ಯಾಕೋ ಅವರ ಮನೆಯ ಕೆಲವು ಆಗುಹೋಗುಗಳಿಗೆ ನಾನು ಸಾಕ್ಷಿಯಾಗಿರುವಂತೆ ನನಗೆ ಅನಿಸಿದ್ದು ಸುಳ್ಳಲ್ಲ. ಮೊನ್ನೆಯ ಭೇಟಿಯ ನಂತರದಲ್ಲಿ ಯಾಕೋ ಗಂಗತ್ತೆ ಬಹಳವಾಗಿ ನೆನಪಾಗುತ್ತಿದ್ದಾರೆ. ಅಷ್ಟು ವರ್ಷ ಮನೆಯಿಂದ ದೂರವಿದ್ದ ಅವರಿಗೆ ಕೊನೆಗಾಲಕ್ಕೆ ಮತ್ತೆ ಆ ಮನೆಗೆ ಬರಬೇಕು ಅನಿಸಿದ್ದು ಯಾಕೆ? ಮನೆಯವರು ಒಪ್ಪದಿರುವುದರಿಂದ ಅವರಿಗೆ ಆ ಮನೆಗೆ ಬರುವ ಅವಕಾಶ ದೊರಕಿರಲಿಲ್ಲ. ಆದರೆ ಅವರ ಸಾವು ರಾಮಣ್ಣನನ್ನು ವಿಚಲಿತಗೊಳಿಸಿತೇ? ಸಾವಿನ ಸುದ್ದಿ ತಿಳಿದಿದ್ದೆ ರಾಮಣ್ಣ ಜಾನಕ್ಕ ಅಲ್ಲಿಗೆ ಧಾವಿಸಿದ್ದರಂತೆ. ಅಷ್ಟೆ ಅಲ್ಲ ಎಲ್ಲ ಕ್ರಿಯೆಯನ್ನು ರಾಮಣ್ಣ ತಾವೇ ಮುಂದಾಗಿ ನೆರವೇರಿಸಿದ್ದರಂತೆ.
ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಕಣ್ಣಾಚೆಯ ನೋಟ” ನಿಮ್ಮ ಓದಿಗೆ
ʻಇಲ್ಲೆ ನಿಲ್ಸು ಸಾಕುʼ
ʻಮನೆ ಹತ್ರವೇ ಬಿಡ್ತಿ ತಗʼ
ʻಬ್ಯಾಡ, ಅಲ್ಲಿ ಕಾಣ್ತಿದ್ದಲ್ಲ ಆ ಮುರುಕಿಲ್ಲಿ ಹತ್ಹೆಜ್ಜೆ ಹೋದ್ರೆ ಅಲ್ಲೇ ಅವ್ರಮನೆʼ
ಕಾರಿನಿಂದ ಇಳಿದು ಅವರ ಮನೆಗೆ ಹೋದಾಗ ಮುಂದಿನ ಬಾಗಿಲನ್ನು ಎರೆಸಿದ್ದರು. ದೂಡಿದಾಗ ಬಾಗಿಲು ತೆರದುಕೊಂಡಿತು. ಒಳಗೆ ಇಣುಕಿದರೆ ಜಗಲಿಯಲ್ಲಿ ಯಾರೂ ಕಾಣಲಿಲ್ಲ. ಅನುಮಾನಿಸುತ್ತಲೇ ಒಳಗೆ ಅಡಿ ಇಟ್ಟೆ. ಯಾರೋ ಮಂತ್ರ ಹೇಳುತ್ತಿರುವ ಸದ್ದು ಕೇಳಿಸಿತು. ತುಸು ಆಲಿಸಿದಾಗ ತಿಳಿಯಿತು ಅದು ರಾಮಣ್ಣನ ಧ್ವನಿಯೆಂದು. ʻಸದ್ಯ ಮನೆಯಲ್ಲಿ ಜನವಂತೂ ಇದ್ದಾರೆʼ ಎಂದು ನಿರಾಳವಾಯಿತು. ಬಹಳ ಪರಿಚಿತವಾದ ಮನೆ. ಬರದೆ ಆರೆಂಟು ವರ್ಷಗಳಾಗಿವೆ. ನಡುಮನೆ ದಾಟಿ ಒಳಗೆ ಕಾಲಿಡುತ್ತಿದ್ದಂತೆ ಕೈಯಲ್ಲಿ ಪಾತ್ರೆಯೊಂದನ್ನು ಹಿಡಿದಿದ್ದ ಜಾನಕ್ಕ ಕಂಡಳು. ʻಅರೆ, ರಾಜಿ, ಯಾವಾಗ ಬಂದ್ಯೆ?ʼ ಎನ್ನುತ್ತ ಆಶ್ಚರ್ಯದಿಂದ ಅಲ್ಲೇ ನಿಂತಳು. ʻಈಗ ಒಳಗೆ ಬರ್ತಾ ಇದ್ದಿ ಅಷ್ಟೆʼ ʻಇತ್ತಿತ್ಲಾಗೆ ನೀನು ಬಪ್ದೆ ಅಪರೂಪಾಗಿತ್ತು. ಆದ್ರೂ ಇವತ್ತು ಬಂದ್ಯಲ್ಲ, ಬಾರಿ ಚೊಲೋ ಆತು. ಇನ್ನೇನು ಊಟಕ್ಕೆ ಆತು. ಹೋಗಿ ಕೈಕಾಲ್ಮಕ ತೊಳ್ಕಂಡು ಬಾʼ ಎಂದಳು.
