ದೇಗುಲದ ಭಿತ್ತಿಯ ಮೇಲಿನ ಮೂರ್ತಿಗಳಲ್ಲಿ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳು, ದಶಾವತಾರಗಳು ಮುಖ್ಯವಾದವು. ಕಾಳಿಂಗಮರ್ದನ, ಗೋವರ್ಧನಧಾರಿ ಮೊದಲಾದ ಶ್ರೀಕೃಷ್ಣನ ರೂಪಗಳೂ ಇಲ್ಲಿ ಕಂಡುಬರುತ್ತವೆ. ದರ್ಪಣಸುಂದರಿ, ಶುಕಭಾಷಿಣಿ ಮೊದಲಾದ ಶಿಲಾಸುಂದರಿಯರೂ ಇದ್ದಾರೆ. ಪರವಾಸುದೇವ, ನಾಟ್ಯಸರಸ್ವತಿ, ಬ್ರಹ್ಮ, ಇಂದ್ರ-ಇಂದ್ರಾಣಿ, ನಾಟ್ಯಲಕ್ಷ್ಮಿ, ದುರ್ಗೆ, ಮಹಿಷಾಸುರ ಮರ್ದಿನಿ, ಗಣಪತಿ, ಸೀತಾ ರಾಮಲಕ್ಷ್ಮಣರು ಮೊದಲಾದ ಶಿಲ್ಪಗಳು ಗಮನಸೆಳೆಯುತ್ತವೆ. ಪಾರಿಜಾತವನ್ನು ಅಪಹರಿಸಿ ಗರುಡನ ಮೇಲೇರಿ ಹೊರಟ ಕೃಷ್ಣನನ್ನು ಐರಾವತವೇರಿ ಬೆನ್ನಟ್ಟುವ ಇಂದ್ರ, ಹಿರಣ್ಯಾಕ್ಷನನ್ನು ಮೆಟ್ಟುವ ವರಾಹಾವತಾರಿ ವಿಷ್ಣು, ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹನಿಗೆ ಪ್ರಹ್ಲಾದನ ನಮನ ಮೊದಲಾದವೂ ಇಲ್ಲಿ ನಿರೂಪಿತವಾಗಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಾಲ್ಕನೆಯ ಕಂತು
ಹೊಯ್ಸಳ ರಾಜಧಾನಿಯಾದ ದ್ವಾರಸಮುದ್ರ (ಇಂದಿನ ಹಳೇಬೀಡು)ದ ಕಡೆಯಿಂದ ಅರಸೀಕೆರೆಗೆ ಬರುವ ಹಾದಿಯಲ್ಲಿ ಕಾಣಸಿಗುವ ಜಾವಗಲ್, ಮಾವುತನಹಳ್ಳಿ, ಅರಕೆರೆ, ಬೆಂಡೆಕೆರೆ ಮುಂತಾದ ಊರುಗ್ರಾಮಗಳಲ್ಲಿ ಹೊಯ್ಸಳ ದೇವಾಲಯಗಳನ್ನು ನೋಡಬಹುದು. ಬೇರೆ ಬೇರೆ ಅರಸರ ಆಡಳಿತಾವಧಿಯಲ್ಲಿ ಕಟ್ಟಲಾದ ಈ ಗುಡಿಗಳಿಗೆ ಐತಿಹಾಸಿಕ ಮೌಲ್ಯದೊಡನೆ ಶಿಲ್ಪಕಲೆಯ ದೃಷ್ಟಿಯಿಂದಲೂ ಮಹತ್ವವಿದೆ.
