Advertisement
ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು. ಕಟ್ಟುವೆವು ನಾವು ಎನ್ನುವ ಅಡಿಗರ ಪದ್ಯ ಕೆಡವುವೆವು ನಾವು ಎಂದು ಬದಲಾಯಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂಭತ್ತನೆಯ ಕಂತು

ಹಿಂದಿನ ಎಪಿಸೋಡ್ ಹೀಗೆ ಅಂತ್ಯ ಕಂಡಿತ್ತು:
“ಅಮ್ಮಾವ್ರ ಎದುರು ಐಡಿಯಾ ಹೇಗೆ ಕೊಡ್ತೀರಾ..”

“ತುಂಬಾ ಸುಲಭ ಸಾಮಿ. ಬಾಗಿಲು ಎಲ್ಲೋ ಇಡಬೇಕು ಕಿಟಕಿ ಎಲ್ಲೋ ಇಡಬೇಕು, ಒಗೆಯೋ ಬಂಡೆ ಎಲ್ಲೋ ಮಡಗಬೇಕು ಅಂತ ಗಂಡಸು ನಮಗೆ ಹೇಳಿರುತ್ತೆ ಅನ್ನಿ. ಅಮ್ಮೋರು ಬಿಲ್ಡಿಂಗ್ ನೋಡಕ್ಕೆ ಅಂತ ಅವರ ಫ್ರೆಂಡ್ಸ್ ಜತೆ ಬರ್ತಾರೆ ನೋಡಿ, ಆಗ ಗಾರೆ ಮೇಸ್ತ್ರಿನೂ ನಾನೂ ಮಾತಾಡೋದು. ಒಗೆಯೋ ಬಂಡೆ ಇಲ್ಲಿ ಮಡಗಿದ್ರೆ ಚೆನ್ನ, ಆದರೆ ಓನರ್‌ಗೆ ಇಲ್ಲಿ ಚೆನ್ನ ಅಂತೆ ಅಂತ ಅವರ ಐಡಿಯ ಉಲ್ಟಾ ಹೊಡೆಯೋದು……” ಹೀಗೆ ಮೈಮರೆತು ಕತೆ ಬಿಡ್ತಾ ಇದ್ದನಾ? ಮಧ್ಯೆ ದಿ ಮೋಸ್ಟ್ ಇಂಪಾರ್ಟೆಂಟ್ ಪ್ರಶ್ನೇ ತೂರಿಸಿದೆ..

“ಬೇವಿನಮರದ ಬಾಗಿಲು ಅದು ಹೇಗೆ ಹೇಳ್ತಿಯಾ…”

ಮಾತಿನಲ್ಲಿ ಮುಳುಗಿದ್ದ ಅಂತ ಹೇಳಿದ್ದೆ ತಾನೇ ಮೂಡಿನಲ್ಲಿ ಬಾಯಿಬಿಟ್ಟ.
“ಮೊದಲು ದೇವರು ಮೆಚ್ಚುಲ್ಲ… ದಿನಾ ಯಾರ ಯಾರದ್ದೋ ಕಾಲಲ್ಲಿ ತುಳಿಸಿಕೊಳ್ಳೋದು ಅನ್ನೋದು. ಅದಾದಮೇಲೆ ಮುಟ್ಟು ಮೈಲಿಗೆ ಸೂತಕ ಪಾತಕ ಇರೋ ಮನೇಲಿ ದೇವರ ಮರ ಇದ್ದರೆ ವಂಶ ಬೆಳೆಯಾಕಿಲ್ಲ ಅಂತ……” ಇದ್ದಕ್ಕಿದ್ದ ಹಾಗೆ ಕಣ್ಣು ತೆರೆದ ಮತ್ತು ಮಾತು ತಟಕ್ ಅಂತ ನಿಂತಿತು!

“ಸಾಮೀ, ಹಿಂಗಾ ಮೋಸ ಮಾಡೋದೂ….” ಅಂತ ಪೆಚ್ಚು ಪೆಚ್ಚಾಗಿ ನಕ್ಕ. ಎಸ್ಸೆಎಲ್‌ಸಿ ಫೇಲಾಗಿರೂ ವಿದ್ಯಾಮಂತ್ರಿ ಇಂಗ್ಲೀಷ್‌ನಲ್ಲಿ ಮಾತಾಡಿ ಸಿಕ್ಕಿಕೊಂಡವನ ಮುಸುಡಿ ಹೇಗಿರುತ್ತೋ ಹಾಗಿತ್ತು ಅವನ ಮುಸುಡಿ!

ಮುಂದೆ ಬಾಗಿಲು ಜೋಡಿಸುವ ಮುನ್ನ ಈ ಪ್ರಾಬ್ಲಂ ಹೇಗೆ ಸಾಲ್ವ್ ಮಾಡಿದೆ ಮತ್ತು ಈ ಬಾಗಿಲಿಗೆ ಪೇಟೆಂಟ್ ಮಾಡಿಸದೇ ಹೇಗೆ ಕೋಟಿ ಕೋಟಿ ಕಳೆದುಕೊಂಡೆ ಎನ್ನುವುದು ಈಗ ಮರೆತರೂ ಮರೆಯಲಾಗದ ಕಥೆ!

ಈಗ ಮುಂದಕ್ಕೆ…
ನನ್ನ ಪುರಾಣಕ್ಕೆ ಮುಂದಡಿ ಇಡುವ ಮೊದಲು ಒಂದು ಮರೆತು ಹೋಗಬಹುದಾದ ಸಂಗತಿ ಹೇಳಿಬಿಡುತ್ತೇನೆ. ಅದೇನು ಅಂದಿರಾ… ಬೆಂಗಳೂರಿಗೆ ವಾಸ್ತು ಶಿಲ್ಪಿಗಳು ನುಗ್ಗಿದ ಕಾಲ. ನಮ್ಮ ಮನೆ ಕಟ್ಟಿದಾಗ ವಾಸ್ತು ತಜ್ಞರು ಇನ್ನೂ ಹುಟ್ಟಿರಲಿಲ್ಲ. ಇವರ ಜನನ 1995ರ ಆಸು ಪಾಸು ಆಯಿತು. ಈ ಸಮಯದಲ್ಲಿ ನನ್ನ ಗೆಳೆಯ ಶ್ರೀನಿವಾಸ ಮೂರ್ತಿ ನಮ್ಮ ಮನೆಗೆ ಬಂದರು. ಒಂದು ಸಲ ಲೊಚ್ ಅಂದರು. ಅವರ ಮುಖ ನೋಡಿದೆ. ವಾಸ್ತು ಪುರುಷನ ತಲೆ ಮೇಲೆ ನಿಮ್ಮ ಓವರ್ ಹೆಡ್ ಟ್ಯಾಂಕ್ ಬಂದಿದೆ. ಹೀಗೆ ಬರಬಾರದು ಅಂದರು! ಟ್ಯಾಂಕ್ ಬದಲಾಯಿಸಬೇಕು ಅಂದರೆ ಅದಕ್ಕೆ ಕೆಲವು ಸಾವಿರ, ಜತೆಗೆ ಬದಲಾಯಿಸುವ ಇಚ್ಛೆ ಇಲ್ಲ. ಮೂರ್ತಿ ನೀವು ನಿಮ್ಮ ವಾಸ್ತು.. ಹ ಹ ಹ್ ಅಂದೆ.

