(ಫೋಟೋಗಳು: ಕೃಪಾಕರ ಸೇನಾನಿ)

ನಗು ಮುಖ ಮತ್ತು ಗಂಟು ಮುಖ

ಇದನ್ನು ಒಂದು ಕಥೆಯನ್ನಾಗಿ ಬರೆಯಬೇಕು ಅಂದುಕೊಂಡಿದ್ದೆವು. ಯಾಕೋ ಅದು ಆಗಲೇ ಇಲ್ಲ. ಈಗ ಅದನ್ನೇ ಹೇಳುತ್ತಾ ಹೋಗುತ್ತೇವೆ. ನಾವು ಕಾಡುನಾಯಿಗಳ ಕಥೆಯನ್ನು ಸಿನೆಮಾ ಮಾಡುತ್ತಿದ್ದೇವೆ ಅಂತ ಗೊತ್ತಾದಾಗ ಕೆಲವು ಅಂತಾರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಧನ ಸಹಾಯ ಮಾಡಲು ಮುಂದೆ ಬಂದವು. ಅವರ ಉದ್ದೇಶ ನಮ್ಮ ಚಿತ್ರವನ್ನು ನೋಡಿ ಕಾಡಿನ ಸುತ್ತಮುತ್ತಲ ಜನ ಕಾಡುನಾಯಿಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಉಳಿಸಲು ಮನಸ್ಸು ಮಾಡಬಹುದು ಅಂತ. ಆದರೆ ಅದೆಲ್ಲ ಸುಳ್ಳು. ಆಗು ಹೋಗುವ ಮಾತಲ್ಲ ಎಂದು ನಮಗೆ ಗೊತ್ತಿತ್ತು. ಹಾಗಾಗಿ ಅವರ ಧನ ಸಹಾಯ ಬೇಡ ಅಂದುಕೊಂಡೆವು. ಯಾಕೆಂದರೆ ಈ ತರಹ ಉದ್ದೇಶ ಇಟ್ಟುಕೊಂಡು ಸಿನೆಮಾ ಮಾಡಿದ್ರೆ ಜನ ಇಷ್ಟಪಡಲ್ಲ. ಹಾಗಾಗಿ ಜನ ಇಷ್ಟ ಪಡೋ ತರಹ ಕಾಡುನಾಯಿಗಳ ಕಥೆಯನ್ನು ಸ್ವಾರಸ್ಯಕರವಾಗಿ ಹೇಳಬೇಕು. ಅದನ್ನ ಹೇಗೆ ಹೇಳೋದು ಅಂತ ಒದ್ದಾಡ್ತಾ ಇದ್ದೆವು. ಹೊರದೇಶಗಳ ಜನರಿಗೆ ಕಥೆ ಇಷ್ಟ. ಪರಿಹಾರಗಳು ಇಷ್ಟ ಆಗಲ್ಲ. ನಮಗೂ ಅಷ್ಟೆ, ಕಥೆಯ ಮುಖಾಂತರ ಪರಿಹಾರಗಳನ್ನು ಹೇಳುವುದು ಇಷ್ಟ ಇರಲಿಲ್ಲ. ಜನ ಕಾಡು ನಾಯಿಗಳ ಕತೆಯನ್ನು ಸಾಕ್ಷ್ಯ ಚಿತ್ರದ ಮೂಲಕ ನೋಡ್ತಾ , ಅದರಲ್ಲಿ ತಲ್ಲೀನರಾಗ್ತಾ, ಆ ತಲ್ಲೀನತೆಯಲ್ಲೇ ಕಾಡು ನಾಯಿಗಳ ಮೇಲೆ ಅವರಿಗೆ ಪ್ರೀತಿ ಹುಟ್ಟಬೇಕು, ಅವುಗಳ ಕಷ್ಟ ಬೇರೆ ಅಲ್ಲ, ನಾವು ಬೇರೆ ಅಲ್ಲ ಅಂತ ಅನಿಸಬೇಕು ಅಂತ ಸಾಕಷ್ಟು ಒದ್ದಾಡಿ ನಾನು ಕೃಪಾಕರ್ ಸೇರಿ ಕಥೆಯ ಹಂದರವನ್ನು ಸಿದ್ಧ ಮಾಡಿದೆವು.

ಸರಿ, ಈಗ ಆ ಕಥೆಯ ಹಂದರವನ್ನು ಯಾವುದಾದರೂ ದೊಡ್ಡ ವಿದೇಶಿ ಚಾನೆಲ್‌ಗೆ ಮಾರಬೇಕಿತ್ತು. ಮಾರಲೇ ಬೇಕಾಗಿತ್ತು. ಏಕೆಂದರೆ ನಮ್ಮ ಮನಸಿನಲ್ಲಿದ್ದ ಕಾಡುನಾಯಿಗಳ ಕಥೆ ಸಿನೆಮಾ ಆಗಬೇಕಾದ್ರೆ ಸಾಕಷ್ಟು ಹಣ ಬೇಕಾಗಿತ್ತು. ಅಷ್ಟೊಂದು ಹಣವನ್ನು ಹೊಂದಿಸುವುದಕ್ಕೆ ವಿದೇಶಗಳ ದೊಡ್ಡ ಚಾನೆಲ್‌ಗಳಿಗೆ ಮಾತ್ರ ಸಾಧ್ಯ ಇತ್ತು. ನಮಗೋ ಈ ಚಿತ್ರ ಮಾಡಲೇಬೇಕಾಗಿತ್ತು. ಸರಿ, ಸಿನೆಮಾದ ಕಥಾ ಹಂದರದೊಂದಿಗೆ ನಾವು ಆಗಲೇ ಚಿತ್ರೀಕರಿಸಿದ ವೀಡಿಯೋ ತುಣುಕು ಮತ್ತು ಛಾಯಾಚಿತ್ರಗಳೊಂದಿಗೆ ನಾನು ಲಂಡನ್‌ಗೆ ಹೊರಡುವ ವಿಮಾನ ಹತ್ತಿದೆ.

ಅದು ೧೯೯೬ನೇ ಇಸವಿ. ಮುಂಬಯಿಯ ವಿಮಾನ ನಿಲ್ದಾಣ. ನನ್ನ ಮುಖ ಯಾಕೋ ಸರಿ ಇಲ್ಲ ಅನ್ನಿಸುತ್ತಿತ್ತು. ಕೃಪಾಕರ್ ಈ ಕೆಲಸಕ್ಕೆ ಹೊರಟಿದ್ದರೆ ಸರಿ ಇತ್ತು ಅಂತಲೂ ಅನಿಸುತ್ತಿತ್ತು. ಏಕೆಂದರೆ ಆತನದು ಸದಾ ನಗುಮುಖ, ಎಲ್ಲರೂ ಇಷ್ಟ ಪಡುತ್ತಾರೆ. ನನ್ನದು ಒಂಥರಾ ಸದಾ ಟೆನ್ಷನ್‌ನಲ್ಲಿರುವ ಮುಖ. ಯಾರಿಗಾದರೂ ವ್ಯವಹಾರ ಮಾಡಬೇಕು ಅನ್ನಿಸುವ ಮುಖ ಅಲ್ಲ. ಏನು ಮಾಡುವುದು ಹೇಗೆ ಈ ಕಾಡು ನಾಯಿಗಳ ಸಿನೆಮಾವನ್ನು ಲಂಡನ್‌ನ ದೊಡ್ಡ ಚಾನೆಲ್‌ನ ಮಂದಿಗೆ ಮಾರುವುದು ಅಂತ ಯೋಚಿಸುತ್ತಿದ್ದೆ. ನನ್ನ ಮುಖಭಾವ ಮತ್ತು ವರ್ತನೆ ಎಲ್ಲವನ್ನೂ ಒಂಚೂರು ರಿಪೇರಿ ಮಾಡಬೇಕು ಅಂತ ನನಗೂ ಕೆಲವು ದಿನಗಳಿಂದ ಅನ್ನಿಸುತ್ತಿತ್ತು. ಹಾಗಾಗಿ ಮುಖದಲ್ಲಿ ನಗುಬರಿಸಿಕೊಂಡು ಮಾತಲ್ಲಿ ಗೆಳೆತನ ತೋರಿಸಿಕೊಂಡು ಒಂದಿಷ್ಟು ಅಭ್ಯಾಸ ಮಾಡಿಕೊಂಡಿದ್ದೆ. ಆದರೆ ಇಲ್ಲಿ ವಿಮಾನ ನಿಲ್ದಾಣದಲ್ಲಿ ಕೂತರೆ ಅದೇ ಗಂಟುಮುಖ ಅದೇ ಬಿಗುಮಾನ. ಏನು ಮಾಡುವುದು ಅಂತ ಯೋಚಿಸುತ್ತಿದ್ದೆ. ವಿಮಾನ ಹತ್ತುವ ಹೊತ್ತು ಹತ್ತಿರವಾಗುತ್ತಿತ್ತು. ಸರಿ ವಿಮಾನದೊಳಕ್ಕೆ ಹೋದಾಗ ನಗುಮುಖ ಮಾಡಿಕೊಂಡರೆ ಆಯಿತು ಎಂದು ಸುಮ್ಮನೆ ಕುಳಿತಿದ್ದೆ.

ವಿಮಾನದೊಳಕ್ಕೆ ಹತ್ತಿದರೆ ನನ್ನ ಪಕ್ಕದ ಸೀಟ್ ಖಾಲಿ ಇತ್ತು. ಪೆಚ್ಚಾದೆ. ಅಷ್ಟು ಹೊತ್ತಿಗೆ ವಯಸ್ಸಾದ ಅಭೂತಪೂರ್ವ ಸುಂದರಿಯಾದ ಬಿಳಿ ಯೂರೋಪಿಯನ್ ಮಹಿಳೆಯೊಬ್ಬಳು ಸೀಟು ಹುಡಕುತ್ತಾ ನನ್ನ ಪಕ್ಕ ಬಂದಳು. ಸರಿ ಮುಖದ ತುಂಬಾ ನಗುವನ್ನು ತುಂಬಿಕೊಂಡು ಕೊಂಚ ಸರಿದು ಆ ಮಹಿಳೆಗೆ ದಾರಿ ಮಾಡಿಕೊಟ್ಟೆ. ಅಷ್ಟು ವಯಸ್ಸಾಗಿದ್ದರೂ ಆಕೆ ಪರಮಸುಂದರಿಯಂತೆ ಕಾಣಿಸುತ್ತಿದ್ದಳು. ಕೈ ಚೀಲವನ್ನು ಮೇಲುಗಡೆ ಇಟ್ಟು ಆಕೆಯೂ ನನ್ನ ಕಡೆ ತುಂಬಾ ಚೆನ್ನಾಗಿ ನಕ್ಕಳು, ಮಾತನಾಡಿದಳು. ಆಕೆ ಭಾರತವನ್ನೆಲ್ಲಾ ಸುತ್ತಿ ತುಂಬಾ ದಣಿದಿದ್ದಳು. ಆದರೂ ಪ್ರೀತಿಯಿಂದ, ಅರ್ಧಗಂಟೆ ಮಾತನಾಡಿದಳು. ನಾನು ಆಶ್ಚರ್ಯದಿಂದ ನನ್ನ ಮುಖವನ್ನು ಸವರಿ ನೋಡಿಕೊಂಡೆ ನನಗೆ ಖುಷಿಯಾಯಿತು. ಕಾಡು ನಾಯಿಗಳ ಕತೆಯನ್ನು ನಗುಮುಖದಿಂದಲೇ ನಾನು ಇಂಗ್ಲೆಂಡಿನಲ್ಲಿ ಮಾರಬಹುದು ಅಂತ ಅನಿಸಿತು. ಸಾಧಾರಣವಾಗಿ ಭಾರತೀಯ ಗಂಡಸರ ಮುಖವನ್ನು ಇಂಗ್ಲೆಂಡಿನ ಸ್ತ್ರೀಯರು ಇಷ್ಟಪಡುವುದಿಲ್ಲ. ಆದರೂ ಈಕೆ ದಣಿದಿದ್ದರೂ ಕೂಡಾ ಅಷ್ಟು ಹೊತ್ತು ಪ್ರೀತಿಯಿಂದ ಮಾತನಾಡಿದ್ದು ನೋಡಿದರೆ ನನ್ನ ನಗುಮುಖದ ವ್ಯಾಯಾಮ ಸಾಕಷ್ಟು ಪರಿಣಾಮಕಾರಿಯಾಗಿದೆ. ಇನ್ನು ನನಗೆ ಯಶಸ್ಸು ಖಂಡಿತ ಅಂತ ಒಳಗೊಳಗೆ ಖುಷಿ ಪಟ್ಟೆ. ಆಮೇಲೆ ಆಕೆಗೆ ನಿದ್ದೆ ಬಂದ ಹಾಗೆ ತೋರಿತು.

