ಇಲ್ಲಿನ ಸುತ್ತ ಎಲ್ಲೆಲ್ಲೂ ಅದೇ ಕಾಲ, ಕಾಲಕ್ಕೆ ತಕ್ಕ ಹಾಗೆ ವೇಷ, ವೇಷಕ್ಕೆ ಹೊಂದಿಕೊಂಡು ಪ್ರಕೃತಿಯ ಭಾಷೆ. ಯಾವ ದಿಕ್ಕಿನಿಂದ ಯಾವ ನೋಟದಿಂದ ಕಂಡರೂ ಇಲ್ಲೀಗ ಅಪ್ಪಟ ಅಸಲೀ ಚಳಿಗಾಲ. ಇಡೀ ಪ್ರಕೃತಿ ತನ್ನೊಳಗೆ ಮಾತಾಡುತ್ತ ಅಂತರ್ಮುಖಿಯಾದ ಹೊತ್ತು. ಮಾತೂ ಇದೆ ಮೌನವೂ ಇದೆ. ಎಲ್ಲವೂ ಒಳಗೊಳಗೇ. ಧ್ಯಾನವೋ ತಪಸ್ಸೋ ಅವಲೋಕನವೋ, ವಿರಾಗವೋ ಅಥವಾ ಇವೆಲ್ಲವೂ ಒಟ್ಟಾಗಿ ಮಾಡುವ ಸಮಾಲೋಚನೆಯೋ. ಅಥವಾ ಈ ಸವಕಲು ಶಬ್ದಗಳಿಗೆ ಸಿಗದ ಇನ್ನೇನೋ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್.

 

ಬ್ರಿಟನ್ನಿನಲ್ಲಿ ಈಗ ಚಳಿಯ ಮಧ್ಯಂತರ. ಮಧ್ಯ ಎಂದರೆ ಆಚೆ ಅರ್ಧ ಈಚೆ ಅರ್ಧ ಎಂದಾಗಬೇಕಿಲ್ಲ. ಆಯಾ ಸಿನೆಮಾಕ್ಕೆ ಅದರದರ ಮಧ್ಯಂತರ ಅಲ್ಲವೇ. ಒಂದೊಂದು ಊರಿನ ಚಳಿಗಾಲಕ್ಕೂ ಒಂದೊಂದು ವರ್ಷದ ಚಳಿಗಾಲಕ್ಕೂ ಅದರದರ ಮಧ್ಯಂತರ. ಇಲ್ಲಿನ ಚಳಿಗಾಲದಲ್ಲಿಯೂ ಈಗಿರುವ ಕಾಲಘಟ್ಟದಿಂದ ತುಸು ಹಿಂದೆ ತಿರುಗಿ ನೋಡಿದರೂ ಅಲ್ಲ ಸ್ವಲ್ಪ ಮುಂದೆ ಕಣ್ಣು ಹಾಯಿಸಿದರೂ ಕಾಣುವುದು ಅದೇ. ಅತ್ತ ಇತ್ತ ಸುತ್ತ ಮುತ್ತ ಚಳಿ. “ತಣ್ಣಗೆ, ಶೀತಲ, ಕುಳಿರ್” ಎಂಬ ಅದೇ ಅರ್ಥದ ಶಬ್ದಗಳು ಕೊಡುವ ಅನುಭೂತಿಯ ಮಗ್ಗಲುಗಳು.

