ಹುಡುಗ ಹೋದ ಮೇಲೆ ಜಗನ್ನಾಥನಿಗೆ ಜೋಂಪು ಹತ್ತಿದಂತೆ ಆಯಿತು. ಎದ್ದು ಮಲಗುವ ಕೋಣೆಗೆ ಹೋದ. ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಗಾಢವಾದ ನಿದ್ರೆ. ಅವನು ಸರಿಯಾಗಿ ನಿದ್ರೆ ಮಾಡಿದರೆ ಸಾಕೆಂಬ ಭಾವದಲ್ಲಿದ್ದ ರಾಧಾ ಸುಮ್ಮನೆ ನೋಡುತ್ತಾ ಗಂಡನಿಗೆ ತೊಂದರೆಯಾಗದಿರಲೆಂಬ ಕಾರಣದಿಂದ ಶ್ಯಾಮನನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿದಳು. ಅವನ ಮೊಬೈಲನ್ನು ಕೂಡ ಬಂದ್ ಮಾಡಿದಳು. ರಾತ್ರಿಯಿಡೀ ಜಗನ್ನಾಥನಿಗೆ ಕನಸುಗಳ ಮಹಾಪೂರ. ಸುಂದರ ಕನಸುಗಳು ಹೇಗೆ ಬೀಳುತ್ತಿದ್ದವೆಂದರೆ ಸ್ವತಃ ತಾನೇ ಅಭಿನಯಿಸಿರುವ ಬಣ್ಣದ ಚಲನಚಿತ್ರದಂತೆ ಭಾಸವಾಗುತ್ತಿತ್ತು.
ಡಾ. ಕೆ. ಎಸ್. ಗಂಗಾಧರ ಬರೆದ ಕತೆ “ಕನಸುಗಳು ಬೇಕೇ ಕನಸುಗಳು!” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಎಲ್ಲಾ ಜಿಲ್ಲಾ ಕೇಂದ್ರಗಳಂತೆ ಶರವೇಗದಲ್ಲಿ ಬೆಳೆದು ಗಿಜಿಗಿಜಿಗುಡುತ್ತಿದ್ದ ಮಂಜಾಲದಲ್ಲಿ ಪ್ರಶಾಂತ ಜೀವನವನ್ನು ನಡೆಸುವುದು ದುಸ್ತರವೆನಿಸತೊಡಗಿದಾಗ ಊರ ಹೊರವಲಯದಲ್ಲಿ ಅನೇಕ ಬಡಾವಣೆಗಳು ತಲೆ ಎತ್ತಿದವು. ಮಂಜಾಲದಲ್ಲಿ ನಿವೇಶನಗಳ ಬೆಲೆ ಮಧ್ಯಮ ವರ್ಗದವರಿಗೆ ಸುಲಭವಾಗಿ ಕೈಗೆಟಕುವ ಪರಿಸ್ಥಿತಿ ಮೀರಿದ್ದೂ ಸಹ ಇಂತಹ ಬಡಾವಣೆಗಳು ಶುರುವಾಗಲು ಮತ್ತೊಂದು ಪ್ರಬಲ ಕಾರಣ. ಹೊಸದಾಗಿ ಪ್ರಾರಂಭವಾಗಿದ್ದ ಬಡಾವಣೆಗಳ ಮಾಲೀಕರು ಸುಲಭ ದರಕ್ಕೆ ನಿವೇಶನಗಳನ್ನು ನೀಡುವುದರ ಜೊತೆಗೆ ಹಲವಾರು ರೀತಿಯ ಆಮಿಷಗಳನ್ನು ಒಡ್ಡಿ ಮಂಜಾಲದ ಬಡ ಮಧ್ಯಮ ವರ್ಗದ ಜನರನ್ನು ಸೆಳೆಯುವುದರಲ್ಲಿ ಸಫಲರಾಗಿದ್ದರು.
ಮಂಜಾಲದ ಪೂರ್ವಕ್ಕಿರುವ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ನಂದೀಪುರ ಎಂಬ ತಾಲ್ಲೂಕು ಕೇಂದ್ರ ಸಿಗುತ್ತದೆ. ತೆಂಗು ಮತ್ತು ತರಕಾರಿಗಳನ್ನು ಬೆಳೆಯುವ ಸಮತಟ್ಟಾದ ಪ್ರದೇಶವೆಂದು ನಂದೀಪುರ ತಾಲ್ಲೂಕು ಹೆಸರುವಾಸಿಯಾಗಿದ್ದು ವಾತಾವರಣವೂ ಹಿತವಾಗಿರುತ್ತದೆ. ಇದೇ ದಾರಿಯಲ್ಲಿರುವ ಮಂಜಾಲದ ಹೊರವಲಯದಲ್ಲಿರುವ ಅರುಣೋದಯ ಬಡಾವಣೆಯು ಇತ್ತೀಚೆಗೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಬಡಾವಣೆ. ನಗರಕ್ಕೆ ಹತ್ತಿರ ಇದ್ದರೂ ನಗರದ ಗೌಜುಗದ್ದಲಗಳಿಲ್ಲದೇ ಇರುವ ಬೃಹತ್ ಎನ್ನಬಹುದಾದ ಬಡಾವಣೆ. ಸಾವಿರಕ್ಕೂ ಹೆಚ್ಚು ನಿವೇಶನಗಳಿದ್ದು ಪ್ರಾರಂಭದಲ್ಲಿ ಅತಿ ಕಡಿಮೆ ದರದಲ್ಲಿ ಸಿಗುತ್ತಿದ್ದು ಈಗ ಬೆಲೆ ಸ್ವಲ್ಪ ಮೇಲಕ್ಕೇರಿದ್ದರೂ ಕೊಳ್ಳಲು ಯಾವ ನಿವೇಶನಗಳೂ ದೊರಕುತ್ತಿಲ್ಲ. ಈ ಬಡಾವಣೆ ಶುರುವಾಗಿ ಎಂಟತ್ತು ವರ್ಷಗಳಾಗಿ ಶರವೇಗದಲ್ಲಿ ಅಭಿವೃದ್ಧಿಯಾಗಿ ಮುಕ್ಕಾಲು ಪಾಲು ನಿವೇಶನಗಳಲ್ಲಿ ಮನೆಗಳು ತಲೆಯೆತ್ತಿವೆ. ಕೆಲವರು ದೊಡ್ಡ ನಿವೇಶನಗಳನ್ನು ಖರೀದಿಸಿ ಅಪಾರ್ಟ್ಮೆಂಟುಗಳನ್ನೂ ನಿರ್ಮಿಸಿದ್ದಾರೆ. ಕಟ್ಟಿಸಿದ ಮನೆಗಳಲ್ಲೆಲ್ಲಾ ಅದರ ಒಡೆಯರು ಧಾವಂತದಲ್ಲಿ ಬಂದು ನೆಲೆಗೊಂಡಿದ್ದರಿಂದ ಮತ್ತು ನಗರಕ್ಕಿಂತ ಕಡಿಮೆ ಬಾಡಿಗೆಗೆ ಅಪಾರ್ಟ್‌ಮೆಂಟ್‌ಗಳು ಸಿಗುತ್ತಿದ್ದರಿಂದ ಅರುಣೋದಯ ಬಡಾವಣೆಯು ಬಹುತೇಕ ಭರ್ತಿ ಆದಂತೆ ಆಗಿದೆ.
ಇಷ್ಟೆಲ್ಲಾ ಜನಸಂಖ್ಯೆಯಿದ್ದರೂ ಅರುಣೋದಯ ಬಡಾವಣೆಯು ಮಂಜಾಲ ನಗರಕ್ಕಿಂತ ಪ್ರಶಾಂತವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಬಡಾವಣೆಯ ಬಹುತೇಕ ಜನರು ನಗರದಲ್ಲೇ ಕೆಲಸ ಮಾಡುವುದರಿಂದ ಬೆಳಿಗ್ಗೆ ಮನೆ ಬಿಟ್ಟರೆ ಮತ್ತೆ ವಾಪಸ್ಸು ಗೂಡು ಸೇರುವುದು ಸಂಜೆಯಾದ ಮೇಲೆಯೇ. ಕೆಲವು ಮನೆಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಹಗಲೆಲ್ಲಾ ಖಾಲಿಯಾಗಿರುತ್ತವೆ. ನಗರದ ಗದ್ದಲಕ್ಕೆ ಕಾರಣವಾಗುವ ಮಾಲ್‌ಗಳು, ಸಿನೆಮಾ ಥಿಯೇಟರ್‌ಗಳು, ಹೋಟೆಲ್ಲುಗಳು ಇತ್ಯಾದಿ ವಾಣಿಜ್ಯ ಕಟ್ಟಡಗಳು ಇನ್ನೂ ಈ ಬಡಾವಣೆಯಲ್ಲಿ ಪ್ರಾರಂಭವಾಗಿಲ್ಲ. ದಿನನಿತ್ಯದ ಬದುಕಿನ ಅವಶ್ಯಕತೆಗಳಿಗೆ ಬೇಕಾಗುವಷ್ಟು ಅಂಗಡಿಗಳು ಮಾತ್ರ ಲಭ್ಯವಿವೆ. ಬೇಕಾಗಿರುವ ಸಾಮಾನುಗಳನ್ನು ಬಹುತೇಕರು ಮಂಜಾಲದಿಂದ ಬರುವಾಗಲೇ ತರುವುದರಿಂದ ಬೆರಳೆಣಿಕೆಯಷ್ಟಿರುವ ಅಂಗಡಿಗಳಿಗೂ ಅಷ್ಟಾಗಿ ವ್ಯಾಪಾರವಿಲ್ಲ.
ಹಗಲು ಹೊತ್ತಿನಲ್ಲಿ ಕೆಲಸದಿಂದ ನಿವೃತ್ತಿಯಾಗಿರುವವರು, ವಯೋವೃದ್ಧರು ಮತ್ತು ಕೆಲಸಕ್ಕೆ ಹೋಗದ ಹೆಂಗಸರು ಮಾತ್ರ ಬಡಾವಣೆಯಲ್ಲಿ ಇರುತ್ತಾರೆ. ಇಂತವರು ಸೇರಿಕೊಂಡು ಬಡಾವಣೆಯ ಅಭಿವೃದ್ಧಿಗೆಂದು ಸಂಘವೊಂದನ್ನು ಸ್ಥಾಪಿಸಿದ್ದಾರೆ. ಈ ಬಡಾವಣೆಯಲ್ಲಿ ಗಣೇಶ್ ರಾವ್ ಎಂಬ ನಿವೃತ್ತ ಅಧಿಕಾರಿಯೊಬ್ಬರಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದಾಗ ಕೈಬಾಯಿಯನ್ನು ಸ್ವಚ್ಚವಾಗಿಟ್ಟುಕೊಂಡು ಪ್ರಾಮಾಣಿಕರೆಂದು ಹೆಸರು ಮಾಡಿದ್ದರು. ಇರುವ ಒಬ್ಬನೇ ಮಗ ಇಂಜಿನಿಯರಿಂಗ್ ಓದಿ ಅಮೆರಿಕಾದಲ್ಲಿ ನೆಲೆಸಿದ್ದಾನೆ. ಗಣೇಶ್ ರಾವ್ ಅವರು ಹೆಂಡತಿಯೊಂದಿಗೆ ಈ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ನೆಲೆಸಿದ್ದಾರೆ. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಕಾಲ ಕಳೆಯಲು ಮಂಜಾಲದ ಕೆಲವು ಸಮಾಜ ಸೇವಾ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಘನತೆ ಮತ್ತು ಗೌರವದ ಕಾರಣಕ್ಕಾಗಿ ಇವರನ್ನೇ ಈ ಅಭಿವೃದ್ಧಿ ಸಂಘದ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಇದೇ ಬಡಾವಣೆಯಲ್ಲಿರುವ ಮತ್ತೊಬ್ಬ ಕ್ರಿಯಾಶೀಲ ವ್ಯಕ್ತಿ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೇಜರ್ ಮಾದೇಗೌಡರು. ಮಕ್ಕಳಿಲ್ಲವೆಂಬ ಬೇಸರವಿದ್ದರೂ ಶಿಸ್ತಿಗೆ ಹೆಸರಾದವರು. ತಮ್ಮ ಹೆಂಡತಿಯೊಂದಿಗೆ ಈ ಬಡಾವಣೆಯಲ್ಲಿ ನೆಲೆಸಿರುವ ಮಾದೇಗೌಡರು ಯಾವಾಗಲೂ ಏನಾದರೂ ಕೆಲಸ ಮಾಡುತ್ತಾ ಎಲ್ಲರೊಂದಿಗೆ ಬೆರೆಯುವ ಜಾಯಮಾನದವರು. ಇವರನ್ನು ಈ ಅಭಿವೃದ್ಧಿ ಸಂಘದ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ. ಪ್ರತಿ ತಿಂಗಳು ಎಲ್ಲಾ ಮನೆಯವರಿಂದ ವಂತಿಗೆ ಪಡೆಯುತ್ತಾರೆ. ಬಡಾವಣೆಯ ಸ್ವಚ್ಚತೆ ಕಾಪಾಡುವುದು, ನೀರು ಸರಬರಾಜು ನೋಡಿಕೊಳ್ಳುವುದು, ರಕ್ಷಣೆಗಾಗಿ ಸೆಕ್ಯುರಿಟಿ ಗಾರ್ಡುಗಳನ್ನು ನೇಮಿಸುವುದು ಮುಂತಾದ ಕೆಲಸಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ತಕರಾರಿಲ್ಲದೆ ಎಲ್ಲರೂ ವಂತಿಗೆ ನೀಡುತ್ತಾರೆ.
ಹೊಸದಾಗಿ ಪ್ರಾರಂಭವಾದ ಬಡಾವಣೆಯಾದ್ದರಿಂದ ಬಹುತೇಕರಿಗೆ ಪರಸ್ಪರ ಪರಿಚಯವಿದೆ. ನಿವೇಶನ ಖರೀದಿಸುವಾಗ, ಮನೆ ಕಟ್ಟುವಾಗ ಮತ್ತು ಬಡಾವಣೆಯ ಇತರ ಕೆಲಸಗಳ ಬಗ್ಗೆ ಚರ್ಚಿಸುವಾಗ ಒಬ್ಬರಿಗೊಬ್ಬರು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಒಡನಾಟ ವಿರಳ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲೇ ತಲ್ಲೀನರಾಗಿರುವುದರಿಂದ ಎದುರಿಗೆ ಸಿಕ್ಕಾಗ ಪರಿಚಯದ ನಗೆ ಬೀರುವುದೋ ಅಥವಾ ವಾಹನಗಳಲ್ಲಿ ಹೋಗುವಾಗ ಕೈ ಬೀಸುವುದನ್ನೋ ಬಿಟ್ಟರೆ ಬೇರೆ ಮಾತುಕತೆಗಳು ಅಪರೂಪ. ಪರಸ್ಪರ ಸಂಬಂಧಗಳನ್ನು ಬೆಸೆಯುವುದರ ಮಹತ್ವವನ್ನು ಅರಿತಿರುವ ಹಿರಿಯರು ಅಭಿವೃದ್ಧಿ ಸಂಘದ ಹೆಸರಿನಲ್ಲಿ ಕೆಲವು ಸಭೆ ಸಮಾರಂಭಗಳನ್ನು ಆಗಾಗ್ಗೆ ಆಯೋಜಿಸುತ್ತಾರಾದರೂ ಹತ್ತಿರವಿದ್ದರೂ ದೂರವಿರುವವರನ್ನು ಬೆಸೆಯುವ ಆಸೆ ಅಷ್ಟಾಗಿ ಈಡೇರಿಲ್ಲ.
ಭೌತಿಕವಾಗಿ ಮತ್ತು ಮಾನಸಿಕವಾಗಿ ಮಂಜಾಲ ನಗರದ ಜೀವನದಲ್ಲಿ ತುಂಬಿಕೊಂಡಿರುವ ಕಲ್ಮಶಗಳು ದುಗುಡ ದುಮ್ಮಾನಗಳು ಅರುಣೋದಯ ಬಡಾವಣೆಯಲ್ಲಿ ಸುಲಭಕ್ಕೆ ಕಾಣುವುದಿಲ್ಲವಾದರೂ ಮನೆಯೊಳಗಿನ ಬದುಕಿನಲ್ಲಿ ಪ್ರಶಾಂತತೆಯ ಪ್ರಮಾಣ ಕಡಿಮೆಯೆಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ನಗರದಿಂದ ಕೆಲಸ ಮುಗಿಸಿ ಬರುವ ಅನೇಕ ಮಂದಿ ಬರುವಾಗ ಕಛೇರಿಯ ಸಮಸ್ಯೆಗಳನ್ನು ತಲೆಯಲ್ಲಿ ತುಂಬಿಕೊಂಡು ಮನೆ ಸೇರುವುದೇ ಆಗಿದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ಹೇಳಿದರೆ ಸುಲಭಕ್ಕೆ ಅರ್ಥವಾಗಬಹುದು.
ಬಡಾವಣೆಯ ನಡುಮಧ್ಯದಲ್ಲಿರುವ ಶಾಂತಲಾ ಅಪಾರ್ಟ್ಮೆಂಟಿನ ಮೊದಲ ಮಹಡಿಯಲ್ಲಿರುವ ಮಹೇಶ ಮಂಜಾಲದ ಖ್ಯಾತ ನ್ಯಾಯವಾದಿಗಳಾದ ಹರಿಶಂಕರ್ ಅವರ ಕಛೇರಿಯಲ್ಲಿ ಹಿರಿಯ ಸಹಾಯಕ. ಹೆಂಡತಿ ಶಾಲಿನಿ ಮೆಟ್ರೋ ಕಾನ್ವೆಂಟಿನಲ್ಲಿ ಇಂಗ್ಲಿಶ್ ಶಿಕ್ಷಕಿ. ಮಹೇಶನಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಮರುದಿನ ಎದುರಾಗುವ ಕೇಸುಗಳ ಫೈಲುಗಳನ್ನು ಸಿದ್ಧಗೊಳಿಸುವುದು ಮತ್ತು ಟೈಪು ಮಾಡುವುದರಲ್ಲೇ ಆಗುತ್ತಿತ್ತು. ಎಷ್ಟು ಮಾಡಿದರೂ ಮುಗಿಯದಷ್ಟು ಕೆಲಸ. ನಡುವೆ ಬೇರೆ ಲಾಯರುಗಳಿಂದ ಕಿರಿಕಿರಿ. ಮುಗಿಯದ ಕೆಲಸವನ್ನು ಮನೆಗೂ ತರುತ್ತಿದ್ದ. ತಡರಾತ್ರಿವರೆಗೆ ಟೈಪು ಮಾಡಿ ಮಲಗಿದರೂ ನಿದ್ರೆ ದೂರ. ಹೆಂಡತಿ ಶಾಲಿನಿಯೂ ಚೆನ್ನಾಗಿ ಕೆಲಸ ಮಾಡಿ ಭೇಷ್ ಎನಿಸಿಕೊಂಡು ಕೆಲಸ ಖಾಯಂ ಮಾಡಿಕೊಳ್ಳುವ ಉಮೇದಿನಲ್ಲಿ ಶಾಲೆಯ ಮರುದಿನದ ಕೆಲಸವನ್ನು ಮನೆಗೂ ತಂದು ಶಾಲಾ ಮಕ್ಕಳಿಗಿಂತಲೂ ಹೆಚ್ಚಾಗಿ ಹೋಂವರ್ಕ್ ಮಾಡುತ್ತಿದ್ದಳು. ಈ ಧಾವಂತದಲ್ಲಿ ಸದ್ಯಕ್ಕೆ ಮಕ್ಕಳನ್ನು ಮಾಡಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದರು.
ಮಂಜಾಲದ ಖ್ಯಾತ ಸುಯೋಗ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಜಗನ್ನಾಥ ಬಡಾವಣೆಯ ಕುವೆಂಪು ರಸ್ತೆಯಲ್ಲಿ ಸಣ್ಣ ಮನೆಯೊಂದನ್ನು ನಿರ್ಮಿಸಿಕೊಂಡಿದ್ದ. ಆತನ ಹೆಂಡತಿ ರಾಧಾ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲವಾದ್ದರಿಂದ ಪ್ರತಿದಿನ ರಾತ್ರಿ ಗಂಡ ಮನೆಗೆ ಬರುವುದನ್ನೇ ಕಾಯುತ್ತಿದ್ದಳು. ಆದರೆ ಜಗನ್ನಾಥ ಮನೆಗೆ ಬಂದರೂ ಆಸ್ಪತ್ರೆಯ ಗಡಿಬಿಡಿಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತಿರಲಿಲ್ಲ. ಯಾವಾಗಲೂ ಮೊಬೈಲ್ ಫೋನಿನ ಸಂಭಾಷಣೆಯಲ್ಲೇ ನಿರತನಾಗಿರುತ್ತಿದ್ದ. ಐದನೇ ತರಗತಿಗೆ ಹೋಗುತ್ತಿದ್ದ ಮಗ ಶ್ಯಾಮನನ್ನು ಮಾತನಾಡಿಸಲು ಸಮಯವೇ ಸಿಗುತ್ತಿರಲಿಲ್ಲ. ಇವನ ಮೊಬೈಲಿನ ಅವಾಂತರ ಮುಗಿಯದಂತೆ ಕಂಡು ಮಗ ನಿದ್ರೆಗೆ ಶರಣಾಗುತ್ತಿದ್ದ. ಹೆಂಡತಿ ರಾಧಾಳಿಗೆ ಕಿರಿಕಿರಿಯಾಗಿ ಮನಸ್ಸು ರೇಜಿಗೆಯಾಗಿ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರೂ ನಿದ್ರೆ ಮಾತ್ರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ.
ಸಣ್ಣದಾದ ಸೆಕ್ಯುರಿಟಿ ಕಂಪನಿ ನಡೆಸುತ್ತಿದ್ದ ನಟರಾಜ ನೇತಾಜೀ ರಸ್ತೆಯಲ್ಲಿ ಒಂದು ಮನೆ ಕಟ್ಟಿಕೊಂಡಿದ್ದ. ಅವನ ಹೆಂಡತಿ ಮಾರ್ಗರೇಟ್. ಇಬ್ಬರದೂ ಅಂತರ್ಜಾತಿ ವಿವಾಹ .ಮನೆಯಲ್ಲಿ ಅವರ ಜೊತೆ ನಟರಾಜನ ತಾಯಿಯೂ ಇದ್ದರು. ಮದುವೆಯಾಗಿ ಹತ್ತು ವರ್ಷವಾಗಿದ್ದರೂ ಅವರಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಅವರ ಬಿಡುವಿಲ್ಲದ ಕೆಲಸದ ನಡುವೆ ಅದರ ಬಗ್ಗೆ ಯೋಚನೆ ಮಾಡಲೂ ಅವರಿಗೆ ಸಮಯವಿರಲಿಲ್ಲ. ತನ್ನ ಕೆಲಸವನ್ನು ಸುಲಭ ಮಾಡಿಕೊಳ್ಳುವ ಇರಾದೆಯಲ್ಲಿ ಮಾರ್ಗರೇಟಳನ್ನೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಇತ್ತೀಚೆಗೆ ಸೆಕ್ಯುರಿಟಿ ಗಾರ್ಡುಗಳನ್ನು ನೇಮಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಇವರಿಬ್ಬರೂ ಯಾವಾಗಲೂ ಒತ್ತಡದಲ್ಲೇ ಇರುತ್ತಿದ್ದರು. ಬಹುತೇಕ ಕೆಲಸಗಳನ್ನು ಕಛೇರಿಯಲ್ಲೇ ಮುಗಿಸಿ ಬಂದರೂ ರಾತ್ರಿ ಪಾಳಿಯ ಕೆಲಸದವರಿಂದ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದವು. ಜೊತೆಗೆ ಕಛೇರಿಯ ಇಮೇಲುಗಳನ್ನು ನೋಡುತ್ತಾ ಮಾರ್ಗರೇಟ್ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಳು. ನಟರಾಜನ ಅಮ್ಮ ಸಮಯ ನೋಡಿ ತಾನು ಅಜ್ಜಿಯಾಗುವುದು ಯಾವಾಗ ಎಂದೇನಾದರೂ ಕೇಳಿದರೆ ಉರಿದು ಬಿದ್ದು ಎಗರಾಡುತ್ತಿದ್ದ. ರಾತ್ರಿಯ ಸುಖದ ನಿರಾತಂಕ ನಿದ್ರೆಯಂತೂ ಅವನ ಪಾಲಿಗೆ ದೂರವಾಗಿತ್ತು.
ಮಂಜಾಲ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಛೇರಿ ಅಧೀಕ್ಷಕನಾಗಿರುವ ರಂಗನಾಥಯ್ಯ ಇದೇ ಬಡಾವಣೆಯ ನೃಪತುಂಗ ರಸ್ತೆಯಲ್ಲಿ ಎರಡು ನಿವೇಶನಗಳನ್ನು ಖರೀದಿಸಿ ಮೂಲೆ ನಿವೇಶನವನ್ನು ಮುಂದೆ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಬಹುದೆಂಬ ದೂರಾಲೋಚನೆಯಿಂದ ಖಾಲಿ ಬಿಟ್ಟು ಅದರ ಪಕ್ಕದ ನಿವೇಶನದಲ್ಲಿ ಸಾಧರಣವೆನ್ನುವಂತಹ ಮನೆಯನ್ನು ಕಟ್ಟಿಕೊಂಡಿದ್ದಾನೆ. ಹಾಗೆ ನೋಡಿದರೆ ಅವನಿಗೆ ಸಕತ್ತಾಗಿ ಹರಿದು ಬರುತ್ತಿರುವ ಲಂಚದ ಹಣದಲ್ಲಿ ಮಂಜಾಲ ನಗರದಲ್ಲಿಯೇ ನಿವೇಶನ ಖರೀದಿಸಬಹುದಾಗಿತ್ತು. ಆದರೆ ಬೇರೆಯವರ ಕಣ್ಣು ಬೀಳುತ್ತದೆಂಬ ಮರ್ಜಿಗೆ ಬಿದ್ದು ನಗರದಿಂದ ದೂರವಿರುವ ಈ ಬಡಾವಣೆಯಲ್ಲಿ ನೆಲೆಸಿದ್ದಾನೆ. ಮನೆ ಹೊರಗಿನಿಂದ ನೋಡಲು ಸಾಧಾರಣವಾಗಿ ಕಂಡರೂ ಒಳಗೆ ವೈಭವೋಪಿತವಾಗಿಯೇ ಇದೆ. ಸರ್ಕಾರಿ ಕಛೇರಿಯಾದ ಮಂಜಾಲ ಅಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಸೇವೆಗೆ ಸೇರಿದ ರಂಗನಾಥಯ್ಯ ತಮ್ಮ ಅವಿರತವಾದ ಸೇವೆಯಿಂದ ಚಿನ್ನದ ಮೊಟ್ಟೆಗಳನ್ನೇ ಸವಿಯುತ್ತಾ ಅಧೀಕ್ಷಕ ಹುದ್ದೆಯವರೆಗೂ ಬಡ್ತಿ ಪಡೆದಿದ್ದಾನೆ. ಇವನ ಮೇಲಿನ ಅಧಿಕಾರಿಗಳು ಬೇರೆ ಇಲಾಖೆಯಿಂದ ವರ್ಗಾವಣೆಯಾಗಿ ಬರುವುದರಿಂದ ಯಾರೂ ಖಾಯಂ ಆಗಿ ಇರುವುದಿಲ್ಲ. ಹೀಗೆ ಬರುತ್ತಾರೆ, ಹಾಗೆ ಹೋಗುತ್ತಾರೆ. ಆ ಕಛೇರಿಗೆ ಬಹಳ ವರ್ಷಗಳಿಂದ ರಂಗನಾಥಯ್ಯನೇ ಸರ್ವಸ್ವ.
ಇತ್ತೀಚೆಗೆ ಮಂಜಾಲ ನಗರ ಮತ್ತು ಜಿಲ್ಲೆ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿರುವುದರಿಂದ ಪ್ರಾಧಿಕಾರಕ್ಕೆ ವಿಪರೀತ ಹಣ ಹರಿದು ಬರುತ್ತಿದೆ. ಪ್ರಾಧಿಕಾರಕ್ಕೆ ಬಂದ ಹಣದ ಪ್ರಮಾಣದಲ್ಲೇ ಅಲ್ಲಿನ ಸಿಬ್ಬಂದಿಗೂ ಸಮನಾದ ಪಾಲು ಸಿಗುವುದು ನ್ಯಾಯೋಚಿತವಾಗಿರುವುದರಿಂದ ಪ್ರತಿದಿನ ರಂಗನಾಥಯ್ಯ ಅನುಮೋದಿಸಿದ ಪ್ರಸ್ತಾವನೆಗಳಿಂದ ಕಛೇರಿ ಸಿಬ್ಬಂದಿಗೆ ಹಣದ ಕೊಪ್ಪರಿಗೆಯೇ ಸಿಗುತ್ತಿದೆ. ಅದನ್ನು ಹಂಚಿಕೊಳ್ಳುವುದರಲ್ಲೂ ಯಾವುದೇ ತಕರಾರಿಲ್ಲದಂತೆ ವ್ಯವಸ್ಥಿತವಾಗಿ ಮತ್ತು ನಿಯತ್ತಿನಿಂದ ಪಾಲು ಮಾಡುವುದಕ್ಕೆ ಒಂದು ನಿಷ್ಠಾವಂತ ತಂಡವೇ ಇದೆ. ಅದರಲ್ಲಿ ದೊಡ್ಡ ಪಾಲು ರಂಗನಾಥಯ್ಯನಿಗೇ ಸಿಗುತ್ತಿತ್ತು. ಆದರೂ ಅವನದು ಯಾವಾಗಲೂ ಗಾಬರಿಯ ಪ್ರವೃತ್ತಿ. ತಮ್ಮ ಅಧೀನ ಸಿಬ್ಬಂದಿಗಳ ಅಚಾತುರ್ಯದಿಂದ ಎಲ್ಲಿ ಲೋಕಾಯುಕ್ತಕ್ಕೋ ಅಥವಾ ಮಾಧ್ಯಮದವರ ಕಣ್ಣಿಗೋ ಬಿದ್ದು ಎಡವಟ್ಟಾಗಬಹುದೆಂಬ ಭಯ ಅವನನ್ನು ಸದಾಕಾಲ ಕಾಡುತ್ತಿದೆ. ಈ ಭಯದಿಂದಲೇ ಪಕ್ಕದ ಮೂಲೆ ನಿವೇಶನವನ್ನು ತನ್ನ ಭಾವಮೈದುನನ ಹೆಸರಿನಲ್ಲಿ ಖರೀದಿಸಿದ್ದಾನೆ. ಯಾವಾಗಲೂ ಅಧೀನ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾನೆ. ತನ್ನ ಮೇಲು ಸಂಪಾದನೆಯಲ್ಲಿ ಮೇಲಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ನಿಗದಿತ ಮಾಮೂಲೀ ಪಾಲನ್ನು ನೀಡಬೇಕಾಗಿರುವುದರಿಂದ ಯಾವುದೇ ಅಸಮಾಧಾನಕ್ಕೆ ಎಡೆ ಮಾಡಿಕೊಡದಂತೆ ವ್ಯವಹಾರ ಮಾಡಬೇಕೆಂದು ಹೇಳುತ್ತಲೇ ಇರುತ್ತಾನೆ. ಲಂಚ ಹೊಡೆಯುವುದು ತಪ್ಪಲ್ಲ; ಆದರೆ ಯಾರಿಗೂ ಸಿಕ್ಕಿಹಾಕಿಕೊಳ್ಳದಂತೆ ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಬೇಕೆಂಬುದು ಅವನ ಸಿದ್ಧಾಂತ. ಆದುದರಿಂದ ಮನೆಗೆ ಬಂದರೂ ಸದಾಕಾಲ ಇದೇ ಯೋಚನೆಯಲ್ಲಿ ಇರುತ್ತಾನೆ. ಹೊಡೆದ ಹಣವನ್ನು ಹೇಗೆ ವಿನಿಯೋಗಿಸುವುದು, ಯಾರ ಹೆಸರಲ್ಲಿ ಆಸ್ತಿ ಮಾಡುವುದು, ಯಾವ ಯಾವ ಡೀಲುಗಳಿಂದ ಎಷ್ಟೆಷ್ಟು ಹಣ ಬರಬಹುದು ಎಂಬಿತ್ಯಾದಿ ಯೋಚನೆಗಳಲ್ಲೇ ಮುಳುಗಿರುವುದರಿಂದ ನೆಮ್ಮದಿ ಎಂಬುದೇ ಇಲ್ಲವಾಗಿದೆ. ಅಲ್ಲಿ ಇಲ್ಲಿ ಲಂಚ ತೆಗೆದುಕೊಂಡವರು ಸಿಕ್ಕಿಬಿದ್ದ ಸುದ್ದಿಗಳನ್ನು ಓದಿದಾಗ ದಿಗಿಲುಗೊಳ್ಳುತ್ತಾನೆ. ಹೆಂಡತಿ ಸೌಭಾಗ್ಯಳಿಗೆ ಸಾಕಷ್ಟು ಒಡವೆ ಮತ್ತು ದುಬಾರಿ ಬಟ್ಟೆಗಳನ್ನು ಕೊಡಿಸಿದ್ದರೂ ಗಂಡನ ಸ್ಥಿತಿ ನೋಡಿ ಆಕೆಗೂ ಕಳವಳ. ಇಬ್ಬರಿಗೂ ನಿದ್ರೆಯಿಲ್ಲದೆ ರಾತ್ರಿಗಳನ್ನು ಕಳೆಯುವುದು ಅಭ್ಯಾಸವಾಗಿಬಿಟ್ಟಿದೆ. ಮಗ ಮತ್ತು ಮಗಳಿಬ್ಬರೂ ಹೈಸ್ಕೂಲಿನಲ್ಲಿ ಓದುತ್ತಿದ್ದರೂ ರಂಗನಾಥಯ್ಯ ಅವರ ಕಡೆ ಸರಿಯಾಗಿ ಗಮನ ಹರಿಸದ ಕಾರಣ ಅವರ ವಿದ್ಯಾಭ್ಯಾಸದ ಮಟ್ಟ ಅಷ್ಟಕ್ಕಷ್ಟೆ. ಕೇಳಿದ್ದೆಲ್ಲವನ್ನೂ ಏನೂ ಪ್ರಶ್ನೆ ಮಾಡದೆ ಅಪ್ಪ ಕೊಡಿಸುತ್ತಿರುವಾಗ ಮಕ್ಕಳು ತಾನೆ ಕಷ್ಟಪಟ್ಟು ಓದುವ ಅಗತ್ಯವಾದರೂ ಏನಿದೆ.
ರಾಕೇಶ ಬಹುರಾಷ್ಟಿçÃಯ ವಿಮಾ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ. ಅರುಣೋದಯ ಬಡಾವಣೆ ಪ್ರಾರಂಭವಾದ ವರ್ಷದಲ್ಲೇ ಸಿದ್ಧಾರ್ಥ ರಸ್ತೆಯಲ್ಲಿ ದೊಡ್ಡದಾದ ನಿವೇಶನ ಖರೀದಿಸಿ ಮನೆಯನ್ನು ನಿರ್ಮಿಸಿದ್ದ. ಊರಿನಲ್ಲಿದ್ದ ತನ್ನ ತಂದೆತಾಯಿಯರನ್ನು ಕರೆತಂದು ಜೊತೆಯಲ್ಲಿ ಇರಿಸಿಕೊಂಡಿದ್ದ. ಇಬ್ಬರು ಗಂಡುಮಕ್ಕಳು. ಶಾಲೆಗೆ ಹೋಗುತ್ತಿದ್ದರು. ಹೆಂಡತಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ. ಪದೇಪದೇ ವರ್ಗಾವಣೆ ಆಗುತ್ತಿದ್ದುದರಿಂದ ಜೊತೆಯಲ್ಲಿ ಇರುತ್ತಿದ್ದುದು ಅಪರೂಪ. ಮಕ್ಕಳ ಮತ್ತು ಮನೆಯ ಸಕಲ ಉಭಯಕುಶಲೋಪರಿಯನ್ನು ಅವನ ತಂದೆತಾಯಿಗಳೇ ನಿಭಾಯಿಸುತ್ತಿದ್ದರು. ತನ್ನ ವೃತ್ತಿಯ ಸಂಬಂಧವಾಗಿ ಪ್ರತಿದಿನ ಮೀಟಿಂಗ್ ಮತ್ತು ಪಾರ್ಟಿಗಳು ಇರುತ್ತಿದ್ದವು. ಮನೆಗೆ ಬರುವುದು ತಡವಾಗುತ್ತಿತ್ತು. ಯಾವಾಗಲೋ ಮೊಬೈಲಿಗೆ ಬಂದಿದ್ದ ಹೆಂಡತಿಯ ಮಿಸ್ ಕಾಲಿಗೆ ಕರೆ ಮಾಡಿದರೆ ಆಕೆ ಸ್ವೀಕರಿಸುತ್ತಿದ್ದುದು ಅಪರೂಪ. ನಿದ್ರಿಸುತ್ತಿದ್ದಾಳೋ ಅಥವಾ ಕೋಪವೋ ಒಂದೂ ಇವನಿಗೆ ಅರ್ಥವಾಗುತ್ತಿರಲಿಲ್ಲ. ಇದೇ ಯೋಚನೆಯಲ್ಲಿ ನಿದ್ರಾಹೀನತೆ ರಾಕೇಶನನ್ನು ಆವರಿಸಿತ್ತು. ಯಥೇಚ್ಚವಾಗಿ ಹಣವಿದ್ದರೂ ಅದನ್ನು ಅನುಭವಿಸುವ ಭಾಗ್ಯವೇ ಇಲ್ಲದಂತಾಗಿತ್ತು.
ಮಂಜಾಲ ನಗರದ ಹೊರವಲಯದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಸ್ಥಾನವು ಸಾಕಷ್ಟು ಪ್ರಸಿದ್ಧಿ ಪಡೆಯದೇ ಇದ್ದರೂ ಇಲ್ಲಿನ ದೇವರು ಹರಕೆಯ ವಿಷಯದಲ್ಲಿ ತುಂಬಾ ಬಲಶಾಲಿ ಎಂದೇ ಹೆಸರುವಾಸಿಯಾಗಿತ್ತು. ಈ ದೇವಸ್ಥಾನವು ಅರುಣೋದಯ ಬಡಾವಣೆಯ ರಸ್ತೆಯಲ್ಲೇ ಇತ್ತು. ಇದರ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹರಿದಾಸ ಭಟ್ಟರೂ ಸಹ ಅರುಣೋದಯ ಬಡಾವಣೆಯ ಕೊನೆಯಲ್ಲಿ ಪುಟ್ಟದಾದ ನಿವೇಶನವನ್ನು ಕೊಂಡು ಒಂದು ಸಣ್ಣ ಮನೆಯನ್ನು ನಿರ್ಮಿಸಿಕೊಂಡು ವಾಸವಿದ್ದರು. ಯೋಗಾನರಸಿಂಹ ಸ್ವಾಮಿಗೆ ಅಭಿಷೇಕ ಮಾಡಿಸಿ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಯಾಗುವುದು ಖಂಡಿತ ಎಂಬ ನಂಬಿಕೆ ಜನರಲ್ಲಿ ಹರಡುವುದರಲ್ಲಿ ಹರಿದಾಸ ಭಟ್ಟರ ಪಾತ್ರ ಬಹಳ ಮುಖ್ಯವಾದದ್ದು. ಅವರ ಮಾತಿನ ವೈಖರಿ ಎಂಥವರನ್ನೂ ಆವರಿಸುವಂತಿತ್ತು. ತಮ್ಮ ಕಂಚಿನ ಕಂಠದಿಂದ ಅವರು ಶ್ಲೋಕಗಳನ್ನು ಉದ್ಗರಿಸುತ್ತಿದ್ದ ಪರಿಯಿಂದ ಅರ್ಥವಾಗದೇ ಇದ್ದವರೂ ಸಹ ತಲೆದೂಗುತ್ತಿದ್ದರು.
ದೇವರ ಮೇಲಿದ್ದ ಹೂವನ್ನು ಎಡಗಡೆಗೆ ಅಥವಾ ಬಲಗಡೆಗೆ ತಮಗೆ ಬೇಕಾದಂತೆ ಬೀಳಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದ ಭಟ್ಟರು ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹರಕೆ ಹೊತ್ತ ಭಕ್ತರನ್ನು ತಮ್ಮ ಮಾತಿನಿಂದ ಮೋಡಿಗೊಳಿಸಿ ಅವರು ಯಥೇಚ್ಚವಾಗಿ ಹಣ ನೀಡುವಂತೆ ಮಾಡುತ್ತಿದ್ದರು. ಹಣ ಸಂದಾಯವಾಗದೆ ಯಾವ ಅಭಿಷೇಕವನ್ನೂ ಮಾಡುತ್ತಿರಲಿಲ್ಲ. ಇವರು ಹಣದ ವಿಷಯದಲ್ಲಿ ಎಷ್ಟು ಕಟ್ಟುನಿಟ್ಟೆಂದರೆ ಒಮ್ಮೆ ತಮ್ಮ ಸ್ವಂತ ಮಾವನವರಿಗೂ ಹಣವಿಲ್ಲದೆ ಅಭಿಷೇಕ ಮಾಡಲು ಒಪ್ಪಿರಲಿಲ್ಲ. ತಾವು ಕೂಡಿಟ್ಟ ಹಣದಿಂದ ಭಟ್ಟರು ಮಂಜಾಲ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಬೆಲೆ ಬಾಳುವ ನಿವೇಶನವನ್ನು ಖರೀದಿಸಿದ್ದರು. ಆದರೆ ಆ ನಿವೇಶನದ ಮಾಲೀಕತ್ವ ವಿವಾದಕ್ಕೊಳಗಾಗಿ ನ್ಯಾಯಾಲಯದ ಮೆಟ್ಟಿಲೇರಿ ಅವರ ಕೈಬಿಟ್ಟು ಹೋಗಿತ್ತು. ಮೊದಲೇ ಬಿಗಿ ಸ್ವಭಾವದ ಭಟ್ಟರು ನಿವೇಶನದ ವಿಷಯದಲ್ಲಿ ಮೋಸ ಹೋದ ಮೇಲೆ ಮಾನಸಿಕವಾಗಿ ಆತಂಕದ ಸ್ಥಿತಿಯಲ್ಲಿ ಇರುತ್ತಿದ್ದರು. ಹೇಗೋ ಸ್ವಲ್ಪ ಸಾವರಿಸಿಕೊಂಡು ಅರುಣೋದಯ ಬಡಾವಣೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಕೊನೆಯ ಭಾಗದಲ್ಲಿ ಒಂದು ಪುಟ್ಟದಾದ ನಿವೇಶನವನ್ನು ಖರೀದಿಸಿದ್ದರು. ಸಾಲಸೋಲ ಮಾಡಿ ಸಣ್ಣದಾಗಿ ಮನೆಯನ್ನು ನಿರ್ಮಿಸಿಕೊಂಡು ಮಂಜಾಲದ ಬಾಡಿಗೆ ಮನೆಯಿಂದ ತಮ್ಮ ಸ್ವಂತ ಮನೆಗೆ ಸ್ಥಳಾಂತರವಾಗಿದ್ದರು. ಮನೆಯಲ್ಲಿ ಅವರ ಹೆಂಡತಿ, ಭಟ್ಟರ ತಾಯಿ ಮತ್ತು ಒಬ್ಬಳೇ ಮಗಳು ವಾಸವಿದ್ದರು. ವಿಪರೀತ ಆರ್ಥಿಕ ಒತ್ತಡದಲ್ಲಿದ್ದ ಭಟ್ಟರು ಹೆಚ್ಚಿನ ದುಡಿಮೆಯ ನಿರೀಕ್ಷೆಯಿಂದ ಇತ್ತೀಚೆಗೆ ದೇವಸ್ಥಾನದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಮನೆಗೆ ಬಂದರೂ ಹೆಂಡತಿ ಮಗಳೊಡನೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಯಾವಾಗಲೂ ಸಿಡುಕುತ್ತಿದ್ದರು. ಸರಿಯಾಗಿ ನಿದ್ರೆ ಮಾಡುವುದಂತೂ ದೂರದ ಮಾತಾಗಿತ್ತು. ಇವರ ಸ್ಥಿತಿಯನ್ನು ನೋಡಿ ಇವರ ಹೆಂಡತಿಗೂ ಬೇಸರವಾಗಿತ್ತು. ದೇವಸ್ಥಾನದಲ್ಲೂ ಭಟ್ಟರು ಭಕ್ತಾದಿಗಳ ಜೊತೆ ವಿಪರೀತ ಸಿಡುಕುವ ಸುದ್ದಿಯನ್ನು ಅವರಿವರಿಂದ ಕೇಳಿ ತಿಳಿದಿದ್ದ ಅವರ ಹೆಂಡತಿಗೂ ಚಿಂತೆಯಿಂದ ನೆಮ್ಮದಿಯ ನಿದ್ರೆ ಮಾಡುವುದು ಕಷ್ಟವಾಗಿತ್ತು.
ಈ ಬಡಾವಣೆಯ ಮಧ್ಯಭಾಗದಲ್ಲಿರುವ ನಿವೇದಿತ ರಸ್ತೆಯಲ್ಲಿ ಒಂದು ಜೋಡಿ ಮನೆಯಿತ್ತು. ಕೆಳಗಿನ ಭಾಗದಲ್ಲಿ ಮನೆಯ ಮಾಲೀಕರು ವಾಸವಿದ್ದರು. ಮೇಲಿನ ಭಾಗದಲ್ಲಿ ಮಂಜಾಲ ನಗರದ ಉಗ್ರಾಣ ನಿಗಮದಲ್ಲಿ ಗುಮಾಸ್ತನಾಗಿದ್ದ ಉಮಾಪತಿ ಬಾಡಿಗೆಗೆ ವಾಸವಾಗಿದ್ದ. ಆತನ ನೌಕರಿ ಇನ್ನೂ ಖಾಯಂ ಅಗದೇ ಇರುವುದರಿಂದ ಸಂಬಳ ಕಡಿಮೆ ಬರುತ್ತಿತ್ತು. ಇವನಿದ್ದ ವಿಭಾಗದಲ್ಲಿ ಗಿಂಬಳವೂ ಹೇಳಿಕೊಳ್ಳುವಂತೆ ಇರಲಿಲ್ಲ. ಈ ಬಡಾವಣೆಯಲ್ಲಿ ಮನೆಬಾಡಿಗೆ ಕಡಿಮೆ ಇದ್ದುದರಿಂದ ಹೊಸದಾಗಿ ಮದುವೆಯಾದ ಕೂಡಲೇ ತನ್ನ ಹೆಂಡತಿ ಪ್ರಮೀಳಾಳ ಜೊತೆ ವಾಸ್ತವ್ಯ ಹೂಡಿದ್ದ. ಪ್ರಮೀಳ ಸಹ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿನಿಲಯದಲ್ಲಿ ಕೆಲಸ ಮಾಡುತ್ತಿದ್ದರೂ ತಾತ್ಕಾಲಿಕ ಕೆಲಸವಾದ್ದರಿಂದ ಸಂಬಳ ಕಡಿಮೆ ಬರುತ್ತಿತ್ತು. ಉಮಾಪತಿ ಹೆಸರಿಗೆ ಗುಮಾಸ್ತನಾಗಿದ್ದ. ಆದರೆ ಕಛೇರಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಯಾವುದೋ ಸಂಘಟನೆಯ ಹೆಸರಲ್ಲಿ ಬೇರೆ ಸರ್ಕಾರಿ ನೌಕರರ ಪೀಡನೆ ಮಾಡುತ್ತಾ ಹಣ ಪೀಕುವುದರಲ್ಲೇ ಕಾಲ ಕಳೆಯುತ್ತಿದ್ದ. ಹಣ ಗಳಿಕೆಗಿಂತ ಬೇರೆಯವರು ಇವನ ಪೀಡನೆಯಿಂದ ಪೀಕಲಾಟ ಪಡುವುದನ್ನು ನೋಡಿಯೇ ತೃಪ್ತಿ ಪಡುತ್ತಿದ್ದ.
ಮಾಹಿತಿ ಹಕ್ಕು ಕಾರ್ಯಕರ್ತನೆಂದು ಬಿಂಬಿಸಿಕೊಂಡು ಯಾವಾಗಲೂ ಎನಾದರೊಂದು ಅರ್ಜಿ ಬರೆಯುವುದರಲ್ಲೇ ನಿರತನಾಗಿರುತ್ತಿದ್ದ. ತನ್ನನ್ನು ನಿರ್ಲಕ್ಷ ಮಾಡುವ ಅಧಿಕಾರಿಗಳ ವಿರುದ್ಧ ಅವ್ಯಾಹತವಾಗಿ ಮೂಗರ್ಜಿ ಬರೆಯುವುದು ಅವನಿಗೆ ದಿನನಿತ್ಯದ ಚಟವಾಗಿ ಪರಿಣಮಿಸಿತ್ತು. ಕಛೇರಿ ಕೆಲಸದಲ್ಲಿ ಸರಿಯಾಗಿ ತೊಡಗಿಸಿಕೊಳ್ಳುತ್ತಿಲ್ಲವೆಂದು ಪ್ರಶ್ನಿಸಿದ ಮೇಲಧಿಕಾರಿಗೆ ಉಗ್ರಾಣ ನಿಗಮದಲ್ಲಿ ಅವರು ಮಾಡುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆಯುವುದಾಗಿ ಬೆದರಿಸಿದ್ದ. ಮೊದಲೇ ಉಪ್ಪುಖಾರ ತಿಂದಿದ್ದ ಆ ಮೇಲಧಿಕಾರಿ ಇವನ ಗೊಡವೆಯೇ ಬೇಡವೆಂದು ಸುಮ್ಮನಾಗಿದ್ದರು. ಪ್ರತಿದಿನ ಯಾವುದಾದರೂ ಬಡಪಾಯಿಯನ್ನು ಹಿಡಿದು ತನ್ನ ಪಟಾಲಂರೊಂದಿಗೆ ಪಾನಗೋಷ್ಠಿಗಳನ್ನು ನಡೆಸಿ ಮನೆಗೆ ತಡವಾಗಿ ಬರುತ್ತಿದ್ದ. ಯಾರೂ ಸಿಗದಿದ್ದರೆ ತನ್ನ ಬೂಟಾಟಿಕೆಯ ಪ್ರತಿಷ್ಠೆಗಾಗಿ ಸ್ವತಃ ಜೇಬಿನಿಂದಲೇ ಖರ್ಚು ಮಾಡಬೇಕಿತ್ತು. ಮನೆಗೆ ಬಂದ ಮೇಲೂ ನಾಳೆ ಯಾರ ಮೇಲೆ ಅರ್ಜಿ ಬರೆಯುವುದು, ಯಾರನ್ನು ಟಾರ್ಗೆಟ್ ಮಾಡುವುದು ಎಂದು ಸ್ಕೆಚ್ ಹಾಕುತ್ತಲೇ ಇದ್ದುದರಿಂದ ನಿದ್ರೆ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಉಮಾಪತಿಯ ಪಾನಮತ್ತ ಅವಸ್ಥೆಯನ್ನು ನೋಡಿ ಮೊದಮೊದಲಿಗೆ ಪ್ರಮೀಳಾಗೆ ಕಳವಳವಾಗುತ್ತಿತ್ತು. ಈಗ ಅದೇ ಅಭ್ಯಾಸವಾಗಿ ತನ್ನ ಪಾಡಿಗೆ ತಾನು ಇರುವ ಸ್ಥಿತಿಯನ್ನು ತಲುಪಿದ್ದಾಳೆ. ಮನೆ ಮಾಲೀಕರಿಗೆ ನೀಡುವ ಬಾಡಿಗೆಯೊಂದನ್ನು ಬಿಟ್ಟು ಮನೆ ಖರ್ಚಿಗೆಂದು ಉಮಾಪತಿ ಕಿಲುಬು ಕಾಸನ್ನೂ ನೀಡದಿದ್ದರೂ ಪ್ರಮೀಳಾಳೇ ತನಗೆ ಬರುವ ಅಲ್ಪ ಸಂಬಳದಿಂದಲೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ.
ಯೂನಿಟಿ ಅಪಾರ್ಟ್ಮೆಂಟಿನಲ್ಲಿ ಬಾಡಿಗೆಗೆ ವಾಸವಿರುವ ಸಾಫ್ಟ್ವೇರ್ ಇಂಜಿನಿಯರುಗಳಾದ ನಾಯರ್ ದಂಪತಿಗಳು, ಅಂಬೇಡ್ಕರ್ ರಸ್ತೆಯಲ್ಲಿ ನೆಲೆಸಿರುವ ಮೊಬೈಲ್ ಅಂಗಡಿ ಮಾಲೀಕನಾದ ರವೀಂದ್ರ ಆಚಾರ್ಯ, ಬಡಾವಣೆಯ ಉತ್ತರ ಭಾಗದ ಮರಾಠಾ ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ನಡೆಸುತ್ತಿರುವ ವಿಲಾಸ್ ಕುಲಕರ್ಣಿ ಹೀಗೆ ಬಹುತೇಕರು ಸಂಜೆ ಅಥವಾ ರಾತ್ರಿ ಮನೆಗೆ ಬರುವಾಗ ತಮ್ಮ ವೃತ್ತಿಯ ಸಂಕಷ್ಟಗಳನ್ನು ತಲೆಗೆ ಹಚ್ಚಿಕೊಂಡೇ ವಾಪಸಾಗುತ್ತಿದ್ದುದರಿಂದ ವೈಯಕ್ತಿಕ ಜೀವನದಲ್ಲಿ ನೆಮ್ಮದಿಯನ್ನೇ ಮರೆತಿದ್ದರು. ಕೆಲವರು ಭಾನುವಾರಗಳಂದು ಈ ಕ್ಲೀಷೆಗಳನ್ನು ಮರೆತು ವಿರಮಿಸುತ್ತಿದ್ದರಾದರೂ ಬಹುತೇಕರು ರಜಾ ದಿನಗಳಲ್ಲೂ ಕೂಡ ಉಳಿದ ದಿನಗಳ ಕಸವನ್ನು ತಲೆಯಲ್ಲಿ ತುಂಬಿಸಿಕೊಂಡು ಗಡಿಬಿಡಿ ಮಾಡಿಕೊಳ್ಳುತ್ತಿದ್ದರು. ರಾತ್ರಿಗಳಲ್ಲಿ ಕಣ್ಣಿಗೆ ನಿದ್ರೆಯನ್ನೇ ಸರಿಯಾಗಿ ತುಂಬಿಸಿಕೊಳ್ಳದೆ ಚಡಪಡಿಕೆಯ ಜೀವನವನ್ನು ನಡೆಸುವುದು ಅರುಣೋದಯ ಬಡಾವಣೆಯ ಬಹುತೇಕ ಜನರ ಜೀವನಕ್ರಮವಾಗಿತ್ತು. ಸಂತೃಪ್ತ ನಿದ್ರೆಯೇ ಇಲ್ಲವೆಂದ ಮೇಲೆ ಕನಸುಗಳು ಇವರ ಹತ್ತಿರಕ್ಕೂ ಸುಳಿಯದಂತೆ ಆಯಿತು. ಅಲ್ಲಿನ ಬಹುತೇಕ ಮಧ್ಯವಯಸ್ಕ ಜನ ನಿದ್ರಾರಹಿತರಾಗಿ ಕನಸುಗಳೇ ಇಲ್ಲದಂತೆ ಯಾಂತ್ರಿಕವಾಗಿ ಜೀವನ ನಡೆಸುತ್ತಿದ್ದರು.
ಒಂದು ದಿನ ಮುಸ್ಸಂಜೆಯ ಹೊತ್ತಲ್ಲಿ ಒಬ್ಬ ಹುಡುಗ ಈ ಬಡಾವಣೆಯಲ್ಲಿ ಪ್ರತ್ಯಕ್ಷನಾದ. ಹತ್ತು ವರ್ಷ ವಯಸ್ಸಿನ ಆಜೂಬಾಜಿನಲ್ಲಿರುವಂತೆ ಕಾಣುತ್ತಿದ್ದ. ನೋಡುವುದಕ್ಕೆ ಬಡ ಹುಡುಗನಂತೆ ಕಾಣುತ್ತಿದ್ದರೂ ನೀಟಾಗಿ ಕ್ರಾಪ್ ತೆಗೆದು ತಲೆ ಬಾಚಿದ್ದ. ಉದ್ದನೆಯ ಚಡ್ಡಿ ಹಾಕಿ ಕಾಲಿಗೆ ಹವಾಯ್ ಚಪ್ಪಲಿ ಧರಿಸಿದ್ದ. ಎದ್ದು ಕಾಣುವಂತೆ ಬಣ್ಣಬಣ್ಣದ ಚೌಕಗಳಿರುವ ನಿಲುವಂಗಿ ಹಾಕಿದ್ದರಿಂದ ದೂರದಿಂದಲೂ ಗೋಚರಿಸುವಂತಿದ್ದ. ಸರ್ಕಸ್ ಕಂಪನಿಗಳ ವಿದೂಷಕರ ಬಳಿ ಇರುವಂತಹ ಬಣ್ಣಬಣ್ಣದ ಪಟ್ಟಿಗಳನ್ನು ಸುತ್ತಿರುವ ಸಪೂರವಾದ ಕೋಲೊಂದು ಅವನ ಕೈಯಲ್ಲಿ ಇತ್ತು. ಬಣ್ಣದ ಕೋಲನ್ನು ಕೈಯಲ್ಲಿ ಸುರುಳಿಯಾಕಾರದಲ್ಲಿ ಗರರನೆ ತಿರುಗಿಸುತ್ತಾ “ಯಾರಿಗಾದರೂ ಕನಸುಗಳು ಬೇಕೇ, ಕನಸು” ಎಂದು ಜೋರು ದನಿಯಲ್ಲಿ ಕೂಗುತ್ತಾ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಡೆದಾಡಿದ. ಕೆಲವು ಕಡೆ ನಿಂತುಕೊಂಡು ಎಲ್ಲಾ ದಿಕ್ಕುಗಳಿಗೂ ಕೇಳುವಂತೆ ಇದೇ ಮಾತನ್ನು ಪದೇ ಪದೇ ಹೇಳಿದ. ಸಂಜೆಯ ಹೊತ್ತು ಅನೇಕ ದಿನಬಳಕೆಯ ವಸ್ತುಗಳನ್ನು ಮಾರುವವರು, ಕೆಲವು ಕಂಪನಿಗಳ ಜಾಹಿರಾತು ಹುಡುಗರು ಈ ರೀತಿ ಆ ಬಡಾವಣೆಯ ಬೀದಿಗಳಲ್ಲಿ ಗಟ್ಟಿ ದನಿಯಲ್ಲಿ ಕೂಗುತ್ತಾ ಓಡಾಡುವುದು ಸಾಮಾನ್ಯ ಸಂಗತಿಯಾದ್ದರಿಂದ ಆಗ ತಾನೇ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರು ಇವನನ್ನು ಉದಾಸೀನ ಮಾಡಿದರು. ಸೆಕ್ಯೂರಿಟಿಯವರಿಗೂ ಆ ಹುಡುಗ ನಿರುಪದ್ರವಿಯಂತೆ ಕಂಡಿದ್ದರಿಂದ ಅವನು ಏನನ್ನು ಮಾರುತ್ತಿದ್ದಾನೆಂದು ಗಮನಿಸದೆ ಸುಮ್ಮನಿದ್ದರು.
