ಪಾಶ್ಚಿಮಾತ್ಯದ ಜನರು ಯಾರೇ ಸಿಗಲಿ, ಅವರು ನನ್ನ ಹವ್ಯಾಸಗಳ ಬಗ್ಗೆ ಕೇಳುತ್ತಾರೆ, ನನ್ನ ಆಸಕ್ತಿಗಳ ಬಗ್ಗೆ ಕೇಳುತ್ತಾರೆ, ದೇಶ-ವಿದೇಶಗಳ ಪರ್ಯಟನೆ ಬಗ್ಗೆ ಕೇಳುತ್ತಾರೆ ವಿನಃ, ನನಗೆ ಮದುವೆ ಆಗಿದೆಯ? ಮಕ್ಕಳು ಎಷ್ಟು? ನನ್ನ ಸಂಬಳ ಎಷ್ಟು? ನನ್ನ ಬಳಿ ಕಾರು ಇದೆಯಾ? ಆಸ್ತಿ ಎಷ್ಟು ಮಾಡಿದ್ದೇನೆ? ಈ ರೀತಿಯ ವೈಯಕ್ತಿಯ ವಿಷಯಗಳ ಮೇಲೆ ನನ್ನನ್ನು ಅಳೆಯುವುದೂ ಇಲ್ಲ ಮತ್ತು ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕೇವಲ ಮತ್ತು ಕೇವಲ ಮನುಷ್ಯನನ್ನಾಗಿ ನೋಡಬೇಕೆ ಹೊರತು ಅವನ ಆಸ್ತಿ ಅಂತಸ್ತಿನಿಂದಲ್ಲ ಎನ್ನುವುದನ್ನು ಕಲಿಸಿದರು.
ಪ್ರಶಾಂತ್‌ ಬೀಚಿ ಅಂಕಣ

 

ಬೆಂಗಳೂರಿನಲ್ಲಿ ಸ್ವಂತಕ್ಕಲ್ಲದಿದ್ದರೂ, ಎರಡು ಬೆಡ್ ರೂಂ ಇರುವ ಬಾಡಿಗೆಮನೆಯಾದರೂ ಇರಬೇಕು. ಮನೆಗೆ ಒಂದು ದ್ವಿಚಕ್ರ ವಾಹನ, ಒಂದು ಕಾರು ಇರಬೇಕು. ಹೊರ ವಲಯದಲ್ಲಾದರೂ ಪರವಾಗಿಲ್ಲ ಒಂದು ಮೂವತ್ತು-ನಲವತ್ತರ ಸೈಟ್ ಇರಬೇಕು. ಸಮಾರಂಭಗಳಿಗೆ ಹೋದಾಗ ಹೆಂಗಸರ ಕತ್ತಲ್ಲಿ ಎರಡೆಳೆ ಸರ, ಕೈಯಲ್ಲಿ ನಾಲ್ಕು ಬಂಗಾರದ ಬಳೆ ಇರಲೇಬೇಕು. ಮಕ್ಕಳಿದ್ದರೆ, ಅವರು ವರ್ಷಕ್ಕೆ ಎರಡು ಲಕ್ಷ ಫೀ ಕಟ್ಟಿಸಿಕೊಳ್ಳುವ ಇಂಗ್ಲೀಷ್ ಮಾಧ್ಯಮದ ಶಾಲೆಯಲ್ಲೆ ಓದುತ್ತಿರಬೇಕು. ಆ ಮನೆಯ ಗಂಡಸಿನ ಕೆಲಸ ಕಸ ಗುಡಿಸುವುದಾದರೂ ಪರವಾಗಿಲ್ಲ, ಅದು ಐ ಟಿ ಕಂಪೆನಿಯಲ್ಲೇ ಆಗಿರಬೇಕು. ಇದು ಬೆಂಗಳೂರಿನ ಹೆಮ್ಮೆಯ ಮಧ್ಯಮವರ್ಗದ ಕುಟುಂಬದ ಪರಿಸ್ಥಿತಿ. ತಿನ್ನುವುದಕ್ಕೆ ಕಡಿಮೆ ಇದ್ದರೂ ಪರವಾಗಿಲ್ಲ, ಹೇಳಿಕೊಳ್ಳಲು ಇರಲೇಬೇಕಾದ ಸಂಗತಿ.

