ಈ ಮೇಲು ಕೀಳುಗಳ ಕೀಲುಗೊಂಬೆ ಆಟದಲಿ ಜೊತೆಗಿದ್ದು ಬದುಕನ್ನು ಸಹ್ಯ ಮಾಡಿದ್ದಕ್ಕೆ ದಾರಿಯ ಪ್ರಯಾಣದ ಸಂಭ್ರಮವನ್ನು ಹೆಚ್ಚಿಸಿದ್ದಕ್ಕೆ ಯಾರಿಗೋ ಧನ್ಯವಾದ ಹೇಳಬೇಕು. ನನ್ನ ಅಹಂಗಳಲ್ಲಿ ಕುಳಿತು ಯಾರಿಗೋ ಚುಚ್ಚಿ ಮಾತಾಡಿದ್ದ ನೆನಪಾಗಿ ಸಾರಿ ಕೇಳಬೇಕು. ಸುಮ್ಮನೆ ಇಲ್ಲದ ಅವಸರವನ್ನು ಆರೋಪಿಸಿಕೊಂಡು ಬೇರುಗಳನ್ನು ಮರೆತಿದ್ದೇನೆ. ಹತ್ತಿರ ಕೂತು ಆ ಜೀವದ ಹೃದಯದ ಮಾತುಗಳನ್ನು ಕೇಳಿಸಿಕೊಳ್ಳುವುದಿತ್ತು. ಸಂಜೆಗಣ್ಣಿನ ನಿರೀಕ್ಷೆಯ ನೋಟದ ಅಪ್ಪ ಅಮ್ಮ ಇನ್ನೂ ಊರಿನ ಮನೆಯಲ್ಲಿದ್ದಾರೆ. ಹೇಗಾದರೂ ಮಾಡಿ ಈ ಸಲವಾದರೂ ಜೊತೆಗೆ ಕರೆದುಕೊಂಡು ಬರಬೇಕಿತ್ತು. ಇಲ್ಲಗಳ ನಡುವೆ ಬದುಕಿನ ಮತ್ತೊಂದು ವರ್ಷ ಸರಿದು ಹೋಗುತ್ತಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ಈ ಖಾಲಿತನವನ್ನು ತುಂಬಿಕೊಳ್ಳುವ ಭರವಸೆಯಾಗಿ ಹೊಸ ವರುಷದ ಸೂರ್ಯೋದಯವಾಗುತ್ತದೆ.
ಹೊಸ ವರ್ಷದ ಆಚರಣೆಯ ಈ ಹೊತ್ತಿಗೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ
ಪ್ರತೀಸಲ ಡಿಸೆಂಬರ್ ಕೊನೆಯ ವಾರ ಬಂದಾಗ ಅರೆ ಎಷ್ಟು ಬೇಗ ವರ್ಷ ಉರುಳಿತಲ್ಲ ಅನ್ನುವ ಅಚ್ಚರಿ ನಮಗೆ. ಮಾಡಲೇಬೇಕು ಅಂದುಕೊಂಡಿದ್ದ ಅದೆಷ್ಟೋ ಕೆಲಸಗಳು ಅಂತಿಮ ಗಡುವು ಮುಗಿಯುತ್ತಿರುವ ಸೂಚನೆ ಸಿಕ್ಕ ಹಾಗೆಯೇ ಹೊಸ ವರ್ಷಕ್ಕೆ ಮಾಡಬೇಕು ಅಂದುಕೊಳ್ಳುವ ರೆಸೊಲ್ಯೂಷನ್ ಗಳ ಪಟ್ಟಿಯಲ್ಲಿ ಮತ್ತೆ ಜಾಗ ಪಡೆಯುತ್ತವೆ. ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ ಬರುವ ಜನವರಿ ಒಂದು ನಮ್ಮ ಹೊಸ ವರ್ಷವಲ್ಲ. ಪ್ರಕೃತಿಯಲ್ಲಿ ನಿಜವಾದ ಬದಲಾವಣೆಗಳು ಕಂಡುಬರುವ ಯುಗಾದಿಯೇ ನಮ್ಮ ಹೊಸ ವರ್ಷ ಅನ್ನುವ ಕೂಗು ಭಿನ್ನಾಭಿಪ್ರಾಯಗಳು ಕೂಡಾ ಇದೇ ಸಂದರ್ಭದಲ್ಲಿ ಕೇಳಿ ಬರುವುದುಂಟು ಪ್ರತಿ ವರ್ಷವೂ. ಆದರೆ ಅಂತಿಮವಾಗಿ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ ಏಕತೆಯನ್ನು ಕಂಡುಕೊಳ್ಳುವವರು ನಾವು. ಹಾಗಾಗಿ ಎಲ್ಲವನ್ನೂ ಮರೆತು ಮೂವತ್ತೊಂದರ ರಾತ್ರಿ ಇಡೀ ವಿಶ್ವದ ಜೊತೆಯಲ್ಲಿ ವಿಜೃಂಭಣೆಯಿಂದ ಹೊಸ ವರ್ಷದ ಸ್ವಾಗತಕ್ಕಾಗಿ ತಯಾರಿ ನಡೆಸುತ್ತೇವೆ. ವಸುದೈವ ಕುಟುಂಬಕಂ ಎಂಬಂತೆ ಒಂದಾಗಿ ಚೆಂದಾಗಿ ಹೊಸ ವರುಷದ ಸ್ವಾಗತಕ್ಕೆ ಅಣಿಯಾಗುತ್ತೇವೆ.
ವಸಂತಗಳು ಮುಗಿದುಹೋಗುವ ಮುನ್ನ ಏನೋ ಪಿಸುಗುಡುತ್ತವೆ ಮನುಷ್ಯನ ಕಿವಿಯಲ್ಲಿ. ತಾವು ಬಂದದ್ದು, ಜೊತೆಗಿದ್ದದ್ದು, ಲಾಲಿಸಿದ್ದು, ಪಾಲಿಸಿದ್ದು ಎಲ್ಲದರ ಅನುಭವವನ್ನು ತುಂಬ ಹತ್ತಿರದಲ್ಲಿ ನಿಂತು ತಾಕಿಸುತ್ತವೆ. ಆದರೆ ಮನುಷ್ಯನೆ ಕೊರಡು ಅಷ್ಟು ಬೇಗ ಕೊನರುವುದಿಲ್ಲ ಯಾವುದಕ್ಕೂ. ಇದ್ದಾಗ ಎಲ್ಲವೂ ಅನುಭವಕ್ಕೆ ಬರುವಷ್ಟು ಅವನು ಸೂಕ್ಷ್ಮ ಸಂವೇದಿಯೂ ಆಗಿರುವುದಿಲ್ಲ ಅಥವಾ ಬದುಕಿನ ಧಾವಂತದ ಓಟದಲ್ಲಿ ಗಮನಿಸುವಂತಹ ಒಂದು ಧ್ಯಾನಸ್ಥ ಸ್ಥಿತಿಯೂ ಅವನಿಗೆ ದಕ್ಕಿರುವುದಿಲ್ಲ. ಹಾಗಾಗಿ ಕಳೆದ ವರ್ಷ ಕೊಟ್ಟ ಕೊಡುಗೆಗಳು ಆ ಕ್ಷಣ ನಮಗೆ ದಕ್ಕಿರುವುದಿಲ್ಲ. ಅದನ್ನು ಮತ್ತೆ ಅವಲೋಕನ ಮಾಡಲು ಡಿಸೆಂಬರ್ ತಿಂಗಳ ಕೊನೆಯ ದಿನದ ಸಂಜೆಯೇ ಬರಬೇಕು. ಈ ರಾತ್ರಿ ಕಳೆದರೆ ಬದಲಾಗುವ ಕ್ಯಾಲೆಂಡರ್ ಹೊಸ ದಿನಗಳನ್ನು ಕಾಣಿಸುವುದರಿಂದ ಕಳೆದ ವರ್ಷದ ಕುರಿತು ಕಠಿಣವಾಗದೆ ಬಹಳ ಆಪ್ತವಾಗಿ ಇಡೀ ವರ್ಷವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಆಗಲೇ ಬದುಕು ಮಾಡಿದ ಕೃಪೆ ನಮ್ಮ ಅರಿವಿಗೆ ಬರುವುದು.
