ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ಗುಲಾಬಿ ಹೊಳೆಸಾಲಿನ ಹೂವಿನಂತಹ ಹುಡುಗಿ. ತಾಯಿಲ್ಲದ ಆ ಹುಡುಗಿಯನ್ನು ಇಡಿಯ ಹೊಳೆಸಾಲೇ ಬೆಳೆಸಿಕೊಂಡು ಬಂದಿತ್ತು. ಇದ್ದ ಚೂರು, ಪಾರು ನೆಲದಲ್ಲಿ ತರಕಾರಿ ಬೆಳೆದು ಮಾರುವ ಹೊನ್ನಯ್ಯ ಅವಳ ತಂದೆ. ಸಂಜೆಯಾಗುವವರೆಗೆ ಸಾಚಾ ಮನುಷ್ಯ. ರಾತ್ರಿ ಪೂರ ಸುರಲೋಕದ ಕಿನ್ನರ. ಬಾಂಡಿಗಟ್ಟಲೆ ಮದ್ಯವನ್ನು ಹೊಟ್ಟೆಗಿಳಿಸಿ ಇಡೀ ಊರಿಗೆ ಕೇಳುವಂತೆ ಹಾಡುತ್ತ ಅಂಗಳದಲ್ಲಿ ಮಲಗುತ್ತಿದ್ದ. ಚಿಕ್ಕವಳಿರುವಾಗಿನಿಂದಲೂ ಇದನ್ನೇ ರೂಢಿಯಾಗಿಸಿಕೊಂಡ ಗುಲಾಬಿಗೆ ಅವನ ಹಾಡೇ ಜೋಗುಳ. ಹೊಳೆಸಾಲಿನ ಶಾಲೆಯಲ್ಲಿದ್ದಷ್ಟು ತರಗತಿಯನ್ನು ಓದಿ ಮುಗಿಸಿದ ಗುಲಾಬಿ ಅಪ್ಪನ ತರಕಾರಿ ತೋಟಕ್ಕೆ ನೀರೆರೆಯುವ ಕೆಲಸವನ್ನೇ ನಿತ್ಯದ ಕಾಯಕವನ್ನಾಗಿ ಮಾಡಿಕೊಂಡಿದ್ದಳು. ಈಗ ತಾನೇ ಹೆಣ್ತನದ ಹೊಸಿಲನ್ನು ತುಳಿದಿರುವ ಅವಳ ಸ್ಪರ್ಶಕ್ಕೆ ತರಕಾರಿ ತೋಟವೂ ಪುಳಕಗೊಂಡು ಹಸಿರಾಗಿ ನಳನಳಿಸುತ್ತಿತ್ತು.
ಹೀಗಿರುವ ಬಿರುಬೇಸಿಗೆಯ ದಿನದ ಮುಂಜಾನೆ ಬಾಡಿದ ಗಿಡಗಳಿಗೆ ನೀರುಣಿಸಲೆಂದು ಹೊಳೆಯ ಅಂಚಿನಲಿ ನೀರಿನ ಕೊಡವನ್ನು ಹೊತ್ತು ಮೇಲೇರುತ್ತಿದ್ದ ಗುಲಾಬಿಯ ಕಾಲು ಸರಕ್ಕನೆ ಜಾರಿತು. ಅಲ್ಲಿಯೇ ಅಂಚಿನಲ್ಲಿದ್ದ ಕಲ್ಲಿಗೆ ಹಣೆ ಜಜ್ ಎಂದು ಜಜ್ಜಿಹೋಯಿತು. ಬಿಸಿ ರಕುತ ಚಲ್ ಎಂದು ಚಿಮ್ಮಿದಾಗ ಅದನ್ನು ಕೈಯ್ಯಲ್ಲಿ ಒರೆಸಿದ ಗುಲಾಬಿ ನೋವಿನಿಂದ ಕಿರುಚಿಕೊಂಡಳು. ಮಗಳು ಚೀರಿದ ಶಬ್ದಕ್ಕೆ ಆಗತಾನೆ ನಿನ್ನೆಯ ನಶೆಯನ್ನು ಕಳಕೊಳ್ಳುತ್ತಿದ್ದ ಹೊನ್ನಯ್ಯ ತಡಬಡಿಸುತ್ತಲೇ ಹೊಳೆಯಂಚಿಗೆ ಓಡಿದ. ರಕ್ತದ ಮಡುವಿನಲ್ಲಿ ಬಿದ್ದ ಮಗಳನ್ನು ಮುಟ್ಟುವುದೋ ಬೇಡವೋ ಎಂದು ಅರೆಕ್ಷಣ ತಡೆದ. ಏಕೆಂದರೆ ನಿನ್ನೆಯಷ್ಟೇ ಅವಳು ಮೈಲಿಗೆಯೆಂದು ಚಾಪೆ, ದಿಂಬು ಇಟ್ಟು ಹೊರಗೆ ಕುಳಿತಿದ್ದಳು. ಎಷ್ಟು ಕರೆದರೂ ಮಲಗಿದ್ದ ಮಗಳು ಎದ್ದೇಳದೇ ಇರುವುದನ್ನು ಕಂಡು ಅಪಾಯದ ಮುನ್ಸೂಚನೆಯನ್ನರಿತು ಅವಳನ್ನು ಎತ್ತಿದ. ಸೊಂಟಕ್ಕೆ ಸುತ್ತಿದ ಪಂಚೆಯನ್ನು ಅವಳ ತಲೆಗೆ ಕಟ್ಟಿ, ಮುಖಕ್ಕೆ ನೀರು ಎರಚಿ ಎಚ್ಚರಗೊಳಿಸಿ ಮನೆಯವರೆಗೆ ಹೊತ್ತು ತಂದವನೇ ಅಕ್ಕಪಕ್ಕದಲ್ಲಿದ್ದವರನ್ನೆಲ್ಲ ಕೂಗಿ ಕರೆದ. ಅಂಗಳದಲ್ಲಿ ಸೇರಿದ ಜನರೆಲ್ಲ ತಲೆಗೊಂದು ಮಾತನ್ನು ಹೇಳುತ್ತ, ಅವಳ ತಲೆಯಿಂದ ಸೋರುತ್ತಲಿದ್ದ ರಕ್ತವನ್ನು ನಿಲ್ಲಿಸಲು ತಮಗೆ ತಿಳಿದ ಉಪಾಯವನ್ನೆಲ್ಲ ಹೇಳತೊಡಗಿದರು.
ಮೈಲಿಗೆಯವಳನ್ನು ಮುಟ್ಟಿದ ಹೊನ್ನಯ್ಯನನ್ನು ಮುಟ್ಟಿಸಿಕೊಳ್ಳದೇ ಅವನ ಕೈಮೇಲೆ ಅರಿಸಿನದ ಹುಡಿ, ಚಾ ಪುಡಿ, ಸಕ್ಕರೆ ಹೀಗೆ ರಕ್ತ ನಿಲ್ಲಿಸಲು ತಮಗೆ ತೋಚಿದ ವಸ್ತುಗಳನ್ನೆಲ್ಲ ಸುರಿಯುತ್ತ ಗಾಯಕ್ಕೆ ಮೆತ್ತುವಂತೆ ಆಗ್ರಹಿಸಿದರು. ಅವನೋ ಏನು ಮಾಡುವುದೆಂದು ತೀರ್ಮಾನಿಸಲಾಗದೇ ಅವರು ಹೇಳಿದ್ದನ್ನೆಲ್ಲ ಮಾಡುತ್ತ ಮಗಳನ್ನು ಸಂತೈಸತೊಡಗಿದ. ಏನನ್ನು ಮೆತ್ತಿದರೂ ತಡೆಯಲಾರನೆಂದು ಚಿಮ್ಮನೆ ಚಿಮ್ಮಿದ ರಕ್ತ ಅವಳನ್ನಲ್ಲದೇ ಹೊನ್ನಯ್ಯನನ್ನೂ ತೋಯಿಸುತ್ತ ಬಂತು. ಗುಲಾಬಿಯ ತುಟಿಯೆಲ್ಲ ಬಿಳುಚಿ, ನಿಸ್ತೇಜವಾಗುತ್ತಿರುವುದನ್ನು ನೋಡಿದ ಮಂಜ ದಾಪುಗಾಲಿನಲ್ಲಿ ಹೊಳೆಯಾಚೆಗೆ ಹೋಗಿ ಹಂಚಿನ ಹೊರೆಯನ್ನಿಳಿಸಲು ಬಂದ ಲಾರಿಯನ್ನು ನೋಡಿ, ಅದರ ಡ್ರೈವರನಿಗೆ ವಿಷಯ ತಿಳಿಸಿ, ಅವಳನ್ನು ಪೇಟೆಯ ಆಸ್ಪತ್ರೆಗೆ ಒಯ್ಯುವ ಏರ್ಪಾಡು ಮಾಡತೊಡಗಿದ.
