ಜಾಗತೀಕರಣದ ಹಿಡಿತದಿಂದ ಆಚೆ ಬನ್ನಿ ಎಂಬ ಕರೆಯೊಂದಿಗೆ… ಹೀಗೆ ತಮ್ಮ ಬದುಕನ್ನೆ ನಿದರ್ಶನವಾಗಿಟ್ಟುಕೊಂಡು, ಬರುವ ಯುವ ಸಮುದಾಯವನ್ನು ಪ್ರೀತಿಯಿಂದ ತಮ್ಮ ಬಳಿ ಇಟ್ಟುಕೊಂಡು ಅವರು ಪರಿಶ್ರಮದಿಂದ ಜೀವನ ಪ್ರೀತಿಯನ್ನು ಯಾರ ಹಂಗು ಇಲ್ಲದೆ ಹೇಗೆ ನಿಭಾಯಿಸಬಹುದು ಎಂದು ಅವರಿಗೆ ತೋರಿಸಿಕೊಡುತಿದ್ದ ನಾರಾಯಣ ರೆಡ್ಡಿಯವರು ನಮ್ಮ ಸಮಾಜದಲ್ಲಿ ಇದ್ದುಹೋದ ಒಂದು ಬೃಹತ್ ಗಣಿ. ಕರೆದಷ್ಟೂ ಕೊಡುತಿದ್ದ ಕಾಮಧೇನು.
ಸುಜಾತಾ ತಿರುಗಾಟ ಕಥನ.
ವ್ಯವಸಾಯ ಅಥವಾ ಬೇಸಾಯ ಎನ್ನುವುದು ಕಸುಬು ಎನ್ನುವುದಕ್ಕೆ ಸಾಟಿಯೇ? ಅದಕ್ಕೂ ಮಿಗಿಲು. ಇದೊಂದು ಧ್ಯಾನ. ಎರೆಹುಳು ಅನ್ನುವ ಜೀವಿ ಮಣ್ಣೊಳಗೆ ಹೂತು ಹೋಗಿ ಮಣ್ಣೊಳಗೆ ಕರಗುವ ಅವಶೇಷಗಳನ್ನು ತನ್ನೊಳಗೆ ಅರಗಿಸಿಕೊಳ್ಳುತ್ತಾ ತಾನೂ ಜೀವಿಸುತ್ತ, ಮಣ್ಣನ್ನು ಜೀವಂತವಾಗಿಡುತ್ತ ಫಲವತ್ತತೆಯನ್ನು ಮಣ್ಣಿಗೆ ಮರಳಿಸುತ್ತದೆ. ಈ ತಿರುಗುವ ಚಕ್ರದಲ್ಲಿ ಮಣ್ಣಿಂದಲೇ ಹೊರಟ ಬದುಕು ಮಣ್ಣನ್ನೇ ಮತ್ತೆ ಸೇರುವ ಪ್ರಕ್ರಿಯೆ, ಈ ಪ್ರಕೃತಿಯಲ್ಲಿ ತಾನು ನಿಮಿತ್ತ ಮಾತ್ರ ಎನ್ನುವುದನ್ನು ಮನಗಂಡಂತೆ, ಈ ಎರೆಹುಳು ಮಣ್ಣಿನ ಪದರದೊಳಗೆ ಲೀನವಾಗಿ ಗಳಿಗೆ ಅಳಿದು ಗಳಿಗೆಗಳನ್ನು ನೆಲದ ಮೇಲೆ ತನುವಾಗಿ ಅರಳಿಸುತ್ತದೆ. ಹೀಗೆ ವ್ಯವಸಾಯ ಎನ್ನುವುದೊಂದು ಎರೆಹುಳುವಿನ ಧ್ಯಾನ.
ಅಂತೆಯೇ ತಾನು ಉತ್ತ ಭೂಮಿಯನ್ನೆ ತನ್ನ ಮುಂದಿನ ಪೀಳಿಗೆ ಉಳುತ್ತದೆ. ತಾನು ಉಳುತ್ತಿರುವ ನೆಲ ತನ್ನ ಪೂರ್ವಜರು ಉತ್ತು ಬಿಟ್ಟಿದ್ದೆ ಆಗಿದೆ ಅನ್ನುವುದು ರೈತನ ತಿಳುವಳಿಕೆ. ಆ ತಿಳುವಳಿಕೆಯನ್ನ, ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿಯೂ ನೆಲಕ್ಕೆ ತಾಗಿದ ಬದುಕಿನದ್ದಾಗಿರುತ್ತದೆ. ಹೀಗೆಯೇ ರೈತನೆಂಬುವವನಿಗೆ ಬೇಸಾಯ ಎಂಬುದು ಒಂದು ಜೀವನ ಕ್ರಮ. ಅದೇ ಅವನ ಬದುಕು, ಅದೇ ಅವನ ಸಾವು ಕೂಡಾ ಆಗಿರುತ್ತದೆ. ಅದೇ ಅವನ ಭವಿಷ್ಯವೂ ಆಗಿರುತ್ತದೆ. ಹಳ್ಳಿಗಳು ದೇಶದ ಆಸ್ತಿಗಳು. ಅನ್ನವಿಕ್ಕುವ ತಟ್ಟೆಗಳು. ಬೆವರಹನಿಯನ್ನು ಕರಗಿಸಿ ಅಗುಳಗುಳನ್ನು ಮಣ್ಣಲ್ಲಿ ಅರಳಿಸುವ ಕಲಾಕಾರ ರೈತ. ಅವನಿಗೆ ಅಪಾರವಾದ ಮೌಖಿಕ ಜ್ಞಾನ ಹಾಗೂ ಅಂತರ್ಗತ ತಿಳುವಳಿಕೆ ಎನ್ನುವುದು ಪಾರಂಪರಿಕ ಕೊಡುಗೆಯಾಗಿತ್ತು.
