ಸೀನರಿ ಅಂದರೆ ನಮ್ಮ ಚಿತ್ರವನ್ನು ಇನ್ನೊಮ್ಮೆ ನೋಡುವ ಸೀನ್ ಇರುತ್ತಲೇ ಇರಲಿಲ್ಲ. ಅದೇ ಸೊರಗಿದ ಮರಗಿಡಬಳ್ಳಿ, ಕೊರಕಲು ನದಿ, ಒಂಟಿ ಕಿಟಕಿಯ ಮನೆ, ರೆಕ್ಕೆ ಸುಟ್ಟಂಥ ಹಕ್ಕಿ, ಸೊಟ್ಟ ರಸ್ತೆ ಹೀಗೆ ಒಂದೇ ಎರಡೇ…. ಸ್ಪುರದ್ರೂಪಿ ಮನುಷ್ಯ ಎಂದೂ ನಮ್ಮಿಂದ ರೂಪುಗೊಳ್ಳಲೇ ಇಲ್ಲ ಬಿಡಿ…. ಅಂತೂ ಚಿತ್ರ -ವಿಚಿತ್ರ ಚಿತ್ರಗಳನ್ನು ಬಿಡಿಸುತ್ತಲೇ ಇದ್ದ ನಮಗೆ ಅನಿವಾರ್ಯವಾಗುತ್ತಿದ್ದುದು ಸೈನ್ಸಿನ ಗಿಡದ ಚಿತ್ರಬಿಡಿಸಿ ಭಾಗಗಳನ್ನು ಗುರುತಿಸಿ ಮತ್ತು ಸೋಷಿಯಲ್ ಸೈನ್ಸಿನ ಭಾರತ ಭೂಪಟ ಬಿಡಿಸಿ ಸ್ಥಳ ಗುರುತಿಸಿ ಎನ್ನುವ ಪ್ರಶ್ನೆ. ಸೈನ್ಸಿನ ಪ್ರಶ್ನೆಯನ್ನು ಎದುರಿಸಿ ಮಾರ್ಕ್ಸ್ ತೆಗೆಯುತ್ತಿದ್ದೆವಾದರೂ ಬೇರು, ಕಾಂಡ, ಎಲೆಗಳು ಕೆಂಪು ಇಂಕಿನಲ್ಲಿ ತಿದ್ದುಪಡಿಯಾಗುತ್ತಿದ್ದವು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೇಳನೆಯ ಬರಹ ನಿಮ್ಮ ಓದಿಗೆ
ಚಿತ್ರಹಿಂಸೆ ‘ಸಹಿಸೋಕ್ಕಾಗಲ್ಲ’, ‘ನೋಡೋಕ್ಕಾಗಲ್ಲ’, ‘ಅಳಿಸೋಕ್ಕಾಗಲ್ಲ’, ‘ತಿದ್ದೋಕ್ಕಾಗಲ್ಲ’ ಅನ್ನುವ ನನ್ನಳಲು ಬಹಳ ಹಳೆಯದು. ಇಂಥ ಕಾಲದಲ್ಲೂ ಹಿಂಸೆಯ ಮಾತೇಕೆ? ಎನ್ನದಿರಿ….! ಇದೊಂಥರಾ ಮಾನಸಿಕ ಹಿಂಸೆ. ಒಳ್ಳೆಯ ಚಿತ್ರ ಬಿಡಿಸಿಲ್ಲ ಎನ್ನುವುದೆ ಅಪಮಾನದ ಸೆರೆ… ಗೆರೆಗೆ ಗೆರೆ ಎಳೆದು, ಕೂಡಿಸಿ, ಬಾಗಿಸಿ, ಬಳುಕಿಸಿ ಅದಕ್ಕೊಂದು ಆಕಾರವನ್ನು ಕೆಲವರು ಹೇಗೆ ಕೊಡುತ್ತಾರೆ ಅಲ್ವ! ಅದೊಂದು ಕಲೆಯೇ… ಆದರೆ ನಮಗೆಲ್ಲಿಂದ ಚಿತ್ರ ಬಿಡಿಸುವ ಕಲೆ? ಬಿಡಿಸಿದ್ದು ಚೆನ್ನಾಗಾಗಿಲ್ಲ ಎನ್ನುತ್ತಲೆ ಬಿಳಿಹಾಳೆಯನ್ನು ಅಳಿಸಿ… ಅಳಿಸಿ….. ಕಪ್ಪಗೆ ಮಾಡುತ್ತಿದ್ದೆವು. ಪ್ರೈಮರಿ ಶಾಲೆಯಲ್ಲಿ ಚಿತ್ರಕಲೆ ಎನ್ನುವ ಪಿರಿಯಡ್ ಇರುತ್ತಿತ್ತಲ್ಲ. ಆದರೆ ನಮ್ಮ ಪಾಲಿಗೆ ಚಿತ್ರವೆಲ್ಲ ಕೊಳೆ! ಕೊಳೆ! ಕೊಳೆ! ಎಂದಿಗೂ ಅಚ್ಚಿನ ಮನೆಗೆ ಹೋಗಿಲ್ಲ. ಆದರೆ ಅದರ ಅಚ್ಚು ಅದರ ಮುಂದಿನ ಹಾಳೆಗಳಿಗೆ ಖಾಯಂ ಆಗಿರುತ್ತಿತ್ತು!
ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ಈಗಿನಂತೆ ವ್ಯಾಕ್ಸ್ ಕ್ರೆಯಾನ್ಸ್ ಇರಲಿಲ್ಲ. ಆರು ಬಣ್ಣದ ಇಲ್ಲವೆ ಹನ್ನೆರಡು ಬಣ್ಣದ ಕಲರ್ ಪೆನ್ಸಿಲ್‌ಗಳು ಯಾರಾದರೂ ಮರೆತು ಬಂದಿದ್ದಿದ್ದರೆ ಅವುಗಳೆ ಎಲ್ಲಾ ಬೆಂಚುಗಳಿಗೂ ಹಾರು ಬಣ್ಣಗಳೇ ಆಗುತ್ತಿದ್ದವು. ಮೊದಲಿಗೆ ಅಗಣಿತ ಕಿರಣಗಳ ಸೂರ್ಯನಿಗೆ ನಮ್ಮ ಬೆರಳೆಣಿಕೆಯ ಕಿರಣಗಳ ಚಿತ್ರ ಅಹಹಾ! ಅವನೇನೂ ಬೆಳಗುವ ಸೂರ್ಯನಾಗಿರುತ್ತಿರಲಿಲ್ಲ! ಬಣ್ಣ ಬದಲಿ ಸಲಾರದವನಾಗಿದ್ದನು. ನಾವೆ ಹೊಸದಾಗಿ ಬಣ್ಣ ಹಚ್ಚಿ ಪ್ರತಿ ಸೂರ್ಯನನ್ನು ಬಿಡಿಸಬೇಕಿತ್ತು. ಮುಂದಿನ ಸರದಿ ಮಾವಿನ ಹಣ್ಣು. ಇನ್ನಿಲ್ಲದ ಹಾಗೆ ಸೊಟ್ಟಗಿರುತ್ತಿದ್ದ ಆ ಹಣ್ಣು ಎಂದಿಗೂ ಸಿಹಿ ಅನ್ನಿಸುತ್ತಿರಲಿಲ್ಲ. ಹುಳಿಯೇ ಹುಳಿ…. ಸಹಪಾಠಿಗಳಿಗೆ ನಾವು ನೋಟ್ಸ್ ಬೇಕಾದರೂ ತೋರಿಸುತ್ತಿದ್ದೆವು. ಆದರೆ ಚಿತ್ರಗಳನ್ನಲ್ಲ. ಮೇಜಿನ ಎದಿರು ಕುಳಿತ ಚಿತ್ರಕಲಾ ಟೀಚರ್‌ಗೆ ನಮ್ಮ ಸೂರ್ಯನನ್ನು, ಆ ಹುಳಿ ಮಾವಿನ ಹಣ್ಣುಗಳನ್ನು ನೋಡಿ ಹೃದಯಾಘಾತವಲ್ಲ ಚಿತ್ರಾಘಾತವಾಗುತ್ತಿತ್ತು. ಆ ಆಘಾತದಲ್ಲೂ ‘ಸಿ’ ಗ್ರೇಡ್ ಮಾನ್ಯತೆ ಸಿಕ್ಕರೆ ನಾವೆ ಪುಣ್ಯವಂತರು. ಒಂದು ವೇಳೆ ಎಲ್ಲರಿಗೂ ತೋರಿಸಿಬಿಟ್ಟರೆ, ‘ಡಿ’ ಗ್ರೇಡ್ ಸುತ್ತಿಬಿಟ್ಟರೆ… ವಾಪಾಸ್ ಬೆಂಚಿಗೆ ಬಂದಾಗ ತಮಿಳಿನ ಗೆಳತಿ ನಮ್ಮ ವಿಚಿತ್ರ ಮೋರೆ ನೋಡಿ ‘ಎಂದಡೀ………’ ಎಂದರೆ ‘ಚಿತ್ರಹಿಂಸೆ……….’ ಚಿತ್ರದ ಹಿಂಸೆ’ ಆಗುತ್ತಿತ್ತು.
