ಮೇಕೆಗಳ ಮೇಲೆ, ಜಂತುಗಳ ಮೇಲೆ, ಮನುಷ್ಯರ ಮೇಲೆ ಮೊದಲಿನಿಂದಲೂ ಯಾವುದರ ಮೇಲೂ ಪ್ರೀತಿಯಿಲ್ಲ ಯಾಖುಬ್ ಮಿಯಾನಿಗೆ. ಗಂಡಸೆಂಬ ಒಂದೇ ಒಂದು ಅಹಂ. ಯಾವುದೇ ಬದಲಾವಣೆಯಿಲ್ಲದ ತನ್ನ ವೃತ್ತಿಯ ಹಾಗೆ ಮನೆ ಸಹ ನಡೆಯುತ್ತದೆ ಎಂದುಕೊಳ್ಳುತ್ತಾನೆ ಅವನು. ಮಕ್ಕಳನ್ನು ಹತ್ತಿರಕ್ಕೆ ಕರೆದುಕೊಂಡು ನಾಲ್ಕು ಮಾತುಗಳನ್ನಾಡುವುದು, ಅವರೊಂದಿಗೆ ಆಟವಾಡುವುದು, ವಾರದಲ್ಲಿ ಯಾವುದೋ ಒಂದು ದಿನ ಅವರನ್ನು ಹಾಗೆ ಆಚೆ ಸುತ್ತಾಡಿಸುವುದು, ಮನೆಗೆ ಬರುವಾಗ ಜಹೀರಾಬಿಗೆ ಮಲ್ಲಿಗೆಯ ಹೂವು ತೆಗೆದುಕೊಂಡು ಬರುವುದು ಬಹುಶಃ ಇದ್ಯಾವುದೂ ಗೊತ್ತಿಲ್ಲ ಯಾಖುಬ್ ಮಿಯಾನಿಗೆ.
ಕಾ.ಹು. ಚಾನ್ ಪಾಷ ಅನುವಾದಿಸಿದ ತೆಲುಗಿನ ಅನ್ವರ್ ಬರೆದ ಕಥೆ “ಬಕ್ರಿ”

 

‘ಇಸ್ಕು ಮೌತ್ ನಹೀ ಆರಿ’ ಎಂದು ಬೆಳಿಗ್ಗೆ ಏಳುತ್ತಲೇ ಅಂದುಕೊಳ್ಳುತ್ತಾಳೆ ಜಹೀರಾಬಿ ತನ್ನ ಗಂಡನನ್ನು ನೋಡಿ. ಹೀಗೆ ಕಳೆದ ಆರು ತಿಂಗಳಿನಿಂದ ದಿನಕ್ಕೆ ಕನಿಷ್ಟ ಮುವತ್ತು ಬಾರಿಯಾದರೂ ಅಂದುಕೊಳ್ಳುತ್ತಾಳೆ. ಈಗಲೇ ಎದ್ದಿದ್ದರಿಂದ ಏಳುತ್ತಲೇ ‘ಇಸ್ಕು ಮೌತ್ ನಹೀ ಆರಿ’ ಅಂದಳು ಮೇಕೆಯ ಮುಂದೆ ಕುಳಿತಿರುವ ತನ್ನ ಗಂಡನನ್ನು ನೋಡುತ್ತ.

ಜಹೀರಾಬಿಗೆ ಮದುವೆಯಾಗಿ ಇನ್ನೂ ಒಂಭತ್ತು ವರ್ಷಗಳೂ ಆಗಲಿಲ್ಲ. ಏಳು ಮಕ್ಕಳ ತಾಯಿ. ಮಗುವಿಂದ ಮಗುವಿಗೆ ಕನಿಷ್ಟ ಒಂದು ವರ್ಷದ ಅಂತರವೂ ಇಲ್ಲ. ಹಾಗಂತ ತುಂಬಾ ಅನ್ಯೋನ್ಯತೆಯ ದಾಂಪತ್ಯವೆಂದು, ಗಂಡ ಹೆಂಡಿರರಿಬ್ಬರು ಗಿಣಿಮರಿಗಳಹಾಗೆ ಪ್ರೀತಿ ಸಂಭ್ರಮಗಳಿಂದ ಸುಖ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ಹಾಗಿಲ್ಲ. ಮೂರು ಹೆಣ್ಣು, ನಾಲ್ಕು ಗಂಡು ಮಕ್ಕಳು. ಹೊಟ್ಟೆಯಲ್ಲಿ ಯಾವಾಗ ಗರ್ಭಕಟ್ಟುತ್ತದೆಂದು ಗೊತ್ತಿಲ್ಲ. ಆಕೆಗೆ ಇಷ್ಟು ಪ್ರೆಗ್ನೆನ್ಸಿಗಳು ಹೇಗೆ ಬಂದಾವೆಂದೂ ಗೊತ್ತಿಲ್ಲ. ಸ್ವಲ್ಪ ಗೊತ್ತಾಗುವ ಹೊತ್ತಿಗೆ ಡೆಲಿವರಿಯ ದಿನಗಳು ಹತ್ತಿರ ಬರುತ್ತಿದ್ದವು. ಇದೇ ಮೊದಲ ಬಾರಿಗೆ ಈ ಮಗು ಹುಟ್ಟಿದ ನಂತರ ಇಲ್ಲಿಯವರೆಗೆ ಗರ್ಭಿಣಿಯಾಗದಿರುವುದು. ಹಾಲು ಕುಡಿಯುತ್ತಿರುವ ಈ ಕೊನೆಯ ಮಗನ ವಯಸ್ಸು ಏಳು ತಿಂಗಳು. ಆರು ತಿಂಗಳಿನಿಂದ ಶಾರೀರಿಕ ದಾಳಿ ಕಡಿಮೆ ನಡೆಯುತ್ತಿದೆ ಜಹೀರಾಬಿಗೆ. ಏಕೆಂದರೆ ಆರು ತಿಂಗಳಿನಿಂದ ಒಂದು ಮೇಕೆಯನ್ನು ತಂದು ಸಾಕುತ್ತಿದ್ದಾನೆ ತನ್ನ ಗಂಡ ಯಾಖುಬ್ ಮಿಯಾ.