ಮತ್ತೆ ವಾಸ್ತು ತಜ್ಞರ ಬಳಿಗೆ… ಇದ್ದಕ್ಕಿದ್ದ ಹಾಗೆ ಬೆಂಗಳೂರಿನ ಸಾಹುಕಾರರುಗಳು ತುಂಬಿದ್ದ ವಿಶ್ವೇಶ್ವರಪುರದಲ್ಲಿ ಮನೆಗಳನ್ನು ಕೆಡವುವ, ಕಿಟಕಿ ಬಾಗಿಲು ದಿಕ್ಕು ಬದಲಿಸುವ ಮನೆ ಮುಂದಿನ ಹಿಂದಿನ ಐವತ್ತು ಅರವತ್ತು ವರ್ಷ ಬೆಳೆದ ಮನೆಗೆ ತಂಪು ಕೊಟ್ಟ ಮರಗಳ ಮಾರಣ ಹೋಮ ನಡೆಯಿತು. ಬೆಂಗಳೂರಿನ ಚಿನ್ನ ಬೆಳ್ಳಿ ವ್ಯಾಪಾರಿಗಳ ವಾಸಸ್ಥಾನ ಈ ವಿಶ್ವೇಶ್ವರಪುರ. ಇಲ್ಲಿ ಮೊದಲು ಈ ವಾಸ್ತು ಶಿಲ್ಪಿಗಳ ಧಾಳಿ ನಡೆದದ್ದು, ನಂತರ ಇದು ಕಾಳ್ಗಿಚ್ಚಿಗಿಂತ ವೇಗವಾಗಿ ಬೆಂಗಳೂರು ಹರಡಿ ನಂತರ ಕರ್ನಾಟಕದ ಇತರ ಭಾಗಗಳಿಗೂ ನುಗ್ಗಿತು.

ವಾಸ್ತು ತಜ್ಞರು ಎನ್ನುವ ಒಂದು ಹೊಸ ಉದ್ಯೋಗ ಸೃಷ್ಟಿಯಾಯಿತು. ಈಗ ಇದರ ಕತೆಗೆ.. ವಾಸ್ತು ಸಲಹೆ ಎನ್ನುವ ಹೊಸಾ ಜ್ಯೋತಿಷ್ಯ ವಿಂಗ್ ಶುರು ಆದವು. ಎಂದೂ ಕೇಳಿರದ ಅಸಂಖ್ಯಾತ ವಾಸ್ತು ತಜ್ಞರು ಎಲ್ಲೆಂದರಲ್ಲಿ ಹುಟ್ಟಿದರು ಮತ್ತು ಬೆಂಗಳೂರಿಗರಿಗೆ ಸಲಹೆ ಕೊಡಲು ಆರಂಭಿಸಿದರು. ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ತಮ್ಮ ತಮ್ಮ ಮನೆಗಳ ಬಾಗಿಲ ದಿಕ್ಕು ಬದಲಾಯಿಸಿದರು. ತಮ್ಮ ತಮ್ಮ ಮನೆಗಳ ಗೇಟಿನ ದಿಕ್ಕು ಬದಲಾಸಿದರು. ತಮ್ಮ ತಮ್ಮ ಮನೆಗಳ ಅಡಿಗೆ ಮನೆ ಬಾಗಿಲ ದಿಕ್ಕು ಬದಲಾಯಿಸಿದರು. ತಮ್ಮ ತಮ್ಮ ಮನೆಗಳನ್ನು ಸಂಪೂರ್ಣ ಕೆಡವಿ ವಾಸ್ತು ತಜ್ಞ ಕೊಟ್ಟ ಸೂಚನೆ ಮೇರೆಗೆ ಬದಲಾಯಿಸಿದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು. ಕಟ್ಟುವೆವು ನಾವು ಎನ್ನುವ ಅಡಿಗರ ಪದ್ಯ ಕೆಡವುವೆವು ನಾವು ಎಂದು ಬದಲಾಯಿತು!

ಸುಮಾರು ವಾಸ್ತು ಶಿಲ್ಪಿಗಳ ತವರು ಆಂಧ್ರ. ಅಲ್ಲಿಂದ ಗುಂಪು ಗುಂಪಾಗಿ ಬಂದ ವಾಸ್ತು ತಜ್ಞರು ಇಲ್ಲಿನ ಪ್ರತಿಯೊಬ್ಬರಿಗೂ ಅದರ ಹುಚ್ಚು ಅಂಟಿಸಿದರು. ಈ ಹುಚ್ಚು ಹೇಗಿತ್ತು ಅಂದರೆ ಮನೆಯೇ ಬೃಂದಾವನ ಎನ್ನುವುದು ಮನೆಯೇ ಸಕಲ ತೊಂದರೆಗಳಿಗೂ ಮೂಲ ಕಾರಣ ಎನ್ನುವ ಹಾಗಾಯಿತು. ಯಾರ ಮನೆಗೆ ಹೋದರೂ ಅಲ್ಲಿ ಈವರೆಗೆ ಕಾಣದ ವಿಚಿತ್ರಗಳು ಗೋಚರಿಸಲಾರಂಭಿಸಿದವು.

ಕೆಲವರ ಮನೆ ಮುಂಬಾಗಿಲು ದಿಕ್ಕು ಬದಲಿಸಿತು, ಕೆಲವರ ಮನೆ ಕಿಟಕಿ, ಮತ್ತೆ ಕೆಲವರ ಮನೆ ರೂಮು ಹಾಲು.. ಪಲ್ಲಟಗೊಂಡಿದ್ದವು ಮತ್ತು ಮನೆಯ ಲುಕ್ ಬದಲಾಗಿತ್ತು. ಹಿಂದಿನ ತಾತನೋ ಮುತ್ತಾತನೋ ಕಟ್ಟಿದ್ದ ಆ ಕಾಲದ ಮನೆ ತನ್ನ ಬಾಹ್ಯ ಸೌಂದರ್ಯ, ಆಂತರಿಕ ಸೌಂದರ್ಯ ಕಳೆದುಕೊಂಡಿತ್ತು. ಒಟ್ಟಿನಲ್ಲಿ aesthetic look ಸಂಪೂರ್ಣ ನಶಿಸಿದ್ದವು. ಕೆಲವರ ಮನೆಯ ರುಬ್ಬುಕಲ್ ಅಡುಗೆ ಮನೆಯಿಂದ ಪಡಸಾಲೆಗೆ ಬಂದವು. ಮತ್ತೆ ಕೆಲವರ ಮನೆಯಲ್ಲಿ ದೇವರ ಮನೆ ಮನೆಯ ಹೊರಗೆ ಮರು ಸ್ಥಾಪಿತವಾಯಿತು.

ಕೆಲವರು ಅದರಲ್ಲಿಯೂ ಪ್ರತಿಷ್ಠಿತರು ತಮ್ಮ ಹೆಸರನ್ನೇ ಬದಲಾಯಿಸಿಕೊಂಡರು. ಸೈಂಟಿಫಿಕ್ ಮನೋ ಧರ್ಮದವರು, ರೇಷನಲಿಸ್ಟ್ ಅಂದರೆ ವಿಚಾರವಾದಿಗಳು ಎಂದು ಬಿಂಬಿಸಿಕೊಂಡಿದ್ದ ಸುಮಾರು ಜನ ಈ ಮೋಡಿಗೆ ಒಳಗಾಗಿ ತಮ್ಮ ಮನೆಯ ರೂಪ ಬದಲಿಸಿಕೊಂಡರು. ಕೆಲವು ದಿವಸ ತಮ್ಮ ಸೈಂಟಿಫಿಕ್ ಮನೋ ಧರ್ಮದವರು, ರ್ಯಾಷನಲಿಸ್ಟ್ ಅಂದರೆ ವಿಚಾರವಾದಿಗಳು ಎನ್ನುವ ಬೌಂಡರಿಯಿಂದ ಹೊರಬಂದರು. ಬಹುಶಃ ಇದೇ ಸಮಯದಲ್ಲಿಯೇ ಮನುಷ್ಯನ ಬಾಹ್ಯ ರೂಪು ಸಹ ಬದಲಾವಣೆ ಕಂಡಿತು. ಇದುವರೆಗೆ ತಮಾಶೆಗೆ ಗುರಿಯಾಗಿದ್ದ ಪಿಳ್ಳ ಜುಟ್ಟು ಈಗ ಫ್ಯಾಶನ್ ಆಯಿತು. ಹುಡುಗರು ಕಚ್ಚೆ ಪಂಚೆ ಉಟ್ಟು ಮೆರೆದರೆ ಹುಡುಗಿಯರು ಸೀರೆ ಉಡಲು ಆರಂಭಿಸಿದರು. ತಲೆ ಮಧ್ಯೆ ಮೂರು ಗೆರೆ, ಅಡ್ಡಕ್ಕೆ ಎರಡು ಗೆರೆ ಹೀಗೆ ಅದೇನೇನೋ ಹೊಸ ಡಿಸೈನ್‌ ಬಂದವು!