ಅವರ ಮನೆಗೆ ಹೋಗುವ ಯಾವ ಸೂಚನೆಯೂ ಇಲ್ಲದೆ ದಿಢೀರ್ ಅಂತ ಹೋದವಳು ನಾನು. ಊರಿಗೆ ಹೊರಟಿದ್ದ ಚಿಕ್ಕಪ್ಪನ ಮಗ ರಾಗು ʻಹಬ್ಬಕ್ಕೆ ಊರಿಗೆ ಹೋಗ್ತಿ, ಬರದಾದ್ರೆ ಬಾ, ಆನು ಒಬ್ನೇ ಕಾರಲ್ಲಿ ಊರಿಗೆ ಹೋಗ್ತಾ ಇದ್ದಿʼ ಎಂದು ಹೇಳಿದಾಗ ʻಊರಿನ ಹಬ್ಬಕ್ಕೆ ಹೋಗಿ ಸುಮಾರು ವರ್ಷವೇ ಆತು. ಹೋದರೂ ಹೋಗಲಕ್ಕುʼ ಅಂತ ಮಾರನೆ ದಿವಸ ಬೆಳ್ಳಂಬೆಳಗ್ಗೆ ಅವನೊಂದಿಗೆ ಹೊರಟಿದ್ದೆ. ʻನಿಂಗೆ ಹೇಳದು ಮರ್ತೇ ಹೋಗಿತ್ತು. ಇಲ್ಲೇ ಒಬ್ಬರ ಮನೆಲ್ಲಿ ಸ್ವಲ್ಪ ಕೆಲಸ ಇದ್ದು. ಅವ್ರ ಮನೆಲ್ಲಿ ಊಟಮಾಡಿ ಸಂಜೆಹೊತ್ತಿಗೆ ಅಲ್ಲಿಂದ ಹೊರಡನ. ತೊಂದ್ರೆ ಇಲ್ಲೆ ಅಲ್ದಾ?ʼ ಅಂತ ಹೇಳಿದಾಗ ತಟ್ಟನೆ ನೆನಪಾಗಿತ್ತು ಅಮ್ಮನ ಹತ್ತಿರದ ಬಂಧುವೊಬ್ಬರ ಮನೆ ಇರುವುದು ಅಲ್ಲೇ ಪಕ್ಕದ ಊರಿನಲ್ಲಿ ಅಂತ. ಚಿಕ್ಕವಳಿರುವಾಗ ಅದೆಷ್ಟು ಬಾರಿ ಅವರ ಮನೆಗೆ ಹೋಗಿದ್ದೆನೋ ನೆನಪಿಲ್ಲ. ಅವರ ಮನೆಯ ಮಕ್ಕಳೊಂದಿಗೆ ಊರೆಲ್ಲ ಸುತ್ತಿದ್ದು ಆಡಿದ್ದು ಲೆಕ್ಕವೇ ಇಲ್ಲದಷ್ಟು ಬಾರಿ. ರಜೆ ಬಂದರೆ ಅವರ ಮನೆಗೆ ಹೋಗಲಿಕ್ಕೆ ತುದಿ ಕಾಲಲ್ಲಿ ನಿಂತು ಕಾಯುತ್ತಿದ್ದೆ. ನಾನು ಬಂದುದು ಎಷ್ಟು ಆಕಸ್ಮಿಕವೋ ಅಷ್ಟೆ ಆಕಸ್ಮಿಕವಾಗಿ ನನಗೆ ಹಿರಿಯ ಜೀವವೊಂದರ ಪ್ರಸಾದ ದೊರೆತಿತ್ತು.
ಪೂಜೆ ಮುಗಿಸಿ ಬಂದ ರಾಮಣ್ಣ ಬಹಳ ಆತ್ಮೀಯವಾಗಿ ಮಾತನಾಡಿಸಿದ್ದರು. ʻನೋಡು ನೀನು ಬರ್ತೆ ಅಂತ ಯಂಗಕ್ಕೆ ಗೊತ್ತಿಲ್ಲೆ. ಆದ್ರೂ ಬಂದಿದ್ದು ಒಳ್ಳೆದೇ ಆತುʼ ಎಂದು ಹೇಳಿದಾಗ ಅವರ ಮಾತು ಅರ್ಥವಾಗದೆ ಅವರ ಮುಖವನ್ನು ನೋಡಿದ್ದೆ. ʻನಿಂಗೆ ಯಮ್ಮನೆ ಚಿಕ್ಕಿ ಸತ್ತುಹೋಗಿರೋ ವಿಷ್ಯ ಗೊತ್ತಿದ್ದಿಕ್ಕು. ಇವತ್ತು ಅದ್ರ ಆರನೇ ಮಾಸಿಕ. ಚಿಕ್ಕಿ ಹೋದ ಮಿತಿಗೆ ಪ್ರತಿ ತಿಂಗ್ಳೂ ಗೋಗ್ರಾಸ ಕೊಡ್ತಾ ಇದ್ಯ. ಯಂಗೆ ಬಹಳ ಹೊತ್ತು ಕೂರದು ಕಷ್ಟ, ಅದ್ಕೆ ಭಟ್ಟರನ್ನು ಕರದು ಮಾಸಿಕ ಮಾಡದಿಲ್ಲೆ, ಗೋಗ್ರಾಸ ಮಾತ್ರ ಕೊಡದುʼ ʻಓಹೋ! ಹಂಗಾದ್ರೆ ಅಕಸ್ಮಾತ್ತಾಗಿ ಬಂದ್ರೂ ಗಂಗತ್ತೆ ಪ್ರಸಾದ ಉಣ್ಣೋ ಅದೃಷ್ಟ ಯಂಗೆ ಸಿಕ್ತುʼ.
