ಇಂಥ ತಣ್ಣಗಿನ ಕ್ರೌರ್ಯದ ಗೆರೆ ದಾಟಿ ಬಂದ ಸಂಗೀತ ನಿರ್ದೇಶಕನ ಕೈಗೆಣ್ಣುಗಳು ತನ್ನ ಪಿಯಾನೋ ಮಣೆಗಳನ್ನು ಒತ್ತಲಾರದಂತೆ ವಿರೂಪಗೊಂಡಿರುತ್ತವೆ. ಗೆರೆ ಎಳೆದುಕೊಂಡ ತಮ್ಮ ತಮ್ಮ ದೇಶಗಳಂತೆ ತಮ್ಮ ಭಿನ್ನ ಅಭಿರುಚಿಯನ್ನು ಹೊಂದಿದ ಜೀವಗಳು ತಮ್ಮ ಗೆರೆಗಳನ್ನು ಮೀರಿದ ಆಕಾಶದ್ದಕ್ಕೂ ಹರಡಿದ ಕಣ್ಣೋಟದ ಪ್ರೇಮವನ್ನು ಉಳಿಸಿಕೊಳ್ಳುತ್ತವೆ. ನವಿರು, ಗಾಢ ಬಣ್ಣಗಳು ಕಾಮನಬಿಲ್ಲಿನ ರಂಗಲ್ಲಿ ಸೇರಿ ಹೋದಂತೆ ಪ್ರೇಮವೆಂಬುದು ಸಂಗೀತದ ಹುಚ್ಚಿನ ಈ ಜೋಡಿಗೆ ದಕ್ಕುತ್ತದೆ. 
ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

ಸುಮಾರು ಹದಿನೈದು ವರುಷಗಳ ಹಿಂದೆ ಸುಚಿತ್ರಾ ಫಿಲಂ ಸೊಸೈಟಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆರಂಭಿಸಿತು. ಮೂರು ದಿನದ ಹತ್ತಾರು ಸಿನಿಮಾದಿಂದ ಶುರುವಿಟ್ಟ ಈ ಉತ್ಸಾಹ ಇಂದು ಬೆಂಗಳೂರಿನ ಹನ್ನೊಂದು ಸಿನಿಮಾ ಮಂದಿರದಲ್ಲಿ ಬೆಳಿಗ್ಗೆಯಿಂದ ರಾತ್ರಿ ಹನ್ನೊಂದರವರೆಗೂ ಮುಗಿಯದ ಸಿನಿಮಾಯಾನವಾಗಿ ಮಾರ್ಪಾಡಾಗಿದೆ. ಮೊದಮೊದಲು ನಾಕಾರು ಕಡೆಯಲ್ಲಿ ನಡೆಯುತ್ತಿದ್ದ ಇದು ವಾರ್ತಾ ಇಲಾಖೆಯ ಅಧಿಕಾರಿಗಳ ಆಸಕ್ತಿಯ ಮೇರೆಗೆ ಒಂದೇ ಸೂರಿನಡಿ ವ್ಯವಸ್ಥಿತವಾಗಿ ನಡೆಯಲು ಅನುವಾಯಿತೆಂದರೆ ತಪ್ಪಾಗಲಾರದು. ಇದಕ್ಕೆ ಅಂದಿನ ಸರ್ಕಾರ ನೀಡಿದ ಹೆಚ್ಚಿನ ಬಡ್ಜೆಟ್ ಕೂಡ ಸಹಕಾರಿಯಾಯಿತು.

ಈಗ ೬೦ ದೇಶದ ೨೦೦ ಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ಪ್ರದರ್ಶನಗೊಂಡು ಬೆಂಗಳೂರಿನ ಜನರ ಮನಸ್ಸಲ್ಲಿ ಸಿನಿಬಾಕತನವನ್ನು ಹುಟ್ಟುಹಾಕುತ್ತಿದೆ. ಈಗ ಸರ್ಕಾರದ ವಾರ್ತಾ ಇಲಾಖೆಯ ಅಡಿಯಲ್ಲಿ ಚಲನಚಿತ್ರ ಅಕಾಡೆಮಿ ಹಾಗೂ ಕಲಾತ್ಮಕ ತಂಡವೊಂದರ ಕಾರ್ಯ ನಿರ್ವಹಣೆಯಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದೆ. ಮೊದಮೊದಲು ಸಿನಿಮಾ ತೋರಿಸುವ ಹಾಗೂ ಬಂದ ದೇಶಗಳ ಅತಿಥಿಗಳನ್ನು ಭರಿಸುವ ಕೆಲಸದಲ್ಲಿದ್ದ ಹಬ್ಬವೀಗ…. ನಾಲ್ಕೈದು ವರುಷದಿಂದ ಚರ್ಚೆ, ಹಾಗೂ ಸಿನಿಮಾಕ್ಕೆ ಸಂಬಂಧಪಟ್ಟಂತೆ ವರ್ಕಶಾಪ್ ಗಳನ್ನು, ಸೆಮಿನಾರುಗಳನ್ನು ಆಸಕ್ತರಿಗೆ ಒದಗಿಸಿಕೊಡುತ್ತಿದೆ.

