Advertisement
ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ. ಹಲವು ಜನಾಂಗಗಳಿದ್ದರೂ ಸಹ ರಾಷ್ಟ್ರದ ಭಾಷೆಯಾಗಿರುವ ಮಲಯ ಭಾಷೆಯು ಎಲ್ಲರನ್ನೂ ಒಂದುಗೂಡಿಸಿದೆ. ಈ ಭಾಷೆಗೆ ಬಹಾಸಾ ಮಲೇಷ್ಯಾ ಎನ್ನುವ ಹೆಸರೂ ಇದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮಲೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

ಔರಿಯಾ ಚೆರ್ಸೋನೆಸಸ್ ಎನ್ನುವುದು ಮಲೇಷ್ಯಾದ ಮೊದಲಿನ ಹೆಸರು. ‘ಚಿನ್ನದ ಪರ್ಯಾಯ ದ್ವೀಪ’ ಎನ್ನುವುದು ಇದರ ಅರ್ಥ. ಈ ಹೆಸರನ್ನು ಕೊಟ್ಟವರು ಗ್ರೀಕ್ ರೋಮನ್ ಭೂಗೋಳಶಾಸ್ತ್ರಜ್ಞರಾದ ಟಾಲೆಮಿ. ಈಗ ದೇಶಕ್ಕೆ ಮಲಯ ಎನ್ನುವ ಹೆಸರೂ ಇದೆ. ಆಗ್ನೇಯ ಏಷ್ಯಾದ ಮುಖ್ಯ ಭೂಭಾಗದಲ್ಲಿ, ಏಷ್ಯಾ- ಓಷಿಯಾನಿಯಾ ನಡುವೆ ವಿಸ್ತರಿಸಿರುವ ದ್ವೀಪಗಳಲ್ಲಿ ಭೂಪ್ರದೇಶವನ್ನು ಹೊಂದಿರುವ ಪ್ರಪಂಚದ ಏಕೈಕ ದೇಶ ಮಲೇಷ್ಯಾ. ರಿಂಗಿಟ್ ಎನ್ನುವುದು ಮಲೇಷ್ಯಾದ ಕರೆನ್ಸಿಯಾಗಿದೆ. ರಿಂಗಿಟ್ ಎಂದರೆ ಮಲಯ ಭಾಷೆಯಲ್ಲಿ ‘ಬೆಲ್ಲ’ ಎಂದರ್ಥ. ಹದಿನಾರು ಮತ್ತು ಹದಿನೇಳನೇ ಶತಮಾನಗಳಲ್ಲಿ ಸ್ಪ್ಯಾನಿಷ್ ಬೆಳ್ಳಿಯ ದಾರವನ್ನು ಇದರ ಅಂಚುಗಳಲ್ಲಿ ಬಳಸಲಾಗುತ್ತಿತ್ತು. ಇದನ್ನು ಈ ಹೆಸರು ಸೂಚಿಸುತ್ತದೆ.

ವಿಶ್ವದ ಅತೀ ದೊಡ್ಡ ಗುಹೆ ಕಂಡುಬರುವುದು ಮಲೇಷ್ಯಾದಲ್ಲಿ. ಇಲ್ಲಿನ ಸರವಾಕ್ ಹೆಸರಿನ ಗುಹೆ ತೀರಾ ದೊಡ್ಡದಾಗಿದೆ. ಪ್ರಪಂಚದ ದೊಡ್ಡ ಗುಹೆಗಳಲ್ಲಿ ಮೊದಲ ಸ್ಥಾನ ಸಂದಿರುವುದು ಈ ಗುಹೆಗೆ. ನಲವತ್ತು ಬೋಯಿಂಗ್ ವಿಮಾನಗಳ ರೆಕ್ಕೆಗಳನ್ನು ಕತ್ತರಿಸದೆಯೇ ಈ ಗುಹೆಯ ಒಳಗೆ ನಿಲ್ಲಿಸಬಹುದಾಗಿದೆ. ಅಷ್ಟು ದೊಡ್ಡದಾಗಿದೆ ಈ ಗುಹೆ. ಭೂಮಿಯ ಸುತ್ತಳತೆ ಸುಮಾರು ನಲುವತ್ತು ಸಾವಿರ ಕಿಲೋಮೀಟರ್‌ಗಳು. ಮಲೇಷ್ಯಾದಲ್ಲಿ ಅರುವತ್ತೈದು ಸಾವಿರ ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ಉದ್ದದ ಹೆದ್ದಾರಿ ಕಂಡುಬರುತ್ತದೆ. ಅಂದರೆ, ಭೂಮಿಯ ಸುತ್ತಳತೆಗಿಂತಲೂ ಉದ್ದವಾಗಿದೆ ಮಲೇಷ್ಯಾದ ಹೆದ್ದಾರಿ. 1991ರಲ್ಲಿ ಮಾನವ ಅಸ್ಥಿಪಂಜರವೊಂದು ಮಲೇಷ್ಯಾದಲ್ಲಿ ಪತ್ತೆಯಾಗಿತ್ತು. ಪುರಾತತ್ವಶಾಸ್ತ್ರಜ್ಞರು ಇದರ ಪ್ರಾಚೀನತೆಯ ಕುರಿತಾದ ಶೋಧ ಕೈಗೊಂಡರು. ಇದು ಸುಮಾರು ಹನ್ನೊಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಆಗ್ನೇಯ ಏಷ್ಯಾದಲ್ಲಿ ಕಂಡುಬಂದ ಅತೀ ಹಳೆಯ ಮಾನವ ಅಸ್ಥಿಪಂಜರ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ‘ಪೆರಾಕ್ ಮ್ಯಾನ್’ ಎಂಬ ಹೆಸರನ್ನು ಇಡಲಾಗಿದೆ.

