ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಮೈಕಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಆಫ್ರಿಕಾ ಖಂಡದ ಪ್ರಮುಖ ರಾಷ್ಟ್ರವಾಗಿರುವ ಜಮೈಕಾದ ಸಂಸ್ಕೃತಿಯ ಮೂಲಬೇರು ಆಫ್ರಿಕನ್ ಸಂಸ್ಕೃತಿಯೆಂಬ ನೆಲದೊಳಗೆ ಬಲವಾಗಿ ಹುದುಗಿಕೊಂಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದರ ಜೊತೆಗೆ ಬ್ರಿಟೀಷ್ ಸಂಪ್ರದಾಯಗಳು ಪ್ರಭಾವಿಸಿವೆ. ಯುರೋಪ್ ಸಂಸ್ಕೃತಿ ಮತ್ತು ಆಫ್ರಿಕನ್ ಸಂಸ್ಕೃತಿ ಇವೆರಡೂ ಸಮ್ಮಿಶ್ರಗೊಂಡಿದ್ದರ ಫಲವೇ ಜಮೈಕಾ ಸಂಸ್ಕೃತಿ. ಜಮೈಕಾದ ಸಂಸ್ಕೃತಿಯಲ್ಲಿ ಕಂಡುಬರುವ ಬೇರೆ ಬೇರೆ ಸಂಗತಿಗಳಲ್ಲಿ ಆಫ್ರಿಕಾದ್ದು ಯಾವುದು, ಯುರೋಪ್‌ನದ್ದು ಯಾವುದು ಎನ್ನುವುದನ್ನು ಗುರುತಿಸುವ ಸಂದರ್ಭದಲ್ಲಿ ದ್ವಂದ್ವ ಎದುರಾಗುವುದು ಸಹಜ. ಪ್ರತ್ಯೇಕಿಸುವುದಕ್ಕೆ ಕಷ್ಟಕರವಾಗುವ ರೀತಿಯಲ್ಲಿ ಅವೆರಡೂ ಬೆರೆತುಕೊಂಡಿವೆ. ಆದರೆ ಸೂಕ್ಷ್ಮ ಅವಲೋಕನಕ್ಕೆ ಒಳಪಡಿಸಿದಾಗ ವ್ಯತ್ಯಾಸವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಪರಿಕಲ್ಪನೆಯ ಆಧಾರದಲ್ಲಿಯೇ ಆಫ್ರೋ ಕೇಂದ್ರಿತ ಮತ್ತು ಯುರೋ ಕೇಂದ್ರಿತ ಎನ್ನುವ ಎರಡು ಪದಗಳನ್ನು ಬಳಸಲಾಗುತ್ತದೆ. ಜಮೈಕಾದಲ್ಲಿ ಈಗ ಇರುವ ಆಫ್ರಿಕಾ ಮೂಲದ ಸಂಸ್ಕೃತಿಯು ಆಫ್ರೋ ಕೇಂದ್ರಿತ ಎನಿಸಿದರೆ, ಯುರೋಪಿಯನ್ ಮೂಲದ ಸಂಸ್ಕೃತಿಯು ಯುರೋ ಕೇಂದ್ರಿತ ಎನಿಸಿಕೊಳ್ಳುತ್ತದೆ. ಆಧುನಿಕ ವೈದ್ಯಕೀಯ ಪದ್ಧತಿ, ಕ್ರಿಶ್ಚಿಯನ್ ಧರ್ಮಾಚರಣೆ, ಕಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಯುರೋ ಕೇಂದ್ರಿತವಾದ ಸಾಂಸ್ಕೃತಿಕ ಸಂಗತಿಗಳು. ಸಂಪ್ರದಾಯಗಳು, ಕ್ರಿಯೋಲ್ ಭಾಷೆ, ಅಡುಗೆಯ ವಿಧಾನ, ಸೃಜನಶೀಲ ಅಭಿವ್ಯಕ್ತಿ ಮಾಧ್ಯಮಗಳು, ಸಂಗೀತ ಮತ್ತು ನೃತ್ಯ, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಇವೆಲ್ಲವೂ ಆಫ್ರೋ ಕೇಂದ್ರಿತ ಸಂಗತಿಗಳು.
ಜಮೈಕಾ ದ್ವೀಪವು ಹದಿನಾರನೇ ಶತಮಾನದ ವೇಳೆಗೆ ಕಡಲ್ಗಳ್ಳರ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಇಲ್ಲಿನ ಪೋರ್ಟ್ ರಾಯಲ್ ಎನ್ನುವ ಪ್ರದೇಶ ಕಡಲ್ಗಳ್ಳತನದ ಇತಿಹಾಸವನ್ನು ಹೊಂದಿದೆ. ಪ್ರಸಿದ್ಧ ದರೋಡೆಕೋರ ಹೆನ್ರಿ ಮೋರ್ಗಾನ್ ತನ್ನ ತಂಡದ ಜೊತೆಗೆ ಈ ಸ್ಥಳವನ್ನು ಆಕ್ರಮಿಸಿ, ದರೋಡೆ ಕೃತ್ಯ ನಡೆಸುತ್ತಿದ್ದನು. ಜಮೈಕಾದ ಮೂಲನಿವಾಸಿಗಳು ತಾವು ವಾಸಿಸುತ್ತಿದ್ದ ದ್ವೀಪವನ್ನು ಕ್ಸೈಮಾಕಾ ಎಂದು ಕರೆದರು. ಮರ ಮತ್ತು ನೀರಿನ ಭೂಮಿ ಎನ್ನುವುದು ಈ ಪದದ ಅರ್ಥ. ದ್ವೀಪಕ್ಕೆ ಭೇಟಿ ನೀಡಿದ ಕೊಲಂಬಸ್ ಇಲ್ಲಿಯ ಚೆಲುವನ್ನು ಕಂಡು ವಿಸ್ಮಯಕ್ಕೊಳಗಾಗಿದ್ದರು. ತಮ್ಮ ಕಣ್ಣುಗಳು ನೋಡಿದ ಅತ್ಯಂತ ಸುಂದರ ದ್ವೀಪ ಎನ್ನುವುದಾಗಿ ಜಮೈಕಾವನ್ನು ಕೊಂಡಾಡಿದ್ದಾನೆ ಕೊಲಂಬಸ್. ಹಲವು ವಿಚಾರಗಳಲ್ಲಿ ಜಮೈಕಾ ದೇಶವು ಪ್ರಪಂಚದ ಉಳಿದ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ತನ್ನದೇ ಆದ ಅಂಚೆ ಸೇವೆಯನ್ನು ಆರಂಭಿಸಿದ ಮೊದಲ ಬ್ರಿಟೀಷ್ ವಸಾಹತು ಇದಾಗಿದೆ. ವೆಬ್‌ಸೈಟ್ ಆರಂಭಿಸಿದ ಮೊದಲ ಕೆರಿಬಿಯನ್ ದ್ವೀಪ ಎಂಬ ಗುರುತಿಸುವಿಕೆಗೆ ಪಾತ್ರವಾಗಿದೆ. ಅಮೇರಿಕಾಕ್ಕೂ ಮೊದಲು ವಿದ್ಯುತ್ ಸಂಪರ್ಕ ಪಡೆದ ದೇಶ ಜಮೈಕಾ. ರೈಲು ಮಾರ್ಗವನ್ನು ನಿರ್ಮಿಸಿದ ಪಶ್ಚಿಮ ಗೋಳಾರ್ಧದ ರಾಷ್ಟ್ರಗಳ ಪೈಕಿ ಮೊದಲ ಸ್ಥಾನ ದಕ್ಕಿರುವುದು ಜಮೈಕಾಕ್ಕೆ. ಬ್ರಿಟೀಷರಿಂದ ಜಮೈಕಾದ ಜನರು ಸ್ವಾತಂತ್ರ್ಯ ಗಳಿಸಿಕೊಂಡದ್ದು 1962ರ ಆಗಸ್ಟ್ 6ರಂದು. ಈ ದಿನವನ್ನು ಜಮೈಕಾದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ನೃತ್ಯ, ಸಂಗೀತ ಮತ್ತು ನಾಟಕ ಸ್ಪರ್ಧೆಗಳು, ಕಲೆ ಮತ್ತು ಕರಕುಶಲ ಪ್ರದರ್ಶನವಿರುತ್ತದೆ. ಆಗಸ್ಟ್ 1ನೇ ತಾರೀಖನ್ನು ವಿಮೋಚನಾ ದಿನವಾಗಿ ಆಚರಿಸಲಾಗುತ್ತದೆ.
ಜಮೈಕಾ ದೇಶದ ಸಂಸ್ಕೃತಿಯು ಹಲವು ಭಿನ್ನ ಸಂಸ್ಕೃತಿಗಳ ಮಿಶ್ರಣ. ಟೈನೋಸ್, ಸ್ಪ್ಯಾನಿಷ್, ಭಾರತೀಯರು, ಆಫ್ರಿಕನ್ನರು, ಚೀನಾದವರು, ಬ್ರಿಟ್ಸ್, ಲಿಬಿಯಾ ಮತ್ತು ಸಿರಿಯಾ ದೇಶಗಳ ಜನರು ಜಮೈಕಾ ಸಂಸ್ಕೃತಿಯಲ್ಲಿ ಪಾಲು ಪಡೆದಿದ್ದಾರೆ. ಹಲವು ಜನಾಂಗಗಳ ಪ್ರಭಾವಕ್ಕೊಳಪಟ್ಟಿರುವ ಜಮೈಕಾ ದೇಶವು ಹಲವು ಭಾಷೆಗಳನ್ನು ಒಳಗೊಂಡಿದೆ. ಜಮೈಕಾದ ಅಧಿಕೃತ ಭಾಷೆ ಇಂಗ್ಲಿಷ್. ಸ್ಥಳೀಯ ಭಾಷೆಯಾದ ಕ್ರಿಯೋಲ್ ಜಾಯಮಾನದಲ್ಲಿಯೇ ಇಂಗ್ಲಿಷ್ ಭಾಷೆಯನ್ನು ಮಾತನಾಡಲಾಗುತ್ತದೆ. ಕ್ರಿಯೋಲ್ ಮೇಲೆ ಇಂಗ್ಲಿಷ್ ಪ್ರಭಾವ ಬೀರಿದೆ. ಬ್ರಿಟನ್‌ನಿಂದ ಸ್ವಾತಂತ್ರ್ಯ ಗಳಿಸಿದ್ದರೂ ಸಹ ವಸಾಹತುಶಾಹಿ ಪ್ರಭಾವದಿಂದ ಜಮೈಕಾ ಮುಕ್ತವಾಗಿಲ್ಲ. ಇಂಗ್ಲಿಷ್ ಭಾಷೆ ಮಾತನಾಡಲ್ಪಡುವ ಕೆರಿಬಿಯನ್ ದ್ವೀಪಗಳಲ್ಲಿ ಅತೀ ದೊಡ್ಡದು ಎಂಬ ಹೆಸರು ಜಮೈಕಾಕ್ಕಿದೆ. ಪಟೋಯಿಸ್ ಎನ್ನುವುದು ಜಮೈಕಾದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಗ್ಲಿಷ್ ಜೊತೆಗೆ ಇತರ ಉಪಭಾಷೆಗಳು ಸೇರಿಕೊಂಡು ಪಟೋಯಿಸ್ ಎನ್ನುವ ಭಾಷೆ ಸೃಷ್ಟಿಯಾಗಿದೆ. ಇದನ್ನು ಪಟ್ವಾ ಎಂದೂ ಕರೆಯಲಾಗುತ್ತದೆ. ಹಲವು ಭಾಷೆಗಳು ಇದರಲ್ಲಿ ಸೇರಿಕೊಂಡಿರುವುದರಿಂದ ಇದರ ಉಚ್ಚಾರಣಾ ಶೈಲಿ ವಿಭಿನ್ನವಾಗಿದೆ. ಪಟ್ವಾ ಭಾಷೆಯು ತನ್ನದೇ ಆದ ವ್ಯಾಕರಣ, ಶಬ್ದಕೋಶವನ್ನೂ ಹೊಂದಿದೆ. ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿನ ಜನರು ಈ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೂ ಸಹ ಇದು ಜಮೈಕಾದ ಅಧಿಕೃತ ಭಾಷೆಯಾಗಿ ಗುರುತಿಸಲ್ಪಟ್ಟಿಲ್ಲ.
ಜಮೈಕಾದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಪ್ರಧಾನ ಪ್ರಾಶಸ್ತ್ಯ. ಇಲ್ಲಿ ಪ್ರತೀ ಚದರ ಮೈಲಿಗೊಂದರಂತೆ ಚರ್ಚ್‌ಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಚರ್ಚ್‌ಗಳು ಬೇರೆ ಬೇರೆ ನಂಬಿಕೆಗಳನ್ನು ಆಧರಿಸಿಕೊಂಡಿವೆ. ಕ್ಯಾಥೋಲಿಕ್, ಬ್ಯಾಪ್ಟಿಸ್ಟ್, ಮೆಥೋಡಿಸ್ಟ್, ಆಂಗ್ಲಿಕನ್, ಪ್ರೆಸ್ಬಿಟೇರಿಯನ್, ಸೆವೆಂತ್ ಡೇ ಅಡ್ವೆಂಟಿಸ್ಟ್ ಮೊದಲಾದವುಗಳು ಇನ್ನ ಇನ್ನ ನಂಬಿಕೆಯ ನೆಲೆಗಳಾಗಿವೆ. ಜಮೈಕಾದ ಕೆಲವು ಕುಟುಂಬಗಳು ವಾರಾಂತ್ಯದಲ್ಲಿ ಬೇರೆ ಪ್ರದೇಶಗಳಲ್ಲಿರುವ ಪ್ರಸಿದ್ಧ ಚರ್ಚ್‌ಗಳಿಗೆ ಯಾತ್ರೆಗೆ ತೆರಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಕ್ರೈಸ್ತ ಧರ್ಮೀಯರ ಜೊತೆಗೆ ಹಿಂದೂಗಳು, ಮುಸ್ಲಿಮರು, ಯಹೂದಿಗಳು, ರಾಸ್ತಫರಿಯನ್‌ಗಳೂ ಸಹ ಜಮೈಕಾದಲ್ಲಿ ನೆಲೆಗೊಂಡಿದ್ದು, ಹಲವು ಧರ್ಮಗಳ ನೆಲೆವೀಡು ಎನಿಸಿಕೊಂಡಿದೆ ಜಮೈಕಾ.
ಕುಟುಂಬ ವ್ಯವಸ್ಥೆಗೆ ಜಮೈಕಾದಲ್ಲಿ ಪ್ರಾಮುಖ್ಯತೆ ಇದೆ. ಆದರೆ ಸಂಪ್ರದಾಯಬದ್ಧವಾದ ಮದುವೆಯ ಕಡೆಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಕೌಟುಂಬಿಕ ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಮದುವೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಹೆಚ್ಚಿನ ಕುಟುಂಬಗಳಲ್ಲಿ ಮೂರು ತಲೆಮಾರುಗಳ ಸದಸ್ಯರು ಕಂಡುಬರುತ್ತಾರೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಕುಟುಂಬದ ಹೊಣೆಗಾರಿಕೆ ರವಾನೆಯಾಗುತ್ತದೆ. ಪುರುಷ ಪ್ರಧಾನ ಕುಟುಂಬ ಪದ್ಧತಿಯಲ್ಲಿ ಅಪ್ಪನ ನಂತರ ಮಗನಿಗೆ, ಮಗನ ನಂತರ ಮೊಮ್ಮಗನಿಗೆ ಮನೆಯ ಯಜಮಾನಿಕೆ ಹೋಗುತ್ತದೆ. ಕುಟುಂಬದಲ್ಲಿ ಮಹಿಳೆಯರ ಪಾತ್ರ ನಗಣ್ಯವೇನಲ್ಲ. ಅನೇಕ ಸಂದರ್ಭಗಳಲ್ಲಿ ಪುರುಷರಿಗೆ ಸರಿಸಮಾನವಾದ ಸ್ಥಾನಮಾನವನ್ನು ಗಳಿಸಿಕೊಂಡಿರುತ್ತಾರೆ. ಮಹಿಳೆಯರು ಪುರುಷರ ರೀತಿಯಲ್ಲಿಯೇ ಸಂಪಾದನೆ ಮಾಡುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಗಂಡು ದಿಕ್ಕಿಲ್ಲದ ಮನೆಯ ಸಂಪೂರ್ಣ ಭಾರ ಅವರ ಹೆಗಲಿಗೇರಿರುತ್ತದೆ. ಮಕ್ಕಳ ಪಾಲನೆಯಿಂದ ಅವರಿಗೆ ಶಿಕ್ಷಣ ಕೊಡಿಸಿ, ಅವರನ್ನು ಸಭ್ಯ ನಾಗರಿಕರಾಗಿಸುವವರೆಗೆ ಎಲ್ಲಾ ಜವಾಬ್ದಾರಿಗಳನ್ನು ಮಹಿಳೆಯರೇ ಸಮರ್ಥವಾಗಿ ನಿರ್ವಹಿಸುತ್ತಾರೆ. ಜಮೈಕಾದ ಶ್ರೀಮಂತ ಕುಟುಂಬದ ಸ್ಥಿತಿಗತಿಗಳು ಉನ್ನತ ಮಟ್ಟದಲ್ಲಿವೆ. ಬಹುತೇಕ ಮನೆಗಳಲ್ಲಿ ಒಬ್ಬರಾದರೂ ಕೆಲಸದವರು ಇರುತ್ತಾರೆ.