ಮಾರ್ಕೆಟಿಂಗ್ ಆಗುವ ಮಟ್ಟಕ್ಕೆ ಇದನ್ನು ಬೆಳೆಸುವ ಹಾಗೂ ಇನ್ನಷ್ಟು ಶಿಸ್ತುಬದ್ಧವಾಗಿ ನಡೆಸುವ ಅಗತ್ಯವಿದೆ. ಪ್ರಪಂಚದ ಸಿನಿ ಆಸಕ್ತರು ಸಿನಿಮಾ ನೋಡಲು ಮಾತ್ರ ಬೆಂಗಳೂರಿಗೆ ಬರಲಾರರು ಅನ್ನುವುದನ್ನು ಮರೆಯುವಂತಿಲ್ಲ. ಮಾರುಕಟ್ಟೆ ಹಾಗೂ ತಾಂತ್ರಿಕ ಮುನ್ನಡೆಯ ಅಗತ್ಯವೂ ಇಲ್ಲಿ ಇರಲೇಬೇಕಾಗುತ್ತದೆ. ಗುಣಮಟ್ಟದ ದೃಷ್ಟಿಯಲ್ಲಿ ಇಲ್ಲಿಯ ಚಿತ್ರಮಂದಿರದ ವ್ಯವಸ್ಥೆಯ ಬಗ್ಗೆ ಎರಡು ಮಾತಿಲ್ಲ. ಪೋಲೆಂಡ್ ನ ವಿಶ್ವವಿಖ್ಯಾತಿಯ ನಿರ್ದೇಶಕ ಜಾನ್ ಹುಸಿಯವರು ಇಲ್ಲಿಗೆ ಬಂದು ಸಿನಿಮಾಸಕ್ತರ ಜೊತೆ ಸಂವಾದ ನಡೆಸಿದ್ದು ಈ ಹನ್ನೊಂದನೇ ಸಿನಿಮೋತ್ಸವದ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಈ ಬಾರಿ ಆಸ್ಕರ್ ಗೆ ನಾಮಾಂಕಿತವಾದ ಹತ್ತರಲ್ಲಿ ಎಂಟು ಸಿನಿಮಾ ಇಲ್ಲಿ ಪ್ರದರ್ಶನ ಆಗಿರುವುದು ಸಧ್ಯದ ನಮ್ಮ ಹೆಮ್ಮೆ.

(ಗಿಲ್ಟೀ ಚಿತ್ರದ ದೃಶ್ಯ)

ಸುಚಿತ್ರ ಕೈ ಸೋತಾಗ ಸರ್ಕಾರದ ಮಡಿಲಿಗೆ ಬಿದ್ದ ಚಿತ್ರೋತ್ಸವ ಸಣ್ಣಪುಟ್ಟ ಓರೆಕೋರೆಗಳನ್ನು ಸರಿಪಡಿಸಿಕೊಳ್ಳುತ್ತ ಈಗ ಒಂದು ರೂಪಕ್ಕೆ ಬಂದು ನಿಂತು ಬೆಂಗಳೂರಿನ ಜನರ ಮನಸ್ಸಿನಲ್ಲಿ ಕರ್ನಾಟಕದ ಕಾನ್ ಚಿತ್ರೋತ್ಸವವಾಗಿ ನೆಲೆಯಾಗುತ್ತಿದೆ. ಬೆಂಗಳೂರಿನಲ್ಲಿ ಇದಕ್ಕಾಗಿಯೇ ಸಮಯ ಮೀಸಲಿಟ್ಟು ಸಿನಿಮಾ ನೋಡುವ ಸಾವಿರಾರು ಆಸಕ್ತರಿದ್ದಾರೆ. ಈ ಬಾರಿ ಚಿತ್ರೊತ್ಸವಕ್ಕೆ 7000 ಜನರು ನೋಂದಾಯಿಸಿಕೊಂಡು ಕ್ಯೂನಲ್ಲಿ ನಿಂತು ಕಾದು, ಜಗಳವನ್ನೂ ಮಾಡಿ ಸಿಟ್ಟಿನಲ್ಲಿ ಹಿಂತಿರುಗಿ ಮತ್ತೆ ರಿಪೀಟ್ ಶೋಗಳನ್ನ ನೋಡಿದವರಿದ್ದಾರೆ.