ಓಡೋಡುತ್ತಲೇ ಬಂದ ಮಂಜ ಆಸ್ಪತ್ರೆಗೆ ಸಾಗಿಸುವ ವಿಷಯ ತಿಳಿಸಿದಾಗ ಎಲ್ಲರೂ ಅದನ್ನು ಒಪ್ಪಿ ಗುಲಾಬಿಯನ್ನು ಹೊತ್ತೊಯ್ಯುವಂತೆ ಹೊನ್ನಯ್ಯನನ್ನು ಒತ್ತಾಯಿಸಿದರು. ಇನ್ನು ಮುಟ್ಟು ಮೈಲಿಗೆ ಎಂದೆಲ್ಲ ಯೋಚಿಸುತ್ತ ಕೂತರೆ ಆಗುವ ವಿಷಯವಲ್ಲವೆಂದು ನಾಗಿ ಟೊಂಕ ಕಟ್ಟಿ ರಕ್ತದಿಂದ ತೊಯ್ದ ಗುಲಾಬಿಯ ಬಟ್ಟೆಗಳನ್ನು ಬದಲಾಯಿಸಿದಳು. ಮೂರ್ಛೆಗೆ ಜಾರುತ್ತಿದ್ದ ಅವಳನ್ನು ಹೊನ್ನಯ್ಯ ಹೆಗಲ ಮೇಲೆ ಹೊತ್ತು ಹೊಳೆಯಾಚೆ ನಿಂತಿರುವ ಲಾರಿಯೆಡೆಗೆ ಕರೆದುಕೊಂಡು ಹೋದ. ಇನ್ನೇನು ಲಾರಿಯನ್ನೇರಿ ಆಸ್ಪತ್ರೆಗೆ ಹೊರಡಬೇಕೆನ್ನುವಾಗ ಲಾರಿಯ ಡ್ರೈವರ್ ವಾಸುವಿನ ಹೆಂಡತಿ ಬಂದು ತಕರಾರು ತೆಗೆದೇಬಿಟ್ಟಳು. “ಐದು ವರ್ಷದ ಹಿಂದೆ ಬದುಕು ಮೂರಾಬಟ್ಟೆಯಾಗುವಾಗ ಸಾಲ ಮಾಡಿ ತೆಗೆದುಕೊಂಡ ಲಾರಿಯಿದು. ಮನೆದೇವರ ಪೂಜೆ ಮಾಡಿ ದೇವರ ಪಟವನ್ನು ಲಾರಿಯಲ್ಲಿಟ್ಟು ದಿನವೂ ನನ್ನ ಗಂಡ ಪೂಜೆ ಮಾಡುತ್ತಾರೆ. ದೇವರ ದಯೆಯಿಂದಲೇ ಮೂರಾಬಟ್ಟೆಯಾದ ಬದುಕು ಹದಕ್ಕೆ ಬಂದಿದೆ. ಇದೀಗ ಮೈಲಿಗೆಯಾದ ಹುಡುಗಿಯನ್ನೆಲ್ಲ ಲಾರಿಯಲ್ಲಿ ಹತ್ತಿಸಲು ಸುತಾರಾಂ ಸಾಧ್ಯವಿಲ್ಲ” ಎಂದು ತಳ್ಳಿಹಾಕಿದಳು. ವಾದ, ವಿವಾದಗಳ ಬಿಸಿಯಲ್ಲಿ ಗುಲಾಬಿಯ ಜೀವದ ಸ್ಥಿತಿ ಯಾರ ಗಮನಕ್ಕೂ ಬರದೇ ತಮ್ಮದೇ ಮಾತುಗಳ ಮೇಲಾಟದಲ್ಲಿ ವೇಳೆಗಳೆಯತೊಡಗಿತು. ಇದನ್ನು ಗಮನಿಸಿದ ಮಂಜು ತನ್ನ ಮನೆಯಲ್ಲಿದ್ದ ಸೈಕಲ್ಲನ್ನು ತಂದವನೇ ಸೀಟಿನ ಮುಂಭಾಗದಲ್ಲಿರುವ ಹಾರೆಯ ಮೇಲೆ ಒಂದು ಬಟ್ಟೆಯ ದಿಂಬನ್ನಿಟ್ಟು, ಅವಳನ್ನು ಸೈಕಲ್ಲಿನ ಹ್ಯಾಂಡಲ್ಲಿಗೆ ಒರಗಿಸಿ ಕುಳ್ಳಿರಿಸಿಕೊಂಡು, ಹಿಂದಿನ ಸೀಟಿನಲ್ಲಿ ನಾಗಿಯನ್ನು ಕುಳ್ಳಿರಿಸಿಕೊಂಡು ಲಾರಿಗೆ ಪ್ರತಿಸ್ಪರ್ಧಿಯೆಂಬಂತೆ ಇದ್ದ ಬಿದ್ದ ತಾಕತ್ತನ್ನೆಲ್ಲ ಉಪಯೋಗಿಸಿ ಸೈಕಲ್ಲನ್ನು ಓಡಿಸತೊಡಗಿದ. ಜಗಳದಲ್ಲಿ ನಿರತರಾದ ಜನರೆಲ್ಲರೂ ಈ ಘಟನೆಯಿಂದ ಎಚ್ಚೆತ್ತುಕೊಂಡು ಹೊನ್ನಯ್ಯನೊಂದಿಗೆ ತಾವೂ ಬಿಡುಬೀಸು ನಡಿಗೆಯಲ್ಲಿ ಆಸ್ಪತ್ರೆಯ ಕಡೆಗೆ ಧಾವಿಸತೊಡಗಿದರು.