ಈ ಭಾಗದ ದೇಗುಲಗಳಲ್ಲಿ ಶಿಲ್ಪಕಲಾಕೌಶಲದ ದೃಷ್ಟಿಯಿಂದ ಮಿಗಿಲೆನಿಸಿಕೊಂಡಿರುವ ಜಾವಗಲ್ಲಿನ ಲಕ್ಷ್ಮೀನರಸಿಂಹ ದೇವಾಲಯ ಕ್ರಿ.ಶ. 1250ರಲ್ಲಿ ಮೂರನೆಯ ಸೋಮೇಶ್ವರನ ಕಾಲದಲ್ಲಿ ನಿರ್ಮಾಣವಾದುದು. ಅರಸೀಕೆರೆಯಿಂದ ಬಾಣಾವರಕ್ಕೆ ಹೆದ್ದಾರಿಯಲ್ಲಿ ಬಂದು ಎಡಕ್ಕೆ ಹಳೇಬೀಡಿನ ರಸ್ತೆಯಲ್ಲಿ ಇಪ್ಪತ್ತು ಕಿಲೋಮೀಟರ್ ಮುಂದುವರೆದರೆ ಜಾವಗಲ್ ತಲುಪಬಹುದು.
ಇತ್ತೀಚಿನ ವರ್ಷಗಳಲ್ಲಿ ಪುರಾತತ್ವ ಇಲಾಖೆಯ ಪರಿಶ್ರಮದಿಂದ ಜೀರ್ಣೋದ್ಧಾರಗೊಂಡಿರುವ ಜಾವಗಲ್ಲಿನ ದೇಗುಲದಲ್ಲಿ ಹೊಯ್ಸಳ ಶಿಲ್ಪಕಲೆಯ ಎಲ್ಲ ಸುಂದರ ಮಾದರಿಗಳನ್ನೂ ನೀವು ನೋಡಲು ಸಾಧ್ಯ. ಇದು ತ್ರಿಕೂಟಾಚಲ ದೇವಾಲಯ. ಅಂದರೆ, ಮೂರು ಗರ್ಭಗುಡಿಗಳನ್ನೊಳಗೊಂಡ ಕಟ್ಟಡ. ಸಂಪ್ರದಾಯದಂತೆ, ಎಡಭಾಗದಲ್ಲಿ ವೇಣುಗೋಪಾಲ, ಬಲಭಾಗದಲ್ಲಿ ಲಕ್ಷ್ಮೀನರಸಿಂಹ. ನಡುವಣ ಪ್ರಧಾನ ಗರ್ಭಗುಡಿಯಲ್ಲಿ ಶ್ರೀಧರನ ರೂಪದಲ್ಲಿ ವಿಷ್ಣುವಿನ ಮೂರ್ತಿ. ವಿಷ್ಣುವಿನ ಚತುರ್ಭುಜಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳು ಕಂಡುಬರುವ ಸಂಭಾವ್ಯತೆಗನುಗುಣವಾಗಿ ಇಪ್ಪತ್ನಾಲ್ಕು ರೂಪಗಳನ್ನು ಗುರುತಿಸಲಾಗುತ್ತದೆ. ಅದರಂತೆ ಶ್ರೀಧರನ ಬಲಗೈಯಲ್ಲಿ ಶಂಖ, ಮೇಲಿನ ಬಲಗೈಯಲ್ಲಿ ಪದ್ಮ, ಮೇಲಿನ ಎಡಗೈಯಲ್ಲಿ ಚಕ್ರ, ಎಡಗೈಯಲ್ಲಿ ಗದೆಗಳಿವೆ.
