್ಲದ ಸಂತಸ. ಕೊಟ್ಟಿರೋ ಅಲಾರಾಂ ಅನ್ನು ಮತ್ತೊಮ್ಮೆ ನೋಡಿ ಖಾತ್ರಿ ಮಾಡಿಕೊಂಡೇ ಮಲಗುತ್ತಿದ್ದಳು. ಮಳೆ ನಿಂತ ಮುಂಜಾವಿಗೆ ಎದ್ದವಳೇ ರೆಡಿ ಆಗಿ ಹೊರಟುಬಿಟ್ಟರೆ ಆ ಹುಚ್ಚೆಬ್ಬಿಸೋ ಚಳಿ, ಒದ್ದೆ ನೆಲ, ನೀರು ತೊಟ್ಟಿಕ್ಕುವ ಮರಗಳು, ಸ್ನಾನ ಮಾಡಿ ಬಿಸಿಲಿಗೆ ಮೈಯೊಡ್ಡಲು ಅಣಿಯಾಗುತ್ತಿದ್ದ ಮನೆಗಳು ಎಲ್ಲವನ್ನೂ ಆಸ್ವಾದಿಸುವುದೇ ಅವಳಿಗೊಂದು ಸಡಗರ. ಪ್ರಿಯತಮೆಯನ್ನು ಬಿಟ್ಟು ಒಲ್ಲದ ಮನಸ್ಸಿನಿಂದ ಹಿಂದಿರುಗುವ ನಲ್ಲೆಯಂತೆ ಎಲೆಗಳಿಂದ ಜಾರಿ ಕೆಳಗೆ ಬೀಳುತ್ತಿದ್ದ ಒಂದೊಂದೇ ಹನಿಗಳು. ಗಾಳಿ ಬೀಸಿದಾಗೆಲ್ಲಾ ಮೂಗಿನ ತುದಿಯ ಹಿಮಗಟ್ಟಿಸುವ ತೇವಾಂಶ ನರನಾಡಿಯನ್ನೆಲ್ಲಾ ಬಿಗಿಗೊಳಿಸುತ್ತಿತ್ತು. ದಾರಿಯುದ್ದಕ್ಕೂ ಉದುರಿರುತ್ತಿದ್ದ ಕೆಂಪು ಬಣ್ಣದ ಗುಲ್ಮೊಹರ್ ಹೂಗಳು ರೆಡ್ ಕಾರ್ಪೆಟ್‌ನಂತೆ ಕಂಡು ಅವಳ ಹೆಜ್ಜೆಗಳು ಮತ್ತಷ್ಟು ಡೊಂಕಾಗುತ್ತಿತ್ತು.

