ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು. ಆದರೆ ಈ ತಪ್ಪು ಕಲ್ಪನೆ ನಮ್ಮಲ್ಲಿರುವ ಸಾಮಾಜಿಕ ಚಿಂತನೆಯ ಭಾಗವಷ್ಟೇ…
ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ”ಇಂದಿನಿಂದ ಪ್ರತಿ ಶುಕ್ರವಾರಗಳಂದು
ವಿದೇಶಿ ಪ್ರವಾಸಾನುಭವ ಅಂದರೇನು?
ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು. ಆದರೆ ಈ ತಪ್ಪು ಕಲ್ಪನೆ ನಮ್ಮಲ್ಲಿರುವ ಸಾಮಾಜಿಕ ಚಿಂತನೆಯ ಭಾಗವಷ್ಟೇ.
ಹೊರ ದೇಶಗಳಿಗೆ ಹೋಗದೆ ಕೂಡ ನಾವು ಅಲ್ಲಿಯ ಅನುಭವ ಪಡೆಯಬಹುದೇ? ಅಂತಹ ಅನುಭವಗಳನ್ನು ಕುರಿತು ಬರೆಯಬಹುದೇ? ಹಾಗಿದ್ದರೆ, ನಾನೇಕೆ ಬರೆಯಲಿಲ್ಲ?
1986ರಲ್ಲಿ ಸುಮಾರು ಹತ್ತು ಹನ್ನೆರಡು ವಾರಗಳ ಕಾಲ ವಿದೇಶಿ ಅಧಿಕಾರಿಗಳ ಒಂದು ತಂಡದೊಡನೆ ದಿನವೂ ವಾಸ ಮಾಡುವ, ಒಡನಾಡುವ ಅವಕಾಶ ದೊರಕಿತ್ತು. ಕಾಮನ್‌ವೆಲ್ತ್ ಒಕ್ಕೂಟದ ಬೇರೆ ಬೇರೆ ದೇಶಗಳಿಗೆ ಸೇರಿದ ತೆರಿಗೆ ಅಧಿಕಾರಿಗಳು ನಾಗಪುರದ National Academy of Direct Taxes ನಲ್ಲಿ ತರಬೇತಿ ಪಡೆಯಲೆಂದು ಬಂದಿದ್ದಾಗ ನಾನು ಆ ತರಬೇತಿ ಕಾರ್ಯಕ್ರಮದ ಸಹಾಯಕ ಯೋಜನಾ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಬಾಂಗ್ಲಾ, ಸೈಪ್ರಸ್, ಶ್ರೀಲಂಕಾ, ಕೆರೀಬಿಯನ್ ದ್ವೀಪಗಳಿಂದ ಬಂದವರು, ಆಫ್ರಿಕಾ ಒಕ್ಕೂಟದವರು ಹೀಗೆ. ಇವರೆಲ್ಲ ತಮ್ಮ ಸಮಾಜವನ್ನು, ಭಾರತವನ್ನು, ಬ್ರಿಟನ್ ಅನ್ನು, ಉಳಿದ ಕಾಮನ್‌ವೆಲ್ತ್ ದೇಶಗಳನ್ನು ಯಾವ ರೀತಿಯಲ್ಲಿ ನೋಡುತ್ತಾರೆ ಎಂದು ತಿಳಿಯುವ, ಚರ್ಚಿಸುವ ಅವಕಾಶ. ಇವರಲ್ಲೇ ಒಳಗುಂಪುಗಳಿದ್ದವು – ಬಿಳಿಯರು, ಕರಿಯರು ಮಾತ್ರವಲ್ಲ, ಕಪ್ಪು ಜನಾಂಗದೊಳಗೇ ನಾನಾ ರೀತಿಯ ಪಂಗಡಗಳು. ಆಹಾರ ಪದ್ಧತಿ ಎಂದರೆ ಸಸ್ಯಾಹಾರಿ, ಮಾಂಸಾಹಾರಿ ಎಂಬ ಸ್ಥೂಲ ವಿಭಾಗ ಮಾತ್ರವೇ ನನಗೆ ಗೊತ್ತಿದ್ದುದು. ಆದರೆ ಮಾಂಸಾಹಾರದೊಳಗೆ ಇರುವ ವೈವಿಧ್ಯ, ಪ್ರಭೇದಗಳು ನನಗೆ ಗೊತ್ತೇ ಇರಲಿಲ್ಲ. ಸರ್ಕಾರಿ ಇಲಾಖೆಗೆ ಸೇರಿದ ನಮ್ಮ ಹಾಸ್ಟೆಲ್‌ನಲ್ಲಿ ಅಷ್ಟೊಂದು