ಇಲ್ಲಿನ ಕೊಳೆಗೇರಿಯೊಂದರಲ್ಲಿ ಟೆಂಟು ನಾಟಕ ಕಂಪೆನಿಯೊಂದರ ಜನಪ್ರಿಯ ನಾಯಕ ನಟರೊಬ್ಬರು ಹನ್ನೊಂದು ದಿನಗಳ ಹಿಂದೆ ವಯಸ್ಸಾಗಿ ತೀರಿಹೋಗಿದ್ದರು. ಅವರ ತಿಥಿ ಕರ್ಮಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಆಹೋರಾತ್ರಿ ಸಂಪೂರ್ಣ ರಾಮಾಯಣ ನಾಟಕವನ್ನು ನೋಡಿಕೊಂಡು ಬರಲು ನಿನ್ನೆ ಅಲ್ಲಿಗೆ ಹೋಗಿದ್ದೆ. ಒಂದಾನೊಂದು ಕಾಲದಲ್ಲಿ ಈಚಲು ವನವಾಗಿದ್ದ ಈ ಪ್ರದೇಶವು ಆನಂತರ ಅಲೆಮಾರಿ ಕಲಾವಿದರು ವಾಸಿಸುತ್ತಿರುವ ಕೊಳಗೇರಿಯಾಗಿ ಮಾರ್ಪಟ್ಟಿತ್ತು.ಕಿಳ್ಳೆಕ್ಯಾತರು, ಗೊಂಬೆರಾಮರು, ದೊಂಬಿದಾಸರು, ಬುಡಬುಡಿಕೆಯವರು ಹಾಗೂ ಬುಟ್ಟಿ ಹೆಣೆಯುವ ಕೊರಚರು ಅದುವರೆಗೆ ಎಲ್ಲೆಲ್ಲಿ ಬದುಕುತ್ತಿದ್ದರೋ; ಹತ್ತು ವರ್ಷಗಳ ಹಿಂದೆ ಒಬ್ಬೊಬ್ಬರಾಗಿ ಬಂದು ಇಲ್ಲಿ ತಡಿಕೆ ಗುಡಿಸಲುಗಳನ್ನು ಕಟ್ಟಿಕೊಂಡು ಕೊಳಚೆ ನಿವಾಸಿಗಳಂತೆ ಬದುಕುತ್ತಿದ್ದರು. ಒಂದು ಕಾಲದಲ್ಲಿ ದಶರಥನಾಗಿ, ರಾವಣನಾಗಿ, ಸತ್ಯ ಹರಿಶ್ಚಂದ್ರನಾಗಿ, ಶೂರ್ಪನಖಿಯಾಗಿ, ಸತ್ಯಭಾಮೆಯಾಗಿ ಬೇಗಡೆಯ ಕಿರೀಟಗಳನ್ನೂ ನಕಲಿ ವಜ್ರದ ಹಾರಗಳನ್ನೂ ಹಾಕಿಕೊಂಡು ನಾಟಕವಾಡುತ್ತಿದ್ದವರು ಈಗ ಯಾವ ಪಾತ್ರ ಮಾಡಬೇಕೆಂದು ಗೊತ್ತಾಗದೆ ಗಾರೆಕೆಲಸ, ಪ್ಲಾಸ್ಟಿಕ್ಕಿನ ಬಿಂದಿಗೆ ವ್ಯಾಪಾರ, ಚವರಿ ತಲೆಗೂದಲಿನ ವ್ಯವಹಾರ ಮಾಡಿಕೊಂಡು ಅದು ಹೇಗೋ ಬದುಕುತ್ತಿದ್ದರು. ಕೆಲವರು ಏನೂ ಮಾಡಲಾಗದೆ ಭಿಕ್ಷೆಯನ್ನೂ ಬೇಡುತ್ತಿದ್ದರು.