‘ಯಾರಾದರೂ ಗಗನಸಖಿಯರು ಆಹಾರ, ಪಾನೀಯ ತಂದರೆ ನನಗೆ ಬೇಡ ಅಂತ ದಯವಿಟ್ಟು ಹೇಳು. ನಾನು ನಿದ್ದೆ ಹೋಗುತ್ತಿದ್ದೇನೆ’ ಎಂದು ಆಕೆ ನಿದ್ದೆ ಹೋದಳು. ನಾಲ್ಕೈದು ಗಂಟೆ ನಿದ್ದೆ ಮಾಡಿ ಇನ್ನೇನು ಲಂಡನ್ ತಲುಪಲು ಒಂದು ಗಂಟೆ ಇದೆ ಅನ್ನುವಾಗ ಎದ್ದು ಲವಲವಿಕೆಯಿಂದ ಮಾತನಾಡಲು ತೊಡಗಿದಳು. ನಾನು ನಿದ್ದೆ ಮಾಡಿಯೇ ಇರಲಿಲ್ಲ.
‘ಭಾರತಕ್ಕೆ ಯಾಕೆ ಬಂದಿದ್ದಿರಿ?’ ಆಗ ತಾನೇ ನಿದ್ದೆ ಮಾಡಿ ಎದ್ದಿದ್ದವಳನ್ನು ಕೇಳಿದೆ.
‘ಬಾಬಾರ ದರ್ಶನಕ್ಕೆ’ ಅಂದಳು.
‘ಯಾವ ಬಾಬಾ?’
‘ಸಾಯಿ ಬಾಬಾ!’ ‘ಮತ್ತೆ ಇನ್ಯಾವ ಬಾಬ ಇರಲು ಸಾಧ್ಯ?’ ಅನ್ನುವ ಧ್ವನಿಯಲ್ಲಿ. ಆಕೆಯ ಮಕ್ಕಳು ಎಲ್ಲಾ ಬೆಳೆದು ದೊಡ್ಡವರಾಗಿ ಎಲ್ಲೆಲ್ಲೊ ಹರಡಿ ಹೋಗಿದ್ದಾರಂತೆ. ಆಮೇಲೆ ಈಕೆಗೆ ಯಾಕೋ ಏನೋ ಖಿನ್ನತೆ ಶುರುವಾಯಿತಂತೆ. ಅದನ್ನು ಹೋಗಲಾಡಿಸಲು ಸಾಯಿ ಬಾಬಾ ಬಳಿ ಬಂದಿದ್ದಳಂತೆ. ‘ನೀನು ಪ್ರೀತಿಯನ್ನು ನೀಡಲು ಅಭ್ಯಾಸ ಮಾಡು. ನೀನು ಜನರಿಗೆ ಪ್ರೀತಿ ತೋರಿಸಲು ಕಲಿ ಆಗ ನಿನಗೂ ಪ್ರೀತಿ ಸಿಗುತ್ತದೆ’ ಬಾಬಾ ಹಾಗೆ ಹೇಳಿ ಕಳಿಸಿದರಂತೆ. ಆಕೆ ಅದನ್ನು ವಿಮಾನದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಳು. ನಾನು ನಗುಮುಖವನ್ನು ಪ್ರಾಕ್ಟಿಸ್ ಮಾಡುತ್ತಿದ್ದ ಹಾಗೆ.

‘ನಾನು ಮೊದಲು ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಪ್ರೀತಿ ತೋರಿಸುತ್ತಿರಲಿಲ್ಲ. ಆದರೆ ಬಾಬಾ ಹೇಳಿದ ಮಾತು ಎಷ್ಟು ನಿಜ. ಪ್ರೀತಿ ತೋರಿಸಿದರೆ ಎಷ್ಟು ಪ್ರೀತಿ ಸಿಗುತ್ತದೆ ಅನ್ನುವುದಕ್ಕೆ ನೀನೇ ಎಷ್ಟು ಒಳ್ಳೆಯ ಉದಾಹರಣೆ. ಎಷ್ಟು ಚೆನ್ನಾಗಿ ನಗುತ್ತಾ ಮಾತನಾಡುತ್ತಿದ್ದೀಯಾ’ ಅಂತ ನನ್ನನ್ನು ಹಿಗ್ಗಾಮುಗ್ಗ ಹೊಗಳುತ್ತಿದ್ದಳು. ತನ್ನ ಪ್ರೀತಿ ಪ್ರಯೋಗ ಯಶಸ್ವಿಯಾಗಿದೆ ಎಂದು ಬೀಗುತ್ತಿದ್ದಳು. ನನಗೆ ನಗು ಬರುತ್ತಿತ್ತು. ‘ಇದೊಂದು ದಿನ ನೀನು ನಮ್ಮ ಜೊತೆ ಇದ್ದು ಬಿಡು. ನನ್ನ ಗಂಡನೂ ತುಂಬಾ ಒಳ್ಳೆಯವನು. ಆಮೇಲೆ ನಾಳೆ ಎದ್ದು ನೀನು ಹೋಗಬೇಕಾಗಿರುವ ಬ್ರಿಸ್ಟಲ್‌ಗೆ ಹೋಗಬಹುದು. ದಯವಿಟ್ಟು ಇದೊಂದು ರಾತ್ರಿ ನಮ್ಮ ಜೊತೆ ಇದ್ದುಬಿಡು’  ಅಂದಳು.

ವಿಮಾನ ಲಂಡನ್‌ನಲ್ಲಿ ಇಳಿಯಿತು. ವೀಸಾ ವಿಧಿವಿಧಾನಗಳನ್ನು ಪೂರೈಸಲು ಒಂದು ದೊಡ್ಡ ಸರತಿಯ ಸಾಲು ಇತ್ತು. ಹೋಗಿ ನಿಂತುಕೊಂಡೆ. ಆಕೆಗೆ ಸಾಲೇ ಇರಲಿಲ್ಲ. ಏಕೆಂದರೆ ಆಕೆ ಅದೇ ದೇಶದವಳು. ಅವಳ ಗಂಡ ಗಾಜಿನ ಆ ಕಡೆ ಕೈಬೀಸಿ ಕರೆಯುತ್ತಿದ್ದ. ಆಕೆ ಬಾಯ್ ಕೂಡಾ ಹೇಳಲಿಲ್ಲ.. ಗಾಜಿನ ಆ ಕಡೆ ಅವರಿಬ್ಬರು ಕೈ ಕೈ ಹಿಡಿದುಕೊಂಡು ಹೋಗುವುದು ಕಾಣಿಸಿತು. ಮತ್ತೆ ನನ್ನ ಮುಖ ಗಂಟಿಕ್ಕಲು ತೊಡಗಿತು.

ಬ್ರಿಸ್ಟಲ್‌ಗೆ ಹೋದೆ. ನಮ್ಮ ಕಾಡು ನಾಯಿ ಕಥೆಯನ್ನು ಚಾನೆಲ್‌ನ ಮಂದಿ ತುಂಬಾ ಆಸಕ್ತಿಯಿಂದಲೇ ಕೇಳಿದರು. ಕಥೆ ಅವರಿಗೂ ಇಷ್ಟ ಆಗಿತ್ತು. ಆ ಕತೆ ಕೇಳುತ್ತಿದ್ದ ಮಂದಿಯಲ್ಲಿ ಒಬ್ಬ ಭಾರತೀಯನೂ ಇದ್ದ.
‘ಇದು ಯಾವ ಕಾಡಿನ ಕಾಡುನಾಯಿಗಳ ಕತೆ?’ ಅವನು ಕೇಳಿದ.
‘ಬಂಡೀಪುರದ ಹತ್ತಿರ, ಮದುಮಲೈ ಕಾಡಿನದು’ ಅಂದೆ.
‘ಯಾವುದು ವೀರಪ್ಪನ್ ಇರುವ ಕಾಡಾ!?’
‘ಹೌದು.’
ಆ ಭಾರತೀಯನ ಮುಖ ಗಂಟಿಕ್ಕಿತು.
ಏನೇನೋ ಗುಸುಗುಸು ಶುರು ಆಯಿತು. ಆ ಮೇಲೆ, ಸಂಭಾವಿತರಂತೆ ನಗುನಗುತ್ತಾ, ‘ನಿಮ್ಮ ಕಥೆ ಚೆನ್ನಾಗಿದೆ. ನಮಗೂ ಇಷ್ಟ. ಆದರೆ ಈ ಕಾಡು ನಾಯಿಗಳ ಕತೆ ಸಿನೆಮಾ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಕ್ಷಮಿಸಿ’ ಅಂದರು. ನನ್ನ ಮುಖದಲ್ಲಿ ಇನ್ನೊಂದು ಗಂಟು ಜಾಸ್ತಿಯಾಯಿತು. ‘ಯಾಕೆ?’ ಎಂದೆ. ‘ನೋಡಿ, ನಾವು ಅಷ್ಟೆಲ್ಲ ಹಣ ಹೂಡಿರುತ್ತೇವೆ. ಆಮೇಲೆ ಆ ಕಾಡುಗಳ್ಳ ಎಲ್ಲವನ್ನೂ ಹೊತ್ತುಕೊಂಡು ಹೋಗಿ ತಿಂದು ಹಾಕಿಬಿಟ್ಟರೆ ದೊಡ್ಡ ನಷ್ಟ ಅಲ್ಲವಾ? ಇದು ಸಾಧ್ಯವೇ ಇಲ್ಲ, ಕ್ಷಮಿಸಿ’ ಅಂದರು. ಆಗ ವೀರಪ್ಪನ್ ನಮ್ಮನ್ನು ಇನ್ನೂ ಹೊತ್ತುಕೊಂಡು ಹೋಗಿರಲಿಲ್ಲ. ಸರಿ ಎಂದು ನಾನು ಮುಖದ ಗಂಟು ಬಿಗಿಮಾಡಿಕೊಂಡು ಭಾರತಕ್ಕೆ ವಾಪಸ್ಸು ಬಂದೆ.

ಕಿರುಮದಿಯ ಅಸ್ತಿತ್ವವಾದ

ಕಿರುಮದಿ ಅನ್ನುವುದು ಒಂದು ಹೆಣ್ಣು ಕಾಡುನಾಯಿಗೆ ನಾವಿಟ್ಟ ಹೆಸರು. ಅದು ತುಂಬಾ ಬ್ರಿಲಿಯಂಟ್. ಧೈರ್ಯಶಾಲಿ. ಆದರೆ ಅದಕ್ಕೆ ಆ ಹಿಂಡಿನಲ್ಲಿ ಅಧಿಕಾರವಿರಲಿಲ್ಲ. ಬೇರೊಂದು ಹೆಣ್ಣುನಾಯಿ ಆಗಲೇ ಅಲ್ಫಾ ಹೆಣ್ಣಿನ ಅಧಿಕಾರ ವಹಿಸಿಕೊಂಡಿತ್ತು. ಅದು ಸಾಯುವವರೆಗೆ ಅಥವಾ ಕಾಯಿಲೆ ಬೀಳುವವರೆಗೆ ಕಿರುಮದಿಗೆ ಯಜಮಾನತಿಯ ಪಟ್ಟ ದೊರಕುವ ಹಾಗಿರಲಿಲ್ಲ. ಗಂಡಿನ ಜೊತೆ ಕೂಡುವ ಹಾಗೂ ಇರಲಿಲ್ಲ. ಕಿರುಮದಿ ತುಂಬಾ ಮಹಾತ್ವಾಕಾಂಕ್ಷಿ ನಾಯಿ. ಅದಕ್ಕೆ ಅಲ್ಲಿಯವರೆಗೆ ತಾಳಿಕೊಳ್ಳುವ ವ್ಯವಧಾನವೂ ಇರಲಿಲ್ಲ. ಒಂದು ದಿನ ಕಿರುಮದಿ ಹಿಂಡು ಬಿಟ್ಟು ಹೋಗೇಬಿಟ್ಟಿತು. ಹೋಗಿ ಇನ್ನು ಯಾವುದೇ ಒಂದು ಕಾಡುನಾಯಿ ಹಿಂಡಿನ ಇಂತಹದೇ ಅವಕಾಶ ವಂಚಿತ ಗಂಡು ನಾಯೊಂದರ ಸಹವಾಸ ಮಾಡಿ ಕೆಲವು ಕಾಲದ ನಂತರ ತನ್ನ ಮರಿಗಳೊಂದಿಗೆ ಹಿಂತಿರುಗಿತು.

