ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು.
ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ.
ಅದರ ಲಕ್ಷಣಗಳೇನೆಂದರೆ
1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ
2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು.
ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕರ ಸೆಮಿನಾರು ಪೇಪರ್ ಗಳಲ್ಲಿ, ಹಾಗೂ ಇತರ ಕಡೆಗಳಲ್ಲಿ ಕಾಣುತ್ತೀರಿ.
ಉದಾಹರಣೆಗೆ ರೇಡಿಯೋ ಹವಾಮಾನ ವರದಿಯಲ್ಲಿ `ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ’ ಎಂದು ವರ್ಷಾನುಗಟ್ಟಲೇ ಓದಿದ ಉದ್ಘೋಷಕಿಗೆ ತಾನು ಹೇಳುತ್ತಿರುವುದರ ಅರ್ಥ ಒಂದು ದಿನವಾದರೂ ತಿಳಿದಿರಬಹುದೇ?
ದಶಕಗಳಿಂದ `ಪಟ್ಟಭದ್ರ ಹಿತಾಸಕ್ತಿ’ ಎಂದು ಪತ್ರಿಕೆ ಹೆಡಲೈನ್ ಗಳಲ್ಲಿ ಓದಿ ಓದಿ ಬೇಜಾರಾದ ಮೇಲೂ ಆ ಶಬ್ದದ ಅರ್ಥ ಏನು, ತಿಳಿಸಿ, ಎಂದು ಯಾರಾದರೂ ವಾಚಕರು ಸಂಪಾದಕರಿಗೆ ಪತ್ರ ಬರೆದರೆ?
ಪಾಕಿಸ್ತಾನದೊಂದಿಗೆ ತೆಗೆದುಕೊಂಡ `ಕಾನ್ಫಿಡೆನ್ಸ್ ಬಿಲ್ಡಿಂಗ್ ಮೆಸರ್ಸ್’ ಎಲ್ಲ ನಿರೀಕ್ಷಿತ ಯಶಸ್ಸು ಕಾಣದೇ ಅದಕ್ಕೆ `ಮೋಸ್ಟ್ ಫೇವರ್ಡ್ ನೇಷನ್ ಸ್ಟೇಟಸ್’ ಕೊಡಲು ಸಾಧ್ಯವಾಗಿಲ್ಲ ಎಂದು ಸಂಸತ್ತಿನಲ್ಲಿ ವಿದೇಶಾಂಗ ಮಂತ್ರಿ ಹೇಳಿದಾಗ `ಹಂಗಂದ್ರೇನು, ಇನ್ನೊಮ್ಮೆ ಹೇಳಿ’ ಅಂತ ಯಾವುದಾದರೂ ಸದಸ್ಯರು ಕೇಳಿದ್ದು ನಿಮಗೆ ನೆನಪಿದೆಯಾ?
`ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಲು ರಾಜ್ಯ ನಕಾರ’ ಎಂದು ಹಗಲೆಲ್ಲಾ ಬರೆಯುವ ಪತ್ರಕರ್ತರಿಗೆ ಕಾವೇರಿ ನೀರು ಒಪ್ಪಂದ, ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪು, ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುತ್ತವೆಯೇ?
`ರಕ್ತ ಕೊಟ್ಟೇವು, ನೀರು ಕೊಡೆವು’ ಎಂದು ಹೇಳುವ ರೈತ ನಾಯಕರಿಗೆ ಒಂದು ಟೀಮ್ಮಿಸಿ ಎಂದರೆ ಎಷ್ಟು ಲೀಟರ್ ನೀರು, ಒಂದು ವೇಳೆ ತಲೈವಾರ್ ಕರುಣಾನಿಧಿ ಅವರು ನೀರು ಬೇಡ, ಅದೇನೋ ಕೊಡ್ತೇನಿ ಅಂದ್ರಲ್ಲಾ, ಅದನ್ನೇ ಕೊಡಿ ಎಂದರೆ ಎಷ್ಟು ರಕ್ತ ಕೊಡಬೇಕಾಗುತ್ತದೆ ಅಂತ ಗೊತ್ತೆ? ಹೋಗಲಿ, ಅವರಿಗೆ ಇದನ್ನೆಲ್ಲಾ ತಿಳಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಪೇಪರುಗಳು, ಚಾನ್ನೆಲ್ಲುಗಳ ಅನ್ಯಾಲಿಸ್ಟುಗಳಿಗಾದರೂ ಗೊತ್ತೆ?
