ಆಗ ಊರಲ್ಲಿ ಯಾವುದೇ ಮನೆಯ ಮದುವೆಯಾದ್ರೂ ನಮಗೆ ಊರ ಹಬ್ಬದ ವಾತಾವರಣದಂತೆ ಅನಿಸುತ್ತಿತ್ತು. ಮದುವೆ ಮನೆ ಊಟದ ಖುಷಿ ಒಂದೆಡೆಯಾದರೆ ಅಲ್ಲಿ ಮೈಕಿನಲ್ಲಿ ಹಾಕಿರುತ್ತಿದ್ದ ಚಲನಚಿತ್ರ ಗೀತೆಗಳನ್ನು ಕೇಳುವುದೂ ಖುಷಿ ಕೊಡುತ್ತಿತ್ತು. ಮೊದಲಿಗೆ ‘ಮೂಷಿಕ ವಾಹನ ಮೋದಕ ಹಸ್ತ’ ಹಾಡಿನಿಂದ ಮದುವೆಯ ಮನೆಯ ಹಾಡುಗಳು ಶುರುವಾಗುತ್ತಿದ್ದವು. ಆಗ ಊರಲ್ಲಿ ಮದುವೆಯಾದರೆ ಆ ಮದುವೆಯಲ್ಲಿ ಊಟ ಬಡಿಸೋಕೆ ಅಂತಾ ದುಡ್ಡು ಕೊಟ್ಟು ಜನರನ್ನು ಕರೆಸುತ್ತಿರಲಿಲ್ಲ. ಆ ಊರ ಯುವಕರೇ ಬಡಿಸುತ್ತಿದ್ದರು. ಚಿಕ್ಕವರು ನೀರು, ಉಪ್ಪು ಬಡಿಸುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಆರನೆಯ ಕಂತು ನಿಮ್ಮ ಓದಿಗೆ
ನಮ್ಮ ಶಾಲೇಲಿ ಆಗ ಮೂರು ಮತ್ತು ನಾಲ್ಕನೇ ಕ್ಲಾಸು ದೊಡ್ಡ ಹಾಲ್ ಒಂದರಲ್ಲೇ ನಡೆಯುತ್ತಿತ್ತು. ಒಂದು ಬದಿಯಲ್ಲಿ ಮೂರು, ಮತ್ತೊಂದು ಬದಿಯಲ್ಲಿ ನಾಲ್ಕನೇ ಕ್ಲಾಸು. ಶಾಲೆಯ ಯಾವುದೇ ಸಮಾರಂಭ ಹಾಗೂ ಪ್ರತಿ ಶುಕ್ರವಾರ ಶಾರದಾ ಪೂಜೆ ಇದೇ ಹಾಲ್‌ನಲ್ಲಿ ನಡೆಯುತ್ತಿತ್ತು. ಆಗ ನಮ್ಮ ಶಾಲೆಯ ಮಕ್ಕಳು ತಮ್ಮ ಶಕ್ತ್ಯಾನುಸಾರ ಐದು ಪೈಸೆಯೋ, ಹತ್ತು ಪೈಸೆಯೋ ಕೊಡಬೇಕಾಗಿತ್ತು. ಹಣ ಕೊಡುವುದು ಕಡ್ಡಾಯವೇನೂ ಇರಲಿಲ್ಲ. ಆದರೆ ಬಹುತೇಕ ಹುಡುಗರು ಕೊಡುತ್ತಿದ್ದರು. ಶಾಲೆಯ ಉನ್ನತ ತರಗತಿಯ ವಿದ್ಯಾರ್ಥಿಗಳು ಎಲ್ಲ ತರಗತಿಗಳ ಮಕ್ಕಳಿಂದ ಹಣ ಸಂಗ್ರಹಿಸೋ ಕೆಲಸ ಮಾಡ್ತಿದ್ರು. ಸಂಗ್ರಹಿಸಿದ ಹಣದಲ್ಲಿ ಪೆಪ್ಪರಮೆಂಟು ಖರೀದಿಸಿ ಪೂಜೆ ಮುಗಿದ ನಂತರ ಎಲ್ಲರಿಗೂ ಹಂಚುತ್ತಿದ್ದರು. ಈ ಸಮಯದಲ್ಲಿ ಪೆಪ್ಪರ್ ಮೆಂಟ್ ಹಂಚಿದವರು