ದಾರಿಯುದ್ದಕ್ಕೂ ಸಿಗುವ ಮರಗಳ ಬೈತಲೆ ಬೊಟ್ಟಿನಂತೆ ಒಪ್ಪವಾಗಿ ಕೂತಿದ್ದ ಹನಿಗಳನ್ನೆಲ್ಲಾ ಕುಡಿದು, ಸುರುಳಿ ಸುತ್ತಿ ಬಿದ್ದ ಮುಂಗುರುಳೊಂದಿಗೆ ಆಡುತ್ತಾ ಕಾಲಿಗೆ ಅಡ್ಡ ಸಿಕ್ಕ ಕಲ್ಲನ್ನು ಕಿಲೋಮೀಟರ್‌ವರೆಗೂ ಒದೆಯುತ್ತ ನಡೆಯುವಾಗ ತೆವಳುತ್ತಾ ತೆವಳುತ್ತಾ ರಸ್ತೆ ಮಧ್ಯೆ ಬಂದುಬಿಡುತ್ತಿದ್ದ ಬಸವನ ಹುಳುಗಳನ್ನು ಬೊಗಸೆಯಲ್ಲಿಟ್ಟು ಜೋಪಾನವಾಗಿ ರಸ್ತೆ ಬದಿಗೆ ಬಿಟ್ಟು “ಮನುಷ್ಯ ಕಟುಕ, ನಿನ್ನ ಎದೆಯ ಮೇಲೆ ಕಾಲಿಟ್ಟುಬಿಡುವ ಜೋಪಾನ…” ಎಂದು ಕಿವಿ ಮಾತು ಹೇಳುತ್ತಿದ್ದಳು. ಹಾಗೆ ಸಾಗುತ್ತಾ ಊರಿನ ತುದಿಯಲ್ಲಿದ್ದ ಇಷ್ಟ ದೇವರ ಸನ್ನಿಧಿ ತಲುಪುತ್ತಿದ್ದಳು. ರಾತ್ರಿಯೆಲ್ಲಾ ಮಳೆಯಲ್ಲಿ ಮಿಂದ ಗೋಪುರ ತನ್ನ ಮೇಲೆ ಸೂರ್ಯ ಎರಚುತ್ತಿದ್ದ ಹೊನ್ನಿನ ಹೊಳಪನ್ನು ಕಣ್ಣಿಗೆ ರಾಚುವಂತೆ ಪ್ರತಿಫಲಿಸುತ್ತಿದ್ದರೆ, ಸಣ್ಣ ಹನಿಯಲ್ಲಿ ನೆನೆದಿದ್ದ ಅವಳು ದೇವಸ್ಥಾನದ ಮುಖ್ಯದ್ವಾರದ ಲೋಹದ ಮೆಟ್ಟಿಲಂತೆ ಹೊಳೆಯುತ್ತಿದ್ದಳು. ತಿರುಗಿ ಬರುವಾಗ ವಯಸ್ಸಿನ ಅರಿವು ಇಲ್ಲದಂತೆ ರಸ್ತೆ ಮಧ್ಯೆ ಇರುತ್ತಿದ್ದ ನೀರಿನ ಗುಂಡಿಗಳಿಗೆ ನೆಗೆದು ಪುಟ್ಟ ಮಕ್ಕಳ ಮುಗ್ಧ ಖುಷಿಯನ್ನು ಬಾಳಿನುದ್ದಕ್ಕೂ ಅನುಭವಿಸುತ್ತಲೇ ಕಳೆದುಬಿಡಬೇಕೆಂಬ ಮಹದಾಸೆಯಲ್ಲೇ ಮನೆಗೆ ಹಿಂತಿರುಗುತ್ತಿದ್ದಳು.

ಇವೆಲ್ಲಾ ಒಲೆ ಮೇಲೆ ದೋಸೆಯನ್ನು ಮೊಗಚುವಷ್ಟೇ ಸಲೀಸಾಗಿ ಅದ್ಯಾವಾಗ ತಲೆಕೆಳಕಾದವು?

ಮಳೆ ನಿಂತ ಮಾರನೇ ದಿನದ ಸ್ವರ್ಗವೀಗ ಅಜ್ಜಿಯ ಕತೆಯಲ್ಲಿ ಬರುತ್ತಿದ್ದ ನರಕದಂತೆ ಭಾಸವಾಗುತ್ತಿದೆ. ಸೂರ್ಯ ಮುಳುಗಿದ ಮೇಲೆ ಹನಿ ಬೀಳುವ ಸದ್ದಿಗೆ ಪುಳಕಗೊಳ್ಳುತ್ತಿದ್ದ ಹೃದಯ ಅಕ್ಕ ಪಕ್ಕದವರಿಗೂ ಕೇಳಿಬಿಡುವಂತೆ ಒಡೆದುಕೊಳ್ಳಲು ಶುರು ಮಾಡಿದೆ. ನಿದ್ದೆಯೇ ಇಲ್ಲದ ಅವಳಿಗೀಗ ಅಲಾರಾಂ ಅವಶ್ಯಕತೆಯಿಲ್ಲ. ಹೊರಗೆ ಕಾಲಿಟ್ಟರೆ ಮುದ ಗೊಳಿಸುತ್ತಿದ್ದ ಚಳಿ ಈಗ ಬೆನ್ನ ಮೂಳೆಯನ್ನು ಕೊರೆಯುತ್ತದೆ. ಮರದಿಂದ ತೊಟ್ಟಿಕ್ಕುತ್ತಿದ್ದ ಹನಿಗಳೆಲ್ಲಾ ಮುಂಡದಿಂದ ಬೇರಾದ ರುಂಡವೊಂದು ಸುರಿಸುತ್ತಿದ್ದ ನೆತ್ತರ ಹನಿಯಂತೆ ಅನಿಸಿ ಒರೆಸಿಕೊಂಡಷ್ಟೂ ಎದೆಯೊಳಗೆಲ್ಲಾ ಅಂಟಂಟು ಅನುಭವ. ಚರ್ಮ ಸುಲಿವ ಗಾಳಿ, ಮಳೆ ನೀರಲ್ಲಿ ಗುಲ್ಮೊಹರ್ ಹೂವು ಬೆವೆತಂತೆ. ಮಳೆಯ ಹಸಿ ವಾಸನೆಯ ಜೊತೆ ಸೇರಿ ಗಬ್ಬುನಾತ, ಅವರಿವರ ಕಾಲಿಗೆ ಸಿಕ್ಕಿ ಸಾಯುತ್ತಿದ್ದ ಬಸವನ ಹುಳಗಳ ವಿಚಿತ್ರ ಸಂಕಟ ಎಲ್ಲವೂ ಒಟ್ಟಿಗೆ ಅವಳ ಜೀವವ ಇಷ್ಟಿಷ್ಟೇ ಇಷ್ಟಿಷ್ಟೇ ಕರಗಿಸಿಬಿಡಲು ಶುರುವಾದದ್ದಾದರೂ ಎಲ್ಲಿಂದ?

ಮದುವೆ ಅನ್ನೊ ಒಂದು ವೇದಿಕೆಯ ಹಿಂಭಾಗದಲ್ಲಿ ನಡೆದ ಕೆಲ ಘಟನೆಗಳು ಅವಳ ಕನಸುಗಳನ್ನೇ ಬೆಚ್ಚಿ ಬೀಳಿಸಿದ್ದವ?

ತೆವಳುತ್ತಾ ತೆವಳುತ್ತಾ ರಸ್ತೆ ಮಧ್ಯೆ ಬಂದುಬಿಡುತ್ತಿದ್ದ ಬಸವನ ಹುಳುಗಳನ್ನು ಬೊಗಸೆಯಲ್ಲಿಟ್ಟು ಜೋಪಾನವಾಗಿ ರಸ್ತೆ ಬದಿಗೆ ಬಿಟ್ಟು “ಮನುಷ್ಯ ಕಟುಕ, ನಿನ್ನ ಎದೆಯ ಮೇಲೆ ಕಾಲಿಟ್ಟುಬಿಡುವ ಜೋಪಾನ…” ಎಂದು ಕಿವಿ ಮಾತು ಹೇಳುತ್ತಿದ್ದಳು. ಹಾಗೆ ಸಾಗುತ್ತಾ ಊರಿನ ತುದಿಯಲ್ಲಿದ್ದ ಇಷ್ಟ ದೇವರ ಸನ್ನಿಧಿ ತಲುಪುತ್ತಿದ್ದಳು.

