Advertisement
ಗೌರವ ಹೆಚ್ಚಿಸುವ ಬಟ್ಟೆ; ಚೆನ್ನಾಗಿಲ್ಲದಿರೆ ಆಗಬಹುದು ಬದುಕು ಮೂರಾಬಟ್ಟೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಗೌರವ ಹೆಚ್ಚಿಸುವ ಬಟ್ಟೆ; ಚೆನ್ನಾಗಿಲ್ಲದಿರೆ ಆಗಬಹುದು ಬದುಕು ಮೂರಾಬಟ್ಟೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮ ವ್ಯಕ್ತಿತ್ವ, ಗುಣ ಮುಖ್ಯವೇ ಹೊರತು, ಹೊರಗೆ ಧರಿಸಿರುವ ದಿರಿಸಲ್ಲ ಎಂದು ಹೇಳುವ ಮಾತು ಕೇವಲ ಹೇಳಲಿಕ್ಕೆ ಮಾತ್ರ ಚೆಂದ ಅಷ್ಟೇ. ಇಂದಿನ ಯುಗದಲ್ಲಿ ಬಾಹ್ಯ ಆಕರ್ಷಣೆಯೇ ಮುಖ್ಯ!! ಆಸ್ತಿಯಾಗಿ ಕಚ್ಚೆ ಹರಿವೆಯಷ್ಟು ಹೊಲ ಇಲ್ದಿದ್ರೂ ಒಳ್ಳೇ ಮನೆ, ಕಾರು ಇದ್ದರೆ ಸಂಬಂಧ ಮಾಡೋಕೆ ಜನರು ಬರ್ತಾರೆ!! ಇಲ್ದಿದ್ರೆ ಅವರ ಕಥೆ ಅಷ್ಟೇ!! ಆದರೂ ಬ್ರಿಟಿಷರಿಂದ ‘ಅರೆ ಬೆತ್ತಲೆ ಫಕೀರ’ ಎಂದು ಕರೆಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಹಾತ್ಮ ಗಾಂಧೀಜಿಯವರು ಧರಿಸುತ್ತಿದ್ದುದು ಸಾಮಾನ್ಯ ಅರೆಬರೆ ಉಡುಪನ್ನೇ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೊಂದನೆಯ ಕಂತು ನಿಮ್ಮ ಓದಿಗೆ

ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳೆಯಮ್ಮಾ…
ಬಟ್ಟೆ ನೋಡಿ ಬೆರಗಾಗಬೇಡ
ಬುದ್ಧಿ ನೋಡಿ ಕಲಿಯಮ್ಮಾ
ಮುಖ ಮುದುಡುವುದೂ ಬಟ್ಟೆ ಹರಿಯುವುದು
ಸತ್ಯ ಉಳಿಯುವುದು ಕೊನೆಗೆ….