ನಮಗಿಂತ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದರು. ಅವರ ಜೊತೆ ಮನೆಗೆ ಹೋಗುವಾಗ ಇದು ನಮಗೆ ತಿಳಿಯುತ್ತಿತ್ತು. ನನಗೆ ಆಗ ‘ನಾನೂ ಎಷ್ಟೊತ್ತಿಗೆ ಏಳನೇ ಕ್ಲಾಸಿಗೆ ಹೋಗ್ತಿನೋ, ಹಣ ಸಂಗ್ರಹಿಸಿ ಪೆಪ್ಪರಮೆಂಟು ಹಂಚೋಕೆ ಹೋಗ್ತೀನೋ’ ಅಂತಾ ಅನಿಸುತ್ತಿತ್ತು. ಶಾರದಾ ಪೂಜೆಯಲ್ಲಿ ಗಂಡುಮಕ್ಕಳು ಹಾಡು ಹೇಳುವ, ಹೆಣ್ಣುಮಕ್ಕಳು ಡ್ಯಾನ್ಸ್ ಮಾಡುವ ಕಾರ್ಯಕ್ರಮ ಕೊಡುತ್ತಿದ್ದರು. ನಮ್ಮ ಶಾಲೆಯ ಹುಡುಗಿಯರು ‘ಏಳು ಸ್ವರವು ಸೇರಿ ಸಂಗೀತವಾಯಿತು, ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು’ ಎಂದು ಡ್ಯಾನ್ಸ್ ಮಾಡಿಕೊಂಡು ಹೇಳುತ್ತಿದ್ದ ಹಾಡು ಈಗಲೂ ನೆನಪಿನಲ್ಲಿದೆ.
ನಮ್ಮ ಶಾಲೆಯಲ್ಲಿ ವಿವಿಧ ಜಾತಿ, ಧರ್ಮದವರು ಇದ್ದರೂ ಸಹ ಈ ಶಾರದ ಪೂಜೆಯಲ್ಲಿ ಎಲ್ಲರೂ ಖುಷಿಯಿಂದ ಭಾಗವಹಿಸುತ್ತಿದ್ದೆವು. ಆಗ ನಮ್ಮ ಶಾಲೆಯಲ್ಲಿ ವರ್ಷಕ್ಕೊಮ್ಮೆ ಶಾರದ ಪೂಜೆಯನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಿದ್ದರು. ಇದೊಂಥರಾ ಈಗ ಮಾಡುವ ವಾರ್ಷಿಕೋತ್ಸವದ ರೀತಿ. ಆದರೆ ಅಲ್ಲಿ ಶಾಲಾ ಮಕ್ಕಳಿಗೆ ಮಾತ್ರ ಅವಕಾಶ ಇತ್ತು. ಆ ದಿನ ಶಾಲೆಯಲ್ಲಿ ಮಂಡಕ್ಕಿ ತಿಂಡಿ (ಮಂಡಕ್ಕಿಯನ್ನು ನೀರಿನಲ್ಲಿ ಹಿಂಡಿ ತೆಗೆದು ಅದಕ್ಕೆ ಒಗ್ಗರಣೆ ಹಾಕೋದು) ಮಾಡುತ್ತಿದ್ದರು. ಮನೆಯಲ್ಲಿ ಇದನ್ನು ಮಾಡುತ್ತಿದ್ದರಾದರೂ ಶಾಲೆಯಲ್ಲಿ ಮಾಡಿದ್ದು ತುಂಬಾ ರುಚಿಯೆನಿಸಿ ಚೆನ್ನಾಗಿ ತಿನ್ನುತ್ತಿದ್ದೆವು. ಇನ್ನು ಗಣಪತಿ ಹಬ್ಬ ಬಂದಾಗ ನಮಗೆ ಖುಷಿಯೋ ಖುಷಿ. ನಮ್ಮ ಶಾಲೆಯಲ್ಲಿ ಆಗ ಗಣಪತಿ ಇಟ್ಟು ಪೂಜಿಸುತ್ತಿದ್ದರು. ಅದನ್ನು