ಅಂದು ಅವಳ ಮದುವೆ ಹಿಂದಿನ ದಿನದ ಚಪ್ಪರ ಪೂಜೆ, ಮುಹೂರ್ತ, ಅರಿಶಿನ ಶಾಸ್ತ್ರ, ವೀಳ್ಯ ಶಾಸ್ತ್ರ, ಬಳೆ ಶಾಸ್ತ್ರ ಹೀಗೆ ಎಲ್ಲಾ ಶಾಸ್ತ್ರಗಳು ಅಚ್ಚುಕಟ್ಟಾಗಿ ಮುಗಿದು ಇನ್ನೇನೋ ಮಲಗಬೇಕೆಂಬ ಹೊತ್ತಿಗೆ ಅವನಿಂದ ಕರೆಯೊಂದು ಬಂತು. ಅವಳ ಕಡೆಯವರು ಮಾಡಿದ ಯಾವುದೊ ಸಣ್ಣ ತಪ್ಪಿಗೆ ಎಂಟ್ಹತ್ತು ವರ್ಷಳಿಂದ ಹಿಂದೆ ಬಿದ್ದು ಕಾಡಿಬೇಡಿ ಅವಳ ಪ್ರೀತಿ ಪಡೆದು ಅವಳೇ ಬೇಕೆಂದು ಹಠ ಹಿಡಿದು ತನ್ನ ಪ್ರೀತಿಯನ್ನ ಮದುವೆ ತನಕ ತಂದಿದ್ದವನು ಆ ರಾತ್ರಿ ಮದುವೆಯೇ ಬೇಡ ಎಂದು ಗಂಡಿನ ಕಡೆಯವರಂತೆ ವರಸೆ ತೆಗೆದುಬಿಟ್ಟಿದ್ದ. ಗಂಡಿನ ಕಡೆಯವರಿಗೆಲ್ಲ ಅಂತದ್ದೊಂದು ಗತ್ತು ಇದ್ದಕ್ಕಿದ್ದ ಹಾಗೆ ಬಂದು ಬಿಡಲು ಸಾಧ್ಯವೇ ಅಥವಾ ಇಷ್ಟು ದಿನಗಳ ಅವನ ಪ್ರೀತಿಯೇ ನಟನೆಯೇ? ಗಂಡ ಅನ್ನುವ ಪಟ್ಟವೇ ಹಾಗ? ಅವಳ ತಲೆಯೊಳಗೆ ಪ್ರಶ್ನೆಗಳ ದೊಂಬರಾಟ. ವಿಷಯ ತಿಳಿದ ಅವಳ ಅಮ್ಮ ಹೇಗೋ ಅವನನ್ನು ಬೇಡಿಕೊಂಡು ಸಮಾಧಾನ ಪಡಿಸುತ್ತಿದ್ದರೆ ಇವಳಿಗೆ ಹೊರ ಬಾರದೆ ರೋಷವೊಂದು ಹೊಟ್ಟೆಯೊಳಗೆ ಕುದಿಕುದಿಯುತ್ತಲೇ ಆವಿಯಾಗಿಬಿಡುತ್ತಿತ್ತು. ತನ್ನೆಲ್ಲಾ ದುಡಿಮೆಯ ಹಣವನ್ನ ಕೂಡಿಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳ ಮದುವೆ ನೋಡಲು ನಿರ್ಲಿಪ್ತ ಕಂಗಳ ಅರಳಿಸಿ ಕೂತಿದ್ದ ಅಪ್ಪ. ಮದುವೆ ಮನೆ ತುಂಬಾ ನೆಂಟರು, ಮುಕ್ಕಾಲು ಭಾಗದಷ್ಟು ಶಾಸ್ತ್ರ ಮುಗಿಸಿ ಹೈರಾಣಾಗಿ ದಿಂಬಿಗೆ ತಲೆ ಕೊಟ್ಟಿದ್ದ ಪುರೋಹಿತರು. ಎಲ್ಲರ ನಡುವೆ ಕಣ್ಣೀರಿಗೂ ಜಾಗವಿರದಷ್ಟು ಗೊಂದಲಗಳ ತುಂಬಿಕೊಂಡ ಕಂಗಳು. ಛತ್ರದ ನಟ್ಟ ನಡುವೆ ನಿಂತವಳನ್ನು ಜಗಮಗಿಸುತ್ತಿದ್ದ ವಿದ್ಯುತ್ ದೀಪಗಳ ಬೆಳಕೂ ಸಹ ಅವನೊಟ್ಟಿಗೆ ಶಾಮೀಲಾಗಿ ಕತ್ತಲೆಯ ಕೋಣೆಗೆ ದೂಡಿಬಿಟ್ಟಿತ್ತು. ಕುಣಿಕೆಯಂತೆ ಕಾಣುತ್ತಿದ್ದ ಅವನ ಕೈಯಲ್ಲಿದ್ದ ತಾಳಿ ಮತ್ತು ಅಪ್ಪನ ಕೈಯಲ್ಲಿದ್ದ ಕನಸಿನ ಅಕ್ಷತೆ ಕಾಳುಗಳ ನಡುವೆ ಸಿಕ್ಕಿ ಕೊನೆಗೂ ತಾಳಿಗೆ ತಲೆ ತಗ್ಗಿಸಿ ಅಕ್ಷತೆ ಕಾಳನ್ನು ಕಣ್ಮುಚ್ಚಿ ತಲೆಯ ಮೇಲೆ ಹಾಕಿಸಿಕೊಂಡಿದ್ದಳು. ಅಂದಿನಿಂದಲೇ ಶುರುವಾಗಿದ್ದ ಅವನ ಗಂಡಸು ಎಂಬ ಒಣ ಪ್ರತಿಷ್ಠೆ, ತಾನಿರುವುದು ಆಜ್ಞೆ ಮಾಡಲು ಅವಳಿರುವುದು ಪಾಲಿಸಲಷ್ಟೇ ಎಂಬ ಕುರುಡು ಕಲ್ಪನೆ.