ಟಿವಿ ಚಾನಲ್ಲುಗಳಲ್ಲಿ ವಾಸ್ತು ಶಿಲ್ಪಿಗಳ ಇಂಟರ್ವ್ಯೂ ದಿವಸಕ್ಕೆ ಎಂಟು ಹತ್ತು ಸಲ ನಡೆಯಿತು. ಅಲ್ಲೇ ಒಂದು ಪ್ರಶ್ನೋತ್ತರ ಶೆಡ್ಯೂಲ್ ಸಹ ನಡೆಯುತ್ತಾ ಇತ್ತು. ವಾಸ್ತು ಶಾಸ್ತ್ರದ ಬಗ್ಗೆ ವಿಫುಲವಾದ ಸಾಹಿತ್ಯ ದೇಶದ ಎಲ್ಲೆಡೆ ಎಲ್ಲಾ ಭಾಷೆಗಳಲ್ಲಿ ತುಂಬಿ ತುಳುಕಿತು. ಯಾವುದೇ ಪುಸ್ತಕದ ಅಂಗಡಿಗೆ ಹೋದರೂ ವಾಸ್ತು ಶಾಸ್ತ್ರ ಕುರಿತ ಹಾಗೆ ಕೆಲವು ಕಪಾಟುಗಳಲ್ಲಿ ಪುಸ್ತಕಗಳು ಎದ್ದು ಕಾಣುತ್ತಿತ್ತು. ಒಂದು ಬುದ್ಧಿವಂತರ ಗುಂಪು ಯೂನಿವರ್ಸಿಟಿಗಳಲ್ಲಿ ವಾಸ್ತುಶಾಸ್ತ್ರವನ್ನು ಒಂದು ಬೋಧನಾ ವಿಷಯ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ತಂದರು. ಮತ್ತೆ ಕೆಲವರು ವಾಸ್ತು ಅಧ್ಯಯನ ಮತ್ತು ಸಂಶೋಧನೆಗೆ ಒಂದು ಬೇರೆಯೇ ವಿಭಾಗ, ಬೇರೆಯೇ ವಿಶ್ವವಿದ್ಯಾಲಯ ಇರಲಿ ಎನ್ನುವ ಹೋರಾಟ ನಡೆಸುವ ಹುನ್ನಾರ ಹೊಂದಿದ್ದರು.

ಈ ಮಧ್ಯೆ ವಾಸ್ತು ಶಾಸ್ತ್ರಕ್ಕೆ ಸಿಗುತ್ತಿರುವ ಪ್ರಚಾರ ಮತ್ತು ಅದರಿಂದ ಬರುತ್ತಿದ್ದ ಆದಾಯದ ಕಡೆ ಕಣ್ಣು ಹಾಕಿದ ಹಲವರು ಕನ್ಸಲ್ಟೇಶನ್ ಸೆಂಟರ್ ತೆಗೆದರು. ಮನೆ ಮುಂದೆ ಈ ಮೊದಲು ಬರುತ್ತಿದ್ದ ಗಿಣಿ ಶಾಸ್ತ್ರದವರ ಹಾಗೆ ವಾಸ್ತು ಶಾಸ್ತ್ರಿಗಳು ಬರುತ್ತಿದ್ದರು. ಶಾಸ್ತ್ರಿಗಳು ಎಂದರೆ ಇಲ್ಲಿ ತಜ್ಞ ಎನ್ನುವ ಅರ್ಥದಲ್ಲಿ ಪದ ಪ್ರಯೋಗ ಆಗಿದೆಯೇ ಹೊರತು ಯಾವುದೇ ಸಮಾಜವನ್ನು ಪರಿಹಾಸ್ಯ ಮಾಡಲು ಅಲ್ಲ ಎನ್ನುವುದನ್ನು ಮೊದಲು ಹೇಳಿಬಿಡುತ್ತೇನೆ! ಸಮಾಜ ಶಿಕ್ಷಕನನ್ನು ಸಮಾಜ ಶಾಸ್ತ್ರಿ ಎಂದು ಕರೆದ ಹಾಗೇ ಈ ಪದ ಸಹ.

ಇಂತಹ ವಾಸ್ತು ಶಾಸ್ತ್ರಿಗಳು ಸುಮಾರು ಆಂಧ್ರದಿಂದ ಬರುತ್ತಿದ್ದರು. ಬಂದ ಹೊಸತರಲ್ಲಿ ಒಂದು ಕೆಂಪು ಅಂಚಿನ ಜೋಡಿ ದಟ್ಟಿ ಪಂಚೆ, ಮೇಲೊಂದು ಬಣ್ಣ ಬಣ್ಣದ ಶರ್ಟು, ಶರ್ಟಿನ ಮೇಲೆ ಎದ್ದು ಕಾಣುವ ಹಾಗೆ ಗಿಲಿಟಿನ ಒಂದು ಸರ ಅವರ ವೇಷ, ಒಂದು ಸಾಧಾರಣ ಚಪ್ಪಲಿ ತೊಡುತ್ತಿದ್ದರು. ಇಲ್ಲಿ ವ್ಯಾಪಾರ ಕುದುರಿ ಜೇಬು ತುಂಬುತ್ತಿದ್ದ ಹಾಗೇ ಕಾರು ಅದಕ್ಕೆ ಡ್ರೈವರ್, ಹೋಟಲ್ ರೂಮು, ಒಂದು ರಿಸೆಪ್ಷನ್ ಹುಡುಗಿ, ಮುಂಗಡ ಫೀಸು…. ಹೀಗೆ ಸಾಮ್ರಾಜ್ಯ ಕಟ್ಟಿಕೊಂಡರು. ಸುಮಾರು ಹದಿನೈದು ಇಪ್ಪತ್ತು ವರ್ಷ ಇಡೀ ಬೆಂಗಳೂರು, ಕರ್ನಾಟಕ ಮತ್ತು ದೇಶ ಸಹ ಇವರ ಮುಷ್ಟಿ ಒಳಗಿತ್ತು ಎಂದೇ ಹೇಳಬೇಕು. ಇದರ ಇನ್ನೊಂದು ಮುಖ ಎಂದರೆ ಸಾವಿರಾರು ಮಂದಿಗೆ ಇದರಿಂದ ಆದ ಲಾಭ. ಮನೆ ಕೆಡವಿದಾಗ ಸಿಗುವ ಮರದ ಬಾಗಿಲು, ಕಿಟಕಿ, ಕಬ್ಬಿಣ, ಸೈಜ್ ಕಲ್ಲು, ಚಪ್ಪಡಿ ಮೊದಲಾದ ಮನೆ ನಿರ್ಮಾಣಕ್ಕೆ ಬೇಕಾಗುವ ಸಾಮಾನುಗಳ ಸಂಗ್ರಹಣೆ ಇಡೀ ನಗರದಲ್ಲಿ ಹಬ್ಬಿತು. ಆವರೆಗೆ ಒಬ್ಬರೂ ಕೇಳಿರದ ಇಂತಹ ಗೋಡೌನ್‌ಗಳು ಬೆಂಗಳೂರಿನ ಎಲ್ಲಾ ಕಡೆ ಶುರುವಾದವು ಮತ್ತು ನೆರೆಯ ನಗರಗಳಿಗೂ ವಿಸ್ತರಣೆ ಗೊಂಡಿತು. ಅದನ್ನು ನೋಡಿಕೊಳ್ಳಲು ಜನ ಹುಟ್ಟಿದರು, ಅದರ ಮಾರಾಟಕ್ಕೆ ಜನ ಬಂದರು, ಅದರ ಗೋಡೌನ್‌ಗಳಿಗೆ ಕಾವಲು ಬಂದರು… ಹೀಗೆ ಒಂದರ ಹಿಂದೆ ಮತ್ತೊಂದು ಉದ್ಯೋಗ ಶರವೇಗದಲ್ಲಿ ಸೃಷ್ಟಿಯಾಯಿತು. ಮನೆ ಕೆಡವಲು ದೊಡ್ಡ ಕೆಡವು ಪಡೆ ಹುಟ್ಟಿತು. ಮೊದ ಮೊದಲು ಇವರು ಬಂದು ಮನೆ ನೋಡಿ ಕೆಡವಲು ಮತ್ತು ಡೆಬ್ರಿಸ್ ಅಂದರೆ ಅವಶೇಷ ಸಾಗಿಸಲು ಒಂದು ದರ ನಿಗದಿ ಪಡಿಸುತ್ತಿದ್ದರು. ಕಾಲ ಕಳೆದ ಹಾಗೆ ಪೈಪೋಟಿ ಹೆಚ್ಚಿತು. ಅದರ ನೇರ ಫಲ ಮನೆ ಮಾಲೀಕರಿಗೆ ಸಿಕ್ಕಿತು. ಮನೆ ಕೆಡವಲು, ಅವಶೇಷ ಸಾಗಿಸಲು ಮನೆ ಮಾಲಿಕ ತನ್ನ ಪಾಲಿನ ಮೊತ್ತ ಗಳಿಸುವ ಹಾಗಾಯಿತು. ಇದೆಲ್ಲಾ ಹೊಸದಾಗಿ ಹುಟ್ಟಿಕೊಂಡ ವಾಸ್ತು ಶಾಸ್ತ್ರಿಗಳು ತಮ್ಮ ಪ್ರೊಫೆಷನ್ ಬೆಳೆಸಿದ ನೇರ ಪರಿಣಾಮ. ತಮಾಷೆ ಎಂದರೆ ಸಮಾಜದ ಬದಲಾವಣೆಯನ್ನು ಆಗಾಗ ದಾಖಲಿಸುತ್ತಾ ಬರುವ ನಮ್ಮ ಸಮಾಜ ಶಾಸ್ತ್ರಿಗಳು ಇನ್ನೂ ಇದರ ಬಗ್ಗೆ ಏನೂ ಟೀಕೆ ಟಿಪ್ಪಣಿ ಹಾಕಿಲ್ಲದಿರುವುದು! ಸಮಾಜ ಶಾಸ್ತ್ರಿ ಅಲ್ಲದ ಬಡ ಸಾಹಿತಿ ಒಬ್ಬ ಇಂತಹ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣನಾದ ಎಂದು ಮುಂದೆ ಯಾರಾದರೂ ನನ್ನನ್ನು ನೆನೆದಾರು ಎನ್ನುವ ಒಳ ಸಂತೋಷ ನನಗೆ…!