ಯಾಖೂಬ್ ಮಿಯಾ ಸೆಂಟ್ರಲ್ ಗೌರ್ನಮೆಂಟ್ ಗೆ ಸಂಬಂಧಿಸಿದ ಒಂದು ಕಂಪನಿಯಲ್ಲಿ ಡ್ರೈವರ್. ಇಪ್ಪತ್ತಮೂರನೇ ವಯಸ್ಸಿಗೆ ಮದುವೆಯಾದ ಯಾಖುಬ್ ಮಿಯಾಗೆ ಈಗ ಮುವತ್ತೆರಡು ವರ್ಷ. ಮನುಷ್ಯ ನೋಡುವುದಕ್ಕೆ ನಲವತ್ತು ವರ್ಷದವನಂತೆ ಕಾಣಿಸುತ್ತಾನೆ. ಮನೆಯಲ್ಲಿ ಇರುವಷ್ಟು ಹೊತ್ತು ಹೆಂಡತಿಯನ್ನು ಬೈಯುತ್ತಲೋ, ಹೊಡೆಯುತ್ತಲೋ ಏನೋ ಒಂದು ಗಲಾಟೆ ಮಾಡುತ್ತಲೇ ಇರುತ್ತಾನೆ. ಮಕ್ಕಳನ್ನು ಬೈಯುವುದು ಹೊಡೆಯುವುದು ಅವನಿಗೊಂದು ಚಟ. ಇದೊಂದು ಸಾಮ್ರಾಜ್ಯವೆಂದೂ ಈ ಸಾಮ್ರಾಜ್ಯಕ್ಕೆ ತಾನೇ ಷಹೀನ್ ಷಾ ಎಂಬಂತ್ತಿರುತ್ತದೆ ಯಾಖುಬ್ ಮಿಯಾನಿಗೆ. ಒಂದು ಮಾತು ಹೇಳಿದ ಮೇಲೂ ಸಹ ತನ್ನ ಕೆಲಸವಾಗಲಿಲ್ಲವೋ ಮನೆಯಲ್ಲೇ ಒಂದು ನರಕವನ್ನ ಸೃಷ್ಟಿಸುತ್ತಾನೆ. ಎಲ್ಲವನ್ನೂ ಅಭ್ಯಾಸವನ್ನು ಮಾಡಿಕೊಂಡಿದ್ದಳು ಜಹೀರಾಬಿ. ಶಾರೀರಿಕ, ಮಾನಸಿಕ ನರಕವನ್ನು ಅನುಭವಿಸುತ್ತಿರುವ ಜಹೀರಾಬಿ ಗಂಡನಲ್ಲಿ ಇಲ್ಲವೆಂದುಕೊಂಡಿದ್ದ ಪ್ರೀತಿಯನ್ನು ದಯಾಗುಣವನ್ನು ಈ ಮಧ್ಯೆಯೇ ನೋಡುತ್ತಿದ್ದಾಳೆ. ಅದೂ ಮುಖ್ಯವಾಗಿ ಯಾಖುಬ್ ಮಿಯಾ ತಾನು ಸಾಕುತ್ತಿರುವ ಒಂದು ಮೇಕೆಯ ಮೇಲೆ ಇವೆಲ್ಲವನ್ನೂ ತೋರಿಸುತ್ತಿರುವುದು. ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಜಹೀರಾಬಿಗೆ.

ಮೇಕೆಯೇ ಲೋಕವಾಗಿಬಿಟ್ಟಿದೆ ಗಂಡನಿಗೆ. ಮೇಕೆಗೋಸ್ಕರ ಮನೆಗೆ ಬೇಗ ಬರುತ್ತಿದ್ದಾನೆ. ಬರುವಾಗ ಮೇಕೆಗಾಗಿ ತರಕಾರಿಗಳು, ಮರದ ಎಲೆಗಳು ಮೊದಲಾದವುಗಳನ್ನು ತೆಗೆದುಕೊಂಡು ಬರುತ್ತಿದ್ದಾನೆ. ಊಟ ಮುಗಿಯಿತೋ ಇಲ್ಲವೋ, ಕ್ಷಣದಲ್ಲೇ ನಿದ್ರೆ ಮಾಡುತ್ತಿದ್ದ ಗಂಡ ಈಗ ನಿದ್ದೆಯನ್ನೆಲ್ಲಾ ಬಿಟ್ಟು ಮೇಕೆಯ ಮುಂದೆ ಕುಳಿತಿರುತ್ತಾನೆ. ಅರ್ಧರಾತ್ರಿಯಲ್ಲೋ ತನಗೆ ಇಷ್ಟವಾದಾಗಲೋ ಬೇಕೆನಿಸಿದಾಗಲೋ ಒಂದು ಭಾರವಾಗಿ ತನ್ನ ಮೇಲೆ ಬಿದ್ದು ಹೊರಳಾಡುವ ಯಾಖುಬ್ ಮಿಯಾ, ಒಂದು ವೇಳೆ ನಿದ್ರೆ ಬಾರದಿದ್ದರೆ ರಾತ್ರಿಯೆಲ್ಲಾ ಮೇಕೆಯ ಮುಂದೆ ಕುಳಿತುಕೊಂಡು ಅದಕ್ಕೆ ಒಂದು ಕಥೆ ಹೇಳುವ ಹಾಗೆ ಏನೇನೋ ಸಂಗತಿಗಳನ್ನು ಹೇಳುತ್ತಿರುತ್ತಾನೆ.

ಮೇಕೆಗಳ ಮೇಲೆ, ಜಂತುಗಳ ಮೇಲೆ, ಮನುಷ್ಯರ ಮೇಲೆ ಮೊದಲಿನಿಂದಲೂ ಯಾವುದರ ಮೇಲೂ ಪ್ರೀತಿಯಿಲ್ಲ ಯಾಖುಬ್ ಮಿಯಾನಿಗೆ. ಗಂಡಸೆಂಬ ಒಂದೇ ಒಂದು ಅಹಂ. ಯಾವುದೇ ಬದಲಾವಣೆಯಿಲ್ಲದ ತನ್ನ ವೃತ್ತಿಯ ಹಾಗೆ ಮನೆ ಸಹ ನಡೆಯುತ್ತದೆ ಎಂದುಕೊಳ್ಳುತ್ತಾನೆ ಅವನು. ಮಕ್ಕಳನ್ನು ಹತ್ತಿರಕ್ಕೆ ಕರೆದುಕೊಂಡು ನಾಲ್ಕು ಮಾತುಗಳನ್ನಾಡುವುದು, ಅವರೊಂದಿಗೆ ಆಟವಾಡುವುದು, ವಾರದಲ್ಲಿ ಯಾವುದೋ ಒಂದು ದಿನ ಅವರನ್ನು ಹಾಗೆ ಆಚೆ ಸುತ್ತಾಡಿಸುವುದು, ಮನೆಗೆ ಬರುವಾಗ ಜಹೀರಾಬಿಗೆ ಮಲ್ಲಿಗೆಯ ಹೂವು ತೆಗೆದುಕೊಂಡು ಬರುವುದು ಬಹುಶಃ ಇದ್ಯಾವುದೂ ಗೊತ್ತಿಲ್ಲ ಯಾಖುಬ್ ಮಿಯಾನಿಗೆ. ಮಕ್ಕಳನ್ನು ಹುಟ್ಟಿಸುವುದಷ್ಟೇ ಅವನಿಗೆ ಗೊತ್ತು ಹೊರತು ಅವರನ್ನು ಮುದ್ದುಮಾಡಿ ಸಾಕುವುದು ಯಾಖುಬ್ ಮಿಯಾನಿಗೆ ಗೊತ್ತಿಲ್ಲ. ಮನೆಯಲ್ಲಿ ಯಾಖುಬ್ ಮಿಯಾ ಇರುವಷ್ಟು ಹೊತ್ತು ಅವನ ರಾಜ್ಯ. ಅವನು ಹೊರಗೆ ಹೊರಟ ನಂತರ ಮಕ್ಕಳ ರಾಜ್ಯ.