ದೇವಸ್ಥಾನದ ಪ್ರವೇಶದ್ವಾರ ವಿಜಯನಗರದ ಅರಸರ ಕಾಲದ್ದು. ಪ್ರಧಾನ ದೇಗುಲ ಎತ್ತರವಾದ ಜಗತಿಯ ಮೇಲಿದ್ದು ಪ್ರದಕ್ಷಿಣೆ ಬರಲು ಅನುಕೂಲವಾದ ವಿಸ್ತೀರ್ಣವಿದೆ. ಈ ಜಗತಿಯ ಮೇಲೆ ಕಟ್ಟಿರುವ ಗುಡಿಯ ಕೆಳಭಾಗದ ಪಟ್ಟಿಕೆಗಳಲ್ಲಿ ಕೆಳಗಿಂದ ಅನುಕ್ರಮವಾಗಿ ಆನೆ, ಕುದುರೆ, ಬಳ್ಳಿಗಳು, ಸೈನಿಕರು ಹಾಗೂ ರಾಜಪುರುಷರು ಮತ್ತು ಯಾಳಿಗಳನ್ನು ಕಾಣಬಹುದು. ಒಂದು ಪಟ್ಟಿಕೆಯಲ್ಲಿ ರಾಮಾಯಣದ ಕೆಲವು ಕಥಾನಕಗಳೂ ನಿರೂಪಿತವಾಗಿವೆ. ಇದರಿಂದ ಮೇಲುಭಾಗದ ಭಿತ್ತಿಯನ್ನು ಎರಡು ಭಾಗವಾಗಿ ವಿಂಗಡಿಸಿದ್ದು ಮೊದಲ ಭಾಗದಲ್ಲಿ ವಿವಿಧ ದೇವಾಧಿದೇವತೆಗಳ ಶಿಲ್ಪಗಳು ದೇವಾಲಯದ ಸುತ್ತಲೂ ಕಂಡುಬರುತ್ತವೆ. ಇದಕ್ಕೂ ಮೇಲಿನ ಭಾಗದಲ್ಲಿ ಕಂಬಗಳನ್ನೂ ಗೋಪುರವುಳ್ಳ ಚಿಕ್ಕ ಮಂಟಪದ ಆಕೃತಿಗಳನ್ನೂ ರೂಪಿಸಲಾಗಿದೆ. ಮೇಲುಛಾವಣಿಯ ಅಂಚಿಗೆ ಸುತ್ತಲೂ ವಿವಿಧ ವಿನ್ಯಾಸದ ಚಿತ್ತಾರಗಳೂ ಸಿಂಹಮುಖದ ಪ್ರಭಾವಳಿಗಳೊಳಗೆ ದೇವತಾಮೂರ್ತಿಗಳೂ ಕಂಡುಬರುತ್ತವೆ. ಇಡೀ ಕಟ್ಟಡವನ್ನು ಮೂಲರೂಪಕ್ಕೆ ತರುವಲ್ಲಿ ಪುರಾತತ್ವ ಇಲಾಖೆಯ ಪರಿಶ್ರಮ ಎದ್ದು ಕಾಣುತ್ತದೆ.
ದೇಗುಲದ ಭಿತ್ತಿಯ ಮೇಲಿನ ಮೂರ್ತಿಗಳಲ್ಲಿ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳು, ದಶಾವತಾರಗಳು ಮುಖ್ಯವಾದವು. ಕಾಳಿಂಗಮರ್ದನ, ಗೋವರ್ಧನಧಾರಿ ಮೊದಲಾದ ಶ್ರೀಕೃಷ್ಣನ ರೂಪಗಳೂ ಇಲ್ಲಿ ಕಂಡುಬರುತ್ತವೆ. ದರ್ಪಣಸುಂದರಿ, ಶುಕಭಾಷಿಣಿ ಮೊದಲಾದ ಶಿಲಾಸುಂದರಿಯರೂ ಇದ್ದಾರೆ. ಪರವಾಸುದೇವ, ನಾಟ್ಯಸರಸ್ವತಿ, ಬ್ರಹ್ಮ, ಇಂದ್ರ-ಇಂದ್ರಾಣಿ, ನಾಟ್ಯಲಕ್ಷ್ಮಿ, ದುರ್ಗೆ, ಮಹಿಷಾಸುರ ಮರ್ದಿನಿ, ಗಣಪತಿ, ಸೀತಾ ರಾಮಲಕ್ಷ್ಮಣರು ಮೊದಲಾದ ಶಿಲ್ಪಗಳು ಗಮನಸೆಳೆಯುತ್ತವೆ. ಪಾರಿಜಾತವನ್ನು ಅಪಹರಿಸಿ ಗರುಡನ ಮೇಲೇರಿ ಹೊರಟ ಕೃಷ್ಣನನ್ನು ಐರಾವತವೇರಿ ಬೆನ್ನಟ್ಟುವ ಇಂದ್ರ, ಹಿರಣ್ಯಾಕ್ಷನನ್ನು ಮೆಟ್ಟುವ ವರಾಹಾವತಾರಿ ವಿಷ್ಣು, ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹನಿಗೆ ಪ್ರಹ್ಲಾದನ ನಮನ ಮೊದಲಾದವೂ ಇಲ್ಲಿ ನಿರೂಪಿತವಾಗಿವೆ.