ವೈವಿಧ್ಯಮಯವಾದ ಮಾಂಸಾಹಾರವನ್ನು ಒದಗಿಸುವ ಅನುಕೂಲವೂ ಇರಲಿಲ್ಲ. ಕೆರೀಬಿಯನ್ ದ್ವೀಪಗಳ ಅಧಿಕಾರಿಗಳು ಸೂಚಿಸುತ್ತಿದ್ದ ಎಷ್ಟೋ ಖಾದ್ಯಗಳು ನಾಗಪುರದ ದೊಡ್ಡ ದೊಡ್ಡ ಹೋಟೆಲ್‌ನವರಿಗೂ ಕೂಡ ಗೊತ್ತಿರಲಿಲ್ಲ. ಅಧಿಕಾರಿಗಳೇನೋ ವಾರಾಂತ್ಯದಲ್ಲಿ ಮುಂಬೈಗೆ ಹೋಗಿ ಸ್ಟಾರ್ ಹೋಟೆಲ್‌ಗಳಲ್ಲಿ ಊಟ ಮಾಡಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಅವರು ವಿದೇಶಿ ಅಧಿಕಾರಿಗಳಾಗಿದ್ದರಿಂದ, ಅವರೆಲ್ಲರ ರಕ್ಷಣೆಯ ಭಾರವೂ ನಮ್ಮ ಮೇಲಿದ್ದುದರಿಂದ, ಮೇಲಧಿಕಾರಿಗಳು ಅನುಮತಿ ಕೊಡಲಿಲ್ಲ. ಇವರನ್ನೆಲ್ಲ ಒಮ್ಮೆ ನಮ್ಮ ಮನೆಗೆ ಚಹಾಪಾನಕ್ಕೆ ಕೂಗಬೇಕಾಯಿತು. ಇಂತಹ ವೈವಿಧ್ಯಮಯವಾದ ಗುಂಪಿಗೆ ಏನೇನು ತಿಂಡಿ-ತೀರ್ಥ ಮಾಡಿಸಬಹುದು? ತುಂಬಾ ಯೋಚನೆ ಮಾಡಿ, ಉಪ್ಪಿಟ್ಟು, ಕೇಸರಿ ಭಾತ್, ಬೋಂಡಾ, ಕಾಫಿ ಎಂದು ನಿರ್ಧರಿಸಿದೆವು. ಇಷ್ಟು ಮಾತ್ರ ಮಾಡಿಸಿದರೆ ಒಪ್ಪುವರೇ? ನಮ್ಮನ್ನು ಕೀಳಾಗಿ ಕಾಣುವರೇ? ಎಂಬ ಅನುಮಾನ. ಹಾಗೇನೂ ಆಗಲಿಲ್ಲ. ತುಂಬಾ ಸಂತೋಷಪಟ್ಟರು. ಅಂದರೆ ನಾವು ಅವರನ್ನು ಕುರಿತು ಯೋಚಿಸುವ ರೀತಿಯಲ್ಲೇ ಏನೋ ತಪ್ಪಿದೆ ಅನಿಸಿತು.
ಇವರಿಗೆಲ್ಲ ತಾವು ವಿದೇಶದಲ್ಲಿ ತರಬೇತಿ ಪಡೆಯಲು ಹಕ್ಕುಳ್ಳವರು ಎಂಬ ಭಾವನೆ (entitled). ಮುಂದುವರೆದಿರುವ, ಅಭಿವೃದ್ಧಿ ಹೊಂದಿದ ದೇಶಗಳು ತರಬೇತಿ ನೀಡುವುದು ಅವರ ಕರ್ತವ್ಯ, ಜವಾಬ್ದಾರಿ. ಏಕೆಂದರೆ, ಹಿಂದೆ ನಮ್ಮನ್ನು ಶೋಷಿಸಿದ್ದಾರೆ ಎಂಬ ಧೋರಣೆ. ಒಂದು ವಿಚಾರವಾಗಿ ಇದು ಸರಿಯಿರಬಹುದು. ಆದರೆ, ಪ್ರತಿದಿನವೂ, ಪ್ರತಿ ವರ್ತನೆಯಲ್ಲೂ ಇದನ್ನು ವ್ಯಕ್ತಪಡಿಸಲು ನೋಡಿದರೆ, ಅದು ಅಹಂಕಾರವಾಗಿ, ನೈತಿಕ ಗರ್ವವಾಗಿ ಕಾಣಿಸಿಕೊಳ್ಳುತ್ತದೆ. ಅವರ ಗುಂಪಿನಲ್ಲೇ ಕೆಲವರು ಮುಂದುವರೆದ ದೇಶಗಳಿಂದ ಬಂದವರಿದ್ದರು. ಬಿಳಿಯರಿದ್ದರು. ಬಿಳಿಯರನ್ನು ಒಂದು ರೀತಿಯ ಕುತ್ಸಿತ ಮನೋಭಾವದಿಂದ ನೋಡುವುದು, ಅವರು ಕೂಡ ಹೀಗೆಯೇ ಕ್ಷುದ್ರವಾಗಿ ವರ್ತಿಸುವುದು, ಇದನ್ನೆಲ್ಲ ನಿತ್ಯವೂ ನೋಡುವುದೆಂದರೆ ಅದು ಕೂಡ ಹಿಂಸೆಯೇ!
