ಗ್ರೂಪ್ ಸ್ಟಡಿಯಲ್ಲಿ ಮೆಹೆಂದಿ ಹೇಗೆ ಮಾಡುವುದು. ನೇಲ್ಸ್ ಹೇಗೆ ಶೇಪ್ ಮಾಡುವುದು, ನೇಲ್ ಪಾಲಿಶ್ ಹೇಗೆ ಹಚ್ಚಬೇಕು ಇತ್ಯಾದಿ ಚರ್ಚೆಗಳ ಸಂಗಡ ಮಾಸಿಕ ಮುಟ್ಟಿನ ವಿಚಾರಗಳೂ ಇರುತ್ತಿದ್ದವು. ಮಾಸಿಕ ಮುಟ್ಟಿನ ವಿಚಾರ ಈಗಿನ ಮಕ್ಕಳಿಗೆ ತಿಳಿದಿರುವಷ್ಟು ಆಗ ನಮಗೆ ತಿಳಿದಿರಲಿಲ್ಲ. ಹಾಗಾಗಿ ಆ ವಿಚಾರ ತಿಳಿಯುವ ಕುತೂಹಲ ಇರುತ್ತಿತ್ತು. ಬೇರೆ ಬೇರೆ ಮನೆಗಳಲ್ಲಿ ಆಚರಿಸುವ ಸಂಪ್ರದಾಯಗಳನ್ನು ಆ ವಿಚಾರದಲ್ಲಿ ಹಿರಿಯರಾದವರು ಹೇಳುತ್ತಿದ್ದರು. ಹೊಸದಾಗಿ ಋತುಮತಿಯರಾದವರಿಗೆ, ಬಾಣಂತಿಯರಿಗೆ ಕೊಡುತ್ತಿದ್ದ ಎಳ್ಳಡಿಗೆ ತಂದು ಹಂಚುವುದು ಆ ಕುರಿತ ಚರ್ಚೆಗಳೂ ಆಗುತ್ತಿದ್ದವು.
ಸುಮಾವೀಣಾ ಬರೆಯುವಕೊಡಗಿನ ವರ್ಷಕಾಲಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

ಜನವರಿ ಬಂದು ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಮುಗಿದರೆ ವಾರ್ಷಿಕ ಪಠ್ಯಗಳು ಮುಗಿಯುವ ಕಾಲವೆಂದು ಅಘೋಷಿತ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ. ಪ್ರಿಪರೇಟರಿ ಪರೀಕ್ಷೆಗಳು ಮತ್ತು ಟೆಸ್ಟ್‌ಗಳು ಆಗಕ್ಕೆ ಈ ಪರೀಕ್ಷೆಗಳು ಏಕೆ ಬೇಕು? ಎನ್ನಿಸುತ್ತಿತ್ತು, ಈಗ ಇನ್ನೊಮ್ಮೆ ಅವಕಾಶ ಸಿಕ್ಕರೆ ಚೆನ್ನಾಗಿ ಓದಿ ಪೂರ್ಣ ಅಂಕಗಳನ್ನು ತೆಗೆಯಬಹುದಿತ್ತು ಅನ್ನಿಸುತ್ತದೆ. ಐದು ಜನರಿಗೆ ಇಲ್ಲ ಹತ್ತು ಜನರಿಗೆ ಒಂದು ಗುಂಪು ಆ ಗುಂಪಿಗೆ ನಾಯಕಿಯರು ಈಗಿನ ಯಾವ ನಾಯಕಿಯರಿಗೂ ಕಡಿಮೆಯಿಲ್ಲ. ಸ್ವಲ್ಪ ಆಚೆ ಈಚೆ ಆದರೂ ಕ್ಲಾಸ್ ಟೀಚರ್ ಎಂಬ ಹೈಕಮಾಂಡಿಗೆ ದೂರು ನೀಡುತ್ತಿದ್ದರು. ಆದರೆ ಸ್ವತಃ ಅವರೆ ಹೋಮ್‌ವರ್ಕ್ ಮಾಡುತ್ತಿರಲಿಲ್ಲ. ಗ್ರೂಪ್ ಸ್ಟಡಿ ಎಂದಾಗ ಕ್ಲಾಸ್ ರೂಮಿನ ಹೊರಗೆ ಗ್ರೌಂಡ್‌ಗಳಲ್ಲಿ ಕೂರಿಸುತ್ತಿದ್ದರು. ನಾವು ಹೆಚ್ಚಾಗಿ ಬಾಸ್ಕೆಟ್ ಬಾಲ್ ಕೋರ್ಟಿನ ಇಳಿಜಾರು ಪ್ರದೇಶದಲ್ಲಿ ಕೂರುತ್ತಿದ್ದೆವು. ಅಲ್ಲಿ ಎಂದೋ ಗಾಳಿಗೆ ಬಿದ್ದ ಮರವಿತ್ತು. ಮರದ ಪಳೆಯುಳಿಕೆ ರೀತಿ ಇರಲಿಲ್ಲ ಅದು. ಆಗ ಡಿ. ಡಿ. ನ್ಯಾಷನಲ್‌ನಲ್ಲಿ ಬರುತ್ತಿದ್ದ ವಿಶ್ವಾಮಿತ್ರ ಧಾರಾವಾಹಿಯಲ್ಲಿ ಬರುತ್ತಿದ್ದ ಮೇನಕೆಯ ಹಂಸಮೂತಿಯ ಹಂಸತೂಲಿಕಾತಲ್ಪದಂತೆ ಕಾಷ್ಟತಲ್ಪ ಇತ್ತು. ಎಲ್ಲರಿಗೂ ಅದರ ಮೇಲೆ ಕುಳಿತು ಮೇನಕೆಯ ಹಾಗೆ ಪೋಸ್ ಕೊಡಬೇಕೆಂಬ ಆಸೆ. ಟ್ರಯಲ್ ನೋಡುವಾಗೊಮ್ಮೆ ಪಿ.ಟಿ. ಸರ್ ಬರುತ್ತಿದ್ದರೆಂಬ ವಿಷಯ ತಿಳಿದದ್ದೇ ಚಲ್ಲಾಪಿಲ್ಲಿಯಾಗಿದ್ದಿದೆ. ಓದುವುದಕ್ಕಿಂತ ಇವೇ ಆಟಗಳು ಹೆಚ್ಚಾಗಿದ್ದವು.

ಆ ಗ್ರೌಂಡಿನ ಕೆಳಗೆ ಝರೀನಾ ತಾಜ್ ಮನೆಯಿತ್ತು. ಅವರ ಮನೆಯಲ್ಲಿ ತಿಂಡಿ ತಂದಿದ್ದಿದ್ದರೆ ಅವರಮ್ಮ ತಂದು ಕೈ ಎಟುಕಿಸಿ ಕೊಡುತ್ತಿದ್ದರು. ಇನ್ನು ಯಾರದ್ದಾರು ಹುಟ್ಟಿದ ದಿನವಾಗಿದ್ದರೆ ಎಕ್ಟ್ಸ್ರಾ ಚಾಕಲೇಟ್ ತಂದು ತಮ್ಮ ಗುಂಪಿನವರಿಗೆ ಪ್ರತ್ಯೇಕ ಹಂಚಬೇಕಿತ್ತು. ಹಾಗೆ ಚಾಕಲೇಟ್ ತಿನ್ನುತ್ತಾ, ಹೆಣಿದಿದ್ದ ಜಡೆಗಳನ್ನು ಬಿಚ್ಚಿ ಮತ್ತೆ ಹೆಣೆದುಕೊಳ್ಳುತ್ತಾ ಬಯಲಲ್ಲಿ ಕುಳಿತು ಪುಸ್ತಕ ನೋಡುವುದು ಸುಲಭದ ಮಾತೇ? ತಿಳಿದವರು ಹೇಳಬೇಕು. ಹಾಗೆ ಪುಸ್ತಕ ನೋಡದ ಕಣ್ಣುಗಳಿಗೆ ನೇರ ಕಾಣಿಸುತ್ತಿದ್ದುದು ಮುಸಲ್ಮಾನರ ಸ್ಮಶಾನ. ಅಷ್ಟು ಹತ್ತಿರವಿತ್ತ? ಇಲ್ಲ!.. ಆದರೆ ಸ್ಮಶಾನ ಬೆಟ್ಟದಂಥ ಜಾಗದಲ್ಲಿ ಇತ್ತು ನಮ್ ಗ್ರೌಂಡ್. ಅದರ ಕೆಳಗೆ ಇವೆರೆಡರ ನಡುವೆ ರಸ್ತೆ ಜನವಸತಿ ಪ್ರದೇಶ, ತೋಡು (ಮೈಸೂರು ಭಾಗದಲ್ಲಿ ಅಗೆಯುವುದು ಎನ್ನುವ ಅರ್ಥ ಆದರೆ ಇಲ್ಲ ತಿಳಿನೀರು ಹರಿಯುವ ಹಳ್ಳ) ಭತ್ತದ ಗದ್ದೆಗಳು ಇದ್ದವು. ಒಮ್ಮೆ ಹೀಗೆ ನೋಡುವಾಗ ಶವಸಂಸ್ಕಾರವಾಗುತ್ತಿತ್ತು. ಎಲ್ಲರಿಗೂ ಪಾಪ ಅನ್ನಿಸುತ್ತಿತ್ತು. ಹಾಗೆ ಒಂದೆರಡು ದಿನಕಳೆದ ನಂತರ ಯಾರೋ ಆ ಸಮಾಧಿ ಸ್ಥಳದ ಬಳಿ ಅಸಂಬದ್ಧವಾಗಿ ಅಡ್ಡಾಡುವುದು ಅರಿವಿಗೆ ಬರುತ್ತಿತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ನಾವು ಓದುವುದು ಬಿಟ್ಟು ಅದನ್ನೆ ನೋಡುತ್ತಿದ್ದೆವು. ಪಕ್ಕದ ಗುಂಪಿನವರಿಗೆ ಬಾರೀ ತಕರಾರಿತ್ತು. ನಾವು ಓದುತ್ತಿಲ್ಲ ಎಂದು. ಅಸಲಿಗೆ ಅವರಿಗೆ ನಾವು ಓದುತ್ತಿಲ್ಲ ಎನ್ನುವುದಕ್ಕಿಂತ ಸ್ಮಶಾನದ ದೃಶ್ಯ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಕೋಪವೇ ಹೆಚ್ಚಾಗಿತ್ತು ಎನ್ನಿ. ಹಾಗೆ ನೋಡ ನೋಡುತ್ತಿದ್ದಂತೆ ಬಿಳಿಯ ಮಾರುತಿ ವ್ಯಾನ್‌ನಲ್ಲಿ ಅವರನ್ನು ಬಲವಂತವಾಗಿ ಹತ್ತಿಸಿಕೊಂಡು ಹೋಗುವುದು ಕಂಡಿತು. ಆ ದಿನವಿಡೀ ಬೇಸರ ಆದರೆ ನಮ್ಮ ಗುಂಪಿನವರಲ್ಲಿ ಬಿಟ್ಟರೆ ಯಾರಿಗೂ ಹೇಳಿಕೊಳ್ಳುವಂತಿಲ್ಲ. ಅನುಭವಿಸುವಂತಿಲ್ಲ ಅನ್ನುವ ಸಂದಿಗ್ಧತೆ ಇತ್ತು.

ಅಂತೂ ನಮ್ಮ ಗೆಳತಿಯರು ಬಿಡಲಿಲ್ಲ. ಅದೇ ಮಾರ್ಗವಾಗಿ ಮನೆಗೆ ಹೋಗುತ್ತಿದ್ದವರು (ಹೌದು ಆ ಸ್ಮಶಾನದ ನಡುವೆ ದೊಡ್ಡ ಕಾಲುದಾರಿಯಿತ್ತು. ಅದು ಮುತ್ತಪ್ಪ ದೇವಸ್ಥಾನ, ಮಹದೇವಪೇಟೆ ಮತ್ತು ಗಣಪತಿ ಬೀದಿಗೆ ಹತ್ತಿರದ ದಾರಿಯಾಗಿತ್ತು) ವಿಷಯ ಒಟ್ಟು ಮಾಡಿಕೊಂಡು ಬಂದಿದ್ದರು. ಹೇಳಲು ಅವರಿಗೆ… ಕೇಳಲು ನಮಗೆ ಇಬ್ಬರಿಗೂ ಕಾತರವೋ ಕಾತರ… ಗ್ರೂಪ್ ಸ್ಟಡಿಗೆ ಹೋಗುವುದನ್ನೆ ಕಾಯುತ್ತಿದ್ದೆವು. ಹಾಗೆ ಹೋದ ಕೂಡಲೆ ಗ್ರೂಪ್ ಡಿಸ್ಕಶನ್ ಪ್ರಾರಂಭವಾಯಿತು. ಆಗ ತಿಳಿದದ್ದೆ ಆ ಸಮಾಧಿಯ ಹತ್ತಿರ ಬಂದಿದ್ದು ಮೃತರ ಪತ್ನಿ ಎಂದು ಅವರು ಹೃಯಾಘಾತದಿಂದ ತೀರಿಕೊಂಡಿದ್ದರು. ತುಂಬಾ ಅನ್ಯೋನ್ಯವಾಗಿದ್ದವರು ಎಂದು. ಪತಿಯ ಮರಣದ ಸುದ್ದಿ ಕೇಳಿ ಆಕೆ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದರು. ಅದಕ್ಕಾಗಿ ಹಾಗೆ ಅವರು ಮನೆಯಿಂದ ತಪ್ಪಿಸಿಕೊಂಡು ಬಂದಿದ್ದರು ಎಂಬುದಾಗಿ… ಆ ವಿಚಾರ ತಿಳಿದ ಕೂಡಲೆ ಅನ್ನಿಸಿದ್ದು….. ಈಗಲೂ ಅನ್ನಿಸುವುದು ದೈವಕ್ಕೆ ಕರುಣೆ ಎನ್ನುವುದೆ ಇಲ್ಲವೆ! ಮುದ್ದಾದ ದಾಂಪತ್ಯ ಮುರಿದು ಏನು ಸಿಗುತ್ತದೆ? ಅದೆಷ್ಟೋ ಅಶಕ್ತರು ಜೀವನವೇ ಬೇಡ ಅನ್ನುವ ವಿರಕ್ತಿ ಹೊಂದಿದವರು ಎಷ್ಟು ಜನರು ಇರುತ್ತಾರೆ… ಮುಕ್ತಿ ಬೇಕು ಎಂದು ಬೇಡುತ್ತಿರುತ್ತಾರೆ.. ಅವರನ್ನು ಪರಿಗಣಿಸಬಹುದಲ್ಲವೆ ಎಂದು. “ನಿನ್ನಾಟ ಬಲ್ಲವರ್ಯಾರೋ ….” ಎನ್ನುತ್ತಾ ಸುಮ್ಮನಾಗಬೇಕಷ್ಟೇ.!

ನಮ್ಮ ಗ್ರೂಪ್ ಸ್ಟಡಿ ಭಾಷೆಗಳಿಗೆ ಮತ್ತು ಮಾನವಿಕಗಳಿಗೆ ಮಾತ್ರ ಮೀಸಲಾಗಿತ್ತು.. ಗಣಿತಕ್ಕಾಗಿರಲಿಲ್ಲ. ಕಾರಣ ಯಾರಿಗೂ ಸರಿಯಾಗಿ ಲೆಕ್ಕ ಬಿಡಿಸಲು ಬರುತ್ತಿರಲಿಲ್ಲ. ಮ್ಯಾಥ್ಸ್‌ನಲ್ಲಿ ನಾವೆಲ್ಲಾ ಫಸ್ಟ್ ಕ್ಲಾಸ್ ಗಡಿ ದಾಟುವವರು ಮಾತ್ರ. ಗ್ರೂಪ್ ಸ್ಟಡಿಯಲ್ಲಿ ಮೆಹೆಂದಿ ಹೇಗೆ ಮಾಡುವುದು. ನೇಲ್ಸ್ ಹೇಗೆ ಶೇಪ್ ಮಾಡುವುದು, ನೇಲ್ ಪಾಲಿಶ್ ಹೇಗೆ ಹಚ್ಚಬೇಕು ಇತ್ಯಾದಿ ಚರ್ಚೆಗಳ ಸಂಗಡ ಮಾಸಿಕ ಮುಟ್ಟಿನ ವಿಚಾರಗಳೂ ಇರುತ್ತಿದ್ದವು. ಮಾಸಿಕ ಮುಟ್ಟಿನ ವಿಚಾರ ಈಗಿನ ಮಕ್ಕಳಿಗೆ ತಿಳಿದಿರುವಷ್ಟು ಆಗ ನಮಗೆ ತಿಳಿದಿರಲಿಲ್ಲ. ಹಾಗಾಗಿ ಆ ವಿಚಾರ ತಿಳಿಯುವ ಕುತೂಹಲ ಇರುತ್ತಿತ್ತು. ಬೇರೆ ಬೇರೆ ಮನೆಗಳಲ್ಲಿ ಆಚರಿಸುವ ಸಂಪ್ರದಾಯಗಳನ್ನು ಆ ವಿಚಾರದಲ್ಲಿ ಹಿರಿಯರಾದವರು ಹೇಳುತ್ತಿದ್ದರು. ಹೊಸದಾಗಿ ಋತುಮತಿಯರಾದವರಿಗೆ, ಬಾಣಂತಿಯರಿಗೆ ಕೊಡುತ್ತಿದ್ದ ಎಳ್ಳಡಿಗೆ ತಂದು ಹಂಚುವುದು ಆ ಕುರಿತ ಚರ್ಚೆಗಳೂ ಆಗುತ್ತಿದ್ದವು. ನಮ್ಮಲ್ಲಿ ಬೀನ ಎಂಬ ಗೆಳತಿ ಇದ್ದಳು. ಅವಳು ಇದ್ದದ್ದು ಅಜ್ಜನ ಮನೆಯಲ್ಲಿ. ಅಜ್ಜ ಮಿಠಾಯಿ ಅಂಗಡಿ ಇಟ್ಟುಕೊಂಡಿದ್ದರಂತೆ. ಅದರಲ್ಲಿ ಸಾಕಷ್ಟು ಮಿಠಾಯಿಗಳನ್ನು ಬೀನ ಕದ್ದು ತರುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಬ್ರೇಕ್‌ನಲ್ಲಿ ಅವಳ ತಂಗಿ ರೀನ ಅವಳ ಜೇಬು ಚೆಕ್ ಮಾಡುತ್ತಿದ್ದಳು. ಈ ದಿವಸವವೂ ಮಿಠಾಯಿ ತಂದಿದ್ದಾಳ ಎಂದು… ಅಷ್ಟರಲ್ಲಿ ಆ ಮಿಠಾಯಿಗಳು ಅವಳ ಗೆಳತಿಯರ ಪಾಲಾಗಿರುತ್ತಿದ್ದವು. ಅಂತೂ ಗ್ರೂಪಲ್ಲಿ ಮಿಠಾಯಿ ಪಾಠ ಇದು ಬೆಲ್ಲದ್ದ? ಕಡ್ಲೆಬೀಜದ್ದ? ಸಕ್ಕರೆಯದ್ದ? ಕೊಬ್ಬರಿಯದ್ದ? ಹೀಗೆ…. ನಾವು ಹತ್ತನೆ ತರಗತಿ ತಲಪುವವರೆಗೆ ಅವಳು ಇರಲಿಲ್ಲ. ಹಳೆಯ ತರಗತಿಯಲ್ಲಿ ಉಳಿದುಕೊಂಡಳು.

ಹಾಗೆ ಒಂದೆರಡು ದಿನಕಳೆದ ನಂತರ ಯಾರೋ ಆ ಸಮಾಧಿ ಸ್ಥಳದ ಬಳಿ ಅಸಂಬದ್ಧವಾಗಿ ಅಡ್ಡಾಡುವುದು ಅರಿವಿಗೆ ಬರುತ್ತಿತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ನಾವು ಓದುವುದು ಬಿಟ್ಟು ಅದನ್ನೆ ನೋಡುತ್ತಿದ್ದೆವು. ಪಕ್ಕದ ಗುಂಪಿನವರಿಗೆ ಬಾರೀ ತಕರಾರಿತ್ತು. ನಾವು ಓದುತ್ತಿಲ್ಲ ಎಂದು. ಅಸಲಿಗೆ ಅವರಿಗೆ ನಾವು ಓದುತ್ತಿಲ್ಲ ಎನ್ನುವುದಕ್ಕಿಂತ ಸ್ಮಶಾನದ ದೃಶ್ಯ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಕೋಪವೇ ಹೆಚ್ಚಾಗಿತ್ತು ಎನ್ನಿ.

ಹಾಗೆ ನಮ್ಮ ಗ್ರೌಂಡಿನ ನೈರುತ್ಯಕ್ಕೆ ಕತ್ತು ಹೊರಳಿಸಿದ್ದರೆ ಅಲ್ಲಿ ಶೇಠ್‌ಗಳ ಸ್ಮಶಾನ ಕಾಣಿಸುತ್ತಿತ್ತು. ಅಲ್ಲಿಯೂ ಅನೇಕ ಜನರು ಬರುವುದು ಹೋಗುವುದನ್ನು ಹೊಗೆಯನ್ನು ನೋಡಿದ್ದಿದೆ. ಒಮ್ಮೆ ಅಲ್ಲಿ ಗಲಾಟೆ ಆಗುತ್ತಿತ್ತು. ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ, ಹಾಗಾಗಿ ಅದನ್ನು ಅಲ್ಲಿಗೆ ಬಿಟ್ಟೆವು. ಮರು ದಿನ ‘ಶಕ್ತಿ’ ಪೇಪರ್ ನೋಡಿದರೆ ಅಸ್ತಿ ಸಂಗ್ರಹಕ್ಕೂ ಮೊದಲು ಅನೇಕರು ಅಲ್ಲಿ ಅನಗತ್ಯ ಓಡಾಡುತ್ತಾರೆ. ಇದು ನಮ್ಮ ನಂಬಿಕೆಗಳಿಗೆ ಧಕ್ಕೆ ತರುವಂಥದ್ದು ಎಂಬ ವಿಷಾದದ ಸುದ್ದಿ ಇತ್ತು. ಆನಂತರ ತಿಳಿಯಿತು ಅಲ್ಲಿ ಶವಕ್ಕೆ ಅಗ್ನಿ ಸ್ಪರ್ಶ ಮಾಡುವುದಕ್ಕೂ ಮೊದಲು ಯಥಾ ಶಕ್ತಿ ಬಂಗಾರವನ್ನು ಹಾಕಿರುತ್ತಾರೆ. ಅದು ಅಗ್ನಿಯಲ್ಲಿ ಕರಗಿ ಉಂಡೆಯಾಗಿರುತ್ತದೆ ಎಂದು ಆ ಚಿನ್ನವನ್ನು ಹುಡುಕುವುದಕ್ಕಾಗಿ ಶ್ರೀಮಂತರು ತೀರಿದ ಬಳಿಕ ಅನೇಕರು ಅನಗತ್ಯ ಓಡಾಟ ನಡೆಸುತ್ತಿದ್ದರು ಎಂಬುದಾಗಿ…… ಇಂಥ ವೈರುಧ್ಯಗಳು ಅದೆಷ್ಟೋ ಇರುತ್ತವೆ. ಚದುರಂಗರ ‘ವೈಶಾಖ’ ಕಾದಂಬರಿಯಲ್ಲಿ ಗೌಡರು ತಮ್ಮ ಎರಡನೆ ಹೆಂಡತಿ ತೀರಿದ ಬಳಿಕ ಆಕೆ ಇಷ್ಟ ಪಡುತ್ತಿದ್ದ ಅಷ್ಟೂ ಆಭರಣಗಳ ಸಹಿತ ಮಣ್ಣು ಮಾಡಿಸಿದ್ದರಂತೆ. ಅದನ್ನು ನೋಡಿದ್ದ ಅವರದೆ ಮನೆಯ ಆಳುಗಳು ಸಮಾಧಿ ಅಗೆಯಲು ಮುಂದಾಗಿದ್ದು ಲಕ್ಕ ಅದನ್ನು ವೀಕ್ಷಿಸುವುದು ನೆನಪಿಗೆ ಬರುತ್ತದೆ.

ಇನ್ನೂ ಒಂದು ಸ್ಮಶಾನಕ್ಕೆ ನಮ್ಮ ಮನೆಯ ಮುಂದೆ ಇದ್ದ ಗುಡ್ಡವನ್ನು ದಾಟಿ ಹೋಗಬೇಕಿತ್ತು. ಅದು ಇಳಿಜಾರು ಬೆಟ್ಟದ ಮೇಲೆ ಇತ್ತು. ನಾವು ಶಾಲೆಯಿಂದ ಬರುವಾಗ ಕಾಣಿಸುತ್ತಿತ್ತು. ಅದು ಗೌಳಿಗರ ಸ್ಮಶಾನ… ಅಲ್ಲಿಯೂ ಅವರವರ ಹಣಕಾಸಿನ ಸ್ಥಿತಿಗೆ ಅನುಸಾರವಾಗಿ ಶವಯಾತ್ರೆಯನ್ನು ಮಾಡುತ್ತಿದ್ದರು. ಅಲಂಕೃತ ಮಂಟಪದಲ್ಲಿ, ತೆರೆದ ವಾಹನದಲ್ಲಿ ತುಂಬಾ ಜನರು ಶವಯಾತ್ರೆಯನ್ನು ಹಿಂಬಾಲಿಸುವುದು ಹೀಗೆ….. ನಮ್ಮ ಮನೆಯ ಸುತ್ತ ಮುತ್ತಲಿನವರೆಲ್ಲಾ ಅಲ್ಲಿ ನಿಂತು ನೋಡುತ್ತಿದ್ದರು. ಅಲ್ಲಿ ಶವಯಾತ್ರೆ ನೋಡುತ್ತಿದ್ದ ಅನೇಕರಿಗೆ ಸತ್ತದ್ದು ಹೆಂಗಸೋ? ಗಂಡಸೋ? ಅನ್ನುವ ಕುತೂಹಲ ಗಂಡಸಾದರೆ ಅವನ ಹೆಂಡತಿ ಎಲ್ಲಿ ಎನ್ನುವುದು. ಒಮ್ಮೆ ನನ್ನ ಗೆಳತಿಯ ತಂದೆ ತೀರಿಕೊಂಡಿದ್ದರು. ಅವಳೂ ಶವಯಾತ್ರೆಯಲ್ಲಿದ್ದಳು ಅಕಸ್ಮಾತ್ತಾಗಿ ನನ್ನನ್ನು ನೋಡಿದಾಗ ಏನು ಹೇಳಬೇಕೆಂದು ತಿಳಿಯದಾಗಿತ್ತು.

ಅಲ್ಲಿ ಶವಸಂಸ್ಕಾರದ ನಂತರ ಅವರು ಬಳಸುತ್ತಿದ್ದ ವಸ್ತುಗಳು ಅಂದರೆ ಕನ್ನಡಕ, ವಾಕಿಂಗ್ ಸ್ಟಿಕ್ ಇತ್ಯಾದಿಗಳನ್ನು ಬಿಟ್ಟಿರುತ್ತಿದ್ದರಂತೆ. ನಾವು ನಾಲ್ಕನೆ ತರಗತಿಯಲ್ಲಿ ನಡೆದ ಘಟನೆ ಇದು. ನಮ್ಮ ತರಗತಿಯಲ್ಲಿದ್ದ ಲೋಕೇಶ ತರಗತಿಗೆ ಬರುವಾಗ ಹಸಿರುಬಣ್ಣದ ದಪ್ಪ ಗಾಜಿನ ಕನ್ನಡಕವನ್ನು ತರಗತಿ ಮಧ್ಯದಲ್ಲಿ ಹಾಕುವುದು ತೆಗೆದು ಬ್ಯಾಗಿನೊಳಗೆ ಇಡುವುದು ಮಾಡುತ್ತಾ ಎಲ್ಲರ ಕುತೂಹಲವನ್ನು ಕೆರಳಿಸುತ್ತಿದ್ದ. ಊಟದ ಸಮಯದಲ್ಲಿ ಕನ್ನಡಕ ಹಾಕಿಕೊಂಡು ವಿರಾಜಮಾನನಾಗಿ ಬೆಂಚ್ ಮೇಲೆ ಹತ್ತಿ ಕುಳಿತಿದ್ದ. ಅಷ್ಟರಲ್ಲಿ ಅದೇ ರಸ್ತೆಗಾಗಿ ಬರುತ್ತಿದ್ದ ಗೆಳತಿ ಅಶ್ವಿನಿ ಇದೂ ಹೊಸದಾಗಿ ಮಣ್ಣು ಮಾಡಿದ್ದಲ್ಲಿ ಇತ್ತು ನಿನ್ನೆ ಸಂಜೆ ಮನೆಗೆ ಹೋಗುವಾಗ ನೋಡಿದ್ದೆವು. ಅದೇ ಇವನು ಹಾಕಿಕೊಂಡಿರುವುದು ಎಂದಾಗ ಕೆಲವರಿಗೆ ನಗೂ ಎಂದರೆ ನಗೂ…. ಕೆಲವರಿಗೆ ಭಯ ಭಯವಾಗಿತ್ತು! ಅಂತೂ ಆ ಕನ್ನಡಕವನ್ನು ನೋಡಲು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಕೆಲವರು ಟೀಚರ್‌ಗೆ ಹೇಳಿ ಅದನ್ನು ಸೀಜ್‌಼ ಮಾಡಿಸಿದ್ದರು.

ಒಂದಕ್ಕೊಂದು ಪೂರಕ ಎಂಬಂತೆ ಮೂರು ಸ್ಮಶಾನಗಳು ಪ್ರಸ್ತಾಪಕ್ಕೆ ಬಂದವು. ಬೇರೆ ಬೇರೆ ಆಚರಣೆಗಳನ್ನು ಅರ್ಥಾತ್ ಸಂಸ್ಕೃತಿ ಅಧ್ಯಯನದ ಭಾಗಗಳಲ್ಲಿ ಇದೂ ಒಂದು. ಇಲ್ಲಿಗೆ ಇದನ್ನು ಇಲ್ಲಿಗೆ ನಿಲ್ಲಿಸಿ ನಮ್ಮ ಗ್ರೂಪ್ ಸ್ಟಡಿಗೆ ಬರುವುದಾದರೆ ಅಲ್ಲಿಯೂ ಕಿರುಪರೀಕ್ಷೆಗಳನ್ನು ಗುಂಪಿನ ನಾಯಕಿಯರು ಕೊಡಬೇಕಿತ್ತು.. ಅಲ್ಲೂ ಗುಂಪುಗಾರಿಕೆ… ಅವರಿಗೆ ಇಷ್ಟವಾದವರಾದರೆ ಲಿಬರಲ್ ಕರೆಕ್ಷನ್ ಇಲ್ಲ ಎಂದಾದರೆ ಸ್ಟ್ರಿಕ್ಟ್ ಕರೆಕ್ಷನ್. ನಾನು ನಾಯಕಿಯಾಗಿದ್ದ ಗುಂಪಿನಲ್ಲಿ ಹಾಗಾಗಿಲ್ಲ. ಅದಕ್ಕೆ ಕೆಲವರಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಓದುವುದನ್ನು ಆಗಲೇ ಇನ್ನಷ್ಟು ಚೆನ್ನಾಗಿ ಓದಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ಹೋಮ್ ವರ್ಕ್ ಸರಿಯಾಗಿ ಮಾಡದೆ ಹೋಗುವುದು, ಟೆಸ್ಟಿಗೆ ಸರಿಯಾಗಿ ಕಲಿಯದೆ ಹೋಗುವುದು ಎಲ್ಲಾ ಒಂಭತ್ತನೆ ತರಗತಿಗೆ ಮೊಟಕಾದವು.

ಇನ್ನೂ ನನಗೆ ನೆನಪಿರುವಂತೆ ಹತ್ತನೆ ತರಗತಿಯ ಪ್ರಾರಂಭದಲ್ಲಿಯೇ ಆ ದಿನದ ಪಾಠವನ್ನು ಅಂದೇ ಕಲಿಯಬೇಕು ಒಳ್ಳೆಯ ಅಂಕಗಳನ್ನು ತೆಗೆಯಬೇಕು ಎನ್ನುವುದು ತಲೆಯಲ್ಲಿ ಕುಳಿತಿತ್ತು. ಶತಾಯಗತಾಯ ಪ್ರಯತ್ನ ಪಟ್ಟಿದ್ದೂ ಇದೆ. ಆದರೆ ಏಕೋ ಪ್ರತಿಶತ 80 ರ ಗಡಿಯನ್ನು ದಾಟಲೇ ಇಲ್ಲ. ಇಷ್ಟು ಅಂಕಗಳನ್ನು ತೆಗೆಯಲು ಬೋರ್ಡಿಂಗ್ ವಾಸ ಬೇರೆ ಬೇಕಿತ್ತ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಅಂದರೆ ಹತ್ತನೆ ತರಗತಿ ವ್ಯಾಸಂಗದಲ್ಲಿ ಶಾಲೆ ಪಕ್ಕದಲ್ಲಿ ಮನೆ ಇದ್ದರೂ ಬೋರ್ಡಿಂಗ್ ಸೇರಬೇಕೆಂಬ ನಿಯಮವಿತ್ತು. ಊಟ ತಿಂಡಿಯನ್ನು ಮನೆಯಿಂದಲೆ ತರಿಸಿಕೊಳ್ಳಬಹುದಾದ ಆಯ್ಕೆಯೂ ಇತ್ತು. ಬೋರ್ಡಿಂಗ್ ವಾಸದ ಅನುಭೂತಿಯೇ ವಿಶಿಷ್ಟವಾದದ್ದು… ಆ ವಿಶಿಷ್ಟ ತರಲೆ ಸಮಾಚಾರಗಳೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗುವೆ.

(ಮುಂದುವರಿಯುವುದು…)