ಇದೆಲ್ಲಾ ಇಷ್ಟಕ್ಕೆ ನಿಲ್ಲುವುದಿಲ್ಲ. ಮಧ್ಯಮ ವರ್ಗದ ಬಹುತೇಕ ಕುಟುಂಬಗಳಿಗೆ ಈ ರೀತಿಯ ರೋಗ ಬಡಿದಿರುತ್ತದೆ. ಇಬ್ಬರು ಮಯಸ್ಸಾದ ಹೆಂಗಸರು ಸಿಕ್ಕರೆ ಅವರು ಮಾತನಾಡುವುದು, “ನನ್ನ ಮಗ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಾನೆ. ಬೆಳಿಗ್ಗೆ ಆರು ಗಂಟೆಗೆ ಹೋದರೆ ಮನೆಗೆ ಬರೋದೆ ರಾತ್ರಿ ಎಂಟಕ್ಕೆ. ಅವನ ಆಫೀಸಿನಲ್ಲಿ ಎಷ್ಟು ಬೇಕೋ ಅಷ್ಟು ಕಾಫಿ, ಟೀ ಕುಡಿಯಬಹುದಂತೆ. ಕೆಲಸದ ಮಧ್ಯದಲ್ಲಿ ಬೇಸರವಾದರೆ ಆಟವಾಡಲು ಆಟದ ಕೋಣೆಯಿದೆಯಂತೆ, ಆದರೆ ಅವನು ಮ್ಯಾನೇಜರ್ ಆಗಿರುವುದರಿಂದ ಕೆಲಸ ಜಾಸ್ತಿ ಇರುವ ಕಾರಣ ಕಾಫಿ ಕುಡಿಯಲು ಸಹ ಟೈಮ್ ಇರುವುದಿಲ್ಲವಂತೆ. ಅಂದಂಗೆ ನಿಮ್ಮ ಮಗ ಟೀಚರ್ ಅಲ್ವ, ಅದಿಕ್ಕೆ ಸಂಜೆ ಐದು ಗಂಟೆಗೆ ಮನೆಗೆ ಬಂದಿರುತ್ತಾನೆ. ಬೆಳಗ್ಗೆ ಒಂಬತ್ತು ಗಂಟೆಗೆ ಗೇಟಿನ ಬಳಿ ನಿಂತಿದ್ದ. ಅವನು ನನ್ನ ಮಗನ ಹಾಗೆ ಓದಿದ್ದರೆ ಹೀಗೆ ಟೀಚರ್ ಆಗಬೇಕಾಗಿರಲಿಲ್ಲ. ಹೋಗಲಿ ಬಿಡಿ, ನನ್ನ ಮಗನ ಹತ್ತಿರ ಮಾತನಾಡಲು ಹೇಳಿ, ಯಾವುದಾದರೂ ಸಾಫ಼್ಟ್ ವೇರ್ ಕಂಪೆನಿಯಲ್ಲಿ ಸೇರುವುದು ಹೇಗೆ ಅಂತ ಹೇಳುತ್ತಾನೆ. ಪಾಪ ನಿಮ್ಮನ್ನ ನೋಡಿದರೆ ನನಗೆ ಬೇಸರವಾಗುತ್ತದೆ.” ಹೀಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವುದೇ ಒಂದು ಗರ್ವದ ವಿಷಯದಂತೆ ಮಾತನಾಡುತ್ತಾರೆ. ಬೇರೆ ಕೆಲಸ ಮಾಡುವವರನ್ನು ಬಹಳ ಕೀಳಾಗಿ ನೋಡುತ್ತಾರೆ.