ಇತ್ತು. ಹಾಗೆಯೇ ಇತ್ತು. ಕುಲಕಸಬು ಎನ್ನುವುದು ತನ್ನೆಲ್ಲ ತಿಳುವಳಿಕೆಗಳನ್ನು ಬದುಕು ಹಾಗೂ ಪರಿಸರದ ನಡುವೆ ಅಗಾಧ ಜೀವಕೊಂಡಿಯನ್ನಾಗಿ ಬೆಸೆಯುತಿತ್ತು. ಯಾವಾಗ ಅಕ್ಷರ ಜ್ಞಾನದ ಅರಿವು ಬಂದು ವಿದ್ಯೆ ಎನ್ನುವ ಮಾಯಾಜಾಲ ಬಲೆ ಬೀಸಿತೋ ಅಂದಿನಿಂದ ಕುಲಕಸುಬಿನ ಕೊಂಡಿಗಳು ಕಳಚಿ ಬೀಳುತ್ತ, ಯಾರು? ಯಾವಾಗ? ಯಾವ ಕೆಲಸಗಳನ್ನು ಬೇಕಾದರೂ ಮಾಡಬಹುದು ಎಂಬುವುದರ ಅರಿವು ಬಂದಿತು. ಸುಲಭದ ಹಾಗೂ ಹಣ ಗಳಿಕೆಯ ಮಾರ್ಗಗಳು ಜನಪ್ರಿಯವಾಗಿದ್ದೆ ತಡ, ಮೈಮುರಿದು ಮಾಡುವ ಹಾಗೂ ಅದಕ್ಕೆ ತಕ್ಕ ಹಾಗೆ ಬದುಕನ್ನು ರೂಪಿಸುವ ಕ್ರಮ ಹಳಿತಪ್ಪಿ, ಕುರಿಮಂದೆಯಂತೆ ದಿನ ಹಾಗೂ ತಿಂಗಳ ಗಳಿಕೆಯ ಸುಲಭ ದಾರಿಗಳ ಕಡೆಗೆ ಸಮುದಾಯಗಳು ಹೆಜ್ಜೆ ಹಾಕಿದ ಪರಿಣಾಮ ಈಗಿನ ಕಾಲಮಾನ ಪರಿತಪಿಸಬೇಕಾಗಿದೆ. ಇಂದು ವಾಣಿಜ್ಯ ಸಂಸ್ಥೆಗಳಾಗಿರುವ ಶಿಕ್ಷಣ ಸಂಸ್ಥೆಗಳು ಹತ್ತಾರು ವರುಷಗಳು ಮಕ್ಕಳನ್ನು ಕೂಡುಹಾಕಿ, ಕಷ್ಪಪಟ್ಟು ನೂರಾರು ವಿದ್ಯೆಯ ಡಿಗ್ರಿಗಳ ಗರಿಗಳನ್ನು ಸಿಕ್ಕಿಸಿ ಅವರನ್ನು ಸಮಾಜಕ್ಕೆ ನೂಕುತ್ತವೆ.
ಆನಂತರ ಜೀವನವಿಡೀ ಸಂಬಳ ಎಣಿಸಬಹುದು ಎಂಬ ಪರಿಕಲ್ಪನೆಯಿಂದ ವಲಸೆ ಬಂದ ಹರಯದವರ ಸುಖದ ಕನಸು ಕಾಣುತ್ತ ಹಳ್ಳಿಗಳು ಕೂಡ ಈಗ ಮುಪ್ಪಿಡಿದು ಖಾಲಿ ಆಗುತ್ತಿವೆ. ಪೋಷಕರೆ ಇದನ್ನು ಮನಃಪೂರ್ತಿ ಒಪ್ಪಿ ನಗರಗಳ ಥಳುಕಿಗೆ ತಮ್ಮ ಮಕ್ಕಳನ್ನು ಒಗ್ಗಿಸಿ ಹಿಗ್ಗುವ ಸಾಮಾಜಿಕ ಬದಲಾವಣೆ ಇಂದು ಜನಜೀವನವನ್ನ ಆತಂಕಕ್ಕೆ ಹಾಗೂ ಅಪಾಯಕ್ಕೆ ಒಡ್ಡುತ್ತಿದೆ.
ಇದನ್ನು ಬಾರಿಬಾರಿಗೂ ಹೇಳುತ್ತಲೇ ತಮ್ಮ ಬದುಕಿನ ನಿದರ್ಶನಗಳನ್ನು ವಿವರಿಸುತ್ತಲೇ, ಆಗುತ್ತಿರುವ ಬದಲಾವಣೆಗಳಿಂದ ಉಂಟಾಗುವ ತಲ್ಲಣವನ್ನು ತಡೆದು ನಿಲ್ಲಿಸುವ ಆಸೆಯನ್ನು ತಮ್ಮ ನಿಷ್ಟುರ ಮಾತಿಂದ ನಾರಾಯಣರೆಡ್ಡಿಯವರು ಹೇಳುತ್ತಿದ್ದರು. ಅವರನ್ನು ಕಾಣಲು ಬಂದವರ ಮನವೊಲಿಸುತ್ತಿದ್ದರು. ಬಂದವರನ್ನು ಜಾಗೃತಗೊಳಿಸುತ್ತಿದ್ದರು. ಅವರು ಹೇಳುತ್ತಿದ್ದುದಿಷ್ಟೆ, ‘ನೀವು ವಿದ್ಯಾವಂತರಾಗಿ. ಆದರೆ…. ಬೇಸಾಯ ಅನ್ನೋ ಪಾರಂಪಾರಿಕ ಸರ್ವ ಶ್ರೇಷ್ಠ ಬದುಕನ್ನು ಅನುಮಾನಿಸದೆ, ಪ್ರಾಯೋಗಿಕವಾಗಿ ಅನುಸರಿಸಿ, ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ’.
“ಕೃಷಿ ವಿಶ್ವವಿದ್ಯಾನಿಲಯಗಳು ಏನನ್ನು ಕಲಿಸುತ್ತಿವೆ? ಎಷ್ಟು ರಾಸಾಯನಿಕಗಳನ್ನು ಬೆರೆಸಬಹುದು? ತಿನ್ನುವ ಉಣಿಸಲ್ಲಿ ಸೇರುತ್ತಿರುವ ವಿಷಕಾರಿ ಅಂಶಗಳು ಅವರ ಅರಿವಿಗೆ ನಿಲುಕದ್ದೆ? ಅವರಿಗೆ ಹಾಗೂ ಆಳುವ ವರ್ಗ ಎರಡಕ್ಕೂ ಇದರ ಪ್ರಜ್ಞೆ ಸರಿಯಾಗಿಯೆ ಇದೆ. ಲಾಭದಾಯಕ ಕುಯುಕ್ತಿಗಳಿಗೆ ತಿನ್ನುವ ಅನ್ನವನ್ನೂ ಬಲಿ ಕೊಡುವ ಕಟುಕತನ ಹಾಗೂ ಬೇಜವಾಬ್ದಾರಿ ಹೊಣೆಗಾರಿಕೆ ಸರ್ಕಾರದ್ದು” ಎಂದು ನೊಂದು ಸಾಕ್ಷಿಸಮೇತ ವಿವರಣೆಯೊಂದಿಗೆ ಬಂದವರ ಮುಂದೆ ಅವರು ಸವಾಲು ಹಾಕುತ್ತಿದ್ದರು.
ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಹೇಳಿದ ಮಾತೊಂದು ಇವರ ಮಾತಿನೊಂದಿಗೆ ನೆನಪಿಗೆ ಬರುತ್ತಿದೆ. “ಕೃಷಿಯ ವರದಿಗಾರಿಕೆಗೆ ಈಗ, ಪತ್ರಿಕೆಗಳಲ್ಲಿ ಸರಾಸರಿ ಕೇವಲ ಒಬ್ಬರಿದ್ದರೆ, ಅಪರಾಧದ ವೈಭವೀಕರಣಕ್ಕೆ ಇಡಿ ತಂಡವೇ ಶ್ರಮಿಸುತ್ತಿದೆ. ಇದು ಕೇವಲ ಮೂವತ್ತು ವರುಷದಲ್ಲಿ ಆದ ಅಗಾಧ ಬದಲಾವಣೆ. ಜನರನ್ನು ಆಕರ್ಷಿಸಲು ಮಾಧ್ಯಮ ಅನ್ನುವುದು ಹೆಣಗುತ್ತಿರುತ್ತದೆ. ಅಪರಾಧಕ್ಕೆ ಒದಗುವ ಮನಸ್ಸುಗಳು ಮಾಧ್ಯಮದ ಬಂಡವಾಳವಾಗಿ ಮಾರ್ಪಟ್ಟಿವೆ.”
ನಾರಾಯಣ ರೆಡ್ಡಿಯೆಂಬ ಮಣ್ಣಿನ ಜೀವ
ಅವರ ಮೇಲೆ ಒಂದು ಡಾಕ್ಯುಮೆಂಟರಿ ಮಾಡಲೆಂದು ನಾನು ಅವರ ದೊಡ್ಡಬಳ್ಳಾಪುರದ ತೋಟಕ್ಕೆ ಹಲವು ಬಾರಿ ಹೋಗಿದ್ದೇನೆ. ಕಂಡ ಕೂಡಲೇ ಅವರ ಮಗುವಿನ ನಗೆ, ಬಂದವರಿಗೆ ಅಡುಗೆ ಮಾಡುತ್ತಲೇ ಮಕ್ಕಳಂತೆ ಮಾತನಾಡಿಸಿ ನಗುತಿದ್ದ ಅವರ ಹೆಂಡತಿ, ತೋಟದ ಬಾಗಿಲಲ್ಲೇ ಮುಸುಗುರೆಯುತ್ತ ಹಸಿರುಣ್ಣುವ ದನಗಳು, ತೋಟದಲ್ಲಿ ತಾತನ ಹಿಂದಿಂದೆ ಸಣ್ಣ ಕೆಲಸಕ್ಕೆ ಕೈಯಿಡುತ್ತ ಸುತ್ತುವ ಮೊಮ್ಮಕ್ಕಳು, ಹಸಿ ಗೆಡ್ಡೆ ಗೆಣಸು ಹಣ್ಣುಗಳನ್ನು ಕಿತ್ತು ಕೊಡುತಿದ್ದ ಅಜ್ಜನ ಕೈಗಳು, ಅಪ್ಪನ ಸೈಕಲ್ ಏರಿ ಶಾಲೆಗೆ ಹೋಗುತಿದ್ದ ಮಕ್ಕಳ ಸವಾರಿ, ತಾಯ ಮೊಲೆಯನ್ನು ಗುದ್ದಿ ಹಾಲು ಕುಡಿಯುವ ಆಡುಮರಿ ಎಲ್ಲ ದೃಷ್ಯಗಳು ಕಣ್ಣಿಗೆ ಕಟ್ಟಿದಂತಿವೆ.
ನಾರಾಯಣ ರೆಡ್ಡಿಯವರ ಅಗಾಧ ಓದು ಹಾಗೂ ಭಾಷಾ ಪಾಂಡಿತ್ಯದಿಂದಾಗಿ ಇವರನ್ನು, ದೇಶ ವಿದೇಶಗಳು ಕರೆಸಿ ಉಪನ್ಯಾಸಗಳನ್ನು ಮಾಡಿಸಿವೆ. ಕಲಿತ ಹಾಗೂ ಪ್ರಾಯೋಗಿಕ ತಿಳುವಳಿಕೆಯನ್ನು ಇನ್ನೊಬ್ಬರಿಗೆ ದಾಟಿಸುವ ಅವರ ಹಸಿವು ದಿನನಿತ್ಯವೂ ಅವರ ಮನೆಯ ಮುಂದೆ ನೂರಾರು ಆಸಕ್ತರ ಗುಂಪನ್ನು ಸೃಷ್ಟಿಸುತ್ತಿದ್ದವು. ಆದರೆ ಅದನ್ನು ಅಳವಡಿಸಿಕೊಂಡವರು ಕೇವಲ ಶೇಕಡ ಎರಡರಷ್ಟು ಮಾತ್ರ ಎಂದು ಅವರೇ ಹೇಳುತ್ತಿದ್ದರು.
ಸುಲಭದ ಹಾಗೂ ಹಣ ಗಳಿಕೆಯ ಮಾರ್ಗಗಳು ಜನಪ್ರಿಯವಾಗಿದ್ದೆ ತಡ, ಮೈಮುರಿದು ಮಾಡುವ ಹಾಗೂ ಅದಕ್ಕೆ ತಕ್ಕ ಹಾಗೆ ಬದುಕನ್ನು ರೂಪಿಸುವ ಕ್ರಮ ಹಳಿತಪ್ಪಿ, ಕುರಿಮಂದೆಯಂತೆ ದಿನ ಹಾಗೂ ತಿಂಗಳ ಗಳಿಕೆಯ ಸುಲಭ ದಾರಿಗಳ ಕಡೆಗೆ ಸಮುದಾಯಗಳು ಹೆಜ್ಜೆ ಹಾಕಿದ ಪರಿಣಾಮ ಈಗಿನ ಕಾಲಮಾನ ಪರಿತಪಿಸಬೇಕಾಗಿದೆ.
