ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು. ದೊಡ್ಡ ದೊಡ್ಡ ಬಿದಿರಿನ ಬುಟ್ಟಿ ಪಂಜರಗಳನ್ನು ಹೊತ್ತು ತಂದು ಮಾರುತ್ತಿದ್ದವರನ್ನು ಗದರಿಸಿಯಾದರೂ ಕಡಿಮೆ ಬೆಲೆಗೆ ನಮ್ಮ ನೆರೆ ಹೊರೆಯವರು ಕೊಂಡುಕೊಳ್ಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

ಮಳೆಯ ನಾಡಿನ ಮಳೆಯ ಸಿರಿಯನ್ನು ಮಾತುಗಳಲ್ಲಿ ಹಿಡಿದಿಡಲು ಸಾದ್ಯವಿಲ್ಲ. ಭಾರೀ ಬಿರುಗಾಳಿಗೆ ಹಿಡಿದ ಕೊಡೆ ಇರಲಾರೆ ಬಿಡು ಬಿಡೂ… ಎನ್ನುತ್ತಾ ಮೇಲ್ಮುಖವಾಗಿ ಚಲಿಸಿ ಬೀಳುವಂತೆ ನಮ್ಮ ಮಳೆಯ ಮಾತುಗಳು ಅರ್ಥವಲಯವನ್ನು ದಾಟಿ ಕೈ ಬಿಡುತ್ತವೆ ಪರಿಪೂರ್ಣವಾಗುವುದೇ ಇಲ್ಲ. ಮೇ ತಿಂಗಳ ಹದಿನೈದು ದಾಟಿದರೆ ಮಳೆಗಾಲ ಸನ್ನಿಹಿತವೆಂದರ್ಥ. ಸೌದೆ, ಸ್ವೆಟರ್, ಸಾಂಬಾರ್ ಪುಡಿಗಳನ್ನೆಲ್ಲ ತಯಾರಿ ಮಾಡಿಕೊಳ್ಳುವ ಕಾಲ. ಆ ವಾತಾವರಣದಲ್ಲಿದ್ದರೆ ಮಾತ್ರ ಆ ತಯಾರಿಯ ಅನುಭೂತಿಯನ್ನು ಅನುಭವಿಸಲು ಸಾಧ್ಯ… ಬೇಸಗೆ ರಜೆಗೆ ಕೊಡಗಿಗೆ ಬಂದವರು ಕೊಡಗಿನಿಂದ ಹೊರ ಹೋದವರ ಮುಖಾಮುಖಿ ಭೇಟಿ ಎಂಬಂತೆ ಸರಕಾರಿ ಬಸ್ ನಿಲ್ದಾಣ ನಿರಂತರ ಗಿಜಿಗುಡುತ್ತಲೇ ಮಳೆ ಪ್ರಾರಂಭವಾದೊಡನೆ ಸ್ತಬ್ಧವಾಗುತ್ತಿತ್ತು.

ಒಂದಷ್ಟು ವ್ಯಾಪಾರ ಸ್ವೆಟರ್ ಟೋಪಿಗಳು, ಕೊಡೆಗಳು, ರೈನ್‌ಕೋಟ್‌ಗಳು, ಗಂಬೂಟ್‌ಗಳು, ಬಿದಿರಿನ ಪಂಜರಗಳು, ಟಾರ್‌ಪಾಲ್‌ಗಳು, ಹೊದೆದುಕೊಳ್ಳುವ ಕಂಬಳಿಗಳು, ಮಾವಿನ ಹಣ್ಣಿನ ವ್ಯಾಪಾರ ಜೋರಾಗಿರುತ್ತಿತ್ತು. ಸ್ವೆಟರ್ ಜರ್ಕಿನ್‌ಗಳು