ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.
ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ
ಇವತ್ತು ಪ್ರವಾಸ ಕೈಗೊಳ್ಳುವುದು ಜನರ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕುಟುಂಬದೊಂದಿಗೆ, ಗೆಳೆಯರೊಂದಿಗೆ, ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ಪ್ರವಾಸ, ಕೊನೆಗೆ ಒಬ್ಬರೇ ಪ್ರವಾಸ ಹೋಗುವುದು, ಚಾರಣ ಎಂದು ಪ್ರವಾಸ ಹೋಗಲು ತುಡಿಯುವ ಮನೋಭಾವ ಜನರದು. “ಜಗವ ಸುತ್ತುವ ಮಾಯೆ” ಪ್ರವಾಸ ಕಥನದ ಲೇಖಕಿ ಸುಚಿತ್ರಾ ಹೆಗಡೆಯವರಿಗಂತೂ ಪ್ರವಾಸ ಅವರ ಜೀವಕಣಗಳಲ್ಲೇ ಬೆರೆತು ಹೋಗಿದೆ. ಅದರೊಂದಿಗೆ ಅವರದು ಅವಿನಾಭಾವ ಸಂಬಂಧ. ಅದರಲ್ಲೂ ಅವರು ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ನಿಗದಿತ ಅವಧಿಯಲ್ಲಿ ಹತ್ತು ಹಲವಾರು ಸ್ಥಳಗಳಿಗೆ ‘ನಾ ಹೋದೆ ನೋಡಿದೆ ಬಂದೆ’ ಎಂಬಂತೆ ನೋಡುವವರಲ್ಲ. ಸ್ವತಃ ತಾವೇ ಪ್ರವಾಸ ಕೈಗೊಂಡು, ಹೋದ ಸ್ಥಳದಲ್ಲಿ ಸಾಕಷ್ಟು ಸುದೀರ್ಘ ಸಮಯವೇ ತಂಗಿದ್ದು, ಅಲ್ಲಿನ ವೈಶಿಷ್ಟ್ಯತೆಗಳು, ಇತಿಹಾಸ, ಸಾಹಿತ್ಯ, ಪ್ರಕೃತಿ ಸೌಂದರ್ಯ, ಜನರು, ಅವರ ಜೀವನ ಶೈಲಿ, ಭಾಷೆ ಕೊನೆಗೆ ಅವರ ಆಹಾರ ಪದ್ಧತಿ ಎಲ್ಲವನ್ನೂ ಬೆರಗುಗಣ್ಣಿನಿಂದ ವೀಕ್ಷಿಸುವವರು. ಹಾಗೆ ವೀಕ್ಷಿಸಿದ್ದನ್ನು ಬರಹದ ಮೂಲಕ ಅಭಿವ್ಯಕ್ತಿಸಲು ಅವರು ಕಂಡುಕೊಂಡಿರುವುದು ಕೂಡ ಸ್ವಲ್ಪ ಮಟ್ಟಿಗೆ ವಿಭಿನ್ನವಾದ ರೀತಿ.
ಎಲ್ಲರಂತೆ ಆಯಾ ಸ್ಥಳದ ವಿವರ ಕೊಡುವುದಕ್ಕಿಂತ ಆ ಸ್ಥಳ ತಮ್ಮ ಭಾವಕೋಶ ಮನೋಕೋಶ ತುಂಬಿದ ಬಗೆಯನ್ನು ಲಲಿತಪ್ರಬಂಧವೊಂದರ ರೀತಿಯಲ್ಲಿ ಅನಾವರಣಗೊಳಿಸುತ್ತಾರೆ, ಸುಚಿತ್ರಾ. ಹಾಗೆಂದು ಅವು ಬರಿಯ ಭಾವಪೂರ್ಣ ಲಹರಿಗಳಾಗಿ ಮಾತ್ರ ಉಳಿಯದೆ, ವಸ್ತುನಿಷ್ಠತೆಗೂ ಒತ್ತು ನೀಡಲು ಮರೆಯುವುದಿಲ್ಲ. ಹೀಗಾಗಿ ಇವರ ಪ್ರವಾಸ ಕಥನದ ಶೈಲಿ ಕೂಡ ಎಲ್ಲರೂ ತುಳಿದ ಹಾದಿಯಾಗಿರದೇ, ಯಾರೂ ತುಳಿಯದ ಹೊಸ ಹಾದಿಯಲ್ಲಿ ಇಷ್ಟಪಟ್ಟು ಹೆಜ್ಜೆಯಿಟ್ಟಿದ್ದಾರೆ ಎನ್ನಬಹುದು.