ಈ ಹಾಡು ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ಬಸ್ಸಿನ ಸ್ಪೀಕರಿನಲ್ಲಿ ಜೋರಾಗಿ ಕೇಳುತ್ತಿತ್ತು. ನಾನು ಈ ಹಾಡನ್ನು ಕೇಳ್ತಾ ಕೇಳ್ತಾ ನನ್ನ ಜೀವನದಲ್ಲಿ ಘಟಿಸಿದ ಕೆಲವೊಂದು ಘಟನೆಗಳನ್ನು ಹಾಗೇ ಮೆಲುಕು ಹಾಕಿಕೊಂಡೆ. ಇದರಲ್ಲಿ ಬಟ್ಟೆ ಬಗ್ಗೆ ಹೇಳಿದ್ದು ಇಂದಿ‌ನ ಕಾಲಕ್ಕೆ ಸತ್ಯ ಎನಿಸಿತು. ಹಲವರು ಇಂದು ನಾವು ಹಾಕಿಕೊಂಡ ಬಟ್ಟೆ ಮೇಲೆ ನಮ್ಮನ್ನು ಅಳೆಯುತ್ತಾರೆ. ಬಟ್ಟೆಯ ವಿಷಯದಲ್ಲಿ ನಾನಂತೂ ಈ ಮಾತನ್ನು ಬಲವಾಗಿ ನಂಬುತ್ತೇನೆ. ನಾನು ಓದುವಾಗ ಪ್ರಾಥಮಿಕ ಶಾಲೆಯಲ್ಲಿ ವಾರವಿಡೀ ಸಮವಸ್ತ್ರ ಇದ್ದುದ್ದರಿಂದ ಇದರ ಬಗ್ಗೆ ಅಷ್ಟಾಗಿ ತಿಳಿಯಲಿಲ್ಲ. ಆದರೆ ಯಾವಾಗ ನಾನು ಪ್ರೌಢಶಾಲೆಗೆ ಹಾಸ್ಟೆಲ್ಲಿಗೆ ಸೇರಿದೆನೋ ಆಗ ನನಗೆ ಬಟ್ಟೆ ಚೆನ್ನಾಗಿ ಇಲ್ಲವೆಂದರೆ ನಮಗೆ ಯಾರೂ ಗೌರವ ಕೊಡೋದಿಲ್ಲವೆಂಬ ಮಾತು ಅನುಭವಕ್ಕೆ ಬಂತು. ನಮಗೆ ಶನಿವಾರ ಮಾತ್ರ ಸಮವಸ್ತ್ರ ಇರಲಿಲ್ಲ. ಆದರೆ ಶನಿವಾರವೂ ಹಾಕೋಕೆ ನನ್ನ ಬಳಿ ಇದ್ದದ್ದು ಒಂದೇ ಒಂದು ಪ್ಯಾಂಟು ಮಾತ್ರ!! ಅದೂ ನನ್ನ ದೊಡ್ಡಮ್ಮನ ಮಗ ಅವನಿಗೆ ಬಿಗಿಯಾಗುವುದೆಂದು ಅವನ ಸಮವಸ್ತ್ರದ ಕೆಂಪು ಪ್ಯಾಂಟನ್ನು ನನಗೆ ಕೊಟ್ಟದ್ದು! ಇದೇ ಪ್ಯಾಂಟು ನನಗೆ 3 ವರ್ಷ ಆಧಾರವಾಗಿತ್ತು! ಇದನ್ನೇ ಧರಿಸುವುದನ್ನು ನೋಡಿದ್ದ ನನ್ನ ಸೀನಿಯರ್ ಒಬ್ಬನು “ಬರೀ ಇದೊಂದೇ ಪ್ಯಾಂಟು ಹಾಕ್ತೀಯಲ್ಲಾ? ನಿನ್ನ ಬಳಿ ಬೇರೆ ಪ್ಯಾಂಟು ಇಲ್ಲವಾ?” ಎಂದು ವ್ಯಂಗ್ಯ ಮಾಡಿದ್ದ. ಮನಸ್ಸಿಗೆ ನೋವೆನಿಸಿದರೂ ನಾನು ತೋರ್ಪಡಿಸಿಕೊಳ್ಳದೇ ಸುಮ್ಮನಾಗಿದ್ದೆ.