ಅಪರೂಪಕ್ಕೆ ಹೋಗಿದ್ದರಿಂದ ಊಟದ ನಂತರ ಒಂದಿಷ್ಟು ಸುದ್ದಿಯ ಪೊಟ್ಟಣ ಬಿಚ್ಚಿದ್ದಳು ಜಾನಕ್ಕ. ನನಗೆ ರಾಮಣ್ಣನಿಗಿಂತ ಅವಳಲ್ಲಿ ಸಲುಗೆ ಹೆಚ್ಚು. ನಾನು ಅವರ ಮನೆಗೆ ಹೋದಾಗಲೆಲ್ಲ ನನ್ನ ತಲೆಬಾಚುತ್ತಿದ್ದ ಜಾನಕ್ಕ ಒಡಹುಟ್ಟಿದ ತಂಗಿಯಂತೆ ಕಾಣುತ್ತಿದ್ದವಳು. ನನಗಿಂತ ಆರೇಳು ವರ್ಷಕ್ಕೆ ದೊಡ್ಡವಳಾದ ಅವಳೆಂದರೆ ನನಗೂ ಬಹಳ ಆತ್ಮೀಯತೆ. ಅವಳ ಮಕ್ಕಳಿಗೂ ನನ್ನ ಕಂಡರೆ ಇಷ್ಟ. ಈಗ ಅವಳ ಸೊಸೆಯೂ ನನ್ನನ್ನು ಮಾವನ ಸಂಬಂಧಿ ಎಂದು ಕಾಣದೆ ಬಂಧುವಂತೆ ಆತ್ಮೀಯವಾಗಿ ಕಾಣುತ್ತಿದ್ದಳು.
ಗಂಗತ್ತೆಯ ಬಗೆಗೆ ಜಾನಕ್ಕಳಿಂದ ಒಂದಿಷ್ಟು ವಿಷಯ ತಿಳಿಯಿತು. ಗಂಗತ್ತೆ ಸಾಯುವುದಕ್ಕಿಂತ ಕೆಲವು ದಿನಗಳ ಹಿಂದೆ ಅವಳನ್ನು ನೋಡಬೇಕು ಅಂತ ಅವಳ ಮಗಳ ಮನೆಗೆ ರಾಮಣ್ಣ, ಜಾನಕ್ಕ ಹೋಗಿದ್ದರಂತೆ. ತನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗುವಂತೆ ಜಾನಕ್ಕನನ್ನು ಬಹಳ ಕೇಳಿದಳಂತೆ. ಆದರೆ ಇವರು ಅವರನ್ನು ಕರೆತರಲಿಲ್ಲವಂತೆ. ʻಯಂಗೆ ಹುಷಾರಿರದು ಕಡಿಮೆ. ಪಾಪ ಅವ್ರನ್ನ ಕರ್ಕಂಡು ಬಂದ್ರೆ ಇಬ್ಬಿಬ್ಬರು ಮುದುಕರನ್ನು ನೋಡದು ಸೊಸಿಗೆ ಕಷ್ಟ. ಅದ್ಕೆ ಏನೂ ಮಾತಾಡದೆ ಸುಮ್ಮನೆ ಬಂದ್ಯʼ ಜಾನಕ್ಕ ಹೇಳಿದ ಮಾತು ತಪ್ಪು ಎನಿಸಲಿಲ್ಲ. ಗಂಗತ್ತೆ ಆ ಮನೆಯಿಂದ ಹೊರಬಿದ್ದು ಆಗಲೇ ಸುಮಾರು ಐವತ್ತು ವರ್ಷ ಕಳೆದಿತ್ತು. ಆದರೂ ಯಾಕೋ ಸಾಯುವ ಕಾಲದಲ್ಲಿ ತನ್ನ ಮನೆಗೆ ಹೋಗುವ ಹಂಬಲ ಆಗಿತ್ತೇ? ತೊಂಬತ್ತು ವರ್ಷಗಳ ಸುದೀರ್ಘ ಜೀವನ ಕಂಡವರು ಗಂಗತ್ತೆ.
ಒಂದು ವಾರ ಊರಿನಲ್ಲಿದ್ದು ಹಬ್ಬ ಮುಗಿಸಿ, ಹತ್ತಿರವಿದ್ದ ನೆಂಟರ ಮನೆಗಳಿಗೂ ಹೋಗಿ ವಾಪಸ್ಸು ಮನೆಗೆ ಬಂದ ಮೇಲೂ ಯಾಕೋ ಗಂಗತ್ತೆ ಕಾಡುತ್ತಲೇ ಇದ್ದರು. ನನಗಾಗ ಆರೋ ಏಳೋ ವರ್ಷಗಳು. ಅಮ್ಮನೊಂದಿಗೆ ಅವರ ಮನೆಗೆ ನಡೆದು ಹೋದ ನೆನಪು. ಮನೆತುಂಬ ಜನವೋ ಜನ. ಅಂದು ಅವರ ಮನೆಯಲ್ಲಿ ಯಾವುದೋ ವಿಶೇಷ ಪೂಜೆ. ನಾವು ಹೋದ ತುಸು ಹೊತ್ತಿನಲ್ಲಿ ನಮ್ಮನ್ನು ಕಂಡ ಗಂಗತ್ತೆ ʻರಾಜಿಮರಿನ ನಡೆಸಿಗ್ಯಂಡು ಬಂದ್ರಾ?ʼ ಎಂದು ಅಮ್ಮನ ಹತ್ತಿರ ಕೇಳುತ್ತಲೇ ನನ್ನ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿ ನನ್ನ ಕಾಲಿಗೆ ಅಮೃತಾಂಜನ, ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದ್ದರು. ಆಗ ನನಗೆ ಅವರು ಅಪರಿಚಿತರೇ. ಆದರೆ ಅಂದಿನ ಅವರ ನಡವಳಿಕೆಯನ್ನು ನನಗೆ ಮರೆಯಲು ಆಗಲೇ ಇಲ್ಲ. ಗಂಗತ್ತೆಯ ನೆನನಪಾದಾಗಲೆಲ್ಲ ಬಾಲಂಗೋಸಿಯಂತೆ ಹಲವು ದೃಶ್ಯಗಳು ಸುರುಳಿ ಬಿಚ್ಚುತ್ತವೆ.