ಮೂರು ದಿನ ಇಟ್ಟು ನಂತರ ಊರ ತುಂಬಾ ಮೆರವಣಿಗೆ ಮಾಡಿ ವಿಸರ್ಜನೆ ಮಾಡುತ್ತಿದ್ದೆವು. ಈ ಮೂರು ದಿನ ಗಣಪತಿ ಮುಂದೆ ಇಟ್ಟಿರೋ ದೀಪ ಆರಬಾರದೆಂದು ಕೆಲ ಹುಡುಗರು ಮತ್ತು ಒಬ್ಬ ಮೇಷ್ಟ್ರು ಶಾಲೆಯಲ್ಲಿ ಮಲಗುತ್ತಿದ್ದರು. ಆಗ ಗಣಪತಿ ವಿಸರ್ಜನೆ ಸಮಯದಲ್ಲಿ ಈಗಿನಂತೆ ಡಿಜೆ ಸೌಂಡ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರಲಿಲ್ಲವಾದರೂ ‘ಗಣಪತಿ ಬಪ್ಪ ಹೋಳಿಗೆ ತುಪ್ಪ’ ಎಂದು ಕೇಕೆ ಹಾಕಿಕೊಂಡು ಕುಣಿಯುತ್ತಾ ಹೋಗುತ್ತಿದ್ದೆವು. ಈ ಸಮಯದಲ್ಲಿ ಮೆರವಣಿಗೆಯಲ್ಲಿ ನಾನೂ ಅಣ್ಣಮ್ಮನ ಡ್ಯಾನ್ಸ್ ಮಾಡಿ ಮನೆಯಲ್ಲಿ ನಮ್ಮಜ್ಜನ ಕೈಲಿ ಉಗಿಸಿಕೊಂಡಿದ್ದೂ ಉಂಟು! ನಮ್ಮಜ್ಜ ಏನು ತಿಳ್ಕೊಂಡಿದ್ರು ಅಂದ್ರೆ ಈ ರೀತಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ರೆ ನನ್ನ ಓದಿನ ಮೇಲೆ ಎಲ್ಲಿ ಋಣಾತ್ಮಕ ಪರಿಣಾಮ ಬೀರುತ್ತೇನೋ ಅಂತ! ಅದಕ್ಕೆ ನನಗೆ ವೀರಗಾಸೆ ಕಲಿಯೋಕೂ ಅವಕಾಶ ಮಾಡಿಕೊಟ್ಟಿರಲಿಲ್ಲ.
ನಲ್ಕುದುರೆಯ ಗ್ರಾಮ ದೇವರು ವೀರಭದ್ರೇಶ್ವರ ಆಗಿದ್ದುದರಿಂದ ಇಲ್ಲಿ ಹಬ್ಬಗಳಲ್ಲಿ ವೀರಗಾಸೆಯವರನ್ನು ಕರೆಸುತ್ತಿದ್ದುದು ಸಾಮಾನ್ಯವಾಗಿತ್ತು. ಈ ಕಲೆ ನನ್ನನ್ನು ತುಂಬಾ ಸೆಳೆದಿತ್ತು. ‘ಆಹಾಹಾ ರುದ್ರ ಕಡವೀರ ಭದ್ರ..’ ಎಂದು ಖಡ್ಗದ ಮಾದರಿ ಹಿಡಿದವರು ಹೇಳುತ್ತಿದ್ದರೆ ಮೈಯೆಲ್ಲಾ ರೋಮಾಂಚನವೆನಿಸುತ್ತಿತ್ತು. ವೀರಭದ್ರನ ವೇಷ ತೊಟ್ಟವರನ್ನು ನೋಡಿದರೆ ಹೆದರಿಕೆಯ ಜೊತೆ ಭಕ್ತಿಭಾವ ಬರುತ್ತಿತ್ತು. ಆ ಕುಣಿತವು ನನಗೂ ಕುಣಿಯುವಂತೆ ಮಾಡುತ್ತಿತ್ತು. ಕೆಲ ಹುಡುಗರು ‘ಆಹಾಹ ರುದ್ರ ಕಡವೀರ ಭದ್ರ, ಅತ್ತೆ ಮನೆಗೆ ಹೋಗಿದ್ದೆ ಮೂರು ಕೆಜಿ ಅಕ್ಕಿ ತಿಂದಿದ್ದೆ. ಅದರಲ್ಲೊಂದು ಕಲ್ಲಿತ್ತು. ಕಟುಮ್ ಅಂತಾ ಅದನ್ನ ಕಡಿದೆ. ಆಗ ಉಡುದಾರ ಪಟ್ ಅಂತು’ ಅಂತಾ ಹೇಳೋದನ್ನು ಕೇಳಿ ಅದನ್ನೇ ಕಲಿತು ಆಗಾಗ್ಗೆ ಅದನ್ನೇ ಮನೆಯವರ ಮುಂದೆ ಹೇಳ್ತಿದ್ದೆ!! ವೀರಗಾಸೆ ಕಲಿಯಲು ನನಗೆ ವಿಪರೀತ ಆಸೆ ಇತ್ತಾದರೂ ಕಲಿಯಲು ಹೋಗಲು ಕೇಳಿದರೆ ಮನೆಯಲ್ಲಿ ಬೈಯುತ್ತಾರೆಂದು ಹೆದರಿ ಸುಮ್ಮನಾಗುತ್ತಿದ್ದೆ.
ಹಬ್ಬದಲ್ಲಿ ಪರ ಊರಿನಿಂದ ಬರುವ ಈ ವೀರಗಾಸೆ ತಂಡದವರಿಗೆ ಹಣ ಕೊಡಬೇಕಾಗಿತ್ತು. ‘ಹಣವನ್ನು ಉಳಿಸಲು ನಾವೇ ಯಾಕೆ ಒಂದು ತಂಡವನ್ನು ಕಟ್ಟಿಕೊಳ್ಳಬಾರದು?’ ಎಂದು ಊರ ಕೆಲ ಯುವಕರು ‘ವೀರಭದ್ರೇಶ್ವರ ಯುವಕರ ಸಂಘ’ ಎಂಬ ತಂಡ ಕಟ್ಟಿಕೊಂಡು ಪ್ರಾಕ್ಟೀಸ್ ಮಾಡಲು ಶುರು ಮಾಡಿದರು. ಇದಕ್ಕಾಗಿ ಆ ಕಲೆ ಕಲಿತ ಒಬ್ಬರನ್ನು ಕರೆಸಿ ಊರ ಹನುಮಪ್ಪನ ಗುಡಿಯಲ್ಲಿ ಅವರಿಂದ ಪ್ರಾಕ್ಟೀಸ್ ಮಾಡುತ್ತಿದ್ದರು. ಆಗ ನಾನು ಆಗಾಗ್ಗೆ ಹೋಗಿ ಕೆಲವೊಂದು ಒಡಪುಗಳನ್ನು ಕಲಿತುಕೊಂಡಿದ್ದೆ. ಸಮಾಳೆ ಬಡಿಯುವ ವಿಧಾನವನ್ನು ನೋಡಿ ನನಗೂ ಬಡಿಯಬೇಕೆಂದು ಅನಿಸಿದರೂ, ಆದರೆ ಅವರು ಕೊಡದೇ ಇದ್ದುದಕ್ಕಾಗಿ, ಮನೆಯ ತಟ್ಟೆಯನ್ನು ಇಟ್ಟುಕೊಂಡು ಚಿಕ್ಕ ಕಡ್ಡಿಯಲ್ಲಿ ಬಡಿಯುತ್ತಿದ್ದುದೂ ಉಂಟು! ತೆಂಗಿನ ಚಿಪ್ಪಿಗೆ ಹೊಡೆದ ಬಲೂನನ್ನು ಕಟ್ಟಿಕೊಂಡು ಸಮಾಳೆ ರೀತಿ ಮಾಡಿಕೊಂಡು ಬಡಿದು ಖುಷಿ ಪಟ್ಟಿದ್ದಿದೆ. ಇಂದೂ ಸಹ ವೀರಗಾಸೆ ಕುಣಿತ ಕಂಡೊಡನೆ ಕುಣಿಯುವವರ ಜೊತೆ ನಿಂತು ಕುಣಿಯಬೇಕು ಅನಿಸುತ್ತೆ. ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಕೋಲಾಟ ನೋಡಿದರೂ ಖುಷಿ ಎನಿಸುತ್ತದೆ.