ಪಿಯುಸಿಯಲ್ಲೂ ಸಹ ನಾನು ಬೆಂಗಳೂರಿಗೆ ಉಚಿತ ಹಾಸ್ಟೆಲ್ ಒಂದಕ್ಕೆ ಸೇರಿದಾಗ ನನ್ನ ಬಳಿ ಇದ್ದದ್ದು ಒಂದೇ ಪ್ಯಾಂಟು! ಇದೇ ಪ್ಯಾಂಟಿನಲ್ಲಿ ಮೊದಲನೇ ವರ್ಷದ ಪಿಯುಸಿ ಮುಗಿಸಿದ್ದೆ! ದ್ವಿತೀಯ ಪಿಯುಸಿಗೆ ಬಂದಾಗ ನನ್ನ ಕ್ಲಾಸ್ ಮೇಟ್ ನರೇಂದ್ರ (ವಯಸ್ಸಿನಲ್ಲಿ ನನಗಿಂತಲೂ ಸೀನಿಯರ್) ನನಗೆರಡು ಪ್ಯಾಂಟು ಕೊಟ್ಟಿದ್ದ. ಈ ಪ್ಯಾಂಟುಗಳೇ ನನಗೆ ಆಧಾರವಾಗಿದ್ದವು. ಶರ್ಟುಗಳೂ ಸಹ ಹೆಚ್ಚಿರಲಿಲ್ಲ. ಹಾಗೂ ಹೀಗೂ ಹೇಗೋ ಇವನ್ನೇ ಬಳಸಿಕೊಂಡು ವಿದ್ಯಾರ್ಥಿ ಜೀವನ ಸಾಗಿಸಿದ್ದೆ. ಒಮ್ಮೆ ದಾವಣಗೆರೆಯಲ್ಲಿ ನನ್ನ ಗೆಳೆಯ ಪ್ರಕಾಶ ಅವನ ಸಂಬಂಧಿಕರ ಮದುವೆಗೆ ಕರೆದಿದ್ದ. ನಾನು ಯಥಾ ಪ್ರಕಾರ ನನ್ನ ಬಳಿ ಇರುವ ಬಟ್ಟೆ ಹಾಕಿಕೊಂಡು ಮದುವೆಗೆ ಹೋಗಿದ್ದೆ. ಆದರೆ ನಾನು ಪ್ರಕಾಶನ ಜೊತೆಗೆ ಹೋಗಲಿಲ್ಲ. ಅವನು ಬೇರೆ ಕಡೆ ಇದ್ದಾನೆಂದು ತಿಳಿಸಿದ್ದಕ್ಕೆ ನಾನು ಒಬ್ಬನೇ ಹೋಗಿದ್ದೆ. ಆ ಮದುವೆ ಇದ್ದಿದ್ದು ದಾವಣಗೆರೆಯ ಪ್ರತಿಷ್ಟಿತ ಛತ್ರದಲ್ಲಿ. ನಾನು ಹೋದಾಗ ಅಲ್ಲಿಯ ‘ವಾಚ್ ಮ್ಯಾನ್’ ನನ್ನನ್ನು ಒಳಗಡೆ ಬಿಡಲಿಲ್ಲ. ಅಷ್ಟೇ ಅಲ್ಲದೇ ನನ್ನ ಬಗ್ಗೆ ಯಾರೋ ಸುಮ್ಮನೇ ಕರೆಯದೇ ಹೋದವನೇನೋ? ಇಂಥವರ ಮದುವೆಗೆ ಈ ರೀತಿಯ ಡ್ರೆಸ್ ಹಾಕಿಕೊಂಡು ಬರುವವರು ಇರುತ್ತಾರೇನೋ ಎಂಬ ಶಂಕೆಯಿಂದಾಗಿ ಅವನು ನನ್ನನ್ನು ಹೊರಗೆ ನಿಲ್ಲಿಸಿದ್ದ! ನನಗೆ ಆಗ ಅವಮಾನವಾದಂತಾಗಿ ಅಲ್ಲಿಂದ ವಾಪಸ್ಸು ಹೋಗಿಬಿಟ್ಟೆ. ಆಗ ಪ್ರಕಾಶ ಛತ್ರಕ್ಕೆ ಬಂದ ಮೇಲೆ ನಾನು ಬಾರದೇ ಇರುವುದನ್ನು ಗಮನಿಸಿ, ವಾಪಸ್ಸು ನನ್ನ ರೂಮಿಗೆ ಬಂದು ನನ್ನನ್ನು ಕರೆದುಕೊಂಡು ಹೋದ. ಈ ಘಟನೆಯನ್ನು ನಾನು ಯಾವತ್ತೂ ಮರೆಯೋಲ್ಲ. ಈಗ ನನಗೆ ಬಟ್ಟೆ ಕೊಳ್ಳುವ ಸಾಮರ್ಥ್ಯ ಇದೆ. ಸಿಕ್ಕ ಸಿಕ್ಕ ಬಟ್ಟೆಗಳನ್ನು ಖರೀದಿಸುತ್ತೇನೆ. ಒಳಮನಸ್ಸು ಕೊಳ್ಳುಬಾಕತನ ಬೇಡ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ನನಗೆ ಆಗಿದ್ದ ಅವಮಾನ ನನಗೆ ಬಟ್ಟೆ ಕೊಳ್ಳುವಂತೆ ಪ್ರೇರೇಪಿಸುತ್ತದೆ!!