ಎಂದರೆ ಬಯಲುಕೊಪ್ಪದ ಟಿಬೆಟ್ ಕಾಲೋನಿ ನೆನಪಾಗುತ್ತದೆ. ಕೆಂಪು ವಸ್ತ್ರದಲ್ಲಿರುತ್ತಿದ್ದ ಲಾಮಾಗಳು ಮತ್ತು ಜಪಮಣಿಗಳನ್ನು ಎಡಕೈಯಲ್ಲಿ ಧರಿಸಿರುತ್ತಿದ್ದ ಯುವತಿಯರು ವೃದ್ಧೆಯರನ್ನು ನೋಡುವುದೇ ಚಂದ. ವಿಶಿಷ್ಟವಾದ ಅವರ ಉಡುಪು ಭಾಷೆ ಸ್ವಲ್ಪವೂ ಕಲೆಯಿಲ್ಲದ ಸೇಬಿನಂತೆ ಹೊಳೆಯುತ್ತಿದ್ದ ಮುಖಗಳು ನಮಗೆ ಹೊಟ್ಟೆ ಕಿಚ್ಚು ತರಿಸುತ್ತಿದ್ದವು ಅವರ ಹತ್ತಿರ ಹೋದರೆ ವಿಶಿಷ್ಟ ಆದರೆ ನಮ್ಮ ನೆಲದ್ದಲ್ಲದ ಕೆಲ ಸಮಯದವರೆಗೆ ಸಹ್ಯವಾದ ಪರಿಮಳ ಬರುತ್ತಿತ್ತು. ಅವರ ಇಂಗ್ಲಿಷ್ ಉಚ್ಛಾರಣ ಕ್ರಮ ನಮಗಿಂತ ವಿಭಿನ್ನ ‘ಣ’, ‘ಶ’ ಕಾರಗಳನ್ನು ಹೆಚ್ಚು ಬಳಸುತ್ತಿದ್ದರು. ಅದರಲ್ಲೂ ಯುವತಿಯರು ಕೈಗಳಿಗೆ ಆಕ್ಸೆಸ್ಸರಿಸ್ ನೋಡಲು ಚೆನ್ನಾಗಿರುತ್ತಿದ್ದವು. ಬೌದ್ಧ ಧರ್ಮವನ್ನು ಅನುಸರಿಸುವ ಅವರ ಪದ್ಧತಿಗಳ ಬಗೆಗೆ ಆಗ ವಿಶೇಷ ಕುತೂಹಲವಿರುತ್ತಿತ್ತು. ಆದರೆ ಅವರೊಂದಿಗೆ ಸಂಭಾಷಿಸಲು ಭಾಷಾ ಅಡಚಣೆ ಇದ್ದ ಕಾರಣಕ್ಕೆ ಸುಮ್ಮನಾಗುತ್ತಿದ್ದೆ. ಕೆಲವೊಮ್ಮೆ ಗ್ರಾಹಕರು ಅವರಲ್ಲಿ ಸ್ವೆಟ್ ಟೋಪಿ ಖರೀದಿಸಲು ಹಿಂದು ಮುಂದು ನೋಡುತ್ತಿದ್ದಾರೆ ಎಂಬ ಸೂಕ್ಷ್ಮ ತಿಳಿದ ಕೂಡಲೆ ಮಕ್ಕಳಿಗೆ ಸ್ವೆಟರ್ ಹಾಕಿ ಸುಲಭಕ್ಕೆ ತೆಗೆಯದಂತೆ ಬಟನ್ ಹಾಕಿ ಬಿಡುತ್ತಿದ್ದರು. ಗ್ರಾಹಕರಿಗೆ ಕೊಳ್ಳದೆ ವಿಧಿ ಇರುತ್ತಿರಲಿಲ್ಲ ಅಂತೂ ಚೌಕಾಸಿ ಮಾಡಿ ಹೇಗೋ ಸ್ವೆಟರ್‌ಗಳ ಖರೀದಿ ಆಗುತ್ತಿತ್ತು. ನಾನೂ ಚಿಕ್ಕವಳಿದ್ದಾಗ ಅವರ ಬಳಿಯೇ ಸ್ವೆಟರ್ ಖರೀದಿ ಮಾಡಿ ಮೈ ಬೆಚ್ಚಗಾಯಿತು ಕಾಲಿಗೆ ಚಳಿ ಚಳಿ ಆಗುತ್ತಿದೆ ಎಂದು ತಲೆಯ ಮೇಲೆ ಮೊಟಕಿಸಿಕೊಂಡಿದ್ದು ಇನ್ನೂ ನೆನಪು. ಟಿಬೇಟಿಯನ್ ಕಾಲೊನಿ ಅವರೊಂದಿಗೆ ಸಂವಹನ ನಡೆಸಲು ಹರುಕು ಮುರುಕು ಭಾಷೆ ಬಂದಿದ್ದೆ ತಡ ಅವರ ಧರ್ಮದ ಬಗ್ಗೆ, ಚರ್ಮಕಾಂತಿಯ ಬಗ್ಗೆ ಪ್ರಶ್ನೆ ಮಾಡಿದಾಗ “ನಾವು ಶರ್ಪದೇವರನ್ನು(ಡ್ರ್ಯಾಗನ್ )ಪೂಜೆ ಮಾಡ್ತೀವಿ……” ಎಂದಿದ್ದು ಲಂವಗ ಬೆರೆಸಿದ ನೀರನ್ನು ಅವರು ಯಾವಾಗಲೂ ಸೇವಿಸುವುದು ಅವರ ಚರ್ಮಕಾಂತಿಯ ಗುಟ್ಟೂ ಹೌದು ಎಂದು ಟೀ ಕುಡಿಯುವಾಗ ಅದಕ್ಕೆ ಬೆಣ್ಣೆ ಹಾಕಿ ಬೀಟ್ ಮಾಡಿ ಕುಡಿಯುತ್ತಾರೆ ಎಂಬ ವಿಚಾರಗಳು ತಿಳಿದವು. ಆದರೆ ಟೀಗೆ ಬೆಣ್ಣೆ ಬೆರೆಸಿ ಕುಡಿಯುವ ಯೋಜನೆ ಅಂದಿನಿಂದ ಇಲ್ಲಿವರೆಗೆ ಮುಂದೂಡುತ್ತಲೇ ಇದೆ.

ನಾನು ಟೈಪಿಂಗ್ ಕ್ಲಾಸಿಗೆ ಹೋಗುತ್ತಿದ್ದಲ್ಲಿಗೇ ಟಿಬೇಟ್ ಕಾಲೊನಿಯ ಚೆಂಗ್ ಲಾಮ, ಚೆರಿಂಗ್ ಲಾಮ ಹೆಸರಿನ ಇಬ್ಬರು ಹುಡುಗಿಯರು ಬರುತ್ತಿದ್ದರು. ಅವರಿಗೆ ನನ್ನಲ್ಲಿ ದಿನ ಪತ್ರಿಕೆ ಓದಿ ಅದರರ್ಥವನ್ನು ಕೇಳಬೇಕೆನಿಸಿ ಅದನ್ನು ಭಾಷಾಂತರಿಸಿ ಹೇಳು ಎನ್ನುವಂತೆ ಸನ್ನೆ ಮಾಡಿದರು. ನನಗೆ ಕನ್ನಡ ಪತ್ರಿಕೆಯ ಸುದ್ದಿ ಸಾರಾಂಶ ಅರ್ಥವಾಯಿತು. ಹರುಕು ಭಾಷೆಯಲ್ಲಿ ಹೇಳಿದರೆ ಅವಮಾನ ಅಲ್ಲವೆ ಎಂದು ನನಗೆ ಸಮಯವಿಲ್ಲ ಎಂದು ಪಲಾಯನವಾಗಿದ್ದು ಇಂದಿಗೆ ತಪ್ಪು ಅನ್ನಿಸುತ್ತಿದೆ. ಆ ದಿನ ತಪ್ಪೋ ಸರಿಯೋ ತಿಳಿದದ್ದನ್ನ ಹೇಳಬೇಕಿತ್ತು ಅಂದಿನ ಆ ಕೀಳರಿಮೆ ಎಷ್ಟೋ ನಷ್ಟ ಉಂಟುಮಾಡಿದೆ ಎಂದರೆ ತಪ್ಪಿಲ್ಲ.