ಇದೇನು ಹೊಸ ರೋಗವೇ? ಹಂಗೇನಿಲ್ಲ. ಸುದ್ದಿ ಎನ್ನುವುದನ್ನು ಮಾರಾಟದ ಸರಕನ್ನಾಗಿ ಮಾಡಿದ ವಿಶ್ವದ ಮೊದಲ ಯಶಸ್ವೀ ಮೀಡಿಯಾ ಬ್ಯಾರನ್ ಎನ್ನಿಸಿಕೊಂಡ ಲಾರ್ಡ್ ನಾರ್ಥಕ್ಲಿಫ್ 19ನೇ ಶತಮಾನದ ಬ್ರಿಟನ್ನಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬನಾಗಿದ್ದ. ಅಂದಿನ ಗುಣಮಾನಕ್ಕೆ ತಕ್ಕಂತೆ ಅವನು ಎರಡು ಮಾತು ಹೇಳಿದ.
1. “ತನಗೇ ತಿಳಿಯಲಾರದ ವಿಷಯಗಳನ್ನು ಇತರರಿಗೆ ತಿಳಿ ಹೇಳುವ ವೃತ್ತಿಗೆ ಪತ್ರಿಕೋದ್ಯಮ ಎಂದು ಹೆಸರು.”
2. “ಎಲ್ಲೊ ಒಂದು ಕಡೆ ಯಾರೋ ಒಬ್ಬರು ಯಾವುದೋ ಒಂದು ವಿಷಯವನ್ನು ಮುಚ್ಚಿ ಇಡಲಿಕ್ಕೆ ಪ್ರಯತ್ನ ನಡೆಸಿದ್ದರೆ ಅದು ಸುದ್ದಿ. ಉಳಿದಿದ್ದೆಲ್ಲ ಜಾಹೀರಾತು.”
ಅವನ ಮಾತುಗಳು ಇಂದಿಗೂ ನಿಜವೆನ್ನಿಸುತ್ತವೆ.
ಇದಕ್ಕೆ ಪರಿಹಾರವೇನು? ಈ ಅರೆತಿಳವಳಿಕೆ(ಅರವಳಿಕೆ?)ಯ ಜಂಗಲ್ಲಿನಲ್ಲಿ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಡಲು ಕೆಂಡಸಂಪಿಗೆಯ ಸ್ನೇಹಿತರು ಒಂದು ಸಣ್ಣ ಪ್ರಯತ್ನ ಮಾಡಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಅತೀವ ಆಸಕ್ತಿ ಇದ್ದವರು ಏನೂ ತಿಳಿಯದವರಿಗೆ ಸಣ್ಣ ಸಣ್ಣ ಕ್ಯಾಪ್ಸೂಲ್ ಗಳಲ್ಲಿ ತಿಳಿ ಹೇಳಲಿದ್ದಾರೆ.
ಹೊಸ ವಿಷಯಗಳ ಬಗ್ಗೆ ಕುತೂಹಲ ಕೆರಳುವಂತೆ, ಕಡಿಮೆ ಶಬ್ದಗಳಲ್ಲಿ ವಿವರಿಸಲಿದ್ದಾರೆ. ಇದರಲ್ಲಿ ನೀವೂ ಭಾಗವಹಿಸಬಹುದು. ನಿಮಗೆ ತಿಳಿದ ವಿಷಯಗಳ ಬಗ್ಗೆ, ನಿಮ್ಮ ಹಾಬಿಯ ಬಗ್ಗೆ, ನೀವು ಅತೀವ ಪ್ರೇಮದಿಂದ ಹುಡುಕಾಡಿ ಕಲೆ ಹಾಕಿರುವ ಮಾಹಿತಿಗಳ ಬಗ್ಗೆ, ಇತರರಿಗೆ ತಿಳಿಯುವಂತೆ ಸರಳವಾಗಿ, ಜೀವಂತಿಕೆಯಿಂದ ಹೇಳಿ.
ಬರಹಗಳು ಅಕಾಡೆಮಿಕ್ ಆಗಿರುವುದು ಬೇಡ. ಸೆಮಿನಾರ್ ಪೇಪರ್ ಗಳಂತೆ ಬೋರಿಂಗ್ ಆಗಿರಬೇಕಿಲ್ಲ. ವಿಕಿಪೀಡಿಯಾ ಎಂಟ್ರಿಗಳ ಥರ ಮಸಾಲೆ ರಹಿತವೂ ಆಗಬೇಕಾದ್ದಿಲ್ಲ.
