ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿಯಲ್ಲಿ ಅಪ್ಪ-ಮಗನ ಬಾಂಧವ್ಯಕ್ಕೆ ಹೆಸರಾದ ಘಟನೆಯೊಂದರ ಕುರಿತ ಬರಹ ನಿಮ್ಮ ಓದಿಗೆ
ಕೆಲ ವರುಷಗಳ ಹಿಂದೆ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿ ನೆಟ್ಟಿಗರ ಮನಗೆದ್ದಿತ್ತು. ಒಂದು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಬ್ಬಳು ಸ್ಪರ್ಧಿ, ಅಡುಗೆ ಮಾಡಲು ಬೇಕಾಗಿದ್ದ ಯಾವುದೋ ಪದಾರ್ಥದ ಡಬ್ಬಿಯ ಮುಚ್ಚಳ ತೆಗೆಯಲು ಹರಸಾಹಸಪಟ್ಟು, ಕೊನೆಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ತನ್ನ ತಂದೆಯ ಬಳಿ ಓಡಿ ಹೋಗಿ, ಆತ ಗಂಭೀರ ವದನನಾಗಿ ಮುಚ್ಚಳವನ್ನು ತೆರೆಯುವ ಆ ವಿಡಿಯೋ, ಅಪ್ಪ ಎಂಬ ಜೀವ, ಮಕ್ಕಳ ಜೀವನದಲ್ಲಿ ಎಷ್ಟೊಂದು ಪ್ರಮುಖವಾದದ್ದು ಎಂದು ಬಿಂಬಿಸಿತ್ತು.
ಅಪ್ಪನೆಂದರೆ ಹಾಗೆಯೇ ಅಲ್ಲವೇ… ತನ್ನ ಮಕ್ಕಳು ಯಾವುದೇ ತೊಂದರೆಯಲ್ಲಿ ಸಿಲುಕಿದರೂ ಅದನ್ನು ಹೇಗಾದರೂ ಸರಿಪಡಿಸಬೇಕು, ಅವರನ್ನು ಹೆಗಲು ಕೊಟ್ಟು ಮುನ್ನಡೆಸಬೇಕು ಎಂಬುದು ಪ್ರತಿಯೊಬ್ಬ ತಂದೆಯ ಮನೋಭಾವನೆ. ಮಹಾಭಾರತದಲ್ಲಿ ಪಂಚ ಪಾಂಡವರ ಬೆವರಿಳಿಸಿದ ದ್ರೋಣಾಚಾರ್ಯ, ತನ್ನ ಪುತ್ರ ಅಶ್ವತ್ಥಾಮ ಹತನಾದ ಎಂಬ ಸುಳ್ಸುದ್ದಿಯನ್ನು ನಂಬಿ ಶಸ್ತ್ರತ್ಯಾಗ ಮಾಡಿ ತನ್ನ ಜೀವವನ್ನೇ ಕಳೆದುಕೊಂಡ. ಇಂದ್ರನ ವಜ್ರಾಸ್ತ್ರದ ಹೊಡೆತಕ್ಕ ಸಿಲುಕಿ ನೆಲಕ್ಕುರುಳುತ್ತಿದ್ದ ಆಂಜನೇಯನನ್ನು, ವಾಯುದೇವ ಕಾಪಾಡಿ, ಅವನೊಂದಿಗೆ ಗುಹೆಯಲ್ಲಿ ಕೂತು ಭೂಮಿಯ ಮೇಲೆ ಗಾಳಿಯ ಅಭಾವವನ್ನು ಸೃಷ್ಟಿಸಿದ… ಮಕ್ಕಳಿಗಾಗಿ ಮಿಡಿಯುವ ಹಲವಾರು ತಂದೆಯಂದಿರು ನಮ್ಮ ನಡುವೆ ಸಾಕಷ್ಟಿದ್ದಾರೆ. ಒಲಿಂಪಿಕ್ಸ್‌ನ ಸಮಯದಲ್ಲಿ ಕಂಡುಬಂದ ಇಂಥದೇ ತಂದೆ-ಮಗನ ಕಥೆಯನ್ನು ಹೇಳುತ್ತೇನೆ ಕೇಳಿ.