ಆಂಗ್ಲರ ಮಹಾ ಒಣಸಂಪ್ರದಾಯಗಳ ಇಂಗ್ಲಿಷ್ ಭಾಷೆಯಲ್ಲಿ “ಚಿಲ್ಲಿ, ವಿಂಡಿ, ಸ್ನೋವಿ, ನಿಪ್ಪಿ, ಬೈಟಿಂಗ್, ಬ್ಯಾರೆನ್” ಎಂದು ಈಗಿನ ವಾತಾವರಣದ ಪ್ರತಿ ಸೂಕ್ಷ್ಮ ಸಂವೇದನೆಗಳಿಗೂ ಒಂದೊಂದು ಶಬ್ದ ಬರೆಸಿಕೊಳ್ಳುವ ಕರೆಸಿಕೊಳ್ಳುವ ಕಾಲ. ಕತ್ತಲೆಯ ಸಿನಿಮಾ ಮಂದಿರದಲ್ಲಿ ಅರ್ಧವೋ ಮುಕ್ಕಾಲೋ ಕತೆ ಮುಗಿದು “ಇಂಟರ್ಮಿಷನ್” ಹೊತ್ತಿಗೆ ನಾವೊಂದು ಅವಲೋಕನದೊಳಗೆ ಇಳಿಯುವಂತೆ ಈ ಚಳಿಗಾಲದ ನಡುವೆ ನಾವು. ಒಂದು ಸಿನೆಮಾ ಅಂದಾಜು ಇಷ್ಟುದ್ದ ಅಂತಿದ್ದರೂ ಕರಾರುವಕ್ಕಾಗಿ ಅದರ ಮುಕ್ತಾಯ ಗೊತ್ತಾಗುವುದು ಮುಕ್ತಾಯ ಆದ ಮೇಲೆಯೇ, “ದಿ ಎಂಡ್” ಬಂದ ಮೇಲೆಯೇ. ಈ ಚಳಿಗಾಲದ ಕೊನೆಯೂ ಮಾರ್ಚ್ ಮಧ್ಯಕ್ಕೋ ಏಪ್ರಿಲ್ ಶುರುವಿಗೋ ಮುಗಿದ ಮೇಲೆಯೇ ಗೊತ್ತಾಗುವುದು. ಇಲ್ಲಿಯ ತನಕದ ಏರಿಳಿತಗಳನ್ನು ಮೆಲುಕು ಹಾಕುತ್ತ , ಮುಂದೆ ಬರಲಿರುವ ಅಚಾನಕ್ ತಿರುವುಗಳ ಬಗ್ಗೆ ಕುತೂಹಲ ಕಾದಿರಿಸುತ್ತ ಇಲ್ಲಿನ ಚಳಿಗಾಲ ಇನ್ನೂ ಸಜೀವ ಜೀವಂತ.

ಇಲ್ಲಿಯವರೆಗೆ ಹವಾಮಾನ ಮೃದು ಇತ್ತು, ಕಡು ಚಳಿ ಇನ್ನಷ್ಟೇ ಬರಬೇಕು, ಕಳೆದ ವರ್ಷದ ಚಳಿಗಿಂತ ಈ ಸಲ “ಮೈಲ್ಡ್”, ಒಮ್ಮೆ ಹಿಮಪಾತ ಆಗಿದೆ ಇನ್ನೊಮ್ಮೆ ಇದಕ್ಕಿಂತ ಜೋರಾಗಿ ಆಗಬಹುದೇ? ಹೀಗೆ ಕಣ್ಣ ಮುಂದೆ ಈ ಕಾಲದ ಒಂದೊಂದೇ ಫ್ರೇಮ್ ಗಳು ತೇಲುತ್ತಿವೆ. ಚಳಿಗಾಲದ ಯಾವ ದಿನ ಹೇಗೆ ಏನು ಎಂಬುದು ರೋಚಕವೇ ಆದರೂ ಒಟ್ಟಾರೆ ಚಳಿಗಾಲ ಹೀಗೇ ಎಂದು ಇಲ್ಲಿ ಒಂದು ಚಳಿಗಾಲವನ್ನು ಕಳೆದವರಿಗೂ ಮೂವತ್ತು ಚಳಿಗಾಲ ಕಂಡವರಿಗೂ ಸಮಾನವಾಗಿಯೇ ಗೊತ್ತು. ಚಳಿಗಾಲ ಒಂದು ಹಿನ್ನಲೆಯ ಪರದೆಯಾದರೆ ಅದರ ಮುನ್ನಲೆಯ ಪಾತ್ರಧಾರಿಗಳಾದ ರಸ್ತೆ, ಗಿಡ, ಮರ, ಹುಲ್ಲು, ಹಕ್ಕಿ, ಜನ-ಜಂತುಗಳನ್ನು ನೋಡಿಯೇ ಇದು ಇಂತಹ ಕಾಲ ಅಂತಲೂ ಹೇಳಬಹುದು. ಈ ಕಾಲದ ವಾತಾವರಣದ ಪ್ರಭಾವವೇ ಎಲ್ಲರ ಮೇಲೂ ಎಲ್ಲವುಗಳ ಮೇಲೂ ಸ್ಪಷ್ಟ ನಿಚ್ಚಳ.

