ಬಂದಿದ್ದವರು ಅನುಕೂಲದ ಕುಟುಂಬದವರು. ಮನೆಯ ಗೌರವ ಉಳಿಸುವ ಸಂಕಷ್ಟ ಅಮ್ಮನಿಗೆ. ಇಂತಹ ಸಂದರ್ಭದಲ್ಲಿ ಅಮ್ಮ ಅದ್ಹೇಗೆ ನಿಭಾಯಿಸುತ್ತಿದ್ದಳು ಎಂಬುದು ನನಗೆ ಯಾವಾಗಲೂ ಬೆರಗು. ಇಂದಿಗೂ ಅಮ್ಮ ಅಂದ್ರ ಅದೊಂದು ತಣಿಯಲಾರದ ಆಶ್ಚರ್ಯ. ಅವರು ಆ ದಿನ ಮನೆಯಲ್ಲಿಯೆ ಉಳಿದರು. ಬೆಳಗ್ಗೆ ಅವರಿಗೆ ಅಮ್ಮ ಒಗ್ಗರಣೆಯ ಅನ್ನವನ್ನು ಮಾಡಿದ್ದಳು. ಅವರು ತುಂಬಾ ಚೆನ್ನಾಗಿದೆ ಎಂದು ಉಪಾಹಾರ ಸೇವಿಸಿ ಊರಿಗೆ ಹೊರಟುಹೋದರು. ಅಮ್ಮನನ್ನು ಮರುದಿನ ಕೇಳಿದರೆ ಸಂಕಷ್ಟಕ್ಕೆ ಅಂತ ಅಕ್ಕಿಯನ್ನು ಒಂದಿಷ್ಟು ಎತ್ತಿಟ್ಟಿದ್ದೆ. ಅದು ಇವತ್ತು ನಮ್ಮ ಗೌರವವನ್ನು ಉಳಿಸಿತು ಮಗ” ಎಂದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತೈದನೆಯ ಕಂತು

ಎಳವೆಯಲ್ಲಿಯೆ ನಮ್ಮಪ್ಪ ಅಜ್ಜನನ್ನು ಕಳೆದುಕೊಂಡಿದ್ದ. ಹಾಗಾಗಿ ಬಡತನದಲ್ಲಿಯೆ ಬೆಳೆದವನಿಗೆ ಅಗಾಧವಾದ ಆತ್ಮವಿಶ್ವಾಸ ಮತ್ತು ಧೈರ್ಯ. ಆದ್ದರಿಂದ ಬದುಕನ್ನು ಎದುರಿಸುತ್ತಲೆ ಬೆಳೆದವನು ನಮ್ಮಪ್ಪ. ನಿಧಾನಕ್ಕೆ ಕೂಲಿಯಿಂದ ಒಂದಿಷ್ಟು ಉಣ್ಣುವ ಸ್ಥಿತಿಗೆ ಬಂದಿದ್ದರಲ್ಲಿ ಅಮ್ಮನ ಪಾತ್ರವು ಬಹಳಷ್ಟಿತ್ತು. ಆಗಿನ ಕಾಲದಲ್ಲಿ ಅಪ್ಪ ಹತ್ತನೆ ತರಗತಿ ಪಾಸಾಗಿದ್ದ. ಬಯಸ್ಸಿದ್ದರೆ ಒಂದು ಸರ್ಕಾರಿ ನೌಕರಿ ಸಿಗುತ್ತಿತ್ತು. ಆತನ ಓರಗೆಯವರು ಬಹುತೇಕ ಉದ್ಯೋಗದಲ್ಲಿದ್ದಾರೆ. ನಮ್ಮಪ್ಪನಿಗೆ ಸಿಗಬೇಕಾದ ಒಂದು ಕೆಲಸವನ್ನು ತಿರಸ್ಕರಿಸಿ ಬಂದಿದ್ದ. ಒಳ್ಳೆಯ ಬುದ್ದಿವಂತನಾದ್ದರಿಂದ ವ್ಯಾವಹಾರಿಕ ಜ್ಞಾನ ಬಹಳಷ್ಟಿತ್ತು. ಆದರೂ ಅನ್ನಕ್ಕಾಗಿ ಸ್ವಾಭಿಮಾನದ ಬದುಕಿಗಾಗಿ ಕೂಲಿ ಮಾಡಿಯೇ ಬದುಕನ್ನು ಸಾಗಿಸಿದ.

