ಕವಿತ್ವ ಕಾಯುವುದಿಲ್ಲ…

ಕವಿತ್ವ ಕಾಯುವುದಿಲ್ಲ
ಒಳ್ಳೆಯದರತ್ತ ಒಯ್ಯುವುದಿಲ್ಲ
ಎಂದು ಬಾರಿ, ಬಾರಿ
ಕೇಳಿದ್ದರೂ
ಮಿಡಿಯುತ್ತಿದ್ದ ಎಳೆಯ ತುಡಿತಕ್ಕೆ
ಚಡಪಡಿಸುತ್ತ ಕೆಡುಕಿನೆಡೆಗೆ
ನಡೆವುದೇ ಲೇಸೆಂದು
ಬಡಿಯುತ್ತಿದ್ದ ಹೃದಯದ ಕಾವಿಗೆ
ಕರಗಿ ಅರೆ ಕ್ಷಣ ಇರುವ
ಮರೆಯಲೇ ಬೇಕೆಂದು
ಕೇಳಿದ್ದು ಕವಿತ್ವವೇ
ಬರೆದದ್ದು ಕವಿತೆಯೇ
ಎಂಬ ಬೆರಗಲ್ಲಿ ಅರಗಿನಂತೆ
ಕರಗಿದ್ದು ಇದರಾಚೆಗೂ
ಬೆಳಕಿದೆಯೆಂದರೆ ದೇವರಾಣೆಗೂ
ನಂಬದಿದ್ದುದೇ ನಿಜ
ಹೊಂದುವ ಜೊತೆ ಸಿಕ್ಕಂತೆ
ತಡಕಿದ ಕವನಗಳಲ್ಲಿ
ಕೆಲವನ್ನು ಬಿಗಿದಪ್ಪಿ
ಮತ್ತೆ ಮತ್ತೆ ಕನವರಿಸಿ
ಕವಿತೆ ಹುಟ್ಟುವ, ಹಾರ ಕಟ್ಟುವ
ಮರುಳಿಗೆ ಮನಸ್ಸು ನೀಡಿ
ಜಗ ಮರೆಯಲಿಲ್ಲವೆಂದರೆ ಮಿಥ್ಯ
ಮೈ ಮನಗಳ ಬಿಚ್ಚಿಟ್ಟು
ನಗ್ನವಾಗಿದ್ದೇ ಸತ್ಯ
ಮೊದಲ ಕವಿತೆಯ ರೋಮಾಂಚನ
ಮತ್ತೊಂದರ ಹೂ ಸಿಂಚನ
ಕನಸು, ಪ್ರೀತಿ ಪ್ರೇಮ- ಒಲವು
ಮುನಿಸು, ಒಡಲಾಳ, ಮರುಳು,
ನಿನ್ನೆಯ ಬೂದಿಗಳ ಇಂದಿನ ಕಣ್ಣಲ್ಲಿ
ಹಿಡಿದಿಟ್ಟು, ನಾಳೆಯ ಬೆರಗಿಗೆ
ಬಾಯಲಿ ಬೆರಳಿಟ್ಟು
ಮುಚ್ಚಿದ ಕಿಟಕಿಗಳ ತೆರದಿಟ್ಟು
ತೆರೆದ ಬಾಗಿಲುಗಳ ಗಾಜು
ತಟ್ಟನೆ ಒಡೆದಾಗಿನ ಭವ್ಯತೆಗೆ
ಭಯದ ಕನ್ನಡಿಯಾಗುತ್ತ ಚೂರಾಗುವ
ಹೊತ್ತಿಗೆ ಕಟ್ಟುಹಾಕುತ್ತ
ಕೂರುವಲ್ಲಿ ನಾನು ಒಂಟಿಯಾಗಿದ್ದು
ಜೊತೆಗಾರ ನೀನಿಲ್ಲವೆಂಬ
ದಾಹಕ್ಕೆ ಅರ್ಥಗಳ ಆರ್ತದ ರೂಪಕ
ನೀಡುವಲ್ಲಿ ಕವಿತ್ವ ರಕ್ಷಿಸುವುದಿಲ್ಲ
ಬರಿದೆ ಬದುಕಿಸುತ್ತದೆ
ಆರ್ದ್ರ ಜೀವಕ್ಕೆ ಗುಟುಕು ನೀಡುತ್ತದೆ