ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು. ನಾನು ಆ ಕ್ಷಣಕ್ಕೆ ವೇದಿಕೆಯಿಂದ ಕೆಳಗಿಳಿದು ನನ್ನ ಜಾಗದಲ್ಲಿ ಕುಳಿತುಬಿಟ್ಟೆ. ಅವತ್ತಿಂದ ನಾನು ಚುಟುಕು ಬರೆಯುವುದನ್ನೇ ನಿಲ್ಲಿಸಿದೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಬಡ ಹಾಗೂ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಹುತೇಕರದ್ದು ಇದೇ ಸಮಸ್ಯೆ. ಅವರು ಎಷ್ಟೇ ಬುದ್ಧಿವಂತರಾಗಿದ್ರೂ, ದೊಡ್ಡ ಹುದ್ದೆಗೆ ಅಪೇಕ್ಷೆ ಪಟ್ಟರೂ, ಮೊದಲು ಯಾವುದ್ದಾದರೂ ಆಗಲಿ ಚಿಕ್ಕ ಕೆಲಸಕ್ಕೆ ಸೇರಿ ನಂತರ ಅದರಲ್ಲಿ ಕಾರ್ಯನಿರ್ವಹಿಸುತ್ತಾ ಮುಂದೆ ದೊಡ್ಡ ಹುದ್ದೆಗೆ ಪ್ರಯತ್ನ ಪಡುವ ಸಲಹೆ ಹಿರಿಯರಿಂದ ಬರುತ್ತದೆ. ಇದರಲ್ಲಿ ಕೆಲವರು ಸಕ್ಸಸ್ ಆದರೆ ಹಲವರು ಅದೇ ಹುದ್ದೆಯಲ್ಲೇ ಮುಂದುವರೆಯುತ್ತಾರೆ!! ಆಗಿನ ಕಾಲಕ್ಕೆ ‘ಬೇಗನೇ ಸರ್ಕಾರಿ ಕೆಲಸ ಸಿಗುತ್ತದೆ’ ಎಂದು ಟಿಸಿಹೆಚ್‌ಗೆ ಅನೇಕರು ಇಷ್ಟಪಟ್ಟು ಬರುತ್ತಿದ್ದರು. ಕೆಲವರಂತೂ ಬೇರೆ ಕೋರ್ಸ್ ಓದಿದ್ದರೂ ಸರ್ಕಾರಿ ಕೆಲಸದ ಆಸೆಯಿಂದ ಇದೇ ಕೋರ್ಸ್ ಮಾಡ್ತಿದ್ರು. ಮೊದಮೊದಲು ‘ಬಡವರ ಕೋರ್ಸ್’ ಇದು ಎನಿಸಿದ್ರೂ ಬರ್ತಾ ಬರ್ತಾ ಉಳ್ಳವರೂ ಸಹ ಮಾಡಲು ಶುರು ಮಾಡಿದರು. ಈ ಕೋರ್ಸಿಗೆ ತುಂಬಾ ಡಿಮ್ಯಾಂಡ್ ಬಂತು. ನಾನು ಇದೇ ಟ್ರೆಂಡಿನಲ್ಲಿ ಬಿ.ಎಸ್ಸಿ. ಡಿಗ್ರಿ ಬಿಟ್ಟು ಈ ಕೋರ್ಸ್ ಮಾಡಿದೆ. ಆದರೆ ಕೋರ್ಸ್ ಸೇರಿದ ಮೇಲೆ ಗೊತ್ತಾಯ್ತು ಇಲ್ಲಿರುವ ನೇಮಕಾತಿಯ ನಿಯಮಗಳು ನಾನು ಗಳಿಸಿದ ಪಿಯುಸಿ ಅಂಕಗಳಿಗೆ ಪೂರಕವಾಗಿರಲಿಲ್ಲ. ಪಿಯುಸಿಯ ಅಂಕಗಳನ್ನು ಮೂರನೇ ಒಂದು ಭಾಗದಷ್ಟು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದುದರಿಂದ ನನಗೆ ಶಿಕ್ಷಕರ ನೇಮಕಾತಿಯಲ್ಲಿ ತೊಂದರೆಯಾಗುವ ಲಕ್ಷಣಗಳನ್ನು ಮೊದಲೇ ತಿಳಿದುಕೊಂಡೆ. ಆಗ ನಾನು ಟಿಸಿಹೆಚ್ ಹಾಗೂ ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಲೇಬೇಕೆಂಬ ನಿರ್ಧಾರಕ್ಕೆ ಬಂದೆ. ತುಂಬಾ ಸೀರಿಯಸ್ ಆಗಿ ಮೊದಲಿಂದಲೂ ಓದಲು ಶುರು ಮಾಡಿದೆ.