ಅವಳು ನಗುವಾಗ ತುಟಿಯಂಚಿನ ಮಚ್ಚೆ ನೋಡಿ ಹಸಿಯಾಗುತ್ತಿದ್ದವನು ಈಗ ಅವಳ ಮುಖ ನೋಡಿದರೆ ತಲೆ ಬಿಸಿ ಏರಿಸಿಕೊಂಡು ಸಿಡುಕುತ್ತಾನೆ, ಅವಳ ಮೈಯ ಪರಿಮಳದಲ್ಲೇ ಈಜುತ್ತಿದ್ದವನು ಕೊರಳ ಬೆವರ ಹನಿಯೊಂದರಲ್ಲೇ ಮುಳುಗಿ ಉಸಿರುಗಟ್ಟಿದಂತೆ ಆಡುತ್ತಾನೆ. ಮಾತಿಗೆ ಮುಂಚೆ ಗೊಂಬೆ ಗೊಂಬೆ ಎನ್ನುತ್ತಿವನ ಬಾಯಿ ಅವಳ ಹೆಸರನ್ನೇ ಮರೆತಿದೆ.

ಅವಳು ಅಂದು ಉಯ್ಯಾಲೆ ಆಡಲೆಂದು ಅದರ ಮೇಲೆ ಕುಳಿತುಕೊಳ್ಳುವುದಕ್ಕೂ ಹಗ್ಗ ತುಂಡಾದ್ದಕ್ಕೂ ಕಾಕತಾಳಿಯವಾಗಿತ್ತು. ಯಕಶ್ಚಿತ ಜೀವವಿರದ ವಸ್ತುವಷ್ಟೇ, ಅದಕ್ಕಾಗಿ ಮಾತುಗಳಿಂದಲೇ ಅವಳ ಎದೆ ಇರಿದು ತುಂಡಾಗಿಸಿದ್ದ. ಕೈಯಲ್ಲಿದ್ದ ಪಿಂಗಾಣಿ ಕಪ್ ಕೈತಪ್ಪಿ ಬಿದ್ದರೇ ಅವನಿಗೆ ಅದೇ ಮಹಾಪರಾಧವಾಗಿ ಕಂಡು ಅದು ಚೂರಾಗುವ ಮೊದಲೇ ಇವಳ ಮನಸ್ಸ ಚೂರು ಮಾಡಿದ್ದ. ಜೋರಾಗಿ ನಕ್ಕರೂ, ದುಃಖಕ್ಕೆ ಅತ್ತರೂ, ಮಾತನಾಡಿದರೂ, ಮೌನವಾಗಿದ್ದರೂ, ಸ್ವಲ್ಪ ಎಡವಿದರೂ, ಸಾವರಿಸಿ ನಿಂತರೂ ಎಲ್ಲಾದಕ್ಕೂ ಒಂದೊಂದು ಚುಚ್ಚು ಮಾತು.

ಅವಳು ಒಂದೂ ಮಾತಾಡದೆ ಹಲ್ಲು ಕಚ್ಚಿ ಸಹಿಸಿಕೊಳ್ಳುತ್ತಾಳೆ. ಎಲ್ಲದಕ್ಕೂ ನಗುತ್ತಲೇ ಉತ್ತರಿಸುತ್ತಾಳೆ. ಬದಲಾಗುವ ಎಲ್ಲಾ ಪರಿಸ್ಥಿತಿಗೂ ಸುಲಭವಾಗಿ ಒಗ್ಗಿಬಿಡುತ್ತಾಳೆ. ಯಾಕೆ? ಅಮ್ಮನ ಮನೆಯಿಂದ ಗಂಡನ ಮನೆಗೆ ಹೊರಡುವ ಹೊತ್ತಲ್ಲಿ ಹೆತ್ತವರು ಕಿವಿಯಲ್ಲೊಂದು ಮಾತು ಹೇಳಿಬಿಟ್ಟಿದ್ದಾರೆ. ಏನೇ ಬಂದರು ಸರಿದೂಗಿಸಿಕೊಂಡು, ಹೊಂದಿಕೊಂಡು ಹೋಗು. ಮನೆಗೆ ಬಂದು ನಮ್ಮ ಮರ್ಯಾದೆ ಕಳೀಬೇಡ, ನಮ್ಮ ಹೆಸರು ಕೆಡಿಸಬೇಡ ಎಂದು. ನೋವಾದಾಗೆಲ್ಲ ತವರು ನೆನಪಾದರು ಹೊಂದಿಕೊಳ್ಳುವುದನ್ನೇ ಪರಿಪಾಠ ಮಾಡಿಕೊಂಡು ಎಲ್ಲೂ ಹೋಗದ ಅವಳ ಲೋಕದಲ್ಲಿ ಈಗ ಏನಿರಬಹುದು ನೀವೇ ಹೇಳಿ??