ಈಗಿನಂತೆ ಆಗ ನಾಸಿಕ್ ಡೋಲುಗಳು ನಮ್ಮ ಬದಿಗೆ ಬಂದಿರಲಿಲ್ಲ. ಊರಲ್ಲೊಂದು ವಾದ್ಯದವರ ಟೀಮೊಂದು ಇತ್ತು. ಶುಭ ಹಾಗೂ ಅಶುಭ ಕಾರ್ಯಕ್ರಮ, ದೇವರ ಕಾರ್ಯಗಳಿಗೂ ಸಹ ಇವರನ್ನೇ ಕರೆಸುತ್ತಿದ್ದರು. ಈಗೀಗ, ಬ್ಯಾಂಡ್ ಸೆಟ್‌ನವರು ಇವರೇ ಎಂದು ಗುರುತಿಸಬಹುದಾದ ಡ್ರೆಸ್ ನ್ನು ಆ ತಂಡದವರು ಹಾಕಿರುತ್ತಾರೆ. ಆದರೆ ನಮ್ಮೂರಿನಲ್ಲಿದ್ದವರು ನಾರ್ಮಲ್ ಡ್ರೆಸ್‌ನಲ್ಲೇ ಇರುತ್ತಿದ್ದರು. ಆದರೆ ಇವರು ತಮ್ಮ ವಾದ್ಯಗಳಿಂದ ಆಗ ಹೆಚ್ಚು ಟ್ರೆಂಡ್‌ನಲ್ಲಿ ಇರುತ್ತಿದ್ದ ಚಲನಚಿತ್ರ ಗೀತೆಗಳನ್ನು ಹಾಡುತ್ತಿದ್ದರು. ಇವರು ಆಯಾ ಸಂದರ್ಭಕ್ಕೆ ತಕ್ಕಂತೆ ತಮ್ಮ ಹಾಡನ್ನು ಬದಲಿಸುತ್ತಿದ್ದರು. ಸತ್ತ ಮನೆಯವರಾದರೆ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಈ ಸಾವು ನ್ಯಾಯವೇ?’ ಎಂಬ ಹಾಡು ನುಡಿಸುತ್ತಿದ್ದರು. ಮದುವೆ ಮನೆಯವರಿಗಾದರೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹಾಡು. ಮದುಮಕ್ಕಳ ಮೆರವಣಿಗೆ ಸಮಯದಲ್ಲಿ ‘ಮುತ್ತಣ್ಣ ಪೀಪಿ ಊದುವ’ ಹಾಡು, ತಾಳಿ ಕಟ್ಟುವ ವೇಳೆ ‘ತಾಳಿ ಕಟ್ಟುವ ಶುಭವೇಳೆ’ ಹಾಡು! ಯಾರೋ ಹೇಳಿದ್ರು ಅಂತಾ ಪೀಪಿ ಊದುವವರ ಮುಂದೆ ನಿಂತು ಉಪ್ಪಿನ ಕಾಯನ್ನು ನೆಕ್ಕಿ ಅವರಿಂದ ನಾನು ಉಗಿಸಿಕೊಂಡಿದ್ದೂ ಇದೆ.