‘ಜನರಿದ್ದರೆ ಜಾತ್ರೆ. ದೇವನೊಬ್ಬನಿದ್ದರೆ ಸಾಲದು.’ ಇದನ್ನು ನಾವು ಮರೆಯುವಂತಿಲ್ಲ. ಅದರ ನಂತರ ಸುತ್ತಲಿನ ಸಂತೆ ಮಾರುಕಟ್ಟೆಗಳು ಜಾಗೃತಗೊಳ್ಳುತ್ತವೆ. ಕಿರು ಚಿತ್ರಗಳು, ಡಾಕ್ಯುಮೆಂಟರಿಗಳು, ಕನ್ನಡ ಸಿನಿಮಾ, ಇಂಡಿಯನ್ ಸಿನಿಮಾ, ಏಷಿಯಾ ಸಿನಿಮಾ, ಜಾಗತಿಕ ಸಿನಿಮಾಗಳು, ಹೀಗೆ ಬೇರೆ ಬೇರೆ ವಿಭಾಗಗಳಿದ್ದು, ನಮ್ಮವರೊಡನೆ ಇದಕ್ಕೆ ನಿಗದಿಗೊಂಡ ಬೇರೆ ಬೇರೆ ದೇಶದ ಜ್ಯೂರಿಗಳು, ಅವಾರ್ಡ್ ಗಳೂ ಸಿನಿಮಾಸಕ್ತಿಯನ್ನೂ ಹಾಗೂ ಹೊರದೇಶದಿಂದ ಬಂದು ನೋಡುವ ಜನರನ್ನ ಬೆಂಗಳೂರಿಗೆ ಬರಮಾಡಿಕೊಳ್ಳುತ್ತಿರುವುದು ದೊಡ್ಡ ವಿಷಯ.

ಇದಲ್ಲದೇ ಈಗ ಬೇರೆ ಬೇರೆ ದೃಷ್ಟಿಕೋನಗಳಿಂದ ಕನ್ನಡ ಸಿನಿಮಾಗಳು ದೃಷ್ಟಿಯಾಗುತ್ತಿವೆ. ಹಾಗೆಯೇ ಹೊಸ ಯುವಕರ ಪಡೆಯೇ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗುತ್ತಿರುವುದೂ ಕೂಡ ಇಂದಿನ ‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಹೆಮ್ಮೆಯಾಗಿದೆ. ಒಂದು ಸಿನಿಮಾ ಹಬ್ಬ ಹಿರಿ ಕಿರಿಯರ ಆಸಕ್ತಿಗೆ ಇಷ್ಟರಮಟ್ಟಿಗೆ ಸಹಾಯವಾಗಿ ಸಮಾಧಾನ ತರುತ್ತಿದೆ.

ಈ ಉತ್ಸವದಲ್ಲಿ ನಾನು ನೋಡಿದ ವಿಭಿನ್ನ ಜಗತ್ತಿನ ಹತ್ತಾರು ಸಿನಿಮಗಳಿಗೆ ಸಂಬಂಧಪಟ್ಟಂತೆ ಕೆಲವು ಉದಾಹರಣೆಗಳು:

‘Tel aviv on fire’ ಎನ್ನುವ ಇಸ್ರೇಲಿ ಸಿನಿಮಾ. ಈ ಸಿನಿಮಾ ಕೊನೆಯಲ್ಲಿ ಒಬ್ಬ ಸಹಾಯಕನನ್ನು ಒಂದು ಧಾರವಾಹಿಯ ಉತ್ತಮ ಸ್ಕ್ರಿಪ್ಟ್ ರೈಟರ್ ನನ್ನಾಗಿ ಜಾದೂ ಮಾಡಿ ತೋರಿಬಿಡುತ್ತದೆ. ಪಾಲೇಸ್ಟೈನಿನ ಆ ಯುವಕ ಒಬ್ಬ
ಸೈನ್ಯಾಧಿಕಾರಿಯನ್ನು ಭೇಟಿ ಮಾಡುವುದು, ಧಾರವಾಹಿಯನ್ನು ನೋಡುವ ಅಧಿಕಾರಿಯ ಹೆಂಡತಿಯಾಸಕ್ತಿಯ ಮೇರೆಗೆ ಧಾರಾವಾಹಿಯನ್ನು ತಿರುಚಲು ಅಧಿಕಾರಿ ಒದ್ದಾಡುವುದು, ಆಗ, ಈ ಅನನುಭವಿಯ ಮಾತನ್ನು ಸೀನಿಯರ್ಸ್ ಅಲ್ಲಗಳೆಯುವುದು, ಆದರೂ ಇವನ ಕಥಾತಿರುವಿಗೆ ಮನ್ನಣೆ ಸಿಕ್ಕು, ಇವನನ್ನು ಕೊನೆಯಲ್ಲಿ ಇವನು ಇಷ್ಟ ಪಡುವ ಹುಡುಗಿ ಒಲಿಯುವುದು ಸಿನಿಮಾ ಮಟ್ಟವನ್ನು ಏರಿಸುವುದೂ ಅಲ್ಲದೆ ನೋಡುಗರನ್ನು ನಗೆಗಡಲಲ್ಲಿ ಮುಳುಗಿಸಿಬಿಡುತ್ತದೆ.