ಮಾತನ್ನೆಲ್ಲಾ ಸೆರಗಲಿ ಗಂಟುಕಟ್ಟಿ
ಮೌನದ ನೆರಿಗೆ ಹಿಡಿದು ಸೊಂಟಕ್ಕೆ ಸಿಕ್ಕಿಸಿ
ಓಡಾಡುತ್ತಿದ್ದ ಅವಳ ಸೀರೆಯ ಅಂಚಿನ
ಮಾಸಿದ ಬಣ್ಣಕ್ಕೂ ಒಂದು ಆಸೆ ಇತ್ತು..

ಭಾವನೆಗಳನ್ನೆಲ್ಲ ಒಲೆಗೆ ಒಡ್ಡಿ
ಅವರಿಚ್ಚೆಯ ಒಗ್ಗರಣೆಯನೇ ಅಡುಗೆಗಚ್ಚಿ
ಮಂದಿಗೆಲ್ಲ ನಗುನಗುತ ಉಣಬಡಿಸುತ್ತಿದ್ದ
ಕೈಗಳಲ್ಲಿ ಅಳಿಸಿಹೋಗುತ್ತಿದ್ದ ರೇಖೆಗೂ
ಒಂದು ಭವಿಷ್ಯವಿತ್ತು..

ಮಾತಿಗೆ ಎದುರಾಗಿ ನಿಂತು ಒಂದು ಸೊಲ್ಲೆತ್ತದೆ
ಅವನೇಟುಗಳಿಗೆ ಕಣ್ಣೀರಿಡದೆ ಕಚ್ಚಿ ಸಹಿಸುತ್ತಿದ್ದ
ತುಟಿಯಲ್ಲಿ ಕರಗಿಹೋಗುತ್ತಿದ್ದ
ಬಣ್ಣಕ್ಕೂ ಒಂದು ಬದುಕಿತ್ತು

ಮೂರು ಗಂಟಿನಿಂದ ಬಂಧಿಯಾಗಿ
ನಂಟಿನಿಂದ ಬಿಡುಗಡೆಯಾಗಿ
ನಾಲ್ಕು ಗೋಡೆಗೆ ಸೀಮಿತವಾಗಿ
ಕರುಳಬಳ್ಳಿಗಾಗೇ ಜೀವ ಹಿಡಿದಿಟ್ಟುಕೊಂಡು
ಬಂದಿಖಾನೆಯ ಕಂಬಿ ಎಣಿಸುತ್ತಿದ್ದ
ಕೈಗಳು ತೊಟ್ಟ ಹಸಿರುಬಳೆಗಳಿಗೂ
ಒಂದು ಬಯಕೆ ಇತ್ತು

ಲಂಗ ತೊಟ್ಟು ಗೆಳತಿಯರೊಡನೆ ಊರ
ತುಂಬಾ ನವಿಲಂತೆ ಕುಣಿಯುತ್ತಿದ್ದ
ಬಾಲ್ಯದ ನೆನಪುಗಳ ಅಕ್ಕಿ ಡಬ್ಬದೊಳಗಿಟ್ಟು
ಅವನ್ಹಿಂದೆಯೇ ಹೆಜ್ಜೆ ಹಾಕುತ್ತಿದ್ದ
ಕಾಲುಗಳು ಕಟ್ಟಿದ್ದ ಸದ್ದೇ ಬಾರದ
ಗೆಜ್ಜೆಗೂ ಒಂದು ಲಜ್ಜೆ ಇತ್ತು.