ಪೆಟ್ರೋನಾಸ್ ಪ್ರದೇಶದಲ್ಲಿ ಅವಳಿ ಗೋಪುರಗಳಿವೆ. ಇದು 2004ನೇ ಇಸವಿಯವರೆಗೂ ಇದು ಪ್ರಪಂಚದ ಅತೀ ಎತ್ತರದ ಕಟ್ಟಡ ಎನಿಸಿಕೊಂಡಿತ್ತು. ಪ್ರಪಂಚದ ಅತೀ ದೊಡ್ಡ ವೃತ್ತ ಕಾಣಸಿಗುವುದು ಮಲೇಷ್ಯಾದಲ್ಲಿ. ಇಲ್ಲಿನ ಪುತ್ರಜಯ ಹೆಸರಿನ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ವೃತ್ತ ಮೂರೂವರೆ ಕಿಲೋಮೀಟರ್‌ಗಳಷ್ಟು ವ್ಯಾಸವನ್ನು ಹೊಂದಿದೆ. ಬೊರ್ನಿಯೊ ಹೆಸರಿನ ದ್ವೀಪ ಮಲೇಷ್ಯಾದಲ್ಲಿದೆ. ವಿಶ್ವದ ಅತೀ ದೊಡ್ಡ ದ್ವೀಪಗಳ ಪೈಕಿ ಮೂರನೆಯದೆನಿಸಿಕೊಂಡಿದೆ ಬೊರ್ನಿಯೊ. ಮಲೇಷ್ಯಾದ ಧ್ವಜವನ್ನು ವಿನ್ಯಾಸಗೊಳಿಸುವುದಕ್ಕಾಗಿ 1963ರಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಗೆದ್ದವರು ಇಪ್ಪತ್ತೊಂಬತ್ತು ವರ್ಷದ ವಾಸ್ತುಶಿಲ್ಪಿ ಮೊಹಮದ್ ಹಮ್ಜಾ. ಇವರು ವಿನ್ಯಾಸಗೊಳಿಸಿದ ಧ್ವಜವನ್ನು ಈಗ ಮಲೇಷ್ಯಾದ ರಾಷ್ಟ್ರಧ್ವಜವಾಗಿ ಮಾನ್ಯ ಮಾಡಲಾಗಿದೆ. ಕೆಚಪ್ ಎಂಬ ಆಂಗ್ಲ ಭಾಷೆಯ ಪದ ಬಂದಿರುವುದು ಹೊಕ್ಕಿನ್ ಭಾಷೆಯ ‘ಕೆ ಟ್ಸಿಯಾಪ್’ ಪದದಿಂದ. ಈ ಪದದ ಅರ್ಥ ಹುದುಗಿಸಿಟ್ಟ ಸಾಸ್. ಮಲೇಷ್ಯಾಕ್ಕೆ ಸಾಸ್ ಪರಿಚಯ ಮಾಡಿದವರು ಚೀನಾದ ವ್ಯಾಪಾರಿಗಳು. ಮುಳುಗಿದ ಹಡಗೊಂದರಿಂದ ಬಿದ್ದ ನಿಧಿಯೊಂದು ಮಲಕ್ಕಾ ಜಲಸಂಧಿಯ ತಳವನ್ನು ಸೇರಿಕೊಂಡಿದೆ. 1511ರಲ್ಲಿ ಪೋರ್ಚುಗಲ್ ದೇಶದ ಹಡಗು ಇಲ್ಲಿ ಮುಳುಗಿತ್ತು. ಇದರಲ್ಲಿ ಪೋರ್ಚುಗೀಸ್ ನೌಕಾಪಡೆ ಸಂಗ್ರಹಿಸಿದ್ದ ಹೇರಳವಾದ ನಿಧಿಯಿತ್ತು. ಹಡಗು ಮುಳುಗಿದ ಸಂದರ್ಭದಲ್ಲಿ ನಿಧಿಯೂ ಸಹ ನೀರಿನ ಅಡಿಭಾಗವನ್ನು ಸೇರಿಕೊಂಡಿತು. ಇಂತಹ ನಿಧಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಇಲ್ಲಿ ತಿರುಗುವ ಜನರು ಈಗಲೂ ಇದ್ದಾರೆ. ಕೆಲವು ಕಡಲ್ಗಳ್ಳರೂ ಸಹ ಈ ಪ್ರದೇಶದಲ್ಲಿದ್ದಾರೆ.

ಸರವಾಕ್ ಪ್ರದೇಶದಲ್ಲಿ ಬಿಂತಗೋರ್ ಹೆಸರಿನ ಮರಗಳು ಕಂಡುಬರುತ್ತವೆ. ಏಡ್ಸ್ ರೋಗವನ್ನು ಗುಣಪಡಿಸುವ ಶಕ್ತಿ ಈ ಮರಗಳಿಗಿದೆ ಎನ್ನುವ ನಂಬಿಕೆ ಕೆಲವರಲ್ಲಿದೆ. ಉಷ್ಣವಲಯದಲ್ಲಿ ಅತೀ ಎತ್ತರವಾಗಿ ಬೆಳೆಯುವ ತುವಾಲಾಂಗ್ ಜಾತಿಯ ಮರಗಳು ಮಲೇಷ್ಯಾದಲ್ಲಿ ಕಂಡುಬರುತ್ತವೆ. ಇನ್ನೂರ ಅರುವತ್ತು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರ ಹತ್ತು ಅಡಿಗಿಂತಲೂ ಹೆಚ್ಚು ವ್ಯಾಸದಷ್ಟು ಜಾಗವನ್ನು ಆಕ್ರಮಿಸಿಕೊಂಡು ನಿಂತಿರುತ್ತದೆ. ಪ್ರಪಂಚದ ಮೂರನೇ ಅತೀ ದೊಡ್ಡ ನೈಸರ್ಗಿಕ ರಬ್ಬರ್ ಉತ್ಪಾದನೆಯಾಗುವುದು ಮಲೇಷ್ಯಾದಲ್ಲಿ. ಇಂತಹ ರಬ್ಬರ್‌ಗಳಿಂದ ಕೈಗವಸುಗಳನ್ನು ತಯಾರಿಸಲಾಗುತ್ತದೆ. ವಿಶ್ವದ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ರಬ್ಬರ್ ಕೈಗವಸುಗಳನ್ನು ರಫ್ತು ಮಾಡುವ ದೇಶ ಎಂಬ ಹೆಗ್ಗಳಿಕೆ ಮಲೇಷ್ಯಾಕ್ಕೆ ಪ್ರಾಪ್ತವಾಗಿದೆ.

ಮಲೇಷ್ಯಾದ ಕಿನಾಬಾಲು ರಾಷ್ಟ್ರೀಯ ಉದ್ಯಾನವನದಲ್ಲಿ ರಾಫ್ಲೆಸಿಯಾ ಅರ್ನಾಲ್ಡಿ ಹೆಸರಿನ ಹೂವಿಗೆ ನೆಲೆಯಾಗಿದೆ. ಪ್ರಪಂಚದ ಅತೀ ದೊಡ್ಡ ಹೂವು ಎನ್ನುವ ಹೆಗ್ಗಳಿಕೆ ಇದಕ್ಕೆ ಸಂದಿದೆ. ಇದು ಕೊಳೆತ ಶವವನ್ನು ಹೋಲುವ ರೀತಿಯ ವಾಸನೆಯಿಂದ ಕೂಡಿದೆ. ಈ ಕಾರಣಕ್ಕೆ ಇದನ್ನು ‘ಶವದ ಹೂವು’ ಎಂದು ಕರೆಯಲಾಗುತ್ತದೆ. ಮಲಯನ್ ಹುಲಿಯು ಮಲೇಷ್ಯಾದಲ್ಲಿ ಕಂಡುಬರುವ ವಿಶಿಷ್ಟ ಜೈವಿಕ ಪ್ರಭೇದವಾಗಿದೆ. ಇದು ಈಗ ಅಳಿವಿನಂಚಿನಲ್ಲಿದೆ. ಇಡೀ ಭೂಮಿಯಲ್ಲಿ ಮುನ್ನೂರ ಐವತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ಮಲಯನ್ ಹುಲಿಗಳಿವೆ.

ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ. ಹಲವು ಜನಾಂಗಗಳಿದ್ದರೂ ಸಹ ರಾಷ್ಟ್ರದ ಭಾಷೆಯಾಗಿರುವ ಮಲಯ ಭಾಷೆಯು ಎಲ್ಲರನ್ನೂ ಒಂದುಗೂಡಿಸಿದೆ. ಈ ಭಾಷೆಗೆ ಬಹಾಸಾ ಮಲೇಷ್ಯಾ ಎನ್ನುವ ಹೆಸರೂ ಇದೆ. ಮಲೇಷ್ಯಾದ ಹೆಚ್ಚಿನ ಸಮುದಾಯಗಳು ಮಾತನಾಡುವುದು ಇದೇ ಭಾಷೆಯನ್ನು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಇದೇ ಭಾಷೆಯ ಮೂಲಕ ಮಕ್ಕಳಿಗೆ ಬೋಧನೆ ನೀಡಲಾಗುತ್ತಿದೆ.

ಮಲೇಷ್ಯಾದಲ್ಲಿ ಪ್ರಮುಖವಾಗಿ ನಾಲ್ಕು ಗುಂಪಿಗೆ ಸೇರಿದ ಜನರಿದ್ದಾರೆ. ಇಲ್ಲಿಯ ಮೂಲ ನಿವಾಸಿಗಳನ್ನು ಒರಾಂಗ್ ಅಸ್ಲಿ ಎಂದು ಕರೆಯಲಾಗುತ್ತದೆ. ಅಂದರೆ ‘ಮೂಲ ಜನರು’ ಎಂದರ್ಥ. ಮಲಯರು, ಚೀನೀಯರು ಮತ್ತು ದಕ್ಷಿಣ ಏಷ್ಯಾದವರು ಇಲ್ಲಿ ಕಂಡುಬರುವ ಇತರ ಜನಸಮುದಾಯದವರಾಗಿದ್ದಾರೆ. ಇಲ್ಲಿ ಯುರೋಪಿಯನ್ನರು, ಅಮೇರಿಕನ್ನರು, ಯುರೇಷಿಯನ್ನರು, ಅರಬ್ಬರು ಮತ್ತು ಥಾಯ್ ಜನರ ಸಂಖ್ಯೆ ಕಡಿಮೆ. ಇರುವ ನಾಲ್ಕು ಪ್ರಧಾನ ಗುಂಪುಗಳಲ್ಲಿ ಮೂಲ ನಿವಾಸಿಗಳ ಗುಂಪಾದ ಒರಾಂಗ್ ಅಸ್ಲಿಯಲ್ಲಿ ಕಡಿಮೆ ಜನರಿದ್ದಾರೆ. ಮಲಯ ಭಾಷೆಯ ಉಪಭಾಷೆಯನ್ನು ಮಾತನಾಡುವ ಜಕುನ್ ಸಮುದಾಯದವರು ಇಲ್ಲಿದ್ದಾರೆ. ಸೆಮಾಂಗ್ ಮತ್ತು ಸನೋಯಿ ಜನಾಂಗದವರೂ ಇದ್ದಾರೆ. ಇವರು ಸೋಮ ಖಮೇರ್ ಭಾಷಾ ಕುಟುಂಬದ ಭಾಷೆಗಳನ್ನು ಮಾತನಾಡುತ್ತಾರೆ. ಇವರಲ್ಲಿ ಮಲಯರು ಪರ್ಯಾಯ ದ್ವೀಪದ ವಿವಿಧ ಭಾಗಗಳಲ್ಲಿ ಮತ್ತು ಆಗ್ನೇಯ ಏಷ್ಯಾದಲ್ಲಿ ನೆಲೆಸಿದ್ದವರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಐವತ್ತು ಪ್ರತಿಶತಕ್ಕಿಂತಲೂ ಹೆಚ್ಚು ಜನರು ಈ ಜನಾಂಗಕ್ಕೆ ಸೇರಿದವರು. ಆಡಳಿತದಲ್ಲಿ ಪ್ರಬಲವಾಗಿರುವ ಜನಾಂಗವಿದು. ಪರ್ಯಾಯ ದ್ವೀಪದಲ್ಲಿ ಇವರ ಸಂಖ್ಯೆಯೂ ಹೆಚ್ಚಿದೆ. ಇವರು ಮಾತನಾಡುವ ಮಲಯ ಭಾಷೆಯು ಆಸ್ಟ್ರೋನೇಷಿಯನ್ ಭಾಷೆಯ ಉಪಭಾಷೆಯಾಗಿದೆ. ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿ ಬದುಕುತ್ತಿರುವ ಮಲಯರ ಸಂಸ್ಕೃತಿಯೇ ಬೇರೆ. ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶದ ಮಲಯರ ಸಂಸ್ಕೃತಿಯೇ ಬೇರೆ. ಮಲಯರು ಇಸ್ಲಾಂ ಧರ್ಮದ ಕುರಿತು ಶ್ರದ್ಧೆಯನ್ನು ಇರಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಲಯರು ಮಲೇಷ್ಯಾದ ಇತರ ಜನಾಂಗದವರಿಗಿಂತ ಭಿನ್ನರಾಗಿದ್ದಾರೆ.

ಮಲೇಷ್ಯಾದಲ್ಲಿ ಇಪ್ಪತ್ತೈದು ಶೇಕಡಾದಷ್ಟು ಜನರು ಚೀನೀಯರು. ಇವರು ಒಂದು ಕಾಲಕ್ಕೆ ಆಗ್ನೇಯ ಚೀನಾದಿಂದ ವಲಸೆ ಬಂದವರು. ಮಲಯರು ಒಂದೇ ಭಾಷೆಯನ್ನು ಅಳವಡಿಸಿಕೊಂಡಿದ್ದರೆ ಇವರು ಹಲವು ಭಾಷೆಗಳನ್ನು ಒಪ್ಪಿಕೊಂಡಿದ್ದಾರೆ; ಅಪ್ಪಿಕೊಂಡಿದ್ದಾರೆ. ಹೊಕ್ಕಿನ್, ಹೈನಾನೀಸ್, ಕ್ಯಾಂಟೋನೀಸ್, ಹಕ್ಕಾ ಮೊದಲಾದ ಚೈನೀಸ್ ಭಾಷೆಗಳು ಮಲೇಷ್ಯಾದ ಚೀನೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಈ ಎಲ್ಲಾ ಭಾಷೆಗಳು ಎಲ್ಲಾ ಚೀನೀಯರಿಗೂ ಗೊತ್ತಿಲ್ಲ. ಹೈನಾನೀಸ್ ಮಾತನಾಡುವವರಿಗೆ ಹೊಕ್ಕಿನ್ ಭಾಷೆಯ ಅರಿವಿಲ್ಲ. ಹಕ್ಕಾ ಭಾಷೆಯ ತಿಳುವಳಿಕೆ ಇದ್ದವರಿಗೆ ಕ್ಯಾಂಟೋನೀಸ್ ಗೊತ್ತಿಲ್ಲ. ಈ ಕಾರಣದಿಂದಾಗಿ ಅದೆಷ್ಟೋ ಸಂದರ್ಭದಲ್ಲಿ ಇಬ್ಬರು ಚೀನೀಯರು ಭೇಟಿಯಾದಾಗ ಮ್ಯಾಂಡರಿನ್ ಚೈನೀಸ್, ಇಂಗ್ಲಿಷ್, ಮಲಯ ಮೊದಲಾದ ಭಾಷೆಗಳಲ್ಲಿ ಸಂವಹನ ನಡೆಸುತ್ತಾರೆ. ಬಾಬಾ ಚೈನೀಸ್ ಎನ್ನುವ ವಿಶಿಷ್ಟ ಸಮುದಾಯ ಮಲೇಷ್ಯಾದಲ್ಲಿದೆ. ಇದರಲ್ಲಿ ಮಲಯರು ಮತ್ತು ಚೀನೀಯರು ಇಬ್ಬರೂ ಸೇರಿಕೊಂಡಿದ್ದಾರೆ. ಇವರು ಮಾತನಾಡುವುದು ಮಲಯ ಪಾಟೊಯಿಸ್ ಭಾಷೆಯನ್ನು. ಇವರ ಸಂಪ್ರದಾಯ, ರೂಢಿಗಳಲ್ಲಿ ಚೀನಾದ ಪ್ರಭಾವ ಗಾಢವಾಗಿ ಕಂಡುಬರುತ್ತದೆ.

