Advertisement
ಡಾ. ನಿಂಗಪ್ಪ ಮುದೇನೂರು ಬರೆದ ಯುಗಾದಿ ಕವಿತೆ

ಡಾ. ನಿಂಗಪ್ಪ ಮುದೇನೂರು ಬರೆದ ಯುಗಾದಿ ಕವಿತೆ

ಯುಗಾದಿ ಮತ್ತು ಅವ್ವನ ನೆನಪು

ಪ್ರತೀ ಯುಗಾದಿ ಹಬ್ಬದಂದು ನನ್ನವ್ವ
ಅಂಗಾಲಿನಿಂದ ಹಿಡಿದು ಮೈಕೈ ನೆತ್ತಿಯವರೆಗೂ
ಬೇವಿನೆಲೆಯ ಕಾದ ಕಂಪು ಕೊಬ್ರೆಣ್ಣಿಯ ಹಚ್ಚಿ ಬರೀ ಮೈಯಲ್ಲೇ ಅಂಗಳದ ಬಿಸಿಲಿಗೆ ಓಡಿಸುತ್ತಿದ್ದಳು!

ದೇಹ ಮನಸ್ಸೆಲ್ಲಾ ಎಣ್ಣೆ ಹಿಂಗಿ
ಬಿಸಿಲು ಬೆವರು ಕೂಡಿ ನಲಿದ ಮೇಲೆ
ಅವ್ವ, ಬೇವಿನ ಎಲೆ ಬಿಸಿನೀರ ಸಾಂಗತ್ಯದಲಿ
ಸೋಪಿಲ್ಲದೆ ಸ್ನಾನಮಾಡಿಸಿ
ಹಳೆಯದೋ ಹೊಸದೋ ಬಟ್ಟೆತೊಡಿಸಿ
ಮಕ್ಕಳಿಗೆ ಹಬ್ಬವಾಗುತ್ತಿದ್ದಳು

ಈಗ ಆ ಅವ್ವನ ಸುಖವೆಲ್ಲಿ!?

ಅವ್ವನ ಯುಗಾದಿ ಎಂದರೆ_
ಬಸಿದ ಹೊಸ ಶ್ಯಾವಿಗೆ
ಬೆಲ್ಲ ಹಾಲು ತುಪ್ಪ
ಮರುದಿನ ಹೋಳಿಗೆ, ನವಣೆ ಕಿಚಡಿ
ಕಟ್ಸಾರು
ನೆಂಜಿಕೊಳ್ಳಲು ಹೋಳು ಬದನೆ ಪಲ್ಯೆ

ಮಾಳಿಗೆ ಮ್ಯಾಲೆ ಹಾಕಿದ
ಪಂಜೆ, ಸೀರೆಗಂಟಿದ ಶೆಂಡಿಗೆ
ಕರಿದ ಹಪ್ಪಳ
ಸಣ್ಣ ಜಾಡಿಯ
ಕಳಿತ ಕಂಪು ಮಾವಿನ
ಉಪ್ಪಿನ ಕಾಯಿ
ಅವ್ವನ ಯುಗಾದಿಯೆಂಬೋ
ಯುಗಾದಿ!

ಬಾಯೆಲ್ಲಾ ಬರೀ ಸಿಹಿಯಿದ್ದಾಗ
ಯುಗಾದಿ ಕಳೆದು ಕರಿಯ ಆರಂಭ
ಅಲ್ಲಿಯೂ ಅವಳದೇ ಪಾತ್ರ
ಪುಟ್ಟ ಪಾಲು ಹಾಕಿದ ಆಡು, ಕುರಿ, ಓತ, ಟಗರಿನದೋ
ಮಾಂಸ ತಂದು
ಒಣ ಕೊಬ್ಬರಿ, ಯಾಲಕ್ಕಿ, ಚೆಕ್ಕಿ, ಶುಂಠಿ, ಅವಿಜಗಳ
ಒಣಖಾರಾ, ಬೆಳ್ಳುಳ್ಳಿ, ಕರಿದ ಈರುಳ್ಳಿ
ರುಚಿ ಉಪ್ಪುಬೆರೆತ ಒರಳಲ್ಲಿ ರುಬ್ಬಿದ ಗುಂಡು ಮಸಾಲೆ
ಎಲ್ಲವೂ ಅವಳ ಕೈಮನವ ಸುಗಂಧವಾಗಿಸಿ
ಅಲ್ಪಪ್ರಾಣದೆಣ್ಣೆಯಲಿ ಒಂದೇ ಸವನೆ ಬೇಯುತ್ತಿದ್ದರೆ
ಮನೆ ಅಂಗಳ ಓಣಿಯೆಲ್ಲಾ ಕಂಪೋ
ಕಂಪು!