ಫುಕೊವೊಕಾರಂಥ ಅತಿರಥ ಮಹಾರಥರು, ದೇಶ ವಿದೇಶಗಳ ಆಸಕ್ತರು ನನ್ನಂಥ ಸರಳ ರೈತನ ಜೊತೆಗಿದ್ದು ಹೋದದ್ದು ನನ್ನ ಭಾಗ್ಯ ಎನ್ನುತ್ತಿದ್ದ ಅವರ ಅನುಭವದ ಮಾತು ಸಲೀಸಾದ ಮಾತಲ್ಲ. “ಹಣ್ಣಿರೊ ಮರಕ್ಕೆ ಗಿಣಿ ಬೀಳ್ತಾವೆ” ಅನ್ನೋ ಹಳ್ಳಿಗರ ಅನುಭವದ ಮಾತನ್ನ ಇಲ್ಲಿ ಹೇಳಬಹುದು. ಯಾರೇ ಬರಲಿ, ಅವರು ದಣಿವಿಲ್ಲದೆ, ಅದೇ ಹುಮ್ಮಸ್ಸಿನಿಂದ ಭೇಟಿ ಮಾಡಲು ಬರುವ ಜನರ ಮುಂದೆ ಕುಳಿತು ತಮ್ಮ ಅನುಭವದ ಬುತ್ತಿಯನ್ನು ಹಂಚಿಕೊಳ್ಳುತ್ತಿದ್ದರು. ಅವರು ಬೆಳೆಸಿದ ಗಿಡ ಮರಗಳನ್ನು ತೋರಿಸಿ ಬೀಗುತ್ತಿದ್ದರು. ಆರೋಗ್ಯಕರವಾದ ಗಂಧದಂತೆ ಹಬೆಯಾಡುವ ಅವರ ಭೂಮಿಯ ಮಣ್ಣಿನ ಪರಿಮಳವನ್ನು ನಮ್ಮ ಮೂಗಿಗೆ ತೋರಿಸುತ್ತಿದ್ದರು. ಮರಗಿಡಗಳ ವೈದ್ಯೋಪಚಾರದ ಬಗ್ಗೆ ವಿವರಿಸುತ್ತಾ, ರೈತನ ಆರ್ಥಿಕ ಇತಿಮಿತಿಯನ್ನು ತಿಳಿಸುತ್ತಿದ್ದರು. ಅದರೊಳಗೆ ರೈತರು ರೂಢಿಸಿಕೊಳ್ಳಬೇಕಾದ ಕೊಂಚ ಕಿಲಾಡಿತನವನ್ನೂ ತಿಳಿಸಿಕೊಡುತ್ತಿದ್ದರು.
ಆರೋಗ್ಯದ ಬದುಕು, ಆರೋಗ್ಯಕರವಾದ ಊಟವನ್ನು ಬಂದವರ ಜೊತೆ ಕುಳಿತು ಉಣ್ಣುತ್ತಲೇ, “ಈ ಮರ ಹರಡಿ ನಿಂತು ಚಪ್ಪರವಾಗಿ ಹರಡಿರುವ ನೆರಳಲ್ಲಿ ಕಲ್ಲನ್ನು ಹಾಸಿ ಅದರ ಮೇಲೆ ಮಲಗಿ ಹಾಡೇಳಿಕೊಂಡು ಕೊನೆಗಾಲಕ್ಕೆ ಪ್ರಾಣಬಿಡ್ತೀನಿ” ಅನ್ನುವ ಅವರ ಸ್ಥಿರತೆ, ತೃಪ್ತಿ, ಅಂದು ನಮ್ಮ ಹುಬ್ಬೇರಿಸುತಿತ್ತು. ಹಾಗೆಯೇ ರಾತ್ರಿ ಮಲಗಿದವರು ಇಂದು ಬೆಳಿಗ್ಗೆ ಎದ್ದಿಲ್ಲ. ತಮ್ಮ ಅಗಾಧ ಉತ್ಸಾಹವನ್ನು ತೊರೆದು ರೆಡ್ಡಿಯವರು ಪ್ರಾಣವಾಯುವಿನೊಳಗೆ ಸೇರಿ ಹೋಗಿದ್ದಾರೆ. ಅವರ ಸಾವು ಪರಿಪೂರ್ಣ ಜೀವನದ ಕೊನೆಯಾದರೂ ಇಂದಿನ ಆಸಕ್ತ ಯುವ ರೈತರಿಗೆ ತುಂಬಲಾರದ ನಷ್ಟವಾಗಿದೆ.
‘ರೈತರಾದವರು ಅಗತ್ಯವಿಲ್ಲದ ವಾಹನಗಳಿಂದ ದೂರವಿರಿ. ಅವು ನಿಮ್ಮನ್ನು ಸೋಮಾರಿಯಾಗಿಸುವುದರ ಜೊತೆಗೆ ಅರ್ಥವಿಲ್ಲದ ಪೇಟೆಯ ಗೀಳನ್ನು ಹಬ್ಬಿಸಿ ಹಣಗಳಿಕೆಯ ದುರಾಸೆಯನ್ನು ತಂದೊಡ್ಡಿ ನಿಮ್ಮನ್ನು ದೀನ ಸ್ಥಿತಿಗೆ ತಂದು ಕೆಡುವುತ್ತವೆ. ಸಂದರ್ಭವಿಲ್ಲದ ಅಗತ್ಯವಿಲ್ಲದ ಏನನ್ನೂ ರೂಢಿಸಿಕೊಳ್ಳದಿದ್ದರೆ ಸರಳತೆ ತಾನಾಗೆ ಮೈಗೆ ಒಗ್ಗುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ ‘ ಎಂದು ರೈತರಿಗೆ ಅವರು ಸಾರಿ ಸಾರಿ ಹೇಳುತ್ತಿದ್ದ ಕಿವಿ ಮಾತು.
