Advertisement
ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ. ಚರಿತ್ರೆಯ ಎಲ್ಲ ದುರಂತಗಳ ಅಂತ್ಯ ಮನುಷ್ಯನ ಮನುಷ್ಯ ಸಂವೇದನೆಯ ನಾಶದಿಂದಲೇ ಆರಂಭವಾಗುತ್ತದೆ ಎಂಬ ಎಚ್ಚರವನ್ನು ಕವಿ ಇಲ್ಲಿ ಮನಗಾಣಿಸಲು ನೋಡುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

ಪ್ರಪಂಚದ ಹಲವು ಭಾಷೆಗಳ ಕವಿತೆಗಳ ಕಡಲತೀರದಲ್ಲಿ ದಿನವೂ ಅಲೆದಾಡುತ್ತ ಅನುವಾದಿಸುತ್ತ ಕನ್ನಡದ ನೂರಾರು ಕವಿತೆಗಳನ್ನು ಇಂಗ್ಲಿಶಿನ ಮೂಲಕ ಹೊಸ ಓದುಗರ ಬಂದರುಗಳಿಗೆ ದಾಟಿಸುತ್ತಿರುವ ಕಮಲಾಕರ ಕಡವೆಯವರು ತಮ್ಮ ಸ್ವಂತ ಕವಿತೆಗಳ ಹರಿವನ್ನು ಸದಾ ತಿಳಿಯಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಯಾವ ಭಾಷೆಯ ಕವಿತೆಯನ್ನಾದರೂ ಕನ್ನಡದ ಹವಾಮಾನಕ್ಕೆ ಒಗ್ಗಿಸುವ ಹಾಗೆಯೇ ತನ್ನ ಕಾವ್ಯದ ಜಾಯಮಾನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಇದು ಸುಲಭದ ಮಾತಲ್ಲ. ಹಾಗೆಯೇ ಕಮಲಾಕರ ಅವರು ಕನ್ನಡದ ಹಲವು ಮನೋಧರ್ಮದ ಕಾವ್ಯವನ್ನು ನೋಡುತ್ತ ಅವುಗಳೊಂದಿಗೆ ನಡೆಯುತ್ತ ಬಂದಿದ್ದರೂ ತಮ್ಮ ಕಾವ್ಯದ ಸರಿದಾರಿಯನ್ನು ಕಂಡುಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಕಾವ್ಯದ  ಹಲವು ಹಾದಿ ಹೆದ್ದಾರಿಗಳಲ್ಲಿ ನಿಂತಲ್ಲಿ ನಿಲ್ಲದೆ ಹೊಸ ದನಿ -ಹೊಸ ನೋಟಕ್ಕಾಗಿ ತಡಕಾಡುತ್ತಿರುವ ಕವಿಗೆ ಈ ಸಂಕಲನದ ಕವಿತೆಯೊಂದರಲ್ಲಿ ಹೇಳುವ ಹಾಗೆ ಕನಸಲ್ಲಿಯೂ ಕವಿಗಳು ಬಂದು ಕಪ್ಪ ಕೇಳಿ ರೋಪು ಹಾಕುತ್ತಿರುವ ಸನ್ನಿವೇಶವಿದೆ (‘ಕನಸಲ್ಲಿ ಬರುವ ಕವಿಗಳುʼ). ಅವನಿಗೆ ಅನಿಕೇತನನೋ, ಪುರುಷೋತ್ತಮನೋ ಆಗುವುದಕ್ಕಿಂತ ಮುನಿದ ಮನಸುಗಳ ಮುರಿಯದೇ  ಮನಸುಗಳ ಬೆಸೆಯುವ ಬಳೆಗಾರನಂತಾಗುವುದು ಮುಖ್ಯವಾಗುತ್ತದೆ.  