ಇಲ್ಲಿ ಕುರಿ, ಅಲ್ಲಿ ಕೋಳಿ
ಇನ್ನೆಲ್ಲೋ ಕೆರೆಯ ಮುಳ್ಳುಮೀನು
ಊರಿಗೆ ಊರೇ ಹಬ್ಬ
ಈ ಭಾಗ್ಯವಿಲ್ಲದವರಿಗೆ
ಹೋಳಿಗೆ ಹೂರಣವೇ ಸೌಭಾಗ್ಯ!!

ಚೆಂಡಾಟ, ಚಿಣ್ಣಿಕೋಲು, ಬಗರೆಯಾಟ
ಮರಕೋತಿ, ಕಪ್ಪೆ, ಲಿಂಬೆಹಣ್ಣು, ವಟ್ಟಪ್ಪಿನಾಟ
ದುಂಡುಗಲ್ಲಿನ ಪೌರುಷ, ಹೆಣ್ಣುಮಕ್ಕಳ ಕೊಬ್ರಿ ಆಟ,
ಕುಂಟಾಬಿಲ್ಲೆ
ಬಳೆಚೂರು ಕೂಡಿದ ಚಾವಿಮನೆ, ದಾಳವಾದ ಕವಡೆ- ಹುಣುಸೇ ಬೀಜ
ಓಣಿತುಂಬೆಲ್ಲಾ ಗೋಲಿಯಾಟ
ಇನ್ನೆಲ್ಲೋ ಭಜನೆ ಕೋಲಾಟ
ಸಣ್ಣಾಟ

ಬದುಕೆಂದರೆ ಹೀಗೇ ಒಟ್ಟುಗೂಡಿ ಹಬ್ಬವಾಗುವುದು
ಅವ್ವ ಬಿಟ್ಟುಹೋದ ನೆನಪಲ್ಲೇ
ನಾನು-
ನಮ್ಮಂಥವರು
ಅವ್ವ ಅಪ್ಪನ ಜೊತೆಗಿದ್ದವರು
ತೇರಾಗುವುದು
ಮಣ್ಣ ಮಮತೆಯ ಬೇರಾಗುವುದು.

About The Author

ಡಾ.ನಿಂಗಪ್ಪ ಮುದೇನೂರು

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದವರು ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’  ‘ಸೊಂಡೂರು ಕುಮಾರಸ್ವಾಮಿ’, ‘ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು’ ಅವರ ಸಂಶೋಧನಾ ಕೃತಿಗಳು. ‘ಬಿಚ್ಚುಗತ್ತಿಯ ಎದೆಯಲ್ಲಿ’ ಅವರ ನಾಟಕ ಕೃತಿ. ‘ಕಾಡಿನ ಕೊಳಲಿಗೆ ನಾಡಿನ ಸ್ವರ’ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.

1 Comment

  1. ಅಜೀತ ಪಾತ್ರೋಟ

    ಈ ಕವಿತೆಯೇ ಓದುಗರಿಗೆ ಹಬ್ಬ ಮಾಡಿಸುವುದು
    ನೆನಪುಗಳ ಮರಿ ಹಾಕಿಸುವುದಂತು ನಿಜ

    ಅಮ್ಮ ನೆನಪಾಗುತ್ತಾಳೆ
    ಈ ಕವಿತೆ ಓದಿದಾಗ
    ಹಬ್ಬಕ್ಕೆ ಹಬ್ಬದ ಮೆರಗು ನೀಡಿದಾಕಿ
    ನಮಗೆಲ್ಲ ಉಣಿಸಿ ತಣಿಸಿದಾಕಿ
    ಅಮ್ಮನ ಕೈ ರುಚಿಯ ಗಮ
    ನೆನಪಿನಲ್ಲು ಬಾಯ ನೀರು ಬಿಡಿಸುವುದು
    ಆಡಿದ ಆಟಾ ಉಟದ ನೆನಪುಗಳ ಗರಿ ಬಿಚ್ಚುವುದು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