“ಎಲ್ಲೆಗಳ ಮೀರಿದ ಎಲ್ಲೋರಾ” ಎಂಬ ಅಧ್ಯಾಯದಲ್ಲಿ ಎಲ್ಲೋರಾದ ಗುಹಾಂತರ್ದೇವಾಲಯಗಳ ಶಿಲ್ಪಕಲಾ ವೈಶಿಷ್ಟ್ಯತೆ ಲೇಖಕಿಯಲ್ಲಿ ಮೂಡಿಸಿರುವ ಬೆರಗು ಓದುಗರನ್ನೂ ಆವಾಹಿಸುತ್ತದೆ. ಕನ್ನಡನಾಡಿನ ರಾಷ್ಟ್ರಕೂಟರ ಈ ಸಾಂಸ್ಕೃತಿಕ ಲೋಕದ ಅಚ್ಚಳಿಯದ ಕೊಡುಗೆಯ ಕುರಿತು, ಅದರಲ್ಲೂ ಸುಪ್ರಸಿದ್ಧ ಕಲಾನಿರ್ಮಿತಿ ಕೈಲಾಸನಾಥ ದೇವಾಲಯದ ಕುರಿತು ಲೇಖಕಿ ತನ್ಮಯರಾಗಿ ನೀಡಿರುವ ವಿವರಣೆಗಳು ಓದುಗರನ್ನು ಅಲ್ಲೆಲ್ಲಾ ಓಡಿಯಾಡಿಸಿಬಿಡುವಷ್ಟು ಜೀವಂತಿಕೆಯಿಂದ ತುಂಬಿವೆ. ಹಾಗೆಯೇ ಕಾಶಿಯಲ್ಲಿ ಕೂಡ ಲೇಖಕಿ ಬಹುಶಃ ಅದುವರೆಗೆ ಯಾರೂ ಕಾಣದ ಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತಾರೆ. ಅದೇ ಕಾಶಿಯ ಅತಿ ರುಚಿಕರ ಹಾಗೂ ವಿಶಿಷ್ಟವಾದ ಬೇರಿನ್ನೆಲ್ಲೂ ಸಿಗದ ಖಾದ್ಯ ಪ್ರಪಂಚ. ಬಂಗಾಳದ ಜಾನಪದ ಜಗತ್ತಿನ ಕುರಿತು, ಜೊರಾಸಂಕೋದ ಟಾಗೋರರ ಮನೆ ಬಿಂಬಿಸುವ ಬಂಗಾಲಿ ಸಂಸ್ಕೃತಿಯ ಕುರಿತ ಅಧ್ಯಾಯವಿದೆ.
“ನದಿ ಹೇಳುವ ಕಥೆ” ಅಧ್ಯಾಯದಲ್ಲಿ ನಮ್ಮ ದೇಶ, ಯೂರೋಪ್, ಆಫ್ರಿಕಾಗಳ ನದಿಗಳು, ಅವುಗಳ ದಡದಲ್ಲಿ ಕುಳಿತು ಲೇಖಕಿ ಆಸ್ವಾದಿಸಿದ ಸೂರ್ಯೋದಯ ಸೂರ್ಯಾಸ್ತಗಳು, ನದಿಗಳ ಹರಿವು ಮನದ ಹಳಹಳಿಕೆಯನ್ನು ಕೊಚ್ಚಿಕೊಂಡು ಹೋಗುವ ಪರಿ, ನದಿಗಳು ಮೂಡಿಸುವ ಅನುಭಾವದ ಭಾವ, ಕವಿಗಳ ಕಣ್ಣಲ್ಲಿ ಕಂಡ ನದಿಗಳನ್ನು ಮುಂದಿಡುತ್ತಲೇ ನದಿಗಳು ಮಾಲಿನ್ಯಭರಿತವಾಗುತ್ತಿರುವುದರ ಕುರಿತು ಸಂಕಟವನ್ನನುಭವಿಸುತ್ತಾರೆ.
ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು. “ಫ್ರೆಂಚ್ ಮಹಾಕ್ರಾಂತಿಯ ಅಂಗಳದಲ್ಲಿ” ಅಧ್ಯಾಯದಲ್ಲಿ ಜಾಗತಿಕವಾಗಿ ರಾಜಕೀಯ ಚಟುವಟಿಕೆಗಳಿಗೆ ಪರಿವರ್ತನೆಗಳಿಗೆ ಪ್ರೇರಕವಾಗಿದ್ದ ಫ್ರೆಂಚ್ ಮಹಾಕ್ರಾಂತಿಯ ಕುರಿತು ಹೇಳುತ್ತಲೇ ಲೇಖಕಿ ಅಲ್ಲಿನ ವಸ್ಸಾಯ್ ಅರಮನೆಯನ್ನು ಪರಿಚಯಿಸುತ್ತಾರೆ.