ಇವರೆಲ್ಲಾ ಅವರವರ ದೇಶವನ್ನು ಪ್ರತಿನಿಧಿಸುತ್ತಿದ್ದರಿಂದ ನಾವು ಅವರಿಗೆ ವಿಶೇಷವಾದ ಪ್ರೀತಿ, ಗೌರವವನ್ನು ತೋರಬೇಕಾಗಿತ್ತು. ತಲೆನೋವು ಬಂದರೆ, ಆಮಶಂಕೆ ಆದರೆ ರಾಯಭಾರಿಗಳಿಗೆ, ವಿದೇಶಾಂಗ ಸಚಿವರಿಗೆ ಗಮನ ಕೊಡುವಷ್ಟೇ ಆದ್ಯತೆ ನೀಡಬೇಕಾಗಿತ್ತು, ನೀಡುತ್ತಿದ್ದೆವು. ಕ್ರಮೇಣ ತಿಳಿದು ಬಂದದ್ದೇನೆಂದರೆ, ಇವರಿಗೆಲ್ಲ ಅವರವರ ದೇಶಗಳಲ್ಲೇ ಇಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಇರಲಿ, ಇವರಿಗೆಲ್ಲ ತಮ್ಮ ದೇಶ, ಸಮಾಜ, ನಾಗರಿಕರನ್ನು ಕುರಿತು ಯಾವ ರೀತಿಯ ಕಾಳಜಿಯೂ ಇರಲಿಲ್ಲ. ನಮ್ಮ ದೇಶದ ಮೇಲುವರ್ಗ, ಮಧ್ಯಮವರ್ಗದ ಅಧಿಕಾರಿ ವಲಯದವರು ತೋರುವ ರೀತಿಯ ಕೌಟುಂಬಿಕ ಸ್ವಾರ್ಥ, ವರ್ಗ ಹಿತಾಸಕ್ತಿಗಳನ್ನೇ ಇವರೂ ತೋರುತ್ತಿದ್ದರು.
*****
1995ರಲ್ಲಿ ಸುಮಾರು ಇಪ್ಪತ್ತು ದಿವಸ ಚೀನಾದ ಭಾಗವಾದ ಟಿಬೆಟ್ ಪ್ರಾಂತ್ಯದಲ್ಲಿ ಪ್ರವಾಸಮಾಡುವ ಅವಕಾಶ ಸಿಕ್ಕಿತ್ತು, ಮಾನಸ ಸರೋವರ ಯಾತ್ರೆಯ ಭಾಗವಾಗಿ. ಚೀನಾದ ಪೋಲೀಸ್, ಕಸ್ಟಮ್ಸ್ ಅಧಿಕಾರಿಗಳು, ವ್ಯಾಪಾರಿಗಳು, ಚಾಲಕರು, ಧಾರ್ಮಿಕ ಗುರುಗಳು, ಕಮ್ಯುನಿಸ್ಟ್ ಪಾರ್ಟಿಯ ತಳಮಟ್ಟದ ಕಾರ್ಯಕರ್ತರು, ಇವರನ್ನೆಲ್ಲ ಹತ್ತಿರದಿಂದ ನೋಡುವ ಅವಕಾಶ. ಅದರ ಬಗ್ಗೆ ಬರೆದೆ ಕೂಡ. ಬರೆದದ್ದೆಲ್ಲ ಮಾನಸ ಪ್ರವಾಸ ಕಥನದ ಭಾಗವಾಗಿ ಪರಿಗಣಿಸಲ್ಪಟ್ಟಿತು. ವಿದೇಶಿ ಅನುಭವವೆಂದು ಯಾರೂ ಪರಿಗಣಿಸಲಿಲ್ಲ.
*****
2001ರಲ್ಲಿ ಸಿಂಗಪೂರ್‌ನಲ್ಲಿ ಮೂರುವಾರ ನಾನೇ ತರಬೇತಿ ಪಡೆಯಲು ಹೋಗಿದ್ದೆ. ಸಿಂಗಪುರವೆಂದರೆ, ವಿಸ್ತಾರವಾದ Super Market of Electronic Goods. ಅದು ನಗರವಲ್ಲ, Service Centre. ತರಬೇತಿ ನೀಡುತ್ತಿದ್ದವರು ಅಮೆರಿಕನ್ ಅಧಿಕಾರಿಗಳು, ಪ್ರಾಧ್ಯಾಪಕರು, ಅರ್ಥಶಾಸ್ತ್ರಜ್ಞರು. ನಾವು ವಾಸ ಮಾಡುತ್ತಿದ್ದ ಹೋಟಲಿಗೆ ಹೋಲಿಸಿದರೆ, ಅವರ ಹೋಟೆಲ್ ಸುಮಾರಾಗಿತ್ತು. ನಾವು ಕಾರಿನಲ್ಲಿ ಓಡಾಡುತ್ತಾ ನಮ್ಮ ಸ್ಥಾನಮಾನಗಳನ್ನು ಕಾಪಾಡಿಕೊಂಡು ಬೀಗುತ್ತಿದ್ದರೆ, ಅವರು ರೈಲಿನಲ್ಲಿ ಸಾಮಾನ್ಯ ನಾಗರಿಕರಂತೆ ಓಡಾಡುತ್ತಿದ್ದರು. ಒಂದೊಂದು ಸಲ ತರಬೇತಿ ಕೇಂದ್ರಕ್ಕೆ ನಡೆದುಕೊಂಡೇ ಬರುತ್ತಿದ್ದರು. ಸಮಯ, ಸಾಮಾನು, ಸಂಪನ್ಮೂಲಗಳನ್ನು ಹೇಗೆ ಮಿತವಾಗಿ, ದಕ್ಷತೆಯಿಂದ ಬಳಸಬೇಕು, ಸಾರ್ವಜನಿಕ ಹಣ, ವೆಚ್ಚದ ಬಗ್ಗೆ ಎಷ್ಟು ಗೌರವ ನೀಡಬೇಕು, ನೀಡುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡುವ ಅನುಭವ. ನಮಗೆ ನಾಚಿಕೆಯಾಗಬೇಕು! ನಿಜ, ನಾಚಿಕೆಯಾಯಿತು. ಆದರೆ ತರಬೇತಿ ಮುಗಿದು ಭಾರತಕ್ಕೆ ವಾಪಸ್ ಬಂದನಂತರ ಹಿಂದಿನ ರೀತಿಯ Feudal Mentalityಯೇ!