ಇಲ್ಲಿನ ಸುತ್ತ ಎಲ್ಲೆಲ್ಲೂ ಅದೇ ಕಾಲ, ಕಾಲಕ್ಕೆ ತಕ್ಕ ಹಾಗೆ ವೇಷ, ವೇಷಕ್ಕೆ ಹೊಂದಿಕೊಂಡು ಪ್ರಕೃತಿಯ ಭಾಷೆ. ಯಾವ ದಿಕ್ಕಿನಿಂದ ಯಾವ ನೋಟದಿಂದ ಕಂಡರೂ ಇಲ್ಲೀಗ ಅಪ್ಪಟ ಅಸಲೀ ಚಳಿಗಾಲ. ಇಡೀ ಪ್ರಕೃತಿ ತನ್ನೊಳಗೆ ಮಾತಾಡುತ್ತ ಅಂತರ್ಮುಖಿಯಾದ ಹೊತ್ತು. ಮಾತೂ ಇದೆ ಮೌನವೂ ಇದೆ. ಎಲ್ಲವೂ ಒಳಗೊಳಗೇ. ಧ್ಯಾನವೋ ತಪಸ್ಸೋ ಅವಲೋಕನವೋ, ವಿರಾಗವೋ ಅಥವಾ ಇವೆಲ್ಲವೂ ಒಟ್ಟಾಗಿ ಮಾಡುವ ಸಮಾಲೋಚನೆಯೋ. ಅಥವಾ ಈ ಸವಕಲು ಶಬ್ದಗಳಿಗೆ ಸಿಗದ ಇನ್ನೇನೋ. ಬಿಡಿ.

ಒಮ್ಮೆ ಹಿಮಪಾತ ಆಗಿದೆ ಇನ್ನೊಮ್ಮೆ ಇದಕ್ಕಿಂತ ಜೋರಾಗಿ ಆಗಬಹುದೇ? ಹೀಗೆ ಕಣ್ಣ ಮುಂದೆ ಈ ಕಾಲದ ಒಂದೊಂದೇ ಫ್ರೇಮ್ ಗಳು ತೇಲುತ್ತಿವೆ. ಚಳಿಗಾಲದ ಯಾವ ದಿನ ಹೇಗೆ ಏನು ಎಂಬುದು ರೋಚಕವೇ ಆದರೂ ಒಟ್ಟಾರೆ ಚಳಿಗಾಲ ಹೀಗೇ ಎಂದು ಇಲ್ಲಿ ಒಂದು ಚಳಿಗಾಲವನ್ನು ಕಳೆದವರಿಗೂ ಮೂವತ್ತು ಚಳಿಗಾಲ ಕಂಡವರಿಗೂ ಸಮಾನವಾಗಿಯೇ ಗೊತ್ತು.

ಇಂತಹ ಸಮಾಲೋಚನೆಯ ನಡುವೆಯೇ ಕೆಲ ಆಂಗ್ಲರಿಗೆ ತಮ್ಮ ಚಳಿಗಾಲದ ಮೇಲೆ ಪ್ರೀತಿ ಉಕ್ಕುವುದುಂಟು. ತಮ್ಮವು ಎನ್ನುವ ಎಲ್ಲದರ ಬಗ್ಗೆಯೂ ಸ್ಮರಣೆ ಪ್ರೀತಿ ವ್ಯಂಗ್ಯಗಳು ಒಟ್ಟೊಟ್ಟಾಗಿ ಕಾಣುವ ಆಂಗ್ಲರಿಗೆ ತಮ್ಮ ಚಳಿಗಾಲದ ಬಗೆಗೂ ಹೆಮ್ಮೆ ಕಾಡುತ್ತದೆ. ವರ್ಷವಿಡೀ ಹೆಚ್ಚು ಕಡಿಮೆ ಒಂದೇ ತರಹದ ಹವಾಮಾನ ಇದ್ದರೆ ಎಷ್ಟು “ಬೋರಿಂಗ್”, ಹೀಗೆ ಚಳಿ ಮಳೆ ಬಿಸಿ ಎಲ್ಲ “ಚೌ ಚೌ” ಆಗಿ ಬಡಿಸಿದರೆ ಬದುಕಿನ ಊಟದ ರುಚಿ ಚಪ್ಪರಿಸಬಹುದು ಎಂದು ಕೆಲ ಆಂಗ್ಲ ಮಿತ್ರರು ಆಧ್ಯಾತ್ಮಿಗಳಂತೆ ಮಾತಾಡುತ್ತಾರೆ. ಇಂತಹ ಹವಾಮಾನ, ಅದರ ವೈಪರೀತ್ಯಗಳು ಅದರೊಳಗಿನ ತಿರುವುಮುರುವುಗಳಲ್ಲೇ ಜೀವನ ಕಳೆಯುವವರಿಗೆ ಸೈದ್ಧಾಂತಿಕ ತಾತ್ವಿಕ ದರ್ಶನಗಳು ಬೇಗ ಆಗುತ್ತವೇನೋ. ಕೆಲವು ದೇಶಗಳಲ್ಲಿ ವರ್ಷದ ಹೆಚ್ಚಿನ ತಿಂಗಳುಗಳು ಉರಿ ಬಿಸಿ. ತಮ್ಮಲ್ಲಾದರೆ ಬಿಸಿ ಹೆಚ್ಚಿತು ಎಂದಾಗ ನಾಲ್ಕು ಹನಿ ತುಂತುರು. ಆಮೇಲೆ ಬೀಸುವ ತಂಪು ಗಾಳಿ. ಕಣ್ಣುಕುಕ್ಕುವ ಸೂರ್ಯನ ಬಿಸಿ ಏರುತ್ತಿದೆ ಎನ್ನುವಾಗ ಮತ್ತೆ ಚಳಿಯ ಆವಾಹನೆ. ಆ ಚಳಿಯೊಳಗೆ ಬದಲಾಗುವ ಬಣ್ಣಗಳು ಭಾವಗಳು, ಆಕಾಶದಿಂದ ಧರೆಗಿಳಿಯುವ ಹಿಮ ಪುಷ್ಪಗಳು.

ರಸ್ತೆ ಮನೆ ಮಾಡು ಎಲೆ ಕೊಂಬೆಗಳಿಗೆ ಹಿಮಶೃಂಗಾರದ ಸ್ಪರ್ಶ. ಪುನಃ ಚಳಿಯ ಪೊರೆ ಕಳಚಿ ಚಿಗುರು ಮಿಟ್ಟೆ ಮೊಗ್ಗುಗಳು ಬಲಿಯುವುದು ನಗುವುದು. ಇಲ್ಲಿನ ಹವಾಮಾನವನ್ನು ಮುದ್ದಿಸಿ ಕೊಂಗಾಟ ಮಾಡಲು ಇಲ್ಲದ ಸಬೂಬು ಹುಡುಕಿ ಹುಡುಕಿ ಅಥವಾ ನಮಗೆ ಕಾಣದ ತೋರಣ ಕಟ್ಟಿ ತೋರಿಸುತ್ತಾರೋ ಎನ್ನುವ ಗುಮಾನಿಯೂ ಬರುತ್ತದೆ. ಇವರ ತತ್ವ ದರ್ಶನಕ್ಕೆ ವಿರುದ್ಧವಾಗಿ ಜೋರು ಹಿಮ ಬಿದ್ದರೆ ಬ್ರಿಟನ್ ನ ಸಂಪರ್ಕ ವ್ಯವಸ್ಥೆ ಸ್ಥಬ್ದ ಆಗುತ್ತದೆ. ಕಚೇರಿಗೆ ಬರುವುದನ್ನು ತಪ್ಪಿಸಿಕೊಳ್ಳುವುದರಿಂದ ಹಿಡಿದು ವಿಮಾನ ನಿಲ್ದಾಣವನ್ನೇ ಮುಚ್ಚುವ ಅವಸರ ಎಲ್ಲ ಚಳಿಗಾಲದ ಹಿಮಪಾತದಲ್ಲೂ ಕಾಣುವಂತಹದ್ದು. ಅಮೆರಿಕ, ಕೆನಡಾ, ಜರ್ಮನಿಯ ದೈತ್ಯ ಹಿಮಗಾಲವನ್ನು ಕಂಡು ಇಲ್ಲಿಗೆ ಬಂದವರು ಬ್ರಿಟನ್ನಿನ “ಕ್ಷುಲ್ಲಕ” ಹಿಮಪಾತಕ್ಕೆ ಇವರು ಒದ್ದಾಡುವ ರೀತಿ ನೋಡಿ, ಇದು ಕಡು ಆಲಸಿಗಳ ದೇಶ ಎಂದು ಮೂದಲಿಸುವುದಿದೆ. ಹೀಗೆ ಆಲಸಿ ಜಡಜೀವಿ ಆಂಗ್ಲರು ನಡುವೆ ಚಳಿಗಾಲವೆಂದರೆ ಸುಮ್ಮನೆ ಮನೆಯಲ್ಲಿ ಕೂರದ ಆಂಗ್ಲರೂ ಸಿಗುತ್ತಾರೆ.

ಚಳಿಗಾಲದ ನಿಗ್ರಹಕ್ಕೆ ಒಂದಿಷ್ಟು ಆಟಗಳು, ಹವ್ಯಾಸಗಳೂ ಇವೆ ಅವರಿಗೆ. ಬೇಸಿಗೆಯಾದರೆ ಕ್ರಿಕೆಟ್, ಚಳಿಗಾಲವಾದರೆ ಫುಟ್ಬಾಲ್. ಬೇಸಿಗೆಯಾದರೆ ಸ್ವಲ್ಪ ಚಳಿ ಇರುವ ದೇಶಕ್ಕೆ ಹೋಗುವುದು, ಇನ್ನು ಹಿಮ ಸುರಿದರೆ ಮಕ್ಕಳು ಮರಿ ಅಪ್ಪ ಅಮ್ಮ ಅಜ್ಜ ಅಜ್ಜಿ ಹಿಂದೋಟದಲ್ಲೋ ಅಂಗಳದಲ್ಲೂ ಹಿಮಮಾನವನನ್ನು ಕೈಯಿಂದ ಮೆತ್ತಿ ಮುಟ್ಟಿ ತಯಾರಿಸುವುದು, ಹಿಮ ಚೆಂಡುಗಳನ್ನು ಮಾಡಿ ಎಸೆದು ಕೇಕೆ ಹಾಕುವುದು. ಚಳಿಯಾದರೆ ಬಿಸಿಲಿನ ಬೀಚ್ ಗಳು ಯಾವ ಸೀಮೆಯಲ್ಲಿದೆ ಅಂತ ಹುಡುಕುವುದು. ಇನ್ನು ಚಳಿ ಇರಲಿ ಮಳೆ ಇರಲಿ ಬಿಸಿಲಿರಲಿ ಪ್ರತಿ ವಾರಾಂತ್ಯಕ್ಕೂ ಹೊಸ ಹೊಸ ಜಾಗ ಕಾಡು ಬೆಟ್ಟ ದಿಣ್ಣೆ ಹುಡುಕಿ ಮೈಲುಗಟ್ಟಲೆ ಸೈಕಲ್ ತುಳಿಯುವವರೂ, ನಡೆಯುವವರೂ ಸಿಗುತ್ತಾರೆ. ಅಂತಹವರು ಬಿಸಿಲೆಂದರೆ ಹಿಗ್ಗದ ಚಳಿಯೆಂದರೆ ಕುಗ್ಗದ ಸ್ಥಿತಪ್ರಜ್ಞರು.

ಕೆಲ ಆಂಗ್ಲರಿಗೆ ತಮ್ಮ ಚಳಿಗಾಲದಲ್ಲಿ ಸಹಜವೋ ಅನಿವಾರ್ಯವೋ ಆದ ಪ್ರೀತಿ ಪ್ರೇಮಗಳೇ ಮೂಡಿದರೂ ಮತ್ತೆ ಕೆಲವರಿಗೆ ಅದೇ ಚಳಿಗಾಲದಲ್ಲಿ ಜಡತನ ಸೋಮಾರಿತನಗಳೇ ಮೈಮುತ್ತಿಕೊಂಡರೂ ಇಲ್ಲಿಗೆ “ಎಲ್ಲಿಂದಲೋ ಬಂದವರು” ಆದ ಎಷ್ಟೋ ಯೂರೋಪಿನ ಬೆಚ್ಚಗಿನ ದೇಶಗಳವರು, ದಕ್ಷಿಣ ಏಷಿಯಾದ ಸೆಖೆ ಪ್ರದೇಶದ ಜೀವರುಗಳು ಇಲ್ಲಿಗೆ ವಲಸೆಯಾದ ಮೇಲೆ ಇಂತಹ ಚಳಿಗಾಲವನ್ನು ಆಕ್ಷೇಪಿಸುವುದು ತಪ್ಪಿಸಲಾಗುವುದಿಲ್ಲ. ಕ್ರಿಸ್ಮಸ್ ಹಾಗು ಹೊಸ ವರ್ಷದ ಸಮಯ ದಕ್ಷಿಣ ಭಾರತದ ಮಟ್ಟಿಗೂ ಅಲ್ಲಲ್ಲಿನ ಚಳಿಗಾಲವೇ ಆದರೂ ಇಲ್ಲಿಂದ ಆ ಸಮಯಕ್ಕೆ ಅಲ್ಲಿ ಹೋಗಿ ರಜೆ ಕಳೆಯುವವರು ಇಲ್ಲಿನ ಚಳಿಯಿಂದ ತಪ್ಪಿಸಿಕೊಳ್ಳುವ ಖುಷಿಯಲ್ಲೇ ಹೋಗಿರುತ್ತಾರೆ. ಮತ್ತೆ ಜನವರಿಯಲ್ಲಿ ರಜೆ ಕಳೆದು ಮರಳಿಬಂದಾಗ ಎದುರಾಗುವ ಇಲ್ಲಿನ ವೈರುಧ್ಯದ ವಾತಾವರಣವನ್ನು ವಿಷಾದದಲ್ಲೇ ಸೇರಿಕೊಳ್ಳುತ್ತಾರೆ.