ಆಗ ಊರಲ್ಲಿ ಯಾವುದೇ ಮನೆಯ ಮದುವೆಯಾದ್ರೂ ನಮಗೆ ಊರ ಹಬ್ಬದ ವಾತಾವರಣದಂತೆ ಅನಿಸುತ್ತಿತ್ತು. ಮದುವೆ ಮನೆ ಊಟದ ಖುಷಿ ಒಂದೆಡೆಯಾದರೆ ಅಲ್ಲಿ ಮೈಕಿನಲ್ಲಿ ಹಾಕಿರುತ್ತಿದ್ದ ಚಲನಚಿತ್ರ ಗೀತೆಗಳನ್ನು ಕೇಳುವುದೂ ಖುಷಿ ಕೊಡುತ್ತಿತ್ತು. ಮೊದಲಿಗೆ ‘ಮೂಷಿಕ ವಾಹನ ಮೋದಕ ಹಸ್ತ’ ಹಾಡಿನಿಂದ ಮದುವೆಯ ಮನೆಯ ಹಾಡುಗಳು ಶುರುವಾಗುತ್ತಿದ್ದವು. ಆಗ ಊರಲ್ಲಿ ಮದುವೆಯಾದರೆ ಆ ಮದುವೆಯಲ್ಲಿ ಊಟ ಬಡಿಸೋಕೆ ಅಂತಾ ದುಡ್ಡು ಕೊಟ್ಟು ಜನರನ್ನು ಕರೆಸುತ್ತಿರಲಿಲ್ಲ. ಆ ಊರ ಯುವಕರೇ ಬಡಿಸುತ್ತಿದ್ದರು. ಚಿಕ್ಕವರು ನೀರು, ಉಪ್ಪು ಬಡಿಸುತ್ತಿದ್ದರು. ನನ್ನ ಸ್ನೇಹಿತರ ಜೊತೆಗೂಡಿ ನಾನು ಒಂದೂ ಮದುವೆಗೂ ಬಿಟ್ಟಿದ್ದಿಲ್ಲ! ಶಾಲೆಗೆ ಚಕ್ಕರ್ ಹೊಡೆಯದಿದ್ರೂ ರಾತ್ರಿ ಊಟ, ಮಾರನೇ ದಿನ ಮಹೂರ್ತದ ಊಟಕ್ಕೆ ಲಂಚ್ ಅವರ್ ಬಿಟ್ಟ ಸಮಯದಲ್ಲಿ ಹೋಗಿದ್ದಿದೆ. ಆಗ ಜನರೂ ಹಾಗೆ ಇದ್ರು. ಒಂದು ಸಲ ಕರೆದ್ರೂ ಮದುವೆಗೆ ಬರ್ತಾ ಇದ್ರು. ಆದರೆ ಈಗ ಆಗಿನಂತೆ ಇಲ್ಲ! ಬಡವರ ಮದುವೆಯಲ್ಲಿ ಊಟಕ್ಕೆ ಮಾಲ್ದಿ(ಹಿಟ್ಟಿನಲ್ಲಿ ಮಾಡುವ ಸಿಹಿತಿನಿಸು) ಹಾಗೂ ಗೋಧಿ ಹುಗ್ಗಿ ಮಾಡಿದ್ರೆ ಶ್ರೀಮಂತರ ಮದುವೆಯಲ್ಲಿ ಲಾಡು, ಪಾಯಸ, ಜಿಲೇಬಿ ಮಾಡಿಸುತ್ತಿದ್ದರು.