ನಮ್ಮದು ತುಂಬಾ ಶಿಸ್ತಿನ ಕಾಲೇಜಾಗಿತ್ತು. ‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ಸಾಂಸ್ಕೃತಿಕ ಚಟುವಟಿಕೆಗಳು ನನಗೆ ಆಗ ಭಾರವೆನಿಸುತ್ತಿದ್ದವು. ಅವುಗಳ ಮಹತ್ವ ಈಗ ಗೊತ್ತಾಗುತ್ತಾ ಇದೆ. ಕಾಲೇಜಿನಲ್ಲಿ ವಿಷಯವಾರು ಸಂಘಗಳಿದ್ದವು. ಇವುಗಳ ಮೂಲಕ ವರ್ಷವಿಡೀ ಕಾರ್ಯಕ್ರಮಗಳು ಜರುಗುತ್ತಿದ್ದವು. ನಮ್ಮ ಕಾಲೇಜಿನ ಹೆಸರೇ ‘ಸರ್ವ ಸೇವಾ ಬೋಧಕ ಶಿಕ್ಷಣಾಲಯ’ ಎಂಬ ಹೆಸರಿಟ್ಟ ಫಲವೋ ಏನೋ ಸರ್ವ ರೀತಿಯಲ್ಲೂ ಶಿಕ್ಷಕ ತಯಾರಾಗಬೇಕೆಂಬುದು ನಮ್ಮ ಬೋಧಕರ ನಿಲುವಾಗಿತ್ತು. ಶಿಕ್ಷಣದ ಅರ್ಥವಾದ “ಸರ್ವತೋಮುಖ ಬೆಳವಣಿಗೆಯನ್ನು ಉಂಟು ಮಾಡುವುದೇ ಶಿಕ್ಷಣ” ಎಂಬ ವಾಕ್ಯವನ್ನು ಸಾರ್ಥಕಗೊಳಿಸಲು ನಮಗೆ ಹೆಚ್ಚೆಚ್ಚು ಕಲಿಕೆಯ ಜೊತೆಗೆ ಇತರೆ ಕೌಶಲ್ಯಗಳ ಕಲಿಕೆಗೆ ಆದ್ಯತೆ ನೀಡಲಾಗುತ್ತಿತ್ತು.
