ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ. ಕೆಲವರು ಇದಕ್ಕೆ ವ್ಯತಿರಿಕ್ತ ಇದ್ದಿರಬಹುದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ
ದಾವಣಗೆರೆಯ ಪ್ರತಿಷ್ಟಿತ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುವಾಗ ನನ್ನ ಜೊತೆ ರೂಮ್ ಮೇಟ್ ಆಗಿ ವೆಂಕಟೇಶ್ ಇದ್ದ. ಅವನೂ ಸಹ ನಾನು ಕೆಲಸ ಮಾಡುವ ಶಾಲೆಯಲ್ಲಿಯೇ ಹೈಸ್ಕೂಲ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ. ನಾನು ಪ್ರೈಮರಿ ಆದ್ದರಿಂದ ನನ್ನ ಬಗ್ಗೆ ಒಂಥರಾ ಅಸಡ್ಡೆ!! ಇದು ಈ ಹಿಂದಿನ ಶಾಲೆಯಲ್ಲಿಯೂ ಕಂಡುಬಂದಿತ್ತು. ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ. ಕೆಲವರು ಇದಕ್ಕೆ ವ್ಯತಿರಿಕ್ತ ಇದ್ದಿರಬಹುದು.
ಕೆಲವರ ಜ್ಞಾನಕ್ಕೂ ಕ್ವಾಲಿಫಿಕೇಶನ್ನಿಗೂ ವ್ಯತ್ಯಾಸವಿರಬಹುದು. ಕ್ವಾಲಿಫಿಕೇಶನ್ ಒಂದರಿಂದಲೇ ಒಬ್ಬ ವ್ಯಕ್ತಿಯ ಟ್ಯಾಲೆಂಟನ್ನು ಅಳೆಯಬಾರದು. ಸಾಧನೆ ಮಾಡಿದ ಕೆಲವರು ಹೆಚ್ಚು ಓದಿಲ್ಲ. ಕೆಲವರಿಗೆ ಓದಲು ಆಸಕ್ತಿ ಇದ್ದರೂ ಅವರ ಪರಿಸ್ಥಿತಿ ಅವರು ಮುಂದೆ ಓದಲು ಸಾಧ್ಯವಾಗದಂತೆ ಮಾಡಿರಬಹುದು. ಒಂದು ಪುಸ್ತಕವನ್ನು ಅದರ ಬೈಂಡ್‌ನಿಂದಲೇ ಅಳೆಯಲಾಗದು ಎಂಬ ಮಾತಿನಂತೆ ಒಬ್ಬನ ವ್ಯಕ್ತಿತ್ವ/ ಸೃಜನಶೀಲತೆಯನ್ನು ಅವನ ಬಾಹ್ಯ ನೋಟ, ಅವನು ಮಾಡುತ್ತಿರುವ ವೃತ್ತಿಯ ಮೇಲೆ ಅಳೆಯಬಾರದು. ಇದಕ್ಕೆ ಸಂಬಂಧಪಟ್ಟ ಒಂದು ಪ್ರಸಂಗವನ್ನು ತಿಳಿಯೋಣ.