ಸಾಹಿತ್ಯ ಸಂಸ್ಕೃತಿಗಳ ನಡುವಿನ ಸೇತುವಿನಂತಿರುವ ಕವಿಗೆ ಇದ್ದಲ್ಲಿ ಇರುವುದಕ್ಕಿಂತ ಎದ್ದು ಮುಂದಕ್ಕೆ ನಡೆಯೋ ಮಾರಾಯ ಎಂದು ಮೈಕೊಡವಿಕೊಂಡು ಮುಂದೆ ನಡೆಯುವ  ಸಹಜ  ಮನುಷ್ಯರ  ಮುನ್ನಡಿಗೆಯಲ್ಲಿ ಹೆಚ್ಚು ನಂಬಿಕೆ ಇದೆ. ಈ ಕಾರಣಕ್ಕೆ ಕಮಲಾಕರ ಅವರ ಕಾವ್ಯ ವ್ಯವಸಾಯ ಕನ್ನಡ ಕಾವ್ಯಕ್ಕೆ ಹೊಸ ವಿಸ್ತಾರವನ್ನೂ ಅವರ ಸ್ವಂತ ಕಾವ್ಯಕ್ಕೆ ವಿಶಿಷ್ಟವಾದ ಮನಃವಿಕಾಸದ ಗುಣವನ್ನು ತಂದುಕೊಟ್ಟಿದೆ.  ಅನುವಾದ ಕಾವ್ಯರಚನೆಗಳೆರಡನ್ನೂ ಸರಿಬೆರೆಸಿ ನೋಡುವ ಕಮಲಾಕರ ಅವರ ಕೊಡುಗೆಯನ್ನು ಬೇರೆ ಬೇರೆಯಾಗಿ ನೋಡುವ ಅಗತ್ಯವಿಲ್ಲದಿದ್ದರೂ ಇಲ್ಲಿ ಅವರ ಕಾವ್ಯವನ್ನು ಕುರಿತಾಗಿಯೇ ಹೆಚ್ಚು ಗಮನ ಹರಿಸಬಹುದು.

(ಕಮಲಾಕರ ಕಡವೆ)

ನವ್ಯದ ಹಿನ್ನೀರಿನಲ್ಲಿ ಆಡುತ್ತ ಬರೆಯುತ್ತ ಬೆಳೆದ ಕಮಲಾಕರರೊಳಗಿನ ಮಾನವೀಯ ತಹತಹಗಳು ಕವಿತೆಯ ಪೆಡಸುತನವನ್ನು ನಿಧಾನ ಮೆದುಗೊಳಿಸಿವೆ. “ಚೂರುಪಾರು ರೇಶಿಮೆ”, “ಮುಗಿಯದ ಮಧ್ಯಾಹ್ನ” ಸಂಕಲನಗಳಲ್ಲಿ ಕಾಣುವ ಒತ್ತೊತ್ತಾಗಿರುವ ಬೆಳೆದಿರುವ ಕಾಡು ಪೊದರಿನಂತಿರುವ ಕವಿತೆಗಳು ನೂರಾರು ಅರ್ಥ –ಭಾವ ಬಹುಳತೆಯ ಹಲವಾರು ಪದರುಗಳನ್ನು ಇಡಿಕಿರಿಸಿಕೊಂಡಿದ್ದವು. “ಮುಗಿಯದ ಮಧ್ಯಾಹ್ನ” ಸಂಕಲನದ ಕವಿತೆಗಳು ಆಧುನಿಕ ಜಗತ್ತಿನ ಗೋಜಲುಗಳಲ್ಲಿ ಸಿಲುಕಿದ ಮನುಷ್ಯನ ಒಳ-ಹೊರಗಿನ ಬಾಳು ನಿಧಾನವಾಗಿ ಅವಸಾನಗೊಳ್ಳುತ್ತಿರುವ  ಸನ್ನಿವೇಶವನ್ನು ಬಗೆಹರಿಯದ ಬೇಗುದಿಯ ದನಿಯಲ್ಲಿ ನಿರೂಪಿಸಿದ್ದವು.  