ಕಾಲ ಬದಲಾದಂತೆ ಎಲೆಕ್ಟ್ರಾನಿಕ್ ಉಪಕರಣಗಳು ದಾಂಗುಡಿ ಇಟ್ಟು ಬದುಕನ್ನು ಸುಲಭ ಮಾಡುತ್ತಿವೆ. ಅವುಗಳಲ್ಲಿ ಹೀಟರ್‌ಗಳು ಡ್ರೈಯರ್‌ಗಳು ಮುಖ್ಯವಾದವು . ಈಗ ಯುಪಿಎಸ್‌ಗಳು ಬಂದಿವೆ; ಅಷ್ಟು ಕಷ್ಟ ಅನ್ನಿಸುವುದಿಲ್ಲ. ಅವುಗಳು ಮನೆಯಲ್ಲಿ ಇಲ್ಲದೆ ಇದ್ದಾಗ ಅಗ್ಗಸ್ಟಿಕೆ ಸುತ್ತ ದೊಡ್ಡ ಬಿದಿರಿನ ಪಂಜರ ಹಾಕಿ ಬಟ್ಟೆ ಒಣಗಿಸುವುದು ಸಾಮಾನ್ಯವಾಗಿತ್ತು. ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು. ದೊಡ್ಡ ದೊಡ್ಡ ಬಿದಿರಿನ ಬುಟ್ಟಿ ಪಂಜರಗಳನ್ನು ಹೊತ್ತು ತಂದು ಮಾರುತ್ತಿದ್ದವರನ್ನು ಗದರಿಸಿಯಾದರೂ ಕಡಿಮೆ ಬೆಲೆಗೆ ನಮ್ಮ ನೆರೆ ಹೊರೆಯವರು ಕೊಂಡುಕೊಳ್ಳುತ್ತಿದ್ದರು. ಈಗ ಪಂಜರಗಳ ಬದಲಾಗಿ ಅನೇಕ ಬಿದಿರಿನ ಅಲಂಕಾರಿಕ ವಸ್ತುಗಳು ಬಂದಿವೆ. ಈಗ ಯಾರೂ ಹೊತ್ತು ಮಾರುವುದಿಲ್ಲ.

ಹಾಸನದಿಂದ ಮಡಿಕೇರಿಗೆ ಹೋಗುವಾಗ ಕುಶಾಲನಗರ ಬಳಿ ಸಿಗುವ ಬಸವನಹಳ್ಳಿಯಲ್ಲಿ ಇವರ ದೊಡ್ಡ ಮಾರಾಟ ಮಳಿಗೆಗಳೆ ಇವೆ, ವೃತ್ತಿ ಅದೇ ಆದರೂ ಕಾಲ ಬದಲಾದಂತೆ ಅವುಗಳ ಸ್ವರೂಪ ಬದಲಾಗುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.

ಮುಂಗಾರು ಮಳೆಗೆ ಮೊದಲು ಬರುವ ಪೂರ್ವ ಮುಂಗಾರು ಮಳೆಯ ಅನುಭೂತಿ ವಿಶೇಷ ಎಂದೇ ಹೇಳಬಹುದು. ಹಲಸಿನ ಹಣ್ಣು ಕೊಟ್ಟರೂ ಬಿರು ಬೇಸಗೆಯಲ್ಲಿ ಮಾವಿನ ಹಣ್ಣನ್ನು ಅಷ್ಟಾಗಿ ಕೊಡುತ್ತಿರಲಿಲ್ಲ ಮಳೆ ಬಂದ ನಂತರ ಎಷ್ಟು ಬೇಕಾದರೂ ತಿನ್ನಬಹುದಿತ್ತು. ಹೈಬ್ರೀಡ್ ತಳಿಗಳು ಅನ್ನುವುದಕ್ಕಿಂತ ಸ್ಥಳೀಯ ಮಾವಿನ ತಳಿಗಳು ವಿಶೇಷವಾಗಿ ಅದರ ಪರಿಮಳದಿಂದ ಗಮನ ಸೆಳೆಯುತ್ತಿದ್ದವು. ಜೀರಿಗೆ ಮಾವು ಅದರಲ್ಲಿ ಒಂದು ಬಗೆ ಮಾವಿನ ಹಣ್ಣಿನ ಹಾಗು ಹಲಸಿನ ಬಗೆ ಬಗೆಯ ಖಾದ್ಯಗಳು ಪ್ರತಿಯೊಬ್ಬರ ಮನೆಯಲ್ಲೂ ಘಮಿಸುತ್ತಿದ್ದವು. ಹಲಸಿನ ಕಡುಬು, ದೋಸೆ ಪರಿಮಳವೆ ಆಪ್ಯಾಯಮಾನ….. ಮಾವಿನ ಹಣ್ಣಿನ ಸೀಕರಣೆಯ ಹೊರತಾಗಿ ಚಿಕ್ಕ ಚಿಕ್ಕ ಕಾಡು ಮಾವುಗಳ ಸಾಂಬಾರ್ ಹೆಚ್ಚು ಜನಪ್ರಿಯ.