ಜಮೈಕಾದ ದೈನಂದಿನ ಜೀವನದ ವಿಶೇಷತೆಯೆಂದರೆ, ಬಹುತೇಕ ಜನರಿಗೆ ಮಧ್ಯಾಹ್ನದ ಊಟವನ್ನು ತಯಾರಿಸುವುದಕ್ಕೆ ಮತ್ತು ನೆಮ್ಮದಿಯಿಂದ ಸೇವಿಸುವುದಕ್ಕೆ ಬಿಡುವು ಇರುವುದಿಲ್ಲ. ಈ ಕಾರಣದಿಂದಾಗಿ ಸಂಜೆ ವೇಳೆಗೆ ಊಟ ಮಾಡುತ್ತಾರೆ. ಇದನ್ನು ಗಮನಿಸಿಕೊಂಡಾಗ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ವಿಶ್ವಕರ್ಮ ಸಮುದಾಯದವರ ಜೀವನ ವಿಧಾನ ನೆನಪಿಗೆ ಬರುತ್ತದೆ. ಶ್ರಮಜೀವಿಗಳಾದ ವಿಶ್ವಕರ್ಮ ಸಮುದಾಯದವರು ಕೆಲಸದ ಕಡೆಗೇ ಹೆಚ್ಚು ಒತ್ತು ಕೊಡುತ್ತಾರೆ. ಮಧ್ಯಾಹ್ನದ ಊಟ ಮಾಡುವುದು ಮಧ್ಯಾಹ್ನ ಮೂರು ಗಂಟೆ ಕಳೆದ ಬಳಿಕ. ಜಮೈಕಾದ ಜನರೂ ಕೂಡಾ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ ಕೊಡುವವರು ಎನ್ನುವುದನ್ನು ಈ ಮೂಲಕ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಜಮೈಕಾದ ಜನರ ಆಹಾರಗಳಲ್ಲಿ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ. ಅಲ್ಲಿನ ಮಸಾಲೆಯು ವಿಶಿಷ್ಟ ಸುವಾಸನೆಯಿಂದ ಕೂಡಿರುತ್ತದೆ. ಈ ಅನನ್ಯವಾದ ಸುಗಂಧವನ್ನು ರೋಲರ್ ಕೋಸ್ಟರ್ ಎನ್ನಲಾಗುತ್ತದೆ. ಜರ್ಕ್ ಚಿಕನ್ ಮತ್ತು ಟಂಟಲೈಸಿಂಗ್ ಕರಿ ಮೆಕೆ ಎನ್ನುವ ಆಹಾರಗಳು ಜಮೈಕಾದಲ್ಲಿ ಪ್ರಸಿದ್ಧ. ಐಕಾನಿಕ್ ಅಕೀ ಮತ್ತು ಸಾಲ್ಟ್ ಫಿಶ್ ಇಲ್ಲಿಯ ವಿಶೇಷ ಖಾದ್ಯಗಳು. ಆಫ್ರಿಕಾ, ಯುರೋಪ್ ಮತ್ತು ಏಷ್ಯಾಗಳ ಪಾಕಪದ್ಧತಿಯು ಜಮೈಕಾ ಆಹಾರ ತಯಾರಿಯ ಮೇಲೆ ಪ್ರಭಾವ ಬೀರಿದೆ. ರುಚಿಕರವಾದ ಆಹಾರವನ್ನು ಸೇವಿಸುವುದರ ಬಗೆಗೆ ಜಮೈಕಾದ ಜನರು ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಇತರರ ಜೊತೆಗೆ ಸೇರಿಕೊಂಡು ಆಹಾರ ಸೇವಿಸುತ್ತಾ, ಆನಂದ ಪಡೆಯುವುದಕ್ಕೂ ಅಷ್ಟೇ ಮಹತ್ವ ನೀಡುತ್ತಾರೆ. ಬೇರೊಬ್ಬರ ಜೊತೆಗೆ ಹಂಚಿ ತಿಂದರೆ ಆಹಾರದ ರುಚಿ ಹೆಚ್ಚುತ್ತದೆ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದಾರೆ ಇಲ್ಲಿಯ ಬಹುತೇಕ ಜನರು.
ಕುಟುಂಬದವರೆಲ್ಲಾ ವಾರಕ್ಕೊಂದು ಸಲ ಸೇರಿ, ಅಡುಗೆಯನ್ನು ಒಟ್ಟಾಗಿ ತಯಾರಿಸಿ, ಸಹಭೋಜನ ನಡೆಸಿ ಸಂತಸಪಡುತ್ತಾರೆ. ಇಂತಹ ಭೋಜನಕೂಟಗಳಲ್ಲಿ ಅದ್ಧೂರಿ ಅಡುಗೆ ಇರುತ್ತದೆ. ಕೋಳಿ, ಮೀನು, ತುಪ್ಪದಲ್ಲಿ ಹುರಿದ ಬಾಳೆಹಣ್ಣು, ಜರ್ಕ್ ಮಾಂಸ ಮೊದಲಾದ ಆಹಾರಗಳನ್ನು ತಯಾರಿಸಿ, ತಿಂದು, ಸಂಭ್ರಮಿಸುತ್ತಾರೆ. ಜರ್ಕ್ ಮಾಂಸ ಎನ್ನುವುದು ಸುಟ್ಟ ಮಾಂಸಕ್ಕೆ ಮಸಾಲೆ ಸವರಿ ತಯಾರಿಸಲಾದ ಖಾದ್ಯವಾಗಿದೆ. ಇದರ ಜೊತೆಗೆ ಮನರಂಜನಾ ಚಟುವಟಿಕೆಗಳನ್ನೂ ಹಮ್ಮಿಕೊಳ್ಳುತ್ತಾರೆ. ಜಮೈಕಾದ ಜನರು ವಾರಾಂತ್ಯವನ್ನು ಆನಂದಿಸುವ ರೀತಿಯಿದು. ಬಹುತೇಕ ಜಮೈಕನ್ ಕುಟುಂಬಗಳು ಈ ಬಗೆಯ ಆಚರಣೆಯನ್ನು ರೂಢಿಸಿಕೊಂಡಿವೆ. ಕ್ರ್ಯಾನ್‌ಬೆರಿ ಹೆಸರಿನ ಹಣ್ಣು ಜಮೈಕಾದಲ್ಲಿ ಜನಪ್ರಿಯವಾಗಿದೆ. ಇಲ್ಲಿಯ ಜನರು ಈ ಹಣ್ಣುಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಈ ಹಣ್ಣು ಜಮೈಕಾದಲ್ಲಿ ಬೆಳೆಯುವುದಿಲ್ಲ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕ್ರ್ಯಾನ್‌ಬೆರಿಗಳನ್ನು ಖರೀದಿಸುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ ಜಮೈಕಾ. ರಮ್ ಮಾದಕ ಪಾನೀಯಕ್ಕೆ ಜಮೈಕಾ ಪ್ರಸಿದ್ಧವಾಗಿದೆ. ಜಮೈಕಾದ ಗಲ್ಲಿ ಗಲ್ಲಿಗಳಲ್ಲಿ ಅಧಿಕ ಸಂಖ್ಯೆಯ ಬಾರ್‌ಗಳು ಕಂಡುಬರುತ್ತವೆ. ರಮ್ ತಯಾರಿಯಲ್ಲಿ ಇತಿಹಾಸಪ್ರಸಿದ್ಧವಾದ ದೇಶವಿದು. ರಮ್ ಇಲ್ಲಿನ ರಾಷ್ಟ್ರೀಯ ಪಾನೀಯ. ರಮ್ ತಯಾರಿಸಿ, ರಫ್ತು ಮಾಡಿದ ಮೊದಲ ದೇಶವೆಂಬ ಗುರುತಿಸುವಿಕೆಗೆ ಪಾತ್ರವಾಗಿದೆ. ವಿಶ್ವದ ದುಬಾರಿ ರಮ್‌ಗಳಲ್ಲಿ ಒಂದು ಎನಿಸಿದ ಆಪಲ್ಟನ್ ಎಸ್ಟೇಟ್ ರಮ್ ಜಮೈಕಾ ಮೂಲದ್ದು. ಇದನ್ನು ಐವತ್ತು ವರ್ಷಗಳ ರಮ್ ಎಂದೂ ಕರೆಯಲಾಗುತ್ತದೆ. ಕೆಂಪು ಪಟ್ಟಿಯ ಬಿಯರ್ ಎನ್ನುವುದು ಜಮೈಕಾದಲ್ಲಿ ಜನರ ಮೆಚ್ಚುಗೆ ಪಡೆದ ಪಾನೀಯವಾಗಿದೆ. ಇದನ್ನು ಈಗ ಇಲ್ಲಿ ತಯಾರಿಸಲಾಗುತ್ತದೆ. ಆದರೆ ಇದು ಜಮೈಕಾ ಮೂಲದ್ದಲ್ಲ. ಅಮೇರಿಕಾದ ಇಲಿನಾಯ್ಸ್ ಪ್ರದೇಶದವರು ಅದನ್ನು ಜಮೈಕಾಕ್ಕೆ ಪರಿಚಯಿಸಿದ್ದಾರೆ.