ಊರಿನಿಂದ ಹತ್ತಾರು ಮೈಲಿ ದೂರದ ಆಸ್ಪತ್ರೆಯ ಆವರಣವನ್ನು ಪ್ರವೇಶಿಸುವಾಗ ಗುಲಾಬಿಯಿನ್ನೂ ಸಣ್ಣಗೆ ನರಳುತ್ತಾ ಉಸಿರಾಡುತ್ತಿದ್ದಳು. ತಲೆಗೆ ಕಟ್ಟಿದ ಪಂಚೆಯನ್ನೂ ಒತ್ತರಿಸಿಕೊಂಡು ರಕ್ತವು ಮೈಮೇಲೆಲ್ಲಾ ಸುರಿಯುತ್ತಿತ್ತು. ಇವಳನ್ನು ನೋಡಿದ್ದೇ ನರ್ಸಗಳು ಏನು? ಎತ್ತ? ಎಂದೇನೂ ವಿಚಾರಿಸದೇ ತಕ್ಷಣ ಆಸ್ಪತ್ರೆಯಲ್ಲಿರುವ ತುರ್ತುಚಿಕೆತ್ಸೆಯ ರೂಮಿಗೆ ಕರೆದುಕೊಂಡು ಹೋದರು. ಹೊರಗೆ ನಿಂತ ಮಂಜನ ಇಡೀ ದೇಹ ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದರೆ, ನಾಗಿಯ ಕೈ ಅವಳಿಗರಿವಿಲ್ಲದಂತೆಯೇ ಜೋಡಿಸಿಕೊಂಡು, “ಅಯ್ಯಾ, ನಮ್ಮೂರ ಮಾರಮ್ಮ, ತಾಯಿಲ್ಲದ ಮಗುವನ್ನು ಉಳಿಸಿಕೊಡೇ ತಾಯೆ. ಮುಂದಿನ ಮಾರ್ನಮಿಗೆ ಕುರಿಯೂಟ ಕೊಟ್ಟೇನು.” ಎಂದು ಹರಕೆ ಹೊತ್ತಿತು. ಅರ್ಧ ತಾಸು ಕಳೆದ ಮೇಲೆ ಹೊರಬಂದ ಡಾಕ್ಟರಮ್ಮ, “ಯಾರ‍್ರೀ ಅದು ಈ ಮಗುವನ್ನು ಕರೆತಂದವರು? ನಿಮಗೇನಾದರೂ ತಲೆಯಲ್ಲಿ ಬುದ್ಧಿ ಗಿದ್ದಿ ಏನಾದರೂ ಆ ಬ್ರಹ್ಮ ಹಾಕಿದ್ದಾನ? ತಲೆಯ ಚಿಪ್ಪು ಒಡೆದು ರಕ್ತ ಸೋರುತ್ತಿದ್ದರೆ, ಒಲೆಯ ಮೇಲೆ ನೀರು ಕುದೀತಿದೆ ಅನ್ನೋ ಥರಾ ಚಾ ಪುಡಿ, ಸಕ್ರೆ ಎಲ್ಲಾ ಹಾಕಿ ರಾಡಿ ಮಾಡಿದ್ದೀರಿ. ಅದರೊಂದಿಗೆ ಅರಿಸಿನ ಹುಡಿಯ ರಾಶಿ ಬೇರೆ. ಅಷ್ಟೆಲ್ಲವನ್ನೂ ಕ್ಲೀನ್ ಮಾಡೋ ಹೊತ್ತಿಗೆ ಅವಳೊಳಗಿದ್ದ ಇದ್ದಬಿದ್ದ ಹನಿರಕ್ತವೂ ಸೋರಿಹೋಯಿತು. ಅಲ್ಲಾ, ಇಷ್ಟು ಪೆಟ್ಟಾಗಿದೆ, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಲು ಏನು ರೋಗ ನಿಮಗೆ?” ಎಂದು ಒಂದೇ ಸಮನೆ ರೇಗತೊಡಗಿದರು. ಡಾಕ್ಟರಮ್ಮನಿಗೆ ಎರಡೂ ಕೈಜೋಡಿಸಿದ ನಾಗಿ, “ಅಮ್ಮಾ, ತೆಪ್ಪಾಯ್ತು. ಹಳ್ಳಿ ಮಂದಿ ನಾವು. ನಮಗೆ ತಿಳಿದದ್ದು ಮಾಡ್ತೀವಿ. ತಾಯಿಲ್ಲದ ತಬ್ಲಿ ಹುಡುಗಿ ಅವಳು. ನಿನ್ನೆ ತಾನೇ ಮುಟ್ಟಾಗವ್ಳೇ ಅಂತ ಲಾರಿಯವರೂ ಹತ್ತಿಸ್ಕೊಳ್ಳಲಿಕ್ಕೆ ಕೇಳಲಿಲ್ಲ. ಈ ಮಂಜ ಇರೂದಕ್ಕೆ ಸೈಕಲ್ನಾಗೇ ಅವಳನ್ನು ನಿಮ್ ತಾವ ತಂದ. ಹೇಂಗದೇ ನಮ್ಮ ಕೂಸು? ನೋಡಬಹುದೆ ಈಗ?” ಎಂದು ಇನ್ನೊಮ್ಮೆ ಕೈಜೋಡಿಸಿದಳು.
ಸುತ್ತಮುತ್ತಲ ಹಳ್ಳಿಗಳ ಬಗ್ಗೆ ಅರಿವಿದ್ದ ಡಾಕ್ಟರಮ್ಮ ಚೂರು ಮೆತ್ತಗಾಗಿ, “ಈಗಷ್ಟೇ ಗಾಯವನ್ನು ತೊಳೆದು, ಹೊಲಿದು ರಕ್ತ ಹೋಗೋದನ್ನು ನಿಲ್ಲಿಸಿದ್ದೇವೆ. ಆದರೆ ಅವಳ ದೇಹದಲ್ಲಿರುವ ರಕ್ತವೆಲ್ಲ ಬಸಿದುಹೋಗಿದೆ. ಹೊರಗಿನಿಂದ ರಕ್ತ ಕೊಡಬೇಕು ಅಂದ್ರೆ ಸಿಟಿಲಿರೋ ದೊಡ್ಡ ಆಸ್ಪತ್ರೆಗೆ ಈಗಲೇ ಕರಕೊಂಡು ಹೋಗಿ. ಒಂದರ್ಧ ಗಂಟೆ ಮುಂಚೆಯಾದ್ರೂ ಬಂದಿದ್ರೆ ಪ್ರಾಣ ಉಳಿಸಬಹುದಿತ್ತೇನೊ? ಅದೆಂಥದ್ದು ನಿಮ್ದು ಸಾವಿನ ಅಂಚಿನಲ್ಲಿ ಮಡಿ ಮೈಲಿಗೆಯ ಲೆಕ್ಕಾಚಾರ. ಮುಟ್ಟಿನ ರಕ್ತದಲ್ಲೇ ಹುಟ್ಟಿದ್ದೀರಿ, ಅದನ್ನೇ ಮೈಲಿಗೆಯೆಂದು ದೂರ ನಿಲ್ಲುತ್ತೀರಿ. ನಿಮಗೆಲ್ಲ ಯಾರು ಬುದ್ದಿ ಹೇಳೋರು. ಮೊದಲು ಅವಳ ಹೆತ್ತವರನ್ನು ಕರೆಸಿ. ವಿಷಯ ಸೀರಿಯಸ್ ಇದೆ.” ಎಂದು ಗರಂ ಆದರು. ಗಂಟೆಯಾಗುವಷ್ಟರಲ್ಲಿ ಓಡೋಡಿಕೊಂಡು ಹೊನ್ನಯ್ಯ ಆಸ್ಪತ್ರೆಯ ಬಾಗಿಲಿನಲ್ಲಿ ನಿಂತ. ಅಷ್ಟರಲ್ಲಾಗಲೇ ಗುಲಾಬಿ ಮಲಗಿದ ರೂಮಿನಿಂದ ಗಾಬರಿಯ ದನಿಗಳು ಕೇಳಿಬರತೊಡಗಿದವು. ಡಾಕ್ಟರ್ ಹೊರಗೆ ಬಂದು ಅಸಹಾಯಕತೆಯ ನೋಟ ಬೀರಿದರು. ಹೂವಂತೆ ನಗುತ್ತಿದ್ದ ಹುಡುಗಿಯ ತುಟಿಗಳು ಕಪ್ಪಿಟ್ಟುಹೋದವು. ಜೋಲಿಯಲ್ಲಿ ನೇತಾಡುತ್ತ ಬಂದ ಗುಲಾಬಿಯನ್ನು ಹೊಳೆಸಾಲಿನ ಹೊಳೆದಂಡೆಯಲ್ಲಿರುವ ಅವಳ ತರಕಾರಿ ತೋಟದಂಚಿನಲ್ಲಿಯೇ ಉರಿಸಲಾಯಿತು.