ಈ ಕೊಳೆಗೇರಿ ನಿವಾಸಿಗಳ ಪುನರ್ವಸತಿಗೆಂದು ಸರಕಾರವು ಕಳೆದ ಹತ್ತು ವರ್ಷಗಳಿಂದ ಕಟ್ಟಿಸುತ್ತಿರುವ ಬೃಹತ್ತಾದ ವಸತಿ ಸಮುಚ್ಛಯವೊಂದು ಯಾವುದೋ ಪುರಾತನವಾದ ರಾಕ್ಷಸನೊಬ್ಬನಂತೆ ಬಾಗಿಲು ಕಿಟಕಿಗಳಿಲ್ಲದೆ ಬೆಳೆಯುತ್ತಲೇ ಇದೆ.ಈ ರಾಕ್ಷಸನ ಹೊಟ್ಟೆಯೊಳಗೆ ತನಗೂ ಒಂದು ಸೂರು ಸಿಗಬಹುದೆಂದು ಬಹಳ ವರ್ಷಗಳಿಂದ ಕಾಯುತ್ತಿರುವ ಇಲ್ಲಿನವರು ಒಬ್ಬೊಬ್ಬರಾಗಿ ತೀರಿಹೋಗುತ್ತಿದ್ದಾರೆ.ಇನ್ನೂ ತೀರಿಹೋಗದ ಮುದುಕ ಮುದುಕಿಯರು ಆಸೆಕಣ್ಣುಗಳಿಂದ ಈ ಬಹುಮಹಡಿಯ ಸಮುಚ್ಛಯವನ್ನು ನಿರುಕಿಸುತ್ತಿರುತ್ತಾರೆ. ಇಲ್ಲಿಗೆ ಹೋದಾಗಲೆಲ್ಲ ಹಿರಿಯ ನಾಟಕ ಕಲಾವಿದೆಯಾದ ಇಲ್ಲಿನ ಮುದುಕಿಯೊಬ್ಬಳು ಇಲ್ಲಿನ ಮರಣ ಮತ್ತು ಜನನಗಳ ವೃತ್ತಾಂತವನ್ನು ಅರುಹುತ್ತಿರುತ್ತಾಳೆ. ಆಯಸ್ಸು ಮುಕ್ಕಾಲು ಶತಮಾನ ದಾಟಿದ್ದರೂ ನೋಡಲು ನಡುವಯಸ್ಕೆಯಂತಿರುವ ಈಕೆಗೆ ತನ್ನ ವೃದ್ಧಾಪ್ಯ ಯಾರ ಕಣ್ಣಿಗೂ ಗೋಚರವಾಗುತ್ತಿಲ್ಲವಲ್ಲ ಎಂಬ ಸಿಟ್ಟು. ಹಾಗಾಗಿ ತಾನು ಹುಟ್ಟಿದ ದಿನವನ್ನು ಕರೆಕ್ಟಾಗಿ ನೆನಪಿಟ್ಟುಕೊಂಡು ಆಗಾಗ ಹೇಳುತ್ತಾ ನನ್ನಿಂದ ಲೆಕ್ಕ ಹಾಕಿಸುತ್ತಿರುತ್ತಾಳೆ.