ಈ ಬದಲಾವಣೆ ಆಗುತ್ತಾ ಬಂದ ಹಾಗೆ ಜನ ವಾಸ್ತು ಶಿಲ್ಪಿಗಳನ್ನು ಮರೆತೇ ಹೋದರು. ಸುಮಾರು ವಾಸ್ತುಶಿಲ್ಪಿಗಳು ಬೇರೆ ಉದ್ಯೋಗ ಹುಡುಕಿಕೊಂಡು ಹೊಸಾ ಬಕ್ರಾಗಳನ್ನು ಹುಡುಕಿ ಹೊರಟರು. ಈಗಾಗಲೇ ಬೇರು ಬಿಟ್ಟಿದ್ದ ಹಲವರು ಹಿಂದೆ ನೆಟ್ಟಿದ್ದ ಆಲದ ಮರಕ್ಕೆ ಇನ್ನೂ ಜೋತು ಬಿದ್ದಿದ್ದಾರೆ. ಇದೇ ಸಮಯದಲ್ಲಿ ನಾನು ಒಂದು ಹಾಸ್ಯ ಲೇಖನ ಬರೆದಿದ್ದೆ. ಅದರ ಝಿಸ್ಟ್ ಇದು! ಮನೆಯ ಹಿರಿಯ ಮಗ ಯಾರದ್ದೋ ಪ್ರಭಾವಕ್ಕೆ ಒಳಗಾಗಿ ತನ್ನ ವೃತ್ತಿಯಲ್ಲಿ ಯಶಸ್ಸು ಗಳಿಸಲು ವಾಸ್ತು ತಜ್ಞರ ಬಳಿ ಹೋಗುತ್ತಾನೆ. ತಜ್ಞ ಮನೆ ನೋಡಿ ಪರಿಹಾರ ಸೂಚಿಸುವ ಐಡಿಯ ಹೇಳುತ್ತಾನೆ ಮತ್ತು ಅವನು ಮನೆಗೆ ಬಂದ. ಮನೆಯ ಸುತ್ತಾ ಐದಾರು ಸುತ್ತು ಸುತ್ತಿದ. ಆಗಾಗ ಜೇಬಿನಿಂದ ಸಣ್ಣ ಪುಸ್ತಕ ತೆಗೆದು ಅದೇನೇನೋ ನೋಟ್ಸ್ ಬರೆದುಕೊಂಡ. ಮನೆ ಒಳಗೆ ಬಂದು ತನ್ನ ಐಡಿಯಾ ಕೊಟ್ಟ…”ಮನೆ ಮುಂದಿನ ಮರ ತೆಗೆಸಿ ಅದರಿಂದ ವಾಸ್ತು ಪುರುಷನ ದೃಷ್ಟಿಗೆ ಅಡ್ಡ ಆಗ್ತಾ ಇದೆ ಅಂದ. ಹಿರಿಮಗ ತಲೆ ಆಡಿಸಿದ. ಮನೆ ಮುಂದಿನ ಬಾಗಿಲು ದಿಕ್ಕು ಸರಿ ಇಲ್ಲ ಅದನ್ನು ತೊಂಬತ್ತು ಡಿಗ್ರೀ ಉತ್ತರಕ್ಕೆ ತಿರುಗಿಸಬೇಕು ಅಂದ.