*****
ಈ ಮೂರು ಪ್ರವಾಸಗಳನ್ನು ಕುರಿತು ನಾನು ಈಗ ಪ್ರಸ್ತಾಪಿಸುತ್ತಿರುವುದಕ್ಕೆ ಒಂದು ಕಾರಣವಿದೆ. ಅಮೆರಿಕ ಮತ್ತು ಯುರೋಪಿಗೆ ಮತ್ತೆ ಮತ್ತೆ ಹೋಗುವ ತನಕ ನನಗೆ ನಾನು ವಿದೇಶಕ್ಕೆ ಹೋಗಿದ್ದೆ ಎಂಬ ಭಾವನೆಯೇ ಬರುತ್ತಿರಲಿಲ್ಲ. ನನ್ನ ಬಂಧು-ಮಿತ್ರರು ಕೂಡ ಹಾಗೆಂದು ಭಾವಿಸುತ್ತಿರಲಿಲ್ಲ. ಯಾರೊಬ್ಬರೂ ನನ್ನನ್ನು ಪ್ರವಾಸ ಕಥನ ಬರೆಯಿರಿ ಎಂದು ಕೇಳುತ್ತಿರಲಿಲ್ಲ. ನನಗೂ ಬರೆಯಬೇಕು ಎನ್ನುವ ತುಡಿತ ಬರುತ್ತಿರಲಿಲ್ಲ. ಇದೊಂದು ರೀತಿಯಲ್ಲಿ ವಿಚಿತ್ರ, ವಿಕ್ಷಿಪ್ತ ಮನೋಸ್ಥಿತಿ ಅನಿಸುತ್ತದೆ.
ನೆದರ್‌ಲ್ಯಾಂಡ್ಸ್‌ಗೆ ಕಳೆದ ನಾಲ್ಕು ವರ್ಷಗಳಲ್ಲಿ ನಾನು ಮೂರು ಸಲ ಬರಬೇಕಾಯಿತು. ಒಟ್ಟು ಒಂಭತ್ತು ತಿಂಗಳು ಇರಬೇಕಾಯಿತು. ಇದಕ್ಕೆ ವಿಶೇಷ ಕಾರಣಗಳೇನಿರಲಿಲ್ಲ. ಕೌಟುಂಬಿಕ ಸಂದರ್ಭಗಳೇ ಕಾರಣ. ಪ್ರವಾಸಕ್ಕಿಂತ ಹೆಚ್ಚಾಗಿ ವಾಸದ ಅಂಶವೇ ಹೆಚ್ಚಾಗಿತ್ತು. ಬೆಂಗಳೂರಿನ ಪದ್ಮನಾಭನಗರದ ಮನೆಯಲ್ಲಿರುವ ಬದಲಾಗಿ ವೂರ್‌ಬರ್ಗ್ ಉಪನಗರದ ವಾಂಡರ್ ಪಾಮ್ ಬೀದಿಯಲ್ಲಿದ್ದ ಮಗಳ ಮನೆಯಲ್ಲಿದ್ದೆವು.