ಅದು ಮೈಸೂರಿನ ಮಕ್ಕಳಿಲ್ಲದ ಮಹಾರಾಜರೊಬ್ಬರು ತೀರಿಕೊಂಡ ಮೂರನೆಯ ದಿನ ಅಂದರೆ ಒಂದು ಸೋಮವಾರವಾಗಿತ್ತಂತೆ.ಬೊಂಬೆರಾಮ ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದ್ದ ಈಕೆಯ ತಂದೆತಾಯಿ ಊರೂರು ತಿರುಗುತ್ತಾ ತೊಗಲುಬೊಂಬೆ ಆಡಿಸುತ್ತಾ ನವರಾತ್ರಿಯ ಸಮಯಕ್ಕಾದರೂ ಮೈಸೂರು ತಲುಪಬೇಕು ಎಂದುಕೊಂಡು ತುಮಕೂರು ಹತ್ತಿರದ ಹಳ್ಳಿಯೊಂದರ ಅರಳಿ ಮರದ ಕೆಳಗೆ ಟೆಂಟು ಹಾಕಿಕೊಂಡು ಅಂಬಲಿ ಬೇಯಿಸಿಕೊಂಡು ಕೂತಿರುವ ಹೊತ್ತಲ್ಲಿ ಮೈಸೂರಿನ ಮಕ್ಕಳಿಲ್ಲದ ಮಹಾರಾಜರು ತೀರಿಕೊಂಡ ಸುದ್ದಿ ಅಲ್ಲಿಗೆ ಬಂದು ತಲುಪಿತಂತೆ. ಅಯ್ಯೋ ಮಾರಾಜರೇ ಹೋದಮೇಲೆ ಇನ್ನೇನು ನವರಾತ್ರಿ ಎಂದು ಅವರು ಅಲ್ಲಿಂದ ಆಂದ್ರದ ಕಡೆ ಹೊರಡಬೇಕಾದರೆ ಈ ಮುದುಕಿಯ ತಾಯಿಗೆ ಹೆರಿಗೆ ನೋವು ಕಾಣಿಸಿತಂತೆ. ಹೆರಿಗೆಯ ನೋವು ರಾತ್ರಿಯೆಲ್ಲಾ ಕಾಣಿಸಿಕೊಂಡು ಬೆಳಗಾಗುವಾಗ ಈ ಮುದುಕಿಯ ತಾಯಿ ಈ ಮುದುಕಿಯನ್ನು ಹೆತ್ತಳಂತೆ.
‘ಆ ಮಕ್ಕಳಿಲ್ಲದ ಮಹಾರಾಜರು ಸತ್ತು ಎಷ್ಟು ವರ್ಷ ಆಯ್ತು ಸಾರ್ ನೀವೇ ಲೆಕ್ಕ ಹಾಕಿ ಹೇಳಿ ಸಾರ್’ ಎಂದು ಈ ಮುದುಕಿ ಕೇಳುತ್ತಾಳೆ.
ಈ ಮುದುಕಿ ಕೇಳುತ್ತಿರುವುದು ಬಹುಶ: ನಾಲ್ವಡಿ ಕೃಷ್ಣರಾಜರ ಕುರಿತಾಗಿ ಇರಬಹುದು ಅಂದುಕೊಂಡು ನಾನು ಲೆಕ್ಕ ಹಾಕಿ ಸುಮಾರು ಎಪ್ಪತ್ತೈದು ವರ್ಷಗಳಿರಬಹುದು ಎಂದು ಹೇಳುತ್ತೇನೆ.‘ಹೌದು’ ಎಂದು ಈಕೆ ನಿಟ್ಟುಸಿರು ಬಿಡುತ್ತಾಳೆ ಈಕೆಯ ನಿಟ್ಟುಸಿರುಗಳನ್ನು ಲೆಕ್ಕ ಹಾಕುತ್ತಾ ನಡುನಡುವೆ ಆ ನಿಟ್ಟುಸಿರುಗಳನ್ನು ನಿಲ್ಲಿಸುತ್ತಾ ಈಕೆಯ ಬಳಿ ಆ ನಿಟ್ಟುಸಿರುಗಳಿಗೆ ಕಾರಣ ಕೇಳುತ್ತಾ ಹೋದರೆ ಅದೇ ಒಂದು ದೊಡ್ಡ ಇತಿಹಾಸವೂ ಪುರಾಣವೂ ಆಗುತ್ತದೆ. ದೂರದಿಂದ ನೋಡಿದರೆ ಒಬ್ಬಳು ಭಿಕ್ಷುಕಿಯಂತೆ ಕಾಣಿಸುವ ಈಕೆ ತೀರಾ ಹತ್ತಿರದಿಂದ ಒಬ್ಬಳು ಹಿರಿಯ ಅಭಿನೇತ್ರಿಯಂತೆಯೂ ತೋರುವಳು.