ಅರಳಬೇಕಾದ ಗುಲಾಬಿ ಬಾಡಿಹೋದ ಮೇಲೆ ಹೊಳೆಸಾಲಿನಲ್ಲೊಂದು ಸಂಚಲನ ಪ್ರಾರಂಭಗೊಂಡಿತು. ಲಾರಿಯಲ್ಲೇನಾದರೂ ಅವಳನ್ನು ಕರೆದುಕೊಂಡು ಹೋಗಿದ್ದರೆ ಜೀವ ಉಳಿಸಬಹುದಿತ್ತೇನೋ ಎಂದು ಮೊದಲು ಎಲ್ಲರ ಸಿಟ್ಟು ಲಾರಿಯವರ ಮೇಲೆ ತಿರುಗಿತು. ಪರವೂರಿನವರಾದ ಅವರನ್ನು ದೂರಿ ಪ್ರಯೋಜನವಾದರೂ ಏನು? ಎಂದು ಮರುಕ್ಷಣವೇ ಎಲ್ಲರಿಗೂ ಅನಿಸಿತು. ಗುಲಾಬಿಯ ಸಾವು ಶಾಲೆಗೆ ಹೋಗುವ ಎಲ್ಲ ಮಕ್ಕಳನ್ನೂ ಕಾಡಿತು. ನೀಲಿ ಮತ್ತವಳ ತಂಡದವರು ಎಲ್ಲ ಮನೆಗಳಿಗೆ ಹೋಗಿ ಇದೆ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಟ್ಟಿನ ಮೈಲಿಗೆಯನ್ನು ತೊಳೆಯತೊಡಗಿದರು. “ದಿನಾಲೂ ಬಸ್ಸಿನಲ್ಲಿ ಒಬ್ಬರಲ್ಲ ಒಬ್ಬರು ಮೈಲಿಗೆಯಾದವರು ಇದ್ದೇ ಇರುತ್ತಾರಲ್ವಾ? ಅದನ್ನೆಲ್ಲ ನೀವು ಎಂದಾದರೂ ಗಮನಕ್ಕೆ ತೆಗೆದುಕೊಳ್ತೀರಾ? ಶಾಲೆಯಲ್ಲಿ ಎಷ್ಟೋ ಜನ ಮೈಲಿಗೆಯಾದವರು ಇರಬಹುದು. ಮನೆಯ ಹೊರಗೆ ಇಂಥದ್ದನ್ನೆಲ್ಲ ಇಟ್ಟುಕೊಳ್ಳುವುದು ಎಷ್ಟು ಸರಿ?” ಎಂಬ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದರು. ಗುಲಾಬಿಯ ಸಾವು ಊರಿನ ಗೌಡಾ ಮಾಸ್ರ‍್ರನ್ನು ಇನ್ನಿಲ್ಲದಂತೆ ಅಲುಗಾಡಿಸಿಬಿಟ್ಟಿತು. ಇಡಿಯ ತರಗತಿಯಲ್ಲಿ ಜಾಣೆಯಾದ ಹುಡುಗಿಯಾಗಿದ್ದಳವಳು. ಶಾಲೆಯಲ್ಲಿ ನಡೆಯುವ ಶಾರದಾ ಪೂಜೆಗೆ ಅದೆಷ್ಟು ಚಂದದ ಹೂಮಾಲೆಯನ್ನು ಕಟ್ಟಿ ತರುತ್ತಿದ್ದಳು! ಶಾಲೆಯ ಇಡಿಯ ಅಂಗಳವನ್ನು ನುಣುಪಾಗಿ ಸಗಣಿ ಹಾಕಿ ಸಾರಿಸುತ್ತಿದ್ದಳು. ಎಂಥ ಅಂದ ಎಂಥ ಚಂದ ಶಾರದಮ್ಮ, ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮ ಎಂದು ಅವಳು ಹಾಡುತ್ತಿದ್ದರೆ ಶಾರದಮ್ಮ ಎದ್ದು ಬಂದುಬಿಡುವಳೇನೋ ಎಂಬಂತೆ ಭಾಸವಾಗುತ್ತಿತ್ತು. ಅವಳು ಹೊಳೆಸಾಲಿನ ಶಾಲೆಯನ್ನು ಮುಗಿಸುವ ಹೊತ್ತಿಗೆ ಎಲ್ಲಿಯಾದರೂ ಬಸ್ ವ್ಯವಸ್ಥೆಯಿದ್ದರೆ ಮುಂದಿನ ಶಾಲೆಗೆ ಒತ್ತಾಯವಾಗಿಯಾದರೂ ಮಾಸ್ರ‍್ರು ಕಳಿಸುತ್ತಿದ್ದರು. ಅಪ್ಪನಿಗೆ ಸಹಾಯ ಮಾಡುತ್ತ ಮನೆಯಲ್ಲೇ ಉಳಿದ ಕೂಸಿಗೆ ಅದೆಂಥಹ ದಾರುಣ ಸಾವು ಬಂತೆಂದು ಅವರು ಹಳಹಳಿಸಿದರು.
