ಸ್ವಪ್ನ-ದರ್ಶಿನಿ (ಕವಿತೆ)
ಕನಸುಗಳು ಮಾರಾಟಕ್ಕಿವೆ-
ಎಂದು ಕೂಗುವವರ ಬಳಿ
ತಕ್ಕಡಿ ಇರಲಿಲ್ಲ; ಮತ್ತು-
ತೂಕದ ಬಟ್ಟುಗಳೂ..
ಹಸಿದವರಿಗೆ ಅಂದವಾದ ಮೊರಗಳಲ್ಲಿ
ಅನ್ನದ ಕನಸುಗಳನ್ನು
ಸುರಿಯಬಹುದವರು..
ತುಂಬ ಹಂಬಲಿಸುವವರಿಗೆ
ಉಡಿತುಂಬ ಕನಸುಗಳದೇ ಬಾಗಿನ..
ನಿಂತು ನೋಡುವವರನ್ನು
ಹೋಗಾಚೆ!: ಎಂದು ಎಂದೂ
ತಳ್ಳಿದವರಲ್ಲ; ಒಳ್ಳೆಯವರು..
ಹಣಿಕಿಣಿಕಿ, ಥರಾವರಿ
ಕನಸುಗಳ ವ್ಯೆಖರಿ, ಕುಸುರಿ;
ಯಾರು ಬೇಕಾದರೂ ಕಣ್ದೆರೆದು
ನೋಡಲು- ಉಚಿತ ಪ್ರದರ್ಶನ!
ಯಾರ್ಯಾರಿಗೆ ಕನಸುಗಳು
ಬಹುಶಃ ಎಂದೋ ಕಂಡ
ಅಥವಾ ಕಾಣಬಯಸಿದ್ದು
ಇದ್ದಿರಬಹುದವು… ಅಥವಾ
ಆಗಾಗ ಹೇಗೋ ನುಸುಳಿ, ಕದ್ದು
ತೂರಿಬಂದಂಥವು..
ಇನ್ನು ಕೆಲವು, ಯಾಕಾದರೂ ಇಂಥ
ಕನಸು ಮನಸಲ್ಲಿ ಮೂಡಿತ್ತೋ-
ಸಾಕು-ಸಾಕೆಂದು ಕೈಚೆಲ್ಲಿದಂಥವು..
ತುಂಬ ಸುಂದರವಾದ ಕನಸುಗಳೂ
ಇವೆ- ಅವರ ಬಳಿಯಲ್ಲಿ!
ಹೂವ ಹಾಸಿನ ಮೇಲೆ ಪಲ್ಲಕ್ಕಿಯೊಳಗೆ
ಮಲ್ಲಿಗೆಯ ಪರಿಮಳವೇ ಮೈವೆತ್ತ- ಕನಸು!
ದಡದ ಗೊಂಡಾರಣ್ಯದಲಿ ಮುಗಿಲೆತ್ತರ ಮರದ
ತುದಿಯಲಿ ಜೋತಾಡುವ ಸೀತಾಳೆ- ಕನಸು!
ಸೂರ್ಯನನು ಬೊಗಸೆಯಲಿ ತುಂಬಿಸಿ
ಕೆಂಪುಕಾದ ಬೆರಳುಗಳಗುಂಟ
ಹರಿವ ಬೆಳಕನು ಹರಿಸಿ
ಜೀವ ತಬ್ಬುವ- ಕನಸು!
ಸೊಗಸು..
ಒಮ್ಮೆ ‘ಕಣ್ಣುʼ ಬಿಡುವತನಕ!

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.