ಮೊದಲ ಪ್ರವಾಸದ ಸಂದರ್ಭದಲ್ಲಿ (ಅಕ್ಟೋಬರ್-ಡಿಸೆಂಬರ್ 2019) ನಾವು ಒಂದು ತಪ್ಪು ಮಾಡಿದೆವು. ಶೀತ, ಹಿಮ, ಚಳಿ, ನಮ್ಮ ಮೇಲೆ ಬೀರುವ ಪ್ರಭಾವದ ಬಗ್ಗೆ ಉಡಾಫೆಯಿಂದ ಇದ್ದೆವು. ಪರಿಣಾಮವಾಗಿ ವೂರ್‌ಬರ್ಗ್ ತಲುಪಿದ ದಿನದಿಂದಲೇ ನನ್ನ ಹೆಂಡತಿ ಕಾಯಿಲೆ ಮಲಗಿದಳು. ಒಣಕೆಮ್ಮು ಮತ್ತು ಚರ್ಮದ ಅಲರ್ಜಿ ನನ್ನನ್ನು ಮೂರು ತಿಂಗಳ ಕಾಲ ನಿರಂತರವಾಗಿ ಬಾಧಿಸಿತು. ರಾತ್ರಿ ಹೊತ್ತು ಗಂಟೆಗಟ್ಟಲೆ ಕೆಮ್ಮುತ್ತಿದ್ದೆ. ಇದರ ಜೊತೆಯಲ್ಲೇ ಆಮ್‌ಸ್ಟರ್‌ಡ್ಯಾಂ, ಬ್ರಸಲ್ಸ್, ಬ್ರೂಚ್ ನಗರಗಳಿಗೆ ವಾರಾಂತ್ಯದಲ್ಲಿ ಭೇಟಿ ನೀಡಿದೆವು. Tulip Show ನೋಡುವ ಅವಕಾಶವಿರಲಿಲ್ಲ. ಅದನ್ನು ನೋಡಲು ಏಪ್ರಿಲ್, ಮೇ ತಿಂಗಳುಗಳಲ್ಲೇ ಬರಬೇಕು. ಇಲ್ಲಿ ಸೃಷ್ಟಿಸಿರುವ ಹಳೆಯ ಗ್ರಾಮವನ್ನು ನೋಡಿದೆವು. ಜಾನ್-ಸೆ-ಷಾನ್ ಎಂದು ಗ್ರಾಮದ ಹೆಸರು. ಗಿರಣಿ, ಗಾಣ, ವಿಂಡ್ ಮಿಲ್, ಒರಳು ಕಲ್ಲು, ಹಳೆಯ ಕಾಲದ ಬಚ್ಚಲು ಮನೆ, ಹಂಡೆ, ಏಣಿ, ಇದನ್ನೆಲ್ಲ ನೋಡಿದ್ದಾಯಿತು. ನಾನಾ ರೀತಿಯ ಚೀಸ್‌ಗಳನ್ನು ತಯಾರಿಸುವ ರೀತಿಯನ್ನು ನೋಡಿಯಾಯಿತು. ರುಚಿ ಕೂಡ ನೋಡಿದೆವು. ರಾತ್ರಿ ದೋಣಿ ವಿಹಾರವಾಯಿತು. ಕಲಾವಿದ ವ್ಯಾನ್ ಗೋಗ್ ಮ್ಯೂಸಿಯಂಗೆ ಭೇಟಿ ನೀಡಿದೆವು. ಹೆಜ್ಜೆ ಹೆಜ್ಜೆಗೂ ಸಿಗುವ ಕಾಲುವೆ, ಉದ್ಯಾನವನಗಳನ್ನು ನೋಡುತ್ತಾ ನಾವು ಲಾಲ್‌ಬಾಗ್ ಮಧ್ಯೆ ವಾಸವಾಗಿರುವಂತೆ ಭಾಸವಾಗುತ್ತಿತ್ತು. ಮೂರು ವಾರ ಕಾರಿನಲ್ಲೇ ಓಡಾಡುತ್ತಾ, ಯುರೋಪಿನ ಬೇರೆ ಬೇರೆ ದೇಶಗಳನ್ನು ಆತುರಾತುರವಾಗಿ ನೋಡಿದೆವು. ಅರಮನೆ, ಸ್ಮಾರಕ, ಉದ್ಯಾನವನಗಳಿಗೇ ಮತ್ತೆ ಆದ್ಯತೆ. ಮುಖ್ಯವಾಗಿ ನನ್ನನ್ನು ಆಕರ್ಷಿಸಿದ್ದು, Land Scape. ನೆದರ್‌ಲ್ಯಾಂಡ್ಸ್-ಫ್ರಾನ್ಸ್ ನಡುವಿನ ಹೊಲ-ಗದ್ದೆಗಳು, ವೂರ್‌ಬರ್ಗ್-ಆಮಸ್ಟರ್‌ಡ್ಯಾಂ ನಡುವಿನ ಸಮೃದ್ಧ ಕೃಷಿ ಭೂಮಿ ನೋಡುತ್ತಿದ್ದರೆ, ಭೂಮಿಯಿಂದ ಬಂಗಾರ ತೆಗೆಯುವ ಮಾತಿರಲಿ, ಬೇರೆ ಬೇರೆ ಬೆಳೆಗಳು ಬಂಗಾರದ ಬಣ್ಣದಿಂದ ಕಂಗೊಳಿಸುವುದನ್ನು ನೋಡುವುದೇ ಒಂದು ಚಂದ. ಹಸು, ಕುದುರೆ, ಕೋಳಿ, ಎಮ್ಮೆಗಳ ದೊಡ್ಡಿಗಳನ್ನು ನೋಡಿದೆವು. ಈಗ ಇಲ್ಲಿ ಒಂದು ಪದ್ಧತಿ ಜಾರಿಗೆ ಬಂದಿದೆ. ಸಂಪನ್ಮೂಲ ಇರುವವರು ಪ್ರಾಣಿಗಳನ್ನು ಕೊಂಡು ಗೇಣಿಗೆ ಕೊಡುತ್ತಾರೆ. ಕೃಷಿಕರು, ಗ್ರಾಮೀಣರು ಅವನ್ನು ಗೇಣಿಗೆ ತೆಗೆದುಕೊಂಡು ಸಾಕಿ, ಪೋಷಿಸಿ, ಹಾಲು, ಮೊಸರಿನ ಒಂದ ಭಾಗವನ್ನು ಗೇಣಿ ಮೊತ್ತದ ಬದಲಾಗಿ ಮಾಲೀಕರಿಗೆ ನೀಡಬಹುದು.