ಸೀನರಿ ಅಂದರೆ ನಮ್ಮ ಚಿತ್ರವನ್ನು ಇನ್ನೊಮ್ಮೆ ನೋಡುವ ಸೀನ್ ಇರುತ್ತಲೇ ಇರಲಿಲ್ಲ. ಅದೇ ಸೊರಗಿದ ಮರಗಿಡಬಳ್ಳಿ, ಕೊರಕಲು ನದಿ, ಒಂಟಿ ಕಿಟಕಿಯ ಮನೆ, ರೆಕ್ಕೆ ಸುಟ್ಟಂಥ ಹಕ್ಕಿ, ಸೊಟ್ಟ ರಸ್ತೆ ಹೀಗೆ ಒಂದೇ ಎರಡೇ…. ಸ್ಪುರದ್ರೂಪಿ ಮನುಷ್ಯ ಎಂದೂ ನಮ್ಮಿಂದ ರೂಪುಗೊಳ್ಳಲೇ ಇಲ್ಲ ಬಿಡಿ…. ಅಂತೂ ಚಿತ್ರ -ವಿಚಿತ್ರ ಚಿತ್ರಗಳನ್ನು ಬಿಡಿಸುತ್ತಲೇ ಇದ್ದ ನಮಗೆ ಅನಿವಾರ್ಯವಾಗುತ್ತಿದ್ದುದು ಸೈನ್ಸಿನ ಗಿಡದ ಚಿತ್ರಬಿಡಿಸಿ ಭಾಗಗಳನ್ನು ಗುರುತಿಸಿ ಮತ್ತು ಸೋಷಿಯಲ್ ಸೈನ್ಸಿನ ಭಾರತ ಭೂಪಟ ಬಿಡಿಸಿ ಸ್ಥಳ ಗುರುತಿಸಿ ಎನ್ನುವ ಪ್ರಶ್ನೆ. ಸೈನ್ಸಿನ ಪ್ರಶ್ನೆಯನ್ನು ಎದುರಿಸಿ ಮಾರ್ಕ್ಸ್ ತೆಗೆಯುತ್ತಿದ್ದೆವಾದರೂ ಬೇರು, ಕಾಂಡ, ಎಲೆಗಳು ಕೆಂಪು ಇಂಕಿನಲ್ಲಿ ತಿದ್ದುಪಡಿಯಾಗುತ್ತಿದ್ದವು. ಆದರೆ ನಮ್ಮ ಭಾರತವನ್ನು ಯಾವ ಭೂಪಟದಲ್ಲೂ… ಗ್ಲೋಬಿನಲ್ಲೂ ಹುಡುಕಲಾಗುತ್ತಿರಲಿಲ್ಲ. ನಮ್ಮ ಟೀಚರಂತು ಇದೇನೂ ಕ್ಯಾರೆಟ್ಟ… ಮತ್ತೊಂದು ಎನ್ನುವ ಸಂಶಯದ ಸುಳಿಗೆ ಸಿಲುಕಬಾರದು ಎಂಬ ಮುಂಜಾಗ್ರತೆಯಿಂದ ಕನ್ನಡದಲ್ಲೂ ಇಂಗ್ಲೀಷಿನಲ್ಲೂ ‘ಭಾರತ’ ‘INDIA’ ಎಂದು ಬರೆಯುತ್ತಿದ್ದೆವು. ಅವರೋ ‘ಚಿತ್ರಹಿಂಸೆ’ ತಾಳಲಾರದೆ ಅಂಕಗಳನ್ನು ಕೊಡುತ್ತಿದ್ದರು.