ಅದು ಮರಿಗಳೊಂದಿಗೆ ಹಿಂಡಿಗೆ ಹಿಂತಿರುಗಿದಾಗ ಸ್ವಾಗತ ಸಿಗಲಿಲ್ಲ. ಆಹಾರವೂ ಸಿಗಲಿಲ್ಲ. ಯಾಕೆಂದರೆ ಒಮ್ಮೆ ಹಿಂಡು ಬಿಟ್ಟು ಹೋದ ನಾಯಿಗಳನ್ನು ಹಿಂಡಿಗೆ ಪುನಃ ಸೇರಿಸಿಕೊಳ್ಳುವುದಿಲ್ಲ. ಓಡಿಹೋದ ನಾಯಿ ಕುಲದಿಂದ ಹೊರಗೆ. ಅವುಗಳನ್ನ ಬೌಂಡರಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದರೂ ಕಿರುಮದಿ ತನ್ನ ಮರಿಗಳನ್ನು ಅಸಾಧಾರಣ ಧೈರ್ಯದಿಂದ ಸಾಕಿದಳು. ಕದ್ದು ಮುಚ್ಚಿಟ್ಟು ಆಹಾರ ತಂದು ಸಲಹಿದಳು. ಕಿರುಮದಿಯದು ಅಸಾಧಾರಣ ಹೋರಾಟ. ಆ ಕಡೆಯಿಂದ ಒಂದು ಹಿಂಡು, ಈ ಕಡೆಯಿಂದ ಇನ್ನೊಂದು ಹಿಂಡು. ಈ ಎರಡು ಹಿಂಡುಗಳ ನಡುವೆ ಜಾಗ ಮಾಡಿಕೊಂಡು ತನ್ನ ಸಾಮ್ರಾಜ್ಯ ಬೆಳೆಸಿದಳು. ನಾವು ಸಿನೆಮಾ ಮಾಡುತ್ತಿದ್ದ ಹಾಗೇ, ಹೀಗೆ ಇನ್ನೊಂದಿಷ್ಟು ಮರಿಗಳನ್ನು ಮಾಡಿಕೊಂಡು ಬಂದು ತನ್ನ ಅಧಿಕಾರವನ್ನು ವಿಸ್ತರಿಸಿದಳು. ಅಲ್ಲಿದ್ದ ಎಲ್ಲ ಗಂಡು ನಾಯಿಗಳೂ ಅವಳ ಮೇಲೆ ಅವಲಂಬಿತವಾಗುವ ಹಾಗೆ ಮಾಡಿದಳು. ಒಂದು ಸಲ ಕಿರುಮದಿ ಬೇಟೆಯಾಡಲು ಹೋಗಿ ಗಾಯಮಾಡಿಕೊಂಡು ಬಂದಳು. ಬೇಟೆಯ ಗಾಯ ಮಾರಣಾಂತಿಕವಾಗಿರುತ್ತದೆ. ಗುಣವಾಗುವುದು ತೀರಾ ಅಪರೂಪ. ಕಿರುಮದಿಯ ಗಾಯದಿಂದಾಗಿ ಅವಳ ಇಡೀ ಸಂಸಾರಕ್ಕೆ ಗರ ಬಡಿದ ಹಾಗಾಗಿತ್ತು. ಎಲ್ಲ ನಾಯಿಗಳೂ ಕಿರುಮದಿಯನ್ನು ಸಂತೈಸುವುದು, ಗಾಯವನ್ನು ನೆಕ್ಕುವುದು ಇತ್ಯಾದಿಗಳನ್ನು ಮಾಡುತ್ತಿದ್ದವು. ದೇವರ ದಯದಿಂದಾಗಿ ಕಿರುಮದಿ ಗುಣಮುಖವಾಯಿತು.

ಇದನ್ನೆಲ್ಲಾ ವೈಜ್ಞಾನಿಕವಾಗಿ ವಿವರಿಸಲಾಗುವುದಿಲ್ಲ. ಪ್ರಾಣಿವಿಜ್ಞಾನಿಗಳ ಜೊತೆ ಈ ಕತೆಗಳನ್ನೆಲ್ಲಾ ಹೇಳಿದರೆ ಅವರು ನಕ್ಕು ಬಿಡುತ್ತಾರೆ. ನಾಯಿ ಸಂಸಾರದ ಕತೆಗಳನ್ನು ಮನುಷ್ಯನ ಕಣ್ಣಿಂದ ನೋಡಿದರೆ ಆಗುವ ಅಪಾಯ ನಿಮ್ಮ ಕತೆಗಳಲ್ಲಿ ಎದ್ದು ಕಾಣುತ್ತದೆ ಎಂದು ನಕ್ಕು ಬಿಡುತ್ತಾರೆ. ಆದರೆ ಕೇವಲ ವೈಜ್ಞಾನಿಕವಾಗಿ ಪ್ರಾಣಿ ಸ್ವಭಾವವನ್ನು ಅಧ್ಯಯನ ಮಾಡುವುದೂ ಕೂಡಾ ಪರಿಪೂರ್ಣವಲ್ಲ ಅನ್ನುವುದು ನಮ್ಮ ಅನುಭವದ ಮಾತು.

ಒಮ್ಮೆ ಹೀಗೇ ಆಯಿತು. ಕಿರುಮದಿ ಎಂಬ ಹೆಣ್ಣು ನಾಯಿಯ ಹಿಂಡು ಬೆಳೆದು ದೊಡ್ಡದಾಗಿ ಕಾಡಿನ ಒಳಗಿನ ಒಂದು ಆಯಕಟ್ಟಿನ ಜಾಗದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡಿತ್ತು.ಅದೊಂದು ದಿನ ನಮಗೆ ಇನ್ನೂ ನೆನಪಿದೆ. ಸಣ್ಣಗೆ ಮಳೆ ಬರುತ್ತಿತ್ತು. ಕಾಡೆಲ್ಲಾ ಒಂದು ಥರಾ ನೀರಸವಾಗಿತ್ತು. ಕಿರುಮದಿ ತನ್ನ ಅಲ್ಫಾಗಂಡೊಂದನ್ನು ಹುರಿದುಂಬಿಸಿ ಬೇಟೆಗೆ ಹೊರಡಿಸಿತು. ಜೊತೆಯಲ್ಲಿ ವಯಸ್ಸಿಗೆ ಬಂದಿದ್ದ ಎರಡು ಗಂಡು ನಾಯಿಗಳೂ ಹೊರಟವು.

ಈ ಎರಡು ಗಂಡುನಾಯಿಗಳಿಗೆ ಈ ಹಿಂಡಿನಲ್ಲಿರಲು ಆಸಕ್ತಿ ಇರಲಿಲ್ಲ. ಏಕೆಂದರೆ ಅವುಗಳು ಆಗತಾನೇ ಪ್ರಾಯಕ್ಕೆ ಬಂದಿದ್ದವು ಆದರೆ ಅವುಗಳಿಗೆ ಲೈಂಗಿಕಕ್ರಿಯೆ ನಡೆಸಲು ಅನುಮತಿ ಇರಲಿಲ್ಲ. ಏಕೆಂದರೆ ಅವುಗಳು ಅಲ್ಫಾ ಗಂಡಾಗಿರಲಿಲ್ಲ. ಅದೂ ಅಲ್ಲದೆ ಪಕ್ಕದ ಹಿಂಡಿನ ಇಂತಹದೇ ಅತೃಪ್ತ ಹೆಣ್ಣು ನಾಯಿಗಳೆರಡು ಕೊಂಚ ದೂರದಿಂದಲೇ ಸುತ್ತಿ ಸುಳಿದಾಡಿ ಇವೆರಡರ ಗಮನ ಸೆಳೆಯಲು ನೋಡುತ್ತಿದ್ದವು. ಹೀಗಾಗಿ ಆ ಎರಡು ಗಂಡುನಾಯಿಗಳೂ ಒಂದು ತರಹದ ಗೊಂದಲದಲ್ಲಿದ್ದವು. ಇರುವ ಹಾಗಿರಲಿಲ್ಲ-ಹೋಗುವ ಹಾಗಿರಲೂ ಇಲ್ಲ. ಏಕೆಂದರೆ ಅವು ಕಿರುಮದಿಯ ಸಂಸಾರದ ಶಕ್ತ ಬೇಟೆನಾಯಿಗಳಾಗಿದ್ದವು. ಸಣ್ಣ ನಾಯಿಮರಿಗಳಿಗೂ ಅವೆರಡು ಅಚ್ಚು ಮೆಚ್ಚಾಗಿದ್ದವು. ಅವುಗಳು ಬೇಟೆಗೆ ಹೊರಟಾಗ ಮರಿಗಳೂ ಕೊಂಚ ದೂರದ ತನಕ ಹೋಗಿ ಬೀಳ್ಕೊಡುತ್ತಿದ್ದವು. ಬೇಟೆ ಮುಗಿಸಿದ ಅವುಗಳು ಮರಿಗಳನ್ನು ಬೇಟೆಯಾಡಿದ ಮಿಕದ ಕಡೆಗೆ ಕರೆದೊಯ್ಯಲು ಬಂದಾಗ ಓಡಿ ಹೋಗಿ ಅವುಗಳ ಬಾಯಿಯನ್ನು ನೆಕ್ಕುತ್ತಿದ್ದವು ಏಕೆಂದರೆ ಅವುಗಳ ಬಾಯಿಯಲ್ಲಿ ಬೇಟೆಯಾದ ಮಿಕದ ನೆತ್ತರ ವಾಸನೆ ಇರುತ್ತಿತ್ತು.

ನಾವು ಹೇಳಿದ ಆ ದಿನ ಸಂಜೆ. ಬೇಟೆಗೆ ಹೋದವರಲ್ಲಿ ಅಲ್ಫಾ ಗಂಡು ಮಾತ್ರ ವಾಪಸ್ಸು ಬಂತು. ಮರಿಗಳು ಬೇಟೆ ಮುಗಿಸಿ ಬಂದ ಅದನ್ನು ಬಾಯಿ ನೆಕ್ಕಿ ಸ್ವಾಗತಿಸುವ ಬದಲು ಯಾಕೋ ಅಳಲು ತೊಡಗಿದವು. ನಮಗೆ ತಟ್ಟನೆ ಹೊಳೆಯಿತು. ಆ ಮರಿಗಳ ಅಚ್ಚುಮೆಚ್ಚಿನ ಆ ಎರಡು ಗಂಡು ನಾಯಿಗಳು ಇನ್ನೊಂದು ಹಿಂಡಿನ ಅತೃಪ್ತ ಹೆಣ್ಣು ನಾಯಿಗಳ ಹಿಂದೆ ಓಡಿ ಹೋಗಿದ್ದವು. ಆ ಇಡೀ ದಿನ ಆ ಹಿಂಡು ಶೋಕದಲ್ಲಿ ಮುಳುಗಿತ್ತು.

ಪ್ರಾಣಿವಿಜ್ಞಾನ ಇದರ ಕುರಿತು ಏನು ಹೇಳುತ್ತದೆ ಗೊತ್ತಿಲ್ಲ. ಆದರೆ ಆ ದಿನದ ಶೋಕದ ವಾತಾವರಣವನ್ನು ನಾವು ಚಿತ್ರೀಕರಿಸಿಕೊಂಡಿದ್ದೇವೆ. ಓಡಿಹೋದ ಆ ಎರಡು ಗಂಡು ನಾಯಿಗಳು ಕೊನೆಗೂ ಬರಲೇ ಇಲ್ಲ.