ಒಂದಿಷ್ಟು ಅನುಕೂಲದ ದಿನಗಳು ಬದುಕನ್ನು ತುಂಬತೊಡಗಿದವು. ದಿನೆ ದಿನೆ ಅನೇಕ ವ್ಯವಹಾರಗಳಲ್ಲಿ ತೊಡಗಿ ಕೊಂಡಿದ್ದ ಅಪ್ಪ ಒಂದು ಕಿರಾಣಿ ಅಂಗಡಿಯನ್ನು ತೆರೆದ. ಆಗ ಊರಿನಲ್ಲಿ ಯಾವ ಅಂಗಡಿಯೂ ಇಲ್ಲವಾದ್ದರಿಂದ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಬದುಕು ಒಂದಿಷ್ಟು ಲಕಲಕಿಸತೊಡಗಿತು. ಹಾಗಂತ ಆತನೇನೂ ಬೀಗಲಿಲ್ಲ. ಊರಲ್ಲಿ ಯಾವುದು ಹೋಟೆಲ್ ಇರಲಿಲ್ಲವಾದ್ದರಿಂದ ಕಿರಾಣಿ ಅಂಗಡಿಯ ಜೊತೆಗೆ ಒಂದಿಷ್ಟು ಬೆಳಗಿನ ಉಪಾಹಾರ ಪ್ರಾರಂಭಿಸಬಹುದಲ್ಲ. ಇದರಿಂದ ನಮಗೂ ಅನುಕೂಲವಾಗುತ್ತದೆ ಎಂದು ಸಣ್ಣ ಹೋಟೆಲ್ ಪ್ರಾರಂಭವಾಯಿತು. ಅದಕ್ಕಾಗಿ ಅಮ್ಮ ಬೆಳಗ್ಗೆ ನಾಲ್ಕಕ್ಕೆ ಎದ್ದು ತಯಾರಿ ಮಾಡಿಕೊಳ್ಳಬೇಕಾಯಿತು. ನಾನು ಸಹಾಯ ಮಾಡುತ್ತಿದ್ದೆ. ಹಿಟ್ಟು ರುಬ್ಬುವಾಗ ಅಮ್ಮನಿಗೆ ಅನುಕೂಲವಾಗಲೆಂದು ದೊಡ್ಡ ಕಲ್ಲಿನಿಂದ ಚಟ್ನಿ ರುಬ್ಬುವಾಗ ಸಹಾಯ ಮಾಡುತ್ತಿದ್ದೆ. ಅಂತೂ ಅಮ್ಮ ಗಾಣದೆತ್ತಿನಂತೆ ದುಡಿಯುತ್ತಿದ್ದಳು. ಇನ್ನೇನು ಎಲ್ಲಾ ಅನುಕೂಲವಾಯಿತು ಅನ್ನುವಷ್ಟರಲ್ಲಿ ಕಿರಾಣಿ ಅಂಗಡಿಯ ವ್ಯಾಪಾರ ಕಡಿಮೆಯಾಗುತ್ತ ಬಂದಿತು. ಅಪ್ಪ ಸಿಡಿಮಿಡಿಯಾಗತೊಡಗಿದ್ದ. ಸಣ್ಣ ಪುಟ್ಟ ವಿಷಯಕ್ಕೂ ವಿಪರೀತ ಕೋಪಗೊಳ್ಳುತ್ತಿದ್ದ. ಅದನ್ನು ನನ್ನ ಮೇಲೆ ಹೆಚ್ಚು ತೀರಿಸಿಕೊಂಡ ಎಂದೆ ಕಾಣುತ್ತದೆ. ಅದು ಅಸಹಾಯಕತೆಯ ರೂಪವಿರಬಹುದು.

ನಾವು ಅಮಗಡಿ ಹಾಕಿದ ಅದೇ ಹೊತ್ತಿನಲ್ಲಿ ಊರಿನಲ್ಲಿ ಇನ್ನೊಂದೆರಡು ಅಂಗಡಿಗಳು ಪ್ರಾರಂಭವಾದವು. ಹಾಗಾಗಿ ನಮ್ಮ ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತ ಬಂದಿತು. ಮನೆಯಲ್ಲಿ ಕಷ್ಟಗಳು ಜಾಸ್ತಿಯಾದವು. ಅಂಗಡಿಯಲ್ಲಿ ಜಾಸ್ತಿ ಸಾಲಬಿದ್ದು ಯಾರೂ ವಾಪಸ್ ಹಣ ಕೊಡದ ಸ್ಥಿತಿಗೆ ಬಂತು. ಹಾಗಾಗಿ ದಿನೆ ದಿನೆ ಅಪ್ಪ ಖಿನ್ನನಾದ. ಅವರಿವರ ಸಹವಾಸಕ್ಕೆ ಬಿದ್ದು ಒಂದಿಷ್ಟು ಕುಡಿತದ ಚಟ ಅಂಟಿಸಿಕೊಂಡು ಬಿಟ್ಟ. ಅದು ಮನೆಯನ್ನು ಇನ್ನಷ್ಟು ನರಕ ಮಾಡಿತು ಎಂದೆ ಹೇಳಬೇಕು.