(‘Tel aviv on fire’ ಚಿತ್ರದ ದೃಶ್ಯ)

‘Guilty’ ಸಿನಿಮಾ ಒಬ್ಬನೇ ಪಾತ್ರಧಾರಿಯ ಡೆನ್ಮಾರ್ಕಿನ ಸಿನಿಮಾ. ಆಚೆಗಿನ ದೃಶ್ಯವನ್ನು ತೋರದೆ ಕೇವಲ ಒಬ್ಬ ಪೋಲೀಸ್ ಆಫೀಸರ್ ಗೆ ಬರುವ ಹೆಲ್ಪಲೈನ್ ಕರೆ ಸಂಪರ್ಕ ಕಳೆದುಕೊಳ್ಳುತ್ತದೆ. ಆದರೆ ಅದರಲ್ಲಿ ಅರ್ಥವಾದ ಮುಂದಿನ ಅಪಾಯವನ್ನು ತಡೆಯಲು ಅವನು ಮುಳುಗುತ್ತ ಮುಳುಗುತ್ತ ಆ ಪಾತ್ರಗಳ ಒಳ ಶೋಧನೆಗೆ ಇಳಿದು ಹೋಗಿರುತ್ತಾನೆ. ಆ ಸಂಸಾರದ ಸಾರದೊಳಗೆ ಇಳಿದು ಒದ್ದಾಡುವ ಈ ಸಿನಿಮಾದ ಒಂದೇ ಒಂದು ಈ ಮುಖ್ಯ ಪಾತ್ರ ಟೆಲಿಫೋನ್ ಕರೆಯ ಆ ತುದಿಯಲ್ಲಿ ಅಪಾಯದಲ್ಲಿರುವ ಆ ಸಂಸಾರದ ಒಗಟನ್ನು ಹೇಗೆ ಬಿಡಿಸುತ್ತ ಒದ್ದಾಡುತ್ತದೆ ಅನ್ನುವುದನ್ನು ಈ ಸಿನಿಮಾದ ಮೂಲಕವೇ ಗಮನಿಸಬೇಕು.

ಯಾಕೆಂದರೆ ಆ ಶೋಧನೆಯಲ್ಲಿ ಆಗುವ ಅವನ ಒದ್ದಾಟ ಇವನ ಆಂತರ್ಯದೊಳಗಿನ ಒದ್ದಾಟವೇ ಆಗಿರುತ್ತದೆ. ಹಿಂದೆ ಇವನು ಎಂದೋ ಮಾಡಿದ ಅಪರಾಧದ ಅನುಭವಕ್ಕೆ ಇಂದು ಈ ಪ್ರಸಂಗ ಡಿಕ್ಕಿಹೊಡೆಯುವುದರಿಂದಲೇ ಇವನೊಳಗಿನ ಎಚ್ಚರ ಎಚ್ಚೆತ್ತುಕೊಂಡು ದುರಂತ ನಡೆಯಬಾರದೆಂದು ಪರಿತಪಿಸುತ್ತಿರುತ್ತದೆ.

ಹೊರಗಿನ ಸಮಸ್ಯೆ ಇವನೊಳಗಿನ ಸಿಕ್ಕನ್ನು ಪರಿಹರಿಸುವ ನಿಟ್ಟಿನತ್ತಲೇ ಸಾಗುತ್ತದೆ. ಇಂಥ ಜಾಣತನದ ನಯಗಾರಿಕೆಯ ಕಸೂತಿ ಈ ಸಿನಿಮಾದಲ್ಲಿದೆ. ಚಣಚಣದಲ್ಲೂ ಕುತೂಹಲ ಹಿಡಿದಿಡುವ ಆ ಒಂದೇ ಪಾತ್ರ ನಮ್ಮ ಹುಬ್ಬೇರಿಸುತ್ತದೆ. ದನಿಯ ಏರಿಳಿತ, ಹಾಗೂ ಈತನ ಮುಖಭಾವದಲ್ಲಿ ಇಡಿ ಒಂದು ಸಿನಿಮಾ ಫೋನಿನ ಆಚೆಗಿನ ಒಂದು ಸಂಸಾರದ ಕಥೆಯನ್ನು ಹುಡುಕುತ್ತಾ ಸಾಗಿದೆ.