ಹಸಿರು ಎನ್ನುವುದೇ ನೆಮ್ಮದಿಯ ಹೆಸರು. ಅದಕ್ಕೆ ಶ್ರದ್ದೆ ಹಾಗೂ ತಾಳ್ಮೆ ತಾಳೆಯಾದರೆ ಯಾರ ಹಂಗೂ ಇಲ್ಲದೆ ಜೀವನದ ಸಾರ್ಥಕತೆಯಿದೆ. ಅದನ್ನು ನಾನೂ ಕಂಡುಕೊಂಡಿದ್ದೇನೆ. ನೀವೂ ಆಸಕ್ತಿಯಿರುವವರು ಬನ್ನಿ. ನನ್ನ ತಿಳುವಳಿಕೆಯನ್ನು ನಿಮಗೆ ಸಂಪೂರ್ಣವಾಗಿ ಧಾರೆಯೆರೆಯುತ್ತೇನೆ, ಎನ್ನುತ್ತಿದ್ದ ಇವರು ನಿರರ್ಗಳವಾಗಿ ಗಂಟೆಗಟ್ಟಲೆ ಆಸಕ್ತರೆದುರಿಗೆ ಮಾತನಾಡುತ್ತಿದ್ದರು. ಅವರಿಗೆ, ದಣಿವಾಗುವುದಿಲ್ಲವೇ ಎಂದು ಕೇಳಿದಾಗ …”ಯಾವುದನ್ನೇ ಮಾಡಿ, ಇಷ್ಟಪಟ್ಟು ಮಾಡಿ. ದಣಿವು ಹತ್ತಿರ ಬಾರದು” ಎನ್ನುವ, ಎಂಬತ್ತನಾಲ್ಕು ವಯೋಮಾನದ ಮಾಗಿದ ಜೀವ ಇನಿತೂ ಸೋಲದೆ ಬಂದವರ ಮುಂದೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿತ್ತು.
“ಭೂಮಿಯ ಕಸುಬಿಗೆ ಬಡತನವಿಲ್ಲ. ಅರಿತು ಬಾಳಿದರೆ ಯಾರ ಕೈ ಕೆಳಗೂ ಬೀಳದಂಥ ಒಂದು ಸ್ವಾಭಿಮಾನದ ರೈತನ ಬಾಳನ್ನು ನೀವೂ ಬಾಳಬಹುದು. ಹಸಿರ ಉಸಿರಲ್ಲಿ ನೆಮ್ಮದಿಯಿದೆ” ಎಂದು ಎದೆತಟ್ಟಿ ತಮ್ಮನ್ನು ತೋರುತ್ತಾ, ಆಸಕ್ತರಿಗೆ ಕರೆಕೊಡುತ್ತ, ರೆಡ್ಡಿಯವರು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಲೇ, ತಮ್ಮಹಿರಿಯರನ್ನು ನೆನೆದು ನೊಂದು ನುಡಿಯುತ್ತಿದ್ದರು.
“ವೇದ ಉಪನಿಷತ್ ಕಲಿಸುವ ಮಂದಿ ಬಹು ತಾಳ್ಮೆಯಿಂದ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ತಮ್ಮ ಸಲಹೆ ಸೂಚನೆಗಳಿಂದ ತಮ್ಮ ಮಕ್ಕಳನ್ನು ತಿದ್ದುತ್ತಿದ್ದರು. ನಮ್ಮ ಹಿರಿಯರು ಮೈ ದುಡಿಮೆಯಿಂದ ಆದ ಮೈನೋವಿಗೋ ಏನೋ ತಾಳ್ಮೆ ಕಳೆದುಕೊಂಡು “ಹೋಗೋ ಅತ್ಲಾಗೆ, ಹೇಳ್ದಷ್ಟು ಮಾಡು” ಅಂತ ನಿರ್ಲಕ್ಷಿಸಿದ್ದು ಕೂಡ ಇದಕ್ಕೆ ಕಾರಣ ಇರಬಹುದು ಅಂತ ಹೇಳುತ್ತಿದ್ದರು. ಇಂದು ಸರ್ಕಾರ ತನ್ನ ಮುಂದೆ ರೈತನಿಗೆ ಕೈಯೊಡ್ಡಿ ನಿಲ್ಲುವುದನ್ನು ಕಲಿಸಿಬಿಟ್ಟಿದೆ. ಇದು ದಿಟ. ಹಿಂದಿನ ದಿನಗಳಲ್ಲಿ ಯಾರ ಮುಲಾಜಿಗೂ ಒಳಪಡದೆ ರೈತ ತನ್ನಷ್ಟಕ್ಕೆ ಹರಿಯುವ ನದಿಯಂತೆ ಬದುಕುತಿದ್ದ. ಆ ಸ್ವಾಭಿಮಾನವೆಲ್ಲಿ ಹೋಯಿತು? ಎಂದು ನಾವೂ ಈಗ ಕೇಳಿಕೊಳ್ಳಬೇಕಿದೆ.
ಅದಕ್ಕೆ ಪೂರಕವಾಗಿ ಇಂದು ರೈತನಾಗುವವನು ಶ್ರಮದ ದುಡಿಮೆಯ ಜೊತೆಗೆ ಹೆಮ್ಮೆಯಿಂದ ತನ್ನ ಬದುಕನ್ನು ಸರಳವಾಗಿ ಉಪಾಯವಾಗಿ ಕಟ್ಟಿಕೊಳ್ಳಬೇಕಾಗಿದೆ, ರೂಢಿಸಿಕೊಳ್ಳಬೇಕಿದೆ ಎಂದು ನಿದರ್ಶನಗಳ ಮೂಲಕ ಸುಲಭೋಪಾಯಗಳನ್ನ ಹಾಗೂ ಕರಾರುವಕ್ಕಾದ ಲೆಕ್ಕಾಚಾರಗಳನ್ನು ಅವರು ಮನಮುಟ್ಟುವಂತೆ ತಿಳಿಸಿಕೊಡುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಮುಂದಿದೆ. ಅವರು ವಿವರಣೆಗಳನ್ನು ತಿಳಿಸಿಕೊಡುತ್ತೊದ್ದುದರ ಸ್ಥೂಲ ಪರಿಚಯವು ಹೀಗಿದೆ:
ಸಣ್ಣ ರೈತನೊಬ್ಬನಿಗೆ ಭೂಮಿ ಎಷ್ಟಿರಬೇಕು? ಅದರೊಳಗಿನ ವ್ಯವಸಾಯ ಪದ್ಧತಿ ಹೇಗಿರಬೇಕು? ಮಣ್ಣಿನ ಸುಸ್ಥಿತಿ ಬಗ್ಗೆ ತಮ್ಮ ಅನುಭವ.