ಸಂಜೆಯ ವಾಕಿಂಗಿನಲ್ಲಿದ್ದ ಕೆಲವು ವಯೋವೃದ್ಧರು ಇವನೆಡೆಗೆ ಕುತೂಹಲದಿಂದ ನೋಡಿದರು. ಕೈಯಲ್ಲಿ ಏನೂ ಇಲ್ಲದೆ ಆತ ಏನು ವ್ಯಾಪಾರ ಮಾಡುತ್ತಾನೆಂದು ತಿಳಿದ ಕೆಲವರು ಅವನನ್ನು ಪ್ರಶ್ನೆ ಮಾಡಿದರು. ತನ್ನ ಬಳಿ ಕನಸುಗಳಿವೆ, ತಾನು ಕನಸುಗಳನ್ನು ಮಾರುವ ಹುಡುಗನೆಂದು ಅವನು ಹೇಳಿದಾಗ ಅವರಿಗೇನೂ ಅರ್ಥವಾಗಲಿಲ್ಲ. ಅವನಿಗೇನಾದರೂ ಹುಚ್ಚು ಹಿಡಿದಿದೆಯೇ ಎಂದು ಕೆಲವರು ಎಣಿಸಿದರು. ಮಾತಿಗೆಳೆದರೆ ಪಟಪಟನೆ ಮುತ್ತುಗಳಂತೆ ಮಾತುಗಳನ್ನು ಉದುರಿಸುತ್ತಾ ನಿದ್ರೆ ಬಾರದವರಿಗೆ ನಿದ್ರೆಯನ್ನೂ, ಕನಸುಗಳು ಬೀಳದವರಿಗೆ ಸುಂದರ ಕನಸುಗಳು ಬೀಳುವಂತೆ ಮಾಡುವುದಾಗಿಯೂ ಅರಳು ಉರಿದಂತೆ ಹೇಳಿದ. ಇದೊಂದು ವಿಚಿತ್ರ ಸಂಗತಿಯಾದ್ದರಿಂದ ಅವನನ್ನು ಬಡಾವಣೆಯ ಅಭಿವೃದ್ಧಿ ಸಂಘದ ಕಛೇರಿಗೆ ಕರೆದುಕೊಂಡು ಹೋದರು. ಅಧ್ಯಕ್ಷರಾದ ಗಣೇಶ್ ರಾವ್ ಮತ್ತು ಕಾರ್ಯದರ್ಶಿಗಳಾದ ಮೇಜರ್ ಮಾದೇಗೌಡರು ಇನ್ನೂ ಕೆಲವು ಪದಾಧಿಕಾರಿಗಳೊಂದಿಗೆ ಕಛೇರಿಯಲ್ಲಿದ್ದರು. ಆ ಹುಡುಗನ ಕಥೆಯನ್ನು ಕೇಳಿ ಅವರಿಗೂ ವಿಚಿತ್ರವೆನಿಸಿತು. ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಪಟಪಟನೆ ಉತ್ತರಿಸುತ್ತಿದ್ದ. ಅವನ ವೈಯಕ್ತಿಕ ವಿಷಯಗಳನ್ನು ಮಾತ್ರ ವಿವರವಾಗಿ ಹೇಳಲಿಲ್ಲ. ತಾನೊಬ್ಬ ಅನಾಥನೆಂದೂ ಊರೂರಲ್ಲಿ ಸುತ್ತುವ ದೊಂಬರಾಟದವರೊಡನೆ ಕೆಲಸ ಮಾಡಿದ್ದರಿಂದ ಕನಸು ಬರಿಸುವ ಕಲೆಯನ್ನು ಕಲಿತಿರುವುದಾಗಿ ಹೇಳಿದ. ಅವನನ್ನು ತಪಾಸಣೆ ಮಾಡಿದರು. ಅವನ ಬಳಿ ಇದ್ದ ಬಣ್ಣದ ಕೋಲೊಂದನ್ನು ಬಿಟ್ಟು ಬೇರೇನೂ ಇರಲಿಲ್ಲ. ಮಾತೇ ಅವನ ಬಂಡವಾಳದಂತೆ ಇತ್ತು. ತನಗೆ ಬೇರಾವುದೇ ಕೆಲಸ ಗೊತ್ತಿಲ್ಲದಿರುವುದರಿಂದ ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿರುವುದಾಗಿ ಅರುಹಿದ. ಹುಡುಗನ ಮುದ್ದಿನ ಮಾತುಗಳಿಂದ ಬೆರಗಾಗಿ ಅವನ ದೈನೇಸೀ ಸ್ಥಿತಿಯನ್ನು ಕಂಡು ಮರುಗಿ ಅಲ್ಲಿದ್ದ ವಯೋವೃದ್ಧರು ಅವನ ಮುಖದಲ್ಲಿದ್ದ ಹಸಿವನ್ನು ಅರಿತು ತಿಂಡಿ ತಿನ್ನಿಸಿದರು.
ಅಲ್ಲಿದ್ದ ಜನರೆಲ್ಲಾ ಹಿರಿವಯಸ್ಸಿನವರೇ ಆಗಿದ್ದರಿಂದ ಅವರಿಗೆ ನಿದ್ರಾಹೀನತೆಯಾಗಲೀ ಅಥವಾ ಕನಸು ಬೀಳದೆ ಇರುವುದಾಗಲೀ ಸಮಸ್ಯೆಯೇ ಆಗಿರಲಿಲ್ಲ. ಆದುದರಿಂದ ಅವರಾರಿಗೂ ಹುಡುಗ ಹೇಳುತ್ತಿದ್ದ ಕನಸುಗಳು ಬೇಕಾಗಿರಲಿಲ್ಲ. ಅದನ್ನೇ ಆ ಹುಡುಗನಿಗೆ ಅರುಹಿ, ನಂತರ ಬಡಾವಣೆಯ ಮುಖ್ಯದ್ವಾರದ ಬಳಿ ಮಾತ್ರ ನಿಂತುಕೊಂಡು ತನ್ನ ವ್ಯವಹಾರವನ್ನು ಮಾಡುವಂತೆ ತಿಳಿಸಿ ಕಳಿಸಿದರು. ಆದರೂ ಅಲ್ಲಿದ್ದ ಕೆಲವರು ಇವನ ಮೇಲೆ ಒಂದು ಕಣ್ಣಿಟ್ಟಿರುವುದು ಸೂಕ್ತವೆಂದು ಭಾವಿಸಿದರು.
ತನ್ನ ವೃತ್ತಿಯ ಸಂಬಂಧವಾಗಿ ಪ್ರತಿದಿನ ಮೀಟಿಂಗ್ ಮತ್ತು ಪಾರ್ಟಿಗಳು ಇರುತ್ತಿದ್ದವು. ಮನೆಗೆ ಬರುವುದು ತಡವಾಗುತ್ತಿತ್ತು. ಯಾವಾಗಲೋ ಮೊಬೈಲಿಗೆ ಬಂದಿದ್ದ ಹೆಂಡತಿಯ ಮಿಸ್ ಕಾಲಿಗೆ ಕರೆ ಮಾಡಿದರೆ ಆಕೆ ಸ್ವೀಕರಿಸುತ್ತಿದ್ದುದು ಅಪರೂಪ. ನಿದ್ರಿಸುತ್ತಿದ್ದಾಳೋ ಅಥವಾ ಕೋಪವೋ ಒಂದೂ ಇವನಿಗೆ ಅರ್ಥವಾಗುತ್ತಿರಲಿಲ್ಲ. ಇದೇ ಯೋಚನೆಯಲ್ಲಿ ನಿದ್ರಾಹೀನತೆ ರಾಕೇಶನನ್ನು ಆವರಿಸಿತ್ತು. ಯಥೇಚ್ಚವಾಗಿ ಹಣವಿದ್ದರೂ ಅದನ್ನು ಅನುಭವಿಸುವ ಭಾಗ್ಯವೇ ಇಲ್ಲದಂತಾಗಿತ್ತು.
ಈ ಸುದ್ದಿ ನಿಧಾನಕ್ಕೆ ಬಡಾವಣೆಯ ಮನೆಗಳಿಗೆ ಹರಡಿತು. ಹುಡುಗನ ಬಗ್ಗೆ ತಿಳಿದಿದ್ದ ವಯೋವೃದ್ಧರು ರಾತ್ರಿಯ ಊಟದ ಸಮಯದಲ್ಲಿ ಈ ವಿಷಯವನ್ನು ತಮ್ಮ ಹೆಂಡತಿಯರಿಗೆ ಮತ್ತು ಮಕ್ಕಳಿಗೆ ಹೇಳಿದರು. ಹೀಗೇ ಎಲ್ಲರಿಗೂ ಈ ವಿಷಯ ಹರಡುವಂತೆ ಆಯಿತು. ಮೊದಲಿಗೆ ಇದೊಂದು ತಮಾಷೆಯ ವಿಷಯವೆಂದೇ ಅನೇಕರು ತಿಳಿದರು. ಕೆಲವರಿಗೆ ಈ ವಿಷಯದ ಬಗ್ಗೆ ಕುತೂಹಲವಾದರೂ ವಿಚಿತ್ರವೆಂದು ತಿಳಿದು ಸುಮ್ಮನಾದರು.
ಮರುದಿನವೂ ಆ ಹುಡುಗ ಬಂದು ಬಡಾವಣೆಯ ಮುಖ್ಯದ್ವಾರದ ರಸ್ತೆಯಲ್ಲಿ ನಿಂತು ಕನಸುಗಳನ್ನು ಮಾರುವುದಾಗಿ ಜೋರು ದನಿಯಲ್ಲಿ ಕೂಗಿ ಕೂಗಿ ಹೇಳಿದ. ನಾಲ್ಕಾರು ಜನ ಇವನ ಕಡೆ ನೋಡಿದಾಗ ಸಂತೆಗಳಲ್ಲಿ ವ್ಯಾಪಾರ ಮಾಡುವ ಮಂದಿ ತಾವು ಮಾರಾಟ ಮಾಡುತ್ತಿರುವ ವಸ್ತುಗಳನ್ನು ವಿಧವಿಧವಾಗಿ ಗುಣಗಾನ ಮಾಡುವಂತೆ ಕನಸುಗಳ ಬಗ್ಗೆ ಪಟಪಟನೆ ಹೇಳತೊಡಗಿದ. ಉದ್ದದ ಕನಸು, ರಾತ್ರಿಯ ಕನಸು, ಬೆಳಗಿನ ಜಾವದ ಕನಸು, ಕಿರುನಿದ್ರೆಯ ಸಣ್ಣ ಕನಸು, ಬಣ್ಣದ ಕನಸು, ಸ್ವರ್ಗದ ಕನಸು, ಮಳೆಗಾಲದ ಕನಸು, ಕೊರೆಯುವ ಚಳಿಯ ಕನಸು, ಹಿಮಗಿರಿಯ ಕನಸು, ಯುದ್ಧದ ಕನಸು, ಸುಗ್ಗಿಯ ಕನಸು, ಸುರಾಪಾನದ ಕನಸು, ಮಕ್ಕಳ ಕನಸು, ಗದ್ದುಗೆಯ ಕನಸು, ನಾಗಾಲೋಟದ ಕನಸು, ಕಾಡಿನ ಕನಸು ಮುಂತಾದ ಅನೇಕ ತರಹದ ಕನಸುಗಳು ತನ್ನ ಬಳಿ ಇವೆಯೆಂದು ಪಟಪಟನೆ ಮೋಡಿ ಮಾಡುವಂತೆ ಮಾತನಾಡುತ್ತಿದ್ದ. ಇದು ಹೀಗೇ ಮೂರ‍್ನಾಲ್ಕು ದಿನ ಪ್ರತಿನಿತ್ಯ ಪುನರಾವರ್ತನೆಯಾದಾಗ ಕೆಲವರು ಇವನ ಕಡೆ ಗಮನ ಹರಿಸಲು ಪ್ರಾರಂಭಿಸಿದರು.
ಸುಯೋಗ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜಗನ್ನಾಥನ ಮಗ ಶ್ಯಾಮ ಇಂಥದೇ ಒಂದು ದಿನ ಸಂಜೆ ಶಾಲೆಯಿಂದ ಬರುವಾಗ ಈ ಬಣ್ಣದ ಹುಡುಗನನ್ನು ನೋಡಿದ. ಅವನ ಬಣ್ಣಬಣ್ಣದ ಚೌಕಗಳಿರುವ ಅಂಗಿ ಮತ್ತು ಸುರುಳಿ ಸುತ್ತುತ್ತಿದ್ದ ಬಣ್ಣದ ಕೋಲು ನೋಡಿ ಆಕರ್ಷಣೆಗೊಳಗಾದ. ಆ ಹುಡುಗನನ್ನೇ ನೋಡುತ್ತಾ ಅವನನ್ನು ಮಾತನಾಡಿಸಲು ಪ್ರಯತ್ನಿಸಿದ. ಆ ಹುಡುಗ ಶ್ಯಾಮ ಕೇಳಿದ ಇತರ ಪ್ರಶ್ನೆಗಳಿಗೆ ಉತ್ತರಿಸದೆ ಕನಸುಗಳ ಬಗ್ಗೆ ಮಾತ್ರ ಅರಳು ಹುರಿದಂತೆ ಹೇಳಿದ್ದನ್ನೇ ಹೇಳಿದ. ಶ್ಯಾಮ ಒಂದು ಸಲ ಬಣ್ಣದ ಕೋಲನ್ನು ಮುಟ್ಟಿ ನೋಡಿದ. ವೇಳೆ ಮೀರುತ್ತಿದ್ದುದರಿಂದ ಮನೆಯ ಕಡೆ ಓಡಿದ.
ಅಂದು ರಾತ್ರಿ ಅಪ್ಪನಿಗೆ ಹೇಳಲೇಬೇಕೆಂದು ಶಪಥ ಮಾಡಿದಂತಿದ್ದ ಶ್ಯಾಮ, ಅಪ್ಪನ ಬಿಡುವು ಸಮಯ ನೋಡಿ ಕನಸು ಮಾರುವ ಹುಡುಗನ ಬಗ್ಗೆ ತನಗೆ ತಿಳಿದಿರುವುದೆಲ್ಲವನ್ನೂ ಹೇಳಿದ. ತನಗೂ ಆ ಹುಡುಗನ ಬಳಿ ಇರುವಂತಹ ಬಣ್ಣದ ಕೋಲು ಬೇಕೆಂಬ ಬೇಡಿಕೆಯನ್ನು ಮುಂದಿಟ್ಟ. ಶ್ಯಾಮ ಮಲಗಿದ ಮೇಲೆ ಹೆಂಡತಿ ರಾಧಾಳೂ ಸಹ ಅವರಿವರಿಂದ ಕೇಳಿ ತಿಳಿದಿದ್ದ ಕನಸು ಮಾರುವ ಹುಡುಗನ ವಿಷಯವನ್ನು ಗಂಡನಿಗೆ ಅರುಹಿದಳು. ಜಗನ್ನಾಥನಿಗೆ ಇದು ವಿಚಿತ್ರವೆನಿಸಿತು. ನಿದ್ರೆ ಬರದೆ ರಾತ್ರಿಯೆಲ್ಲಾ ಯೋಚನೆ ಮಾಡಿದ. ತನಗೆ ಕನಸುಗಳೇ ಬೀಳುತ್ತಿಲ್ಲವೆಂಬ ವಿಷಯ ಅವನಿಗೆ ನಿಧಾನಕ್ಕೆ ಅರಿವಾಯಿತು. ಕನಸುಗಳು ಬೀಳುವಂತಾಗಿ ಸರಿಯಾಗಿ ನಿದ್ರೆ ಮಾಡುವಂತಾದರೆ ತನ್ನ ಮನಸ್ಸಿನ ದುಗುಡ ಕಡಿಮೆ ಆಗಬಹುದೇನೋ ಎಂದು ಎಣಿಕೆ ಮಾಡಿದ.
ಆಸ್ಪತ್ರೆಯಲ್ಲಿ ಏನೋ ಸಬೂಬು ಹೇಳಿ ಆ ದಿನ ಸಂಜೆ ಬೇಗ ಬಡಾವಣೆಗೆ ಬಂದ. ಇವನು ಬಂದ ಸಮಯಕ್ಕೆ ಕನಸು ಮಾರುವ ಹುಡುಗ ಬಡಾವಣೆಯ ಮುಖ್ಯದ್ವಾರದ ಬಳಿಯೇ ಇದ್ದ. ಜಗನ್ನಾಥ ತನ್ನ ಬೈಕನ್ನು ನಿಲ್ಲಿಸಿ ಆ ಹುಡುಗನ ಬಳಿ ಸಾಗಿ ವಿಚಾರಿಸಿದಾಗ ಯಥಾಪ್ರಕಾರ ಆ ಹುಡುಗ ಕನಸುಗಳ ಬಗ್ಗೆ ಅರಳು ಹುರಿದಂತೆ ಮಾತನಾಡಿದ. ಜಗನ್ನಾಥ ಒಂದು ರೀತಿ ಮೋಡಿಗೊಳಗಾದವನಂತಾದ. ತಾನು ಯಾಕೆ ಒಂದು ಪ್ರಯತ್ನ ಮಾಡಬಾರದು ಎಂದೆಣಿಸಿ ಕನಸು ಬರುವಂತೆ ಮಾಡಲು ಎಷ್ಟು ಹಣ ಕೊಡಬೇಕೆಂದು ಕೇಳಿದ. ಹೋಟೆಲ್ಲಿನಲ್ಲಿ ತಿಂಡಿ ನೀಡುವ ಸಪ್ಲೆöÊಯರ್ ಹೇಳುವಂತೆ ಹುಡುಗ ಕನಸುಗಳ ಉದ್ದದ ದರಪಟ್ಟಿಯನ್ನೇ ನೀಡಿದ. ರಾತ್ರಿಯ ದೀರ್ಘ ಕನಸಿಗೆ ಐವತ್ತು ರೂಪಾಯಿ, ಸಂಜೆಯ ಅಥವಾ ಬೆಳಗಿನ ಜಾವದ ಸಣ್ಣ ಕನಸಿಗೆ ಮೂವತ್ತು ರೂಪಾಯಿ, ಮಳೆಯ ಕನಸಿಗೆ ಇಪ್ಪತ್ತು ರೂಪಾಯಿ, ಕಿರುನಿದ್ರೆಯ ಪುಟ್ಟ ಕನಸಿಗೆ ಹತ್ತು ರೂಪಾಯಿ ಹೀಗೆ ಒಂದೊಂದು ಕನಸಿಗೆ ಒಂದೊಂದು ದರ. ಆದರೆ ಯಾವುದೂ ಐವತ್ತು ರೂಪಾಯಿಗಿಂತ ಹೆಚ್ಚಿಲ್ಲ. ನಿಮಗೆ ಬೀಳುವ ಕನಸಿನಿಂದ ಖುಷಿಯಾದರೆ ಮುಂದಿನ ಸಲ ಹೆಚ್ಚು ಹಣ ನೀಡಿ ಎಂಬ ಒಗ್ಗರಣೆಯ ಮಾತು ಬೇರೆ. ಒಂದೇ ಮನೆಯಲ್ಲಿ ಇಬ್ಬರು ಮೂವರು ಕನಸುಗಳನ್ನು ಕೊಂಡರೆ ರಿಯಾಯಿತಿ ನೀಡುವುದಾಗಿ ಆಮಿಷದ ಕೊಸರು ಸೇರಿಸಿದ. ಕನಸುಗಳಲ್ಲಿ ಅಷ್ಟೊಂದು ತರಾವರೀ ಕನಸುಗಳಿರುತ್ತವೆಂಬುದು ಜಗನ್ನಾಥನಿಗೇ ಗೊತ್ತಿರಲಿಲ್ಲ. ಜಗನ್ನಾಥ ಏನೋ ನಿರ್ಧರಿಸಿದವನಂತೆ ಆ ಹುಡುಗನಿಗೆ ರಾತ್ರಿ ಎಂಟು ಗಂಟೆಗೆ ತನ್ನ ಮನೆಗೆ ಬರಲು ಹೇಳಿ ಹೋದ.
ಜಗನ್ನಾಥ ಕನಸು ಮಾರುವ ಹುಡುಗನ ಜೊತೆ ಮಾತನಾಡುವುದನ್ನು ಕೆಲವರು ನೋಡಿದರು. ಒಂದಿಬ್ಬರು ಹಾಗೇ ನಿಂತು ಇವರಿಬ್ಬರ ಸಂಭಾಷಣೆಯನ್ನೂ ಕೇಳಿಸಿಕೊಂಡರು. ಅವನ ದರಪಟ್ಟಿ ಮತ್ತು ಅವನು ಆ ರಾತ್ರಿ ಜಗನ್ನಾಥನ ಮನೆಗೆ ಹೋಗುವ ವಿಷಯ ನಿಧಾನಕ್ಕೆ ಒಬ್ಬರಿಂದ ಒಬ್ಬರಿಗೆ ಹರಡಿತು. ಮರುದಿನ ಜಗನ್ನಾಥನ ಪ್ರತಿಕ್ರಿಯೆಯನ್ನು ತಿಳಿಯಬೇಕೆಂಬ ಹಂಬಲ ಕೆಲವರ ಮನಸ್ಸಿನಲ್ಲಿ ಮೂಡಿತು.