ಸ್ವಿಟ್ಜರ್‌ಲೆಂಡ್‌ನಲ್ಲಿ ಪ್ರವಾಸ ಮಾಡಿದೆವು ಎಂದು ಹೇಳುವುದು ತಪ್ಪಾಗುತ್ತದೆ. ಓಡಾಡಿದರೆ ಸಾಕು, ನಿಂತರೆ ಸಾಕು, ಕೂತರೆ ಸಾಕು, ಪ್ರಕೃತಿಯ ಬಾಗು ಬಳಕು, ಹಸಿರು ವಿನ್ಯಾಸ, ಸೌಂದರ್ಯ, ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಷ್ಟು ನೋಡಿದರೂ ತೃಪ್ತಿಯಾಗುವುದಿಲ್ಲ. ಕೊಂಕಣ್, ಗೋಮಾಂತಕ್, ಕಾಶ್ಮೀರ, ಕೊಡಗು, ಡಾರ್ಜಿಲಿಂಗ್‌ಗಳು ನೆನಪಾಗುತ್ತವೆ.
2021ರ ನವೆಂಬರ್‌ನಲ್ಲಿ ಬಂದ ಸಂದರ್ಭ ಭಿನ್ನವಾಗಿತ್ತು. ಮಗಳ ಹೆರಿಗೆ, ಬಾಣಂತನ, ಮೊಮ್ಮಗನ ಸ್ಕೂಲು, ಅವನನ್ನು ನೋಡಿಕೊಳ್ಳುವುದು, ಇದೇ ನಮ್ಮ ಆದ್ಯತೆ. ಜೊತೆಗೆ ನಮ್ಮ ಗ್ರಹಚಾರಕ್ಕೆ ನಾವು ಬಂದ ತಕ್ಷಣವೇ ಇಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಮನೆಯಿಂದ ಹೊರಗೆ ಹೋಗುವ ಹಾಗಿಲ್ಲ. ಚಪಲಕ್ಕೆ ಹೊರಗೆ ಬಂದರೂ ಮಳೆ, ಚಳಿ, ಗಾಳಿ, ಶೀತ. ಮನೆ ಒಳಗೆ ಬಾಣಂತನ. ಏನು ಮಾಡಬೇಕು? ತುಂಬಾ ಕಷ್ಟದ, ಒಂಟಿತನದ, ಖಿನ್ನತೆಯ ದಿನಗಳು ಅವು. ವಿಮಾನ ಹಾರಾಟಕ್ಕೆ ನಿರ್ಬಂಧವಿತ್ತು. ನಾವು ಮತ್ತೆ ಭಾರತವನ್ನು ತಲುಪುತ್ತೇವೆಯೇ ಎಂಬ ಆತಂಕ ನಿತ್ಯವೂ ಕಾಡುತ್ತಿತ್ತು. ನಮ್ಮ ಆತಂಕಕ್ಕೆ ಪ್ರಕೃತಿ ಕೂಡ ಸ್ಪಂದಿಸುವ ಹಾಗೆ ಹೊರಡುವ ದಿವಸ ಸುಂಟರಗಾಳಿಗೆ ಸಿಕ್ಕಿ ಹಾಕಿಕೊಂಡು, ಪ್ರಯಾಣವೆಲ್ಲ ಅಸ್ತವ್ಯಸ್ತವಾಗಿ, ದುಬೈ ನಗರದಲ್ಲಿ ಒಂದಿಡೀ ದಿನ ಕೊಳೆಯಬೇಕಾಗಿ ಬಂತು. ಸೋಜಿಗವೆಂದರೆ, ಬೆಂಗಳೂರಿನಲ್ಲಿ/ಭಾರತದಲ್ಲಿ ಎರಡನೇ ಲಾಕ್‌ಡೌನ್ ಇದ್ದಾಗ ನಾವು ಪಡೆದ ಅನುಭವಗಳ ಬಗ್ಗೆ ನಾನು ಬರೆದ ಕೋವಿಡ್ ದಿನಚರಿ, ನೆದರ್‌ಲ್ಯಾಂಡ್ಸ್‌ನಲ್ಲಿ ನಾನು ಇನ್ನೊಂದು ಲಾಕ್‌ಡೌನ್‌ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾಗ ಬಿಡುಗಡೆಯಾಯಿತು. ವೂರ್‌ಬರ್ಗ್ನಲ್ಲಿ ಲಾಕ್‌ಡೌನ್‌ಗೆ ಸಿಕ್ಕಿಹಾಕಿಕೊಂಡಿದ್ದಾಗ ನಾನು “ಮನುಷ್ಯರು ಬದಲಾಗುವರೆ?” ಸಂಕಲನದ ಕತೆಗಳನ್ನು ಬರೆಯುತ್ತಿದ್ದೆ.