ಹಿರಿಮಗ ತಲೆ ಆಡಿಸಿದ. ಮನೆ ಮಧ್ಯದ ರೂಮು ನೋಡಿ ಅದರಲ್ಲಿರೋ ಕಬೋರ್ಡ್ ನೇರ ಸೂರ್ಯನ ಎದುರು ಇದೆ. ಅದು ಪಕ್ಕಕ್ಕೆ ಹೋಗಬೇಕು ಅಂದ. ಹಿರಿಮಗ ತಲೆ ಆಡಿಸಿದ. ನಿಮ್ಮ ಟಾಯ್ಲೆಟ್ ಸರಿ ಇಲ್ಲ. ಎಲ್ಲಾ ಪೂರ್ವಕ್ಕೆ ಇದೆ. ಸೂರ್ಯನ್ನ ನೋಡ್ತಾ ಯಾರಾದರೂ ಶೌಚಾ ಮಾಡ್ತಾರ್ಯೆ….. ಹೀಗೆ ಒಂದೊಂದೇ ಪಟ್ಟಿ ಕೊಡ್ತಾ ಹೋದ. ಹಿರಿಮಗ ತಲೆ ಆಡಿಸುತ್ತಾ ಹೋದ. ಕೊನೆ ಭಾಗಕ್ಕೆ ಬಂದ. ನಿಮ್ಮ ಅಡುಗೆ ಕೋಣೆ ಸರಿಯಿಲ್ಲ, ಅದರಲ್ಲೂ ಕಪಾಟು ಹೀಗೆ ಇರಲೇ ಬಾರದು. ಅಡಿಗೆ ಮನೆ ಸಹ ಈಶಾನ್ಯಕ್ಕೆ ಇದೆ.. ನಿಮ್ಮೆಲ್ಲಾ ತೊಂದರೆಗಳಿಗೂ ನಿಮ್ಮ ಮನೆಯೆ ಕಾರಣ ಅಂತ ಹೇಳ್ತಾ ಇದ್ದ. ಕೊನೆ ರೂಮಿನಿಂದ ಒಂದು ಅಜ್ಜಿ ಆಚೆ ಬಂತು… ಅಪ್ಪಾ ಇಷ್ಟೊತ್ತು ನೀನು ಹೇಳಿದ್ದೆಲ್ಲಾ ಕೇಳಿದೆ ಅಪ್ಪಾ. ಈ ಮನೆ ನೂರು ವರ್ಷಕ್ಕೂ ಮೀರಿ ಹಳೇದು. ಇಲ್ಲೇ ಆರು ಸಂಸಾರ ಜೀವನ ಮಾಡಿದವು. ಹದಿಮೂರು ಜನ ಡಾಕ್ಟರು ಆದರು. ಹದಿನೆಂಟು ಜನ ಎಂಜಿನಿಯರುಗಳು. ಲೆಕ್ಕ ಇಲ್ಲದೇ ಇರೋ ಅಷ್ಟು ಬೀ ಈ, ಎಂ ಈ ಓದಿದರೆ ಲೆಕ್ಕ ಇಲ್ಲದೇ ಇರೋಅಷ್ಟು ಜನ ಫಾರಿನ್ ಹೋಗಿದ್ದಾರೆ, ಅಲ್ಲೇ ಸೆಟಲ್ ಆಗಿದ್ದಾರೆ. ಈ ಮನೆ ಕಟ್ಟಿದರಲ್ಲಾ ನಮ್ಮ ಮಾವ ಕಳೆದ ವರ್ಷ ಅವರ ತೊಂಬತ್ತಾರನೇ ಹುಟ್ಟಿದ ಹಬ್ಬ ಇದೇ ಮನೇಲಿ ಆಚರಿಸಿಕೊಂಡರು. ತುಂಬು ಜೀವನ ನಡೆಸಿದ ಅವರು ಕಳೆದ ತಿಂಗಳು ತೀರಿಕೊಂಡರು…… ಈ ಕತೆ ಕೇಳುತ್ತಾ ಕೇಳುತ್ತಾ ಬಾಗಿಲ ಬಳಿ ಬಂದ ವಾಸ್ತು ವಿಜ್ಞಾನಿ ಚೀಲ ಎತ್ತಿಕೊಂಡು ಓಡಿಹೋದವನು ಮತ್ತೆ ಕಂಡಿಲ್ಲ…!

ವಾಸ್ತು ತಜ್ಞರ ಬಗೆಗಿನ ಈ ಟಿಪ್ಪಣಿ ಒಂದಿಗೆ ಮತ್ತೆ ನಿಮ್ಮನ್ನು ಬೇವಿನ ಮರದತ್ತ ಮತ್ತು ಮನೆ ನಿರ್ಮಾಣದತ್ತ ಕರೆದೊಯ್ಯಲೇ…

ಬಾಗಿಲ ಎತ್ತರ ಕಡಿಮೆ ಇತ್ತು ಮತ್ತು ಅದರ ಒಳಹೋಗಬೇಕಾದರೆ ತಲೆ ಬಾಗಿ ಹೋಗಬೇಕಿತ್ತು. ಔರಂಗಜೇಬ್ ಕಾರಾಗೃಹದಲ್ಲಿ ಅವನ ಶತ್ರುಗಳನ್ನು ಬಂಧನದಲ್ಲಿ ಇರಿಸುತ್ತಿದ್ದ. ಅವರು ಹೊರ ಬರಬೇಕಾದರೆ, ಒಳ ಹೋಗಬೇಕಾದರೆ ತಲೆ, ಭುಜ, ಮೈ ತಗ್ಗಿಸಿ ಬಗ್ಗಿಸಿ ಒಳಗೆ ಹೋಗಬೇಕಿತ್ತು. ಔರಂಗಜೇಬ್ ಇದನ್ನು ದೂರದಲ್ಲಿ ನಿಂತು ನೋಡುತ್ತಿದ್ದನಂತೆ. ಅವನ ಮುಖದಲ್ಲಿ ಒಂದು ವಿಲಕ್ಷಣ ನಗೆ ಕಾಣಿಸುತ್ತ ಇತ್ತಂತೆ. ಒಂದು ರೀತಿಯ ಸ್ಯಾಡಿಸ್ಟ್ ಖುಷಿ ಅವನು ಪಡುತ್ತಿದ್ದನಂತೆ. ನನ್ನ ಮನೆಗೆ ಈ ರೀತಿಯ ಬಾಗಿಲು ಇಟ್ಟಿದ್ದರೆ, ನಾನೂ ಸಹ ಔರಂಗಜೇಬ್‌ನ ಹಾಗೆ ಸ್ಯಾಡಿಸ್ಟ್ ಖುಷಿ ಪಡಬಹುದಿತ್ತು. ಆದರೆ ನನ್ನ ಮೈಂಡ್‌ಸೆಟ್ ಬೇರೆ. ಸ್ಯಾಡಿಸ್ಟ್ ಖುಷಿ ಅದೂ ಔರಂಗ ಜೇಬಿನ ಹಾಗೆ, ಊಹೂಂ ನನಗೆ ಖಂಡಿತ ಇಷ್ಟ ಇಲ್ಲ. ಇನ್ನು ಸಾವಿರ ಜನ್ಮ ಹುಟ್ಟಿದರೂ ನಾನು ಅವನ ಹಾಗೆ ಖಂಡಿತ ಆಗಲಾರೆ. ನೇಣು ಬಿಗಿದುಕೊಂಡು ಸತ್ತರೂ ಸರಿ, ಒಡಹುಟ್ಟಿದವರು ಮತ್ತು ಸ್ವಂತ ಜನಕ ಮಹಾರಾಜನನ್ನು ಜೈಲಿನಲ್ಲಿ ಇಡುವುದು ಮತ್ತು ಕೊಲ್ಲು ವುದು… ಊಹೂಂ ಇಲ್ಲ ಸ್ವಾಮಿ, ಇಲ್ಲ ಮೇಡಂ ಇನ್ನೂ ಸಾವಿರ ಜನ್ಮ ಎತ್ತಿದರೂ ನನಗೆ ಅಂತಹ ಯೋಚನೆ ಖಂಡಿತ ಬಾರದಿರಲಿ!

