Advertisement
ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗಿಳಿಗಳು ಗೂಡುಗಳನ್ನು ನಿರ್ಮಿಸುವುದಿಲ್ಲ, ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ, ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಈ ಅವಧಿಯಲ್ಲಿ, ಹೆಣ್ಣು ಗಿಳಿಗಳು 2-8 ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ 17-20 ದಿನಗಳ ಕಾಲ, ಕಾವು ಕೊಡುವ ಇಡೀ ಕೆಲಸವನ್ನು ಹೆಣ್ಣು ಹಕ್ಕಿಯೇ ನಿರ್ವಹಿಸುತ್ತದೆ. ಆ ಸಮಯದಲ್ಲಿ ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂದಲೆ ಗಿಳಿ ಕುರಿತ ಬರಹ ಇಲ್ಲಿದೆ

ಗಿಳಿಗಳು ಎಲ್ಲರಿಗೂ ಸುಪರಿಚಿತ ಹಕ್ಕಿಗಳು. ಇವು ಸಿಟ್ಟಸಿಫೋರ್ಮಿಸ್ ಎಂಬ ವರ್ಗಕ್ಕೆ ಸೇರಿದ ಪಕ್ಷಿಗಳು. ಮಧ್ಯಮ ಗಾತ್ರದ ಅತ್ಯಂತ ಸುಂದರವಾದ, ಅಚ್ಚಹಸಿರು ಬಣ್ಣದ, ಸಪೂರ ದೇಹದ, ನೀಳವಾದ ಬಾಲವುಳ್ಳ, ಹಕ್ಕಿಗಳು. ಭಾರತೀಯ ಸಂಸ್ಕೃತಿಗಳಲ್ಲಿ, ಪುರಾಣಗಳಲ್ಲಿ ಗಿಳಿಗಳ ಉಲ್ಲೇಖವಿದೆ.

ಕರ್ನಾಟಕದಲ್ಲಿ ಐದು ಪ್ರಭೇದದ ಗಿಳಿಗಳಿವೆ. ಈವತ್ತು ನಾವು ತಿಳಿದುಕೊಳ್ಳಲು ಹೊರಟಿರುವುದು ಕೆಂದಲೆ ಗಿಳಿಯ ವಿಚಾರ. ಇಂಗ್ಲೀಷಿನಲ್ಲಿಈ ಹಕ್ಕಿಯನ್ನು Plum-headed Parakeet ಎಂದೂ ವೈಜ್ಞಾನಿಕವಾಗಿ Psittacula cyanocephala ಎಂದೂ ಕರೆಯುತ್ತಾರೆ. ಇವುಗಳ ಗಾತ್ರ 36 ಸೆಂಮೀ. ಗಂಡು ಹಕ್ಕಿಗೆ ದುಂಡಾದ ನೇರಳೆಗೆಂಪು ತಲೆ; ಭುಜದಲ್ಲಿ ಅಚ್ಚಗೆಂಪು ಪಟ್ಟಿ; ಹಳದಿ ಕೊಕ್ಕು; ಬಾಲದ ತುದಿ ಬಿಳಿ. ಹೆಣ್ಣು ಹಕ್ಕಿಗೆ ಬೂದು ತಲೆ, ಅಲ್ಲದೆ ಸರವಾಗಲೀ, ಭುಜಪಟ್ಟಿಯಾಗಲೀ ಇರುವುದಿಲ್ಲ. ಎಲ್ಲ ಗಿಳಿಗಳಿಗೂ ಅತಿ ಪ್ರಮುಖ ಶಾರೀರಿಕ ಲಕ್ಷಣವೆಂದರೆ ಕೊಕ್ಕು. ಗಿಳಿಯ ಮೇಲ್ಕೊಕ್ಕು ದೊಡ್ಡದಾಗಿದ್ದು, ಕೆಳಮುಖವಾಗಿ ಬಾಗಿ ತುದಿಯಲ್ಲಿ ಚೂಪಾಗಿರುತ್ತದೆ. ಕೆಳಕೊಕ್ಕು ಚಿಕ್ಕದಾಗಿದ್ದು ಮೊನಚಾದ ಅಂಚನ್ನು ಹೊಂದಿದೆ. ಹೀಗಾಗಿ, ಕೊಕ್ಕು ಬೀಜಗಳನ್ನು ಒಡೆಯುವಷ್ಟು ಪ್ರಬಲವಾಗಿದೆ.

ಕೆಂದಲೆ ಗಿಳಿಗಳ ದೃಷ್ಟಿ ಸಾಮರ್ಥ್ಯವೂ ತುಂಬಾ ಹೆಚ್ಚಾಗಿರುತ್ತದೆ. ಅಲ್ಲದೆ, ಅವು ಸೂರ್ಯನಿಂದ ಹೊರಬರುವ ಅತಿನೇರಿಳೆ ಕಿರಣಗಳನ್ನು ಸಹ ನೋಡಬಲ್ಲವು.

ಗಿಳಿಗಳಿಗೆ ಝೈಗೋಡಾಕ್ಟೈಲ್ ಫೂಟ್, ಅಂದರೆ ಅವುಗಳ ನಾಲ್ಕು ಕಾಲ್ಬೆರಳುಗಳಲ್ಲಿ ಎರಡು ಬೆರಳುಗಳು ಮುಂದೆ, ಎರಡು ಹಿಂದೆ ಇರುತ್ತವೆ. ಇದು ತಮ್ಮ ಪಾದಗಳಿಂದ ಕೊಂಬೆಯನ್ನು ಮತ್ತು ವಸ್ತುಗಳನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿಯಲು ಅನುವು ಮಾಡಿಕೊಡುತ್ತದೆ.

ಕೆಂದಲೆ ಗಿಳಿ ಸಸ್ಯಾಹಾರಿ ಪಕ್ಷಿ. ಅದರ ಮುಖ್ಯ ಆಹಾರವೆಂದರೆ ಬೀಜಗಳು, ಕಾಳು, ಹಣ್ಣುಗಳು, ತರಕಾರಿಗಳು, ಮೊಗ್ಗು, ಮಕರಂದ, ಮತ್ತು ಪರಾಗರೇಣು, ಮತ್ತಿತರ ಸಸ್ಯಜನ್ಯ ವಸ್ತುಗಳು. ಅಲ್ಲದೆ, ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ. ಆದರೆ ಸಾಮಾನ್ಯವಾಗಿ ಬೀಜಗಳು ಗಿಳಿಗಳಿಗೆ ಅತಿ ಮುಖ್ಯ ಆಹಾರವಸ್ತು. ಬೀಜವನ್ನು ತಮ್ಮ ಕೊಕ್ಕಿನಿಂದ ಕಡಿದು, ಒಡೆದು ಒಳಗಿರುವ ತಿರುಳನ್ನು ಗಿಳಿಯು ಬಲು ಸರಾಗವಾಗಿ ಹೊರತೆಗೆಯಬಲ್ಲದು.

ಕೆಂದಲೆ ಗಿಳಿಗಳು ದೊಡ್ಡ ಹಿಂಡಿನಲ್ಲಿ ಇದ್ದರೂ, ಜೀವನಪರ್ಯಂತ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಸಂಗಾತಿಗಳ ನಡುವಿನ ಬಾಂಧವ್ಯ ಗಾಢವಾಗಿದ್ದು ಎಲ್ಲಾ ಕಾಲಗಳಲ್ಲಿ ಜೋಡಿಯಾಗಿಯೇ ಇರುತ್ತವೆ. ಸಂಗಾತಿಯನ್ನು ಹುಡುಕುವ ಸಲುವಾಗಿ, ಒಂದು ಗಂಡು ಗಿಳಿ ಹೆಣ್ಣನ್ನು ಆಕರ್ಷಿಸಲು ವಿವಿಧ ಪ್ರಣಯದ ಪ್ರದರ್ಶನವನ್ನೂ ಮಾಡುತ್ತದೆ.