ತೀರಿ ಹೋದ ಬೆಳ್ಳಿಚುಕ್ಕಿ

ಕಾಡುನಾಯಿಗಳು ಮನುಷ್ಯರ ಮುಂದೆ ಬೇಟೆ ಆಡುವುದೇ ಇಲ್ಲ. ಬೇಟೆಯ ವಿಷಯ ಬಿಡಿ, ಕಾಣಿಸಿಕೊಳ್ಳುವುದೂ ಇಲ್ಲ. ಅಷ್ಟೊಂದು ಎಚ್ಚರಿಕೆಯ, ನಾಚಿಕೆಯ, ಲೆಕ್ಕಾಚಾರದ ಪ್ರಾಣಿಗಳು ಅವು. ಇವುಗಳ ಜೊತೆ ಹೇಗೆ ಪರಿಚಯ ಮಾಡಿಕೊಳ್ಳುವುದು ಎಂದು ಲೆಕ್ಕಾಚಾರ ಹಾಕಿಕೊಂಡೇ ನಾವೂ ಕಾಡಿನೊಳಗಡೆ ಓಡಾಡುತ್ತಿದ್ದೆವು. ಏನೂ ಉದ್ದೇಶವಿಲ್ಲದೆ ಕೈಯಲ್ಲಿ ಕ್ಯಾಮರಾ ಹಿಡಿದುಕೊಳ್ಳದೆ ಸುಮ್ಮನೇ ಜೀಪಿನಲ್ಲಿ, ಕಾಲು ನಡಿಗೆಯಲ್ಲಿ ಅವುಗಳ ಸುತ್ತ ವರ್ಷಗಟ್ಟಲೆ ಸುಳಿದಾಡುತ್ತಿದ್ದೆವು. ಹಿಂಡೊಂದರ ಸ್ನೇಹ ಬೆಳೆಸಿ ಅವುಗಳು ನಮ್ಮನ್ನು ಅವುಗಳ ಹಾಗೆ ಎಂದು ಭಾವಿಸಿಕೊಂಡು ಸಂಕೋಚ ಬಿಟ್ಟು ನಮ್ಮ ಸುತ್ತ ಸುಳಿದಾಡಲು ತೊಡಗುತ್ತಿದ್ದವು. ಎಗ್ಗಿಲ್ಲದೆ ಓಡಾಡುವುದು, ಬಿಸಿಲಲ್ಲಿ ಆಟವಾಡುವುದು, ಮಲಗುವುದು, ಇತ್ಯಾದಿಗಳನ್ನು ಮಾಡಲು ತೊಡಗುತ್ತಿದ್ದವು. ಆದರೆ ಇದಕ್ಕಿದ್ದಂತೆ ಒಂದೋ ಕಾಯಿಲೆ ಬಂದು, ಇಲ್ಲಾ ಆಲ್ಫಾ ನಾಯಿಗಳು ಗಾಯದಿಂದ ತೀರಿಕೊಂಡು ಇಲ್ಲವಾದರೆ ಪ್ರಾಯಕ್ಕೆ ಬಂದ ನಾಯಿಗಳು ಬೇರೆಯಾಗಿ ಓಡಿಹೋಗಿ ಹಿಂಡೇ ಮಾಯವಾಗುತ್ತಿತ್ತು. ಇಲ್ಲಾ ಬೇರೆಯಾಗುತ್ತಿತ್ತು. ನಮಗೆ ಮತ್ತೆ ಇನ್ನೊಂದು ಹಿಂಡಿನ ಸ್ನೇಹ ಬೆಳೆಸುವ ಹಣೆಬರಹ. ಮತ್ತೆ ಕಾಡುನಾಯಿ ಹಿಂಡೊಂದರ ಜಾಡು ಹಿಡಿಯುವ ವನವಾಸ. ನಮ್ಮ ಜೊತೆಗಿದ್ದ ಆದಿವಾಸಿ ಸ್ನೇಹಿತರಿಗೆ ಇದೊಂಥರಾ ತಮಾಷೆಯ ವಿಷಯ. ಈ ನಾಯಿಗಳ ಹಿಂದೆ ಅಲೆಯುವ ಗತಿ ಇವರ ಜೊತೆ ನಮಗೂ ಯಾಕೆ ಬೇಕಾಗಿತ್ತು ಎಂಬಂತೆ ಅವರ ಮುಖ ಮಾಡಿಕೊಂಡಿರುತ್ತಿದ್ದರು.

ಹಾಗೆ ನೋಡಿದರೆ ಕಾಡಿನೊಳಗಿನ ಈ ಆದಿವಾಸಿಗಳು ನಾವೆಲ್ಲರೂ ತಿಳಕೊಂಡ ಹಾಗೆ ಕಾಡು ಪ್ರಾಣಿಗಳ ಕುರಿತು ತಜ್ಞರೇನೂ ಅಲ್ಲ. ಕಾಡು ನಾಯಿಗಳು ತಮ್ಮ ಡೆನ್ ಎಲ್ಲಿ ಮಾಡಿಕೊಳ್ಳುತ್ತವೆ ಹೇಗೆ ಮಾಡಿಕೊಳ್ಳುತ್ತವೆ ಎಂದು ಅವರಿಗೆ ಹೆಚ್ಚೇನು ಗೊತ್ತಿರುವುದಿಲ್ಲ. ಕಾಡುನಾಯಿಗಳೂ ಹಾಗೆ ತಮ್ಮ ಡೆನ್ ಎಲ್ಲಿದೆ ಎಂಬ ಸುಳಿವನ್ನು ನರಮನುಷ್ಯರಿಗೆ ಬಿಡಿ, ಕಾಡಿನ ಯಾವ ಜೀವ ಜಂತುವಿಗೂ ಬಿಟ್ಟುಕೊಡುವುದಿಲ್ಲ.

ಅವುಗಳು ಡೆನ್ ಮಾಡುವ ಕಾಲದಲ್ಲಿ ಸಿಕ್ಕಾಪಟ್ಟೆ ಸೆನ್ಸಿಟಿವ್ ಆಗಿಬಿಡುತ್ತವೆ. ಹಾಗಾಗಿ ಡೆನ್‌ಗಳು ಎಲ್ಲಿವೆ ಎಂದು ಕಂಡು ಹಿಡಿಯಲಿಕ್ಕೆ ಒಂದೆರಡು ವರ್ಷ ಕಾಡಿನೊಳಗಡೆ ಅಲೆದಾಡಬೇಕಾಗುತ್ತದೆ. ಸಂಶೋಧನೆ ಮಾಡಬೇಕಾಗುತ್ತದೆ. ಕಾಡಿನಲ್ಲಿ ಅಲೆದಾಡುವ ವಿಜ್ಞಾನಿಗಳೂ ಈ ಕೆಲಸ ಮಾಡುತ್ತಾರೆ. ಕಾಡು ನಾಯಿಗಳ ಲದ್ದಿಯ ಬೀಳುವಿಕೆಯನ್ನು ಗಮನಿಸಿ ಅವುಗಳ ವಾಸಸ್ಥಾನವನ್ನು ಕಂಡುಹಿಡಿಯುತ್ತಾರೆ. ಅವುಗಳ ಆ ವಾಸಸ್ಥಾನದ ಸುತ್ತಮುತ್ತ ಸ್ವಲ್ಪ ಹೆಚ್ಚೇ ಲದ್ದಿ ಬಿದ್ದಿರುತ್ತದೆ. ಕಾಡು ನಾಯಿಗಳು ತಮ್ಮ ಮೂಲಸ್ಥಾನದ ಗಡಿರೇಖೆಗಳನ್ನು ಕಾಡಿನೊಳಗಿನ ತಮ್ಮ ಸಾಮ್ರಾಜ್ಯದ ಮೇರೆಗಳನ್ನು ಈ ರೀತಿ ಗುರುತು ಮಾಡಿಕೊಂಡಿರುತ್ತವೆ. ಕೆಲವೊಮ್ಮೆ ನಮ್ಮ ದಾರಿ ತಪ್ಪಿಸಲೆಂದೇ ಯಾರೂ ಊಹಿಸದ ಕಾಲುದಾರಿಯ ಬದಿಯಲ್ಲೇ ಮರಿಹಾಕಿಬಿಟ್ಟಿರುತ್ತದೆ. ನಾವು ಕಾಲಬಳಿಯಲ್ಲೇ ಇರುವ ಅವುಗಳ ವಾಸಸ್ಥಾನವನ್ನು ಬಿಟ್ಟು ಕಾಡಿನಲ್ಲೆಲ್ಲಾ ಹುಡುಕಿ ಕಂಗಾಲಾಗಿ ಬಿಟ್ಟಿರುತ್ತೇವೆ. ಎಲ್ಲೋ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಸುಳ್ಳಾಗಿರುತ್ತದೆ. ಇರಲು ಸಾಧ್ಯವೇ ಇಲ್ಲ ಅನ್ನುವಲ್ಲಿ ಅವು ಇರುತ್ತವೆ.

ಒಂದು ದಿನ ಕಾಡು ನಾಯಿಗಳು ಎಲ್ಲೋ ಬೇಟೆಯಾಡಿವೆ ಎಂಬ ಸಣ್ಣ ಸುಳಿವೊಂದು ನಮ್ಮ ಅರಿವಿಗೆ ಬಂತು. ಎಲ್ಲಿಂದಲೋ ಕೇಳಿಸಿದ ಒಂದು ಬೇಟೆಯ ಸಣ್ಣ ಸದ್ದು. ಸರಿ, ಈ ಬೇಟೆಯಾಡಿದ ಮಿಕದ ಮಾಂಸವನ್ನು ಬೇಟೆ ಮಾಡಿದ ಕಾಡುನಾಯಿಗಳು ಡೆನ್ನಲ್ಲಿ ಮರಿಹಾಕಿರುವ ಹೆಣ್ಣು ನಾಯಿಯ ಕಡೆ ಹೇಗೆ ಸಾಗಿಸುತ್ತದೆ ಎಂದು ನೋಡಿಯೇ ಬಿಡುವಾ ಎಂದು ನಾವು ಹೊರಟೆವು. ಹಾಗೆ ಹೋಗುವುದು ಸಣ್ಣ ಕೆಲಸವೇನೂ ಅಲ್ಲ. ನಾವು ನಮ್ಮ ಮನುಷ್ಯ ವಾಸನೆಯನ್ನು ಕಳೆದುಕೊಳ್ಳಲು ಮೈಯ ತುಂಬಾ ಆನೆ ಲದ್ದಿಯನ್ನು ಹಚ್ಚಿಕೊಂಡು ತೆವಳುತ್ತಾ ಹೋದೆವು. ಹೋಗಿ ನೋಡಿದರೆ ಇನ್ನೂ ಕಣ್ಣು ಬಿಟ್ಟಿರದ ಏಳೆಂಟು ದಿನವಾಗಿರುವ ನಾಯಿಮರಿಗಳು. ದೊಡ್ಡ ಮರವೊಂದರ ಬುಡದಲ್ಲಿ ಸುಮ್ಮನೆ ಕಣ್ಣುಮುಚ್ಚಿಕೊಂಡು ಮಲಗಿದ್ದವು. ಆ ದೊಡ್ಡ ಮರದ ಬುಡ ಯಾರೂ ಊಹಿಸದ ಜಾಗ. ಕಣ್ಣುಬಿಟ್ಟಿರದ ಮರಿಗಳು ನಿರ್ಭಿಡೆಯಿಂದ ಮಲಗಿದ್ದವು. ಆಗಲೇ ತಾಯಿ ನಾಯಿ ಎಲ್ಲಿಂದಲೋ ಬಂದು ಹಾಲು ಕುಡಿಸಿ ಹೋಗಿತ್ತು. ಮಿಕದ ಮಾಂಸವನ್ನು ಬಾಯಿಯ ತುಂಬಾ ತುಂಬಿಸಿಕೊಂಡು ತಂದ ಬೇಟೆ ನಾಯಿಗಳು ತಾಯಿಯ ಮುಂದೆ ಅದನ್ನು ಕುಕ್ಕಿ ಮಾಯವಾಗಿದ್ದವು.

ನಾವು ಹೋದಾಗ ಆ ನಾಯಿಮರಿಗಳು ಮಾತ್ರ ಇದ್ದವು. ಸರಿ, ನಾವು ಕಣ್ಣು ಬಿಟ್ಟಿರದ ಆ ನಾಯಿ ಮರಿಗಳ ಸಹವಾಸ ಮಾಡಲು ತೊಡಗಿದೆವು. ಅದೂ ತಿಂಗಳುಗಟ್ಟಲೆ. ಈ ನಡುವೆ ಆ ನಾಯಿಮರಿಗಳು ಬೆಳೆಯುತ್ತಿದ್ದವು. ಡೆನ್‌ಗಳು ಬದಲಾಗುತ್ತಿದ್ದವು. ನಾವು ಬೆಳೆಯುತ್ತಿರುವ ಮರಿಗಳ ಗೆಳೆತನ ಸಂಪಾದಿಸಲು ಹೆಣಗಾಡುತ್ತಿದ್ದೆವು. ಒಂದು ದಿನ- ಆಗ ಬಹುಶಃ ಆ ನಾಯಿ ಮರಿಗಳಿಗೆ ಮೂರು ತಿಂಗಳಾಗುತ್ತಾ ಬಂದಿತ್ತು. ನಾವು ಮರವೊಂದನ್ನು ಏರಿ ಅವುಗಳ ಆಟವನ್ನು ಗಮನಿಸುತ್ತಿದ್ದೆವು. ಅದೇನಾಯಿತೋ ಏನೋ, ಇದ್ದಕ್ಕಿದ್ದಂತೆ ಚಿರತೆಯೊಂದು ಓಡುತ್ತಾ ಬಂದು ನಮ್ಮ ಪಕ್ಕದ ಮರವನ್ನು ಏರಿ ಕುಳಿತಿತು. ಅದರ ವೇಗ, ಉದ್ವೇಗ, ಓಡುತ್ತಾ ಬಂದು ಮರದ ಕೊಂಬೆಯೇರಿದ ಆ ಕ್ಷಣ ಒಂಥರಾ ರೋಮಾಂಚಕಾರಿ ಹೊತ್ತು. ಆದರೆ ಅದನ್ನು ಚಿತ್ರಿಸಲು ನಮ್ಮ ಬಳಿ ಕ್ಯಾಮರಾ ಇರಲಿಲ್ಲ. ಕೈಲಾಗದವರಂತೆ ಸುಮ್ಮನೆ ನೋಡುತ್ತಾ ಕುಳಿತಿದ್ದೆವು. ನಮ್ಮ ಹಾಗೇ ಆ ಮೂರು ತಿಂಗಳ ಮರಿಗಳು ಕೂಡ ವಿಷಯದ ಗಂಭೀರತೆ ಗೊತ್ತಾಗದೆ ಆಡುತ್ತಿದ್ದವು.