ಆಗಾಗ ನಾನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದೆ. ಒಂದಿಷ್ಟು ವ್ಯವಹಾರ ಜ್ಞಾನ ಬರಲಿ ಅನ್ನೊ ಕಾರಣಕ್ಕೆ ನನ್ನನ್ನು ಅಂಗಡಿಯಲ್ಲಿ ಕೂರಿಸುತ್ತಿದ್ದ ಅಪ್ಪ. ನಾನು ಲೆಕ್ಕ ಮಾಡುವುದರಲ್ಲಿ ಬಹಳ ಮುಂದು. ಹಾಗಾಗಿ ದುಡ್ಡಿನ ಲೆಕ್ಕದಲ್ಲಿ ಎಂದೂ ತಪ್ಪುತ್ತಿರಲಿಲ್ಲ. ನನ್ನ ತಮ್ಮನಿಗೆ ಹುಷಾರಿಲ್ಲದ ಕಾರಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಲುವಾಗಿ ನನಗೆ ಅಂಗಡಿ ಜವಾಬ್ದಾರಿ ವಹಿಸಿದ್ದರು. ನಾನು ಬೆಳಿಗ್ಗೆಯಿಂದ ವ್ಯಾಪಾರವನ್ನೇನೊ ಮಾಡಿದೆ. ಸಾಯಂಕಾಲ ಅದರ ಒಟ್ಟು ಮೊತ್ತ ಎಂಟುನೂರು ರೂಪಾಯಿಯಾಗಿತ್ತು ಅದನ್ನೆಲ್ಲ ಎಣಿಸಿ ಒಟ್ಟು ಮಾಡಿ ಒಂದುಕಡೆ ಇಟ್ಟಿದ್ದೆ. ಸಾಯಂಕಾಲ ಅಪ್ಪ ಬಂದ ಎಲ್ಲವನ್ನು ಎಣಿಸಿ ಆಯ್ತು. ಇನ್ನರ್ಧ ಗಂಟೆ ವ್ಯಾಪಾರ ಮಾಡಿ ಆಮೇಲೆ ಬಾಗಿಲನ್ನು ಹಾಕು ಎಂದು ಹೇಳಿ ಹಣವನ್ನು ಇಲ್ಲಿಯೆ ಇಟ್ಟಿರುತ್ತೇನೆ. ಮನೆಗೆ ಬರುವಾಗ ಅದನ್ನು ತಗೊಂಡು ಬಾ ಎಂದು ಹೇಳಿ ಹೋದರು. ನಾನು ಅದನ್ನು ಜೋಪಾನ ಮಾಡಿದೆ.