ಗಿಳಿಗಳು ಗೂಡುಗಳನ್ನು ನಿರ್ಮಿಸುವುದಿಲ್ಲ, ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ, ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಈ ಅವಧಿಯಲ್ಲಿ, ಹೆಣ್ಣು ಗಿಳಿಗಳು 2-8 ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ 17-20 ದಿನಗಳ ಕಾಲ, ಕಾವು ಕೊಡುವ ಇಡೀ ಕೆಲಸವನ್ನು ಹೆಣ್ಣು ಹಕ್ಕಿಯೇ ನಿರ್ವಹಿಸುತ್ತದೆ. ಆ ಸಮಯದಲ್ಲಿ ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು. ಮರಿಗಳು ಬೆಳೆದು, ಗೂಡು ಬಿಡಲು ಸಿದ್ಧವಾಗುವವರೆಗೆ ಎರಡೂ ಗಿಳಿಗಳು ಮರಿಗಳನ್ನು ನೋಡಿಕೊಳ್ಳುತ್ತವೆ.

ಕೆಂದಲೆ ಗಿಳಿ ಕೊಂಬೆಯ ಮೇಲೆ ಕುಳಿತಿರುವಾಗಲಾಗಲೀ, ಹಾರುವಾಗಲಾಗಲೀ ಚುಂಯ್?… ಚುಂಯ್?.. ಎಂದು ಪ್ರಶ್ನಾರ್ಥಕವಾಗಿ ಕೂಗುತ್ತವೆ.

ಕೆಂದಲೆ ಗಿಳಿಗಳು ಬೀಜ ಪ್ರಸರಣ ಮತ್ತು ಪರಾಗಸ್ಪರ್ಶಕ್ರಿಯೆಯಲ್ಲಿ ಪ್ರಮುಖ ಪರಿಸರ ಪಾತ್ರಗಳನ್ನು ನಿರ್ವಹಿಸುತ್ತವೆ. ಅಲ್ಲದೆ, ಬುದ್ಧಿವಂತಿಕೆ ಮತ್ತು ಸಂಕೀರ್ಣ ನಡುವಳಿಕೆಗಳನ್ನು ಕಲಿಯುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಬೆಳೆದು ನಿಂತ ಪೈರಿರುವ, ರೈತರ ಹೊಲ-ಗದ್ದೆಗಳಲ್ಲಿ, ದಾಂಧಲೆ ಎಬ್ಬಿಸುವುದಲ್ಲದೆ, ತೋಟಗಳಲ್ಲಿ ಹಣ್ಣುಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ, ಅವುಗಳನ್ನು ತಮ್ಮ ಕೊಕ್ಕಿನಿಂದ ಕುಕ್ಕಿ, ಕುಕ್ಕಿ, ನಾಶಪಡಿಸುವುದೇ ಹೆಚ್ಚು! ಇಷ್ಟಾದರೂ, ತಮ್ಮ ಆಕರ್ಷಕ ನಿಲುವು, ಗುಂಪಾಗಿ ಹಾರಾಡುವ ವೇಗ, ಲಾಲಿತ್ಯ, ಕರಾರುವಾಕ್ಕಾದ ರೆಕ್ಕೆ ಬಡಿತ, ಇವೆಲ್ಲವುಗಳಿಂದ ಕೆಂದಲೆ ಗಿಳಿಗಳು ಚಿತ್ತಾಕರ್ಷಕ ಮತ್ತು ಮನಸ್ಸಿಗೆ ಮುದನೀಡುವ ಹಕ್ಕಿಗಳು. ಗಿಳಿಗಳು ಮಾನವನ ಅತಿ ಪ್ರಿಯವಾದ ಸಾಕುಪಕ್ಷಿ. ಆದರೆ, ಭಾರತದಲ್ಲಿ ಗಿಳಿಗಳನ್ನು ಪಂಜರದಲ್ಲಿ ಇಡುವುದು ಕಾನೂನು ಬಾಹಿರ ಎಂಬುದನ್ನು ನಾವು ನೆನಪಿಡಬೇಕು.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