ಅಮೆರಿಕ, ಕೆನಡಾ, ಜರ್ಮನಿಯ ದೈತ್ಯ ಹಿಮಗಾಲವನ್ನು ಕಂಡು ಇಲ್ಲಿಗೆ ಬಂದವರು ಬ್ರಿಟನ್ನಿನ “ಕ್ಷುಲ್ಲಕ” ಹಿಮಪಾತಕ್ಕೆ ಇವರು ಒದ್ದಾಡುವ ರೀತಿ ನೋಡಿ, ಇದು ಕಡು ಆಲಸಿಗಳ ದೇಶ ಎಂದು ಮೂದಲಿಸುವುದಿದೆ. ಹೀಗೆ ಆಲಸಿ ಜಡಜೀವಿ ಆಂಗ್ಲರು ನಡುವೆ ಚಳಿಗಾಲವೆಂದರೆ ಸುಮ್ಮನೆ ಮನೆಯಲ್ಲಿ ಕೂರದ ಆಂಗ್ಲರೂ ಸಿಗುತ್ತಾರೆ.

ಬ್ರಿಟನ್ನಿನಲ್ಲಿ ದಕ್ಷಿಣದ ಇಂಗ್ಲೆಂಡ್ ನಿಂದ ಉತ್ತರದ ಸ್ಕಾಟ್ಲೆಂಡಿನಲ್ಲಿ ಕಡೆಗೆ ಸಾಗಿದಂತೆ ಚಳಿಯ ತೀವ್ರತೆ ಹಿಮಪಾತದ ಸಾಧ್ಯತೆ ಹೆಚ್ಚಾದರೂ ಅಲ್ಲೆಲ್ಲ ಇರುವ ವಲಸಿಗರಿಗೆ ಚಳಿ ಒಂದು ಆಪ್ಯಾಯಮಾನವಾದ ಕಾಲವಲ್ಲ. ಹಿಮಪಾತ ಮಾಮೂಲಿಯಲ್ಲದ ಬ್ರಿಟನ್ನಿನ ಭಾಗಗಳಲ್ಲಿ ಹಿಮಪಾತ ಆದರೆ ಆ ಸಮಕ್ಕೊಂದು ಉತ್ಸಾಹ ಉಕ್ಕಿದರೂ ವಾರಗಟ್ಟಲೆ ಹಿಮ ಬಿದ್ದರೆ ಸಂಭ್ರಮಿಸುವವರಿಗಿಂತ ಗೊಣಗುವವರೇ ಹೆಚ್ಚಾಗುತ್ತಾರೆ. ಮಕ್ಕಳಿಗೆ ಹಿಮದ ಚೆಂಡಾಟ ಖುಷಿ ಕೊಟ್ಟರೂ, ಹಿಮದ ಹಿನ್ನೆಲೆಯಲ್ಲಿ ಸ್ವಪ್ನಸುಂದರ ಭಾವಚಿತ್ರಗಳು ಸೆರೆಹಿಡಿಯಲ್ಪಟ್ಟರೂ ದೈನಿಕದ ಓಡಾಟಕ್ಕೆ ಇದು ಹೇಳಿಸಿದ್ದಲ್ಲ ಎಂದು ಆಕ್ಷೇಪಿಸುತ್ತಾರೆ. ಬೇಗ ಕತ್ತಲಾಗುವುದು, ಮನೆಯೊಳಗೇ ಯಾವಾಗಲೂ ಹೀಟರ್ ಬೇಕಾಗುವುದು, ಕಿಟಕಿಯ ಪರದೆ ಸರಿಸಿದಾಗಲೆಲ್ಲ ಹೊರಗೆ ನಿರ್ಜನ ರಸ್ತೆಯ ನಿರ್ಜೀವ ಆಕಾಶದ ಮಂದನೋಟ ಸಿಗುವುದು, ಹೊರಗೆ ಎಲ್ಲೇ ಹೋಗಬೇಕೆಂದರೂ ಹಲವು ಸುತ್ತು ಬಟ್ಟೆ ಕೋಟುಗಳು ಬೇಕಾಗುವುದು ಹೀಗೆ ಚಳಿಯ ಬಗ್ಗೆ ನಮ್ಮ ದೂರಿನ ಪಟ್ಟಿ ಉದ್ದ ಆಗುತ್ತದೆ. ಇನ್ನು ದಕ್ಷಿಣ ಭಾರತೀಯರ ಮನೆಗಳಲ್ಲಿ ಇಂತಹ ಚಳಿಗಾಲದಲ್ಲಿ ದೋಸೆ ಹಿಟ್ಟಿಗೆ ಹುಳಿ ತರಿಸುವುದು ಹೇಗೆ ಎನ್ನುವ ಗಂಭೀರ ಸಮಸ್ಯೆಯೂ ಉಧ್ಭವಿಸುತ್ತದೆ. ಜನ್ಮ ಜನ್ಮಾಂತರಗಳಿಂದ ಎಷ್ಟು ತಿಂದರೂ ಬೇಸರ ತರಿಸದ ದೋಸೆ ದೇಶ ವಿದೇಶಗಳಲ್ಲೂ ಬೆಳಗಿಗೂ ಸಂಜೆಗೂ ಆತ್ಮೀಯ ಬಂಧುವೇ.