ಇನ್ನೇನು ಅಂಗಡಿಗೆ ಬಾಗಿಲಾಕಬೇಕು ಅನ್ನುವಾಗ ದಿನಸಿ ತೆಗೆದುಕೊಳ್ಳಲೊಬ್ಬ ಬಂದ. ನಾನಾಗ, ಇಲ್ಲ ನಾನು ಬಾಗಿಲಾಕಬೇಕು ಎಂದು ಹೇಳಿದರೂ ಆತ ಕೇಳಲಿಲ್ಲ. ಸರಿ ಕೊಟ್ಟು ಬಾಗಿಲಾಕಿದರೆ ಆಯಿತು ಎಂದು ನಾನು ಹಣವನ್ನು ಎಲ್ಲಿಟ್ಟೆ ಎಂಬುದನ್ನು ಗಡಿಬಿಡಿಯಲ್ಲಿ ಮರೆತುಬಿಟ್ಟು, ಆತನಿಗೆ ದಿನಸಿಕೊಟ್ಟು ಬಾಗಿಲು ಹಾಕಿ ಜೋಬು ನೋಡಿಕೊಳ್ಳುತ್ತೇನೆ. ಹಣವಿಲ್ಲ ಅಯ್ಯೋ.. ಎಲ್ಲಿಟ್ಟೆ ಎಂದು ಗಾಬರಿಯಾದೆ ಮತ್ತೆ ಬಾಗಿಲು ತೆರೆದೆ ಈ ಹಿಂದೆ ಹಣವಿಟ್ಟ ಜಾಗವನ್ನೆಲ್ಲ ತಡಕಾಡಿದೆ. ಆದರೆ ಎಲ್ಲಿಯೂ ಹಣದ ಸುಳಿವಿರಲಿಲ್ಲ. ಭಯ ಇನ್ನಷ್ಟು ಹೆಚ್ಚಾಯಿತು. ಮನೆಯಲ್ಲಿ ಕೇಳಿದರೆ ಏನು ಹೇಳುವುದು ಅನ್ನುವಷ್ಟರಲ್ಲಿ ಅಪ್ಪ ಬಂದಿದ್ದ. ಬಾಗಿಲು ಹಾಕು ಎಂದು ಹೇಳಿದ. ನನ್ನ ಮುಖದ ಗಾಬರಿ ಆತನಿಗೆ ಅರ್ಥವಾಯಿತು ಅನಿಸುತ್ತದೆ. ಏನಾಯಿತು ಅನ್ನುವುದನ್ನು ಹೇಳಿದರೆ ನನಗೆ ಏಟು ಗ್ಯಾರಂಟಿ, ಹಾಗಂತ ಹೇಳದೆ ಇರುವುದಕ್ಕು ಸಾಧ್ಯವಿಲ್ಲ. ಏನು ಮಾಡುವುದು. ಅಪ್ಪ ಮೊದಲೇ ಬಲು ಕೋಪಿಷ್ಟ… ಈಗಾಗಲೆ ಆತನಿಂದ ಹಲವಾರು ಬಾರಿ ನನಗೆ ಶಿಕ್ಷೆಯಾಗಿದೆ. ಹಾಗಾಗಿ ಆ ಹೊತ್ತಿಗೆ ಏಟು ತಿಂದ ಎಲ್ಲ ಸಂದರ್ಭಗಳೂ ಒಟ್ಟಿಗೇ ನೆನಪಾಗಿ ನನ್ನ ಮನಸ್ಸನ್ನು ಗಾಬರಿಗೊಳಿಸಿದವು. ವಿಧಿಯಿಲ್ಲದೆ ಹೇಳಲೆ ಬೇಕಾಯಿತು. ಇಷ್ಟೆಲ್ಲ ಆಗುವಷ್ಟರಲ್ಲಿ ದಿನಸಿಗೆ ಬಂದಿದ್ದವನು ಯಾವಾಗಲೊ ಅಲ್ಲಿಂದ ಹೊರಟು ಹೋಗಿದ್ದ. ನಾನು ಇಲ್ಲಿಯವರೆಗೂ ನಡೆದದ್ದನ್ನು ಹೇಳಿದೆ. ಅಪ್ಪ ಸಮಾಧಾನವಾಗಿ ನಾನು ಹೇಳಿದ್ದನ್ನೆಲ್ಲ ನಿಂತು ಕೇಳಿದ… ನನ್ನ ಅಚ್ಚರಿಗೆ ಆತ ಅಂದು ಕೋಪಗೊಳ್ಳಲಿಲ್ಲ. ಈ ಹಣವನ್ನು ಆತನೆ ತೆಗೆದುಕೊಂಡು ಹೋಗಿದ್ದಾನೆ ಎಂಬುದು ಖಾತ್ರಿಯಾಗಿತ್ತು. ನಾನು ಅವಸರದಲ್ಲಿ ಒಂದು ತಪ್ಪನ್ನು ಮಾಡಿದ್ದೆ. ಆತ ಬಂದಾಗ ಬಾಗಿಲನ್ನು ಹಾಕುತ್ತಿದ್ದವನು ಮತ್ತೆ ವಾಪಸ್ ತೆಗೆಯಬೇಕಾದರೆ ಬೀಗದ ಕೈಯನ್ನು ಜೋಬಿನಿಂದ ತೆಗೆಯುವಾಗ ಅದರ ಜೊತೆಯಲ್ಲಿ ಆ ಹಣವು ಕೆಳಗೆ ಬಿದ್ದಿತ್ತು. ಆತನಿಗೆ ದಿನಸಿ ಕೊಡುವ ಧಾವಂತದಲ್ಲಿ ಗಮನಿಸಿರಲಿಲ್ಲ. ಆತ ಸುಲಭವಾಗಿ ಅದನ್ನು ಎತ್ತಿಟ್ಟುಕೊಂಡಿದ್ದನ್ನು ಗಮನಿಸದೇ, ನಾನು ಯಾಮಾರಿದ್ದೆ.