ರಜೆಯಲ್ಲಿ ಅವರ ಮನೆಗೆ ಹೋಗುವುದು ರೂಢಿ. ನನಗೆ ಸುಮಾರು ಹನ್ನೆರಡು ವರ್ಷ ಇರಬಹುದು. ಜಾನಕ್ಕ ಪುಟ್ಟ ಮಗುವಿನ ತಾಯಿ. ಕೆಲವು ದಿವಸ ನನ್ನನ್ನು ಅವರ ಮನೆಗೆ ಕಳಿಸುವಂತೆ ರಾಮಣ್ಣ ಕೇಳಿದ್ದರಿಂದ ಅಮ್ಮ ನನ್ನನ್ನು ಕಳಿಸಿದ್ದಳು. ಆಗ ಅವರು ಮೂಲ ಮನೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿದ್ದರು. ಎರಡು ಮೂರು ದಿವಸ ಕಳೆದಿರಬಹುದು. ನಡುಮನೆಯಲ್ಲಿ ಒಂದು ಗೂಟಕ್ಕೆ ಚೀಲವೊಂದು ನೇತಾಡುತ್ತಿರುವುದು ಕಾಣಿಸಿತು. ಏನಿರಬಹುದು? ಎನ್ನುವ ಕುತೂಹಲ ನನಗೆ. ಒಂದು ಸೀರೆಯ ಸೆರಗೋ ಅಂಚೋ ಹೊರಗೆ ಇಣುಕುತ್ತಿತ್ತು. ಅಲ್ಲಿ ಓಡಾಡುವಾಗಲೆಲ್ಲ ನನ್ನ ಕಣ್ಣು ಆ ಕಡೆ ತಿರುಗುತ್ತಿತ್ತು. ಐದಾರು ದಿವಸದ ನಂತರ ಜಾನಕ್ಕನನ್ನು ಕೇಳಿದ್ದೆ. ʻಅದು ಯಾರ ಚೀಲ?ʼ ಎಂದು.
ʻಆ ಚೀಲವಾ? ನಿನ್ ಗಂಗತ್ತೆದುʼ ಎಂದು ಅಸಲಗ್ಗೆಯಿಂದ ಉತ್ತರಿಸಿದ್ದಳು.
ʻಒಂದು ಸೀರೆ ಇದ್ದಾಂಗೆ ಕಾಣುಸ್ತುʼ
ʻಹೂಂ ಎಲ್ಲೋ ಇತ್ತು. ಯಂಗಕ್ಕೆಂತಕ್ಕೆ ಅದ್ರ ಸೀರೆ. ಅದ್ಕೆ ಒಂದು ಚೀಲ್ದಲ್ಲಿ ಹಾಕಿ ನೇತಾಕಿದ್ಯ. ಅದ್ರ ಅಳಿಯನ ಹತ್ರ ಬಂದು ತಗಂಡು ಹೋಗು ಅಂದ್ರೆ ಆ ಮಹಾನುಭಾವಗೆ ಇನ್ನೂ ಪುರುಸೊತ್ತಾದಂಗೆ ಕಾಣೆʼ
ನನಗೆ ಏನೂ ಅರ್ಥವಾಗದ ವಯಸ್ಸು. ಈ ಮಾತು ನಡೆದು ಮೂರ್ನಾಕು ದಿನದಲ್ಲಿ ಅವರ ಮನೆಗೆ ಯಾರೋ ನೆಂಟರು ಬಂದಿದ್ದರು. ಅವರ ಮಾತುಗಳಿಂದ ನನಗೆ ಅರ್ಥವಾಗಿದ್ದು ಇಷ್ಟು. ಮಗಳ ಮದ್ವೆಯಾದ ಮೇಲೆ ಗಂಗಕ್ಕ ಮಗಳ ಮನೆ ಸೇರಿದ್ದರು. ಭಾವನ ಮಕ್ಕಳಿಬ್ಬರೂ ಹಿಸೆಯಾಗಲು ಮುಂದಾದಾಗ ಗಂಗತ್ತೆ ತನ್ನ ಮಗಳಿಗೆ ಬರಬೇಕಿದ್ದ ಪಾಲನ್ನು ಕೇಳಿದ್ದಳಂತೆ. ಯಾರದೋ ಮಧ್ಯಸ್ಥಿಕೆಯಲ್ಲಿ ಗಂಗತ್ತೆಗೆ ಜೀವನಾಂಶ ಎಂದು ಅಣ್ಣತಮ್ಮಂದಿರಿಬ್ಬರೂ ವರ್ಷಕ್ಕೆ ಇಂತಿಷ್ಟು ಕೊಡಬೇಕೆನ್ನುವ ಒಪ್ಪಂದ ಆಗಿತ್ತಂತೆ. ಅದು ಅವಳು ಮಾಡಿದ ಮಹಾಪರಾಧ ಎನ್ನುವಂತೆ ಅವಳ ಬಗೆಗೆ ಯಾರೇ ಕೇಳಿದರೂ ಮನೆಯವರು ಸಿಡುಕುತ್ತಿದ್ದುದನ್ನು ಗಮನಿಸಿದ್ದೆ.
ಕೆಲವು ದಿನಗಳ ನಂತರ ಬೇಸಿಗೆ ರಜೆಯಲ್ಲಿ ನಾನು ರಾಮಣ್ಣನ ಅಣ್ಣ ಸೀತಣ್ಣನ ಮನೆಗೆ ಹೋಗಿದ್ದೆ. ಅಲ್ಲಿಯೂ ನನಗೆ ಇಂತಹುದೇ ಅನುಭವವಾಗಿತ್ತು. ಗಂಗತ್ತೆ ಮತ್ತು ಸೀತಣ್ಣನ ಹೆಂಡತಿ ಜಯಕ್ಕ ಬಹಳ ವರ್ಷ ಒಟ್ಟುಕುಟುಂಬದಲ್ಲಿ ಇದ್ದವರು. ಅವರ ಮನೆಯಲ್ಲಿಯೂ ಗಂಗತ್ತೆಯ ಬಗೆಗೆ ಏನೇನೋ ಮಾತುಗಳು ಕೇಳಿಬಂದಿದ್ದವು. ಎಲ್ಲವೂ ಗಂಗತ್ತೆ ಮಗಳ ಮನೆಯಲ್ಲಿದ್ದು ತನಗೆ ಜೀವನಾಂಶ ಬೇಕೆಂದು ಕೇಳಿದುದರ ಸುತ್ತವೇ ತಿರುಗುತ್ತಿದ್ದವು.