ಪೂರ್ವ ಮುಂಗಾರು ಕಳೆದು ನಿಜ ಮಳೆಗಾಲ ಪ್ರಾರಂಭವಾಗುವ ವೇಳೆಗೆ ಮಾವಿನ ಓಟೆಯಿಂದ ಮೊಳಕೆಯೊಡೆದ ಮಾವಿನ ಸಸಿಗಳು ಎಲ್ಲೆಂದರಲ್ಲಿ ಇರುತ್ತಿದ್ದವು. ಇಷ್ಟು ಆಯಿತು ಅಂದರೆ ಪಕ್ಕಾ ಮಳೆಗಾಲ ಸನ್ನಿಹಿತ ಎಂದರ್ಥ. ಮಳೆಗಾಲ ಅಂದರೆ ಕೊಡೆಗಳ ಕಾಲ ಎಂದೇ ಅನ್ವರ್ಥ ಅಲ್ವೆ! ಪ್ರತಿಯೊಬ್ಬರ ಕೈಯಲ್ಲೂ ಕೊಡೆಗಳದ್ದೆ ಕಾರುಬಾರು. ಮಳೆ ಬಂದಾಗ ಕೈ ಹಿಡಿಯುತ್ತಿದ್ದ ಈ ಕೊಡೆಗಳು ಮಳೆ ಇಲ್ಲದೆ ಇದ್ದಾಗ ಕೈ ಬಿಟ್ಟು ಹೋಗುತ್ತಿದ್ದವು ಕೊಡೆ ಮರೆತ ಕಾರಣಕ್ಕೆ ದಂಡ ಎನ್ನುವಂತೆ ಕೊಡೆಯ ಮರುಖರೀದಿ ಹಲವರದ್ದಾಗಿರುತ್ತಿತ್ತು. ಗಂಡಸರು ಪ್ಯಾಂಟಿನ ಜೇಬಿಗೆ ಶರ್ಟಿನ ಕಾಲರಿಗೆ ಸಿಕ್ಕಿಸಿಕೊಂಡಿರುತ್ತಿದ್ದರು. ಹೆಂಗಸರು ಕೈಯಲ್ಲಿ ಹಿಡಿದುಕೊಂಡು ಅವರ ನಡಿಗೆಯ ವೇಗಕ್ಕೆ ತಕ್ಕಂತೆ ಹಿಂದೆ ಮುಂದೆ ಅದೂ ತೂಗಾಡುತ್ತಿತ್ತು. ಕಾರ್ ಕಾರ್ ಎಲ್ನೋಡಿ ಕಾರ್ ಎನ್ನುವಂತೆ ಕೊಡೆ ಕೊಡೆ ಎಲ್ನೋಡಿ ಕೊಡೆ ಎನ್ನುವಂತಾಗುತ್ತಿತ್ತು. ಕೊಡೆಯಲ್ಲಿ ಸ್ವಿಚ್, ಡಬಲ್ ಫೋಲ್ಡ್, ತ್ರಿಬಲ್ ಫೋಲ್ಡ್, ಕಾಟನ್, ನೈಲಾನ್ ಹೀಗೆ ತರಹೆವಾರಿ ಕೊಡೆಗಳು ಇರುತ್ತಿದ್ದವು. ಕೊಡೆಯಲ್ಲವಿವು ಮಳೆ ಹೂಗಳು ಎನ್ನುವಂತೆ ಪ್ರತಿಯೊಬ್ಬರ ಕೈಯಲ್ಲೂ ಇರುತ್ತಿದ್ದವು.