ಈ ಬಟ್ಟೆಗೆ ಸಂಬಂಧಿಸಿದಂತೆ ‘ಈಶ್ವರ ಚಂದ್ರ ವಿದ್ಯಾಸಾಗರ’ ಇವರ ಜೀವನದ ಘಟನೆಯೊಂದನ್ನು ಹೇಳಬೇಕೆನಿಸುತ್ತದೆ. ಒಮ್ಮೆ ಈಶ್ವರಚಂದ್ರ ವಿದ್ಯಾಸಾಗರರವರು ಒಂದು ಸಮಾರಂಭಕ್ಕೆ ಹೋಗಿದ್ದರಂತೆ. ಅವರು ತುಂಬಾ ಸರಳ ಜೀವಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಸಿಂಪಲ್ ಆಗಿ ಹೋಗಿದ್ದರಂತೆ. ಆಗ ಅವರನ್ನು ಕಾರ್ಯಕ್ರಮದ ಒಳಗಡೆ ಬಿಡಲಿಲ್ಲವಂತೆ. ಆಗ ಅವರು ವಾಪಸ್ ಮನೆಗೆ ಬಂದು ಕೋಟೊಂದನ್ನು ಧರಿಸಿ ಹೋದರಂತೆ. ಆಗ ಅವರಿಗೆ ಒಳಗಡೆ ಹೋಗಲು ಪ್ರವೇಶ ಸಿಕ್ಕಿತಂತೆ!! ಅವರು ಊಟಕ್ಕೆ ಕುಳಿತಾಗ ಹಾಕಿದ ಊಟವನ್ನು ತಾವು ತಿನ್ನದೇ ತಮ್ಮ ಕೋಟಿಗೆ ತಿನ್ನಿಸುತ್ತಿದ್ದರಂತೆ!!! ಇದನ್ನು ನೋಡಿದ ಕೆಲವರು ಯಾಕ್ಹೀಗೆ? ಎಂದು ಪ್ರಶ್ನಿಸಿದಾಗ ಅವರು “ಈ ಕಾರ್ಯಮ್ರಮಕ್ಕೆ ಒಳಕ್ಕೆ ಬರಲು ನನಗೆ ಅವಕಾಶ ಸಿಗುವಂತೆ ಮಾಡಿದ್ದು ಈ ಕೋಟು. ಈ ಕೋಟಿನಿಂದಾಗಿಯೇ ನಾನು ಒಳಗೆ ಬಂದಿದ್ದೇನೆ. ಇಲ್ಲಿ ಪ್ರವೇಶ ಇರುವುದು ನಾನು ಧರಿಸಿರುವ ನನ್ನ ಕೋಟಿಗೇ ಹೊರತು ನನಗಲ್ಲ. ಅದಕ್ಕೆ ನಾನು ಈ ಕೋಟಿಗೆ ತಿನ್ನಿಸುತ್ತಿದ್ದೇನೆ” ಎಂದರಂತೆ!! ಆಗ ಕಾರ್ಯಕ್ರಮದ ಸಂಘಟಕರು ಕ್ಷಮೆ ಕೇಳಿದ್ದರಿಂದ ಅವರು ಸುಮ್ಮನಾದರಂತೆ.

ಈ ಮೇಲಿನ ಘಟನೆಗಳಿಂದ ನಾವು ತಿಳಿಯುವುದೇನೆಂದರೆ ನಮಗೆ ಬೆಲೆ ಸಿಗಲು ನಮ್ಮ ವ್ಯಕ್ತಿತ್ವ, ಗುಣ ಮುಖ್ಯವೇ ಹೊರತು, ಹೊರಗೆ ಧರಿಸಿರುವ ದಿರಿಸಲ್ಲ ಎಂದು ಹೇಳುವ ಮಾತು ಕೇವಲ ಹೇಳಲಿಕ್ಕೆ ಮಾತ್ರ ಚೆಂದ ಅಷ್ಟೇ. ಇಂದಿನ ಯುಗದಲ್ಲಿ ಬಾಹ್ಯ ಆಕರ್ಷಣೆಯೇ ಮುಖ್ಯ!! ಆಸ್ತಿಯಾಗಿ ಕಚ್ಚೆ ಹರಿವೆಯಷ್ಟು ಹೊಲ ಇಲ್ದಿದ್ರೂ ಒಳ್ಳೇ ಮನೆ, ಕಾರು ಇದ್ದರೆ ಸಂಬಂಧ ಮಾಡೋಕೆ ಜನರು ಬರ್ತಾರೆ!! ಇಲ್ದಿದ್ರೆ ಅವರ ಕಥೆ ಅಷ್ಟೇ!! ಆದರೂ ಬ್ರಿಟಿಷರಿಂದ ‘ಅರೆ ಬೆತ್ತಲೆ ಫಕೀರ’ಎಂದು ಕರೆಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಹಾತ್ಮ ಗಾಂಧೀಜಿಯವರು ಧರಿಸುತ್ತಿದ್ದುದು ಸಾಮಾನ್ಯ ಅರೆಬರೆ ಉಡುಪನ್ನೇ!! ಅವರು ಈ ರೀತಿ ಧರಿಸಲು‌ ಈ ಒಂದು ಪ್ರಸಂಗ ಕಾರಣವಾಯ್ತಂತೆ.