ನಂತರ ಬಂದ “ಗೆಳತಿ ಜೊತೆ ಮಾತುಕತೆ” (೨೦) ಸಂಕಲನದ ಹಲವು ಸ್ತರದ/ಮನೋಧರ್ಮದ ಮಾತುಕತೆಗಳು ಎಲ್ಲ ಬಗೆಯ ಧಾವಂತಗಳ ನಡುವೆಯೂ ‘ಹೂರಣದ ಹೊರೆಯಿಲ್ಲದ ಹಗುರ ಹಾರುವ ಹೂವಿನʼ (‘ಸುಮ ಸುಮ್ಮನೆʼ) ನಿರಾಳತೆಯನ್ನು ಹೊರುವ ಹವಣಿಕೆಯನ್ನು ತೋರಿಸಿದ್ದವು.  ಆ ಸಂಕಲನದ ಇನ್ನೊಂದು ಕವಿತೆ ‘ಯ….ರ..ಲ..ವ..ʼದಲ್ಲಿ ದಿವ್ಯಾರ್ಥಗಳನ್ನು ಹೊರಡಿಸುವ ಪುಸ್ತಕದ ಅನೂಹ್ಯವಾದ ಯ….ರ…ಲ…ವ…ದಂಥ  ಅಕ್ಷರಗಳ  ತಿರುವುಗಳಲ್ಲಿ  ಇರುವೆಯೊಂದು ಸಿಕ್ಕಿ ಹಾಕಿಕೊಂಡು  ‘ನಿತ್ರಾಣದ ಗೊಂದಲʼದಲ್ಲಿ ಸಿಲುಕಿಕೊಳ್ಳುತ್ತದೆ. ಅರ್ಥಗಳ,  ಅನುಭವಗಳ  ದುರ್ಗಮ ತಿರುವುಗಳಲ್ಲಿ ಸಿಲುಕಿಕೊಂಡ ಇರುವೆಯೊಂದು ಪರಿತಪಿಸುವ ಹಾಗೆಯೇ ಕಮಲಾಕರ ಅವರ ಕವಿತೆಗಳು ನಿರಂತರ ಚಡಪಡಿಕೆಯನ್ನು ಒಡಲೊಳಗಿರಿಸಿಕೊಂಡಿವೆ. ಬದುಕಿನ ಜಟಿಲ  ಏರಿಳಿತಗಳ ನಡುವೆ ಸರಳವಾಗಿ ಸುಳಿದಾಡುವ ಇರುವೆಗಳು, ಹುಲ್ಲೆಗಳು, ಹಕ್ಕಿಗಳು, ಮೋಡ-ಮಂಜು,  ಪಾತರಗಿತ್ತಿಗಳ ಬಗ್ಗೆ, ಕಾಲದ ವಜ್ಜೆಯ ನಡುವೆ  ಕೈ ಹಿಡಿದು ಜೊತೆ ಸಾಗುವ ಸಂಗಾತಿಯ  ಬಗ್ಗೆ ತೀವ್ರ ಮಮತೆ- ಧ್ಯಾನದಲ್ಲಿ, ಅವುಗಳ ಸಹಜ ಚೆಲುವಿಗೆ ಮತ್ತು ಅಪೂರ್ವವಾದ ದೃಢತೆಗೆ ಸೋತ ಚಕಿತತೆಯಲ್ಲಿ ಕಮಲಾಕರ ಬರೆಯುತ್ತಲೇ ಬಂದಿದ್ದಾರೆ.

ಮೊದಲ ಸಂಕಲನ ‘ಚೂರುಪಾರು ರೇಶಿಮೆʼಗೆ ಬರೆದ ಮುಮ್ಮಾತುಗಳ ನಡುವೆ ಜಯಂತ ಕಾಯ್ಕಿಣಿ ಅವರು ಕಮಲಾಕರರ ಕವಿತೆಗಳನ್ನು ‘ಜಾಗರದ ರಾತ್ರಿಗಳಲ್ಲಿ ಕಣ್ತೆರೆದು ಕೂತ ಕಿಟಕಿಗಳಂತೆʼ ಎಂಬ ರೂಪಕದಲ್ಲಿ ಹಿಡಿಯಲು ನೋಡಿದ್ದರು. ಜಾಗರದ ರಾತ್ರಿಗಳಲ್ಲಿ ಇರುವ ಕಾವಳ ಅದರಿಂದ ಬಿಡುಗಡೆ ಪಡೆಯಲು ಕಿಟಕಿಯಾಚೆಗಿನ ಹವೆಗೆ-ಹೊಸತನಕ್ಕೆ ತೆರೆದುಕೊಳ್ಳುವ ಗುಣ ಅವರ ಎಲ್ಲ ಕವಿತೆಗಳಲ್ಲಿ  ಯಾವತ್ತಿಗೂ ಉಳಿದು ಬಂದಿದೆ.