ಈಜಿಪ್ಟಿನ ‘ಯೋಮೆದ್ದೀನ್’ ಒಂದು ವಿಶಿಷ್ಟ ವಿಭಿನ್ನ ಕಥೆ. ಅದರ ನಾಯಕ ಕುರೂಪಿಯಾದ ಕುಷ್ಠ ರೋಗಿ. ಅವನು ಸಣ್ಣವನಾಗಿದ್ದಾಗ ಕುಷ್ಠ ರೋಗಿಗಳ ಕೇಂದ್ರಕ್ಕೆ ಬಂದು ಹುಶಾರಾದರೂ ಅವನ ಅಪ್ಪ ಬಂದು ಕರೆದೊಯ್ಯದೆ ಇಲ್ಲಿಯೇ ಉಳಿದುಹೋಗುತ್ತಾನೆ. ಇವನಿರುವೆಡೆಯಲ್ಲಿ ಸಮಾಜ ಹೊರ ಹಾಕಿದ ಕಸದ ಸುತ್ತಿನ ಜಗತ್ತಲ್ಲೇ ಮತ್ತೊಂದು ಜಗತ್ತು ಸೃಷ್ಠಿಯಾಗಿರುತ್ತದೆ. ಇಲ್ಲಿ ಸಮಾಜ ತನ್ನ ಕೈ ಕಳಚಿ ಹೋದ ಅಮಾಯಕರು, ರೋಗಿಗಳು, ದಿಕ್ಕಿಲ್ಲದವರು ಇರುತ್ತಾರೆ. ಅವರು ಹದ್ದು ಕಾಗೆಗಳೊಂದಿಗೆ ಮನುಷ್ಯ ಬಿಸಾಡಿದ ಕಸದಲ್ಲಿ ಅನ್ನ ಹುಡುಕಿಕೊಳ್ಳುತ್ತಿರುತ್ತಾರೆ.

ಬಿಶಾಯ ಎಂಬ ಕುಷ್ಟ ರೋಗಿ ಹೀಗೆ ತನ್ನ ಬದುಕನ್ನ ಇಂಥವರ ಒಡನಾಟದಲ್ಲಿ ಕಟ್ಟಿಕೊಂಡಿದ್ದರೂ ತನ್ನ ಹೆಂಡತಿಯನ್ನು ಸಾಯುವ ಕೊನೆ ಗಳಿಗೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆಗ ಸಂಬಂಧದ ತನ್ನ ಮೂಲವನ್ನು ಹುಡುಕುವ ಆಸೆಗೆ ಬಿದ್ದ ಬಿಶಾಯನ ಜೀವ ಚಿಕ್ಕಂದಿನಲ್ಲಿ ಕರೆದುಕೊಂಡು ಹೋಗಲು ಬರುತ್ತೇನೆ ಎಂದು ಬರದೇ ಹೋದ ತನ್ನಪ್ಪನ ನೆನಪಾಗಿ ಪ್ರಯಾಣ ಹೊರಡುತ್ತದೆ. ಪ್ರಯಾಣದಲ್ಲಿ ಸಿಕ್ಕಿದ ದಟ್ಟ ಅನುಭವಗಳ ಮಾಲೆಯೇ ಈ ಚಿತ್ರ. ಅವನ ಸಕಲ ಹೊರೆಯನ್ನು ಹೊರುತಿದ್ದ ಪ್ರೀತಿಪಾತ್ರ ಕತ್ತೆ ಸತ್ತು ಹೋಗುತ್ತದೆ.