ಗೃಹಣಿಯರು ಬಿಡುವಿನ ವೇಳೆಯಲ್ಲಿ ಸ್ವೆಟರ್, ಸ್ಕಾರ್ಫ್‌ಗಳನ್ನು ಕ್ರೋಶದಿಂದ ನಿಟ್ಟಿಂಗ್ ಮಾಡುತ್ತಿದ್ದರು. ಶಾಂತಿ ನಿಟ್ಟಿಂಗ್ ಸೆಂಟರ್ ಸ್ವೆಟರ್‌ಗಳ ಹೆಣಿಗೆಯಲ್ಲಿ ಹೆಸರು ಮಾಡಿತ್ತು. ಹಾಗಾಗಿ ಅಲ್ಲಿಯೂ ಬಹಳ ರಶ್ ಆಂದ್ರೆ ರಶ್ ಇರುತ್ತಿತ್ತು. ನನ್ನ ಪಾಲಿಗೆ ಶಾಂತಿ ಸ್ಟೋರ್ ಅಲ್ಲಿ ಸ್ವೆಟರ್ ಜೊತೆಗೆ ಶಾಂತಿ ಕಾಫಿಪುಡಿ ತರುವುದು ಮಳೆಗಾಲದ ತಯಾರಿಯ ಅವಿಭಾಜ್ಯ ಅಂಗವಾಗಿತ್ತು.

ಇದು ನೋಟ್ ಪುಸ್ತಕದ ಅಂಗಡಿಯವರಿಗಂತೂ ಸುಗ್ಗಿಯ ಕಾಲ. ಶಾಲೆಗಳು ಪ್ರಾರಂಭಕ್ಕೆ ಮೊದಲು ಎಷ್ಟು ಬೇಕೋ ಅಷ್ಟು ಪುಸ್ತಕ ತೆಗೆಸಿಕೊಂಡು ಬರುವುದು ಅವುಗಳಿಗೆ ರ್ಯಾಪರ್ ಹಾಕಿ ಲೇಬಲ್ ಹಾಕಿ ಹೆಸರು ಬರೆದಿಟ್ಟುಕೊಳ್ಳುವುದೇ ಹಬ್ಬ ಅನ್ನಿಸುತ್ತಿತ್ತು. ಅದೂ ಮುಂಗಾರು ಪೂರ್ವ ಮಳೆಗೆ ಅರಳಿದ ಸೂಜಿಸಂಪಿಗೆ, ನೆಲಸಂಪಿಗೆಗಳ ಕಂಪಿನಲ್ಲಿ. ಹೊಸ ತರಗತಿಗೆ ಬ್ಯಾಗ್ ಲಂಚ್ ಬ್ಯಾಗ್‌ ಸ್ಕೂಲ್ ಬ್ಯಾಗ್, ಕಂಪಾಸ್ ಬಾಕ್ಸ್ ಎಲ್ಲವೂ ಹೊಸವೆ ಆಗಬೇಕು. ಆದರೆ ಸರಿಯಾಗಿ ಹೋಮ್‌ವರ್ಕ್ ಮಾಡದ ಹಳೆ ಚಾಳಿ ಹಾಗೆ ಮುಂದಿನ ಮುಂದಿನ ವರ್ಷಕ್ಕೂ ಮುಂದುವರೆಯುತ್ತಲೇ ಇರುತ್ತಿತ್ತು.
ಮುಂಗಾರು ಮಳೆಗೆ ನಿಧಾನವಿಲ್ಲ ಸಂಪೂರ್ಣ ಭೂಮಿಯೇ ತೇಲುವಂತೆ ಮಾಡಬೇಕು ಎನ್ನುವ ಹಠವಿದ್ದಂತೆ ಅನ್ನಿಸುತ್ತಿತ್ತು. ಮಡಿಕೇರಿ ಮಳೆಯ ಪರಿಚಯವಿಲ್ಲದೆ ಇದ್ದ ಅನ್ನದ ಮಾರ್ಗ ಕಂಡುಕೊಳ್ಳಲು ಬರುತ್ತಿದ್ದ ಅನ್ಯ ರಾಜ್ಯದವರು ಸುಸ್ತಾಗಿ ಹೋಗುತ್ತಿದ್ದರು. ಆದರೂ ಧೃತಿ ಗೆಡದೆ ಮಳೆಯಲ್ಲೆ ಬ್ಲಾಂಕೆಟ್‌ಗಳನ್ನು ತಲೆಯ ಮೇಲೆ ಹೊತ್ತು ಬರುತ್ತಿದ್ದರು. ಮಳೆಯ ನೀರು ಹಣೆಯಿಂದ ಇಳಿದು ಮೂಗಿನ ತುದಿಯಿಂದ ತೊಟ್ಟಿಕ್ಕಿದರೂ ವ್ಯಾಪಾರ ಬಿಡುತ್ತಿರಲಿಲ್ಲ.