ಕಳೆದ ಕೆಲವು ದಶಕಗಳ ಅವಧಿಯಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುವುದು ಎಂದರೆ, ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದಂತಾಗಿದೆ. ಅಮೇರಿಕಾಗೆ ಹೋಗಿ ಬರುವುದು ಎಂದರೆ ಮಂಡ್ಯ ಮೈಸೂರಿಗೆ ಹೋಗಿ ಬಂದಂತೆ ಮಾತನಾಡುತ್ತಾರೆ. ತಂದೆ ತಾಯಿಯರು ಅವರ ಮಕ್ಕಳ ಬೆಳವಣಿಗೆಯನ್ನು ತಮ್ಮ ಜಂಬ ಕೊಚ್ಚಿಕೊಳ್ಳಲು ಹೇಳಿಕೊಂಡು, ಬೇರೆ ಕೆಲಸ ಮಾಡುವವರನ್ನು ಹೀಯಾಳಿಸುವಂತೆ ಮಾತನಾಡುವುದು ಸಾಮಾನ್ಯವಾಗಿದೆ.

ಭಾರತದ ಸಂಸ್ಕೃತಿ, ಪರಂಪರೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಭರದಲ್ಲಿ ಬೇರೆ ಪರಂಪರೆ ಮತ್ತು ಸಂಸ್ಕೃತಿಯನ್ನು ಹೀಯಾಳಿಸುವುದನ್ನು ತಪ್ಪು ಎಂದು ಭಾವಿಸುವುದೇ ಇಲ್ಲ. ಹಣೆಗೆ ಕುಂಕುಮ ಇಡುವುದು ನಮ್ಮ ಸಂಸ್ಕೃತಿಯಾದರೆ, ಇಡದಿರಿವುದು ಬೇರೆಯವರ ಪದ್ಧತಿ. ಎರಡನ್ನೂ ಗೌರವಿಸುವುದು ಮಾನವ ಧರ್ಮ. ಆದರೆ ನಮ್ಮ ಸಂಸ್ಕೃತಿ ಹೆಚ್ಚು ಎನ್ನುವ ಹುಚ್ಚಿನಲ್ಲಿ ಹಣೆಗೆ ಇಡದವರನ್ನು ಹೀಯಾಳಿಸುವುದು ಸರಿಯೆ?

ಕಳೆದ ಕೆಲವು ದಶಕಗಳ ಅವಧಿಯಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುವುದು ಎಂದರೆ, ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದಂತಾಗಿದೆ. ಅಮೇರಿಕಾಗೆ ಹೋಗಿ ಬರುವುದು ಎಂದರೆ ಮಂಡ್ಯ ಮೈಸೂರಿಗೆ ಹೋಗಿ ಬಂದಂತೆ ಮಾತನಾಡುತ್ತಾರೆ.

ಪಾಶ್ಚಿಮಾತ್ಯರನ್ನು ಎಲ್ಲಾ ವಿಷಯದಲ್ಲೂ ತೆಗಳುವ ಹವ್ಯಾಸ ಅನೇಕರಿಗಿದೆ. ಆದರೆ ಅವರ ಹಲವಾರು ಒಳ್ಳೆಯ ವಿಷಯಗಳನ್ನು ಪಾಲಿಸಲು ಹಿಂಜರಿಯುತ್ತಾರೆ.