ಈಗ ಇನ್ನೊಂದು ಯೋಚನೆ ಸಡನ್ ಆಗಿ ಮನಸ್ಸಿಗೆ ಬಂದಿದೆ. ಅದನ್ನು ಮೊದಲು ತಮಗೆ ಹೇಳಲೇ ಬೇಕು, ಇಲ್ಲ ಅಂದರೆ ಮರೆತು ಹೋಗುವ ಭಯ ಮತ್ತು ಓದುಗ ಪ್ರಭುಗಳನ್ನು ಒಂದು ಲಿಂಬೋದಲ್ಲಿ ಬಿಡಲು ನನಗೆ ಮನಸ್ಸಿಲ್ಲ! ಲಿಂಬೊ ಅಂದರೆ ಒಂದು ರೀತಿ ತ್ರಿಶಂಕು ಸ್ಥಿತಿ ಅಂತೆ. ಕ್ರಿಶ್ಚಿಯನ್ ಫಿಲಾಸಫಿಯಲ್ಲಿ ಈ ಲಿಂಬೋ ಪದ ಹೆಚ್ಚು ಪ್ರಯೋಗ ಆಗುತ್ತಂತೆ. ನಾನು ಅದನ್ನು ಅಂದರೆ ಕ್ರಿಶ್ಚಿಯನ್ ಫಿಲಾಸಫಿ ಓದಿಲ್ಲ, ಅದರಿಂದ ಅದರ ಬಗ್ಗೆ ಹೀಗೇ ಅಂತ ಖಚಿತವಾಗಿ ಕಡ್ಡಿ ತುಂಡು ಮಾಡಿದ ಹಾಗೆ ನನ್ನ ಅನಿಸಿಕೆ ಹಂಚಿಕೊಳ್ಳಲಾರೆ! ಏನೋ ಹೇಳಲು ಹೊರಟಿದ್ದೆ ಮತ್ತು ಡೈವರ್ಟ್ ಆದೆ. ನೆನೆಸಿಕೊಳ್ತೀನಿ, ಇರಿ….. ಸಮಾಜ ಶಾಸ್ತ್ರಿಗಳು ನನ್ನನ್ನು ಎಂತಹ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣನಾದ ಎಂದು ನೆನೆಸಿಕೋಬೇಕು ಅಂತ ಹೇಳ್ತಾ ಇದ್ದೆ. ಅದರ ಜತೆಗೆ ಈಗ ಇನ್ನೊಂದು ಹೊಸಾ ವಿಷಯ ತಲೆಗೆ ಬಂತು. ನಮ್ಮ ಅಜ್ಜೀನ ಹೊತ್ತುಕೊಂಡು ಹೋದವರು, ನಮ್ಮ ಯೂನಿವರ್ಸಿಟಿ ಸುಟ್ಟವರು, ನಮ್ಮ ತಾತನನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಿದವರನ್ನು ನಾವು ಚರಿತ್ರೆಯಲ್ಲಿ ಹೀರೋ ಮಾಡಿ ನಮ್ಮ ಪೀಳಿಗೆಯವರನ್ನು ದೇಶಪ್ರೇಮ ಬೆಳೆಸುವುದರಿಂದ ದೂರ ಮಡಗಿದ್ದೇವೆ, ಹಿಸ್ಟರಿ ರೀ ರೈಟ್ ಮಾಡಬೇಕು ಅನ್ನುವ ಚಳವಳಿ ಇದೆ ತಾನೇ? ಅದರ ಮೊದಲ ಹಂತವಾಗಿ ಚರಿತ್ರೆಯಿಂದ ಔರಂಗಜೇಬ ಪರ್ಮನೆಂಟಾಗಿ ಮರೆಯಾಗ್ತಾನೆ ತಾನೇ?

ಇಲ್ಲಿ ನಾನು ಔರಂಗಜೇಬನಿಗೆ ಮರು ಹುಟ್ಟು ಕೊಟ್ಟಿದ್ದೀನಿ! ಮುಂದೆ ಯಾರಾದರೂ ಔರಂಗಜೇಬ ಯಾರು ಅಂದರೆ ಈ ಲೇಖನ ಓದಲಿ….! ಇದೇ ನಾನು ಹೇಳಬೇಕು ಅಂತ ಇದ್ದದ್ದು!

ಈಗ ಬೇವಿನಪುರಾಣ ಮುಂದುವರೆಸಲು ತಮ್ಮ ಅನುಮತಿ ಇದೆ ತಾನೇ…
ಬೇವಿನ ವಾಸ್ಕಲ್ ಮತ್ತು ಬಾಗಿಲುಗಳಿಗೆ ಎತ್ತರ ಮಾಡಲು ಕೊಟ್ಟಿದ್ದ ಸಲಹೆ ಹೇಳಿದ್ದೆ ಅಲ್ಲವೇ? ಅದರಿಂದ ಕೋಟಿ ಕೋಟಿ ಆದಾಯ ಮಾಡಿಕೊಳ್ಳುವ ಒಂದು ಚಾನ್ಸ್ ತಪ್ಪಿ ಹೋಯಿತು ಅಂತ ಹಿಂದಿನ ಯಾವುದೋ ಎಪಿಸೋಡ್‌ನಲ್ಲಿ ಹೇಳಿದ್ದೆ ತಾನೇ? ಈಗ ಅದಕ್ಕೆ. ವಾಸ್ಕಲ್‌ ಉದ್ದ ಮಾಡಲು ಒಂದು ಬಾಗಿಲಿನ ಚೌಕಟ್ಟು ತೆಗೆದು ಎರಡು ಮೂರು ಅಡಿ ಉದ್ದ ಕತ್ತರಿಸಿದ್ದೆವು. ಅದನ್ನು ಮತ್ತೆ ಅಲಂಕಾರಿಕವಾಗಿ ಜಿಗ್ ಜಾಗ್ ರೀತಿ ಕತ್ತರಿಸಿ ಮೂಲಕ್ಕೂ ಇದಕ್ಕೂ ಅಂಟಿಸುವ ಉಪಾಯ ಕೊಟ್ಟು ಪೂರ್ತಿ ಅದು ಜಾರಿಯಾಗುವ ಹಾಗೆ ನೋಡಿಕೊಂಡಿದ್ದೆ. ಮನೆ ರೆಡಿ ಆದಮೇಲೆ ಅದನ್ನು ಮರೆತೂ ಬಿಟ್ಟಿದ್ದೆ. ಈಗ ಕೋಟಿ ಕಳೆದುಕೊಂಡ ಕತೆಗೆ..

ಕಳೆದ ವರ್ಷ ನೆಂಟರ ಮಗನ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದೆ. ಹದಿನೆಂಟನೇ ಫ್ಲೋರಿನಲ್ಲಿ ಅವರ ಮನೆ. ಅಲ್ಲಿನ ಮುಂಬಾಗಿಲು, ಒಳಗಿನ ಬಾಗಿಲುಗಳು ಮತ್ತು ವಾಸ್ಕಲ್ ನೋಡುತ್ತಿದ್ದಾಗ ಹಳೆಯ ನೆನಪು ನುಗ್ಗಿಬಂತೂ ಅಂದರೆ ಕಟ್ಟೆ ಒಡೆದ ನೀರಿನ ಹಾಗೇ. ನಾನು ಫೋರ್ಟಿ ಯಿಯರ್ಸ್ ಬ್ಯಾಕ್ ನಮ್ಮನೆಯ ಬೇವಿನ ಮರದ ಬಾಗಿಲು ಮತ್ತು ವಾಸ್ಕಾಳಿಗೆ ಮಾಡಿದ್ದ ಚಿಕಿತ್ಸೆ ನೆನಪಾಯಿತು. ಅಲ್ಲಿನ ವಾಸ್ಕೆಲ್‌ಗೆ ಕತ್ತರಿಸಿ ಕತ್ತರಿಸಿದ ಅಂಟಿಸಿದ ಮರದ ಲಾಗ್‌ಗಳು, ಬಾಗಿಲಿನ ಹಲಗೆ ಗಳು ನಾಲ್ಕು ಐದು ಇಂಚು ಅಗಲದ ಪಟ್ಟಿಗಳು, ಅವುಗಳನ್ನು ನಾಜೂಕಾಗಿ ಜೋಡಿಸಿದ ಅಲಂಕಾರಿಕ ಕುಸುರಿ ಎದ್ದು ಕಾಣುತ್ತಿತ್ತು. ಥೇಟ್ ನಲವತ್ತು ವರ್ಷ ಹಿಂದೆ ನಾನು ಮಾಡಿದ್ದ ಸಾಹಸವೇ!