ಕಾಸು ಕೇಳಿದಾಗ ಕೊಡದೆ ಹೋದರೆ ದುರುಗುಟ್ಟಿಕೊಂಡು ಕೆಟ್ಟದಾಗಿ ಬೈದೂ ಹೋಗಬಲ್ಲಳು. ಒಮ್ಮೊಮ್ಮೆ ತಾಯಿಯಂತೆ ನಗುವಳು. ಮೂಗಲ್ಲಿ ಮಿನುಗುವ ಪುರಾತನವಾದ ಎರಡು ಮೂಗು ಬೊಟ್ಟುಗಳು. ಕಿವಿಯಲ್ಲಿ ಈ ಕಾಲದಲ್ಲಿ ಬೇರೆಲ್ಲೂ ಕಾಣಸಿಗದಂತಹ ವಿನ್ಯಾಸದ ಓಲೆಗಳು, ತುಟಿಯಲ್ಲಿ ತಂಬಾಕು ಜಗಿದು ಉಂಟಾಗಿರುವ ಕೆಟ್ಟ ಕಲೆಗಳು. ‘ಸ್ವಾಮೀ ನನಗೆ ಇಷ್ಟು ವಯಸ್ಸಾಗಿದೆ ಎಂದರೆ ಯಾರೂ ನಂಬುವುದೇ ಇಲ್ಲವಲ್ಲ ಏನು ಮಾಡುವುದು?’ ಎಂದು ಕಳವಳಗೊಳ್ಳುವಳು. ವಯಸ್ಸಾಗಿರುವುದು ಗೊತ್ತಾದ ಮೇಲಾದರೂ ಯಾರಾದರೂ ತನಗೆ ಸಹಾಯ ಮಾಡಲಿ ಎನ್ನುವುದು ಈಕೆಯ ಒಳ ಆಶೆ. ಆದರೆ ಸಹಾಯದ ಮಾತು ಒತ್ತಟ್ಟಿಗಿರಲಿ. ಈಕೆಗಿಂತ ಕಿರಿಯರೇ ಈಕೆಯ ಕಣ್ಣ ಮುಂದೆಯೇ ವಯಸ್ಸಾಗಿ ತೀರಿ ಹೋಗುತ್ತಿದ್ದರು.
ಹಾಗೆ ತೀರಿ ಹೋದ ಈಕೆಯ ತಮ್ಮನ ತಿಥಿ ಕರ್ಮಾಚರಣೆಯ ಪ್ರಯುಕ್ತ ಏರ್ಪಾಡಾಗಿದ್ದ ಆಹೋರಾತ್ರಿ ಸಂಪೂರ್ಣ ರಾಮಾಯಣ ನಾಟಕವನ್ನು ನೋಡಿಕೊಂಡು ಬರಲು ನಡುರಾತ್ರಿಯಲ್ಲಿ ಒಬ್ಬನೇ ಹೊರಟಿದ್ದೆ. ತೀರಿಹೋದ ಈತ ಬಹಳ ದೊಡ್ಡ ಕಲಾವಿದರಂತೆ. ಮೈಸೂರು ಸೀಮೆಯಲ್ಲಿ ಇವರಷ್ಟು ಚೆನ್ನಾಗಿ ಶ್ರೀರಾಮನ ಪಾತ್ರವನ್ನು ಬೇರೆ ಯಾರೂ ಮಾಡುತ್ತಿರಲಿಲ್ಲವಂತೆ. ಹಾಗಾಗಿ ಬೆಂಗಳೂರಿನ ಸೀನರಿ ಕಂಪನಿಯನ್ನು ಕರೆಸಿಕೊಂಡು ಸಂಪೂರ್ಣ ರಾಮಾಯಣ ಆಡಲು ರೆಡಿ ಮಾಡುತ್ತಿದ್ದರು.