ನೀರಿನ ಶೇಖರಣೆ ಹಾಗೂ ಅದರ ಬಳಕೆಯ ಜ್ಞಾನ…
ಸಾವಯವ ಕೃಷಿ ಅನ್ನುವುದು ಲಾಭದಾಯಕವೇ?
ಹವಾಮಾನ ವೈಪರಿತ್ಯಗಳಿಂದ ರೈತ ಪಾರಾಗುವ ಬಗೆ?
ಜಾಗತೀಕರಣದ ಹಿಡಿತದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಬೆಳೆಯ ಮಾರುಕಟ್ಟೆ ಒದಗಿಸಿಕೊಳ್ಳುವುದು ಹೇಗೆ?
ಉಪಬೆಳೆಗಳು ಹಾಗು ಉಪಕಸುಬುಗಳ ಪೂರೈಕೆಗಳ ಜಾಣತನದ ಬಗ್ಗೆ ಮಾಹಿತಿ
ರೈತನೊಬ್ಬನ ಬದುಕಿನ ಸಾರ್ಥಕತೆಗಳೇನು?
ಇನ್ನೂ ಉಳಿದಿರುವ ಕೆಲಸಗಳು ನಿಮ್ಮಲ್ಲಿವೆಯೇ?
ಅವರ ಕುಟುಂಬದ ಸಹಕಾರ ಅವರ ಆಶಯಕ್ಕೆ ಹೇಗೆ ಸಹಕರಿಸಿತು?
ಅವರ ಬದುಕಿನ ಹಾದಿ ಅವರ ತೃಪ್ತಿ?
ಈ ಎಲ್ಲ ಪ್ರಶ್ನೆಗಳಿಗೂ ಅವರ ಸ್ಪಷ್ಟ ಅನುಭಾವಿ ಉತ್ತರಗಳು ಎದುರಿನವರ ಹುಬ್ಬೇರಿಸುವಂತೆ ಮಾಡುತಿತ್ತು. ದೇಶ ವಿದೇಶಗಳಲ್ಲಿ ಉಪನ್ಯಾಸ, ವಿಶ್ವವಿದ್ಯಾನಿಲಯಗಳಿಂದ ಬಂದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಕಮ್ಮಟಗಳು ಇವರಿಂದ ನಡೆಯುತ್ತಿದ್ದವು. ಈಗ ಅವು ಪುಸ್ತಕ ರೂಪದಲ್ಲಿ ನಿಮಗೆ ಸಿಗುತ್ತವೆ. ಹೆಮ್ಮೆಯ ಎಲ್ಲಾ ಗರಿಮೆಯ ಪ್ರಶಸ್ತಿಗಳು, ಹಂಪಿ ವಿ. ವಿ.ಯ ನಾಡೋಜದ ಗರಿಗಳು ಅವರ ತಲೆಯನ್ನಲಂಕರಿಸಿದ್ದರೂ, ಅವರ ಕರ್ಮ ಭೂಮಿಯಲ್ಲಿ ಬರಿಕಾಲಲ್ಲಿ ನಡೆವ ದುಡಿವ ರೈತರಾಗಿಯೇ ಅವರು ಇಂದಿಗೂ ಉಳಿದಿದ್ದರು. ಅಪಾರ ಪ್ರಚಲಿತ ಭಾಷಣಗಳು ಯು ಟ್ಯೂಬಿನಲ್ಲಿ ಹರಿದಾಡಿ ಇಂದಿನ ಯುವಸಮೂಹವನ್ನು ಇವರ ಕರ್ಮಭೂಮಿಯತ್ತ ಎಳೆದುತಂದು, ಅವರನ್ನು ಮತ್ತೆ ಮತ್ತೆ ಇಲ್ಲಿಗೆ ಎಳೆದು ತರುವಂತೆ ಮಾಡುತ್ತಿದ್ದುದು ಅವರ ನೆಲದ ಮಣ್ಣಿನ ವಿಶೇಷ. ಇದು ಅವರು ಬೆಳೆಸಿದ ಹಸಿರಲ್ಲಿ ಕುಳಿತು ಕರೆಯುವ ಹಕ್ಕಿಯ ಕರೆಯಂತೆ ಕಾಣಿಸುತಿತ್ತು.
‘ರೈತರಾದವರು ಅಗತ್ಯವಿಲ್ಲದ ವಾಹನಗಳಿಂದ ದೂರವಿರಿ. ಅವು ನಿಮ್ಮನ್ನು ಸೋಮಾರಿಯಾಗಿಸುವುದರ ಜೊತೆಗೆ ಅರ್ಥವಿಲ್ಲದ ಪೇಟೆಯ ಗೀಳನ್ನು ಹಬ್ಬಿಸಿ ಹಣಗಳಿಕೆಯ ದುರಾಸೆಯನ್ನು ತಂದೊಡ್ಡಿ ನಿಮ್ಮನ್ನು ದೀನ ಸ್ಥಿತಿಗೆ ತಂದು ಕೆಡುವುತ್ತವೆ. ಸಂದರ್ಭವಿಲ್ಲದ ಅಗತ್ಯವಿಲ್ಲದ ಏನನ್ನೂ ರೂಢಿಸಿಕೊಳ್ಳದಿದ್ದರೆ ಸರಳತೆ ತಾನಾಗೆ ಮೈಗೆ ಒಗ್ಗುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ ‘ ಎಂದು ರೈತರಿಗೆ ಅವರು ಸಾರಿ ಸಾರಿ ಹೇಳುತ್ತಿದ್ದ ಕಿವಿ ಮಾತು.
