ಕಳೆದುಹೋದ ಕೀಲಿಕೈ

ಕೀಲಿ ಕೈಯೊಂದು ಕಳೆದುಹೋಗಿದೆ
ಅವಳ ಅಲಮಾರಿನದ್ದು
ಹುಡುಕುತ್ತಿದ್ದಾಳೆ ಬಹು ದಿನಗಳಿಂದ
ನೆನಪೇ ಆಗುತ್ತಿಲ್ಲ
ಕಳೆದುಕೊಂಡದ್ದು ಎಲ್ಲಿ ಎಂದು

ಎಷ್ಟೊಂದು ಜತನದಿಂದ ಕಾಪಿಟ್ಟಿದ್ದಳು
ಅಲಮಾರಿನಲ್ಲಿ ತನ್ನದೆಲ್ಲವನ್ನು…
ಸದಾ ಕಾಲ ಬೆಚ್ಚಗಿಡುತ್ತಿದ್ದ
ತನ್ನವನ ಮೈ ಬಿಸುಪು
ಬಟ್ಟಲು ತುಂಬಿ ತುಳುಕುತ್ತಿದ್ದ
ಅವನ ಒಲವು

ತನ್ನ ಚಿತ್ರವನ್ನಷ್ಟೇ ಪ್ರತಿಬಿಂಬಿಸುತ್ತಿದ್ದ
ಆ ಮಾಯಾವಿ ಕಣ್ಣುಗಳು
ಬೇಕೆಂದಾಗಲೆಲ್ಲ ಸಿಗುತ್ತಿದ್ದ
ಪ್ರಿಯ ತೋಳಬಂದಿ
ಕೊಟ್ಟು ಪಡೆದುಕೊಂಡು
ಪೋಣಿಸಿಟ್ಟ ಮುತ್ತು

ಪರಿಧಿಯೇ ಇಲ್ಲದ ಸುಖವನ್ನು
ಬಾಚಿ ಬಾಚಿ ಇಸಿದುಕೊಂಡ
ಅಮೃತ ಗಳಿಗೆ
ಎಲ್ಲ ನೋವುಗಳನ್ನೂ ಮರೆಸಿದ
ಗೆಳೆತನದ ಗುಳಿಗೆ

ದೇಹದ ಇಂಚಿಂಚನ್ನೂ ಆವರಿಸಿದ
ಅವನ ಹೂ ನಗು
ಬಳಿ ಸಾರಿ ರಮಿಸಲೆಂದೇ
ತನ್ನ ಕಣ್ಣಲ್ಲಿ ಹರಿಯುತ್ತಿದ್ದ ನದಿ
ಬೆಳದಿಂಗಳಿರುಳಲ್ಲಿ ಕೂತು
ಹೊಳೆಯುವ ನಕ್ಷತ್ರಗಳನ್ನು ನೋಡುತ್ತಾ
ಕಂಡ ಸಾವಿರಾರು ಹೊಂಗನಸು

ಒಳಗೊಳಗೇ ಉರಿಸಿದ
ವಿರಹದ ಬೇಗುದಿ
ಮನದ ಹೊಸ್ತಿಲಲ್ಲಿ ಒಬ್ಬಂಟಿಯಾಗಿ
ಕುಳಿತು ಬಿಟ್ಟ ನಿಟ್ಟುಸಿರು
ಅಂಗಳ ದಾಟಿ ಹೊರಹೋಗದ ಬಿಕ್ಕಳಿಕೆ

ತಾವಿಬ್ಬರು ಹಾಗೆಲ್ಲ
ಜೊತೆಯಲ್ಲೇ ಬದುಕಿದ್ದೆವು
ಎಂಬುದಕ್ಕೆ ಇದ್ದೆಲ್ಲಾ ಪುರಾವೆಗಳು
ಭದ್ರವಾಗಿ ಕುಳಿತಿವೆ
ಅಲಮಾರಿನೊಳಗೆ

ಕಳೆದುಕೊಂಡಲ್ಲೇ ಹುಡುಕಬೇಕೆಂದು
ಗೊತ್ತಿಲ್ಲದ್ದೇನಲ್ಲ
ಆದರೂ ಹುಡುಕುತ್ತಿದ್ದಾಳೆ
ಹುಡುಕುತ್ತಲೇ ಇರುತ್ತಾಳೆ
ಎಂದಾದರೊಂದು ದಿನ
ಸಿಗಬಹುದೆಂಬ ಒಂದೇ ಒಂದು
ನಿರೀಕ್ಷೆಯಿಂದ…

ಡಾ. ಪ್ರೀತಿ ಕೆ. ಎ. ಬೆಂಗಳೂರಿನವರು
ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರೆ.
ಕರ್ನಾಟಕ ಆರ್ಥಿಕತೆಯ ಬಗ್ಗೆ ಪುಸ್ತಕ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.