ತಮ್ಮನ ವಯಸ್ಸು ಎಷ್ಟಾಗಿತ್ತು ಎಂದು ಮುದುಕಿಯಲ್ಲಿ ಕೇಳಿದೆ.
‘ಸ್ವಾಮೀ ಮಹಾತ್ಮಾ ಗಾಂಧಿ ತೀರಿ ಹೋಗಿ ಎಷ್ಟು ವಯಸ್ಸಾಯ್ತು?’ ಎಂದು ಮುದುಕಿ ನನ್ನನ್ನೇ ಕೇಳಿತು.
ಲೆಕ್ಕ ಹಾಕಿ ಹೇಳಿದೆ.
‘ನನ್ನ ತಮ್ಮನಿಗೂ ಅಷ್ಟೇ ವರ್ಷ’ ಎಂದಳು.
ಮಹಾತ್ಮಾ ಗಾಂಧಿ ತೀರಿ ಹೋದಾಗ ಇವರು ಗೊಂಬೆ ನಾಟಕ ಆಡುತ್ತ ಆಂದ್ರದ ಹಳ್ಳಿಯೊಂದರಲ್ಲಿ ಇದ್ದರಂತೆ.ಆ ವಿಷಯ ಗೊತ್ತಾದಾಗ ಮಹಾತ್ಮಾ ಗಾಂಧಿ ತೀರಿ ಹೋಗಿ ಮೂರು ದಿನ ಆಗಿತ್ತಂತೆ.ಅದಕ್ಕಿಂತ ಒಂದು ದಿನ ಮೊದಲು ಆ ತಮ್ಮ ಹುಟ್ಟಿದ್ದಂತೆ.
‘ಕಳೆಕಳೆಯಾಗಿ ಮಹಾರಾಜರಿಗಿಂತ ಚಂದ ಇದ್ದ ಸ್ವಾಮಿ ನನ್ನ ತಮ್ಮ. ನೋಡಿ ಅನ್ಯಾಯವಾಗಿ ನನಗಿಂತಲೂ ಮೊದಲೇ ಹೋಗಿಬಿಟ್ಟ’ ಎಂದು ಮುದುಕಿ ಮತ್ತೆ ನಿಟ್ಟುಸಿರು ಬಿಟ್ಟಳು.
ಆ ನಿಟ್ಟುಸಿರು ಅಷ್ಟೇನೂ ಪ್ರಾಮಾಣಿಕವಾದುದಲ್ಲ ಎಂದು ನನಗೆ ಗೊತ್ತಿತ್ತು.
ಏಕೆಂದರೆ ಟೆಂಟು ನಾಟಕ ಕಂಪನಿ ಸಂಪೂರ್ಣ ಲಾಸಾಗಿ ಹೋದಮೇಲೆ ಈಕೆಯ ತಮ್ಮ ಇದೇ ಕೊಳಗೇರಿಯಲ್ಲಿ ಒಂದು ಟೀ ಅಂಗಡಿ ಇಟ್ಟುಕೊಂಡು ಬದುಕುತ್ತಿದ್ದ. ಟೀ ಕುಡಿಯಲು ಹೋದರೆ ಅಕ್ಕನಿಂದಲೂ ಕಾಸು ಇಸಕೊಳ್ಳುತ್ತಿದ್ದ.
‘ಕಾಸು ಇಸಕೊಳ್ಳಲಿ ಬಿಡಿ ಸ್ವಾಮಿ ಅದು ಅವನ ಹೊಟ್ಟೆಪಾಡು.ಆದರೆ ಒಂದು ಗುಟುಕು ಟೀಯನ್ನಾದರೂ ಜಾಸ್ತಿ ಗ್ಲಾಸಿಗೆ ಹುಯ್ಯಬಾರದಾ?’ ಎಂದು ಈಕೆಯೇ ಬಹಳ ಸಲ ಗೊಣಗಿದ್ದಳು.