ಕಮಲಾಕರ ಅವರ ಕವಿತೆಗಳಲ್ಲಿರುವ ಕಾವಳ-ಕಳವಳದ ಗುಣ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವರ ಹಿಂದಿನ ಕವನ ಸಂಕಲನಗಳಲ್ಲಿ –ಮುಖ್ಯವಾಗಿ ‘ಮುಗಿಯದ ಮಧ್ಯಾಹ್ನʼದಲ್ಲಿ- ಬರುವ ಹಲವು ಕವನಗಳಲ್ಲಿ ರಸ್ತೆಗಳ ಮೇಲೆ ಜರುಗುತ್ತಿರುವ ವಿಕರಾಳ ಅನುಭವಗಳ ದಟ್ಟ ಚಿತ್ರಣವನ್ನು ಕಾಣಬಹುದು. ರಸ್ತೆಯಂಥ  ಸಾರ್ವಜನಿಕ ಜಾಗವೊಂದರಲ್ಲಿ ಹರಡಿರುವ ಹಿಂಸೆ, ಅಸಹನೆ, ನಿರ್ಲಜ್ಜತನ, ಕೊಳ್ಳುಬಾಕ ಸಂಸ್ಕೃತಿಯ ಹೇಶಾರವಗಳು ಸಮಕಾಲೀನ ಸಮಾಜದ ಅಂತರಂಗ ಬಹಿರಂಗಗಳು ಕದಡಿಹೋಗಿರುವುದಕ್ಕೆ ಕನ್ನಡಿಯಂತಿವೆ. ರಸ್ತೆಯಲ್ಲಿ ಬಿದ್ದಿರುವ ಅನಾಥ ಹೆಣ, ಜಗಳ ಕಾಯಲು ನಿಂತಿರುವ ಪುಂಡಗುಂಪುಗಳು, ಮನೆಯೊಳಗಿರಲು ಆಗದೆ ಬೀದಿಗೆ ಬಿದ್ದಿರುವ ಜನರನ್ನು ಗೇಲಿಗೀಡು ಮಾಡುವ ವಸ್ತುಗುಡ್ಡಗಳು, ಪದಾರ್ಥ ಪರ್ವತಗಳ ನಡುವೆ ಕಾವ್ಯ  ಹಂತಹಂತವಾಗಿ ಅವಸಾನದಂಚಿಗೆ ತಲುಪಿದೆ ಎಂಬ ಸಂಗತಿಯನ್ನು ಅವರು ಹಲವು ರೂಪಕಗಳಲ್ಲಿ ಕಾಣಿಸುತ್ತಾರೆ.  ಇಂಥ ಬೇಗುದಿ ಮತ್ತು ನಿರಂತರ ಚಡಪಡಿಕೆಯ ವಾತಾವರಣದಿಂದ ಹೊರದಾರಿಗಳನ್ನು ಹುಡುಕುವ ಅಗತ್ಯ ಕಾಣಿಸುತ್ತದೆ.
ಬಹಳ ವಿಶೇಷವಾದ ಸಂಗತಿಯೆಂದರೆ, ಅವರ ಕವಿತೆಗಳಲ್ಲಿ ನಿರಂತರ ಚಡಪಡಿಕೆ ಹಾಗೂ ಬಗೆಹರಿಯಲಾರದ ಬೇಗುದಿಯ ದನಿಗಳ ನಡುವೆಯೇ ಕಾಯ್ಕಿಣಿಯವರು ಮೊದಲ ಸಂಕಲದಲ್ಲಿಯೇ ಗುರುತಿಸಿರುವ  ‘ಸ್ವಪ್ನ ಗುಣ ಹಾಗೂ ಜೀಕುʼಗಳೂ ಅಷ್ಟೇ ಪ್ರಭಾವಶಾಲಿಯಾಗಿವೆ. ‘ಒಂದು ಬಿಳಿ ಚಿಟ್ಟೆʼ(‘ಗೆಳತಿ ಜೊತೆ ಮಾತುಕತೆʼ ಸಂಕಲನ) ಎಂಬ ಕವಿತೆಯಲ್ಲಿ ಮಂಕು ಮಧ್ಯಾಹ್ನವೊಂದರಲ್ಲಿ ಭೀತಿ ತುಂಬಿದ ಊರಿನ ರಹದಾರಿಗಳಲ್ಲಿ ನೆಲದಗಲಕ್ಕೂ ಹಬ್ಬಿರುವ ನಸುನಗುವಿನಂತೆ ಬಿಳಿ ಚಿಟ್ಟೆಯೊಂದು ಹಾರುತ್ತಿದೆ.  