Advertisement
ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ

ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ

ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು. ನನ್ನ ಕೂಗಾಟಕ್ಕೆ ಅವರಿಬ್ಬರಿಗೂ ಎಚ್ಚರವಾಗಿ ಗಾಬರಿಯಲ್ಲಿ ಕೆಳಕ್ಕಿಳಿದರು.
ಎಸ್.‌
ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತನೆಯ ಕಂತು

ಬರಗಾಲದ ವರ್ಷ. ನಾನಾಗ ಹೈಸ್ಕೂಲಿನ ಎರಡನೆಯ ವರ್ಷದಲ್ಲಿದ್ದೆ. ಮಳೆಯಿಲ್ಲದೆ ನನ್ನೂರಿನ ಸುತ್ತಲ ಕೆರೆ ಕಟ್ಟೆಗಳೆಲ್ಲಾ ಬತ್ತಿದ್ದವು. ಕುಡಿಯುವ ನೀರಿಗೂ ತತ್ವಾರ ಅನ್ನುವಂತೆ ಬಾವಿಗಳ ನೀರುಗಳೂ ತಳ ಕಂಡಿದ್ದವು. ನಾವು ಕುಡಿಯಲು, ಬಳಸಲು ನಂಬಿಕಂಡಿದ್ದ ಯಾವತ್ತೂ ತಳ ಕಾಣದ ನಮ್ಮ ತೋಟದೊಳಗಿನ ಕಲ್ಬಾವಿಯ ನೀರೂ ತಳ ಹಿಡುಕಂಡು ಕೂತಿತ್ತು. ಹೊಲಮಾಳಗಳು ಬಿಕೋ ಅನ್ನುತ್ತಿದ್ದವು. ದನ ಕರುಗಳ ಮೇವಿಗೂ ಕುತ್ತು ಬಂದಿತ್ತು. ಹಿತ್ತಲಿನ ಮೆದೆಗಳು ಕರಗತೊಡಗಿದ್ದವು. ನಮ್ಮ ಮನೆಯ ಮುಂದಲಿನ ತೋಟದೊಳಗಿನ ದೊಡ್ಡ ಬದುವಿನಲ್ಲಿ ಸತೊಂಭತ್ತು ಕಾಲವೂ ಮೆದೆ ಇರುತ್ತಿತ್ತು. ನೆಲದಿಂದ ಸುಮಾರು ಒಂದು ಅಡಿ ಎತ್ತರದಲ್ಲಿ ಒಂದೇ ನೇರಕ್ಕೆ, ಒಂದೇ ಅಳತೆಯ ಸಮತಟ್ಟಾದ ದುಂಡಿ ಕಲ್ಲುಗಳನ್ನಿಟ್ಟು, ಅವುಗಳ ಮೇಲೆ ಹುಲ್ಲಿನ ಭಾರವನ್ನು ತಡಕಳ್ಳುವಂಥ ಬಿದಿರಿನ ಅಥವಾ ಇನ್ನಿತರ ಮರಗಳ ಗಳಗಳನ್ನಿಟ್ಟು ಅಟ್ಟು ಹಾಕಲಾಗುತ್ತಿತ್ತು. ಈ ಅಟ್ಟಿನ ಮೇಲೆ ತುಳಿಸಿದ ಹುಲ್ಲನ್ನು ಒಟ್ಟಲಾಗುತ್ತಿತ್ತು. ಈ ಮೆದೆಗಳು ಎಂಥ ಜೋರು ಮಳೆ ಬಂದರೂ ಒಂದು ಹನಿ ನೀರನ್ನೂ ಒಳಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಅಷ್ಟು ವೈನಾಗಿ ಈ ಮೆದೆಗಳ ನೆತ್ತಿಗಳನ್ನು ಕೂಡಿಸಲಾಗುತ್ತಿತ್ತು. ಈ ಮೆದೆಯ ಹುಲ್ಲೊಳಕ್ಕೆ ಒಣಗಿದ ಅವರೆ ಗಿಡ, ಹುರುಳಿ ಗಿಡ ಹಾಗೂ ತೊಗರಿಗಿಡಗಳನ್ನು ನಡುನಡುವೆ ಸೇರಿಸಿ ಒಟ್ಟಲಾಗುತ್ತಿತ್ತು. ಮೆದೆಯಲ್ಲಿ ಹುಲ್ಲು ಹಿರಿಯುವಾಗ ಈ ಮೂರರ ಘಮಲು ಮೂಗಿಗಡರುತ್ತಿತ್ತು. ಅಬ್ಬಾ ಇಂದಿಗೂ ಆ ಘಮಲಿನ ಪುಳಕ ಮಾಸಿಲ್ಲ. ಮಾವಿನ ಕಾಯಿಯ ಕಾಲದಲ್ಲಿ ಹಳ್ಳಿಯ ಮಕ್ಕಳು ಅವುಗಳನ್ನು ಹಣ್ಣು ಮಾಡಲು ಸಂಧು ಮಾಡಿ ಈ ಮೆದೆಗಳೊಳಕ್ಕೆ ಅಲ್ಲಲ್ಲಿ ಇಡುತ್ತಿದ್ದೆವು. ಆಗ ಇಡೀ ಮೆದೆ ಮಾವಿನ ಹಣ್ಣಿನ ಘಮಲಿನಲ್ಲಿ ಮುಳುಗುತ್ತಿತ್ತು. ಮಳೆಗಾಲದಲ್ಲಿ ಹಸಿ ಮೇವಿನ ಕಾಲದಲ್ಲಿ ಮೆದೆಯ ಒಣ ಹುಲ್ಲಿಗೆ ಕೈ ಇಕ್ಕುತ್ತಿರಲಿಲ್ಲ. ಹಂಗಾಗಿ ವರ್ಷವಿಡೀ ಆರೇಳು ಮಾರುದ್ದದ ಮೆದೆಗಳು ಪೂರಾ ಕರಗುತ್ತಿರಲಿಲ್ಲ. ಹೊಸಾ ಮೆದೆ ಬಂದಾಗ ಮಾತ್ರ ಹಳೆಯದಕ್ಕೆ ಕೈ ಹಾಕುತ್ತಿದ್ದೆವು. ಆಗ ಮನೆ ತುಂಬಾ ದನ ಕರು, ಕುರಿ ಮೇಕೆಗಳಿರುತ್ತಿದ್ದವು. ಅದೇರೀತಿ ಜನ ತಮ್ಮ ಹೊಟ್ಟೆಗಳಿಗೆ ಒಂಚೂರು ಅರೆಯಾದರೂ ಪರವಾಗಿಲ್ಲ ತಾವು ಸಾಕಿದ್ದ ಪ್ರಾಣಿಗಳ ಹೊಟ್ಟೆಗಳಿಗೆ ಒಂಚೂರೂ ಕಮ್ಮಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಮೊದಲ ಮಳೆ ಬೀಳುತ್ತಲೇ ಅವುಗಳಿಗಾಗಿ ತಮ್ಮ ತೋಟತುಡಿಕೆಗಳಲ್ಲಿ ಮೇವುಗಳನ್ನು ತೊಳೆಯುತ್ತಿದ್ದರು. ಜತೆಗೆ ಒಂದು ಮಳೆ ಬಿದ್ದರೆ ಸಾಕು ಹೊಲ ತೋಟದ ಬದುಗಳಲ್ಲಿ ಬದುಗಳು ಹಸುರಾಗಿಬಿಡುತ್ತಿದ್ದವು. ಆಗ ದನಕರುಗಳನ್ನು ಒಂದು ಚೋಡಿ ಗರಿಗೆ ಬಿಡಲಾಗುತ್ತಿತ್ತು. ಗರಿ ಮೇಸಿ ಮುಗಿಯುವುದರೊಳಗೆ ಅವುಗಳ ಬಣ್ಣವೇ ಬದಲಾಗಿಬಿಡುತ್ತಿತ್ತು. ಅಂತೆಯೇ ನನ್ನೂರಿನ ಪಕ್ಕದ ಪುಟ್ಟ ಕಾಡಿನಲ್ಲಿ ಥರಾವರಿ ಹುಲ್ಲುಗಳ ಮೇವು ಬೆಳದಿರುತ್ತಿತ್ತು. ದನಕರು, ಕುರಿ ಮೇಕೆಗಳನ್ನು ಅಡ್ಡಾಡಿಸಲು ಬಾರೆಯನ್ನು ನಂಬಿಕಂಡಿದ್ದರು. ಇಡೀ ಊರು ಅವುಗಳ ಕೂಗು ಪ್ರತಿ ಕೂಗುಗಳಲ್ಲಿ ಮುಳುಗುತ್ತಿತ್ತು. ಆ ಹೊತ್ತಲ್ಲಿ ನಮ್ಮಂಥ ಸ್ಕೂಲಿಗೆ ಹೋಗುವ ಮಕ್ಕಳು ಊರ ಬೀದಿಯಲ್ಲಿ ಚಿಕ್ಕ ತಟ್ಟಿಗಳನ್ನು ಹಿಡುಕಂಡು ಅವುಗಳು ಇಡುತ್ತಿದ್ದ ಸಗಣಿ ತೊಪ್ಪೆಗಳನ್ನು ಆಯುತ್ತಾ ಊರಾಚೆಯ ಕಟ್ಟೆಯವರೆಗೂ ಹೋಗುತ್ತಿದ್ದೆವು. ಸಂಜೆಯ ಹೊತ್ತಲ್ಲೂ ಸಗಣಿ ಆಯುವ ಕೆಲಸ ಮಾಡುತ್ತಿದ್ದೆವು. ಹಂಗೆ ಆದ ಸಗಣಿಯನ್ನು ಆಯ್ದು ತಂದು ನಂನಮ್ಮ ತಿಪ್ಪೆಗಳ ಪಕ್ಕದಲ್ಲಿ ಮರಿ ತಿಪ್ಪೆಗಳನ್ನು ಏಳಿಸುತ್ತಿದ್ದೆವು. ಅದು ಬೆಳೆಯುತ್ತಾ ಹೋದಂತೆ ದೊಡ್ಡವರುಗಳಿಂದ ಭೇಷ್ ಅನಿಸಿಕೊಳ್ಳುತ್ತಿದ್ದೆವು.