ಜಾಗತೀಕರಣದ ಹಿಡಿತದಿಂದ ಆಚೆ ಬನ್ನಿ ಎಂಬ ಕರೆಯೊಂದಿಗೆ… ಹೀಗೆ ತಮ್ಮ ಬದುಕನ್ನೆ ನಿದರ್ಶನವಾಗಿಟ್ಟುಕೊಂಡು, ಬರುವ ಯುವ ಸಮುದಾಯವನ್ನು ಪ್ರೀತಿಯಿಂದ ತಮ್ಮ ಬಳಿ ಇಟ್ಟುಕೊಂಡು ಅವರು ಪರಿಶ್ರಮದಿಂದ ಜೀವನ ಪ್ರೀತಿಯನ್ನು ಯಾರ ಹಂಗು ಇಲ್ಲದೆ ಹೇಗೆ ನಿಭಾಯಿಸಬಹುದು ಎಂದು ಅವರಿಗೆ ತೋರಿಸಿಕೊಡುತಿದ್ದ ನಾರಾಯಣ ರೆಡ್ಡಿಯವರು ನಮ್ಮ ಸಮಾಜದಲ್ಲಿ ಇದ್ದುಹೋದ ಒಂದು ಬೃಹತ್ ಗಣಿ. ಕರೆದಷ್ಟೂ ಕೊಡುತಿದ್ದ ಕಾಮಧೇನು.
ಇಂಥವರ ಅಪಾರ ತಿಳುವಳಿಕೆಯನ್ನು ಆಸಕ್ತಿ ಇದ್ದವರು ಬಂದು ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಸಣ್ಣ ರೈತನ ಹಾಗೂ ಕುಲಕಸಬುಗಳ ಸರಳ ಜೀವನ ಅನ್ನುವುದು ದೇಶವನ್ನು ಆರೋಗ್ಯವಾಗಿ ಹಾಗೂ ಸ್ವತಂತ್ರವಾಗಿ ಇಡಬಲ್ಲದು ಎಂಬುದು ಗಾಂಧೀಜಿಯವರ ಆಶಯ ಹಾಗೂ ನಿದರ್ಶನವಾಗಿತ್ತು. ದೇಶವನ್ನು ಪರಕೀಯರ ಆಳ್ವಿಕೆಯಿಂದ ಬಿಡಿಸಿಕೊಳ್ಳುವ ಯತ್ನದಲ್ಲಿ ತಮ್ಮನ್ನೇ ತಾನು ಪ್ರಯೋಗಕ್ಕೊಡ್ಡಿಕೊಂಡ ಗಾಂಧಿ ಮಹಾತ್ಮನ ತಿಳುವಳಿಕೆಯಿಂದ, ಸರಳ ಪ್ರಯೋಗಗಳಿಂದ ಆದ ಜ್ಞಾನೋದಯವಿದು.
ಆದರೆ ಅದಕ್ಕೂ ಮೊದಲು ರೈತ ಪರಂಪರೆ ಎಂಬುದು ಕಟ್ಟಿಕೊಂಡ ಸಮುದಾಯ ಪ್ರಜ್ಞೆ ಕೂಡ ಇದೇ ಆಗಿತ್ತು. ಹಳೇ ಬೇರುಗಳೇ ಹೊಸ ಬೀಜವನ್ನು ಗಾಳಿಯಲ್ಲಿ ತೂರಿಬಿಡುವುದು ನಮ್ಮ ಮುಂದಿರುವ ಸತ್ಯ. ಬಂದವರೆಲ್ಲರೊಂದಿಗೆ ಪುಟಿಯುತ್ತಾ ಓಡಾಡುತಿದ್ದ ಇನ್ನೂ ಹತ್ತು ವರ್ಷದ ತಮ್ಮ ಕನಸಿನ ರೂಪುರೇಷೆಗಳೊಂದಿಗೆ ಬದುಕಿದ್ದ ರೆಡ್ಡಿಯವರ ಚಟುವಟಿಕೆಯನ್ನು ನೋಡಬೇಕಿತ್ತು. ಎಂಬತ್ತು ವರ್ಷದ ಅನುಭವದ ಧಾರೆಯಲ್ಲಿ ಮಿಂದ ಜೀವದ ಬದುಕಿನ ಉತ್ಸಾಹ, ಇಪ್ಪತ್ತು ವರ್ಷದ ಹರಯದಲ್ಲೆ ಹತಾಶೆಯನ್ನು ತಂದೊಡ್ಡುತ್ತಿರುವ ಯಾಂತ್ರಿಕತೆಯ ಇಂದಿನ ಸಮಾಜಕ್ಕೆ ಸವಾಲು ಹಾಕಿ ನಿಲ್ಲುವಂತೆ…..
ತನ್ನಲ್ಲಿ ಇರುವ ಗರಿಷ್ಠ ಬೆಲೆಯನ್ನು ಮುಟ್ಟಿರುವ ಜಮೀನನ್ನು ಮಾರಿ ಅದರ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಾಮಾಜಿಕ ಕೊಡುಗೆಯ ರೂಪದಲ್ಲಿ ಒಂದು ಕಾಡನ್ನು ಬೆಳೆಸಿ ಬಿಟ್ಟು ಹೋಗಬೇಕು ಅನ್ನುವ ಅವರ ಆಸೆಯೊಂದನ್ನು, ಸಾವು ತೀರದ ಉತ್ಸಾಹದ ಅವರ ಕೈಕಟ್ಟೆ ಹಾಕಿ ನೆಲಕ್ಕೆ ಕೆಡವಿದೆ. ಕಾಫಿ ತೋಟದ ಆಸೆಬುರುಕರಿಂದ ನಾಶವಾಗಿರುವ ಪಶ್ಚಿಮ ಘಟ್ಟದ ಹಸಿರನ್ನು ಒಂದು ನೂರು ಎಕರೆಯಷ್ಟಾದರೂ ಕಾಡನ್ನು ಬೆಳೆಸುವ ಮೂಲಕ, ಬಯಲು ಸೀಮೆಗೆ ತರಬೇಕೆಂಬ ಆಸೆ ಅವರೊಂದಿಗೇ ಹೊರಟು ಹೋಗಿದೆ. ಅವರ ತೋಟದಲ್ಲಿ ಇದಕ್ಕೆ ಸಾಕ್ಷಿಯಾಗಿ ಮೆಣಸು ಆದಾಯ ಬೆಳೆಯಾಗಿದೆ. ಸಣ್ಣ ಕಾಡಿನ ಸ್ವರೂಪ ಹೊಂದಿರುವ ಗಿಡ ಮರದ ನೆರಳಲ್ಲಿ ಹತ್ತಾರು ಕಾಫಿ ಹಣ್ಣಿನ ಗೊಂಚಲನ್ನು ಹೊತ್ತ ಗಿಡಗಳು ಬೆಳೆದಿವೆ. ಆಶಯ ಸಮರ್ಪಕವಾಗಿದ್ದರೆ ಪರಿಣಾಮವೂ ಸರಿಯಾಗಿಯೇ ಆಗುತ್ತದೆ ಎನ್ನುವುದು ನಿಜ ತಾನೇ?