ರಾಮಣ್ಣನಾಗಲಿ ಸೀತಣ್ಣನಾಗಲಿ ಅವರ ಚಿಕ್ಕಮ್ಮನ ಬಗೆಗೆ ಮಾತಾಡಿದುದನ್ನು ನಾನು ಕೇಳಿಸಿಕೊಂಡಿರಲಿಲ್ಲ. ಅವರ ಮನಸ್ಸು ಏನೆನ್ನುವುದು ನಮಗ್ಯಾರಿಗೂ ಅರ್ಥವಾಗಿರಲಿಲ್ಲ. ಹಾಗಂತ ತಮ್ಮ ಹೆಂಡತಿಯರು ಹೇಳುವ ಮಾತಿಗೆ ಪ್ರತಿಕ್ರಿಯಿಸಿದಂತೆ ನನಗೆ ಅನಿಸಿರಲಿಲ್ಲ. ನಮ್ಮ ಮನೆಗೆ ಗಂಗತ್ತೆ ಬಂದಿರುವ ನೆನಪಿಲ್ಲ. ʻಅಮ್ಮ ಗಂಗತ್ತೆ ಯಾಕೆ ನಮ್ಮನೆಗೆ ಬರದೇ ಇಲ್ಲೆʼ ಅಂತ ಒಮ್ಮೆ ಅಮ್ಮನನ್ನು ಕೇಳಿದ್ದೆ. ʻಏನ ಯಾರಿಗ್ಗೊತ್ತುʼ ಎಂದು ಅಮ್ಮ ಸಲೀಸಾಗಿ ಉತ್ತರಿಸಿದ್ದಳು. ಅಮ್ಮನ ಬಾಯಲ್ಲಿ ಗಂಗತ್ತೆಯ ಹೆಸರನ್ನು ಯಾವತ್ತೂ ಕೇಳಿರಲಿಲ್ಲ. ಹಾಗಂತ ಅಮ್ಮನಿಗೆ ಗಂಗತ್ತೆಯ ಗಂಡನ ಬಗೆಗೆ ಬಹಳ ಅಭಿಮಾನ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯಾವುದೋ ಮಹಾರೋಗವೊಂದು ದೇಶದಲ್ಲಿ ಬಹಳ ಜನರನ್ನು ಬಲಿಪಡೆದಿತ್ತಂತೆ. ಅವರಿಗೂ ಆ ರೋಗ ತಗುಲಿ ಸತ್ತಿರುವುದಾಗಿ ಅಮ್ಮ ಹೇಳಿರುವುದನ್ನು ನಾವೆಲ್ಲ ಕೇಳಿದ್ದೆವು. ಗಂಡ ಇದ್ದಕ್ಕಿದ್ದಂತೆ ಸತ್ತುಹೋದಾಗ ಗಂಗತ್ತೆಗೆ ಇಪ್ಪತ್ತೈದು ವರ್ಷಗಳಾಗಿದ್ದುವೇನೋ? ಗಂಗತ್ತೆಯ ತಂದೆ ಬದುಕಿದ್ದರಂತೆ. ಆದರೂ ಗಂಗತ್ತೆ ತವರಿಗೆ ಹೋಗದೆ, ಮೂರು ವರ್ಷದ ಮಗಳೊಂದಿಗೆ ಮಗಳ ಮದುವೆಯವರೆಗೆ ಗಂಡನ ಮನೆಯಲ್ಲಿಯೇ ಇದ್ದರು. ಅವರ ಗಂಡ ಸತ್ತುಹೋದ ಎರಡು ವರ್ಷದಲ್ಲಿಯೇ ಜಯಕ್ಕ ಸೊಸೆಯಾಗಿ ಬಂದವರು. ಸುಮಾರು ಹದಿನೈದು ವರ್ಷಗಳಷ್ಟು ಕಾಲ ಅವರಿಬ್ಬರೂ ಹೊಂದಿಕೊಂಡು ಇದ್ದವರು. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವರ ನಡುವೆ ವೈಮನಸ್ಯ ಬೆಳೆದುದಾಗಿ ತಿಳಿದುಬಂದಿತ್ತು.

ಬಹಳ ವರ್ಷಗಳ ನಂತರದಲ್ಲಿ ನನಗೆ ಜಾನಕ್ಕನ ಮನೆಗೆ ಹೋಗುವ ಅವಕಾಶ ಒದಗಿತ್ತು. ನಾನು ಊರಿಗೆ ಹೋಗಿರುವಾಗಲೇ ಅವರ ಮನೆಯಲ್ಲೊಂದು ಕಾರ್ಯಕ್ರಮ ಇದ್ದುದರ ಆಹ್ವಾನ ಬಂದಿತ್ತು. ಯಾವಾಗ ಅವರ ಮನೆಗೆ ಹೋಗುವ ಸನ್ನಿವೇಶ ಬಂದರೂ ನಾನು ಬಹಳ ಉತ್ಸಾಹದಿಂದ ಹೋಗುವವಳು. ಅಕ್ಕನೂ ಅಲ್ಲಿ ಸಿಕ್ಕುವುದಾಗಿ ಹೇಳಿದ್ದಳು. ನಾವಿಬ್ಬರೂ ಅವರ ಮನೆಗೆ ಹೋಗಿದ್ದೆವು. ಬಂಧುಬಳಗವೆಲ್ಲ ಸೇರಿದ್ದರು. ಎಷ್ಟೋ ವರ್ಷಗಳಿಂದ ಕಾಣದ ನೆಂಟರನ್ನು ಕಂಡ ಖುಶಿ ನಮಗೆ ದೊರೆತಿತ್ತು. ನಾವು ಹೋಗಿ ತುಸು ಹೊತ್ತಿನಲ್ಲಿ ʻಗಂಗಮ್ಮಮ್ಮ ಬಂತುʼ ಎಂದು ಯಾರೋ ಕೂಗಿದ್ದರು. ನನಗೂ ಅವರನ್ನು ನೋಡುವ ಕುತೂಹಲವಿತ್ತು. ಅಷ್ಟರಲ್ಲಿ ಗಂಗತ್ತೆ ಮನೆಯ ಒಳಗೆ ಬಂದಿದ್ದರು. ರಾಮಣ್ಣ ಅವರ ಕೈಹಿಡಿದು ಕರೆತಂದು ಅವರನ್ನು ಕುರ್ಚಿಯ ಮೇಲೆ ಕೂರಿಸಿದ್ದರು. ಸುಮಾರು ಎಂಬತ್ತೈದು ದಾಟಿದ ಆಕೆ ಬಳಲಿದಂತೆ ಕಂಡಿದ್ದರು. ಆದರೂ ಅವರ ಮುಖದಲ್ಲಿ ಸಂತೋಷ ಎದ್ದುಕಾಣುತ್ತಿತ್ತು. ಜಾನಕ್ಕ ಅವರ ಹತ್ತಿರ ಹೋಗಿ ʻಹುಷಾರ? ಕುಡಿಯಕ್ಕೆ ಯಂತ ಕೊಡ್ಲಿ?