ಮಲೇಷ್ಯಾದ ಒಟ್ಟು ಜನಸಂಖ್ಯೆಯಲ್ಲಿ ಒಂದಷ್ಟು ಜನರು ದಕ್ಷಿಣ ಏಷ್ಯಾಕ್ಕೆ ಸೇರಿದವರು. ಇವರಲ್ಲಿ ಭಾರತೀಯರಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾದವರಿದ್ದಾರೆ. ಇವರಲ್ಲಿ ಎರಡು ಭಾಷಾ ಗುಂಪಿಗೆ ಸೇರಿದವರಿದ್ದಾರೆ. ಇಂಡೋ ಯುರೋಪಿಯನ್ ಭಾಷೆಗಳನ್ನು ಮಾತನಾಡುವವರು ಮತ್ತು ದ್ರಾವಿಡ ಭಾಷೆಗಳನ್ನು ಮಾತನಾಡುವವರು ಎಂದು ಇವರನ್ನು ವರ್ಗೀಕರಿಸಿಕೊಳ್ಳಬಹುದು. ತಮಿಳು, ತೆಲುಗು, ಮಲಯಾಳಂ ಭಾಷೆಗಳು ಇಲ್ಲಿ ಮಾತನಾಡಲ್ಪಡುವ ಪ್ರಮುಖ ದ್ರಾವಿಡ ಭಾಷೆಗಳು. ಪಂಜಾಬಿ, ಬೆಂಗಾಲಿ, ಪಾಷ್ಟೋ ಮತ್ತು ಸಿಂಹಳ ಭಾಷೆಗಳು ಇಲ್ಲಿಯ ಇಂಡೋ ಯುರೋಪಿಯನ್ ಭಾಷೆಗಳು. ಇಷ್ಟೂ ಭಾಷೆಗಳ ಪೈಕಿ ತಮಿಳು ಮಾತನಾಡುವವರ ಸಂಖ್ಯೆ ಜಾಸ್ತಿಯಿದೆ. ಸರವಾಕ್ ಪ್ರದೇಶದಲ್ಲಿ ಇಬಾನ್ ಎನ್ನುವುದು ಪ್ರಮುಖ ಜನಾಂಗ. ಇಲ್ಲಿಯ ಜನರಲ್ಲಿ ಇಪ್ಪತ್ತೈದು ಶೇಕಡಾಕ್ಕಿಂತಲೂ ಹೆಚ್ಚು ಜನರು ಈ ಗುಂಪಿಗೆ ಸೇರಿದವರು. ಚೀನೀಯರು, ಮಲಯರು, ಬಿಡಾಯುಹ್, ಮೆಲನೌ ಈ ಎಲ್ಲಾ ಜನರು ಇಲ್ಲಿದ್ದಾರೆ. ಇತರ ಜನಾಂಗಕ್ಕೆ ಸೇರಿದವರನ್ನು ಒರಾಂಗ್ ಉಲು ಎಂದು ಗುರುತಿಸಲಾಗುತ್ತದೆ. ಇವರು ಅಲ್ಪಸಂಖ್ಯಾತರು. ಸರವಾಕ್‌ನ ಜನರು ಬೇರೆ ಬೇರೆ ಆಸ್ಟ್ರೋನೇಷಿಯನ್ ಭಾಷೆಗಳನ್ನು ಮಾತನಾಡುತ್ತಾರೆ. ಇಬಾನ್ ಜನಾಂಗದವರು ಮೂಲತಃ ಯೋಧರು. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳಲ್ಲಿ ಇವರು ಸೈನಿಕರಾಗಿ ಗುರುತಿಸಿಕೊಂಡವರು. ಇಂಡೋನೇಷ್ಯಾದ ಉತ್ತರ ಕಾಲಿಮಂಟನ್‌ನ ಕಪುವಾಸ್ ನದಿ ಪ್ರದೇಶ ಇವರ ಮೂಲ ಎನ್ನುವ ಒಂದು ಅಭಿಪ್ರಾಯವಿದೆ. ಈಗಲೂ ಮಲೇಷ್ಯಾದ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಇಬಾನ್ ಸಮುದಾಯದವರು ಭತ್ತದ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಒಮ್ಮೆ ನೆಟ್ಟ ಭತ್ತ ಇಳುವರಿ ಕೊಟ್ಟ ಬಳಿಕ ಒಂದಷ್ಟು ಸಮಯದವರೆಗೆ ಭೂಮಿಯನ್ನು ಹಾಗೆಯೇ ಖಾಲಿಬಿಡಲಾಗುತ್ತದೆ. ಈ ಅವಧಿಯಲ್ಲಿ ಮಣ್ಣು ಮತ್ತೆ ಫಲವತ್ತತೆಯನ್ನು ಪಡೆದುಕೊಳ್ಳುತ್ತದೆ. ಇಬಾನ್ ಸಮುದಾಯದ ಭಾಷೆ ಮಲಯ ಭಾಷೆಯಂತೆಯೇ ಇದೆ. ಆದರೆ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ.

ಇಬಾನ್ ಸಮುದಾಯದಲ್ಲಿ ಆಗತಾನೇ ಹುಟ್ಟಿದ ಮಗುವನ್ನು ‘ಉಲತ್’ ಎಂದು ಕರೆಯುವ ಪದ್ಧತಿಯಿದೆ. ಉಲತ್ ಎಂದರೆ ‘ಹುಳು’ ಎಂದರ್ಥ. ಅಂದರೆ ಮಗುವಿಗೆ ಹೆಸರನ್ನು ಇಡುವವರೆಗೂ ಅದು ಮನೆಯವರ ಪಾಲಿಗೆ ಹುಳು. ಮಗುವಿಗೆ ಹೆಸರಿಡುವ ಸಂಪ್ರದಾಯವೂ ಸಹ ವಿಚಿತ್ರವಾಗಿದೆ. ಸತ್ತ ಸಂಬಂಧಿಗಳಲ್ಲಿ ಯಾರಾದರೊಬ್ಬರ ಹೆಸರನ್ನು ಇಡಬೇಕು ಎನ್ನುವುದು ಸಂಪ್ರದಾಯ. ಇದಕ್ಕಾಗಿ ಆ ಸಂಬಂಧಿಗಳ ಹೆಸರನ್ನು ಸೂಚಿಸುವ ಅಕ್ಕಿಯ ಉಂಡೆಗಳನ್ನು ತಯಾರಿಸಲಾಗುತ್ತದೆ. ಹೀಗೆ ಸಿದ್ಧಪಡಿಸಿದ ಉಂಡೆಗಳನ್ನು ಕೋಳಿಯ ಮುಂದೆ ಇಡಲಾಗುತ್ತದೆ. ಅದು ಯಾವುದನ್ನು ಆಯ್ಕೆ ಮಾಡುತ್ತದೋ ಆ ಹೆಸರನ್ನು ಮಗುವಿಗೆ ಇಡಲಾಗುತ್ತದೆ. ಇದು ಹಳೆಯ ಕಾಲದ ಸಂಪ್ರದಾಯ. ಈಗ ತಂದೆ ತಾಯಿ ತಮಗೆ ಇಷ್ಟವಾದ ಹೆಸರನ್ನು ಮಗುವಿಗೆ ಇಡುವ ಪ್ರವೃತ್ತಿ ರೂಪುಗೊಂಡಿದೆ. ಯಥಾವತ್ತಾಗಿ ಸಂಪ್ರದಾಯದ ಪಾಲನೆ ನಡೆಯುವುದಿಲ್ಲ.