ಒಮ್ಮೆ ಒಬ್ಬ ಕಾರ್ ಕಂಪೆನಿಯ ಮಾಲೀಕ ಒಂದು ದೊಡ್ಡ ಕಾರನ್ನು ತಯಾರಿಸಲು ಅವರ ಕಂಪೆನಿಯ ನೌಕರರಿಗೆ ತಿಳಿಸಿದನಂತೆ. ಅವರು ಅವನ ಆದೇಶಾನಸಾರವಾಗಿ ಒಂದು ದೊಡ್ಡದಾದ ಕಾರನ್ನು ತಯಾರಿಸಿದರಂತೆ. ಇದನ್ನು ಅವನು ನೋಡಲು ಬಂದು ಅದರ ಗಾತ್ರವನ್ನು ನೋಡಿ ತುಂಬಾ ಖುಷಿಯಾಗಿ ಇದನ್ನು ಕಂಪೆನಿಯಿಂದ ಹೊರತೆಗೆಯಿರಿ ಎಂದನಂತೆ. ಈಗ ಎದುರಾದ ಸಮಸ್ಯೆ ಎಂದರೆ ಅವರು ಹೊರತೆಗೆಯಲು ಹೋದಾಗ ಅವರ ಮೇಲ್ಛಾವಣೆಯ ಭಾಗ ಮೇಲ್ಭಾಗದ ಗೋಡೆಗೆ ಸ್ಪರ್ಷಿಸುತ್ತಿತ್ತಂತೆ. ಆಗ ಅವನಿಗೆ ಹೇಗಪ್ಪಾ ಈ ಕಾರನ್ನು ಹೊರತೆಗೆಯುವುದು ಎಂದು ಯೋಚಿಸುತ್ತಿದ್ದಾಗ ಒಬ್ಬ ಪೇಂಟರ್ ಬಂದು ಮಾಲೀಕನಿಗೆ “ಸ್ವಾಮಿ, ಅದನ್ನು ಹೊರತೆಗೆಯಿರಿ ಒಂದೊಮ್ಮೆ ಕಾರಿನ ಮೇಲ್ಛಾವಣಿಯ ಬಣ್ಣ ಹಾಳಾದರೆ ನಾನು ಮೊದಲಿನಂತೆ ಮಾಡಿಕೊಡುತ್ತೇನೆ” ಎಂದನಂತೆ. ಆದರೆ ಹೊಸ ಕಾರು ಬೇರೆ. ಇದನ್ನು ಮಾಲೀಕ ಒಪ್ಪಲಿಲ್ಲವಂತೆ. ಮತ್ತೊಬ್ಬ ಇಂಜಿನಿಯರ್ ಬಂದು “ಸ್ವಾಮಿ, ಮೇಲ್ಭಾಗದ ಗೋಡೆಯನ್ನು ಹೊಡೆಯೋಣ. ಅದನ್ನು ನಾನು ಮೊದಲಿನಂತೆ ರೆಡಿ ಮಾಡಿಕೊಡುತ್ತೇನೆ” ಎಂದನಂತೆ. ಇದಕ್ಕೂ ಮಾಲೀಕ ಒಪ್ಪಲಿಲ್ವಂತೆ. ಹೀಗೆ ಪದೇ ಪದೇ ಇವರ ಮಾತಿನ ಮಧ್ಯೆ ಆ ಕಂಪೆನಿಯ ಕಸ ಹೊಡೆಯುವ ವ್ಯಕ್ತಿ ಬಂದು “ನಾನು ಇದಕ್ಕೆ ಪರಿಹಾರ ಕೊಡುತ್ತೇನೆ” ಎಂದು ಬರಲು ಮಾಲೀಕ ಮತ್ತು ಅವನ ಸಹಚರರು ಅವನ ಮಾತನ್ನು ಗಂಭೀರವಾಗಿ ಪರಿಗಣಿಸದೇ “ಅಲ್ಲಯ್ಯಾ ಇದನ್ನು ನಮ್ಮಂಥವರ ಕೈಯಲ್ಲೇ ಪರಿಹಾರ ಮಾಡೋಕೆ ಸಾಧ್ಯ ಆಗ್ತಾ ಇಲ್ಲ. ಇನ್ನು ನೀನು!!! ಸುಮ್ನೆ ಕೆಲಸ ಮಾಡು ಹೋಗು” ಎಂದು ಬಯ್ದು ಕಳಿಸುತ್ತಿದ್ದರಂತೆ. ಮತ್ತೊಬ್ಬ ಬಂದು “ಕಾರನ್ನು ಹೊರಗೆ ತೆಗೆಯೋಣ ಕಾರಿನ ಮೇಲ್ಭಾಗ ಹಾಳಾದರೆ ಅದನ್ನು ಮೊದಲಿನಂತೆ ಟಿಂಕರಿಂಗ್ ಮಾಡಿಕೊಡುತ್ತೇನೆ” ಎಂದಾಗಲೂ ಮಾಲೀಕ ಇದಕ್ಕೂ ಸಮಾಧಾನಗೊಳ್ಳದೇ ಏನು ಮಾಡೋದಪ್ಪಾ ಎಂದು ಕುಳಿತಿದ್ದಾಗ ಮತ್ತೆ ಕಸ ಹೊಡೆಯೋನು ಬಂದು “ಸ್ವಾಮಿ ಇದೊಂದು ಬಾರಿ ನನಗೆ ಅವಕಾಶ ಕೊಡಿ” ಎಂದು