ವೇಗದಿಂದ ಹಾರುವ ಅದರ ಸವಾರಿ ಸದ್ಯವನ್ನೂ ಸೀಳಿ ಹಾಕಿ, ಸಾವಿನ ದವಡೆಯಡಿಯಿಂದ ಮರಳಿ ಕೇಳಿಬರಬಹುದಾದ ಎದೆ ಮಿಡಿತದಂತೆ ಫಡಫಡಿಸುತ್ತಿದೆ. ಗಮನಿಸಿ ನೋಡಿದರೆ ಕಮಲಾಕರ ಅವರ ಕವಿತೆಗಳು ಸಾಮಾಜಿಕ ಹಾಗೂ ವೈಯುಕ್ತಿಕ ಬದುಕಿನ ಹಲವು ಕಾವಳಗಳ ನಡುವೆಯೇ ಇಂಥ ಮಿಸುಗಾಡುವ ಜೀವಂತಿಕೆಯನ್ನು ಪಡೆದಿವೆ. ಜೀವಂತಿಕೆ ಬರುವುದು ಕೇವಲ ಹಂಬಲಗಳ ಕಾರಣದಿಂದ ಮಾತ್ರ ಅಲ್ಲ. ಬದುಕಿನ ಕುರಿತಾದ ಹಲವು ಹಂಬಲಗಳು ಹುಡಿಹುಡಿಯಾದ ಶಬ್ದಗಳಲ್ಲಿ ಅರಳುವುದು ಮುಖ್ಯವಾಗಿ ಕಮಲಾಕರ ಅವರು ಬದುಕನ್ನು ತೆರೆದ ಮನಸ್ಸಿನಿಂದ ನೋಡುವ ಮುಕ್ತ ನೋಟದ ಕಾರಣದಿಂದ. “ನಾ ತಿತ್ತಿತ್ತಿರುಗುವ ತಿರುಗುಣಿಯಂತಾವಾ” ಎಂಬ ಆಮೋದ ಭರಿತ ಹಾಡೊಂದರಲ್ಲಿ ನಾ ನಿಲ್ಲಂಗಿಲ್ಲದ ನೀರಿನಂತಾವಾ ಎಂದು ಪರಿಚಯಿಸಿಕೊಳ್ಳುತ್ತ ನಾ ಮುಚ್ಚೇ ಇಲ್ಲದ ಬಾಗಿಲಿನಂತಾವಾ” ಎಂದು ವಿವರಿಸಿಕೊಳ್ಳುತ್ತಾರೆ. ಇದೊಂದು ಬಗೆಯ ಢಾಳಾದ ಸ್ವವಿವರ ಎಂದುಕೊಂಡರೂ ಅದಕ್ಕಿಂತ ಸೂಕ್ಷ್ಮವಾಗಿ ಅವರ ಅನೇಕ ಕವಿತೆಗಳು ಇದೇ ಮಾತನ್ನು ಪೋಷಿಸುತ್ತವೆ. ‘ನಾನಾಗಿ ಉಳಿದಿರದ ನಾನುʼ ಎಂಬ ಕವಿತೆಯಲ್ಲಿ ತನ್ನ ಭಾಷೆಭಾವಗಳು ಯಾರದೋ ಠಕ್ಕಲೆಕ್ಕಗಳಿಗೆ ಬಲಿಯಾಗಿದ್ದರೂ “ಉಳಿದಿದೆ ನನ್ನದಾಗಿ/ನನ್ನ ಈ ಹೃದಯ ಮಾತ್ರ/ ನನ್ನದೇ ಕಲ್ಪನೆಗಳ ಕೊಡೆಯಲ್ಲಿ ನಿಂದು/ನನ್ನದೇ ಕನಸುಗಳ ಕೆಂಡದಲ್ಲಿ ಬೆಂದು” ಎನ್ನುವಾಗ ಕವಿಗೆ ತನ್ನದೇ ಆಗಿರುವ ಭಾವಲೋಕವೊಂದನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಅನಿವಾರ್ಯ ಮತ್ತು ಉಮೇದುಗಳು  ಕಾಣಿಸಿಕೊಳ್ಳುವುದು ಮುಖ್ಯವಾಗಿದೆ.