ಹೊಸ ವರ್ಷದ ಹೊಸ್ತಿಲಲ್ಲಿ ವರ್ಷವೊಂದು ಕಳೆದುಹೋಯಿತು ನಮ್ಮ ಆಯಸ್ಸಿನಲ್ಲಿ ಒಂದು ವರ್ಷ ಕಡಿಮೆ ಆಯಿತು ಅನ್ನುವ ಭಾವ ನಮ್ಮ ಹೃದಯಗಳನ್ನು ಆರ್ದ್ರಗೊಳಿಸುತ್ತದೆ. ಆದರೆ ಅಸಲಿಗೆ ಯಾವ ವರುಷವೂ ಸುಮ್ಮನೆ ಕಳೆದುಹೋಗಿರುವುದಿಲ್ಲ. ನಮ್ಮ ಬದುಕಿನ ನೆನಪ ಬುತ್ತಿಗೆ ಮತ್ತೊಂದಿಷ್ಟು ದೂರ ನಡೆಯಲು ಬೇಕಾಗಿರುವಂತಹ ಇಡಗಂಟನ್ನು ಕೊಟ್ಟು ಸರಿದುಹೋಗಿರುತ್ತದೆ. ಅಲ್ಲಿ ನಿದ್ದೆಗೆಟ್ಟು ಬರೆದ ಪರೀಕ್ಷೆಯಲ್ಲಿ ಪಾಸಾಗದಿರುವ ನೋವು, ಇದೇ ಕೊನೆಯ ಅವಕಾಶ, ಕ್ಲಿಯರ್ ಮಾಡಲೇಬೇಕು ಅನ್ನುವ ಹಠದಲ್ಲಿ ಕೂತು ಬರೆದ ಸ್ಪರ್ಧಾತ್ಮಕ ಪರೀಕ್ಷೆ ಕೈಹಿಡಿಯದಿರುವ ಹತಾಷೆ, ಯಾವುದೋ ಸಹಾಯ ಒದಗಿ ಬಂದು ಅನಿರೀಕ್ಷಿತವಾಗಿ ಬಯಸಿದ ಸೈಟ್ ರೆಜಿಷ್ಟ್ರೇಷನ್ ಆದ ಸಂಭ್ರಮ, ಅರ್ಧಕ್ಕೆ ನಿಂತಿದ್ದ ಮನೆಯ ಗೋಡೆಗಳು ಲೋನ್ ಪಾಸ್ ಆಗಿ ಪೂರ್ಣಗೊಂಡು ಗೃಹಪ್ರವೇಶ ಕಂಡ ನೆಮ್ಮದಿ, ತಲೆ ಕೂದಲು ಉದುರುತ್ತ ಹೋದರೂ ಒಂದೇ ಒಂದು ಹೆಣ್ಣು ಜೀವ ಬದುಕಿಗೆ ಬಲಗಾಲಿಟ್ಟು ಬರದಿರುವ ದುರ್ಬರ ಸ್ಥಿತಿ,…ಒಂದೇ ಎರಡೇ ಕಳೆದ ವರ್ಷ ಬಿಟ್ಟುಕೊಟ್ಟ ಬದುಕಿನ ಪಟ್ಟುಗಳು-ಗುಟ್ಟುಗಳು.
ಇದೆಲ್ಲದರ ನಡುವೆಯೂ ಕಾಲ ಅನ್ನುವುದೊಂದೆ ಅಲ್ಲವಾ ಆ ಕಾಲದ ಮಾಯೆ ದೊಡ್ಡದು ಅದು ಯಾವ ಗಾಯವನ್ನಾದರೂ ಮಾಯಿಸಬಲ್ಲದು. ಯಾವ ಮಾಯದಲ್ಲಾದರೂ ಮುಲಾಮು ಹಚ್ಚಿ ಬದುಕಿಸುತ್ತದೆ ಬಸವಳಿದವನನ್ನು. ಹೀಗೆ ಬಂದು ಹಾಗೆ ಹೋಗುವ ಕಾಲಕ್ಕೆ, ವರುಷಕ್ಕೆ, ವಸಂತಕ್ಕೆ ಯಕಃಶ್ಚಿತ್ ಮನುಷ್ಯರಾದ ನಾವು ಏನು ಕೊಡಬಲ್ಲೆವು. ಒಂದು ಮುದ್ದಾದ ಧನ್ಯವಾದವನ್ನಾದರು ಹೇಳಬೇಡವೇ? ಬದುಕಿನ ಕಾಲಮಾನದ ಒಂದು ವರುಷ ಸದ್ದಿಲ್ಲದೇ ಉರುಳುತ್ತಿದೆ. ತಿಂಗಳೊಂದು ಉರುಳುವಾಗ ಕಡೆಯ ದಿನ ಅಕೌಂಟ್‌ನಲ್ಲಿ ಜಮವಾಗುವ ಸಂಬಳ ಮಾತ್ರ ಹೊಸ ತಿಂಗಳು ಬಂದದ್ದನ್ನು ಸೂಚಿಸಿದರೂ ಡಿಸೆಂಬರ್ ಸರಿಯುವಾಗ ಆಗುವ ಕಳೆದುಕೊಂಡ ಭಾವ ಉಳಿದ ತಿಂಗಳುಗಳಿಗೆ ಇರುವುದಿಲ್ಲ. ಡಿಸೆಂಬರ್ ಉರುಳುವಾಗ ಮಾತ್ರ ಯಾವುದೋ ಹೇಳಲಾಗದ ತಳಮಳ ಎದೆಯನ್ನು ಕಲಕಿ ಮನಸ್ಸು ಭಾವುಕವಾಗುತ್ತದೆ.

ಬಾಳ ಬಂಡಿ ಹಳಿಯ ಮೇಲೆ ಓಡುತಿದೆ ಉಸ್ಸಪ್ಪಾ ಎನ್ನುವಾಗ ಎಲ್ಲಿಂದಲೋ ಧುತ್ತನೆ ಬರುವ ಹೊಸ ಸವಾಲೊಂದು ನಮ್ಮ ಬಂಡಿಯನ್ನ ಅಲ್ಲಾಡಿಸಿ ಬಿಡುತ್ತೆ ನೋಡಿ ಆಗ ನೆನಪಾಗುತ್ತಾನೆ ಅವಿಳಾಸಿ ಭಗವಂತ.