1992ರ ಬಾರ್ಸಿಲೋನಾ ಒಲಿಂಪಿಕ್ಸ್ ಅನೇಕ ಗಮನಾರ್ಹ ಕ್ಷಣಗಳಿಗೆ ಸಾಕ್ಷಿಯಾಗಿದ್ದರೂ, ಡೆರೆಕ್ ರೆಡ್ಮಂಡ್‌ನ ಕಥೆಯಂತೆ ಇನ್ನೊಂದಿರಲು ಸಾಧ್ಯವಿಲ್ಲ. ಬ್ರಿಟಿಷ್ ಸ್ಪ್ರಿಂಟರ್ ಆಗಿದ್ದ ರೆಡ್ಮಂಡ್ 400 ಮೀಟರ್ ಓಟದಲ್ಲಿ ಪದಕ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದನು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮುಂಚೆ ಗಾಯಗೊಂಡು ಅನೇಕ ಶಸ್ತ್ರಚಿಕಿತ್ಸೆಗಳು ನಡೆದ್ದಿದ್ದರಿಂದ, ಅವನ ಒಲಿಂಪಿಕ್ಸ್ ಪ್ರಯಾಣವು ಸಾಕಷ್ಟು ಸವಾಲುಗಳಿಂದ ಕೂಡಿತ್ತು. ಆದರೂ, ರಚ್ಚಿನಿಂದ ಓಡಿ ಸೆಮಿಫೈನಲ್ ತಲುಪಿ, ಪದಕ ಗೆಲ್ಲುವ ತವಕದಲ್ಲಿದ್ದನು. ಓಟದ ಆರಂಭದಲ್ಲಿ, ಫೈನಲ್ ತಲುಪುವ ಎಲ್ಲಾ ಲಕ್ಷಣಗಳಿಂದ ಮುನ್ನುಗ್ಗುತ್ತಿದ್ದ ರೆಡ್ಮಂಡ್, ಸಾವಿರಾರು ಜನರ ಚೀರಾಟದ ನಡುವೆ ಗುರಿಯತ್ತ ಲಕ್ಷ್ಯವಿಟ್ಟು ಓಡುತ್ತಾ, ಇದ್ದಕ್ಕಿದ್ದಂತೆ ಬಲಗಾಲಿನಲ್ಲಿ ತೀವ್ರವಾದ ನೋವೆದ್ದು ಟ್ರ್ಯಾಕ್‌ನಲ್ಲಿ ಕುಸಿದುಹೋದನು. ಅವನ ಮಂಡಿರಜ್ಜು ಹರಿದು, ಒಲಿಂಪಿಕ್ ಪದಕದ ಕನಸನ್ನು ಛಿದ್ರಗೊಳಿಸಿತ್ತು. ಕ್ರೀಡಾಂಗಣವು ಸ್ತಬ್ಧವಾಗಿತ್ತು, ಇಡೀ ಜಗತ್ತು ಆಘಾತ ಮತ್ತು ಸಹಾನುಭೂತಿಯಿಂದ ರೈಡ್ಮಂಡ್‌ನನ್ನು ನೋಡುತ್ತಿತ್ತು.
ಆದರೆ ಡೆರೆಕ್ ರೆಡ್ಮಂಡ್ ಬಿಟ್ಟುಕೊಡುವ ಜಾಯಮಾನದವನಲ್ಲ ನೋಡಿ! ಅಸಾಧ್ಯ ನೋವಿನ ನಡುವೆಯೂ ರೆಡ್ಮಂಡ್ ಓಟವನ್ನು ಪೂರ್ತಿಗೊಳಿಸಲು ಸಜ್ಜಾಗಿ ನಿಂತ. ತನ್ನ ಪಾದಗಳಿಗೆ ಮತ್ತೊಮ್ಮೆ ಹೋರಾಡುವಂತೆ ಆದೇಶ ನೀಡಿ ಫಿನಿಷ್ ಲೈನಿನ ಕಡೆಗೆ ಓಡಲು ಪ್ರಾರಂಭಿಸಿದ. ಪ್ರತಿ ಹೆಜ್ಜೆಯೂ ಭಾರವಾಗಿ, ನೋವಿನಿಂದ ಓಡುತ್ತಿದ್ದ ರೆಡ್ಮಂಡ್‌ನನ್ನು ಕಂಡು ಕರುಣೆಯಿಂದ ಇಳೆಯು ಇನ್ನು ಓಡಬೇಡ ಎಂದು ತಡೆಯುತ್ತಿದ್ದರೂ, ಅಮ್ಮನ ಅಪ್ಪುಗೆಯಿಂದ ತಪ್ಪಿಸಿಕೊಂಡು ಓಡುವ ಮಗುವಿನಂತೆ ರೆಡ್ಮಂಡ್ ಗುರಿಯತ್ತಾ ಒಂದೊಂದೇ ಹೆಜ್ಜೆಯನ್ನಿಡತೊಡಗಿದ. ಅವನ ಧೈರ್ಯವನ್ನು ಬಿಟ್ಟಕಣ್ಣುಗಳಿಂದ ನೋಡುತ್ತಿದ್ದ ಪ್ರೇಕ್ಷಕರು ಅವನನ್ನು ಹುರಿದುಂಬಿಸಲು ಪ್ರಾರಂಭಿಸಿದರು. ರೆಡ್ಮಂಡ್‌ನ ಪ್ರತಿ ನೋವಿನ ಹೆಜ್ಜೆಗೂ ಅವರ ಬೆಂಬಲವು ಕಾಡ್ಗಿಚ್ಚಿನಂತೆ ಬೆಳೆದು, ಅವನು ಗುರಿಮುಟ್ಟುವುದನ್ನು ನೋಡುವುದೇ ತಮ್ಮ ಜೀವನದ ಆಶಯದಂತೆ ಕಾಯತೊಡಗಿದರು.