ಹಿಂಗಿದ್ದ ಚಿತ್ರಕ್ಕೆ ಆ ವರ್ಷ ರಾವು ಬಡಿದಿತ್ತು. ಮಳೆ ಇಲ್ಲದೆ ಕಾಡಿನಲ್ಲೂ ಹುಲ್ಲಿನ ಮಾತಿರಲಿಲ್ಲ. ದನಕುರಿಗಳು ಇದ್ದ ಹುಲ್ಲುಗಳನ್ನು ಮೋಟು ಕಾಣಿಸಿದ್ದವು. ಯಾವತ್ತೂ ಬತ್ತದ, ಪ್ರಾಣಿ ಪಕ್ಷಿಗಳಿಗೆ ನೀರಿನ ಆಸರೆಯಾಗಿದ್ದ ಪಟ್ಟದ ದೇವರ ಕೆರೆ ಪೂರಾ ಒಣಗಿತ್ತು. ಈಚೆ ಬಾರೆಯಲ್ಲಿ ಮತ್ತು ಆಚೆ ಬಾರೆಯಲ್ಲಿ ಆಟೋಈಟೋ ಬಾಯಾಡಿಸಿಕಂಡು ಬರುತ್ತಿದ್ದ ರಾಸುಗಳಿಗೆ ಕುಡಿಯಲು ಒಂತೊಟ್ಟೂ ನೀರಲ್ಲದಾಗಿತ್ತು. ಇನ್ನು ಕುರಿ ಮೇಕೆಗಳನ್ನು ಸಾಕಿದ್ದವರ ಗೋಳು ಹೇಳತೀರದಾಗಿತ್ತು. ಹಿತ್ತಲಿನಲ್ಲಿದ್ದ ಮೆದೆಗಳೆಲ್ಲಾ ಕರಗಿಹೋಗಿ ಹಿತ್ತಿಲುಗಳೆಲ್ಲಾ ಬಿಕೋ ಅನ್ನುತ್ತಿದ್ದವು. ಹಂಗಾಗಿ ಜನ ದನಕರು, ಕುರಿ ಮೇಕೆಗಳನ್ನು ಹೊಡಕಂಡು ಗುಳೆ ಹೋಗುವುದು ಅನಿವಾರ್ಯವಾಗಿತ್ತು. ಹಿಂಗೆ ನಾನು ನಮ್ಮೂರಿನಲ್ಲಿ ನೋಡಿದ್ದ ಮೊಟ್ಟ ಮೊದಲ ಗುಳೆ ಅದಾಗಿತ್ತು. ಹಿಂಗೆ ಊರಂಥ ಊರಿನ ಸಾಕು ಪ್ರಾಣಿಗಳನ್ನೆಲ್ಲಾ ಗಂಟೆಹಳ್ಳಿ ಗಿಡ ಅಂತ ಕರೆಯುವ ಕಾಡಿಗೆ ಹೊಡೆಯಲಾಗಿತ್ತು. ಈ ಕಾಡು ಕಾಯಿ ತಿಮ್ಮನಹಳ್ಳಿ ಅನ್ನುವ ಊರಿನ ಸಮೀಪದ್ದು. ಹಿಂಗೆ ಸುತ್ತಲ ನಾಡಿಗೆಲ್ಲ ಬರಗಾಲ ಬಂದಿದ್ದರೂ ಅಲ್ಲಿ ಆ ಕಾಡಿನಲ್ಲಿ ಮೇವಿತ್ತು. ಕುಡಿಯಲು ಅಲ್ಲಿನ ಕೆರೆಯಲ್ಲಿ ನೀರಿತ್ತು.

ಇದು ಬುಕ್ಕಾಪಟ್ಣ ಅರಣ್ಯ ಪ್ರದೇಶಕ್ಕೆ ಸೇರುವ ಬಯಲು ಸೀಮೆಯ ಪುಟ್ಟ ಕಾಡು. ಆದರೂ ಇದನ್ನು ಗಂಟೆಹಳ್ಳಿ ಗಿಡ ಅಂತಲೇ ಕರೆಯಲಾಗುತ್ತೆ. ಆ ವರ್ಷ ನನ್ನ ಊರಷ್ಟೇ ಅಲ್ಲ ಸುತ್ತಮುತ್ತಲ ಹಳ್ಳಿಯವರೂ ಈ ಗಂಟೆಹಳ್ಳಿ ಗಿಡಕ್ಕೆ ದನಕರುಗಳನ್ನು ಹೊಡೆದಿದ್ದರು. ಹಂಗೆ ನಮ್ಮ ಮನೆಯಲ್ಲೂ ಮನೆಯಲ್ಲಿಯೂ ಕರೇವಿನ ಹಸು ಎಮ್ಮೆಗಳನ್ನು ಬಿಟ್ಟು ಮಿಕ್ಕವುಗಳು ಈ ಗಿಡವನ್ನು ಕಂಡಿದ್ದವು. ಕಮಾನು ಗಾಡಿಯಲ್ಲಿ ಅಲ್ಲಿ ಒಂದು ವಾರಕ್ಕೆ ಇಲ್ಲಾ ಹದಿನೈದು ದಿನಗಳಿಗೆ ಆಗುವಷ್ಟು ದವಸಧಾನ್ಯಗಳನ್ನೂ ಹಾಗೂ ಅಡಿಗೆಗೆ ಬೇಕಾದ ಉಪ್ಪು, ಹುಳಿ ಮುಂತಾದ ಸಲಕರಣೆಗಳನ್ನೂ ತುಂಬಿಕಂಡು ಹೋಗಲಾಗಿತ್ತು. ಅವುಗಳು ಮುಗಿದರೆ ಮತ್ತೆ ಬಂದು ತಗಂಡು ಹೋಗಲಾಗುತ್ತಿತ್ತು. ಕಮಾನು ಗಾಡಿ ಮತ್ತದರಲ್ಲಿ ಹೋಗುವುದೆಂದರೆ ನನಗಾಗ ತುಂಬಾ ಇಷ್ಟದ ಸಂಗತಿಯಾಗಿತ್ತು. ನನಗೆ ಹೋಗುವ ಮನಸಿದ್ದರೂ ಸ್ಕೂಲಿಗೆ ಚಕ್ಕರ್ ಹಾಕಿ ಹೋಗುವಂತಿರಲಿಲ್ಲ. ಹೋಗಲು ಬಿಡುತ್ತಲೂ ಇರಲಿಲ್ಲ. ಇದಕ್ಕೆ ಕಲ್ಲಯ್ಯ, ನನ್ನ ಎರಡನೆಯ ಚಿಕ್ಕಪ್ಪ ಹಾಗೂ ಚಿಗನಿಂಗಯ್ಯ ಅನ್ನುವ ನಮ್ಮೂರಿನವರು ಅವರ ಜತೆಯಾಗಿ ಹೋಗಿದ್ದರು. ಆಗ ಇಡೀ ಊರೇ ಬಿಕೋ ಅನ್ನುತ್ತಿತ್ತು. ನಮ್ಮ ಸಗಣಿಯ ತೊಪ್ಪೆಯ ತಿಪ್ಪೆಯೂ ಬೆಳೆಯದೆ ನಿಂತಲ್ಲೇ ನಿಂತಿತ್ತು. ಕೆಲವು ಮನೆಗಳವರು ಆಗಾಗ ಬಂದು ಹೋಗುತ್ತಿದ್ದರು. ನಮ್ಮಂಥ ಮಕ್ಕಳಿಗೆ ಅವರು ಬರುವುದು ಅಲ್ಲಿನ ಸಂಗತಿಗಳನ್ನು ಹೇಳಿಕೊಳ್ಳುವುದನ್ನು ಕೇಳಿಸಿಕೊಳ್ಳುವುದೇ ರೋಂಮಾಂಚನದ ಸಂಗತಿಯಾಗಿತ್ತು. ನನ್ನ ಚಿಕ್ಕಪ್ಪ ಎರಡನೆಯ ಸಾರ್ತಿ ಬರುವ ಹೊತ್ತಿಗೆ ಸ್ಕೂಲಿಗೆ ಬೇಸಿಗೆ ರಜೆ ಬಂದಿತ್ತು. ಹಂಗಾಗಿ ನಾನೂ ಬರುವುದಾಗಿ ಅವರಿಗೆ ದುಂಬಾಲು ಬಿದ್ದೆ. `ಅದು ಕಾಡು, ಗಾಡಿ ಅಡೀಲೇ ಮಲಿಕಬೇಕು. ಹೆಂಗಾಗುತ್ತೋ ಹಂಗೆ ಬೇಸಿದ್ದನ್ನೇ ತಿನ್ಬೇಕು. ಬೇಡ’ ಅಂತ ಚಿಕ್ಕಪ್ಪ ಬಿಟ್ಟೋಗಲು ನೋಡಿದರೂ ರಚ್ಚೆ ಹಿಡಿದು ಒಪ್ಪಿಸಿದ್ದೆ. ಹೊರಡುವಾಗ ಕೈಚೀಲವೊಂದಕ್ಕೆ ಒಂದೆರಡು ಚೆಡ್ಡಿ ಹಾಗೂ ಒಂದೆರಡು ಅಂಗಿಗಳನ್ನು ಜತೆಗೆ ಒಂದು ವಲ್ಲಿಯನ್ನು ಅಜ್ಜಿ ಹಾಕಿ ಕೊಟ್ಟಿತ್ತು. ಅವತ್ತಿನ ಕಮಾನು ಗಾಡಿಯ ಪಯಣ, ಹೊಸಾ ಹೊಸಾ ಊರುಗಳನ್ನು ಕಂಡ ಆ ಚಣಗಳು ಹಾಗೂ ಆಗ ಆದ ರೋಮಾಂಚನ ಈಗಲೂ ಮುಕ್ಕಾಗದೆ ಹಂಗೇಯೇ ಉಳುಕಂಡಿದೆ. ಗಾಡಿ ಚಿಕ್ಕನಾಯಕನಹಳ್ಳಿಯನ್ನು ದಾಟಿ, ತಿಮ್ಮನಹಳ್ಳಿಯನ್ನೂ ದಾಟಿ ಗಂಟೆಹಳ್ಳಿ ಗಿಡವನ್ನು ತಲುಪುವಾಗ ಇಳಿ ಹೊತ್ತಾಗಿತ್ತು. ಗಾಡಿ ತುಂಬಾ ಇದ್ದ ಸಾಮಾನುಗಳ ಜತೆಗೆ ಈಗಾಗಲೇ ದನಗಳನ್ನು ಹೊಡೆದಿದ್ದ ನಮ್ಮೂರಿನ ಒಂದಿಬ್ಬರೂ ಬಂದಿದ್ದರು. ನನ್ನೂರಿನ ಪಕ್ಕದಲ್ಲಿದ್ದ ಪಟ್ಟದ ದೇವರ ಕೆರೆಯ ಆಸುಪಾಸಿನಲ್ಲಿದ್ದ ಪುಟ್ಟ ಕಾಡನ್ನು ಮಾತ್ರ ಗೊತ್ತಿದ್ದ ನನಗೆ ಗಂಟೆಹಳ್ಳಿ ಕಾಡು ಬಲು ದೊಡ್ಡ ಕಾಡಾಗಿತ್ತು. ಅಲ್ಲಿಗಿಂತಲೂ ಹಲವು ಬಗೆಯ ಮರಗಿಡಗಳು, ಪೊದೆಗಳು. ಇವುಗಳ ನಡುವಿನ ಬಯಲಲ್ಲಿ ಮಳೆಗಾಲದಲ್ಲಿ ಇದ್ದಂತೆ ಸೊಂಪಾಗಿಲ್ಲದಿದ್ದರೂ ಥರಾವರಿ ಹುಲ್ಲು ಬೆಳೆದಿತ್ತು. ಅಲ್ಲಿಗಾಗಲೇ ಸುತ್ತಲ ಹತ್ತಾರು ಹಳ್ಳಿಗಳವರೂ ಬಂದಿದ್ದರು. ಅಲ್ಲಲ್ಲಿ ಹತ್ತಿರದಲ್ಲಿ ಎತ್ತಿನ ಗಾಡಿಗಳಿದ್ದವು. ಅವುಗಳ ಅಡಿಯಲ್ಲಿ ಊರಿಂದ ತಂದಿದ್ದ ಸರಕುಗಳಿದ್ದವು. ಜನರ ಕೂಗು ಮರು ಕೂಗುಗಳು, ದನಗಳನ್ನು ಅದ್ದಲಿಸಿಕೊಳ್ಳುತ್ತಿದ್ದ ಸದ್ದುಗಳು ಎದ್ದಾಡುತ್ತಿದ್ದವು. ಇಳಿ ಹೊತ್ತಾಗಿದ್ದರಿಂದ ಕೆಲವರಾಗಲೇ ಕಲ್ಲುಗಳನ್ನು ಹೂಡಿ ಮಾಡಿಕಂಡಿದ್ದ ಒಲೆಗಳನ್ನು ಹಚ್ಚಿದ್ದರು. ಆ ಒಲೆಗಳಿಂದ ಹೊಗೆ ಏಳುತ್ತಾ ಕಾಡಿನ ಗಾಳಿಯ ಜತೆಗೂಡಿ ಅಡ್ಡಾಡುತ್ತಿತ್ತು. ನಮ್ಮ ಮನೆಯವರು ಒಲೆ ಹೂಡಿದ್ದ ಜಾಗ ಅಲ್ಲಿದ್ದ ವಿಶಾಲವಾದ ಕೆರೆಯಿಂದ ಕೊಂಚ ದೂರದ ಪುಟ್ಟ ಬಯಲಿನಲ್ಲಿತ್ತು. ಅಲ್ಲಿಗೆ ತಲುಪುತ್ತಲೇ ನನಗಾದ ಆನಂದ, ಆಶ್ಚರ್ಯಕ್ಕೆ ಮಿತಿಯೇ ಇರಲಿಲ್ಲ. ಗಾಡಿಯಿಂದ ಇಳಿದವನೇ ಒಂದು ಸುತ್ತು ಹತ್ತಿರದಲ್ಲಿದ್ದ ಗಾಡಿಗಳನ್ನು ಎಡತಾಕಿದೆ. ಹಂಗೆ ಎಡತಾಕುವಾಗ ಒಂದು ಗಾಡಿಯವರ ಬಳಿ ನನ್ನ ವಯಸ್ಸಿನ ಹುಡುಗನೊಬ್ಬ ಸಿಕ್ಕಿದ. ಅವನು ಸ್ಕೂಲಿಗೆ ಹೋಗುತ್ತಿರಲಿಲ್ಲವಾದ್ದರಿಂದ ತಿಂಗಳ ಹಿಂದೆಯೇ ಅಲ್ಲಿಗೆ ಬಂದಿದ್ದ. ಅವನ ಊರು ಮತ್ತು ಹೆಸರು ಮರೆತುಹೋಗಿದೆ. ನಾನವನಿಗೆ ಪರಿಚಯ ಆಗುವುದಕ್ಕೂ ಮುನ್ನವೇ ಅವನಿಗೆ ಹತ್ತಿರದ ಹಳ್ಳಿಯ ಹುಡುಗನೊಬ್ಬ ಆಗಲೇ ಪರಿಚಯವಾಗಿದ್ದ ಹುಡುಗನೂ ಇದ್ದ. ಆ ಹುಡುಗ ಸಂಜೆಯಾಗುತ್ತಲೇ ಊರು ಸೇರಿಕೊಳ್ಳುತ್ತಿದ್ದ. ನಾನು ಆ ಕಾಡಿನಲ್ಲಿದ್ದ ಸುಮಾರು ಹದಿನೈದು ದಿನಗಳು ಇದ್ದೆ. ನಾವು ಮೂವರೂ ತುಂಬಾ ಸುತ್ತಾಡುತ್ತಿದ್ದೆವು. ಒಂದೊಂದು ದಿನ ಮಧ್ಯಾಹ್ನಕ್ಕೆ ಹೋದವರು ಸಂಜೆಗಟ್ಟ ಅಲ್ಲಿ ಇಲ್ಲಿ ಸುತ್ತುತ್ತಿದ್ದೆವು. ಇದನ್ನು ಕಂಡ `ಲೇ ಪಾಪಾ ಅವ್ರ ಜತೀಗೆ ಹೋಗಿ ಎಲ್ಲಾರ ದಾರಿಗಿರಿ ತಪ್ಪಿಸಿಕಂಡು ಬಿಟ್ಟೀಯ’ ಅಂತ ಚಿಗನಿಂಗಯ್ಯ ಆಗಾಗ ನಮಗೆ ಎಚ್ಚರಿಸುತ್ತಿದ್ದರು. ನಾನದನ್ನ ಹಿಂಗೆ ಕೇಳಿಸ್ಕಂಡು ಹಂಗೆ ಬಿಡುತಿದ್ದೆ. ಒಂದು ದಿನ ನಾವು ಆ ಕಾಡಿನಲ್ಲಿ ಸುತ್ತಾಡಿಕಂಡು ಹೋಗಂದು ಹೋಗೇಬಿಟ್ಟಿದ್ದೆವು. ನಮಗರಿವಿಲ್ಲದಂತೆ ಆ ಕಾಡಿನ ಮತ್ತೊಂದು ಅಂಚನ್ನು ತಲುಪಿದ್ದೆವು. ಅಲ್ಲಿ ಇತ್ತೀಚೆಗಷ್ಟೇ ಏಳಿಸಿದ್ದ ತೋಟವೊಂದು ಕಂಡಿತ್ತು. ಅದರಲ್ಲಿ ಭೋಗವಾಗಿದ್ದ ತೆಂಗಿನ ಸಸಿಗಳಿದ್ದವು. ಅವುಗಳಲ್ಲಿ ಕೈಗೆ ಸಿಗುವಷ್ಟು ಎತ್ತರದಲ್ಲಿ ಎಳನೀರುಗಳು ಕಂಡವು. ಆ ಹೊತ್ತಿಗಾಗಲೇ ನಡೆದು ದಣಿವಾಗಿದ್ದ ನಮಗೆ ಸಣ್ಣಗೆ ಬಾಯಾರಿಕೆಯಾತೊಡಗಿತ್ತು. ಅವುಗಳನ್ನು ನೋಡುತ್ತಲೇ ಅದು ಇಮ್ಮಡಿಸಿತು. ನನ್ನ ಜತೆಗಿದ್ದವರಿಬ್ಬರೂ ಆ ತೋಟದ ತರಾದ ಮುಳ್ಳಿನ ಬೇಲಿಯಲ್ಲಿ ಸಣ್ಣಗೆ ಕಂಡಿ ಮಾಡಿದರು. ಅದರೊಳಗಿಂದ ಮೂವರೂ ಒಳ ಹೊಕ್ಕೆವು. ತೋಟದವರು ಕಂಡರೆ ಗ್ರಾಚಾರ ಬಿಡಿಸುತಾರೆ ಅಂತ ನಮಗೆ ಗೊತ್ತಿತ್ತು. ಆದರೂ ಮಂಡ ಧೈರ್ಯ ಮಾಡಿದೆವು. ಕೈಗೆಟುಕುತ್ತಿದ್ದ ಸಸಿಗಳಿಂದ ಹದವಾಗಿರುವ ಮೂರು ಕೆನ್ನಿಂಗ ಎಳನೀರುಗಳನ್ನು ಗಿರುಚಿಕೊಂಡು ಕಡ್ಡಿಯ ಗೂಟವೊಂದರಿಂದ ತೊಟ್ಟಿನ ಕಡೆಯಿಂದ ಅವುಗಳಿಗೆ ತೂತಾಕಿಕಂಡು ಕುಡಿದೆವು. ಇದರ ನಡುವೆಯೂ ಕತ್ತಲಾಗುವುದರೊಳಗೆ ಮತ್ತೆ ನಂನಮ್ಮ ಗಾಡಿಗಳ ಹತ್ತಿರಕ್ಕೆ ಹೋಗುವ ಇರಾದೆ ನಮ್ಮನ್ನು ಕಾಡುತ್ತಿತ್ತು. ಆಗಲೇ ಇಳಿಹೊತ್ತು ಸಂಜೆಯನ್ನು ಬರ ಮಾಡಿಕೊಳ್ಳುತ್ತಿತ್ತು. ಆ ಹೊತ್ತಲ್ಲಿ ಯಾರೊಬ್ಬರೂ ಅತ್ತ ಬರಲಾರರು ಅನ್ನುವುದು ಖಾತ್ರಿಯಾಗುತ್ತಲೇ ಮತ್ತೆ ಒಂದೊಂದನ್ನು ಕಿತ್ತುಕಂಡು ಕುಡಿದೆವು. ಎರಡೆರಡು ಎಳ ನೀರನ್ನು ಕುಡಿಯುವ ಹೊತ್ತಿಗೆ ಹೊಟ್ಟೆ ಪಿಟ್ಟಾಯಿತು. ಅಷ್ಟರಲ್ಲಿ ಸಂಜೆಯಾಗಿತ್ತು. ಅಗಾಇಗಾ ಅನ್ನುವುದರೊಳಗೆ ಕತ್ತಲು ಇಳಿಕಂಡೇ ಬಿಡ್ತು. ಒಂದಷ್ಟು ದೂರ ನಡೆಯುವುದರೊಳಗೆ ಕಾಲು ದಾರಿಯೂ ಕಾಣದಂತಾಯ್ತು. ತಗಾ ಮತ್ತಂದಷ್ಟು ದೂರ ಅನ್ನುವುದರೊಳಗೆ ಕಣ್ಣುಯ್ದರೆ ಕಣ್ಣು ಕಾಣದಂಥ ಕತ್ತಲೆ ಕವುಕಂಡಿತು. ಮೂವರ ನಡುವೆಯೂ ಮಾತುಗಳು ನಿಂತೋಗಿ ಬಾಳಾ ಹೊತ್ತೇ ಆಗಿತ್ತು. ಭಯದಲ್ಲಿ ಅಡ್ಡಾದಿಡ್ಡಿ ನಡೆಯ ಹತ್ತಿದೆವು. ಮುಳ್ಳಿನ ಕಂಟಿಗಳು ಮಂಡಿ ಮೊಳಕಾಲುಗಳೆನ್ನದೆ ನಮ್ಮನ್ನು ತಡವಿಕಂಡವು. ಅಲ್ಲೆಲ್ಲಾ ಉರಿಉರಿ. ಕತ್ತಲೆಂದರೆ ಮೊದಲೇ ಮಾಮೇರಿ ಭಯಬೀಳುತ್ತಿದ್ದ ನಾನು ದಿಕ್ಕುತೋಚದೆ ಮೆಲ್ಲಗೆ ಕುಸುಗತೊಡಗಿದೆ. ಅವರಿಬ್ಬರದ್ದೂ ಅದೇ ಪಾಡಾಗಿತ್ತು. ಸುತರಾಂ ಮಾತುಗಳು ಏಳುತ್ತಿಲ್ಲ. ಪೂರಾ ದಾರಿ ತಪ್ಪಿದ್ದೆವು. ನಡೆಯುವುದ ಬಿಡಲಿಲ್ಲ. ನಡೆದೆವು. ನಡೆದೇ ನಡೆದೆವು. ನಾವು ಬಂದಿದ್ದ ಗಾಡಿಗಳಿದ್ದ ಕಡೆಯಿಂದ ಯಾವ ಸದ್ದುಗಳೂ ಕೇಳುತ್ತಿಲ್ಲ. ಯಾವ ಬೆಳಕೂ ಕಾಣುತ್ತಿಲ್ಲ. ಬೆಳಗ್ಗೆ ಗೊತ್ತಾಯ್ತು. ದಾರಿ ತಪ್ಪಿದ ಭಯಕ್ಕೆ ನಾವು ಗಾಡಿಗಳಿದ್ದ ವಿರುದ್ಧ ದಿಕ್ಕಿನಲ್ಲಿ ನಡೆದಿದ್ದೆವು ಅಂತ. ಕತ್ತಲನ್ನು ಕಣ್ಣುಗಳಿಗೆ ಎಷ್ಟು ಒಗ್ಗಿಸಿಕೊಳ್ಳಲು ನೋಡಿದರೂ ಅದು ಬಿಗುತುಕೊಂಡೇ ಇತ್ತು. ನಡೆಯಲು ಸಾಧ್ಯವಾಗದಾಗ ಎದುರಿಗೆ ಸಿಕ್ಕ ಮರವೊಂದರ ಬುಡದಲ್ಲಿ ಮೂವರೂ ಕುಳಿತೆವು. ಆ ಮರದ ಹೂಗಳ ಘಮಲಿನಿಂದ ಅದು ಮಾವಿನ ಮರ ಅಂತ ಗೊತ್ತಾಯ್ತು. ಅದೊಂದು ಪುಟ್ಟ ಮಾವಿನ ಮರ. ಆಳೆತ್ತರದಲ್ಲಿ ಅದರ ಕೊಂಬೆಗಳಿದ್ದವು. ಭಯ ಮತ್ತು ಸುಸ್ಥಿಗೆ ಮಂಪರು ಕವಿಯತೊಡಗಿತು. ಕೂತಲ್ಲೇ ಹಂಗೇ ಒಂದಷ್ಟು ಹೊತ್ತು ತೂಕಡಿಸುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಹತ್ತಿರದಲ್ಲಿ ನರಿಯೊಂದು ಜೋರಾಗಿ ಘೂಳಿಡತೊಡಗಿತು. ಮತ್ತೊಂದೆಡೆಯಿಂದ ಅದಕ್ಕೆ ಮತ್ತೊಂದು ನರಿ ಮಾರುತ್ತರಿಸುತ್ತಿತ್ತು. ನಮ್ಮ ನಿದ್ದೆಯೆಲ್ಲಾ ಒಮ್ಮೆಗೇ ಪೇರಿ ಕಿತ್ತು ಬಿಡ್ತು. ಆಗ ನಮ್ಮೊಳಗೊಬ್ಬ ಕೆಳಗೆ ಕೂತರೆ ಸರಿಯಾಗಲ್ಲ ಮರದ ಕೊಂಬೆಗಳನ್ನು ಹತ್ತಿ ಕೂರುವ ಅಂದ. ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು. ನನ್ನ ಕೂಗಾಟಕ್ಕೆ ಅವರಿಬ್ಬರಿಗೂ ಎಚ್ಚರವಾಗಿ ಗಾಬರಿಯಲ್ಲಿ ಕೆಳಕ್ಕಿಳಿದರು. ಕೂಳೆ ಹೊಕ್ಕಂಡಿದ್ದ ರಭಸಕ್ಕೆ ಅಲ್ಲಿ ಗುಂಡಿ ಬಿದ್ದಂತಾಗಿತ್ತು. ರಕ್ತ ವಸರುತ್ತಿತ್ತು. ರಕ್ತ ನಿಲ್ಲುವ ಹೊತ್ತಿಗೆ ನನಗೆ ತಲೆ ಸುತ್ತು ಬಂದಂತಾಗಿತ್ತು. ಅವತ್ತಿನ ಆ ಘಟನೆ ಇವತ್ತಿಗೂ ನನ್ನ ಎಡಗಾಲ ಮಂಡಿಯ ಕೆಳಗೆ ಹೆಬ್ಬೆಟ್ಟಗಲದ ಗಾಯದ ಗುರುತಾಗಿ ಉಳುಕಂಡಿದೆ.

ಆ ಗಂಟೆಹಳ್ಳಿಯ ಗಿಡ, ಅಲ್ಲಿನ ಆ ವಾತಾವರಣ ನಿನ್ನೆಯಷ್ಟೇ ನೋಡಿದಷ್ಟು ಹಸಿರಾಗಿದೆ. ಮತ್ಮತ್ತೆ ಕಣ್ಮುಂದೆ ಹಾಜರಾತಿ ಹಾಕುತ್ತೆ. ಸಂಜೆಯಾದರೆ ಸಾಕು ಕುಲೆಂಟು ಜಾತಿಯ ಹಕ್ಕಿಗಳು ಕೆರೆಯ ಅಂಗಳಕ್ಕೆ ಬರುತ್ತಿದ್ದವು. ಹಂಗೇನೇ ಪ್ರಾಣಿಗಳೂ. ನಾನು ತೋಳ ಮತ್ತು ನರಿಗಳನ್ನು ತುಂಬಾ ಹತ್ತಿರದಿಂದ ನೋಡಿದ್ದು ಇದೇ ಕಾಡಿನಲ್ಲಿ. ಕೆಲವು ಸಾರ್ತಿ ಅಲ್ಲಿದ್ದ ಭೂತಪ್ಪನ ಗುಡಿಗೂ ಹೋಗಿ ಬರುತ್ತಿದ್ದೆವು. ಕತ್ತಲಾಗತೊಡಗಿದಂತೆ ಎಲ್ಲ ಗಾಡಿಗಳಲ್ಲೂ ಲಾಟೀನುಗಳು ಹತ್ತಿಕೊಳ್ಳುತ್ತಿದ್ದವು. ಮೇಲೆ ನಕ್ಷತ್ರಗಳ ಮಿಣುಕು. ಕಾಡಿನೆದೆಯಲ್ಲಿ ಲಾಟೀನುಗಳ ಮಂದ ಬೆಳಕು. ಹಕ್ಕಿಗಳು ಮೌನಕ್ಕೆ ಜಾರುತ್ತಲೇ ನರಿ, ಗೂಬೆ ಮುಂತಾದವುಗಳು ಮಾತಿಗಿಳಿಯುತ್ತಿದ್ದವು. ಆಗ ಕಳೆದ ಒಂದೊಂದು ಇರುಳೂ ಒಂದೊಂದು ಹಗಲೂ ನಮ್ಮನ್ನು ಕೌತುಕದ ಜಾಡಿನಲ್ಲಿ ನಿಲ್ಲಿಸುತ್ತಿದ್ದವು. ನಾನು ಗಾಡಿಯ ಕೆಳಗೆ ಮಲಗ್ತೀನಿ ಅಂದರೂ ಚಿಕ್ಕಪ್ಪ ಕಮಾನು ಗಾಡಿಯೊಳಗೆ ಮಲಗಿಸುತ್ತಿದ್ದರು. ಅವರು ಮಾತ್ರ ಇಬ್ಬರೂ ಸರತಿಯಂತೆ ಕಾವಲು ಕಾಯುತ್ತಿದ್ದರು. ಏಕೆಂದರೆ ಅಲ್ಲಿ ಕತ್ತೆ ಕಿರುಬಗಳ ಕಾಟವಿತ್ತಂತೆ. ಹಂಗಾಗಿ ಯಾವ ಮಾಯದಲ್ಲಾದರೂ ಅವುಗಳು ಗಾಡಿಯ ಸುತ್ತಲೂ ಕಟ್ಟಿಕೊಂಡಿರುತ್ತಿದ್ದ ದನಗಳ ಮೇಲೆರಗಬಹುದು ಅನ್ನುವ ಆತಂಕವಿತ್ತು. ತಿಂಗಳುಗಟ್ಟಲೆ ಅಲ್ಲೇ ಕಳೆದಿದ್ದರಿಂದ ಅಲ್ಲಿಗೆ ಬಂದಿದ್ದ ಬೇರೆಬೇರೆ ಊರಿನವರೆಲ್ಲಾ ಪರಸ್ಪರ ಗೆಳೆಯರಾಗಿದ್ದರು. ಈ ಕಾರಣಕ್ಕೆ ಇರುಳಿನಲ್ಲಿ ಸರೊತ್ತಿನವರೆಗೂ ಮಾತುಕತೆಗಳು, ಹಾಡುಗಳು ನಡೆಯುತ್ತಿದ್ದವು. ಅಟೋತಿಗಾಗಲೇ ನಿದ್ದೆಗೆ ವಶನಾಗಿಬಿಡುತ್ತಿದ್ದ ನನಗೆ ಕೆಲವೊಮ್ಮೆ ನಾಟಕದ ಮಟ್ಟುಗಳು, ಹಾಡುಗಳು ಯಾವುದೋ ಲೋಕದ ಅಶರೀರ ವಾಣಿಗಳಂತೆ ಕೇಳಿಸುತ್ತಿದ್ದವು. ಈ ಕಾಡಿನಲ್ಲಾದ ಅನುಭವದ ಪುಳಕಕ್ಕೋ ಏನೋ ನನಗೆ ಕೆಲ ರಷ್ಯನ್ ಅಂತೆಯೇ ಕನ್ನಡ ಸೇರದಂತೆ ವಿವಿಧ ದೇಶ ಭಾಷೆಗಳ ಲೇಖಕರು ಕಾಡನ್ನು ಹಾಗೂ ಅದರೊಳಗಿನ ಬದುಕನ್ನು ತೋರಾಕುವ ಲೇಖಕರ ಪುಸ್ತಕಗಳು ಹಾಗೂ ಕಾಡಿನ ಬದುಕಿನ ವಿವರಣೆಗಳು ತುಂಬಾ ಹತ್ತಿರದವು ಅನಿಸಿಬಿಡುತ್ತವೆ. ಈ ಕಾರಣಕ್ಕೇ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’, ಕಾರಂತರ `ಬೆಟ್ಟದ ಜೀವ’, ತೇಜಸ್ವಿಯವರ`ನಿಗೂಢ ಮನುಷ್ಯರು’ ಇವಾನ್ ಟರ್ಜೆನೇವ್‌ನ `ಎ ಹಂಟರ್ಸ್‌ ಸ್ಕೆಚಸ್’ ಮತ್ತು ಇವಾನ್ ಬುನಿನ್‌ನ `ಶ್ಯಾಡೋವ್ಡ್ ಪಾಥ್’ ಮುಂತಾದ ಪುಸ್ತಕಗಳ ಲೋಕ ಮತ್ಮತ್ತೆ ನನ್ನನ್ನು ಸೆಳೆಯುತ್ತಿರುತ್ತವೆ. ಗಂಟೆಹಳ್ಳಿ ಗಿಡ, ಅದರೊಳಗಿನ ಕೆರೆ ಮತ್ತು ಭೂತಪ್ಪನ ಗುಡಿಗಳನ್ನು ಆಗ ನೋಡಿದ್ದು ಬಿಟ್ಟರೆ ಮತ್ತೆ ಅತ್ತ ಹೋಗಲಾಗಿಲ್ಲ. ಈಗಿನ ಅದರ ಸ್ಥಿತಿಯೂ ತಿಳಿದಿಲ್ಲ.

ಈ ಗಂಟೆಹಳ್ಳಿ ಗಿಡಕ್ಕೆ ನಮ್ಮ ಊರಿನವರ ಜತೆ ತಿಮ್ಮಣ್ಣ ಕೂಡಾ ತನಗಿದ್ದ ಒಂದು ಎಮ್ಮೆ ಮತ್ತದರ ಹೆಣ್ಣು ಮಳಕನನ್ನು ಹೊಡಕಂಡು ಬಂದಿದ್ದರು. ನನ್ನೂರಿನಲ್ಲಿ ಅವರು ದಾಸಯ್ಯನ ಕಾಯಕ ಮಾಡುತ್ತಿದ್ದರು. ತನ್ನ ಗುಡಿಸಲಿನ ಪಕ್ಕದ ಒಂದೀಟಗಲ ಜಮೀನನ್ನು ಬಿಟ್ಟರೆ ಹೊಲವಾಗಲಿ ತೋಟವಾಗಲಿ ಇರಲಿಲ್ಲ. ಸಮೀಪದಲ್ಲಿದ್ದ ಬಾರೆ ಮತ್ತು ಕಟ್ಟೆಗಳ ಸಮೀಪ ಇವುಗಳನ್ನು ಮೇಸುತ್ತಾ ಹೆಂಗೋ ನಿಭಾಯಿಸುತ್ತಿದ್ದರು. ಗೊಟ್ಟು ಕೊಟ್ಟಿದ್ದ ಹೊಡೆತಕ್ಕೆ ತಿಮ್ಮಣ್ಣ ಎಲ್ಲರಂತೆ ಗಂಟೆಹಳ್ಳಿಯ ಗಿಡದ ದಾರಿ ತುಳಿದಿದ್ದರು. ಶನಿವಾರದ ದಿನ ಕಾಯಕ ಮಾಡುವ ಸಲುವಾಗಿ ಎಮ್ಮೆಗಳನ್ನು ಯಾರಿಗಾದರೂ ನೋಡಿಕೊಳ್ಳಲು ಕೇಳಿಕಂಡು ಊರಿಗೆ ಬಂದು ವಾರ ಮತ್ತು ಕಾಯಕ ಮುಗಿಸಿ ಮತ್ತೆ ಹೋಗುತ್ತಿದ್ದರು. ಹಿಂಗೆ ಒಂದು ಸಾರ್ತಿ ಊರಿಗೆ ಬಂದು ಹೋಗುವಷ್ಟರಲ್ಲಿ ಎಮ್ಮೆಯ ಜತೆಗಿದ್ದ ಮಳಕ ತಪ್ಪಿಸಿಕೊಂಡುಬಿಟ್ಟಿತ್ತು. `ಅಯ್ಯೋ ಅದು ಬಾರಿಗೆ ಬಂದು ಕಂಡಕಂಡ ಎಮ್ಮೆ ಮ್ಯಾಲೆಲ್ಲಾ ಹತ್ತಾಕೆ ರಾಪಾಡ್ತಿತ್ತು. ಅದುನ್ನ ಗದ್ರಿಸಿ ಸಾಕಾಗೋಯ್ತು. ಕಡೀಕೆ ಅದು ಆ ಭೂತಪ್ಪನ ಗುಡೀ ಕಡೀಕೆ ಓಡೋಯ್ತು’ ಅಂತ ನೋಡಿಕೊಳ್ಳಲು ಒಪ್ಪಿಕೊಂಡಿದ್ದವರು ಹೇಳ್ತಾವ್ರೆ’ ಅಂತ ನಮ್ಮ ಗಾಡಿಯ ಹತ್ತಿರ ಬಂದು ತಿಮ್ಮಣ್ಣ ಚಿಕ್ಕಪ್ಪನಿಗೆ ಈ ವಿಷಯವನ್ನು ಒಪ್ಪಿಸುತ್ತಿತ್ತು. `ಅದೆಲ್ಲೋಗುತ್ತೆ ಬಿಡು ಬರುತ್ತೆ’ ಅಂತ ಚಿಕ್ಕಪ್ಪ ಸಮಾಧಾನ ಮಾಡಿದರೂ ಭೂತಪ್ಪನ ಗುಡಿಯತ್ತ ಆ ಮಳಕನನ್ನು ಹುಡುಕಿಕೊಂಡು ಹೊರಟರು. ಆಗಲೇ ಸಂಜೆಯಾಗುತ್ತಿತ್ತು. `ಅಯ್ಯೋ ತಿಮ್ಮಣ್ಣ ನಿಂಗೆ ಕಣ್ಗುಳು ಬ್ಯಾರೆ ಸರ್ಯಾಗಿ ಕಾಣಲ್ಲ, ಬೆಳಿಗ್ಗೆ ನೋಡಾನ ಬಿಡು’ಅಂತ ಅಂದ ಚಿಕ್ಕಪ್ಪನ ಮಾತುಗಳನ್ನು ಕೇಳಿಸಿಕೊಳ್ಳದವರಂತೆ ಅವರು ನಡೆದುಹೋದರು. ರಾತ್ರಿಯಾಗುತ್ತಲೇ ಬರಗೂರರ ಶಿವಯ್ಯ ಅನ್ನುವವರು ತಿಮ್ಮಣ್ಣನನ್ನು ಹುಡುಕಿಕಂಡು ನಮ್ಮ ಗಾಡಿಯತ್ತ ಬಂದರು. ತಿಮ್ಮಣ್ಣ ಅವರ ಜತೆಗೆ ಬಂದಿದ್ದರು. ರಾತ್ರಿ ಸುಮಾರು ಹೊತ್ತಿನವರೆಗೂ ಚಿಕ್ಕಪ್ಪ, ಚಿನಿಂಗಯ್ಯ ಮತ್ತು ಶಿವಯ್ಯ ಇವರ ಮಾತು ಕತೆ ನಡೆದಿತ್ತು. ಗಾಡಿಯೊಳಗೆ ಮಲಗಿದ್ದ ನನಗೆ ಅರೆ ಎಚ್ಚರ ಅರೆ ನಿದ್ದೆಯೊಳಗೆ ಇವುಗಳು ಕೇಳಿಸುತ್ತಿದ್ದವು.