ಒಬ್ಬ ಮಹಿಳೆ ತಾನು ಧರಿಸಿದ್ದ ಸೀರೆಯ ಅರ್ಧ ಭಾಗ ತೊಳೆಯುತ್ತಾ ಇನ್ನರ್ಧ ಸೀರೆ ತೊಟ್ಟುಕೊಂಡಿದ್ದನ್ನು ನೋಡಿದ ಗಾಂಧೀಜಿ ಅವಳಿಗೆ ಪ್ರಶ್ನೆ ಮಾಡಲಾಗಿ ಅವಳು “ನನಗೆ ಉಡಲು ಇನ್ನೊಂದು ಸೀರೆಯಿಲ್ಲ” ಎಂದು ಹೇಳಿದ್ದನ್ನು ಕೇಳಿ ಅಂದಿನಿಂದ “ಬಡವರಿಗಿಲ್ಲದ ಬಟ್ಟೆ ನನಗೂ ಬೇಡ” ಎಂದು ಪೂರ್ಣವಾಗಿ ಬಟ್ಟೆ ತೊಡುವುದನ್ನೇ ಬಿಟ್ಟರಂತೆ ಎಂದು ಭಾಷಣದಲ್ಲಿ ಹೇಳಿದ್ದನ್ನು ಕೇಳಿ ನನಗೆ ಅವರ ಬಗ್ಗೆ ಅಭಿಮಾನವನ್ನು ಹೆಚ್ಚು ಮಾಡಿತ್ತು. ಇದೇ ರೀತಿ ನಾನು ಪ್ರೌಢಶಾಲೆ ಓದಿದ್ದ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳೂ ಸಹ ಕೇವಲ ಅರ್ಧ ತೋಳಿನ ಬಿಳಿ ಜುಬ್ಬಾ, ಒಂದು ಬಿಳಿ ಚಡ್ಡಿ ಮಾತ್ರ ಧರಿಸುತ್ತಿದ್ದರು. ಇವರ ಬಗ್ಗೆ ಭಾಷಣ ಮಾಡುತ್ತಿದ್ದ ನಮ್ಮ ಕನ್ನಡ ಮೇಷ್ಟ್ರಾಗಿದ್ದ ಹೆಚ್.ಎಸ್. ಪ್ರಭಾಕರ್ ಸರ್ ರವರು “ರಾಘವೇಂದ್ರ ಸ್ವಾಮಿಗಳು ಭಿಕ್ಷೆ ಬೇಡಿ ಕಟ್ಟಿದ ಆಶ್ರಮವಿದು. ಬಡವರ ಬಗ್ಗೆ ಕಾಳಜಿಯೇ ಅವರು ಅರ್ಧ ಬಟ್ಟೆ ಧರಿಸಲು ಕಾರಣ” ಎಂದು ಪರೋಕ್ಷವಾಗಿ ತಿಳಿಸುತ್ತಿದ್ದರು. ಇದನ್ನು ಕೇಳಿದ್ದ ನನಗೆ ರಾಘವೇಂದ್ರ ಸ್ವಾಮೀಜಿಯ ಬಗ್ಗೆ ಗೌರವವನ್ನು ಹೆಚ್ಚಿಸಿಕೊಳ್ಳಲು ಕಾರಣವಾಗಿತ್ತು. ಇಂದಿಗೂ ಆಶ್ರಮಕ್ಕೆ ಹೋದಾಗ ಅವರ ಸಮಾಧಿಯ ಬಳಿ ಹೋಗಿ ಬರುತ್ತೇನೆ.

ತೊಡುವ ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯುವುದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇತ್ತು ಎಂದು ಹೇಳುವ ಶ್ಲೋಕವೊಂದು ಈ ರೀತಿ ಇದೆ.