ಇಂಗ್ಲೆಂಡಿನ ಗ್ರಂಥಾಲಯದಲ್ಲಿ ಐವತ್ತು ವರ್ಷ ಮೀರಿದ ಒಬ್ಬ ಹೆಣ್ಣುಮಗಳ ಪರಿಚಯವಾಯಿತು. ನಾನು ಆ ದೇಶಕ್ಕೆ ಹೊಸಬನೆಂದು ತಿಳಿದು, ನನ್ನನ್ನು ಅವರ ಮ್ಯೂಸಿಕ್ ಬ್ಯಾಂಡ್ ವೀಕ್ಷಿಸಲು ಕರೆದಳು. ಸುಮಾರು ಹನ್ನೆರಡು ಜನರ ತಂಡ, ಒಬ್ಬ ದೊಡ್ಡ ಡ್ರಂ ಬಾರಿಸುತ್ತಿದ್ದರೆ, ಇನ್ನಿಬ್ಬರು ಸಣ್ಣ ಡ್ರಂ ಬಾರಿಸುತ್ತಿದ್ದರು. ನಾಲ್ಕು ಜನ ತುತ್ತೂರಿಯನ್ನು ನುಡಿಸುತ್ತಿದ್ದರೆ, ಇಬ್ಬರು ಜಾಗಟೆಯಂತಹ ವಾದ್ಯವನ್ನು ನುಡಿಸುತ್ತಿದ್ದರು. ಅ ಬ್ಯಾಂಡಿನ ನುರಿತ ಸಂಗೀತಕಾರ ಎಲ್ಲರಿಗೂ ವಾದ್ಯಗಳನ್ನು ಹೇಗೆ ನುಡಿಸಬೇಕು ಎಂದು ತರಬೇತಿ ನೀಡುತ್ತಿದ್ದ. ಸುಮಾರು ಆರು ವಾರಗಳ ಕಾಲ ನಾನು ಅವರೊಡನೆ ಕಲಿಯಲು ಹೋಗಿದ್ದೆ, ಮೊದಲ ದಿನ ನನ್ನನ್ನು ನಡೆಸಿಕೊಂಡಂತೆ ಕೊನೆಯ ದಿನದ ತನಕವೂ ನಡೆಸಿಕೊಂಡರು. ಒಂದು ದಿನವೂ ನನ್ನ ವೈಯಕ್ತಿಕ ವಿಷಯವನ್ನು ಕೇಳಲಿಲ್ಲ. ಎಲ್ಲಾ ಬಿಳಿಯರ ಮಧ್ಯೆ ನಾನೊಬ್ಬನೇ ಕಂದು ಚರ್ಮದವನು, ಆ ವ್ಯತ್ಯಾಸವನ್ನು ಯಾರೂ ಗುರುತಿಸಲಿಲ್ಲ. ಅಲ್ಲಿ ನಮಗೆ ಸಂಗೀತವೊಂದೇ ಧರ್ಮ, ಅಲ್ಲಿರುವ ತನಕ ನಾವೆಲ್ಲರೂ ಒಂದೆ. ನನ್ನಲ್ಲಿ ಎಷ್ಟು ಹಣ ಇದೆ, ಯಾವ ಕೆಲಸ, ಎಷ್ಟು ಆಸ್ತಿ ಇದೆ ಇದ್ಯಾವುದರ ವಿವರವನ್ನು ಅಲ್ಲಿಯವರಾರೂ ಕೇಳಲಿಲ್ಲ. ನಾನು ಮುಂದಿನವಾರದಿಂದ ಬರುವುದಿಲ್ಲ ಎಂದಾಗ, “ನಿನ್ನ ಮುಂದಿನ ಹೆಜ್ಜೆ ಸುಗಮವಾಗಿರಲಿ” ಎಂದು ಹಾರೈಸಿ ಕಳಿಸಿಕೊಟ್ಟರೆ ಹೊರತು ಹೆಚ್ಚಿನದೇನು ಕೇಳಲಿಲ್ಲ.

