ಗುಲ್ಮೊಹರ್ ಅಡಿಯಲ್ಲಿ ನಿಂತ ಆ ಹುಡುಗಿ!
ಗುಲ್ಮೊಹರ್ ಅಡಿಯಲ್ಲಿ
ನಿಂತ ಆ ಹುಡುಗಿ
ಚುಮುಚುಮು ಅರಳುವ ನಕ್ಷತ್ರ-
ಕಣ್ಣುಗಳನ್ನು ಮಿನುಗಿಸುತ್ತ
ನಿಗಿನಿಗಿ ಗುಲ್ಮೊಹರ್
ಅಡಿಯಲ್ಲಿ ನಿಂತಿದ್ದಕ್ಕೆ
ಹೂ ಬಿಟ್ಟು ಬೆವತಂತಿದೆ-
ಮರಕೆ ಮರವೇ ನಡುಗಿ!
ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ
ಎಳೆಬೆಳಗು ಕ್ಷಿತಿಜದಂಚಲ್ಲಿ
ಗೆರೆ ಎಳೆಯುವಾಗ
ಸುಷುಪ್ತಿಯ ನಿಗೂಢವೇ
ರೆಪ್ಪೆ ಮಿಟುಕಿಸಿದಂತೆ
ನೆಲದಲ್ಲೆ ಬೇರೂರಿ
ಮುಗಿಲಿಗೊಡ್ಡಿದ ಮುಖ
ಹಳೆನೆನಪ ಚೆಲ್ಲುತ್ತ
ಚೆಲ್ಲಾಡುವುದೆಲ್ಲ ಎಸಳ ರಂಗೋಲಿ
ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.