(‘ಕೋಲ್ಡ್ ವಾರ್’ ಚಿತ್ರದ ದೃಶ್ಯ)

ಆದರೆ ತನ್ನ ತೆಕ್ಕೆಯಲ್ಲಿದ್ದ ಒಬಾಮ ಎಂಬ ದಿಕ್ಕಿಲ್ಲದ ಮಗ ಇವನ ಸಂಬಂಧಿಯಾಗಿಯೇ ಕೈ ಜಾರದೆ ಉಳಿಯುತ್ತಾನೆ. ಧರ್ಮ, ಮೋಸ, ಶಿಕ್ಷೆ, ಎಲ್ಲವನ್ನೂ ದಾಟಿ ಅಸಹಾಯಕರಾದರೂ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡ ಭಿಕ್ಷುಕರ ನೆರವಿಂದ ಅವನ ಮನೆ ತಲುಪಿ ತನ್ನ ಅಪ್ಪ, ಬಂಧುಗಳೊಡನೆ ಕೆಲವು ದಿನವಿದ್ದು ತಾನು ಬದುಕಿದ್ದ ತನ್ನ ನೆಲೆಗೆ ಹೊರಟು ನಿಲ್ಲುತ್ತಾನೆ. ಸಾಮಾನು ಸಾಗಿಸುವ ರೈಲಿನ ಟ್ರ್ಯಾಲಿಯಲ್ಲಿ ಆಕಾಶದ ಚಾವಣಿಯಡಿಯಲ್ಲಿ ಕೂತು ಅವನು ತಿರುಗು ಚಕ್ರಗಳ ಮೇಲೆ ಸಾಗುವಾಗ ಅವನು ಹೇಳುವ ಮಾತು…..

‘ನಾವು ಇದುವರೆಗೂ ಕಂಡ ಪರಪಂಚದ ಅನುಭವದ ಅರಿವು ನಮ್ಮನ್ನು ಸಲುಹುತ್ತದೆ’ ಸಮಾಜದ ಅಂಚಿನ ಜೀವನವನ್ನೂ ಅದರ ನಿಗೂಢತೆಯನ್ನು, ಮುಖವಿಲ್ಲದೆ ಕುರೂಪ ಹೊತ್ತ ಜೀವವಿರುವ ಪ್ರತಿಯೊಂದು ಕಟ್ಟಕಡೆಯ ಜೀವಿಗೂ ಸಮಾಜದಲ್ಲಿ ಈ ನೆಲದಲ್ಲಿ ಬದುಕುವ ಹಕ್ಕಿದೆ ಎನ್ನುವುದನ್ನು ಈ ಚಿತ್ರ ಕಡೆಗೆ ನಿರೂಪಿಸಿಬಿಡುತ್ತದೆ.

‘ಸುಲೇಮಾನ್ ಮೌಂಟೇನ್’ ನಲ್ಲಿ ಅದರ ಸುತ್ತ ಇರುವ ಜನರ ದೈವದ ನಂಬಿಕೆ, ಗಂಡಿನ ಹುಸಿ ಪರಾಕ್ರಮಗಳು, ನಾಚಿಕೆಯಿಲ್ಲದ ಅವನ ನಡೆ, ಅವನನ್ನು ನಂಬಿ ಹೆಣ್ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇಂಥವನೊಡನೆ ಹೆಣಗುವ ಮೌಢ್ಯತೆ, ಪ್ರತೀ ಜನಾಂಗದ ಪ್ರತೀ ದೇಶದ ಸಮಸ್ಯೆಯಾಗಿ ಕಾಣಿಸುತ್ತದೆ. ‘ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ’ ಗಾದೆಯ ಹಾಗೆ ಒಪ್ಪವಿಲ್ಲದ ಗಂಡನನ್ನು ಅಪ್ಪುವ ಅಪಾಯವನ್ನೂ ಇದು ನಿರೂಪಿಸುತ್ತದೆ.

ಇಂಥ ಸಿನಿಮಾ ಉತ್ಸವದಲ್ಲೇ ಅನಾವರಣಗೊಂಡ ಇನ್ನೊಂದು ಅತ್ತುತ್ತಮ ಪೋಲ್ಯಾಂಡಿನ ಪ್ರೇಮ ಕಥೆ ‘ಕೋಲ್ಡ್ ವಾರ್’. ಸಂಗೀತ ಪ್ರಧಾನವಾದ ಸೂಕ್ಷ್ಮ ಮನಸ್ಸುಗಳ ತಾಕಲಾಟದಂತೆಯೇ ನವಿರು ಮನಸ್ಸಿನ ಭಿನ್ನ ರುಚಿಯ ಭಿನ್ನ ಜೋಡಿಯೊಂದು ದೈವಿಕ ಪ್ರೇಮಕ್ಕೆ ಒಲಿಯುತ್ತದೆ. ಇದರಲ್ಲಿ ಸ್ಥಳದ ಹಾಡುಕುಣಿತಗಳ ಮೊದಲುಗೊಂಡು ಮಾಗುತ್ತ ವಿಶ್ವಸಂಗೀತ ಹಾಗೂ ಜನಮೆಚ್ಚುವ ಪ್ರಾಕಾರವಾಗುವ ಕಲೆಗಾರಿಕೆ ಕುಂಬಾರಿಕೆಯಷ್ಟು ನಯವಾಗಿದೆ. 1950 ರಲ್ಲಿ ಇದೇ ಕೋಲ್ಡ್ ವಾರ್ ಯುಗೋಸ್ಲೇವಿಯಾ, ಪ್ಯಾರೀಸ್, ಬರ್ಲಿನ್, ಪೋಲ್ಯಾಂಡಿನ ನಡುವೆಯೂ ನಡೆಯುತ್ತಿರುತ್ತದೆ.