“ಕಿಂ ವಾಸಸೇತ್ಯತ್ರ ವಿಚಾರಣೀಯಂ
ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ |
ಪೀತಾಂಬರಂ ದೃಷ್ಟ್ವಾ ದದೌಸ್ವಕನ್ಯಾಂ
ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ||”
ಇದರರ್ಥ ಹೀಗಿದೆ: ನಿಜಕ್ಕೂ ಯೋಗ್ಯತೆಗೆ ವೇಷಭೂಷಣವೇ ಪ್ರಧಾನ. ಪೀತಾಂಬರವನ್ನು ಕಂಡರೆ ಕನ್ಯೆಯನ್ನು ಕೊಡುತ್ತಾರೆ. ಚರ್ಮಾಂಬರವನ್ನು ಕಂಡರೆ ವಿಷವನ್ನು ನೀಡುತ್ತಾರೆ. ಅಂದರೆ ತಿರಸ್ಕಾರ ಮಾಡುತ್ತಾರೆ!!

ಇದನ್ನೂ ಮೀರಿ ಹೆಚ್ಚೇನೂ ಆಡಂಬರದ ಬಟ್ಟೆಗಳಿಲ್ಲದೇ ತಮ್ಮ ವ್ಯಕ್ತಿತ್ವದಿಂದಲೇ ಜನರ ಮನಸ್ಸನ್ನು ಗೆದ್ದ ಅನೇಕ ಮಹನೀಯರಿದ್ದಾರೆ. ಅವರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಅಬ್ದುಲ್ ಕಲಾಮ್‌ರವರೂ ಸಹ ಹೌದು. ಅಬ್ದುಲ್ ಕಲಾಂ ರವರ ಬಳಿ ಇದ್ದಿದ್ದು ಕೆಲವೇ ಜೊತೆ ಬಟ್ಟೆಯಂತೆ!! ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗಲೂ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರಿಗೆ ಒಂದು ಪ್ರಮುಖ ಸಮಾರಂಭಕ್ಕೆ ಹೋಗಲು ಸರಿಯಾದ ಸೀರೆ ಇರಲಿಲ್ಲವಂತೆ. ಅವರು ಶಾಸ್ತ್ರೀಜಿಯವರ ಬಳಿ ಹೇಳಿದಾಗ ಅವರು “ಸಮರ್ಪಣಾ ಭಾವ ಮತ್ತು ಶುದ್ಧ ಹೃದಯವಿದ್ದರೆ ಸಾಕು, ಬಟ್ಟೆಗಳ ಆಡಂಬರ ಅಷ್ಟೊಂದು ಮುಖ್ಯವಲ್ಲ” ಎಂದು ಹೇಳಿ ತಮ್ಮಲ್ಲಿದ್ದ ಸೀರೆಯಲ್ಲಿಯೇ ಸಮಾರಂಭಕ್ಕೆ ಹೋಗುವಂತೆ ಮನವೊಲಿಸುತ್ತಾರಂತೆ!! ಇಂತಹ ಘಟನೆಗಳನ್ನೆಲ್ಲಾ ಓದಿದಾಗ ನಿಜಕ್ಕೂ ಅಚ್ಚರಿಯೆನಿಸುತ್ತದೆ.