ನಾವು ಬದುಕುತ್ತಿರುವ ಸಮಾಜದ ಹಲಬಗೆಯ ಕ್ಷೋಭೆಗಳನ್ನು ಇಲ್ಲಿನ ಕವಿತೆಗಳು ದಾಖಲಿಸುತ್ತವೆ. ರಸ್ತೆಯ ಮೇಲೆ ಜರುಗುತ್ತಿರುವ ವಿಕರಾಳ ಸಂಗತಿಗಳು ಇಡೀ ಸಮಾಜದ ಅಸ್ವಸ್ಥ ಸ್ಥಿತಿಯನ್ನು ರೂಪಕಗಳ ಮೂಲಕ ಹಿಡಿಯುವ  ಪ್ರಯತ್ನದಲ್ಲಿ ತೊಡಗಿವೆ ಎನಿಸುತ್ತದೆ. (‘ನಿಧಾನ ಸುಡುವ ಕನಸುಗಳುʼ, ‘ಇತಿಹಾಸ ಅನ್ನುತ್ತಾರಲ್ಲʼ ಮೊದಲಾದ ಕವನಗಳು). ‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ  ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು  ಕವಿ ಕಾಣಿಸುತ್ತಾನೆ. ಚರಿತ್ರೆಯ ಎಲ್ಲ ದುರಂತಗಳ ಅಂತ್ಯ ಮನುಷ್ಯನ ಮನುಷ್ಯ ಸಂವೇದನೆಯ ನಾಶದಿಂದಲೇ ಆರಂಭವಾಗುತ್ತದೆ ಎಂಬ ಎಚ್ಚರವನ್ನು ಕವಿ ಇಲ್ಲಿ ಮನಗಾಣಿಸಲು ನೋಡುತ್ತಾನೆ.

ಆಧುನಿಕ ನಾಗರಿಕತೆ ಕುರುಹುಗಳಾದ ಇಮಾರತುಗಳು, ನಕ್ಷೆಗಳು, ರಸ್ತೆಗಳೆಲ್ಲ ಶತಮಾನಗಳ ನಂಜು ಹಿಡಿದು ಖಿಲವಾಗುತ್ತಿರುವಾಗ  ಯಾರ ಹುಟ್ಟನ್ನ ಯಾವ ಸಡಗರವನ್ನು  ಸಂಭ್ರಮಿಸಬೇಕು ಎಂಬ ದಟ್ಟ ವಿಷಾದ ಕವಿಯನ್ನು ಆವರಿಸುತ್ತದೆ. ಇಂಥ ಹಲವಾರು ಕವಿತೆಗಳು ಕವನಸಂಕಲದ ಉದ್ದಕ್ಕೂ ಸಿಗುತ್ತವೆ.  ಆದರೆ ಕವಿ ವ್ಯಾಕುಲನಾದಷ್ಟೂ  ಬದುಕನ್ನು ಕುರಿತ ವ್ಯಾಮೋಹ ಇನ್ನಷ್ಟು ಹೆಚ್ಚಾಗಿದೆ. ಒಡೆದು ಹೋದ ಸಮಾಜ ಒಳಿತನ್ನು ಕಾಣಲಾರದ ಜನರ ನಡುವೆ ಅಂದಗೆಟ್ಟಿರುವ ಶಬ್ದಗಳಲ್ಲಿ ಕನಸುಗಳನ್ನು ಕಟ್ಟಬಹುದೇ ಎಂಬುದು ಕವಿಯ ಎದುರಿಗಿರುವ ಮುಖ್ಯ ಪ್ರಶ್ನೆ. ವ್ಯಾಕುಲನಾಗಿ ಸುತ್ತಲಿನ ಸಮಾಜವನ್ನು ನೋಡುತ್ತಲಿರುವ ಕವಿಗೆ ಬದುಕಿನ ಬಗೆಗಿನ ಭರವಸೆ ವ್ಯಾಮೋಹಗಳು ಇಮ್ಮಡಿಯಾಗುವುದು ಪುಟ್ಟ ಪುಕ್ಕಗಳಲ್ಲಿಯೇ ನೆಲವ ಮೀರುವ ಹಕ್ಕಿಯಿಂದ, ಆಶೀರ್ವಾದಂತೆ ಹಗುರ ತಾಕುವ ಮಂಜಿನ ಕರುಣೆಯಿಂದ, ಪುಟ್ಟ ಹೂವೊಂದು ಟೊಂಗೆ ತೆರೆದು ತಾನೆಂಥ ಗಾತ್ರದ ಮರಸಂತಾನವನ್ನು ಹೊತ್ತಿದ್ದೇನೆಂಬ ಅರಿವಿಲ್ಲದೆ ನಿರಾಳ  ನಗುತ್ತಿರುವ ಹೂವಿನ ಮೌನದಿಂದ. ಪಕಪಕನೆ ಹಾರುವ ಪಾತರಗಿತ್ತಿ  ನಿರ್ಜನ ಬೀದಿಯೊಂದರ ಪಾಳು ಬಿಡಾರದೆದುರು ಅಳುತ್ತಿರುವ ಒಂಟಿ ಮಗುವಿನ ಅಳುವನ್ನು ಚಣಮಾತ್ರದಲ್ಲಿ ನಿಲ್ಲಿಸುವ ಪವಾಡದಿಂದ.