ಮನೆಯಿಂದ ಆಚೆ ಬಂದೆ. ಒಂದು ದೊಡ್ಡ ಕಾಂಪೌಂಡಿನಲ್ಲಿ ಎಂಟು ಟವರ್‌ಗಳು. ಟವರ್ ಎಂದರೆ ಬಹುಮಹಡಿ ಪರಿಭಾಷೆಯಲ್ಲಿ ಮಹಡಿಗಳ ಸಮೂಹ. ಒಂದೊಂದು ಟವರ್‌ನಲ್ಲಿಯೂ ಸುಮಾರು ನೂರಾ ಐವತ್ತು ಮನೆಗಳು. ಒಂದೊಂದು ಮನೆಗೆ ಕನಿಷ್ಠ ನಾಲ್ಕು ಬಾಗಿಲು…… ಅಂದರೆ ಎಷ್ಟು ಬಾಗಿಲು ಇರಬಹುದು? ಹೇಳಿ ಕೇಳಿ mathamatics ನಲ್ಲಿ ನಾನು ಇನ್ನೂರಕ್ಕೆ ಎಪ್ಪತ್ತರ ಗಿರಾಕಿ. BSc ನಲ್ಲಿ ನನಗೆ mathamatics ನಲ್ಲಿ ಎಪ್ಪತ್ತು ಬಂದಿತ್ತು, ಇನ್ನೂರಕ್ಕೆ… ಆದರೂ ಒಂದು ಲೆಕ್ಕ ಇರಲಿ ಅಂತ ಮನಸಿನಲ್ಲೇ ಲೆಕ್ಕ ಮಾಡಿದೆ.

ನೂರಾ ಐವತ್ತು ಇಂಟು ನಾಲ್ಕು ಇಂಟು ಎಂಟು…. ಜತೆಗೆ ಆ ಬಿಲ್ಡರ್ ಈವರೆಗೆ ಕಟ್ಟಿರುವ, ಮುಂದೆ ಕಟ್ಟಬಹುದಾದ ಮನೆಗಳು.. ಈ ಮನೆಗಳಿಗೆ ಇದೇ ರೀತಿಯ ಬಾಗಿಲುಗಳು.. ಒಂದು ಬಾಗಿಲಿಗೆ ಹತ್ತು ರೂಪಾಯಿ ಅಂತ ಪೇಟೆಂಟ್ ರೇಟ್ ಫಿಕ್ಸ್ ಆಗಿದ್ದರೆ, ಆಗಿದ್ದರೆ, ಆಗಿದ್ದರೆ…… ಅದೆಷ್ಟು ಕೋಟಿ ಬರ್ತಾ ಇತ್ತು? ಲೆಕ್ಕ ತಪ್ಪಿತು. ಲೆಕ್ಕ ಹಾಕಿ ತಲೆನೋವು ಬರಿಸ್ಕೋಬೇಕೋ ತೆಪ್ಪಗಿದ್ದು ತಲೆನೋವು ತಪ್ಪಿಸಿಕೊಳ್ಳುವುದೋ ಎಂದು ಚಿಂತಿಸಿ ಆಪ್ಷನ್ ನಂಬರ್ ಎರಡನ್ನು ಆಯ್ಕೆ ಮಾಡಿಕೊಂಡೆ! ಆಗಾಗ ಈ ಲೆಕ್ಕ ಸರೀರಾತ್ರಿಯಲ್ಲಿ ಧೊಪ್ ಎಂದು ಮನಸಿಗೆ ಬಂದು ನಿದ್ದೆ ಹಾರಿಸುತ್ತೆ…! ಆದರೂ ನಾನು ಎಂತಹ ಪೆದ್ದ ಎಂದು ನನ್ನಮೇಲೇ ಸಖತ್ ಉರಿ ಹತ್ತುತ್ತೆ. ಇದು ಯಾರಿಗೂ ಹೇಳಿಕೊಳ್ಳಲಾಗದ ಒಳಗುದಿ! ಯಾರಿಗಾದರೂ ಹೇಳಿಕೊಂಡರೆ ಎಂತಹ ದಡ್ಡ ಶಿಖಾಮಣಿ ಇದು ಎಂದು ಅವರವರ ಗುಂಪಿನಲ್ಲಿ ನಾನು ತಮಾಷೆಯ ವಸ್ತು ಆಗಬಹುದು. ಇವೆಲ್ಲಕ್ಕಿಂತಲೂ ನಾನು fore see ಮಾಡಿದ (ಅಂದರೆ ಮೊದಲೇ ಊಹಿಸಿದ) ಡೇಂಜರ್ ಅಂದರೆ ಇಂತಹ ವಿಷಯವನ್ನು ಹೆಂಡತಿ ಸಂಗಡ ಹಂಚಿಕೊಳ್ಳುವುದು. ಈ ಕೋಟಿ ಕೋಟಿ ಕೈ ತಪ್ಪಿದ ಕತೆ ಹೆಂಡತಿ ಹತ್ತಿರ ಹೇಳಿಕೊಂಡಿದ್ದೆ ಅಂದು ಕೊಳ್ಳಿ. ಇಡೀ ನನ್ನ ಮುಂದಿನ ನೂರು ಜನ್ಮ ನಾನು ಇಡೀ ಪ್ರಪಂಚದಲ್ಲೇ ಎಲ್ಲಕಾಲಕ್ಕೂ ಇದ್ದಿರಬಹುದಾದ ದಡ್ಡ ಎಂದು ಬಿಂಬಿತ ಆಗುತ್ತಿದ್ದೆ. ನನ್ನ ಸಂಸಾರ, ನನ್ನಾಕೆಯ ಬಂಧು ಬಳಗ ಅವರ ಮಕ್ಕಳು ಮೊಮ್ಮಕ್ಕಳು… ಹೀಗೆ ಎಲ್ಲರೂ ನನ್ನನ್ನು ಪೆದ್ದ ಪೆದ್ದ ಪೆದ್ದ ಎಂದು ಲೇವಡಿ ಮಾಡುತ್ತಿರಲಿಲ್ಲವೇ? ನಾನು ನಂಬದ ಅದ್ಯಾವುದೋ ದೈವ ನನ್ನ ಹಿಂದೆ ನಿಂತು ನನ್ನನ್ನು ಕಾಪಾಡಿರಬಹುದೇ?

ಮತ್ತೆ ಬೇವಿನ ಮರಕ್ಕೆ. ಈಗೊಂದು ಹೊಸಾ ತಲೆನೋವು ನನಗೆ ಶುರುವಾಯಿತು. ಬೇವನ್ನು ದೇವರು ಅಂತ ಪೂಜಿಸುವ ನಂಬಿರುವ ಜನ ಅದರ ರೆಂಬೆ ಕೊಂಬೆ ಕಾಂಡ ಕತ್ತರಿಸಿ ಅದರ ಮೇಲೆ ಮೆಶಿನ್ ಓಡಿಸಿ ತೋಪಡ ಹೊಡೆಯಬಹುದೇ? ತೋಪಡ ಹೊಡೆದಾಗ ಮರದ ಮೇಲೆ ಒಂದೆರೆಡು ಮಿಮೀ ಮರ ಕಿತ್ತು ಬಂದು ದೇವರಿಗೆ ಚರ್ಮ ಸುಲಿದ ಪಾಪ ನನಗೆ ತಟ್ಟುವುದಿಲ್ಲವೇ..? ಈ ಜಿಜ್ಞಾಸೆಗೆ ಯಾರ ಹತ್ತಿರ ಉತ್ತರ ಹುಡುಕುವುದು? ಸ್ನೇಹಿತರ ಜತೆ, ನೆಂಟರ ಜತೆ ಕೊನೆಗೆ ಹೆಂಡತಿಯ ಜತೆಗೂ ಇಂತಹ ಆಳವಾದ ಚಿಂತನ ಮಂತನ (ಇದು ಮಂಥನ ಇರಬೋದೇ) ನಡೆಸಲು ನನಗೆ ನನ್ನದೇ ಆದ ಇತಿ ಮಿತಿ ಇದ್ದೋ. ಮೊದಲ ಮಿತಿ ಅಂದರೆ ದೈವ ಅಸ್ತಿತ್ವ ಅಲ್ಲಗಳೆಯುವ ಒಂದು ನರ ಹುಳು ಹೀಗೆ ಯೋಚನೆ ಮಾಡುತ್ತದೆಯೇ ಎನ್ನುವುದು! ನಿಮಗೆ ಇದು ತಮಾಷೆ ಅಂತ ಅನಿಸುತ್ತೆ ಅಂತ ನನಗೆ ಗೊತ್ತು, ಆದರೆ ಇಂತಹ ಡೀಪ್ ಥಿಂಕಿಂಗ್ ಮಾಡುವ ಮನುಷ್ಯ ಅನುಭವಿಸುವ ಮಾನಸಿಕ ತೊಳಲಾಟ, ಒದ್ದಾಟ ಮತ್ತು ನೋವು ನಿಮ್ಮ ಅರಿವಿಗೆ ಬರಲಾರದು!