ನಮಗೆ ಕನ್ನಡವನ್ನು ಬಿದರಹಳ್ಳಿ ಕೃಷ್ಣಮೂರ್ತಿ ಸರ್‌ರವರು ಬೋಧಿಸುತ್ತಿದ್ದರು. ಅವರಿಗೆ ನಾವು ‘ಬಿಕೆಎಂ ಸರ್’ ಎಂದು ಕರೆಯುತ್ತಿದ್ದೆವು. ಅವರು ಉತ್ತಮ ಬರಹಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಮಹಾತ್ಮ ಗಾಂಧೀಜಿಯವರೂ ಸಹ ಉತ್ತಮ ಬರಹಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರಂತೆ. ನನ್ನ ಕನ್ನಡ ಬರವಣಿಗೆ ಚೆನ್ನಾಗಿದೆ. ನಮಗೆ ಪ್ರೌಢಶಾಲೆಯಲ್ಲಿ ನಮ್ಮ ಕನ್ನಡ ಮೇಷ್ಟ್ರಾಗಿದ್ದ ಪ್ರಭಾಕರ್ ಸರ್ ರವರು ಪ್ರತಿದಿನವೂ ನಮಗೆ ಸೊನ್ನೆ ಬರೆಯಲು ಕೊಡುತ್ತಿದ್ದುದೇ ನನ್ನ ಬರವಣಿಗೆ ಉತ್ತಮಗೊಳ್ಳಲು ಕಾರಣವಾಗಿತ್ತು. ಕನ್ನಡದ ‘ಅ’ ದಿಂದ ‘ಳ’ ವರೆಗಿನ ಎಲ್ಲಾ ಅಕ್ಷರಗಳು ಸೊನ್ನೆಯಿಂದ ಶುರುವಾಗುತ್ತವೆ. ಯಾರಿಗೆ ಸೊನ್ನೆಯನ್ನು ಸರಿಯಾಗಿ ಬರೆಯಲು ಬರುತ್ತದೆಯೋ ಅವರ ಕನ್ನಡ ಬರವಣಿಗೆ ತುಂಬಾ ಚೆನ್ನಾಗಿರುತ್ತದೆ ಎಂದು ಅವರು ನಮಗೆ ಹೇಳುತ್ತಿದ್ದರು. ಪ್ರತಿದಿನವೂ ಸೊನ್ನೆ ಬರೆದ ಪರಿಣಾಮವೋ ಏನೋ ಕನ್ನಡ ಬರೆವಣಿಗೆ ಮತ್ತು ಪೋಣಿಸಿದ ರೀತಿಯಲ್ಲಿ ಉತ್ತಮವಾಗಿತ್ತು ಪಾಠದ ಜೊತೆಗೆ ನಮ್ಮ ‘ಬಿಕೆಎಂ ಸರ್’ ನಾಟಕಾಭಿನಯ, ಸಾಹಿತ್ಯ, ಕಲೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಪುಸ್ತಕ ಓದುವ ಹವ್ಯಾಸದ ಬಗ್ಗೆ ಹೆಚ್ಚೆಚ್ಚು ಹೇಳುತ್ತಿದ್ದರು. ನಮಗೆ ಪ್ರೊಜೆಕ್ಟ್ ವರ್ಕ್‌ಗೆ ಅವರು ಖ್ಯಾತ ಲೇಖಕರ ಪುಸ್ತಕ ವಿಮರ್ಶೆ ಬರೆಯಲು ಕೊಟ್ಟಿದ್ದರು. ನನಗೆ ಆಗ ಡಾ.ಹೆಚ್.ನರಸಿಂಹಯ್ಯನವರ ಆತ್ಮಕಥೆ ‘ಹೋರಾಟದ ಹಾದಿ’ ಪುಸ್ತಕವನ್ನು ನೀಡಿದ್ದರು. ಅದನ್ನು ಓದಿದ್ದರಿಂದ ನನಗೆ ಹೆಚ್ಚೆನ್‌ರವರ ಬಗ್ಗೆ ತಿಳಿಯಲು ಅನುಕೂಲವಾಯ್ತು. ಕನ್ನಡ ಸಂಘದಿಂದ ಅನೇಕ ಚಟುವಟಿಕೆಗಳನ್ನು ಮಾಡುತ್ತಿದ್ದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ‘ರಾಮಾಯಣ’, ದ್ವಿತೀಯ ವರ್ಷದವರಿಗೆ ‘ಮಹಾಭಾರತ’ ನಾಟಕವನ್ನು ಮಾಡಿಸುತ್ತಿದ್ದರು.