ಅತೀ ವಿಶಿಷ್ಟವಾದ, ದುಬಾರಿ ಕಾಫಿಗೆ ತವರುಮನೆಯೆನಿಸಿಕೊಂಡಿದೆ ಜಮೈಕಾ. ಇಲ್ಲಿ ಬೆಳೆಯುವ ಬ್ಲೂ ಮೌಂಟೇನ್ ಕಾಫಿ ಜಗತ್ಪ್ರಸಿದ್ಧಿ ಪಡೆದಿದೆ. ಈ ಕಾಫಿಯನ್ನು ಜಮೈಕಾದ ಬ್ಲೂ ಮೌಂಟೇನ್ ಪರ್ವತದಲ್ಲಿ ಬೆಳೆಸಲಾಗುತ್ತದೆ. ಆದ್ದರಿಂದ ಈ ಹೆಸರು ಬಂದಿದೆ. ಬ್ಲೂ ಮೌಂಟೇನ್ ಪರ್ವತವು ಜಮೈಕಾದ ಅತೀ ಎತ್ತರದ ಪ್ರದೇಶವಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಅತೀ ಎತ್ತರದ ಪ್ರದೇಶದಲ್ಲಿ ಕಾಫಿ ಗಿಡಗಳನ್ನು ಬೆಳೆಸುವುದರಿಂದ ಕೊಯ್ಲು ಮಾಡುವುದು ತ್ರಾಸದಾಯಕವಾಗಿದೆ. ಆದರೆ ಕಾಫಿಗೆ ವಿಶಿಷ್ಟ ಸುಗಂಧ ಬರುತ್ತದೆ.
ಜಮೈಕಾ ವಿಶಿಷ್ಟವಾದ ಸಸ್ಯವರ್ಗಗಳಿಗೆ ನೆಲೆಯಾಗಿದೆ. ಸುಂದರವಾದ ಆರ್ಕೀಡ್‌ಗಳು ಜಮೈಕಾದಲ್ಲಿ ಕಂಡುಬರುತ್ತವೆ. ಇನ್ನೂರಕ್ಕೂ ಹೆಚ್ಚು ಜಾತಿಯ ಆರ್ಕೀಡ್‌ಗಳು ಇಲ್ಲಿವೆ. ಇವುಗಳಲ್ಲಿ ಸುಮಾರು 73 ಜಾತಿಯ ಆರ್ಕೀಡ್‌ಗಳು ಜಮೈಕಾ ಮೂಲದವುಗಳಾದರೆ, ಉಳಿದವುಗಳು ಬೇರೆ ದೇಶಗಳಿಂದ ಇಲ್ಲಿಗೆ ಬಂದಿವೆ. ಉಷ್ಣವಲಯದಲ್ಲಿ ಬರುವ ಬಹುತೇಕ ದೇಶಗಳಲ್ಲಿ ಹಾವುಗಳು ಅಧಿಕ ಸಂಖ್ಯೆಯಲ್ಲಿರುತ್ತವೆ. ಆದರೆ ಜಮೈಕಾ ಇದಕ್ಕೆ ವ್ಯತಿರಿಕ್ತವಾಗಿದೆ. ಉಷ್ಣವಲಯಕ್ಕೆ ಸೇರಿದ ರಾಷ್ಟ್ರವಾಗಿದ್ದರೂ ಇಂದು ಜಮೈಕಾದಲ್ಲಿ ಹೆಚ್ಚಿನ ಸಂಖ್ಯೆಯ ಉರಗಗಳಿಲ್ಲ. ಎಂಟು ಪ್ರಭೇದದ ಹಾವುಗಳು ಮಾತ್ರವೇ ಕಂಡುಬರುತ್ತವೆ. ಇವುಗಳು ಯಾವುವೂ ವಿಷಕಾರಿಯಲ್ಲ. ಮೊದಲು ಜಮೈಕಾದಲ್ಲಿ ಹಾವುಗಳು ಹೆಚ್ಚಾಗಿದ್ದವು. ಆದರೆ 1872ರಲ್ಲಿ ಮುಂಗುಸಿಗಳನ್ನು ಸಾಕಲಾರಂಭಿಸಿದ ಬಳಿಕ ಇದ್ದ ಹಾವುಗಳಲ್ಲಿ ಹೆಚ್ಚಿನವು ನಾಶವಾಗಿವೆ. ಜಗತ್ತಿನ ಅತೀ ದೊಡ್ಡ ಚಿಟ್ಟೆಗಳಲ್ಲಿ ಒಂದಾದ ಹೋಮರಸ್ ಸ್ವಾಲೋಟೈಲ್ ಚಿಟ್ಟೆಯು ಜಮೈಕಾದಲ್ಲಿ ಕಂಡುಬರುತ್ತದೆ. ಜಗತ್ತಿನ 12 ದೈತ್ಯ ಚಿಟ್ಟೆಗಳ ಪೈಕಿ ಇದೂ ಒಂದು. ಇದರ ಒಂದು ರೆಕ್ಕೆ ಸುಮಾರು ಆರು ಇಂಚುಗಳಷ್ಟು ವಿಸ್ತಾರವಾಗಿರುತ್ತದೆ. ಈ ಚಿಟ್ಟೆ ಪ್ರಭೇದ ಈಗ ಅಳಿವಿನಂಚಿನಲ್ಲಿದೆ ಎನ್ನುವುದು ವಿಷಾದದ ಸಂಗತಿಯಾಗಿದೆ.