ಮಾರನೆಯ ದಿನ ಬೆಳಗ್ಗೆ. ಕೆರೆಯತ್ತ ಮುಖ ಮಾಡಿ ಕಾಫಿ ಕುಡಿಯುತ್ತಾ ಕೂತಿದ್ದ ಚಿಗನಿಂಗಯ್ಯ`ಅಗಳಪ್ಪ ಅಂತೂ ತಿಮ್ಮಣ್ಣ ಮಳ್ಕುನ್ನ ಹುಡಿಕ್ಕಂಡೇ ಬತ್ತಾವ್ನೆ’ ಅಂತ ಆ ಚಿಕ್ಕಪ್ಪನಿಗೆ ತೋರಿಸಿದರು. ಗಾಡಿಯ ಮೂಕಿನ ಮೇಲೆ ಕೂತಿದ್ದ ನಾನೂ ಅತ್ತ ನೋಡಿದೆ. ಎಳೆ ಬಿಸಿಲಿನಲ್ಲಿ ತಿಮ್ಮಣ್ಣ ಮತ್ತವರ ಮಳಕ ಬೆಳಗಿನ ಬಿಸಿಲು ಬಿಡಿಸಿದ್ದ ನಡೆದಾಡುವ ಚಿತ್ರಗಳಂತೆ ಕಾಣುತ್ತಿದ್ದರು. ಮಳಕದ ಮೂಗುದಾರವನ್ನು ಹಿಡುಕಂಡು ತಿಮ್ಮಣ್ಣ ಅಕ್ಷರಶಃ ಅದನ್ನು ಎಳಕಂಡು ಬರುತ್ತಿದ್ದರು. ಅವರು ಎಳೆದಷ್ಟೂ ಅದು ಹಿಂಜಗ್ಗುತ್ತಿತ್ತು. ಹತ್ತಿರ ಬಂದವರೇ` ಕಲ್ಲಪ್ಪ ಒಂದು ಹಗ್ಗ ಇದ್ರೆ ಕೊಡು ಮತ್ತೆ ಇಲ್ಲೇ ಯಾವ್ದಾರಾ ಮರುಕ್ಕೆ ಬಿಗಿತೀನಿ. ಏಟು ಸಿಕ್ಕುತ್ತೋ ಆಟು ಕಿತ್ಕಂಡು ತಿನ್ಲಿ’ ಅಂದರು. ಅದರಂತೆ ಉದ್ದನೆಯ ಹಗ್ಗವೊಂದನ್ನು ಇಸುಕಂಡು ಅಲ್ಲಿದ್ದ ಗಿಡವೊಂದಕ್ಕೆ ಕಟ್ಟಿದರು. ಏನೂ ಆಗಿಲ್ಲವೆಂಬಂತೆ ಆ ಮಳಕ ತನಗೆ ಸಿಕ್ಕಿದ್ದ ಜಾಗದಕ್ಕೆ ಮುಸುಡಿಯೂರಿ ಸಿಕ್ಕ ಮೇವನ್ನು ಮೇಯತೊಡಗಿತು. ಅದನ್ನು ಹುಡುಕಿಕಂಡು ತಿಮ್ಮಣ್ಣ ಕೆರೆಯಾಚೆಯ ಭೂತನ ಗುಡಿಯತ್ತ ಹೋಗಿದ್ದು, ಕಣ್ಣುಯ್ದರೆ ಕಣ್ಣು ಕಾಣದಂತಾದಾಗ ತಿರುಗಿ ಗಾಡಿಯತ್ತ ಬರಲು ಆಗದೆ ಆ ಗುಡಿಯ ಪಕ್ಕದಲ್ಲೇ ಜೀವ ಹಿಡುಕಂಡು ರಾತ್ರಿ ಪೂರಾ ಕಳೆದದ್ದು, ಬೆಳಗಿನ ಜಾವದ ಹೊತ್ತಿಗೆ ಎಷ್ಟು ತಡಕಂಡರೂ ಆಗದೆ ಒಂದು ಜೊಂಪು ಹಾರಿಸಿದ್ದು, ಕಣ್ಬಿಟ್ಟರೆ ಮಳಕ ತನ್ನೆದುರಿಗೆ ನಿಂತದ್ದು-ಹಿಂಗೆ ತಿಮ್ಮಣ್ಣ ಮಳಕ ಸಿಕ್ಕ ಖುಷಿಯಲ್ಲಿ ಒಂದೇ ಉಸುರಿಗೆ ಹೇಳತೊಡಗಿದರು. `ಹೋಗ್ಲಿ ಬಿಡು. ತಗಾ ಒಂದು ಲೋಟ ಕಾಫಿ ಕುಡಿ’ಅನ್ನುತ್ತಾ ಚಿಗನಿಂಗಯ್ಯ ತಪ್ಪಲೆಯ ತಳದಲ್ಲಿದ್ದ ಕಾಫಿ ನೀರನ್ನು ಒಂಚೂರು ಬಿಸಿ ಮಾಡಿ ತಿಮ್ಮಣ್ಣನ ಕೈಗಿಟ್ಟು ಮಳಕದತ್ತ ನೋಡಿ `ಅಲ್ಲ ಕಣೋ ತಿಮ್ಮಣ್ಣ ನೀನು ಭೂತಪ್ಪನ ಗುಡಿತಾವ ಹೆಣ್ಣು ಮಳಕಾನ ಗಂಡು ಮಳ್ಕ ಮಾಡ್ಕಂಡು ಬಂದುಬಿಟ್ಟಿದೀಯಲ್ಲೋ’ಅಂದರು. ತಿಮ್ಮಣ್ಣ ಮಳಕ ಸಿಕ್ಕ ಖುಷಿಯಲ್ಲಿ ತನ್ನ ಮದ್ದಿಷ್ಟ ಕಣ್ಣಿನ ಬೆಳಕಲ್ಲಿ ಅದನ್ನು ಸರಿಯಾಗಿ ನೋಡದೆ ಯಾರದ್ದೋ ಗಂಡು ಮಳಕನನ್ನು ಹಿಡುಕಂಡು ಬಂದಿದ್ದರು. ತಿಮ್ಮಣ್ಣ ತಲೆ ಮೇಲೆ ಕೈ ಹೊತ್ತು ಕೂತರು. ಅದಾದ ಕೆಲ ದಿನಕ್ಕೆ ನಾನು ಚಿಕ್ಕಪ್ಪನ ಜತೆ ಊರಿಗೆ ಬಂದೆ. ಮತ್ತೆ ಹೋಗಬೇಕು ಅನಿಸಲಿಲ್ಲ. ಉಳಿದ ರಜೆಯನ್ನು ಗೆಳೆಯರೊಂದಿಗೆ ಕಳೆಯುವ ಹುಮ್ಮಸ್ಸು ಅದಕ್ಕೆ ಕಾರಣವಾಗಿತ್ತು. ಅಲ್ಲಿಗೆ ಚಿಕ್ಕಪ್ಪನ ಬದಲಿಗೆ ಅಯ್ಯ ಹೋಗಿತ್ತು. ಇದಾದ ಮೇಲೂ ತಿಂಗಳುಗಟ್ಟಲೆ ದನಕರುಗಳನ್ನು ಹೊಡಕಂಡು ಹೋಗಿದ್ದವರು ಅಲ್ಲೇ ಇದ್ದರು. ಅವರೆಲ್ಲಾ ತಿರುಗಿ ಬಂದಾಗ ತಿಮಣ್ಣನವರ ಅವತ್ತು ಚಿಗರಂಗಯ್ಯ ತೋರಾಕಿದ್ದ ಅದೇ ಗಂಡು ಮಳಕ ಎಮ್ಮೆಯ ಜತೆಗಿತ್ತು.