ಇಂತಹ ಎಷ್ಟೇ ಘಟನೆಗಳನ್ನು ಮಕ್ಕಳಿಗೆ ಹೇಳಿದರೂ ನಮ್ಮ ಮಕ್ಕಳಿಗೆ ಈ ವಿಚಾರ ತಲೆಗೆ ಹೋಗುವುದಿಲ್ಲ. ಅವರು ಕೇಳಿದ ಬಟ್ಟೆಯನ್ನೇ ಕೊಡಿಸಬೇಕು. ಹುಟ್ಟಿದ ಹಬ್ಬ, ಶಾಲಾ ವಾರ್ಷಿಕೋತ್ಸವ, ಆಗಾಗ್ಗೆ ಬರುವ ಹಬ್ಬಗಳು, ಮನೆಯ ಸಮಾರಂಭಗಳು ಹೀಗೆ ವಿವಿಧ ಸಮಾರಂಭಗಳಿಗೆ ಹೊಸ ಹೊಸ ಬಟ್ಟೆಗಳು. ಒಂಚೂರು ಬಟ್ಟೆ ಹಳೆಯದು ಆದ್ರೂ ಸಾಕು ಅವನ್ನು ಎಸೆಯೋದೇ!! ಒಂಚೂರು ಹರಿದರೂ ಸಾಕು ಅವನ್ನು ಸೂಜಿ ಹಿಡಿದು ಹೊಲೆಯೋ ಮಾತೇ ಇಲ್ಲ. ಎಸೆಯೋದೇ!! ಆದರೆ ನಾವು ಚಿಕ್ಕವರಿದ್ದಾಗ ನಮ್ಮ ಚಡ್ಡಿ, ಜಾರುವ ಬಂಡಿ ಆಟ ಆಡಿದಾಗ, ಈ ಆಟ ಆಡಿ ಆಡಿ ಚಡ್ಡಿಯು ಪೃಷ್ಠದ ಮೇಲೆ ಸವೆದು ಹೋದರೂ ಅದರ ಮೇಲೆ ಮತ್ತೆ ಯಾವುದಾದರೂ ಬೇರೆ ಬಟ್ಟೆಯ ಚೂರನ್ನು ಹರಿದ ಭಾಗಕ್ಕೆ ಮುಚ್ಚುವಂತೆ ಹೊಲೆಯುತ್ತಿದ್ದರು. ಇದನ್ನೇ ನಾವು ಹಾಕಿಕೊಳ್ಳುತ್ತಿದ್ದೆವು. ಅಣ್ಣ ಅಥವಾ ಅಕ್ಕನಿಗೆ ತಂದ ಬಟ್ಟೆ ಅವರಿಗೆ ಬಿಗಿಯಾದರೆ ಅದನ್ನು ಅವರ ಕಿರಿಯವರು ಹಾಕಬೇಕಾಗಿತ್ತು. ಈಗಿನಂತೆ ಆಗ ನೋ ಬರ್ಥ್ ಡೇ ಪಾರ್ಟಿ…. ನಥಿಂಗ್!! ವರ್ಷಕ್ಕೊಂದು ಬರುವ ಯುಗಾದಿ ಹಬ್ಬಕ್ಕೋ ಅಥವಾ ದೀಪಾವಳಿ ಹಬ್ಬಕ್ಕೋ ಹೊಸ ಅಂಗಿ ತಂದರೆ ಮುಗೀತು. ಮತ್ತೆ ಹೊಸ ಬಟ್ಟೆ ಸಿಗುತ್ತಿದ್ದುದು ಮುಂದಿನ ವರ್ಷದ ಹಬ್ಬಕ್ಕೇ!!

ಆಗ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುವುದು ಬಡತನದ ಪ್ರತೀಕ ಎನಿಸುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಅಲ್ಲಲ್ಲಿ ಹರಿದ ಪ್ಯಾಂಟುಗಳನ್ನು ಧರಿಸುವುದು ಫ್ಯಾಷನ್ ಆಗಿದೆ!! ತುಂಡು ಬಟ್ಟೆ ತೊಡುವುದು ಸಿರಿವಂತಿಕೆಯ ಪ್ರದರ್ಶನವಾಗಿದೆ!!! ಪ್ರಾಚೀನ ಕಾಲದಲ್ಲಿ ಮಾನವ ಎಲೆಗಳನ್ನು ತುಂಡುಡುಗೆಯಾಗಿ ಬಳಸುತ್ತಿದ್ದನಂತೆ. ಈಗಲೂ ಮತ್ತೆ ಹಳೇ ಕಾಲ ಬರುತ್ತಿದೆ ಎನಿಸುತ್ತಿದೆ. ಆದರೆ ಎಲೆಗಳ ಬದಲು ಬಟ್ಟೆಗಳಿವೆ!!