ಪ್ರೌಢ ಶಾಲೆಗೆ ಬಂದ ನಂತರ ‘ಚಿತ್ರಹಿಂಸೆ’ ಹೋಗಿ ‘ಡಯಾಗ್ರಾಮ್ ಹಿಂಸೆ’ ಶುರುವಾಯಿತು. ಬೀಕರು, ಗ್ಲಾಸ್ ಎಲ್ಲ ಸರಿ ಆದರೆ ಅದನ್ನು ಹಿಡಿಯುವ ಕೈ ಎಷ್ಟೇ ಪ್ರಯತ್ನ ಪಟ್ಡರೂ ಕೈ ಆಕೃತಿ ಅಲ್ಲ ಅಲ್ಲ ವಿಕೃತಿ ಪಡೆಯುತ್ತಿತ್ತು. ಇನ್ನು ಬಯಾಲಜಿ ಎರೆಹುಳ, ದಾಸವಾಳ, ಅಮಿಬಾ ಓ.ಕೆ, ಕಪ್ಪೆ, ಮೀನಿನ ಚಿತ್ರ ಏಕೆ ಅನ್ನಿಸುತ್ತಿತ್ತು. ಇನ್ನು ರಿಪ್ರೊಡಕ್ಟಿವ್ ಸಿಸ್ಟಮ್ ಚಿತ್ರಗಳಂತೂ ಮೈಕ್ರೋಸ್ಕೋಪ್‌ಗಳಲ್ಲಿ ನೋಡಬೇಕಾದವು. ಬರಿಗಣ್ಣಲ್ಲಿ ಬಹಳ ದೂರದಿಂದಲೇ ಕಾಣುತ್ತಿದ್ದವು. ಮುಂದಿನ ಸರದಿ ಕಾಲೇಜು ತಾನೆ….. ಕಾಲೇಜಿನಲ್ಲಿ ವಿಜ್ಞಾನ ಓದದಿದ್ದರೆ ಚಿತ್ರಹಿಂಸೆಯ ಮಾತೆಲ್ಲಿ. ಪುಸ್ತಕದ ರ್ಯಾಪರಿನ ಚಿತ್ರಗಳಿಗೋ ನ್ಯೂಸ್ ಪೇಪರಿನ ಚಿತ್ರಗಳಿಗೋ, ಕ್ಯಾಲೆಂಡರಿನ ಚಿತ್ರಗಳಿಗೆ ಹಿಂಸೆ ಕೊಡುವುದು ಕನ್ನಡ ಇಲ್ಲದವರಿಗೆ ಕನ್ನಡಕ, ಕೋಲು ಹಿಡಿದಿಲ್ಲವಾದರೆ ಕೋಲು, ಗಂಡಸರಿಗೆಲ್ಲಾ ಆಭರಣ ತೊಡಿಸುವುದು, ನಾಮ ಬಳಿಯುವುದು, ಹೆಂಗಸರ ಚಿತ್ರಕ್ಕೆ ಗಡ್ಡ ಮೀಸೆ ಬರೆಯುವುದು ಇವೂ ಹಿಂಸೆಯೇ ಅಲ್ವೆ! ಯಾವ ಬೆಂಚುಗಳೂ ಖಾಲಿ ಇಲ್ಲ. ಎಲ್ಲಾ ಅಳಿಸಲಾಗದಂಥ ಕಲಾಕೃತಿಗಳೇ ಸರಿ. ಮುಂದಿನ ವರ್ಷ ಹೊಸದಾಗಿ ಆ ತರಗತಿಗೆ ಬರುವ ವಿದ್ಯಾರ್ಥಿ ಮಿತ್ರರು ಹಿಂಸೆ ತಾಳಲಾರದೆ ಇನ್ನಷ್ಟು ಸೇರಿಸಿ ಪ್ರತಿ ಹಿಂಸೆ ನೀಡಿದರೆ, ಇನ್ವಿಜಿಲೇಟರ್ಸ್‌ಗೆ ಹಿಂಸೆಯೇ ಹಿಂಸೆ.. ಇಂದಿನ ಸ್ಮಾರ್ಟ್ ಯುಗದಲ್ಲಿ ಎಳೆವೆಯಿಂದಲೆ ಚಿತ್ರಕಲೆಗೆ ಪ್ರೋತ್ಸಾಹ ದೊರಕುತ್ತಿದೆ. ಸೂಕ್ತ ಮಾರ್ಗದರ್ಶನವಿದೆ. ಹಾಗಾಗಿ ಯಾರೂ ಹಿಂಸೆ ಪಡುವಂಥ ಚಿತ್ರಗಳನ್ನು ಬರೆಯಲಾರರು… ಹಾಗಾಗಿ ಚಿತ್ರ ಹಿಂಸೆ ನೀಡಲಾರರು. ಇಂಥ ಚಿತ್ರ ಹಿಂಸೆ ನೀವೂ ಅನುಭವಿಸಿದ್ದರೆ ನಾವೆಲ್ಲ ಒಂದೇ…… ಒಂದೇ… ಒಂದೇ……
ಒಂದೇ ಒಂದೇ ಎನ್ನುವಾಗ ನಮ್ಮ ಹೆಡ್ಡ ಕುಕ್ ಇಲ್ಲ ಕ್ಷಮಿಸಿ ಹೆಡ್ ಕುಕ್ ಅಮೃತಾ ನೆನಪಾಗುತ್ತಾಳೆ. ಒಂದೇ ತರಗತಿಯವರು ಎನ್ನುತ್ತಾ ಒಂದೇ ರೂಮಿಗೆ ಸೇರಿಕೊಂಡ ಗೆಳತಿಯರು ಅಡುಗೆ ಜವಾಬ್ದಾರಿಯನ್ನು ಅಮೃತಾಗೆ ಕೊಟ್ಟರು. ಅವಳು ಬರುತ್ತಲೇ ನೋಡಿ…. ಏನ್ರೆ…. ರೂಂ ಇಷ್ಟು ಹರಡಿಕೊಂಡಿದೆ…..? ಮೂರು ಕೋತಿಗಳು ಒಮ್ಮಿಂದೊಮ್ಮೆಗೆ ನುಗ್ಗಿ ಆಟಆಡಿ ಹೋದಂಗಿದೆ” ಎನ್ನುತ್ತಾ ಬಂದಳು. ಆ ರೂಮಿನಲ್ಲಿ ಇದ್ದ ಲಕ್ಷ್ಮಿ ಮತ್ತು ನಯನ “ಬಂದ್ರು ನೋಡು ಹೆಡ್ ಕುಕ್!!” ಎಂದು ಪರಸ್ಪರ ಮುಖ ನೋಡಿಕೊಂಡು ನಕ್ಕರು. “ನಾವ್ ಬಂದಿರೋದು ಓದೋಕೆ. ಮನೆ ಕ್ಲೀನ್ ಮಾಡೋಕಲ್ಲ! ಹಾಸ್ಟೆಲ್ ಬದಲು ಇಲ್ಲಿದ್ದೀವಿ. ನೀನ್ ನಮಗೆಲ್ಲಾ ಹೆಡ್ ಕುಕ್ ನಾವ್ ಅಸಿಸ್ಟೆಂಟ್ಸ್” ಎಂದು ನಕ್ಕರು.