ತಿಮ್ಮಣ್ಣನವರದ್ದು ಗುಡ್ಳು ಮನೆ. ಮನೆಯ ವಾರಾಸಿಗೊಂದಿಷ್ಟು ಜಾಗವಿತ್ತು. ಆ ಜಾಗದಲ್ಲಿ ಹೆಂಡತಿ ಭದ್ರಮ್ಮನ ನೆರವಿಂದ ಸಣ್ಣದೊಂದು ಹೂ ತೋಟವನ್ನು ಎಬ್ಬಿಸಿಕಂಡಿದ್ದರು ತಿಮ್ಮಣ್ಣ. ಆ ಕೈತೋಟದಲ್ಲಿ ದುಂಡು ಮತ್ತು ಸೂಜಿ ಮಲ್ಲಿಗೆ, ಕಾಕಡ, ಹಲವು ಬಣ್ಣದ ಗೆಡ್ಡೆ ಡೇರೆ, ಚೆಂಡೂವಿನ ಗಿಡಗಳಿದ್ದವು. ಇವುಗಳಿಗೆಲ್ಲಾ ನೀರಿನ ಸಲುವಾಗಿ ಪಕ್ಕದಲ್ಲಿ ಒಂದಾಳೆತ್ತರದ ಕೈಗುಂಡಿಯನ್ನು ಮಾಡಿಕಂಡಿದ್ದರು. ಒಂದು ಸಣ್ಣ ಮಳೆಯಾದರೆ ಸಾಕು ಚರಂಡಿಯಲ್ಲಿ ಹರಿಯುತ್ತಿದ್ದ ಊರ ನೀರು ಆ ಗುಂಡಿಯನ್ನು ಮಾತಾಡಿಸಿಕಂಡೇ ಮುಂದೋಗುತ್ತಿತ್ತು. ಸಾಲದ್ದಕ್ಕೆ ಕೆರೆಕಟ್ಟೆಗಳಲ್ಲಿ ವರ್ಷೊಂಭತ್ತು ಕಾಲವೂ ನೀರಿರುತ್ತಿದ್ದರಿಂದ ಆ ಗುಂಡಿ ಬತ್ತುತ್ತಲೇ ಇರಲಿಲ್ಲ. ಅದರಲ್ಲಿ ಬೆಳೆದ ಹೂಗಳನ್ನು ದಿನವೂ ಹಾರಗಳನ್ನು ಕಟ್ಟಿಯೋ, ಇಲ್ಲ ಬಿಡಿ ಹೂಗಳನ್ನೋ ಪಕ್ಕದ ಶೆಟ್ಟೀಕೆರೆಗೆ ತೆಗೆದು ಕೊಂಡು ಹೋಗಿ ಮಾರಿ ಬರುತ್ತಿದ್ದರು. ಇದು ಬದುಕಿನ ಯಾಚಕಕ್ಕೇ ಒಂಚೂರು ನೆರವಾಗುತ್ತಿತ್ತು. ಜತೆಗೆ ಎಮ್ಮೆಯ ಕರೇವಿನ ಕಾಲದಲ್ಲಿ ಅದರಿಂದಷ್ಟು ಒಂದಷ್ಟು ಕಾಸು ಬರುತ್ತಿತ್ತು. ವಾರ, ಹಬ್ಬ ಹರಿದಿನ, ಜಾತ್ರೆಗಳಲ್ಲಿ ಊರಿನ ಮನೆಗಳಲ್ಲಿ ತಿಮ್ಮಣ್ಣನ ದಾಸಯ್ಯನ ಕಾಯಕವಿರದೇ ಮುಂದುವರೆಯುತ್ತಿರಲಿಲ್ಲ. ಊರೊಳಕ್ಕೆ ಹೋಗುವವರನ್ನು ಮತ್ತು ಬರುವವರನ್ನು ತಿಮ್ಮಣ್ಣನ ಈ ಕೈ ತೋಟದ ಹೂಗಳ ಘಮಲು ಸಾವಾಸ ಮಾಡಲೇಬೇಕಿತ್ತು. ತಿಮ್ಮಣ್ಣನವರ ಬೇಲಿಗೆ ಹೊಂದಿಕೊಂಡಂತೆ ಚರಂಡಿಯ ಉದ್ದಕ್ಕೂ ಎತ್ತರಕ್ಕೆ ಬೆಳೆದಿದ್ದ ಆಕಾಶ ಮಲ್ಲಿಗೆ ಮರಗಳಿದ್ದವು. ಒಂದು ಸಣ್ಣ ಗಾಳಿ ಬೀಸಿದರೆ ಸಾಕು ಅವುಗಳಿಂದ ಉದ್ದನೆಯ ತೊಟ್ಟಿನ ಆಕಾಶಮಲ್ಲಿಗೆ ಹೂಗಳು ಉದುರುತ್ತಿದ್ದವು. ನಾನು ನನ್ನೂರಿನ ಪ್ರೈಮರಿ ಸ್ಕೂಲಿಗೆ ಸ್ಕೂಲಿಗೆ ಹೋಗುವಾಗ ಬರುವಾಗ ಈ ಹೂಗಳನ್ನು ಆಯ್ದು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದೆ. ಅದನ್ನು ಕಂಡರೆ ತಿಮ್ಮಣ್ಣ `ಅಯ್ಯೋ ನನ್ನಪ್ನೆ ಅವುನ್ನ ಯಾಕೆ ಆಯ್ಕಂತೀಯ ತಗಾ’ ಅಂತ ತನ್ನ ತೋಟದೊಳಗಿಂದ ಯಾವುದಾದರೊಂದು ಹೂವನ್ನು ಕಿತ್ತು ಕೊಡುತ್ತಿತ್ತು. ಅವರದ್ದು ನೀಳ ಮುಖ. ನಗು ಮೊಗ. ಗಿಣಿ ಮೂಗು. ಅಗಲ ಹಣೆ. ಆ ಹಣೆಯಲ್ಲಿ ಸದಾ ಕೆಂಪು, ಬಿಳಿ ನಾಮಗಳು. ನಾನು ಚಿಕ್ಕವನಾಗಿದ್ದಾಗಲೇ ತಿಮ್ಮಣ್ಣ ತೀರಿಕೊಂಡರು. ಆದರೂ ವಾರದ ದಿನಗಳಲ್ಲಿ ಬವನಾಸಿಯನ್ನು ಬಗಲಿಗಾಕಿಕಂಡು, ಜಾಗಟೆಯನ್ನು ಬಡಿಯುತ್ತ, ಶಂಖನಾದ ಮಾಡುತ್ತಿದ್ದ ಮೆಲು ಮಾತಿನ ಅದೇ ತಿಮ್ಮಣ್ಣ ಇಂದಿಗೂ ಅಲ್ಲಿ ಹಾದು ಹೋಗುವಾಗಲೆಲ್ಲಾ ನನ್ನತ್ತ ನೋಡಿ ನಗು ಚೆಲ್ಲುತ್ತಾ ನಿಂತಂತೆ ಭಾಸವಾಗುತ್ತದೆ..

*****

ಮಳಕ: ಮಣಕ: ಪ್ರಾಯಕ್ಕೆ ಬರುತ್ತಿರುವ ಎಮ್ಮೆ ಅಥವಾ ಹಸು.
ತತ್ವಾರ: ಅಭಾವ, ಕೊರತೆ.
ಮೆದೆ: ಬಣವೆ.
ತಾವುಗಳು: ಜಾಗಗಳು.
ಅಟ್ಟು: ಅಟ್ಟಣೆ. ಮೆದೆ ಹಾಕಲು ಸಿದ್ಧಪಡಿಸುತ್ತಿದ್ದ ಅಟ್ಟ.
ಒಂದು ಚೋಡಿ: ಒಂದು ಸಾರ್ತಿ
ಗರಿಗೆ ಬಿಡು: ರಾಗಿ ಹೊಲ ತೆನೆ ಕಟ್ಟುವ ಮೊದಲು ರಾಗಿ ಪೈರಿನ ಗರಿಗಳನ್ನು ಮೇಯಿಸುವುದು.
ತುಳಿಸಿದ: ಕಣಗಳಲ್ಲಿ ದನಗಳನ್ನು ಕಟ್ಟಿ ಅಥವಾ ರೋಣುಗಲ್ಲುಗಳನ್ನು ಹೂಡಿ ಕಾಳುಗಳನ್ನು ಉದುರಿಸಿಕಂಡ ಇಸುಕಿದ ಹುಲ್ಲು.
ಅದ್ದಲಿಸು: ಗದರಿಸು.
ರಚ್ಚೆ: ಹಠ.
ಬಾರಿಗೆ: ಬೆದೆಗೆ.
(ಹಿಂದಿನ ಕಂತು: ಅಜ್ಜನ ಕೆರೆಯ ಹಾಲುವಾಣದ ತೆಪ್ಪ ಮತ್ತು ಮಲ್ಲಾಘಟ್ಟ ಕೆರೆಯ ನಾಡದೋ)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