ಆಗ ಇನ್ನೊಂದು ಘಟನೆ ಜರುಗಿತು ನೋಡಿ. ಒಲಿಂಪಿಕ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಕೆತ್ತಿಡಬಹುದಾದ ಆ ಕ್ಷಣ… ಎಲ್ಲರೂ ನೋಡ ನೋಡುತ್ತಿದ್ದಂತೆ, ಒಬ್ಬ ವ್ಯಕ್ತಿ ಭದ್ರತೆಯನ್ನು ಭೇದಿಸಿ ಟ್ರ್ಯಾಕ್‌ಗೆ ಓಡತೊಡಗಿ, ಕುಂಟುತ್ತಿರುವ ರೆಡ್‌ಮಂಡ್‌ನ ಬಳಿ ಧಾವಿಸಿ, ಅವನನ್ನು ತನ್ನ ತೋಳಿನಿಂದ ಬಳಸಿ, ರೆಡ್ಮಂಡ್‌ನನ್ನು ಗುರಿಯತ್ತ ಕರೆದೊಯ್ಯತೊಡಗಿದ. ರೆಡ್ಮಂಡ್‌ನ ಕಣ್ಣಲ್ಲಿ ಜಿನುಗುತ್ತಿರುವ ಕಣ್ಣೀರು, ಪ್ರೇಕ್ಷಕರ ಚೀರಾಟ… ಕೆಲವೇ ನಿಮಿಷದಲ್ಲಿ ಅವರಿಬ್ಬರೂ ಒಟ್ಟಾಗಿ ಅಂತಿಮ ಗೆರೆಯನ್ನು ದಾಟುತ್ತಾರೆ. ಪ್ರೇಕ್ಷಕರ ನಿರಂತರ ಚಪ್ಪಾಳೆಯೊಂದಿಗೆ, ಆನಂದ ಭಾಷ್ಪದೊಂದಿಗೆ ಬಾರ್ಸಿಲೋನಾದ ಕ್ರೀಡಾಂಗಣ ಹುಚ್ಚೆದ್ದು ಕುಣಿಯತೊಡಗುತ್ತದೆ. ಹಾಗೆ ಓಡಿ ಬಂದು ರೆಡ್ಮಂಡ್‌ನ ಕೈ ಹಿಡಿದು ನಡೆಸಿದ್ದು ಬೇರೆ ಯಾರೂ ಅಲ್ಲ, ಅವನ ತಂದೆ ಜಿಮ್ ರೆಡ್ಮಂಡ್!
ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು. ಡೆರೆಕ್ ಮತ್ತು ಜಿಮ್ ರೆಡ್ಮಂಡ್ ಒಟ್ಟಿಗೆ ಅಂತಿಮ ಗೆರೆಯನ್ನು ದಾಟುತ್ತಿರುವ ಚಿತ್ರವು ಒಲಿಂಪಿಕ್ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ. ಡೆರೆಕ್ ರೆಡ್‌ಮಂಡ್‌ನ ಕಥೆಯು ಕ್ರೀಡಾಪಟುಗಳು ಮತ್ತು ಸಾಮಾನ್ಯ ಜನರನ್ನೂ ಸಮಾನವಾಗಿ ಪ್ರೇರೇಪಿಸುವಂಥದ್ದು.
ನಾವು ಅಷ್ಟೇ, ನಮ್ಮ ಕನಸುಗಳ ಹಾದಿಯಲ್ಲಿ ಕೆಲವೊಮ್ಮೆ ಕುದುರೆಯಂತೆ ನಾಗಾಲೋಟದಂತೆ ಸಾಗುತ್ತಿರುತ್ತೇವೆ.. ಅನೇಕ ಬಾರಿ ಕುಂಟುತ್ತಾ ಸಾಗುತ್ತೇವೆ. ನಮ್ಮ ವೇಗವು ಹೇಗೆಯೇ ಇದ್ದರೂ ಪಯಣ ಸಾಗುತ್ತಿರಬೇಕು. ಗುರಿ ಮುಟ್ಟಿಯೇ ತೀರುತ್ತೇನೆ ಎಂಬ ಅಚಲವಾದ ನಂಬಿಕೆಯಿರಬೇಕು. ಇಂತಹ ನಂಬಿಕೆಯೊಂದಿಗೆ ನಾವು ಸಾಗಿದರೆ ರೆಡ್ಮಂಡ್‌ನಿಗೆ ತನ್ನ ತಂದೆಯ ಆಸರೆ ಸಿಕ್ಕಂತೆ ನಮಗೂ ಯಾರಾದರೂ ಆಸರೆಯಾಗುತ್ತಾರೆ!