ಅಪರಿಚಿತರು ನಮ್ಮ ಬಗ್ಗೆ ನಾವು ತೊಡುವ ಬಟ್ಟೆಗಳಿಂದಲೇ ಅಳೆಯುತ್ತಾರೆ. ಉದಾಹರಣೆಗೆ ಜುಬ್ಬಾ ತೊಟ್ಟರೆ ಲೇಖಕರೇನೋ ಅಥವಾ ಚಿತ್ರಕಾರನೋ ಎಂತಲೋ, ಖಾದಿ ಬಿಳಿ ಅಂಗಿ ಬಿಳಿ ಪ್ಯಾಂಟನ್ನು ಧರಿಸಿರಲು ರಾಜಕಾರಣಿಯೇನೋ ಎಂತಲೋ, ಅಳೆಯುತ್ತಾರೆ. ಹಳೇ ಬಟ್ಟೆ ಧರಿಸಿದಾಗ ಬಡವ ಎಂತಲೋ ಅಳೆಯುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ಅಂಗಿ, ಪಂಜೆ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಹೋದ ಹಳ್ಳಿಗನೊಬ್ಬನು ಒಂದು ಹೆಚ್ಚಿನ ಬೆಲೆಯ ವಾಹನ ಕೇಳಿದಾಗ ಅಂಗಡಿಯಾತ “ನಿಮ್ಮಂಥವರಿಗಲ್ಲ ಈ ವಾಹನ. ನಿಮ್ಮ ಬಳಿ ಇದನ್ನು ಕೊಳ್ಳಲು ಕ್ಯಾಷ್ ಇದೆಯಾ?” ಎಂದೆಲ್ಲಾ ಹೇಳಿ ಅವಹೇಳನ ಮಾಡಿದನಂತೆ! ಆಗ ಅವನು ಅಷ್ಟೂ ಹಣವನ್ನು ಕ್ಷಣಾರ್ಧದಲ್ಲಿ ಅವನ ಮುಂದೆ ಇಟ್ಟನಂತೆ!! ಆದ್ದರಿಂದ ನಾವು ಯಾರನ್ನೇ ಆಗಲೀ ಅವರನ್ನು ಹೊರನೋಟದಲ್ಲಿ ಅಳೆಯಬಾರದು. Don’t judge a book by its cover page ಎಂಬ ಮಾತನ್ನು ತಿಳಿಯಬೇಕು.

“ಮೈಮೇಲೆ ಹರಿದ ಬಟ್ಟೆಯಿದ್ದರೂ ಚಿಂತೆಯಿಲ್ಲ, ಕೈಲೊಂದು ಪುಸ್ತಕ ಇರಲಿ” ಎಂಬ ಮಾತು ಪುಸ್ತಕ ಪ್ರೀತಿಯ ಮಹತ್ವ ಸಾರುವ ಹೇಳಿಕೆಯಾಗಿದ್ದರೂ ಈಗಿನ ಖಾಸಗೀಕರಣದ ಜಮಾನದಲ್ಲಿ ಕೈಲೊಂದು ಪುಸ್ತಕದ ಜೊತೆ ಹಾಕುವ ಬಟ್ಟೆಯೂ ಚೆನ್ನಾಗಿರಬೇಕು. ಹೌದಲ್ವೇ??

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

2 Comments

  1. ಶಿವಪ್ರಕಾಶ್ ಶಿವಪುರ

    ತುಂಬಾ ಅದ್ಭುತವಾದ ಲೇಖನ ಗೌಡ್ರೆ ಬಟ್ಟೆ ಮತ್ತು ಬಂಗಾರ ಇವೆರಡೇ ಮನುಷ್ಯನ ದೊಡ್ಡ ಆಸ್ತಿ ಎನ್ನುವರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಇನ್ನು ಸುಧಾಮೂರ್ತಿ ನಿರ್ಮಲ ಸೀತಾರಾಮನ್ ಎಂತಹ ಆದುನಿಕ ಕಾಲದ ಮನುಷ್ಯರನ್ನು ನೋಡಿ ನಮ್ಮ ಜನ ಕಲಿಯುವುದು ಬಹಳ ಇದೆ ಅಲ್ವಾ ಏನಂತೀರಾ ಏನೋ ನನ್ನ ಅನಿಸಿಕೆಯನ್ನು ನಿಮ್ಮ ಜೊತೆಗೆ ಹಂಚಿಕೊಂಡಿದ್ದೆನೆ ಪ್ರತಿಕ್ರಿಯೆ ಇರಲಿ

    Reply
  2. ಸಿದ್ದಣ್ಣ. ಗದಗ.

    ಗುರುಗಳದ್ದು ಮನಮುಟ್ಟುವ ಜೀವನ ಕಥೆ. 🙏🙏

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