ʼ ಎಂದು ವಿಚಾರಿಸಿದ್ದಳು. ಜಾನಕ್ಕನ ಮಾತಿಗೆ ಗಂಗತ್ತೆ ಸ್ಪಂದಿಸಿದಂತೆ ಕಾಣಲಿಲ್ಲ. ಅವರ ಕಣ್ಣು ಯಾರನ್ನೋ ಅರಸುವಂತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಜಯಕ್ಕ ʻಸಣ್ಣತ್ತೆ ಹ್ಯಾಂಗಿದ್ದಿ?ʼ ಎನ್ನುತ್ತಿದ್ದಂತೆ ಅವರ ಕಣ್ಣಾಲಿಯಿಂದ ನೀರು ಧುಮುಕಿತ್ತು. ʻಜಯ ನೀನು ಹ್ಯಾಂಗಿದ್ದೆ?ʼ ಎಂದು ಅವರೂ ಜಯಕ್ಕನನ್ನು ಕೇಳಿದ್ದರು. ಏನನ್ನೂ ಹೇಳದೆ ಜಯಕ್ಕ ಅವರ ಕೈಹಿಡಿದು ಪಕ್ಕದಲ್ಲಿ ಕುಳಿತು ಕಣ್ಣೊರೆಸಿಕೊಂಡಿದ್ದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೆವು.
ಯಾಕೋ ಅವರ ಮನೆಯ ಕೆಲವು ಆಗುಹೋಗುಗಳಿಗೆ ನಾನು ಸಾಕ್ಷಿಯಾಗಿರುವಂತೆ ನನಗೆ ಅನಿಸಿದ್ದು ಸುಳ್ಳಲ್ಲ. ಮೊನ್ನೆಯ ಭೇಟಿಯ ನಂತರದಲ್ಲಿ ಯಾಕೋ ಗಂಗತ್ತೆ ಬಹಳವಾಗಿ ನೆನಪಾಗುತ್ತಿದ್ದಾರೆ. ಅಷ್ಟು ವರ್ಷ ಮನೆಯಿಂದ ದೂರವಿದ್ದ ಅವರಿಗೆ ಕೊನೆಗಾಲಕ್ಕೆ ಮತ್ತೆ ಆ ಮನೆಗೆ ಬರಬೇಕು ಅನಿಸಿದ್ದು ಯಾಕೆ? ಮನೆಯವರು ಒಪ್ಪದಿರುವುದರಿಂದ ಅವರಿಗೆ ಆ ಮನೆಗೆ ಬರುವ ಅವಕಾಶ ದೊರಕಿರಲಿಲ್ಲ. ಆದರೆ ಅವರ ಸಾವು ರಾಮಣ್ಣನನ್ನು ವಿಚಲಿತಗೊಳಿಸಿತೇ? ಸಾವಿನ ಸುದ್ದಿ ತಿಳಿದಿದ್ದೆ ರಾಮಣ್ಣ ಜಾನಕ್ಕ ಅಲ್ಲಿಗೆ ಧಾವಿಸಿದ್ದರಂತೆ. ಅಷ್ಟೆ ಅಲ್ಲ ಎಲ್ಲ ಕ್ರಿಯೆಯನ್ನು ರಾಮಣ್ಣ ತಾವೇ ಮುಂದಾಗಿ ನೆರವೇರಿಸಿದ್ದರಂತೆ. ಅಪರ ಕರ್ಮಗಳನ್ನು ಮಾತ್ರ ಮಾಡಿ ಮುಗಿಸಿರಲಿಲ್ಲ. ಅವರ ತಿಂಗಳ ಮಾಸಿಕವನ್ನೂ ಮಾಡುತ್ತಿದ್ದರು.
*****
ಆವತ್ತು ಬಹಳ ಬೇಸರವೆಂದು ಸುಮ್ಮನೆ ಕುಳಿತಿದ್ದೆ. ಅಷ್ಟರಲ್ಲಿ ಮನೆಯ ದೂರವಾಣಿ ಸದ್ದು ಮಾಡಿತ್ತು. ಒಲ್ಲದ ಮನಸ್ಸಿನಿಂದ ಎತ್ತಿದೆ. ʻಯಾರು ಚಿಕ್ಕಿನಾ? ಅಪ್ಪ ಹೋಗಿಬಿಟ್ಟ. ಈಗ ಊರಿಗೆ ಹೊರಟಿದ್ದಿʼ ಎನ್ನುತ್ತ ಅವರ ಮಗಳು ಸುಮಿತ್ರೆ ಫೋನಿನಲ್ಲಿ ಹೇಳಿದಾಗ ವಿಷಯವನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಏನು ಮಾಡಲೂ ತೋಚದೆ ಒಂದು ಕ್ಷಣ ಸುಮ್ಮನೆ ಕುಕ್ಕರಿಸಿದ್ದೆ. ನಿಧಾನವಾಗಿ ಯೋಚಿಸಿದಾಗ ಇಷ್ಟು ದೂರದಿಂದ ನಾನು ಅವರ ಮನೆಗೆ ಹೋಗುವಷ್ಟರಲ್ಲಿ ಎಲ್ಲವೂ ಮುಗಿದಿರುತ್ತದೆ ಎನ್ನುವುದು ಗಮನಕ್ಕೆ ಬಂತು. ಇನ್ನೊಮ್ಮೆ ಊರಿಗೆ ಹೋಗುವಾಗ ಅವರ ಮನೆಗೆ ಹೋಗುವುದೇ ಸರಿಯಾದ್ದು ಎಂದು ಆಲೋಚಿಸಿದೆ. ನಾಲ್ಕೈದು ದಿನ ರಾಮಣ್ಣನ ನೆನಪು ಕಾಡಿತು. ಯಾವಾಗ ಅವರ ಭೇಟಿಯಾದರೂ ಎಷ್ಟೊಂದು ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದರು. ಇನ್ನು ಅವರು ಬರಿ ನೆನಪು ಅಷ್ಟೆ.