ನೀಲಿ ಮತ್ತವಳ ಸಹಪಾಠಿಗಳು ಮನೆ, ಮನೆ ತಿರುಗುತ್ತ ಎಲ್ಲರಲ್ಲೂ ತಮ್ಮ ಅಳಲನ್ನು ಹೇಳಿಕೊಳ್ಳುತ್ತಿರುವ ಸಂಗತಿ ಮಾಸ್ರ‍್ರ ಗಮನಕ್ಕೂ ಬಂದಿತು. ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲವೆಂದುಕೊಂಡ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಡಾಕ್ಟರಮ್ಮನಲ್ಲಿ ಮಾತನಾಡಿ ಹೊಳೆಸಾಲಿಗಾಗಿ ಒಂದಿಷ್ಟು ಅರಿವಿನ ಕಾರ್ಯಕ್ರಮಗಳ ರೂಪುರೇಷೆಯನ್ನು ನಿಗದಿಗೊಳಿಸಿಯೇಬಿಟ್ಟರು. ಮೊದಲಿಗೆ ಹೊಳೆಸಾಲಿನ ಅಮ್ಮಂದಿರನ್ನೆಲ್ಲ ಶಾಲೆಯ ಅಂಗಳದಲ್ಲಿ ಸೇರಿಸಿ ಡಾಕ್ಟರಮ್ಮನನ್ನು ಬರಹೇಳಿದರು. ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು. ಮುಟ್ಟಾದ ಹುಡುಗಿಯರು ಮೂತ್ರಕ್ಕೆ ಅದೆಷ್ಟೋ ದೂರ ಹೋಗಬೇಕಾದ ಅನಿವಾರ್ಯತೆಯಿಂದ ನೀರು ಕುಡಿಯದಿದ್ದರೆ ಆಗುವ ಅಪಾಯಗಳ ಬಗ್ಗೆ ಮಾಹಿತಿ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಮುಟ್ಟೆಂಬುದು ಮಗುವು ತಾಯಿಯ ಗರ್ಭದಲ್ಲಿ ಮಲಗಬೇಕಾದ ಚಂದದ ಮೆತ್ತನ್ನ ಹಾಸಿಗೆಯಲ್ಲದೇ ಮತ್ತೇನಲ್ಲ ಎಂಬುದನ್ನೆಲ್ಲ ಹಲಸಿನ ಹಣ್ಣಿನ ತೊಳೆಬಿಡಿಸಿದಂತೆ ಎಳೆಎಳೆಯಾಗಿ ತೆರೆದಿಟ್ಟರು. ಸಂದೇಹದಿಂದ ಪ್ರಶ್ನಿಸಿದವರಿಗೆಲ್ಲ ತಾಳ್ಮೆಯಿಂದ ಉತ್ತರಿಸಿದರು. ಗಾಯಗಳಾದಾಗ ಉಪಚರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ ಹೊಳೆಸಾಲಿಗೆಂದು ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯೊಂದನ್ನು ಕೊಡುಗೆಯಾಗಿ ನೀಡಿದರು. ಪ್ರತಿ ತಿಂಗಳಗೊಮ್ಮೆ ಹೊಳೆಸಾಲಿನ ಹೆಂಗಳೆಯರ ಆರೋಗ್ಯವನ್ನು ವಿಚಾರಿಸಲು ಸಹಾಯಕಿಯೊಬ್ಬರನ್ನು ಕಳಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಮುಗಿಸಿ ಹೊರಟ ಎಲ್ಲ ಅಮ್ಮಂದಿರ ಬಾಯಲ್ಲಿ ಒಂದೇ ಮಾತು, “ಜೀವಕ್ಕಿಂತ ದೊಡ್ದು ಯಾವುದು?” ಆ ವರ್ಷ ಸುರಿದ ಮಳೆಗಾಲ ಹೊಳೆಸಾಲಿನ ಮುಟ್ಟಿನ ಮೈಲಿಗೆಯನ್ನೆಲ್ಲ ಕೊಚ್ಚಿ ಕೊರೆದುಕೊಂಡು ಸಾಗಿತು. ಹೆಣ್ಣು ಮಕ್ಕಳ ತಿಂಗಳ ದಿನಗಳಲ್ಲಿದ್ದ ಕಟ್ಟುಪಾಡುಗಳೆಲ್ಲ ಸದ್ದಿಲ್ಲದೇ ಹರಿದುಹೋಗಲಾರಂಭಿಸಿದವು. ಎಲ್ಲರ ಸ್ನಾನವಾದ ಮೇಲೆ ಬಚ್ಚಲ ಮನೆಗೆ ಹೋಗಬಹುದು ಎಂಬಲ್ಲಿಂದ ಪ್ರಾರಂಭಗೊಂಡು, ನಲ್ಲಿಯ ನೀರು ಮುಟ್ಟಿದರೆ ಶಾಸ್ತ್ರವಿಲ್ಲ ಎಂಬಲ್ಲಿಗೆ ತಲುಪಿ, ದೇವರ ಕೋಣೆಗೊಂದು ಹೋಗದಿದ್ದರಾಯ್ತಪ ಎನ್ನುವವರೆಗೂ ಮುಟ್ಟಿತು. ಬಸ್ಸು, ಲಾರಿ, ಪೇಟೆ, ಶಾಲೆ ಎಂಬ ಸಾರ್ವಜನಿಕ ಕ್ಷೇತ್ರಗಳಲ್ಲಿ ಮುಟ್ಟಿನ ಮೈಲಿಗೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಅಳಿದುಹೋಯಿತು. ಶತಮಾನಗಳಿಂದ ಅದೆಷ್ಟೋ ಹೆಂಗಳೆಯರ ಮುಟ್ಟಿನ ರಕ್ತವನ್ನು ತನ್ನೊಳಗೆ ಹುದುಗಿಸಿಕೊಂಡು ಎಂದಿಗೂ ಮೈಲಿಗೆಯಾಗದೇ ಹರಿಯುವ ಹೊಳೆಸಾಲಿನ ಹೊಳೆ ಇವೆಲ್ಲವನ್ನೂ ನೋಡಿ ನಕ್ಕಿತು!
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಅದೇಕೋ ಏನೊ ಎಲ್ಲಾ ಸುಧಾರಣೆಯು ಒಂದು ಹೆಣ್ಣಿನ ಬಲಿ ಪಡೆಯುತ್ತೆ. ಓದಿ ಬೇಜಾರಾಯಿತು. ಇದು ಎಲ್ಲಾ ಹಳ್ಳಿ ಮನೆಯ ಕಥೆ. ನಾನು ಮನೆಯವರು ದೇವರಿಗೆ ಮೈಲಿಗೆ ಎಂದಾಗ ತಮಾಷೆಗೆ ರಾಮನ ಪಕ್ಕ ಯಾವತ್ತು ಸೀತೆ ಇರುತ್ತಾಳೆ ಆಕೆಗೆ ಮುಟ್ಟಾಗುವುದಿಲ್ಲವೆ ರಾಮ ಪೋಟೋದಲ್ಲಿ ಯಾವಾಗಲೂ ಸೀತೆಯ ಜೊತೆ ಇರುತ್ತಾನಲ್ಲ. ಅಂತ.ನಮ್ಮಲ್ಲಿ ಇನ್ನೊಂದು ವಿಶೇಷ ಇದೆ. ಮಗಳಿಗೆ ಮೊದಲು ಋತು ಶ್ರಾವವಾದರೆ ತಲೆನೀರು ಮದುವೆಯನ್ನು ವಿಜೃಂಭಣೆಯಿಂದ ಮಾಡುತ್ತಾರೆ.
ಧನ್ಯವಾದಗಳು ಸರ್