******

ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದರಿಂದ ಮೇಕೆಗೆ ನನ್ನ ಗಂಡನೆಂದರೆನೇ ಇಷ್ಟ. ಅದರ ಮುಂದೆ ತರಕಾರಿಗಳು, ಎಲೆ, ನೀರು ಇಡಬೇಕು. ಅದನ್ನು ಬದಲಿಸಿ ಬದಲಿಸಿ ಎರಡು ಮೂರು ಕಡೆ ಕಟ್ಟಬೇಕು. ಯಾರೂ ಕಾಣಿಸದಿದ್ದರೆ ಮೇ… ಮೇ… ಎಂದು ಅರಚುತ್ತದೆ. ಮೊದಲಲ್ಲಿ ನಾವು ಮೇಕೆಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು, ಅದಕ್ಕೆ ನೀರಾದರೂ ಇಡಲಿಲ್ಲವೆಂದೂ ಅದಕ್ಕೆ ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದೇವೆಂದು ನಮ್ಮನ್ನು ಹೊಡೆಯುತ್ತಿದ್ದ ಯಾಖುಬ್ ಮಿಯಾ. ಅವರಿಗೆ ಯಾವಾಗ ಏಕೆ ಕೋಪ ಬರುತ್ತದೆಂದು ಗೊತ್ತಿಲ್ಲ. ಅವರಿಗೆ ಕೋಪ ಬರಲು ಕಾರಣ ಮೇಕೇಯೇ ಆಗಿರುತ್ತಿತ್ತು. ದಿನದಿನಕ್ಕೂ ಅವರ ಮೇಲೆ ಏರ್ಪಡುವ ದ್ವೇಷ ಮೇಕೆಯ ಮೇಲೂ ಸಹ ಹೆಚ್ಚಾಗುತ್ತಿದೆ.

ಮೇಕೆಯನ್ನು ಬಿಟ್ಟು ಏಳಲಾರದೆ ಎದ್ದು ಅದನ್ನು ಬಿಡಲಾರದೆ ಬಿಟ್ಟು ಹೋಗುತ್ತಿರುತ್ತಾನೆ ಯಾಖುಬ್ ಮಿಯಾ ಆಚೆಗೆ. ಮೇಕೆಗಾಗಿಯೇ ಮನೆಗೆ ಬಂದಂತೆ ಬರುತ್ತಾನೆ. ಮನೆಗೆ ಬಂದ ಕೂಡಲೇ ಅದನ್ನು ಹೆಸರು ಹಿಡಿದು ಕರೆಯುತ್ತಾನೆ. ಇನ್ನು ಅದರೊಂದಿಗೇ ಮಾತು. ಅದು ಬಾಲ ಅಲ್ಲಾಡಿಸುತ್ತದೆ. ಮೂತಿಯಿಂದ ಮೈಯೆಲ್ಲಾ ನೆಕ್ಕುತ್ತದೆ. ಒಂದೊಂದು ತರಕಾರಿಯನ್ನು ತುಂಡು ತುಂಡಾಗಿ ಕತ್ತರಿಸಿ ಅದಕ್ಕೆ ತಿನ್ನಿಸುತ್ತಾನೆ. “ಏನ್ ತಿಂದೆ ಬೆಳಿಗ್ಗೆಯಿಂದ” ಎಂದು ಮನುಷ್ಯರನ್ನು ಕೇಳಿದ ಹಾಗೆ ಕೇಳುತ್ತಾನೆ.

ಮಡಿಕೆಯಲ್ಲಿನ ಕುಡಿಯುವ ನೀರನ್ನು ತಂದು ಅದಕ್ಕೆ ಕುಡಿಸುತ್ತಾನೆ. ಅದು ಯಾಖುಬ್ ಮಿಯಾನ ಸುತ್ತ ವೃತ್ತಾಕಾರವಾಗಿ ಸುತ್ತುತ್ತದೆ. ತಲೆಯಾಡಿಸುತ್ತದೆ. ಸ್ವಲ್ಪಹೊತ್ತು ಕುಳಿತುಕೊಳ್ಳುತ್ತದೆ. ಸ್ವಲ್ಪಹೊತ್ತು ಮಲಗುತ್ತದೆ. ಹೊರಳಾಡುತ್ತದೆ. ಗೊರಸುಗಳನ್ನು ಅವನ ಎದೆಯ ಮೇಲೆ ಇಡುತ್ತದೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮಕ್ಕಳನ್ನು ಬೈಯುವುದು ಹೊಡೆಯುವುದು ಅವನಿಗೊಂದು ಚಟ. ಇದೊಂದು ಸಾಮ್ರಾಜ್ಯವೆಂದೂ ಈ ಸಾಮ್ರಾಜ್ಯಕ್ಕೆ ತಾನೇ ಷಹೀನ್ ಷಾ ಎಂಬಂತ್ತಿರುತ್ತದೆ ಯಾಖುಬ್ ಮಿಯಾನಿಗೆ. ಒಂದು ಮಾತು ಹೇಳಿದ ಮೇಲೂ ಸಹ ತನ್ನ ಕೆಲಸವಾಗಲಿಲ್ಲವೋ ಮನೆಯಲ್ಲೇ ಒಂದು ನರಕವನ್ನ ಸೃಷ್ಟಿಸುತ್ತಾನೆ.

ಅವನು ಡ್ಯೂಟಿಯಿಂದ ಬಂದಾಗ ಟೀ ಮಾಡಿ ಕರೆದರೂ ಹತ್ತಿರಕ್ಕೆ ಬರುತ್ತಿಲ್ಲ. ಕುದಿಕುದಿದ ಬಿಸಿ ನೀರು ತಣ್ಣಗಾಗುತ್ತಿದೆ. ಊಟ ಸಹ ಮೇಕೆಯ ಬಳಿ ತೆಗೆದುಕೊಂಡು ಹೋಗಿ ತಿನ್ನುತ್ತಾನೆ. ಮೊದಲಲ್ಲಿ ಈ ಚೇಷ್ಟೆಗಳನ್ನೆಲ್ಲ ನೋಡಿ ಅವನಿಗೆ ಹುಚ್ಚು ಹಿಡಿದಿದೆಯೇನೋ ಅಂದುಕೊಳ್ಳುತ್ತಿದ್ದೆ. ನಾಳೆಯಿಂದ ಈ ಕುಟುಂಬವನ್ನು ಹೇಗೆ ನಡೆಸಬೇಕೋ. ಈ ಮನುಷ್ಯನಿಗೆ ಮೇಕೆ ರೋಗ ಬಂದಿಲ್ಲವಲ್ಲಾ. ಯಾವ ಮನುಷ್ಯನಾದರೂ ಕನಿಷ್ಟ ಪ್ರೇಯಸಿಯೊಂದಿಗೆಯಾದರೂ ಹೀಗೆ ವರ್ತಿಸುತ್ತಾನಾ ಅಂತ ಅಂದುಕೊಳ್ಳುತ್ತಿದ್ದೆ.

ವಠಾರವೆಲ್ಲಾ ಜಹೀರಾಬಿ ಗಂಡ ಮೇಕೆ ಮನುಷ್ಯನಾಗಿಬಿಟ್ಟಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ದಿನವೂ ಹೀಗೆ ವರ್ತಿಸಿದರೆ ಅವನು ಹುಚ್ಚನಾಗಿಬಿಡುತ್ತಾನೆ ಎನ್ನುತ್ತಿದ್ದರು. ಎಷ್ಟು ಬೈಗುಳ ಬೈಸಿಕೊಂಡೆಯೋ, ಎಷ್ಟು ಏಟುಗಳನ್ನು ತಿಂದೆಯೋ… ಹೋದರೆ ಹೋಗಲಿ ಬಿಡು, ನಿನಗೆ ಕಷ್ಟಗಳು ತಪ್ಪಿದವೆಂದು ನನಗೆ ಹೇಳತೊಡಗಿದರು. ಕೆಲವರು ಬೇಕೆಂದೇ ‘ನಿಮ್ಮ ಮೇಕೆ ಹೇಗಿದೆ?’ ಎಂದು ನನ್ನ ಗಂಡನ ಬಳಿ ಬಂದು ಕೇಳುತ್ತಿದ್ದರು. ಇವರಿಗೇನೋ ಸಂಭ್ರಮ. ಅವರನ್ನು ಕುಳ್ಳರಿಸಿಕೊಂಡು ಅವರಿಗೆ ಟೀ ಕೊಟ್ಟು “ಇದಕ್ಕೆ ನನ್ನ ಭಾಷೆಯೆಲ್ಲಾ ಗೊತ್ತು” ಎನ್ನುತ್ತಿದ್ದ. ಮೇಕೆಯನ್ನು ಮೆಚ್ಚಿಕೊಳ್ಳಲು ಅವರ ಹತ್ತಿರ ಪದಗಳೇ ಇರುತ್ತಿರಲಿಲ್ಲ. “ಮೇಕೆಗಳಲ್ಲಿಯೇ ಒಳ್ಳೆಯ ಮೇಕೆ” ಎಂದು ಹೇಳುತ್ತಿದ್ದ.

“ರಾತ್ರಿಯೆಲ್ಲಾ ಮೇ… ಮೇ… ಎಂದು ಅರಚುತ್ತಿದೆ. ನೀನು ಮಲಗಿದರೆ ಏಳೋದಿಲ್ಲ. ಪಾಪ ಮೇಕೆಗೆ ಏನಾಗಿದಿಯೋ ಏನೋ ಅಂತ ದುಖಃ ಆಯ್ತು. ಅದಕ್ಕೇ ಮೇಕೆಯನ್ನು ನೋಡಿ ಹೋಗೋಣವೆಂದು ಬಂದ್ವಿ” ಎಂದು ಅವರನ್ನು ಅಪಹಾಸ್ಯ ಮಾಡುತ್ತ ಹೇಳುತ್ತಿದ್ದರು. ಇನ್ನೂ ನೆಂಟರಾದರೂ “ಬಕ್ರ ಬನ್ ಗಯಾ ತೇರಾ ಶೋಹರ್” ಎನ್ನುತ್ತಿದ್ದರು.

‘ಇಸ್ಕೋ ಮೌತ್ ನಹಿ ಆತಿ. ಆದ್ದರಿಂದ ಬಕ್ರಿಕೂ ಮಾರ್ ಡಾಲ್ ನಾ’ ಅಂತ ನಾನು ಅಂದುಕೊಳ್ಳುತ್ತಿದೆ. ಹಗ್ಗ ಬಿಚ್ಚಿ ಬಿಟ್ಟರೆ ಎಲ್ಲಾದರೂ ಓಡಿ ಹೋಗುತ್ತದೆ. ‘ಪೀಡೆ ತೊಲುಗುತ್ತೆ’ ಅಂತೆಲ್ಲ ಅಂದುಕೊಳ್ಳುತ್ತಿದೆ. ಮತ್ತೆ ಯಾಖುಬ್ ಮಿಯಾನ ಕೋಪ ನೆನಪಿಗೆ ಬಂದು ನನ್ನ ದ್ವೇಷವನ್ನು ಅಡಗಿಸಿಕೊಳ್ಳುತ್ತಿದ್ದೆ.

ಎಂದಿನಂತೆ ಈಗ ಬಜಾರಿಗೆ ಹೋಗಲಾಗುತ್ತಿಲ್ಲ. ಹಾಲು ಕುಡಿಯುವ ಹಸುಗೂಸನ್ನು ಬಿಟ್ಟು ಮಾರ್ಕೆಟ್ಟಿಗೆ ಹೋಗಿ ಸಾಮಾನು ತೆಗೆದುಕೊಂಡು ಬರುತ್ತಿದ್ದೆ. ಆದರೀಗ ಮನೆಗೆ ಬೀಗ ಹಾಕಿ ಮೇಕೆಯನ್ನು ಒಂಟಿಯಾಗಿ ಬಿಟ್ಟು ಆಚೆಗೆ ಹೋಗಲು ಆಗುತ್ತಿಲ್ಲ. ಅವರು ಡ್ಯೂಟಿಗೆ ಹೋದ ಮೇಲೆ ಮಕ್ಕಳು ಸಹ ಮೇಕೆಯೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಿದ್ದಾರೆ. ಈ ಮೇಕೆ ಎಲ್ಲಿಂದ ಬಂತೋ? ಅವರು ಯಾಕೆ ಹೀಗೆ ಬದಲಾಗಿ ಹೋದರೋ? ಒಂದೂ ಅರ್ಥವಾಗದೆ ಹೋಗುತ್ತಿತ್ತು. “ಕೋಯಿ ಕರ್ತವಾ” ಅನ್ನುತ್ತಿದ್ದಾರೆ. “ತಾಯತ್ತು ಕಟ್ಟಿಸಲಾ… ದುವಾ ಓದಿಸಲಾ” ಅಂತ ಅನ್ನಿಸುತ್ತಿದೆ ಮನಸ್ಸಿಗೆ.

‘ನಲವತ್ತೆಂಟು ಗಂಟೆಗಳ ಬಂದ್’ ಎಂದು ಕೆಲಸಕ್ಕೆ ಹೋಗುವುದು ಇಲ್ಲವೆಂದು ಯಾಖುಬ್ ಮಿಯಾ ಮನೆಯಲ್ಲೇ ಇದ್ದಾನೆ. ವಠಾರದಲ್ಲಿರುವ ನಾಲ್ಕೈದು ಮುಸ್ಲೀಮರು ಆಚೆಯ ಬಜಾರಿನ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಇವರ ಹತ್ತಿರ ಬಂದು ಹರಟೆ ಹೊಡೆಯುತ್ತಿದ್ದಾರೆ. ಎಲ್ಲರಿಗೂ ಟೀ ಕೊಡಲು ಹೇಳಿದ್ದರಿಂದ ನಾನು ಟೀ ಮಾಡುತ್ತಿರುವೆ. “ನೋಡು ಯಾಖುಬ್ ಮಿಯಾ, ಅಚ್ಛಾ ಪಾಲ ಇಸ್ಕು. ಕಾಟ್ಲೆತೋ ಪಂದ್ರಾಕಿಲೋ ಗೋಷ್ ನಿಕಲ್ತಾ” ಅಂದನೊಬ್ಬ ಸಾಬಿ. “ಬಡಕಲಾಗಿತ್ತು ನೀನು ತಂದಾಗ. ಈಗ ನೊಡು ಗಾಯ್ ಕಾ ಜೈಸಾ ಹುವಾ” ಅಂದ ಇನ್ನೊಬ್ಬ ಸಾಬಿ. “ಈ ಬಂದ್ ಈಗ್ಲೇ ಬಂದಿದೆ. ಏನಾದ್ರು ಮಾಡೋಣ ಅಂದ್ರೆ ಕೆಲ್ಸನೇ ಇಲ್ಲ. ಗುಡ್ಡೆ ಹಾಕಿಕೊಂಡು ಒಳ್ಳೆಯ ದಾವತ್ ಮಾಡಿಕೊಳ್ಳೋಣ” ಅಂದ ಮತ್ತೊಬ್ಬ ಸಾಬಿ. “ಎಷ್ಟು ದಿನ ಸಾಕಿದ್ರು ಕೊಯ್ಯೋದೇ ಅಲ್ವೇ! ಈಗ ಕೊಯ್ದ್ರೆ ಏನು. ಈಗಾಗಲೇ ಬಲಿತಿದೆ” ಅಂದ ಮತ್ತೊಬ್ಬ ಸಾಬಿ. ಟೀ ತಂದು ಎಲ್ಲರಿಗೂ ಕೊಡುತ್ತ ಇವತ್ತು ದೊಡ್ಡ ಗಲಾಟೆಯೇ ಆಗುವಂತಿದೆ ಇಲ್ಲಿ ಅಂದುಕೊಂಡೆ ಮನಸ್ಸಿನಲ್ಲಿ. ‘ಬಂದವರು ನನ್ನನ್ನು ಏನಾದರೂ ಅಂದ್ರೆ ಸುಮ್ಮನ್ನಿರುತ್ತಾನೇನೋ ನನ್ನ ಗಂಡ, ಆದ್ರೆ ಮೇಕೆಗೇನಾದ್ರು ಅಂದ್ರೆ ಸುಮ್ಮನಿರೋದಿಲ್ಲ’ ಅನ್ನಿಸಿತು.

“ನೋಡು ಯಾಖುಬ್ ಮಿಯಾ! ನಮಗೆ ಇಲ್ಲದಿಲ್ಲದೆ ಬಂದಿದೆ ಇಂಥ ಸಮಯ. ನಲವತ್ತೆಂಟು ಗಂಟೆ. ನಾವು ಮನೆಯಲ್ಲಿ ಇರುವವರೇನಾ? ಆಚೆ ಹೋಗುವಂತಿಲ್ಲ ಪರಿಸ್ಥಿತಿ. ನಮ್ಮ ಸಿಲಾರ್ ಮಿಯಾ ಮನೆಗೆ ಹೊಸದಾಗಿ ಮದುವೆಯಾದ ಅಳಿಯ ಮಗಳು ಬಂದಿದ್ದಾರೆ. ರೋಗವೋ ಗಾಯವೋ ಇಲ್ಲದ ಒಳ್ಳೆಯ ಬಕ್ರಿ ಇದು. ತಲೆ, ಕಾಲು ನೀನೇ ಇಟ್ಟಿಕೋ. ಎಲ್ಲರೂ ಸಮಾನವಾಗಿ ಗುಡ್ಡೆ ಹಾಕ್ಕೊಳೋಣ ನಡಿ!” ಅಂದ ರಹೀಂ ಖಾನ್.

(ಅನ್ವರ್)

“ಗುಡ್ಡೆ ಹಾಕಿಕೊಳ್ಳುವುದೆಂದರೆ ದೊಡ್ಡ ಕೆಲಸ. ಕಸಾಬು ಬರಬೇಕು. ಕೊಯ್ಯಬೇಕು. ಎಲ್ಲರೂ ಹಂಚಿಕೊಳ್ಳಬೇಕು. ಇದೆಲ್ಲಾ ಇವತ್ತಾಗತ್ತಾ? ಮತ್ತೆ ಕಸಾಬು ಇದ್ದನೋ ಇಲ್ಲವೋ” ಅಂದ ಯಾಖುಬ್ ಮಿಯಾ. “ಕಸಾಬು ಇಲ್ಲದಿದ್ದರೇ ಹೋಗ್ಲಿ, ಕಸಾಬು ಕೆಲ್ಸ ನನಗೆ ಬರೋದಿಲ್ಲವೇನು? ಎಲ್ಲರ ಶಾದಿ ಬಾರಾತ್ ನಲ್ಲಿ ನಾನು ಮಾಡ್ತಾಯಿಲ್ವೇನು? ನೀನು ಅದರ ಬಗ್ಗೆ ಫಿಕರ್ ಮಾಡಬೇಡ. ನಾನು ಈಗ್ಲೇ ಹೋಗಿ ಚೂರಿ ಕುಂದ ತಗೊಂಡು ಬರ್ತೀನಿ” ಅನ್ನುತ್ತ ಅಲ್ಲಿಂದ ಎದ್ದು ಮಹಮ್ಮದ್ ಮಿಯಾ ಅವರ ಮನೆಗೆ ಹೋದ.

ನನ್ನ ಗಂಡ ನೆತ್ತಿಗೆ ಟೋಪಿ ಹಾಕಿಕೊಂಡ. ಬಕ್ರಿಗೆ ಮೂರು ಬಾರಿ ‘ಬಿಸ್ಮಿಲ್ಲಾ’ ಎಂದು ನೀರು ಕುಡಿಸಿದ. ಬಕ್ರಿಯನ್ನು ಮಲಗಿಸಿ ಒಂದು ಕೈಯಲ್ಲಿ ಅದರ ನಾಲ್ಕು ಕಾಲುಗಳನ್ನು ಇನ್ನೊಂದು ಕೈಯಿಂದ ಅದರ ಕೊರಳಿನ ಹತ್ತಿರ ಹಿಡಿದುಕೊಂಡ. ಮಹಮ್ಮದ್ ಮಿಯಾ ‘ಬಿಸ್ಮಿಲ್ಲಾ’ ಎಂದು ಹಲಾಲ್ ನಾಮ ಓದಿ ಬಕ್ರಿ ಕೊರಳು ಹಲಾಲ್ ಮಾಡಿ ದೂರ ಸರಿದು ಕತ್ತಿಯನ್ನು ತೊಳೆಯುತ್ತಿದ್ದಾನೆ.

ಮಕ್ಕಳೆಲ್ಲಾ ಅಳುತ್ತ ಕುಳಿತುಕೊಂಡರು. “ಅಮ್ಮೀ! ಬಕ್ರಿಕು ಮಾರ್ ಡಾಲೆ. ಬಕ್ರಿಕೋ ಮಾರ್ ಡಾಲೆ” ಅನ್ನುತ್ತಿದ್ದಾನೆ ಚಿಕ್ಕ ಮಗ.

ನಾನಿದೆಲ್ಲಾ ನನ್ನ ಕನಸಿನಲ್ಲಿ ನಡೆಯುತ್ತಿದೆ ಅಂದುಕೊಳ್ಳುತ್ತಿದ್ದೆನೇ ಹೊರತು ಯಾಖುಬ್ ಮಿಯಾನೇ ಹೀಗೆ ಮಾಡಿದ್ದಾನೆಂದುಕೊಳ್ಳಲಾರೆ. ಬಕ್ರಿಯನ್ನು ಮರಕ್ಕೆ ನೇತು ಹಾಕಿ ಅದರ ತೋಳು ಸಿಗಿಯುತ್ತಿದ್ದಾರೆ. “ಸರಿಯಾಗಿ ಸಿಗಿ ಮಹಮ್ಮದ್ ಮಿಯಾ. ಇಲ್ಲದಿದ್ದರೆ ಹಣ ಬರೋಲ್ಲ” ಅನ್ನುತ್ತಿದ್ದಾನೆ ಯಾಖುಬ್ ಮಿಯಾ.

‘ಬಕ್ರಿಗೆ ಬಂದಿರುವ ಮೌತ್ ಇವರಿಗೆ ಬಾರದೇ ಹೋಯಿತೆ’ ಅನ್ನುತ್ತಿದೆ ನನ್ನ ಮನಸ್ಸು. ಇಷ್ಟು ದಿನ ಅದನ್ನು ಸಾಕಿ, ಅದಕ್ಕಾಗಿ ನಮ್ಮನ್ನು ಹೊಡೆದು, ಅದರೊಂದಿಗೆ ಹರಟಿದ್ದು ಏಕೋ ನನಗೆ ಅರ್ಥವೇ ಆಗಲಿಲ್ಲ. ಮಕ್ಕಳನ್ನು ಹೊಡೆದಷ್ಟು ಸಲೀಸಾಗಿ, ನನ್ನನ್ನು ಒದ್ದಷ್ಟು ಸಹಜವಾಗಿ ಬಕ್ರಿಯನ್ನು ಸಾಯಿಸಿಬಿಟ್ಟ ಯಾಖುಬ್ ಮಿಯಾ.

ಮನೆಯೆಲ್ಲಾ ಮೇಕೆಯ ವಾಸನೆ ಬರುತ್ತಿದೆ. ನಿದ್ರೆ ಬರುತ್ತಿಲ್ಲ. ಇವತ್ತು ಎರಡು ಬಾರಿ ಬಿರ್ಯಾನಿ ತಿಂದ ಯಾಖುಬ್ ಮಿಯಾನಿಗೆ ನನ್ನ ಅವಶ್ಯಕತೆ ನೆನಪಾಯಿತು. ನಿದ್ದೆ ಮಾಡಿದಂತಿದ್ದ ನನ್ನ ಮೇಲೆ ರಸ್ತೆ ಮೇಲಿನ ಲಾರಿಯ ಭಾರದ ಹಾಗೆ ಭಾರ ಹಾಕಿದ ಯಾಖುಬ್ ಮಿಯಾ. ನನ್ನ ಕಷ್ಟಗಳು ಮತ್ತೇ ಮೊದಲಿಗೆ ಬಂದವು. ಮತ್ತೆ ಯಾವಾಗ ಗರ್ಭಧರಿಸುತ್ತೇನೋ ಗೊತ್ತಿಲ್ಲ.