ಇದ್ದಕ್ಕಿದ್ದಂತೆ ಒಂದು ನಾಯಿಮರಿ ತನ್ನ ನಾಯಕತ್ವದ ಗುಣವನ್ನು ತೋರಿಸಲು ತೊಡಗಿತು. ಸಣ್ಣ ಮೂರು ತಿಂಗಳ ಮರಿ ಒಂದು ಚಿಕ್ಕ ಕಲ್ಲಮೇಲೆ ಹತ್ತಿಕೂತು ಸುತ್ತಮುತ್ತ ಮೂಸಿ ಏನೋ ಅಪಾಯ ಇದೆ ಎಂದು ಗ್ರಹಿಸಿ ಉಳಿದ ಮರಿಗಳಿಗೆ ತನ್ನದೇ ಬಾಲಭಾಷೆಯಲ್ಲಿ ಸೂಚನೆಗಳನ್ನು ಕೊಡಲು ತೊಡಗಿತು. ಆ ವಯಸಿನಲ್ಲೇ ತನ್ನ ನಾಯಕತ್ವದ ಗುಣವನ್ನು ತೋರಿಸುತ್ತಿರುವ ಕಾಡುನಾಯಿ ಮರಿ! ನಾವು ಸುಮ್ಮನೇ ಅದರ ನಾಯಕತ್ವವನ್ನು ಆನಂದಿಸುತ್ತಿದ್ದೆವು. ಬಹುಶಃ ಮರದ ಮೇಲಿದ್ದ ಆ ಚಿರತೆ ಕೂಡಾ. ಆಮೇಲೆ ಆ ನಾಯಿಮರಿ ನಿಧಾನಕ್ಕೆ ನಾವು ಕುಳಿತಿದ್ದ ಮರದ ಬುಡಕ್ಕೆ ಬಂತು. ನಮ್ಮ ಚಪ್ಪಲಿ, ಚೀಲ ಅಲ್ಲಿ ಬಿದ್ದಿತ್ತು. ಅದನ್ನು ಮೂಸಿ ಇದ್ದಕ್ಕಿದ್ದಂತೆ ಮನುಷ್ಯ ವಾಸನೆಯ ಸುಳಿವು ಅರಿತು ತನ್ನ ನಾಯಕತ್ವದ ಗುಣವನ್ನು ತ್ಯಜಿಸಿ ಸಾಧಾರಣ ಕಾಡುನಾಯಿ ಮರಿಯಂತೆ ಕುಂಯ್ಗುಡುತ್ತಾ ಓಡಿ ಹೋಯಿತು.

ನಾವು ಈ ನಾಯಿ ಮರಿಯನ್ನು ಗಮನಿಸುತ್ತಾ ಬಂದೆವು. ಅದರ ಮೈ ಮೇಲೆ ಒಂದು ಬಿಳಿ ಚುಕ್ಕಿ ಇತ್ತು. ಅದರ ಕುರಿತು ಕುತೂಹಲ. ಅದೂ ನಮ್ಮನ್ನು ಗುರುತಿಸಲು ತೊಡಗಿತ್ತು. ಆ ನಾಯಿಮರಿ ಆರೇಳು ತಿಂಗಳು ವಯಸ್ಸಾಗುವಾಗಲೇ ತನ್ನ ಬಾಲ್ಯಸಹಜ ಓಡಾಟಗಳನ್ನು ಮರೆತು ಜಗಳವಾಡುವುದನ್ನು ಬಿಟ್ಟು ಬೇಟೆ ನಾಯಿಗಳನ್ನು ಹಿಂಬಾಲಿಸುವುದು, ಬೇಟೆಯಲ್ಲಿ ಪಾಲುಗೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿತ್ತು. ಬೆಳೆದ ಆ ಎಂಟು ಮರಿಗಳಲ್ಲಿ ಏಳು ಮರಿಗಳು ಇನ್ನೂ ಹುಡುಗಾಟದಲ್ಲೇ ತೊಡಗಿದ್ದರೆ ಇದೊಂದು ಮಾತ್ರ ಒಂದು ಥರಾ ಆಡುತ್ತಿತ್ತು. ಹೀಗಿರುವಾಗ ಒಂದು ದಿನ ಆ ನಾಯಿಮರಿಗಳಿಗೆ ಹತ್ತು ತಿಂಗಳು ತುಂಬಿದಾಗ ಇದ್ದಕ್ಕಿದ್ದಂತೆ ಒಂದು ಬೆಳೆದ ಗಂಡುನಾಯಿ ಆ ಕಾಡುನಾಯಿ ಹಿಂಡನ್ನು ಬಿಟ್ಟು ಹೋಯಿತು. ಏಕೆಂದರೆ ಅದಕ್ಕೆ ಆ ಹಿಂಡಿನಲ್ಲಿ ಅವಕಾಶವಿರಲಿಲ್ಲ. ಅದರ ಜೊತೆ ಈ ಬಿಳಿಚುಕ್ಕಿ ಗುರುತಿನ ಮರಿಯೂ ಹೋಯಿತು.

ಹನ್ನೊಂದು ತಿಂಗಳಿನ ಮರಿ ಹಿಂಡು ಬಿಟ್ಟು ಗಂಡು ನಾಯೊಂದರ ಹಿಂದೆ ಒಂಟಿಯಾಗಿ ಹೋಗುವುದು ತುಂಬಾ ಅಪಾಯದ ಕೆಲಸ. ನಾವೂ ಅವುಗಳನ್ನು ಹಿಂಬಾಲಿಸಲು ತೊಡಗಿದೆವು. ನೋಡಿದರೆ ಅವುಗಳು ಎರಡು ಕಾಡುನಾಯಿ ಹಿಂಡು ಸಾಮ್ರಾಜ್ಯಗಳ ಗಡಿಯ ನಡುವಲ್ಲಿ ತಾವೂ ಒಂದು ಸಣ್ಣ ಸಾಮ್ರಾಜ್ಯ ಸ್ಥಾಪಿಸಿಕೊಂಡು ಓಡಾಡಿಕೊಂಡಿದ್ದವು. ಇನ್ನೂ ಸ್ವಲ್ಪ ದಿನದಲ್ಲೇ ಒಂದು ಹೆಣ್ಣು ನಾಯಿಯೂ ಬಂದು ಸೇರಿಕೊಂಡಿತು. ಒಂದು ಬೇಟೆ ನಾಯಿ, ಒಂದು ಹೆಣ್ಣು ನಾಯಿ ಮತ್ತೊಂದು ಮರಿ ನಾಯಿ ಇರುವ ಪುಟ್ಟದಾದ ಹಿಂಡು. ಸ್ವಲ್ಪ ದಿನದಲ್ಲಿ ಆ ಹೆಣ್ಣು ನಾಯಿಯೂ ಡೆನ್ ಒಂದನ್ನು ಮಾಡಿಕೊಂಡು ಮರಿ ಹಾಕಿತು. ಸುಮಾರು ಹದಿನಾಲ್ಕು ಮರಿಗಳು. ನಿಧಾನಕ್ಕೆ ಬೆಳ್ಳಿಚುಕ್ಕಿ ಆ ಹಿಂಡಿನ ನಾಯಕನಾಗಲು ತೊಡಗಿತು. ಅಷ್ಟು ಹೊತ್ತಿಗೆ ಬೆಳ್ಳಿಚುಕ್ಕಿ ಓಡಿಬಂದಿದ್ದ ಮೂಲ ಹಿಂಡಿನಲ್ಲಿ ಯಾವುದೋ ಕಾಯಿಲೆ ಬಂದು ಅರ್ಧದಷ್ಟು ನಾಯಿಗಳು ಸತ್ತು ಹೋಗಿದ್ದವು. ಆ ಹಿಂಡು ದುರ್ಬಲವಾಗಿತ್ತು. ಬೆಳ್ಳಿಚುಕ್ಕಿಯ ನಾಯಕತ್ವದ ಗುಣ ಹೇಗಿತ್ತು ಅಂದರೆ ಅದು ತಕ್ಷಣ ಆ ಹಿಂಡನ್ನು ವಶಪಡಿಸಿಕೊಂಡಿತು. ಆಗ ಅದಕ್ಕೆ ಇನ್ನೂ ಹತ್ತೊಂಬತ್ತು ತಿಂಗಳು. ಆದರೆ ಅಸಾಧಾರಣ ನಾಯಕ ಗುಣ. ಎರಡು ವರ್ಷ ವಯಸ್ಸಿನಲ್ಲೇ ಅದು ಹಿಂಡೊಂದರ ಪರಿಪೂರ್ಣ ನಾಯಕ ಬೇಟೆ ನಾಯಿ-ಆಲ್ಫಾ ಮೇಲ್-ಆಗಿತ್ತು.

ಆದರೆ ಅದರ ವೇಗ ಮತ್ತು ಕೌಶಲ್ಯ ಎಷ್ಟು ತೀವ್ರವಾಗಿತ್ತೆಂದರೆ ಅದು ಬಹಳ ಕಾಲ ಬದುಕಲೇ ಇಲ್ಲ. ಬೆಳ್ಳಿಚುಕ್ಕಿಗೆ ನಾಲ್ಕು ವರ್ಷಗಳಿರುವಾಗ ಅದು ಬೇರೊಂದು ಕಡೆಗೆ ತನ್ನ ಹಿಂಡಿನ ವಾಸಸ್ಥಾನವನ್ನು ಬದಲಿಸಬೇಕಾಯಿತು. ಏಕೆಂದರೆ ಅದು ಇದ್ದ ಕಡೆ ಹುಲಿಯೊಂದು ಬಂದು ತೊಂದರೆ ಕೊಡುತ್ತಿತ್ತು. ಅದು ವಾಸ ಬದಲಿಸಿದ ಜಾಗ ಒಂದು ಕುರುಚಲು ಕಾಡು.

ಸರಿ ನಾವು ಅಲ್ಲೂ ಹಿಂಬಾಲಿಸಿದೆವು. ಹೋದೆವು. ಹೋಗಿ ನೋಡಿದರೆ  ಕುರುಚಲು ಕಾಡಿನೊಳಗಿರುವ ಎಲ್ಲಿಂದಲೋ ಸಣ್ಣಗೆ ವಾಸನೆ ಹೊಡೆಯುತ್ತಿತ್ತು. ಪ್ರಾಣಿಯೊಂದು ಸತ್ತ ವಾಸನೆ. ಲಂಟಾನಾ ಪೊದೆಯೊಳಗೆ ನುಸುಳಿ ಬಂಡೆಗಳನ್ನು ಜಿಗಿದು ಹೋಗಿ ನೋಡಿದರೆ ಕಾಡು ನಾಯಿಯೊಂದು ಗಾಯಗೊಂಡು ಸಾವನ್ನು ಕಾಯುತ್ತಾ ಬಿದ್ದುಕೊಂಡಿರುವುದನ್ನು ನೋಡಿದೆವು. ಮೊದಲಿಗೆ ಅದರ ಕಿವಿ ಮಾತ್ರ ಕಾಣಿಸಿತು. ಹತ್ತಿರದಿಂದ ನೋಡಿದರೆ ಅದು ನಮ್ಮ ಬೆಳ್ಳಿಚುಕ್ಕಿ. ಗಾಯಗೊಂಡು ಸಾವನ್ನು ಕಾಯುತ್ತಾ ಮಲಗಿತ್ತು. ಏನೂ ಮಾಡಲೂ ತೋಚಲಿಲ್ಲ. ಬೇರೆಯ ಸಂದರ್ಭದಲ್ಲಾಗಿದ್ದರೆ ಪಶುವೈದ್ಯರಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೆವು. ಸಂಜೆಯಾಗಿತ್ತು. ಅಸಾಧ್ಯ ವಾಸನೆ. ಹಾಗೇ ವಾಪಾಸು ಬಂದೆವು.

ಮಾರನೇ ದಿನ ಹೋದೆವು. ಬೆಳ್ಳಿಚುಕ್ಕಿ ಸತ್ತು ಹೋಗಿತ್ತು. ಬಹುಶಃ ಯಾವುದೋ ಕಾಯಿಲೆ ಇರಬೇಕು. ಹಿಂಡಿಗೆ ಹಿಂಡೇ ತೀರಿ ಹೋಗಿತ್ತು. ಅವುಗಳ ಮೂಳೆ ಚಕ್ಕಳ ಅಲ್ಲಲ್ಲಿ ಉಳಿದುಕೊಂಡಿತ್ತು. ಎಲ್ಲ ತೀರಿ ಹೋದ ಬಳಿಕ ಬೆಳ್ಳಿಚುಕ್ಕಿಯೂ ತೀರಿಕೊಂಡಿತ್ತು. ನಾವು ಮತ್ತೆ ಇನ್ನೊಂದು ಕಾಡುನಾಯಿಯ ಹಿಂಡಿನ ಜಾಡು ಹುಡುಕುತ್ತಾ ಅಲೆಯಬೇಕಾಯಿತು.

