ಅದೃಷ್ಟದ ಮೇಲೆ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ `ಮನುಷ್ಯ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳುತ್ತಾನೆʼ ಎನ್ನುವ ವಿಚಾರವಾದಿಗಳೂ ಇದ್ದಾರಲ್ಲವೇ? ಮನುಷ್ಯನ ಯಶಸ್ಸಿನಲ್ಲಿ ಪುರುಷಪ್ರಯತ್ನ, ಪರಿಶ್ರಮಗಳ ಪಾಲು ಇರುವುದು ನಿಜವಾದರೂ, ಒಟ್ಟು ಬದುಕು ಕೊನೆತನಕ ನೆಮ್ಮದಿಯಿಂದ ಸುಖಮಯವಾಗಿ ದೊಡ್ಡ ಕೊರಗಿಲ್ಲದೆ ಕಳೆಯುವುದು ಮನುಷ್ಯನ ಕೈಯಲ್ಲಿದೆಯೇ? “ಅಯ್ಯೋ, ತನ್ನ ನಾಳೆ ಹೇಗಿರುತ್ತದೆ ಎಂದು ಗೊತ್ತಿರದ ಮನುಷ್ಯನ ದುರ್ವಿಧಿಯೇ!!! ಸಾಯುವವರೆಗೂ ಯಾರನ್ನೂ ಸುಖಿ ಅನ್ನದಿರು” ಎಂದು ಎಚ್ಚರಿಸಿದ ಮಹಾನ್ ಗ್ರೀಕ್ ನಾಟಕಕಾರ ಸಾಫೊಕ್ಲಿಸ್ ನೆನಪಾಗುತ್ತಾನೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎರಡನೆಯ ಬರಹ
`ಅದೃಷ್ಟ’ ಎಂಬ ಹೆಸರು ಹೊತ್ತಿದ್ದ, ಎಂದೋ ಓದಿದ, ಎರಡೇ ಸಾಲುಗಳಿದ್ದ ಪುಟ್ಟ ಕವಿತೆಯೊಂದು ಯಾಕೋ ಆಗಾಗ ನೆನಪಾಗುತ್ತೆ. ಆ ಕವಿತೆ ಹೀಗಿದೆ.
ಕಬ್ಬು ಅರೆವ ಗಾಣಕ್ಕೆ
ಬಿದಿರು ಕೊಳಲ ಗಾನಕ್ಕೆ
ಕವಿತೆ ತುಂಬ ಪುಟ್ಟದಾದರೂ ಓದುಗರನ್ನು ದೀರ್ಘವಾದ ಯೋಚನೆಗೆ ಹಚ್ಚುತ್ತದಲ್ಲವೇ? ಸಿಹಿಯಾದ ರಸತುಂಬಿದ ಕಬ್ಬು ಆಲೆಮನೆಯಲ್ಲಿ ಗಾಣಕ್ಕೆ ಸಿಕ್ಕಿ ಮೈ ಹಿಂಡಿಸಿಕೊಂಡರೆ ಒಣಒಣ ಬಿದಿರು ಗಾನಮಾಧುರ್ಯ ಸೂಸುವ ಕೊಳಲಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಯಾರು ಹೇಳಬಲ್ಲರು?
ಮನುಷ್ಯರ ಬದುಕೂ ಸಹ ಹೀಗೇ ಅಲ್ಲವೇ? ಗಾಣಕ್ಕೆ ಸಿಕ್ಕಿ ಅರೆಸಿಕೊಳ್ಳಬೇಕೋ, ಅಥವಾ ಬಿದಿರಿನಂತೆ ಕೊಳಲ ಗಾನದ ಉಸಿರಿಗೆ ಮನೆಯಾಗಬೇಕೋ ಎಂಬುದನ್ನು ನಿರ್ಧರಿಸುವವರು ಯಾರು? ಇಡೀ ಜೀವನವು ಹೂ ಎತ್ತಿದಂತೆ ಸರಾಗವಾಗಿ ನಡೆಯುತ್ತದೋ ಇಲ್ಲ ಪ್ರತಿ ಹೆಜ್ಜೆಯೂ ಮುಳ್ಳಿನಿಂದ ಕೂಡಿ ಕಾಡಿಸುತ್ತದೋ ಎಂಬುದು ಯಾರಿಗಾದರೂ ಮುಂಚೆಯೇ ಗೊತ್ತಾಗಲು ಸಾಧ್ಯವೇ? ಗೊತ್ತಾದರೂ ಅದನ್ನು ತಪ್ಪಿಸಲು ಅವರು ಏನನ್ನಾದರೂ ಮಾಡುವಂತಿದೆಯೇ?