ಮದುವೆಗಳು ಈಗಿನಂತೆ ಮದುವೆ ಛತ್ರಗಳಲ್ಲಿ ಆಗುತ್ತಿರಲಿಲ್ಲ. ಎಲ್ಲರ ಮದುವೆಗಳೂ ಅವರವರ ಮನೆ ಬಳಿಯೇ ನಡೆಯುತ್ತಿದ್ದವು. ಒಂದೊಮ್ಮೆ ಮದುವೆ ಮನೆಯವರ ಹತ್ತಿರ ಸಾಕಷ್ಟು ಜಾಗವಿಲ್ಲದಿದ್ದರೆ ಕಣಗಳಲ್ಲಿ ಊಟ ಹಾಕುವ ವ್ಯವಸ್ಥೆ ಮಾಡಲಾಗುತ್ತಿತ್ತು. ಪರ ಊರಿನಿಂದ ಬಂದ ನೆಂಟರಿಗೆ ಬಿಡದಿ ಮನೆ ಅಂತ ಅದೇ ಹಳ್ಳಿಯಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಉಳಿಸುವ ವ್ಯವಸ್ಥೆ ಇರುತ್ತಿತ್ತು. ಮದುವೆ ಬೇರೆ ಊರಿನಲ್ಲಿದ್ದರೆ ಆ ಮದುವೆಗೆ ಹೋಗಲು ಟ್ರಾಕ್ಟರ್ ಬಳಸಲಾಗುತ್ತಿತ್ತು. ಸ್ವಲ್ಪ ಸಿರಿವಂತರಾದರೆ ಲಾರಿ, ಇನ್ನೂ ಹೆಚ್ಚಿನ ಶ್ರೀಮಂತರಾಗಿದ್ದರೆ ಬಸ್ಸನ್ನೂ ಸಹ ವ್ಯವಸ್ಥೆ ಮಾಡಲಾಗುತ್ತಿತ್ತು. ಮದುವೆಯ ದಿನ ಮದುವೆ ಮಾಡುವವರ ಮನೆಯ ಓಣಿಯ ಮಾರ್ಗದ ರಸ್ತೆಯ ಬದಿಗಳಲ್ಲಿ ಲೈಟಿಂಗ್ಸ್ ಹಾಕಲಾಗುತ್ತಿತ್ತು. ಟಿಲ್ಲರ್ ಮತ್ತು ಟ್ರಾಕ್ಟರ್ ಮೇಲೆ ಕುರ್ಚಿಯ ಮೇಲೆ ವಧು ವರರನ್ನು ಕುಳ್ಳಿರಿಸಿ ಅವರ ಮೆರವಣಿಗೆ ಮಾಡಲಾಗುತ್ತಿತ್ತು. ಬಾವಿಯಿಂದ ನೀರನ್ನು ಮಧುವಣಗಿತ್ತಿಯಿಂದ ಸೇದಿಸಿ ಅದನ್ನು ಗಂಡಿನ ಮನೆ ಬಾಗಿಲವರೆಗೆ ಹೊರಿಸಿಕೊಂಡು ಬರುವ ಆಚರಣೆ ಮಾಡಲಾಗುತ್ತಿತ್ತು. ಈಗ ಹಳ್ಳೀಲಿ ಮದುವೆಗಳು ಮೊದಲಿನಂತೆ ನಡೆಯದೇ ಎಲ್ಲರೂ ಛತ್ರಗಳಲ್ಲಿ ಮಾಡುತ್ತಿದ್ದಾರೆ. ಕಣ ಸಂಸ್ಕೃತಿ ಮಾಯವಾಗಿರುವುದೂ, ಪಟ್ಟಣದ ಜೀವನದ ಶೈಲಿ ಹಳ್ಳಿಗಳಿಗೂ ಲಗ್ಗೆ ಇಟ್ಟಿರುವುದೂ ಇದಕ್ಕೆ ಕಾರಣವಾಗಿರಬಹುದು. ಹಿಂದೆ ಮದುವೆ ಮನೆಯಲ್ಲಿ ನಡೆಯುತ್ತಿದ್ದ ಅನೇಕ ಆಚರಣೆಗಳು ಇಂದು ಕಣ್ಮರೆಯಾಗುತ್ತಿವೆ. ಆಡಂಬರ ಹೆಚ್ಚಾಗುತ್ತಿದೆ. ಇಲ್ಲಿ ಪ್ರತಿಯೊಂದಕ್ಕೂ ಹಣದ ಲೆಕ್ಕಾಚಾರ ಹೆಚ್ಚಾಗುತ್ತಿದೆಯೇ ವಿನಃ ಮೊದಲಿನಷ್ಟು ಬಾಂಧವ್ಯ ಇದ್ದಂತೆ ಇಲ್ಲವೇನೋ ಅಂತಾ ಅನಿಸಿಬಿಡುತ್ತೆ.