ಗುತ್ತಿ ಮಾದ ಮತ್ತು ಬೊಮ್ಮ

ನಮ್ಮ ಮದುಮಲೈ ಕಾಡಿನ ಕಥೆಗಳೆಲ್ಲಾ ಆರಂಭಗೊಳ್ಳುವುದೇ ಕಾಡು ಕುರುಬರಿಂದ. ಅವರ ನೆರವಿಲ್ಲದೆ ಅಲ್ಲಿ ಏನೂ ನಡೆಯುವುದೇ ಇಲ್ಲ. ಮೊದಲಿಗೆ ಅಲ್ಲಿ ಸಮಸ್ಯೆ ಎದುರಾಗುವುದೇ ಅವರ ಹೆಸರುಗಳಿಂದ. ಅದು ಎಷ್ಟರಮಟ್ಟಿಗೆಂದರೆ ಬೊಮ್ಮನ ಮಗ ಕಾಳ, ಕಾಳನ ಮಗ ಬೊಮ್ಮ. ಮಾದನ ಮಗ ಕ್ಯಾತ. ಕ್ಯಾತನ ಮಗ ಮಾದ. ಹೀಗೆ ಅದೇ ಅದೇ ಹೆಸರುಗಳು ಹಾಡಿ ತುಂಬಾ ತುಂಬಿಕೊಂಡಿರುತ್ತವೆ. ಸ್ವಲ್ಪ ಸಮಯದ ಹಿಂದೆ ಅಲ್ಲಿ ಶಾಲೆ ಆರಂಭಗೊಂಡಿದ್ದರಿಂದ ಅಲ್ಲಿಯ ಮಾಸ್ತರರಿಗೂ ಈ ಸಮಸ್ಯೆ ಕಾಡಿ ಹಾಜರಾತಿ ಪುಸ್ತಕದಲ್ಲಾದರೂ ಬದಲಾವಣೆ ತರುವ ಪ್ರಯತ್ನ ಮಾಡಿದ್ದು ನಿಜ. ಆದರೆ ಅದು ಹೆಚ್ಚು ಉಪಯೋಗಕ್ಕೆ ಬಂದಂತೆ ಅನ್ನಿಸಲೇ ಇಲ್ಲ. ಶಾಲೆಗೆ ಸೇರಿದ ಕುರುಬರ ಮಕ್ಕಳೆಲ್ಲ ಎಂ.ಕ್ಯಾತ, ಕೆ.ಮಾದ ಇಲ್ಲವೇ ಕೆ.ಕ್ಯಾತ, ಎಂ.ಮಾದಗಳಾದವೇ ಹೊರತು ಸಮಸ್ಯೆಗೆ ಪರಿಹಾರ ದೊರಕಲೇ ಇಲ್ಲ.

ಮದುಮಲೈ ಕಾಡಿನಲ್ಲಿರುವ ಕಾಡುಕುರುಬರಾದ ಗುತ್ತಿಮಾದ ಹಾಗೂ ಬೊಮ್ಮರಂಥವರು ವಿಜ್ಞಾನಿಗಳಿಗೇನೂ ಕಡಿಮೆಯಿಲ್ಲ. ಅಪ್ರತಿಮ ಕುತೂಹಲ ಹಾಗೂ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಲೇ ಬದುಕು ಸಾಗಿಸುವ ಈ ಕಾಡುಮಕ್ಕಳ ಒಡನಾಟ ಕಂಡವರು ಕಂಡಿರಿಸಿದ ಚಿತ್ರಣ. ಹೀಗಾಗಿ ಇಲ್ಲಿಯ ಕಥೆ ಏನಾದರೂ ಹೇಳಲು ಹೊರಟರೆ ಮೂರು ನಾಲ್ಕು ಕ್ಯಾತ. ಐದಾರು ಮಾದಗಳು ಅಲ್ಲಿ ಪ್ರತ್ಯಕ್ಷಗೊಂಡು ಕೇಳುಗರಿಗೆ ಇಡೀ ಕಥೆಯೇ ಗೋಜಲಾಗಿಬಿಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅಲ್ಲಿ ಇಲ್ಲಿ ಬೇರೆ ಹೆಸರು ಕೇಳಿದಂತಾದರೆ ಅವೇನು ಹಿರಿಯರು ಇಟ್ಟಿದ್ದಂತೂ ಅಲ್ಲ. ತಮ್ಮ ತಮ್ಮ ವಿಶೇಷ ಪ್ರತಿಭೆಗಳಿಂದ ದಕ್ಕಿಸಿಕೊಂಡ ಬಿರುದುಗಳು; ಅವರ ಹೆಸರಿನ ಹಿಂದೆಯೂ ಮುಂದೆಯೂ ಸೇರಿ ಇತರರಿಂದ ತಮ್ಮನ್ನು ಬೇರ್ಪಡಿಸಿಕೊಂಡು ತಮ್ಮ ಐಡೆಂಟಿಟಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗುತ್ತಿಮಾದ ಇಂತಹ ವಿಶಿಷ್ಟ ವ್ಯಕ್ತಿಗಳಲ್ಲಿ ಒಬ್ಬ. ಈ ಗುತ್ತಿಮಾದ ನಮ್ಮೊಂದಿಗೆ ಕೆಲಸಕ್ಕೆ ಸೇರಿದಾಗ ಆತನ ಹೆಸರಿಗೆ ಈ ಗುತ್ತಿ ಹೇಗೆ ಹೆಗಲೇರಿರಬಹುದೆಂಬ ವಿಷಯದಲ್ಲಿ ನಾವು ತಲೆ ಕೆಡಿಸಿಕೊಂಡಿರಲೇ ಇಲ್ಲ. ಆದರೂ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಗುತ್ತಿಮಾದನ ಪೂರ್ವಾಪರ ಕುರಿತು ಸ್ವಲ್ಪ ವಿಚಾರಿಸಿದ್ದೆವು. ಈ ಗುತ್ತಿಮಾದ ಮಹಾ ಧೈರ್ಯಶಾಲಿ ಎಂದೂ ಇಡೀ ಕಾಡೇ ಆತನ ಅಂಗೈಯಂತೆ. ಪ್ರತಿ ಅಂಗುಲವನ್ನು ಈಜಿ ಬಲ್ಲವನೆಂದು ತಿಳಿಸಿದ್ದರು. ನಮಗೂ ಕೂಡ ಅದಕ್ಕಿಂತ ಹೆಚ್ಚಿನ ಅರ್ಹತೆಯ ಅವಶ್ಯಕತೆ ಇರಲಿಲ್ಲ. ಏನಿದ್ದರೂ ಕಾಡಿನ ಒಳದಾರಿಗಳ ಪರಿಚಯ ಇದ್ದರೆ ಸಾಕಿತ್ತು. ಮಾದ ಕೆಲಸಕ್ಕೆ ಬಂದ ಹತ್ತು ಹದಿನೈದು ದಿನಗಳಲ್ಲೇ ಅವನಿಗೆ ಗುತ್ತಿ ಬಿರುದು ದಕ್ಕಿರುವುದರ ಹಿನ್ನೆಲೆ ಸ್ಪಷ್ಟವಾಗುತ್ತಾ ಬಂತು.

ಪ್ರತಿನಿತ್ಯ ಕಾಡಿಗೆ ಹೊರಟ ಸ್ವಲ್ಪ ಸಮಯದಲ್ಲೇ ಸವೆದ ರಸ್ತೆಯನ್ನು ಬಿಡಿಸಿ ಹೊಸ ಕಾಲುದಾರಿ ಹಿಡಿಯುತ್ತಿದ್ದ. ಕೇಳಿದರೆ ಇದು ಹತ್ರ ಸಾರ್ ಎಂದು ನಮ್ಮ ಬಾಯಿಮುಚ್ಚಿಸಿಬಿಡುತ್ತಿದ್ದ. ಹತ್ತಾರು ಮೀಟರ್ ಸಾಗಿದ ಬಳಿಕ ಹೊಸ ದಾರಿ ಅದೃಶ್ಯವಾಗಿ ಅತ್ತಿತ್ತ ನೋಡುವಾಗಲೇ, ಈ ಮಾದ ಮುಳ್ಳುಹಂದಿಗಳು ಓಡುವ ಪೊದರುಗಳ ಅಡಿಯ ಸಂದಿಗಳಲ್ಲಿ ತೆವಳಿ ಮಾಯವಾಗುತ್ತಿದ್ದ. ಆತನ ಸಲಹೆಗಳನ್ನು ಒಪ್ಪಿಕೊಂಡ ಬಳಿಕ ನಮಗೆ ಪಾದಗಳ ಅವಶ್ಯಕತೆಯೇ ಕಡಿಮೆಯಾಗಿ ಮಂಡಿಗಳಲ್ಲಿ ತೆವಳುತ್ತಾ ಸಾಗುವುದು ಸಾಮಾನ್ಯವಾಯಿತು.

ಗುತ್ತಿಮಾದನಿಗೆ ಸಮತಟ್ಟಾದ ಉತ್ತಮ ರಸ್ತೆಗಳ ಬಗ್ಗೆ ತಿರಸ್ಕಾರವಿತ್ತೋ ಅಥವಾ ಪಾದಗಳಿಗಿಂತ ಅವನಿಗೆ ಮಂಡಿ ನಡಿಗೆ ಸುಲಭವಿತ್ತೋ ನಮಗಂತೂ ಅರ್ಥ ಆಗುತ್ತಿರಲಿಲ್ಲ. ಈ ಗುತ್ತಿಯ ಹಿಂದೆ ಗುತ್ತಿಯ ಒಳಗೆ ನುಗ್ಗಿ ನಮ್ಮ ಬಟ್ಟೆಗಳೆಲ್ಲಾ ಸಿಕ್ಕ ಸಿಕ್ಕ ಮುಳ್ಳುಗಳೊಂದಿಗೆ ಸಂವಾದ ನಡೆಸಿಕೊಂಡು ಹೋಗಿ ಇನ್ನೇನು ದೊಡ್ಡ ಕಾಲುದಾರಿ ಸಿಕ್ಕಿತು ಅನ್ನುವಷ್ಟರಲ್ಲಿ ಆತ ಮತ್ತೊಂದು ಗುತ್ತಿಯಲ್ಲಿ ನುಸುಳಿ ಮಾಯವಾಗುತ್ತಿದ್ದ. ಹೀಗೆ ಉತ್ತಮ ಹಾದಿಯನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುತ್ತಿದ್ದ ಮಾದನಿಗೆ ಮಂಡಿನಡಿಗೆಯಲ್ಲಿ ವಿಶೇಷ ಅನುಕೂಲವಿದ್ದಿರಬಹುದು; ಆದರೆ ಗುತ್ತಿ ಮಾದನೊಂದಿಗೆ ಸೇರಿದ ಮೇಲೆ ನಮ್ಮ ಪಾದಗಳಂತೂ ಹೆಚ್ಚಿನ ಕೆಲಸವನ್ನೇ ಮಾಡಲಿಲ್ಲ.

ಒಂದು ದಿನ ಗುತ್ತಿಯೊಂದಿಗೆ ಕಾಡಿಗೆ ಹೊರಟೆವು. ಆಗ ಸಿರಕೀರ್ ಕಕೂ ಹಕ್ಕಿಗಳು ಗೂಡು ಕಟ್ಟುವ ಕಾಲ. ಕೊಕ್ಕಿಗೆ ಲಿಪ್‌ಸ್ಟಿಕ್ ಹಚ್ಚಿದಂತೆ ಇರುವ ಇದು ಬಹಳ ನಾಚಿಕೆ ಸ್ವಭಾವದ ಹಕ್ಕಿ. ಮನುಷ್ಯನ ಸುಳಿವು ಕಂಡೊಡನೆ ಅವು ಸಹ ದೊಡ್ಡ ಗುತ್ತಿಗಳಲ್ಲಿ ಕಣ್ಮರೆಯಾಗುತ್ತವೆ. ಕಾಡಿನ ನಡು ಭಾಗದಲ್ಲಿರುವ ಈ ಹಕ್ಕಿಯ ಒಂದು ಗೂಡು ನಮ್ಮ ಕಣ್ಣಿಗೆ ಈ ಬಾರಿ ಹೇಗೋ ಬಿದ್ದಿತ್ತು. ಗೂಡಿನ ಸುತ್ತಲೂ ದಟ್ಟವಾದ ಆಳೆತ್ತರದ ಹುಲ್ಲು. ನಂತರ ಕಾಲುವೆಯಂತಹ ವಿಸ್ತಾರವಾದ ಹಳ್ಳ. ಸುತ್ತಲೂ ಮತ್ತಿ, ತೇಗ, ಸಾಗಡೆ, ಬೆಂಡೆ ಮರಗಳಿಂದ ತುಂಬಿದ್ದ ದಟ್ಟವಾದ ಕಾಡು. ಮನೆಯಿಂದ ಹೊರಟಾಗಲೇ ಗುತ್ತಿಮಾದನಿಗೆ ಇಂದು ಗುತ್ತಿ ನುಗ್ಗುವುದು ಬೇಡವೆಂದೂ ನಮಗೆ ತೆವಳಿ ತೆವಳಿ ಸಾಕಾಗಿದೆ ಎಂದೂ ಹಲವಾರು ಬಾರಿ ಒತ್ತಿ ಒತ್ತಿ ಹೇಳಿದ್ದೆವು. ಆದರೂ ಆತನ ಮಂಡಿಗಳು ಅವನ ಮೆದುಳಿನ ಆಜ್ಞೆಗಳನ್ನು ಗೌರವಿಸುವುದರ ಬಗೆಗೆ ನಮಗೇನೋ ಸಂಶಯವೇ ಇತ್ತು.