ಇಸ್ಲಾಂ ಧರ್ಮವನ್ನು ಅಧಿಕೃತ ಧರ್ಮವಾಗಿಸಿಕೊಂಡಿದೆ ಮಲೇಷ್ಯಾ. ಅರುವತ್ತು ಪ್ರತಿಶತ ಜನರು ಇಸ್ಲಾಂ ಧರ್ಮದ ಅನುಯಾಯಿಗಳು. ಮಲಯರಾಗಿರುವವರೆಲ್ಲರೂ ಮುಸ್ಲಿಮರು. ದೇಶದ ಕಾನೂನು ಇದನ್ನು ತಿಳಿಸಿಕೊಡುತ್ತದೆ. ಚೀನೀಯರು ಕನ್ಫ್ಯೂಷಿಯನಿಸಂ ಜೊತೆಗೆ ಬೌದ್ಧಧರ್ಮ, ದಾವೋಯಿಸಂ ಪರಿಪಾಲನೆ ಮಾಡುತ್ತಾರೆ. ಕ್ರೈಸ್ತ ಧರ್ಮಕ್ಕೆ ಸೇರಿದವರು ಇಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿದ್ದಾರೆ. ಇಲ್ಲಿರುವ ಹೆಚ್ಚಿನ ಭಾರತೀಯರು ಮತ್ತು ಸಿಂಹಳೀಯರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಪಾಕಿಸ್ತಾನದ ಜನರು ಮುಸ್ಲಿಮರು. ಸಿಖ್ಖ್ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದ ಭಾರತೀಯರೂ ಇದ್ದಾರೆ. ಇಲ್ಲಿಯ ಪರ್ಯಾಯ ದ್ವೀಪದಲ್ಲಿ ಬದುಕುತ್ತಿರುವ ಒರಾಂಗ್ ಅಸ್ಲಿ ಸಮುದಾಯದವರು ಇಸ್ಲಾಂ ತಾತ್ವಿಕತೆಗೆ ಬದ್ಧರಾಗಿದ್ದಾರೆ. ಕೆಲವು ಸಮುದಾಯಗಳು ಸ್ಥಳೀಯ ಧರ್ಮಗಳಿಗೆ ನಿಷ್ಠವಾಗಿವೆ. ಸರವಾಕ್ ಪ್ರದೇಶದಲ್ಲಿರುವ ಬಹುತೇಕ ಸಮುದಾಯಗಳು ಪಾಲಿಸುತ್ತಿರುವುದು ಕ್ಯಾಥೋಲಿಕ್ ಇಲ್ಲವೇ ಪ್ರೊಟೆಸ್ಟೆಂಟ್ ಧರ್ಮವನ್ನು. ಮೆಲನೌ ಪ್ರದೇಶದಲ್ಲಿ ಮುಸ್ಲಿಮರಿದ್ದಾರೆ. ಕ್ರೈಸ್ತರಿದ್ದಾರೆ. ಕಡಜನ್ ಮತ್ತು ಮುರುತ್ ಪ್ರಾಂತ್ಯಗಳಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು. ಉಳಿದವರು ಮುಸ್ಲಿಮರು. ಇಸ್ಲಾಂ ಧರ್ಮದ ಪರಿಪಾಲಕರು ಬಜಾವು ಪ್ರದೇಶದಲ್ಲಿದ್ದಾರೆ.

ಮಲೇಷ್ಯಾದಲ್ಲಿ ಸಾಂಪ್ರದಾಯಿಕವಾದ ಕ್ರೀಡೆಗಳೂ ಕಂಡುಬರುತ್ತವೆ. ಪಾಶ್ಚಿಮಾತ್ಯ ಆಟಗಳೂ ಇವೆ. ಹಲವು ಕ್ರೀಡೆಗಳು ಮಲೇಷ್ಯಾದವರಿಗೆ ಪರಿಚಯವಾದದ್ದು ಇಂಗ್ಲೆಂಡ್‌ನಿಂದ ಬಂದ ವಲಸೆಗಾರರ ಮೂಲಕ. ಹೀಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಫುಟ್‌ಬಾಲ್, ಕ್ರಿಕೆಟ್, ರಗ್ಬಿ ಮೊದಲಾದ ಅನೇಕ ಆಟಗಳು ಮಲಯ ಜನರಿಗೆ ತಿಳಿದುಬಂದವು. ಈ ಕ್ರೀಡೆಗಳಿಗೆ ಸಂಬಂಧಿಸಿದ ಹಲವಾರು ಕ್ಲಬ್‌ಗಳಿವೆ. ಮಲೇಷ್ಯಾ ಕಪ್ ಎನ್ನುವುದು ಇಲ್ಲಿಯ ಪ್ರಮುಖ ಫುಟ್‌ಬಾಲ್ ಪಂದ್ಯಾವಳಿಯಾಗಿದೆ. ಇದು ಆರಂಭಗೊಂಡದ್ದು 1921ರಲ್ಲಿ. ಮಲೇಷ್ಯಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲು ಕಾಲಿರಿಸಿದ್ದು ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ. ಮೊದಲ ಪದಕ ಒಲಿದದ್ದು ಪುರುಷರ ಬ್ಯಾಡ್ಮಿಂಟನ್‌ನಲ್ಲಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಆಗ್ನೇಯ ಏಷ್ಯಾ ಕ್ರೀಡಾಕೂಟವನ್ನು ಆರಂಭಿಸುವಲ್ಲಿ ಮಲೇಷ್ಯಾ ಪ್ರಮುಖ ಪಾತ್ರ ವಹಿಸಿದೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