ಅರಮನೆಯ ಹಾಲ್ ಆಫ್ ಮಿರರ್ಸ್ ನೋಡುತ್ತಲೇ ಜೈಪುರದ ಶೀಷ್ ಮಹಲನ್ನು ನೆನೆಯುತ್ತಾರೆ. ಜಗದ್ವಂದ್ಯವಾದ ಐಫೆಲ್ ಟವರ್ ಕುರಿತು ಲೇಖಕಿಯದು ಮತ್ತೆ ವಿಭಿನ್ನವಾದ ವಾರೆ ನೋಟ. ಜೀವಂತಿಕೆ ಐತಿಹಾಸಿಕತೆ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ನಳನಳಿಸುವ ಪ್ಯಾರಿಸಿಗೆ ಈ ಕಬ್ಬಿಣದ ಕಟಕಟೆಯ ಗೋಪುರ ಹೊಂದುವುದಿಲ್ಲ ಎನ್ನುತ್ತಾರೆ. ಹಾಗೆಯೇ ಮೊನಾಲಿಸಾ ನೋಡಿಯೂ ಭ್ರಮನಿರಸನ ಹೊಂದಿದ ಲೇಖಕಿ ಆ ಅಧ್ಯಾಯಕ್ಕೆ ಕೊಟ್ಟಿರುವ ಶೀರ್ಷಿಕೆಯೇ “ನಾ ನೋಡಿದ ಮೋ (ನಾಲಿ)ಸಾ!” ಎಂದು!
ಇಂಗ್ಲಿಷ್ ಸಾಹಿತ್ಯದ ಓದು ಪರಿಚಯಿಸಿದ್ದ ಇಂಗ್ಲೆಂಡ್ ನಿಂದಾಗಿ ಲಂಡನ್ ಲೇಖಕಿಗೆ ನೋಡುವ ಮೊದಲೇ ಚಿರಪರಿಚಿತವೆನಿಸಿತ್ತು. ಪ್ಯಾರಿಸ್ ಮತ್ತು ಲಂಡನ್‌ನ ವೈದೃಶ್ಯತೆಗಳನ್ನು ಹೇಳುತ್ತಾ “ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ” ಎಂಬ ಅಧ್ಯಾಯದಲ್ಲಿ ಬಕಿಂಗ್ ಹ್ಯಾಮ್ ಅರಮನೆ, ಇಂಗ್ಲಿಷರ ಪ್ರಭುತ್ವ ಪ್ರೀತಿಯ ಕುರಿತು ಹೇಳುತ್ತಾರೆ. ಇಂಗ್ಲಿಷರ ಚಹಾಪ್ರೀತಿಯ ಪ್ರಸ್ತಾಪವಿದೆ. ಅತಿಮುಖ್ಯ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಗಾಂಧೀಜಿ ಪ್ರತಿಮೆ ತಮ್ಮಲ್ಲಿ ಮೂಡಿಸಿದ ಭಾವ, ಕ್ರಿಕೆಟ್ ಕಾಶಿ ಲಾರ್ಡ್ ಸ್ಟೇಡಿಯಂ, ಷೇಕ್ಸ್‌ಪಿರಯನ ಹುಟ್ಟೂರು ಇವುಗಳ ಕುರಿತು ಸುಚಿತ್ರಾ ಮನದುಂಬಿ ತಮ್ಮ ಭಾವನಾ ಲಹರಿಯನ್ನು ಹರಿಯಬಿಡುತ್ತಾ ಅದರಲ್ಲಿ ಓದುಗರನ್ನು ಮುಳುಗೇಳಿಸುತ್ತಾರೆ. ಜರ್ಮನಿ, ವಿಯೆಟ್ನಾಂ ಪ್ರವಾಸದ ಕುರಿತೂ ಈ ಪುಸ್ತಕದಲ್ಲಿ ಅಧ್ಯಾಯಗಳಿವೆ.
ಒಂದು ಪ್ರವಾಸ ಮಾಡುವಾಗ ಅಲ್ಲಿನ ಸಾಂಸ್ಕೃತಿಕತೆ ಐತಿಹಾಸಿಕತೆ ಭೌಗೋಳಿಕತೆ ಜನಜೀವನ ಇವೆಲ್ಲದರ ಕುರಿತು ಅರಿಯಬೇಕಾದುದನ್ನು ತಿಳಿಸುತ್ತಲೇ ಪ್ರವಾಸದಿಂದ ನಾವು ಹೇಗೆ ಆನಂದ ಪಡಬಹುದೆಂಬುದನ್ನೂ ಮನಗಾಣಿಸುವ ಈ ಕೃತಿ ಪ್ರವಾಸ ಹೋಗಬಯಸುವವರಿಗಂತೂ ಅತ್ಯಪಯುಕ್ತವಾದುದು.
ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು.