ಅಗೋಚರ
ತಣ್ಣನೆಯ ಗಾಳಿ ಬೀಸಿ ನೆಲಮಲಗಿತ್ತು
ಕತ್ತಲೆಯು ಕತ್ತಲೆಗೆ ಸರಿದು
ಆಗಸಕೆ ರೋಮಾಂಚನವ ಕೊಡುವಂತೆ
ಇಂದು ಬರುತ್ತಿದ್ದ ತಾನಿರುವೆನಿಂದು
ಹಕ್ಕಿಗಳ ಗೂಡಿನಲ್ಲಿ ನಿದ್ದೆ ಮಗು ಮಲಗಿತ್ತು
ಚಿಲಿಪಿಲಿಯ ಹಾಡುಗಳ ಗಂಟುಕಟ್ಟಿ
ಹಸಿರು ಗರಿಕೆಯು ತನ್ನ ಮೈಮನಸುಗಳ ಮುಚ್ಚಿ
ತೇಲುಗಣ್ಣಲ್ಲಿತ್ತು ಬೆಳಕಿಗಾಗಿ
ಮರಗಿಡಗಳ ಚಿಗುರು ಚಿಗುರಲಿಕೆ ಕಾತರಿಸಿ
ನಳನಳಿಸಲು ಕಾಯುತ್ತಿತ್ತು ಹಗಲ
ಕಾಯಿ ಮಾಗಲು, ಮಾಗಿದವು ತೊಟ್ಟು ಕಳಚಲು
ತವತವಕಿಸುವಂತಿತ್ತು ತೆರೆದು ಮನವ
ಕುಳಿತಿದ್ದೆ ಅಂಗಳದಲ್ಲಿ ಧ್ಯಾನಿಸುತ ಕವಿತೆಯನು
ಆಗ ಬಡಿದಂತಾಯಿತು ಕಾಲಿಂಗು ಬೆಲ್ಲು
ನನ್ನ ಧಿಕ್ಕರಿಸಿ ಮುಂದೆ ಹೋದವರಾರು? ಗಡಿಬಿಡಿಯ
ಲೆದ್ದು ನೋಡಿದರಿಲ್ಲ ಅಲ್ಲಿ ಯಾರೂ!
ಆತಂಕ ತಲ್ಲಣದಲ್ಲಿ ಒಳನಡೆದು ಕೇಳಿದೆನು
‘ಒಳಗೆ ಬಂದಿರುವರೇ ನಮ್ಮ ಪರಿಚಿತರು?’
ಇವಳು ಹೇಳಿದಳು ‘ಈ ಹೊತ್ತಲೂ ಕನಸೇ?
ನೀವು ನೋಡಿರಲಿಲ್ಲವೇ ಹೊರಗೆ ಕುಳಿತು?’
‘ಹೌದಲ್ಲ’ ಎಂದು ಮರಳಿಬಂದೆನು ಮೊದಲು
ಕುಳಿತಲ್ಲಿಗೇ. ಆಗ ಬಂದವರು ಯಾರು?
ಎಂದುಕೊಂಡರೆ ‘ಯಾರಿಲ್ಲಿಗೆ ಬಂದರು ಕಳೆದಿರುಳು?’
ಎನ್ನುವುದೆ? ಅಥವಾ ಕೊರೋನಾವೇ?
ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