*****
ಮಗಳ ಬಾಣಂತನ ಮುಗಿಯಿತು. ಮೊಮ್ಮಗಳಿಗೆ ಎರಡು ತಿಂಗಳಾಯಿತು. ವೀಸಾ ಅವಧಿ ಕೂಡ ಮುಗಿಯಿತು. ನಾವು ಮರಳಿ ಭಾರತಕ್ಕೆ ಹೊರಟೆವು. ಅರವತ್ತು ದಾಟಿದ ಮೇಲೆ ಬದುಕಿನ ಸುವರ್ಣ ಭಾಗ ಬರುವುದೇ ಮೊಮ್ಮಕ್ಕಳೊಡನೆ ದಿನವೂ ಒಡನಾಡುವುದರಿಂದ. ಪ್ರತಿ ದಿನ ವೀಡಿಯೋದಲ್ಲಿ ಮೊಮ್ಮಕ್ಕಳನ್ನು ನೋಡಿದರೂ, ಒಡನಾಡಿದರೂ, ಜೊತೆಯಲ್ಲಿ ಇದ್ದ ಹಾಗಾಗುವುದಿಲ್ಲ. ಮಕ್ಕಳು ಬೆಳೆಯುವಾಗ, ನಡೆಯವುದನ್ನು, ಮಾತನಾಡುವುದನ್ನು ಕಲಿಯುವಾಗ ಪ್ರತಿ ಹಂತವನ್ನೂ ಗಮನಿಸಿ ಆನಂದಿಸಲೇಬೇಕೆಂಬ ಆಸೆ, ಗೀಳಿನ, ಹಪಾಹಪಿಯ ಮಟ್ಟವನ್ನು ತಲುಪಿ, ಮೂರನೇ ಬಾರಿಯ ನೆದರ್‌ಲ್ಯಾಂಡ್ಸ್ ಪ್ರವಾಸಕ್ಕೆ ಸಿದ್ಧರಾದೆವು (ಜುಲೈ-ಸೆಪ್ಟಂಬರ್ 2023).
ಆದರೆ ಮಗಳ ಮನೆಯಲ್ಲಿ ಕೌಟುಂಬಿಕ ವಾತಾರವಣ ತೀರಾ ಭಿನ್ನವಾಗಿತ್ತು. ಮಗಳು ಅಳಿಯ ಇಬ್ಬರೂ ಕೆಲಸ ಬದಲಾಯಿಸಿದ್ದರು. ವಿಪರೀತ ಕೆಲಸ. ಇಬ್ಬರಿಗೂ ಆಂತರಿಕ ಯುರೋಪು ಪ್ರವಾಸ. ಅಳಿಯಂದಿರು ಭಾರತ, ಅಮೆರಿಕ, ಯುರೋಪ್ ಕಾಲಮಾನಕ್ಕೆ ಸಂಬಂಧಿಸಿದಂತೆ ಮೂರೂ ಖಂಡಗಳ ಸಹೋದ್ಯೋಗಿಗಳ ಜೊತೆ ನಿರಂತರ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ಮನೆಯಲ್ಲಿ ಸದಾ ಆಫೀಸ್ ವಾತಾವರಣ. ಮಗಳಿಗೂ ಪ್ರತಿ ಕ್ಷಣವೂ ಕೆಲಸ. ಒಂದೂವರೆ ವರ್ಷದ ಮಗಳು, ಒಂಭತ್ತು ತುಂಬುತ್ತಿರುವ, ಸದಾ ಎಲ್ಲರ ಗಮನವನ್ನು ಬೇಡುವ ತುಂಟ ಮಗ, ಜೊತೆಗೆ ವಯಸ್ಸಾದ ನಾವು. ಒಂದೇ ಮನೆಯೊಳಗೆ ಮೂರು-ನಾಲ್ಕು ರುಚಿ-ಹದದ ಅಡುಗೆ ತಯಾರಾಗಬೇಕು. ಪ್ರತಿನಿತ್ಯದ ಬದುಕನ್ನು ನಿರ್ವಹಿಸುವುದೇ ಒಂದು ಸವಾಲು. ಯಾವಾಗಲೂ ಗಡಿಬಿಡಿ, ತಳಮಳ. ಜೊತೆಗೆ ಚಿಕ್ಕ ಮಗುವಿನ ಅನಾರೋಗ್ಯ. ನಮಗೆ ಸಮಯ ಕೊಡುವುದೇ ಕಷ್ಟವಾಗುತ್ತಿತ್ತು. ಹಂಗೇರಿಗೆ ಹೋಗಿದ್ದ ಒಂದು ವಾರದ ಪ್ರವಾಸ, ಬ್ರಸಲ್ಸ್‌ನಲ್ಲಿದ್ದ ನನ್ನ ತಮ್ಮನ ಮಗನನ್ನು ಒಂದು ದಿನ ನೋಡಲು ಹೋಗಿದ್ದುದು, ಇಷ್ಟನ್ನು ಬಿಟ್ಟರೆ, ಎಲ್ಲ ಸಮಯವನ್ನೂ ಮನೆಯಲ್ಲೇ ಕಳೆದೆವು.