ಈಗ ನೋಡಿದರೆ ತಮ್ಮನಿಗಿಂತ ತಾನೇ ಮೊದಲು ಮೇಲೆ ಹೋಗಬೇಕಿತ್ತೆಂದು ಅಳಲು ರೆಡಿಯಾಗುತ್ತಿದ್ದಳು.
ಇರುಳು ಆ ಆಹೋರಾತ್ರಿ ಸಂಪೂರ್ಣ ರಾಮಾಯಣ ನಾಟಕವನ್ನು ಶ್ರೀರಾಮ ಲಕ್ಷ್ಮಣರ ವನವಾಸ ಶುರುವಾಗುವ ತನಕ ನೋಡಿದೆ. ಅಭಿಜಾತ ಕಲಾವಿದರೇ ಬದುಕುತ್ತಿರುವ ಆ ಕೊಳೆಗೇರಿಯಲ್ಲಿ ಆ ಬಡತನ ಆ ಹಸಿವು ಮತ್ತು ಹರಿಯುತ್ತಿರುವ ಗಲೀಜು ಚರಂಡಿ ನೀರಿನ ಆ ವಾಸನೆಯ ನಡುವೆಯೇ ಅವರೆಲ್ಲ ತ್ರೇತಾಯುಗಕ್ಕೆ ತೆರಳಿ ಆ ಮಂಕುಮಂಕು ಬೆಳಕಲ್ಲಿ ಎಲ್ಲವನ್ನು ಮರೆತು ನಾಟಕವಾಡುತ್ತಿದ್ದರು. ನಾನೂ ಎಲ್ಲವನ್ನೂ ಮರೆತು ನೋಡುತ್ತಿದ್ದೆ. ಋಷಿಮುನಿಯ ಪಾತ್ರಧಾರಿಯೊಬ್ಬ ಸತ್ಯಯುಗ,ತ್ರೇತಾಯುಗ, ಧ್ವಾಪರಯುಗ, ಕಲಿಯುಗ ಎಂದು ಕಾಲವನ್ನು ವಿಂಗಡಿಸಿ ಸಾವಿರಾರು ವರ್ಷಗಳನ್ನು ತನ್ನ ನಾಲಗೆಯ ತುದಿಯಿಂದ ಹಣ್ಣಿನ ಹಾಗೆ ಮೆಲ್ಲುತ್ತಿದ್ದ.
ಆ ಪಾತ್ರಧಾರಿಯನ್ನೂ ಅಣಕಿಸುವ ಹಾಗೆ ಆ ಕತ್ತಲಲ್ಲಿ ಕಾಣುತ್ತಿದ್ದ ಆ ಬೃಹತ್ತಾದ ವಸತಿ ಸಮುಚ್ಛಯ. ಮನಸ್ಸು ಇರುವ ಯಾವ ಕನಿಷ್ಠ ವ್ಯವಸ್ಥೆಯಾದರೂ ಆ ಸಮುಚ್ಛಯದ ಕೀಲಿ ಕೈಯನ್ನು ಈ ಕಲಾವಿದರಿಗೆ ಅವರು ಸಾಯುವ ಮೊದಲೇ ಒಪ್ಪಿಸಬಹುದಿತ್ತು.ಆದರೆ ಯಾವ ಸರಕಾರವೂ ಖಂಡಿತ ನನ್ನನ್ನು ನಿಮಗೆ ಕಲಿಯುಗ ಕಳೆದರೂ ಒಪ್ಪಿಸುವುದಿಲ್ಲ ಎಂಬಂತೆ ಬೃಹತ್ತಾದ ಆ ವಸತಿ ಸಮುಚ್ಛಯ ಆ ನಾಟಕ ಆಡುವವರನ್ನೂ ನೋಡುವವರನ್ನೂ ಅಣಕಿಸುತ್ತಿತ್ತು.
ಜೂನ್ ೨೦೧೪
ಫೋಟೋಗಳು: ಲೇಖಕರವು
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.