ಅಷ್ಟಿಲ್ಲದೆ ಹೇಳಿದರೆ ಡಿವಿಜಿ ಯವರು-
ಕಾಲ ನದಿಯಲಿ ನಮ್ಮ ಬಾಳ ದೋಣಿಯು ಮೆರೆದು
ತೇಲುತ್ತ ಭಯವ ಕಾಣದೆ ಸಾಗುತಿರಲು
ಗಾಳಿ ಯಾವಗಮೋ ಬಂದೆತ್ತಣಿನೊ ಬೀಸುತ್ತ
ಮೇಲ ಕೀಳಾಗಿಪುದು – ಮಂಕುತಿಮ್ಮ
ಈ ಮೇಲು ಕೀಳುಗಳ ಕೀಲುಗೊಂಬೆ ಆಟದಲಿ ಜೊತೆಗಿದ್ದು ಬದುಕನ್ನು ಸಹ್ಯ ಮಾಡಿದ್ದಕ್ಕೆ ದಾರಿಯ ಪ್ರಯಾಣದ ಸಂಭ್ರಮವನ್ನು ಹೆಚ್ಚಿಸಿದ್ದಕ್ಕೆ ಯಾರಿಗೋ ಧನ್ಯವಾದ ಹೇಳಬೇಕು. ನನ್ನ ಅಹಂಗಳಲ್ಲಿ ಕುಳಿತು ಯಾರಿಗೋ ಚುಚ್ಚಿ ಮಾತಾಡಿದ್ದ ನೆನಪಾಗಿ ಸಾರಿ ಕೇಳಬೇಕು. ಇನ್ಯಾರಿಗೋ ನನ್ನ ಸಮಯ ಕೊಡಬೇಕಿತ್ತು. ಜೊತೆಗೆ ಕೂತು ಮಾತಿಗೆ ಕಿವಿಯಾಗಬೇಕಿತ್ತು. ಸುಮ್ಮನೆ ಇಲ್ಲದ ಅವಸರವನ್ನು ಆರೋಪಿಸಿಕೊಂಡು ಬೇರುಗಳನ್ನು ಮರೆತಿದ್ದೇನೆ. ಹತ್ತಿರ ಕೂತು ಆ ಜೀವದ ಹೃದಯದ ಮಾತುಗಳನ್ನು ಕೇಳಿಸಿಕೊಳ್ಳುವುದಿತ್ತು. ಸಂಜೆಗಣ್ಣಿನ ನಿರೀಕ್ಷೆಯ ನೋಟದ ಅಪ್ಪ ಅಮ್ಮ ಇನ್ನೂ ಊರಿನ ಮನೆಯಲ್ಲಿದ್ದಾರೆ. ಹೇಗಾದರೂ ಮಾಡಿ ಈ ಸಲವಾದರೂ ಜೊತೆಗೆ ಕರೆದುಕೊಂಡು ಬರಬೇಕಿತ್ತು. ಇಲ್ಲಗಳ ನಡುವೆ ಬದುಕಿನ ಮತ್ತೊಂದು ವರ್ಷ ಸರಿದು ಹೋಗುತ್ತಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ಈ ಖಾಲಿತನವನ್ನು ತುಂಬಿಕೊಳ್ಳುವ ಭರವಸೆಯಾಗಿ ಹೊಸ ವರುಷದ ಸೂರ್ಯೋದಯವಾಗುತ್ತದೆ. ಬದುಕಿನ ಕುರಿತಾದ ನಂಬಿಕೆ ಬಲಗೊಳ್ಳುತ್ತದೆ.
ಈ ವರುಷದ ಆದಿಯಿಂದ ಈ ದಿನದ ತನಕ ನಮಗೆ ದಕ್ಕಿದ ದಿನಗಳ ಲೆಕ್ಕ ಕ್ಯಾಲೆಂಡರಿನಲ್ಲಂತು ಇದೆ. ಆದರೆ ಎದೆ ಹಣತೆ ಇಣುಕಿ ನೋಡಿದಾಗ ಅಲ್ಲೂ ಒಂದಷ್ಟು ದಿನಗಳ ನೆನಪುಗಳು ಹಸಿರಾಗಿವೆ. ಈ ವರುಷ ಸಿಕ್ಕ ಬೆಸ್ಟ್ ಫ್ರೆಂಡ್, ಇಷ್ಟು ದಿನ ಕನಸು ಕಂಡ ಒಂದು ಪುಟ್ಟ ಹೈಯರ್ ಎಂಡ್ ಕಾರು, ಮಡದಿಗೆ ಆಕೆ ಆಸೆಪಟ್ಟ ಸೀರೆ, ಮಗಳಿಗೆ ಹೊಸ ಹಾರ್ಮೊನಿಯಮ್, ಮಗ ಹಠ ಮಾಡಿದ ಗ್ರಾಸ್ ಕಟ್ಟರ್, ಅಂಗಳದ ನಾಯಿಗೆ ಆಚೆ ಮನೆಯ ಹೆಣ್ಣು ನಾಯಿಯೊಂದಿಗೆ ಒಂದಿಷ್ಟು ಸಮಯದ ಸ್ವತಂತ್ರ ವಾಕಿಂಗು, ನನ್ನ ಹೊಸ ಪುಸ್ತಕಕ್ಕೆ ಬಿಡುಗಡೆಯ ಸಂಭ್ರಮ… ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೋದ ವರ್ಷವು ಹೀಗೆ ಬಂದಿತ್ತು ಥೇಟ್ ಇವತ್ತಿನ ಹಾಗೆಯೇ ನೆನಪಿನ ಬತ್ತಳಿಕೆಯಿಂದ ನಳನಳಿಸುವ ಮಧುರ ಬಾಣಗಳ ಎಳೆದು ತೆಗೆದು ಎದೆಗೊತ್ತಿ ಎತ್ತಿಟ್ಟುಕೊಂಡಿದ್ದೆ ಇವತ್ತಿನ ಹಾಗೆಯೇ. ಈ ನೆನಪುಗಳೆ ಬದುಕಿಸುತ್ತಿವೆ ನಮ್ಮನ್ನ ನಿತ್ಯ ಸಾಯದ ಹಾಗೆ, ಈ ನೆನಪುಗಳೆ ಕೊಲ್ಲುತ್ತವೆ ನಮ್ಮನ್ನ ಸುಡುವ ಸನ್ನಿವೇಶವ ಎಂದೂ ಮರೆಯದೆ ಎದೆಯ ಅಗ್ಗಿಷ್ಟಿಕೆಯ ನಿಗಿನಿಗಿ ಕೆಂಡಕ್ಕೆ ಉರವಲಾಗಿ. ನೆನಪೆಂದರೆ ಹಾಗೆ ಅಲ್ಲವಾ ಅವುಗಳಿಗೆ ಕೊಲ್ಲುವುದು ಗೊತ್ತು ಮತ್ತು ಬದುಕಿಸುವುದೂ.
ದಿನವು ಮುಗಿಲ ಕಡೆ ಅರಳಿ ನೆಲಕ ಹೊರಳುವ ಹೂವಿಗೆ ಗೊತ್ತಿಲ್ಲ ಇಂದು ನಮಗೆ ಹೊಸವರ್ಷವೆಂದು. ನಾವು ನಲಿಯುತ್ತಿದ್ದೇವೆ ಬರಲಿರುವ ವರುಷವ ಸ್ವಾಗತಿಸಲು ಏನೇನೊ ಗೌಜು ಗದ್ದಲಗಳ ಆಡಂಬರ ಅಗತ್ಯಗಳ ಪೇರಿಸಿಕೊಂಡು. ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ. ಫಲ ಮಾಗುವಂದು ತುತ್ತೂರಿ ದನಿಯಿಲ್ಲ. ಆದರೆ ನಾವು ಮಾತ್ರ ಗದ್ದಲವಿಲ್ಲದೇ ಹೊಸ ವರ್ಷಕ್ಕೆ ಪ್ರವೇಶ ಪಡೆಯುವುದಿಲ್ಲ. ಆದರೆ ಈ ಸಂಭ್ರಮ ಗೆಳತಿಗೊಂದು ಗ್ರೀಟಿಂಗ್ ಕಾರ್ಡ್ ಕಳುಹಿಸಲು ಅಪರೂಪದ ಗಳೆಯನಿಗೊಂದು ಫೋನ್ ಮಾಡಿ ಮತ್ತೆ ಹೊಸ ಟಚ್ ಆರಂಭಿಸಲು ಅನುವು ಮಾಡಿಕೊಡುತ್ತದೆ. ಹೊಸ ವರ್ಷದ ಕೊಂಡಿಯೊಂದು ನಮಗೆ ಏನಾದರು ಕೊಡಬಯಸಿದರೆ ಅದು ಹೊಸತಾಗಿಯೇ ಇರಬೇಕಲ್ಲವೇ? ಕವಿ ಅಡಿಗರು ಹೇಳುವ ಹಾಗೆ
“ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ”
ಅದದನೆ ಬರೆದು, ಅದದನೆ ಬಾಳಿ, ಅದದನೆ ಬಗೆಯುವ ಮುರುಕು ಬಾಳು ಸಾಕು. ಹೊಸ ಭಾಷ್ಯ, ಹೊಸ ಕನಸು, ಹೊಸ ಹಾಡು ಬೇಕು. ನಾನು ಬದುಕಬೇಕಾಗಿರುವುದು ಖಂಡಿತಾ ಇದಲ್ಲ. ಎಲ್ಲೋ ಏನೋ ಲೆಕ್ಕಾಚಾರ ತಪ್ಪಿದೆ. ಇನ್ನೇನನ್ನೋ ಮಾಡಬೇಕು ಎಲ್ಲಿಗೋ ತಲುಪಬೇಕು ಅನ್ನುವ ತಹತಹ ಹೃದಯವನ್ನು ಹಿಂಡುವುದು ಬಿಟ್ಟಿಲ್ಲ.