ಬೇಡಿಕೊಂಡನಂತೆ. ಆಗ ಅವರು ಒಪ್ಪಿದಾಗ “ಸ್ವಾಮಿ, ಕಾರಿನ ಮೇಲ್ಭಾಗ ಗೋಡೆಗೆ ಸ್ವಲ್ಪವೇ ಟಚ್ ಆಗುತ್ತಿದೆ. ಕಾರಿನ ಎತ್ತರ ಅರ್ಧ ಇಂಚಿನಷ್ಟು ಕಡಿಮೆಯಾದರೆ ಸಾಕು. ಇದಕ್ಕೆ ಕಾರಿನ ಗಾಲಿಯ ಗಾಳಿಯನ್ನು ತೆಗೆದರೆ ಸಾಕು. ಅದರ ಎತ್ತರ ಕಡಿಮೆ ಆಗುತ್ತದೆ. ಆಗ ಅದು ಆರಾಮಾಗಿ ಯಾವುದೇ ಸಮಸ್ಯೆ ಇಲ್ಲದೇ ಹೊರಹೋಗುತ್ತದೆ. ಇದಕ್ಕೆ ಪರಿಹಾರ ಇಷ್ಟೇ ಸ್ವಾಮಿ” ಎಂದನಂತೆ. ಆಗ ಅಲ್ಲಿದ್ದವರಿಗೆ ಹೌದಲ್ಲವೇ!! ಇಷ್ಟು ಸುಲಭ ಪರಿಹಾರ ‘ಉಗುರಿನಲ್ಲಿ ಹೋಗೋದಿಕ್ಕೆ ಕೊಡಲಿಯನ್ನು ತೆಗೆದುಕೊಳ್ಳುವ ಯೋಚನೆ ಮಾಡಿದೆವಲ್ವಾ’ ಎಂದು ಅವನಿಗೆ ‘ಶಹಬ್ಭಾಸ್ ಗಿರಿ’ ಕೊಟ್ಟರಂತೆ.

Free student texting during class image, public domain CC0 photo.
ಹೌದು… ಕೆಲ ದೊಡ್ಡವರು ಎನಿಸಿಕೊಂಡವರಿಗೆ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಉತ್ತರ ಕೊಡೋದು ಗೊತ್ತಿರೋದಿಲ್ಲ. ಒಮ್ಮೆ ಹೋಟೆಲ್ಲಿಗೆ ನಾನು ಹೋಗಿದ್ದಾಗ ಅಲ್ಲಿ ಇಟ್ಟಿದ್ದ ನೀರಿನ ಕ್ಯಾನಿನ ನಲ್ಲಿಯಲ್ಲಿ ನೀರು ಬಾರದಿದ್ದುದನ್ನು ನೀರಿಲ್ಲ ಅಂತಾ ಹೇಳಿದ. ನಾನು ನೀರಿದೆ ಎಂದು ಹೇಳಿದರೂ ನೀರು ಬರುತ್ತಿಲ್ಲ ಎಂದ. ತಮಾಷೆ ಎಂದರೆ ಆ ಕ್ಯಾನಿನ ಮುಚ್ಚಳದಲ್ಲಿ ರಂಧ್ರ ಮಾಡದೇ ಮುಚ್ಚಿದ್ದರಿಂದ ಅದರಲ್ಲಿ ನೀರು ಬರುತ್ತಿರಲಿಲ್ಲ. ನಾನು ಮುಚ್ಚಳವನ್ನು ತೆಗೆದಾಗ ನೀರು ಬರಲು ಪ್ರಾರಂಭಿಸಿತು. ನೀರಿಲ್ಲ ಎಂದು ಹಾಗೇ ಹೋದ ವಿದ್ಯಾರ್ಥಿ ಇಂಜಿನಿಯರಿಂಗ್ ವಿದ್ಯಾರ್ಥಿ ಎಂಬುದು ಅವನ ಪಕ್ಕದವನಿಂದ ತಿಳಿಯಿತು!!
ಕೆಲವರು ಅಷ್ಟಾಗಿ ಕ್ವಾಲಿಫಿಕೇಷನ್ ಇಲ್ಲದಿದ್ರೂ ಅವರ ಸಮಯಪ್ರಜ್ಞೆ ಮಾತ್ರ ಸೂಪರ್ ಆಗಿರುತ್ತೆ. ಇದರ ಬಗ್ಗೆ ಒಂದು ನಿದರ್ಶನ ತಿಳಿಯೋಣ.
ಒಮ್ಮೆ ಐನ್ ಸ್ಟೈನ್ ರವರು ಒಂದು ಸಂಸ್ಥೆಗೆ ಉಪನ್ಯಾಸ ಕೊಡಲು ಹೋಗುತ್ತಿದ್ದರು. ಆಗ ಮಾರ್ಗ ಮಧ್ಯದಲ್ಲಿ ಅವರ ಡ್ರೈವರ್ “ಸರ್, ನಾನು ನಿಮ್ಮಂತೆಯೇ ಮಾತನಾಡಲು ಕಲಿತಿದ್ದೇನೆ. ನಿಮ್ಮ ಬದಲಿಗೆ ನಾನು ಇಂದು ಉಪನ್ಯಾಸ ಕೊಡುತ್ತೇನೆ” ಎಂದನಂತೆ. ಆಗ ಅವರು ಅವನ ಬೇಡಿಕೆಗೆ ‘ಅಸ್ತು’ ಎಂದರು. ಕಾರ್ಯಕ್ರಮದಲ್ಲಿ ಆ ವ್ಯಕ್ತಿಯು ಥೆಟ್ ಐನ್ ಸ್ಟೈನ್ ರಂತೆಯೇ ಉಪನ್ಯಾಸ ಕೊಟ್ಟ.. ಆಗ ಕೊನೆಯಲ್ಲಿ ಇವರೇ ಐನ್ ಸ್ಟೈನ್ ಎಂದು ಭಾವಿಸಿಕೊಂಡಿದ್ದ ಡ್ರೈವರ್‌ಗೆ ಅಲ್ಲಿ ನೆರೆದವರು “ಉಪನ್ಯಾಸ ಕೊಟ್ಟ ವಿಷಯದ ಬಗ್ಗೆ ಒಂದು ಡೌಟ್ ಇದೆ” ಎಂದು ಒಂದು ಪ್ರಶ್ನೆ ಕೇಳಿದಾಗ ಆ ಡ್ರೈವರ್ ಯಾವುದೇ ಗಲಿಬಿಲಿಗೆ ಒಳಗಾಗದೇ ‘ಆಯ್ತು ಕೇಳಿ’ ಎಂದ. ಉಪನ್ಯಾಸ ಕೊಟ್ಟ ಡ್ರೈವರ್ ಅವನು ಪ್ರಶ್ನೆ ಕೇಳೋವರೆಗೂ ಸುಮ್ಮನಿದ್ದು “ಕೊನೆಗೆ ಇಂತಹ ಸಿಲ್ಲಿ ಪ್ರಶ್ನೆಗಳಿಗೆಲ್ಲಾ ನಾನಲ್ಲ ನನ್ನ ಡ್ರೈವರನೇ ಉತ್ತರ ಕೊಡ್ತಾರೆ” ಎಂದು ಐನ್ ಸ್ಟೈನ್‌ರ ಕಡೆಗೆ ಕೈ ತೋರಿಸಿದನಂತೆ. ಆಗ ಐನ್ ಸ್ಟೈನ್ ರವರು ಅವನ ಪ್ರಶ್ನೆಗೆ ಉತ್ತರಿಸಿದರಂತೆ. ಇಲ್ಲಿ ಆ ಡ್ರೈವರನ ಸಮಯಪ್ರಜ್ಞೆ ಮೆಚ್ಚತಕ್ಕಂತಹದ್ದು!!
ಅಯ್ಯೋ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ… ನನ್ನ ವಿಷಯಕ್ಕೆ ಬರೋಣ. ಆ ಶಾಲೆಯಲ್ಲಿ ನಾನು ಪ್ರೈಮರಿ ವಿಭಾಗದಲ್ಲಿ ಬೋಧಿಸುತ್ತಿದ್ದರೂ ಒಮ್ಮೆ ನಮ್ಮ ಮುಖ್ಯೋಪಾಧ್ಯಾಯರು ಕರೆದು ನೀವು ಗಾಂಧೀ ಜಯಂತಿಯಂದು ಭಾಷಣ ಮಾಡಬೇಕೆಂದು ನನಗೆ ತಿಳಿಸಿದರು. ನಾನು ಚಿಕ್ಕ ಮಕ್ಕಳಿಗಲ್ವಾ ಎಂದು ಒಪ್ಪಿಕೊಂಡೆ. ಆದರೆ ಸಂಜೆ ತಿಳಿದದ್ದು ಇಡೀ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಬಿ.ಎಡ್. ವಿದ್ಯಾರ್ಥಿಗಳಾದಿಯಾಗಿಯೂ ಆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂಬ ವಿಷಯ ಕೇಳಿ ಮೊದಮೊದಲು ಭಯವೆನಿಸಿತು. ಆದರೂ ಪ್ರಯತ್ನಿಸೋಣ ಎಂದು ಗಾಂಧೀಜಿಯವರ ಬಗ್ಗೆ ಪೇಪರ್ ಕಟಿಂಗ್‌ಗಳನ್ನು ಸಂಗ್ರಹಿಸಿ ಮಾತಾಡಿದೆ. ಆಗ ಮಾಹಿತಿ ಸಂಗ್ರಹಿಸಲು ಇಂದಿನಂತಹ ವ್ಯವಸ್ಥೆ ಇರದ ಕಾರಣ ಸ್ವಲ್ಪ ಕಷ್ಟ ಆಯ್ತು. ಆದರೂ ತಯಾರಾಗಿ ಮಾತಾಡಿದೆ.