“ಸರಿ! ಎಲ್ಲಾ ಕ್ಲೀನ್ ಮಾಡಿ! ಬೇಗ ಅನ್ನಕ್ಕಿಟ್ಟು ಚಿತ್ರಾನ್ನ ಮಾಡಿದ್ರಾಯ್ತು” ಎನ್ನುತ್ತಾ ಅಮೃತಾ ಅನ್ನಕ್ಕಿಟ್ಟಳು. ಸ್ವಲ್ಪ ಹೊತ್ತಿನ ನಂತರ ಲಕ್ಷ್ಮಿ ಅನ್ನ ಆಗಿದೆಯಾ ನೋಡಲು ಹೋಗಿ “ಇದ್ಯಾಕೋ ಅನ್ನದ ಹಾಗೆ ಅರಳೋದು ಕಾಣ್ತಿಲ್ಲ, ಗಂಜಿ ಹಾಗೆ ಕುದಿಯೋದು ಕಾಣ್ತಿಲ್ಲ ಇದೇನೆ?” ಎನ್ನುತ್ತಾ ಹೊರ ಬಂದರೆ ಅಮೃತಾ ಮನಸ್ಸಿನಲ್ಲೇ ಇದ್ಯಾಕೊ ಎಡವಟ್ಟು ಆಯ್ತು ಎನ್ನುತ್ತಾ ಮತ್ತೆ ಧೈರ್ಯ ತಂದುಕೊಂಡು “ಕೆಳಗ್ ಹೋಗಿ ಮೊಸರು ತಗೊಂಡು ಬನ್ನಿ. ನೀಟಾಗಿ ಒಗ್ಗರಣೆ ಹಾಕಿದರೆ ಸೂಪರ್ ಮೊಸರನ್ನ ಆಗುತ್ತೆ” ಎನ್ನುತ್ತಾ “ಯಾಕ್ ಹೀಗ್ ಆಯ್ತು?” ಎಂದು ಸಮಸ್ಯೆಯ ಮೂಲ ಹುಡುಕಿ ಹೊರಟರೆ ಅದು ಲಕ್ಷ್ಮಿ ತಂದ ಅಕ್ಕಿ. ಅದೂ ಹೇಗೆ? ಅವರಮ್ಮ ಚೆನ್ನಾಗಿ ಅಕ್ಕಿ ತೊಳೆದು ಬಿಸಿಲಲ್ಲಿ ಕಟಿ ಕಟಿ ಒಣಗಿಸಿ ಕೊಟ್ಟಿದ್ದರು. ಅದನ್ನು ಅನ್ನಕ್ಕಿಟ್ಟರೆ ಅನ್ನವಾಗುತ್ತದೆಯೇ… ಹಿಟ್ಟು ಹಿಟ್ಟು ಆಗುವುದರ ಬದಲು? ಮೊಸರನ್ನದ ಒಳಗುಟ್ಟು ತಿಳಿಯುತ್ತಿದ್ದಂತೆ ಅಮೃತಾ ಅನ್ನುವ ಹೆಡ್ಡ ಕುಕ್ ಬಗ್ಗೆ ಪರಸ್ಪರ ಮುಖ ನೋಡಿಕೊಂಡು “ಬಹಳ ಚೆನ್ನಾಗಿದೆ” ಎನ್ನುತ್ತಾ ನಕ್ಕರು.