ಮತ್ತೆ ಈ ಕನಸುಗಳಿಗ ಕಸುವು ತುಂಬಲು ಎದೆನೆಲದ ಕುದಿಯೆಲ್ಲಾ ಕಳೆಯುವ ಸೂರ್ಯನ ಹೊಸ ಕಿರಣಗಳು ಭೂಮಿಯನ್ನು ತಾಕಬೇಕು. ಹೊಸ ಯೋಚನೆ ಹೊಸ ಗುರಿಗಳು ಹುಟ್ಟಲೊಂದು ನೆಪವು ಬೇಕು. ಇದಕ್ಕೆ ಹೊಸ ವರ್ಷದ ಹೊಸ ಗಾಳಿ ದಕ್ಕಿದೆ. ಹಳೆ ಹಕ್ಕಿಯ ರೆಕ್ಕೆಗಳಿಗೆ ಹೊಸ ಶಕ್ತಿ ತುಂಬುವ ಸಮಯ ಸುಮೂರ್ತವಾಗಿದೆ. ಹಳೆ ವರ್ಷದ ಕ್ಯಾಲೆಂಡರಿಗೆ ಧನ್ಯವಾದ. ಈ ವರ್ಷ ಕಟ್ಟಿಕೊಟ್ಟ ದಾರಿಬುತ್ತಿಗೆ ಧನ್ಯವಾದ. ಬದುಕು ಕೃಪೆ ಮಾಡಿದ ಎಲ್ಲಾ ಕ್ಷಣಗಳಿಗೂ ಪ್ರೀತಿಯಿಂದ ತಲೆಬಾಗುತ್ತೇನೆ.
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು

ಆಸೆಯ ಬಿಡಿಬಿಡಿ ಹೂಗಳನ್ನೆಲ್ಲಾ ಮಾಲೆಯಾಗಿಸುವ ಹೊಸ ಕನಸು ಹೊಸವರ್ಷದ ಹೊಸ್ತಿಲಲ್ಲಿ ಮತ್ತೆ ಗರಿಗೆದರಿ ನಿಲ್ಲುತ್ತದೆ. ಎಲ್ಲವನ್ನು ಈ ಸಲ ಖಂಡಿತವಾಗಿಯೂ ಮಾಡಿಯೇ ಬಿಡಬೇಕೆನ್ನುವ ಉತ್ಸಾಹದ ಚಿಲುಮೆಯೊಂದು ಥಣ್ಣನೆ ಮೂಡಿಬಿಡುವ ಹೊತ್ತು ಮತ್ತೆ ಎಲ್ಲವನ್ನೂ ಹೊಸದಾಗಿ ನೋಡುವ ನೋಟವನ್ನು ದಯಪಾಲಿಸುತ್ತದೆ. ಏನೇ ಆಗಲಿ ಕವಿ ಹೇಳಿದ ಹಾಗೆ ಏನಿದೆಯೋ ಇಲ್ಲವೋ ಆಸೆಯೊಂದುಂಟು. ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