ನಾನು 5 ನೇ ತರಗತಿಯಲ್ಲಿ ಬೋಧನೆ ಮಾಡುತ್ತಿದ್ದಾಗ ಮೊದಲ ಬೆಂಚಿನಲ್ಲಿ ಕುಳಿತ ಒಬ್ಬಳು ಬಂದು ನನ್ನ ಬಳಿ “ಸರ್ ಕೊನೆಯ ಬೆಂಚಿನ ಒಬ್ಬ ಹುಡುಗ ನನ್ನನ್ನು ತುಂಬಾ ನೋಡುತ್ತಾನೆ” ಎಂದು ಕಂಪ್ಲೇಂಟ್ ಮಾಡಿದಳು. ನಾನು ತಕ್ಷಣ “ನಿನಗೆ ಆ ಹುಡುಗ ನೋಡ್ತಾನೆ ಎಂದು ಹೇಗೆ ತಿಳಿಯಿತು? ನೀನು ಹಿಂದಕ್ಕೆ ತಿರುಗಿ ನೋಡಿದ್ದಕ್ಕೆ ತಾನೇ ಗೊತ್ತಾಗಿದ್ದು, ನೀನು ಹಿಂದೆ ತಿರುಗಿ ನೋಡಬೇಡ” ಎಂದು ಹೇಳಿ ಕಳುಹಿಸಿದೆ. ಆ ಹುಡುಗನಿಗೆ ಹಾಗೆಲ್ಲಾ ನೋಡಬಾರದು ಎಂದು ಬುದ್ಧಿ ಹೇಳಿದೆ. ಆದರೆ ನಮ್ಮ ಜೊತೆಗಿದ್ದವರು ಇದನ್ನೇ ದೊಡ್ಡ ವಿಷಯ ಮಾಡಲು ಹೋದರು. ಯಾವುದೇ ವ್ಯಕ್ತಿಯ ತಪ್ಪುಗಳನ್ನು ಅವನು ಏಕಾಂಗಿಯಾಗಿದ್ದಾಗ ಮಾತ್ರ ಹೇಳಬೇಕಂತೆ. ಆದರೆ ಅದೇ ಉತ್ತಮ ಅಂಶಗಳನ್ನು ಗುಂಪಿನಲ್ಲಿ ಹೇಳಬೇಕಂತೆ.
“ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರಂತೆ” ಅನ್ನೋ ಹಾಗೆ ನನಗೆ ಈ ಶಾಲೆಯಲ್ಲೂ ಸಂಬಳ ಹೇಳಿಕೊಳ್ಳುವಷ್ಟು ಸಿಗುತ್ತಿರಲಿಲ್ಲ. ಜೀವನ ನಿರ್ವಹಣೆಗೆ ತಕ್ಕಷ್ಟು ಮಾತ್ರ ವೇತನ ಬರುತ್ತಿತ್ತು. ‘ಹಾಸಿಗೆಯಿದ್ದಷ್ಟು ಕಾಲು ಚಾಚು’ ಎಂಬ ಮಾತನ್ನು ಪಾಲಿಸಲೇಬೇಕಿತ್ತು. ಆದರೆ ಇಲ್ಲಿದ್ದ ಒಂದು ಬೇಸರದ ಸಂಗತಿಯೆಂದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ವೇತನ ವ್ಯತ್ಯಾಸ ಇತ್ತು. ಈ ವಿಷಯ ತಿಳಿದು ನಾನು ಸ್ಕೂಲ್ ಸೆಕ್ರೆಟರಿಯ ಬಳಿ ವಿಚಾರಿಸಲು ಹೋದೆ. ಅವರು ಅದಕ್ಕೆ “ನೀವು ಕೇಳಿದ್ದಷ್ಟೇ ನಾವು ಕೊಟ್ಟಿದ್ದೇವೆ. ಅವರವರ ಕ್ಯಾಪಾಸಿಟಿಗೆ ಅನುಗುಣವಾಗಿ ವೇತನ ಕೇಳುತ್ತಾರೆ. ಅವರು ಕೇಳಿದ ವೇತನದ ಆಧಾರದ ಮೇಲೆ ಅವರ ಯೋಗ್ಯತೆ ಅಳೆಯುತ್ತೇವೆ” ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅವರು ಹೇಳಿದ್ದು ನಿಜ!! ಏಕೆಂದರೆ ಅವರು ಸಂದರ್ಶನಕ್ಕೆ ಕರೆದಾಗ “ನೀವು ಎಷ್ಟು ಸ್ಯಾಲರಿ ಎಕ್ಸ್ಪೆಕ್ಟ್ ಮಾಡ್ತೀರ ?” ಅಂತಾ ಕೇಳಿದಾಗ ನಾನು ಅವರು ಕೊಟ್ಟಷ್ಟೇ ಹೇಳಿದ್ದೆ. ವೇತನ ಕಮ್ಮಿ ಕೇಳಿದರೆ ಕೆಲಸವನ್ನು ಕೊಡ್ತಾರೆ. ಇಲ್ಲದಿದ್ದರೆ ಬೇರೆಯವರಿಗೆ ಕೊಡುತ್ತಾರೆ ಎಂದು ಯಾರೋ ಹೇಳಿದ್ದನ್ನು ಕೇಳಿ ನಾನು ಕಮ್ಮಿನೇ ಹೇಳಿದ್ದೆ. ಏಕೆಂದರೆ ನನಗೆ ಆಗ ಯಾವುದಾದರೊಂದು ಕೆಲಸ ಸಿಕ್ಕರೆ ಸಾಕೆಂಬ ಮನೋಸ್ಥಿತಿ ಇತ್ತು. ಈಗ ನಮ್ಮಷ್ಟೇ ಕೆಲಸ ಮಾಡುವ ಒಬ್ಬರು ಹೆಚ್ಚು ವೇತನ ಪಡೆದರೆ ನಾವು ಕಡಿಮೆ ಸಂಬಳಕ್ಕೆ ಅಷ್ಟೇ ಕೆಲಸ ಮಾಡಬೇಕ? ಎಂಬ ಹೋಲಿಕೆ ಬಂದು ಶಾಲೆ ಬಗ್ಗೆ ಬೇಸರವೆನಿಸಿತು. ಅಲ್ಲದೇ ಕೆಲವರು ವೇತನವನ್ನು ಹೆಚ್ಚು ಕೇಳೋಣ. ಒಂದೊಮ್ಮೆ ಕೊಡದಿದ್ದರೆ ಶಾಲೆಯನ್ನು ಬಿಡೋಣ ಎಂದು ಇತರರು ದನಿಗೂಡಿಸಿದರು. ಅವರ ಮಾತನ್ನು ನಂಬಿ ನಾನು ಅದೇ ಜೋಶ್‌ನಲ್ಲಿ ಮುಂದೆ ಹೋದೆ. ಆಮೇಲೇನಾಯ್ತು ಎಂದು ಮುಂದೆ ನೋಡೋಣ.

“ಓದು ಒಕ್ಕಾಲು ಬುದ್ಧಿ ಮುಕ್ಕಾಲು” “ಪುಸ್ತಕದ ಬದನೇಕಾಯಿ ತಿನ್ನೋಕೆ ಬರೋಲ್ಲ” ಎಂಬ ಮಾತುಗಳು ಪ್ರಾಪಂಚಿಕ ಜ್ಞಾನ ತುಂಬಾ ಮುಖ್ಯ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತವೆ. ಹಾಗಂತಾ ಓದುವುದನ್ನು ಬಿಡಬೇಕು ಎಂದಲ್ಲ. ಓದಿನ ಜೊತೆ ಜೊತೆಗೆ ನಮ್ಮ ಸರ್ವತೋಮುಖ ಬೆಳವಣಿಗೆಯ ಕಡೆಗೂ ಆದ್ಯತೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ ವ್ಯಕ್ತಿಯು ಸಮಾಜದಲ್ಲಿ ಉತ್ತಮವಾಗಿ ಬಾಳುತ್ತಾನೆ. ಇಲ್ಲದಿದ್ದರೆ ಬಳಲುತ್ತಾನೆ!! ಏನಂತೀರ??

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
