ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.

ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈವತ್ತು ಈ ಜಾಗದಲ್ಲಿ  ಟೀನಾ ಶಶಿಕಾಂತ್ ಬರೆದ ಕವಿತೆ ಇದೆ.

 

 

 

 

 

 

ಒಂದು ಭೇಟಿ, ಮೊದಲು, ನಂತರ

ಅವಳ ಅವನ
ಪ್ರತಿ ಭೇಟಿಗು ಮುನ್ನ
ಮಾರ್ಚಿನ ಬೇಸಿಗೆ ರಜೆಯ ತವಕ
ಪರೀಕ್ಷೆ ಯಾವಾಗ ಮುಗೀದಿತೊ ಎಂದು
ಮಿಡಿಮಾವು, ಪೇರಲೆ, ಪ್ಲೇನ್ ಚಿಟ್ಟೆಗಳ
ಕನಸು ಕಾಣುತ್ತ ಜಾಮಿಟ್ರಿ ಬಾಕ್ಸು
ಸರಿಮಾಡಿಕೊಳ್ಳುತ್ತ
ಟೀಚರು ತರುವ ಕೊನೆ ಪೇಪರಿಗೆ
ಕಾಯುವ ಮಕ್ಕಳ ಹಾಗೆ

ಅವನ ಅವಳ
ಪ್ರತಿ ಭೇಟಿಯೂ
ಅಗಸ್ಟಿನ ಮಳೆಯ ರೀತಿ
ಚಿರಿಪಿರಿ ಎನ್ನುತ್ತ ಸಣ್ಣಗೆ ಶುರುವಾಗಿ
ಧೋ ಎನ್ನುತ್ತ ಹುಚ್ಚಾಗಿ ಸುರಿದು
ಊರೆಲ್ಲ ಉಕ್ಕಿ ಹರಿದು
ನಕ್ಕ ಮನದಲೆಲ್ಲ ಸುಮ್ಮಸುಮ್ಮನೆ
ಹುಚ್ಚಾಪಟ್ಟೆ ಹಸಿರು.

ಅವಳ ಅವನ
ಪ್ರತಿ ಭೇಟಿಯ ನಂತರ
ನವೆಂಬರಿನ ನಡುಕದ ನೆನಪು
ತಂಪೇರಿದಾಗ ಮಿಡುಕಾಡುತ್ತ
ಟ್ರಂಕು ಬಿಚ್ಚಿ ಸ್ವೆಟರುಶಾಲುಕ್ಯಾಪು
ಹಾಕಿಕೊಂಡರು
ಅವನ ಕೌದಿಗೆ ಮಾತ್ರ
ಅವಳ ಚಳಿ ಓಡಿಸುವ ತಾಕತ್ತು.

 

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)