ಆತ ಮತ್ತೆಂದೂ ನನಗೆ ಕಾಣಿಸಲಿಲ್ಲ. ಅಪ್ಪ ಎಚ್ಚರಿಕೆಯ ಪಾಠವನ್ನು ಮಾಡಿ ಸುಮ್ಮನಾಗಿಬಿಟ್ಟ. ನಾನು ಬದುಕಿದೆಯ ಬಡಜೀವವೇ… ಏಟಿನಿಂದ ತಪ್ಪಿಸಿಕೊಂಡೆಯಲ್ಲ ಎಂದು ಸುಮ್ಮನಾಗಿಬಿಟ್ಟೆ. ಅಪ್ಪ ಯಾಕೆ ಅವತ್ತು ಕೋಪ ಗೊಳ್ಳಲಿಲ್ಲವೋ ನನಗಂತೂ ತಿಳಿಯದು. ಬಹುಶಃ ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಅದರ ಒತ್ತಡದಲ್ಲಿ ಸುಮ್ಮನಾಗಿದ್ದಿರಬೇಕು. ನಂತರದ ದಿನಗಳಲ್ಲಿ ಹಣದ ಬಗ್ಗೆ ಎಚ್ಚರ ವಹಿಸುವುದನ್ನು ಕಲಿತುಕೊಂಡೆ. ಆದರೆ ಇವತ್ತಿಗೂ ಬೇರೆಯವರಿಂದ ಬಹಳ ಮೋಸ ಹೋಗಿದ್ದೇನೆ. ಸಾಕಷ್ಟು ದಂಡ ಕಟ್ಟಿದ್ದೇನೆ. ಅದಕ್ಕೆ ಕಾರಣ ಬೇರೆಯವರ ಕಷ್ಟಕ್ಕೆ ಮರುಗುವ ನನ್ನ ಗುಣ ಇರಬಹುದೇನೊ ಗೊತ್ತಿಲ್ಲ.

ಹೀಗೆ ಸಾಗುತ್ತಿದ್ದ ಕಿರಾಣಿ ಅಂಗಡಿಯ ವ್ಯಾಪಾರ ಕ್ರಮೇಣ ಕಡಿಮೆಯಾಗುತ್ತ ಬಂತು. ನಮ್ಮ ಬದುಕು ಮತ್ತೆ ಯಥಾಸ್ಥಿತಿಗೆ ಬಂತು. ಅಮ್ಮ ಪುನಃ ಬೀಡಿ ಸುತ್ತುವುದಕ್ಕೆ ಪ್ರಾರಂಭಿಸಿದಳು. ಅದರಲ್ಲಿಯೆ ಬದುಕು ನಡೆಯಬೇಕಾಗಿತ್ತು. ಬದುಕಿನ ಏರಿಳಿತಗಳೆ ಹೀಗಿ ಇರುತ್ತವೆ ಅನಿಸುತ್ತದೆ. ಇನ್ನೇನು ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎನ್ನುವಾಗಲೆ ಇನ್ನೊಂದು ಕಷ್ಟ ಬಂದು ಅಮರಿಕೊಂಡಿರುತ್ತದೆ. ಅದನ್ನು ಸರಿಪಡಿಸಿಕೊಳ್ಳುವುದರಲ್ಲಿ ಇನ್ನೊಂದು ಬದುಕು ಇಂತಹ ಘಟನೆಗಳಿಂದಲೆ ಚಲನಶೀಲವಾಗಿರುತ್ತದೆಯೋ ಏನೊ. ಒಟ್ಟಾರೆ ಯಾವುದಾದರೂ ಒಂದು ನಮ್ಮನ್ನು ದುಡಿಯುವಂತೆ ಕಷ್ಟಗಳಿಗೆ ನಮ್ಮನ್ನು ಒಡ್ಡಿಕೊಳ್ಳುತ್ತ ಗಟ್ಟಿಯಾಗಿಸುತ್ತದೆ. ಇದು ಬದುಕಿನ ಪಾಠ. ಇದಕ್ಕೆ ಎಲ್ಲರೂ ಸೇರುತ್ತಾರೆ.