ಆದರೆ ನನ್ನ ಕಷ್ಟವೇ ಈ ಮಾದನಿಗೆ ಅರ್ಥವಾಗುತ್ತಿರಲಿಲ್ಲ. ಕಳೆದ ವಾರ ಮೈಸೂರಿನಲ್ಲಿ ಫುಟ್‌ಬಾಲ್ ಪಂದ್ಯ ಆಡುವಾಗ ಸೇಟು ಮಗ ಬಾಲಿಗೆ ಬದಲಾಗಿ ನನ್ನ ಮಂಡಿಗೇ ಒದ್ದು ನನ್ನ ಬಲಗಾಲಿನ ಮಂಡಿಯ ಲಿಗುಮೆಂಟ್ ಹರಿದಿದೆ. ಡಾಕ್ಟರ್ ಒಂದು ತಿಂಗಳ ವಿಶ್ರಾಂತಿ ತೆಗೆದುಕೊಳ್ಳಲೇಬೇಕೆಂದು ಹೇಳಿದ್ದಾರೆ. ಆದರೆ ಒಂದು ತಿಂಗಳು ನಾನು ಮನೆಯಲ್ಲಿ ಕುಳಿತರೆ ಈ ಸಿರಕೀರ್ ಕಕೂ ಹಕ್ಕಿಗಳು ತಾವು ಗೂಡು ಕಟ್ಟುವುದನ್ನೇನೂ ಮುಂದೂಡುವುದಿಲ್ಲ. ಹಾಗಾಗಿ ಬ್ಯಾಂಡೇಜ್ ಬಿಗಿದ ಕಾಲೆಳೆದು ಹೇಗೋ ಸಾಗುತ್ತಿದ್ದೆ. ಈ ಪರಿಸ್ಥಿತಿಯಲ್ಲೂ ಗುತ್ತಿ ಮಾದ ಹಲವಾರು ಬಾರಿ ತನ್ನ ನೆಚ್ಚಿನ ದಾರಿಗಳನ್ನೇ ಆರಿಸಿಕೊಂಡ.

ಹಾಗೂ ಹೀಗೂ ನಮ್ಮ ಗುರಿ ತಲುಪಿದಾಗ ಪರಿಸ್ಥಿತಿ ನಾಜೂಕಾಗಿತ್ತು. ಪಕ್ಕದ ಕಮರಿಯ ಮೇಲಿನ ಗುಡ್ಡದಲ್ಲಿ ಆನೆಗಳ ಗುಂಪೊಂದು ಚದುರಿದಂತೆ ತಮ್ಮ ಎಂದಿನ ಕಾರ್ಯದಲ್ಲಿ ತೊಡಗಿದ್ದವು. ನಾವು ಗುಂಪಿಗೆ ನಮ್ಮ ಗಾಳಿ ಸಿಗದಂತೆ ಹೋಗಬೇಕಾದ ದಿಕ್ಕಿನಲ್ಲಿ ಆಳೆತ್ತರದ ಹುಲ್ಲಿನೊಳಗೆ ಹದಿವಯಸ್ಸಿನ ಗಂಡಾನೆಯೊಂದು, ಕೆಡವಿದ್ದ ತೇಗದ ಮರದ ತೊಗಟೆ ಕೀಳುತ್ತಾ ನಿಂತಿತ್ತು.
ನಮ್ಮೆಲ್ಲಾ ಅನುಭವ ಬಳಸಿ ಯಾವುದೇ ಆನೆಗೆ ನಮ್ಮ ಸುಳಿವು ಸಿಗದಂತೆ ಹುಲ್ಲಿನೊಳಗೇ ಸರಿಯುತ್ತ ನಮ್ಮ ಹಕ್ಕಿಯ ಗೂಡಿಗೆ ೧೫-೨೦ ಅಡಿ ಹತ್ತಿರಕ್ಕೆ ಬಂದಿದ್ದೆವು. ಇದ್ದಕ್ಕಿದ್ದಂತೆ ನಮ್ಮ ಬೆನ್ನ ಹಿಂದೆ ಹಲವೇ ಅಡಿಗಳ ದೂರದಿಂದ ಒಂದು ಭಯಾನಕ ಕೂಗು ಕೇಳಿಸಿತು. ಕಡವೆ ಕೂಗಿನಂತಿದ್ದ ಆ ಭೀಕರ ಶಬ್ದಕ್ಕೆ ನಮ್ಮ ಕಾಲುಗಳು ಸತ್ವ ಕಳೆದುಕೊಂಡು ರಬ್ಬರ್‌ನಂತಾಗಿ ಓಡಲು ಪ್ರಚೋದಿಸುತ್ತಿದ್ದ ಮಿದುಳಿನ ಆಜ್ಞೆಗಳನ್ನು ಸಂಪೂರ್ಣ ಧಿಕ್ಕರಿಸಿದವು. ಆಗಷ್ಟೇ ನಮ್ಮ ಪಕ್ಕದಲ್ಲಿದ್ದ ಮಾದ ಮಾತ್ರ ಗುತ್ತಿಯೊಳಗೆಲ್ಲೋ ಕಣ್ಮರೆಯಾಗಿ ಹೋಗಿದ್ದ. ಮುಂದಿನ ಕ್ಷಣದಲ್ಲಿ ನಾವು ಕಂಡ ದೃಶ್ಯ ನಮ್ಮ ಕಾಲುಗಳಿಗೆ ಮತ್ತೆ ಜೀವ ತಂದಿತ್ತು. ಸದ್ದಿಗೆ ಬೆದರಿದ ಗಂಡಾನೆ ನಮ್ಮೆಡೆಗೇ ಧಾವಿಸಿ ಬರುತ್ತಿತ್ತು.

ಓಡಾಡಲಾರದೆ ಬಲಾತ್ಕಾರವಾಗಿ ಎಳೆದು ತಂದಿದ್ದ ನನ್ನ ಬಲಗಾಲು ಸಹ ಎಲ್ಲವನ್ನೂ ಮರೆತು ಓಡಲಾರಂಭಿಸಿತು. ಯಾವ ಕಡೆ ಓಡುತ್ತಿದ್ದೇವೆಂದು ತಿಳಿಯದೆ ನಾವಿಬ್ಬರೂ ಆನೆ ಗುಂಪಿನೆಡೆಗೆ ಓಡಿದೆವು. ಹುಲ್ಲೊಳಗಿದ್ದ ನಮ್ಮನ್ನ ನೋಡದ ಹೆಣ್ಣಾನೆಗಳು ಓಡಿಬರುತ್ತಿದ್ದ ಸಣ್ಣ ಗಂಡಾನೆಯನ್ನು ಮಾತ್ರ ನೋಡಿ ಘೀಳಿಡುತ್ತಾ ನುಗ್ಗಿದವು. ಈ ಎಲ್ಲಾ ಅನಿರೀಕ್ಷಿತ ಘಟನೆಗಳ ನಡುವೆ ಓಡುತ್ತಿರುವ ಇಬ್ಬರು ಹುಲುಮಾನವರನ್ನು ಕಂಡ ಆನೆಗಳು ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತುಬಿಟ್ಟವು. ಈ ಗಲಿಬಿಲಿಯ ಮಧ್ಯೆ ಮರಗಳ ಹಿಂದೆ ಹಿಂದೆಯೇ ಸರಿದು ಅಲ್ಲಿಂದ ಮೆಲ್ಲನೆ ಜಾರಿಕೊಂಡೆವು.

ಆನೆಗಳಿಂದ ಮುನ್ನೂರು ಅಡಿಗಳಷ್ಟು ದೂರ ಸಾಗಿದ ಬಳಿಕ ಎಲ್ಲೋ ಒಂದು ಪ್ರಾಣಿ ಸರಿದಂತೆ ಸದ್ದಾಯಿತು. ಹಿಂದಿರುಗಿ ನೋಡಿದರೆ ಮಾದ ಗುತ್ತಿಯೊಂದರೊಳಗಿಂದ ಪ್ರತ್ಯಕ್ಷನಾದ. ಮುಂದೇನೂ ಮಾಡಲೂ ತೋಚದೆ ಮನೆಯ ಕಡೆ ನಡೆದೆವು. ಆಯಾಸದಿಂದ ಮನೆ ತಲುಪಿದಾಗ ಬಾಗಿಲಿಗೆ ಬೀಗ ಹಾಕಿತ್ತು. ಬೀಗದ ಮಗ್ಗುಲಿಗೆ ಬಿಳಿಯ ಕಾಗದವೊಂದನ್ನು ಅಂಟಿಸಲಾಗಿತ್ತು. ಅದು ಅಡಿಗೆ ಮಾಡುತ್ತಾ ಮನೆ ನೋಡಿಕೊಳ್ಳತ್ತಿದ್ದ ಬೊಮ್ಮ ಬರೆದಿಟ್ಟಿದ್ದ ಕಾಗದ. ಕಾಗದದಲ್ಲಿ ಒಂದು ಹಕ್ಕಿಯ ಚಿತ್ರ. ಪಕ್ಕದಲ್ಲಿ ಬಾಣದ ಗುರುತು ಚಿತ್ರಿಸಿತ್ತು. ಬೊಮ್ಮ ತಮಿಳು ಬಲ್ಲವನಾದರೂ ಆ ಭಾಷೆ ನಮಗೆ ಓದಲು ಬರುವುದಿಲ್ಲವೆಂದು ಸಂಕೇತ ಬಳಸಿ ತಾನು ಯಾವುದೋ ಹಕ್ಕಿ ಹುಡುಕಿಕೊಂಡು ಹೋಗಿರುವುದಾಗಿ ತಿಳಿಸಿದ್ದ. ಪರಸ್ಪರ ಅರ್ಥವಾಗದ ಭಾಷಾ ಸಮಸ್ಯೆಯನ್ನು ಬಗೆಹರಿಸಲು ಬೊಮ್ಮ ಬಳಸಿದ ಸುಲಭ ಸೂತ್ರ ಬೆರಗು ಮೂಡಿಸಿತ್ತು.

ಬೊಮ್ಮ ಕಾಡಿನಿಂದ ಹಿಂದಿರುಗಿದ ನಂತರ ಅವನೊಡನೆ ಬೆಳಗಿನ ಘಟನೆಯನ್ನು ವಿಶ್ಲೇಷಿಸಲೆತ್ನಿಸಿದೆವು. ಅವನಿಗೂ ಅದು ವಿಚಿತ್ರವೆನಿಸಿ ಮರುದಿನ ಬೆಳಿಗ್ಗೆ ಆ ಶಬ್ದ ಬಂದಿದ್ದೇನಿರಬಹುದೆಂದು ಪತ್ತೆ ಮಾಡಲೇಬೇಕೆಂದು ನಿರ್ಧರಿಸಿದೆವು. ಸ್ಥಳ ತಲುಪಿ ಎಚ್ಚರಿಕೆಯಿಂದ ಎಲ್ಲವನ್ನೂ ಪರೀಕ್ಷಿಸಿದಾಗ ನಿನ್ನೆಯ ಘಟನೆಗಳಿಗೆ ವಿವರಗಳು ದೊರಕತೊಡಗಿದವು. ಆ ಭೀಕರ ಸದ್ದು ಮೂಡಿಬಂದ ಸ್ಥಳದಲ್ಲಿ ಭಾರಿ ಕಡವೆಯೊಂದು ಹುಲ್ಲಿನ ನಡುವೆ ಬಿದ್ದಿತ್ತು. ಆಗಷ್ಟೇ ಹಿಂದಿನ ದಿನದ ಭಯಂಕರ ಕೂಗು. ಸಾವೇ ಕುತ್ತಿಗೆಗೆ ಬಂದಂಥ ಭಯದ ಅನುಭವದ ಹಿಂದಿನ ವಿವರ. ಚಿತ್ರಣ ಸ್ಪಷ್ಟವಾಯಿತು.