ದೀಪಾವಳಿ ಹಬ್ಬ ಕಳೆದುಕೊಂಡು ರೂಮಿಗೆ ಬರೋವಾಗ ಅಮೃತಾಳ ಅಮ್ಮ ಎಣ್ಣೆಗೆ ಜಾಮೂನ್ ಪ್ಯಾಕೆಟ್ ಫ್ರೀ ಇತ್ತು ಉಪಯೋಗಿಸಿಕೊಳ್ಳಿ ಎಂದು ಕೊಟ್ಟದ್ದನ್ನು ಅಮೃತಾ ಬೆಳಗ್ಗೆ ಏಳುತ್ತಲೇ “ಇವತ್ಯಾಕೋ ಸ್ವೀಟ್ ತಿನ್ನಬೇಕು ಅನ್ನಿಸುತ್ತಿದೆ. ಆ ಗುಲಾಬ್ ಜಾಮೂನ್ ಮಾಡಣ” ಎಂದು ಎಲ್ಲಾ ತಯಾರಿ ಮಾಡಿ ಎಣ್ಣೆಯೊಳಗೆ ಬಿಟ್ಟಿದ್ದರೆ ನಯನ ಬಂದು “ಇದೇನೆ ಇದು ಗುಲಾಬ್ ಜಾಮೂನ್ ಮಾಡ್ತೀನಿ ಅಂತ ಗುಳಿಗೆ ಮಾಡ್ತಿದ್ದಿ” ಅಂದರೆ ಎಲ್ಲರಿಗೂ ಆಗ್ಬೇಕೋ ಇಲ್ಲೋ… ಅದಕ್ಕೆ ಚಿಕ್ ಚಿಕ್ ಉಂಡೆ ಮಾಡಿದಿನಿ ಎನ್ನುತ್ತಾ ಮೊಬೈಲ್ ನೋಡುವುದರಲ್ಲಿಯೇ ವ್ಯಸ್ತವಾದಳು. ಅಷ್ಟರಲ್ಲಿ ‘ಗುಳಿಗೆ ಜಾಮೂನ್’ ಅಲ್ಲಲ್ಲ ‘ಗುಲಾಬ್ ಜಾಮೂನ್’ಗಳು ಬಣ್ಣ ಕಳೆದುಕೊಂಡು ಬಾಣಲೆ ತಳ ಸೇರಲು ಸಿದ್ಧತೆ ನಡೆಸಿದ್ದವು. ಮತ್ತೆ ಬಂದ ಲಕ್ಷ್ಮಿ ಮತ್ತು ನಯನ ಇದೇನೂ……? ಆಂ… ಎಂದು ಇಣುಕಿದರೆ ಅಮೃತಾ “ಅಯ್ಯೋ ಇದ್ದಾ ಕಾಡಾ ಜಾಮೂನ್” ಎನ್ನುತ್ತಾ ಬರಬರನೆ ಬಿಸಿ ಸಕ್ಕರೆ ಪಾಕದೊಳಗೆ ಸೊರ್ರ್ ಎಂದು ಬೆಂದ ‘ಗುಲಾಬ್ ಅಲ್ಲ ಗಟ್ಟಿ ಗುಳಿಗೆಗಳನ್ನು ಅದ್ದಿದಾಗ ನಯನ ಮತ್ತು ಲಕ್ಷ್ಮಿ “ಅಮೃತಾ ಮಾಡಿದ ಅಕ್ಕರೆ ಜಾಮೂನ್ ಹೆಡ್ ಕುಕ್ ಅಯ್ಯೋ…..!!’’ ಎಂದರೆ ಅಮೃತಾಳು ಜೋರಾಗಿ ನಕ್ಕಳು.