ಅವರಲ್ಲೆ ಪರಿಚಯವಾದ ಒಬ್ಬರ ಜೊತೆಗೆ ಒಮ್ಮೆ ಒಂದು ಪಬ್ ಗೆ ಹೋಗಿದ್ದೆ. ನಾನು ಬಿಯರ್ ಕುಡಿಯುವುದಿಲ್ಲ ಎಂದು ಹೇಳಿದಾಗ, ನಾನೂ ಕೂಡ ಆಲ್ಕೊಹಾಲ್ ಕುಡಿಯುವುದಿಲ್ಲ, ಆದರೆ ಅಲ್ಲಿ ಕ್ವಿಜ಼್ ಕಾಂಪಿಟೇಷನ್ ಇದೆ, ನಿನಗೆ ಇಷ್ಟವಾಗಬಹುದು ಎಂದರು. ನಾನೆ ಒಪ್ಪಿ ಅಲ್ಲಿಗೆ ಹೋಗಿದ್ದೆ. ಪಬ್ ನಲ್ಲಿ ಓಪನ್ ಕ್ವಿಜ಼್, ಅದರ ಯೋಚನೆಯನ್ನೂ ನಾವು ಬೆಂಗಳೂರಿನಲ್ಲಿ ಮಾಡುವುದಿಲ್ಲ. ಅಲ್ಲಿಗೆ ಹೋದಾಗ ಬೇರೆ ಆರು ಜನರ ಒಂದು ಗುಂಪು ಪರಿಚಯವಾಯಿತು. ಹತ್ತು ಜನರ ಒಂದು ತಂಡ ಮಾಡಿಕೊಂಡು ನಮ್ಮ ಕ್ವಿಜ಼್ ತಂಡವನ್ನು ಹತ್ತು ಪೌಂಡ್ ಕೊಟ್ಟು ನೊಂದಾಯಿಸಿಕೊಂಡೆವು. ಎಲ್ಲರೂ ಒಂದೊಂದು ಪೌಂಡ್ ಕೊಟ್ಟಿದ್ದೆವು. ಅವರವರಿಗೆ ಬೇಕಾದ ಪಾನೀಯವನ್ನು ಅವರವರೆ ದುಡ್ಡುಕೊಟ್ಟು ತೆಗೆದುಕೊಂಡು ಬಂದರು. ಸುಮಾರು ಎಂಟು ತಂಡಗಳು ಭಾಗವಹಿಸಿದ್ದವು. ಒಂದೊಂದು ತಂಡಕ್ಕೆ ಒಂದು ಕಾಗದವನ್ನು ಕೊಟ್ಟರು, ಕಾರ್ಯಕ್ರಮ ಶುರುವಾಯಿತು, ಮೈಕ್ ನಲ್ಲಿ ಒಳಗಿನಿಂದಲೆ ಒಬ್ಬ ಪ್ರಶ್ನೆಯನ್ನು ಕೇಳಲು ಆರಂಭಿಸಿದ. ಪ್ರತೀ ಪ್ರಶ್ನೆಗೂ ನಾವೆಲ್ಲ ಮಾತನಾಡಿಕೊಂಡು ಅವರು ಕೊಟ್ಟಿದ್ದ ಕಾಗದದಲ್ಲಿ ಉತ್ತರ ಬರೆಯುತ್ತಿದ್ದೆವು. ಒಮ್ಮೆ ನಾನು ಸರಿಯಾದ ಉತ್ತರ ಹೇಳಿದೆ, ನನ್ನ ತಂಡದವರೆಲ್ಲಾ ನನಗೆ ಅಭಿನಂದಿಸಿದರು. ಮುಂದಿನ ಪ್ರಶ್ನೆಗ ಉತ್ತರ ಗೊತ್ತಿಲ್ಲದಿದ್ದಾಗ ಫೋನ್ ತೆಗೆದು ಇಂಟರ್ನೆಟ್ ನಲ್ಲಿ ನೋಡಿ ಹೇಳಿದೆ. ನನ್ನನ್ನು ನೋಡಿದ್ದೇ ಎಲ್ಲರೂ ಒಟ್ಟಿಗೆ ಹೇಳಿದ್ದು “ನೋ ಚೀಟಿಂಗ್”. ನನಗೆ ಅವಮಾನವಾದಂತಾಯಿತು. ನನ್ನ ತಂಡದವರಿಗೆ ಅನುಕೂಲವಾಗುತ್ತಿದ್ದರೂ ಅವರು ನನ್ನ ಉತ್ತರವನ್ನು ಪರಿಗಣಿಸಲಿಲ್ಲ. ಪಬ್ ನಲ್ಲಿ ಕುಳಿತು ಕ್ವಿಜ಼್ ಆಡುವುದೇ ಒಂದು ವಿಶೇಷ ಅನುಭವ, ಅಂಥಹ ಜಾಗದಲ್ಲೂ ಮೋಸ ಮಾಡಬಾರದು ಎಂದು ಹೇಳಿಸಿಕೊಂಡಿದ್ದು ಮರೆಯಲಾಗದ ಅನುಭವ.