ಇದಕ್ಕೆ ಇಂಥದ್ದೇ ಅಂತ ಫಾರ್ಮ್ಯಾಟ್ ಇಲ್ಲ. ಕತೆ-ದೃಷ್ಟಾಂತಗಳ ಮೂಲಕ, ಅಥವಾ ಪ್ರಶ್ನೆ-ಉತ್ತರ ರೂಪದಲ್ಲಿ, ಸ್ವಗತದ ರೂಪದಲ್ಲಿ, ವ್ಯಾಖ್ಯಾನದ ರೂಪದಲ್ಲಿ, ಅಥವಾ ಇನ್ನಾವುದೋ ರೂಪದಲ್ಲಿ ಇರಬಹುದು. ನಿಮಗೆ ಹೇಳಲು ಅನುಕೂಲವಾದದ್ದು ಇತರರಿಗೆ ಕೇಳಲು ಅನುಕೂಲ.
ಬೇಂದ್ರೆಯವರು ತಮ್ಮ ಕವನವೊಂದರಲ್ಲಿ ಹೊಸ ಹುಟ್ಟಿನ ಬಗ್ಗೆ ವಿವರಿಸಿದ್ದು ಹೀಗೆ.
`ಕುದುರಿಯವರು ಬಂದಾರವ್ವಾ
ಕುದುರಿಯವರು ಬಂದಾರ’
`ಉಸುರಿಗೊಂದು ಹೆಸರು ಕೊಟ್ಟು,
ಹೆಸರಿಗೊಂದು ಕುಸುರು ಕೊಟ್ಟು,
ಏನೇನೋ ಅಂದಾರವ್ವಾ,
ಏನೇನೋ ಅಂದಾರ,
ಕುದುರಿಯವರು ಬಂದಾರ’
ಇಲ್ಲಿ `ಕುದುರಿಯವರು’ ಎಂದರೆ ಕಲಾವಿದರು, ವಿಜ್ಞಾನಿಗಳು. `ಉಸಿರು’ ಎಂದರೆ ಜೀವನ, `ಹೆಸರು ಕೊಡುವುದು’ ಎಂದರೆ ವಿಷಯವೊಂದನ್ನು ಗುರುತಿಸಿ, ಹುಡುಕಿ ತೆಗೆದು, ತೊಳೆದು, ಇತರರಿಗೆ ತಿಳಿಯುವಂತೆ ಮಾಡುವುದು. `ಕುಸುರು ಕೊಡುವುದು’ ಎಂದರೆ ಅದನ್ನು ಚಂದ ಕಾಣುವಂತೆ ಮಾಡುವುದು. `ಏನೇನೋ ಅಂದಾರ’ ಎನ್ನುವುದು ಹೊಸ ವಿಷಯವೊಂದನ್ನು ತಿಳಿದ ಸಾದಾ ಮನುಷ್ಯನ ಬೆರಗು. ತಮಗೆ ಕಂಡದ್ದನ್ನು ಇತರರಿಗೆ ಖುಷಿಯಿಂದ ತೋರಿಸಲು ಇಷ್ಟು ಸಾಕಲ್ಲವೇ? ಬರೆದ ಮೇಲೆ ಯಾವ ಮುಲಾಜೂ ಇಲ್ಲದೆ ನಮ್ಮ ಎಡಿಟರ್ ಸಾಹೇಬರ editor@kendasampige.com360degree.com ಎಂಬ ಈಮೇಲ್ವಿಳಾಸಕ್ಕೆ ಕಳುಹಿಸುವಿರಾ ಗೆಳೆಯರೇ ಮತ್ತು ಗೆಳತಿಯರೇ…
ಮೂಲ ಊರು ಅಗಡಿ.ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅಗಡಿ, ಹಾನಗಲ್ಲು, ಪಣಜಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಗಳಲ್ಲಿ ಓದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್ ನ ನಂತರ ಈಗ ಕೆಲಸ ಮಾಡುತ್ತಿರುವುದು ಬೆಳಗಾವಿಯಲ್ಲಿ. ಓದಿದ್ದು ಆಂಗ್ಲ ಸಾಹಿತ್ಯ. ಜಾಹಿರಾತು ಕಂಪನಿಗಳಲ್ಲಿ ಕಾಪಿ ರೈಟಿಂಗ್ ಮಾಡಬೇಕೆಂದು ಹೊರಟವನು ಪತ್ರಕರ್ತ ನಾಗಿದ್ದು ಅಚಾನಕ್.