ಇನ್ನೊಮ್ಮೆ ಊರಿಂದ ತಂದ ಡ್ರೈ ಫ್ರೂಟ್ಸ್ ಹಾಗೆ ಹುಳ ಹಿಡಿತಾವೆ ಏನಾದರೂ ಮಾಡಬೇಕು ಎಂದುಕೊಂಡಾಗಲೆ ಅವರಿಗೆ ಥಟ್ಟನೆ ಹೊಳೆದದ್ದು ಎಲ್ಲಾ ಸೇರಿಸಿ ಅಂಟು ಉಂಡೆ ಮಾಡುವ ಉಪಾಯ. ಬೆಲ್ಲ, ಅಂಟು, ಕೊಬ್ಬರಿ ಎಲ್ಲಾ ತಂದುಕೊಂಡು, ಅಮೃತಾ “ನೀವಿಬ್ರೂ ಎಲ್ಲಾ ಹೆಚ್ರಿ ನಾನು ಬೆಲ್ಲದ ಪಾಕ ಮಾಡ್ತೇನೆ” ಎನ್ನುತ್ತಾ ಮೊಬೈಲ್ ನೋಡುತ್ತಲೇ ಇದ್ದಳು. ಬೆಲ್ಲದ ಪಾಕ ತನ್ನ ಮಿತಿ ದಾಟಿ ಹೋಗಿತ್ತು. ಲಕ್ಷ್ಮಿ, ನಯನರೂ ಮಾತನಾಡುತ್ತಲೇ ಡ್ರೈಫ್ರೂಟ್ಸ್ ತಿನ್ನುತ್ತಾ ತಿನ್ನುತ್ತಲೇ ಎಲ್ಲಾ ಹೆಚ್ಚಿ ಮುಗಿಸಿದ್ದರು. ಅದನ್ನೆಲ್ಲಾ ಬೆಲ್ಲದ ಪಾಕದೊಳಗೆ ಹಾಕಿದರೆ ಉಂಡೆ ಕಟ್ಟಲೂ ಬಾರಲಿಲ್ಲ. ಬರ್ಫಿ ತರ ಕಟ್ ಮಾಡಲು ಬರಲಿಲ್ಲ. ಹೆಡ್ ಕುಕ್ ಅಮೃತಾ ಅಧಿಕೃತ ಘೋಷಣೆ ಎಂಬಂತೆ ಇದು ಅಂಟು ಉಂಡೆ ಅಲ್ಲ! ಬರ್ಫಿ ಅಲ್ಲ! ಅಂಟು ಹುಡಿ! ಎಂದು ಘೋಷಣೆ ಮಾಡಿಯೇ ಬಿಟ್ಟಳು. “ಅಪ್ಪಣೆ ಹೆಡ್ಡ ಕುಕ್ ಅಲ್ಲ ಹೆಡ್ ಕುಕ್” ಎಂದು ನಯನ ಮತ್ತು ಲಕ್ಷ್ಮಿ ಅನ್ನುತ್ತಿದ್ದಂತೆ “ನಾನ್ಯಾಕ್ರೆ ಹೆಡ್ಡ ಕುಕ್ ಆಗಲಿ? ಕೆಟ್ಟ ಅಡುಗೆನೂ ಸರಿ ಮಾಡಿ ನಿಮಗೆ ಕೊಟ್ಟಿಲ್ವ!” ಎಂದಳು ಹೌದು! ಹೌದು! ನೀನ್ ಏನ್ ಮಾಡಿದ್ದರೂ ನಾವ್ ರೆಡಿ ಎನ್ನುತ್ತಾ ಲಕ್ಷ್ಮಿ ಮತ್ತು ನಯನ ಅಮೃತಾಳ ಹೊಸ ಪ್ರಯೋಗಕ್ಕೆ ಅಣಿಯಾದರೆ ಅಮೃತಾ ನೆಕ್ಸ್ಟ್ ಡಿಶ್ ಏನ್ ಗೊತ್ತಾ ವೆಬ್ ಪಲಾವ್… ಅಲ್ಲ ಅಲ್ಲ ವೆಜ್ ಪಲಾವ್!! ಎಂದಳು. ಅಂದ ಹಾಗೆ ಅಡುಗೆ ಏನಾದರೂ ಬೇಯಿಸು ಎಂದಾಗುತ್ತದೆ ಅಡಿಗೆ ಎಂದರೆ ಹೆಜ್ಜೆ ಎಂದಾಗುತ್ತದೆ. ಆದರೆ ಆಡು ಮಾತಿಲ್ಲಿ ಅಡಿಗೆ ಎನ್ನುವ ಪದವೇ ಪ್ರಚಲಿತದಲ್ಲಿದೆ.