‘ಬೆಳಿಗ್ಗೆ ಬೇಗ ಮನಿಂದ ಹೊರಟಾಜು. ಎಲ್ಲೂ ಹೆಚ್ಗೆ ಹೊತ್ತು ಸುದ್ದಿ ಹೇಳದೆ ಆದಷ್ಟು ಬೇಗ ಕರೆಯ ಮುಗಸವ್ವು’ ಅಂತ ಮನೆಯಿಂದ ಹೊರಡುವಾಗ ನಮ್ಮನೆಯವರು ಹೇಳಿದ್ದೇನ ಹೌದು. ಆದರೆ ರಾಮಣ್ಣನ ಮನೆಗೆ ಹೋದಾಗ ಅದೆಲ್ಲ ಉಲ್ಟಾ ಆಗಿತ್ತು. ಈಗಿನ ಹಾಗೇ ಎಲ್ಲರ ಮನೆಯಲ್ಲೂ ಫೋನ್ ಇದ್ದ ಕಾಲ ಅಲ್ಲ. ನಾವು ಅವರ ಮನೆಗೆ ಹೋಗುವಷ್ಟರಲ್ಲಿ ರಾಮಣ್ಣ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೊರಟಿದ್ದರು. ನಮ್ಮನ್ನು ಕಂಡವರೇ ಕತ್ತಿಯನ್ನು ಅಲ್ಲೇ ಇಟ್ಟು ನಮ್ಮೊಂದಿಗೆ ಸುದ್ದಿ ಶುರುಮಾಡಿದ್ದರು. ತುಸು ಹೊತ್ತಿನ ನಂತರ ‘ಮಾತಾಡ್ತಾ ಇರಿ, ಈಗ ಬಂದಿ’ ಅಂತ ಹೇಳಿದವರೇ ಸ್ನಾನ ಮಾಡಿ ಬಂದು ಪೂಜೆ ಮುಗಿಸಿ ನಮಗೆಲ್ಲ ದೇವರ ಪ್ರಸಾದವನ್ನು ಆಶೀರ್ವಾದ ಎಂದು ಕೊಟ್ಟಿದ್ದರು. ಅಷ್ಟರಲ್ಲಿ ಜಾನಕ್ಕ ಶಿರಾ ಮಾಡಿ ಬಾಳೆಹಾಕಿದ್ದಳು. ನಾವೆಲ್ಲ ತಿಂದು ಅವರಿಗೆ ಮಗನ ಮದುವೆಯ ಆಹ್ವಾನ ಪತ್ರಿಕೆಯನ್ನು ಕೊಟ್ಟು ಹೊರಡುವ ಅವಸರದಲ್ಲಿದ್ದೆವು. ಆಗ ರಾಮಣ್ಣ ಹೇಳಿದ ಮಾತು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಮೂಡಿದ್ದು ಸುಳ್ಳಲ್ಲ. ‘ಮದುವೆಗೆ ಅಂತ ಕರೆಯಕ್ ಬಂದು ಅರ್ಜೆಂಟಲ್ಲಿ ಹೋಗಕ್ಕೆ ಹ್ಯಾಂಗೆ ಸಾಧ್ಯ? ಇದು ನಿಮ್ಮಮ್ಮನ ಮೂಲ ಮನೆ. ಇಲ್ಲಿ ದೇವರ ಆಶೀರ್ವಾದ ಪಡೆದೇ ಮಂಗಲ ಕಾರ್ಯ ಮಾಡವ್ವು, ಹಾಗಾಗಿ ಎಲ್ಲರಿಗೂ ಒಳ್ಳೆಯದಾಗಲಿ ಕಾರ್ಯ ಸುಸೂತ್ರವಾಗಿ ನೆರವೇರಲಿ’ ಅಂತ ಹೇಳಿದ್ದರು. ಅಷ್ಟೇ ಅಲ್ಲ ಗಂಡ ಹೆಂಡತಿ ನಮ್ಮನೆ ಮದುವೆಗೆ ಬಂದು ಎಲ್ಲ ಕಡೆ ಓಡಾಡಿ ಸಂತೋಷಪಟ್ಟಿದ್ದರು. ರಾಮಣ್ಣ ಹಾಗೆಯೇ, ನಮ್ಮೆಲ್ಲರನ್ನು ಕಂಡರೆ ಎಷ್ಟೊಂದು ಪ್ರೀತಿ ವಿಶ್ವಾಸ. ನಮಗೂ ರಾಮಣ್ಣ ಅಂದರೆ ಅಭಿಮಾನ.