ಕೊನೆಗೂ ಕವಿಯೊಬ್ಬನಿಂದ ನಾವು ಕೇವಲ ಕಾವ್ಯವನ್ನು ನಿರೀಕ್ಷಿಸುತ್ತೇವೆಯೇ? ನಾವು  ಬಯಸುವುದು ಅವನ ಸಾಲುಗಳಿಂದ ಇನ್ನಷ್ಟು ಹಿಡಿ ಮನುಷ್ಯತ್ವವನ್ನು. ಅಷ್ಟು ಮನುಷ್ಯತ್ವವನ್ನು ಹೆಚ್ಚಿಸುವ ಸಾಲುಗಳು ಇಲ್ಲಿ ಹೇರಳವಾಗಿವೆ. ಅಡಿಗೆಮನೆಯಲ್ಲಿ ಕೀಟನಾಶಕವನ್ನು ಹೀರಿ ಸಾಲು ಸಾಲು ಮಲಗಿರುವ ಇರುವೆಗಳನ್ನು ಕಂಡು ಊಟಬಿಟ್ಟು ಕಣ್ಣಂಚಿನಲ್ಲಿ ನೀರುತುಂಬಿಕೊಂಡಿರುವ ಮಗಳು. ಚಾದಂಗಡಿಯ ಮುದುಕಿ ಲೆಕ್ಕ ತಪ್ಪಿ ನೀಡಿದ ನೋಟನ್ನು ದೂರವಾದರೂ ನಡೆದು ಹೋಗಿ ವಾಪಸು ನೀಡಲು ಹೇಳುವ, ರಸ್ತೆ ದಾಟುತ್ತಿರುವ ಕುಂಟು ನಾಯಿಮರಿ ಗಾಬರಿಯಾಗಬಾರದೆಂದು ಗಾಡಿಯನ್ನು ನಿಧಾನಿಸುವ ಬಾಳ ಸಂಗಾತಿಯ ಕರುಣೆ- ಇವೆಲ್ಲವನ್ನೂ ಕಂಡು ‘ನಿನ್ನ ಆಸೆಯಲ್ಲಿ ಮನುಜನಾಗುವ ನಾನುʼ ಎನ್ನುವ ಕವಿ. ಇಂಥ ಹಂಬಲಗಳಿದ್ದರೆ   ಕವಿಗಳಾಗುವುದು ಮನುಷ್ಯರಾಗುವುದು ಸಾಧ್ಯ.  ಇಲ್ಲಿರುವ ಕವಿತೆಯ ಸಾಲುಗಳಲ್ಲಿ ಇಂತಹ ಸಾಧ್ಯತೆಗಳು ಮತ್ತೆ ಮತ್ತೆ ಕಾಣುವಾಗ ಕವಿತೆಯಿಂದ ಇದಕ್ಕಿಂತ ದೊಡ್ಡದನ್ನು ಯಾಕೆ ನಿರೀಕ್ಷಿಸಬೇಕು?
(ಕೃತಿ: ವಲಸೆ ಹಕ್ಕಿಗಳ ಹುಯಿಲು (ಕವನ ಸಂಕಲನ), ಲೇಖಕರು: ಕಮಲಾಕರ ಕಡವೆ, ಪ್ರಕಾಶಕರು: ಸಮಾಜಮುಖಿ ಪ್ರಕಾಶನ, ಬೆಲೆ: 100/-)

About The Author

ಎಸ್. ಸಿರಾಜ್ ಅಹಮದ್

ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು

1 Comment

  1. ಸುಧಾ ಆಡುಕಳ

    ಕವಿಯಿಂದ ನಿರೀಕ್ಷಿಸುವುದು ಹಿಡಿ ಮನುಷತ್ವವನ್ನು ಎಂಬುದು ಎಷ್ಟು ಚಂದದ ಮಾತು. ಕಾವ್ಯದ ಬಗೆಗೊಂದು ಹೊಸಹೊಳಹು ದಕ್ಕಿತು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