ಜಗನ್ನಾಥ ಮೊದಲೇ ನಿರ್ಧರಿಸಿದವನಂತೆ ಬೇಗ ಊಟ ಮಾಡಿದ. ಕನಸು ಮಾರುವ ಹುಡುಗ ರಾತ್ರಿ ಎಂಟು ಗಂಟೆಗೆ ಸರಿಯಾಗಿ ಅವನ ಮನೆಗೆ ಬಂದ. ಎಲ್ಲರಿಗಿಂತ ಹೆಚ್ಚಾಗಿ ಅವನ ಮಗ ಶ್ಯಾಮನಿಗೆ ಹೆಚ್ಚು ಕುತೂಹಲ. ಜಗನ್ನಾಥನನ್ನು ಮುಂದಿನ ವರಾಂಡದಲ್ಲಿ ಕಣ್ಣು ಮುಚ್ಚಿ ಕುರ್ಚಿಯ ಮೇಲೆ ಕೂರಿಸಿದ. ಮಂತ್ರದಂಡದಂತೆ ತನ್ನ ಬಣ್ಣದ ಕೋಲನ್ನು ಜಗನ್ನಾಥನ ತಲೆಯ ಸುತ್ತಾ ಆಡಿಸುತ್ತಾ, ಮಧ್ಯೆ ಅದರ ತುದಿಯಿಂದ ಜಗನ್ನಾಥನ ತಲೆಯನ್ನು ನೇವರಿಸುವಂತೆ ಮುಟ್ಟುತ್ತಾ, ಒಂದೇ ಸಮನೆ ಮೋಡಿ ಮಾಡಿಸುವವನಂತೆ ಮಾತನಾಡಹತ್ತಿದ. ಅವನ ಮಾತೇ ಇಡೀ ಪ್ರಕ್ರಿಯೆಯ ಮುಖ್ಯ ಬಂಡವಾಳದಂತೆ ತೋರಿತು. ಅವನು ಮುಗಿಯಿತೆಂದು ಹೇಳಿದ ಮೇಲೆ ರಾಧಾ ಐವತ್ತು ರೂಪಾಯಿಯ ನೋಟೊಂದನ್ನು ತಂದು ಹುಡುಗನಿಗೆ ನೀಡಿದಳು. ಆ ಹುಡುಗ ಅದನ್ನು ಪ್ರಸಾದವೆಂಬಂತೆ ಕಣ್ಣಿಗೆ ಮುಟ್ಟಿಕೊಂಡು ಜೇಬಿನಲ್ಲಿ ಇಟ್ಟುಕೊಂಡ. ಹೋಗುವಾಗ ಜಗನ್ನಾಥನಿಗೆ ಮಲಗುವ ಕೋಣೆಗೆ ಹೋಗುವಂತೆ ಹೇಳಿ ಹೋದ. ಶ್ಯಾಮ ಸೋಜಿಗವನ್ನು ನೋಡಿದಂತೆ ನೋಡುತ್ತಾ ಅವಕಾಶ ಸಿಕ್ಕಿದಾಗ ಅವನ ಬಣ್ಣದ ಕೋಲನ್ನು ಸ್ಪರ್ಶಿಸಿ ಕುತೂಹಲ ತಣಿಸಿಕೊಳ್ಳುತ್ತಿದ್ದ.
ಹುಡುಗ ಹೋದ ಮೇಲೆ ಜಗನ್ನಾಥನಿಗೆ ಜೋಂಪು ಹತ್ತಿದಂತೆ ಆಯಿತು. ಎದ್ದು ಮಲಗುವ ಕೋಣೆಗೆ ಹೋದ. ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಗಾಢವಾದ ನಿದ್ರೆ. ಅವನು ಸರಿಯಾಗಿ ನಿದ್ರೆ ಮಾಡಿದರೆ ಸಾಕೆಂಬ ಭಾವದಲ್ಲಿದ್ದ ರಾಧಾ ಸುಮ್ಮನೆ ನೋಡುತ್ತಾ ಗಂಡನಿಗೆ ತೊಂದರೆಯಾಗದಿರಲೆಂಬ ಕಾರಣದಿಂದ ಶ್ಯಾಮನನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿದಳು. ಅವನ ಮೊಬೈಲನ್ನು ಕೂಡ ಬಂದ್ ಮಾಡಿದಳು. ರಾತ್ರಿಯಿಡೀ ಜಗನ್ನಾಥನಿಗೆ ಕನಸುಗಳ ಮಹಾಪೂರ. ಯಾವತ್ತೂ ಇಷ್ಟು ದೀರ್ಘವಾಗಿ ಮಲಗಿದವನೇ ಅಲ್ಲ. ಸುಂದರ ಕನಸುಗಳು ಹೇಗೆ ಬೀಳುತ್ತಿದ್ದವೆಂದರೆ ಸ್ವತಃ ತಾನೇ ಅಭಿನಯಿಸಿರುವ ಬಣ್ಣದ ಚಲನಚಿತ್ರದಂತೆ ಭಾಸವಾಗುತ್ತಿತ್ತು. ಇಡೀ ರಾತ್ರಿ ಸಂತೃಪ್ತಿಯಾಗಿ ಕನಸುತ್ತಾ ನಿದ್ರೆ ಮಾಡಿದ. ತನ್ನ ಗಂಡ ಈ ಪರಿಯ ನಿರಾಳ ನಿದ್ರೆ ಮಾಡುವುದನ್ನು ನೋಡಿ ರಾಧಾಳಿಗೂ ಒಂದು ರೀತಿಯ ಸಮಾಧಾನ.
ಬೆಳಿಗ್ಗೆ ದೀರ್ಘ ನಿದ್ರೆಯನ್ನು ಮುಗಿಸಿ ಕಣ್ಣು ಬಿಟ್ಟ ಜಗನ್ನಾಥನಿಗೆ ಹೊಸ ಅನುಭವವೇ ಆದಂತಿತ್ತು. ಮನಸ್ಸು ಪರಿಶುಭ್ರವಾಗಿ ಹಗುರವಾದಂತೆ ಭಾಸವಾಯ್ತು. ಹೆಂಡತಿ ಮಗನೊಂದಿಗೆ ನಗುನಗುತ್ತಾ ತಾಳ್ಮೆಯಿಂದ ಮಾತನಾಡುತ್ತಾ ಕಾಲ ಕಳೆದ. ಕನಸು ಮಾರುವ ಹುಡುಗನ ಕರಾಮತ್ತಿನಿಂದ ತನ್ನ ಮನಸ್ಸಿನ ಸಂದಿಗ್ಧತೆಗಳೆಲ್ಲಾ ಪರಿಹಾರವಾದಂತಾಗಿ ಪುಳಕಿತನಾದ. ಇದೇ ಖುಷಿಯಲ್ಲಿ ಮತ್ತೊಂದೆರಡು ದಿನ ಇದೇ ಸುಖದ ಅನುಭವವನ್ನು ಪಡೆಯಲು ನಿರ್ಧರಿಸಿದ.
ರಾತ್ರಿ ಹುಡುಗನಿಗೆ ಸ್ವಲ್ಪ ತಡವಾಗಿ ಅಂದರೆ ತಾನು ಆಸ್ಪತ್ರೆಯ ಕರ್ತವ್ಯದಿಂದ ಬರುವ ಸಮಯಕ್ಕೆ ಬರಲು ತಿಳಿಸುವಂತೆ ಶ್ಯಾಮನಿಗೆ ಹೇಳಿದ. ಹುಡುಗನ ಮಂತ್ರದಂಡದಂತಹ ಬಣ್ಣದ ಕೋಲಿನಿಂದ ರೋಮಾಂಚನಗೊಂಡಿದ್ದ ಶ್ಯಾಮ ಸಂಜೆ ಶಾಲೆಯಿಂದ ಮರಳುವಾಗ ಚಾಚೂ ತಪ್ಪದೆ ಆ ಕೆಲಸವನ್ನು ಮಾಡಿದ. ಹುಡುಗನನ್ನು ಅಧಿಕೃತವಾಗಿ ಭೇಟಿಯಾಗಲು ಅವಕಾಶ ಕಲ್ಪಿಸಿದ ಅಪ್ಪನಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದ.
ಸತತವಾಗಿ ಮೂರು ದಿನ ಜಗನ್ನಾಥ ಕನಸು ಮಾರುವ ಹುಡುಗನ ಪ್ರಭಾವದಿಂದ ನೆಮ್ಮದಿಯಾಗಿ ನಿದ್ರೆ ಮಾಡಿದ. ಬೇಕಾದಂತೆ ಕನಸುಗಳನ್ನು ಕಂಡ. ತನ್ನನ್ನು ಕಾಡುತ್ತಿದ್ದ ಕ್ಲೀಷೆಗಳೆಲ್ಲಾ ಕಳೆದು ಹೋದವೇನೋ ಅಂತನಿಸಿ ಆಸ್ಪತ್ರೆಯ ಕೆಲಸದಲ್ಲೂ ಹೊಸ ಹುಮ್ಮಸ್ಸಿನಿಂದ ತೊಡಗಿಸಿಕೊಂಡ. ತಾನು ಹುಡುಗನಿಗೆ ನೀಡುತ್ತಿರುವ ಐವತ್ತು ರೂಪಾಯಿ ಹೆಚ್ಚು ಅಂತೇನೂ ಅನಿಸಲಿಲ್ಲ. ಮೂರು ದಿನಗಳಾದ ಮೇಲೆ ಆ ಹುಡುಗನೇ ಸಲಹೆ ನೀಡಿದಂತೆ ಆರೇಳು ದಿನಗಳಿಗೊಮ್ಮೆ ಹುಡುಗನಿಂದ ಕನಸು ಕೊಳ್ಳುವ ನಿರ್ಧಾರಕ್ಕೆ ಬಂದ. ಆಶ್ಚರ್ಯವೆಂಬಂತೆ ಮೂರು ದಿನಗಳ ನಂತರ ಹುಡುಗನಿಂದ ಕನಸು ಕೊಳ್ಳದ ದಿನವೂ ನೆಮ್ಮದಿಯ ನಿದ್ರೆ ಮಾಡಿದ. ಭರಪೂರವಲ್ಲದಿದ್ದರೂ ಹಾಯೆನಿಸುವಷ್ಟರ ಮಟ್ಟಿಗೆ ಕನಸುಗಳನ್ನು ಕಂಡ.
ಈ ಮೂರುನಾಲ್ಕು ದಿನಗಳಲ್ಲಿ ರಾಧೆಯ ದೆಸೆಯಿಂದಾಗಿ ಕನಸು ಮಾರುವ ಹುಡುಗನಿಂದ ಕನಸುಗಳನ್ನು ಕೊಂಡು ಜಗನ್ನಾಥನಿಗೆ ನಿದ್ರೆ ಬರುವಂತಾಗಿ ಸುಂದರ ಕನಸುಗಳು ಬೀಳುವಂತಾಗಿ ತಮ್ಮ ಸಂಸಾರದ ಬಹುಪಾಲು ಸಮಸ್ಯೆಗಳು ಪರಿಹಾರವಾದ ವಿಷಯ ಬಡಾವಣೆಯ ಸುಮಾರು ಜನರಿಗೆ ತಲುಪಿತು. ಈಗಾಗಲೇ ಹುಡುಗನ ಕನಸಿನ ದರಪಟ್ಟಿ ತಿಳಿದಿದ್ದ ಜನ ಜಗನ್ನಾಥನ ಕುಟುಂಬದ ಕಥೆಯನ್ನು ಕೇಳಿ ಮತ್ತಷ್ಟು ಕುತೂಹಲಿಗಳಾದರು. ನಿದ್ರಾಹೀನರಾಗಿ ಕನಸುಗಳೇ ಬೀಳದೆ ಬಳಲುತ್ತಿದ್ದ ಹಲವಾರು ಜನ ತಾವೂ ಹುಡುಗನಿಂದ ಕನಸುಗಳನ್ನು ಕೊಳ್ಳಬೇಕೆಂಬ ದೃಢ ನಿರ್ಧಾರವನ್ನು ಮಾಡಿದರು.
ಇದ್ದಕ್ಕಿದ್ದಂತೆ ಕನಸು ಮಾರುವ ಹುಡುಗನಿಗೆ ಬೇಡಿಕೆ ಹೆಚ್ಚಾಯಿತು. ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಅವನನ್ನು ಕರೆಯತೊಡಗಿದರು. ಹೆಚ್ಚು ಜನರು ರಾತ್ರಿಯ ದೀರ್ಘ ಕನಸುಗಳಿಗೇ ಮೊರೆ ಹೋಗುತ್ತಿದ್ದರು. ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವ ಕೆಲವರು ಬೆಳಿಗ್ಗೆ ತಿಂಡಿ ತಿಂದ ಮೇಲೆ ಹುಡುಗನಿಂದ ಕನಸುಗಳನ್ನು ಕೊಂಡು ನಿದ್ರೆಗೆ ಜಾರುತ್ತಿದ್ದರು. ಐವತ್ತು ರೂಪಾಯಿ ಜಾಸ್ತಿಯಾಯಿತೆಂದು ಭಾವಿಸಿದವರು ಸಂಜೆಯ ಕಿರು ನಿದ್ರೆಯ ಪುಟ್ಟ ಕನಸುಗಳನ್ನು ಕೊಳ್ಳುತ್ತಿದ್ದರು. ಕೆಲವರು ಕೇವಲ ಮೂವತ್ತು ರೂಪಾಯಿಗಳನ್ನು ನೀಡಿ ಬೆಳಗಿನ ಜಾವದ ಕನಸುಗಳನ್ನು ಕೊಂಡುಕೊಳ್ಳುತ್ತಿದ್ದರು. ಅಂತವರಿಗೆ ರಾತ್ರಿಯೇ ನಿದ್ರೆ ಬಂದರೂ ಬೆಳಗಿನ ಜಾವದವರೆಗೂ ಕನಸುಗಳು ಬೀಳುತ್ತಿರಲಿಲ್ಲ. ಇದನ್ನೆಲ್ಲಾ ಆ ಹುಡುಗ ಹೇಗೆ ನಿಭಾಯಿಸುತ್ತಿದ್ದ ಅನ್ನುವುದು ಅವರ ಊಹೆಗೆ ನಿಲುಕದ ವಿಷಯವಾಗಿತ್ತು.
ಆ ಬಡಾವಣೆಯ ಜನರಲ್ಲೂ ಕೆಲವು ಚೌಕಾಸೀ ಗಿರಾಕಿಗಳಿದ್ದರು. ತಮಗೆ ಕನಸುಗಳು ಚೆನ್ನಾಗಿ ಬಿದ್ದರೂ ಹುಡುಗನಿಗೆ ಖುಷಿಯಿಂದ ಹೆಚ್ಚು ಹಣ ನೀಡುವ ಬದಲು ತಮಗೆ ಕನಸುಗಳೇ ಸರಿಯಾಗಿ ಬೀಳಲಿಲ್ಲವೆಂದೋ ಅಥವಾ ಕೆಟ್ಟ ಕನಸುಗಳು ಬಿದ್ದವೆಂದೋ ಸಬೂಬುಗಳನ್ನು ಹೇಳಿ ಚೌಕಾಸಿ ಮಾಡಿ ಹುಡುಗನಿಗೆ ಕಡಿಮೆ ಹಣವನ್ನು ನೀಡುತ್ತಿದ್ದರು. ಹುಡುಗ ಮಾತ್ರ ಯಾವುದಕ್ಕೂ ಮರುಮಾತಾಡದೆ ಜನ ಕೊಟ್ಟಷ್ಟು ಹಣವನ್ನು ಪಡೆದು ತನ್ನ ಕೆಲಸವನ್ನು ನಗುಮುಖದಿಂದ ನಿರಂತರವಾಗಿ ಮಾಡುತ್ತಿದ್ದ.
ಅಂತೂ ಇಂತೂ ಬಡಾವಣೆಯ ಜನ ನೆಮ್ಮದಿಯಿಂದ ರಾತ್ರಿ ನಿದ್ರೆ ಮಾಡಿದರು. ತಮಗೆ ಇಷ್ಟವಾದ ಸುಂದರ ಕನಸುಗಳನ್ನು ಕಂಡು ಸುಖಪಟ್ಟರು. ಹೆಂಡತಿ ಮಕ್ಕಳು ಮತ್ತು ತಂದೆ ತಾಯಿಗಳ ಜೊತೆ ಸೌಹಾರ್ದತೆಯಿಂದ ಮಾತನಾಡುತ್ತಾ ಸಿಡುಕಿನ ಸ್ವಭಾವವನ್ನೇ ಮರೆತರು. ಜಗನ್ನಾಥನಂತೆ ಅನೇಕ ನಿದ್ರಾಹೀನರು ಕನಸು ಮಾರುವ ಹುಡುಗನಿಗೆ ಖಾಯಂ ಗಿರಾಕಿಗಳಾದರು.
ಶಾಂತಲಾ ಅಪಾರ್ಟ್ಮೆಂಟಿನ ಮಹೇಶ ಆಫೀಸಿನಲ್ಲಿ ಎಷ್ಟೇ ಕೆಲಸವಿದ್ದರೂ ಅಲ್ಲೇ ಮುಗಿಸಿ ಬರುತ್ತಿದ್ದ. ಮನೆಗೆ ಬರುವಾಗ ಕಛೇರಿಯ ಎಲ್ಲಾ ಗಡಿಬಿಡಿಗಳನ್ನೂ ತಲೆಯಿಂದ ಖಾಲಿ ಮಾಡಿಕೊಂಡು ಬರುತ್ತಿದ್ದ. ಅವನ ಹೆಂಡತಿ ಶಾಲಿನಿಯೂ ಮನೆಗೆ ಹೋಂವರ್ಕ್ ತರುವುದನ್ನು ನಿಲ್ಲಿಸಿದಳು. ಶಾಲೆಯಲ್ಲಿ ಮಾಡುವ ನಿಷ್ಠಾವಂತ ವೃತ್ತಿಪರತೆಯಿಂದಲೇ ಕೆಲಸ ಖಾಯಂ ಆದರೆ ಸಾಕು ಎಂಬ ನಿರ್ಧಾರಕ್ಕೆ ಬಂದಳು. ಇಬ್ಬರೂ ಈಗ ನೆಮ್ಮದಿಯ ನಿದ್ರೆ ಮಾಡುತ್ತಾ ಸದ್ಯದಲ್ಲೇ ಮಗು ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ.
ಸೆಕ್ಯುರಿಟಿ ಕಂಪನಿ ನಡೆಸುತ್ತಿದ್ದ ನಟರಾಜ ಈಗ ಹೆಂಡತಿ ಮಾರ್ಗರೇಟಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುವುದರಿಂದ ಮುಕ್ತಿ ನೀಡಿದ್ದಾನೆ. ಸುಂದರ ಕನಸುಗಳ ಪ್ರಭಾವದಿಂದಾಗಿ ಇನ್ನೊಂದು ವರ್ಷದೊಳಗೆ ತನ್ನ ಅಮ್ಮನಿಗೆ ಅಜ್ಜಿಯಾಗುವ ಭರವಸೆ ನೀಡಿದ್ದಾನೆ.
ರಂಗನಾಥಯ್ಯ ಈಗ ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ. ಕನಸು ಮಾರುವ ಹುಡುಗನ ಬಳಿ ಎಲ್ಲಾ ರೀತಿಯ ಕನಸುಗಳನ್ನೂ ಕೊಂಡುಕೊಂಡಿದ್ದಾನೆ. ಪ್ರತಿ ನಿತ್ಯ ಮನೆಗೆ ಬೇಗ ಬಂದು ಹುಡುಗನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಾನೆ. ಭಾನುವಾರವೂ ಕೂಡ ದೀರ್ಘ ಕನಸುಗಳನ್ನು ಕೊಂಡು ದಿನವಿಡೀ ಮಲಗಿ ಸುಂದರ ಕನಸುಗಳನ್ನು ಸುಖಿಸುತ್ತಾ ಮಲಗುತ್ತಾನೆ. ಮಕ್ಕಳ ಕಡೆ ಗಮನ ಹರಿಸಿ ಅವರ ವಿದ್ಯಾಭ್ಯಾಸವನ್ನೂ ವಿಚಾರಿಸುತ್ತಿರುವುದರಿಂದ ಇಬ್ಬರೂ ಓದಿನಲ್ಲಿ ಪ್ರಗತಿ ಕಾಣುತ್ತಿದ್ದಾರೆ. ತನ್ನ ಗಂಡ ಇಷ್ಟು ಸಮಚಿತ್ತದಿಂದ ಇರುವುದನ್ನು ನೋಡಿ ಅವರ ಹೆಂಡತಿ ಸೌಭಾಗ್ಯಮ್ಮನವರಿಗೂ ಕಳವಳ ಕಡಿಮೆಯಾಗಿ ನೆಮ್ಮದಿಯಿಂದ ಇದ್ದಾರೆ. ಕಛೇರಿಯಲ್ಲೂ ರಂಗನಾಥಯ್ಯ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾನೆ. ಎಲ್ಲಾ ಡೀಲುಗಳನ್ನೂ ಮತ್ತು ಲಂಚದ ಹಣದ ಹಂಚಿಕೆಯ ಉಸ್ತುವಾರಿಯನ್ನೂ ಮತ್ತೊಬ್ಬ ಹಿರಿಯ ಸಿಬ್ಬಂದಿಯ ಸುಪರ್ದಿಗೆ ಬಿಟ್ಟಿದ್ದಾನೆ. ಇವನÀ ನಿರ್ಲಿಪ್ತತೆಯನ್ನು ನೋಡಿ ಕಛೇರಿಯವರಿಗೇ ಆಶ್ಚರ್ಯ. ಹಾಗಂತ ರಂಗನಾಥಯ್ಯನಿಗೆ ಬರುತ್ತಿರುವ ಹಣದ ಪ್ರಮಾಣವೇನೂ ನಿಂತಿಲ್ಲ; ಸ್ವಲ್ಪ ಕಡಿಮೆಯಾಗಿದೆ ಅಷ್ಟೆ. ಕನಸು ಮಾರುವ ಹುಡುಗನ ದೆಸೆಯಿಂದ ರಂಗನಾಥಯ್ಯನ ಕುಟುಂದಲ್ಲಿ ನೆಮ್ಮದಿ ನೆಲೆಸಿದಂತೆ ಆಗಿದೆ.
ವಿಮಾ ಕಂಪನಿಯ ರಾಕೇಶ ಈಗ ರಾತ್ರಿಯ ಪಾರ್ಟಿಗಳನ್ನು ಕಡಿಮೆ ಮಾಡಿದ್ದಾನೆ. ಸಖತ್ತಾದ ನಿದ್ರೆ ಮತ್ತು ಕನಸು ಕಾಣುವ ಆಸೆಯಿಂದ ಮನೆಗೆ ಬೇಗ ಬರುತ್ತಾನೆ. ಅಪ್ಪ ಅಮ್ಮ ಮತ್ತು ಮಕ್ಕಳೊಂದಿಗೆ ಕಾಲ ಕಳೆಯುತ್ತಾನೆ. ಹೆಂಡತಿಯೊಂದಿಗೆ ಫೋನಿನಲ್ಲಿ ಲಲ್ಲೆ ಹೊಡೆಯುತ್ತಾನೆ. ನಂತರ ಕನಸು ಮಾರುವ ಹುಡುಗನಿಗೆ ಶರಣಾಗಿ ನಿದ್ರೆಗೆ ಜಾರುತ್ತಾನೆ. ಸುಂದರ ಕನಸುಗಳು ಅವನ ಮನಸ್ಸಿನ ಪರದೆಯ ಮೇಲೆ ಹರಿದು ಹೋಗಿ ಚಿತ್ತಾರ ಮೂಡಿಸುತ್ತವೆ. ಅತೀವ ಖುಷಿಯಿಂದ ಪ್ರತಿಬಾರಿಯೂ ಹುಡುಗನಿಗೆ ಅವನು ಕೇಳಿದ್ದಕ್ಕಿಂತ ದುಪ್ಪಟ್ಟು ಹಣ ನೀಡುತ್ತಾನೆ.
ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರಾದ ಹರಿದಾಸ ಭಟ್ಟರು ಈಗ ಸ್ವಲ್ಪ ನಿರಾತಂಕವಾಗಿದ್ದಾರೆ. ಕನಸಿನ ಹುಡುಗನ ಪ್ರಭಾವದಿಂದ ಶಾಂತಚಿತ್ತತೆಯನ್ನು ಹೊಂದಿದ್ದಾರೆ. ತಮಗೆ ಋಣವಿದ್ದದ್ದು ಮಾತ್ರ ತಮಗೆ ದಕ್ಕುತ್ತದೆ ಎಂಬ ನಂಬಿಕೆಗೆ ಶರಣಾಗಿದ್ದಾರೆ. ಭಕ್ತಾದಿಗಳಿಗೆ ಅನವಶ್ಯಕವಾಗಿ ಮೋಡಿ ಮಾಡಿ ಸುಳ್ಳು ತಟವಟ ಹೇಳುವ ಕಲೆಯನ್ನು ಕಡಿಮೆ ಮಾಡಿದ್ದಾರೆ. ಬೆಳಿಗ್ಗೆ ಹೊತ್ತು ಮಾತ್ರ ಯೋಗಾನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಾರೆ. ಸಂಜೆಯ ಹೊತ್ತು ಬಡಾವಣೆಯ ಅಭಿವೃದ್ಧಿ ಸಂಘದವರು ನಿರ್ಮಿಸಿರುವ ಗಣಪತಿ ದೇವಸ್ಥಾನದಲ್ಲಿ ಉಚಿತವಾಗಿ ಸೇವೆಯನ್ನು ನೀಡುತ್ತಿದ್ದಾರೆ. ಗಣಪತಿ ಭಕ್ತರಿಗೆ ಹುಂಡಿಗೇ ದುಡ್ಡು ಹಾಕಲು ಹೇಳುವುದರಿಂದ ಬಡಾವಣೆಯ ಅಭಿವೃದ್ಧಿ ಸಂಘದವರಿಗೆ ಒಂದು ಹೆಚ್ಚಿನ ಆದಾಯದ ಮೂಲ ಹುಟ್ಟಿಕೊಂಡಂತಾಗಿ ಸಂಘದ ಹಿರಿಯರು ಭಟ್ಟರನ್ನು ಅತ್ಯಂತ ಗೌರವಪೂರ್ವಕವಾಗಿ ಕಾಣುತ್ತಿದ್ದಾರೆ. ಭಟ್ಟರು ತಮ್ಮ ಸಿಡುಕುತನವನ್ನು ಬಿಟ್ಟು ಶಾಂತಸ್ವರೂಪಕ್ಕೆ ಬದಲಾಗಿರುವುದರಿಂದ ಅವರ ಮನೆಯವರೂ ಕೂಡ ನೆಮ್ಮದಿಯಿಂದ ಇರುವಂತೆ ಆಗಿದೆ.
ಕನಸಿನ ಹುಡುಗನ ದೆಸೆಯಿಂದ ಉಮಾಪತಿಯ ಜೀವನಶೈಲಿಯೇ ಬದಲಾದಂತೆ ಆಗಿದೆ. ಪ್ರತಿನಿತ್ಯ ಸುಖದ ನಿದ್ರೆ ಮಾಡಿ ಕನಸುಗಳನ್ನು ಕಾಣುವ ಆಸೆಯಿಂದ ತನ್ನ ಅಡ್ಡಕಸುಬುಗಳನ್ನು ಬಿಟ್ಟು ಬೇಗ ಮನೆಗೆ ಬರುತ್ತಾನೆ. ಇವನ ಪಾನಗೋಷ್ಠಿಗಳು ಕಡಿಮೆಯಾಗಿರುವುದರಿಂದ ಇವನ ಜೊತೆಗಾರರೂ ಇವನ ಸಹವಾಸ ಬಿಟ್ಟಿದ್ದಾರೆ. ಅಪರೂಪಕ್ಕೊಮ್ಮೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುತ್ತಾನಾದರೂ ಮೂಗರ್ಜಿಗಳ ಸೃಷ್ಟಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾನೆ. ಇವನ ಬದಲಾದ ವರ್ತನೆಯಿಂದ ಇವನ ಮೇಲಧಿಕಾರಿಗೆ ಮತ್ತು ಸಹೋದ್ಯೋಗಿಗಳಿಗೆ ಆಶ್ಚರ್ಯವೋ ಆಶ್ಚರ್ಯ. ಎಲ್ಲರಿಗಿಂತ ಖುಷಿಯಾದದ್ದು ಪ್ರಮೀಳಾಳಿಗೆ. ತನ್ನ ಗಂಡನ ಚಟುವಟಿಕೆಗಳನ್ನು ನೋಡಿ ಒಂದು ರೀತಿಯ ನಿರ್ಭಾವುಕ ಸ್ಥಿತಿಯನ್ನು ತಲುಪಿದ್ದ ಪ್ರಮೀಳಾಗೆ ತನ್ನ ಬಾಳಿನಲ್ಲಿ ಹೊಸ ಕನಸುಗಳು ಚಿಗುರುವಂತಾಗಿ ಇದಕ್ಕೆ ಕಾರಣಕರ್ತನಾದ ಕನಸು ಮಾರುವ ಹುಡುಗನಿಗೆ ಮನಸಾರೆ ವಂದಿಸುತ್ತಾಳೆ.
ಸಾಫ್ಟ್ವೇರ್ ಎಂಜಿನಿಯರುಗಳಾದ ನಾಯರ್ ದಂಪತಿಗಳು, ಮೊಬೈಲ್ ಅಂಗಡಿಯ ರವೀಂದ್ರ ಆಚಾರ್ಯ, ಖಾಸಗಿ ಫೈನಾನ್ಸಿನ ವಿಲಾಸ್ ಕುಲಕರ್ಣಿ ಮುಂತಾದವರ ಕಥೆಯೂ ಇದಕ್ಕೆ ಹೊರತಾಗಿಲ್ಲ. ಇಡೀ ಬಡಾವಣೆಯ ಜನ ನೆಮ್ಮದಿಯಿಂದ ಜೀವನವನ್ನು ಸುಖಿಸುತ್ತಿದ್ದಾರೆ. ಮಧ್ಯ ವಯಸ್ಕ ಜನರ ಜೊತೆ ವಾಸ ಮಾಡುತ್ತಿದ್ದ ಕೆಲವು ವಯೋವೃದ್ಧರು ತಮ್ಮ ಮಕ್ಕಳು ಈ ರೀತಿ ಬದಲಾವಣೆಯಾದ ಪರಿಯನ್ನು ನೋಡಿ ಸಂತಸಗೊಂಡರು. ಮೊದಮೊದಲು ಕನಸು ಮಾರುವ ಹುಡುಗನನ್ನು ಅನುಮಾನದಿಂದ ನೋಡಿದ ಕೆಲವರು ಪಶ್ಚಾತ್ತಾಪ ಪಟ್ಟುಕೊಂಡರು. ಆ ಹುಡುಗನನ್ನು ತಮ್ಮ ಮನೆಯವರಲ್ಲೇ ಒಬ್ಬನೇನೋ ಎನ್ನುವಂತೆ ನಡೆಸಿಕೊಂಡರು.
ಕನಸುಗಳ ಪ್ರಭಾವದಿಂದ ನೆಮ್ಮದಿ ನೆಲೆಸಿ ಒಬ್ಬರನ್ನೊಬ್ಬರು ಮಾತನಾಡಿಸುತ್ತಾ ಹೆಚ್ಚು ಹೆಚ್ಚು ಹತ್ತಿರವಾದರು. ಇಷ್ಟು ದಿನ ಒಂದೇ ಬಡಾವಣೆಯಲ್ಲಿ ಇದ್ದರೂ ಅಪರಿಚಿತರಂತೆ ಬದುಕುತ್ತಿದ್ದವರು ಎಷ್ಟೋ ವರ್ಷಗಳಿಂದ ಪರಿಚಿತರೇನೋ ಎಂಬಂತೆ ವರ್ತನೆ ಮಾಡಿದರು. ಆಗಾಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಬಡಾವಣೆಯ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಿ ಬಹುತೇಕ ವಿಫಲರಾಗಿದ್ದ ಬಡಾವಣೆಯ ಅಭಿವೃದ್ಧಿ ಸಂಘದ ಹಿರೀತಲೆಗಳು ಕನಸು ಮಾರುವ ಹುಡುಗನನ್ನು ಅಭಿಮಾನದಿಂದ ನೋಡುವಂತೆ ಆಯಿತು. ತಾವು ಸಾಧಿಸಲು ಸಾದ್ಯವಾಗದ್ದನ್ನು ಒಬ್ಬ ಯಕಃಶ್ಚಿತ್ ಹುಡುಗನೊಬ್ಬನ ದೆಸೆಯಿಂದ ಸಾಧ್ಯವಾದದ್ದು ಅಚ್ಚರಿಯಾಗಿ ತಮ್ಮ ಧ್ಯೇಯ ಈಡೇರಿದ್ದಕ್ಕೆ ಸಮಾಧಾನ ಪಟ್ಟುಕೊಂಡರು.
ಕನಸು ಮಾರುವ ಹುಡುಗನಿಗೆ ಅರುಣೋದಯ ಬಡಾವಣೆಯಲ್ಲಿ ಬೇಡಿಕೆ ವಿಪರೀತವಾಗಿ ಹೆಚ್ಚಾಯ್ತು. ಅವನಿಗೆ ಬೇರೆಬೇರೆಯವರಿಗೆ ಸಮಯ ಹೊಂದಿಸುವುದೇ ಕಷ್ಟವಾಗತೊಡಗಿತು. ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಅವಿಶ್ರಾಂತವಾಗಿ ಕನಸುಗಳನ್ನು ಮಾರುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ. ಬಡಾವಣೆಯ ಒಂದು ಮನೆಯಿಂದ ಇನ್ನೊಂದು ಮನೆಗೆ ಓಡಾಡುತ್ತಾ ತನ್ನ ಬಣ್ಣದ ಕೋಲನ್ನು ಮಂತ್ರದಂಡದಂತೆ ಸುತ್ತುತ್ತಾ ಅರಳು ಹುರಿದಂತೆ ಮಾತನಾಡುತ್ತಾ ಸಮ್ಮೋಹನ ಮಾಡುವಂತೆ ನಿದ್ರೆ ಭರಿಸುವುದು ಮತ್ತು ಕನಸುಗಳು ಬೀಳುವಂತೆ ಮಾಡುವುದರಲ್ಲಿ ಸಂಪೂರ್ಣವಾಗಿ ಮುಳುಗಿಹೋದ. ಎಷ್ಟೇ ಒತ್ತಡವಿದ್ದರೂ ತನ್ನ ನಗುಮುಖದ ವರ್ತನೆಯಲ್ಲಿ ಮಾತ್ರ ಯಾವ ಬದಲಾವಣೆಯಿಲ್ಲದೆ ಮುಗ್ಧತೆ ತುಂಬಿದ ಹರ್ಷದಿಂದ ಇರುತ್ತಿದ್ದ.
ಇಷ್ಟೆಲ್ಲಾ ಹತ್ತಿರದವನಾಗಿದ್ದರೂ ಅವನ ವೈಯಕ್ತಿಕ ವಿವರಗಳು ನಿಗೂಢವಾಗೇ ಉಳಿದವು. ರಾತ್ರಿಯ ವೇಳೆ ತನ್ನ ಕನಸು ಮಾರುವ ಕೆಲಸ ಮುಗಿದ ಮೇಲೆ ಎಲ್ಲಿಗೆ ಹೋಗುತ್ತಾನೆ, ಎಲ್ಲಿ ಮಲಗುತ್ತಾನೆ, ಬೆಳಿಗ್ಗೆ ಹೇಗೆ ಬರುತ್ತಾನೆ ಎಂಬಿತ್ಯಾದಿ ವಿವರಗಳು ಸರಿಯಾಗಿ ಯಾರಿಗೂ ತಿಳಿಯಲಿಲ್ಲ. ಬಡಾವಣೆಯ ಜನರಿಗೆ ಅವನ ನಿಜವಾದ ಹೆಸರೂ ಗೊತ್ತಾಗಲಿಲ್ಲ. ಅವನು ಏನೋ ಹೇಳಿದರೂ ಅದು ಅರ್ಥವಾಗಲಿಲ್ಲ. ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಅವನನ್ನು ಕರೆಯುತ್ತಿದ್ದರು. ಬಣ್ಣದ ಹುಡುಗ, ಕನಸಿನ ಹುಡುಗ, ಮರಿ, ಪುಟಾಣಿ, ಪುಟ್ಟ ಮುಂತಾದ ಹಲವಾರು ಹೆಸರಿನಿಂದ ಅವನನ್ನು ಕರೆದರೂ ಅವನು ಎಲ್ಲಾ ಹೆಸರುಗಳಿಗೂ ನಗುಮುಖದಿಂದ ಪ್ರತಿಕ್ರಿಯಿಸುತ್ತಿದ್ದ. ಒಂದೇ ತೆರನಾದ ಬಣ್ಣದ ಚೌಕುಳಿಗಳುಳ್ಳ ಅಂಗಿಯನ್ನು ಹಾಕಿಕೊಳ್ಳುತ್ತಿದ್ದರಿಂದ ಅದೇ ಅಂಗಿಯನ್ನು ಒಗೆದು ಮತ್ತೆ ಹಾಕಿಕೊಳ್ಳುತ್ತಾನಾ ಅಥವಾ ಅದೇ ತರಹದ ಎರಡು ಮೂರು ಅಂಗಿಗಳು ಅವನ ಬಳಿ ಇವೆಯೇ ಎಂಬುದು ಅನುಮಾನವಾಗಿಯೇ ಉಳಿಯಿತು. ಯಾವುದಾದರೂ ವೈಯಕ್ತಿಕ ವಿಷಯವನ್ನು ಕೇಳಿದರೆ ಹಾರಿಕೆಯ ಉತ್ತರವನ್ನು ನೀಡುತ್ತಲೋ ಅಥವಾ ನಗು ಮುಖದಿಂದ ತನ್ನ ಕರ್ತವ್ಯದಲ್ಲಿ ಮುಳುಗಿಯೋ ಸುಮ್ಮನಾಗುತ್ತಿದ್ದ. ಸಖತ್ತಾಗಿ ನಿದ್ರೆ ಮಾಡಿ ಉತ್ತಮ ಕನಸುಗಳನ್ನು ಕಾಣುವ ಧಾವಂತದಲ್ಲಿ ಇರುತ್ತಿದ್ದ ಜನ ಇವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.
ದುಡ್ಡು ಬಿಟ್ಟು ಬೇರೇನನ್ನೂ ಅವನು ಸ್ವೀಕರಿಸುತ್ತಿರಲಿಲ್ಲ. ತುಂಬಾ ಬಲವಂತ ಮಾಡಿದರೆ ಸ್ವಲ್ಪ ತಿಂಡಿ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದ. ಹಳೆಯ ಚಪ್ಪಲಿ, ವಾಚು, ಬೆಲ್ಟು ಮುಂತಾದ ವಸ್ತುಗಳನ್ನು ನಯವಾಗಿ ನಿರಾಕರಿಸುತ್ತಿದ್ದ. ಯಾವುದಾದರೂ ಕಾರ್ಟೂನ್ ಅಥವಾ ಮಕ್ಕಳ ಪುಸ್ತಕಗಳನ್ನು ನೀಡಿದರೆ ಆಸೆಗಣ್ಣುಗಳಿಂದ ನೋಡಿ ಥಟ್ಟನೆ ಸ್ವೀಕರಿಸುತ್ತಿದ್ದ. ಯಾರಾದರೂ ಬಟ್ಟೆಗಳನ್ನು ನೀಡಿದರೆ ಖಡಾಖಂಡಿತವಾಗಿ ಬೇಡವೆನ್ನುತ್ತಿದ್ದ. ಏಕೆಂದರೆ ತಾನು ಧರಿಸಿದ್ದ ಬಣ್ಣದ ಚೌಕುಳಿಗಳ ಅಂಗಿಯನ್ನು ಬದಲಿಸುವಂತೆಯೇ ಇಲ್ಲ ಎಂದು ಹೇಳುತ್ತಿದ್ದ.