ಮೊದಲನೇ ವರ್ಷದಲ್ಲಿ ರಾಮಾಯಣ ನಾಟಕ ಮಾಡಿಸಲು ನಮಗೆ ಮೊದಲು ರಾಮಾಯಣದ ಪುಸ್ತಕವನ್ನು ನೀಡಿದ್ದರು. ಅದನ್ನು ಸಂಪೂರ್ಣವಾಗಿ ಓದಿ ನಾವು ಇದರ ಪರೀಕ್ಷೆಯನ್ನು ಬರೆಯಬೇಕಾಗಿತ್ತು. ಇದರಲ್ಲಿ ಬರುವ ಪಾತ್ರಗಳನ್ನು ನಾವು ಹಂಚಿಕೊಳ್ಳಬೇಕಾಗಿತ್ತು ಹಾಗೂ ಎಲ್ಲಾ ಸನ್ನಿವೇಶಗಳನ್ನು ಕ್ರಮಬದ್ಧವಾಗಿ ಜೋಡಿಸಿ ನಮಗೆ ನಾಟಕ ಮಾಡಿಸುತ್ತಿದ್ದರು. ಇದರ ಅಭ್ಯಾಸಕ್ಕೆಂದೇ ನಮಗೆ ಕಾಲೇಜಿನ ನಂತರದ ಅವಧಿಯಲ್ಲೂ ಅಭ್ಯಾಸ ಮಾಡಿಸಲಾಗುತ್ತಿತ್ತು.
ನನಗೆ ಈ ನಾಟಕದಲ್ಲಿ ರಾಕ್ಷಸಿಯ ಪಾತ್ರ ಸಿಕ್ಕಿತು. ಮಲಗಿದ್ದ ಕುಂಭಕರ್ಣನ ಎದ್ದೇಳಿಸುವ ಸನ್ನಿವೇಶ. ನಾನು ನಮ್ಮ ಕ್ಲಾಸ್‌ಮೇಟ್ ಒಬ್ಬಳ ಮಿಡಿ ಹಾಕಿಕೊಂಡು ಪಾತ್ರಕ್ಕೆ ತಯಾರಾದೆ. ಕುಂಭಕರ್ಣನಿಗೆ ಏಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುವುದು, ವಿವಿಧ ತಿಂಡಿಗಳನ್ನು ತಿನ್ನಿಸುವುದು ಹೀಗೆ ವಿವಿಧ ರೀತಿಯಲ್ಲಿ ಪ್ರಯತ್ನಿಸುವ ಸನ್ನಿವೇಶ. ನಾಟಕ ಶುರುವಾಗಿದೆ. ಆಗ ನಾನು ಮಲಗಿದ್ದ ಕುಂಭಕರ್ಣನಿಗೆ ಬೋಂಡ ತಿನ್ನಿಸಲು ಹೋದಾಗ ಅವನು ಬೋಂಡಾದ ಜೊತೆಗೆ ನನ್ನ ಕೈಬೆರಳನ್ನೇ ಜೋರಾಗಿ ಕಚ್ಚಿಬಿಟ್ಟ. ನನಗೆ ಎಷ್ಟು ನೋವಾಯಿತೆಂದರೆ ಏನೂ ಮಾಡುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಸುಮ್ಮನೆ ಹಲ್ಲುಗಚ್ಚಿಕೊಂಡು ನಾನು ನೋವನ್ನನುಭವಿಸಿದೆ. ಕುಂಭಕರ್ಣನ ಪಾತ್ರವನ್ನು ಮಾಡಿದ್ದ ರಾಘವೇಂದ್ರನಿಗೆ ನಾಟಕ ಮುಗಿದಾಗ ಬಯ್ದೆ. ಅವನು ‘ಸಾರಿ ಮಗಾ ನನಗೆ ಗೊತ್ತಾಗಲಿಲ್ಲ’ ಎಂದನು.