ಕಾಲದ ಬದಲಾವಣೆಗೆ ತಕ್ಕಂತೆ ಜಮೈಕಾದ ಜನರ ಉಡುಗೆಯ ರೀತಿನೀತಿಗಳು ಬದಲಾಗಿವೆ. ಆಧುನಿಕ ಶೈಲಿಯ ಉಡುಪುಗಳನ್ನು ಧರಿಸುತ್ತಿದ್ದಾರೆ. ಆದರೆ ದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ರಾಸ್ತಫೇರಿಯನ್ ಸಮುದಾಯದವರು ವೇಷಭೂಷಣಗಳ ವಿಚಾರದಲ್ಲಿ ಹಿಂದಿನ ರೀತಿನೀತಿಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಸಡಿಲವಾದ, ತೀರಾ ಅಗಲಕ್ಕೆ ಚಾಚಿಕೊಂಡಿರುವ ಬಟ್ಟೆಗಳನ್ನು ಧರಿಸುತ್ತಾರೆ. ನೋಡಿದ ತಕ್ಷಣವೇ ಇವರು ಜಮೈಕಾದವರು, ರಾಸ್ತಫೇರಿಯನ್ ಸಮುದಾಯದವರು ಎಂದು ಗುರುತಿಸುವುದಕ್ಕೆ ಸಾಧ್ಯವಾಗುವುದು ಅವರ ಕೇಶವಿನ್ಯಾಸದ ಮೂಲಕ. ಇವರ ಕೇಶವಿನ್ಯಾಸ ಶೈಲಿಯನ್ನು ಡ್ರೆಡ್‌ಲಾಕ್ ಎನ್ನಲಾಗುತ್ತದೆ. ಹೆಸರು ಕೇಳಿದ ತಕ್ಷಣ ಅದೇನೆಂದು ಅರ್ಥವಾಗದಿದ್ದರೂ ವಿವರಣೆ ಕೇಳಿದ ಕೂಡಲೇ ಅರ್ಥವಾಗುವುದಕ್ಕೆ ಸಾಧ್ಯವಿದೆ. ತಲೆಗೂದಲುಗಳೆಲ್ಲಾ ಒತ್ತೊತ್ತಾಗಿ ಜೋಡಿಸಿಕೊಂಡು ಹಗ್ಗದ ರೀತಿಯಾಗಿರುತ್ತದೆ. ಈ ರೀತಿಯಾಗಿ ಹಗ್ಗದ ರೀತಿಯ ರಚನೆಗಳು ತಲೆಯನ್ನಿಡೀ ಆವರಿಸಿರುತ್ತವೆ. ಹೆಚ್ಚು ಕಡಿಮೆ ಅಘೋರಿಗಳ ತಲೆಗೂದಲಿನಂತಾಗಿರುತ್ತದೆ. ಆದರೆ ಹಗ್ಗದಂತಾಗಿರುವ ತಲೆಗೂದಲಿನ ಎಳೆಗಳು ಪ್ರತ್ಯೇಕ ಪ್ರತ್ಯೇಕವಾಗಿರುತ್ತದೆ. ಇದುವೇ ಡ್ರೆಡ್‌ಲಾಕ್ ಕೇಶವಿನ್ಯಾಸವಾಗಿದೆ. ಈ ಬಗೆಯ ಶೈಲಿ ಆರಂಭಗೊಂಡದ್ದು ಇಪ್ಪತ್ತನೇ ಶತಮಾನದ ಇಥಿಯೋಪಿಯನ್ ಚಕ್ರವರ್ತಿ ಒಂದನೇ ಹೈಲೆ ಸೆಲಾಸಿ ಅವರ ಮೂಲಕ.
ಜಮೈಕಾದಲ್ಲಿರುವ ದಿ ಇನ್‌ಸ್ಟಿಟ್ಯೂಟ್ ಆಫ್ ಜಮೈಕಾ ಎನ್ನುವ ಕಲಾಸಂಸ್ಥೆಯು ಅಲ್ಲಿನ ಕಲಾಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಭೂತಪೂರ್ವವಾದದ್ದು. ಈ ಸಂಸ್ಥೆಯು ಕಲಾ ಪ್ರದರ್ಶನಗಳಿಗೆ ಪ್ರಾಯೋಜಕತ್ವವನ್ನು ನೀಡುತ್ತದೆ. ಧನಸಹಾಯದ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ. ಪ್ರದರ್ಶನಗಳಿಗೆ ಉತ್ತಮ ವೇದಿಕೆಗಳನ್ನು ಒದಗಿಸಿಕೊಡುತ್ತದೆ. ಅರ್ಹ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ. ಈ ಸಂಸ್ಥೆಯಲ್ಲಿ ಕಲಾ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸೌಲಭ್ಯಗಳೂ ಇವೆ. ನ್ಯಾಷನಲ್ ಗ್ಯಾಲರಿ, ಲಿಬರ್ಟಿ ಹಾಲ್, ಜಮೈಕಾ ಜರ್ನಲ್ ಮತ್ತು ಆಫ್ರಿಕನ್ ಕೆರಿಬಿಯನ್ ಇನ್ಟ್ಸಿಟ್ಯೂಟ್ ಆಫ್ ಜಮೈಕಾ ಮೊದಲಾದವುಗಳನ್ನು ಇದೇ ಸಂಸ್ಥೆ ನಿರ್ವಹಿಸುತ್ತಿದೆ. ದೇಶದ ವಸ್ತುಸಂಗ್ರಹಾಲಯಗಳ ಪ್ರಾಧಿಕಾರವಾಗಿಯೂ ಇದು ಕಾರ್ಯನಿರ್ವಹಿಸುತ್ತಿದೆ. ಜಮೈಕಾ ನ್ಯಾಷನಲ್ ಹೆರಿಟೇಜ್ ಟ್ರಸ್ಟ್ ಹೆಸರಿನ ಸಂಸ್ಥೆಯು ಜಮೈಕಾದ ಪುರಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಪರಂಪರೆಯನ್ನು ಸಂರಕ್ಷಿಸುವ ನೆಲೆಯಲ್ಲಿ ಕಾರ್ಯೋನ್ಮುಖವಾಗಿದೆ.
ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಜಮೈಕಾದ ಸಾಹಿತ್ಯ ಕ್ಷೇತ್ರದಲ್ಲಿ ಭಾಷೆಯ ಬಳಕೆಗೆ ಸಂಬಂಧಪಟ್ಟ ದ್ವಂದ್ವ ಕಂಡುಬರುತ್ತದೆ. ಸ್ಥಳೀಯ ಭಾಷೆಯನ್ನು ಬಳಸುವ ವಿಚಾರದಲ್ಲಿ ಬರಹಗಾರರು ಮತ್ತು ವಿಮರ್ಶಕರ ಮಧ್ಯೆ ಅಷ್ಟಾಗಿ ಸಹಮತವಿಲ್ಲ. ಲೂಯಿಸ್ ಬೆನೆಟ್ ಕವರ್ಲಿ, ಆ್ಯಂಡ್ರ್ಯೂ ಸಾಲ್ಕಿ, ಮೈಕೆಲ್ ಸ್ಮಿತ್ ಮೊದಲಾದ ಬರಹಗಾರರು ಜಮೈಕಾದ ಕ್ರಿಯೋಲ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವುದರ ಕಡೆಗೆ ಒಲವು ತೋರಿದರು. ಜಮೈಕನ್ ಜನಪದರ ಮೌಖಿಕ ಭಾಷೆಯನ್ನು ಬರಹರೂಪಕ್ಕೆ ಒಳಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲಿಯ ಭಾಷೆಯಲ್ಲಿರುವ ಲಯಬದ್ಧತೆಯನ್ನು ತಮ್ಮ ಸಾಹಿತ್ಯ ರಚನೆಗಳ ಮೂಲಕ ಸಾರಸ್ವತ ಜಗತ್ತಿನ ಪ್ರಮುಖ ವಾಹಿನಿಗೆ ಸೇರಿಸುವ ಮಹೋನ್ನತ ಕಾರ್ಯವನ್ನು ಮಾಡಿದ್ದಾರೆ ಈ ಬರಹಗಾರರು. ಆದರೆ ಇವರ ಈ ಕಾರ್ಯ ವಿಮರ್ಶಕರಿಂದ ಟೀಕೆಗೆ ಒಳಗಾಯಿತು. ಇಂಗ್ಲಿಷ್ ಭಾಷೆಯ ಕುರಿತು ಅತಿಯಾದ ಅಭಿಮಾನವನ್ನಿಟ್ಟುಕೊಂಡಿದ್ದ ವಿಮರ್ಶಕರು ಇವರ ಸಾಹಿತ್ಯ ರಚನೆಗಳನ್ನು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲ. ಕ್ರಿಯೋಲ್ ಭಾಷೆಯಿಂದ ಪ್ರಮಾಣೀಕೃತವಾದ ಇಂಗ್ಲಿಷ್ ಭಾಷೆಯನ್ನು ಸಾಹಿತ್ಯ ರಚನೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ಈ ವಿಮರ್ಶಕರದ್ದಾಗಿತ್ತು. ಕ್ಲೌಡ್ ಮೆಕೆ, ಲೂಯಿಸ್ ಸಿಂಪ್ಸನ್ ಮೊದಲಾದವರು ಜಮೈಕಾದ ಪ್ರಸಿದ್ಧ ಕವಿಗಳು. ನೋಬೆಲ್ ಪ್ರಶಸ್ತಿ ವಿಜೇತ ಬರಹಗಾರರಾದ ಡೆರೆಕ್ ವಾಲ್ಕಾಟ್ ಅವರು ಮೋನಾದ ವೆಸ್ಟ್ಇಂಡೀಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದವರು. ಇವರೆಲ್ಲರೂ ಜಮೈಕಾದ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಪ್ರಸಿದ್ಧ ಬರಹಗಾರರಾದ ಇಯಾನ್ ಫ್ಲೆಮಿಂಗ್ ಜಮೈಕಾದಲ್ಲಿ ವಾಸಿಸುತ್ತಿದ್ದರು. ಬ್ರಿಟೀಷ್ ನೌಕಾಪಡೆಯ ಗುಪ್ತಚರ ವಿಭಾಗದಲ್ಲಿದ್ದ ಅವರು ಜಮೈಕಾದ ನೈಸರ್ಗಿಕ ಸೌಂದರ್ಯದ ಆಕರ್ಷಣೆಗೆ ಒಳಗಾಗಿದ್ದರು. ಅವರ ಹದಿನಾಲ್ಕು ಪ್ರಸಿದ್ಧ ಪುಸ್ತಕಗಳು ರಚನೆಯಾದದ್ದು ಜಮೈಕಾದ ನೆಲದಲ್ಲಿಯೇ. ಅವರ ಪುಸ್ತಕವನ್ನು ಮೂಲವಾಗಿಟ್ಟುಕೊಂಡ ಚಲನಚಿತ್ರವೂ ಸಹ ಜಮೈಕಾದಲ್ಲಿಯೇ ನಿರ್ಮಾಣಗೊಂಡಿತು. ಜಮೈಕಾದಲ್ಲಿ ಫ್ಲೆಮಿಂಗ್ ಗೋಲ್ಡೆನಿ ಹೆಸರಿನ ಎಸ್ಟೇಟ್‌ನಲ್ಲಿ ನೆಲೆನಿಂತಿದ್ದರು.