ಆದರೆ ತಾನು ಮೊದಲಿಗೆ ಕನಸುಗಳನ್ನು ಮಾರಿದ್ದ ಜಗನ್ನಾಥನ ಮಗ ಶ್ಯಾಮನ ಮೇಲೆ ಏನೋ ಒಂದು ರೀತಿಯ ವ್ಯಾಮೋಹವನ್ನು ಬೇಳೆಸಿಕೊಂಡ. ಅವನೊಡನೆ ಪ್ರೀತಿಯಿಂದ ಮಾತನಾಡಿ ಸಮಯವನ್ನು ಕಳೆಯುತ್ತಿದ್ದ. ಅವರ ಮನೆಯಲ್ಲಿ ಮಾತ್ರ ತಿನ್ನಲು ಏನಾದರೂ ಕೊಟ್ಟರೆ ನಿರಾಕರಿಸದೆ ಸುಮ್ಮನೆ ತಿನ್ನುತ್ತಿದ್ದ. ಕೆಲವು ಸಲ ಜಗನ್ನಾಥನಿಗೆ ಮತ್ತು ರಾಧಾಳಿಗೆ ಉಚಿತವಾಗಿ ಕನಸುಗಳನ್ನು ನೀಡುತ್ತಿದ್ದ. ಶ್ಯಾಮನ ಶಾಲಾ ಬ್ಯಾಗು ಮತ್ತು ಪುಸ್ತಕಗಳನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದ. ಒಮ್ಮೊಮ್ಮೆ ಅವನ ಜೊತೆಗೂಡಿ ಪುಸ್ತಕದ ಅಕ್ಷರಗಳನ್ನು ಓದಲು ಪ್ರಯತ್ನಿಸುತ್ತಿದ್ದ. ಗೊತ್ತಾಗದಿದ್ದರೆ ಶ್ಯಾಮನನ್ನು ಕೇಳಿ ಹೇಳಿಸಿಕೊಳ್ಳುತ್ತಿದ್ದ. ತಾನೂ ಶ್ಯಾಮನಂತೆ ಓದಬೇಕೆಂಬ ಅದಮ್ಯ ಬಯಕೆ ಅವನ ಕಣ್ಣುಗಳಲ್ಲಿ ಬಿಂಬಿತವಾಗಿರುವುದು ಅನೇಕ ಸಲ ಶ್ಯಾಮನ ಅಮ್ಮ ರಾಧಾಳ ಅರಿವಿಗೆ ಬಂದಿದೆ.
ಆ ಹುಡುಗನ ಮಾತಿನ ಭರದಿಂದಲೇ ತಾವು ಮೋಡಿಗೊಳಗಾಗಿ ನಿದ್ರೆ ಬಂದು ಕನಸುಗಳು ಬೀಳುತ್ತಿವೆಯೆಂದು ಬಡಾವಣೆಯ ಜನ ಭ್ರಮಿಸಿದರು. ತಮ್ಮ ಬದುಕಿನ ಏಕತಾನತೆಯ ವ್ಯಾಧಿಗೆ ಅವನ ಮಂತ್ರಮುಗ್ಧ ಮಾತುಗಳು ಭಿನ್ನವಾಗಿ, ಔಷಧಿಯಾಗಿ ಪರಿಣಮಿಸುತ್ತಿರುವುದು ಜನರ ಗಮನಕ್ಕೆ ಬರಲಿಲ್ಲ. ಕೆಲವರಿಗೆ ಈ ರೀತಿಯ ಅನುಮಾನ ಮೂಡಿದರೂ ಅದರ ಬಗ್ಗೆ ಹೆಚ್ಚು ವೈಜ್ಞಾನಿಕವಾಗಿ ಚರ್ಚೆ ಮಾಡದೆ ಅವನು ನೀಡುತ್ತಿದ್ದ ಕನಸಿನ ಸುಖವನ್ನು ಅನುಭವಿಸಿ ಸಂಭ್ರಮಿಸಿದರು. ಈ ಸಂಭ್ರಮ ಅರುಣೋದಯ ಬಡಾವಣೆಯ ಜನರಿಗೆ ಮಾತ್ರ ಸೀಮಿತವಾಗಲಿಲ್ಲ. ಮಂಜಾಲಕ್ಕೆ ಕೆಲಸಕ್ಕೆ ಹೋಗುವವರು ತಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ಪರಿಚಿತರೊಂದಿಗೆ ಈ ವಿಷಯವನ್ನು ಹಂಚಿಕೊಂಡರು. ಮೊದಮೊದಲು ಇದನ್ನು ಅನೇಕರು ನಂಬಲು ಸಿದ್ಧರಿರಲಿಲ್ಲ. ಆದರೆ ಈ ಬಡಾವಣೆಯ ಜನ ಇದನ್ನು ಪದೇಪದೇ ಈ ವಿಷಯದ ಬಗ್ಗೆಯೇ ಮಾತನಾಡುತ್ತಿದ್ದರಿಂದ ಮತ್ತು ಈ ಜನರು ಅವರ ಕಛೇರಿಗಳಲ್ಲಿ ನೆಮ್ಮದಿಯಿಂದ ಇರುವುದು ನಿಚ್ಚಳವಾಗಿ ಗೋಚರಿಸುತ್ತಿದ್ದರಿಂದ ನಿಧಾನಕ್ಕೆ ನಂಬಲು ಪ್ರಾರಂಭಿಸಿದರು.
ಬಾಯಿಂದ ಬಾಯಿಗೆ ವಿಷಯ ಹರಡಿ ಕನಸು ಮಾರುವ ಹುಡುಗ ಸುದ್ದಿಗೆ ಗ್ರಾಸವಾದ. ನಂದೀಪುರಕ್ಕೆ ಹೋಗುವ ರಾಜ್ಯದ ಹೆದ್ದಾರಿಯಲ್ಲಿ ಅರುಣೋದಯ ಬಡಾವಣೆಯ ಹತ್ತಿರದಲ್ಲಿ ಅಲ್ಲೊಂದು ಇಲ್ಲೊಂದು ಇರುವ ಹೊಸ ಬಡಾವಣೆಗಳಿಂದಲೂ ಜನ ಬಂದು ವಿಚಾರಿಸಲು ಪ್ರಾರಂಭಿಸಿದರು. ಹುಡುಗನ ಕನಸು ಮಾರುವ ಕ್ರಿಯೆಯನ್ನು ಏನೋ ಪವಾಡವನ್ನು ನೋಡಿದಂತೆ ನೋಡಿದ ಕೆಲವರಿಗೆ ನಂಬಿಕೆ ಬಂತು. ಆ ಬಡಾವಣೆಗಳಲ್ಲೂ ಇದೇ ರೀತಿಯ ಏಕತಾನತೆಯ ವ್ಯಾಧಿಗೀಡಾಗಿ ಬಳಲುತ್ತಿದ್ದವರು ತಮ್ಮ ಬಡಾವಣೆಗೂ ಬಂದು ಕನಸುಗಳನ್ನು ಮಾರುವಂತೆ ಹುಡುಗನನ್ನು ಕೇಳಿಕೊಂಡರು. ಆದರೆ ಹುಡುಗನ ಬಳಿ ಸಮಯವೇ ಇರಲಿಲ್ಲ. ಈ ಬಡಾವಣೆಯ ಜನರಿಗೇ ಸಮಯ ಹೊಂದಿಸಲು ಕಷ್ಟವಾಗುತ್ತಿರುವುದರಿಂದ ಅಕ್ಕಪಕ್ಕದ ಬಡಾವಣೆಗಳಿಗೆ ಹೋಗುವ ಮಾತೇ ಇಲ್ಲವೆಂದ. ಇವನ ಕನಸುಗಳ ಚಟಕ್ಕೆ ಬಿದ್ದಿದ್ದ ಅರುಣೋದಯ ಬಡಾವಣೆಯ ಜನಕ್ಕೆ ತಾವೆಲ್ಲಿ ಕನಸು ಮಾರುವ ಹುಡುಗನನ್ನು ಕಳೆದುಕೊಂಡು ಬಿಡಬಹುದೆಂಬುದನ್ನು ನೆನೆದು ದಿಗಿಲಾಯಿತು. ಆ ಆತಂಕದಿಂದಲೇ ಅರುಣೋದಯ ಬಡಾವಣೆಯ ಜನ ಒಂದು ತೀರ್ಮಾನಕ್ಕೆ ಬಂದರು. ಅಕ್ಕಪಕ್ಕದ ಬಡಾವಣೆಯ ಜನ ತಮ್ಮ ಕಾರಿನಲ್ಲಿ ಬಂದು ಈ ಬಡಾವಣೆಯಲ್ಲೇ ಹುಡುಗನಿಂದ ಕನಸುಗಳನ್ನು ಕೊಂಡು ತಮ್ಮ ಬಡಾವಣೆಯ ಮನೆಗಳಿಗೆ ಹೋಗಿ ತಾವು ಕೊಂಡಿದ್ದ ಕನಸುಗಳನ್ನು ಅನುಭವಿಸಬೇಕೆಂದು ಹೇಳಿದರು. ಇದು ಅಕ್ಕಪಕ್ಕದ ಬಡಾವಣೆಯವರಿಗೂ ಒಪ್ಪಿಗೆಯಾಯಿತು.
ಕನಸು ಮಾರುವ ಹುಡುಗನಿಗೆ ಒಂಚೂರೂ ಬಿಡುವಿಲ್ಲದಂತೆ ಆಯಿತು. ಅರುಣೋದಯ ಬಡಾವಣೆಯ ಜನರಿಗೆ ಅವರವರ ಮನೆಗಳಲ್ಲಿ ಕನಸು ಮಾರುವುದರ ಜೊತೆಗೆ ಅಕ್ಕಪಕ್ಕದ ಬಡಾವಣೆಗಳ ಜನರಿಗೂ ಅವರವರ ಕಾರುಗಳಲ್ಲಿ ಕನಸುಗಳನ್ನು ಮಾರಲು ಶುರು ಮಾಡಿದ. ಅರುಣೋದಯ ಬಡಾವಣೆಯಲ್ಲಿ ರಸ್ತೆಗಳ ಪಕ್ಕ ಕಾರುಗಳನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದ ಜನಕ್ಕೆ ಓಡಾಡಿಕೊಂಡು ಕನಸುಗಳನ್ನು ಮಾರುವುದೇ ಅವನಿಗೆ ಕಾಯಕವಾಯಿತು. ಇದರಿಂದ ಹುಡುಗನಿಗೆ ದುಡ್ಡೇನೋ ಹೆಚ್ಚಾಗಿ ಸಿಗುತ್ತಿತ್ತು. ಆದರೆ ಆ ಪುಟ್ಟ ಹುಡುಗನಿಗೆ ಕೆಲಸದ ಒತ್ತಡ ಹೆಚ್ಚಾಯ್ತು. ಇಷ್ಟಾದರೂ ಆ ಹುಡುಗನ ಮುಖದಲ್ಲಿದ್ದ ಮುಗ್ಧ ನಗುವಿನ ಭಾವ ಮಾತ್ರ ಕಡಿಮೆಯಾಗಲಿಲ್ಲ.
ಇದರಿಂದ ಹೊಸದೊಂದು ಸಮಸ್ಯೆಯ ಉದ್ಭವವಾಯಿತು. ಅರುಣೋದಯ ಬಡಾವಣೆಯ ಜನರಿಗೆ ಅವರವರ ಮನೆಗಳಲ್ಲೇ ಕನಸುಗಳನ್ನು ಮಾರುತ್ತಿದ್ದುದರಿಂದ ಕೂಡಲೇ ಅವರಿಗೆ ನಿದ್ರೆ ಬರುತ್ತಿತ್ತು. ತಮ್ಮ ಮನೆಗಳಲ್ಲೇ ಮಲಗಿ ಕನಸುಗಳನ್ನು ಕಂಡು ಸುಖಿಸುತ್ತಿದ್ದರು. ಅಕ್ಕಪಕ್ಕದ ಬಡಾವಣೆಯವರಿಗೆ ಅವರ ಕಾರುಗಳಲ್ಲಿ ಕನಸು ಮಾರುತ್ತಿದ್ದುದರಿಂದ ಅವರು ಪಕ್ಕದ ಬಡಾವಣೆಯಲ್ಲಿರುವ ತಮ್ಮ ಮನೆಗಳಿಗೆ ಹೋಗಿ ನಿದ್ರೆ ಮಾಡಿ ಕನಸುಗಳನ್ನು ಸವಿಯಬೇಕಾಗಿತ್ತು. ಕೆಲವರಿಗೆ ಕಾರು ಚಾಲನೆ ಮಾಡುವಾಗ ಜೋಂಪು ಹತ್ತಿದಂತಾಗಿ ಸಣ್ಣಪುಟ್ಟ ಅಪಘಾತಗಳನ್ನು ಮಾಡುತ್ತಿದ್ದರು. ಇನ್ನು ಕೆಲವರು ಈ ಜೋಂಪನ್ನು ಹತ್ತಿಕ್ಕಲು ಅತಿ ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದರು. ಪ್ರಯತ್ನಪೂರ್ವಕವಾಗಿ ಜಾಗೃತಾವಸ್ಥೆಯಲ್ಲಿ ಇರುತ್ತಿದ್ದರಿಂಲೋ ಏನೋ ಮನೆಗೆ ಹೋದ ಮೇಲೆ ಸರಿಯಾಗಿ ನಿದ್ರೆಯೂ ಬರುತ್ತಿರಲಿಲ್ಲ. ಆದ ಕಾರಣ ಕನಸುಗಳೂ ಬೀಳುತ್ತಿರಲಿಲ್ಲ. ಬಹಳ ನಿರೀಕ್ಷೆ ಇರಿಸಿ ಕನಸುಗಳನ್ನು ಕೊಂಡರೂ ತಮ್ಮ ನಿದ್ರಾಹೀನತೆಯ ಸಮಸ್ಯೆ ಹಾಗೇ ಮುಂದುವರೆದಿದ್ದರಿಂದ ಅವರು ಮತ್ತಷ್ಟು ಅಸಹನೆಗೆ ಒಳಗಾದರು. ಪ್ರತಿದಿನ ಬಂದಾಗ ದೂರುಗಳನ್ನು ಹೊತ್ತುಕೊಂಡೇ ಬರುತ್ತಿದ್ದರು. ಹುಡುಗನ ಜೊತೆ ವಾಗ್ವಾದಕ್ಕಿಳಿದು ಕೆಲವು ಸಲ ಜಗಳದ ಹಂತಕ್ಕೂ ಹೋಗುವಂತಾಯ್ತು.
ಬೇರೆ ಬಡಾವಣೆಯ ಜನ ಬರಲು ಪ್ರಾರಂಭಿಸಿದಾಗಲೇ ಅಸಮಾಧಾನ ಹೊಂದಿದ್ದ ಹುಡುಗ ವಿಧಿಯಿಲ್ಲದೆ ಅವರಿಗೆ ಅವರವರ ಕಾರುಗಳಲ್ಲೇ ಕನಸುಗಳನ್ನು ಮಾರಲು ಒಪ್ಪಿಕೊಂಡಿದ್ದ. ಕೆಲಸದ ಒತ್ತಡ ಜಾಸ್ತಿಯಾಗಿದ್ದರೂ ಹೇಗೋ ಸಂಭಾಳಿಸುತ್ತಿದ್ದ. ಆದರೆ ಪಕ್ಕದ ಬಡಾವಣೆಯವರು ಅಸಹನೆಯಿಂದ ದೂರಿ ಜಗಳಕ್ಕಿಳಿಯುವ ಹಂತಕ್ಕೆ ಬಂದದ್ದು ಅವನಿಗೆ ಬೇಸರ ತರಿಸಿತು. ಒಂದು ದಿನ ಹುಡುಗ ನಾಪತ್ತೆಯಾದ. ಒಂದೆರಡು ದಿನ ಕಾದರೂ ಹುಡುಗ ಬರದೇ ಇದ್ದುದರಿಂದ ಅವನು ನಾಪತ್ತೆಯಾಗಿರುವುದು ಖಾತ್ರಿಯಾಯಿತು.
ಹುಡುಗನ ಕನಸುಗಳಿಲ್ಲದೆ ಅರುಣೋದಯ ಬಡಾವಣೆಯ ಜನ ಚಡಪಡಿಸಿದರು. ಇದಕ್ಕೆಲ್ಲಾ ಅಕ್ಕಪಕ್ಕದ ಬಡಾವಣೆಯ ಜನರೇ ಕಾರಣರೆಂದು ಅವರನ್ನು ದೂಷಿಸಿದರು. ಅಕ್ಕಪಕ್ಕದ ಬಡಾವಣೆಯ ಜನರನ್ನು ಒಳಕ್ಕೆ ಬಿಡದಂತೆ ಸೆಕ್ಯುರಿಟಿಯವರಿಗೆ ತಾಕೀತು ಮಾಡಿದರು. ಒಂದು ವಾರವಾದರೂ ಹುಡುಗನ ಸುಳಿವಿಲ್ಲ. ಹೋಗಿ ಹುಡುಕುವುದಕ್ಕೆ ಅವನ ವಿಳಾಸವೂ ಯಾರಿಗೂ ತಿಳಿದಿರಲಿಲ್ಲ.
ಇಷ್ಟು ದಿನಗಳ ವಿದ್ಯಮಾನಗಳಿಂದ ಅರುಣೋದಯ ಬಡಾವಣೆಯ ಜನ ಕನಸಿನ ಚಟಕ್ಕೆ ಬಲಿಯಾಗಿದ್ದರು. ಒಮ್ಮೆ ಸೇವಿಸಿದ ಔಷಧದ ಪರಿಣಾಮ ನಾಲ್ಕಾರು ದಿನಗಳು ಇರುವ ಹಾಗೆ ಕೆಲವು ದಿನ ಹಾಗೆಯೇ ನಿದ್ರಿಸಲು ಪ್ರಯತ್ನಿಸಿದರು. ಕೆಲವರು ಇದರಲ್ಲಿ ಯಶಸ್ವಿಯೂ ಆದರು. ಮತ್ತೆ ಕೆಲವರಿಗೆ ನಿದ್ರೆಯೂ ಬರಲಿಲ್ಲ. ಕನಸುಗಳೂ ಬೀಳಲಿಲ್ಲ. ಒಂದು ವಾರ ಕಳೆಯುವುದರೊಳಗೆ ಆ ಬಡಾವಣೆಯ ಬಹುತೇಕ ಮಧ್ಯವಯಸ್ಕ ಮಂದಿ ನಿದ್ರಾಹೀನತೆಯ ರೋಗಕ್ಕೆ ಬಲಿಯಾದರು. ಕನಸುಗಳಿಗಾಗಿ ಹಪಹಪಿಸಿದರು. ನಿದ್ರೆಯೇ ಬರದ ಮೇಲೆ ಕನಸುಗಳು ಹೇಗೆ ಬರಲು ಸಾಧ್ಯ? ಕನಸು ಮಾರುವ ಹುಡುಗ ಈ ಜನರಿಗೆ ಅಂಟಿಸಿದ್ದ ಕನಸಿನ ಚಟಕ್ಕೆ ಸಂಪೂರ್ಣವಾಗಿ ಬಲಿಯಾಗಿದ್ದರಿಂದ ಹುಡುಗನ ಆಗಮನಕ್ಕೂ ಮೊದಲಿನ ನಿದ್ರಾಹೀನತೆಯ ಸಮಸ್ಯೆಗಿಂತಲೂ ಹೆಚ್ಚಾಗಿ ಉಲ್ಬಣಾವಸ್ಥೆಯಲ್ಲಿ ಕಾಡಿದಂತೆ ಆಡತೊಡಗಿದರು. ಮತ್ತೆ ಮೊದಲಿನ ಗಡಿಬಿಡಿ, ಸಿಡುಕುತನ ಹೆಚ್ಚಾಗಿ ಹುಚ್ಚು ಬಂದಂತೆ ನರ್ತಿಸಿ ನೆಮ್ಮದಿ ಹಾಳಾಗತೊಡಗಿತು. ನಿದ್ರಾರಹಿತ ರಾತ್ರಿಗಳಿಂದ ನರಳಿದರು. ಕಛೇರಿಗಳಲ್ಲೂ ತಮ್ಮ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೆ ಚಡಪಡಿಸಿದರು. ರಜಾದಿನಗಳಲ್ಲೂ ಹಗಲಿಡೀ ಹಾಸಿಗೆಯಲ್ಲಿ ಹೊರಳಾಡಿ ನಿದ್ರೆಯಿಲ್ಲದೆ ಕನಸುಗಳಿಲ್ಲದೆ ಕಳವಳಗೊಂಡು ಹೈರಾಣಾದರು. ಕನಸು ಮಾರುವ ಹುಡುಗನ ನೆನಪಿನಲ್ಲೇ ಅವನ ಜಪ ಮಾಡಲು ಪ್ರಾರಂಭಿಸಿದರು. ಆ ಹುಡುಗ ತಮ್ಮ ಬಳಿ ಬರುತ್ತಿಲ್ಲವೆಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡಿದರು. ಅವನಿಗಾಗಿ ಹುಡುಕಿದರು. ಕಾದು ಕಾದು ಸಾಕಾದರು. ತಿಂಗಳಾದರೂ ಹುಡುಗನ ಸುಳಿವೇ ಇಲ್ಲ.