ಆಗ ಪರೀಕ್ಷೆಯಲ್ಲಿ ಪಾಸ್ ಫೇಲ್ ಎಂದು ನಾವೇ ಗುರುತಿಸಿಕೊಳ್ಳುವ ಒಂದು ಚಟುವಟಿಕೆಯನ್ನು ನಮ್ಮ ಸೀನಿಯರ್‌ಗಳಿಂದ ನೋಡಿ ನಾವು ಕಲಿತಿದ್ದೆವು! ಅದನ್ನು ಅವರು ಹೀಗೆ ಮಾಡುತ್ತಿದ್ದರು; ಕೈಯನ್ನು ನೇರವಾಗಿ ಹಿಡಿದು ಅದರ ಮೇಲೆ ಇನ್ನೊಂದು ಕೈಯಿಯ ನಾಲ್ಕು ಬೆರಳುಗಳನ್ನು ಜೋಡಿಸಿಟ್ಟುಕೊಂಡು ಅದನ್ನು ಕೈಯಿಯ ತುದಿಯವರೆಗೂ ಇಡುತ್ತಾ, ಒಮ್ಮೆ ಪಾಸು ಒಮ್ಮೆ ಫೇಲು ಎಂದು ಹೇಳುತ್ತಾ ಬೆರಳುಗಳ ಮುಂಭಾಗ ಹಿಂಭಾಗವನ್ನು ಇಟ್ಟುಕೊಳ್ಳುತ್ತ ಹೋಗುತ್ತಿದ್ದೆವು. ಕೊನೆಗೆ ಯಾವುದು ಬರುತ್ತೋ ಅದಾಗುತ್ತೆ ಅಂದುಕೊಂಡು ಕೊನೆಗೆ ‘ಪಾಸ್’ ಎಂದು ಬಂದರೆ ಪಾಸಾಗುತ್ತೇವೆ ಎಂದು ಖುಷಿ ಪಡುತ್ತಿದ್ದೆವು. ಒಂದೊಮ್ಮೆ ‘ಫೇಲ್’ ಅಂತಾ ಬಂದರೆ ಪಾಸ್ ಎಂದು ಬರುವಂತೆ ಬೆರಳುಗಳನ್ನು ಹೊಂದಾಣಿಕೆಯಿಂದ ಇಟ್ಟುಕೊಳ್ಳುತ್ತ ಪಾಸ್ ಎಂದು ಕೊನೆಗೆ ಬರುವಂತೆ ಮಾಡಿ ಆಗಲೂ ಪಾಸ್ ಎಂದು ಖುಷಿಪಡುತ್ತಿದ್ದೆವು! ಈ ರೀತಿಯ ನಮ್ಮ ಬಾಲ್ಯದ ಹಲವು ಅನುಭವಗಳು ಈಗಿನ ಮಕ್ಕಳಲ್ಲಿ ಸಿಗುವುದಿಲ್ಲವೇನೋ ಅನಿಸುತ್ತೆ. ಆಗ ‘ಕಾಲಾಯ ತಸ್ಮೈ ನಮಃ’ ಕಾಲ ಬದಲಾದಂತೆ ಕೆಲವೊಂದು ಬದಲಾಗುತ್ತವೆ ಎಂದುಕೊಂಡು ಸಾಗಬೇಕಷ್ಟೇ ಎಂಬ ಮಾತು ನೆನಪಿಸಿಕೊಂಡು ನಾವು ಸುಮ್ಮನಾಗಬೇಕಾಗುತ್ತಷ್ಟೇ!
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಸರ್, ಬಾಲ್ಯದ ನಮ್ಮ ಎಲ್ಲ ಚಟುವಟಿಕೆಗಳನ್ನು ನೆನಪಿಸಿದ ಲೇಖನ. ನೀವು ಅವುಗಳನ್ನೆಲ್ಲ ನೆನಪಿಟ್ಟು ಬರೆದಿದ್ದು ನಮಗೆ ಖುಷಿ ಕೊಟ್ಟಿದೆ. ನಿಮಗೆ ನಮ್ಮ ಅಭಿನಂದನೆಗಳು.
ಅದ್ಭುತವಾದ ಲೇಖನ ಗೌಡ್ರೆ
ಉತ್ತಮ ಲೇಖನ ಮೇಸ್ಟ್ರೇ…