ಅಂದುಕೊಂಡಂತೆ ಅವರ ಮನೆಗೆ ಹೋಗಲು ಆಗಲಿಲ್ಲ. ಯಾವುದೋ ಸಮಾರಂಭದಲ್ಲಿ ಅವರ ಮಗ ಸಿಕ್ಕಿದ್ದ. ರಾಮಣ್ಣನ ಬಗ್ಗೆ ನನಗೆ ತಿಳಿಯಬೇಕಿತ್ತು. ಅವನನ್ನು ಒಂದೆಡೆ ಕರೆದೊಯ್ದು ಮಾತನಾಡಿದೆ. ʻಆ ವಿಷ್ಯ ಇಲ್ಲಿ ಬ್ಯಾಡ. ನಮ್ಮನೆ ಬರಿ ಇಪ್ಪತ್ತೈದು ಕಿಲೋಮೀಟರ್. ರಸ್ತೆ ಚೆನಾಗಿದ್ದು. ಸಂಜೆಹೊತ್ತಿಗೆ ಕರ್ಕಂಡು ಬಂದು ಬಿಡ್ತಿ. ನಮ್ಮನಿಗೆ ಹೋಪನʼ ಅಂತ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದ. ರಾಮಣ್ಣನ ಸಾವಿನ ನಂತರದಲ್ಲಿ ಮೊದಲ ಬಾರಿಗೆ ಅವರ ಮನೆಗೆ ಹೋಗಿದ್ದೆ. ರಾಮಣ್ಣನ ನೆನಪು ಕಾಡಿತು. ಗಂಡನ ಸಾವನ್ನು ಜಾನಕ್ಕನಿಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ ಎನಿಸಿತು. ಬಹಳ ಬಳಲಿದ್ದಳು. ಅವಳ ಬಳಿಯಲ್ಲಿ ಕುಳಿತು ಮಾತನಾಡಿಸಿದೆ. ʻನೀನು ಹಿಂದಿನ ಸರಿ ಬಂದಾಗ ಚೆನ್ನಾಗಿದ್ದ ನಿನ್ನ ರಾಮಣ್ಣ ಕಡಿಕಡಿಗೆ ಒಂತರಾ ಮಾಡ್ತಿದ್ದಿದ್ದʼ ಎಂದಳು ಜಾನಕ್ಕ.
ʻಅಂದ್ರೆ? ಯಂಗೆ ಅರ್ಥಾಗಲ್ಲೆʼ
ʻನೀನು ಬಂದಾಗ ಶಣ್ಣತ್ತೆ ಆರ್ತಿಂಗ್ಳು ಮಾಸಿಕ ಅವತ್ತು. ಅದಾಗಿ ಮೂರ್ನಾಕು ದಿವ್ಸಕ್ಕೆ ಅತ್ತೆ ಮೊಮ್ಮಗ ಇಲ್ಲಿಗೆ ಬಂದಿದ್ದ. ‘ಅಜ್ಜಿ ನಿಂಗೆ ಕೊಡು ಅಂತ ಒಂದು ಬ್ಯಾಗು ಕೊಟ್ಟಿತ್ತು. ಅದ್ನ ಎಲ್ಲೋ ಇಟ್ಟಿದ್ದಿ, ಮರ್ತುಹೋಗಿತ್ತು. ಮೊನ್ನೆ ಸಿಕ್ತತ್ಯು, ಕೊಟ್ಟಿಕ್ಕಿ ಹೋಪನ ಅಂತ ಬಂದಿʼ ಅಂತ ಅವರ ಕೈಗೆ ಒಂದು ಚೀಲ ಕೊಟ್ಟಿಕ್ಕಿ ಹೋದ. ಅದ್ನ ತೆಗೆದು ನೋಡಿದೋರು ಗೋಳೋ ಅಂತ ಅತ್ತಿದ್ದು ನೋಡಿ ಯಂಗಕ್ಕೆಲ್ಲ ಗಾಬರಿʼ
ʻಅಯ್ಯೋ! ಅದ್ರಲ್ಲಿ ಯಂತ ಇತ್ತು?ʼ
ʻಅದ್ರೊಳಗೆ ಅದ್ರ ಮಾಸಾಶನದ ಸರ್ಟಿಪಿಕೇಟ್ ಇತ್ತುʼ
ʻಗಂಗತ್ತೆಗೆ ಯಂತ ಮಾಸಾಶನ ಬರ್ತಿತ್ತು?ʼ
ʻಶಣ್ಣ ಮಾವ ಸ್ವಾತಂತ್ರ್ಯ ಚಳವಳಿಲ್ಲಿ ಭಾಗವಹಿಸಿದ್ನಡ. ಸುಮಾರು ಅರವತ್ತು ವರ್ಷದಿಂದ ಅದ್ಕೆ ಸ್ವಾತಂತ್ರ್ಯಯೋಧನ ಪತ್ನಿ ಅಂತ ಮಾಸಾಶನ ಬರ್ತಿತ್ತು.ʼ
ʻಸರಿ. ಅದನ್ನ ಯಂತಕ್ಕೆ ಇಲ್ಲಿಗೆ ಕಳುಸ್ತೇನ?ʼ
ʻಏನ ಯಂಗೂ ಗೊತ್ತಾಗಲ್ಲೆ. ಆದ್ರೆ ನಿನ್ ರಾಮಣ್ಣ ಅವತ್ನಿಂದ ಯಾಕೋ ಮಾತಾಡದನ್ನ ಕಡಿಮೆ ಮಾಡ್ತಾ ಬಂದಿದ್ವಪ. ಆ ಅತ್ತೆ ಮಲಗ್ತಿದ್ದ ಮಂಚಕ್ಕೆ ಮಲಗಲೆ ಶುರುಮಾಡಿದ್ದಲ್ದೆ ಸಾಯ ದಿವಸನೂ ಅಲ್ಲೇ ಮಲಗಿದ್ದಿದ್ದʼ
ಜಾನಕ್ಕನ ಮಾತು ಕಿವಿ ಮೇಲೆ ಬೀಳ್ತಾ ಇತ್ತು. ರಾಮಣ್ಣ ಮನೆಯನ್ನೆಲ್ಲ ಆವರಿಸಿ ಹೊಸಿಲು ದಾಟಿ ಊರು ಕೇರಿ ಎಲ್ಲ ವ್ಯಾಪಿಸಿ ಬೆಳೆಯುತ್ತಲೇ…….
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.