ಹೀಗೇ ಕೆಲವು ತಿಂಗಳು ಕಳೆದವು. ಹುಡುಗನ ಕನಸಿಗೆ ದಾಸರಾಗಿದ್ದ ಜನ ಹುಚ್ಚರಂತಾದರು. ಬಡಾವಣೆಯ ಹಿರಿಯರು ಇವರ ನಿಸ್ತೇಜ ಅವಸ್ಥೆಯನ್ನು ನೋಡಿ ಮರುಕ ಪಟ್ಟುಕೊಳ್ಳುವಂತೆ ಆಯಿತು. ಆದರೆ ಅವರು ಅಸಹಾಯಕರಂತೆ ನೋಡುವುದನ್ನು ಬಿಟ್ಟು ಮತ್ತೇನೂ ಮಾಡಲಾಗಲಿಲ್ಲ. ಕೆಲವರು ಮನೋವೈದ್ಯರ ಮೊರೆ ಹೋಗುವ ಸಲಹೆ ನೀಡಿದರು. ಆದರೆ ಈ ರೀತಿ ಯಾರೂ ಕೇಳದಿರುವ ಕನಸುಗಳ ಚಟಕ್ಕೆ ಬಿದ್ದಿರುವ ವಿಚಿತ್ರ ಸ್ಥಿತಿಯನ್ನು ಹೇಳಲು ನಾಚಿಕೆಯಾಗಿ ಸುಮ್ಮನಾದರು.
ನಾಲ್ಕೈದು ತಿಂಗಳಾದ ಮೇಲೆ ಇದ್ದಕ್ಕಿದ್ದಂತೆ ಒಂದು ಭಾನುವಾರ ಬೆಳಿಗ್ಗೆ ಕನಸು ಮಾರುವ ಹುಡುಗ ಪ್ರತ್ಯಕ್ಷನಾದ. ಈ ಬಾರಿ ಅವನ ಜೊತೆ ಮಧ್ಯ ವಯಸ್ಸಿನ ಹೆಂಗಸೊಬ್ಬರಿದ್ದರು. ಜಗನ್ನಾಥನ ಮನೆಯೆದುರು ಇಬ್ಬರೂ ನಿಂತಿದ್ದರು. ತಕ್ಷಣ ಹುಡುಗನನ್ನು ಗುರುತಿಸಲಾಗಲಿಲ್ಲ. ಏಕೆಂದರೆ ಅವನು ತನ್ನ ಟ್ರೇಡ್‌ಮಾರ್ಕಿನಂತಿದ್ದ ಬಣ್ಣಬಣ್ಣದ ಚೌಕುಳಿಗಳ ಅಂಗಿಯನ್ನು ಧರಿಸಿರಲಿಲ್ಲ. ಅದರ ಬದಲು ಯಾವುದೋ ಶಾಲೆಯ ಸಮವಸ್ತçದಂತೆ ಇದ್ದ ಬಟ್ಟೆಯನ್ನು ಧರಿಸಿ ಕಾಲಿಗೆ ಶೂ ಹಾಕಿದ್ದ. ಅವನ ಬಳಿ ಬಣ್ಣದ ಕೋಲು ಇತ್ತು. ಅದರ ಜೊತೆಗೆ ನಾಲ್ಕಾರು ಬಣ್ಣದ ಚಿತ್ತಾರಗಳಿದ್ದ ಗಾಳಿಪಟವನ್ನು ಕೈಯಲ್ಲಿ ಹಿಡಿದಿದ್ದ.
ಭಾನುವಾರವಾದ್ದರಿಂದ ಬಡಾವಣೆಯ ಬಹುತೇಕ ಜನ ಮನೆಯಲ್ಲೇ ಇದ್ದರು. ರಾತ್ರಿಯೆಲ್ಲಾ ನಿದ್ರೆ ಮಾಡದ ಕೆಲವರು ಕುಳಿತಲ್ಲೇ ತೂಗಡಿಸುತ್ತಿದ್ದರು. ಮತ್ತೆ ಕೆಲವರು ರಾತ್ರಿಯೂ ನಿದ್ರೆ ಮಾಡದೆ ಹಗಲೂ ನಿದ್ರೆ ಬಾರದೆ ಸುಮ್ಮನೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು. ಭಾನುವಾರಕ್ಕೆಂದೇ ಕೆಲವು ಕೆಲಸಗಳನ್ನು ಮೀಸಲಿಟ್ಟಿದ್ದ ಜನ ನಿದ್ರಾಹೀನತೆಯಿಂದ ಬಳಲಿದ್ದ ಕಾರಣಕ್ಕೆ ಮಾಡುವ ಕೆಲಸದ ಮೇಲೆ ಶ್ರದ್ಧೆ ಇಲ್ಲದೆ ಹೆಂಡತಿ ಮಕ್ಕಳ ಮೇಲೆ ಸಿಡುಕುತ್ತಿದ್ದರು. ಕನಸುರಹಿತ ಜೀವನದಿಂದ ಬೇಸತ್ತು ಮತ್ತೆ ಕನಸುಗಳನ್ನು ಕಾಣಲು ಹಾತೊರೆಯುತ್ತಿದ್ದರು. ಕನಸು ಮಾರುವ ಹುಡುಗ ಬಂದಿರುವ ವಿಷಯ ಬಡಾವಣೆಯಲ್ಲಿ ಮಿಂಚಿನಂತೆ ಹರಡಿತು. ಅನೇಕ ಜನ ಜಗನ್ನಾಥನ ಮನೆಯ ಬಳಿ ಸೇರಿ ಹುಡುಗನನ್ನು ಸುತ್ತುವರೆದರು. ಅವನಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ತಮಗೆ ಅವನ ಮೇಲೆ ಯಾವ ಹಕ್ಕೂ ಇಲ್ಲವೆಂದು ತಿಳಿದಿದ್ದರೂ ತಮ್ಮನ್ನು ಈ ಸ್ಥಿತಿಗೆ ತಂದಿದ್ದಕ್ಕಾಗಿ ಅವನ ಮೇಲೆ ರೇಗಾಡಿದರು. ಹುಡುಗ ಮಾತ್ರ ಸಮಚಿತ್ತದಿಂದ ತನ್ನ ಎಂದಿನ ನಗುಮುಖವನ್ನೇ ಪ್ರದರ್ಶಿಸಿದ. ಎಲ್ಲವೂ ತಹಬಂದಿಗೆ ಬಂದ ಮೇಲೆ ಹುಡುಗನ ಜೊತೆ ಇದ್ದ ಕಚ್ಚೆ ಸೀರೆ ಮತ್ತು ಮೇಲೆ ಬಣ್ಣಬಣ್ಣದ ಬಟ್ಟೆಯನ್ನು ಹಾಕಿಕೊಂಡು ವಿಚಿತ್ರವೇ ಎಂಬಂತಿದ್ದ ಆಭರಣಗಳನ್ನು ಧರಿಸಿದ್ದ ಹೆಂಗಸು ಮಾತನಾಡತೊಡಗಿದಳು.
“ನಾನು ಸೇವಂತಿ ಬಾಯಿ. ಇವನ ತಾಯಿ. ಇವನ ಹೆಸರು ಮುರಿ ಸೇವೂರ. ನಾವು ದೊಂಬರಾಟದವರು. ನಮಗೆ ಒಂದು ನೆಲೆ ಅಂತ ಇಲ್ಲ. ಊರೂರು ತಿರುಗಿ ಕಣ್ಕಟ್ಟು, ತಂತಿ ಮೇಲೆ ನಡೆಯುವುದು, ಕಸರತ್ತುಗಳನ್ನು ಮಾಡುವುದು, ಕೋತಿಯಾಟ ಆಡಿಸುತ್ತಾ ಜನಗಳನ್ನು ಮೆಚ್ಚಿಸುತ್ತಿದ್ದೆವು. ಮಾತೇ ನಮಗೆ ಬಂಡವಾಳ. ಮಾತಿನಿಂದಲೇ ಜನರನ್ನು ಮೋಡಿ ಮಾಡುತ್ತಿದ್ದೊ. ಎಲ್ಲವೂ ಹೊಟ್ಟೆಪಾಡಿಗಾಗಿ.
ಮುರಿಗೆ ಓದಬೇಕೆಂಬ ಅಸೆ. ಪದೇ ಪದೇ ಹಠ ಮಾಡುತ್ತಿದ್ದ. ಆದರೆ ನಮಗೆ ಅದೆಲ್ಲಾ ಎಲ್ಲಿ ಸಾಧ್ಯ. ಈಗ ಕೆಲವು ತಿಂಗಳ ಹಿಂದೆ ನನ್ನ ಗಂಡ ಖಾಯಿಲೆಯಿಂದ ನರಳಿ ಹೋಗಿಬಿಟ್ಟ. ನಮ್ಮಿಬ್ಬರಿಗೂ ದಿಕ್ಕೇ ಇಲ್ಲದಂತೆ ಆಯ್ತು. ಬೇರೆ ದೊಂಬರಾಟದ ಕುಟುಂಬದವರು ನಮ್ಮನ್ನು ಸೇರಿಸಲಿಲ್ಲ. ಇಲ್ಲೇ ಹತ್ತಿರದ ಕೊಳೆಗೇರಿಯ ಪಕ್ಕ ನಮ್ಮ ಡೇರೆ ಹಾಕಿಕೊಂಡು ಕಾಲ ತಳ್ಳುತ್ತಿದ್ದೊ. ನಮ್ಮ ದೊಂಬರಾಟದ ಸಾಮಾನು ಮತ್ತು ಕೋತಿಯನ್ನು ಮಾರಿದೆ. ಇವನದು ಶಾಲೆಗೆ ಹೋಗಬೇಕೆಂಬ ಒಂದೇ ವರಾತ. ಕೊನೆಗೆ ಶಾಲೆಯ ಫೀಸಿಗೆ ಆಗುವಷ್ಟು ದುಡ್ಡು ಸಂಪಾದಿಸು. ಆಮೇಲೆ ನೋಡುವ ಅಂತ ಹೇಳಿದೆ. ಆಗಲೇ ನಮಗೆ ಈ ದಾರಿ ಹೊಳೆದಿದ್ದು. ಮಾತಿನಿಂದ ಮತ್ತು ಬಣ್ಣದ ವಸ್ತುಗಳಿಂದ ಜನರನ್ನು ಮೋಡಿ ಮಾಡುವ ಕಲೆ ನಮಗೆ ಕರಗತವಾಗಿರುವುದರಿಂದ ಇದು ಸುಲಭವಾಯ್ತು. ಮುರಿ ದಿನಾಲು ತರುತ್ತಿದ್ದ ದುಡ್ಡಿನಲ್ಲಿ ಸ್ವಲ್ಪ ಖರ್ಚು ಮಾಡಿ ಉಳಿದಿದ್ದನ್ನು ಕೂಡಿಡುತ್ತಿದ್ದೆ. ಸುಮಾರು ದುಡ್ಡು ಆಯ್ತು. ಯಾರೋ ಹೋಟೆಲ್ ಇಟ್ಟಿರುವ ಪುಣ್ಯಾತ್ಮರು ನಮ್ಮ ಚಮತ್ಕಾರದ ಮಾತು ಕೇಳಿ ಮತ್ತು ಮುರಿಗೆ ಓದುವ ಆಸೆ ಇರುವುದನ್ನು ನೋಡಿ ಕೆಲಸ ಕೊಟ್ಟರು. ಉಳಿದುಕೊಳ್ಳಲು ಸಣ್ಣ ಜಾಗವನ್ನೂ ನೀಡಿದ್ದಾರೆ. ಈಗ ನನ್ನ ಮಗ ಮುರಿ ಶಾಲೆಗೆ ಹೋಗುತ್ತಿದ್ದಾನೆ. ನಿಮ್ಮೆಲ್ಲರ ದಯೆಯಿಂದ ನಾವು ಒಂದು ದಡ ಸೇರಿದ್ದೇವೆ.”
ಕನಸು ಮಾರುವ ಹುಡುಗ ಅಥವಾ ಮುರಿ ಸೇವೂರ ತನ್ನ ಎಂದಿನ ನಗುಮುಖದಿಂದ ಶ್ಯಾಮನನ್ನು ಮಾತನಾಡಿಸುತ್ತಾ ಅವನಿಗೆ ತನ್ನ ಬಣ್ಣದ ಕೋಲು ಮತ್ತು ಅವನಿಗಾಗಿಯೇ ತಂದಿದ್ದ ಬಣ್ಣಬಣ್ಣದ ಗಾಳಿಪಟವನ್ನು ನೀಡಿದ. ಗಾಳಿಪಟಕ್ಕಿಂತ ಬಣ್ಣದ ಕೋಲು ಸಿಕ್ಕಿದ್ದಕ್ಕೆ ಶ್ಯಾಮ ಪುಳಕಗೊಂಡ. ಅರಳು ಹುರಿದಂತೆ ಆಡುತ್ತಿದ್ದ ಚಮತ್ಕಾರದ ಮಾತುಗಳು ಮಾಯವಾಗಿದ್ದವು. ಆ ಹುಡುಗ ಮಾಮೂಲೀ ಶೈಲಿಯಲ್ಲೇ ಮಾತಾಡಿದ. ಶಾಲೆಗೆ ಹೋಗಿ ಕಲಿಯುತ್ತಿರುವುದರ ಹೆಮ್ಮೆ ಅವನ ಮುಖದ ಮೇಲಿನ ಪ್ರಸನ್ನತೆಯಿಂದ ವ್ಯಕ್ತವಾಗುತ್ತಿತ್ತು. ತಮಗೆ ವಾಸ್ತವ್ಯ ನೀಡಿರುವ ಹೋಟೆಲ್ ಮಾಲೀಕರು ದೇವರ ಸಮಾನವೆಂದು ಬಣ್ಣಿಸಿದ. ಕಷ್ಟಪಟ್ಟು ಓದುತ್ತಿರುವುದರಿಂದ ಮತ್ತು ಮನೆಯ ಕೆಲಸವೂ ಸೇರಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೇ ಸಮನೆ ಓದು ಕೆಲಸದಲ್ಲೇ ತಲ್ಲೀನನಾಗಿರುವುದರಿಂದ ಸುಸ್ತಾಗಿ ಮಲಗಿದ ತಕ್ಷಣ ನಿದ್ರೆ ಬರುವ ಕಾರಣ ತನಗೇ ಈಗ ಕನಸುಗಳು ಬೀಳುತ್ತಿಲ್ಲವೆಂದು ಹೇಳಿದ.!!
ಇಷ್ಟು ಹೇಳಿ ಬಡಾವಣೆಯ ಜನರಿಗೆಲ್ಲಾ ಧನ್ಯವಾದ ತಿಳಿಸಿ ಅವರಿಬ್ಬರೂ ಹೊರಟರು. ಮುರಿ ಸೇವೂರ ಮತ್ತು ಅವನ ತಾಯಿ ಸೇವಂತಿ ಬಾಯಿ ಹೇಳುವ ಮಾತುಗಳನ್ನು ಆಸಕ್ತಿಯಿಂದ ಕೇಳಿ ಅವರಿಬ್ಬರೂ ನಿರ್ಗಮಿಸುವುದನ್ನು ವಶೀಕರಣಕ್ಕೊಳಗಾದವರಂತೆ ನೋಡುತ್ತಿದ್ದ ಆ ಬಡಾವಣೆಯ ಜನ ತಮಗೂ ಆ ಹುಡುಗನಂತೆ ನಿದ್ರೆ ಬಂದರೆ ಸಾಕು, ಕನಸುಗಳ ಸಹವಾಸವೇ ಬೇಡ ಎಂದು ಆಶಿಸುತ್ತಾ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಶ್ಯಾಮ ಮಾತ್ರ ಆ ಹುಡುಗ ನೀಡಿದ್ದ ಗಾಳಿಪಟವನ್ನು ಬದಿಗಿಟ್ಟು ಬಣ್ಣದ ಕೋಲನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕತ್ತಿಯಂತೆ ಝಳಪಿಸುತ್ತಾ ಇದರಿಂದ ತನ್ನ ಅಪ್ಪ ಜಗನ್ನಾಥನಿಗೆ ನಿದ್ರೆ ಬರುವಂತೆ ಮಾಡಲು ಏನೇನು ಮಾತನಾಡಬೇಕು ಎಂದು ಯೋಚಿಸುತ್ತಾ ಆ ಹುಡುಗ ಪಟಪಟನೆ ಉದುರಿಸುತ್ತಿದ್ದ ಮಾತುಗಳನ್ನೇ ನೆನಪು ಮಾಡಿಕೊಳ್ಳುತ್ತಾ ನಿಂತ.
ಡಾ.ಕೆ.ಎಸ್.ಗಂಗಾಧರ ಮೂಲತಃ ಹಾಸನ ಜಿಲ್ಲೆಯ ಕಾಂತರಾಜಪುರ ಗ್ರಾಮದವರು. ಈಗ ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿವಿ ಮೂಗು ಗಂಟಲು ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವನ, ಕಥೆ ಬರೆಯುವ ಹವ್ಯಾಸ. ಅನೇಕ ಕವನಗಳು ಪ್ರಕಟವಾಗಿವೆ. “ಕನಸ ಪೊರೆವ ಮೌನ” ಇವರ ಪ್ರಕಟಿತ ಕವನ ಸಂಕಲನ.
ಕತೆ ತುಂಬಾ ಚೆನ್ನಾಗಿದೆ ಸರ್, ಓದಿಸಿಕೊಂಡುಹೋಗುತ್ತದೆ . ಜನರಿಗೆ ಕನಸಗಳನ್ನು ಮಾರುವ ಪರಿ ಮತ್ತು ಮಾರುವವರ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೀರಿ , ಸದ್ಯ ಬಾಲಕ ಗಳಿಸಿದ ಅಲ್ಪ ಹಣದಿಂದ ಶಾಲೆ ಸೇರಿದ ಬಗೆ ಹಿಡಿಸಿತು , ನಾನು ಆಶ್ರಮ ತೆಗೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೆ.
Bahala sogasagide, adbutha kalpane
Vandanagalu Dr Gangadhar.
ಕಥೆ ಬಹಳ ಅರ್ಥಪೂರ್ಣವಾಗಿದೆ. ಮನುಷ್ಯನಾದವನು ಸ್ವತ: ತಾನೇ ಬದುಕನ್ನು ಸಂಕೀರ್ಣಗೊಳಿಸಿಕೊಂಡಿರುವನು ಎನ್ನುವುದು ಉದಾಹರಣೆಗಳ ಮೂಲಕ ಕಥೆಗಾರರು ವಿವರಿಸಿರುವರು. ನಿಜವಾದ ಅರ್ಥದಲ್ಲಿ ಮನುಷ್ಯ ವರ್ತಮಾನದಲ್ಲಿ ಬದುಕದೆ ಭವಿಷ್ಯಕ್ಕಾಗಿ ಚಡಪಡಿಸುತ್ತಾನೆ. ಭವಿಷ್ಯಕ್ಕಾಗಿ ವರ್ತಮಾನವನ್ನು ಹೊಸಕಿಹಾಕುವುದು ಯಾವ ನ್ಯಾಯ. ತುಂಬ ಮೌಲಿಕವಾಗಿ ಬರೆದಿರುವಿರಿ. ನಿಮ್ಮ ಸಾಹಿತ್ಯ ಪ್ರೀತಿ ಮತ್ತು ಸಮಾಜಿಕ ಕಾಳಜಿ ಶ್ಲಾಘನೀಯವಾದದ್ದು. ನಿಮ್ಮಂಥ ಅಪರೂಪದ ವ್ಯಕ್ತಿ ನನಗೆ ಪರಿಚಿತರು ಮತ್ತು ಸ್ನೇಹಿತರು ಎನ್ನುವುದು ಅಭಿಮಾನದ ಸಂಗತಿ.
ಧನ್ಯವಾದಗಳು
ರಾಜಕುಮಾರ ಕುಲಕರ್ಣಿ