Biswarup Ganguly
ಪಾಠದ ಮಧ್ಯೆ ಬಿಕೆಎಂ ಸರ್ ನಮಗೆ ಡುಂಡೀರಾಜ್ ರವರ ಚುಟುಕುಗಳನ್ನು ಹೇಳುತ್ತಿದ್ದರು. ನನಗೆ ಆಗಲೇ ಡುಂಡೀರಾಜ್‌ರವರ ಪ್ರಭಾವ ಬಹಳ ಬೀರಿತ್ತು. ಅದು ಯಾವ ರೀತಿಯಾಗಿತ್ತೆಂದರೇ ಪ್ರತಿದಿನವೂ ತರಗತಿಯಲ್ಲಿ ಕುಳಿತು ನಾನು ನನಗೆ ತೋಚಿದ್ದನ್ನು ಚುಟುಕುಗಳ ರೀತಿಯಲ್ಲಿ ಬರೆಯಲು ಶುರು ಮಾಡಿದೆ. ಈ ರೀತಿ ಬರೆದ ಒಂದು ಚುಟುಕಿನಿಂದ ನಾನು ತರಗತಿಯಲ್ಲಿ ಬಯ್ಯಿಸಿಕೊಂಡ ಒಂದು ಘಟನೆ ನಡೆಯಿತು. ಒಮ್ಮೆ ನಮ್ಮ ಕಾಲೇಜಿನ ಬೋಧಕೇತರ ಸಿಬ್ಬಂದಿಯೊಬ್ಬರು ನಮ್ಮ ತರಗತಿಗೆ ಬಂದು “ನೀವು ವಿಶೇಷವಾಗಿ ಏನಾದ್ರೂ ಮಾಡಿರುವುದನ್ನು ನಮಗೆ ಹೇಳಿ” ಎಂದರು. ಆಗ ನಾನು ಎದ್ದು ನಿಂತು “ಸರ್ ನಾನು ಒಂದು ಚುಟುಕನ್ನು ಬರೆದಿದ್ದೇನೆ. ಅದನ್ನು ಓದಲಾ” ಎಂದು ಕೇಳಿದೆ. ಅದಕ್ಕೆ ಅವರು ‘ಆಯ್ತು’ ಎಂದರು. ನಾನು ಆಗ ವೇದಿಕೆಯ ಮೇಲೆ ನಿಂತು “ಇಂದು ಕೆಲವರು ಸ್ತ್ರೀಯರನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಒಂದು ಚುಟುಕು ಬರೆದಿದ್ದೇನೆ” ಎಂಬ ಹೇಳಿ ನನ್ನ ಚುಟುಕನ್ನು ಹೇಳಿದೆ. ಅದು ಹೀಗಿದೆ.
“ಇಲ್ಲೊಬ್ಬ ಬಯಸಿ ತರಬೇಕೆಂದು
ಮುಂದಕ್ಕೆ ಅವ್ಳನ್ನ..
ತರಿಸಿದ ನೋಡಿ
ಮುಂದಕ್ಕೆ ಅವ್ಳ ಹೊಟ್ಟೇನಾ!!”
ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು. ನಾನು ಆ ಕ್ಷಣಕ್ಕೆ ವೇದಿಕೆಯಿಂದ ಕೆಳಗಿಳಿದು ನನ್ನ ಜಾಗದಲ್ಲಿ ಕುಳಿತುಬಿಟ್ಟೆ. ಅವತ್ತಿಂದ ನಾನು ಚುಟುಕು ಬರೆಯುವುದನ್ನೇ ನಿಲ್ಲಿಸಿದೆ!! ಈ ಘಟನೆ ಕಳೆದು 16 ವರ್ಷದ ನಂತರ ಬೋಳುತಲೆಯ ಮೇಲೆ ಬರೆದ ಚುಟುಕುಗಳನ್ನು ಸಂಕಲಿಸಿ ‘ಬೋಳಾಯಣ’ ಎಂಬ ಪುಸ್ತಕ ಹೊರತಂದೆ!! ಅಷ್ಟೂ ವರ್ಷ ನನಗೆ ಬರೆಯಬೇಕು ಎಂದೆನಿಸಲಿಲ್ಲ!!
ಈ ಘಟನೆ ನಡೆದಾಗಿನಿಂದ ನನಗೆ ನಮ್ಮ ಕ್ಲಾಸ್‌ಮೇಟ್ ಹುಡುಗಿಯರು ಮಾತನಾಡಿಸುವುದನ್ನು ನಿಲ್ಲಿಸಿದರು. ನನಗೂ ಸಹ ಅವರನ್ನು ಮಾತನಾಡಿಸುವ ಅವಶ್ಯಕತೆ ಬರಲಿಲ್ಲ. ನನಗೆ ಉತ್ತಮ ಅಂಕಗಳ ಗುರಿ ಮಾತ್ರ ನನ್ನನ್ನು ಪದೇ ಪದೇ ಎಚ್ಚರಿಸುತ್ತಿತ್ತು. ನನ್ನ ಅನೇಕ ಸಂತಸದ ಕ್ಷಣಗಳನ್ನು ನಾನು ಕಳೆದುಕೊಂಡಿದ್ದೇನೆ. ಎಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸದೇ ಹಿಂದೆ ಕುಳಿತು ಓದುತ್ತಾ ಕುಳಿತಿದ್ದೇನೆ. ನನಗೆ ಇದ್ದದ್ದು ಒಂದೇ ಗುರಿ ಟಿಸಿಹೆಚ್‌ನಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕೆನ್ನುವುದು. ನಾನು ಪ್ರೌಢಶಾಲೆಯನ್ನು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದ್ದರಿಂದ ಗಣಿತ, ವಿಜ್ಞಾನ ವಿಷಯದಲ್ಲಿನ ಕನ್ನಡ ಪದಗಳು ತಿಳಿಯದೇ ಕಷ್ಟಪಟ್ಟಿದ್ದೇನೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ಇದ್ದುದರಿಂದ ಕೆಲವೊಮ್ಮೆ ದೊಡ್ಡ ದೊಡ್ಡ ಉತ್ತರಗಳನ್ನು ಕಲಿಯಲು, ನೆನಪಿನಲ್ಲಿಟ್ಟುಕೊಳ್ಳಲು ತಂತ್ರಗಳ ಮೊರೆ ಹೋಗಿದ್ದೇನೆ.
ನಾವು ಟಿಸಿಹೆಚ್‌ಗೆ ಸೇರಿದ ಕೆಲ ದಿನಗಳ ನಂತರ ನಮ್ಮ ಸೀನಿಯರ್‌ಗಳ ಮೊದಲನೇ ವರ್ಷದ ಫಲಿತಾಂಶ ಬಂದಾಗ ಟಾಪರ್ಸ್‌ಗಳ ಪರಿಚಯ ಮಾಡಿಕೊಂಡು ಅವರ ಜೊತೆ ಯಾವ ರೀತಿ ಓದಬೇಕು ಎಂಬ ಚರ್ಚೆ ಮಾಡುತ್ತಿದ್ದೆ. ನಾನು ನಮ್ಮ ಕ್ಲಾಸ್‌ಮೇಟ್ಸ್‌ಗಿಂತ ನಮ್ಮ ಸೀನಿಯರ್‌ಗಳ ಜೊತೆ ಹೆಚ್ಚು ಇರುತ್ತಿದ್ದೆ. ಮಲ್ಲಾಡಿಹಳ್ಳಿಯಲ್ಲೇ ಹೊರಗಡೆ ರೂಮು ಮಾಡಿಕೊಂಡು ಮೆಸ್‌ಗೆ ಊಟಕ್ಕೆ ಹೋಗುತ್ತಿದ್ದೆ. ಆಗ ನನ್ನ ಜೊತೆ ತಿಪ್ಪೇಸ್ವಾಮಿ ನನ್ನ ರೂಮ್ ಮೇಟ್ ಆಗಿದ್ದ. ಅವನು ತುಂಬಾ ಸೈಲೆಂಟ್. ನನಗೆ ಅವನ ಸ್ವಭಾವ ತುಂಬಾ ಇಷ್ಟವಾಗುತ್ತಿತ್ತು. ನಾನು ಮತ್ತು ಅವನು ಸಂಜೆಯಾಗುತ್ತಿದ್ದಂತೆ ಬೋಂಡಾ ಬಜ್ಜಿ ತಿನ್ನಲು ಹೊರಗಡೆ ಹೋಗುತ್ತಿದ್ದೆವು. ಆಗ ನಮ್ಮ ಕಾಲೇಜಿನಲ್ಲಿ ಹೊರಗಡೆ ಹೋಗಿ ಟೀ ಕುಡಿಯುವುದೂ ಕಷ್ಟ ಎನ್ನುವಂತಹ ಸ್ಥಿತಿ ಇತ್ತು. ಆದರೂ ನಾವು ಹೋಗಿ ಟೀ ಕುಡಿಯುತ್ತಿದ್ದೆವು.