ಹಿಡಿದ ಬೇಟೆಯೊಂದಿಗೆ ಕುಳಿತಿದ್ದ ಹುಲಿ. ಕಾಡಿನ ದೊಡ್ಡ ಹುಲ್ಲಿನ ನಡುವಿನಲ್ಲಿ ನಾವು ಅದನ್ನು ಅಷ್ಟು ಸಮೀಪಿಸಿದ್ದರ ಅರಿವಾಗದೆ ಕಡೆಯ ಕ್ಷಣದಲ್ಲಿ ಗಾಬರಿಗೊಂಡು ಸಿಟ್ಟಿನಿಂದ ಕೂಗಿದ್ದು ಅದಾಗಿದ್ದಿತ್ತು. ಅಲ್ಲಿಯವರೆಗೆ ಹುಲಿ ಹಾಗೆ ಕೂಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಇದು ಜಿಮ್ ಕಾರ್ಬೆಟ್ ಒಂದೆಡೆ ವಿವರಿಸುವ ಅಪರೂಪದ ಸನ್ನಿವೇಶದಲ್ಲಿ ಬಂದ ಕೂಗಿನ ವಿವರಣೆಗೆ ಸಂಪೂರ್ಣವಾಗಿ ಹೋಲುತ್ತಿತ್ತು. ಇದರೊಂದಿಗೆ ಈ ಗುತ್ತಿಮಾದನ ಮಾರ್ಗದರ್ಶನ, ಈ ವಿಪರೀತ ಪ್ರಾಣಿಗಳಿರುವ ಕಾಡಿನಲ್ಲಿ ಎಷ್ಟು ಅಪಾಯಕಾರಿ ಆಗಬಹುದೆಂದು ಅರಿವಾಯಿತು.

ಇದರ ನಡುವೆ ಬೊಮ್ಮನನ್ನು ನಿಮಗೆ ಸರಿಯಾಗಿ ಪರಿಚಯಿಸಲೇ ಇಲ್ಲ. ಬೊಮ್ಮ ಮುದುಮಲೈ ಕಾಡಿನ ಬೆಟ್ಟಕುರುಬ. ಅಸಾಧಾರಣ ಪ್ರತಿಭೆ ಇದ್ದರೂ ಆತ ವಿಜ್ಞಾನಿಗಳಿಗೆ ಕಾಡಿನ ಜಾಡು ತೋರುವ ಕೆಲಸದಿಂದ ಹಿಂಬಡ್ತಿ ಪಡೆದು ಅಡುಗೆ ಮನೆಗೆ ಸೀಮಿತವಾಗಿದ್ದ ವ್ಯಕ್ತಿ. ಅವನಲ್ಲಿದ್ದ ಅಪ್ರತಿಮ ಕುತೂಹಲ ಮತ್ತು ಹುಚ್ಚು ಸಾಹಸಗಳೇ ಅವನ ಹಿಂಬಡ್ತಿಯ ಹಿಂದಿದ್ದ ಕಾರಣ.
ಮೊದಲಿಗೆ ಜಾಡು ತೋರುವ ಕೆಲಸದಲ್ಲಿ ಮುಂದಾಳತ್ವ ವಹಿಸಿದ್ದ ಬೊಮ್ಮ. ಒಮ್ಮೆ ಮದರಾಸಿನಿಂದ ಬಂದಿದ್ದ ಆನೆ ವಿಜ್ಞಾನಿಯಬ್ಬರಿಗೆ ಜಾಡು ತೋರುತ್ತಾ ಮಹಾನ್ ಅನ್ವೇಷಕನ ಚಿಂತನೆಯಲ್ಲಿ ಕತ್ತಲಾಗುತ್ತಿರುವುದನ್ನು ಮರೆತು ದಟ್ಟಕಾಡಿನ ನಡುವೆ ಸಿಕ್ಕಿಬಿದ್ದ. ನಗರದಿಂದ ಪಿಎಚ್‌ಡಿಗಾಗಿ ಕಾಡಿಗೆ ಬಂದಿದ್ದ ವಿಜ್ಞಾನಿಯನ್ನು ಜೇನುಬಾರೆ ಬೆಟ್ಟದ ನೆತ್ತಿಯಲ್ಲಿ ಕುಳ್ಳಿರಿಸಿ ಬೆಳಗಾದ ಮೇಲೆ ಹೋಗೋಣವೆಂದು ಸಮಜಾಯಿಸಿದ್ದ.

ಆ ರಾತ್ರಿ ಬೊಮ್ಮ ಮತ್ತು ವಿಜ್ಞಾನಿ ಬರದಿದ್ದಾಗ ನಾವೆಲ್ಲಾ ಜೀಪಿನಲ್ಲಿ ಹುಡುಕುತ್ತಾ ಬಂದು ಅವರೆಲ್ಲಾದರೂ ದೂರದಲ್ಲಿ ಇದ್ದರೂ ಕಾಣುವಂತೆ ಸಣ್ಣಪುಟ್ಟ ಗುಡ್ಡಗಳನ್ನು ಹತ್ತಿ ಟಾರ್ಚ್ ಹತ್ತಿಸಿ ಆರಿಸಿ ಮಾಡಿದರೂ ಯಾವುದೇ ಸೂಚನೆ ಸಿಗದೆ ಹಿಂದಿರುಗಿದ್ದೆವು. ಮರುದಿನ ಸುಸ್ತಾದ ವಿಜ್ಞಾನಿಯೊಡನೆ ಹಿಂದಿರುಗಿದ ಬೊಮ್ಮನನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದರು. ಅವರನ್ನೇ ಹುಡುಕಿಕೊಂಡು ಹೋದ ನಮ್ಮ ಜೀಪಿನ ಸದ್ದನ್ನು ಕೂಡ ಗುರುತಿಸದೆ ಅವರೆಲ್ಲೋ ದಂತ ಹೊಡೆಯಲು ಬಂದಿರುವ ಕಳ್ಳರು. ಈ ರಾತ್ರಿ ಇಲ್ಲಿಗೆ ಇನ್ನಾರು ಬರಲು ಸಾಧ್ಯ ಎಂದು ವಿಜ್ಞಾನಿಗೆ ಹೆದರಿಸಿ ಕುಳ್ಳಿರಿಸಿಬಿಟ್ಟಿದ್ದ. ತಡೆಯಲಾರದ ಚಳಿ. ಒದ್ದೆ ಬಂಡೆ, ಹಸಿವು, ಕಗ್ಗತ್ತಲೆಯಲ್ಲಿ ಬರುವ ಅರ್ಥವಾಗದ ಸದ್ದುಗಳಿಂದ ವಿಜ್ಞಾನಿ ಮಾನಸಿಕವಾಗಿ ಸೋತು ಕಂಗೆಟ್ಟು ಹೋಗಿದ್ದ.

ಮತ್ತೊಂದು ಸಲ ದೆಹಲಿಯಿಂದ ವಿಜ್ಞಾನಿಯೊಬ್ಬರು ಮನೆಗೆ ಬಂದಿದ್ದರು. ಕತ್ತಲು ಆವರಿಸಿತ್ತು. ಬೆಳಗಿ ಕಣ್ಮುಚ್ಚುವ ಸೀರಿಯಲ್ ಲೈಟ್‌ಗಳಂತೆ ಮಿಣುಕು ಹುಳುಗಳು ಕತ್ತಲ ಕಾಡಿನ ಗಿಡಗಂಟೆಗಳ ಮೇಲೆ ಬೆಳಕಿನ ಗೆರೆಗಳಿಂದ ಪದ್ಯ ರಚಿಸುತ್ತಿದ್ದವು. ಅಡಿಗೆಯಲ್ಲಿ ತೊಡಗಿದ್ದ ಬೊಮ್ಮ ಕಾಡಿನಂಗಳದಲ್ಲೇನೋ ಸದ್ದನ್ನು ಗಮನಿಸಿದ. ಅಡಿಗೆಯನ್ನಲ್ಲಿಗೆ ನಿಲ್ಲಿಸಿ ಎಡಗೈನಲ್ಲಿ ಟಾರ್ಚ್ ಹಿಡಿದು ಬಂದಿದ್ದ ವಿಜ್ಞಾನಿಯನ್ನು ಇಲ್ಲೇ ಕರಡಿ ಬಂದಿದೆ ಬನ್ನಿ ತೋರಿಸುವೆ ಎಂದು ಕರೆದೊಯ್ದ.  ವಿಜ್ಞಾನಿ ಅಲ್ಲಿಗೆ ಹೊಸಬ. ಗಿಡಮರಗಳನ್ನು ಬಳಸಿಕೊಂಡು ಸಾಗದೆ ಎಡವುತ್ತಾ, ಡಿಕ್ಕಿ ಹೊಡೆಯುತ್ತಾ ಬೊಮ್ಮನ ಟಾರ್ಚ್ ಬೆಳಕಿನ ಹಿಂದೆಯೇ ನೆಡೆದ. ತುಸು ಸಮಯದಲ್ಲಿ ಬೊಮ್ಮ ವಿಜ್ಞಾನಿಯ ಕೈಹಿಡಿದು ನೋಡಿ ಅಲ್ಲಿ ಕರಡಿ ಎಂದ. ಕರಡಿ ಸಹ ಎರಡು ಕಾಲನ್ನೆತ್ತಿ ನಿಂತು ಬಂದ ಬೆಳಕಿನತ್ತ ದೃಷ್ಟಿಸಿತು. ಬೊಮ್ಮ ಕೂಡಲೇ ಟಾರ್ಚ್ ಆಫ್ ಮಾಡಿ ನಿಂತ. ಈ ಬೊಮ್ಮ, ಅವನ ಟಾರ್ಚ್, ಆ ಕರಡಿ, ಸುತ್ತಲ ಕಾಡು ಎಲ್ಲವೂ ಕ್ಷಣಾರ್ಧದಲ್ಲಿ ಕತ್ತಲೆಯಲ್ಲಿ ಕರಗಿಹೋಗುತ್ತಿದ್ದಂತೆ ಗಲಿಬಿಲಿಗೊಂಡ ವಿಜ್ಞಾನಿ ಮನೆಯ ದಿಕ್ಕಿನತ್ತ ಓಡುತ್ತಾ ಕಾಡು ಸೇರಿದ್ದ.

ಅಲ್ಲೇ ಇದ್ದ ಬೊಮ್ಮನಿಗೆ ವಿಜ್ಞಾನಿಯ ಸ್ವಭಾವವೇ ಇಷ್ಟವಾಗಲಿಲ್ಲ. ಇಷ್ಟು ಹತ್ತಿರದಲ್ಲಿ ಕರಡಿ ನೋಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ. ಹೆದರಿ ಮನೆ ಸೇರಿಬಿಟ್ಟನಲ್ಲಾ ಎಂದು ಬೇಸರಿಸಿ ವಾಪಸಾಗಿ ಅಡಿಗೆಯಲ್ಲಿ ತೊಡಗಿಸಿಕೊಂಡ. ಅಡಿಗೆ ಸಿದ್ಧವಾಗಿ ದೆಹಲಿಯ ಅತಿಥಿ ಎಲ್ಲಿ ಎಂದು ಎಲ್ಲರೂ ಹುಡುಕುತ್ತಿದ್ದಾಗ, ಹರಿದ ಶರಟಿನೊಂದಿಗೆ ಏದುಸಿರು ಬಿಡುತ್ತಾ ಚಳಿಯಲ್ಲೂ ಬೆವರುತ್ತಿದ್ದ ವಿಜ್ಞಾನಿ ವಾಪಸಾದ. ನಡೆದ ಘಟನೆ ಎಲ್ಲಾ ಕೇಳಿದ ಮೇಲೆ ಎಲ್ಲರೂ ಬೊಮ್ಮನ ಮೇಲೆ ಸಿಟ್ಟಾದದ್ದು ನಿಜ. ಬೊಮ್ಮ ಮಾತ್ರ ಏನೂ ಆಗದವನಂತೆ ಎಂದಿನಂತೆಯೇ ಇದ್ದು ಇದೇ ರೀತಿ ಪ್ರತಿ ತಿಂಗಳಿಗೊಮ್ಮೆ ಒಂದೊಂದು ಕಥಾಸರಣಿಗಳಿಗೆ ಕಾರಣನಾಗಿದ್ದ. ಆದರೂ ಎಲ್ಲರ ಪಾಲಿಗೆ ಬೊಮ್ಮ ನೆಚ್ಚಿನವನೇ ಆಗಿ ಮುಂದುವರಿಯಲಿಲ್ಲ ಎಂದರೆ ನಾವು ನಂಬುವುದೇ ಇಲ್ಲ. ಆತನಲ್ಲಿದ್ದ ಮುಗ್ಧ ನಗೆ. ಕ್ಷಣದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ ಹುಡುಕುತ್ತಿದ್ದ ಸರಳ, ಸುಲಭ ಪರಿಹಾರಗಳು… ಅವನು ಸೃಷ್ಟಿಸುತ್ತಿದ್ದ ಎಲ್ಲಾ ಅನಾಹುತಗಳನ್ನು ಮರೆ ಮಾಡುತ್ತಿದ್ದವು. ಆದರೂ ಬೊಮ್ಮನೊಂದಿಗೆ ಕಾಡಿಗೆ ಹೋಗುವುದಕ್ಕೆ ಮಾತ್ರ ಎಲ್ಲರೂ ತಿಲಾಂಜಲಿ ಹೇಳಿದ್ದರು.

(ನಿರೂಪಣೆ: ಅಬ್ದುಲ್ ರಶೀದ್)