*****
1960, 1995, 2001ರಲ್ಲಿ ವಿದೇಶೀಯರೊಡನೆ/ವಿದೇಶಗಳಲ್ಲಿ ಪಡೆದ ಅನುಭವಗಳನ್ನು ವಿದೇಶಿ ಪ್ರವಾಸದ ಅನುಭವಗಳೆಂದು ನಾನೇ ಪರಿಗಣಿಸಲಿಲ್ಲ. 2019, 2021, 2023ರ ಮೂರು ನೆದರ್‌ಲ್ಯಾಂಡ್ಸ್ ಪ್ರವಾಸಗಳು ಒಂದಕ್ಕಿಂತ ಒಂದು ಭಿನ್ನ ಸ್ವರೂಪದವು. ಇದನ್ನೆಲ್ಲ ಹೇಗೆ ಬರೆಯಬೇಕು, ಏನನ್ನು ಕುರಿತು ಬರೆಯಬೇಕು, ಪ್ರವಾಸ ಕಥನ ಬರೆಯುತ್ತೇನೆಂದು ಹೊರಟು ಸಂಸಾರ ತಾಪತ್ರಯಗಳನ್ನು ಕುರಿತು ಬರೆದರೆ ಓದುಗರಿಗೆ ಇಷ್ಟವಾಗುತ್ತದೆಯೇ!
ಅನುಭವ ಪಡೆಯುವುದಕ್ಕೆ, ಬರೆಯುವುದಕ್ಕೆ ಸಿದ್ಧ ಮಾದರಿಗಳಿರುತ್ತವೆ. ಈಗಾಗಲೇ ಬರೆದಿರುವುದನ್ನು ಓದಿ, ಕೇಳಿ ತಿಳಿದುಕೊಂಡು ಅದೇ ರೀತಿಯ ಅನುಭವವನ್ನು ನಾವೂ ಪಡೆಯಲು ಪ್ರಯತ್ನಿಸುತ್ತಿರುತ್ತೇವೆ. ಆದರೆ ಯಾರೊಬ್ಬರ ಬದುಕೂ ಸಿದ್ಧ ಮಾದರಿಯಲ್ಲಿ ನಡೆಯುವುದಿಲ್ಲ, ನಾವೇ ಬಯಸಿದಾಗಲೂ. ಪ್ರತಿಯೊಂದು ಪ್ರವಾಸ, ಪ್ರತಿಯೊಂದು ಕುಟುಂಬದ ಸಂದರ್ಭವೂ ಬೇರೆ ಬೇರೆ ಇರುತ್ತದೆ. ಇಂತಹ ಸನ್ನಿವೇಶಕ್ಕೆ ನಾವು ಮುಕ್ತವಾಗಿ ತೆರೆದುಕೊಂಡು ಬರೆಯುವುದೇ ವಿದೇಶಿ ಪ್ರವಾಸಾನುಭವ ಎಂದು ನನಗನಿಸಿದೆ. ಮುಂದಿನ ಪುಟಗಳ ಕಥನ, ಚಿಂತನೆ, ವಿಶ್ಲೇಷಣೆ ಎಲ್ಲವೂ ಈ ನೆಲೆಯಲ್ಲಿದೆ. 1986, 1995, 2001ರ ವಿದೇಶೀಯರೊಡನೆ ಒಡನಾಟದ ಪ್ರವಾಸಗಳ ಬಗ್ಗೆ ನಾನೂ ಏನೂ ಬರೆಯಲಿಲ್ಲವೆಂಬ ಖೇದದ ಅಂಶ ಕೂಡ ಈ ಬರವಣಿಗೆಯಲ್ಲಿ ಸೇರಿಕೊಂಡಿದೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
Wonderful article. It’s a must read experience for all those who want to travel abroad. Sir, you have narrated good experiences and work culture in European countries. Food habits also form part of the trip abroad. Thank you for the wonderful article.
ತಡವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ, ಕ್ಷಮಿಸಿ ಸತ್ಯನಾರಾಯಣ ಅವರೇ. ಪ್ರತಿಯೊಂದು ವಿದೇಶಿ ಪ್ರವಾಸದ ಚಿತ್ರಣವೂ ಒಂದೇ ಚೌಕಟ್ಟಿನಲ್ಲಿ, ಅದೇ ಹದದಲ್ಲಿ ಮತ್ತು ಅದೇ ಅದೇ ಸಂಗತಿ ಒಳಗೊಂಡಿರಬೇಕು ಎನ್ನುವ ಮೈಂಡ್ ಸೆಟ್ ಸುಮಾರು ಓದುಗರಲ್ಲಿ ವಿಮರ್ಶಕರೂ ಸೇರಿದ ಹಾಗೆ ಇದೆ. ಈ ಮೈಂಡ್ ಸೆಟ್ ಮೀರಿ ಹೊರಬರುವ ಪ್ರವಾಸ ಕಥನ ಗಳು ವಿಶಿಷ್ಟ ಅನಿಸುತ್ತವೆ.
ಈ ಹಿನ್ನೆಲೆಯಲ್ಲಿ ತಮ್ಮ ಈ ಮೊದಲ ಕಂತು ಹೆಚ್ಚಿನ ಭರವಸೆಯನ್ನು ಮೂಡಿಸಿದೆ. ತಮಗೆ all the best..!