ಹೊಯ್ಸಳ ಮಾದರಿಯ ಗೋಪುರವು ಐದು ಸ್ತರಗಳ ವಿನ್ಯಾಸ ಹೊಂದಿದ್ದು ಅನೇಕ ಚಿತ್ತಾರಗಳು, ಸಿಂಹಮುಖದ ಪ್ರಭಾವಳಿಗಳೊಳಗೆ ದೇವತಾಮೂರ್ತಿಗಳು ಶಿಖರದ ಸೊಬಗನ್ನು ಹೆಚ್ಚಿಸಿವೆ. ದೇವಾಲಯವನ್ನು ಪ್ರವೇಶಿಸುವಲ್ಲಿ ಮುಖಮಂಟಪವಿದ್ದು ಅದರ ಆಚೀಚೆಗೆ ಒರಗಿ ಕುಳಿತುಕೊಳ್ಳಬಹುದಾದ ಕಕ್ಷಾಸನಗಳಿವೆ. ಆಸನದ ಒರಗುಗೋಡೆಯ ಹೊರಭಾಗದಲ್ಲೂ ಮಿಥುನಶಿಲ್ಪ, ನೃತ್ಯಗಾತಿಯರು, ಯೋಧರು ಮೊದಲಾದ ಶಿಲ್ಪರೂಪಗಳನ್ನು ಕಾಣಬಹುದು.
ಒಳಗುಡಿಯಲ್ಲಿ ಮಹಿಷಾಸುರ ಮರ್ದಿನಿ ಹಾಗೂ ಗಣಪತಿಯ ಸೊಗಸಾದ ವಿಗ್ರಹಗಳನ್ನು ಇಲ್ಲಿ ಇರಿಸಲಾಗಿದೆ. ಭುವನೇಶ್ವರಿ (ಒಳಛಾವಣಿ) ಯಲ್ಲಿ ಸುತ್ತ ತಂತಮ್ಮ ವಾಹನಗಳ ಮೇಲೆ ಕುಳಿತ ದಿಕ್ಪಾಲಕರನ್ನು ಚಿತ್ರಿಸಿರುವುದೊಂದು ವಿಶೇಷ. ವೇಣುಗೋಪಾಲ, ಶ್ರೀಧರ ಹಾಗೂ ಲಕ್ಷ್ಮೀನರಸಿಂಹರ ವಿಗ್ರಹಗಳೆಲ್ಲವೂ ಆಕರ್ಷಕವಾಗಿವೆ. ಪ್ರತಿ ಗರ್ಭಗುಡಿಯ ದ್ವಾರಪಟ್ಟಕದ ಮೇಲೆ ಆಯಾ ದೇವತೆಯನ್ನೇ ಚಿತ್ರಿಸಲಾಗಿದೆ.
ಕ್ರಿ.ಶ. 13 ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿತವಾದ ಬಹುತೇಕ ಹೊಯ್ಸಳ ಗುಡಿಗಳು ಆಗಿನ ಪ್ರಸಿದ್ಧ ಶಿಲ್ಪಿ ಮಲ್ಲಿತಮ್ಮನ ನೇತೃತ್ವದಲ್ಲಿ ರೂಪುಗೊಂಡವು. ಜಾವಗಲ್ಲಿನ ದೇವಾಲಯವೂ ಇದೇ ಅವಧಿಯಲ್ಲಿ ನಿರ್ಮಿತವಾಗಿದ್ದು ಆ ಕಾಲದ ಶಿಲ್ಪಕಲಾಪ್ರೌಢಿಮೆಯ ಪರಿಚಯವನ್ನು ನಿಮಗೆ ಒದಗಿಸುತ್ತದೆ. ಜಾವಗಲ್ಲಿಗೆ ನೀವು ಬರುವಾಗ ಸಮೀಪದಲ್ಲೇ ಇರುವ ಬೆಳವಾಡಿ ವೀರನಾರಾಯಣನ ದೇಗುಲಕ್ಕೂ ಭೇಟಿ ನೀಡಲು ಮರೆಯದಿರಿ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.