ಅಂದುಕೊಂಡದ್ದು ಆಗದೆ ಇದ್ದಾಗ, ಕಷ್ಟನಷ್ಟಗಳಾದಾಗ `ಲೈಫ್ ಈಸ್ ನಾಟ್ ಫೇರ್’ ಎಂದು ನಮ್ಮ ಸಹಜೀವಿಗಳು ಅಲವತ್ತುಕೊಳ್ಳುವುದನ್ನು ನಾವು ಗಮನಿಸಿರುತ್ತೇವೆ. ನಾವು ಸಹ ಎಂದಾದರೊಮ್ಮೆ ಹೀಗೆ ಭಾವಿಸಿರುತ್ತೇವಲ್ಲ ….. ಲೈಫ್ ಈಸ್ ನಾಟ್ ಫೇರ್ (ಜೀವನ ನ್ಯಾಯಯುತವಾಗಿಲ್ಲ) ಎಂದು? ಎಲ್ಲರೂ ಹೀಗೆಯೇ ಗೋಳಾಡುತ್ತಾರೆ, ಜೀವನ ಮಾಡುವ ಅನ್ಯಾಯವನ್ನು ಸಮಾನವಾಗಿ ಅನುಭವಿಸುತ್ತಾರೆ ಅಂದ ಮೇಲೆ `ಲೈಫ್ ಮಸ್ಟ್ ಬಿ ಫೇರ್’ ಅನ್ನುವ ಬುದ್ಧಿಜೀವಿಗಳೂ ಇದ್ದಾರೆ ನೋಡಿ!!
ಗ್ರೀಕ್ ನಾಟಕಗಳಂತೂ ವಿಧಿಯ ಬಗ್ಗೆ ಸುದೀರ್ಘ ಚರ್ಚೆಯನ್ನೇ ಮಾಡಿವೆ. `ವಿಧಿಲಿಖಿತವನ್ನು ಯಾರೂ ತಪ್ಪಿಸಿಕೊಳ್ಳಲಾಗದುʼ ಎಂಬ ಸಂದೇಶವನ್ನು ಕೊಡಲು ಪ್ರಯತ್ನಿಸುವಂತೆ ತೋರುತ್ತವೆ ಆ ನಾಟಕಗಳು. ತಾನು ಹೇಳಿದ ಭವಿಷ್ಯವಾಣಿಯನ್ನು ಯಾರೂ ನಂಬಬಾರದೆಂದು ಅಪೋಲೊ ದೇವತೆಯಿಂದ ಶಾಪ ಪಡೆದ ಕೆಸಾಂಡ್ರಾ, ದೊಡ್ಡ ಬಂಡೆಯೊಂದನ್ನು ಬೆಟ್ಟವೊಂದರ ತುದಿಗೆ ಕಷ್ಟ ಪಟ್ಟು ದೂಡಿಕೊಂಡು ಹೋಗಿ ಅದು ದುಡುದುಡು ಎಂದು ಕೆಳಗುರುಳಿದಾಗ ಮತ್ತೆ ಅದನ್ನು ಮೇಲಕ್ಕೆ ತಳ್ಳಿಕೊಂಡು ಹೋಗುವ ಹಾಗೂ ಈ ನಿತ್ಯನಿರಂತರ ಕೊನೆಯಿಲ್ಲದ ಕಷ್ಟದಿಂದ ಮುಕ್ತಿಯೇ ಸಿಗದ ಸಿಸಿಫಸ್, ದೇವತೆಗಳು ಮಾತ್ರ ನಡೆಯಬೇಕಾದ ಕೆಂಪುಹಾಸಿನ ಮೇಲೆ ನಡೆದುಬಿಟ್ಟನೆಂದು ಕಷ್ಟಗಳ ಪರಂಪರೆಗೆ ಸಿಕ್ಕಿ ಹಾಕಿಕೊಂಡು ತನ್ನ ಹೆಂಡತಿಯ ಕೊಲೆಯ ಸಂಚಿನಿಂದಲೇ ಸಾಯುವ ಅಗೆಮೆಮ್ನೋನ್, ದೇವತೆಗಳು ನುಡಿದ ಅಶರೀರವಾಣಿಯಿಂದಾಗಿ ತನ್ನ ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾಗುವ ಮಹಾಪಾಪ ಮಾಡಿದ ಈಡಿಪಸ್….. ಹೀಗೆ ವಿಧಿಯ ಶಾಪಕ್ಕೆ ತುತ್ತಾಗಿ ಒದ್ದಾಡುವ ಅನೇಕ ಪಾತ್ರಗಳು ಗ್ರೀಕ್ ನಾಟಕಗಳಲ್ಲಿ ಸಿಗುತ್ತವೆ.
ಇನ್ನು ನಮ್ಮ ಮಹಾಭಾರತದ ವಿಷಯಕ್ಕೆ ಬರೋಣ. ಕರ್ಣನಷ್ಟು ದುರದೃಷ್ಟವಂತನಾದ ವ್ಯಕ್ತಿ ಪ್ರಪಂಚದಲ್ಲಿ ಇನ್ನೊಬ್ಬನಿರಲು ಸಾಧ್ಯವೇ? ಕ್ಷತ್ರಿಯ ಕುಲದಲ್ಲಿ ಹುಟ್ಟಿದರೂ ಇಡೀ ಜೀವನ ಸೂತನೆಂದು ಅವಮಾನಕ್ಕೆ ಒಳಗಾದವನು. ಹುಟ್ಟಿದ ಕೂಡಲೇ ಹೆತ್ತ ತಾಯಿಯಿಂದ ದೂರಾದವನು. ತನ್ನ ಗುರುವಿನಿಂದಲೇ `ಕಲಿತ ಮಂತ್ರ ಸರಿಯಾದ ಹೊತ್ತಿಗೆ ಮರೆತು ಹೋಗಲಿ’ ಎಂಬ ಶಾಪ ಪಡೆದವನು. ಪಾಂಡವ, ಕೌರವರಿಗೆಲ್ಲ ಹಿರಿಯನಾದರೂ ದುರ್ಯೋಧನನ ಅಧೀನನಾಗಿ ಜೀವಿಸಬೇಕಾಗಿ ಬಂದವನು, ಹೆತ್ತ ತಾಯಿಯಿಂದಲೇ ತೊಟ್ಟ ಬಾಣವ ಮರಳಿ ತೊಡದಿರು ಎಂಬ ಅಣತಿಯನ್ನು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ತೊಂದರೆ ಅನುಭವಿಸಿದವನು. ತನ್ನ ರಥದ ಚಕ್ರವು ರಕ್ತದ ಕೆಸರಲ್ಲಿ ಸಿಕ್ಕಿಕೊಂಡಾಗ ಅದನ್ನು ತೆಗೆಯುವಷ್ಟರಲ್ಲಿ ಕೃಷ್ಣನ ಸೂಚನೆಯಿಂದಾಗಿ ಅರ್ಜುನನ ಬಾಣಕ್ಕೆ ಗುರಿಯಾಗಿ ಸತ್ತವನು …… `ಅಯ್ಯೋ ಕರ್ಣಾ…. ಏನಪ್ಪಾ ನಿನ್ನ ಜೀವನ!’ ಎಂದು ಯಾರಿಗಾದರೂ ಅನ್ನಿಸಿಯೇ ಅನ್ನಿಸುವ ಕಥೆ ಇವನದು. ದುರದೃಷ್ಟವಂತ ಬದುಕಿನ ಅಪ್ಪಟ ರೂಪಕ ಈ ಪಾತ್ರ.
ದುರದೃಷ್ಟದ ಬದುಕು ಅಂದಾಗ ನನ್ನ ದೂರದ ಸಂಬಂಧಿಯೊಬ್ಬರು ನೆನಪಾಗುತ್ತಾರೆ. ವರಸೆಯಲ್ಲಿ ನನಗೆ ಚಿಕ್ಕಮ್ಮನಾಗಬೇಕು ಅವರು. ಅವರ ಬಾಲ್ಯವು ಕೊಡಗಿನ ಒಂದು ಕುಗ್ರಾಮದಲ್ಲಿ, ಕಡುಬಡತನದಲ್ಲಿ ಕಳೆಯಿತು. ಸಿಹಿತಿಂಡಿಗಳೆಂದರೆ ಅವರಿಗೆ ಪಂಚಪ್ರಾಣ. ಹುಟ್ಟಿದ ಮನೆಯ ಬಡತನದ ಕಾರ್ಪಣ್ಯ, ಮದುವೆಯಾಗಿ ಹೋದ ಮನೆಯಲ್ಲೂ ಅಷ್ಟೇನೂ ಅನುಕೂಲವಿಲ್ಲದ ಸ್ಥಿತಿಯಿಂದಾಗಿ ಅವರ ಯೌವನ, ಮಧ್ಯವಯಸ್ಸುಗಳು ಕೂಡ ಕೊರತೆಯಿಂದಲೇ ತುಂಬಿ ಹೋಗಿದ್ದವು. ಅವರಿಗೆ ಸುಮಾರು ಐವತ್ತು ವರ್ಷಗಳಾದಾಗ ಮನೆಯ ಹಣಕಾಸಿನ ಸ್ಥಿತಿಗತಿ ತುಸು ಸುಧಾರಿಸಿ, `ಹೋಗಲಿ ಬಿಡು, ಈಗ ಬೇಕಾದ ಸಿಹಿತಿಂಡಿಗಳನ್ನು ಮಾಡಿಕೊಂಡೋ, ಖರೀದಿಸಿಯೋ ತಿನ್ನಬಹುದಪ್ಪ’ ಎನ್ನುವ ಹೊತ್ತಲ್ಲಿ ಅವರಿಗೆ ತೀವ್ರತರವಾದ ಮಧುಮೇಹ ಖಾಯಿಲೆ ಅಂಟಿಕೊಂಡಿತು. ವೈದ್ಯರು ನೀವು ಸಿಹಿತಿಂಡಿಯನ್ನು ಮುಟ್ಟಲೇಬಾರದು ಎಂದು ತಾಕೀತು ಮಾಡಿಬಿಟ್ಟರು! ಪಾಪ ಚಿಕ್ಕಮ್ಮ, ಭೇಟಿಯಾದಾಗಲೆಲ್ಲ ಹೇಳುತ್ತಿದ್ದರು “ನೋಡೇ ಮೀರಾ ನನ್ನ ಹಣೆಬರಹ ಹೇಗಿದೆ! ಸಿಹಿತಿಂಡಿ ತಿನ್ನೋವಷ್ಟು ಆರೋಗ್ಯ ಇದ್ದಾಗ ಹಣದ ಅನುಕೂಲ ಇರ್ಲಿಲ್ಲ, ಈಗ ಏನು ಬೇಕಾದ್ರೂ ತಿನ್ನೋ ಅನುಕೂಲ ಇರೋವಾಗ ಈ ಹಾಳು ಡಯಾಬಿಟೀಸ್‌ನಿಂದ ಸಿಹಿತಿಂಡಿ ಮುಟ್ಟೋಹಾಗಿಲ್ಲ. ತುಂಬ ಬೇಜಾರು ಕಣೇ, ಹಲ್ಲಿದ್ರೆ ಕಡಲೆ ಇಲ್ಲ, ಕಡಲೆ ಇದ್ರೆ ಹಲ್ಲಿಲ್ಲ ಅನ್ನೋ ಹಾಗಾಯ್ತು ನೋಡೇ” ಎನ್ನುತ್ತಿದ್ದರು. ಛೆ, ಎಂತಹ ವಿಪರ್ಯಾಸ ಇದು ಅನ್ನಿಸುತ್ತಿತ್ತು ನನಗೆ. ಕೂದಲೆಲ್ಲ ಉದುರಿದ ಮೇಲೆ ಅತಿ ಸೊಗಸಾದ ಬಾಚಣಿಗೆಯನ್ನು ಏಕೆ ಕೊಡುತ್ತದೆ ವಿಧಿ ಮನುಷ್ಯರಿಗೆ! ವಿಧಾತನ ಕಟುವಾದ ಹಾಸ್ಯಪ್ರಜ್ಞೆಯೋ ಇದು!?
ತಿಂಡಿ, ಊಟ, ಕೂದಲಿನ, ತುಸು ಹಗುರ ಅನ್ನಬಹುದಾದ ವಿಚಾರಗಳು ಹಾಗಿರಲಿ, ಜೀವನವಿಡೀ ಹಾಸಿಗೆಗೆ ಅಂಟಿಸುವ ಅಪಘಾತಗಳಾಗುವುದು, ಚಿಕಿತ್ಸೆಯೇ ಇಲ್ಲದ ವಿಚಿತ್ರ ರೋಗಗಳು ಬರುವುದು, ತಂದೆತಾಯಿಗಳು ಮಕ್ಕಳ ಸಾವನ್ನು ನೋಡಬೇಕಾಗಿ ಬುರವ ದುರ್ಧರ ಪರಿಸ್ಥಿತಿ, ಪ್ರೇಮಿಸಿದವರು ಸದಾ ದೂರವೇ ಇರಬೇಕಾದ ಅಸಹಾಯಕತೆ, ಮಾಡದ ತಪ್ಪಿಗೆ ಇಡೀ ಜೀವನ ಬಂಧೀಖಾನೆಯಲ್ಲಿ ಕೊಳೆಯಬೇಕಾದ ನಿರಪರಾಧಿ ಬಂಧಿತರ ಸ್ಥಿತಿ…. ಅಬ್ಬ ವಿಧಿರಾಯನೇ… ಕೆಲವರ ಹಣೆಬರಹವನ್ನು ನಗುವಿನ ಲವಲೇಷವೂ ಇಲ್ಲದಂತೆ ಬರೆದಿರುತ್ತೀಯಲ್ಲ, ಏಕೆ?
*****
ಬೆಂಗಳೂರಿನ ಹಂಪಿನಗರದಲ್ಲಿರುವ ನನ್ನ ಮನೆಯಿಂದ, ನಾನು ಕೆಲಸ ಮಾಡುವ ಮಹಾರಾಣಿ ಕಾಲೇಜಿಗೆ ನನ್ನ ಎರಡು ಚಕ್ರದ ಗಾಡಿಯನ್ನು ಓಡಿಸಿಕೊಂಡು ಹೋಗ್ತೇನೆ. ಹಾಗೆ ಹೋಗುವಾಗ ಮಾಗಡಿ ರಸ್ತೆಯ ಟೋಲ್‌ಗೇಟ್ ಎಂಬಲ್ಲಿ ರಸ್ತೆಗಳು ಕೂಡುವ ಒಂದು ಜಾಗ ಸಿಗುತ್ತೆ. ಅಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಕೆಂಪುದೀಪ ಬಂದಾಗ ಗಾಡಿ ನಿಲ್ಲಿಸಿರುತ್ತೇನೆ. ಬೆಳಗ್ಗೆ ಸುಮಾರು 8.30 ಅಂದುಕೊಳ್ಳಿ. ಆ ಹೊತ್ತಲ್ಲಿ ನನಗೆ ನಿಯಮಿತವಾಗಿ ಕಾಣುವ ದೃಶ್ಯ ಅಂದರೆ ಹೆಗಲಿಗೆ ಒಂದು ಚೀಲ ನೇತುಹಾಕಿಕೊಂಡು ಜೀವ ಬಿಟ್ಟು ದಡದಡನೆ ಓಡುನಡಿಗೆಯಲ್ಲಿ, ಅಲ್ಲಿ ಸುತ್ತಮುತ್ತ ಇರುವ ಉಡುಪುಕಾರ್ಖಾನೆ(ಗಾರ್ಮೆಂಟ್ ಫ್ಯಾಕ್ಟರಿ)ಗಳಿಗೆ ಧಾವಿಸುತ್ತಿರುವ ಹೆಂಗಸರು. ಸ್ವಂತ ಗಾಡಿ ಇಟ್ಟುಕೊಳ್ಳುವ ಅಥವಾ ಆಟೋರಿಕ್ಷಾ ಹಿಡಿಯುವ ಹಣಕಾಸಿನ ಅನುಕೂಲ ಅವರಿಗಿರುವುದಿಲ್ಲ. `ತಮ್ಮ ಕಾರ್ಖಾನೆಯ ಕಹಳೆ(ಸೈರನ್) ಮೊಳಗುವ ಮುಂಚೆ ತಲುಪಿಬಿಡಬೇಕು’ ಎಂದು ಜೀವ ಕೈಯಲ್ಲಿಟ್ಟುಕೊಂಡು, ಹಸಿರು ದೀಪಕ್ಕಾಗಿ ಕಾದು ನಿಂತಿರುವ ವಾಹನಗಳ ನಡುನಡುವೆ ಅವರು ಓಡುವುದನ್ನು ನೋಡುವಾಗ ಹೃದಯ ಕರಗಿಬಿಡುತ್ತದೆ. ಪಾಪ, ಬೆಳಗ್ಗೆ ಹೊಟ್ಟೆಗೇನಾದರೂ ಆಹಾರ ತೆಗೆದುಕೊಂಡಿರುತ್ತಾರೋ ಇಲ್ಲವೋ, ತಾವು ಗಡಿಬಿಡಿಯಲ್ಲಿ ಅಟ್ಟು ಡಬ್ಬಿಗೆ ತುಂಬಿಸಿಕೊಂಡು, ಸಮಯ ಸಿಕ್ಕಿದಾಗ ತಿನ್ನುವ ಆಹಾರವೇ ಅವರ ದಿನದ ಮೊದಲ ಊಟವೋ ಏನೋ ಎಂಬ ಆಲೋಚನೆಗಳು ಬರುತ್ತವೆ. ಇನ್ನು, ಕಾಲೇಜಿನಲ್ಲಿ ನಾನು ಪಾಠ ಮಾಡುವ ಹೆಣ್ಣುಮಕ್ಕಳ ತಾಯಂದಿರಲ್ಲಿ ಬಹುಪಾಲು ಇಂತಹ ಉಡುಪುಕಾರ್ಖಾನೆಗಳ ಕೆಲಸಗಾರ್ತಿಯರೇ ಆಗಿರುತ್ತಾರೆ. ಆ ವಿದ್ಯಾರ್ಥಿನಿಯರ ಮುಗ್ಧ ಫಳಫಳ ಕಣ್ಣುಗಳು ಆ ಕಷ್ಟಜೀವಿ ತಾಯಂದಿರು ಹಚ್ಜಿದ ದೀಪಗಳಂತೆ ಕಾಣುತ್ತವೆ ನನಗೆ.
ಮ್ಮ್… ಅದೃಷ್ಟ ದೇವತೆ ಬರೆದ ಮೇಲಿನ ಚಿತ್ರಕ್ಕೆ ವಿರುದ್ಧವಾದ ಇನ್ನೊಂದು ಚಿತ್ರ ನನ್ನ ಕಣ್ಣ ಮುಂದೆ ಬರುತ್ತದೆ. ಅದು ನಾನಿರುವ ಬಡಾವಣೆಯ ಕೆಲವು ಮೇಲ್ಮಧ್ಯಮ ವರ್ಗದ ಹೆಂಗಸರ ಚಿತ್ರ. ಇವರು ಸಾಮಾನ್ಯವಾಗಿ ಗೃಹಿಣಿಯರಾಗಿದ್ದು ಸಕಲ ಆಧುನಿಕ ಅನುಕೂಲಗಳೂ ಇರುವ ಅಲಂಕೃತ ಮನೆಗಳಲ್ಲಿ ವಾಸಿಸುತ್ತಾರೆ. ಅವರ ಮನೆ ಶುಚಿ ಮಾಡಲು, ಅಡಿಗೆಯಲ್ಲಿ ಸಹಾಯ ಮಾಡಲು ಅಥವಾ ಪೂರ್ತಿ ಅಡಿಗೆ ಕೆಲಸ ಮಾಡಲು, ಮಕ್ಕಳನ್ನು ನೋಡಿಕೊಳ್ಳಲು ಇಬ್ಬರು ಮೂವರು ಕೆಲಸದವರು ನೇಮಕಗೊಂಡಿರುತ್ತಾರೆ. ಓಡಾಡಲು ಚಾಲಕನಿರುವ ಕಾರು, ಕಣ್ಣಿಗೆ ಇಷ್ಟವೆನಿಸಿದ ಸೀರೆ, ಒಡವೆಗಳನ್ನು ಕೊಳ್ಳಲು ಗಂಡ ಖುಷಿಯಿಂದ ಕೊಟ್ಟಿರುವ ಕೈತುಂಬ ಹಣ, ತಮ್ಮ ಗೆಳತಿಯರೊಡನೆ ಸೇರಿ ಏರ್ಪಡಿಸಿಕೊಳ್ಳುವ ಹೆಂಗಳೆಯರ ಸಂತೋಷಕೂಟಗಳು(ಕಿಟ್ಟಿ ಪಾರ್ಟಿ), ಗಂಡ ಮಕ್ಕಳೊಂದಿಗೆ ಆಗಾಗ ಕೈಗೊಳ್ಳುವ ವಿದೇಶ ಪ್ರವಾಸಗಳು, ಸಮಾರಂಭಗಳಲ್ಲಿ ಅವರ ಕತ್ತುಗಳಲ್ಲಿ ಮಿಂಚಿ ಮಿನುಗುವ ವಜ್ರದ ಹಾರಗಳು, ಸಾವಿರಾರು ರೂಪಾಯಿ ಕೂಲಿ ಕೊಟ್ಟು ಹೊಲಿಸಿದ ವಿವಿಧ ವಿನ್ಯಾಸದ ಅವರ ರವಿಕೆಗಳು, ಅದಕ್ಕಿಂತ ಹತ್ತು ಪಟ್ಟು ದುಬಾರಿಯಾದ ಅವರ ಸೀರೆಗಳು…… ಇದಕ್ಕಿಂತ ವೈಭವದ ಬದುಕು ಬೇಕೇ? ನನ್ನಂತಹ ಉದ್ಯೋಗಸ್ಥ ಮಹಿಳೆಯರು ಮನೆ ಮತ್ತು ಕೆಲಸದ ಸ್ಥಳ ಎರಡೂ ಕಡೆ ಸಲ್ಲಲು ಸಮಯದೊಂದಿಗೆ ಹೋರಾಡುತ್ತಿರುವಾಗ ಈ ಸುಖಪೂರ್ಣ ಮಿನುಗುಳ್ಳ ಶ್ರೀಮಂತ ಗೃಹಿಣಿಯರ ಬದುಕು ನಮ್ಮಲ್ಲಿ ಓಹ್ ಎಂಬ ಉದ್ಗಾರವನ್ನುಂಟು ಮಾಡುವುದು ಸುಳ್ಳಲ್ಲ. ಇರಲಿ. ಅಂದ ಹಾಗೆ ಈ ಲಲಿತಪ್ರಬಂಧದ ಚರ್ಚೆಯ ವಸ್ತುವಾದ `ಅದೃಷ್ಟ’ಕ್ಕೆ ಬರೋಣ, ಈ ಗಾರ್ಮೆಂಟ್‌ಗಾಮಿನಿಯರು ಮತ್ತು ಕಿಟ್ಟಿಪಾರ್ಟಿಕಿನ್ನರಿಯರ ಹಣೆಬರಹವನ್ನು ಬರೆಯುವಾಗ ವಿಧಿರಾಯ ಬೇರೆ ಬೇರೆ ಲೇಖನಿಗಳನ್ನು ಬಳಸಿದ್ದನೇನು?
******
ಅದೃಷ್ಟದ ಮೇಲೆ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ `ಮನುಷ್ಯ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳುತ್ತಾನೆʼ ಎನ್ನುವ ವಿಚಾರವಾದಿಗಳೂ ಇದ್ದಾರಲ್ಲವೇ? ಇವರು `ಮ್ಯಾನ್ ಈಸ್ ದ ಮೇಕರ್ ಆಫ್ ಹಿಸ್ ಓನ್ ಡೆಸ್ಟಿನಿ’ ಎಂಬ ವಿವೇಕಾನಂದರ ಪ್ರಸಿದ್ಧ ಹೇಳಿಕೆಯನ್ನು ತಮ್ಮ ವಾದಮಂಡನೆಗಾಗಿ ಸದಾ ಉಲ್ಲೇಖಿಸುತ್ತಾರೆ. ಮನುಷ್ಯನ ಯಶಸ್ಸಿನಲ್ಲಿ ಪುರುಷಪ್ರಯತ್ನ, ಪರಿಶ್ರಮಗಳ ಪಾಲು ಇರುವುದು ನಿಜವಾದರೂ, ಒಟ್ಟು ಬದುಕು ಕೊನೆತನಕ ನೆಮ್ಮದಿಯಿಂದ ಸುಖಮಯವಾಗಿ ದೊಡ್ಡ ಕೊರಗಿಲ್ಲದೆ ಕಳೆಯುವುದು ಮನುಷ್ಯನ ಕೈಯಲ್ಲಿದೆಯೇ? “ಅಯ್ಯೋ, ತನ್ನ ನಾಳೆ ಹೇಗಿರುತ್ತದೆ ಎಂದು ಗೊತ್ತಿರದ ಮನುಷ್ಯನ ದುರ್ವಿಧಿಯೇ!!! ಸಾಯುವವರೆಗೂ ಯಾರನ್ನೂ ಸುಖಿ ಅನ್ನದಿರು” ಎಂದು ಎಚ್ಚರಿಸಿದ ಮಹಾನ್ ಗ್ರೀಕ್ ನಾಟಕಕಾರ ಸಾಫೊಕ್ಲಿಸ್ ನೆನಪಾಗುತ್ತಾನೆ. ನಾನೊಮ್ಮೆ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ನೋಡಿದಂತೆ, ಬದುಕೆಲ್ಲ ಯಶಸ್ವಿ ವೈದ್ಯರಾಗಿದ್ದು, ವೃದ್ಧರಾದಾಗ ಮೈಕೈ ನಡುಗುವ ಪಾರ್ಕಿನ್‌ಸನ್ ಖಾಯಿಲೆಗೆ ತುತ್ತಾಗಿ, ಸಹಾಯಕರ ಆಸರೆಯಲ್ಲಿ ನಡೆಯಲಾರದೆ ನಡೆದು ಬಂದ ಒಬ್ಬ ವೈದ್ಯರು, ಜೀವನ ಪೂರ್ತಿ ಪಾದರಸದಂತೆ ಚಟುವಟಿಕೆಯಿಂದಿದ್ದು, ತಮ್ಮ ಅರವತ್ತೆಂಟನೆಯ ವಯಸ್ಸಿನಲ್ಲಿ ಅಡಿಗೆಮನೆಯಲ್ಲಿ ಸಾಮಾನು ತೆಗೆದುಕೊಳ್ಳಲೆಂದು ಚಿಕ್ಕ ಏಣಿ ಹತ್ತಿ ಬಿದ್ದದ್ದೇ ನೆಪವಾಗಿ, ಸೊಂಟದ ಮೂಳೆಗೆ ಜಖಂ ಆಗಿ, ಆರೇಳು ವರ್ಷ ನಡೆಯಲಾಗದೆ ಗಾಲಿಕುರ್ಚಿಯಲ್ಲಿ ಕುಳಿತು ಬದುಕು ಸವೆಸಿ, `ಅಯ್ಯೋ ನನಗೆ ಹೀಗಾಯ್ತಲ್ಲ…..’ ಎಂದು ಕೊರಗುತ್ತಲೇ ಈ ಬದುಕಿಗೆ ವಿದಾಯ ಹೇಳಿದ ನನ್ನ ದೊಡ್ಡಮ್ಮ, ಎಂಥದ್ದೋ ಒಂದು ಭಯಂಕರ ಜ್ವರ ಬಂದು ತಮ್ಮ ಬುದ್ಧಿಶಕ್ತಿ ಮತ್ತು ಕಣ್ಣುಗಳನ್ನು ಕಳೆದುಕೊಂಡ ಒಬ್ಬ ಪ್ರತಿಭಾವಂತ ಅಧ್ಯಾಪಕಿ ಮಿತ್ರೆ, ವೇದದ ನೂರಾರು ಸಾಲುಗಳನ್ನು ನೆನಪಿನಿಂದ ಹೇಳುತ್ತಿದ್ದು, ಕೊನೆಗೆ ಡಿಮೆನ್ಶಿಯಾ ಎಂಬ ಮರೆವಿನ ರೋಗಕ್ಕೆ ತುತ್ತಾಗಿ, ತಮ್ಮ ಹೆಸರನ್ನೇ ಮರೆತ ಒಬ್ಬ ಪುರೋಹಿತರು ನೆನಪಾಗುತ್ತಾರೆ. ಇವರುಗಳು ಖಂಡಿತವಾಗಿಯೂ ತಮ್ಮ ಅದೃಷ್ಟವನ್ನು ತಾವೇ ಹೀಗೆ ಬರೆದುಕೊಂಡಿರಲಿಕ್ಕಿಲ್ಲ ಅಲ್ಲವೇ? ಯಾರಾದರೂ ತಮಗಾಗಿ ಇಂತಹ ಯಾತನಾಮಯ ಹಣೆಬರಹವನ್ನು ಬರೆದುಕೊಳ್ಳುತ್ತಾರೆಯೇ? ಹಾಗಾದರೆ ಇವರ ಅದೃಷ್ಟವನ್ನು ಹೀಗೆ ಬರೆದವರಾರು? ಯಾವ ವಿಚಾರವಾದಿ ತಾನೇ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿದೆ?
******
ನನಗೆ ಮನೆಯಲ್ಲಿ ಕೆಲಸಕ್ಕೆ ಸಹಾಯ ಮಾಡುವ ಯಲ್ಲಮ್ಮ ಹೇಳುತ್ತಿದ್ದರು, “ಆ ದೊಡ್ಮನೆ ಶೀಲಮ್ನೋರು(ಇನ್ನೊಬ್ಬ ಕಿಟ್ಟಿಪಾರ್ಟಿ ಕಿನ್ನರಿ) ಮೊನ್ನೆ ಹೇಳ್ತಿದ್ರಮ್ಮ, `ಯಲ್ಲಮ್ಮ, ನಾನು ಎಷ್ಟೆಲ್ಲ ಪೂಜೆ ಮಾಡಿ ನನ್ನನ್ನ ರಾಣಿ ಥರ ಚೆನ್ನಾಗಿ ನೋಡ್ಕೊಳೋ ಗಂಡನ್ನ ಪಡ್ಕೊಂಡೆ ಗೊತ್ತೇನೇ? ನಿನ್ನ ಮೊಮ್ಮಗಳಿಗೂ ಪೂಜೆಗಳನ್ನ ಮಾಡಕ್ಕೆ ಹೇಳೇ. ಒಳ್ಳೆ ಗಂಡ ಸಿಗ್ತಾನೆ’ ಅಂದ್ರಮ್ಮ”. ಏನಂತ ಪ್ರತಿಕ್ರಿಯಿಸುವುದು ಈ ಮಾತಿಗೆ? ಬದುಕಿನ ಈ ರೀತಿಗೆ? ಹಾಗಾದರೆ ಜನರು ಅದರಲ್ಲೂ ಹೆಂಗಸರು ಮಾಡುವ ನೂರಾರು ಪೂಜೆಗಳು, ವ್ರತಗಳು ವಿಧಿರಾಯನು ಬರೆದ ಹಣೆಬರಹವನ್ನು ಬದಲಾಯಿಸುವ ಪ್ರಯತ್ನವೋ, ಅಥವಾ ಇದು ಸಹ ಮನುಷ್ಯನ ಆಶಾವಾದದ ಒಂದು ವಿನ್ಯಾಸವೋ?
ಈ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರಗಳಿಲ್ಲ. ಅದೃಷ್ಟ ಎಂಬ ಪದದಲ್ಲೇ ಕಾಣದ್ದು ಎಂಬ ಅರ್ಥ ಅಡಗಿದೆ ಅಲ್ಲವೇ? ಕಾಣದ್ದರ ಬಗ್ಗೆ ನಾನಾಗಲೀ ನೀವಾಗಲೀ ಏನೆಂದು ಹೇಳುವುದು?
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.