ಯಾರೇ ಆಗಲಿ ತಮ್ಮ ಟ್ಯಾಲೆಂಟ್ ಪ್ರದರ್ಶನವನ್ನು ಸೂಕ್ತ ಸಂದರ್ಭ, ವ್ಯಕ್ತಿಗಳ ಮುಂದೆ ಪ್ರದರ್ಶನ ಮಾಡಲು ಹೋಗಬೇಕು. ಅದನ್ನು ಬಿಟ್ಟು ಆ ಟ್ಯಾಲೆಂಟ್ ಬಗ್ಗೆ ಗಂಧಗಾಳಿಯೇ ಇಲ್ಲದವರ ಮುಂದೆ ಪ್ರದರ್ಶನ ಮಾಡಲು ಹೋಗಬಾರದು. ಒಂದೊಮ್ಮೆ ನಾನು ಅಂದು ಬರೆದ ಚುಟುಕಿಗೆ ಅವರು ಹೊಗಳದಿದ್ದರೂ ಚಿಂತೆಯಿಲ್ಲ; ತೆಗಳದಿದ್ದಿದ್ದರೆ ನನಗೆ ಏನೂ ತೊಂದರೆಯಾಗುತ್ತಿರಲಿಲ್ಲ. ನನ್ನ ಬರೆಯುವ ಆಸೆ ಅಷ್ಟು ವರ್ಷ ಕಮರಿತಲ್ಲ. ಆ ನಷ್ಟವಾಗಿದ್ದು ನನಗೆ ಅಲ್ಲವೇ? ಅಷ್ಟಕ್ಕೂ ನಾನು ಬರೆದ ಆ ಸಾಲಿನಲ್ಲಿ ಏನೂ ತೀರಾ ತಪ್ಪು ಎನ್ನುವಂತಹ ಯಾವ ವಾಕ್ಯವೂ ಇರಲಿಲ್ಲ.
ಕೆಲವರು ತಮ್ಮ ದಿನನಿತ್ಯದಲ್ಲಿ ತಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ತಲೆಹಾಕುತ್ತಾ, ಅನ್ಯರನ್ನು ಟೀಕಿಸುತ್ತಾ ಕಾಲ ಕಳೆಯುತ್ತಿರುತ್ತಾರೆ. ಪರರ ತಪ್ಪನ್ನು ಎತ್ತಿ ತೋರಿಸುತ್ತಾರೆ. ಒಂದೊಮ್ಮೆ ತಪ್ಪು ತಿದ್ದುವ ಸ್ಥಾನದಲ್ಲಿದ್ದರೂ ಆ ತಪ್ಪನ್ನು ತಿದ್ದುವ ರೀತಿಯಲ್ಲಿ ತಿದ್ದಲು ಹೋಗುವುದಿಲ್ಲ. ಬದಲಾಗಿ ಎಲುಬಿಲ್ಲದ ನಾಲಗೆ ಇದೆ ಎಂದು ಪದೇ ಪದೇ ತಪ್ಪು ಮಾಡಿದವರ ಮುಂದೆ ಅದೇ ತಪ್ಪನ್ನು ಪುನರಾವರ್ತಿಸಿ ವ್ಯಂಗ್ಯವಾಗಿ ಹೇಳುತ್ತಾ ಹೋಗುತ್ತಾರೆ. ಈ ರೀತಿ ಮಾಡಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. “ಗುಂಪಿನಲ್ಲಿ ಹೊಗಳಬೇಕು, ಒಬ್ಬರೇ ಇದ್ದಾಗ ತಿದ್ದಬೇಕು” ಎಂಬ ಮಾತನ್ನು ನಾವು ಪಾಲಿಸಬೇಕು. ಅಲ್ಲದೇ ತಿದ್ದುವುದೂ ಒಂದು ಕಲೆ. ಅದನ್ನು ಕುರಿತು ಡಿವಿಜಿಯವರು ಹೀಗೆ ಹೇಳುತ್ತಾರೆ.