ಅವರ ಜೀವವಾಗಿದ್ದ ಕುಟುಂಬದ ಮೊಮ್ಮಕ್ಕಳಿಗೆ ಇನ್ನಷ್ಟು ತರಬೇತಿಯನ್ನು ನೀಡಲು ಅವರಿರಬೇಕಿತ್ತೇನೋ? ಅನ್ನಿಸುತ್ತಿದೆ. ಮಗುವಿನಂತೆ ಮಾತಾಡುತ್ತ ಅವರ ಕಣ್ಣಾಗಿದ್ದ ಅವರ ಹೆಂಡತಿ ದಿನವಿಡೀ ಇರುವೆಯಂತೆ ದುಡಿಯುತ್ತ ಅವರ ಜೊತೆಗಿರುತಿದ್ದರು. ಅವರ ಮಗ ಸೊಸೆ ಒರಟು ಕೆಲಸಗಳನ್ನು ನುರಿಯುತ್ತ ದುಡಿಯುತ್ತಿದ್ದರು. ಮಗನಿಗೆ ಹಣದ ವ್ಯವಹಾರಗಳನ್ನು ಹೇಳುತ್ತಿದ್ದ ರೆಡ್ಡಿಯವರ ಮಾತು ಇನ್ನೂ ಕಿವಿಯಲ್ಲಿವೆ.
“ಮನೆಯ ವ್ಯವಹಾರಗಳು ಪಾರದರ್ಷಕವಾಗಿದ್ದರೆ ಮಾತ್ರ ನಿಮ್ಮ ಮಾತನ್ನು ಮಕ್ಕಳು ನಂಬುತ್ತಾರೆ. ಬ್ಯಾಂಕಿನ ಉಳಿತಾಯವನ್ನು ನನ್ನ ಮಗನೇ ನೋಡಿಕೊಳ್ಳುತ್ತಾನೆ.” ಮುಂದಿನ ಪೀಳಿಗೆಯನ್ನು ನಯವಾಗಿ ತಿದ್ದುವ ಅವರನ್ನು ಮೆಚ್ಚಲೇಬೇಕು. ಅವರನ್ನು ನಂಬುತ್ತಿದ್ದ ಕಿರಿಯ ಜೀವಗಳ ಗುಟ್ಟು ಇದೇ. ತಾನೇ ಪ್ರಯೋಗಕ್ಕೆ ಒಳಪಟ್ಟರೆ ತನ್ನ ಪ್ರಯೋಗಕ್ಕೆ ಅರ್ಥವಿರುತ್ತದೆ.
ದೇವನೂರ ಮಹಾದೇವರ ಒಂದು ಮಾತು ಈಗಿನ ತಾಪಮಾನದ ಬದುಕಿನ ಸೂಕ್ತಿಯಂತಿದೆ. “ಯುದ್ಧಗಳು, ರಕ್ತಸಿಕ್ತ ಜಗಳಗಳು ಹಿಂದೆ ಭೂಮಿ ಸಂಪತ್ತಿಗಾಗಿ ನಡೆಯುತ್ತಿದ್ದವು. ಒಂದನೆ ಮಹಾಯುದ್ಧ, ಎರಡನೆ ಮಹಾಯುದ್ಧ, ಆಗಿಹೋಗಿದ್ದಾವೆ. ಯಾರಿಗಾಗಿ ಆದವು? ತಿಳಿದಿಲ್ಲ. ಆದರೆ ಮೂರನೆ ಮಹಾಯುದ್ಧ ಆಗಲೆ ಒಳಗೊಳಗೆ ಬಹುರಾಷ್ಟ್ರೀಯ ಕಂಪೆನಿಗಳಿಂದ ಹೊರಗೆ ತಿಳಿಯದಂತೆ ಜಗತ್ತಿನೆಲ್ಲೆಡೆ ಶುರುವಾಗಿದೆ. ೯೯ ಭಾಗ ಆಗಲೇ ಆಕ್ರಮಿಸಿರುವ ಈ ದಾಳಿಯಿಂದ ಎಷ್ಟು ಪಾಲಿನ ಜಗತ್ತು ನೋವಿನಿಂದ, ನಷ್ಟದಿಂದ ಉಳಿಯುತ್ತದೋ ತಿಳಿದಿಲ್ಲ. ಇಂಥ ಆಂತರಿಕ ತಲ್ಲಣದಿಂದ ದೂರ ಇರಬೇಕೆಂದರೆ ಎಚ್ಚೆತ್ತುಕೊಳ್ಳಬೇಕಾದವರು ನಾವೇ”.
ಇದನ್ನು ಹಿರಿಯಜೀವ ರೆಡ್ದಿಯವರು ತಮ್ಮ ಪ್ರಾತ್ಯಕ್ಷಿಕೆಯ ಮೂಲಕ ತೋರುತ್ತಿದ್ದರು. ಅವರ ಅಗಾಧ ಓದು, ಪರಿಶ್ರಮ, ಜನರ ಒಡನಾಟ, ಸ್ವಾಭಿಮಾನ, ಭಾಷಾ ಪ್ರಭುತ್ವ ಅವರನ್ನು ಅಚ್ಚರಿಯ ಕಣ್ಗಳಿಂದ ನೋಡುವಂತೆ ಮಾಡುತಿತ್ತು. ಅವರು ನಿತ್ಯವೂ ಯುವಕರ ಕೈಗೆ ಹಚ್ಚಿಕೊಡುತಿದ್ದ ಕೈ ದೀಪ ಮತ್ತೊಂದಷ್ಟು ಯುವ ಸಮೂಹಕ್ಕೆ ತಲುಪಲಿ. ಈ ಜಗತ್ತು ಬೆಳೆದುಳಿಯಲಿ. ಒಕ್ಕಲುತನದ ಬದುಕು ನೆಲದ ಮೇಲಿನ ಬದುಕಿಗೆ ಅರ್ಥ ಬರಲಿ.
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.