ಕೊಡಗು ಅಂದರೆ ಪ್ರತಿ ಮನೆಯಲ್ಲೊಂದು ಹೂತೋಟ ಕಡ್ಡಾಯವಿರುತ್ತದೆ ಎಂದೇ ತಿಳಿಯಬೇಕು. ತೀವ್ರ ಮಳೆಯಲ್ಲಿ ಕರಗಿ ಹೋಗಬಹುದಾದ ಹೂಗಿಡಗಳನ್ನು ಎಷ್ಟು ಸಾಧ್ಯವೋ ಅಷ್ಟು ಜೋಪಾನ ಮಾಡುವುದು, ಬೇಲಿಯನ್ನು ಸರಿ ಮಾಡುವುದು ಡೇಲಿಯಾ ಗಡ್ಡೆಗಳನ್ನು ಬೇರೆ ಬೆರೆ ಜಾಗಗಳಿಗೆ ಬದಲಾಯಿಸುವುದು ಹೀಗೆ ಮುಂದುವರೆಯುತ್ತಿತ್ತು. ಜಡಿ ಮಳೆ ಹಿಡಿದಾಗ ಕೈ ಚೆಲ್ಲಿ ಕೂರುವುದು. ಇನ್ನು ರೀಪಾಟ್ ಯಾವಾಗ ಮಾಡಬಹುದು ಎನ್ನುವ ಲೆಕ್ಕಾಚಾರ… ಆ ಕಾಲ ಬಂದಾಗ ಗಿಡಗಳ ಎಕ್ಸ್ ಛೇಂಜ್ ಈಗ ಬಹುಶಃ ಹಾಗಿಲ್ಲ ನರ್ಸರಿಗಳಿಗೆ ಹೋಗಿ ಮತ್ತೆ ಗಿಡಗಳನ್ನು ಖರೀದಿ ಮಾಡುವುದಿದೆ. ರೋಸ್, ಜರ್ಬೆರ, ಜೀನಿಯಾ, ಗ್ಲಾಡಿಯೋಲಸ್, ಆಂಥೋರಿಯಮ್‌ಗಳ ಹೆಚ್ಚು ಪರಿಚಯವಿರುವ ನನಗೆ ಹಾಸನದ ವಿದ್ವನ್ಮಣಿ ಒಬ್ಬರು “ಇದು ಜರ್ಬೆರಾ ಮದುವೆ ಮನೆಯಲ್ಲಿ ಅಲಂಕಾರಕ್ಕೆ ಬಳಸ್ತಾರಲ್ಲ” ಅಂದಿದ್ದು ಇಂದಿಗೂ ನಗಲಾರದ ಜೋಕ್ ಅನ್ನಿಸುತ್ತದೆ.


ಮುಂಗಾರು ಪೂರ್ವ ಮಳೆಯಲ್ಲಿ ಸಂಜೆ ಮಳೆ ಬಂದು ನಿಂತದ್ದೆ ತಡ ದೊಡ್ಡ ಪ್ಲಾಸ್ಟಿಕ್‌ನಲ್ಲಿ ಜೋಳಪುರಿ ಬರುತ್ತಿತ್ತು. ಅದನ್ನು ಲೀಟರ್‌ಗಳಲ್ಲಿ ಅಳೆದು ಕೊಡುವಾಗ ಗಿನತಿ ಎರಡೂ ಕಡೆಯಿಂದಲೂ ತಪ್ಪುತ್ತಿತ್ತು. ಗ್ರಾಹಕ ಇಲ್ಲವೆ ವ್ಯಾಪಾರಿ ಇಬ್ಬರಲ್ಲಿ ಒಬ್ಬರಿಗೆ ಲಾಭವಷ್ಟೇ…… ಹೊರಗೆ ಚಳಿ ಒಳಗೆ ಬೆಚ್ಚನೆ ವಾತಾವರಣ ತಿನ್ನಲು ಕರುಂಕುರುಂ ತಿಂಡಿ ಇದ್ದರೆ ಯಾರೂ ನೆನಪಿಗೆ ಬರುತ್ತಿರಲಿಲ್ಲ ಅಂಥ ಮಳೆಗಾಲ ಇಂದಿಗೆ ನಮಗೆ ಮನನದ ಕಾಲವಾಗಿದೆ……