ಈ ಪಡಿಪಾಟಲುಗಳಿಂದ ನಾನು ಹೇಗೆ ಹೊರಗೆ ಬಂದೆ ಎಂದು ಹೇಳುವ ಮೊದಲು ಬಾಗಿಲಿನ ಬಗ್ಗೆ ಮೇಸ್ತ್ರಿ ಮಲ್ಲಯ್ಯನ ಜತೆಗಿನ ನನ್ನ ಮುಂದುವರೆದ ಸಂವಾದದ ತಿರುಳು ನಿಮಗೆ ತಿಳಿಸಿ ಬಿಡುತ್ತೇನೆ. ಬಾಗಿಲು ಸೈಟ್ ಮುಂದೆ ಬಂದು ಡೌನ್ ಲೋಡ್ ಆಯಿತು. ಮಲ್ಲಯ್ಯ ತಡ ಬಡಾಯಿಸಿದ ಅಂತ ಹೇಳಿದ್ದೆ, ನೆನಪಿದೆ ಅಲ್ಲವೇ?

“ಸಾಮಿ ದೇವರು ಇದು ಈ ಮರ. ಬ್ರಾಮೀನ್ಸ್ ಮುಂಬಾಗಿಲಿಗೆ ಮಡಗಲ್ಲ ಇದನ್ನ…” ಅಂದ.

“ಮುಂಬಾಗಿಲಿಗೆ ಬೇರೆ ಮರ ಇಡೋಣ. ನೀನು ಇದರ ಬಗ್ಗೆ ತಲೆ ಕೆಡಿಸಿಕೊ ಬೇಡ…..” ಅಂದೆ, ಗಡಸು ದ್ವನಿಯಲ್ಲಿ. ಅವನು ಮೀಸೆಯಲ್ಲೇ ನಕ್ಕ ಅಂತ ನನಗೆ ಅನಿಸಿತು. ಸರಿ ಮಲ್ಲಯ್ಯ ನನ್ನ ದಾರಿಗೆ ಬರಬೇಕು ಮತ್ತು ನನ್ನಾಕೆ ಎದುರು ಬೇವಿನ ಮರದ ಬಗ್ಗೆ ನೆಗೆಟಿವ್ ಐಡಿಯಾ ಕೊಡದ ಹಾಗೆ ನೋಡಿಕೊಳ್ಳಬೇಕು ಎನ್ನುವ ಯೋಚನೆ ತಲೆಯಲ್ಲಿ ಬಂದಿತಾ….?

ಮಲ್ಲಯ್ಯನನ್ನು ಟ್ರಾಪ್ ಮಾಡುವ ಯೋಜನೆ ತಲೆಯಲ್ಲಿ ನಿಧಾನಕ್ಕೆ ಶೇಪ್ ತೆಗೆದುಕೊಳ್ಳಲು ಶುರು ಹಚ್ಚಿತು. ಅದೂ ಎಂತಹ ಫೆಂಟಾಸ್ಟಿಕ್ ಐಡಿಯಾಗಳು ತಲೆಗೆ ಹೊಳೆದವು ಎಂದರೆ ನನ್ನ ತಲೆಯ ಬಗ್ಗೆ ನನಗೇ ತುಂಬಾ ದೊಡ್ಡ ಮೆಚ್ಚುಗೆ ಹುಟ್ಟಿತು. ನನ್ನ ತಲೆಯನ್ನು ತಬ್ಬಿಕೊಂಡು ಲೊಚ ಲೊಚ ಮುದ್ದಿಸಿ ನನ್ನ ಅಭಿಮಾನ ತೋರಿಸಬೇಕು ಅನಿಸಿಬಿಟ್ಟಿತು!

ಇಂತಹ ಹಿಮಾಲಯದ ಮೇಲೆ ಕೂತ, ಕಾಮನ ಬಿಲ್ಲಿನ ಮೇಲೆ ತೇಲಾಡುತ್ತಿರುವ ಸಮಯದಲ್ಲಿ ನಿಮ್ಮ ಮನೋಭಾವ ಹೇಗಿರುತ್ತೆ? ನನಗೂ ಸಹ ಅದೇ ಆಗಿದ್ದು. ನಿರಾಳವಾಗಿ ಪ್ರಪಂಚ ಮರೆತು ಒಂದುವಾರ ಮಲಗಿ ಗೊರಕೆ ಹೊಡೆಯಬೇಕು ಅನಿಸುತ್ತೆ ತಾನೇ? ಹೀಗಾಗಿ ನಾನು ಮುಂದಿನ ಕತೆಗಾಗಿ ನಿಮ್ಮನ್ನು ಕಾಯಿಸಲೇ ಬೇಕಾದ ಅನಿವಾರ್ಯತೆ ಹುಟ್ಟಿದೆ!

ಮಿಕ್ಕಿದ್ದು ಮತ್ತು ಕತೆಯ ಮುಂದಿನ ಭಾಗವನ್ನು ಹಿಮಾಲಯದಿಂದ ಕೆಳಗೆ ಬಂದ ನಂತರ, ಕಾಲಿನ ಕೆಳಗಿನ ಕಾಮನ ಬಿಲ್ಲು ಕರಗಿದ ನಂತರ, ರಿಯಲ್ ಸ್ಟೇಟ್‌ಗೆ ಬಂದ ನಂತರ ಹೇಳಲು ತಮ್ಮ ಅನುಮತಿ ಕೋರುತ್ತೇನೆ……!

ಮುಂದುವರೆಯುತ್ತದೆ…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

2 Comments

  1. ಎಚ್ ಆನಂದರಾಮ ಶಾಸ್ತ್ರೀ ಶಾಸ್ತ್ರಿ

    ‘ ವಾಸ್ತು ಶಾಸ್ತ್ರಿ’ಗಳು ಬಿಡುವ ಬುರುಡೆಗಳನ್ನು ನಂಬುವ ಬುರುಡೆಗಳ ಒಳಗಿನ ವಸ್ತು ಸರಿ ಇರುವುದಿಲ್ಲ ಎಂಬ ವಾಸ್ತವವನ್ನು ನಯವಾಗಿ, ಲಘುವಾಗಿ, ಆದರೆ ವಾಸ್ತವಿಕವಾಗಿ, ಒಟ್ಟಾರೆ ಹೇಳುವುದಾದರೆ, ‘ವಾಸ್ತು ಪ್ರಕಾರ'(!)ವೇ ಕಟ್ಟಿಕೊಟ್ಟಿದ್ದಾರೆ ಮಸ್ತ್ ಪ್ರಬಂಧಕಾರ ಎಚ್. ಗೋಪಾಲಕೃಷ್ಣ ಅವರು.
    – ಎಚ್. ಆನಂದರಾಮ ಶಾಸ್ತ್ರೀ
    (‘ವಾಸ್ತು ಶಾಸ್ತ್ರಿ’ ಅಲ್ಲ.)

    Reply
  2. Hgopalakrishna

    ಶ್ರೀ ಆನಂದ ರಾಮ ಶಾಸ್ತ್ರೀ ಅವರೇ,
    ಹ ಹಾ ರಸತುಂಬಿದ ಅನಿಸಿಕೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