ಆದರೆ ಇಂಥ ತಣ್ಣಗಿನ ಕ್ರೌರ್ಯದ ಗೆರೆ ದಾಟಿ ಬಂದ ಸಂಗೀತ ನಿರ್ದೇಶಕನ ಕೈಗೆಣ್ಣುಗಳು ತನ್ನ ಪಿಯಾನೋ ಮಣೆಗಳನ್ನು ಒತ್ತಲಾರದಂತೆ ವಿರೂಪಗೊಂಡಿರುತ್ತವೆ. ಗೆರೆ ಎಳೆದುಕೊಂಡ ತಮ್ಮ ತಮ್ಮ ದೇಶಗಳಂತೆ ತಮ್ಮ ಭಿನ್ನ ಅಭಿರುಚಿಯನ್ನು ಹೊಂದಿದ ಜೀವಗಳು ತಮ್ಮ ಗೆರೆಗಳನ್ನು ಮೀರಿದ ಆಕಾಶದ್ದಕ್ಕೂ ಹರಡಿದ ಕಣ್ಣೋಟದ ಪ್ರೇಮವನ್ನು ಉಳಿಸಿಕೊಳ್ಳುತ್ತವೆ. ನವಿರು, ಗಾಢ ಬಣ್ಣಗಳು ಕಾಮನಬಿಲ್ಲಿನ ರಂಗಲ್ಲಿ ಸೇರಿ ಹೋದಂತೆ ಪ್ರೇಮವೆಂಬುದು ಸಂಗೀತದ ಹುಚ್ಚಿನ ಈ ಜೋಡಿಗೆ ದಕ್ಕುತ್ತದೆ.

(ಯೋಮೆದ್ದೀನ್ ಚಿತ್ರದ ದೃಶ್ಯ)

ಅಲ್ಲಿ ನಾಯಕಿಗೆ ಅಸೂಯೆ ಹುಟ್ಟಿಸುವ ಕವಿ ಪಾತ್ರಧಾರಿಯ ಸಾಲುಗಳು ‘ಗಡಿಯಾರದ ಪೆಂಡುಲಮ್ ಚಲನೆ ತನ್ನ ಕಾಲವನ್ನೇ ತಿಂದು ನಡೆಯುತ್ತಿದೆ’ ಎಂಬ ಅರ್ಥವುಳ್ಳದ್ದು. ಹೀಗೆ ಈ ಸಿನಿಮಾ ಹತ್ತು ವರುಶದ ಕಥೆ ಇಸವಿಗಳನ್ನು ತೋರುತ್ತ ಕಾಲದ ಪರಿಧಿಯೊಳಗೆ ತನ್ನನ್ನು ಪರಿಪಕ್ವಗೊಳಿಸಿಕೊಳ್ಳುವ ಕಥೆಯಾಗಿದೆ. ಒಬ್ಬ ಗಾಯಕಿಯನ್ನು ಪ್ರೀತಿಸುತ್ತ ಅವಳನ್ನು ಯಶಸ್ಸಿನ ಮೆಟ್ಟಲೇರಿಸುತ್ತಲೇ ಗಾಢ ಪ್ರೀತಿಯಲ್ಲಿ ಮುಳುಗುತ್ತಲೇ ತಾನು ಸಂತ್ರುಪ್ತನಾಗುವ ಗಂಡು ಅವಳನ್ನು ಸೇರುವಂತೆ ಕೊನೆ ತಲುಪುತ್ತದೆ.