“ತಿದ್ದಿಕೊಳೊ ನಿನ್ನ ನೀಂ:ಜಗವ ತಿದ್ದುವುದಿರಲಿ|
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ|
ಸ್ಪರ್ಧಿಯೆ ತ್ರಿವಿಕ್ರಮಗೆ?-ಮಂಕುತಿಮ್ಮ” ಇದರ ಸಾರವನ್ನರಿತು ನಾವು ಬಾಳೋಣ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಲೇಖನ ಚೆನ್ನಾಗಿದೆ ಗೌಡ್ರೆ ನನ್ನ ನೆಚ್ಚಿನ ಗುರುಗಳಲ್ಲಿ BKM ಸರ್ ಸಹ ಒಬ್ಬರು ಏಕೋ ಏನೋ ಆ ಭಗವಂತ ಬಹಳ ಬೇಗನೆ ಅವರನ್ನು ಕರೆದುಕೊಂಡು ಬಿಟ್ಟ ಏನೇ ಇರಲಿ ಮಲ್ಲಡಿಹಳ್ಳಿಯ TCH ಅನುಭವ ತುಂಬಾ ಚೆನ್ನಾಗಿತ್ತು ಆಗುವುದೆಲ್ಲ ಒಳ್ಳೆಯದಕ್ಕೆ ನಿಮ್ಮ ಬರವಣಿಗೆಯನ್ನು ಇನ್ನು ಚೆನ್ನಾಗಿ ಮುಂದುವರೆಸಿ BKM ಸರ್ ನನ್ನ ಬರವಣಿಗೆಯನ್ನು ಸಹ ತುಂಬಾ ಇಷ್ಟಪಡ್ತಿದ್ರು
ತುಂಬಾ ಚೆನ್ನಾಗಿ ವಿವರವಾಗಿ ಬರೆದು ತಿಳಿಸಿರುತ್ತಾರೆ. ಒಂದೊಮ್ಮೆ ನನ್ನ ಕಾಲೇಜಿನ ದಿನಗಳೇ ನೆನಪಾದವು…
ತುಂಬಾ ಚೆನ್ನಾಗಿ ವಿವರವಾಗಿ ಬರೆದು ತಿಳಿಸಿರುತ್ತಾರೆ. ಒಂದೊಮ್ಮೆ ನನ್ನ ಕಾಲೇಜಿನ ದಿನಗಳೇ ನೆನಪಾದವು…
ಈಗ ಬಯಸಿದರು ಆ ದಿನಗಳು ಮತ್ತೆ ಬರುವುದಿಲ್ಲ ಆಗಿನ ಮನಸ್ಥಿತಿ ಮುಗ್ಧತೆ ಇಂದು ನೆನೆದರೆ ಮನಸ್ಸು ರೋಮಾಂಚನಗೊಳ್ಳುತ್ತದೆ 😊😊
Mattomme ಮಲ್ಲಾಡಿಹಳ್ಳಿ nenapugalannu hottutandiruva ಈ ಲೇಖನ ಉತ್ತಮvaagide