ಭಾರತದಲ್ಲಿ ಇರುವಾಗ ಕಂದು ಬಣ್ಣದ ಗರಿ ಗರಿ ದೋಸೆ ಹೊಯ್ಯುತ್ತಿದ್ದ ಅನುಭವಸ್ಥ ಘಟಾನುಘಟಿ ಅಡಿಗೆಯ ಹೆಗ್ಗಳಿಕೆಯವರೂ ಇಲ್ಲಿನ ಚಳಿಗಾಲದಲ್ಲಿ ಎರೆದ ದೋಸೆ ಬಿಳಿ ಬಣ್ಣದ ಪೆಚ್ಚು ಮುದ್ರೆಯ ನಿರುತ್ಸಾಹದಲ್ಲಿ ಪ್ಲೇಟಿನಲ್ಲಿ ಮಲಗಿದ್ದರೂ ಆಯಿತು. ಇನ್ನು ಹೊಸ್ತಾಗಿ ಇಲ್ಲಿಗೆ ಬಂದವರು ದೋಸೆ ಹಿಟ್ಟು ಹೇಗೆ ಹುಳಿ ತರಿಸಬೇಕೆಂದು ತಾವು ಭೇಟಿ ಆಗುವ ಇನ್ನೊಂದು ಕುಟುಂಬದ ಜೊತೆಗೋ ಅಥವಾ ಸ್ನೇಹಿತರ ಜೊತೆಗೋ ವಿಚಾರಿಸುವುದಿದೆ. “ಎಲ್ಲರ ಮನೆಯ ದೋಸೆಯೂ ತೂತೆ” ಎನ್ನುವ ಖ್ಯಾತಿ ಅಪಖ್ಯಾತಿಯ ದೋಸೆ ಈ ದೇಶದಲ್ಲಿ ಕೆಲವೊಮ್ಮೆ ಒಬ್ಬೊಬ್ಬರ ಮನೆಯಲ್ಲಿ ಮಾತ್ರ ತೂತಾಗಿ ಒಬ್ಬೊಬ್ಬರ ಮನೆಯಲ್ಲಿ ಮಾತ್ರ ಕಂದು ಬಣಕ್ಕೆ ತಿರುಗಿ ಅಚ್ಚರಿ, ವಿಭ್ರಮೆ, ಅಸಮಾನತೆಗಳ ಅಲೆ ಹುಟ್ಟಿಸುವುದೂ ಇದೆ. ಸೋಶಿಯಲ್ ಮೀಡಿಯಾಗಳ ನವೀನ ಯುಗದಲ್ಲಿ ಹೇಳುವುದು ಕೇಳುವುದೂ ಸುಲಭವೇ ಆಗಿರುವಾಗ ಮೊನ್ನೆ ಕನ್ನಡಿಗರ ವಾಟ್ಸಪ್ಪ್ ಗುಂಪಿನಲ್ಲಿ ದೋಸೆ ಹಿಟ್ಟು ಹುಳಿ ತರಿಸುವ ವಿಧಾನಗಳ ಬಗ್ಗೆಯೇ ಚರ್ಚೆ, ಅನುಭವಕಥನ ನಡೆದಿತ್ತು.