ಇನ್ನೊಂದು ಐರ್ಲ್ಯಾಂಡಿನ ಒಂದು ಅಲೆಮಾರಿ ಸಿನಿಮಾ ಅಲ್ಲಿನ ಕಳೆದುಹೋದ ಒಂದು ಸಾಂಸ್ಕೃತಿಕ ಜಗತ್ತನ್ನೇ ನಮ್ಮ ಕಣ್ಣಮುಂದೆ ತಂದುಕೊಡುತ್ತದೆ. ಹೀಗೆ ನಮ್ಮ ನಮ್ಮ ಜಗತ್ತಿನ ನಡುವಿರುವ ಭಿನ್ನತೆಯನ್ನೂ , ಸಾಮ್ಯತೆಯನ್ನೂ…. ಹೆಣ್ಣಿನ ಹೋರಾಟದ ಸುತ್ತ ಕಟ್ಟಿಕೊಂಡ ಸಂಸಾರದ ಜಗತ್ತನ್ನು, ಗಂಡಿನ ಗೀಳು ಹಾಗೂ ಯಾಜಮಾನ್ಯದಲ್ಲಿ ನೊಂದ ಮಕ್ಕಳ ಹಾಗೂ ಹೆಣ್ಣಿನ ಜಗತ್ತನ್ನೂ… ಪ್ರೀತಿ ಪ್ರೇಮಗಳಲ್ಲಿ, ಕಾಮದ ಉತ್ತುಂಗದಲ್ಲಿ ನೊಂದ ಹಿಂಸೆ, ಒಂಟಿತನವನ್ನೂ….

ಇದರಿಂದ ಉಂಟಾಗುವ ಮನೋವ್ಯಾಧಿ, ಸಮಾಜದ ವೈಕಲ್ಯಗಳನ್ನು ಪ್ರತಿನಿಧಿಸುವ ಕಲಾತ್ಮಕತೆಯೇ ಈ ಕಲಾತ್ಮಕ ಸಿನಿಮಾದ ಜಗತ್ತು. ಇದನ್ನು ನೋಡುವಾಗ ಕಲೆಯ ಸಹಜತೆಯ… ಪ್ರಕೃತಿಯ ನೈಜತೆಯನ್ನು ಒಪ್ಪುವ ಅಪ್ಪಟ ಮನುಷ್ಯರನ್ನಾಗಿಸುವ, ಪರಿಸರವನ್ನು ಸಹಜ ಕಣ್ಣುಗಳಿಂದ ನೋಡುವಂಥ ಒಂದು ನೋಟವನ್ನು ನಮ್ಮೊಳಗೆ ಹುಟ್ಟು ಹಾಕುವುದು ಈ ಸಿನಿಮಾಗಳ ಹಾಗೂ ಚಲನ ಚಿತ್ರೋತ್ಸವದ ಸಾಧನೆ ಎಂದರೆ ತಪ್ಪಾಗಲಾರದು.

ಹೀಗೆ ಒಂದೊಂದು ಪ್ರದೇಶದ ವಿಶೇಷತೆಯನ್ನು ತೋರುತ್ತಲೇ ಅಲ್ಲಿನ ಹಳೆಯ ಹಾಗೂ ಇಂದಿನ ವಿದ್ಯಮಾನಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುವ ಸಿಮಾ ಜಗತ್ತಿನ ಇಂಥ ಅರಿವು ಅಗಾಧ. ನಮ್ಮೊಳಗಿನ ಪ್ರೇಮವನ್ನು, ಸಂಬಂಧದ ಗಾಢತೆಯನ್ನು ತೋರುವ ಈ ಸಿನಿಮಾಗಳು ನಮ್ಮೊಳಗಿನ ಬೆತ್ತಲೆಯನ್ನು ಹಾಗೂ ಕಾಮದ ಪರಿಪೂರ್ಣತೆಯನ್ನು ಬೆತ್ತಾಲಾಗೇ ತೋರಿಸುವುದೂ ಕೂಡ ಸಿನಿಮಾಗಳಿಗೆ ಜನರನ್ನು ಆಕರ್ಷಿಸುತ್ತದೆ.

ಆದರೆ…. ನಮ್ಮೊಳಗಿನ ಬೆತ್ತಲನ್ನು, ತಬ್ಬಲಿತನವನ್ನು ಅಪ್ಪುವ ಒಪ್ಪುವ ಜೀವಗಳಿಗಾಗಿ ಇಡೀ ಜಗತ್ತು ಎಂದೆಂದಿಗೂ ನಿಲ್ಲದೆ ತುಡಿಯುತ್ತಿರುತ್ತಲೇ ಇರುತ್ತದೆ ಎಂದರೆ ತಪ್ಪಾಗಲಾರದು. ಇದೇ ಜೀವದ ಹೃದಯದಲ್ಲಡಗಿರುವ ಮಿಡಿತ. ರಕ್ತದ ಚಲನೆ. ನಿಲ್ಲದ ಕಾಲದ ಬಲುಮೆ ಒಲುಮೆ.