ಜಮೈಕಾದ ನಾಟಕ ತಂಡಗಳು ಮತ್ತು ಸಂಗೀತ ಸಂಸ್ಥೆಗಳು ಸದಾ ಕಾರ್ಯಚಟುವಟಿಕೆಗಳಿಂದ ಕೂಡಿರುತ್ತವೆ. ನ್ಯಾಷನಲ್ ಡ್ಯಾನ್ಸ್ ಥಿಯೇಟರ್ ಎನ್ನುವುದು ಪ್ರಸಿದ್ಧ ನೃತ್ಯ ಸಂಸ್ಥೆಯಾಗಿದ್ದು, ಹೊರದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿಕೊಂಡಿದೆ. ನೃತ್ಯ, ಸಂಗೀತ, ನಾಟಕ ಮೊದಲಾದ ಕಲೆಗಳ ಪ್ರದರ್ಶನಕ್ಕೆ ಸೂಕ್ತ ಸಂದರ್ಭ ಒದಗಿಬರುವುದು ದೇಶದ ವಾರ್ಷಿಕ ಉತ್ಸವದಲ್ಲಿ. ಜಮೈಕಾದ ಸಂಗೀತ ಕ್ಷೇತ್ರವು ಪ್ರಯೋಗಶೀಲವಾಗಿದೆ. ನೂತನ ಸಂಗತಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಸಂಗೀತ ಕ್ಷೇತ್ರವನ್ನು ಸದಾ ಲವಲವಿಕೆಯಿಂದ ಇರಿಸುವ ಕಾರ್ಯವನ್ನು ಅಲ್ಲಿಯ ಸಂಗೀತಗಾರರು ನಡೆಸಿಕೊಂಡು ಬಂದಿದ್ದಾರೆ. ಡಾನ್ ಡ್ರಮ್ಮಂಡ್, ಎರ್ನಿ ರಾಂಗ್ಲಿನ್ ಈ ಇಬ್ಬರು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಪ್ರಿಯರಾದ ಸಂಗೀತಗಾರರು. ಇವರು ಸ್ಕಾ ಹೆಸರಿನ ಸಂಗೀತ ಶೈಲಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ಶೈಲಿಗೆ ಪ್ರೇರಣೆ ದೊರಕಿರುವುದು ಮೆಂಟೊ ಹೆಸರಿನ ನೃತ್ಯ ಸಂಗೀತದ ಮೂಲಕ. ಸ್ಕಾ ಶೈಲಿಯಿಂದಲೇ ರೂಪುಗೊಂಡ ರೆಗ್ಗೀ ಎನ್ನುವ ಸಂಗೀತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಯಿತು. ಇದರ ಹಿನ್ನೆಲೆಯಲ್ಲಿ ಬಾಬ್ ಮಾರ್ಲಿ, ಪೀಟರ್ ಟೋಶ್, ಲೀ ಪೆರಿ ಇಂತಹ ಸಂಗೀತ ಪ್ರದರ್ಶಕರ ಪಾತ್ರವಿದೆ. ಇವರ ಪ್ರಯತ್ನದಿಂದಾಗಿ 1970ರ ನಂತರ ಈ ಶೈಲಿಯು ಬೇರೆ ಬೇರೆ ದೇಶಗಳ ಜನರ ಗಮನ ಸೆಳೆಯಿತು. ಈ ಶೈಲಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಭರ್ಜರಿ ಹಣ ಸಂಪಾದನೆಯನ್ನೂ ಮಾಡಿದ್ದಾರೆ ಈ ಕಲಾವಿದರು. ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಜಮೈಕಾದಲ್ಲಿ ರ‍್ಯಾಪ್ ಸಂಗೀತದ ಆರ್ಭಟ ಶುರುವಾಯಿತು. ಇದನ್ನು ಡ್ಯಾನ್ಸ್ಹಾಲ್ ಸಂಗೀತ ಎಂದೂ ಕರೆಯಲಾಗುತ್ತಿತ್ತು. ರೆಗ್ಗೀ ಸಮ್ ಫೆಸ್ಟ್ ಎನ್ನುವುದು ಬೇಸಿಗೆ ಕಾಲದಲ್ಲಿ ಜಮೈಕಾದ ಕಡಲತೀರದಲ್ಲಿ ನಡೆಯುವ ಪ್ರಸಿದ್ಧ ಸಂಗೀತ ಉತ್ಸವವಾಗಿದೆ. ಇದರಲ್ಲಿ ಸ್ಥಳೀಯರು ಮಾತ್ರವಲ್ಲದೆ, ಬೇರೆ ಬೇರೆ ದೇಶಗಳ ಜನರೂ ಭಾಗವಹಿಸುತ್ತಾರೆ.
1988ರಲ್ಲಿ ಜಮೈಕಾ ದೇಶವು ಚಳಿಗಾಲದ ಒಲಿಂಪಿಕ್‌ನಲ್ಲಿ ಭಾಗವಹಿಸಿತು. ಈ ಮೂಲಕ ಚಳಿಗಾಲದ ಒಲಿಂಪಿಕ್ ಪ್ರವೇಶಿಸಿದ ಮೊದಲ ಉಷ್ಣವಲಯದ ದೇಶ ಎನಿಸಿಕೊಂಡಿತು. ಪ್ರಪಂಚದ ಅತೀ ವೇಗದ ಓಟಕ್ಕೆ ಹೆಸರುವಾಸಿಯಾಗಿದೆ ಜಮೈಕಾ. ಪ್ರಪಂಚದ ಅತೀ ವೇಗದ ಐದು ಜನ ಪುರುಷ ಓಟಗಾರರಲ್ಲಿ ನಾಲ್ಕು ಜನರು ಜಮೈಕಾಕ್ಕೆ ಸೇರಿದವರು. ವಿಶ್ವದ ಹತ್ತು ಮಂದಿ ಮಹಿಳಾ ಓಟಗಾರ್ತಿಯರಲ್ಲಿ ಜಮೈಕಾದ ನಾಲ್ಕು ಮಹಿಳೆಯರಿದ್ದಾರೆ. ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಉಸೇನ್ ಬೋಲ್ಟ್, ಯೋಹಾನ್ ಬ್ಲೇಕ್, ಅಸಫಾ ಪೊವೆಲ್ ಮೊದಲಾದವರನ್ನು ಈ ನೆಲೆಯಲ್ಲಿ ಹೆಸರಿಸಬಹುದು. ವೇಗದ ಓಟದ ವಿಭಾಗದಲ್ಲಿ ಯಾವತ್ತೂ ಪ್ರಾಬಲ್ಯ ಸಾಧಿಸಿಕೊಂಡೇ ಬಂದಿದೆ ಜಮೈಕಾ. ಓಡುವುದರಲ್ಲಿ ಜಮೈಕಾದ ಆಟಗಾರರು ಯಾವತ್ತೂ ಮುಂದಿದ್ದಾರೆ. ಮಹತ್ತರ ಗುರಿಯೆಡೆಗೆ ಓಡುವುದರಲ್ಲಿ ಹಿಂದೆ ಬೀಳದಿರಲಿ ಜಮೈಕಾ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.