ಹೊಸ್ತಾಗಿ ಬ್ರಿಟನ್ನಿಗೆ ಬಂದವರು ಅಥವಾ ಬ್ರಿಟನ್ನಿನಲ್ಲಿ ಊರು ಬದಲಿಸಿದವರು ಅಲ್ಲಲ್ಲಿನ ಆಯಾ ಚಳಿಗಾಲದಲ್ಲಿ ಹಿಟ್ಟು ಹುಳಿ ಬರಿಸುವ ರಮ್ಯಗಮ್ಯ ಗುಟ್ಟುಗಳನ್ನು ಕೇಳಿದ್ದರು. ಕೆಲವರು ಹಿಟ್ಟನ್ನು ಬೆಚ್ಚಗಿನ ಹೀಟರ್ ಹತ್ತಿರ ಒಂದೆರಡು ದಿನ ಇಡುವವರು. ಮತ್ತೆ ಕೆಲವರು ಹಿಟ್ಟಿನ ಪಾತ್ರೆಯನ್ನು ಮುಚ್ಚಿದ ಕೋಣೆಯ ಭದ್ರಕಾವಲಿನಲ್ಲಿ ಬಂಧಿಸುವವರು. ಇನ್ನು ಕೆಲವರು ಇದ್ಯಾವುದೂ ಬೇಡ ಕೈಯಿಂದ ಹಿಟ್ಟನ್ನು ಕಲಸಿದಾಗಿನ ಬಿಸಿ ಬೆವರು ಉಪ್ಪಿನಲ್ಲಿ ಹಿಟ್ಟು ಹುಳಿಯಾಗಿ ಎಂತೆಂತಹ ದೋಸೆಗಳು ಸೃಷ್ಟಿ ಆಗಿವೆ ಎಂದು ಹೇಳುವವರು. ಇನ್ನೊಬ್ಬರು ಅರ್ಧ ಹೆಚ್ಚಿದ ನೀರುಳ್ಳಿಯನ್ನು ಹಿಟ್ಟಿನ ಮೇಲಿಟ್ಟರೆ ಹಿಟ್ಟಿಗೆ ಜ್ವರ ಬಂದು ಹುಳಿಯಾದೀತು ಎನ್ನುವವರು.

(ಫೋಟೋ ಕೃಪೆ : ವಿಜಯ ಹೆಗಡೆ, ಬ್ರಿಸ್ಟಲ್)

ಕೆಲವರು ಅನುಭವದಿಂದಲೂ ಮತ್ತೆ ಕೆಲವರು ಪ್ರಯೋಗಗಳಿಂದಲೂ ಇನ್ನು ಕೆಲವರು ಪವಾಡದ ಮೇಲೆ ನಂಬಿಕೆ ಇಟ್ಟು ಈ ಚಳಿಗಾಲದಲ್ಲೂ ದೋಸೆ ಹಿಟ್ಟನ್ನು ಹುಳಿ ತರಿಸಿ ಬಿಸಿಬಿಸಿ ದೋಸೆ ತಿನ್ನುತ್ತಿದ್ದಾರೆ. ಇಂತಹ ಚರ್ಚೆಯ ಕೇಂದ್ರಭಾಗವಾದ ದೋಸೆ ಹಿಟ್ಟು, ತಾನೂ ಈ ಬ್ರಿಟನ್ನಿನ ಚಳಿಗಾಲದ ನಡುವೆ ಚಿಂತಕರ ಗಹನ ವಾದವಿವಾದಗಳ ಆಹಾರವಿಜ್ಞಾನದ ಪ್ರಯೋಗ ಪರೀಕ್ಷೆಗಳ ವಸ್ತುವಾದೆನಲ್ಲ ಎನ್ನುವ ಧನ್ಯತೆಯಲ್ಲಿದೆ. ಚಳಿಗಾಲದ ನಡುವಿನ ಯೋಚನೆ ಸಮಾಲೋಚನೆಗಳಲ್ಲಿ ತಾನೂ ಸೇರಿ ಹೋಗಿದೆ.


ಚಳಿಗಾಲದ ಮಧ್ಯಂತರದಲ್ಲಿ ಚಳಿಗಾಲದ ಒಳಗಿನ ಹೊರಗಿನ ಹಿಂದಿನ ಮುಂದಿನ, ಗಂಭೀರ ಕ್ಷುಲ್ಲಕ, ಘನ ಲಘು, ವಿಷಯಗಳು ವಸ್ತುಗಳು ಜೊತೆಯಾಗುತ್ತಿವೆ, ಕೂಡಿ ಲಹರಿಯಾಗಿ ಹರಿಯುತ್ತಿವೆ. ಇಷ್ಟು ಕಳೆದರೂ ಇನ್ನಷ್ಟಿದೆ. ಇನ್ನೆಷ್ಟಿದೆ ತಿಳಿಯುವುದು ಮಧ್ಯಂತರದಲ್ಲಲ್ಲ, ಮುಗಿದ ಮೇಲೆಯೇ .