ಇನ್ನು ಇಲ್ಲೇ ಬರುವ ದೀಪಾವಳಿ ಬಗ್ಗೆ ಎಲ್ಲರಿಗೂ ಗೊತ್ತು! ಈ ಪದದೊಳಗೆ ‘ಆವಳಿ’ ಎಂಬ ಪದ ಇದೆ. ‘ಆವಳಿ’ ಎಂದರೆ ಗುಂಪು ಎಂದರ್ಥ. ಇದಕ್ಕೆ ಪೂರಕವಾಗಿ ಕರಾವಳಿ, ಪ್ರಭಾವಳಿ ಪದಗಳು ಬರುತ್ತವೆ. ಅದೇ ‘ಅವಳಿ’ ಎಂದು ಹೃಸ್ವಸ್ವರದಲ್ಲಿ ಬಂದರೆ ಒಂದೇ ತೆರನಾದ ಎನ್ನುವ ಅರ್ಥದಲ್ಲಿ ಬರುತ್ತದೆ. ಇದರ ಜೊತೆಗೆ ಬರುವುದು ‘ಜವಳಿ’ ‘ಅವಳಿ’ಯ ಜೊತೆಗೆ ಬಂದಾಗ ಅರ್ಥವಿಲ್ಲ. ಜೊತೆಗೆ ಬರುವ ಪದವಷ್ಟೆ. ಆದರೆ ಜವಳಿ ಎಂದು ಪ್ರತ್ಯೇಕವಾಗಿ ಬಂದಾಗ ಬಟ್ಟೆಗಳು ಎನ್ನುವ ಅರ್ಥವಿದೆ. ಅದೇ ಹಳೆಗನ್ನಡದಲ್ಲಿ ‘ಬಟ್ಟೆ’ ಎಂದರೆ ದಾರಿ ಎಂಬುದಾಗಿ ಉದಾಹರಣೆಗೆ ‘ಬಾಳಬಟ್ಟೆ’ ಎಂಬ ಪದವಿದೆಯಲ್ಲ. ಮುಂದುವರೆದಂತೆ ಇನ್ನೊಂದು. ಆಸಕ್ತಿಕರ ಪದ ಮಾರ್ಕ್ಸ್‌ನದ್ದೇ. ಅದೇ ನಾವೆಲ್ಲ ಬಿಟ್ಟು ಬಿಡದೆ ಬೆನ್ನು ಹತ್ತಿರುವ ಅಂಕಗಳು. ಅದನ್ನೆ ಇಂಗ್ಲಿಷಿನಲ್ಲಿ ಮಾರ್ಕ್ಸ್ ಎನ್ನುತ್ತಾರೆ. Marks the occasion ಸಮಾರಂಭವನ್ನು ಸಂಕೇತಿಸುವುದು ಎಂದಾಗುತ್ತದೆ. ಅಲ್ಲದೆ ಕಾರ್ಲ್ ಮಾರ್ಕ್ಸ್ ಎಂಬ ತತ್ತ್ವಜ್ಞಾನಿಯ ತತ್ತ್ವಗಳನ್ನು ಹೇಳುವುದೇ ಮಾರ್ಕ್ಸ್ ವಾದ. ಸಮತಾವಾದದ ತಳಹದಿಯಲ್ಲಿ ರಚನೆಯಾದದ್ದು.
ಮುಂದುವರೆದಂತೆ ಈ ಲೇಖನದ ಶೀರ್ಷಿಕೆಯಲ್ಲಿನ ಚಿತ್ರಹಿಂಸೆ ಪದವನ್ನೆ ತೆಗೆದುಕೊಂಡರೆ ಚಿತ್ರವೆಂದರೆ ಭಿನ್ನ ರೀತಿಯ ಅರ್ಥಗಳು ಇವೆ. ‘ಚಿತ್ರ’ ಎಂದರೆ ‘ಹೆಣ್ಣುಮಕ್ಕಳ’ ಹೆಸರೂ ಆಗುತ್ತದೆ. ಫೊಟೋಗೆ ಛಾಯಾ ಚಿತ್ರವೆಂದು ಚಲನೆಯನ್ನು ಹೊಂದಿರುವುದು ಚಲನಚಿತ್ರವೆಂದೂ ಆಗುತ್ತದೆ.
ಚಿತ್ರವೆಂದರೆ ‘ಚಿತ್ರ’ ಅಷ್ಟೆ ಎನ್ನುವ ಮಾತು ಬಂದರೂ ಇಂಗ್ಲಿಷಿನಲ್ಲಿ ಫಿಗರ್, ಡ್ರಾಯಿಂಗ್, ಡಯಾಗ್ರಾಮ್ ಎಂದಿರುವಂತೆ ವ್ಯಂಗ್ಯಚಿತ್ರ, ವರ್ಣಚಿತ್ರ, ತೈಲಚಿತ್ರಗಳೆಂಬ ಬಗೆಗಳಿವೆ. ಅಷ್ಟೇ ಏಕೆ ರಂಗೋಲಿಯೂ ಚಿತ್ರವೇ. ಚಿತ್ರ ಹಿಂಸೆ ಎಂದರೆ ಒಂದು ಬಳಕೆಯ ನಾನಾ ವಿಧವಾದ ಮನಸ್ಸಿಗೆ ಆಗುವ ನೋವು. ವ್ಯಂಗ್ಯಕ್ಕೂ ವಿನೋದಕ್ಕೂ ಈ ಮಾತನ್ನು ಹೇಳುವುದಿದೆ. ಮುಂದಿನ ಕಂತಿನಲ್ಲಿ ಚಿತ್ರದ ಒಂದು ಭಾಗವೇ ಆಗಿರುವ ರಂಗೋಲಿಯ ಕುರಿತು ಮಾತನಾಡುವೆ.

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.