ಕೆನಡಾದಲ್ಲೂ ಕೂಡ ಬೇರೆ ಬೇರೆ ದೇಶದ ಜನರ ಪರಿಚಯವಾಗುತ್ತಿದೆ. ಪಾಶ್ಚಿಮಾತ್ಯದ ಜನರು ಯಾರೇ ಸಿಗಲಿ, ಅವರು ನನ್ನ ಹವ್ಯಾಸಗಳ ಬಗ್ಗೆ ಕೇಳುತ್ತಾರೆ, ನನ್ನ ಆಸಕ್ತಿ ಬಗ್ಗೆ ಕೇಳುತ್ತಾರೆ, ದೇಶ-ವಿದೇಶಗಳ ಪರ್ಯಟನೆ ಬಗ್ಗೆ ಕೇಳುತ್ತಾರೆ ವಿನಃ, ನನಗೆ ಮದುವೆ ಆಗಿದೆಯ? ಮಕ್ಕಳು ಎಷ್ಟು? ನನ್ನ ಸಂಬಳ ಎಷ್ಟು? ನನ್ನ ಬಳಿ ಕಾರು ಇದೆಯಾ? ಆಸ್ತಿ ಎಷ್ಟು ಮಾಡಿದ್ದೇನೆ? ಈ ರೀತಿಯ ವೈಯಕ್ತಿಯ ವಿಷಯಗಳ ಮೇಲೆ ನನ್ನನ್ನು ಅಳೆಯುವುದೂ ಇಲ್ಲ ಮತ್ತು ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕೇವಲ ಮತ್ತು ಕೇವಲ ಮನುಷ್ಯನನ್ನಾಗಿ ನೋಡಬೇಕೆ ಹೊರತು ಅವನ ಆಸ್ತಿ ಅಂತಸ್ತಿನಿಂದಲ್ಲ ಎನ್ನುವುದನ್ನು ಕಲಿಸಿದರು.

ಹೋದ ತಿಂಗಳು ಒಂದು ಪಾರ್ಕಿನ ಹತ್ತಿರ ಹೊಸದಾಗಿ ಒಬ್ಬ ಕಂದು ಬಣ್ಣದ ವ್ಯಕ್ತಿ ಪರಿಚಯವಾದ, ಸಿಕ್ಕ ಹತ್ತು ನಿಮಿಷದಲ್ಲೆ ನನ್ನ ವೈಯಕ್ತಿಕ ವಿಷಯಗಳನ್ನೆಲ್ಲ ಪಡೆದುಕೊಂಡ. ಅವನಿಗಿಂತ ಆರ್ಥಿಕವಾಗಿ ಕಡಿಮೆ ಇದ್ಡೇನೆ ಎಂದು ತಿಳಿಯಿತು, ಹನ್ನೊಂದನೆ ನಿಮಿಷಕ್ಕೆ ನನ್ನ ಮಾತಿಗೆ ಸರಿಯಾಗಿ ಉತ್ತರಿಸದೆ ನಿಧಾನವಾಗಿ ದೂರವಾದ.

ಮನುಷ್ಯನನ್ನು ಮನುಷ್ಯನಂತೆ ಕಾಣದಿದ್ದರೆ ಯಾವ ಧರ್ಮ ಯಾವ ಸಂಸ್ಕೃತಿ…