ಹೀಗಿರಬೇಕಾದರೆ ನಮ್ಮ ಮನೆಗೆ ಅಮ್ಮನ ಕಡೆಯ ಸಂಬಂಧಿಕರೊಬ್ಬರು ದಿಡೀರ್ ಮನೆಗೆ ಬಂದರು. ನಮಗೆ ಕಡುಕಷ್ಟ ಅವರತ್ತಿರ ತೋರಿಸಿಕೊಳ್ಳುವಂತಿಲ್ಲ. ಅವರು ಬಂದವರು ಒಂದು ದಿನ ಮನೆಯಲ್ಲಿ ಉಳಿಯುವ ಅನಿವಾರ್ಯತೆ ಬಂತು. ಆ ದಿನ ಹೇಗೊ ನಡೆಯಿತು. ಆದರೆ ಮರುದಿನ ಅವರಿಗೆ ಬೆಳಗಿನ ಉಪಾಹಾರ ಮಾಡಲು ಮನೆಯಲ್ಲಿ ಅಕ್ಕಿ ಇರಲಿಲ್ಲ. ಬಂದಿದ್ದವರು ಅನುಕೂಲದ ಕುಟುಂಬದವರು. ಮನೆಯ ಗೌರವ ಉಳಿಸುವ ಸಂಕಷ್ಟ ಅಮ್ಮನಿಗೆ. ಇಂತಹ ಸಂದರ್ಭದಲ್ಲಿ ಅಮ್ಮ ಅದ್ಹೇಗೆ ನಿಭಾಯಿಸುತ್ತಿದ್ದಳು ಎಂಬುದು ನನಗೆ ಯಾವಾಗಲೂ ಬೆರಗು. ಇಂದಿಗೂ ಅಮ್ಮ ಅಂದ್ರ ಅದೊಂದು ತಣಿಯಲಾರದ ಆಶ್ಚರ್ಯ. ಅವರು ಆ ದಿನ ಮನೆಯಲ್ಲಿಯೆ ಉಳಿದರು. ಬೆಳಗ್ಗೆ ಅವರಿಗೆ ಅಮ್ಮ ಒಗ್ಗರಣೆಯ ಅನ್ನವನ್ನು ಮಾಡಿದ್ದಳು. ಅವರು ತುಂಬಾ ಚೆನ್ನಾಗಿದೆ ಎಂದು ಉಪಾಹಾರ ಸೇವಿಸಿ ಊರಿಗೆ ಹೊರಟುಹೋದರು. ಅಮ್ಮನನ್ನು ಮರುದಿನ ಕೇಳಿದರೆ ಸಂಕಷ್ಟಕ್ಕೆ ಅಂತ ಅಕ್ಕಿಯನ್ನು ಒಂದಿಷ್ಟು ಎತ್ತಿಟ್ಟಿದ್ದೆ. ಅದು ಇವತ್ತು ನಮ್ಮ ಗೌರವವನ್ನು ಉಳಿಸಿತು ಮಗ ಎಂದಳು. “ಭೂಮಿಗೆ ಬರುವಾಗ ಎಲ್ಲರೂ ಬಡವರೆ ಆದರೆ ನಾವು ನಮ್ಮ ಬದುಕಿಗೆ ಒಂದೊಂದೆ ಬಟ್ಟೆಯನ್ನು ತೊಡಿಸುತ್ತ ಚಂದಗೊಳಿಸಿಕೊಳ್ಳಬೇಕು. ಅದು ನಮ್ಮ ಮಾನ ಮುಚ್ಚುವಂತೆ ಜತನವಾಗಿ ಹರಿಯದಂತೆ ಕಾಪಾಡಬೇಕು .ಎಲ್ಲಿಯೂ ನಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡಬಾರದು. ಜಗತ್ತಿನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟವಿರುತ್ತದೆ. ಬದುಕೆಂದರೆ ಹಾಗೇನೆ ಎನ್ನುತ್ತಿದ್ದಳು. ಅಮ್ಮನ ಬದುಕಿನ ಪಾಠ ನಮಗೆ ಯಾವಾಗಲೂ ದಾರಿದೀಪ. ಇವತ್ತಿಗೂ ಕಷ್ಟದ ದಿನಗಳನ್ನು ನೆನೆದೆ ನನ್ನ ಬದುಕು ಸಾಗಿದೆ. ಬಡತನದ ದಿನಗಳೆ ನಮ್ಮಲ್ಲಿ ಬದುಕನ್ನು ಪ್ರೀತಿಸುವಂತೆ ಮಾಡಿದೆ. ಜೀವನ ಪ್ರೀತಿ ಅರಳಿಸಿದೆ.

(ಮುಂದುವರಿಯುವುದು)